ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 5

“ನಾವು ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು”

“ನಾವು ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು”

ಅಪೊಸ್ತಲರು ತಗೊಂಡ ನಿರ್ಧಾರ—ಎಲ್ಲ ಸತ್ಯ ಕ್ರೈಸ್ತರಿಗೆ ಒಂದು ಮಾದರಿ

ಆಧಾರ: ಅಪೊಸ್ತಲರ ಕಾರ್ಯ 5:12–6:7

1-3. (ಎ) ಅಪೊಸ್ತಲರನ್ನ ಹಿರೀಸಭೆ ಮುಂದೆ ಯಾಕೆ ತರಲಾಯ್ತು? (ಬಿ) ಅಪೊಸ್ತಲರ ಮುಂದೆ ಯಾವ ಪ್ರಶ್ನೆ ಇತ್ತು? (ಸಿ) ಅಪೊಸ್ತಲರು ತಗೊಂಡ ನಿರ್ಧಾರದ ಬಗ್ಗೆ ನಾವು ಯಾಕೆ ತಿಳ್ಕೊಬೇಕು?

 ಹಿರೀಸಭೆಯಲ್ಲಿದ್ದ ನ್ಯಾಯಾಧೀಶರು ಕೋಪದಿಂದ ಕುದಿತಿದ್ರು! ಈ ಉಚ್ಚ ನ್ಯಾಯಾಲಯದಲ್ಲಿ ಯೇಸುವಿನ ಅಪೊಸ್ತಲರು ವಿಚಾರಣೆಗಾಗಿ ನಿಂತಿದ್ರು. ಕಾರಣ ಏನು? ಇದು, ಹಿರೀಸಭೆಯ ಅಧ್ಯಕ್ಷನಾಗಿದ್ದ ಮಹಾ ಪುರೋಹಿತ ಯೋಸೆಫ್‌ ಕಾಯಫನ ಈ ಗಡುಸಾದ ಮಾತುಗಳಿಂದ ಗೊತ್ತಾಗುತ್ತೆ: “ಯೇಸು ಹೆಸ್ರೆತ್ತಿ ಏನೂ ಕಲಿಸಬಾರದು ಅಂತ ನಿಮಗೆ ಆಜ್ಞೆ ಕೊಟ್ಟಿರಲಿಲ್ವಾ? ಹಾಗಿದ್ರೂ ನೀವು ಯೆರೂಸಲೇಮಲ್ಲಿ ಒಬ್ಬರನ್ನೂ ಬಿಡದೆ ಎಲ್ರಿಗೂ ಕಲಿಸ್ತಾ ಇದ್ದೀರ. ಅವನ ಸಾವಿಗೆ ನಾವೇ ಕಾರಣ ಅಂತ ಹೇಳ್ತಾ ಇದ್ದೀರ.” (ಅ. ಕಾ. 5:28) ಅವನು ಅಪೊಸ್ತಲರಿಗೆ ‘ಸಾರೋದನ್ನ ನಿಲ್ಲಿಸಿ, ಇಲ್ಲಾಂದ್ರೆ ನಿಮಗೆ ಶಿಕ್ಷೆ ಗ್ಯಾರೆಂಟಿ’ ಅಂತ ಬೆದರಿಕೆ ಹಾಕಿದಂಗಿತ್ತು.

2 ಆಗ ಅಪೊಸ್ತಲರು ಏನು ಮಾಡಿದ್ರು? ಅವ್ರಿಗೆ ಸಾರೋ ದೇವರಿಂದ ಅಧಿಕಾರ ಪಡೆದಿದ್ದ ಯೇಸು ಕೊಟ್ಟಿದ್ದನು. (ಮತ್ತಾ. 28:18-20) ಅಪೊಸ್ತಲರು ಮನುಷ್ಯರಿಗೆ ಹೆದರಿ ಸುಮ್ಮನಾಗಿ ಬಿಟ್ರಾ? ಅಥವಾ ಧೈರ್ಯದಿಂದ ದೃಢವಾಗಿ ನಿಂತು ಸಾರೋದನ್ನ ಮುಂದುವರಿಸಿದ್ರಾ? ದೇವರಿಗೆ ವಿಧೇಯರಾಗಬೇಕಾ, ಮನುಷ್ಯರಿಗೆ ವಿಧೇಯರಾಗಬೇಕಾ? ಅನ್ನೋ ಪ್ರಶ್ನೆ ಅವರ ಮುಂದೆ ಇತ್ತು. ಆದ್ರೆ ಅಪೊಸ್ತಲ ಪೇತ್ರ ಸ್ವಲ್ಪನೂ ಹಿಂಜರಿದೆ ಎಲ್ಲ ಅಪೊಸ್ತಲರ ಪರವಾಗಿ ಮಾತಾಡಿದ. ಅವನ ಮಾತು ಸ್ಪಷ್ಟವಾಗಿ, ನೇರವಾಗಿತ್ತು.

3 ಹಿರೀಸಭೆ ಹೀಗೆ ಬೆದರಿಕೆ ಹಾಕಿದ ಮೇಲೆ ಅಪೊಸ್ತಲರು ಏನು ಮಾಡಿದ್ರು ಅಂತ ತಿಳ್ಕೊಳ್ಳೋಕೆ ಸತ್ಯ ಕ್ರೈಸ್ತರಾದ ನಮಗೆ ತುಂಬ ಆಸಕ್ತಿ ಇದೆ. ಯಾಕಂದ್ರೆ ಸಾರೋ ನೇಮಕ ನಮಗೂ ಇದೆ. ದೇವರು ಕೊಟ್ಟಿರೋ ಈ ನೇಮಕ ಮಾಡುವಾಗ ನಮಗೂ ವಿರೋಧ ಬರಬಹುದು. (ಮತ್ತಾ. 10:22) ವಿರೋಧಿಗಳು ನಮ್ಮ ಕೆಲಸದ ಮೇಲೆ ನಿರ್ಬಂಧ ಅಥವಾ ನಿಷೇಧ ಹಾಕಬಹುದು. ಆಗ ನಾವೇನು ಮಾಡಬೇಕು? ಅದನ್ನ ತಿಳ್ಕೊಳ್ಳೋಕೆ ಅಪೊಸ್ತಲರು ಮಾಡಿದ ನಿರ್ಧಾರ ಮತ್ತು ಹಿರೀಸಭೆಯಲ್ಲಿ ಅವರ ವಿಚಾರಣೆಗೆ ನಡೆಸಿದ ಪರಿಸ್ಥಿತಿ ಬಗ್ಗೆ ಸ್ವಲ್ಪ ತಿಳ್ಕೊಳ್ಳೋಣ. a

‘ಯೆಹೋವನ ದೂತ ಬಾಗಿಲನ್ನ ತೆರೆದ’ (ಅ. ಕಾ. 5:12-21ಎ)

4, 5. ಕಾಯಫ ಮತ್ತು ಸದ್ದುಕಾಯರಿಗೆ ಯಾಕೆ “ತುಂಬ ಹೊಟ್ಟೆಕಿಚ್ಚು ಆಯ್ತು?”

