ಅಧ್ಯಾಯ 3
“ಪವಿತ್ರಶಕ್ತಿ ಸಿಕ್ತು”
ಐವತ್ತನೇ ದಿನದ ಹಬ್ಬದಲ್ಲಿ ಪವಿತ್ರಶಕ್ತಿ ಸಿಕ್ಕಿದಾಗ ನಡೆದ ಘಟನೆಗಳು
ಆಧಾರ: ಅಪೊಸ್ತಲರ ಕಾರ್ಯ 2:1-47
1. ಐವತ್ತನೇ ದಿನದ ಹಬ್ಬದ ವಾತಾವರಣವನ್ನ ವರ್ಣಿಸಿ.
ಯೆರೂಸಲೇಮಿನ ಬೀದಿಗಳಲ್ಲಿ ಸಡಗರಸಂಭ್ರಮದ ವಾತಾವರಣ ಇತ್ತು. a ದೇವಾಲಯದ ಯಜ್ಞವೇದಿ ಮೇಲೆ ಅರ್ಪಿಸ್ತಿದ್ದ ಬಲಿಗಳಿಂದ ಹೊಗೆ ಮೇಲೇರುತ್ತಿತ್ತು. ಲೇವಿಯರು ಹಾಲೆಲ್ ಕೀರ್ತನೆಗಳನ್ನ (ಕೀರ್ತನೆ 113 ರಿಂದ 118) ಹಾಡ್ತಿದ್ರು. ಇದನ್ನ ಬಹುಶಃ ಸಂವಾದಗೀತೆ ಶೈಲಿ ಅಂದ್ರೆ ಉತ್ತರ ಪ್ರತ್ಯುತ್ತರ ರೀತಿಯಲ್ಲಿ ಹಾಡ್ತಿದ್ರು. ಬೀದಿಗಳು ಸಂದರ್ಶಕರಿಂದ ಕಿಕ್ಕಿರಿದಿತ್ತು. ಅವರು ದೂರದಿಂದ ಅಂದ್ರೆ ಏಲಾಮ್, ಮೆಸಪಟೇಮ್ಯ, ಕಪದೋಷಿಯ, ಪೊಂತ, ಈಜಿಪ್ಟ್, ರೋಮ್‌ನಂಥ ಬೇರೆಬೇರೆ ಸ್ಥಳಗಳಿಂದ ಬಂದಿದ್ರು. b ಯಾಕೆ? ಅದು ಐವತ್ತನೇ ದಿನದ ಹಬ್ಬ ಅಂದ್ರೆ “ಮೊದಲ ಫಸಲಿನ ದಿನ” ಆಗಿತ್ತು. (ಅರ. 28:26) ಈ ವಾರ್ಷಿಕ ಹಬ್ಬ ಜವೆಗೋದಿಯ ಕೊಯ್ಲು ಮುಗಿದು ಗೋದಿಯ ಕೊಯ್ಲು ಆರಂಭ ಆದಾಗ ನಡೀತಿತ್ತು. ಇದೊಂದು ಸಂಭ್ರಮದ ದಿನ ಆಗಿರ್ತಿತ್ತು!
2. ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದಲ್ಲಿ ಯಾವ ವಿಸ್ಮಯಕಾರಿ ಘಟನೆಗಳು ನಡೀತು?
2 ಅದು ಕ್ರಿ.ಶ. 33ರ ವಸಂತಕಾಲ. ಬೆಳಗ್ಗೆ ಸುಮಾರು ಒಂಭತ್ತು ಗಂಟೆ. ಆಗ ಒಂದು ಘಟನೆ ನಡೀತು, ಜನರು ಅದನ್ನ ಶತಮಾನಗಳ ತನಕ ಮರೆಯೋ ಹಾಗಿರಲಿಲ್ಲ. ಅಂಥದ್ದು ಏನಾಯ್ತು? “ಇದ್ದಕ್ಕಿದ್ದಂತೆ ಆಕಾಶದಿಂದ ಒಂದು ಶಬ್ದ, ಜೋರಾಗಿ ಗಾಳಿ ಬೀಸಿದ ಹಾಗೆ” ಕೇಳಿಸ್ತು. ಅದು ದೊಡ್ಡ “ಬಿರುಗಾಳಿ” ತರ ಇತ್ತು. (ಅ. ಕಾ. 2:2, ಸತ್ಯವೇದವು) ಈ ಗಟ್ಟಿಯಾದ ಶಬ್ದ ಯೇಸುವಿನ 120 ಶಿಷ್ಯರು ಸೇರಿಬಂದಿದ್ದ ಸ್ಥಳದಲ್ಲಿ ಕೇಳಿಸ್ತು. ಆಮೇಲೆ ಅಲ್ಲಿ ಒಂದು ವಿಸ್ಮಯಕಾರಿ ವಿಷ್ಯ ನಡೀತು. ನಾಲಿಗೆ ಆಕಾರದ ಬೆಂಕಿ ಜ್ವಾಲೆ ಕಾಣಿಸ್ಕೊಂಡು ಒಬ್ಬೊಬ್ಬ ಶಿಷ್ಯರ ತಲೆ ಮೇಲೆ ಕೂತವು. c ಆಗ ಶಿಷ್ಯರಿಗೆ “ಪವಿತ್ರಶಕ್ತಿ ಸಿಕ್ತು. ಇದ್ರಿಂದ ಅವರು ಬೇರೆಬೇರೆ ಭಾಷೆ ಮಾತಾಡೋಕೆ ಶುರುಮಾಡಿದ್ರು.” ಶಿಷ್ಯರು ಆ ಮನೆಯಿಂದ ಹೊರಗೆ ಬಂದು ಯೆರೂಸಲೇಮಿನ ಬೀದಿಗಳಲ್ಲಿ ವಿದೇಶಿಯರ ಜೊತೆ ಮಾತಾಡಿದಾಗ ಅವ್ರಿಗೆ ಆಶ್ಚರ್ಯ ಆಯ್ತು. ಯಾಕಂದ್ರೆ ಶಿಷ್ಯರು ಪ್ರತಿಯೊಬ್ಬರ ಜೊತೆ ಅವರವರ ‘ಮಾತೃಭಾಷೆಯಲ್ಲಿ ಮಾತಾಡ್ತಿದ್ರು.’—ಅ. ಕಾ. 2:1-6.
3. (ಎ) ಕ್ರಿ.ಶ. 33ರ ಐವತ್ತನೇ ದಿನದ ಹಬ್ಬವನ್ನ ಸತ್ಯಾರಾಧನೆಯ ಇತಿಹಾಸದಲ್ಲೇ ಮೈಲಿಗಲ್ಲು ಅಂತ ಯಾಕೆ ಹೇಳಬಹುದು? (ಬಿ) ಪೇತ್ರನ ಭಾಷಣಕ್ಕೂ, ‘ಸ್ವರ್ಗದ ಆಳ್ವಿಕೆಯ ಬೀಗದ ಕೈಗಳನ್ನ’ ಬಳಸೋದಕ್ಕೂ ಏನು ಸಂಬಂಧ ಇತ್ತು?
