ಅಧ್ಯಾಯ 9
“ದೇವರು ಭೇದಭಾವ ಮಾಡಲ್ಲ”
ಸುನ್ನತಿಯಾಗದ ಯೆಹೂದ್ಯರಲ್ಲದ ಜನ್ರಿಗೆ ಕ್ರೈಸ್ತರು ಸಾರೋಕೆ ಶುರು ಮಾಡಿದ್ರು
ಆಧಾರ: ಅಪೊಸ್ತಲರ ಕಾರ್ಯ 10:1–11:30
1-3. (ಎ) ಪೇತ್ರ ಯಾವ ದರ್ಶನ ನೋಡಿದ? (ಬಿ) ಅದರ ಅರ್ಥನ ನಾವು ಯಾಕೆ ತಿಳ್ಕೊಬೇಕು?
ಕ್ರಿ.ಶ. 36ರಲ್ಲಿ ಒಂದು ದಿನ ಪೇತ್ರ ಬಂದರು ಪಟ್ಟಣ ಆಗಿದ್ದ ಯೊಪ್ಪದ ಸಮುದ್ರ ತೀರದ ಒಂದು ಮನೆಯ ಮಹಡಿ ಮೇಲಿದ್ದ. ಅವನಲ್ಲಿ ಪ್ರಾರ್ಥನೆ ಮಾಡ್ತಿದ್ದ. ಶರತ್ಕಾಲದ ಸೂರ್ಯನ ಬಿಸಿ ಅವನ ಮೈಗೆ ತಾಕ್ತಿತ್ತು. ಅವನು ಆ ಮನೆಯಲ್ಲಿ ತುಂಬ ದಿನಗಳಿಂದ ಅತಿಥಿಯಾಗಿದ್ದ. ಆ ಮನೆ ಮಾಲಿಕನ ಹೆಸ್ರು ಸೀಮೋನ. ಅವನು ಚರ್ಮಕಾರನಾಗಿದ್ದ. ಇಂಥ ಕೆಲ್ಸ ಮಾಡ್ತಿದ್ದ ವ್ಯಕ್ತಿಯ ಮನೆಯಲ್ಲಿ ಹೆಚ್ಚಿನ ಯೆಹೂದ್ಯರು ಉಳ್ಕೊತಿರಲಿಲ್ಲ. a ಆದ್ರೆ ಪೇತ್ರ ಅಲ್ಲಿ ಉಳ್ಕೊಂಡ. ಹೀಗೆ ತನ್ನಲ್ಲಿ ಯಾವುದೇ ರೀತಿ ಭೇದಭಾವ ಇಲ್ಲ ಅಂತ ತೋರಿಸ್ಕೊಟ್ಟ. ಆದ್ರೂ ಯೆಹೋವ ದೇವರು ಕಿಂಚಿತ್ತೂ ಭೇದಭಾವ ಮಾಡಲ್ಲ ಅನ್ನೋ ದೊಡ್ಡ ಪಾಠನ ಪೇತ್ರ ಕಲಿಬೇಕಿತ್ತು.
2 ಪೇತ್ರ ಪ್ರಾರ್ಥನೆ ಮಾಡ್ತಿದ್ದಾಗ ಒಂದು ದರ್ಶನ ನೋಡ್ದ. ಈ ದರ್ಶನವನ್ನ ಯಾವ ಯೆಹೂದ್ಯ ನೋಡಿದ್ರೂ ಅವನ ನೆಮ್ಮದಿ ಹಾಳಾಗ್ತಿತ್ತು. ಯಾಕಂದ್ರೆ ಆ ದರ್ಶನದಲ್ಲಿ ಸ್ವರ್ಗದಿಂದ ಪಾತ್ರೆ ಆಕಾರದ ಒಂದು ದೊಡ್ಡ ಬಟ್ಟೆ ಇಳಿದುಬಂತು. ಅದ್ರಲ್ಲಿ ನಿಯಮ ಪುಸ್ತಕದ ಪ್ರಕಾರ ಅಶುದ್ಧವಾಗಿದ್ದ ಪ್ರಾಣಿಗಳು ಇದ್ವು. ಇವುಗಳನ್ನ ಕಡಿದು ತಿನ್ನೋಕೆ ಪೇತ್ರನಿಗೆ ಹೇಳಲಾಯ್ತು. ಆಗ ಪೇತ್ರ, “ನಿಯಮ ಪುಸ್ತಕದ ಪ್ರಕಾರ ಅಶುದ್ಧ ಆಗಿರೋದನ್ನ ಮತ್ತು ಅಪವಿತ್ರ ಆಗಿರೋದನ್ನ ನಾನು ಯಾವತ್ತೂ ತಿಂದಿಲ್ಲ” ಅಂತ ಹೇಳಿದ. ಅದಕ್ಕೆ ಅವನಿಗೆ, “ದೇವರು ಶುದ್ಧ ಮಾಡಿರೋದನ್ನ ನೀನು ಅಶುದ್ಧ ಅನ್ನೋದನ್ನ ನಿಲ್ಲಿಸು” ಅಂತ ಉತ್ರ ಬಂತು. ಈ ತರ ಒಂದು ಸಲ ಅಲ್ಲ, ಮೂರು ಸಲ ಉತ್ರ ಬಂತು! (ಅ. ಕಾ. 10:14-16) ಈ ದರ್ಶನ ನೋಡಿದ ಪೇತ್ರನ ಮನಸ್ಸಲ್ಲಿ ಗೊಂದಲವೋ ಗೊಂದಲ. ಆದ್ರೆ ಈ ಗೊಂದಲವನ್ನ ಯೆಹೋವ ಬೇಗ ಬಗೆಹರಿಸಿದನು.
3 ಪೇತ್ರ ನೋಡಿದ ದರ್ಶನದ ಅರ್ಥ ಏನಾಗಿತ್ತು? ಇದ್ರ ಬಗ್ಗೆ ನಾವು ತಿಳ್ಕೊಳ್ಳೋದು ತುಂಬಾ ಮುಖ್ಯ. ಯಾಕಂದ್ರೆ ಇದ್ರಿಂದ ಯೆಹೋವ ದೇವರು ಜನ್ರನ್ನ ಹೇಗೆ ನೋಡ್ತಾನೆ ಅನ್ನೋ ಒಂದು ಮುಖ್ಯ ಸತ್ಯ ಗೊತ್ತಾಗುತ್ತೆ. ಯೆಹೋವ ದೇವರು ಜನ್ರನ್ನ ಹೇಗೆ ನೋಡ್ತಾನೋ ಅದೇ ತರ ನಾವು ಜನ್ರನ್ನ ನೋಡಿದ್ರೆ ಮಾತ್ರ ನಾವು ಅವ್ರಿಗೆ ದೇವರ ಸರ್ಕಾರದ ಬಗ್ಗೆ ಚೆನ್ನಾಗಿ ಸಾಕ್ಷಿ ಕೊಡೋಕೆ ಆಗುತ್ತೆ. ಹಾಗಾಗಿ ಪೇತ್ರ ನೋಡಿದ ದರ್ಶನದ ಅರ್ಥವನ್ನ ತಿಳ್ಕೊಳ್ಳೋಣ. ಇದನ್ನ ತಿಳ್ಕೊಬೇಕಂದ್ರೆ ಆ ದರ್ಶನದ ಮುಂಚೆ ಮತ್ತು ಆಮೇಲೆ ನಡೆದ ಘಟನೆಗಳ ಬಗ್ಗೆ ಮೊದಲು ಚರ್ಚೆ ಮಾಡಬೇಕು.
ಅ. ಕಾ. 10:1-8)
“ತಪ್ಪದೆ ದೇವ್ರಿಗೆ ಪ್ರಾರ್ಥನೆ ಮಾಡ್ತಾ ಇದ್ದ” (4, 5. (ಎ) ಕೊರ್ನೇಲ್ಯ ಯಾರು? (ಬಿ) ಅವನು ಪ್ರಾರ್ಥನೆ ಮಾಡ್ತಿದ್ದಾಗ ಏನಾಯ್ತು?
4 ಹಿಂದಿನ ದಿನ ಕೈಸರೈಯದಲ್ಲಿ ಆದ ವಿಷ್ಯದ ಬಗ್ಗೆ ಪೇತ್ರನಿಗೆ ಏನೂ ಗೊತ್ತಿರಲಿಲ್ಲ. ಯೊಪ್ಪದಿಂದ ಉತ್ತರ ದಿಕ್ಕಿನಲ್ಲಿ ಸುಮಾರು 50 ಕಿ.ಮೀ. ದೂರದಲ್ಲಿ ಕೊರ್ನೇಲ್ಯ ಅನ್ನೋ ವ್ಯಕ್ತಿಗೂ ದೇವರು ಒಂದು ದರ್ಶನ ತೋರಿಸಿದ್ದನು. ರೋಮನ್ ಸೈನ್ಯದಲ್ಲಿ ಶತಾಧಿಪತಿಯಾಗಿದ್ದ ಕೊರ್ನೇಲ್ಯನಿಗೆ “ದೇವ್ರ ಮೇಲೆ ತುಂಬ ಭಯಭಕ್ತಿ ಇತ್ತು.” b ಅಷ್ಟೇ ಅಲ್ಲ “ಅವನ ಕುಟುಂಬದವ್ರಿಗೂ” ದೇವರ ಮೇಲೆ ಭಯಭಕ್ತಿ ಇತ್ತು. ಇದ್ರಿಂದ ಅವನು ಅವನ ಕುಟುಂಬನ ಚೆನ್ನಾಗಿ ನೋಡ್ಕೊಳ್ತಾ ಇದ್ದ ಅಂತ ಗೊತ್ತಾಗುತ್ತೆ. ಅವನು ಯೆಹೂದ್ಯನಾಗಿ ಮತಾಂತರನೂ ಆಗಿರಲಿಲ್ಲ, ಸುನ್ನತಿನೂ ಆಗಿರಲಿಲ್ಲ. ಹಾಗಿದ್ರೂ ಕಷ್ಟದಲ್ಲಿರೋ ಯೆಹೂದ್ಯರಿಗೆ ಕರುಣೆ ತೋರಿಸಿ, ಸಹಾಯ ಮಾಡ್ತಿದ್ದ. ಈ ಒಳ್ಳೇ ಮನಸ್ಸಿನ ವ್ಯಕ್ತಿ “ತಪ್ಪದೆ ದೇವ್ರಿಗೆ ಪ್ರಾರ್ಥನೆ ಮಾಡ್ತಾ ಇದ್ದ.”—ಅ. ಕಾ. 10:2.
5 ಮಧ್ಯಾಹ್ನ ಸುಮಾರು 3 ಗಂಟೆಗೆ ಕೊರ್ನೇಲ್ಯ ಪ್ರಾರ್ಥನೆ ಮಾಡ್ತಿದ್ದ. ಆಗ ಅವನು ಒಂದು ದರ್ಶನ ನೋಡಿದ. ಅದ್ರಲ್ಲಿ ಒಬ್ಬ ದೇವದೂತ ಅವನಿಗೆ, “ನಿನ್ನ ಪ್ರಾರ್ಥನೆ ದೇವ್ರಿಗೆ ಕೇಳಿಸಿದೆ. ನೀನು ಬಡವರಿಗೆ ಸಹಾಯ ಮಾಡಿದ್ದನ್ನ ಆತನು ನೋಡಿದ್ದಾನೆ” ಅಂತ ಹೇಳಿದ. (ಅ. ಕಾ. 10:4) ಕೊರ್ನೇಲ್ಯ ದೇವದೂತ ಹೇಳಿದ ತರ ಅಪೊಸ್ತಲ ಪೇತ್ರನನ್ನ ಮನೆಗೆ ಕರೆಯೋಕೆ ಸೇವಕರನ್ನ ಕಳಿಸಿದ. ಸುನ್ನತಿಯಾಗದ ಯೆಹೂದ್ಯರಲ್ಲದ ಜನ್ರಿಗೆ ಅಲ್ಲಿ ತನಕ ಮುಚ್ಚಿದ್ದ ರಕ್ಷಣೆಯ ಬಾಗಿಲು ತೆರೀತು. ಹೀಗೆ ಯೆಹೂದ್ಯರಲ್ಲದ ಜನರಲ್ಲಿ ಕ್ರೈಸ್ತರಾದವರಲ್ಲಿ ಕೊರ್ನೇಲ್ಯ ಮೊದಲನೆಯವನಾದ.
6, 7. (ಎ) ತನ್ನ ಬಗ್ಗೆ ಸತ್ಯ ತಿಳ್ಕೊಳ್ಳೋಕೆ ಇಷ್ಟ ಪಡೋ ಒಳ್ಳೇ ಜನರ ಪ್ರಾರ್ಥನೆಗಳಿಗೆ ದೇವರು ಉತ್ರ ಕೊಡ್ತಾನೆ ಅನ್ನೋದಕ್ಕೆ ಒಂದು ಅನುಭವ ಹೇಳಿ. (ಬಿ) ಇಂಥ ಅನುಭವಗಳಿಂದ ನಮಗೇನು ಗೊತ್ತಾಗುತ್ತೆ?
6 ದೇವರ ಬಗ್ಗೆ ಸತ್ಯ ತಿಳ್ಕೊಳ್ಳೋಕೆ ಇಷ್ಟಪಡೋ ಒಳ್ಳೇ ಜನರ ಪ್ರಾರ್ಥನೆಗಳಿಗೆ ಆತನು ಇವತ್ತೂ ಉತ್ರ ಕೊಡ್ತಾನಾ? ಅದಕ್ಕೊಂದು ಅನುಭವ ನೋಡೋಣ. ಅಲ್ಬೇನಿಯದ ಒಬ್ಬ ಸ್ತ್ರೀ, ಯೆಹೋವನ ಸಾಕ್ಷಿಯಿಂದ ಒಂದು ಕಾವಲಿನಬುರುಜು ಪತ್ರಿಕೆ ತಗೊಂಡಳು. ಅದ್ರಲ್ಲಿ, ಮಕ್ಕಳನ್ನ ಬೆಳೆಸೋ ಬಗ್ಗೆ ಒಂದು ಲೇಖನ ಇತ್ತು. c ಮನೆಬಾಗಿಲಿಗೆ ಬಂದಿದ್ದ ಆ ಸಾಕ್ಷಿಗೆ ಅವಳು ಹೀಗಂದಳು: “ನಿಮ್ಗೆ ಗೊತ್ತಾ, ನಾನು ನನ್ನ ಹೆಣ್ಮಕ್ಕಳನ್ನ ಚೆನ್ನಾಗಿ ಬೆಳೆಸೋಕೆ ಸಹಾಯ ಮಾಡಪ್ಪಾ ಅಂತ ದೇವರಿಗೆ ಪ್ರಾರ್ಥನೆ ಮಾಡ್ತಿದ್ದೆ. ಆತನೇ ನಿಮ್ಮನ್ನ ಕಳಿಸಿದ್ದಾನೆ ಅನ್ಸುತ್ತೆ! ನಂಗೆ ಏನ್ ಬೇಕಾಗಿತ್ತೋ ಆ ಮಾಹಿತಿಯನ್ನೇ ನೀವು ಕೊಟ್ಟಿದ್ದೀರ.” ಈ ಸ್ತ್ರೀ ಮತ್ತು ಅವಳ ಇಬ್ರು ಹೆಣ್ಮಕ್ಕಳು ಬೈಬಲ್ ಕಲಿಯೋಕೆ ಶುರುಮಾಡಿದ್ರು. ಆಮೇಲೆ ಅವಳ ಗಂಡ ಕೂಡ ಕಲಿತ.
7 ಈ ತರ ಎಲ್ಲೊ ಅಪರೂಪಕ್ಕೆ ಒಂದು ಸಲ ನಡೆಯುತ್ತಾ? ಇಲ್ಲ! ಭೂಮಿಯ ಎಲ್ಲಾ ಕಡೆ ಎಷ್ಟೋ ಸಲ ಈ ತರ ನಡೆದಿದೆ. ಹಾಗಾಗಿ ಇದು ಆಕಸ್ಮಿಕ ಅಲ್ಲ. ಇದ್ರಿಂದ ನಮಗೇನು ಗೊತ್ತಾಗುತ್ತೆ? ಒಂದು, ಯೆಹೋವನನ್ನ ಹುಡುಕೋ ಒಳ್ಳೇ ಜನರ ಪ್ರಾರ್ಥನೆಗಳಿಗೆ ಆತನು ಉತ್ರ ಕೊಡ್ತಾನೆ. (1 ಅರ. 8:41-43; ಕೀರ್ತ. 65:2) ಎರಡು, ಸಾರೋ ಕೆಲಸಕ್ಕೆ ದೇವದೂತರ ಬೆಂಬಲ ಇದೆ.—ಪ್ರಕ. 14:6, 7.
