ಅಧ್ಯಾಯ 12
‘ಯೆಹೋವನಿಂದ ಶಕ್ತಿ ಪಡ್ಕೊಂಡು ಧೈರ್ಯವಾಗಿ ಮಾತಾಡಿದ್ರು’
ಪೌಲ ಮತ್ತು ಬಾರ್ನಬ ದೀನತೆ, ಛಲ ಮತ್ತು ಧೈರ್ಯ ತೋರಿಸಿದ್ರು
ಆಧಾರ: ಅಪೊಸ್ತಲರ ಕಾರ್ಯ 14:1-28
1, 2. ಪೌಲ ಮತ್ತು ಬಾರ್ನಬ ಲುಸ್ತ್ರದಲ್ಲಿದ್ದಾಗ ಏನೆಲ್ಲಾ ನಡೀತು?
ಲುಸ್ತ್ರದಲ್ಲಿ ಗದ್ದಲವೊ ಗದ್ದಲ. ಹುಟ್ಟಿನಿಂದಾನೇ ಕುಂಟನಾಗಿದ್ದ ಒಬ್ಬನನ್ನ ಇಬ್ರು ಅಪರಿಚಿತರು ವಾಸಿ ಮಾಡಿದ್ರು. ಅವನು ಸಂತೋಷದಿಂದ ಕುಣಿದು ಕುಪ್ಪಳಿಸಿದ. ಇದನ್ನೆಲ್ಲ ಜನ್ರು ಆಶ್ಚರ್ಯದಿಂದ ಕಣ್ಣುಬಾಯಿ ಬಿಟ್ಟು ನೋಡ್ತಾ ಇದ್ರು. ಆ ಅಪರಿಚಿತರನ್ನ ಅಂದ್ರೆ ಪೌಲ ಮತ್ತು ಬಾರ್ನಬನನ್ನ ಜನ ದೇವರುಗಳು ಅಂತ ನೆನಸಿದ್ರು. ಸ್ಯೂಸ್ ದೇವನ ಪೂಜಾರಿಯೊಬ್ಬ ಅವ್ರಿಗಾಗಿ ಹೂವಿನ ಹಾರಗಳನ್ನ ತಂದ. ಎತ್ತುಗಳನ್ನ ಬಲಿ ಕೊಡೋಕೆ ಪೂಜಾರಿಯೊಬ್ಬ ಸಿದ್ಧತೆ ಮಾಡ್ತಿದ್ದಾಗ ಅವು ಕೋಪದಿಂದ ಗುಟುರು ಹಾಕ್ತಿದ್ವು. ಪೌಲ ಮತ್ತು ಬಾರ್ನಬ ಜನ್ರನ್ನ ತಡೀತಾ ಅದನ್ನೆಲ್ಲಾ ನಿಲ್ಲಿಸೋಕೆ ಜೋರಾಗಿ ಕೂಗಿ ಹೇಳ್ತಿದ್ರು. ತಮ್ಮ ಬಟ್ಟೆಗಳನ್ನ ಹರ್ಕೊಂಡು ಜನ್ರ ಮಧ್ಯ ನುಗ್ಗಿ ‘ನಮ್ಮನ್ನ ಆರಾಧಿಸಬೇಡಿ’ ಅಂತ ಬೇಡ್ಕೊಂಡ್ರು. ತುಂಬ ಕಷ್ಟಪಟ್ಟು ಕೊನೆಗೂ ಆ ಜನ್ರನ್ನ ತಡೆದ್ರು.
2 ಆಮೇಲೆ ಪಿಸಿದ್ಯದ ಅಂತಿಯೋಕ್ಯದಿಂದ, ಇಕೋನ್ಯದಿಂದ ಯೆಹೂದಿ ವಿರೋಧಿಗಳು ಅಲ್ಲಿಗೆ ಬಂದ್ರು. ಅವರು ಪೌಲ ಮತ್ತು ಬಾರ್ನಬನ ಬಗ್ಗೆ ಕೆಟ್ಟದಾಗಿ ಮಾತಾಡ್ತಾ ಲುಸ್ತ್ರದ ಜನ್ರ ತಲೆಯಲ್ಲಿ ವಿಷ ತುಂಬಿದ್ರು. ಸ್ವಲ್ಪ ಸಮಯದ ಹಿಂದೆಯಷ್ಟೇ ಪೌಲನನ್ನ ಆರಾಧಿಸೋಕೆ ತಯಾರಾಗಿದ್ದ ಆ ಜನ್ರೇ ಈಗ ಅವನನ್ನ ಸುತ್ತುವರಿದು ಕಲ್ಲೆಸೆದ್ರು. ಅವನು ಪ್ರಜ್ಞೆತಪ್ಪಿದಾಗ ಅವ್ರ ಕೋಪ ಕಮ್ಮಿ ಆಯ್ತು. ಅವನು ಸತ್ತುಹೋದ ಅಂತ ನೆನಸಿ ಅವನ ದೇಹವನ್ನ ಎಳ್ಕೊಂಡು ಊರ ಹೊರಗೆ ಹಾಕಿದ್ರು.
3. ಈ ಅಧ್ಯಾಯದಲ್ಲಿ ನಾವು ಯಾವ ಪ್ರಶ್ನೆಗಳಿಗೆ ಉತ್ರ ನೋಡ್ತೀವಿ?
3 ಹೀಗೆ ಮಾಡೋದಕ್ಕೆ ಕಾರಣ ಏನು? ಬಾರ್ನಬ ಮತ್ತು ಪೌಲನಿಂದ ನಾವೇನು ಕಲಿಬಹುದು? ಲುಸ್ತ್ರದ ಜನ ಅವ್ರ ಜೊತೆ ನಡ್ಕೊಂಡ ರೀತಿಯಿಂದ ನಾವೇನು ಕಲಿಬಹುದು? ಬಾರ್ನಬ ಮತ್ತು ಪೌಲ ‘ಯೆಹೋವನಿಂದ ಶಕ್ತಿ ಪಡ್ಕೊಂಡು ಧೈರ್ಯದಿಂದ ಮಾತಾಡಿದ’ ಘಟನೆಯಿಂದ ಹಿರಿಯರು ಏನು ಕಲಿಬಹುದು? ಈ ಪ್ರಶ್ನೆಗಳಿಗೆ ನಾವು ಈ ಅಧ್ಯಾಯದಲ್ಲಿ ಉತ್ರ ತಿಳ್ಕೊಳ್ಳೋಣ.—ಅ. ಕಾ. 14:3.
“ತುಂಬ ಜನ ಶಿಷ್ಯರಾದ್ರು” (ಅ. ಕಾ. 14:1-7)
4, 5. (ಎ) ಪೌಲ ಮತ್ತು ಬಾರ್ನಬ ಇಕೋನ್ಯಕ್ಕೆ ಯಾಕೆ ಹೋದ್ರು? (ಬಿ) ಅಲ್ಲಿ ಏನಾಯ್ತು?