3 ಈ ರೋಮಾಂಚಕಾರಿ ಘಟನೆ ಸತ್ಯಾರಾಧನೆಯ ಒಂದು ಮೈಲಿಗಲ್ಲಿನ ಬಗ್ಗೆ ವರ್ಣಿಸುತ್ತೆ. ಅಂದ್ರೆ ಆಧ್ಯಾತ್ಮಿಕ ಇಸ್ರಾಯೇಲ್ ಜನಾಂಗವಾದ, ಅಭಿಷಿಕ್ತ ಕ್ರೈಸ್ತ ಸಭೆಯ ಸ್ಥಾಪನೆ ಬಗ್ಗೆ ವಿವರಿಸುತ್ತೆ. (ಗಲಾ. 6:16) ಆದ್ರೆ ಈ ಘಟನೆಯಿಂದ ಇನ್ನೂ ಜಾಸ್ತಿ ವಿಷ್ಯ ತಿಳ್ಕೊಬಹುದು. ಆ ದಿನ ಪೇತ್ರ, ಜನರ ಗುಂಪಿನ ಹತ್ರ ಮಾತಾಡ್ತಿದ್ದಾಗ ‘ಸ್ವರ್ಗದ ಆಳ್ವಿಕೆಯ ಬೀಗದ ಕೈಗಳಲ್ಲಿ’ ಮೊದಲನೇ ಬೀಗದ ಕೈಯನ್ನ ಬಳಸಿದ. ಆ ಮೂರು ಬೀಗದ ಕೈಗಳಲ್ಲಿ ಪ್ರತಿಯೊಂದು ಬೇರೆಬೇರೆ ಗುಂಪಿನವರಿಗೆ ವಿಶೇಷ ಸುಯೋಗಗಳನ್ನ ಆನಂದಿಸೋಕೆ ದಾರಿ ತೆರಿತಿತ್ತು. (ಮತ್ತಾ. 16:18, 19) ಮೊದಲನೇ ಬೀಗದ ಕೈ, ಯೆಹೂದ್ಯರು ಮತ್ತು ಯೆಹೂದಿ ಮತಕ್ಕೆ ಮತಾಂತರ ಆದವರು ಸಿಹಿಸುದ್ದಿ ಕೇಳಿಸ್ಕೊಳ್ಳೋಕೆ ಮತ್ತು ಪವಿತ್ರಶಕ್ತಿಯಿಂದ ಅಭಿಷಿಕ್ತರಾಗೋಕೆ ಅವಕಾಶ ಮಾಡ್ಕೊಡ್ತು. d ಇದ್ರಿಂದ ಅವರು ಆಧ್ಯಾತ್ಮಿಕ ಇಸ್ರಾಯೇಲಿನ ಭಾಗವಾಗಿ ಮೆಸ್ಸೀಯನ ಆಳ್ವಿಕೆಯಲ್ಲಿ ರಾಜರಾಗಿ ಪುರೋಹಿತರಾಗಿ ಆಳೋ ನಿರೀಕ್ಷೆ ಪಡ್ಕೊಬಹುದಿತ್ತು. (ಪ್ರಕ. 5:9, 10) ಆಮೇಲೆ ಈ ಸುಯೋಗ ಸಮಾರ್ಯದವರಿಗೆ ನಂತರ ಬೇರೆ ಜನಾಂಗಗಳಿಗೂ ಸಿಗ್ತಿತ್ತು. ಕ್ರಿ.ಶ. 33ರಲ್ಲಿ ನಡೆದ ವಿಶೇಷ ಘಟನೆಗಳಿಂದ ಇವತ್ತು ಕ್ರೈಸ್ತರು ಏನು ಕಲೀಬಹುದು?
“ಶಿಷ್ಯರೆಲ್ಲ ಒಂದೇ ಮನೆಯಲ್ಲಿ ಸೇರಿಬಂದಿದ್ರು” (ಅ. ಕಾ. 2:1-4)
4. ಕ್ರಿ.ಶ. 33ರಲ್ಲಿ ಶುರುವಾದ ಸಭೆಗೂ ಆಧುನಿಕ ದಿನದ ಕ್ರೈಸ್ತ ಸಭೆಗೂ ಇರೋ ಸಂಬಂಧವೇನು?
4 ಕ್ರೈಸ್ತ ಸಭೆ ಆರಂಭ ಆದಾಗ 120 ಶಿಷ್ಯರು ಮಾತ್ರ ಇದ್ರು. ಆಗ ಅವರೆಲ್ಲರೂ “ಒಂದೇ ಮನೆಯಲ್ಲಿ” ಅಂದ್ರೆ ಮೇಲಂತಸ್ತಿನ ಕೋಣೆಯಲ್ಲಿ ಕೂಡಿಬಂದಿದ್ರು. ಇವರು ಪವಿತ್ರಶಕ್ತಿಯಿಂದ ಅಭಿಷಿಕ್ತರಾಗಿದ್ರು. (ಅ. ಕಾ. 2:1) ಆ ದಿನದ ಕೊನೆಯಷ್ಟಕ್ಕೆ ಆ ಸಭೆಯಲ್ಲಿ ದೀಕ್ಷಾಸ್ನಾನ ಪಡೆದವ್ರ ಸಂಖ್ಯೆ ಸಾವಿರಾರು ಆಯ್ತು. ಅವತ್ತು ಗಿಡದ ತರ ಚಿಗುರಿದ ಕ್ರೈಸ್ತ ಸಭೆ ಇವತ್ತು ಹೆಮ್ಮರದ ತರ ದೊಡ್ಡ ಸಂಘಟನೆಯಾಗಿ ಬೆಳೀತಾ ಇದೆ. ಈ ಸಂಘಟನೆಯಲ್ಲಿ ಅಂದ್ರೆ ಆಧುನಿಕ ದಿನದ ಕ್ರೈಸ್ತ ಸಭೆಯಲ್ಲಿ ದೇವಭಯ ಇರೋ ಸ್ತ್ರೀಪುರುಷರಿದ್ದಾರೆ. ಇವರೇ ‘ದೇವರ ಆಳ್ವಿಕೆಯ ಸಿಹಿಸುದ್ದಿನಾ’ ಅಂತ್ಯ ಬರೋ ಮುಂಚೆ ‘ಲೋಕದಲ್ಲಿ ಇರೋ ಎಲ್ಲ ದೇಶಗಳಿಗೆ ಸಾಕ್ಷಿಗಾಗಿ ಸಾರ್ತಾರೆ.’—ಮತ್ತಾ. 24:14.
5. ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಿಗೆ ಸಿಕ್ಕಿದ ತರ ಇವತ್ತಿರೋ ಕ್ರೈಸ್ತರಿಗೆ ಒಟ್ಟಿಗೆ ಸೇರಿ ಬರೋದ್ರಿಂದ ಯಾವೆಲ್ಲಾ ಪ್ರಯೋಜನ ಸಿಗ್ತಿದೆ?
5 ಈಗಷ್ಟೇ ಶುರುವಾದ ಕ್ರೈಸ್ತ ಸಭೆ ಅದರ ಸದಸ್ಯರಿಗೆ ಅಂದ್ರೆ ಅಭಿಷಿಕ್ತರಿಗೆ ಮತ್ತು ಮುಂದೆ ‘ಬೇರೆ ಕುರಿಗಳಿಗೆ’ ಪ್ರೋತ್ಸಾಹ ಕೊಡ್ತಿತ್ತು. (ಯೋಹಾ. 10:16) ಈ ಪ್ರೋತ್ಸಾಹ ಎಷ್ಟು ಪ್ರಾಮುಖ್ಯ ಅಂತ ಪೌಲ ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಬರೆದ ಈ ಮಾತುಗಳಿಂದ ಗೊತ್ತಾಗುತ್ತೆ. ಅವನು ಹೇಳಿದ್ದು, “ಆದಷ್ಟು ಬೇಗ ನಿಮ್ಮನ್ನ ನೋಡಬೇಕು, ದೇವರ ಉಡುಗೊರೆಯನ್ನ ಕೊಟ್ಟು ನಿಮ್ಮ ನಂಬಿಕೆ ಬಲಪಡಿಸಬೇಕು ಅಂತ ಕಾತುರದಿಂದ ಕಾಯ್ತಾ ಇದ್ದೀನಿ. ಅಂದ್ರೆ, ನಿಮ್ಮ ನಂಬಿಕೆಯಿಂದ ನಾನು, ನನ್ನ ನಂಬಿಕೆಯಿಂದ ನೀವು ಪ್ರೋತ್ಸಾಹ ಪಡಿಬೇಕು ಅನ್ನೋದೇ ನನ್ನಾಸೆ.”—ರೋಮ. 1:11, 12.
6, 7. ಎಲ್ಲಾ ದೇಶಗಳಿಗೆ ಸಾರಬೇಕು ಅಂತ ಯೇಸು ಕೊಟ್ಟ ಕೆಲಸವನ್ನ ಇವತ್ತು ಕ್ರೈಸ್ತ ಸಭೆ ಹೇಗೆ ಮಾಡ್ತಿದೆ?
6 ಒಂದನೇ ಶತಮಾನದ ಕ್ರೈಸ್ತ ಸಭೆಗಿದ್ದ ಗುರಿಗಳೇ ಇವತ್ತಿರೋ ಕ್ರೈಸ್ತ ಸಭೆಗೂ ಇವೆ. ಯೇಸು ತನ್ನ ಶಿಷ್ಯರಿಗೆ ಒಂದು ಆಸಕ್ತಿಕರ ಕೆಲ್ಸ ಕೊಟ್ಟನು, ಅದ್ರಲ್ಲಿ ಅಡ್ಡಿತಡೆಗಳು ಇದ್ವು. ಆತನು ಹೇಳಿದ್ದು: “ನೀವು ಹೋಗಿ ಎಲ್ಲಾ ದೇಶದ ಜನ್ರಿಗೆ ನನ್ನ ಶಿಷ್ಯರಾಗೋಕೆ ಕಲಿಸಿ. ಅವ್ರಿಗೆ ತಂದೆ ಹೆಸ್ರಲ್ಲಿ, ಮಗನ ಹೆಸ್ರಲ್ಲಿ ಮತ್ತು ಪವಿತ್ರಶಕ್ತಿಯ ಹೆಸ್ರಲ್ಲಿ ದೀಕ್ಷಾಸ್ನಾನ ಮಾಡಿಸಿ. ನಾನು ನಿಮಗೆ ಹೇಳಿಕೊಟ್ಟ ಎಲ್ಲ ವಿಷ್ಯಗಳ ಪ್ರಕಾರ ನಡೆಯೋಕೆ ಅವ್ರಿಗೆ ಕಲಿಸಿ.”—ಮತ್ತಾ. 28:19, 20.
7 ಯೆಹೋವನ ಸಾಕ್ಷಿಗಳ ಕ್ರೈಸ್ತ ಸಭೆಯ ಮೂಲಕವೇ ಈ ಕೆಲಸ ನಡೀತಾ ಇದೆ. ಬೇರೆಬೇರೆ ಭಾಷೆಯವರಿಗೆ ಸಿಹಿಸುದ್ದಿ ಸಾರೋದು ಅಷ್ಟು ಸುಲಭ ಅಲ್ಲ. ಆದ್ರೂ ಯೆಹೋವನ ಸಾಕ್ಷಿಗಳು ಬೈಬಲ್ ಆಧರಿತ ಪ್ರಕಾಶನಗಳನ್ನ 1,000ಕ್ಕಿಂತ ಜಾಸ್ತಿ ಭಾಷೆಗಳಲ್ಲಿ ತಯಾರಿಸಿದ್ದಾರೆ. ಒಂದುವೇಳೆ ನೀವು ತಪ್ಪದೇ ಕೂಟಗಳಿಗೆ ಹಾಜರಾಗ್ತಿದ್ರೆ ಮತ್ತು ಸಾರುವ ಹಾಗೂ ಕಲಿಸೋ ಕೆಲಸದಲ್ಲಿ ಭಾಗವಹಿಸ್ತಿದ್ರೆ ನೀವು ಸಂತೋಷ ಪಡೋಕೆ ಒಂದು ಕಾರಣ ಇದೆ. ಅದೇನಂದ್ರೆ ಇಡೀ ಭೂಮಿ ಮೇಲೆ ಯೆಹೋವನ ಹೆಸರಿನ ಬಗ್ಗೆ ಸಾಕ್ಷಿ ನೀಡೋ ಸುಯೋಗ ಕೆಲವರಿಗೆ ಮಾತ್ರ ಇದೆ. ಅವ್ರಲ್ಲಿ ನೀವೂ ಒಬ್ಬರು!
8. ಸಭೆಯಲ್ಲಿ ಪ್ರತಿಯೊಬ್ಬರಿಗೆ ಯಾವ ಆಶೀರ್ವಾದ ಸಿಗುತ್ತೆ?
