ಅಧ್ಯಾಯ 16
‘ಮಕೆದೋನ್ಯಕ್ಕೆ ಬನ್ನಿ’
ನೇಮಕವನ್ನ ಸ್ವೀಕರಿಸಿದ್ರೆ, ಹಿಂಸೆಯನ್ನ ಸಂತೋಷದಿಂದ ತಾಳ್ಕೊಂಡ್ರೆ ಆಶೀರ್ವಾದಗಳು ಸಿಗುತ್ತೆ
ಆಧಾರ: ಅಪೊಸ್ತಲರ ಕಾರ್ಯ 16:6-40
1-3. (ಎ) ಪೌಲ ಮತ್ತು ಅವನ ಜೊತೆ ಇದ್ದ ಸಹೋದರರನ್ನ ಪವಿತ್ರಶಕ್ತಿ ಹೇಗೆ ಮಾರ್ಗದರ್ಶಿಸ್ತು? (ಬಿ) ನಾವೀಗ ಯಾವ ಘಟನೆಗಳ ಬಗ್ಗೆ ನೋಡ್ತೀವಿ?
ಮಕೆದೋನ್ಯದ ಫಿಲಿಪ್ಪಿ ನಗರದಿಂದ ಕೆಲವು ಸ್ತ್ರೀಯರು ಗ್ಯಾಂಗೀಟಿಸ್ ಅನ್ನೋ ಕಿರಿದಾದ ನದಿ ತೀರಕ್ಕೆ ಬಂದ್ರು. ಅವರು ರೂಢಿಗನುಸಾರ ನದಿ ದಡದಲ್ಲಿ ಕೂತು ಇಸ್ರಾಯೇಲಿನ ದೇವರಿಗೆ ಪ್ರಾರ್ಥನೆ ಮಾಡಿದ್ರು. ಯೆಹೋವ ಅವ್ರನ್ನ ಗಮನಿಸಿದನು.—2 ಪೂರ್ವ. 16:9; ಕೀರ್ತ. 65:2.
2 ಅದೇ ಸಮಯದಲ್ಲಿ ಫಿಲಿಪ್ಪಿಯಿಂದ 800 ಕಿ.ಮೀ. ಪೂರ್ವದಲ್ಲಿ ಗಂಡಸರ ಒಂದು ಗುಂಪು ದಕ್ಷಿಣ ಗಲಾತ್ಯದ ಲುಸ್ತ್ರ ನಗರದಿಂದ ಹೊರಟಿತ್ತು. ಕೆಲವು ದಿನ ಪ್ರಯಾಣ ಮಾಡಿದ ಮೇಲೆ ಅವರು ಕಲ್ಲುಹಾಸಿದ ರೋಮಿನ ಹೆದ್ದಾರಿಗೆ ತಲುಪಿದ್ರು. ಅದು ಪಶ್ಚಿಮದ ಕಡೆಗೆ ಏಷ್ಯಾ ಪ್ರಾಂತದ ತುಂಬ ಜನಸಂದಣಿಯಿಂದ ಕೂಡಿದ ಪ್ರದೇಶಕ್ಕೆ ಹೋಗ್ತಿತ್ತು. ಈ ಗಂಡಸರು ಅಂದ್ರೆ ