ಅಧ್ಯಾಯ 18
‘ದೇವರನ್ನ ಹುಡುಕಬೇಕು, ನಮಗೆ ಸಿಗ್ತಾನೆ’
ಪೌಲ ತಾನು ಮತ್ತು ಜನರು ಒಪ್ಪುವಂಥ ವಿಷ್ಯದ ಬಗ್ಗೆ ಮಾತಾಡ್ತಾ ಹೊಂದಾಣಿಕೆ ಮಾಡ್ಕೊಂಡ
ಆಧಾರ: ಅಪೊಸ್ತಲರ ಕಾರ್ಯ 17:16-34
1-3. (ಎ) ಪೌಲನಿಗೆ ಅಥೆನ್ಸ್‌ನಲ್ಲಿ ತುಂಬ ಕಿರಿಕಿರಿ ಆಗಿದ್ದು ಯಾಕೆ? (ಬಿ) ಪೌಲನಿಂದ ನಾವೇನು ಕಲಿಬಹುದು?
ಪೌಲ ವಿದ್ಯಾಭ್ಯಾಸದ ಮುಖ್ಯ ಕೇಂದ್ರವಾಗಿದ್ದ ಗ್ರೀಸಿನ ಅಥೆನ್ಸ್‌ನಲ್ಲಿದ್ದ. ಸಾಕ್ರಟೀಸ್, ಪ್ಲೇಟೊ ಮತ್ತು ಅರಿಸ್ಟಾಟಲ್ ಇಲ್ಲೇ ಓದಿದ್ರು. ಅಥೆನ್ಸಿನ ಜನ್ರಿಗೆ ದೇವರ ಮೇಲೆ ತುಂಬ ಭಕ್ತಿ ಇತ್ತು. ಎಷ್ಟಂದ್ರೆ ದೇವಾಲಯಗಳಲ್ಲಿ, ಸಾರ್ವಜನಿಕ ಚೌಕಗಳಲ್ಲಿ ಮತ್ತು ದಾರಿಗಳಲ್ಲಿ ಎಲ್ಲಾ ಕಡೆ ಮೂರ್ತಿಗಳನ್ನ ಇಟ್ಟಿದ್ರು. ಅಲ್ಲಿನ ಜನರು ತುಂಬ ದೇವರುಗಳನ್ನ ಆರಾಧನೆ ಮಾಡ್ತಿದ್ರು. ಅದನ್ನ ನೋಡಿ ಪೌಲನಿಗೆ ಕಿರಿಕಿರಿ ಆಯ್ತು. ಯಾಕಂದ್ರೆ ಮೂರ್ತಿಪೂಜೆ ಬಗ್ಗೆ ಸತ್ಯದೇವರಾದ ಯೆಹೋವನಿಗೆ ಹೇಗನಿಸುತ್ತೆ ಅಂತ ಪೌಲನಿಗೆ ಗೊತ್ತಿತ್ತು. (ವಿಮೋ. 20:4, 5) ಮೂರ್ತಿಗಳನ್ನ ಕಂಡ್ರೆ ದೇವರಿಗೆ ಇಷ್ಟ ಆಗಲ್ಲ ಅಂತ ಈ ನಂಬಿಗಸ್ತ ಅಪೊಸ್ತಲ ಅಲ್ಲಿನ ಜನ್ರಿಗೆ ಹೇಳಿದ.
2 ಪೌಲ ಸಂತೆ ಕಡೆ ಹೆಜ್ಜೆ ಹಾಕ್ತಿದ್ದಾಗ ಅದರ ವಾಯುವ್ಯದ ಕಡೆಗೆ ಇದ್ದ ಮುಖ್ಯ ಬಾಗಿಲ ಹತ್ರ ಹರ್ಮಿಸ್ ದೇವನ ಶಿಶ್ನ ಪ್ರತಿಮೆಗಳು ಇದ್ದಿದ್ದನ್ನ ನೋಡ್ದ. ಸಂತೆಯಲ್ಲಿ ಎಲ್ಲಿ ನೋಡಿದ್ರೂ ಗುಡಿ-ದೇವಾಲಯಗಳು ತುಂಬಿ ತುಳುಕ್ತಿತ್ತು. ಇದನ್ನೆಲ್ಲಾ ನೋಡಿ ಪೌಲನಿಗೆ ರಕ್ತ ಕುದಿಯೋಕೆ ಶುರು ಆಯ್ತು. ಹೀಗೆ ಮೂರ್ತಿಪೂಜೆ ರಾರಾಜಿಸ್ತಿದ್ದ ಈ ಜಾಗದಲ್ಲಿ ಪೌಲ ಸಾರೋದಾದ್ರೂ ಹೇಗೆ? ಅವನು ತನ್ನ ಭಾವನೆಗಳನ್ನ ಹತೋಟಿಗೆ ತಂದ್ನಾ? ಅವನು ಅವ್ರ ಜೊತೆ ಮಾತಾಡಿದ್ನಾ? ಅವನೂ ಅಲ್ಲಿನ ಜನ್ರೂ ಒಪ್ಪುವಂಥ ಯಾವುದಾದ್ರೂ ವಿಷ್ಯ ಸಿಕ್ತಾ? ಸತ್ಯ ದೇವರನ್ನ ಹುಡುಕಿ ಆತನ ಬಗ್ಗೆ ತಿಳ್ಕೊಳ್ಳೋಕೆ ಅವನು ಕೆಲವರಿಗಾದ್ರೂ ಸಹಾಯ ಮಾಡಿದ್ನಾ? ಯಾರಾದ್ರೂ ಆತನ ಬಗ್ಗೆ ತಿಳ್ಕೊಂಡ್ರಾ?
3 ಅಥೆನ್ಸಿನ ವಿದ್ಯಾವಂತ ಜನರ ಹತ್ರ ಪೌಲ ಮಾತಾಡಿದ ವಿಷ್ಯ ಅಪೊಸ್ತಲರ ಕಾರ್ಯ 17:22-31ರಲ್ಲಿದೆ. ಜಾಣ್ಮೆ, ವಿವೇಚನೆಯಿಂದ ಮತ್ತು ಜನ್ರನ್ನ ಒಪ್ಪಿಸೋ ಹಾಗೆ ಮಾತಾಡೋ ವಿಷ್ಯದಲ್ಲಿ ಪೌಲ ನಮಗೆ ಒಳ್ಳೇ ಮಾದರಿ. ನಾವೂ ಅವನ ತರಾನೇ ಜನ್ರು ಚೆನ್ನಾಗಿ ಯೋಚ್ನೆ ಮಾಡೋ ಹಾಗೆ ಮಾಡಬೇಕು ಮತ್ತು ಅವ್ರನ್ನ ಒಪ್ಪಿಸೋ ತರ ಮಾತಾಡಬೇಕು. ಪೌಲ ಅದನ್ನ ಹೇಗೆ ಮಾಡಿದ ಅಂತ ನಾವೀಗ ನೋಡೋಣ.
“ಸಂತೆಯಲ್ಲಿ” ಕಲಿಸಿದ (ಅ. ಕಾ. 17:16-21)
4, 5. (ಎ) ಪೌಲ ಅಥೆನ್ಸಿನಲ್ಲಿ ಎಲ್ಲಿ ಸಾರಿದ? (ಬಿ) ಅಲ್ಲಿನ ಜನ್ರಿಗೆ ಸಾರೋದು ಸುಲಭ ಆಗಿರಲಿಲ್ಲ ಯಾಕೆ?
4 ಪೌಲ ಎರಡನೇ ಮಿಷನರಿ ಪ್ರಯಾಣ ಮಾಡಿದಾಗ ಸುಮಾರು ಕ್ರಿ.ಶ. 50ರಲ್ಲಿ ಅಥೆನ್ಸಿಗೆ ಹೋಗಿದ್ದ. a ಆಗ ಸೀಲ ಮತ್ತು ತಿಮೊತಿ ಬೆರೋಯದಿಂದ ಬರ್ತಾ ಇದ್ರು. ಅವ್ರಿಗೋಸ್ಕರ ಕಾಯುವಾಗ ಪೌಲ ಯಥಾಪ್ರಕಾರ “ಸಭಾಮಂದಿರದಲ್ಲಿದ್ದ ಯೆಹೂದ್ಯರಿಗೆ . . . ವಚನಗಳನ್ನ ತೋರಿಸಿ ಅರ್ಥಮಾಡಿಸೋಕೆ ಶುರುಮಾಡಿದ.” ಅಷ್ಟೇ ಅಲ್ಲ, ಅವನಿಗೆ ಸೇವೆ ಮಾಡೋಕೆ ಒಂದು ಟೆರಿಟೊರಿನೂ ಹುಡುಕಿಕೊಂಡ. ಅದು ಅಲ್ಲಿನ ‘ಸಂತೆಯಾಗಿತ್ತು.’ ಯೆಹೂದ್ಯರಲ್ಲದ ಅಥೆನ್ಸಿನ ಜನರ ಹತ್ರ ಈಗ ಪೌಲ ಮಾತಾಡಬೇಕಿತ್ತು. (ಅ. ಕಾ. 17:17) ಅಥೆನ್ಸಿನ ಈ ಸಂತೆ ಅಕ್ರಪೊಲಿಸ್‌ನ ವಾಯುವ್ಯ ದಿಕ್ಕಿನಲ್ಲಿದ್ದು ಸುಮಾರು 12 ಎಕರೆಯಷ್ಟು ದೊಡ್ಡದಾಗಿತ್ತು. ಇಲ್ಲಿ ಜನ್ರು ವಸ್ತುಗಳನ್ನ ಮಾರಾಟ ಮಾಡ್ತಿದ್ರು, ತಗೊಳ್ತಿದ್ರು. ಅಷ್ಟೇ ಅಲ್ಲ, ಇದು ಪಟ್ಟಣದ ಮುಖ್ಯಸ್ಥಳ ಆಗಿದ್ರಿಂದ ಇಲ್ಲಿಗೆ ತುಂಬಾ ಜನ ಬರ್ತಿದ್ರು. ಇದ್ರ ಬಗ್ಗೆ ಒಂದು ಪುಸ್ತಕ ಹೇಳೋದು, ‘ವ್ಯಾಪಾರಿಗಳು, ರಾಜಕಾರಣಿಗಳು, ತತ್ವಜ್ಞಾನಿಗಳು ಮತ್ತು ಲೇಖಕರು ಇಲ್ಲಿ ಸೇರಿ ಬರ್ತಿದ್ರು.’ ಅಥೆನ್ಸಿನ ಜನ್ರಿಗೆ ಇಲ್ಲಿ ಸೇರಿಬಂದು ಕೆಲವು ಮುಖ್ಯ ವಿಷ್ಯಗಳ ಬಗ್ಗೆ ಚರ್ಚೆ ಮಾಡೋದಂದ್ರೆ ತುಂಬ ಇಷ್ಟ ಆಗ್ತಿತ್ತು.