“ಪೇತ್ರ ಯೋಚಿಸ್ತಾ ಇದ್ದ” (ಅ. ಕಾ. 10:9-23ಎ)
8, 9. (ಎ) ಪೇತ್ರನಿಗೆ ಪವಿತ್ರಶಕ್ತಿ ಏನಂತ ಹೇಳ್ತು? (ಬಿ) ಅದಕ್ಕೆ ಪೇತ್ರ ಹೇಗೆ ಪ್ರತಿಕ್ರಿಯಿಸಿದ?
8 ಮಹಡಿ ಮೇಲೆ ನಿಂತ್ಕೊಂಡು “ಆ ದರ್ಶನದ ಅರ್ಥ ಏನು ಅಂತ ಪೇತ್ರ ಯೋಚಿಸ್ತಾ ಇದ್ದ.” ಆಗ ಕೊರ್ನೇಲ್ಯ ಕಳಿಸಿದ ಸೇವಕರು ಮನೆ ಹತ್ರ ಬಂದ್ರು. (ಅ. ಕಾ. 10:17) ನಿಯಮ ಪುಸ್ತಕದ ಪ್ರಕಾರ ಅಶುದ್ಧವಾದ ಆಹಾರ ತಿನ್ನೋದೇ ಇಲ್ಲ ಅಂತ ಮೂರು ಸಲ ಹೇಳಿದ ಪೇತ್ರ ಆ ಜನರ ಜೊತೆ ಯೆಹೂದ್ಯನಲ್ಲದ ಒಬ್ಬ ವ್ಯಕ್ತಿ ಮನೆಗೆ ಹೋಗೋದಕ್ಕೆ ಸಿದ್ಧನಾದನಾ? ಈ ವಿಷ್ಯದ ಬಗ್ಗೆ ಯೆಹೋವ ದೇವರು ತನ್ನಿಷ್ಟ ಏನು ಅಂತ ಪವಿತ್ರಶಕ್ತಿ ಮೂಲಕ ಪೇತ್ರನಿಗೆ ಹೀಗೆ ಹೇಳಿದನು: “ನೋಡು, ಮೂರು ಜನ ನಿನ್ನನ್ನ ಹುಡ್ಕೊಂಡು ಬಂದಿದ್ದಾರೆ. ನೀನು ಕೆಳಗಿಳಿದು ಅವ್ರ ಜೊತೆ ಹೋಗು. ಒಂಚೂರೂ ಸಂಶಯಪಡಬೇಡ. ನಾನೇ ಅವ್ರನ್ನ ಕಳಿಸಿದ್ದೀನಿ.” (ಅ. ಕಾ. 10:19, 20) ಅಶುದ್ಧ ಪ್ರಾಣಿಗಳ ಬಗ್ಗೆ ಪೇತ್ರ ನೋಡಿದ ದರ್ಶನ, ಪವಿತ್ರಶಕ್ತಿ ಮಾರ್ಗದರ್ಶಿಸೋ ಪ್ರಕಾರ ನಡ್ಕೊಳ್ಳೋಕೆ ಅವನನ್ನ ಸಿದ್ಧಮಾಡ್ತು ಅನ್ನೋದ್ರಲ್ಲಿ ಸಂಶಯನೇ ಇಲ್ಲ.
9 ತನ್ನನ್ನ ಕರ್ಕೊಂಡು ಹೋಗೋಕೆ ಕೊರ್ನೇಲ್ಯನಿಗೆ ದೇವರಿಂದಾನೇ ಸೂಚನೆ ಸಿಕ್ಕಿದೆ ಅಂತ ಪೇತ್ರನಿಗೆ ಗೊತ್ತಾದಾಗ ಅವನು ಯೆಹೂದ್ಯರಲ್ಲದ ಆ ಸೇವಕರನ್ನ ಮನೆ ಒಳಗೆ ಕರೆದು “ಅತಿಥಿಸತ್ಕಾರ ಮಾಡಿದ.” (ಅ. ಕಾ. 10:23ಎ) ಹೀಗೆ ದೇವರ ಇಷ್ಟದ ಬಗ್ಗೆ ಗೊತ್ತಾದಾಗ ಈ ಅಪೊಸ್ತಲ ತನ್ನ ಯೋಚ್ನೆನ ಅದಕ್ಕೆ ತಕ್ಕ ಹಾಗೆ ಹೊಂದಿಸ್ಕೊಳ್ಳೋಕೆ ಶುರುಮಾಡಿದ್ದ.
10. (ಎ) ಯೆಹೋವ ತನ್ನ ಜನ್ರನ್ನ ಹೇಗೆ ನಡಿಸ್ತಾನೆ? (ಬಿ) ನಾವು ಯಾವ ಪ್ರಶ್ನೆಗಳನ್ನ ಕೇಳ್ಕೊಬೇಕು?
10 ಇವತ್ತಿನ ತನಕ ಯೆಹೋವ ತನ್ನ ಇಷ್ಟದ ಬಗ್ಗೆ ಹಂತಹಂತವಾಗಿ ತಿಳಿಸ್ತಾ ಜನ್ರನ್ನ ನಡೆಸ್ತಾ ಬಂದಿದ್ದಾನೆ. (ಜ್ಞಾನೋ. 4:18) ‘ನಂಬಿಗಸ್ತ, ವಿವೇಕಿ ಆದ ಆಳನ್ನ’ ತನ್ನ ಪವಿತ್ರಶಕ್ತಿಯ ಮೂಲಕ ಮಾರ್ಗದರ್ಶಿಸ್ತಿದ್ದಾನೆ. (ಮತ್ತಾ. 24:45) ಕೆಲವೊಮ್ಮೆ ದೇವರ ವಾಕ್ಯದ ಬಗ್ಗೆ ನಮಗೆ ಹೊಸ ತಿಳುವಳಿಕೆ ಸಿಗುತ್ತೆ ಅಥವಾ ಸಂಘಟನೆ ಕೆಲಸ ಮಾಡೋ ವಿಧಾನದಲ್ಲಿ ಬದಲಾವಣೆ ಆಗುತ್ತೆ. ಆಗೆಲ್ಲ ನಾವು ಹೀಗೆ ಕೇಳ್ಕೊಬೇಕು: ‘ಇಂಥ ಬದಲಾವಣೆ ಆದಾಗ ನಾನೇನ್ ಮಾಡ್ತೀನಿ? ಇಂಥ ಬದಲಾವಣೆ ಆಗಿರೋದಕ್ಕೆ ದೇವರ ಪವಿತ್ರಶಕ್ತಿನೇ ಕಾರಣ ಅಂತ ನಂಬಿ ಅದಕ್ಕೆ ಬೆಂಬಲ ಕೊಡ್ತೀನಾ?’
ಪೇತ್ರ “ದೀಕ್ಷಾಸ್ನಾನ ತಗೊಳ್ಳೋಕೆ ಆಜ್ಞೆ ಕೊಟ್ಟ” (ಅ. ಕಾ. 10:23ಬಿ-48)
11, 12. (ಎ) ಪೇತ್ರ ಕೈಸರೈಯಕ್ಕೆ ಹೋದಾಗ ಏನು ಮಾಡಿದ? (ಬಿ) ಅವನು ಯಾವ ವಿಷ್ಯ ಕಲಿತ?