4 ಮೊದಲ ಸಲ ಪೇತ್ರ ಮತ್ತು ಯೋಹಾನನಿಗೆ ಸಾರೋದನ್ನ ನಿಲ್ಲಿಸಿ ಅಂತ ಹೇಳಿದಾಗ ಅವರು “ನಾವಂತೂ ನೋಡಿದ್ದನ್ನ, ಕೇಳಿದ್ದನ್ನ ಮಾತಾಡದೆ ಇರಲ್ಲ” ಅಂತ ಹೇಳಿದ್ದನ್ನ ಸ್ವಲ್ಪ ನೆನಪಿಸ್ಕೊಳ್ಳಿ. (ಅ. ಕಾ. 4:20) ಇದಾದ ಮೇಲೆ ಪೇತ್ರ ಮತ್ತು ಯೋಹಾನ ಹಿರೀಸಭೆಯಿಂದ ಹೊರಗೆ ಬಂದು ಉಳಿದ ಅಪೊಸ್ತಲರ ಜೊತೆ ದೇವಾಲಯದಲ್ಲಿ ಸಾರೋದನ್ನ ಮುಂದುವರಿಸಿದ್ರು. ಅಪೊಸ್ತಲರು ತುಂಬ ದೊಡ್ಡ ಅದ್ಭುತ ಮಾಡಿದ್ರು. ಉದಾಹರಣೆಗೆ ಕಾಯಿಲೆ ವಾಸಿ ಮಾಡಿದ್ರು ಮತ್ತು ಕೆಟ್ಟ ದೇವದೂತರನ್ನ ಬಿಡಿಸಿದ್ರು. ಅವರಿದನ್ನೆಲ್ಲ ಮಾಡಿದ್ದು “ಸೊಲೊಮೋನನ ಮಂಟಪ” ಅನ್ನೋ ಜಾಗದಲ್ಲಿ. ಇದು ಆಲಯದ ಪೂರ್ವ ಭಾಗದಲ್ಲಿದ್ದ ಮಂಟಪ ಆಗಿತ್ತು. ಇಲ್ಲಿ ಸಾಮಾನ್ಯವಾಗಿ ಅನೇಕ ಯೆಹೂದ್ಯರು ಸೇರಿ ಬರ್ತಿದ್ರು. ಪೇತ್ರನ ನೆರಳು ಬಿದ್ರೂ ಸಾಕು, ಜನ ವಾಸಿಯಾಗ್ತಿದ್ರು! ಈ ತರ ವಾಸಿಯಾದ ಅನೇಕರು ಸತ್ಯದ ಮಾತುಗಳನ್ನ ಸ್ವೀಕರಿಸಿದ್ರು. ಇದ್ರಿಂದಾಗಿ, “ತುಂಬ ಜನ ಪುರುಷರು, ಸ್ತ್ರೀಯರು ಪ್ರಭು ಮೇಲೆ ನಂಬಿಕೆ ಇಟ್ಟು ಶಿಷ್ಯರಾದ್ರು.”—ಅ. ಕಾ. 5:12-15.

5 ಕಾಯಫ ಮತ್ತು ಸದ್ದುಕಾಯರಿಗೆ (ಕಾಯಫನೂ ಒಬ್ಬ ಸದ್ದುಕಾಯನಾಗಿದ್ದ) “ತುಂಬ ಹೊಟ್ಟೆಕಿಚ್ಚು ಆಯ್ತು,” ಅವರು ಅಪೊಸ್ತಲರನ್ನ ಜೈಲಿಗೆ ಹಾಕಿದ್ರು. (ಅ. ಕಾ. 5:17, 18) ಅವ್ರಿಗೆ ಯಾಕಷ್ಟು ಕೋಪ ಇತ್ತು? ಯಾಕಂದ್ರೆ ಅಪೊಸ್ತಲರು, ಯೇಸು ಮತ್ತೆ ಜೀವಂತ ಎದ್ದು ಬಂದಿದ್ದಾನೆ ಅಂತ ಕಲಿಸ್ತಿದ್ರು. ಆದ್ರೆ ಸದ್ದುಕಾಯರು ಅದನ್ನ ನಂಬುತ್ತಿರಲಿಲ್ಲ. ಯೇಸು ಮೇಲೆ ನಂಬಿಕೆಯಿಟ್ರೆ ಮಾತ್ರ ರಕ್ಷಣೆ ಸಿಗುತ್ತೆ ಅಂತ ಅಪೊಸ್ತಲರು ಹೇಳ್ತಿದ್ರು. ಆದ್ರೆ ಜನರೆಲ್ಲರೂ ಯೇಸುನ ತಮ್ಮ ನಾಯಕನಾಗಿ ಸ್ವೀಕರಿಸಿದ್ರೆ ರೋಮನ್‌ ಸರ್ಕಾರದಿಂದ ಶಿಕ್ಷೆ ಸಿಗುತ್ತೆ ಅಂತ ಸದ್ದುಕಾಯರು ಭಯಪಡ್ತಿದ್ರು. (ಯೋಹಾ. 11:48) ಅದಕ್ಕೇ ಅವರು ಅಪೊಸ್ತಲರ ಬಾಯಿ ಮುಚ್ಚಿಸೋಕೆ ಪಣತೊಟ್ಟಿದ್ರು!

6. (ಎ) ಇವತ್ತೂ ಯೆಹೋವನ ಸೇವಕರನ್ನ ಹಿಂಸಿಸಬೇಕಂತ ಕುಮ್ಮಕ್ಕು ಕೊಡೋದು ಯಾರು? (ಬಿ) ಇದೇನೂ ಆಶ್ಚರ್ಯದ ವಿಷ್ಯ ಅಲ್ಲ ಯಾಕೆ?

6 ಇವತ್ತೂ ಯೆಹೋವನ ಸೇವಕರನ್ನ ಹಿಂಸಿಸಬೇಕಂತ ಕುಮ್ಮಕ್ಕು ಕೊಡೋದು ಹೆಚ್ಚಾಗಿ ಧಾರ್ಮಿಕ ನಾಯಕರೇ. ಇವರು ಸರ್ಕಾರಿ ಅಧಿಕಾರಿಗಳ ಮತ್ತು ವಾರ್ತಾಮಾಧ್ಯಮದವರ ಮೇಲೆ ತಮಗಿರೋ ಪ್ರಭಾವ ಬಳಸಿ ಸಾರೋ ಕೆಲಸ ನಿಲ್ಲಿಸೋಕೆ ಪ್ರಯತ್ನಿಸ್ತಾರೆ. ಇದೇನೂ ಆಶ್ಚರ್ಯದ ವಿಷ್ಯ ಅಲ್ಲ. ಯಾಕಂದ್ರೆ ನಾವು ಹೇಳೋ ಸಂದೇಶದಿಂದ ಸುಳ್ಳು ಧರ್ಮದ ನಾಯಕರು ಕಲಿಸೋದೆಲ್ಲಾ ತಪ್ಪು ಅಂತ ಜನ್ರಿಗೆ ಗೊತ್ತಾಗುತ್ತೆ. ಇದ್ರಿಂದ ಒಳ್ಳೇ ಮನಸ್ಸಿನ ಜನರು ಬೈಬಲ್‌ ಸತ್ಯಗಳನ್ನ ಕಲಿತಾರೆ. ಆಗ ಅವ್ರಿಗೆ ಸುಳ್ಳು ನಂಬಿಕೆಗಳಿಂದ ಮತ್ತು ಆಚರಣೆಗಳಿಂದ ಬಿಡುಗಡೆ ಸಿಗುತ್ತೆ. (ಯೋಹಾ. 8:32) ಈ ಕಾರಣಕ್ಕೇ ಧರ್ಮಗುರುಗಳು ನಮ್ಮ ಮೇಲೆ ಕೆಂಡ ಕಾರುತ್ತಾರೆ, ಹಿಂಸೆ ಮಾಡ್ತಾರೆ.

7, 8. (ಎ) ದೇವದೂತ ಕೊಟ್ಟ ಆಜ್ಞೆ ಅಪೊಸ್ತಲರ ಮೇಲೆ ಯಾವ ಪರಿಣಾಮ ಬೀರಿರಬೇಕು? (ಬಿ) ನಾವು ಏನು ಕೇಳ್ಕೊಬೇಕು?