5 ಸಂತೆಯಲ್ಲಿದ್ದ ಜನ್ರಿಗೆ ಸಾರೋದು ಅಷ್ಟು ಸುಲಭ ಆಗಿರಲಿಲ್ಲ. ಅಲ್ಲಿ ಎಪಿಕೂರಿಯರು ಮತ್ತು ಸ್ತೋಯಿಕರು ಇದ್ರು. ಈ ಎರಡು ಗುಂಪಿನ ಜನರು ವಿರುದ್ಧವಾದ ಸಿದ್ಧಾಂತಗಳನ್ನ ಕಲಿಸೋ ಸಂಸ್ಥೆಗಳ ಸದಸ್ಯರಾಗಿದ್ರು. b ಎಪಿಕೂರಿಯರು ಜೀವ ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂತು ಅಂತ ನಂಬ್ತಿದ್ರು. ಜೀವನದ ಬಗ್ಗೆ ಅವರ ದೃಷ್ಟಿಕೋನ ಹೀಗಿತ್ತು: “ದೇವರಿಗೆ ಭಯಪಡೋ ಅಗತ್ಯ ಇಲ್ಲ; ಸತ್ತ ಮೇಲೆ ಯಾವ ನೋವೂ ಇಲ್ಲ; ಒಳ್ಳೇದನ್ನ ಸಾಧಿಸಬೇಕು; ಕೆಟ್ಟದ್ದನ್ನ ಸಹಿಸ್ಕೊಬೇಕು.” ಆದ್ರೆ ಸ್ತೋಯಿಕರು, ಕಾರಣ ಮತ್ತು ತರ್ಕಗಳಿಗೆ ಒತ್ತುನೀಡ್ತಿದ್ರು ಮತ್ತು ದೇವರು ಒಬ್ಬ ವ್ಯಕ್ತಿ ಅಂತ ಅವರು ನಂಬ್ತಾ ಇರಲಿಲ್ಲ. ಎಪಿಕೂರಿಯರು ಮತ್ತು ಸ್ತೋಯಿಕರು ಇಬ್ರೂ ಸತ್ತವರು ಮತ್ತೆ ಜೀವ ಪಡ್ಕೊಳ್ತಾರೆ ಅನ್ನೋದನ್ನ ನಂಬ್ತಾನೇ ಇರಲಿಲ್ಲ. ಈ ಎರಡೂ ಗುಂಪಿನವರ ಸಿದ್ಧಾಂತಗಳಿಗೂ ಪೌಲ ಸಾರ್ತಿದ್ದ ಕ್ರೈಸ್ತರ ಉನ್ನತ ಮಟ್ಟದ ಸತ್ಯಗಳಿಗೂ ತುಂಬ ವ್ಯತ್ಯಾಸ ಇತ್ತು.
6, 7. (ಎ) ಕೆಲವು ಗ್ರೀಕ್ ಪಂಡಿತರು ಪೌಲ ಕಲಿಸ್ತಿದ್ದ ವಿಷ್ಯಗಳನ್ನ ಕೇಳಿಸ್ಕೊಂಡಾಗ ಏನು ಮಾಡಿದ್ರು? (ಬಿ) ಜನರು ನಮಗೂ ಹೇಗೆ ಅದನ್ನೇ ಮಾಡ್ತಿದ್ದಾರೆ?
6 ಪೌಲ ಕಲಿಸಿದ ವಿಷ್ಯಗಳನ್ನ ಕೇಳಿಸ್ಕೊಂಡಾಗ ಗ್ರೀಕ್ ಪಂಡಿತರು ಏನು ಮಾಡಿದ್ರು? ಕೆಲವರು ಅವನನ್ನ “ಬಾಯಿಬಡಕ” ಅಥವಾ “ಕಾಳು ಹೆಕ್ಕುವವನು” ಅನ್ನೋ ಅರ್ಥ ಇರೋ ಪದ ಬಳಸಿ ಕರೆದ್ರು. (ಅ. ಕಾ. 17:18) ಇದ್ರ ಗ್ರೀಕ್ ಪದದ ಬಗ್ಗೆ ಒಬ್ಬ ತತ್ವಜ್ಞಾನಿ ಹೀಗೆ ಹೇಳಿದ್ದಾನೆ: “ಮೊದಮೊದ್ಲು ಈ ಪದವನ್ನ, ತಿರುಗಾಡ್ತಾ ಕಾಳು ಹೆಕ್ಕಿ ತಿನ್ನೋ ಒಂದು ಚಿಕ್ಕ ಹಕ್ಕಿಗೆ ಬಳಸ್ತಿದ್ರು. ಆಮೇಲೆ, ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳನ್ನ, ಬೇಡ ಅಂತ ಬಿಸಾಕಿರೋ ವಸ್ತುಗಳನ್ನ ಹೆಕ್ಕೋ ಒಬ್ಬ ವ್ಯಕ್ತಿಗೆ ಈ ಪದನ ಬಳಕೆ ಮಾಡ್ತಿದ್ರು. ಆಮೇಲೆ-ಆಮೇಲೆ ಈ ಪದವನ್ನ, ಒಂದಕ್ಕೊಂದು ಸಂಬಂಧನೇ ಇಲ್ಲದಿರೋ ಚಿಕ್ಕಪುಟ್ಟ ಮಾಹಿತಿಗಳನ್ನೆಲ್ಲ ಸಂಗ್ರಹಿಸೋ ವ್ಯಕ್ತಿಗೆ ಉಪಯೋಗಿಸೋಕೆ ಶುರು ಮಾಡಿದ್ರು. ಅದ್ರಲ್ಲೂ ಮುಖ್ಯವಾಗಿ, ಆ ಮಾಹಿತಿನ ಸರಿಯಾಗಿ ಬೇರೆವ್ರಿಗೆ ಹೇಳೋಕೆ ಆಗದಿದ್ದವನಿಗೆ ಸೂಚಿಸಿ ಮಾತಾಡ್ತಿದ್ರು.” ಹಾಗಾಗಿ ಆ ಪಂಡಿತರು ಪೌಲನನ್ನ ಕಾಳು ಹೆಕ್ಕುವವನು ಅಂತ ಕರೆದಾಗ, ‘ಅವನು ಮೂರ್ಖ ಮತ್ತು ಯಾರೋ ಹೇಳಿದ್ದನ್ನ ಕೇಳಿಸ್ಕೊಂಡು ಬಂದು ಹೇಳ್ತಿದ್ದಾನೆ’ ಅಂತ ಆಡ್ಕೊಳ್ಳೋ ಹಾಗಿತ್ತು. ಈ ತರ ಅಡ್ಡ ಹೆಸರಿಂದ ಕರೆದಿದ್ದಕ್ಕೆ ಪೌಲನಿಗೆ ಮುಜುಗರನೂ ಆಗಲಿಲ್ಲ, ಭಯನೂ ಆಗಲಿಲ್ಲ.
7 ಇವತ್ತು ನಮಗೂ ಇದೇ ತರ ಆಗುತ್ತೆ. ಬೈಬಲನ್ನ ನಾವು ನಂಬೋದ್ರಿಂದ ಜನ ನಮಗೂ ಅಡ್ಡ ಹೆಸ್ರಿಟ್ಟು ಕರೀತಾರೆ. ಉದಾಹರಣೆಗೆ, ಕೆಲವು ಶಿಕ್ಷಕರು ವಿಕಾಸವಾದ ನಿಜ ಅಂತ ಕಲಿಸ್ತಾರೆ ಮತ್ತು ‘ನೀವು ಬುದ್ಧಿವಂತರಾಗಿದ್ರೆ ಅದು ನಿಜ ಅಂತ ಒಪ್ಕೊಳ್ತೀರಿ’ ಅಂತ ಹೇಳ್ತಾರೆ. ವಿಕಾಸವಾದವನ್ನ ನಂಬದಿರೋ ಜನ್ರನ್ನ ಬುದ್ಧಿ ಇಲ್ಲದವರು ಅಂತಾರೆ. ನಾವು ಬೈಬಲಲ್ಲಿರೋ ಮತ್ತು ಪ್ರಕೃತಿಯಲ್ಲಿರೋ ವಿಷ್ಯಗಳನ್ನ ಆಧಾರವಾಗಿ ಉಪಯೋಗಿಸುವಾಗ ಜನರು ನಮ್ಮನ್ನ ‘ಕಾಳು ಹೆಕ್ಕೋರು’ ಅನ್ನೋ ತರ ನೋಡಬೇಕು ಅನ್ನೋದೇ ಇಂಥ ವಿದ್ಯಾವಂತರ ಉದ್ದೇಶ. ಆದ್ರೆ ನಾವು ಪೌಲನ ತರ ಮುಜುಗರ, ಭಯ ಪಡಬೇಕಾಗಿಲ್ಲ. ಬದಲಿಗೆ, ಈ ಭೂಮಿ ಒಬ್ಬ ಬುದ್ಧಿವಂತ ರಚಕನಾದ ಯೆಹೋವ ದೇವರ ಕೈಕೆಲಸ ಅಂತ ನಾವು ನಂಬ್ತೀವಿ ಅನ್ನೋದನ್ನ ಧೈರ್ಯವಾಗಿ ಹೇಳಬೇಕು.—ಪ್ರಕ. 4:11.