11 ಆ ದರ್ಶನ ನೋಡಿದ ಮಾರನೇ ದಿನ ಪೇತ್ರ ಕೈಸರೈಯಕ್ಕೆ ಹೋದ. ಅವನ ಜೊತೆ ಒಂಭತ್ತು ಮಂದಿ ಅಂದ್ರೆ ಕೊರ್ನೇಲ್ಯ ಕಳಿಸಿದ ಮೂರು ಜನ ಮತ್ತು ಯೊಪ್ಪದ “ಆರು ಮಂದಿ [ಯೆಹೂದಿ] ಸಹೋದರರು” ಇದ್ರು. (ಅ. ಕಾ. 11:12) ಪೇತ್ರ ಬರ್ತಾನೆ ಅಂತ ಕಾಯ್ತಿದ್ದ ಕೊರ್ನೇಲ್ಯ, “ತನ್ನ ಸಂಬಂಧಿಕರನ್ನೂ ಆಪ್ತ ಸ್ನೇಹಿತರನ್ನೂ” ಮನೆಯಲ್ಲಿ ಒಟ್ಟು ಸೇರಿಸಿದ್ದ. (ಅ. ಕಾ. 10:24) ಬಹುಶಃ ಇವರೂ ಯೆಹೂದ್ಯರಲ್ಲ. ಪೇತ್ರ ಕೈಸರೈಯಕ್ಕೆ ಬಂದಾಗ ಅವನು ಕನಸುಮನಸ್ಸಲ್ಲೂ ನೆನಸದ ಒಂದು ಕೆಲಸ ಮಾಡಿದ. ಸುನ್ನತಿಯಾಗದ ಯೆಹೂದ್ಯನಲ್ಲದ ಒಬ್ಬ ವ್ಯಕ್ತಿಯ ಮನೆ ಒಳಗೆ ಹೋದ! ಅವನು ಇದರ ಬಗ್ಗೆ ಹೀಗೆ ಹೇಳಿದ: “ಯೆಹೂದ್ಯರ ನಿಯಮದ ಪ್ರಕಾರ ಒಬ್ಬ ಯೆಹೂದ್ಯ ಬೇರೆ ಜಾತಿಯ ವ್ಯಕ್ತಿಯ ಜೊತೆ ಸಹವಾಸ ಮಾಡೋದು, ಅವನನ್ನ ಭೇಟಿ ಮಾಡೋದು ತಪ್ಪು ಅಂತ ನಿಮಗೆ ಗೊತ್ತು. ಆದ್ರೂ ನಾನು ಯಾವ ಮನುಷ್ಯನನ್ನೂ ಅಪವಿತ್ರ ಅಂತಾಗಲಿ ಕೆಟ್ಟವನು ಅಂತಾಗಲಿ ಹೇಳಬಾರದು ಅಂತ ದೇವರು ನನಗೆ ತೋರಿಸಿದ್ದಾನೆ.” (ಅ. ಕಾ. 10:28) ಆ ದರ್ಶನನಾ ದೇವರು ತನಗೆ ಯಾಕೆ ತೋರಿಸಿದ್ದಾನೆ ಅಂತ ಪೇತ್ರನಿಗೆ ಅರ್ಥ ಆಯ್ತು. ಆ ದರ್ಶನದಿಂದ ಯಾವುದೇ ಆಹಾರವನ್ನ ಅಪವಿತ್ರ ಅನ್ನಬಾರದು ಅಂತ ಅಷ್ಟೇ ಅಲ್ಲ, ಬದಲಿಗೆ, ‘ಯಾವ ಮನುಷ್ಯನನ್ನೂ [ಯೆಹೂದ್ಯನಲ್ಲದ ವ್ಯಕ್ತಿಯನ್ನ ಕೂಡ] ಅಪವಿತ್ರ ಅಂತ ಹೇಳಬಾರದು’ ಅನ್ನೋ ಪಾಠ ಕಲಿತ.
12 ಕೊರ್ನೇಲ್ಯನ ಮನೆಗೆ ಬಂದಿದ್ದ ಎಲ್ಲರೂ ಪೇತ್ರ ಏನು ಹೇಳ್ತಾನೆ ಅಂತ ಕಾಯ್ತಿದ್ರು. ಆಗ ಕೊರ್ನೇಲ್ಯ “ನೀನು ಹೇಳೋದನ್ನ ಕೇಳಿಸ್ಕೊಳ್ಳೋಕೆ ನಾವು ದೇವ್ರ ಮುಂದೆ ನಿಂತಿದ್ದೀವಿ. ಯೆಹೋವ ನಿನಗೆ ಹೇಳು ಅಂತ ಅಂದಿದ್ದನ್ನೆಲ್ಲ ದಯವಿಟ್ಟು ನಮಗೆ ಹೇಳು” ಅಂದ. (ಅ. ಕಾ. 10:33) ನಿಮ್ಮ ಹತ್ರ ಯಾರಾದ್ರೂ ಹೀಗೆ ಹೇಳಿದ್ರೆ ನಿಮಗೆ ಹೇಗನಿಸುತ್ತೆ! ಪೇತ್ರ ಮಾತಾಡೋಕೆ ಶುರುಮಾಡಿ ಒಂದು ಪ್ರಾಮುಖ್ಯ ಸತ್ಯನ ಹೇಳಿದ: “ದೇವರು ಭೇದಭಾವ ಮಾಡಲ್ಲ ಅಂತ ಈಗ ಚೆನ್ನಾಗಿ ಅರ್ಥ ಆಗಿದೆ. ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ.” (ಅ. ಕಾ. 10:34, 35) ಯೆಹೋವ ದೇವರು ಜನರ ಕುಲ, ದೇಶ ಅಥವಾ ಬೇರೆ ಯಾವುದೇ ವಿಷ್ಯಗಳ ಆಧಾರದ ಮೇಲೆ ಅವ್ರಿಗೆ ಭೇದಭಾವ ಮಾಡಲ್ಲ ಅಂತ ಪೇತ್ರ ಕಲಿತಿದ್ದ. ಹಾಗಾಗಿ ಅವನು ಅವ್ರಿಗೆ ಯೇಸು ಮಾಡಿದ್ದ ಸೇವೆ ಬಗ್ಗೆ, ಆತನು ಸತ್ತು ಹೇಗೆ ಮತ್ತೆ ಜೀವಂತವಾಗಿ ಎದ್ದು ಬಂದನು ಅನ್ನೋದ್ರ ಬಗ್ಗೆ ಸಾಕ್ಷಿ ಕೊಟ್ಟ.
13, 14. (ಎ) ಕ್ರಿ.ಶ. 36ರಲ್ಲಿ ಕೊರ್ನೇಲ್ಯ ಮತ್ತು ಯೆಹೂದ್ಯರಲ್ಲದ ಇನ್ನೂ ಬೇರೆ ಜನ್ರು ಕ್ರೈಸ್ತರಾಗಿದ್ದು ಏನನ್ನ ಸೂಚಿಸ್ತು? (ಬಿ) ಜನರು ನೋಡೋಕೆ ಹೇಗಿದ್ದಾರೆ ಅನ್ನೋದ್ರ ಮೇಲೆ ಅವರ ಬಗ್ಗೆ ತೀರ್ಪು ಮಾಡಬಾರದು ಯಾಕೆ?
13 ಅವತ್ತು ಹಿಂದೆ ಯಾವತ್ತೂ ನಡೀದೆ ಇರೋ ಒಂದು ಘಟನೆ ನಡೀತು. “ಪೇತ್ರ ಹೀಗೆ ಮಾತಾಡ್ತಿರುವಾಗಲೇ” ಅಲ್ಲಿದ್ದ ‘ಯೆಹೂದ್ಯರಲ್ಲದ ಜನ್ರ ಮೇಲೆ’ ಪವಿತ್ರಶಕ್ತಿ ಬಂತು. (ಅ. ಕಾ. 10:44, 45) ದೀಕ್ಷಾಸ್ನಾನಕ್ಕೆ ಮುಂಚೆನೇ ಪವಿತ್ರಶಕ್ತಿ ಪಡ್ಕೊಂಡವರ ಬಗ್ಗೆ ಬೈಬಲಿನಲ್ಲಿರೋ ಒಂದೇ ಒಂದು ದಾಖಲೆ ಇದು. ಪವಿತ್ರಶಕ್ತಿ ಸಿಕ್ಕಿದ್ದು, ದೇವರು ಯೆಹೂದ್ಯರಲ್ಲದ ಜನ್ರನ್ನೂ ಆರಿಸ್ಕೊಳ್ತಾನೆ ಅನ್ನೋದಕ್ಕೆ ಒಂದು ಗುರುತಾಗಿತ್ತು ಅಂತ ಪೇತ್ರ ಅರ್ಥ ಮಾಡ್ಕೊಂಡ. ಅದಕ್ಕೇ ಆ ಜನ್ರಿಗೆ “ದೀಕ್ಷಾಸ್ನಾನ ತಗೊಳ್ಳೋಕೆ ಆಜ್ಞೆ ಕೊಟ್ಟ.” (ಅ. ಕಾ. 10:48) ಕ್ರಿ.ಶ. 36ರಲ್ಲಿ ಯೆಹೂದ್ಯರಲ್ಲದ ಈ ಜನರು ಕ್ರೈಸ್ತರಾಗಿದ್ದು, ಯೆಹೂದ್ಯರಿಗೆ ತೋರಿಸಿದ ವಿಶೇಷ ಕೃಪೆಯ ಕಾಲ ಮುಗಿತು ಅನ್ನೋದನ್ನ ಸೂಚಿಸ್ತು. (ದಾನಿ. 9:24-27) ಹೀಗೆ ಪೇತ್ರ “ಸ್ವರ್ಗದ ಆಳ್ವಿಕೆಯ” ಮೂರನೇ ಅಥವಾ ಕೊನೇ ‘ಬೀಗದ ಕೈಯನ್ನ’ ಬಳಸಿದ. (ಮತ್ತಾ. 16:19) ಈ ಬೀಗದಕೈ ಸುನ್ನತಿಯಾಗದ ಯೆಹೂದ್ಯರಲ್ಲದ ಜನ್ರಿಗೆ ಅಭಿಷಿಕ್ತ ಕ್ರೈಸ್ತರಾಗೋ ಅವಕಾಶದ ಬಾಗಿಲನ್ನ ತೆರೀತು.