7 ಅಪೊಸ್ತಲರು ಜೈಲಲ್ಲಿ ಕಾಯ್ತಾ ಕೂತಿದ್ರು. ಮುಂದೆ ನಡೆಯೋ ವಿಚಾರಣೆಯಲ್ಲಿ ನಂಬಿಕೆ ತೋರಿಸಿದ್ದಕ್ಕೆ ವೈರಿಗಳು ತಮ್ಮ ಪ್ರಾಣ ತೆಗೀತಾರೇನೋ ಅಂತ ಅವರು ನೆನಸಿರಬಹುದು. (ಮತ್ತಾ. 24:9) ಆದ್ರೆ ಅದೇ ರಾತ್ರಿ ಯಾರೂ ಕನಸು ಮನಸ್ಸಲ್ಲೂ ನೆನಸದೇ ಇರೋ ಒಂದು ಘಟನೆ ನಡೀತು. ‘ಯೆಹೋವನ ದೂತ ಜೈಲಿನ ಬಾಗಿಲನ್ನ ತೆರೆದ.’ b (ಅ. ಕಾ. 5:19) ದೇವದೂತ ಅವ್ರಿಗೆ ಈ ನಿರ್ದಿಷ್ಟ ಸೂಚನೆ ಕೊಟ್ಟ: “ನೀವು ದೇವಾಲಯಕ್ಕೆ ಹೋಗಿ . . . ಮಾತಾಡ್ತಾ ಇರಿ.” (ಅ. ಕಾ. 5:20) ಈ ಮಾತು ಕೇಳಿದಾಗ ಅಪೊಸ್ತಲರಿಗೆ ತಾವು ಮಾಡ್ತಾ ಇದ್ದಿದ್ದು ಸರಿಯಾದ ವಿಷ್ಯನೇ ಅಂತ ಗ್ಯಾರೆಂಟಿ ಕೊಡ್ತು. ಏನೇ ಆದ್ರೂ ಸಿಹಿಸುದ್ದಿ ಸಾರ್ತಾ ಇರೋಕೆ ಸಹಾಯ ಮಾಡ್ತು. ಹೀಗೆ ಬಲವಾದ ನಂಬಿಕೆ ಮತ್ತು ಧೈರ್ಯದಿಂದ “ಅವರು ಬೆಳಬೆಳಿಗ್ಗೆನೇ ದೇವಾಲಯಕ್ಕೆ ಹೋಗಿ ಜನ್ರಿಗೆ ಕಲಿಸೋಕೆ ಶುರುಮಾಡಿದ್ರು.”—ಅ. ಕಾ. 5:21.

8 ನಾವು ಒಬ್ಬೊಬ್ಬರು ಹೀಗೆ ಕೇಳ್ಕೊಬೇಕು: ‘ನಮಗೂ ಇದೇ ತರದ ಪರಿಸ್ಥಿತಿ ಬಂದ್ರೆ ಸಾರ್ತಾ ಇರೋಕೆ ಬೇಕಾದ ನಂಬಿಕೆ, ಧೈರ್ಯ ನನ್ನಲ್ಲೂ ಇದ್ಯಾ?’ ಏನೇ ಆದ್ರು ನಾವು “ದೇವ್ರ ಆಳ್ವಿಕೆ ಬಗ್ಗೆ ಚೆನ್ನಾಗಿ” ಕಲಿಸ್ತಾ ಇರ್ತೀವಿ. ಯಾಕಂದ್ರೆ ಈ ಕೆಲಸವನ್ನ ದೇವದೂತರು ಬೆಂಬಲಿಸ್ತಿದ್ದಾರೆ ಮತ್ತು ಮಾರ್ಗದರ್ಶಿಸ್ತಿದ್ದಾರೆ. ಇದನ್ನ ಕೇಳಿದಾಗ ನಮಗೆ ಧೈರ್ಯ ಬರುತ್ತಲ್ವಾ?—ಅ. ಕಾ. 28:23; ಪ್ರಕ. 14:6, 7.

“ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು” (ಅ. ಕಾ. 5:21ಬಿ-33)

“ಅವರು ಅಪೊಸ್ತಲರನ್ನ ಕರ್ಕೊಂಡು ಬಂದು ಹಿರೀಸಭೆ ಮುಂದೆ ನಿಲ್ಲಿಸಿದ್ರು.”—ಅಪೊಸ್ತಲರ ಕಾರ್ಯ 5:27

9-11. (ಎ) ಸಾರೋದನ್ನ ನಿಲ್ಲಿಸಬೇಕಂತ ಆಜ್ಞೆ ಕೊಟ್ಟ ಹಿರೀಸಭೆಗೆ ಅಪೊಸ್ತಲರು ಏನಂತ ಉತ್ರ ಕೊಟ್ರು? (ಬಿ) ಇದು ಸತ್ಯ ಕ್ರೈಸ್ತರಿಗೆ ಹೇಗೆ ಒಂದು ಮಾದರಿ ಆಗಿದೆ?

9 ಕಾಯಫ ಮತ್ತು ಹಿರೀಸಭೆಯ ಬೇರೆ ನ್ಯಾಯಾಧೀಶರು ಅಪೊಸ್ತಲರ ವಿಚಾರಣೆ ಮಾಡೋಕೆ ಸಿದ್ಧರಾದ್ರು. ಜೈಲಲ್ಲಿ ನಡೆದ ಘಟನೆ ಬಗ್ಗೆ ಗೊತ್ತಿರಲಿಲ್ಲ, ಅದಕ್ಕೆ ಅವ್ರು ಕೈದಿಗಳಾಗಿದ್ದ ಅಪೊಸ್ತಲರನ್ನ ಅಲ್ಲಿಂದ ಕರ್ಕೊಂಡು ಬನ್ನಿ ಅಂತ ಅಧಿಕಾರಿಗಳನ್ನ ಕಳಿಸಿದ್ರು. ಈ ಅಧಿಕಾರಿಗಳು ಅಲ್ಲಿಗೆ ಹೋದಾಗ ಜೈಲಿಗೆ ಬೀಗ ಹಾಕಿದ್ರೂ, ‘ಕಾವಲುಗಾರರು ಬಾಗಿಲ ಹತ್ರನೇ ನಿಂತಿದ್ರೂ’ ಒಳಗೆ ಯಾರೂ ಇರಲಿಲ್ಲ. ಇದನ್ನ ನೋಡಿ ಅವರಿಗೆಷ್ಟು ಆಶ್ಚರ್ಯ ಆಗಿರಬಹುದಲ್ವಾ! (ಅ. ಕಾ. 5:23) ಆಮೇಲೆ ಆ ಅಧಿಕಾರಿಗಳಿಗೆ ಅಪೊಸ್ತಲರು ದೇವಾಲಯದಲ್ಲಿದ್ದಾರೆ ಅಂತ ಗೊತ್ತಾಯ್ತು. ಅಲ್ಲಿ ಅವ್ರು ಏನ್‌ ಮಾಡ್ತಿದ್ರು? ಏನು ಮಾಡಿದ್ದಕ್ಕೆ ಅವರನ್ನ ಜೈಲಿಗೆ ಹಾಕಿದ್ರೋ ಅದನ್ನೇ ಅಂದ್ರೆ ಯೇಸು ಕ್ರಿಸ್ತನ ಬಗ್ಗೆ ಸಾಕ್ಷಿಕೊಡ್ತಾ ಇದ್ರು! ಈ ವಿಷ್ಯ ದೇವಾಲಯದ ಮುಖ್ಯಸ್ಥನಿಗೂ ಗೊತ್ತಾಯ್ತು. ಆಗ ಅವನು ಮತ್ತು ಅಧಿಕಾರಿಗಳು ತಕ್ಷಣ ದೇವಾಲಯಕ್ಕೆ ಹೋಗಿ ಆ ಕೈದಿಗಳನ್ನ ಹಿರೀಸಭೆಗೆ ಕರ್ಕೊಂಡು ಬಂದ್ರು.

