ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 20

ಹಿಂಸೆ ಬಂದ್ರೂ ‘ಸಿಹಿಸುದ್ದಿ ಎಲ್ಲಾ ಕಡೆ ಹಬ್ಬಿತು, ತುಂಬಾ ಜನ ನಂಬಿದ್ರು’

ಹಿಂಸೆ ಬಂದ್ರೂ ‘ಸಿಹಿಸುದ್ದಿ ಎಲ್ಲಾ ಕಡೆ ಹಬ್ಬಿತು, ತುಂಬಾ ಜನ ನಂಬಿದ್ರು’

ಅಪೊಲ್ಲೋಸ ಮತ್ತು ಪೌಲ ತುಂಬಾ ಜನ ಸಿಹಿಸುದ್ದಿ ತಿಳ್ಕೊಳ್ಳೋಕೆ ಸಹಾಯ ಮಾಡಿದ್ರು

ಆಧಾರ: ಅಪೊಸ್ತಲರ ಕಾರ್ಯ 18:23–19:41

1, 2. (ಎ) ಪೌಲ ಮತ್ತು ಅವನ ಜೊತೆ ಇದ್ದವ್ರಿಗೆ ಎಫೆಸದಲ್ಲಿ ಯಾವ ಅಪಾಯ ಎದುರಾಯ್ತು? (ಬಿ) ಈ ಲೇಖನದಲ್ಲಿ ನಾವು ಯಾವುದ್ರ ಬಗ್ಗೆ ಚರ್ಚೆ ಮಾಡ್ತೀವಿ?

 ಎಫೆಸದ ಬೀದಿಗಳು ಜನರ ಕೂಗು, ಕಿರಿಚಾಟ, ಗದ್ದಲದಿಂದ ತುಂಬಿತ್ತು. ಜನ ಗುಂಪು ಸೇರಿದ್ರು ಮತ್ತು ಸಾರ್ವಜನಿಕರು ಗಲಿಬಿಲಿಯಾಗಿದ್ರು. ಅಪೊಸ್ತಲ ಪೌಲನ ಜೊತೆ ಇದ್ದ ಇಬ್ಬರನ್ನ ಹಿಡಿದು ಎಳ್ಕೊಂಡು ಹೋಗಿದ್ರು. 25,000 ಜನ ಸೇರಿ ಬರೋಂಥ, ಆಸನಗಳಿರೋ ವೃತ್ತಾಕಾರದ ಅಂಗಳಕ್ಕೆ ಜನ ಗುಂಪು ಗುಂಪಾಗಿ ಪ್ರವಾಹದ ತರ ಹೋಗ್ತಿದ್ರು. ಹಾಗಾಗಿ ಕಣ್ಮುಚ್ಚಿ ಬಿಡೋಷ್ಟರಲ್ಲಿ ಅಂಗಡಿಗಳಿರೋ ಅಗಲವಾದ ದಾರಿ ಯಾರೂ ಇಲ್ಲದೆ ಬಿಕೋ ಅನ್ನಿಸೋಕೆ ಶುರುವಾಯ್ತು. ಹೆಚ್ಚಿನ ಜನ್ರಿಗೆ ಯಾಕೆ ಈ ಗದ್ದಲ ಶುರು ಆಯ್ತು ಅಂತ ಗೊತ್ತಿರಲಿಲ್ಲ. ಆದ್ರೆ ಅವರ ದೇವಸ್ಥಾನ ಮತ್ತು ದೇವಿ ಅರ್ತೆಮೀಗೆ ಅಪಾಯ ಬಂದಿದೆ ಅಂತ ಗೊತ್ತಿತ್ತು. ಅದಕ್ಕೆ ಅವರು ಒಂದೇ ಸಮನೆ, “ಎಫೆಸದವ್ರ ಅರ್ತೆಮೀ ದೇವಿ ಮಹಾದೇವಿ!” ಅಂತ ಕೂಗೋಕೆ ಶುರುಮಾಡಿದ್ರು.—ಅ. ಕಾ. 19:34.

2 ಹೀಗೆ ಸೈತಾನ ಮತ್ತೊಮ್ಮೆ ಜನ್ರ ಗುಂಪನ್ನ ಉಪಯೋಗಿಸಿ, ಸಿಹಿಸುದ್ದಿ ಸಾರೋದನ್ನ ತಡೆಯೋಕೆ ಪ್ರಯತ್ನಿಸಿದ. ಸಾರೋದನ್ನ ತಡೆಯೋಕೆ ಹಿಂಸೆ ಅಷ್ಟೇ ಅಲ್ಲ ಬೇರೆ ಕುತಂತ್ರಗಳನ್ನೂ ಬಳಸಿದ. ಈ ಅಧ್ಯಾಯದಲ್ಲಿ ಒಂದನೇ ಶತಮಾನದ ಕ್ರೈಸ್ತರ ಒಗ್ಗಟ್ಟು ಮುರಿಯೋಕೆ, ಸಾರೋದನ್ನ ನಿಲ್ಲಿಸೋಕೆ ಅವನು ಯಾವೆಲ್ಲಾ ತಂತ್ರ ಬಳಸಿದ ಅಂತ ನೋಡೋಣ. ಮುಖ್ಯವಾಗಿ ‘ಯೆಹೋವನ ಸಂದೇಶ ಆತನ ಶಕ್ತಿಯಿಂದ ಎಲ್ಲಾ ಕಡೆ ಹಬ್ತಾ ಹೋಗಿದ್ರಿಂದ’ ಸೈತಾನನ ಎಲ್ಲಾ ತಂತ್ರಗಳು ಹೇಗೆ ಮಣ್ಣು ಮುಕ್ಕಿದ್ವು ಅಂತ ನೋಡೋಣ. (ಅ. ಕಾ. 19:20) ಆಗಿನ ಕ್ರೈಸ್ತರು ಸೈತಾನನ ಮೇಲೆ ಜಯ ಸಾಧಿಸೋಕೆ ಕಾರಣ ಏನು? ನಾವು ಇವತ್ತು ಜಯ ಸಾಧಿಸೋಕೆ ಏನು ಕಾರಣನೋ ಅದೇ ಕಾರಣ ಅವರು ಜಯಿಸೋಕೆ ಸಹಾಯ ಮಾಡ್ತು. ಈ ಜಯ ನಮ್ಮದಲ್ಲ ಯೆಹೋವನದ್ದು. ಆದ್ರೂ ಒಂದನೇ ಶತಮಾನದ ಕ್ರೈಸ್ತರ ತರ ನಾವು ಮಾರ್ಗದರ್ಶನವನ್ನ ಚಾಚೂತಪ್ಪದೆ ಪಾಲಿಸಬೇಕು. ಯೆಹೋವನ ಪವಿತ್ರಶಕ್ತಿಯ ಸಹಾಯದಿಂದ ಸಾರೋ ಕೆಲಸದಲ್ಲಿ ಯಶಸ್ಸು ಪಡೀಬೇಕಾದ್ರೆ ಅದಕ್ಕೆ ಬೇಕಾಗಿರೋ ಗುಣಗಳನ್ನ ಬೆಳೆಸ್ಕೊಬೇಕು. ಈಗ ಮೊದಲು, ಅಪೊಲ್ಲೋಸನ ಉದಾಹರಣೆ ನೋಡೋಣ.

“ಅವನಿಗೆ ಎಲ್ಲಾ ವಚನಗಳು ಚೆನ್ನಾಗಿ ಗೊತ್ತಿದ್ದವು” (ಅ. ಕಾ. 18:24-28)

3, 4. (ಎ) ಅಕ್ವಿಲ ಮತ್ತು ಪ್ರಿಸ್ಕಿಲ್ಲ ಅಪೊಲ್ಲೋಸನಲ್ಲಿ ಏನನ್ನ ಗಮನಿಸಿದ್ರು? (ಬಿ) ಆಗ ಅವರು ಏನು ಮಾಡಿದ್ರು?

3 ತನ್ನ ಮೂರನೇ ಮಿಷನರಿ ಪ್ರಯಾಣದಲ್ಲಿ ಪೌಲ ಎಫೆಸಕ್ಕೆ ಹೋಗ್ತಿದ್ದಾಗ ಅಪೊಲ್ಲೋಸ ಅನ್ನೋ ಯೆಹೂದಿಯೊಬ್ಬ ಈ ಪಟ್ಟಣಕ್ಕೆ ಬಂದ. ಅವನು ಈಜಿಪ್ಟಿನ ಪ್ರಸಿದ್ಧ ಪಟ್ಟಣವಾದ ಅಲೆಕ್ಸಾಂಡ್ರಿಯದವನು. ಅಪೊಲ್ಲೋಸನಿಗೆ ಕೆಲವು ವಿಶೇಷ ಸಾಮರ್ಥ್ಯಗಳಿತ್ತು. ಅವನು ತುಂಬ ಚೆನ್ನಾಗಿ ಮಾತಾಡ್ತಿದ್ದ, “ಅವನಿಗೆ ಎಲ್ಲಾ ವಚನಗಳು” ಚೆನ್ನಾಗಿ ಗೊತ್ತಿತ್ತು. ಅಷ್ಟೇ ಅಲ್ಲ, “ದೇವ್ರ ಪವಿತ್ರಶಕ್ತಿ ಅವನ ಮೇಲೆ ಇತ್ತು.” ಹಾಗಾಗಿ ಅಪೊಲ್ಲೋಸ ಸಭಾಮಂದಿರದಲ್ಲಿ ಸೇರಿ ಬಂದಿದ್ದ ಯೆಹೂದ್ಯರ ಮುಂದೆ ಧೈರ್ಯವಾಗಿ ಉತ್ಸಾಹದಿಂದ ಮಾತಾಡಿದ.—ಅ. ಕಾ. 18:24, 25.