8 ಪರಿಸ್ಥಿತಿ ತುಂಬಾ ಹದಗೆಟ್ಟಿರೋ ಈ ಕಾಲದಲ್ಲಿ ಸಂತೋಷದಿಂದ ತಾಳ್ಕೊಳ್ಳೋಕೆ ಯೆಹೋವ ದೇವರು ಲೋಕವ್ಯಾಪಕ ಸಹೋದರ ಬಳಗ ಕೊಟ್ಟಿದ್ದಾನೆ. ಅದಕ್ಕೆ ಪೌಲ ಇಬ್ರಿಯ ಕ್ರೈಸ್ತರಿಗೆ ಹೀಗೆ ಬರೆದ: “ನಾವು ಒಬ್ರು ಇನ್ನೊಬ್ರ ಬಗ್ಗೆ ತುಂಬ ಆಸಕ್ತಿ ತೋರಿಸೋಣ. ಆಗ ಪ್ರೀತಿ ತೋರಿಸೋಕೆ, ಒಳ್ಳೇ ಕೆಲಸಗಳನ್ನ ಮಾಡೋಕೆ ಬೇರೆಯವ್ರಿಗೆ ಪ್ರೋತ್ಸಾಹ ಕೊಡಬಹುದು. ಒಟ್ಟಾಗಿ ಸಭೆ ಸೇರೋದನ್ನ ಬಿಡೋದು ಬೇಡ. ಸ್ವಲ್ಪ ಜನ ಸಭೆಗೆ ಬರೋದನ್ನ ಬಿಟ್ಟುಬಿಟ್ಟಿದ್ದಾರೆ. ಅದು ಅವ್ರಿಗೆ ರೂಢಿ ಆಗಿಬಿಟ್ಟಿದೆ. ಆದ್ರೆ ನಾವು ಹಾಗೆ ಮಾಡದೆ ಒಬ್ರು ಇನ್ನೊಬ್ರನ್ನ ಪ್ರೋತ್ಸಾಹಿಸ್ತಾ ಇರೋಣ. ದೇವರ ದಿನ ಹತ್ರ ಬರ್ತಾ ಇರೋದ್ರಿಂದ ನಾವು ಇದನ್ನ ಇನ್ನೂ ಜಾಸ್ತಿ ಮಾಡೋಣ.” (ಇಬ್ರಿ. 10:24, 25) ಕ್ರೈಸ್ತ ಸಭೆ ಯೆಹೋವ ಕೊಟ್ಟಿರೋ ಉಡುಗೊರೆ. ಇಲ್ಲಿ ನೀವು ಬೇರೆಯವರಿಗೆ ಪ್ರೋತ್ಸಾಹ ಕೊಡಬಹುದು, ಅವರು ನಿಮಗೆ ಪ್ರೋತ್ಸಾಹ ಕೊಡಬಹುದು. ಹಾಗಾಗಿ ನಿಮ್ಮ ಸಹೋದರ ಸಹೋದರಿಯರಿಗೆ ಹತ್ರ ಆಗಿ. ಕೂಟಗಳಿಗೆ ಬರೋದನ್ನ ಯಾವತ್ತೂ ಬಿಟ್ಟುಬಿಡಬೇಡಿ!
‘ತಮ್ಮ ತಮ್ಮ ಮಾತೃಭಾಷೆಯಲ್ಲಿ ಮಾತಾಡೋದನ್ನ ಕೇಳಿಸ್ಕೊಂಡ್ರು’ (ಅ. ಕಾ. 2:5-13)
9, 10. ಬೇರೆ ಭಾಷೆ ಮಾತಾಡೋರಿಗೆ ಸಿಹಿಸುದ್ದಿ ಸಾರೋಕೆ ತುಂಬಾ ಸಾಕ್ಷಿಗಳು ಏನು ಮಾಡಿದ್ದಾರೆ?
9 ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದಲ್ಲಿ, ಅಲ್ಲಿದ್ದ ಯೆಹೂದ್ಯರು ಮತ್ತು ಯೆಹೂದಿ ಮತಕ್ಕೆ ಮತಾಂತರ ಆದವರ ಸಂತೋಷವನ್ನ ಊಹಿಸಿ ನೋಡಿ. ಅಲ್ಲಿದ್ದ ತುಂಬಾ ಜನ ಅಲ್ಲಿ ಎಲ್ರಿಗೂ ಗೊತ್ತಿದ್ದ ಹೀಬ್ರು ಅಥವಾ ಗ್ರೀಕ್‌ನಲ್ಲಿ ಮಾತಾಡ್ತಿದ್ರು. ಆದ್ರೆ ಇದ್ದಕ್ಕಿದ್ದ ಹಾಗೆ ‘ಶಿಷ್ಯರು ಅಲ್ಲಿದ್ದ ಪ್ರತಿಯೊಬ್ಬರ ಮಾತೃಭಾಷೆಯಲ್ಲಿ ಮಾತಾಡೋಕೆ ಶುರುಮಾಡಿದ್ರು.’ (ಅ. ಕಾ. 2:6) ಜನರು ತಮ್ಮ ಮಾತೃಭಾಷೆಯಲ್ಲೇ ಸಿಹಿಸುದ್ದಿಯನ್ನ ಕೇಳಿಸ್ಕೊಂಡಾಗ ಅವ್ರಿಗೆ ಎಷ್ಟು ಖುಷಿ ಆಗಿರುತ್ತಲ್ವಾ? ಇವತ್ತಿರೋ ಕ್ರೈಸ್ತರಿಗೆ ಅದ್ಭುತವಾಗಿ ಬೇರೆಬೇರೆ ಭಾಷೆಗಳಲ್ಲಿ ಮಾತಾಡೋ ವರ ಇಲ್ಲ. ಹಾಗಿದ್ರೂ ಬೇರೆ ದೇಶಗಳ ಜನ್ರಿಗೆ ಸಾರೋಕೆ ತುಂಬಾ ಸಹೋದರ ಸಹೋದರಿಯರು ಮುಂದೆ ಬಂದಿದ್ದಾರೆ. ಅದಕ್ಕೋಸ್ಕರ ಅವರು ಬೇರೆ ಭಾಷೆ ಕಲಿತು ತಮಗೆ ಹತ್ರದಲ್ಲಿರೋ ಸಭೆಗೆ ಅಥ್ವಾ ಬೇರೆ ದೇಶಕ್ಕೆ ಹೋಗಿ ಸೇವೆ ಮಾಡ್ತಿದ್ದಾರೆ. ಅವ್ರ ಈ ಪ್ರಯತ್ನ ನೋಡಿ ಆ ಭಾಷೆ ಮಾತಾಡೋ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