8. (ಎ) ಪೌಲ ಸಾರೋದನ್ನ ಕೇಳಿಸ್ಕೊಂಡಾಗ ಕೆಲವರು ಏನು ಮಾಡಿದ್ರು? (ಬಿ) ಪೌಲನನ್ನ ಅರಿಯೊಪಾಗಕ್ಕೆ ಯಾಕೆ ಕರ್ಕೊಂಡು ಹೋದ್ರು? (ಪಾದಟಿಪ್ಪಣಿ ನೋಡಿ.)
8 ಇನ್ನು ಕೆಲವರು ಪೌಲ ಸಂತೆಯಲ್ಲಿ ಸಾರಿದ್ದನ್ನ ಕೇಳಿಸ್ಕೊಂಡಾಗ ಏನು ಮಾಡಿದ್ರು? “ಇವನು ನಮ್ಗೆ ಗೊತ್ತಿಲ್ಲದ ದೇವರುಗಳ ಬಗ್ಗೆ ಪ್ರಚಾರ ಮಾಡ್ತಾ ಇದ್ದಾನೆ ಅನ್ಸುತ್ತೆ” ಅಂತ ಹೇಳಿದ್ರು. (ಅ. ಕಾ. 17:18) ಪೌಲ ಅಥೆನ್ಸಿನವರಿಗೆ ಹೊಸ ದೇವರನ್ನ ಪರಿಚಯ ಮಾಡ್ತಿದ್ನಾ? ಇಲ್ಲ. ಅವರು ಹೇಳಿದ್ದು ಒಂದು ದೊಡ್ಡ ಆರೋಪ ಆಗಿತ್ತು. ಯಾಕಂದ್ರೆ ಕೆಲವು ಶತಮಾನಗಳ ಹಿಂದೆ ಸಾಕ್ರಟೀಸನ್ನ ವಿಚಾರಣೆ ಮಾಡಿ ಮರಣದಂಡನೆಗೆ ಒಪ್ಪಿಸಿದಾಗ ಅವನ ಮೇಲೆ ಬೇರೆ ಆರೋಪಗಳ ಜೊತೆ ಈ ಆರೋಪನೂ ಹಾಕಿದ್ರು. ಹಾಗಾಗಿ ಜನರು ಪೌಲನನ್ನ ಅರಿಯೊಪಾಗಕ್ಕೆ ಕರ್ಕೊಂಡು ಬಂದು ವಿಚಿತ್ರವಾಗಿ ಅನಿಸಿದ ಆ ಬೋಧನೆ ಬಗ್ಗೆ ವಿವರಿಸೋಕೆ ಹೇಳಿದ್ರು. c ಪವಿತ್ರಗ್ರಂಥದ ಪರಿಚಯನೇ ಇಲ್ಲದ ಈ ಜನ್ರಿಗೆ ಪೌಲ ತಾನು ಹೇಳಿದ ಸಂದೇಶವನ್ನ ಹೇಗೆ ಸಮರ್ಥಿಸಿದ?
‘ಅಥೆನ್ಸಿನ ಜನ್ರೇ, ನಾನು ನೋಡಿದ್ದೀನಿ’ (ಅ. ಕಾ. 17:22, 23)
9-11. (ಎ) ಪೌಲ ತಾನೂ ಜನ್ರೂ ಒಪ್ಪೋ ವಿಷ್ಯದ ಬಗ್ಗೆ ಮಾತಾಡೋಕೆ ಏನು ಮಾಡಿದ? (ಬಿ) ನಾವು ಸೇವೆ ಮಾಡುವಾಗ ಪೌಲನ ತರ ಏನು ಮಾಡಬಹುದು?
9 ಪೌಲನಿಗೆ ಅಲ್ಲಿನ ಮೂರ್ತಿಪೂಜೆಯನ್ನ ನೋಡಿ ತುಂಬ ಕಿರಿಕಿರಿ ಆಗಿತ್ತು ಅಲ್ವಾ? ಹಾಗಂತ ಅವನು ತಾಳ್ಮೆ ಕಳ್ಕೊಂಡು ‘ಅದೆಲ್ಲ ತಪ್ಪು’ ಅಂತ ನೇರವಾಗಿ ಹೇಳಿಬಿಡಲಿಲ್ಲ, ಬದಲಿಗೆ ಶಾಂತಿಯಿಂದ ಇದ್ದ. ತುಂಬ ಜಾಣ್ಮೆಯಿಂದ ಆ ಜನ ಮತ್ತು ತಾನು ಒಪ್ಪೋ ಒಂದು ವಿಷ್ಯದ ಬಗ್ಗೆ ಮಾತಾಡಿ ಅವ್ರ ಮನಸ್ಸು ಗೆಲ್ಲೋಕೆ ಪ್ರಯತ್ನಿಸಿದ. ಅವನು, “ಅಥೆನ್ಸಿನ ಜನ್ರೇ, ಬೇರೆಯವ್ರಿಗಿಂತ ನಿಮ್ಗೆ ದೇವ್ರ ಮೇಲೆ ಹೆಚ್ಚು ಭಕ್ತಿ ಇರೋದನ್ನ ನಾನು ನೋಡಿದ್ದೀನಿ” ಅಂತ ಹೇಳ್ತಾ ಮಾತು ಆರಂಭಿಸಿದ. (ಅ. ಕಾ. 17:22) ಅವನು ಅವ್ರಿಗೆ ದೇವರ ಮೇಲೆ ಭಕ್ತಿ ಇರೋದ್ರಿಂದ ಅವರನ್ನ ಹೊಗಳಿದ. ಆದ್ರೆ ಅವ್ರಲ್ಲಿ ಕೆಲವರು ಸುಳ್ಳು ನಂಬಿಕೆಗಳಿಂದ ಕುರುಡಾಗಿದ್ರೂ ಅವ್ರಿಗೆ ಸತ್ಯ ಸ್ವೀಕರಿಸೋ ಮನಸ್ಸಿದೆ ಅಂತ ಅರ್ಥ ಮಾಡ್ಕೊಂಡ. ಯಾಕಂದ್ರೆ ಒಂದು ಕಾಲದಲ್ಲಿ ಅವನೂ “ಗೊತ್ತಿಲ್ದೆ, ದೇವರ ಮೇಲೆ ನಂಬಿಕೆ ಇಲ್ದೆ” ನಡ್ಕೊಂಡಿದ್ದ ಅನ್ನೋದನ್ನ ನೆನಪಿಸ್ಕೊಂಡ.—1 ತಿಮೊ. 1:13.
10 ಹಾಗಾಗಿ ಅಥೆನ್ಸಿನ ಜನ್ರಿಗೆ ದೇವರ ಮೇಲಿರೋ ಭಕ್ತಿಯನ್ನೇ ವಿಷ್ಯವಾಗಿ ಇಟ್ಕೊಂಡು ಮಾತಾಡಿದ. ಅವರು “ನಮ್ಗೆ ಗೊತ್ತಿಲ್ಲದ ದೇವ್ರಿಗೆ” ಮಾಡಿದ್ದ ಒಂದು ಬಲಿಪೀಠವನ್ನ ನೋಡಿದೆ ಅಂತ ಹೇಳಿದ. ಹೀಗೆ ಪೌಲ ತಾನೂ ಆ ಜನರೂ ಒಪ್ಪೋ ಒಂದು ವಿಷ್ಯದ ಬಗ್ಗೆ ಮಾತಾಡಿದ. “ತಮ್ಮ ಆರಾಧನೆಯಲ್ಲಿ ಯಾವುದಾದರೊಂದು ದೇವರನ್ನ ಬಿಟ್ಟುಬಿಟ್ಟಿರಬಹುದು, ಇದ್ರಿಂದ ಆತನು ಕೋಪ ಮಾಡ್ಕೊಬಹುದು ಅನ್ನೋ ಭಯದಿಂದ ‘ಗೊತ್ತಿಲ್ಲದ ದೇವ್ರಿಗೆ’ ಬಲಿಪೀಠಗಳನ್ನ ಮಾಡಿಡೋದು ಗ್ರೀಕರ ಮತ್ತು ಇನ್ನೂ ಕೆಲವರ ಸಂಪ್ರದಾಯವಾಗಿತ್ತು” ಅಂತ ಒಂದು ಪುಸ್ತಕ ಹೇಳುತ್ತೆ. ಇಂಥ ಬಲಿಪೀಠ ಮಾಡಿಡೋ ಮೂಲಕ ಅಥೆನ್ಸಿನವರು ತಮಗೆ ಗೊತ್ತಿಲ್ಲದ ದೇವರೊಬ್ಬ ಇದ್ದಾನೆ ಅಂತ ಒಪ್ಕೊಂಡಿದ್ರು. ಪೌಲ ಈ ಬಲಿಪೀಠದ ಬಗ್ಗೆ ಮಾತಾಡ್ತಾ ತಾನು ಸಾರ್ತಿದ್ದ ಸಿಹಿಸುದ್ದಿ ಬಗ್ಗೆ ಹೇಳಿದ. “ನೀವು ಆರಾಧಿಸ್ತಿರೋ ಆ ಗೊತ್ತಿಲ್ಲದ ದೇವ್ರ ಬಗ್ಗೆನೇ ನಾನು ಹೇಳೋಕೆ ಬಂದಿದ್ದೀನಿ” ಅಂತ ಹೇಳಿದ. (ಅ. ಕಾ. 17:23) ಪೌಲ ಅವ್ರಿಗೇ ಗೊತ್ತಾಗದ ರೀತಿಯಲ್ಲಿ ತರ್ಕಿಸ್ತಾ ಅವ್ರ ಮನಸ್ಸು ಗೆದ್ದ. ಅವನ ಮೇಲೆ ಕೆಲವರು ಆರೋಪ ಹಾಕಿದ ಹಾಗೆ ಅವನು ಹೊಸ ಅಥವಾ ವಿಚಿತ್ರ ದೇವರ ಬಗ್ಗೆ ಕಲಿಸಲಿಲ್ಲ. ಬದಲಿಗೆ ಅವ್ರಿಗೆ ಗೊತ್ತಿಲ್ಲದ ದೇವರ ಬಗ್ಗೆ ಅಂದ್ರೆ ಸತ್ಯ ದೇವರ ಬಗ್ಗೆ ಕಲಿಸಿದ.