4 ಅಪೊಲ್ಲೋಸ ಮಾತಾಡಿದ್ದನ್ನ ಅಕ್ವಿಲ-ಪ್ರಿಸ್ಕಿಲ್ಲ ಕೇಳಿಸ್ಕೊಂಡ್ರು. ಅವನು “ಯೇಸು ಬಗ್ಗೆ ಸರಿಯಾದ ವಿಷ್ಯಗಳನ್ನೇ ಹೇಳ್ತಾ, ಕಲಿಸ್ತಾ” ಇರೋದನ್ನ ಕೇಳಿಸ್ಕೊಂಡಾಗ ಇವ್ರಿಗೆ ತುಂಬ ಸಂತೋಷ ಆಯ್ತು. ಅವನು ಯೇಸು ಬಗ್ಗೆ ಹೇಳಿದ ವಿಷ್ಯಗಳೆಲ್ಲಾ ಸರಿಯಾಗಿತ್ತು. ಆದ್ರೆ ಅವನಿಗೆ ಒಂದು ಪ್ರಾಮುಖ್ಯ ವಿಷ್ಯ ಸರಿಯಾಗಿ ಗೊತ್ತಿರಲಿಲ್ಲ. “ಯೋಹಾನ ಮಾಡಿಸ್ತಿದ್ದ ದೀಕ್ಷಾಸ್ನಾನದ ಬಗ್ಗೆ ಮಾತ್ರ ಅವನಿಗೆ ಗೊತ್ತಿತ್ತು.” ಇದ್ರ ಬಗ್ಗೆ ಅಕ್ವಿಲ-ಪ್ರಿಸ್ಕಿಲ್ಲಗೆ ಗೊತ್ತಾದಾಗ ಅವರು ಅಪೊಲ್ಲೋಸನ ಹತ್ರ ಮಾತಾಡಿದ್ರು. ‘ತುಂಬಾ ಚೆನ್ನಾಗಿ ಮಾತಾಡೋ ಮತ್ತು ತುಂಬಾ ಜ್ಞಾನ ಇರೋ ಈ ವ್ಯಕ್ತಿ ಹತ್ರ ಡೇರೆ ಮಾಡೋ ನಾವು ಮಾತಾಡೋದಾ’ ಅಂತ ಅವರು ಅಂದ್ಕೊಳ್ಲಿಲ್ಲ. ಬದಲಿಗೆ, ಅವರು “ಅವನನ್ನ ತಮ್ಮ ಜೊತೆ ಕರ್ಕೊಂಡು ಹೋಗಿ ದೇವ್ರ ಮಾರ್ಗದ ಬಗ್ಗೆ ಇನ್ನೂ ಸರಿಯಾಗಿ ವಿವರಿಸಿದ್ರು.” (ಅ. ಕಾ. 18:25, 26) ಇದಕ್ಕೆ ಅವನು ಪ್ರತಿಕ್ರಿಯಿಸಿದ ರೀತಿಯಿಂದ ಅವನಲ್ಲಿದ್ದ ದೀನತೆ ಗುಣ ಎದ್ದು ಕಾಣುತ್ತೆ. ಕ್ರೈಸ್ತರಾದ ನಾವು ಈ ಗುಣನ ಬೆಳೆಸ್ಕೊಳ್ಳೋದು ತುಂಬಾ ಮುಖ್ಯ.

5, 6. (ಎ) ಯೆಹೋವ ತನ್ನ ಸೇವೇಲಿ ಅಪೊಲ್ಲೋಸನನ್ನ ಬಳಸೋಕೆ ಕಾರಣ ಏನು? (ಬಿ) ಅಪೊಲ್ಲೋಸನಿಂದ ನಾವೇನು ಕಲಿಬಹುದು?

5 ಅಪೊಲ್ಲೋಸನಲ್ಲಿ ದೀನತೆ ಇದ್ದಿದ್ರಿಂದ ಅಕ್ವಿಲ ಮತ್ತು ಪ್ರಿಸ್ಕಿಲ್ಲಳಿಂದ ಸಹಾಯ ಪಡ್ಕೊಂಡ. ಹೀಗೆ ಮಾಡಿದ್ರಿಂದ ಯೆಹೋವನ ಸೇವೆನಾ ಇನ್ನೂ ಚೆನ್ನಾಗಿ ಮಾಡೋದಕ್ಕೆ ಆಯ್ತು. ಅವನು ಅಖಾಯಕ್ಕೆ ಹೋಗಿ ಅಲ್ಲಿರೋ ಶಿಷ್ಯರಿಗೆ “ತುಂಬ ಸಹಾಯ ಮಾಡಿದ.” ಬರಬೇಕಾಗಿದ್ದ ಮೆಸ್ಸೀಯ ಯೇಸು ಅಲ್ಲ ಅಂತ ಹೇಳ್ತಿದ್ದ ಅಲ್ಲಿನ ಯೆಹೂದ್ಯರಿಗೂ ಅವನು ತುಂಬಾ ಚೆನ್ನಾಗಿ ಸಾರಿದ. ಅವನು “ಯೇಸುನೇ ಕ್ರಿಸ್ತ ಅಂತ ವಚನಗಳಿಂದ ಸ್ಪಷ್ಟವಾಗಿ ತೋರಿಸಿದ. ಹೀಗೆ ಯೆಹೂದ್ಯರು ಕಲಿಸ್ತಾ ಇರೋದು ತಪ್ಪು ಅಂತ . . . ಧೈರ್ಯವಾಗಿ ಮಾತಾಡಿದ” ಅಂತ ಲೂಕ ಬರೆದಿದ್ದಾನೆ. (ಅ. ಕಾ. 18:27, 28) ಇದ್ರಿಂದ ಅಪೊಲ್ಲೋಸ ಸಭೆಗೆ ಎಷ್ಟೊಂದು ಸಹಾಯ ಮಾಡೋಕೆ ಆಯ್ತು ಅಲ್ವಾ! ಹೀಗೆ “ಯೆಹೋವನ ಸಂದೇಶ” ಎಲ್ಲಾ ಕಡೆ ಹಬ್ಬೋಕೆ ಇವನೂ ಕಾರಣನಾಗಿದ್ದ. ಅಪೊಲ್ಲೋಸನಿಂದ ನಾವೇನು ಕಲೀಬಹುದು?

6 ದೀನತೆ ಅನ್ನೋ ಗುಣವನ್ನ ಎಲ್ಲಾ ಕ್ರೈಸ್ತರು ಬೆಳೆಸ್ಕೊಳ್ಳಲೇಬೇಕು. ನಮ್ಮಲ್ಲಿ ಪ್ರತಿಯೊಬ್ರಿಗೂ ಬೇರೆ ಬೇರೆ ಸಾಮರ್ಥ್ಯ ಇದೆ. ಅವು ನಮ್ಗೆ ಹುಟ್ಟಿದಾಗಿಂದ ಬಂದಿರಬಹುದು, ನಮ್ಮ ಅನುಭವ ಅಥವಾ ಜ್ಞಾನದಿಂದ ಪಡ್ಕೊಂಡಿರಬಹುದು. ಅದೇನೇ ಆಗಿರಲಿ ನಮ್ಮ ಸಾಮರ್ಥ್ಯಗಳಿಗಿಂತ ನಮ್ಮಲ್ಲಿರೋ ದೀನತೆ ಎದ್ದುಕಾಣಬೇಕು. ಇಲ್ಲದಿದ್ರೆ ಆಶೀರ್ವಾದವಾಗಿರೋ ಈ ಸಾಮರ್ಥ್ಯಗಳೇ ನಮ್ಮ ಪಾಲಿಗೆ ಶಾಪ ಆಗಿಬಿಡುತ್ತೆ. ನಮ್ಮಲ್ಲಿ ಅಹಂಕಾರ ಅನ್ನೋ ವಿಷಕಾರಿ ಬೀಜ ಮೊಳಕೆ ಒಡೆದುಬಿಡುತ್ತೆ. (1 ಕೊರಿಂ. 4:7; ಯಾಕೋ. 4:6) ನಾವು ನಿಜವಾಗ್ಲೂ ದೀನರಾಗಿದ್ರೆ, ಬೇರೆಯವ್ರನ್ನ ನಮಗಿಂತ ಶ್ರೇಷ್ಠ ಅಂತ ನೋಡೋಕೆ ನಮ್ಮ ಕೈಲಾಗಿದ್ದನ್ನೆಲ್ಲಾ ಮಾಡ್ತೀವಿ. (ಫಿಲಿ. 2:3) ಬೇರೆಯವರು ನಮ್ಮನ್ನ ತಿದ್ದೋವಾಗ ಕೋಪ ಮಾಡ್ಕೊಳ್ಳೋದಿಲ್ಲ ಅಥ್ವಾ ನಮಗೆ ಕಲಿಸೋಕೆ ಮುಂದೆ ಬಂದಾಗ ಬೇಡ ಅನ್ನಲ್ಲ. ಪವಿತ್ರಶಕ್ತಿಯ ಸಹಾಯದಿಂದ ನಮ್ಮ ಸಂಘಟನೆ ಹೊಸ ಅರ್ಥ ತಿಳಿಸಿದಾಗ ಅಹಂಕಾರದಿಂದ ನಮ್ಮ ಅಭಿಪ್ರಾಯಗಳೇ ಸರಿ ಅಂತ ಹಠಹಿಡಿಯೋದಿಲ್ಲ. ನಾವು ಎಷ್ಟರ ತನಕ ದೀನರಾಗಿ ಇರ್ತೀವೋ ಅಷ್ಟರ ತನಕ ಯೆಹೋವ ಮತ್ತು ಯೇಸು ನಮ್ಮನ್ನ ತನ್ನ ಸೇವೆಯಲ್ಲಿ ಉಪಯೋಗಿಸ್ತಾರೆ.—ಲೂಕ 1:51, 52.