10 ಈ ಅಧ್ಯಾಯದ ಆರಂಭದಲ್ಲಿ ಹೇಳಿದ ತರ, ಆ ಕೋಪಿಷ್ಠ ಧರ್ಮಗುರುಗಳು ಅಪೊಸ್ತಲರಿಗೆ ಸಾರೋದನ್ನ ನಿಲ್ಲಿಸಬೇಕಂತ ಕಡ್ಡಿ ಮುರಿದ ಹಾಗೆ ಹೇಳಿದ್ರು. ಅದಕ್ಕೆ ಅಪೊಸ್ತಲರು ಏನಂದ್ರು? ಅವರೆಲ್ಲರ ಪರವಾಗಿ ಪೇತ್ರ, “ನಾವು ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು” ಅಂತ ಧೈರ್ಯದಿಂದ ಉತ್ರ ಕೊಟ್ಟ. (ಅ. ಕಾ. 5:29) ಹೀಗೆ ಅಪೊಸ್ತಲರು ಮುಂದಿನ ಪೀಳಿಗೆಯ ಎಲ್ಲ ಸತ್ಯ ಕ್ರೈಸ್ತರಿಗೆ ಮಾದರಿ ಇಟ್ರು. ದೇವರು ಹೇಳಿದ್ದನ್ನ ಮಾಡಬೇಡಿ ಅಂತ ಅಥವಾ ದೇವರು ಮಾಡಬಾರದು ಅಂತ ಹೇಳಿದ್ದನ್ನ ಮಾಡಿ ಅಂತ ಹೇಳೋ ಹಕ್ಕು ಯಾವ ಅಧಿಕಾರಿಗಳಿಗೂ ಇಲ್ಲ. ಹಾಗಾಗಿ ದೇವರು ನಮಗೆ ಕೊಟ್ಟಿರೋ ಸಿಹಿಸುದ್ದಿ ಸಾರೋ ಕೆಲಸದ ಮೇಲೆ ‘ಅಧಿಕಾರಿಗಳು’ ನಿಷೇಧ ಹಾಕಿದ್ರೆ ನಾವದನ್ನ ನಿಲ್ಲಿಸಲ್ಲ. (ರೋಮ. 13:1) ಬದಲಿಗೆ, ಜಾಣ್ಮೆಯಿಂದ ದೇವರ ಆಳ್ವಿಕೆ ಬಗ್ಗೆ ಚೆನ್ನಾಗಿ ಸಾಕ್ಷಿ ಕೊಡ್ತಾ ಹೋಗ್ತೀವಿ.

11 ಅಪೊಸ್ತಲರು ಧೈರ್ಯದಿಂದ ಕೊಟ್ಟ ಉತ್ರನಾ ಕೇಳಿದಾಗ ನ್ಯಾಯಾಧೀಶರಿಗೆ ಕೋಪ ನೆತ್ತಿಗೇರಿತು. ಅವರು ಅಪೊಸ್ತಲರನ್ನ “ಸಾಯಿಸಬೇಕಂತ” ನಿರ್ಧಾರ ಮಾಡಿದ್ರು. (ಅ. ಕಾ. 5:33) ಆಗ ಅಪೊಸ್ತಲರು ಇವರ ಕೈಲಿ ನಾವು ಸಿಕ್ಕಿ ಹಾಕೊಂಡ್ವಿ, ನಮ್ಮ ಕತೆ ಮುಗಿತು ಅಂತ ಅವ್ರಿಗೆ ಅನಿಸ್ತು. ಆದ್ರೆ ಯೆಹೋವ ಅವ್ರನ್ನ ಅದ್ಭುತವಾಗಿ ಕಾಪಾಡಿದನು!

“ಅದನ್ನ ನೀವು ಖಂಡಿತ ನಾಶ ಮಾಡೋಕಾಗಲ್ಲ” (ಅ. ಕಾ. 5:34-42)

12, 13. (ಎ) ಗಮಲಿಯೇಲ ನ್ಯಾಯಧೀಶರಿಗೆ ಯಾವ ಸಲಹೆ ಕೊಟ್ಟ? (ಬಿ) ಆಗ ಅವರೇನು ಮಾಡಿದ್ರು? (ಸಿ) ಇವತ್ತು ಯೆಹೋವ ತನ್ನ ಜನ್ರಿಗೆ ಹೇಗೆ ಸಹಾಯ ಮಾಡಬಹುದು? (ಡಿ) ಒಂದುವೇಳೆ ನಾವು ‘ನೀತಿವಂತರಾಗಿ ಇರೋದ್ರಿಂದ ನಮಗೆ ಕಷ್ಟ ಬರೋಕೆ’ ಆತನು ಬಿಟ್ರೂ ಆತನು ಏನನ್ನ ಮಾಡೇ ಮಾಡ್ತಾನೆ?

12 “ನಿಯಮಪುಸ್ತಕದ ಬಗ್ಗೆ ಕಲಿಸ್ತಿದ್ದ [ಗಮಲಿಯೇಲನನ್ನ] ಜನ ತುಂಬ ಗೌರವಿಸ್ತಿದ್ರು.” ಅವನು ಧೈರ್ಯದಿಂದ ಮಾತಾಡಿದ. c ಕಾನೂನಿನ ಈ ಪರಿಣಿತನಿಗೆ ಅಲ್ಲಿದ್ದ ಬೇರೆ ನ್ಯಾಯಧೀಶರು ತುಂಬ ಮರ್ಯಾದೆ ಕೊಡುತ್ತಿದ್ದಿರಬೇಕು. ಅದಕ್ಕೇ ಅವನು ಸನ್ನಿವೇಶವನ್ನ ನಿಯಂತ್ರಣಕ್ಕೆ ತರೋಕೆ ಮತ್ತು “ಅಪೊಸ್ತಲರನ್ನ ಸ್ವಲ್ಪ ಸಮಯ ಹೊರಗೆ ಕಳಿಸೋಕೆ ಅಪ್ಪಣೆ” ಕೊಡೋಕೆ ಸಾಧ್ಯ ಆಯ್ತು. (ಅ. ಕಾ. 5:34) ರೋಮನ್ನರ ವಿರುದ್ಧ ಹಿಂದೆ ದಂಗೆಯೆದ್ದ ಗುಂಪುಗಳ ನಾಯಕರು ಸತ್ತುಹೋದ ಮೇಲೆ ಆ ಗುಂಪುಗಳೇ ಇಲ್ಲವಾದ ಉದಾಹರಣೆಗಳನ್ನ ಗಮಲಿಯೇಲ ಕೊಟ್ಟ. ಹೀಗೆ ಮಾಡೋ ಮೂಲಕ ಅವನು, ಯೇಸುವಿನ ಅಪೊಸ್ತಲರ ಜೊತೆ ನಡ್ಕೊಳ್ಳೋ ರೀತಿಯಲ್ಲಿ ಸ್ವಲ್ಪ ತಾಳ್ಮೆ, ಸಹನೆ ತೋರಿಸೋಕೆ ನ್ಯಾಯಾಲಯವನ್ನ ಪ್ರೋತ್ಸಾಹಿಸಿದ. ಈ ಅಪೊಸ್ತಲರ ನಾಯಕ ಯೇಸು ಸತ್ತುಹೋಗಿ ಜಾಸ್ತಿ ಸಮಯ ಆಗಿರಲಿಲ್ಲ. ಗಮಲಿಯೇಲ ಬಳಸಿದ ಈ ತರ್ಕ ಅವ್ರಿಗೆ ಸರಿ ಅನಿಸ್ತು. ಅವನು ಹೇಳಿದ್ದು: “ಇವ್ರ ತಂಟೆಗೆ ಹೋಗಬೇಡಿ. ಅವ್ರನ್ನ ಹಾಗೇ ಬಿಟ್ಟುಬಿಡಿ. ಅವ್ರ ಯೋಚನೆ, ಅವ್ರ ಕೆಲಸ ಮನುಷ್ಯರಿಂದ ಬಂದಿರೋದಾದ್ರೆ ಅದು ಖಂಡಿತ ನಾಶ ಆಗುತ್ತೆ. ಆದ್ರೆ ದೇವ್ರಿಂದ ಬಂದಿರೋದಾದ್ರೆ ಅದನ್ನ ನೀವು ಖಂಡಿತ ನಾಶ ಮಾಡೋಕಾಗಲ್ಲ. ಆಗ ನೀವು ಅವ್ರ ಜೊತೆ ಹೋರಾಡೋಕೆ ಹೋದ್ರೆ ದೇವರ ಜೊತೆನೇ ಹೋರಾಡೋಕೆ ಹೋದ ಹಾಗಾಗುತ್ತೆ.” (ಅ. ಕಾ. 5:38, 39) ಆ ನ್ಯಾಯಧೀಶರು ಅವನ ಸಲಹೆಯನ್ನ ಒಪ್ಪಿದ್ರು. ಆದ್ರೂ ಅವರು ಅಪೊಸ್ತಲರನ್ನ ಚೆನ್ನಾಗಿ ಹೊಡೆದು, “ಇನ್ನು ಮೇಲೆ ಯೇಸುವಿನ ಹೆಸ್ರೆತ್ತಿ ಮಾತಾಡಬಾರದು ಅಂತ” ಅಪ್ಪಣೆಕೊಟ್ರು.—ಅ. ಕಾ. 5:40.