11 ನಾವು ಸೇವೆ ಮಾಡುವಾಗ ಪೌಲನ ತರ ಏನು ಮಾಡಬೇಕು? ಚೆನ್ನಾಗಿ ಗಮನಿಸಬೇಕು, ಮನೆಯವರು ತುಂಬ ದೇವಭಕ್ತರು ಅನ್ನೋದಕ್ಕೆ ಆಧಾರಗಳನ್ನ ನೋಡಬೇಕು. ಉದಾಹರಣೆಗೆ, ಧರ್ಮಕ್ಕೆ ಸಂಬಂಧಪಟ್ಟ ಕೆಲವು ವಸ್ತುಗಳನ್ನ ಅವರು ಧರಿಸಿಕೊಂಡಿರಬಹುದು ಅಥವಾ ಮನೇಲಿ, ಮನೆ ಸುತ್ತಮುತ್ತ ಇಟ್ಟಿರಬಹುದು. ಆಗ ನಾವು, ‘ನಿಮಗೆ ತುಂಬ ದೇವ ಭಕ್ತಿ ಇರೋದನ್ನ ನೋಡಿ ಖುಷಿ ಆಯ್ತು. ಧಾರ್ಮಿಕ ವಿಷ್ಯಗಳಲ್ಲಿ ಆಸಕ್ತಿ ಇರೋ ನಿಮ್ಮಂಥ ವ್ಯಕ್ತಿಗಳ ಹತ್ರ ಮಾತಾಡಬೇಕಂತ ನಾನು ಅಂದ್ಕೊಂಡಿದ್ದೆ’ ಅಂತ ಹೇಳಬಹುದು. ಧರ್ಮದ ಕಡೆಗೆ ಅವರಿಗಿರೋ ಭಾವನೆಗಳನ್ನ ಮೆಚ್ಕೊಳ್ಳೋ ಮೂಲಕ ಅವರೂ ನಾವೂ ಒಪ್ಪೋ ವಿಷ್ಯದ ಬಗ್ಗೆ ಮಾತಾಡ್ತಾ ನಮ್ಮ ಸಂಭಾಷಣೆ ಮುಂದುವರಿಸಬಹುದು. ಆದ್ರೆ ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಅವ್ರ ಬಗ್ಗೆ ತೀರ್ಪು ಮಾಡೋದು ನಮ್ಮ ಗುರಿಯಲ್ಲ ಅನ್ನೋದನ್ನ ನೆನಪಲ್ಲಿಡಿ. ಯಾಕಂದ್ರೆ ಒಂದು ಕಾಲದಲ್ಲಿ ಸುಳ್ಳು ಧಾರ್ಮಿಕ ನಂಬಿಕೆಗಳನ್ನ ಪಾಲಿಸ್ತಿದ್ದ ತುಂಬ ಅಮಾಯಕ ಜನ ಇವತ್ತು ಕ್ರೈಸ್ತರಾಗಿ ನಮ್ಮ ಜೊತೆ ಇದ್ದಾರೆ.
“ದೇವರು ನಮ್ಮಲ್ಲಿ ಒಬ್ರಿಗೂ ದೂರವಾಗಿಲ್ಲ” (ಅ. ಕಾ. 17:24-28)
12. ಪೌಲ ತನ್ನ ಮಾತನ್ನ ಜನ್ರಿಗೆ ತಕ್ಕ ಹಾಗೆ ಹೇಗೆ ಹೊಂದಿಸ್ಕೊಂಡ?
12 ಆರಂಭದಲ್ಲಿ ತಾನು ಮತ್ತೆ ಜನ್ರೂ ಒಪ್ಪೋ ಒಂದು ವಿಷ್ಯದ ಬಗ್ಗೆ ಪೌಲ ಮಾತಾಡಿದ ನಿಜ. ಆದ್ರೆ ಸಿಹಿಸುದ್ದಿ ಬಗ್ಗೆ ಹೇಳೋವಾಗ್ಲೂ ಇದನ್ನೇ ಮುಂದುವರಿಸಿದನಾ? ಆ ಪಟ್ಟಣದ ಜನ್ರಿಗೆ ಗ್ರೀಕ್ ತತ್ವಜ್ಞಾನದ ಬಗ್ಗೆ ಚೆನ್ನಾಗಿ ಗೊತ್ತಿತ್ತು, ಆದ್ರೆ ಬೈಬಲ್ ಬಗ್ಗೆ ಏನೂ ಗೊತ್ತಿರಲಿಲ್ಲ. ಇದನ್ನ ಪೌಲ ಅರ್ಥ ಮಾಡ್ಕೊಂಡು ತನ್ನ ಮಾತನ್ನ ತುಂಬ ರೀತಿಯಲ್ಲಿ ಹೊಂದಿಸ್ಕೊಂಡ. ಒಂದು, ಅವನು ನೇರವಾಗಿ ಬೈಬಲಿನ ವಚನಗಳನ್ನ ಹೇಳದೆ ಬೈಬಲ್ ಬೋಧನೆಗಳನ್ನ ತಿಳಿಸಿದ. ಎರಡು, “ನಾವು,” “ನಮ್ಮಲ್ಲಿ” ಅನ್ನೋ ಪದಗಳನ್ನ ಆಗಾಗ ಉಪಯೋಗಿಸಿ ತನ್ನನ್ನೂ ಆ ಜನ್ರ ಜೊತೆ ಸೇರಿಸ್ಕೊಂಡ. ಮೂರು, ತಾನು ಹೇಳ್ತಿರೋ ಕೆಲವು ವಿಷ್ಯಗಳು ಅವ್ರ ಬರಹಗಳಲ್ಲೇ ಇದೆ ಅಂತ ತೋರಿಸೋಕೆ ಅವನು ಗ್ರೀಕ್ ಸಾಹಿತ್ಯಗಳಲ್ಲಿರೋ ವಿಷ್ಯಗಳನ್ನೂ ಹೇಳಿದ. ಇದನ್ನೆಲ್ಲ ಪೌಲ ಹೇಗೆ ಮಾಡಿದ ಅಂತ ನಾವೀಗ ನೋಡೋಣ. ಅಥೆನ್ಸಿನ ಜನ್ರಿಗೆ ಗೊತ್ತಿಲ್ಲದ ದೇವರ ಬಗ್ಗೆ ಯಾವ ಮುಖ್ಯವಾದ ಸತ್ಯಗಳನ್ನ ಹೇಳಿದ ಅಂತನೂ ನೋಡೋಣ.
13. (ಎ) ಪೌಲ ವಿಶ್ವದ ಆರಂಭದ ಬಗ್ಗೆ ಏನು ಹೇಳಿದ? (ಬಿ) ಅವನ ಮಾತುಗಳ ಅರ್ಥ ಏನಾಗಿತ್ತು?
13 ವಿಶ್ವವನ್ನ ದೇವರು ಸೃಷ್ಟಿ ಮಾಡಿದನು. ಪೌಲ ಆ ಜನ್ರಿಗೆ “ಇಡೀ ಜಗತ್ತನ್ನ, ಅದ್ರಲ್ಲಿರೋ ಎಲ್ಲವನ್ನ ಸೃಷ್ಟಿ ಮಾಡಿರೋ ದೇವರು ಭೂಮಿ-ಆಕಾಶದ ಒಡೆಯನಾಗಿ ಇರೋದ್ರಿಂದ ಮನುಷ್ಯರ ಕೈಯಿಂದ ಕಟ್ಟಿದ ಗುಡಿಗಳಲ್ಲಿ ವಾಸಮಾಡಲ್ಲ” ಅಂತ ಹೇಳಿದ. (ಅ. ಕಾ. 17:24) ವಿಶ್ವ ಆಕಸ್ಮಿಕವಾಗಿ ಇದ್ದಕ್ಕಿದ್ದ ಹಾಗೆ ಬರಲಿಲ್ಲ. ಅದನ್ನೆಲ್ಲ ಸತ್ಯ ದೇವರೇ ಸೃಷ್ಟಿ ಮಾಡಿದ್ದು. (ಕೀರ್ತ. 146:6) ಅಥೇನ ಮತ್ತು ಬೇರೆ ದೇವತೆಗಳ ಮಹಿಮೆ ಅವುಗಳ ದೇವಾಲಯ, ಗುಡಿ ಮತ್ತು ಬಲಿಪೀಠಗಳ ಮೇಲೆ ಹೊಂದ್ಕೊಂಡಿತ್ತು. ಆದ್ರೆ ಭೂಮಿ, ಆಕಾಶವನ್ನ ಸೃಷ್ಟಿ ಮಾಡಿದ ಸರ್ವೋನ್ನತ ದೇವರು ಅವ್ರ ತರ ಅಲ್ಲ. ಆತನಿಗೆ ಇರೋಕೆ ಮನುಷ್ಯರು ಕಟ್ಟಿದ ದೇವಾಲಯಗಳು ಸಾಕಾಗಲ್ಲ. (1 ಅರ. 8:27) ಒಂದರ್ಥದಲ್ಲಿ ಪೌಲನ ಮಾತಿನ ಅರ್ಥ ಹೀಗಿತ್ತು: ಮನುಷ್ಯರು ದೇವಾಲಯಗಳನ್ನ ಕಟ್ಟಿ ಅದ್ರಲ್ಲಿ ಮಾಡಿಟ್ಟಿರೋ ಮೂರ್ತಿಗಳಿಗಿಂತ ಸತ್ಯ ದೇವರು ತುಂಬ ದೊಡ್ಡವನು.—ಯೆಶಾ. 40:18-26.