10 ಕ್ರಿಸ್ಟೀನ್ ಅನ್ನೋ ಸಹೋದರಿಯ ಅನುಭವ ನೋಡಿ. ಅವರು ಬೇರೆ ಏಳು ಸಾಕ್ಷಿಗಳ ಜೊತೆ ಗುಜರಾತಿ ಭಾಷೆ ಕಲಿಯೋ ಕ್ಲಾಸ್‌ಗೆ ಸೇರಿದ್ರು. ಒಂದು ಸಲ ಅವ್ರಿಗೆ ತಮ್ಮ ಜೊತೆ ಕೆಲಸ ಮಾಡ್ತಿದ್ದ ಗುಜರಾತಿ ಯುವತಿ ಸಿಕ್ಕಿದಳು. ಆಗ ಕ್ರಿಸ್ಟೀನ್ ಅವಳನ್ನ ಗುಜರಾತಿಯಲ್ಲೇ ವಂದಿಸಿದಾಗ ಅವಳಿಗೆ ತುಂಬಾ ಖುಷಿ ಆಯ್ತು. ‘ಈ ಭಾಷೆ ಯಾಕೆ ಕಲೀತಾ ಇದ್ದೀರಾ’ ಅಂತ ಅವಳು ಕೇಳಿದಳು. ಈ ಅವಕಾಶ ಬಳಸಿ ಕ್ರಿಸ್ಟೀನ್ ಅವಳಿಗೆ ಸಿಹಿಸುದ್ದಿ ಸಾರಿದಳು. ಆಗ ಆ ಯುವತಿ ಕ್ರಿಸ್ಟೀನ್‌ಗೆ ಹೇಳಿದ್ದು: “ಯಾವ ಧರ್ಮನೂ ಅದರ ಸದಸ್ಯರಿಗೆ ಇಷ್ಟೊಂದು ಕಷ್ಟದ ಭಾಷೆಯನ್ನ ಕಲಿಯೋಕೆ ಪ್ರೋತ್ಸಾಹಿಸಲ್ಲ. ಆದ್ರೆ ನೀವು ಮಾಡ್ತಿರೋ ಪ್ರಯತ್ನ ನೋಡಿದ್ರೆ ತುಂಬಾ ಮುಖ್ಯವಾಗಿರೋ ಏನೋ ಒಂದು ವಿಷ್ಯ ನಿಮಗೆ ಹೇಳಕ್ಕಿದೆ ಅಂತ ಗೊತ್ತಾಗುತ್ತೆ.”
11. ಬೇರೆ ಭಾಷೆ ಮಾತಾಡೋ ಜನ್ರಿಗೆ ಸಿಹಿಸುದ್ದಿ ಸಾರೋಕೆ ನಾವು ಹೇಗೆ ಸಿದ್ಧರಾಗಿರಬಹುದು?
11 ನಿಜ, ನಮಗೆಲ್ಲರಿಗೂ ಬೇರೆ ಭಾಷೆ ಕಲಿಯೋಕೆ ಆಗದೇ ಇರಬಹುದು. ಆದ್ರೂ ಬೇರೆ ಭಾಷೆ ಮಾತಾಡೋ ಜನ್ರಿಗೆ ಸಿಹಿಸುದ್ದಿ ಸಾರಬಹುದು. ಅದು ಹೇಗೆ? ಒಂದು ವಿಧ, JW ಭಾಷೆ ಆ್ಯಪ್ ಬಳಸೋ ಮೂಲಕ. ನೀವಿರೋ ಪ್ರದೇಶದಲ್ಲಿ ಜನ ಸಾಮಾನ್ಯವಾಗಿ ಮಾತಾಡೋ ಭಾಷೆಯಲ್ಲಿ ಹೇಗೆ ವಂದಿಸೋದು ಅಂತ ಕಲಿರಿ. ಅಷ್ಟೇ ಅಲ್ಲ, ಆ ಭಾಷೆಯ ಜನರ ಆಸಕ್ತಿಯನ್ನ ಹೆಚ್ಚಿಸೋಕೆ ಕೆಲವು ವಾಕ್ಯಗಳನ್ನೂ ಕಲಿರಿ. ಆಮೇಲೆ jw.org ವೆಬ್‌ಸೈಟಿಗೆ ಹೋಗಿ ಅವರ ಭಾಷೆಯಲ್ಲೇ ಇರೋ ವಿಡಿಯೋ ಮತ್ತು ಪ್ರಕಾಶನಗಳನ್ನ ತೋರಿಸಿ. ಈ ರೀತಿ ಸಾಧನಗಳನ್ನ ಸೇವೆಯಲ್ಲಿ ಬಳಸೋವಾಗ ತುಂಬ ಖುಷಿಯಾಗುತ್ತೆ. ಒಂದನೇ ಶತಮಾನದ ಕ್ರೈಸ್ತರು ಕೂಡ “ಪ್ರತಿಯೊಬ್ಬರ ಮಾತೃಭಾಷೆಯಲ್ಲಿ” ಸಿಹಿಸುದ್ದಿಯನ್ನ ಹೇಳಿದಾಗ ಬೇರೆ ದೇಶದಿಂದ ಬಂದವರು ತುಂಬ ಆಶ್ಚರ್ಯಪಟ್ರು. ಇದನ್ನ ನೋಡಿ ಆ ಕ್ರೈಸ್ತರಿಗೂ ತುಂಬ ಖುಷಿಯಾಯ್ತು.
“ಪೇತ್ರ ಜೋರಾಗಿ ಹೀಗಂದ” (ಅ. ಕಾ. 2:14-37)
12. (ಎ) ಕ್ರಿ.ಶ. 33ರಲ್ಲಿ ಐವತ್ತನೇ ದಿನದ ಹಬ್ಬದಲ್ಲಿ ನಡೆದ ಅದ್ಭುತದ ಬಗ್ಗೆ ಪ್ರವಾದಿ ಯೋವೇಲ ಏನಂತ ಭವಿಷ್ಯವಾಣಿ ಹೇಳಿದ್ದ? (ಬಿ) ಯೋವೇಲನ ಭವಿಷ್ಯವಾಣಿ ಒಂದನೇ ಶತಮಾನದಲ್ಲಿ ನಿಜ ಆಯ್ತು ಅನ್ನೋದಕ್ಕೆ ಕಾರಣ ಏನು?