14 ಇವತ್ತು ಕೂಡ “ದೇವರು ಭೇದಭಾವ ಮಾಡಲ್ಲ” ಅಂತ ನಮಗೆ ಗೊತ್ತು. (ರೋಮ. 2:11) “ಎಲ್ಲ ತರದ ಜನ್ರು ರಕ್ಷಣೆ ಪಡಿಬೇಕು” ಅನ್ನೋದೇ ದೇವರ ಇಷ್ಟ. (1 ತಿಮೊ. 2:4) ಹಾಗಾಗಿ ಸಿಹಿಸುದ್ದಿ ಸಾರೋವಾಗ ನಾವು ಯಾವತ್ತೂ ಜನರು ನೋಡೋಕೆ ಹೇಗಿದ್ದಾರೆ ಅನ್ನೋದ್ರ ಮೇಲೆ ತೀರ್ಪು ಮಾಡಬಾರದು. ಯೇಸು ನಮ್ಗೆ ದೇವರ ಆಳ್ವಿಕೆ ಬಗ್ಗೆ ಸಾರಿ ಅಂತ ಹೇಳಿದ್ದಾನೆ. ಇದರರ್ಥ ನಾವು ಎಲ್ಲರಿಗೂ ಅಂದ್ರೆ ಎಲ್ಲಾ ಕುಲ, ದೇಶ, ಧರ್ಮದವರಿಗೂ ಸಾರಬೇಕು. ಅವರು ನೋಡೋಕೆ ಹೇಗೇ ಇರಲಿ ಪ್ರತಿಯೊಬ್ರಿಗೂ ಸಾರಬೇಕು.
‘ವಾದ ಮಾಡೋದನ್ನ ನಿಲ್ಲಿಸಿ, ದೇವರನ್ನ ಹಾಡಿಹೊಗಳಿದ್ರು’ (ಅ. ಕಾ. 11:1-18)
15, 16. (ಎ) ಕೆಲವು ಯೆಹೂದಿ ಕ್ರೈಸ್ತರು ಪೇತ್ರನ ಜೊತೆ ಯಾಕೆ ವಾದ ಮಾಡಿದ್ರು? (ಬಿ) ಪೇತ್ರ ತಾನು ಮಾಡಿದಕ್ಕೆ ಯಾವ ಕಾರಣಗಳನ್ನ ಕೊಟ್ಟ?
15 ನಡೆದ ಈ ಎಲ್ಲ ವಿಷ್ಯಗಳನ್ನ ಕೂಡಲೇ ವರದಿಸಬೇಕು ಅನ್ನೋ ಉತ್ಸಾಹದಿಂದ ಪೇತ್ರ ಯೆರೂಸಲೇಮಿಗೆ ಹೋದ. ಆದ್ರೆ ಯೆಹೂದ್ಯರಲ್ಲದ ಜನರೂ “ದೇವರ ಸಂದೇಶ ನಂಬಿದ್ದಾರೆ” ಅನ್ನೋ ಸುದ್ದಿ ಅವನು ಅಲ್ಲಿ ತಲುಪೋ ಮುಂಚೆನೇ ಯೆರೂಸಲೇಮಿನ ಸಹೋದರರಿಗೆ ಗೊತ್ತಾಗಿತ್ತು. ಪೇತ್ರ ಅಲ್ಲಿ ಹೋದ ತಕ್ಷಣ, “ಬೇರೆ ಜಾತಿಯ ಜನ್ರೂ ಸುನ್ನತಿ ಮಾಡಿಸ್ಕೊಳ್ಳಬೇಕು ಹಠಮಾಡ್ತಿದ್ದ ಜನ ಅವನ ಜೊತೆ ಜಗಳ ಮಾಡೋಕೆ ಶುರುಮಾಡಿದ್ರು.” ಅವನು ‘ಸುನ್ನತಿಯಾಗದ ಜನ್ರ ಮನೆಗೆ ಹೋಗಿದ್ದು, ಅವ್ರ ಜೊತೆ ಊಟ ಮಾಡಿದ್ದನ್ನ’ ಕೇಳಿಸ್ಕೊಂಡಾಗ ಅವ್ರಿಗೆ ತುಂಬಾ ಕೋಪ ಬಂತು. (ಅ. ಕಾ. 11:1-3) ಯೆಹೂದ್ಯರಲ್ಲದ ಜನ್ರು ಕ್ರಿಸ್ತನ ಶಿಷ್ಯರಾಗಬಹುದಾ ಇಲ್ವಾ ಅನ್ನೋದ್ರ ಬಗ್ಗೆ ಈ ಯೆಹೂದಿ ಶಿಷ್ಯರು ಜಗಳ ಮಾಡಲಿಲ್ಲ. ಬದಲಿಗೆ ಅವರು ಯೆಹೋವನನ್ನ ಸರಿಯಾದ ರೀತಿಯಲ್ಲಿ ಆರಾಧಿಸಬೇಕಾದ್ರೆ ನಿಯಮ ಪುಸ್ತಕವನ್ನ, ಅದ್ರಲ್ಲೂ ಸುನ್ನತಿಯ ನಿಯಮವನ್ನ ಪಾಲಿಸಬೇಕಂತ ಹಠಹಿಡಿದ್ರು. ಈ ಯೆಹೂದಿ ಶಿಷ್ಯರಲ್ಲಿ ಕೆಲವ್ರಿಗೆ ಮೋಶೆಯ ನಿಯಮ ಪುಸ್ತಕವನ್ನ ಬಿಟ್ಟುಕೊಡೋಕೆ ಆಗ್ತಿರಲಿಲ್ಲ ಅಂತ ಇದ್ರಿಂದ ಸ್ಪಷ್ಟವಾಗಿ ಗೊತ್ತಾಗುತ್ತೆ.
16 ಪೇತ್ರ ಕೈಸರೈಯದಲ್ಲಿ ತಾನು ಯಾಕೆ ಹಾಗೆ ಮಾಡ್ದೆ ಅನ್ನೋದಕ್ಕೆ ಕಾರಣಗಳನ್ನ ಕೊಟ್ಟ. ಅಪೊಸ್ತಲರ ಕಾರ್ಯ 11:4-16ರ ಪ್ರಕಾರ ಅವನು, ತನಗೆ ಸ್ವರ್ಗದಿಂದ ನಿರ್ದೇಶನ ಸಿಕ್ತು ಅಂತ ತೋರಿಸೋ ನಾಲ್ಕು ವಿಷ್ಯಗಳನ್ನ ಹೇಳಿದ: (1) ದೇವರಿಂದ ಬಂದ ದರ್ಶನ (ವಚನ 4-10); (2) ಪವಿತ್ರಶಕ್ತಿ ಕೊಟ್ಟ ಅಪ್ಪಣೆ (ವಚನ 11, 12); (3) ದೇವದೂತ ಕೊರ್ನೇಲ್ಯನನ್ನ ಭೇಟಿಮಾಡಿದ್ದು (ವಚನ 13, 14); ಮತ್ತು (4) ಯೆಹೂದ್ಯರಲ್ಲದ ಜನ್ರ ಮೇಲೆ ಪವಿತ್ರಶಕ್ತಿ ಬಂದಿದ್ದು. (ವಚನ 15, 16) ಕೊನೆಯಲ್ಲಿ ಪೇತ್ರ ಈ ಪ್ರಶ್ನೆ ಕೇಳಿದ: “ಯೇಸು ಕ್ರಿಸ್ತನನ್ನ ನಂಬಿದ್ದ ನಮಗೆ ದೇವರು ಕೊಟ್ಟ ಪವಿತ್ರಶಕ್ತಿ ಅನ್ನೋ ವರವನ್ನೇ ಅವ್ರಿಗೂ ಕೊಟ್ಟನು. ಅಂದಮೇಲೆ ದೇವರನ್ನ ತಡೆಯೋಕೆ ನಾನ್ಯಾರು?” ಈ ಪ್ರಶ್ನೆ ಎಲ್ರೂ ಯೋಚಿಸೋ ತರ ಮಾಡ್ತು.—ಅ. ಕಾ. 11:17.