14. ದೇವರು ಮನುಷ್ಯರ ಮೇಲೆ ಅವಲಂಭಿಸಿಲ್ಲ ಅಂತ ಪೌಲ ಹೇಗೆ ತೋರಿಸ್ಕೊಟ್ಟ?
14 ದೇವರು ಮನುಷ್ಯರ ಮೇಲೆ ಅವಲಂಭಿಸಿಲ್ಲ. ಅಥೆನ್ಸಿನ ಜನ್ರು ಮೂರ್ತಿಗಳಿಗೆ ಆಡಂಬರದ ಬಟ್ಟೆಗಳನ್ನ ಹಾಕ್ತಿದ್ರು, ದುಬಾರಿ ಉಡುಗೊರೆಗಳನ್ನ, ತಿನ್ನೋಕೆ ಅಥವಾ ಕುಡಿಯೋಕೆ ಏನಾದ್ರೂ ತಂದು ಆ ಮೂರ್ತಿಗಳಿಗೆ ಕೊಡ್ತಿದ್ರು. ಇದನ್ನೆಲ್ಲ ಆ ಮೂರ್ತಿಗಳು ಉಪಯೋಗಿಸ್ಕೊಳ್ತವೆ ಅನ್ನೋ ತರ ತಗೊಂಡು ಬರ್ತಿದ್ರು. ಈ ತರ ಮಾಡೋದು ಅವ್ರ ರೂಢಿ ಆಗಿತ್ತು. ಆದ್ರೆ ಪೌಲನ ಮಾತುಗಳನ್ನ ಕೇಳಿಸ್ಕೊಳ್ತಿದ್ದ ಕೆಲವು ಗ್ರೀಕ್ ತತ್ವಜ್ಞಾನಿಗಳು ಮನುಷ್ಯರಿಂದ ದೇವರಿಗೆ ಯಾವ ವಸ್ತುಗಳ ಅಗತ್ಯನೂ ಇಲ್ಲ ಅಂತ ನಂಬ್ತಿದ್ರು ಅನ್ಸುತ್ತೆ. ಅದಕ್ಕೆ, “ದೇವ್ರಿಗೆ ಮನುಷ್ಯರ ಸಹಾಯದ ಅಗತ್ಯ ಇಲ್ಲ” ಅನ್ನೋ ಪೌಲನ ಮಾತನ್ನ ಅವರೂ ಒಪ್ಕೊಂಡಿರಬೇಕು. ಅದಕ್ಕೆ ಪೌಲ, ಮನುಷ್ಯರು ಸೃಷ್ಟಿಕರ್ತನಿಗೆ ಏನೂ ಕೊಡಕ್ಕಾಗಲ್ಲ, ಆತನೇ ಮನುಷ್ಯರಿಗೆ ಬೇಕಾಗಿದ್ದನ್ನೆಲ್ಲ ಕೊಡ್ತಾನೆ, ಸೂರ್ಯ, ಮಳೆ ಮತ್ತು ಫಲವತ್ತಾದ ಮಣ್ಣನ್ನ, “ಎಲ್ರಿಗೂ ಜೀವವನ್ನ, ಉಸಿರನ್ನ, ಎಲ್ಲವನ್ನೂ” ಆತನೇ ಕೊಟ್ಟಿದ್ದಾನೆ ಅಂತ ಹೇಳಿದ. (ಅ. ಕಾ. 17:25; ಆದಿ. 2:7) ದೇವರು ಯಾವಾಗ್ಲೂ ಬೇರೆಯವ್ರಿಗೆ ಕೊಡೋನು. ಹಾಗಾಗಿ ನಾವು ಆತನ ಮೇಲೆ ಅವಲಂಭಿಸಿದ್ದೇವೆ ಹೊರತು ದೇವರು ನಮ್ಮ ಮೇಲಲ್ಲ.
15. (ಎ) ಗ್ರೀಕರಾದ ತಾವು ಬೇರೆಲ್ಲರಿಗಿಂತ ಶ್ರೇಷ್ಠರು ಅಂತ ನೆನಸ್ತಿದ್ದ ಅಥೆನ್ಸಿನ ಜನ್ರ ಜೊತೆ ಪೌಲ ಹೇಗೆ ಮಾತಾಡಿದ? (ಬಿ) ಪೌಲನಿಂದ ನಾವು ಯಾವ ಮುಖ್ಯ ಪಾಠ ಕಲಿಬಹುದು?
15 ದೇವರು ಮನುಷ್ಯರನ್ನ ಸೃಷ್ಟಿ ಮಾಡಿದನು. ಗ್ರೀಕರಾದ ತಾವು ಬೇರೆಲ್ಲರಿಗಿಂತ ಶ್ರೇಷ್ಠರು ಅಂತ ಅಥೆನ್ಸಿನವರು ನಂಬ್ತಿದ್ರು. ಆದ್ರೆ ಈ ತರ ದೇಶಾಭಿಮಾನ ಅಥವಾ ಜಾತಿ ಮೇಲೆ ಅತಿಯಾದ ಅಭಿಮಾನ ಬೈಬಲ್ ಸತ್ಯಕ್ಕೆ ವಿರುದ್ಧ ಅಂತ ಪೌಲನಿಗೆ ಗೊತ್ತಿತ್ತು. (ಧರ್ಮೋ. 10:17) ಆದ್ರೆ ಇದು ಸೂಕ್ಷ್ಮ ವಿಚಾರ ಆಗಿದ್ರಿಂದ ಅದ್ರ ಬಗ್ಗೆ ಅವನು ಜಾಣ್ಮೆ ಮತ್ತು ಕೌಶಲದಿಂದ ಮಾತಾಡಿದ. “ದೇವರು ಒಬ್ಬ ಮನುಷ್ಯನಿಂದಾನೇ ಎಲ್ಲಾ ದೇಶದ ಜನ್ರನ್ನ ಸೃಷ್ಟಿ ಮಾಡಿದ್ದಾನೆ” ಅಂತ ಹೇಳಿದ. ಇದ್ರ ಬಗ್ಗೆ ಅಲ್ಲಿದ್ದ ಜನ್ರು ಖಂಡಿತ ಯೋಚ್ನೆ ಮಾಡಿರಬೇಕು. (ಅ. ಕಾ. 17:26) ಪೌಲ ಅಲ್ಲಿ ಹೇಳ್ತಾ ಇದ್ದಿದ್ದು, ಆದಿಕಾಂಡ ಪುಸ್ತಕದಲ್ಲಿ ಹೇಳಿರೋ ಮೊದಲನೇ ಮನುಷ್ಯನ ಬಗ್ಗೆ. (ಆದಿ. 1:26-28) ಎಲ್ಲಾ ಮನುಷ್ಯರೂ ಒಬ್ಬನಿಂದ ಅಂದ್ರೆ ಆದಾಮನಿಂದ ಬಂದಿರೋದ್ರಿಂದ ಯಾವ ದೇಶದವರೂ ಶ್ರೇಷ್ಠ ಅಲ್ಲ, ಯಾವ ಜಾತಿಯವರೂ ಕೀಳಲ್ಲ. ಪೌಲ ಏನು ಹೇಳ್ತಾ ಇದ್ದಾನೆ ಅನ್ನೋದು ಆ ಜನ್ರಿಗೆ ಖಂಡಿತ ಅರ್ಥ ಆಗಿರಬೇಕು. ಇದ್ರಿಂದ ನಾವು ಯಾವ ಪಾಠ ಕಲಿಬಹುದು? ನಾವು ಸಾರೋವಾಗ ಜಾಣರಾಗಿರಬೇಕು, ಪರಿಸ್ಥಿತಿಗೆ ತಕ್ಕ ಹಾಗೆ ಹೊಂದಿಸ್ಕೊಳ್ಳಬೇಕು. ಹಾಗಂತ ಬೇರೆಯವರು ಒಪ್ಕೊಳ್ಳಬೇಕು ಅಂತ ಬೈಬಲ್ ಸತ್ಯಕ್ಕಿರೋ ಪ್ರಾಮುಖ್ಯತೆನಾ ಕಮ್ಮಿ ಮಾಡಬಾರದು.
16. ಮನುಷ್ಯರ ಬಗ್ಗೆ ದೇವರಿಗಿರೋ ಉದ್ದೇಶ ಏನು?