13 ಆ ಕಾಲದಲ್ಲಿ ಮಾಡಿದ ತರ ಇವತ್ತು ಕೂಡ ಯೆಹೋವ ಗಮಲಿಯೇಲನಂಥ ಗಣ್ಯ ವ್ಯಕ್ತಿಗಳನ್ನ ಬಳಸಿ ತನ್ನ ಜನ್ರಿಗೆ ಸಹಾಯ ಮಾಡಬಹುದು. (ಜ್ಞಾನೋ. 21:1) ಯೆಹೋವ ದೇವರು ಶಕ್ತಿಶಾಲಿ ಅಧಿಪತಿಗಳನ್ನ, ನ್ಯಾಯಧೀಶರನ್ನ, ಶಾಸಕರನ್ನ ತನ್ನ ಇಷ್ಟದ ಪ್ರಕಾರ ಕೆಲಸಮಾಡೋ ಹಾಗೆ ಪವಿತ್ರಶಕ್ತಿ ಬಳಸಿ ಅವರ ಮನಸ್ಸನ್ನ ಬದಲಾಯಿಸಬಹುದು. (ನೆಹೆ. 2:4-8) ಆದ್ರೂ ನಾವು ‘ನೀತಿವಂತರಾಗಿ ಇರೋದ್ರಿಂದ ನಮಗೆ ಕಷ್ಟ ಬರೋಕೆ’ ಆತನು ಕೆಲವು ಸಲ ಬಿಡಬಹುದು. ಆದ್ರೆ ಆತನು ಎರಡು ವಿಷ್ಯಗಳನ್ನಂತೂ ಮಾಡೇ ಮಾಡ್ತಾನೆ. (1 ಪೇತ್ರ 3:14) ಒಂದನೇದಾಗಿ, ಆ ಕಷ್ಟಗಳನ್ನ ತಾಳ್ಕೊಳ್ಳೋಕೆ ಬೇಕಾದ ಬಲ ಕೊಟ್ಟೇ ಕೊಡ್ತಾನೆ. (1 ಕೊರಿಂ. 10:13) ಎರಡನೇದಾಗಿ, ವಿರೋಧಿಗಳಿಗೆ ದೇವರ ಕೆಲಸವನ್ನ “ನಾಶ ಮಾಡೋಕಾಗಲ್ಲ.”—ಯೆಶಾ. 54:17.

14, 15. (ಎ) ಅಪೊಸ್ತಲರಿಗೆ ಹೊಡೆತ ಬಿದ್ದಾಗ ಅವರ ಪ್ರತಿಕ್ರಿಯೆ ಏನಾಗಿತ್ತು? ಯಾಕೆ? (ಬಿ) ಯೆಹೋವನ ಜನರು ಕಷ್ಟನಾ ಸಂತೋಷದಿಂದ ತಾಳ್ಕೊಳ್ತಾರೆ ಅನ್ನೋದಕ್ಕೆ ಒಂದು ಅನುಭವ ಹೇಳಿ.

14 ಅಪೊಸ್ತಲರು ತುಂಬ ಹೊಡೆತ ತಿಂದು ಕುಗ್ಗಿ ಹೋದ್ರಾ ಅಥವಾ ಸಾರೋದನ್ನ ನಿಲ್ಲಿಸಿದ್ರಾ? ಇಲ್ಲ! ಅವರು “ಹಿರೀಸಭೆಯಿಂದ ಹೋಗುವಾಗ ತುಂಬ ಸಂತೋಷದಿಂದ ಹೋದ್ರು.” (ಅ. ಕಾ. 5:41) ‘ಸಂತೋಷನಾ?’ ಯಾಕೆ? ಹೊಡೆತ ತಿಂದ್ರೆ ಯಾರಿಗೂ ಸಂತೋಷ ಆಗಲ್ಲ ಅಲ್ವಾ? ಅವ್ರ ಸಂತೋಷಕ್ಕೆ ಕಾರಣ ಇತ್ತು. ಅವರು ಯೆಹೋವನಿಗೆ ನಂಬಿಗಸ್ತರಾಗಿದ್ರು. ತಮಗೆ ಆದರ್ಶನಾಗಿದ್ದ ಯೇಸು ಹೆಜ್ಜೆಜಾಡಲ್ಲಿ ನಡೆದಿದ್ದರಿಂದನೇ ನಮ್ಗೆ ಹಿಂಸೆ ಬಂತು ಅಂತ ಅವರು ಸಂತೋಷಪಟ್ರು.—ಮತ್ತಾ. 5:11, 12.

15 ಒಂದನೇ ಶತಮಾನದಲ್ಲಿದ್ದ ನಮ್ಮ ಆ ಸಹೋದರರ ತರನೇ ನಾವು ಸಹ ಸಿಹಿಸುದ್ದಿಗಾಗಿ ಕಷ್ಟವನ್ನ ಸಂತೋಷದಿಂದ ತಾಳ್ಕೊಳ್ತಿದ್ದೀವಿ. (1 ಪೇತ್ರ 4:12-14) ಹಾಗಂತ ವಿರೋಧಿಗಳ ಬೆದರಿಕೆಗಳು, ಹಿಂಸೆ, ಜೈಲು ಇದೆಲ್ಲ ನಮಗೆ ಖುಷಿ ಕೊಡುತ್ತೆ ಅಂತ ಇದರರ್ಥ ಅಲ್ಲ. ಬದಲಿಗೆ ನಿಯತ್ತಾಗಿ ಇರೋದ್ರಿಂದ ತುಂಬ ತೃಪ್ತಿ ಸಿಗುತ್ತೆ. ಇದಕ್ಕೊಂದು ಉದಾಹರಣೆ ಹೆನ್ರಿಕ್‌ ಡಾರ್ನಿಕ್‌. ಇವರು ಸರ್ವಾಧಿಕಾರಿಗಳ ಆಳ್ವಿಕೆಯ ಸಮಯದಲ್ಲಿ ತುಂಬ ವರ್ಷ ಕ್ರೂರ ಹಿಂಸೆಯನ್ನ ತಾಳಿಕೊಂಡಿದ್ರು. 1944ರ ಆಗಸ್ಟ್‌ ತಿಂಗಳಿನಲ್ಲಿ ಅಧಿಕಾರಿಗಳು ಅವರನ್ನ ಮತ್ತು ಅವರ ಅಣ್ಣನನ್ನ ಸೆರೆಶಿಬಿರಕ್ಕೆ ಕಳಿಸಬೇಕಂತಿದ್ರು. ಆಗ ಅವರ ವಿರೋಧಿಗಳು ಹೀಗೆ ಹೇಳಿದ್ರು: ‘ಈ ಜನರನ್ನ ಒತ್ತಾಯಿಸೋಕೆ ಆಗಲ್ಲ. ಸತ್ತು ಹುತಾತ್ಮರಾಗೋದು ಅಂದ್ರೆ ಅವರಿಗೆ ಎಲ್ಲಿಲ್ಲದ ಖುಷಿ.’ ಆಗ ಸಹೋದರ ಡಾರ್ನಿಕ್‌ ಹೀಗೆ ಹೇಳಿದ್ರು: “ನನಗೆ ಹುತಾತ್ಮನಾಗೋಕೆ ಇಷ್ಟ ಇರಲಿಲ್ಲ. ಆದ್ರೆ ಕಷ್ಟಗಳನ್ನ ಧೈರ್ಯದಿಂದ ತಾಳಿಕೊಂಡೆ ಮತ್ತು ಯೆಹೋವನಿಗೆ ನಿಷ್ಠೆಯಿಂದ ಇದ್ದೆ. ಇದರಿಂದ ನನಗೆ ತುಂಬ ಸಂತೋಷವಾಯ್ತು.”—ಯಾಕೋ. 1:2-4.