17, 18. (ಎ) ಪೇತ್ರನ ಮಾತುಗಳಿಂದ ಯೆಹೂದಿ ಕ್ರೈಸ್ತರು ಯಾವ ತೀರ್ಮಾನ ಮಾಡಬೇಕಾಯ್ತು? (ಬಿ) ಸಭೆಯಲ್ಲಿ ಒಗ್ಗಟ್ಟನ್ನ ಕಾಪಾಡ್ಕೊಳ್ಳೋದು ಅಷ್ಟು ಸುಲಭ ಅಲ್ಲ ಯಾಕೆ? (ಸಿ) ನಾವು ಯಾವ ಪ್ರಶ್ನೆಗಳನ್ನ ಕೇಳ್ಕೊಬೇಕು?
17 ಪೇತ್ರನ ಮಾತು ಕೇಳಿದ ಮೇಲೆ ಆ ಯೆಹೂದಿ ಕ್ರೈಸ್ತರು ಒಂದು ತೀರ್ಮಾನಕ್ಕೆ ಬರಲೇಬೇಕಿತ್ತು. ಅವರು ತಮ್ಮಲ್ಲಿ ಗೂಡು ಕಟ್ಟಿದ್ದ ತಪ್ಪು ಅಭಿಪ್ರಾಯಗಳನ್ನ ಕಿತ್ತು ಹಾಕಿ, ಆಗಷ್ಟೇ ದೀಕ್ಷಾಸ್ನಾನ ಆಗಿದ್ದ ಯೆಹೂದ್ಯರಲ್ಲದ ಆ ಜನ್ರನ್ನ ಕ್ರೈಸ್ತರಾಗಿ ಸ್ವೀಕರಿಸಬೇಕಿತ್ತು. ಇದನ್ನ ಅವ್ರು ಮಾಡಿದ್ರಾ? “[ಅಪೊಸ್ತಲರು ಮತ್ತು ಬೇರೆ ಯೆಹೂದಿ ಕ್ರೈಸ್ತರು] ಇದನ್ನೆಲ್ಲ ಕೇಳಿಸ್ಕೊಂಡಾಗ ವಾದ ಮಾಡೋದನ್ನ ನಿಲ್ಲಿಸಿಬಿಟ್ರು. ಆಮೇಲೆ ದೇವರನ್ನ ಹಾಡಿಹೊಗಳ್ತಾ ‘ಹಾಗಾದ್ರೆ ಅದ್ರರ್ಥ ಬೇರೆ ಜನ್ರು ಸಹ ಜೀವ ಪಡ್ಕೊಳ್ಳಲಿ ಅಂತ ದೇವರು ಅವ್ರಿಗೆ ಪಶ್ಚಾತ್ತಾಪಪಡೋ ಅವಕಾಶ ಕೊಡ್ತಿದ್ದಾನೆ’ ಅಂದ್ರು.” (ಅ. ಕಾ. 11:18) ಅವರು ತೋರಿಸಿದ ಈ ಒಳ್ಳೇ ಮನೋಭಾವ ಸಭೆಯ ಒಗ್ಗಟ್ಟನ್ನ ಕಾಪಾಡ್ತು.
18 ಇವತ್ತು ಸತ್ಯ ಆರಾಧಕರು ಒಗ್ಗಟ್ಟನ್ನ ಕಾಪಾಡ್ಕೊಳ್ಳೋದು ಅಷ್ಟು ಸುಲಭ ಅಲ್ಲ. ಯಾಕಂದ್ರೆ ನಾವು “ಬೇರೆಬೇರೆ ದೇಶ, ಕುಲ, ಜಾತಿ, ಭಾಷೆಯಿಂದ” ಬಂದಿದ್ದೀವಿ. (ಪ್ರಕ. 7:9) ಎಷ್ಟೋ ಸಭೆಗಳಲ್ಲಿ ಬೇರೆಬೇರೆ ಕುಲ, ಸಂಸ್ಕೃತಿ, ಹಿನ್ನೆಲೆಯ ಜನರಿದ್ದಾರೆ. ಹಾಗಾಗಿ ನಾವು ಹೀಗೆ ಕೇಳ್ಕೊಬೇಕು: ‘ನನ್ನ ಮನಸ್ಸಿಂದ ಭೇದಭಾವನ ಬೇರುಸಮೇತ ಕಿತ್ತು ಹಾಕಿದ್ದೀನಾ? ಲೋಕದ ಜನ ದೇಶ, ಭಾಷೆ, ಸಂಸ್ಕೃತಿ ಹೆಸ್ರಲ್ಲಿ ಒಗ್ಗಟ್ಟನ್ನ ಹೊಡೆದು ಹಾಕ್ತಾರೆ, ಇಂಥಾ ಯೋಚ್ನೆ ನನ್ನಲ್ಲೂ ಇದ್ಯಾ? ನಾನು ಸಹೋದರ ಸಹೋದರಿಯರ ಜೊತೆ ಹೇಗೆ ನಡ್ಕೊತೀನಿ?’ ಯೆಹೂದ್ಯರಲ್ಲದವರು ಕ್ರೈಸ್ತರಾಗಿ ಕೆಲ್ವು ವರ್ಷಗಳಾದ ಮೇಲೆ ಪೇತ್ರನಿಗೆ (ಕೇಫ) ಏನಾಯ್ತು ಅಂತ ನೆನಪಿಸ್ಕೊಳ್ಳಿ. ಬೇರೆ ಯೆಹೂದ್ಯರಲ್ಲಿದ್ದ ತಪ್ಪಾದ ಯೋಚ್ನೆ ತನ್ನಲ್ಲೂ ಬರೋಕೆ ಬಿಟ್ಕೊಟ್ಟು ಪೇತ್ರ ಯೆಹೂದ್ಯರಲ್ಲದ ಕ್ರೈಸ್ತರಿಂದ ‘ದೂರಹೋದ.’ ಆಮೇಲೆ ಪೌಲ ಅವನನ್ನ ತಿದ್ದಬೇಕಾಯ್ತು. (ಗಲಾ. 2:11-14) ಅದಕ್ಕೇ ನಾವು ಭೇದಭಾವದಿಂದ ಮತ್ತು ಬೇರೆವ್ರ ಬಗ್ಗೆ ತಪ್ಪಾಗಿ ಯೋಚ್ನೆ ಮಾಡೋದ್ರಿಂದ ದೂರ ಇರೋಣ.
‘ತುಂಬ ಜನ ನಂಬಿಕೆಯಿಟ್ಟು ಶಿಷ್ಯರಾದ್ರು’ (ಅ. ಕಾ. 11:19-26ಎ)
19. (ಎ) ಅಂತಿಯೋಕ್ಯದಲ್ಲಿದ್ದ ಯೆಹೂದಿ ಕ್ರೈಸ್ತರು ಯಾರಿಗೆ ಸಾರೋಕೆ ಶುರು ಮಾಡಿದ್ರು? (ಬಿ) ಇದ್ರಿಂದ ಏನಾಯ್ತು?