4 ಕೆಲವು ದಿನಗಳ ಹಿಂದೆಯಷ್ಟೇ ರೋಮ್‌ನ ಪಟ್ಟಣವಾಗಿದ್ದ ಪಿಸಿದ್ಯದ ಅಂತಿಯೋಕ್ಯದಲ್ಲಿ ಯೆಹೂದಿ ವಿರೋಧಿಗಳು ಪೌಲ ಮತ್ತು ಬಾರ್ನಬನಿಗೆ ತೊಂದ್ರೆ ಕೊಟ್ಟು ಅಲ್ಲಿಂದ ಹೊರಗೆ ದೊಬ್ಬಿದ್ರು. ಆಗ ಅವರು ಸೋತುಹೋಗಲಿಲ್ಲ. ತಮ್ಮ ಮಾತನ್ನ ಕೇಳಿಸ್ಕೊಳ್ಳದೇ ಇದ್ದ ಆ ಪಟ್ಟಣದ ಜನ್ರ ವಿಷ್ಯದಲ್ಲಿ “ತಮ್ಮ ಕಾಲಿಗಿದ್ದ ಧೂಳನ್ನ ಝಾಡಿಸಿ” ಅಲ್ಲಿಂದ ಹೋದ್ರು. (ಅ. ಕಾ. 13:50-52; ಮತ್ತಾ. 10:14) ಪೌಲ ಮತ್ತು ಬಾರ್ನಬ ಶಾಂತಿಯಿಂದ ಅಲ್ಲಿಂದ ಹೊರಟುಹೋದ್ರು, ಆ ವಿರೋಧಿಗಳನ್ನ ದೇವರೇ ನೋಡ್ಕೊಳ್ಳಲಿ ಅಂತ ಬಿಟ್ಟುಹೋದ್ರು. (ಅ. ಕಾ. 18:5, 6; 20:26) ಅವ್ರ ಸಂತೋಷ ಸ್ವಲ್ಪನೂ ಕಮ್ಮಿ ಆಗಲಿಲ್ಲ. ಈ ಇಬ್ರು ಮಿಷನರಿಗಳು ಸಿಹಿಸುದ್ದಿ ಸಾರೋದನ್ನ ಮುಂದುವರಿಸಿದ್ರು. ಅಲ್ಲಿಂದ ಆಗ್ನೇಯಕ್ಕೆ ಸುಮಾರು 150 ಕಿ.ಮೀ. ಪ್ರಯಾಣ ಮಾಡಿ ಟೊರಸ್ ಮತ್ತು ಸುಲ್ತಾನ್ ಪರ್ವತಶ್ರೇಣಿಗಳ ಮಧ್ಯೆ ಇದ್ದ ಫಲವತ್ತಾದ ಪ್ರಸ್ಥಭೂಮಿಗೆ (ಸಮತಟ್ಟಾದ ಪ್ರದೇಶ) ಬಂದು ತಲುಪಿದ್ರು.
5 ಪೌಲ ಮತ್ತು ಬಾರ್ನಬ ಮೊದಲು ಇಕೋನ್ಯಕ್ಕೆ ಹೋದ್ರು. ಇದು ರೋಮ್‌ನ ಪ್ರಾಂತವಾಗಿದ್ದ ಗಲಾತ್ಯದ ಮುಖ್ಯ ಪಟ್ಟಣಗಳಲ್ಲಿ ಒಂದಾಗಿತ್ತು. ಇಲ್ಲಿ ಗ್ರೀಕ್ ಸಂಸ್ಕೃತಿ ತಳವೂರಿತ್ತು. a ಈ ಪಟ್ಟಣದಲ್ಲಿ ಯೆಹೂದ್ಯರೂ ಇದ್ರು, ಯೆಹೂದ್ಯರಾಗಿ ಮತಾಂತರ ಆದವರೂ ತುಂಬ ಜನ ಇದ್ರು. ಪೌಲ ಮತ್ತು ಬಾರ್ನಬ ತಮ್ಮ ರೂಢಿ ಪ್ರಕಾರ ಸಭಾಮಂದಿರಕ್ಕೆ ಹೋಗಿ ಸಾರೋಕೆ ಶುರುಮಾಡಿದ್ರು. (ಅ. ಕಾ. 13:5, 14) “ಅವರು ಎಷ್ಟು ಚೆನ್ನಾಗಿ ಮಾತಾಡಿದರಂದ್ರೆ ಯೆಹೂದ್ಯರಲ್ಲಿ ಮತ್ತು ಗ್ರೀಕರಲ್ಲಿ ತುಂಬ ಜನ ಶಿಷ್ಯರಾದ್ರು.”—ಅ. ಕಾ. 14:1.
6. (ಎ) ಪೌಲ ಮತ್ತು ಬಾರ್ನಬ ತುಂಬ ಚೆನ್ನಾಗಿ ಮಾತಾಡೋಕೆ ಕಾರಣ ಏನು? (ಬಿ) ನಾವು ಅವ್ರನ್ನ ಹೇಗೆ ಅನುಕರಿಸಬಹುದು?
6 ಪೌಲ ಮತ್ತು ಬಾರ್ನಬ ಇಷ್ಟು ಚೆನ್ನಾಗಿ ಮಾತಾಡೋಕೆ ಏನು ಕಾರಣ? ಪೌಲನಿಗೆ ಪವಿತ್ರಗ್ರಂಥದ ಬಗ್ಗೆ ತುಂಬ ವಿಷ್ಯ ಗೊತ್ತಿತ್ತು. ಯೇಸುನೇ ಪವಿತ್ರಗ್ರಂಥದಲ್ಲಿ ಹೇಳಿದ್ದ ಮೆಸ್ಸೀಯ ಅಂತ ತೋರಿಸೋಕೆ ಅವನು ಇತಿಹಾಸ, ಭವಿಷ್ಯವಾಣಿ ಮತ್ತು ಮೋಶೆಯ ನಿಯಮ ಪುಸ್ತಕದಲ್ಲಿದ್ದ ವಿಷ್ಯಗಳನ್ನ ತುಂಬ ಚೆನ್ನಾಗಿ ಬಳಸಿದ. (ಅ. ಕಾ. 13:15-31; 26:22, 23) ಬಾರ್ನಬ ಮಾತಾಡಿದ ರೀತಿಯಿಂದ ಜನ್ರ ಮೇಲೆ ಅವನಿಗೆ ಎಷ್ಟು ಕಾಳಜಿ ಇತ್ತು ಅಂತ ಗೊತ್ತಾಗುತ್ತೆ. (ಅ. ಕಾ. 4:36, 37; 9:27; 11:23, 24) ಇವರಿಬ್ರೂ ತಮ್ಮ ಬುದ್ಧಿ ಮೇಲೆ ಹೊಂದ್ಕೊಳ್ಳದೆ ‘ಯೆಹೋವನಿಂದ ಶಕ್ತಿ ಪಡ್ಕೊಂಡು ಧೈರ್ಯದಿಂದ ಮಾತಾಡಿದ್ರು.’ ಸಾರೋ ಕೆಲಸದಲ್ಲಿ ನೀವು ಈ ಮಿಷನರಿಗಳನ್ನ ಹೇಗೆ ಅನುಕರಿಸಬಹುದು? ದೇವರ ವಾಕ್ಯದ ಒಳ್ಳೇ ಪರಿಚಯ ಮಾಡ್ಕೊಬೇಕು. ಜನ್ರಿಗೆ ಇಷ್ಟ ಆಗೋ ಬೈಬಲ್ ವಚನಗಳನ್ನ ಆರಿಸ್ಕೊಬೇಕು. ಜನ್ರನ್ನ ಸಮಾಧಾನ ಮಾಡೋಕೆ ಏನೆಲ್ಲಾ ಮಾಡಬಹುದು ಅಂತ ಯೋಚ್ನೆ ಮಾಡಬೇಕು. ನಿಮ್ಮ ಸ್ವಂತ ಜ್ಞಾನದ ಮೇಲೆ ಹೊಂದ್ಕೊಳ್ಳದೆ ಯೆಹೋವನ ವಾಕ್ಯದಲ್ಲಿ ಇರೋದನ್ನ ಅವ್ರಿಗೆ ಕಲಿಸಬೇಕು.
7. (ಎ) ಸಿಹಿಸುದ್ದಿಯಿಂದಾಗಿ ಯಾವ ಪರಿಣಾಮಗಳಾಗುತ್ತೆ? (ಬಿ) ನೀವು ಸಿಹಿಸುದ್ದಿ ಕೇಳಿಸ್ಕೊಂಡು ಅದಕ್ಕೆ ತಕ್ಕ ಹಾಗೆ ಜೀವನ ಮಾಡೋವಾಗ ನಿಮ್ಮ ಕುಟುಂಬದಲ್ಲಿ ಒಡಕು ಹುಟ್ಟಿದ್ರೆ ಯಾವ ವಿಷ್ಯ ನೆನಪಲ್ಲಿಡಬೇಕು?
7 ಪೌಲ ಮತ್ತು ಬಾರ್ನಬ ಹೇಳಿದ ಮಾತುಗಳನ್ನ ಕೇಳಿದಾಗ ಇಕೋನ್ಯದ ಕೆಲವು ಜನ್ರಿಗೆ ಇಷ್ಟ ಆಗಲಿಲ್ಲ. ಇದ್ರ ಬಗ್ಗೆ ಲೂಕ “ಶಿಷ್ಯರಾಗದ ಯೆಹೂದ್ಯರು ಸಹೋದರರ ಬಗ್ಗೆ ಬೇರೆ ಜನ್ರ ಮನಸ್ಸಲ್ಲಿ ವಿಷಬೀಜ ಬಿತ್ತಿದ್ರು” ಅಂತ ಹೇಳಿದ್ದಾನೆ. ಹಾಗಾಗಿ ಪೌಲ ಮತ್ತು ಬಾರ್ನಬನಿಗೆ ಅಲ್ಲೇ ಉಳ್ಕೊಂಡು ಸಿಹಿಸುದ್ದಿಯ ಪರವಾಗಿ ಮಾತಾಡಬೇಕು ಅಂತ ಅನಿಸ್ತು. ಅದಕ್ಕೆ ಅವರು ‘ತುಂಬ ಸಮಯ ಅಲ್ಲಿದ್ದು ಧೈರ್ಯದಿಂದ ಸಾರಿದ್ರು.’ ಇದ್ರಿಂದಾಗಿ, “ಆ ಊರಿನ ಜನ್ರಲ್ಲಿ ಎರಡು ಪಕ್ಷ ಆಯ್ತು. ಕೆಲವರು ಯೆಹೂದ್ಯರ ಪಕ್ಷದಲ್ಲಿದ್ರೆ ಇನ್ನು ಕೆಲವರು ಅಪೊಸ್ತಲರ ಪಕ್ಷದಲ್ಲಿದ್ರು.” (ಅ. ಕಾ. 14:2-4) ಇವತ್ತು ಕೂಡ ಜನ್ರು ಸಿಹಿಸುದ್ದಿ ಕೇಳಿಸ್ಕೊಂಡಾಗ ಇದೇ ತರ ಪ್ರತಿಕ್ರಿಯಿಸ್ತಾರೆ. ಸಿಹಿಸುದ್ದಿಯಿಂದಾಗಿ ಕೆಲವರು ಒಂದಾದ್ರೆ, ಇನ್ನು ಕೆಲವರು ಬೇರೆಬೇರೆ ಆಗ್ತಾರೆ. (ಮತ್ತಾ. 10:34-36) ನೀವು ಸಿಹಿಸುದ್ದಿಯನ್ನ ಕೇಳಿಸ್ಕೊಂಡು ಅದಕ್ಕೆ ತಕ್ಕ ಹಾಗೆ ಜೀವನ ಮಾಡೋವಾಗ ನಿಮ್ಮ ಕುಟುಂಬದಲ್ಲಿ ಒಡಕು ಹುಟ್ಟಿದ್ರೆ ಒಂದು ವಿಷ್ಯ ನೆನಪಲ್ಲಿಡಿ. ಆಧಾರ ಇಲ್ಲದಿರೋ ಗಾಳಿಸುದ್ದಿ, ಸುಳ್ಳು ಆರೋಪಗಳೇ ಅವ್ರ ವಿರೋಧಕ್ಕೆ ಹೆಚ್ಚಾಗಿ ಕಾರಣ ಆಗಿರುತ್ತೆ. ಅವ್ರ ಮನಸ್ಸಲ್ಲಿ ತುಂಬಿಸಿರೋ ಈ ವಿಷಕ್ಕೆ ನಿಮ್ಮ ಒಳ್ಳೇ ನಡತೆನೇ ಮದ್ದು. ನಿಮ್ಮನ್ನ ವಿರೋಧ ಮಾಡ್ತಿರೋ ಜನ್ರ ಕಲ್ಲು ಹೃದಯವನ್ನ ನಿಧಾನವಾಗಿ ಅದು ಕರಗಿಸುತ್ತೆ.—1 ಪೇತ್ರ 2:12; 3:1, 2.
8. (ಎ) ಪೌಲ ಮತ್ತು ಬಾರ್ನಬ ಯಾಕೆ ಇಕೋನ್ಯವನ್ನ ಬಿಟ್ಟು ಹೋದ್ರು? (ಬಿ) ಅವ್ರ ಈ ಮಾದರಿಯಿಂದ ನಾವೇನು ಕಲಿಬಹುದು?
8 ಸ್ವಲ್ಪ ಸಮಯ ಆದ್ಮೇಲೆ, ಇಕೋನ್ಯದ ವಿರೋಧಿಗಳು ಪೌಲ ಮತ್ತು ಬಾರ್ನಬನನ್ನ ಕಲ್ಲೆಸೆದು ಕೊಲ್ಲಬೇಕಂತ ಸಂಚು ಮಾಡಿದ್ರು. ಇದ್ರ ಬಗ್ಗೆ ಈ ಇಬ್ರು ಮಿಷನರಿಗಳಿಗೆ ಗೊತ್ತಾದಾಗ ಅವರು ಬೇರೆ ಜಾಗಕ್ಕೆ ಹೋಗಿ ಸಾರೋಕೆ ತೀರ್ಮಾನ ಮಾಡಿದ್ರು. (ಅ. ಕಾ. 14:5-7) ಇವತ್ತೂ ಪ್ರಚಾರಕರಾದ ನಾವು ಇದೇ ತರ ಮಾಡಿ ನಮಗೆ ವಿವೇಚನೆ ಇದೆ ಅಂತ ತೋರಿಸ್ತೀವಿ. ಜನ್ರು ನಮ್ಮ ಮೇಲೆ ಸುಳ್ಳು ಆರೋಪಗಳನ್ನ ಹಾಕೋವಾಗ ಧೈರ್ಯದಿಂದ ಮಾತಾಡ್ತೀವಿ. (ಫಿಲಿ. 1:7; 1 ಪೇತ್ರ 3:13-15) ಹಾಗಂತ ಅತಿಯಾದ ಧೈರ್ಯ ತೋರಿಸಲ್ಲ. ಏನಾದ್ರೂ ತೊಂದ್ರೆ ಇದೆ ಅಂತ ಗೊತ್ತಾದ್ರೆ ನಮ್ಮ ಮತ್ತು ನಮ್ಮ ಜೊತೆ ಇರೋ ಸಹೋದರ ಸಹೋದರಿಯರ ಪ್ರಾಣಕ್ಕೆ ಅಪಾಯ ಆಗೋಂಥ ಯಾವ ಕೆಲ್ಸನೂ ಮಾಡಲ್ಲ.—ಜ್ಞಾನೋ. 22:3.
“ಜೀವ ಇರೋ ದೇವರನ್ನ ಆರಾಧಿಸಿ” (ಅ. ಕಾ. 14:8-19)
9, 10. (ಎ) ಲುಸ್ತ್ರ ಎಲ್ಲಿತ್ತು? (ಬಿ) ಅಲ್ಲಿದ್ದ ಜನ್ರ ಬಗ್ಗೆ ನಮಗೆ ಏನೆಲ್ಲಾ ಗೊತ್ತು?
9 ಪೌಲ ಮತ್ತು ಬಾರ್ನಬ ಇಕೋನ್ಯದ ನೈಋತ್ಯದಲ್ಲಿ 30 ಕಿ.ಮೀ. ದೂರದಲ್ಲಿದ್ದ ಲುಸ್ತ್ರ ಅನ್ನೋ ಒಂದು ರೋಮಿನ ಪ್ರದೇಶಕ್ಕೆ ಹೋದ್ರು. ಲುಸ್ತ್ರ ಮತ್ತು ಪಿಸಿದ್ಯದ ಅಂತಿಯೋಕ್ಯದ ನಡುವೆ ತುಂಬ ಹೋಲಿಕೆಗಳಿದ್ವು. ಆದ್ರೆ ಅಂತಿಯೋಕ್ಯದ ತರ ಇಲ್ಲಿ ಯೆಹೂದ್ಯರ ದೊಡ್ಡ ಸಮುದಾಯ ಇರಲಿಲ್ಲ. ಇಲ್ಲಿನವರ ಮಾತೃಭಾಷೆ ಲುಕವೋನ್ಯನ್ ಆಗಿದ್ರೂ ಅವ್ರಿಗೆ ಗ್ರೀಕ್ ಭಾಷೆನೂ ಬರ್ತಿತ್ತು ಅನ್ಸುತ್ತೆ. ಈ ಪಟ್ಟಣದಲ್ಲಿ ಸಭಾಮಂದಿರ ಇರಲಿಲ್ಲ ಅನ್ಸುತ್ತೆ. ಅದಕ್ಕೆ ಪೌಲ ಮತ್ತು ಬಾರ್ನಬ ಸಾರ್ವಜನಿಕ ಸ್ಥಳದಲ್ಲಿ ಸಾರೋಕೆ ಶುರುಮಾಡಿದ್ರು. ಯೆರೂಸಲೇಮಲ್ಲಿ ಪೇತ್ರ, ಹುಟ್ಟು ಅಂಗವಿಕಲನನ್ನ ವಾಸಿ ಮಾಡಿದ್ದ. ಲುಸ್ತ್ರದಲ್ಲಿ ಪೌಲ ಹುಟ್ಟು ಕುಂಟನನ್ನ ವಾಸಿಮಾಡಿದ. (ಅ. ಕಾ. 14:8-10) ಪೇತ್ರ ಮಾಡಿದ ಅದ್ಭುತ ನೋಡಿ ತುಂಬ ಜನ್ರು ಶಿಷ್ಯರಾದ್ರು. (ಅ. ಕಾ. 3:1-10) ಆದ್ರೆ ಪೌಲ ಅದ್ಭುತ ಮಾಡಿದಾಗ ಜನ್ರು ಬೇರೆ ತರನೇ ಪ್ರತಿಕ್ರಿಯಿಸಿದ್ರು.
10 ಈ ಅಧ್ಯಾಯದ ಆರಂಭದಲ್ಲಿ ನೋಡಿದ ಹಾಗೆ, ಕುಂಟ ಕುಣಿದು ಕುಪ್ಪಳಿಸೋದನ್ನ ನೋಡಿದಾಗ ಲುಸ್ತ್ರದ ಬೇರೆ ಧರ್ಮದ ಜನ್ರು ತಪ್ಪಾದ ತೀರ್ಮಾನಕ್ಕೆ ಬಂದ್ರು. ಬಾರ್ನಬನನ್ನ ದೇವರುಗಳ ಮುಖ್ಯಸ್ಥನಾದ ಸ್ಯೂಸ್ ದೇವ ಅಂತ ಅಂದ್ಕೊಂಡ್ರು. ಪೌಲನನ್ನ ಸ್ಯೂಸ್‌ನ ಮಗನೂ ದೇವರುಗಳ ಪ್ರತಿನಿಧಿನೂ ಆದ ಹರ್ಮೀಸ್ ಅಂದ್ಕೊಂಡ್ರು. ( “ ಲುಸ್ತ್ರ ಪಟ್ಟಣ ಮತ್ತು ಸ್ಯೂಸ್, ಹರ್ಮೀಸ್‌ರ ಪಂಥ” ಅನ್ನೋ ಚೌಕ ನೋಡಿ.) ಆದ್ರೆ ಬಾರ್ನಬ ಮತ್ತು ಪೌಲ ತಾವು ಬೇರೆ ಧರ್ಮಗಳ ದೇವರುಗಳ ಅಧಿಕಾರದಿಂದ ಅಲ್ಲ, ಬದಲಿಗೆ ಒಬ್ಬನೇ ಸತ್ಯ ದೇವರಾದ ಯೆಹೋವನ ಅಧಿಕಾರದಿಂದ ಮಾತಾಡಿದ್ವಿ, ಅದ್ಭುತ ಮಾಡಿದ್ವಿ ಅಂತ ಜನ್ರಿಗೆ ಅರ್ಥಮಾಡಿಸೋಕೆ ಪ್ರಯತ್ನ ಮಾಡ್ತಾನೇ ಇದ್ರು.—ಅ. ಕಾ. 14:11-14.
11-13. (ಎ) ಲುಸ್ತ್ರದ ಜನ್ರಿಗೆ ಪೌಲ ಮತ್ತು ಬಾರ್ನಬ ಏನು ಹೇಳಿದ್ರು? (ಬಿ) ಪೌಲ ಮತ್ತು ಬಾರ್ನಬ ಹೇಳಿದ ಮಾತುಗಳಿಂದ ನಾವು ಕಲಿಯೋ ಮೊದಲನೇ ಪಾಠ ಯಾವುದು?
11 ಜನ್ರು ಹುಚ್ಚುಚ್ಚಾಗಿ ನಡ್ಕೊಳ್ತಿದ್ದ ಈ ಪರಿಸ್ಥಿತಿಯಲ್ಲೂ ಪೌಲ ಮತ್ತು ಬಾರ್ನಬ ತುಂಬ ಚೆನ್ನಾಗಿ ಮಾತಾಡಿದ್ರು, ಅವ್ರ ಹೃದಯ ಮುಟ್ಟೋಕೆ ಪ್ರಯತ್ನ ಮಾಡಿದ್ರು. ನಾವೂ ಬೇರೆ ಧರ್ಮದ ಜನ್ರಿಗೆ ಈ ತರಾನೇ ಸಾರಬೇಕು. ಅದಕ್ಕೇ ಈ ಘಟನೆ ಬಗ್ಗೆ ಲೂಕ ಬೈಬಲಲ್ಲಿ ಬರೆದಿದ್ದಾನೆ. ಪೌಲ ಮತ್ತು ಬಾರ್ನಬ ಏನು ಹೇಳಿದ್ರು ಅಂತ ನೋಡಿ: “ನೀವೆಲ್ಲ ಯಾಕೆ ಹೀಗೆ ಮಾಡ್ತಾ ಇದ್ದೀರಾ? ನಾವೂ ನಿಮ್ಮ ತರಾನೇ ಮನುಷ್ಯರು. ನಿಮ್ಮ ತರಾನೇ ನಾವೂ ತಪ್ಪು ಮಾಡ್ತೀವಿ. ನಾವು ನಿಮಗೆ ಸಿಹಿಸುದ್ದಿ ಹೇಳೋಕೆ ಬಂದ್ವಿ. ಯಾಕಂದ್ರೆ ಕೆಲಸಕ್ಕೆ ಬಾರದ ಇವುಗಳನ್ನ ಆರಾಧಿಸೋದನ್ನ ಬಿಟ್ಟು ಜೀವ ಇರೋ ದೇವರನ್ನ ಆರಾಧಿಸಿ. ಆತನೇ ಆಕಾಶ, ಭೂಮಿ, ಸಮುದ್ರ ಮತ್ತು ಎಲ್ಲಾ ಸೃಷ್ಟಿ ಮಾಡಿದ್ದಾನೆ. ಈ ಮುಂಚೆ ಆತನು ಎಲ್ಲಾ ಜನ್ರಿಗೆ ತಮಗಿಷ್ಟ ಬಂದ ಹಾಗೆ ನಡ್ಕೊಳೋಕೆ ಬಿಟ್ಟುಬಿಟ್ಟನು. ಆದ್ರೆ ಒಳ್ಳೇದನ್ನ ಮಾಡ್ತಾ ತಾನು ಎಂಥವನು ಅಂತ ತೋರಿಸ್ತಾ ಬಂದನು. ಹೇಗಂದ್ರೆ, ಆತನು ನಿಮಗೆ ಆಕಾಶದಿಂದ ಮಳೆ ಸುರಿಸಿದನು. ಚೆನ್ನಾಗಿ ಬೆಳೆ ಬರೋ ತರ ಬೇರೆಬೇರೆ ಕಾಲಗಳನ್ನ ಕೊಟ್ಟನು. ತೃಪ್ತಿಯಾಗುವಷ್ಟು ಆಹಾರ ಕೊಡ್ತಾ ನಿಮ್ಮ ಮನಸ್ಸನ್ನ ಖುಷಿಪಡಿಸಿದನು.”—ಅ. ಕಾ. 14:15-17.
12 ಈ ಮಾತುಗಳಿಂದ ನಾವು ಯಾವ ಪಾಠಗಳನ್ನ ಕಲಿಬಹುದು? ಮೊದಲನೇದಾಗಿ, ಪೌಲ ಮತ್ತು ಬಾರ್ನಬ ಅಲ್ಲಿದ್ದ ಜನ್ರಿಗಿಂತ ತಾವು ಶ್ರೇಷ್ಠರು ಅಂತ ನೆನಸಲಿಲ್ಲ. ತಮ್ಮಲ್ಲಿ ಇಲ್ಲದೇ ಇರೋ ಸಾಮರ್ಥ್ಯ ಇದೆ ಅಂತ ನಾಟಕ ಆಡಲಿಲ್ಲ. ಬದಲಿಗೆ ಆ ಜನ್ರ ತರಾನೇ ತಮಗೂ ದೌರ್ಬಲ್ಯಗಳಿವೆ ಅಂತ ದೀನತೆಯಿಂದ ಹೇಳಿದ್ರು. ಪೌಲ ಮತ್ತು ಬಾರ್ನಬ ಪವಿತ್ರಶಕ್ತಿ ಪಡ್ಕೊಂಡಿದ್ರು, ಸುಳ್ಳು ಬೋಧನೆಗಳನ್ನ ನಂಬ್ತಿರಲಿಲ್ಲ, ಅವ್ರಿಗೆ ಕ್ರಿಸ್ತನ ಜೊತೆ ಆಳ್ವಿಕೆ ಮಾಡೋ ನಿರೀಕ್ಷೆನೂ ಇತ್ತು. ಆದ್ರೂ ಕ್ರಿಸ್ತ ಹೇಳೋ ಮಾತನ್ನ ಕೇಳಿದ್ರೆ ಆ ಆಶೀರ್ವಾದಗಳು ಲುಸ್ತ್ರದವರಿಗೂ ಸಿಗುತ್ತೆ ಅಂತ ಅವರು ತಿಳ್ಕೊಂಡಿದ್ರು.
13 ನಾವು ಯಾರಿಗೆ ಸಾರುತ್ತೀವೋ ಆ ಜನ್ರನ್ನ ನಾವು ಹೇಗೆ ನೋಡ್ತೀವಿ? ಅವರೂ ನಾವೂ ಸಮಾನರು ಅಂತ ನೋಡ್ತೀವಾ? ದೇವರ ವಾಕ್ಯದಿಂದ ಸತ್ಯಗಳನ್ನ ಕಲಿಯೋಕೆ ಸಹಾಯ ಮಾಡೋವಾಗ ಪೌಲ ಮತ್ತು ಬಾರ್ನಬನ ತರ, ನಮ್ಮನ್ನ ಯಾರೂ ಅತಿಯಾಗಿ ಹೊಗಳದ ಹಾಗೆ ನೋಡ್ಕೊಳ್ತೀವಾ? ಈ ವಿಷ್ಯದಲ್ಲಿ ಚಾರ್ಲ್ಸ್ ಟೇಸ್ ರಸಲ್ ಉತ್ತಮ ಮಾದರಿ ಇಟ್ಟಿದ್ದಾರೆ. ಅವರು ತುಂಬ ಚೆನ್ನಾಗಿ ಬೇರೆಯವ್ರಿಗೆ ಕಲಿಸ್ತಿದ್ರು. 19ನೇ ಶತಮಾನದ ಕೊನೆ ಭಾಗದಿಂದ 20ನೇ ಶತಮಾನದ ಆರಂಭದ ವರ್ಷಗಳಲ್ಲಿ ಮುಂದೆ ನಿಂತು ಸಾರೋ ಕೆಲಸವನ್ನ ನೋಡ್ಕೊಂಡ್ರು. ಅವರು ಒಂದ್ಸಲ ಹೀಗೆ ಬರೆದ್ರು: “ನಮಗೆ ಅಥವಾ ನಮ್ಮ ಬರಹಗಳಿಗೆ ವಿಶೇಷ ಗೌರವ ಕೊಡಬೇಕಾಗಿಲ್ಲ. ನಮ್ಮನ್ನ ರೆವರಂಡ್ ಅಥವಾ ರಬ್ಬಿ ಅಂತ ಕರೀಬೇಕು ಅನ್ನೋ ಆಸೆನೂ ನಮಗಿಲ್ಲ.” ಪೌಲ ಮತ್ತು ಬಾರ್ನಬನ ತರ ಸಹೋದರ ರಸಲ್‌ಗೂ ದೀನ ಸ್ವಭಾವ ಇತ್ತು. ಅದೇ ತರ, ನಾವು ಸಿಹಿಸುದ್ದಿ ಸಾರೋದು ನಮಗೆ ಹೆಸ್ರು ಮಾಡ್ಕೊಳ್ಳೋಕೆ ಅಲ್ಲ, ಬದಲಿಗೆ “ಜೀವ ಇರೋ ದೇವರನ್ನ” ಆರಾಧಿಸೋಕೆ ಜನ್ರಿಗೆ ಸಹಾಯ ಮಾಡೋಕೆ.
14-16. ಲುಸ್ತ್ರದವರಿಗೆ ಪೌಲ ಮತ್ತು ಬಾರ್ನಬ ಹೇಳಿದ ಮಾತುಗಳಿಂದ ನಾವು ಕಲಿಯೋ ಎರಡನೇ ಮತ್ತು ಮೂರನೇ ಪಾಠ ಏನು?
14 ಈಗ ಆ ಮಾತುಗಳಿಂದ ನಾವು ಕಲಿಯೋ ಎರಡನೇ ಪಾಠ ನೋಡೋಣ. ಪೌಲ ಮತ್ತು ಬಾರ್ನಬ ಸನ್ನಿವೇಶಕ್ಕೆ ತಕ್ಕ ಹಾಗೆ ಹೊಂದಾಣಿಕೆ ಮಾಡ್ಕೊಳ್ತಿದ್ರು. ಲುಸ್ತ್ರದ ಜನ್ರು, ಇಕೋನ್ಯದ ಯೆಹೂದಿಗಳ ಮತ್ತು ಯೆಹೂದ್ಯರಾಗಿ ಮತಾಂತರ ಆದವರ ತರ ಇರ್ಲಿಲ್ಲ. ಲುಸ್ತ್ರದವರಿಗೆ ದೇವರ ವಾಕ್ಯದ ಬಗ್ಗೆ ಮತ್ತು ದೇವರು ಇಸ್ರಾಯೇಲ್ಯರ ಜೊತೆ ನಡ್ಕೊಂಡ ರೀತಿ ಬಗ್ಗೆ ಏನೋ ಒಂಚೂರು ಗೊತ್ತಿತ್ತು, ಇನ್ನು ಕೆಲವ್ರಿಗೆ ಏನೂ ಗೊತ್ತೇ ಇರಲಿಲ್ಲ. ಲುಸ್ತ್ರದಲ್ಲಿ ಒಳ್ಳೇ ಹವಾಮಾನ ಮತ್ತು ಫಲವತ್ತಾದ ಮಣ್ಣು ಇದ್ದಿದ್ರಿಂದ ಅಲ್ಲಿನ ಜನ್ರು ವ್ಯವಸಾಯ ಮಾಡ್ತಿದ್ರು. ಹಾಗಾಗಿ ಋತುಗಳು ಬದಲಾಗೋವಾಗ ಸೃಷ್ಟಿಕರ್ತನ ಗುಣಗಳ ಬಗ್ಗೆ ತಿಳ್ಕೊಳೋಕೆ ಆಗ್ತಿತ್ತು. ಅದಕ್ಕೆ ಪೌಲ ಮತ್ತು ಬಾರ್ನಬ ಅವ್ರಿಗೆ ಗೊತ್ತಿರೋ ಈ ವಿಷ್ಯದ ಬಗ್ಗೆ ಮಾತಾಡೋ ಮೂಲಕ ಆ ಜನ್ರು ಯೋಚ್ನೆ ಮಾಡೋ ತರ ಮಾಡಿದ್ರು.—ರೋಮ. 1:19, 20.
15 ನಾವೂ ಅವ್ರ ತರ ಸನ್ನಿವೇಶಕ್ಕೆ ತಕ್ಕ ಹಾಗೆ ಹೊಂದಾಣಿಕೆ ಮಾಡ್ಕೊಳ್ಳೋದು ಹೇಗೆ? ಒಬ್ಬ ರೈತ ಬೇರೆಬೇರೆ ಗದ್ದೆಯಲ್ಲಿ ಒಂದೇ ರೀತಿಯ ಬೀಜ ಹಾಕಿದ್ರೂ ಮಣ್ಣನ್ನ ಸಿದ್ಧಮಾಡೋ ವಿಧಾನ ಮಾತ್ರ ಬೇರೆ ಬೇರೆ ಆಗಿರುತ್ತೆ. ಕೆಲವು ಗದ್ದೆಯ ಮಣ್ಣು ತುಂಬ ಮೆತ್ತಗಿರೋದ್ರಿಂದ ನೇರವಾಗಿ ಬೀಜ ಬಿತ್ತಿದ್ರೆ ಸಾಕು. ಆದ್ರೆ ಇನ್ನು ಕೆಲವು ಗದ್ದೆಗಳಲ್ಲಿ ಮಣ್ಣನ್ನ ಹದಮಾಡಬೇಕಾಗುತ್ತೆ. ಅದೇ ತರ ನಾವು ಬಿತ್ತೋ ಬೀಜ ಒಂದೇ, ಅದು ದೇವರ ಆಳ್ವಿಕೆ ಬಗ್ಗೆ ಇರೋ ಸಂದೇಶ. ಆದ್ರೆ ಜನ್ರ ಸನ್ನಿವೇಶ ಮತ್ತು ಧರ್ಮ ಬೇರೆ ಬೇರೆ ಆಗಿರೋದ್ರಿಂದ ಪೌಲ ಮತ್ತು ಬಾರ್ನಬನ ತರ ಮೊದಲು ಅದನ್ನ ತಿಳ್ಕೊಬೇಕು. ಆಮೇಲೆ ಅವ್ರಿಗೆ ತಕ್ಕ ಹಾಗೆ ದೇವರ ಸಂದೇಶವನ್ನ ಸಾರಬೇಕು.—ಲೂಕ 8:11, 15.
16 ಪೌಲ, ಬಾರ್ನಬ ಮತ್ತು ಲುಸ್ತ್ರದವರ ಉದಾಹರಣೆಯಿಂದ ನಾವು ಕಲಿಯೋ ಮೂರನೇ ಪಾಠವನ್ನ ಈಗ ನೋಡೋಣ. ನಾವು ಎಲ್ಲಾ ಪ್ರಯತ್ನ ಹಾಕಿದ್ರೂ ನಾವು ಬಿತ್ತಿದ ಬೀಜವನ್ನ ಕೆಲವೊಮ್ಮೆ ಸೈತಾನ ಕಿತ್ತುಹಾಕಬಹುದು ಅಥವಾ ಅದು ಕಲ್ಲು ನೆಲದಲ್ಲಿ ಬೀಳಬಹುದು. (ಮತ್ತಾ. 13:18-21) ಆಗ ಬೇಜಾರ್ ಮಾಡ್ಕೊಬಾರದು. ಪೌಲ ರೋಮಿನಲ್ಲಿದ್ದ ಶಿಷ್ಯರಿಗೆ ಹೇಳಿದ ಹಾಗೆ ‘ಪ್ರತಿಯೊಬ್ರೂ [ದೇವರ ವಾಕ್ಯದ ಬಗ್ಗೆ ನಾವು ಯಾರ ಹತ್ರ ಚರ್ಚೆ ಮಾಡ್ತೀವೋ ಅವರೆಲ್ರೂ] ತಮ್ಮ ತಮ್ಮ ಬಗ್ಗೆ ದೇವರಿಗೆ ಲೆಕ್ಕ ಕೊಡಬೇಕು.’—ರೋಮ. 14:12.
“ಅವರನ್ನ ಯೆಹೋವನ ಕೈಗೆ ಒಪ್ಪಿಸಿದ್ರು” (ಅ. ಕಾ. 14:20-28)
17. ಪೌಲ ಮತ್ತು ಬಾರ್ನಬ ದೆರ್ಬೆಯಿಂದ ಎಲ್ಲಿಗೆ ಹೋದ್ರು? ಯಾಕೆ?
17 ಪೌಲ ಸತ್ತುಹೋದ ಅಂತ ಲುಸ್ತ್ರದವರು ನೆನಸಿ ಅವನನ್ನ ಎಳ್ಕೊಂಡು ಹೋಗಿ ಊರಿಂದ ಹೊರಗೆ ಹಾಕಿದ ಮೇಲೆ ಶಿಷ್ಯರು ಬಂದು ಅವನ ಸುತ್ತ ನಿಂತ್ರು. ಆಗ ಅವನು ಎದ್ದು ನಿಂತ. ಆಮೇಲೆ ಊರೊಳಗೆ ಹೋಗಿ ಒಂದು ಜಾಗದಲ್ಲಿ ರಾತ್ರಿ ಉಳ್ಕೊಂಡ. ಮಾರನೇ ದಿನ ಪೌಲ ಮತ್ತು ಬಾರ್ನಬ ಅಲ್ಲಿಂದ 100 ಕಿ.ಮೀ. ದೂರದಲ್ಲಿರೋ ದೆರ್ಬೆಗೆ ಹೋದ್ರು. ಸ್ವಲ್ಪ ಹೊತ್ತು ಮುಂಚೆನೇ ಕಲ್ಲೇಟು ತಿಂದಿದ್ರಿಂದ ಪೌಲನಿಗೆ ಈ ಪ್ರಯಾಣ ಮಾಡೋಕೆ ತುಂಬ ಕಷ್ಟ ಆಗಿರಬೇಕು. ಆದ್ರೂ ಅವನು ಮತ್ತು ಬಾರ್ನಬ ಸೋತುಹೋಗಲಿಲ್ಲ. ಅವರು ದೆರ್ಬೆಯಲ್ಲಿ ‘ತುಂಬ ಜನ್ರನ್ನ ಶಿಷ್ಯರನ್ನಾಗಿ ಮಾಡಿದ್ರು.’ ಆಮೇಲೆ ಅವರು ಎಲ್ಲಿಂದ ಮಿಷನರಿ ಕೆಲಸ ಶುರುಮಾಡಿದ್ರೋ ಆ ಸಿರಿಯದ ಅಂತಿಯೋಕ್ಯಕ್ಕೆ ಹೋಗಬಹುದಿತ್ತು. ಅಲ್ಲಿಗೆ ಹೋಗೋಕೆ ಹತ್ರದ ದಾರಿ ಇತ್ತು. ಆದ್ರೂ ಅವರು ಅಲ್ಲಿಗೆ ಹೋಗದೆ “ಲುಸ್ತ್ರಕ್ಕೆ . . . ಅಲ್ಲಿಂದ ಇಕೋನ್ಯಕ್ಕೆ . . . ಇಕೋನ್ಯದಿಂದ [ಪಿಸಿದ್ಯದ] ಅಂತಿಯೋಕ್ಯಕ್ಕೆ” ಹೋದ್ರು. ಅವರು ಯಾಕೆ ಅಲ್ಲಿಗೆ ಹೋದ್ರು? ‘ನಂಬಿಕೆಯಲ್ಲಿ ಬಲವಾಗಿ ಇರೋಕೆ ಶಿಷ್ಯರನ್ನ ಪ್ರೋತ್ಸಾಹಿಸೋಕೆ ಹೋದ್ರು.’ (ಅ. ಕಾ. 14:20-22) ನಮಗೆ ಪೌಲ ಮತ್ತು ಬಾರ್ನಬ ಎಂಥ ಒಳ್ಳೇ ಮಾದರಿ ಇಟ್ಟಿದ್ದಾರಲ್ವಾ! ತಮ್ಮ ಅನುಕೂಲಕ್ಕಿಂತ ಸಭೆಯ ಅಗತ್ಯಗಳೇ ಅವ್ರಿಗೆ ಮುಖ್ಯ ಆಗಿತ್ತು. ಇವತ್ತು ಕೂಡ ಸಂಚರಣ ಮೇಲ್ವಿಚಾರಕರು ಮತ್ತು ಮಿಷನರಿಗಳು ಅವ್ರ ಮಾದರಿಯನ್ನ ಅನುಕರಿಸ್ತಾರೆ.
18. ಸಭೆಯಲ್ಲಿ ಹಿರಿಯರನ್ನ ಹೇಗೆ ನೇಮಿಸ್ತಾರೆ?
18 ಪೌಲ ಮತ್ತು ಬಾರ್ನಬ ತಮ್ಮ ನಡೆನುಡಿಯಿಂದ ಶಿಷ್ಯರನ್ನ ಬಲಪಡಿಸಿದ್ರು. ಅಷ್ಟೇ ಅಲ್ಲ “ಒಂದೊಂದು ಸಭೆಯಲ್ಲೂ ಹಿರಿಯರನ್ನ ನೇಮಿಸಿದ್ರು.” ಪೌಲ ಮತ್ತು ಬಾರ್ನಬ “ಪವಿತ್ರಶಕ್ತಿಯ ಮಾರ್ಗದರ್ಶನದಿಂದ” ಈ ಮಿಷನರಿ ಪ್ರಯಾಣ ಮಾಡ್ತಿದ್ರು. ಆದ್ರೂ ‘ಪ್ರಾರ್ಥನೆ, ಉಪವಾಸ ಮಾಡಿ ಆ ಹಿರಿಯರನ್ನ ಯೆಹೋವನ ಕೈಗೆ ಒಪ್ಪಿಸಿದ್ರು.’ (ಅ. ಕಾ. 13:1-4; 14:23) ಇವತ್ತೂ ಇದೇ ತರ ಮಾಡ್ತಾರೆ. ಒಬ್ಬ ಸಹೋದರನನ್ನ ಮೇಲ್ವಿಚಾರಕನಾಗಿ ನೇಮಿಸೋಕೆ ಶಿಫಾರಸ್ಸು ಮಾಡೋ ಮೊದಲು ಸ್ಥಳೀಯ ಹಿರಿಯರ ಮಂಡಲಿ ಪ್ರಾರ್ಥನೆ ಮಾಡಿ ಆ ಸಹೋದರನಿಗೆ ಬೈಬಲಲ್ಲಿರೋ ಅರ್ಹತೆಗಳಿದ್ಯಾ ಅಂತ ನೋಡ್ತಾರೆ. (1 ತಿಮೊ. 3:1-10, 12, 13; ತೀತ 1:5-9; ಯಾಕೋ. 3:17, 18; 1 ಪೇತ್ರ 5:2, 3) ಅವನು ಕ್ರೈಸ್ತನಾಗಿ ಎಷ್ಟು ವರ್ಷ ಆಯ್ತು ಅನ್ನೋದು ಮುಖ್ಯ ಅಲ್ಲ. ಬದಲಿಗೆ ಆ ಸಹೋದರನ ಜೀವನದಲ್ಲಿ ಪವಿತ್ರಶಕ್ತಿ ಎಷ್ಟರ ಮಟ್ಟಿಗೆ ಕೆಲಸ ಮಾಡ್ತಿದೆ ಅನ್ನೋದು ಮುಖ್ಯ. ಅದು ಅವನ ಮಾತಲ್ಲಿ, ನಡತೆಯಲ್ಲಿ ಮತ್ತು ಅವನು ಗಳಿಸಿರೋ ಹೆಸ್ರಲ್ಲಿ ಗೊತ್ತಾಗುತ್ತೆ. ಮೇಲ್ವಿಚಾರಕನಿಗಾಗಿ ಬೈಬಲಲ್ಲಿ ಹೇಳಿರೋ ಅರ್ಹತೆಗಳ ಆಧಾರದ ಮೇಲೆ ಅವನು ಮಂದೆಯ ಕುರುಬನಾಗಿ ಸೇವೆ ಮಾಡೋಕೆ ಅರ್ಹನಾ ಇಲ್ವಾ ಅಂತ ನಿರ್ಧರಿಸಲಾಗುತ್ತೆ. (ಗಲಾ. 5:22, 23) ಇಂಥ ನಿರ್ಧಾರಗಳನ್ನ ಮಾಡೋ ಜವಾಬ್ದಾರಿ ಸಂಚರಣ ಮೇಲ್ವಿಚಾರಕರಿಗೆ ಇದೆ.—1 ತಿಮೊತಿ 5:22 ಹೋಲಿಸಿ.
19. (ಎ) ಯಾವ ವಿಷ್ಯದಲ್ಲಿ ಲೆಕ್ಕ ಕೊಡಬೇಕಂತ ಹಿರಿಯರಿಗೆ ಗೊತ್ತು? (ಬಿ) ಅವರು ಪೌಲ ಮತ್ತು ಬಾರ್ನಬನನ್ನ ಹೇಗೆ ಅನುಕರಿಸ್ತಾರೆ?
19 ತಾವು ಸಭೆಯವ್ರ ಜೊತೆ ಹೇಗೆ ನಡ್ಕೊಳ್ತೀವಿ ಅನ್ನೋದ್ರ ಬಗ್ಗೆ ದೇವರಿಗೆ ಲೆಕ್ಕ ಕೊಡಬೇಕು ಅಂತ ಈ ಹಿರಿಯರಿಗೆ ಗೊತ್ತು. (ಇಬ್ರಿ. 13:17) ಪೌಲ ಮತ್ತು ಬಾರ್ನಬನ ತರ ಅವರು ಮುಂದೆ ನಿಂತು ಸಾರೋ ಕೆಲಸವನ್ನ ನೋಡ್ಕೊಳ್ತಾರೆ. ಸಹೋದರ ಸಹೋದರಿಯರ ನಂಬಿಕೆಯನ್ನ ಜಾಸ್ತಿ ಮಾಡೋ ತರ ಮಾತಾಡ್ತಾರೆ. ಅಷ್ಟೇ ಅಲ್ಲ, ಅವ್ರಿಗೆ ತಮ್ಮ ಆರಾಮಕ್ಕಿಂತ ಸಭೆಯ ಅಗತ್ಯಗಳೇ ಮುಖ್ಯವಾಗಿರುತ್ತೆ. ಅವರು ಸಭೆಯನ್ನ ಮನಸಾರೆ ಚೆನ್ನಾಗಿ ನೋಡ್ಕೊಳ್ತಾರೆ.—ಫಿಲಿ. 2:3, 4.
20. ನಂಬಿಗಸ್ತ ಸಹೋದರರು ಮಾಡಿರೋ ಕೆಲಸದ ಬಗ್ಗೆ ಓದುವಾಗ ನಮಗೆ ಹೇಗೆ ಪ್ರಯೋಜನ ಆಗುತ್ತೆ?
20 ಪೌಲ ಮತ್ತು ಬಾರ್ನಬ ಎಲ್ಲಿ ಮಿಷನರಿ ಪ್ರಯಾಣವನ್ನ ಶುರುಮಾಡಿದ್ರೋ ಅಲ್ಲಿಗೆ ಅಂದ್ರೆ ಸಿರಿಯದ ಅಂತಿಯೋಕ್ಯಕ್ಕೆ ವಾಪಸ್ ಬಂದಾಗ “ದೇವರು ತಮ್ಮ ಮೂಲಕ ಮಾಡಿದ್ದನ್ನೆಲ್ಲ ಅವ್ರಿಗೆ ಹೇಳಿದ್ರು. ಅಷ್ಟೇ ಅಲ್ಲ ದೇವರು ಯೆಹೂದ್ಯರಲ್ಲದ ಜನ್ರಿಗೂ ಶಿಷ್ಯರಾಗೋ ಅವಕಾಶ ಹೇಗೆ ಕೊಟ್ಟನು ಅಂತ ವಿವರಿಸಿದ್ರು.” (ಅ. ಕಾ. 14:27) ನಂಬಿಗಸ್ತ ಸಹೋದರರು ತುಂಬ ಕೆಲಸ ಮಾಡಿದ್ದಾರೆ ಮತ್ತು ಯೆಹೋವ ಅದನ್ನ ಆಶೀರ್ವದಿಸಿದ್ದಾನೆ. ಇದ್ರ ಬಗ್ಗೆ ನಾವು ಓದುವಾಗ ನಮಗೂ ಪ್ರೋತ್ಸಾಹ ಸಿಗುತ್ತೆ. ನಮಗೂ ‘ಯೆಹೋವನ ಶಕ್ತಿ ಪಡ್ಕೊಂಡು ಧೈರ್ಯವಾಗಿ ಮಾತಾಡಬೇಕು’ ಅನ್ಸುತ್ತೆ.
a “ ಇಕೋನ್ಯ—ಫ್ರುಗ್ಯರ ಪಟ್ಟಣ” ಅನ್ನೋ ಚೌಕ ನೋಡಿ.