ಅಪೊಸ್ತಲರ ತರ ನಾವು “ಮನೆಮನೆ” ಸೇವೆ ಮಾಡ್ತೀವಿ

16. (ಎ) ಚೆನ್ನಾಗಿ ಸಾಕ್ಷಿ ಕೊಡೋಕೆ ಅಪೊಸ್ತಲರು ತೀರ್ಮಾನ ಮಾಡಿದ್ರು ಅಂತ ಹೇಗೆ ಗೊತ್ತಾಗುತ್ತೆ? (ಬಿ) ಅಪೊಸ್ತಲರು ಬಳಸಿದ ಯಾವ ವಿಧಾನವನ್ನೇ ನಾವು ಬಳಸ್ತಿದ್ದೀವಿ?

16 ಅಪೊಸ್ತಲರು ಹಿರೀಸಭೆಯಿಂದ ಆಚೆ ಬಂದ ಮೇಲೆ ಒಂಚೂರು ಸಮಯ ವ್ಯರ್ಥಮಾಡದೇ ಸಾರೋ ಕೆಲಸವನ್ನ ಮತ್ತೆ ಶುರುಮಾಡಿದ್ರು. “ಪ್ರತಿದಿನ ದೇವಾಲಯದಲ್ಲಿ, ಮನೆಮನೆಗೆ ಹೋಗಿ . . . ಯೇಸು ಬಗ್ಗೆ ಸಿಹಿಸುದ್ದಿಯನ್ನ ಹೇಳ್ತಾ ಇದ್ರು.” d (ಅ. ಕಾ. 5:42) ಚೆನ್ನಾಗಿ ಸಾಕ್ಷಿ ಕೊಡಲೇಬೇಕು ಅಂತ ಈ ಹುರುಪಿನ ಸಾಕ್ಷಿಗಳು ತೀರ್ಮಾನ ಮಾಡಿದ್ರು. ಇಲ್ಲಿ ಗಮನಿಸಬೇಕಾದ ವಿಷ್ಯ ಏನಂದ್ರೆ, ಅವರು ಯೇಸು ಕ್ರಿಸ್ತ ಕೊಟ್ಟ ನಿರ್ದೇಶನದ ತರ ಜನರ ಮನೆಗಳಿಗೂ ಹೋಗಿ ಸಾರಿದ್ರು. (ಮತ್ತಾ. 10:7, 11-14) ಹೀಗೆ ಮಾಡಿದ್ರಿಂದನೇ ಅವರು ಯೆರೂಸಲೇಮಲ್ಲಿ ಒಬ್ಬರನ್ನೂ ಬಿಡದೆ ಎಲ್ರಿಗೂ ಕಲಿಸೋಕಾಯ್ತು! ಇವತ್ತು ಯೆಹೋವನ ಸಾಕ್ಷಿಗಳು ಕೂಡ ಅಪೊಸ್ತಲರು ಬಳಸಿದ ಅದೇ ಸಾರೋ ವಿಧಾನಕ್ಕೆ ಪ್ರಸಿದ್ಧರಾಗಿದ್ದಾರೆ. ನಾವು ನಮ್ಮ ಟೆರಿಟೊರಿಯಲ್ಲಿರೋ ಪ್ರತಿಯೊಂದು ಮನೆಗೂ ಹೋಗ್ತೀವಿ. ಹೀಗೆ ನಮ್ಮ ಕೆಲಸವನ್ನ ಚೆನ್ನಾಗಿ ಮಾಡಲು ಅಂದ್ರೆ ಎಲ್ಲರಿಗೂ ಸಿಹಿಸುದ್ದಿ ಕೇಳೋ ಅವಕಾಶ ಕೊಡ್ತೀವಿ. ನಾವು ಮಾಡೋ ಮನೆಮನೆ ಸೇವೆಯನ್ನ ಯೆಹೋವ ಈಗಲೂ ಆಶೀರ್ವದಿಸ್ತಿದ್ದಾನಾ? ಹೌದು. ಈ ಅಂತ್ಯಕಾಲದಲ್ಲಿ ಸಿಹಿಸುದ್ದಿಗೆ ಒಳ್ಳೇ ಪ್ರತಿಕ್ರಿಯೆ ತೋರಿಸ್ತಿರೋ ಲಕ್ಷಾಂತರ ಜನ್ರಲ್ಲಿ ತುಂಬಾ ಜನ ಸಿಹಿಸುದ್ದಿಯನ್ನ ಕೇಳಿಸ್ಕೊಂಡಿದ್ದು ಸಾಕ್ಷಿಗಳು ಮನೆಗೆ ಬಂದು ಹೇಳಿದ್ದರಿಂದಲೇ.

ಮಾಡಲೇಬೇಕಾದ ‘ಕೆಲಸಕ್ಕಾಗಿ’ ಅರ್ಹ ಸಹೋದರರು (ಅ. ಕಾ. 6:1-6)

17-19. (ಎ) ಸಭೆಯಲ್ಲಿ ಒಡಕು ತರೋ ಯಾವ ಸಮಸ್ಯೆ ಎದ್ದಿತ್ತು? (ಬಿ) ಅದನ್ನ ಬಗೆಹರಿಸೋಕೆ ಅಪೊಸ್ತಲರು ಯಾವ ನಿರ್ದೇಶನ ಕೊಟ್ರು?

17 ಈ ಹೊಸ ಸಭೆಗೆ ಈಗ ಒಳಗಿಂದಾನೇ ಒಂದು ಅಪಾಯ ಬಂತು. ಅದೇನಾಗಿತ್ತು? ದೀಕ್ಷಾಸ್ನಾನ ತಗೊಳ್ತಾ ಇದ್ದವರಲ್ಲಿ ತುಂಬ ಜನ ಬೇರೆ ದೇಶಗಳಿಂದ ಯೆರೂಸಲೇಮಿಗೆ ಬಂದವರಾಗಿದ್ರು. ಇವರು ತಮ್ಮತಮ್ಮ ದೇಶಕ್ಕೆ ವಾಪಸ್‌ ಹೋಗೋ ಮುಂಚೆ ತಮ್ಮ ಹೊಸ ನಂಬಿಕೆಯ ಬಗ್ಗೆ ಹೆಚ್ಚು ಕಲೀಬೇಕಂತ ಇದ್ರು. ಹೀಗೆ ಉಳ್ಕೊಂಡ ಇವರಿಗೆ ಆಹಾರ ಮತ್ತು ಬೇಕಾಗಿದ್ದ ಬೇರೆ ಸಾಮಗ್ರಿಗಳನ್ನ ಕೊಡೋಕೆ ಯೆರೂಸಲೇಮಿನ ಶಿಷ್ಯರು ಸಂತೋಷದಿಂದ ಹಣವನ್ನ ದಾನ ಮಾಡಿದ್ರು. (ಅ. ಕಾ. 2:44-46; 4:34-37) ಆ ಸಮಯದಲ್ಲಿ ಒಂದು ಸಮಸ್ಯೆ ಹುಟ್ಟಿಕೊಳ್ತು. “ಪ್ರತಿದಿನ ಆಹಾರ ಹಂಚಿಕೊಡ್ತಿದ್ದಾಗ ಗ್ರೀಕ್‌ ಭಾಷೆಯ ವಿಧವೆಯರ ಬಗ್ಗೆ ಕಾಳಜಿ ವಹಿಸ್ತಿರಲಿಲ್ಲ.” (ಅ. ಕಾ. 6:1) ಆದ್ರೆ ಹೀಬ್ರು ಭಾಷೆಯ ವಿಧವೆಯರನ್ನ ಕಾಳಜಿ ಮಾಡ್ತಿದ್ರು. ಇಲ್ಲಿ ಬೇಧಭಾವ ಮಾಡಿದ್ದೇ ಸಮಸ್ಯೆ ಆಗಿತ್ತು ಅಂತ ಕಾಣುತ್ತೆ. ಬೇಧಭಾವ ಸಭೆಯಲ್ಲಿ ಸುಲಭವಾಗಿ ಒಡಕುಗಳನ್ನ ತರಬಹುದು. ಆದ್ರಿಂದ ಈ ಸಮಸ್ಯೆನಾ ಅವರು ನಾಜೂಕಾಗಿ ಬಗೆಹರಿಸಬೇಕಿತ್ತು.