19 ದೇವರಿಂದ ನಿರ್ದೇಶನ ಸಿಕ್ಕಿದ ಮೇಲೆ ಕ್ರೈಸ್ತರು ಸುನ್ನತಿಯಾಗದ ಯೆಹೂದ್ಯರಲ್ಲದ ಜನ್ರಿಗೆ ಸಾರೋಕೆ ಶುರು ಮಾಡಿದ್ರಾ? ಮುಂದೆ ಸಿರಿಯದ ಅಂತಿಯೋಕ್ಯದಲ್ಲಿ ಏನಾಯ್ತು ಅಂತ ನೋಡಿ. d ಈ ನಗರದಲ್ಲಿ ತುಂಬಾ ಜನ ಯೆಹೂದಿಗಳಿದ್ರು. ಆದ್ರೆ ಅಲ್ಲಿದ್ದ ಯೆಹೂದ್ಯರ ಮತ್ತು ಯೆಹೂದ್ಯರಲ್ಲದವರ ಮಧ್ಯೆ ಅಷ್ಟೇನೂ ವೈರತ್ವ ಇರಲಿಲ್ಲ. ಹಾಗಾಗಿ ಅವ್ರಿಗೆ ಸಾರೋಕೆ ಪರಿಸ್ಥಿತಿ ತುಂಬ ಚೆನ್ನಾಗಿತ್ತು. ಇಲ್ಲಿ ಕೆಲವು ಯೆಹೂದಿ ಕ್ರೈಸ್ತರು “ಗ್ರೀಕ್ ಭಾಷೆ ಮಾತಾಡ್ತಿದ್ದ” ಜನ್ರಿಗೆ ಸಿಹಿಸುದ್ದಿ ಸಾರೋಕೆ ಶುರು ಮಾಡಿದ್ರು. (ಅ. ಕಾ. 11:20) ಗ್ರೀಕ್ ಭಾಷೆ ಮಾತಾಡ್ತಿದ್ದ ಯೆಹೂದ್ಯರಿಗೆ ಅಷ್ಟೇ ಅಲ್ಲ ಯೆಹೂದ್ಯರಲ್ಲದ ಜನ್ರಿಗೂ ಸಾರಿದ್ರು. ಯೆಹೋವ ಆ ಕೆಲಸವನ್ನ ಆಶೀರ್ವದಿಸಿದನು. ಹಾಗಾಗಿ ‘ತುಂಬ ಜನ ನಂಬಿಕೆಯಿಟ್ಟು ಶಿಷ್ಯರಾದ್ರು.’—ಅ. ಕಾ. 11:21.
20, 21. (ಎ) ಬಾರ್ನಬ ಹೇಗೆ ದೀನತೆ ತೋರಿಸಿದ? (ಬಿ) ನಾವು ಸೇವೆಯಲ್ಲಿ ಅದೇ ತರ ಹೇಗೆ ದೀನತೆ ತೋರಿಸಬಹುದು?
20 ಅಂತಿಯೋಕ್ಯದಲ್ಲಿ ಸಿಹಿಸುದ್ದಿನ ಕೇಳಿಸ್ಕೊಳ್ಳೋಕೆ ಇನ್ನೂ ತುಂಬಾ ಜನ ಕಾಯ್ತಾ ಇದ್ದಿದ್ರಿಂದ ಯೆರೂಸಲೇಮಿನ ಸಭೆ ಬಾರ್ನಬನನ್ನ ಅಲ್ಲಿಗೆ ಕಳಿಸ್ತು. ಆದ್ರೆ ಅಲ್ಲಿರೋ ಎಲ್ಲರಿಗೂ ಅವನೊಬ್ಬನಿಂದ ಸಾರೋಕೆ ಆಗ್ಲಿಲ್ಲ, ಬೇರೆವ್ರ ಸಹಾಯ ಬೇಕಿತ್ತು. ಅವನಿಗೆ ಸಹಾಯ ಮಾಡೋಕೆ ಸೌಲನಿಗಿಂತ ಒಳ್ಳೇ ವ್ಯಕ್ತಿ ಬೇರೆ ಯಾರೂ ಇರ್ಲಿಲ್ಲ. ಯಾಕಂದ್ರೆ ಮುಂದೆ ಅವನು ಯೆಹೂದ್ಯರಲ್ಲದ ಜನ್ರಿಗೆ ಅಪೊಸ್ತಲ ಆಗಲಿಕ್ಕಿದ್ದ. (ಅ. ಕಾ. 9:15; ರೋಮ. 1:5) ಹಾಗಾಗಿ ಬಾರ್ನಬ ಸೌಲನನ್ನ ತನ್ನ ಪ್ರತಿಸ್ಪರ್ಧಿಯಾಗಿ ನೋಡಿದ್ನಾ? ಇಲ್ಲವೇ ಇಲ್ಲ! ಬದಲಿಗೆ ದೀನತೆ ತೋರಿಸಿದ. ತಾರ್ಸಕ್ಕೆ ಹೋಗಿ ಸೌಲನನ್ನ ಹುಡುಕಿ, ಅಂತಿಯೋಕ್ಯದಲ್ಲಿ ತನಗೆ ಸಹಾಯ ಮಾಡು ಬಾ ಅಂತ ಕರ್ಕೊಂಡು ಬಂದ. ಇವರಿಬ್ರೂ ಒಂದು ವರ್ಷ ಅಲ್ಲಿದ್ದು ಸಭೆಯನ್ನ ಬಲಪಡಿಸಿದ್ರು.—ಅ. ಕಾ. 11:22-26ಎ.
21 ನಾವು ಸೇವೆಯಲ್ಲಿ ಹೇಗೆ ದೀನತೆ ತೋರಿಸಬಹುದು? ದೀನತೆ ಇದ್ರೆ ನಮಗಿರೋ ಇತಿಮಿತಿಗಳನ್ನ ಅರ್ಥ ಮಾಡ್ಕೊಂಡು ಅದನ್ನ ಒಪ್ಕೊಳ್ತೀವಿ. ನಮ್ಮೆಲ್ಲರಿಗೂ ಬೇರೆ ಬೇರೆ ಸಾಮರ್ಥ್ಯ ಇದೆ. ಉದಾಹರಣೆಗೆ, ಕೆಲವ್ರಿಗೆ ಮನೆಮನೆ ಸೇವೆ ಅಥವಾ ಅನೌಪಚಾರಿಕ ಸೇವೆ ಮಾಡೋದು ಸುಲಭ, ಆದ್ರೆ ಪುನರ್ಭೇಟಿ ಅಥವಾ ಬೈಬಲ್ ಅಧ್ಯಯನ ಶುರು ಮಾಡೋದು ಕಷ್ಟ. ಆಗ ಸಹಾಯಕ್ಕಾಗಿ ಬೇರೆಯವ್ರನ್ನ ಕೇಳಬಹುದಲ್ವಾ? ಹೀಗೆ ಕೇಳಿದ್ರೆ ಸೇವೆಯಲ್ಲಿ ಒಳ್ಳೇ ಪ್ರತಿಫಲ ಸಿಗುತ್ತೆ ಮತ್ತೆ ಖುಷಿನೂ ಸಿಗುತ್ತೆ.—1 ಕೊರಿಂ. 9:26.
“ಸಹೋದರರಿಗೆ ಪರಿಹಾರ ಕಳಿಸಿದ್ರು” (ಅ. ಕಾ. 11:26ಬಿ-30)
22, 23. (ಎ) ಅಂತಿಯೋಕ್ಯದಲ್ಲಿದ್ದ ಕ್ರೈಸ್ತರು ಸಹೋದರರಿಗೆ ಹೇಗೆ ಪ್ರೀತಿ ತೋರಿಸಿದ್ರು? (ಬಿ) ಇವತ್ತು ದೇವಜನರು ಹೇಗೆ ಪ್ರೀತಿ ತೋರಿಸ್ತಿದ್ದಾರೆ?