12 ಅಲ್ಲಿ ಸೇರಿದ್ದ ಬೇರೆ ಬೇರೆ ದೇಶಗಳ ಜನರ ಜೊತೆ ಪೇತ್ರ ಮಾತಾಡಿದ. (ಅ. ಕಾ. 2:14) ಅವನು ಅಲ್ಲಿದ್ದ ಜನ್ರಿಗೆ ದೇವರು ಶಿಷ್ಯರಿಗೆ ಬೇರೆಬೇರೆ ಭಾಷೆಗಳಲ್ಲಿ ಮಾತಾಡೋ ವರವನ್ನ ಕೊಟ್ಟನು ಮತ್ತು ದೇವರು ಯೋವೇಲನ ಮೂಲಕ ಹೇಳಿದ ಭವಿಷ್ಯವಾಣಿ ಹೀಗೆ ನಿಜ ಆಯ್ತು ಅಂತ ವಿವರಿಸಿದ. ದೇವರು ಯೋವೇಲನ ಮೂಲಕ ಹೀಗೆ ಹೇಳಿದ್ದನು, “ನಾನು ಎಲ್ಲ ರೀತಿಯ ಜನ್ರ ಮೇಲೆ ನನ್ನ ಪವಿತ್ರಶಕ್ತಿ ಸುರಿಸ್ತೀನಿ.” (ಯೋವೇ. 2:28) ಯೇಸು ಸ್ವರ್ಗಕ್ಕೆ ಹೋಗೋ ಮುಂಚೆ ತನ್ನ ಶಿಷ್ಯರಿಗೆ, “[ನಿಮಗೆ] ಇನ್ನೊಬ್ಬ ಸಹಾಯಕನನ್ನ ಕಳಿಸು ಅಂತ ಅಪ್ಪನ ಹತ್ರ ಬೇಡ್ತೀನಿ. ಆತನು ಕಳಿಸ್ತಾನೆ” ಅಂತ ಹೇಳಿದ್ದನು. ಆ ಸಹಾಯಕ “ಪವಿತ್ರಶಕ್ತಿನೇ” ಅಂತ ಆತನು ಹೇಳಿದ್ದನು.—ಯೋಹಾ. 14:16, 17.
13, 14. (ಎ) ಪೇತ್ರ ಜನರ ಮನಸ್ಸು ಮುಟ್ಟೋಕೆ ಏನು ಮಾಡಿದ? (ಬಿ) ಅವನಿಂದ ನಮಗೇನು ಪಾಠ?
13 ಕೊನೆಯಲ್ಲಿ ಪೇತ್ರ ಜನರ ಗುಂಪಿಗೆ ದೃಢವಾಗಿ ಹೀಗೆ ಹೇಳಿದ: “ನೀವು ಕಂಬಕ್ಕೆ ಜಡಿದ ಈ ಯೇಸುವನ್ನೇ ದೇವರು ಪ್ರಭುವಾಗಿ ಮತ್ತು ಕ್ರಿಸ್ತನಾಗಿ ಮಾಡಿದ್ದಾನೆ ಅಂತ ಇಸ್ರಾಯೇಲ್ ಜನ್ರಿಗೆಲ್ಲ ಚೆನ್ನಾಗಿ ಅರ್ಥ ಆಗಬೇಕು.” (ಅ. ಕಾ. 2:36) ಪೇತ್ರನ ಮಾತುಗಳನ್ನ ಕೇಳ್ತಿದ್ದವರಲ್ಲಿ ಅನೇಕರು ಯೇಸುನ ಕಂಬದ ಮೇಲೆ ಜಡಿದಾಗ ಅಲ್ಲಿ ಇರಲಿಲ್ಲ ನಿಜ. ಆದ್ರೂ ಅದಕ್ಕೆ ಇಡೀ ಜನಾಂಗದವರು ಹೊಣೆ ಆಗಿದ್ರು. ಇಲ್ಲಿ ಗಮನಿಸಬೇಕಾದ ವಿಷ್ಯ ಏನಂದ್ರೆ, ಪೇತ್ರ ತನ್ನ ಜನಾಂಗದವರಾದ ಯೆಹೂದ್ಯರ ಜೊತೆ ಗೌರವದಿಂದ, ಮನಸ್ಸು ಮುಟ್ಟೋ ತರ ಮಾತಾಡಿದ. ಅವನ ಉದ್ದೇಶ ಜನರು ಪಶ್ಚಾತ್ತಾಪಪಡಬೇಕು ಅನ್ನೋದಾಗಿತ್ತೇ ಹೊರತು ಅವರನ್ನ ಖಂಡಿಸೋದಾಗಿರಲಿಲ್ಲ. ಅವನ ಮಾತು ಕೇಳಿಸ್ಕೊಂಡ ಜನರ ಗುಂಪು ಅವನ ಮೇಲೆ ಕೋಪ ಮಾಡ್ಕೊಳ್ತಾ? ಇಲ್ಲ. ಬದಲಿಗೆ ಅವರ “ಮನಸ್ಸು ಚುಚ್ಚಿತು.” ಅದಕ್ಕೇ ಅವರು, “ನಾವೇನು ಮಾಡಬೇಕು?” ಅಂತ ಕೇಳಿದ್ರು. ಪೇತ್ರ ಗೌರವದಿಂದ ಮಾತಾಡಿದ್ರಿಂದಾನೇ ಅನೇಕರ ಮನಸ್ಸು ಮುಟ್ಟೋಕಾಯ್ತು ಮತ್ತು ಅವರು ಪಶ್ಚಾತ್ತಾಪಪಟ್ರು.—ಅ. ಕಾ. 2:37.
14 ಪೇತ್ರನ ತರ ನಾವೂ ಜನರ ಮನಸ್ಸು ಮುಟ್ಟೋ ತರ ಮಾತಾಡಬೇಕು. ನಾವು ಸಾಕ್ಷಿಕೊಡುವಾಗ ಮನೆಯವನು ಬೈಬಲಿಗೆ ವಿರುದ್ಧವಾಗಿ ಹೇಳಿದ್ದನ್ನೆಲ್ಲ ಚರ್ಚಿಸಬೇಕಂತಿಲ್ಲ. ಬದಲಿಗೆ ಮನೆಯವನೂ ನಾವೂ ಇಬ್ಬರೂ ಒಪ್ಪೋ ವಿಷ್ಯಗಳ ಬಗ್ಗೆ ಮಾತಾಡಬಹುದು. ಮೊದಲು ಇದನ್ನ ಮಾಡಿದ್ರೆ ಆಮೇಲೆ ಜಾಣ್ಮೆಯಿಂದ ದೇವರ ವಾಕ್ಯವನ್ನ ಬಳಸಿ ಚರ್ಚೆ ಮಾಡಬಹುದು. ಈ ತರ ಬೈಬಲ್ ಸತ್ಯಗಳನ್ನ ಜನರ ಹತ್ರ ಮಾತಾಡೋವಾಗ ಒಳ್ಳೇ ಹೃದಯದ ಜನ ಒಳ್ಳೇ ಪ್ರತಿಕ್ರಿಯೆ ತೋರಿಸಬಹುದು.
“ದೀಕ್ಷಾಸ್ನಾನ ತಗೊಳ್ಳಿ” (ಅ. ಕಾ. 2:38-47)
15. (ಎ) ಪೇತ್ರ ಏನಂತ ಹೇಳಿದ? (ಬಿ) ಅದಕ್ಕೆ ಸಿಕ್ಕಿದ ಪ್ರತಿಕ್ರಿಯೆ ಏನಾಗಿತ್ತು? (ಸಿ) ಐವತ್ತನೇ ದಿನದ ಹಬ್ಬದಲ್ಲಿ ಸಿಹಿಸುದ್ದಿ ಕೇಳಿಸ್ಕೊಂಡ ಸಾವಿರಾರು ಜನ ಅದೇ ದಿನದಲ್ಲಿ ದೀಕ್ಷಾಸ್ನಾನ ಪಡ್ಕೊಳ್ಳೋಕೆ ಯಾಕೆ ಅರ್ಹರಾಗಿದ್ರು?
15 ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದಲ್ಲಿ ಪ್ರತಿಕ್ರಿಯೆ ತೋರಿಸಿದ ಯೆಹೂದ್ಯರಿಗೆ ಮತ್ತು ಯೆಹೂದಿ ಮತಕ್ಕೆ ಮತಾಂತರ ಆದವರಿಗೆ ಪೇತ್ರ, ‘ಪಶ್ಚಾತ್ತಾಪಪಡಿ, ದೀಕ್ಷಾಸ್ನಾನ ತಗೊಳ್ಳಿ’ ಅಂದ. (ಅ. ಕಾ. 2:38) ಇದ್ರಿಂದಾಗಿ ಸುಮಾರು 3,000 ಜನ ಯೆರೂಸಲೇಮಿನಲ್ಲಿ ಅಥವಾ ಅದರ ಹತ್ರ ಇದ್ದ ಕೊಳಗಳಲ್ಲಿ ದೀಕ್ಷಾಸ್ನಾನ ಪಡ್ಕೊಂಡ್ರು. e ಇದು ಅವರು ಹಿಂದೆಮುಂದೆ ಯೋಚ್ನೆ ಮಾಡದೇ ತಗೊಂಡ ಹೆಜ್ಜೆ ಆಗಿತ್ತಾ? ಇದರರ್ಥ ಬೈಬಲ್ ವಿದ್ಯಾರ್ಥಿಗಳು ಮತ್ತು ಸತ್ಯದಲ್ಲಿರುವವರ ಮಕ್ಕಳು ದೀಕ್ಷಾಸ್ನಾನಕ್ಕೆ ಅರ್ಹರಾಗಿಲ್ಲ ಅಂದ್ರೂ ತಗೋಬಹುದಾ? ಖಂಡಿತ ಇಲ್ಲ. ಯಾಕಂದ್ರೆ ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದ ಆ ದಿನ ದೀಕ್ಷಾಸ್ನಾನ ಪಡ್ಕೊಂಡ ಯೆಹೂದ್ಯರು ಮತ್ತು ಯೆಹೂದಿ ಮತಕ್ಕೆ ಮತಾಂತರ ಆದವರು ಈಗಾಗಲೇ ದೇವರ ವಾಕ್ಯದ ಬಗ್ಗೆ ಆಸಕ್ತಿಯಿಂದ ಕಲೀತಿದ್ರು. ಅಷ್ಟೇ ಅಲ್ಲ ಅವರು ಯೆಹೋವನಿಗೆ ಸಮರ್ಪಿಸಿಕೊಂಡಿದ್ದ ಜನಾಂಗದ ಭಾಗ ಆಗಿದ್ರು. ಅವ್ರಿಗೆ ಈಗಾಗಲೇ ತುಂಬಾ ಹುರುಪು ಇದ್ದಿದ್ರಿಂದನೇ ಈ ವಾರ್ಷಿಕ ಹಬ್ಬಕ್ಕೆ ಬಂದಿದ್ರು. ಕೆಲವರಂತೂ ತುಂಬ ದೂರದಿಂದ ಬಂದಿದ್ರು. ಅವರು, ದೇವರ ಉದ್ದೇಶ ಪೂರೈಸೋದರಲ್ಲಿ ಯೇಸು ಕ್ರಿಸ್ತನಿಗೆ ಇರೋ ಪಾತ್ರದ ಬಗ್ಗೆ ಪ್ರಾಮುಖ್ಯ ಸತ್ಯಗಳನ್ನ ಈಗ ಒಪ್ಕೊಂಡಿದ್ರು. ಅದಕ್ಕೆ ಅವರು ದೀಕ್ಷಾಸ್ನಾನ ಪಡ್ಕೊಳ್ಳೋಕೆ ಅರ್ಹರಾಗಿದ್ರು, ಹೀಗೆ ಕ್ರಿಸ್ತನ ಹಿಂಬಾಲಕರಾದ್ರು.
16. ಒಂದನೇ ಶತಮಾನದ ಕ್ರೈಸ್ತರು ಹೇಗೆ ಸ್ವತ್ಯಾಗದ ಮನೋಭಾವವನ್ನ ತೋರಿಸಿದ್ರು?
16 ಆ ಗುಂಪಿನ ಮೇಲೆ ಖಂಡಿತವಾಗಿ ಯೆಹೋವನ ಆಶೀರ್ವಾದ ಇತ್ತು. ಅದಕ್ಕೇ, “ಹೊಸ ಶಿಷ್ಯರೆಲ್ಲ ಒಟ್ಟಿಗೆ ಇರ್ತಿದ್ರು ಮತ್ತು ತಮ್ಮ ಹತ್ರ ಇದ್ದ ಎಲ್ಲವನ್ನ ಹಂಚ್ಕೊಳ್ತಿದ್ರು. ತಮ್ಮ ಜಮೀನು, ಆಸ್ತಿಪಾಸ್ತಿ ಮಾರಿ ಬಂದ ಹಣವನ್ನ ಎಲ್ರಿಗೂ ಅವರವ್ರ ಅಗತ್ಯಕ್ಕೆ ತಕ್ಕಂತೆ ಹಂಚ್ಕೊಡ್ತಾ ಇದ್ರು.” f (ಅ. ಕಾ. 2:44, 45) ನಾವು ಕೂಡ ಇಂಥದ್ದೇ ಪ್ರೀತಿ ಮತ್ತು ಸ್ವತ್ಯಾಗದ ಮನೋಭಾವವನ್ನ ತೋರಿಸಬೇಕು.
17. ಒಬ್ಬ ವ್ಯಕ್ತಿ ದೀಕ್ಷಾಸ್ನಾನಕ್ಕೆ ಅರ್ಹನಾಗಬೇಕಾದ್ರೆ ಯಾವೆಲ್ಲಾ ಹೆಜ್ಜೆಗಳನ್ನ ತಗೊಬೇಕು?