16 ಮನುಷ್ಯರು ತನಗೆ ಆಪ್ತರಾಗಿರಬೇಕು ಅನ್ನೋದು ದೇವರ ಇಷ್ಟ. ಪೌಲನ ಮಾತುಗಳನ್ನ ಕೇಳ್ತಿದ್ದ ತತ್ವಜ್ಞಾನಿಗಳು ಮನುಷ್ಯರು ಭೂಮಿ ಮೇಲೆ ಹೇಗೆ ಬಂದ್ರು ಅನ್ನೋದ್ರ ಬಗ್ಗೆ ವರ್ಷಾನುಗಟ್ಟಲೆಯಿಂದ ಚರ್ಚೆ ಮಾಡಿದ್ರೂ ಅವ್ರಿಗೆ ಸರಿಯಾದ ಉತ್ರ ಗೊತ್ತಿರಲಿಲ್ಲ. ಆದ್ರೆ ಪೌಲ ಮನುಷ್ಯರ ಬಗ್ಗೆ ದೇವರಿಗಿರೋ ಉದ್ದೇಶ ಏನಂತ ಸ್ಪಷ್ಟವಾಗಿ ಹೇಳಿದ. “ಜನ ತನ್ನನ್ನ ಹುಡುಕಬೇಕು ಅನ್ನೋದು [ದೇವರ] ಆಸೆ. ಆತನು ಖಂಡಿತ ನಮಗೆ ಸಿಗ್ತಾನೆ. ನಿಜ ಹೇಳಬೇಕಂದ್ರೆ ದೇವರು ನಮ್ಮಲ್ಲಿ ಒಬ್ರಿಗೂ ದೂರವಾಗಿಲ್ಲ” ಅಂತ ಪೌಲ ಹೇಳಿದ. (ಅ. ಕಾ. 17:27) ಅಥೆನ್ಸಿನ ಜನ್ರಿಗೆ ಗೊತ್ತಿಲ್ಲದೆ ಇದ್ದ ದೇವರ ಬಗ್ಗೆ ತಿಳ್ಕೊಳ್ಳೋಕೆ ಸಾಧ್ಯನೇ ಇರಲಿಲ್ಲ ಅಂತೇನಿಲ್ಲ. ಯಾಕಂದ್ರೆ ಆತನು ತನ್ನನ್ನ ನಿಜವಾಗ್ಲೂ ಹುಡುಕಿ, ತನ್ನ ಬಗ್ಗೆ ಕಲಿಯೋಕೆ ಇಷ್ಟ ಪಡೋರಿಗೆ ಹತ್ರಾನೇ ಇದ್ದಾನೆ. (ಕೀರ್ತ. 145:18) ಪೌಲ ಇಲ್ಲಿ “ನಮ್ಮಲ್ಲಿ” ಅನ್ನೋ ಪದವನ್ನ ಉಪಯೋಗಿಸಿದ. ಹೀಗೆ ದೇವರಿಗಾಗಿ ‘ಹುಡುಕೋ’ ಅಗತ್ಯ ಇರೋ ಜನ್ರಲ್ಲಿ ತಾನೂ ಇದ್ದೀನಿ ಅಂತ ಸೂಚಿಸಿದ.
17, 18. (ಎ) ಮನುಷ್ಯರು ದೇವರಿಗೆ ಯಾಕೆ ಹತ್ರ ಆಗಬೇಕು? (ಬಿ) ಪೌಲ ಆ ಜನ್ರ ಹತ್ರ ಮಾತಾಡಿದ ರೀತಿಯಿಂದ ನಾವೇನು ಕಲಿಬಹುದು?
17 ದೇವರಿಗೆ ಹತ್ರ ಆಗಬಹುದು ಅಂತ ಮನುಷ್ಯರಿಗೆ ಗೊತ್ತಾಗಬೇಕು. ದೇವರಿಂದಾನೇ “ನಾವು ಬದುಕಿದ್ದೀವಿ, ನಡೆದಾಡ್ತೀವಿ, ಇವತ್ತು ಇಲ್ಲಿದ್ದೀವಿ” ಅಂತ ಪೌಲ ಹೇಳಿದ. ಇಲ್ಲಿ ಪೌಲ ಕ್ರಿ.ಪೂ. 6ನೇ ಶತಮಾನದಲ್ಲಿದ್ದ ಕ್ರೇತದ ಕವಿ ಮತ್ತು ಅಥೆನ್ಸಿನ ಧಾರ್ಮಿಕ ಆಚಾರಗಳಲ್ಲಿ ಹೆಸರಾಂತ ವ್ಯಕ್ತಿ ಆಗಿದ್ದ ಎಪಿಮೆನಡೆಜ಼್‌ನ ಮಾತುಗಳನ್ನೇ ಹೇಳಿದ್ದಾನೆ ಅಂತ ಕೆಲವು ಪಂಡಿತರು ಹೇಳ್ತಾರೆ. ಮನುಷ್ಯರು ದೇವರಿಗೆ ಹತ್ರವಾಗಬೇಕು ಅಂತ ಹೇಳೋಕೆ ಇನ್ನೊಂದು ಕಾರಣವನ್ನೂ ಪೌಲ ಕೊಟ್ಟ. “ನಿಮ್ಮಲ್ಲಿರೋ ಕೆಲವು ಕವಿಗಳು ಸಹ . . . ‘ನಾವು ಆತನ ಮಕ್ಕಳೇ’ ಅಂದಿದ್ದಾರೆ” ಅಂತ ಹೇಳಿದ. (ಅ. ಕಾ. 17:28) ಮನುಷ್ಯರು ದೇವರ ಜೊತೆ ಒಳ್ಳೇ ಸ್ನೇಹ-ಸಂಬಂಧ ಬೆಳೆಸ್ಕೊಬೇಕು, ಎಲ್ಲಾ ಮನುಷ್ಯರು ಒಬ್ಬ ವ್ಯಕ್ತಿಯ ವಂಶದವರು, ಆ ವ್ಯಕ್ತಿಯನ್ನ ಸೃಷ್ಟಿಮಾಡಿದ್ದು ದೇವರೇ ಅನ್ನೋ ಸತ್ಯ ಜನ್ರಿಗೆ ಗೊತ್ತಾಗಬೇಕು ಅನ್ನೋ ಕಾರಣಕ್ಕೆ ಪೌಲ ನೇರವಾಗಿ ಗ್ರೀಕ್ ಬರಹಗಳಲ್ಲಿರೋ ಮಾತನ್ನ ಹೇಳಿದ. ಯಾಕಂದ್ರೆ ಆ ಬರಹಗಳ ಮೇಲೆ ಆ ಜನ್ರಿಗೆ ತುಂಬ ಗೌರವ ಇತ್ತು ಅನ್ನೋದ್ರಲ್ಲಿ ಯಾವ ಸಂಶಯನೂ ಇರಲಿಲ್ಲ. d ಪೌಲನ ತರಾನೇ ನಾವು ಕೂಡ ಸಿಹಿಸುದ್ದಿ ಸಾರೋವಾಗ ಇತಿಹಾಸದ ಪುಟಗಳಿಂದ, ಎನ್‌ಸೈಕ್ಲಪೀಡಿಯಗಳಿಂದ ಅಥವಾ ಮನ್ನಣೆ ಪಡೆದಿರೋ ಪುಸ್ತಕಗಳಿಂದ ಕೆಲವೊಂದು ವಿಷ್ಯಗಳನ್ನ ಹೇಳಬಹುದು. ಉದಾಹರಣೆಗೆ, ಕೆಲವು ಸುಳ್ಳು ಧಾರ್ಮಿಕ ಪದ್ಧತಿ, ಆಚಾರಗಳು ಎಲ್ಲಿಂದ ಹುಟ್ಕೊಳ್ತು ಅನ್ನೋದರ ಬಗ್ಗೆ ಹೇಳೋವಾಗ ಒಂದು ಮನ್ನಣೆ ಪಡೆದಿರೋ ಪುಸ್ತಕದಿಂದ ಸರಿಯಾದ ವಿಷ್ಯವನ್ನ ಹೇಳಿ ಜನ್ರ ಮನವೊಪ್ಪಿಸಬಹುದು.
18 ಪೌಲ ಜನ್ರಿಗೆ ತಕ್ಕ ಹಾಗೆ ಹೊಂದಾಣಿಕೆ ಮಾಡ್ಕೊಳ್ತಾ ದೇವರ ಬಗ್ಗೆ ಇರೋ ಮುಖ್ಯವಾದ ಸತ್ಯಗಳನ್ನ ಹೇಳಿದ. ಇದನ್ನ ತಿಳ್ಕೊಂಡು ಅಥೆನ್ಸಿನ ಜನರು ಏನು ಮಾಡಬೇಕು ಅಂತನೂ ಪೌಲ ಹೇಳಿದ. ಅದೇನು ಅಂತ ತಿಳ್ಕೊಳ್ಳೋಣ ಬನ್ನಿ.
‘ಎಲ್ರೂ ತಿದ್ಕೊಂಡು ಬದಲಾಗಬೇಕು’ (ಅ. ಕಾ. 17:29-31)
19, 20. (ಎ) ಮೂರ್ತಿಪೂಜೆ ತಪ್ಪು ಅಂತ ಪೌಲ ಹೇಗೆ ಅರ್ಥ ಮಾಡಿಸಿದ? (ಬಿ) ಅಥೆನ್ಸಿನ ಜನರು ಏನೆಲ್ಲಾ ಮಾಡಬೇಕಿತ್ತು?
19 ಸರಿಯಾಗಿರೋದನ್ನ ಮಾಡೋಕೆ ಜನ್ರನ್ನ ಪೌಲ ಪ್ರೋತ್ಸಾಹಿಸಿದ. ಅವನು ಗ್ರೀಕ್ ಬರಹಗಳಿಂದ ಕೆಲವು ವಿಷ್ಯಗಳನ್ನ ಹೇಳ್ತಾ ಹೀಗಂದ: “ನಾವು ದೇವ್ರ ಮಕ್ಕಳು ಆಗಿರೋದ್ರಿಂದ ದೇವರು ಬೆಳ್ಳಿ, ಬಂಗಾರ ಅಥವಾ ಕಲ್ಲಿಂದ ಮಾಡಿರೋ ಮೂರ್ತಿ ತರ ಇದ್ದಾನೆ ಅಂತ ನಾವು ಅಂದ್ಕೊಳ್ಳಬಾರದು. ಮನುಷ್ಯ ಕಲ್ಪಿಸಿಕೊಂಡು ಮಾಡಿದ ಕಲೆಯ ಹಾಗೆ, ಕೆತ್ತನೆಯ ಹಾಗೆ ಇದ್ದಾನೆ ಅಂತ ನೆನಸಬಾರದು.” (ಅ. ಕಾ. 17:29) ಮನುಷ್ಯರನ್ನ ಮಾಡಿದ್ದು ದೇವರು, ಹಾಗಿದ್ದ ಮೇಲೆ ಮನುಷ್ಯರು ಮಾಡಿರೋ ಮೂರ್ತಿಗಳು ಹೇಗೆ ದೇವರು ಆಗೋಕೆ ಸಾಧ್ಯ? ಪೌಲ ಜಾಣ್ಮೆಯಿಂದ ಮಾತಾಡಿದ್ರಿಂದ ಮೂರ್ತಿಗಳನ್ನ ಆರಾಧಿಸೋದು ತುಂಬ ತಪ್ಪು ಅಂತ ಜನ್ರಿಗೆ ಗೊತ್ತಾಯ್ತು. (ಕೀರ್ತ. 115:4-8; ಯೆಶಾ. 44:9-20) ಪೌಲ “ನಾವು ಅಂದ್ಕೊಳ್ಳಬಾರದು” ಅಂತ ಹೇಳೋ ಮೂಲಕ ಅವ್ರ ಹತ್ರ ಮೃದುವಾಗಿ ಮಾತಾಡಿದ.
20 ಪೌಲ ಅಥೆನ್ಸಿನ ಜನರು ಏನು ಮಾಡಬೇಕು ಅನ್ನೋದನ್ನ ಸ್ಪಷ್ಟವಾಗಿ ಹೇಳಿದ. “ಒಂದು ಕಾಲದಲ್ಲಿ ಜನ ಗೊತ್ತಿಲ್ಲದೆ [ಅಂದ್ರೆ ಮೂರ್ತಿಗಳನ್ನ ಮಾಡ್ಕೊಂಡು ಆರಾಧನೆ ಮಾಡಿದ್ರೆ ದೇವರಿಗೆ ಇಷ್ಟ ಆಗುತ್ತೆ ಅಂತ ಅಂದ್ಕೊಂಡು] ಇದನ್ನೆಲ್ಲ ಮಾಡಿದ್ರು. ದೇವರು ಅದನ್ನ ನೋಡಿಯೂ ನೋಡದ ಹಾಗೆ ಇದ್ದನು. ಆದ್ರೆ ದೇವರು ಈಗ ಹಾಗಿಲ್ಲ. ಅವ್ರೆಲ್ಲ ತಿದ್ಕೊಂಡು ಬದಲಾಗಬೇಕು ಅಂತ ಆತನು ಎಲ್ರಿಗೂ ಹೇಳ್ತಾ ಇದ್ದಾನೆ” ಅಂತ ಹೇಳಿದ. (ಅ. ಕಾ. 17:30) ತಿದ್ಕೊಂಡು ಬದಲಾಗಬೇಕು ಅಂತ ಪೌಲ ಹೇಳಿದಾಗ ಅಲ್ಲಿದ್ದ ಕೆಲವ್ರಿಗೆ ಆಶ್ಚರ್ಯ ಆಗಿರಬಹುದು. ಆದ್ರೆ ಅವ್ರಿಗೆ ಜೀವ ಕೊಟ್ಟಿದ್ದು ದೇವರು, ಹಾಗಾಗಿ ಆತನಿಗೆ ಅವರು ಲೆಕ್ಕ ಒಪ್ಪಿಸಬೇಕು ಅಂತ ಪೌಲ ಸ್ಪಷ್ಟವಾಗಿ ಹೇಳಿದ. ಅವರು ದೇವರನ್ನ ಹುಡುಕಬೇಕಿತ್ತು, ಆತನ ಬಗ್ಗೆ ಸತ್ಯವನ್ನ ಕಲಿಬೇಕಿತ್ತು ಮತ್ತು ಆ ಸತ್ಯಕ್ಕೆ ತಕ್ಕ ಹಾಗೆ ತಮ್ಮ ಜೀವನದಲ್ಲಿ ಬದಲಾವಣೆಗಳನ್ನ ಮಾಡ್ಕೊಬೇಕಿತ್ತು. ಅಂದ್ರೆ ಅಥೆನ್ಸಿನ ಜನರು ಮೂರ್ತಿಪೂಜೆ ಮಾಡೋದು ಪಾಪ ಅಂತ ಅರ್ಥ ಮಾಡ್ಕೊಂಡು ಅದನ್ನ ಬಿಟ್ಟುಬಿಡಬೇಕಿತ್ತು.
21, 22. (ಎ) ಪೌಲ ಏನು ಹೇಳ್ತಾ ತನ್ನ ಮಾತುಗಳನ್ನ ಮುಗಿಸಿದ? (ಬಿ) ಅವನ ಮಾತುಗಳಿಂದ ನಮಗೆ ಯಾವ ಪ್ರಯೋಜನ ಇದೆ?
21 “ದೇವರು ಒಂದು ದಿನವನ್ನ ನಿಶ್ಚಯಿಸಿದ್ದಾನೆ. ಆ ದಿನ ಆತನು ಭೂಮಿ ಮೇಲಿರೋ ಎಲ್ರಿಗೆ ಸರಿಯಾಗಿ ತೀರ್ಪು ಮಾಡ್ತಾನೆ. ಅದಕ್ಕಾಗಿ ಆತನು ಒಬ್ಬ ವ್ಯಕ್ತಿಯನ್ನ ಆರಿಸ್ಕೊಂಡಿದ್ದಾನೆ. ಆ ದಿನ ಬಂದೆ ಬರುತ್ತೆ ಅಂತ ಪಕ್ಕಾ ಮಾಡೋಕೆ ಆತನು ಆ ವ್ಯಕ್ತಿಯನ್ನ ಮತ್ತೆ ಎಬ್ಬಿಸಿ ಜೀವ ಕೊಟ್ಟಿದ್ದಾನೆ” ಅಂತ ಹೇಳಿ ಪೌಲ ತನ್ನ ಮಾತುಗಳನ್ನ ಮುಗಿಸಿದ. (ಅ. ಕಾ. 17:31) ಪೌಲ ಆ ಜನರ ಹತ್ರ ದೇವರ ನ್ಯಾಯತೀರ್ಪಿನ ದಿನ ಬೇಗ ಬರುತ್ತೆ ಅಂತ ಹೇಳಿದ. ಹಾಗಾಗಿ ಸತ್ಯ ದೇವರನ್ನ ಹುಡುಕಿ ಆತನ ಬಗ್ಗೆ ತಿಳ್ಕೊಳ್ಳೋಕೆ ಆ ಜನರಿಗೆ ಇದೊಂದು ಒಳ್ಳೇ ಕಾರಣ ಆಗಿತ್ತು. ಆದ್ರೆ ಪೌಲ ದೇವರು ನೇಮಿಸಿರೋ ನ್ಯಾಯಾಧೀಶ ಯಾರು ಅಂತ ಹೇಳಲಿಲ್ಲ. ಆದ್ರೆ ಆ ನ್ಯಾಯಾಧೀಶನ ಬಗ್ಗೆ ಕೆಲವು ವಿಷ್ಯಗಳನ್ನ ಹೇಳಿದ. ಅದೇನಂದ್ರೆ ಅವನು ಮನುಷ್ಯನಾಗಿ ಜೀವಿಸಿ, ಸತ್ತನು ಮತ್ತು ದೇವರಿಂದ ಮತ್ತೆ ಜೀವ ಪಡ್ಕೊಂಡನು!
22 ಪೌಲನ ಈ ಕೊನೇ ಮಾತುಗಳು ಇವತ್ತು ನಮಗೂ ತುಂಬ ಪ್ರಯೋಜನ ತರುತ್ತೆ. ದೇವರು ನೇಮಿಸಿದ ನ್ಯಾಯಾಧೀಶ ಮತ್ತೆ ಜೀವ ಪಡ್ಕೊಂಡ ಯೇಸು ಕ್ರಿಸ್ತನೇ ಅಂತ ನಮಗೆ ಗೊತ್ತು. (ಯೋಹಾ. 5:22) ನ್ಯಾಯತೀರ್ಪಿನ ದಿನ ಸಾವಿರ ವರ್ಷ ಇರುತ್ತೆ, ಆ ದಿನ ತುಂಬ ಹತ್ರ ಇದೆ ಅಂತನೂ ನಮಗೆ ಗೊತ್ತು. (ಪ್ರಕ. 20:4, 6) ಆದ್ರೂ ನಾವು ಈ ನ್ಯಾಯತೀರ್ಪಿನ ದಿನಕ್ಕೆ ಹೆದರಲ್ಲ. ಯಾಕಂದ್ರೆ ನಮಗೆ ನಂಬಿಗಸ್ತರು ಅಂತ ತೀರ್ಪು ಸಿಕ್ಕಿದ್ರೆ ತುಂಬ ಆಶೀರ್ವಾದಗಳು ಸಿಗುತ್ತೆ. ಕನಸು ಮನಸ್ಸಲ್ಲಿ ನೆನಸದಿರೋ ಆಶೀರ್ವಾದಗಳು ಸಿಗುತ್ತೆ. ನಾವು ಮುಂದೆ ಖುಷಿಖುಷಿಯಾಗಿ ಇರ್ತೀವಿ ಅಂತ ಬೈಬಲ್ ಹೇಳೋದು ಖಂಡಿತ ನಿಜ ಆಗುತ್ತೆ. ಅದಕ್ಕೆ ದೊಡ್ಡ ಆಧಾರ ಯೇಸು ಕ್ರಿಸ್ತ ಮತ್ತೆ ಜೀವಂತವಾಗಿ ಬಂದಿದ್ದು. ಇದು ಅದ್ಭುತಗಳಲ್ಲೇ ದೊಡ್ಡ ಅದ್ಭುತ!
“ಕೆಲವರು . . . ಯೇಸುವಿನ ಶಿಷ್ಯರಾದ್ರು” (ಅ. ಕಾ. 17:32-34)
23. ಪೌಲನ ಮಾತುಗಳಿಗೆ ಜನ ಹೇಗೆ ಪ್ರತಿಕ್ರಿಯಿಸಿದ್ರು?
23 ಪೌಲನ ಮಾತುಗಳಿಗೆ ಜನ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸಿದ್ರು. “ಸತ್ತವ್ರಿಗೆ ಮತ್ತೆ ಜೀವ ಬರುತ್ತೆ ಅನ್ನೋದನ್ನ ಕೇಳಿಸ್ಕೊಂಡಾಗ ಕೆಲವರು ತಮಾಷೆ ಮಾಡೋಕೆ ಶುರುಮಾಡಿದ್ರು.” ಇನ್ನು ಕೆಲವರು ಮೃದುವಾಗಿ ತಿರಸ್ಕರಿಸ್ತಾ, “ಇದ್ರ ಬಗ್ಗೆ ನಾವು ಇನ್ನೊಂದು ಸಾರಿ ಕೇಳಿಸ್ಕೊಳ್ತೀವಿ” ಅಂದ್ರು. (ಅ. ಕಾ. 17:32) ಆದ್ರೆ ಸ್ವಲ್ಪ ಜನರು “ಪೌಲನ ಜೊತೆನೇ ಹೋಗಿ ಯೇಸುವಿನ ಶಿಷ್ಯರಾದ್ರು. ಅವ್ರಲ್ಲಿ ಅರಿಯೊಪಾಗದ ನ್ಯಾಯಾಧೀಶ ದಿಯೊನುಸ್ಯ, ದಾಮರಿ ಅನ್ನೋ ಸ್ತ್ರೀ ಮತ್ತು ಇನ್ನು ಕೆಲವರು ಇದ್ರು.” (ಅ. ಕಾ. 17:34) ನಾವು ಸಾರುವಾಗ್ಲೂ ಜನ ಇದೇ ತರ ಇರ್ತಾರೆ. ಕೆಲವರು ನಮ್ಮನ್ನ ಗೇಲಿಮಾಡಿದ್ರೆ, ಇನ್ನು ಕೆಲವರು ಮೃದುವಾಗಿ ಬೇಡ ಅಂದುಬಿಡ್ತಾರೆ. ಆದ್ರೆ ಕೆಲವರು ನಾವು ಹೇಳೋ ಸಂದೇಶನ ಕೇಳಿಸ್ಕೊಂಡು ಕ್ರೈಸ್ತರಾಗ್ತಾರೆ. ಆಗ ನಮಗೆ ತುಂಬ ಸಂತೋಷ ಆಗುತ್ತೆ.
24. ಅರಿಯೊಪಾಗದಲ್ಲಿ ಪೌಲ ಜನ್ರಿಗೆ ಹೇಳಿದ ಮಾತುಗಳಿಂದ ನಾವೇನು ಕಲಿತ್ವಿ?
24 ಪೌಲ ಏನು ಮಾತಾಡಿದ, ಹೇಗೆ ಮಾತಾಡಿದ ಅನ್ನೋದರ ಬಗ್ಗೆ ಕಲಿತಿದ್ರಿಂದ ನಾವು ಜನರ ಹತ್ರ ತರ್ಕಬದ್ಧವಾಗಿ, ಅವ್ರನ್ನ ಒಪ್ಪಿಸೋ ರೀತಿಯಲ್ಲಿ, ಅವ್ರಿಗೆ ತಕ್ಕ ಹಾಗೆ ಹೊಂದಿಸ್ಕೊಂಡು ಮಾತಾಡೋದು ಹೇಗೆ ಅಂತ ಕಲಿತ್ವಿ. ಅಷ್ಟೇ ಅಲ್ಲ, ಸುಳ್ಳು ಧಾರ್ಮಿಕ ನಂಬಿಕೆಯಿಂದ ಕುರುಡಾಗಿರೋ ಜನರ ಹತ್ರ ಮಾತಾಡುವಾಗ ಯಾಕೆ ತಾಳ್ಮೆ ಮತ್ತು ಜಾಣ್ಮೆ ತೋರಿಸಬೇಕು ಅಂತಾನೂ ಕಲಿತ್ವಿ. ಜೊತೆಗೆ, ಜನ್ರಿಗೆ ಇಷ್ಟ ಆಗಬೇಕು ಅನ್ನೋ ಕಾರಣಕ್ಕೆ ಬೈಬಲ್ ಸತ್ಯಗಳ ಪ್ರಾಮುಖ್ಯತೆನಾ ಕಮ್ಮಿ ಮಾಡಬಾರದು ಅನ್ನೋ ದೊಡ್ಡ ಪಾಠವನ್ನೂ ಕಲಿತ್ವಿ. ಇದನ್ನೆಲ್ಲ ಮಾಡೋದಾದ್ರೆ ನಾವು ಅಪೊಸ್ತಲ ಪೌಲನ ತರ ಸೇವೆಯಲ್ಲಿ ಜನ್ರಿಗೆ ಚೆನ್ನಾಗಿ ಕಲಿಸೋಕೆ ಆಗುತ್ತೆ. ಮೇಲ್ವಿಚಾರಣೆ ಮಾಡೋರು ಸಭೆಯಲ್ಲಿ ಚೆನ್ನಾಗಿ ಕಲಿಸೋಕೆ ಆಗುತ್ತೆ. ಹೀಗೆ ನಾವು ‘ದೇವರನ್ನ ಹುಡುಕಿ ಆತನ ಬಗ್ಗೆ ತಿಳ್ಕೊಳ್ಳೋಕೆ’ ಬೇರೆಯವ್ರಿಗೆ ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಇರ್ತೀವಿ.—ಅ. ಕಾ. 17:27.
a “ ಅಥೆನ್ಸ್—ಆ ಕಾಲದ ಸಾಂಸ್ಕೃತಿಕ ನಗರ” ಅನ್ನೋ ಚೌಕ ನೋಡಿ.
b “ ಎಪಿಕೂರಿಯರು ಮತ್ತು ಸ್ತೋಯಿಕರು” ಅನ್ನೋ ಚೌಕ ನೋಡಿ.
c ಅರಿಯೊಪಾಗ ಅಕ್ರಪೊಲಿಸ್‌ನ ವಾಯುವ್ಯದಲ್ಲಿತ್ತು. ಇಲ್ಲಿ ಅಥೆನ್ಸಿನ ಮುಖ್ಯ ನ್ಯಾಯಾಧೀಶರು ಸೇರಿ ಬರ್ತಿದ್ರು. “ಅರಿಯೊಪಾಗ” ಅನ್ನೋ ಪದಕ್ಕೆ ನ್ಯಾಯಪೀಠ ಮತ್ತು ಬೆಟ್ಟ ಅನ್ನೋ ಎರಡು ಅರ್ಥ ಇದೆ. ಹಾಗಾಗಿ ಪೌಲನನ್ನ ಬೆಟ್ಟದ ಹತ್ರ ಕರ್ಕೊಂಡು ಹೋದ್ರಾ, ಬೇರೆ ಎಲ್ಲಾದ್ರೂ ಕರ್ಕೊಂಡು ಹೋದ್ರಾ ಅಥವಾ ಸಂತೆಯಲ್ಲೇ ನಡೆಯೋ ನ್ಯಾಯಾಧೀಶರ ಕೂಟಕ್ಕೆ ಕರ್ಕೊಂಡು ಹೋದ್ರಾ ಅನ್ನೋದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ.
d ಸ್ತೋಯಿಕ ಕವಿ ಅರಾಟಸ್ ಖಗೋಳವಿಜ್ಞಾನದ ಬಗ್ಗೆ ಬರೆದ ಫೆನೋಮೆನ ಅನ್ನೋ ಪದ್ಯದಲ್ಲಿದ್ದ ವಿಷ್ಯವನ್ನ ಪೌಲ ಹೇಳಿದ್ದ. ಅವನು ಹೇಳಿದ ವಿಷ್ಯ ಸ್ತೋಯಿಕ ಬರಹಗಾರ ಕ್ಲಿಂತೆಸ್‌ರ ಸ್ಯೂಸನಿಗೆ ಸ್ತೋತ್ರಗೀತೆ ಅನ್ನೋ ಬರಹದಲ್ಲಿ ಮತ್ತು ಬೇರೆ ಗ್ರೀಕ್ ಬರಹಗಳಲ್ಲೂ ಇದೆ.