22 “ಶಿಷ್ಯರನ್ನ ‘ಕ್ರೈಸ್ತರು’ ಅಂತ ಮೊದಮೊದಲು ಕರೆದಿದ್ದು ಅಂತಿಯೋಕ್ಯದಲ್ಲೇ. ದೇವರೇ ಅವ್ರಿಗೆ ಈ ಹೆಸ್ರನ್ನ ಕೊಟ್ಟನು.” (ಅ. ಕಾ. 11:26ಬಿ) ಕ್ರಿಸ್ತನ ಶಿಷ್ಯರಿಗೆ ನಿಜವಾಗ್ಲೂ ಇದು ಸೂಕ್ತವಾದ ಹೆಸ್ರಾಗಿತ್ತು. ಬೇರೆ ಜನಾಂಗದವರು ಕ್ರೈಸ್ತರಾದಾಗ ಅವರ ಮತ್ತು ಯೆಹೂದಿ ಕ್ರೈಸ್ತರ ಮಧ್ಯ ಸಹೋದರ ಬಂಧ ಬೆಸೆದುಕೊಳ್ತಾ? ಬೆಸೆದುಕೊಳ್ತು ಅಂತ ಕ್ರಿ.ಶ. 46ರಲ್ಲಿ ಒಂದು ದೊಡ್ಡ ಬರ ಬಂದಾಗ ಗೊತ್ತಾಯ್ತು. e ಹಿಂದಿನ ಕಾಲದಲ್ಲಿ ಬರ ಬಂದಾಗ ತುಂಬಾನೇ ಕಷ್ಟ ಪಡ್ತಾ ಇದ್ದಿದ್ದು ಬಡವರು. ಯಾಕಂದ್ರೆ ಅವ್ರ ಹತ್ರ ಹಣನೂ ಇರ್ತಿರಲಿಲ್ಲ, ಆಹಾರನೂ ಇರ್ತಿರಲಿಲ್ಲ. ಕ್ರಿ.ಶ. 46ರಲ್ಲಿ ಬರ ಬಂದಾಗ್ಲೂ ಯೂದಾಯದಲ್ಲಿದ್ದ ಯೆಹೂದಿ ಕ್ರೈಸ್ತರಿಗೆ ಆಹಾರ ಮತ್ತು ಬೇರೆ ವಸ್ತುಗಳ ಅಗತ್ಯ ಬಂತು. ಯಾಕಂದ್ರೆ ಅವ್ರಲ್ಲಿ ಹೆಚ್ಚಿನವರು ಬಡವರಾಗಿದ್ರು. ಅವ್ರು ಕಷ್ಟದಲ್ಲಿ ಇದ್ದಾರೆ ಅಂತ ಗೊತ್ತಾದಾಗ ಅಂತಿಯೋಕ್ಯದ ಸಹೋದರರು ಮತ್ತು ಬೇರೆ ಜನಾಂಗದ ಕ್ರೈಸ್ತರು ಅವರಿಗೆ “ಪರಿಹಾರ ಕಳಿಸಿದ್ರು.” (ಅ. ಕಾ. 11:29) ಅವ್ರಿಗೆ ಸಹೋದರರ ಮೇಲೆ ಎಷ್ಟು ಪ್ರೀತಿ ಇತ್ತಲ್ವಾ?
23 ಇವತ್ತು ಕೂಡ ದೇವಜನರು ಹೀಗೇ ಪ್ರೀತಿ ತೋರಿಸ್ತಾರೆ. ನಮ್ಮ ದೇಶದಲ್ಲಾಗಲಿ, ಬೇರೆ ದೇಶದಲ್ಲೇ ಆಗಲಿ ಸಹೋದರರು ಕಷ್ಟದಲ್ಲಿದ್ದಾರೆ ಅಂತ ಗೊತ್ತಾದಾಗ ನಾವು ಮನಸಾರೆ ಸಹಾಯ ಮಾಡ್ತೀವಿ. ಶಾಖಾ ಸಮಿತಿ ತಕ್ಷಣ ವಿಪತ್ತು ಪರಿಹಾರ ಸಮಿತಿಗಳನ್ನ ರಚಿಸುತ್ತೆ. ಈ ಸಮಿತಿಗಳು ಚಂಡಮಾರುತ, ಭೂಕಂಪ ಮತ್ತು ಸುನಾಮಿಯಂಥ ನೈಸರ್ಗಿಕ ವಿಪತ್ತುಗಳಿಂದ ಕಷ್ಟಪಡ್ತಿರೋ ಸಹೋದರರ ಅಗತ್ಯಗಳನ್ನ ಪೂರೈಸೋಕೆ ಶ್ರಮಿಸುತ್ತೆ. ಈ ಪರಿಹಾರ ಕಾರ್ಯಗಳು ನಮ್ಮ ಸಹೋದರ ಬಂಧ ನಿಜ ಅಂತ ತೋರಿಸ್ಕೊಡುತ್ತೆ.—ಯೋಹಾ. 13:34, 35; 1 ಯೋಹಾ. 3:17.
24. ಪೇತ್ರ ನೋಡಿದ ದರ್ಶನದಿಂದ ನಾವೇನು ಕಲಿತೀವಿ?
24 ಪೇತ್ರ ಈ ದರ್ಶನ ನೋಡಿದ್ದು ಒಂದನೇ ಶತಮಾನದಲ್ಲಾದ್ರೂ ಅದ್ರಿಂದ ನಾವು ತುಂಬಾ ವಿಷ್ಯಗಳನ್ನ ಕಲಿಬಹುದು. ನಾವು ಆರಾಧಿಸೋ ದೇವರು ಭೇದಭಾವ ಮಾಡಲ್ಲ. ಹಾಗಾಗಿ ಆತನ ಆಳ್ವಿಕೆ ಬಗ್ಗೆ ನಾವು ಚೆನ್ನಾಗಿ ಸಾಕ್ಷಿ ಕೊಡಬೇಕು, ಅಂದ್ರೆ ಜನರ ಜಾತಿ, ದೇಶ, ಸಾಮಾಜಿಕ ಅಂತಸ್ತನ್ನ ನೋಡ್ದೆ ಎಲ್ರಿಗೂ ಸಾರಬೇಕು. ಇದೇ ಆತನ ಆಸೆ. ಹಾಗಾಗಿ ನಾವು ಎಲ್ರಿಗೂ ಸಿಹಿಸುದ್ದಿ ಕೇಳಿಸ್ಕೊಳ್ಳೋ ಅವಕಾಶ ಕೊಡೋಣ, ಅದಕ್ಕಾಗಿ ನಮ್ಮಿಂದ ಆಗೋದನ್ನೆಲ್ಲಾ ಮಾಡೋಣ.—ರೋಮ. 10:11-13.
a ಕೆಲವು ಯೆಹೂದ್ಯರು ಚರ್ಮಕಾರರನ್ನ ತುಂಬ ಕೀಳಾಗಿ ನೋಡ್ತಿದ್ರು. ಯಾಕಂದ್ರೆ ಅವರು ತಮ್ಮ ಕೆಲಸ ಮಾಡೋವಾಗ ಸತ್ತ ಪ್ರಾಣಿಗಳ ಹೆಣಗಳನ್ನ ಮುಟ್ಟಬೇಕಾಗ್ತಿತ್ತು. ಅಷ್ಟೇ ಅಲ್ಲ ಆ ಚರ್ಮವನ್ನ ನುಣುಪಾಗಿಸೋಕೆ ನಾಯಿಯ ಮಲವನ್ನ ಬಳಸ್ತಿದ್ರು. ಅದಕ್ಕೇ ಚರ್ಮಕಾರರು ದೇವಾಲಯದ ಒಳಗೆ ಬರೋಕೆ ಅಯೋಗ್ಯರಾಗಿದ್ದಾರೆ ಅಂತ ಹೇಳ್ತಿದ್ರು. ಅವರ ವ್ಯಾಪಾರದ ಸ್ಥಳ ಕೂಡ ಪಟ್ಟಣದಿಂದ ಕಡಿಮೆಪಕ್ಷ 50 ಮೊಳ ಅಂದ್ರೆ 70 ಅಡಿಗಿಂತ ಹೆಚ್ಚು ದೂರದಲ್ಲಿ ಇರಬೇಕಿತ್ತು. ಸೀಮೋನನ ಮನೆ “ಸಮುದ್ರದ ಹತ್ರ” ಇರೋಕೆ ಇದೇ ಕಾರಣ ಆಗಿದ್ದಿರಬೇಕು.—ಅ. ಕಾ. 10:6.
b “ ಕೊರ್ನೇಲ್ಯ ಮತ್ತು ರೋಮನ್ ಸೈನ್ಯ” ಅನ್ನೋ ಚೌಕ ನೋಡಿ.
c “ಮಕ್ಕಳನ್ನು ಬೆಳೆಸಲು ಭರವಸಾರ್ಹ ಸಲಹೆ” ಅನ್ನೋ ಆ ಲೇಖನ 2006, ನವೆಂಬರ್ 1ರ ಸಂಚಿಕೆಯ ಪುಟ 4-7ರಲ್ಲಿ ಬಂದಿತ್ತು.
d “ ಸಿರಿಯದ ಅಂತಿಯೋಕ್ಯ” ಅನ್ನೋ ಚೌಕ ನೋಡಿ.
e ಯೆಹೂದಿ ಇತಿಹಾಸಗಾರ ಜೋಸೀಫಸ್ ಈ “ದೊಡ್ಡ ಬರ” ಚಕ್ರವರ್ತಿ ಕ್ಲೌದ್ಯ ಆಳ್ತಿದ್ದ ಸಮಯದಲ್ಲಿ (ಕ್ರಿ.ಶ. 41-54ರಲ್ಲಿ) ಬಂತು ಅಂತ ಹೇಳಿದ್ದಾನೆ.