7. ಪೌಲ ಮತ್ತು ಅಪೊಲ್ಲೋಸ ದೀನತೆಯ ವಿಷ್ಯದಲ್ಲಿ ಹೇಗೆ ಒಳ್ಳೇ ಮಾದರಿ ಇಟ್ಟಿದ್ದಾರೆ?

7 ನಮ್ಮಲ್ಲಿ ದೀನತೆ ಇದ್ರೆ ನಾವು ಯಾರನ್ನೂ ದ್ವೇಷಿಸಲ್ಲ. ದ್ವೇಷ ಅನ್ನೋ ಅಸ್ತ್ರ ಉಪಯೋಗಿಸಿ ನಮ್ಮಲ್ಲಿ ಬಿರುಕು ತರೋಕೆ ಸೈತಾನ ಕಾಯ್ತಾ ಇರ್ತಾನೆ. ಒಂದನೇ ಶತಮಾನದಲ್ಲಿ ಈ ತರ ಆಗೋ ಸಂದರ್ಭ ಬಂತು. ಕೊರಿಂಥದ ಕ್ರೈಸ್ತರಲ್ಲಿ ಕೆಲವರು “ನಾನು ಪೌಲನ ಶಿಷ್ಯ” ಅಂತ ಹೇಳಿದ್ರೆ, ಇನ್ನು ಕೆಲವರು “ನಾನು ಅಪೊಲ್ಲೋಸನ ಶಿಷ್ಯ” ಅಂತ ಹೇಳೋಕೆ ಶುರು ಮಾಡಿದ್ರು. ಒಂದುವೇಳೆ ತುಂಬಾ ಹೆಸ್ರುವಾಸಿಯಾಗಿದ್ದ ಅಪೊಲ್ಲೋಸ ಮತ್ತು ಅಪೊಸ್ತಲ ಪೌಲ ತಮ್ಮ ಮಧ್ಯೆ ಶತ್ರುತ್ವ ಬೆಳೆಸ್ಕೊಂಡಿದ್ರೆ ಏನಾಗ್ತಿತ್ತು? ಇವ್ರ ನಡವಳಿಕೆ ಸಭೆಯವ್ರ ಮೇಲೂ ಪ್ರಭಾವ ಬೀರ್ತಿತ್ತು. ಸೈತಾನನ ಈ ಬಲೆಗೆ ಅವರು ಸುಲಭವಾಗಿ ಬೀಳೋ ಸಾಧ್ಯತೆ ಇತ್ತು. ಹೀಗಾಗಿದ್ರೆ ಸೈತಾನನಿಗೆ ತುಂಬಾ ಸಂತೋಷ ಆಗ್ತಿತ್ತು. ಆದ್ರೆ ಬಿರುಕು ತರೋ ಇಂಥ ಸ್ವಭಾವನಾ ಪೌಲ ಅಪೊಲ್ಲೋಸ ಉತ್ತೇಜಿಸಿದ್ರಾ? ಖಂಡಿತ ಇಲ್ಲ. ಅಪೊಲ್ಲೋಸ ಕೂಡ ಸಾರೋ ಕೆಲ್ಸದಲ್ಲಿ ತುಂಬಾ ಕಷ್ಟಪಟ್ಟಿದ್ದಾನೆ ಅಂತ ಪೌಲ ಒಪ್ಕೊಂಡ. ಅಷ್ಟೇ ಅಲ್ಲ ಅವನಿಗೆ ಹೆಚ್ಚಿನ ಸೇವಾ ಸುಯೋಗ ಕೊಟ್ಟ. ಅಪೊಲ್ಲೋಸ ಕೂಡ ಪೌಲ ಹೇಳಿದ ತರನೇ ಮಾಡಿದ. (1 ಕೊರಿಂ. 1:10-12; 3:6, 9; ತೀತ 3:12, 13) ದೀನತೆಯಿಂದ ಸಹಕಾರ ಕೊಡೋದ್ರಲ್ಲಿ ಇವರು ಎಷ್ಟು ಒಳ್ಳೇ ಉತ್ತಮ ಮಾದರಿ ಇಟ್ಟಿದ್ದಾರಲ್ವಾ?

‘ದೇವ್ರ ಆಳ್ವಿಕೆ ಬಗ್ಗೆ ಜನ್ರಿಗೆ ಅರ್ಥಮಾಡ್ಸೋಕೆ ಪ್ರಯತ್ನಿಸಿದ’ (ಅ. ಕಾ. 18:23; 19:1-10)

8. ಪೌಲ ಎಫೆಸಕ್ಕೆ ಯಾವ ಮಾರ್ಗವಾಗಿ ಹೋದ? ಯಾಕೆ?

8 ಪೌಲ ಮಾತುಕೊಟ್ಟ ತರ ಎಫೆಸಕ್ಕೆ ಮತ್ತೆ ಹೋದ. a (ಅ. ಕಾ. 18:20, 21) ಅವನು ಅಲ್ಲಿಗೆ ಹೇಗೆ ಹೋದ? ಹಿಂದೆ ನಾವು, ಅವನು ಸಿರಿಯದ ಅಂತಿಯೋಕ್ಯಕ್ಕೆ ಹೋಗಿದ್ದರ ಬಗ್ಗೆ ಓದಿದ್ವಿ. ಅಲ್ಲಿಂದ ಅವನು ಹತ್ರನೇ ಇದ್ದ ಸೆಲ್ಯೂಕ್ಯಕ್ಕೆ ಹೋಗಿ ಅಲ್ಲಿಂದ ಹಡಗಿನಲ್ಲಿ ನೇರವಾಗಿ ಎಫೆಸಕ್ಕೆ ಹೋಗಬಹುದಿತ್ತು. ಆದ್ರೆ ಅದ್ರ ಬದಲು “ಸಮುದ್ರ ತೀರದಿಂದ ದೂರದಲ್ಲಿ ಇರೋ ಪ್ರದೇಶಗಳಲ್ಲಿ ಪ್ರಯಾಣ ಮಾಡ್ತಾ” ಅಲ್ಲಿಗೆ ಹೋದ. ಅಪೊಸ್ತಲರ ಕಾರ್ಯ 18:23 ಮತ್ತು 19:1ರಲ್ಲಿರೋ ಮಾಹಿತಿ ನೋಡಿದ್ರೆ, ಅವನು 1,600 ಕಿ.ಮೀ. ಪ್ರಯಾಣ ಮಾಡಿದ ಅಂತ ಗೊತ್ತಾಗುತ್ತೆ. ಪೌಲ ಈ ಕಷ್ಟದ ಮಾರ್ಗನ ಯಾಕೆ ಆರಿಸ್ಕೊಂಡ? ಯಾಕಂದ್ರೆ ‘ಶಿಷ್ಯರನ್ನ ಬಲಪಡಿಸಬೇಕು’ ಅನ್ನೋ ಗುರಿ ಅವನಿಗಿತ್ತು. (ಅ. ಕಾ. 18:23) ಹಿಂದಿನ ಎರಡು ಪ್ರಯಾಣಗಳ ತರನೇ ಮೂರನೇ ಮಿಷನರಿ ಪ್ರಯಾಣನೂ ಸುಲಭ ಆಗಿರಲಿಲ್ಲ. ಆದ್ರೂ ಅದ್ರಿಂದ ಪ್ರಯೋಜನ ಆಗೇ ಆಗುತ್ತೆ ಅಂತ ಪೌಲನಿಗೆ ಗೊತ್ತಿತ್ತು. ಸಂಚರಣ ಮೇಲ್ವಿಚಾರಕರು ಮತ್ತು ಅವ್ರ ಹೆಂಡತಿಯರು ಕೂಡ ಇಂಥದ್ದೇ ಮನೋಭಾವ ತೋರಿಸ್ತಾರೆ. ಅವ್ರ ಪ್ರೀತಿಯನ್ನ ನಾವು ತುಂಬಾ ಅಮೂಲ್ಯವಾಗಿ ನೋಡ್ತೀವಿ ಅಲ್ವಾ?

9. (ಎ) ಯೋಹಾನನ ಕೆಲವು ಶಿಷ್ಯರು ಯಾಕೆ ಮತ್ತೆ ದೀಕ್ಷಾಸ್ನಾನ ಪಡ್ಕೊಂಡ್ರು? (ಬಿ) ಅವ್ರಿಂದ ನಾವೇನು ಕಲಿಬಹುದು?

9 ಪೌಲ ಎಫೆಸಕ್ಕೆ ತಲುಪಿದಾಗ ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನ ಸುಮಾರು 12 ಶಿಷ್ಯರು ಸಿಕ್ಕಿದ್ರು. ಅವ್ರಿಗೆ ಮೊದಲೇ ದೀಕ್ಷಾಸ್ನಾನ ಆಗಿತ್ತು. ಆದ್ರೆ ಅದು ದೀಕ್ಷಾಸ್ನಾನದ ಹೊಸ ಏರ್ಪಾಡಿಗೆ ತಕ್ಕ ಹಾಗೆ ಇರಲಿಲ್ಲ. ಅಷ್ಟೇ ಅಲ್ಲ, ಅವ್ರಿಗೆ ಪವಿತ್ರಶಕ್ತಿ ಬಗ್ಗೆ ಅಲ್ಪಸ್ವಲ್ಪ ಅಥವಾ ಏನೂ ಗೊತ್ತಿರಲಿಲ್ಲ. ಅದಕ್ಕೆ ಪೌಲ ಯೇಸು ಹೆಸ್ರಲ್ಲಿ ದೀಕ್ಷಾಸ್ನಾನ ಪಡೆಯೋದು ಯಾಕೆ ಮುಖ್ಯ ಅಂತ ಅವ್ರಿಗೆ ವಿವರಿಸಿದ. ಆಗ ಅಪೊಲ್ಲೋಸನ ತರ ಅವರೂ ದೀನತೆ ತೋರಿಸಿ ಜಾಸ್ತಿ ವಿಷ್ಯಗಳನ್ನ ಕಲಿತ್ರು. ಯೇಸು ಹೆಸ್ರಲ್ಲಿ ದೀಕ್ಷಾಸ್ನಾನ ಆದ ಮೇಲೆ ಅವ್ರಿಗೆ ಪವಿತ್ರಶಕ್ತಿ ಸಿಕ್ತು ಮತ್ತು ಕೆಲವು ಅದ್ಭುತ ವರಗಳೂ ಸಿಕ್ತು. ಅವ್ರಿಂದ ನಮಗೇನು ಪಾಠ? ಸಂಘಟನೆಯಿಂದ ಬರೋ ಹೊಸ ಮಾರ್ಗದರ್ಶನದ ಪ್ರಕಾರ ನಡಿಯೋದಾದ್ರೆ ನಮಗೂ ಆಶೀರ್ವಾದ ಸಿಗುತ್ತೆ.—ಅ. ಕಾ. 19:1-7.

10. (ಎ) ಪೌಲ ಸಭಾಮಂದಿರದಿಂದ ಶಾಲೆಯ ಸಭಾಗೃಹಕ್ಕೆ ಯಾಕೆ ಹೋದ? (ಬಿ) ಇದ್ರಿಂದ ನಮಗೇನು ಪಾಠ?

10 ಇದಾಗಿ ಸ್ವಲ್ಪದರಲ್ಲೇ ಇನ್ನೊಂದು ವಿಷ್ಯನೂ ನಡೀತು. ಪೌಲ ಧೈರ್ಯದಿಂದ ಮೂರು ತಿಂಗಳುವರೆಗೆ ಸಭಾಮಂದಿರದಲ್ಲಿ ಸಾರಿದ. ಅವನು ‘ದೇವ್ರ ಆಳ್ವಿಕೆ ಬಗ್ಗೆ ಜನ್ರಿಗೆ ಅರ್ಥಮಾಡ್ಸೋಕೆ ಪ್ರಯತ್ನಿಸಿದ.’ ಇಷ್ಟೆಲ್ಲಾ ಮಾಡಿದ್ರೂ ಕೆಲವರು ತಮ್ಮ ಮನಸ್ಸನ್ನ ಕಲ್ಲು ಮಾಡ್ಕೊಂಡು ವಿರೋಧ ತಂದ್ರು. ‘“ದೇವ್ರ ಮಾರ್ಗದ” ಬಗ್ಗೆ ತಪ್ಪುತಪ್ಪಾಗಿ ಮಾತಾಡೋ’ ಜನ್ರ ಹತ್ರ ಮಾತಾಡಿ ತನ್ನ ಸಮಯ ವ್ಯರ್ಥ ಮಾಡೋದು ಪೌಲನಿಗೆ ಇಷ್ಟ ಇರಲಿಲ್ಲ. ಅದಕ್ಕೆ ಒಂದು ಶಾಲೆಯಲ್ಲಿದ್ದ ಸಭಾಗೃಹದಲ್ಲಿ ಮಾತಾಡೋಕೆ ಏರ್ಪಾಡು ಮಾಡಿದ. (ಅ. ಕಾ. 19:8, 9) ಯಾರಿಗೆ ದೇವರ ಬಗ್ಗೆ ತಿಳ್ಕೊಳ್ಳೋಕೆ ಆಸಕ್ತಿ ಇತ್ತೊ ಅವರು ಸಭಾಮಂದಿರ ಬಿಟ್ಟು ಈ ಸಭಾಗೃಹಕ್ಕೆ ಹೋಗಬೇಕಿತ್ತು. ಇದ್ರಿಂದ ನಮಗೇನು ಪಾಠ? ಮನೆಯವ್ರಿಗೆ ನಮ್ಮ ಮಾತು ಕೇಳೋಕೆ ಇಷ್ಟ ಇಲ್ಲದಿದ್ರೆ ಅಥವಾ ವಾದ ಮಾಡೋದಷ್ಟೇ ಅವ್ರ ಉದ್ದೇಶ ಆಗಿದ್ರೆ ನಾವು ಪೌಲನ ತರ ನಮ್ಮ ಮಾತನ್ನ ಅಲ್ಲಿಗೇ ನಿಲ್ಲಿಸಬೇಕು. ಯಾಕಂದ್ರೆ ದೇವರ ಸಂದೇಶ ಕೇಳಿಸ್ಕೊಳ್ಳೋಕೆ ಇಷ್ಟ ಇರೋ ಒಳ್ಳೇ ಹೃದಯದ ಜನ ಇನ್ನೂ ಎಷ್ಟೋ ಇದ್ದಾರೆ!

11, 12. (ಎ) ಕಷ್ಟಪಟ್ಟು ಕೆಲಸ ಮಾಡೋದ್ರಲ್ಲಿ ಮತ್ತು ಸಂದರ್ಭಕ್ಕೆ ತಕ್ಕ ಹಾಗೆ ಹೊಂದಾಣಿಕೆ ಮಾಡ್ಕೊಳ್ಳೋದ್ರಲ್ಲಿ ಪೌಲ ಹೇಗೆ ಮಾದರಿ ಇಟ್ಟಿದ್ದಾನೆ? (ಬಿ) ಪೌಲನ ತರ ಯೆಹೋವನ ಸಾಕ್ಷಿಗಳು ಏನು ಮಾಡ್ತಾರೆ?

11 ಪೌಲ ಆ ಸಭಾಗೃಹದಲ್ಲಿ ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಕಲಿಸ್ತಿದ್ದ. (ಅ. ಕಾ. 19:9) ಆ ಸಮಯದಲ್ಲಿ ತುಂಬಾ ಬಿಸಿಲು ಇರ್ತಿತ್ತು, ಅಲ್ಲದೇ ಅದು ಜನ ಊಟ ಮಾಡ್ತಿದ್ದ ಅಥವಾ ಕೆಲಸ ಮುಗಿಸಿ ವಿಶ್ರಾಂತಿ ಪಡೀತಿದ್ದ ಸಮಯ ಆಗಿದ್ರಿಂದ ತುಂಬಾ ನಿಶ್ಶಬ್ದವಾಗಿ ಇರ್ತಿತ್ತು. ಒಂದುವೇಳೆ ಪೌಲ ಇದೇ ತರ ಎರಡು ವರ್ಷಗಳವರೆಗೆ ತಪ್ಪದೇ ಮಾಡಿದ್ರೆ ಅವನು ಜನ್ರಿಗೆ ಕಲಿಸೋಕೆ 3,000ಕ್ಕಿಂತ ಜಾಸ್ತಿ ಗಂಟೆ ಸೇವೆ ಮಾಡಿರ್ತಿದ್ದ. b ‘ಯೆಹೋವನ ಸಂದೇಶ ಎಲ್ಲಾ ಕಡೆ ಹಬ್ಬೋಕೆ’ ಇದೂ ಒಂದು ಕಾರಣ ಆಗಿತ್ತು. ಪೌಲ ಕಷ್ಟಪಟ್ಟು ಕೆಲಸಮಾಡ್ತಿದ್ದ, ಸಂದರ್ಭಕ್ಕೆ ತಕ್ಕ ಹಾಗೆ ಹೊಂದಾಣಿಕೆ ಮಾಡ್ಕೊಳ್ತಿದ್ದ. ಅಲ್ಲಿನ ಜನರ ಅಗತ್ಯಗಳಿಗೆ ತಕ್ಕ ಹಾಗೆ ಸಾರೋ ಸಮಯನ, ಸ್ಥಳನ ಬದಲಾಯಿಸ್ಕೊಂಡ. ಇದ್ರಿಂದ, “ಏಷ್ಯಾ ಪ್ರದೇಶದಲ್ಲಿದ್ದ ಜನ್ರೆಲ್ಲ ಅಂದ್ರೆ ಯೆಹೂದ್ಯರು ಮತ್ತು ಗ್ರೀಕರು ದೇವ್ರ ಸಂದೇಶವನ್ನ ಕೇಳಿಸ್ಕೊಂಡ್ರು.” (ಅ. ಕಾ. 19:10) ಹೀಗೆ ಪೌಲ ಸಾಧ್ಯವಾದಷ್ಟು ಎಲ್ಲಾ ಕಡೆ ಚೆನ್ನಾಗಿ ಸಿಹಿಸುದ್ದಿ ಸಾರಿದ!

ಜನ ಎಲ್ಲೇ ಇರಲಿ, ಯಾವಾಗಾದ್ರೂ ಸಿಗಲಿ ಅವ್ರಿಗೆ ಸಾರೋಕೆ ನಮ್ಮ ಕೈಲಾಗಿರೋದೆಲ್ಲಾ ಮಾಡ್ತೀವಿ

12 ಈಗಿನ ಕಾಲದಲ್ಲೂ ಯೆಹೋವನ ಸಾಕ್ಷಿಗಳಾದ ನಾವು ಕಷ್ಟಪಟ್ಟು ಕೆಲಸ ಮಾಡ್ತೀವಿ, ಸಂದರ್ಭಕ್ಕೆ ತಕ್ಕ ಹಾಗೆ ಹೊಂದಾಣಿಕೆ ಮಾಡ್ಕೊಳ್ತೀವಿ. ಜನ ಎಲ್ಲಿ ಮತ್ತು ಯಾವಾಗ ಸಿಗ್ತಾರೋ ಅದಕ್ಕೆ ತಕ್ಕ ಹಾಗೆ ಹೊಂದಾಣಿಕೆ ಮಾಡ್ಕೊಳ್ತೀವಿ. ದಾರಿಗಳಲ್ಲಿ, ಮಾರುಕಟ್ಟೆಗಳಲ್ಲಿ ಮತ್ತು ಪಾರ್ಕಿಂಗ್‌ ಜಾಗಗಳಲ್ಲಿ ಸಾರ್ತೀವಿ. ಫೋನ್‌ ಮತ್ತು ಪತ್ರದ ಮೂಲಕ ಜನ್ರಿಗೆ ಸಿಹಿಸುದ್ದಿ ಸಾರ್ತೀವಿ. ಮನೆ ಮನೆ ಸೇವೆ ಮಾಡೋವಾಗ್ಲೂ, ಜನ ಮನೆಯಲ್ಲಿ ಸಿಗೋ ಸಮಯದಲ್ಲಿ ಹೋಗಿ ಸಾರ್ತೀವಿ.

ಕೆಟ್ಟ ದೇವದೂತರು ಅಡ್ಡಗಾಲು ಹಾಕಿದ್ರೂ ‘ಯೆಹೋವನ ಸಂದೇಶ ಹಬ್ತಾ ಹೋಯ್ತು’ (ಅ. ಕಾ. 19:11-22)

13, 14. (ಎ) ಯೆಹೋವ ದೇವರು ಪೌಲನಿಗೆ ಏನು ಮಾಡೋ ಶಕ್ತಿ ಕೊಟ್ಟನು? (ಬಿ) ಸ್ಕೇವನ ಗಂಡು ಮಕ್ಕಳು ಯಾವ ತಪ್ಪು ಮಾಡಿದ್ರು? (ಸಿ) ಇವತ್ತು ಕ್ರೈಸ್ತರು ಅಂತ ಹೇಳ್ಕೊಳ್ಳೋರು ಕೂಡ ಯಾವ ತಪ್ಪನ್ನ ಮಾಡ್ತಿದ್ದಾರೆ?

13 ಮುಂದೆ ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಯೆಹೋವ ಪೌಲನಿಗೆ “ದೊಡ್ಡದೊಡ್ಡ ಅದ್ಭುತಗಳನ್ನ” ಮಾಡೋ ಶಕ್ತಿ ಕೊಟ್ಟಿದ್ರ ಬಗ್ಗೆ ಇದೆ. ಅವನಿಗೆ ಎಷ್ಟು ಶಕ್ತಿ ಇತ್ತು ಅಂದ್ರೆ ಜನ, ಪೌಲ ಹಾಕೊಳ್ತಿದ್ದ ಬಟ್ಟೆಯನ್ನ ಕಾಯಿಲೆ ಬಿದ್ದಿರೋರಿಗೆ ಮುಟ್ಟಿಸಿದಾಗ್ಲೂ ಅವರು ಗುಣ ಆಗ್ತಿದ್ರು. ಕೆಟ್ಟ ದೇವದೂತರನ್ನೂ ಹೀಗೆ ಬಿಡಿಸ್ತಿದ್ರು. c (ಅ. ಕಾ. 19:11, 12, ಪಾದಟಿಪ್ಪಣಿ) ಸೈತಾನನ ಸೈನ್ಯದ ಮೇಲೆ ಇದೊಂದು ದೊಡ್ಡ ಜಯ ಆಗಿತ್ತು. ಹಾಗಾಗಿ ತುಂಬಾ ಜನ್ರಿಗೆ ಇದನ್ನ ನೋಡಿದಾಗ ಆಶ್ಚರ್ಯ ಆಯ್ತು. ಆದ್ರೆ ಕೆಲವ್ರಿಗೆ ಸ್ವಲ್ಪನೂ ಇಷ್ಟ ಆಗಲಿಲ್ಲ.

14 ಕೆಲವು ಯೆಹೂದ್ಯರು ಪೌಲ ಮಾಡಿದ ರೀತಿಯಲ್ಲೇ ಅದ್ಭುತಗಳನ್ನ ಮಾಡೋಕೆ ಪ್ರಯತ್ನಿಸಿದ್ರು. ಅದಕ್ಕೆ “ಊರಿಂದ ಊರಿಗೆ ಹೋಗ್ತಾ ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ರು.” ಅವರು ಯೇಸು ಮತ್ತು ಪೌಲನ ಹೆಸ್ರನ್ನ ಉಪಯೋಗಿಸಿ ಕೆಟ್ಟ ದೇವದೂತರನ್ನ ಬಿಡಿಸೋಕೆ ಪ್ರಯತ್ನಿಸಿದ್ರು. ಇದಕ್ಕೆ ಉದಾಹರಣೆಯಾಗಿ ಲೂಕ, ಮುಖ್ಯ ಪುರೋಹಿತನಾಗಿದ್ದ ಸ್ಕೇವನ ಏಳು ಗಂಡು ಮಕ್ಕಳ ಬಗ್ಗೆ ತಿಳಿಸಿದ್ದಾನೆ. ಅವರು ಇದೇ ತರ ಕೆಟ್ಟ ದೇವದೂತರನ್ನ ಬಿಡಿಸೋಕೆ ಪ್ರಯತ್ನಿಸಿದಾಗ ಆ ಕೆಟ್ಟ ದೇವದೂತ ಅವ್ರಿಗೆ, “ಯೇಸು ಯಾರಂತ ನಂಗೊತ್ತು, ಪೌಲನೂ ಗೊತ್ತು. ಆದ್ರೆ ನೀವು ಯಾರು?” ಅಂತ ಕೇಳಿದ. ಆಮೇಲೆ ಆ ಕೆಟ್ಟ ದೇವದೂತ ಹಿಡಿದ ವ್ಯಕ್ತಿ ಕ್ರೂರ ಮೃಗದ ತರ ಅವ್ರ ಮೇಲೆ ಬಿದ್ದು ಗಾಯಮಾಡಿ ಅವರು ಬೆತ್ತಲೆಯಾಗಿ ಓಡಿಹೋಗೋ ತರ ಮಾಡಿದ. (ಅ. ಕಾ. 19:13-16) ಇದ್ರಿಂದ ಪೌಲನಿಗೆ ಸಿಕ್ಕಿದ ಶಕ್ತಿಗೂ ಸುಳ್ಳು ಧರ್ಮದವ್ರ ಶಕ್ತಿಗೂ ಇರೋ ವ್ಯತ್ಯಾಸ ಎಲ್ರಿಗೂ ಗೊತ್ತಾಯ್ತು. ಹೀಗೆ ‘ಯೆಹೋವನ ಸಂದೇಶಕ್ಕೆ’ ಮಹಾ ಜಯ ಸಿಕ್ತು. ಇವತ್ತು ಕೂಡ ಲಕ್ಷಾಂತರ ಜನ ನಾವು ದೇವರನ್ನ ಮೆಚ್ಚಿಸಬೇಕಾದ್ರೆ ಯೇಸು ಕ್ರಿಸ್ತನ ಹೆಸ್ರು ಹೇಳಿದ್ರೆ ಅಥವಾ “ಕ್ರೈಸ್ತರು” ಅನ್ನೋ ಹೆಸರಿದ್ರೆ ಸಾಕು ಅಂತ ತಪ್ಪಾಗಿ ತಿಳ್ಕೊಂಡಿದ್ದಾರೆ. ಆದ್ರೆ ಯಾರು ತನ್ನ ತಂದೆಯ ಇಷ್ಟವನ್ನ ಮಾಡ್ತಾರೋ ಅವ್ರಿಗೆ ಮಾತ್ರ ಒಳ್ಳೇ ಭವಿಷ್ಯ ಸಿಗುತ್ತೆ ಅಂತ ಯೇಸುನೇ ಸ್ಪಷ್ಟವಾಗಿ ಹೇಳಿದ್ದಾನೆ.—ಮತ್ತಾ. 7:21-23.

15. ಎಫೆಸದ ಕ್ರೈಸ್ತರ ತರ ನಾವೇನು ಮಾಡಬೇಕು?

15 ಸ್ಕೇವನ ಗಂಡುಮಕ್ಕಳಿಗೆ ಆದ ಘಟನೆ ನೋಡಿ ತುಂಬಾ ಜನ ಕ್ರೈಸ್ತರಾದ್ರು ಮತ್ತು ಕೆಟ್ಟ ದೇವದೂತರಿಗೆ ಸಂಬಂಧಪಟ್ಟ ವಿಷ್ಯಗಳನ್ನೆಲ್ಲಾ ಬಿಟ್ಟುಬಿಟ್ರು. ಎಫೆಸದಲ್ಲಿ ಜನ ತುಂಬ ಮಾಟಮಂತ್ರ ಮಾಡ್ತಿದ್ರು. ಅವ್ರ ಹತ್ರ ಇದಕ್ಕೆ ಸಂಬಂಧಪಟ್ಟ ಪುಸ್ತಕಗಳು, ತಾಯಿತಗಳು, ಮಂತ್ರ ಬರೆದಿರೋ ಹಾಳೆಗಳು ಅಲ್ಲಿ ಸರ್ವೇಸಾಮಾನ್ಯವಾಗಿತ್ತು. ಆದ್ರೆ ಯಾರು ಕ್ರೈಸ್ತರಾದರೋ ಅವ್ರಲ್ಲಿ ಅನೇಕರು ಮಾಟಮಂತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನ ತಂದು ಎಲ್ರ ಮುಂದೆ ಸುಟ್ಟುಬಿಟ್ರು. ಅದಕ್ಕೆ ತುಂಬಾ ಬೆಲೆ ಇದೆ ಅಂತ ಗೊತ್ತಿದ್ರೂ ಹೀಗೆ ಮಾಡಿದ್ರು. ನಮ್ಮ ಕಾಲದಲ್ಲಿ ಅದ್ರ ಬೆಲೆ ಹತ್ತಾರು ಸಾವಿರ ಡಾಲರ್‌ಗಳಷ್ಟಾಗುತ್ತೆ. d ಲೂಕ ಹೀಗೆ ಹೇಳ್ತಾನೆ, “ಹೀಗೆ ಯೆಹೋವನ ಸಂದೇಶ ಆತನ ಶಕ್ತಿಯಿಂದ ಎಲ್ಲಾ ಕಡೆ ಹಬ್ತಾ ಹೋಯ್ತು. ತುಂಬ ಜನ ಅದನ್ನ ನಂಬಿದ್ರು.” (ಅ. ಕಾ. 19:17-20) ಇದು ಯೆಹೋವನಿಗೆ ಮತ್ತು ಆತನ ಜನ್ರಿಗೆ ಸುಳ್ಳುಧರ್ಮ ಮತ್ತು ಕೆಟ್ಟ ದೇವದೂತರ ಮೇಲೆ ಸಿಕ್ಕಿದ ದೊಡ್ಡ ವಿಜಯನೇ! ಆಗಿನ ಕಾಲದ ದೇವ ಜನರು ನಮಗೆ ಒಳ್ಳೇ ಮಾದರಿ ಇಟ್ಟಿದ್ದಾರೆ. ನಾವಿರೋ ಲೋಕದಲ್ಲಿ ಮಾಟಮಂತ್ರ ಮತ್ತು ಕೆಟ್ಟ ದೇವದೂತರಿಗೆ ಸಂಬಂಧಪಟ್ಟ ವಿಷ್ಯಗಳು ತುಂಬಿ ತುಳುಕ್ತಾ ಇದೆ. ಹಾಗಾಗಿ ಅದಕ್ಕೆ ಸಂಬಂಧಪಟ್ಟ ಯಾವುದಾದ್ರೂ ವಸ್ತು ನಮ್ಮ ಹತ್ರ ಇದ್ರೆ ನಾವು ಎಫೆಸದವರ ತರ ಅದನ್ನ ನಾಶ ಮಾಡಬೇಕು. ನಮಗೆ ನಷ್ಟ ಆದ್ರೂ ಇಂಥ ಅಸಹ್ಯ ಆಚಾರಗಳಿಂದ ದೂರ ಇರಬೇಕು.

“ದೊಡ್ಡ ಗಲಾಟೆ ಆಯ್ತು” (ಅ. ಕಾ. 19:23-41)

“ಸ್ನೇಹಿತರೇ, ಈ ವ್ಯಾಪಾರದಿಂದಾನೇ ನಮ್ಗೆ ತುಂಬ ಹಣ ಸಿಗ್ತಾ ಇದೆ ಅಂತ ನಮಗೆ ಚೆನ್ನಾಗಿ ಗೊತ್ತು.”—ಅಪೊಸ್ತಲರ ಕಾರ್ಯ 19:25

16, 17. (ಎ) ದೇಮೇತ್ರಿಯ ಎಫೆಸದಲ್ಲಿ ಹೇಗೆ ಗಲಭೆ ಶುರು ಮಾಡಿದ? (ಬಿ) ಎಫೆಸದವರು ಮತಾಂಧರು ಅಂತ ಹೇಗೆ ತೋರಿಸ್ಕೊಟ್ರು?

16 ನಾವೀಗ ಸೈತಾನನ ಇನ್ನೊಂದು ತಂತ್ರದ ಬಗ್ಗೆ ನೋಡೋಣ. ಲೂಕ “‘ದೇವ್ರ ಮಾರ್ಗದ’ ಬಗ್ಗೆ ಎಫೆಸದಲ್ಲಿ ದೊಡ್ಡ ಗಲಾಟೆ ಆಯ್ತು” ಅಂತ ಬರೀತಾ ಈ ತಂತ್ರದ ಬಗ್ಗೆ ಹೇಳಿದ್ದಾನೆ. ಇಲ್ಲಿ ಅವನು ಚಿಕ್ಕ ವಿಷ್ಯವನ್ನ ದೊಡ್ಡದು ಮಾಡಿ ಹೇಳಿಲ್ಲ. e (ಅ. ಕಾ. 19:23) ಯಾಕಂದ್ರೆ ದೇಮೇತ್ರಿಯ ಅನ್ನೋ ಒಬ್ಬ ಅಕ್ಕಸಾಲಿಗ ಈ ಸಮಸ್ಯೆನಾ ಶುರುಮಾಡಿದ. ‘ನಾವು ವಿಗ್ರಹ ವ್ಯಾಪಾರ ಮಾಡ್ತಿರೋದ್ರಿಂದನೇ ನಮ್ಗೆ ಕೈತುಂಬಾ ಹಣ ಸಿಕ್ತಿದೆ, ನಾವು ಶ್ರೀಮಂತರಾಗೋಕೆ ಇದೇ ಕಾರಣ’ ಅಂತ ಹೇಳೋದ್ರ ಮೂಲಕ ಬೇರೆ ಅಕ್ಕಸಾಲಿಗರ ಗಮನವನ್ನ ತನ್ನ ಕಡೆಗೆ ತಿರುಗಿಸ್ಕೊಂಡ. ಪೌಲ ಮಾಡ್ತಿರೋ ಕೆಲಸದಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳಬಹುದು ಅಂತ ಹೇಳ್ದ. ಯಾಕಂದ್ರೆ ಕ್ರೈಸ್ತರು ಮೂರ್ತಿಪೂಜೆ ಮಾಡ್ತಿರಲಿಲ್ಲ. ಅಷ್ಟೇ ಅಲ್ಲ ಅಲ್ಲಿರೋರಿಗೆ ತಮ್ಮ ಊರು ಮತ್ತು ದೇಶದ ಮೇಲೆ ಅಭಿಮಾನ ಇದೆ ಅಂತ ಗೊತ್ತಿತ್ತು. ಅದಕ್ಕೆ ಅವನು, ಪೌಲ ಹೇಳಿದ್ದನ್ನ ಜನ ಕೇಳಿಸ್ಕೊಂಡ್ರೆ ಅವರ ಅರ್ತೆಮೀ ದೇವಿಗೆ ಮತ್ತು ಜಗತ್ಪ್ರಸಿದ್ಧ ದೇವಸ್ಥಾನಕ್ಕೆ “ಯಾರೂ ಬೆಲೆನೇ ಕೊಡಲ್ಲ” ಅಂತ ಹೇಳಿ ಅವರ ತಲೆಯಲ್ಲಿ ಹುಳಬಿಟ್ಟ.—ಅ. ಕಾ. 19:24-27.

17 ದೇಮೇತ್ರಿಯ ತನ್ನ ಮೋಡಿ ಮಾತಿನ ಮೂಲಕ ಜನ ಪೌಲನ ಮಾತು ಕೇಳದ ಹಾಗೆ ಮಾಡಿದ. ಅಕ್ಕಸಾಲಿಗರು “ಎಫೆಸದವ್ರ ಅರ್ತೆಮೀ ದೇವಿ ಮಹಾದೇವಿ!” ಅಂತ ಜೋರಾಗಿ ಕೂಗೋಕೆ ಶುರುಮಾಡಿದ್ರು. ಆಗ ಪಟ್ಟಣದಲ್ಲಿ ಜನ್ರಿಗೆ ಗಲಿಬಿಲಿ ಆಯ್ತು, ಆಮೇಲೆ ಈ ಲೇಖನದ ಆರಂಭದಲ್ಲಿ ಹೇಳಿದ ತರ ಜನ್ರ ಗುಂಪು ಕೋಪದಿಂದ ಗಲಾಟೆ ಶುರುಮಾಡಿದ್ರು. f ಪೌಲನಿಗೆ ಎಷ್ಟು ಧೈರ್ಯ ಇತ್ತು ಅಂದ್ರೆ ಅವನು ಆ ವೃತ್ತಾಕಾರದ ಅಂಗಳಕ್ಕೆ ಹೋಗಿ ಜನ್ರ ಹತ್ರ ಮಾತಾಡಬೇಕು ಅಂತಿದ್ದ. ಆದ್ರೆ ಶಿಷ್ಯರು ಅವನಿಗೆ ಹೋಗೋಕೆ ಬಿಡಲಿಲ್ಲ. ಅಲೆಕ್ಸಾಂದ್ರ ಅನ್ನೋ ವ್ಯಕ್ತಿಯೊಬ್ಬ ಜನ್ರ ಮುಂದೆ ಬಂದು ಮಾತಾಡೋಕೆ ಪ್ರಯತ್ನಿಸಿದ. ಅವನೊಬ್ಬ ಯೆಹೂದಿ ಆಗಿದ್ರಿಂದ ಯೆಹೂದ್ಯರಿಗೂ ಕ್ರೈಸ್ತರಿಗೂ ಇರೋ ವ್ಯತ್ಯಾಸ ಹೇಳೋಕೆ ತುದಿಗಾಲಲ್ಲಿ ಇದ್ದ ಅನ್ಸುತ್ತೆ. ಆದ್ರೆ ಅಲ್ಲಿನ ಜನ ಅವನ ಮಾತನ್ನ ಕಿವಿಗೇ ಹಾಕೊಳ್ಲಿಲ್ಲ. ಅಲೆಕ್ಸಾಂದ್ರ ಯೆಹೂದಿ ಅಂತ ಗೊತ್ತಾದಾಗ ಜನ್ರು “ಎಫೆಸದವ್ರ ಅರ್ತೆಮೀ ದೇವಿ ಮಹಾದೇವಿ!” ಅಂತ ಜೋರಾಗಿ ಎರಡು ತಾಸುಗಳವರೆಗೆ ಕಿರುಚಿದ್ರು. ಇಂಥಾ ಮತಾಂಧರು ಇವತ್ತೂ ಇದ್ದಾರೆ. ತಮ್ಮ ನಂಬಿಕೆಗಳಿಗೆ ಆಧಾರ ಇದ್ಯಾ ಇಲ್ವಾ ಅಂತ ಯೋಚ್ನೆನೇ ಮಾಡೋಕೆ ಹೋಗಲ್ಲ, ನಾವು ಹೇಳೋದನ್ನ ಅರ್ಥ ಮಾಡ್ಕೊಳ್ಳೋದೇ ಇಲ್ಲ.—ಅ. ಕಾ. 19:28-34.

18, 19. (ಎ) ಪಟ್ಟಣದ ಅಧಿಕಾರಿ ಜನ್ರನ್ನ ಹೇಗೆ ಸಮಾಧಾನ ಮಾಡಿದ? (ಬಿ) ಯೆಹೋವನ ಸಾಕ್ಷಿಗಳಿಗೆ ಅಧಿಕಾರಿಗಳು ಹೇಗೆಲ್ಲಾ ಸಂರಕ್ಷಣೆ ಕೊಟ್ಟಿದ್ದಾರೆ? (ಸಿ) ಈ ರೀತಿ ಸಂರಕ್ಷಣೆ ಪಡಿಬೇಕಾದ್ರೆ ನಾವೇನು ಮಾಡಬೇಕು?

18 ಕೊನೆಗೆ, ಪಟ್ಟಣದ ಅಧಿಕಾರಿ ಜನ್ರನ್ನ ಸಮಾಧಾನ ಮಾಡಿದ. ಅವನು ಸಮಯಕ್ಕೆ ಸರಿಯಾಗಿ ಜಾಣ್ಮೆ ತೋರಿಸ್ತಾ, ಕ್ರೈಸ್ತರಿಂದ ದೇವಸ್ಥಾನಕ್ಕೆ ಮತ್ತು ದೇವಿಗೆ ಯಾವ ಅಪಾಯನೂ ಆಗಲ್ಲ ಅಂತ ಜನ್ರಿಗೆ ಹೇಳಿದ. ಪೌಲ ಮತ್ತು ಅವನ ಜೊತೆ ಇದ್ದವರು ಅರ್ತೆಮೀ ದೇವಿಯ ದೇವಸ್ಥಾನಕ್ಕೆ ವಿರುದ್ಧವಾಗಿ ಯಾವ ತಪ್ಪು ಮಾಡಿಲ್ಲ ಅಂದ. ಅಷ್ಟೇ ಅಲ್ಲ, ಪೌಲ ಮಾಡಿದ ವಿಷ್ಯ ಏನಾದ್ರೂ ಅವ್ರಿಗೆ ಇಷ್ಟ ಆಗಿಲ್ಲ ಅಂದ್ರೆ ಅದನ್ನ ಅಧಿಕಾರಿಗಳಿಗೆ ಹೇಳಬೇಕು ಅಂತ ನೆನಪಿಸಿದ. ಎಲ್ಲಕ್ಕಿಂತ ಮುಖ್ಯವಾಗಿ ‘ಈ ರೀತಿ ಗುಂಪು ಕಟ್ಟಿ ಗಲಾಟೆ ಮಾಡೋದು ರೋಮನ್‌ ಕಾನೂನಿಗೆ ವಿರುದ್ಧ, ಅದ್ರಿಂದ ನಿಮಗೇ ಅಪಾಯ’ ಅಂತ ಎಚ್ಚರಿಕೆ ಕೊಟ್ಟ. ಇಷ್ಟು ಹೇಳಿ ಅವನು ಜನ್ರನ್ನ ಅಲ್ಲಿಂದ ಕಳಿಸಿಬಿಟ್ಟ. ಎಷ್ಟು ಬೇಗ ಅವ್ರಿಗೆ ಕೋಪ ಏರಿತೋ ಅಷ್ಟೇ ಬೇಗ ಇಳಿದು ಹೋಯ್ತು. ಇದಕ್ಕೆ ಕಾರಣ ಆ ಅಧಿಕಾರಿ ಚೆನ್ನಾಗಿ ಯೋಚ್ನೆ ಮಾಡಿ ಹೇಳಿದ ಮಾತುಗಳೇ.—ಅ. ಕಾ. 19:35-41.

19 ಯೆಹೋವ ದೇವರು ಯೇಸುವಿನ ಶಿಷ್ಯರನ್ನ ಕಾಪಾಡೋಕೆ ಒಬ್ಬ ಅಧಿಕಾರಿನ ಬಳಸಿರೋದು ಇದೇ ಮೊದಲೂ ಅಲ್ಲ, ಕೊನೆನೂ ಅಲ್ಲ. ಯಾಕಂದ್ರೆ ಅಪೊಸ್ತಲ ಯೋಹಾನ ಕೊನೇ ದಿನಗಳಲ್ಲಿ ನಡಿಯೋ ಒಂದು ವಿಷ್ಯದ ಬಗ್ಗೆ ದರ್ಶನ ನೋಡಿದ. ಅದ್ರಲ್ಲಿ ಹೇಳಿರೋ “ಭೂಮಿ” ತುಂಬ ಗೌರವಾನ್ವಿತ ಸರ್ಕಾರಿ ಮತ್ತು ಕಾನೂನು ಸಂಘ-ಸಂಸ್ಥೆಯನ್ನ ಸೂಚಿಸುತ್ತೆ. ಇದು ಕ್ರೈಸ್ತರ ವಿರುದ್ಧ ಸೈತಾನ ತರೋ ಹಿಂಸೆ ಅನ್ನೋ ನದಿಯನ್ನ ಕುಡಿದುಬಿಡ್ತು. (ಪ್ರಕ. 12:15, 16) ಈ ದರ್ಶನ ಇವತ್ತು ನಿಜ ಆಗಿದೆ. ನ್ಯಾಯ ಕೊಡಬೇಕು ಅನ್ನೋ ಒಳ್ಳೇ ಮನಸ್ಸಿನ ನ್ಯಾಯಾಧೀಶರು ಅನೇಕ ಕೇಸುಗಳಲ್ಲಿ ಯೆಹೋವನ ಸಾಕ್ಷಿಗಳ ಪರವಾಗಿ ತೀರ್ಪು ಕೊಟ್ಟಿದ್ದಾರೆ. ಆರಾಧನೆಗಾಗಿ ಕೂಡಿಬರೋದು ಮತ್ತು ಬೇರೆವ್ರಿಗೆ ಸಿಹಿಸುದ್ದಿ ಸಾರೋದು ಅವ್ರ ಹಕ್ಕು ಅಂತ ಹೇಳಿದ್ದಾರೆ. ಈ ರೀತಿ ಅವರು ತೀರ್ಪು ಕೊಡಬೇಕು ಅಂದ್ರೆ ಅದಕ್ಕೆ ನಮ್ಮ ಒಳ್ಳೇ ನಡತೆನೂ ಒಂದು ಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಎಫೆಸದಲ್ಲೂ ಪೌಲನ ಒಳ್ಳೇ ನಡತೆ ನೋಡಿನೇ ಅಲ್ಲಿನ ಸರಕಾರಿ ಅಧಿಕಾರಿಗಳು ಅವನಿಗೆ ಗೌರವ ಕೊಟ್ರು, ಸಂರಕ್ಷಣೆ ಕೊಟ್ರು. (ಅ. ಕಾ. 19:31) ಇದೇ ತರ ನಮ್ಮ ಒಳ್ಳೇ ನಡತೆ, ಪ್ರಾಮಾಣಿಕತೆ ನೋಡಿ ಜನ ನಮಗೆ ಗೌರವ ಕೊಡಬಹುದು, ಒಳ್ಳೇದನ್ನೂ ಮಾಡಬಹುದು.

20. (ಎ) ಒಂದನೇ ಶತಮಾನದಲ್ಲಿ ಮತ್ತು ಇವತ್ತು ಯೆಹೋವನ ಸಂದೇಶ ಎಲ್ಲಾ ಕಡೆ ಹಬ್ತಾ ಇರೋದ್ರ ಬಗ್ಗೆ ನಿಮಗೆ ಹೇಗನಿಸುತ್ತೆ? (ಬಿ) ನೀವೇನು ಮಾಡಬೇಕು ಅಂದ್ಕೊಂಡಿದ್ದೀರಾ?

20 ಒಂದನೇ ಶತಮಾನದಲ್ಲಿ ‘ಯೆಹೋವನ ಸಂದೇಶ ಎಲ್ಲಾ ಕಡೆ ಹೇಗೆ ಹಬ್ತಾ ಹೋಯ್ತು’ ಅನ್ನೋದನ್ನ ನೋಡಿದಾಗ ಎಷ್ಟು ಖುಷಿ ಆಯ್ತು ಅಲ್ವಾ? ನಮ್ಮ ಕಾಲದಲ್ಲೂ ಇಂಥ ಜಯ ಸಿಗೋ ತರ ಯೆಹೋವ ಮಾಡೋದನ್ನ ನೋಡಿದಾಗ ಅಷ್ಟೇ ಖುಷಿ ಆಗುತ್ತೆ. ಈ ಗೆಲುವಿನಲ್ಲಿ ನಿಮಗೂ ಒಂದು ಪಾಲಿರಬೇಕು ಅಂತ ಆಸೆ ಇದ್ಯಾ? ಹಾಗಿದ್ರೆ ದೀನರಾಗಿರಿ, ಯೆಹೋವನ ಸಂಘಟನೆ ಕೊಡೋ ನಿರ್ದೇಶನಗಳನ್ನ ತಕ್ಷಣ ಪಾಲಿಸಿ, ಕಷ್ಟಪಟ್ಟು ಕೆಲಸ ಮಾಡಿ, ಮಾಟಮಂತ್ರದಿಂದ ದೂರ ಇರಿ, ಸಿಹಿಸುದ್ದಿ ಸಾರೋಕೆ ನಿಮ್ಮ ಕೈಲಾಗಿರೋದನ್ನೆಲ್ಲಾ ಮಾಡಿ, ಒಳ್ಳೇ ನಡತೆ ಕಾಪಾಡ್ಕೊಳ್ಳಿ, ಪ್ರಾಮಾಣಿಕರಾಗಿರಿ.

a ಎಫೆಸ—ಏಷ್ಯಾದ ರಾಜಧಾನಿ” ಅನ್ನೋ ಚೌಕ ನೋಡಿ.

b ಪೌಲ ಎಫೆಸದಲ್ಲಿದ್ದಾಗ 1ನೇ ಕೊರಿಂಥ ಪತ್ರವನ್ನೂ ಬರೆದ.

c ಪೌಲ ರುಮಾಲನ್ನ, ಹಣೆಯಿಂದ ಬೆವರು ಹರಿದು ಕಣ್ಣಿಗೆ ಬೀಳದೆ ಇರೋಕೆ ಹಣೆಗೆ ಕಟ್ಟಿಕೊಂಡಿದ್ದಿರಬೇಕು. ಅವನು ಹಾಕೊಳ್ತಿದ್ದ ಏಪ್ರನ್‌ ಅಂದ್ರೆ, ಕೆಲಸ ಮಾಡೋವಾಗ ಬಟ್ಟೆ ಕೊಳೆಯಾಗದೆ ಇರೋಕೆ ಹಾಕೊಳ್ತಿದ್ದ ಮೇಲ್ಹೊದಿಕೆ ಆಗಿತ್ತು. ಪೌಲ ಅದನ್ನ ಹಾಕೊಂಡಿದ್ರಿಂದ ಬಿಡುವಿನ ಸಮಯದಲ್ಲಿ, ಬಹುಶಃ ಮುಂಜಾನೆ ಡೇರೆ ಮಾಡೋ ಕೆಲಸ ಮಾಡ್ತಿದ್ದ ಅಂತ ಗೊತ್ತಾಗುತ್ತೆ.—ಅ. ಕಾ. 20:34, 35.

d ಲೂಕ ಅದ್ರ ಬೆಲೆ 50,000 ಬೆಳ್ಳಿ ನಾಣ್ಯ ಅಂತ ಹೇಳಿದ್ದಾನೆ. ಈ ನಾಣ್ಯ ದಿನಾರು ಆಗಿದ್ರೆ, ಆ ಕಾಲದಲ್ಲಿ ವಾರದ ಏಳೂ ದಿನ ಕೆಲಸ ಮಾಡೋ ಒಬ್ಬ ಕೂಲಿಯವನಿಗೆ ಅಷ್ಟು ಹಣ ಸಂಪಾದಿಸಬೇಕಾದ್ರೆ 50,000 ದಿನ ಕೆಲ್ಸ ಮಾಡಬೇಕಿತ್ತು. ಅಂದ್ರೆ ಸುಮಾರು 137 ವರ್ಷ.

e ಪೌಲ ಕೊರಿಂಥದವರಿಗೆ “ನಾವು ಬದುಕೋದೇ ಇಲ್ಲ ಅಂತ ಅಂದ್ಕೊಂಡಿದ್ವಿ” ಅಂತ ಬರೆದಿದ್ದು ಈ ಸನ್ನಿವೇಶನ ಮನಸ್ಸಲ್ಲಿ ಇಟ್ಕೊಂಡು ಅಂತ ಕೆಲವರು ಹೇಳ್ತಾರೆ. (2 ಕೊರಿಂ. 1:8) ಆದ್ರೆ ಇದಕ್ಕಿಂತ ಅಪಾಯಕಾರಿ ಘಟನೆ ಅವನ ಮನಸ್ಸಲ್ಲಿ ಇದ್ದಿರಬೇಕು. ಯಾಕಂದ್ರೆ ‘ಕಾಡುಪ್ರಾಣಿಗಳ ಜೊತೆ ಹೋರಾಡಿದೆ’ ಅನ್ನೋವಾಗ ಪೌಲ ನಿಜವಾಗ್ಲೂ ಭಯಂಕರ ಪ್ರಾಣಿಯ ಜೊತೆ ಒಂದು ಕಣದಲ್ಲಿ ಹೋರಾಡಿದ್ದರ ಬಗ್ಗೆ ಅಥವಾ ಜನ್ರ ಕಡು ವಿರೋಧದ ಬಗ್ಗೆ ಹೇಳಿದ್ದಿರಬಹುದು.—1 ಕೊರಿಂ. 15:32.

f ಇಂಥ ಕೆಲಸಗಾರರ ಗುಂಪು ಅಥವಾ ಸಂಘ ತುಂಬಾ ಅಪಾಯಕಾರಿಯಾಗಿತ್ತು. ಯಾಕಂದ್ರೆ ಇದಾಗಿ ಸುಮಾರು ಒಂದು ಶತಮಾನ ಆದ್ಮೇಲೆ ಅಡುಗೆ ಮಾಡೋರ ಗುಂಪೊಂದು ಎಫೆಸದಲ್ಲಿ ಇಂಥದ್ದೇ ಗಲಭೆ ಶುರು ಮಾಡ್ತು.