18 ಅಪೊಸ್ತಲರು ದಿನದಿಂದ ದಿನಕ್ಕೆ ಬೆಳೀತಾ ಇದ್ದ ಕ್ರೈಸ್ತ ಸಭೆಯ ಆಡಳಿತ ಮಂಡಲಿಯಾಗಿ ಕೆಲಸ ಮಾಡ್ತಿದ್ರು. ಅದಕ್ಕೆ ಅವರೇ ‘ಆಹಾರ ಹಂಚಕ್ಕಂತ ದೇವರ ಬಗ್ಗೆ ಜನ್ರಿಗೆ ಕಲಿಸೋದನ್ನ ನಿಲ್ಲಿಸಿದ್ರೆ ಅದು ಚೆನ್ನಾಗಿರಲ್ಲ’ ಅಂತ ಅರ್ಥ ಮಾಡ್ಕೊಂಡ್ರು. (ಅ. ಕಾ. 6:2) ಹಾಗಾಗಿ, ಈ ಸಮಸ್ಯೆಯನ್ನ ಬಗೆಹರಿಸೋಕೆ “ಪವಿತ್ರಶಕ್ತಿಯನ್ನ ಪಡೆದಿರೋ ಮತ್ತು ವಿವೇಕಿಗಳಾಗಿರೋ” ಏಳು ಸಹೋದರರನ್ನ ಹುಡುಕೋಕೆ ಶಿಷ್ಯರಿಗೆ ನಿರ್ದೇಶನ ಕೊಟ್ರು. ಇವರನ್ನ ಅಪೊಸ್ತಲರು ಆಹಾರ ವಿತರಣೆ “ಕೆಲಸದ ಮೇಲೆ” ನೇಮಿಸಿದ್ರು. (ಅ. ಕಾ. 6:3) ಈ ಕೆಲಸ ಮಾಡೋಕೆ ಅರ್ಹ ಸಹೋದರರೇ ಬೇಕಾಗಿದ್ರು ಯಾಕಂದ್ರೆ ಇದ್ರಲ್ಲಿ ಆಹಾರ ಬಡಿಸೋದು ಮಾತ್ರ ಅಲ್ಲ ಹಣಕಾಸಿನ ವ್ಯವಹಾರ, ಸಾಮಗ್ರಿಗಳ ಖರೀದಿ ಮತ್ತು ದಾಖಲೆ ಬರೆದಿಡೋದೂ ಸೇರಿತ್ತು. ಆರಿಸಿರೋ ಎಲ್ಲಾ ಸಹೋದರರಿಗೂ ಗ್ರೀಕ್‌ ಹೆಸರುಗಳೇ ಇತ್ತು. ಇಂಥವರನ್ನ ಆರಿಸ್ಕೊಂಡಿದ್ದನ್ನ ನೋಡಿ, ನೊಂದುಕೊಂಡಿದ್ದ ವಿಧವೆಯರಿಗೆ ಖುಷಿ ಆಗಿರಬೇಕು. ಇವರನ್ನ ಆರಿಸ್ಕೊಂಡು ಈ ವಿಚಾರದ ಬಗ್ಗೆ ಪ್ರಾರ್ಥನೆ ಮಾಡಿದ ಮೇಲೆ ಅಪೊಸ್ತಲರು ಈ ಏಳು ಸಹೋದರರನ್ನ ಮಾಡಲೇಬೇಕಾದ ‘ಕೆಲಸಕ್ಕಾಗಿ’ ನೇಮಿಸಿದ್ರು. e

19 ಈ ಏಳು ಸಹೋದರರಿಗೆ ಆಹಾರ ವಿತರಣೆಯ ಕೆಲಸ ಇದ್ದ ಕಾರಣ ಅವರು ಸಿಹಿಸುದ್ದಿ ಸಾರಬೇಕಾಗಿರಲಿಲ್ಲ ಅಂತಾನಾ? ಇಲ್ಲವೇ ಇಲ್ಲ! ಈ ಏಳು ಜನರಲ್ಲಿ ಸ್ತೆಫನನೂ ಒಬ್ಬ. ಇವನು ಧೈರ್ಯದಿಂದ, ಚೆನ್ನಾಗಿ ಸಾಕ್ಷಿಕೊಡ್ತಿದ್ದ. (ಅ. ಕಾ. 6:8-10) ಅವ್ರಲ್ಲಿ ಫಿಲಿಪ್ಪನೂ ಇದ್ದ. ಅವನನ್ನ “ಸಿಹಿಸುದ್ದಿ ಸಾರುವವ” ಅಂತಿದ್ರು. (ಅ. ಕಾ. 21:8) ಈ ಏಳೂ ಸಹೋದರರು ತಮಗೆ ಕೊಟ್ಟ ಜವಾಬ್ದಾರಿ ಜೊತೆಗೆ ಹುರುಪಿಂದ ಸಿಹಿಸುದ್ದಿ ಸಾರ್ತಾ ಇದ್ರು ಅಂತ ಇದ್ರಿಂದ ಗೊತ್ತಾಗುತ್ತೆ.

20. ಇವತ್ತು ದೇವರ ಜನರು ಅಪೊಸ್ತಲರ ಮಾದರಿಯನ್ನ ಹೇಗೆ ಅನುಕರಿಸ್ತಾರೆ?

20 ಇವತ್ತು ಯೆಹೋವನ ಜನರು ಅಪೊಸ್ತಲರ ಮಾದರಿಯನ್ನ ಅನುಕರಿಸ್ತಾರೆ. ಸಭೆಯಲ್ಲಿ ಜವಾಬ್ದಾರಿ ವಹಿಸೋಕೆ ಯಾರನ್ನ ಶಿಫಾರಸ್ಸು ಮಾಡಲಾಗುತ್ತೋ ಅವರು ದೈವಿಕ ವಿವೇಕವನ್ನ ತೋರಿಸಬೇಕು ಮತ್ತು ಪವಿತ್ರಶಕ್ತಿ ಅವರಲ್ಲಿ ಕೆಲಸಮಾಡ್ತಿದೆ ಅಂತ ಗೊತ್ತಾಗಬೇಕು. ಬೈಬಲಲ್ಲಿ ಹೇಳಿದ ಅರ್ಹತೆಗಳಿರೋ ಸಹೋದರರನ್ನ ಆಡಳಿತ ಮಂಡಲಿಯ ನಿರ್ದೇಶನದ ಪ್ರಕಾರ ಸಭೆಗಳಲ್ಲಿ ಹಿರಿಯರಾಗಿ, ಸಹಾಯಕ ಸೇವಕರಾಗಿ ನೇಮಿಸಲಾಗುತ್ತೆ. f (1 ತಿಮೊ. 3:1-9, 12, 13) ಹಾಗಾಗಿ, ಅರ್ಹತೆ ಇರೋ ಸಹೋದರರನ್ನೇ ಪವಿತ್ರಶಕ್ತಿಯಿಂದ ನೇಮಿಸಲಾಗುತ್ತೆ ಅಂತ ಹೇಳಬಹುದು. ಈ ಶ್ರಮಜೀವಿಗಳಿಗೆ ಮಾಡೋಕೆ ಸಾಕಷ್ಟು ಕೆಲಸ ಇದೆ. ಉದಾಹರಣೆಗೆ, ನಂಬಿಗಸ್ತ ವೃದ್ಧರಿಗೆ ಸಹಾಯ ಸಿಗುವ ಹಾಗೆ ಹಿರಿಯರು ಏರ್ಪಾಡು ಮಾಡ್ತಾರೆ. (ಯಾಕೋ. 1:27) ಕೆಲವು ಹಿರಿಯರು ರಾಜ್ಯ ಸಭಾಗೃಹಗಳ ನಿರ್ಮಾಣ ಕೆಲಸದಲ್ಲಿ, ಅಧಿವೇಶನಗಳನ್ನ ಸಂಘಟಿಸೋದ್ರಲ್ಲಿ ಮತ್ತು ಆಸ್ಪತ್ರೆ ಸಂಪರ್ಕ ಸಮಿತಿಯಲ್ಲಿ ತುಂಬ ಕೆಲಸ ಮಾಡ್ತಿದ್ದಾರೆ. ಸಹಾಯಕ ಸೇವಕರು ಪರಿಪಾಲನೆ ಮತ್ತು ಬೋಧಿಸೋ ಕೆಲಸಕ್ಕೆ ನೇರವಾಗಿ ಸಂಬಂಧವಿಲ್ಲದ ಇತರ ಕೆಲಸಗಳನ್ನ ಮಾಡ್ತಾರೆ. ಇಂಥ ಅರ್ಹ ಸಹೋದರರು ಸಭೆಯಲ್ಲಿ, ಸಂಘಟನೆಯಲ್ಲಿ ಜವಾಬ್ದಾರಿಗಳನ್ನ ನಿರ್ವಹಿಸಬೇಕು ನಿಜ. ಅದರ ಜೊತೆಗೆ ದೇವರು ಕೊಟ್ಟಿರೋ ಸಿಹಿಸುದ್ದಿ ಸಾರೋ ಕೆಲಸವನ್ನೂ ಮಾಡಬೇಕು.—1 ಕೊರಿಂ. 9:16.

“ತುಂಬ ಜನ ದೇವರ ಬಗ್ಗೆ ಕಲಿತ್ರು” (ಅ. ಕಾ. 6:7)

21, 22. ಹೊಸದಾಗಿ ಶುರುವಾದ ಸಭೆಯನ್ನ ಯೆಹೋವ ಆಶೀರ್ವದಿಸಿದನು ಅಂತ ಹೇಗೆ ಗೊತ್ತಾಗುತ್ತೆ?

21 ಹೊಸದಾಗಿ ಶುರುವಾದ ಕ್ರೈಸ್ತ ಸಭೆಗೆ ಹೊರಗಿನಿಂದ ಹಿಂಸೆ ಬಂದ್ರೆ, ಒಳಗಿಂದ ಒಡಕು ತರೋ ಸಮಸ್ಯೆ ಬಂತು. ಆದ್ರೆ ಯೆಹೋವನ ಬೆಂಬಲದಿಂದ ಸಭೆ ಈ ಸಮಸ್ಯೆಗಳಿಂದ ಪಾರಾಯ್ತು. ಯೆಹೋವ ಈ ಸಭೆಯನ್ನ ಆಶೀರ್ವದಿಸಿದನು ಅಂತ ಈ ಮುಂದಿನ ಮಾತುಗಳಿಂದ ಗೊತ್ತಾಗುತ್ತೆ: “ತುಂಬ ಜನ ದೇವರ ಬಗ್ಗೆ ಕಲಿತ್ರು. ಯೆರೂಸಲೇಮಲ್ಲಿ ಶಿಷ್ಯರ ಸಂಖ್ಯೆ ಈ ಮುಂಚೆಗಿಂತ ತುಂಬ ಹೆಚ್ಚಾಯ್ತು. ಪುರೋಹಿತರಲ್ಲೂ ತುಂಬ ಜನ ಕ್ರಿಸ್ತನನ್ನ ನಂಬಿ ಬದಲಾದ್ರು.” (ಅ. ಕಾ. 6:7) ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಸಭೆಯ ಪ್ರಗತಿಯ ಬಗ್ಗೆ ದಾಖಲಾಗಿರೋ ಎಷ್ಟೋ ವರದಿಗಳಲ್ಲಿ ಇದು ಒಂದಷ್ಟೇ. (ಅ. ಕಾ. 9:31; 12:24; 16:5; 19:20; 28:31) ಇವತ್ತೂ, ಲೋಕದ ಬೇರೆ ಕಡೆಗಳಲ್ಲಿ ಸಿಹಿಸುದ್ದಿ ಸಾರೋ ಕೆಲಸದಲ್ಲಿ ಆಗ್ತಿರೋ ಅಭಿವೃದ್ಧಿ ಬಗ್ಗೆ ವರದಿಗಳನ್ನ ಕೇಳುವಾಗ ನಮಗೆ ಎಷ್ಟು ಪ್ರೋತ್ಸಾಹ ಸಿಗುತ್ತಲ್ವಾ?

22 ಒಂದನೇ ಶತಮಾನದಲ್ಲಿ ಆ ಕೋಪಿಷ್ಠ ಧರ್ಮಗುರುಗಳು ಹಿಂಸೆಯನ್ನ ಅಲ್ಲಿಗೆ ನಿಲ್ಲಿಸಲಿಲ್ಲ. ಇನ್ನೂ ಜಾಸ್ತಿ ಹಿಂಸೆ ಕೊಟ್ರು. ಆ ಹಿಂಸೆಗೆ ಬಲಿಯಾದವರಲ್ಲಿ ಸ್ತೆಫನ ಕೂಡ ಒಬ್ಬ. ಇದ್ರ ಬಗ್ಗೆನೇ ಮುಂದಿನ ಅಧ್ಯಾಯದಲ್ಲಿ ಚರ್ಚಿಸೋಣ.

b ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಇದೇ ಮೊದಲ ಬಾರಿ ದೇವದೂತ ಅನ್ನೋ ಪದ ಕಂಡುಬರುತ್ತೆ. ಈ ಪುಸ್ತಕದಲ್ಲಿ ಒಟ್ಟು 20 ಸಲ ಈ ಪದವಿದೆ. ಇದಕ್ಕೂ ಮುಂಚೆ ಅಪೊಸ್ತಲರ ಕಾರ್ಯ 1:10ರಲ್ಲಿ ಅವರಿಗೆ ಪರೋಕ್ಷವಾಗಿ ಸೂಚಿಸ್ತಾ “ಬಿಳಿ ಬಟ್ಟೆ ಹಾಕಿದ್ದವರು” ಅಂತ ಹೇಳಿದೆ.

e ಸಾಮಾನ್ಯವಾಗಿ ಹಿರಿಯರಿಗೆ ಇರಬೇಕಾದ ಅರ್ಹತೆಗಳೇ ಈ ಸಹೋದರರಲ್ಲೂ ಇತ್ತು. ಯಾಕಂದ್ರೆ ಈ “ಕೆಲಸ” ಮಾಡೋದು ಒಂದು ಗಂಭೀರ ಜವಾಬ್ದಾರಿ ಆಗಿತ್ತು. ಆದ್ರೆ ಕ್ರೈಸ್ತ ಸಭೆಯಲ್ಲಿ ಹಿರಿಯರು ಇಲ್ಲವೇ ಮೇಲ್ವಿಚಾರಕರನ್ನ ನೇಮಿಸೋದು ಯಾವಾಗಿಂದ ಶುರುವಾಯ್ತು ಅಂತ ಬೈಬಲ್‌ ನಿಖರವಾಗಿ ಎಲ್ಲೂ ಹೇಳಿಲ್ಲ.

f ಒಂದನೇ ಶತಮಾನದಲ್ಲಿ, ಅರ್ಹ ಸಹೋದರರು ಹಿರಿಯರನ್ನ ನೇಮಿಸುತ್ತಿದ್ರು. (ಅ. ಕಾ. 14:23; 1 ತಿಮೊ. 5:22; ತೀತ 1:5) ಇವತ್ತು, ಆಡಳಿತ ಮಂಡಲಿ ಸಂಚರಣ ಮೇಲ್ವಿಚಾರಕರನ್ನ ನೇಮಿಸುತ್ತೆ. ಈ ಮೇಲ್ವಿಚಾರಕರು ಹಿರಿಯರನ್ನ ಮತ್ತು ಸಹಾಯಕ ಸೇವಕರನ್ನ ನೇಮಿಸ್ತಾರೆ.