17 ಸಮರ್ಪಣೆ ಮತ್ತು ದೀಕ್ಷಾಸ್ನಾನದ ಮುಂಚೆ ಒಬ್ಬ ವ್ಯಕ್ತಿ ಕೆಲವು ಹೆಜ್ಜೆಗಳನ್ನ ತಗೊಬೇಕು. ದೇವರ ವಾಕ್ಯದ ಜ್ಞಾನವನ್ನ ಪಡ್ಕೊಬೇಕು. (ಯೋಹಾ. 17:3) ನಂಬಿಕೆ ತೋರಿಸಬೇಕು ಮತ್ತು ಪಶ್ಚಾತ್ತಾಪಪಡಬೇಕು. ಅಂದ್ರೆ ಸತ್ಯ ಕಲಿಯೋ ಮುಂಚೆ ಮಾಡಿದ ತಪ್ಪಿನ ಬಗ್ಗೆ ಮನಸಾರೆ ದುಃಖ ತೋರಿಸಬೇಕು. (ಅ. ಕಾ. 3:19) ನಂತರ ತಿದ್ದುಕೊಂಡು ಬದಲಾಗಬೇಕು ಮತ್ತು ದೇವರಿಗೆ ಇಷ್ಟವಾದ ಕೆಲಸಗಳನ್ನ ಮಾಡಬೇಕು. (ರೋಮ. 12:2; ಎಫೆ. 4:23, 24) ಈ ಹೆಜ್ಜೆಗಳನ್ನ ತಗೊಂಡ ಮೇಲೆ ಅವನು ಪ್ರಾರ್ಥನೆ ಮಾಡೋವಾಗ ತನ್ನನ್ನ ದೇವರಿಗೆ ಸಮರ್ಪಣೆ ಮಾಡ್ಕೊಬೇಕು, ಆಮೇಲೆ ಅವನು ದೀಕ್ಷಾಸ್ನಾನ ಪಡ್ಕೊಬಹುದು.—ಮತ್ತಾ. 16:24; 1 ಪೇತ್ರ 3:21.
18. ದೀಕ್ಷಾಸ್ನಾನ ಪಡ್ಕೊಂಡು ಕ್ರಿಸ್ತನ ಶಿಷ್ಯರಾದವರಿಗೆ ಯಾವ ಸುಯೋಗ ಇದೆ?
18 ನೀವು ಸಮರ್ಪಣೆ ಮಾಡ್ಕೊಂಡು, ದೀಕ್ಷಾಸ್ನಾನ ಪಡ್ಕೊಂಡು ಯೇಸು ಕ್ರಿಸ್ತನ ಶಿಷ್ಯರಾಗಿದ್ದೀರಾ? ಹಾಗಿದ್ರೆ, ಒಂದನೇ ಶತಮಾನದ ಶಿಷ್ಯರ ತರ ಯೆಹೋವ ದೇವರು ನಿಮಗೂ ಚೆನ್ನಾಗಿ ಸಿಹಿಸುದ್ದಿ ಸಾರೋಕೆ ಮತ್ತು ಆತನ ಇಷ್ಟದಂತೆ ನಡೆಯೋಕೆ ಪವಿತ್ರಶಕ್ತಿಯನ್ನ ಕೊಟ್ಟೇ ಕೊಡ್ತಾನೆ! ಶಿಷ್ಯರಾಗಿರೋ ಈ ಸುಯೋಗಕ್ಕೆ ಎಷ್ಟು ಥಾಂಕ್ಸ್ ಹೇಳಿದ್ರೂ ಸಾಕಾಗಲ್ಲ.
a “ ಯೆರೂಸಲೇಮ್—ಯೆಹೂದಿಮತದ ಕೇಂದ್ರ” ಅನ್ನೋ ಚೌಕ ನೋಡಿ.
b “ ರೋಮ್—ಒಂದು ಸಾಮ್ರಾಜ್ಯದ ರಾಜಧಾನಿ,” “ ಮೆಸಪಟೇಮ್ಯ ಮತ್ತು ಈಜಿಪ್ಟಲ್ಲಿ ಯೆಹೂದ್ಯರು” ಮತ್ತು “ ಪೊಂತದಲ್ಲಿ ಕ್ರೈಸ್ತಧರ್ಮ” ಅನ್ನೋ ಚೌಕಗಳನ್ನ ನೋಡಿ.
c ಆ “ನಾಲಿಗೆ” ನಿಜಕ್ಕೂ ಬೆಂಕಿ ಆಗಿರಲಿಲ್ಲ. ಅದು ಬರೀ “ಆಕಾರ” ಆಗಿತ್ತಷ್ಟೇ. ಪ್ರತಿಯೊಬ್ಬ ಶಿಷ್ಯನ ಮೇಲೆ ಏನು ಕಾಣಿಸ್ತಾ ಇತ್ತೋ ಅದು ನೋಡೋಕೆ ಬೆಂಕಿ ತರ ಇತ್ತು ಮತ್ತು ಜ್ವಾಲೆ ತರ ಪ್ರಜ್ವಲಿಸ್ತಾ ಇತ್ತು.
d “ ಯೆಹೂದ್ಯರಾಗಿ ಮತಾಂತರ ಆದವ್ರು ಯಾರು?” ಅನ್ನೋ ಚೌಕ ನೋಡಿ.
e 1993, ಆಗಸ್ಟ್ 7ರಂದು ಯುಕ್ರೇನ್‌ನ ಕೀಯೇವ್‌ನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನವೊಂದರಲ್ಲಿ ಆರು ಕೊಳಗಳಲ್ಲಿ 7,402 ಜನರು ದೀಕ್ಷಾಸ್ನಾನ ಪಡ್ಕೊಂಡ್ರು. ಇದಕ್ಕೆ ಎರಡು ಗಂಟೆ ಹದಿನೈದು ನಿಮಿಷ ಹಿಡೀತು.
f ಈ ತರ ಬೇರೆವ್ರಿಗೆ ಸಹಾಯ ಮಾಡೋ ಏರ್ಪಾಡು ತಾತ್ಕಾಲಿಕವಾಗಿತ್ತಾದ್ರೂ ಹೊಸ ನಂಬಿಕೆ ಬಗ್ಗೆ ಇನ್ನೂ ಜಾಸ್ತಿ ಕಲಿಯೋಕೆ ಯೆರೂಸಲೇಮಿನಲ್ಲೇ ಉಳ್ಕೊಂಡ ವಿದೇಶಿಯರ ಅಗತ್ಯಗಳನ್ನ ಪೂರೈಸೋಕೆ ಸಹಾಯ ಆಯ್ತು. ಬೇರೆವ್ರ ಒತ್ತಾಯದಿಂದನೋ ಅಥ್ವಾ ಯಾವುದೋ ರಾಜಕೀಯ ಸಿದ್ಧಾಂತದ ಆಧಾರದ ಮೇಲೆನೋ ಈ ರೀತಿ ಸಹಾಯ ಮಾಡಲಿಲ್ಲ. ಬದಲಾಗಿ ಪ್ರೀತಿಯಿಂದ ಹಂಚ್ಕೊಂಡ್ರು.—ಅ. ಕಾ. 5:1-4.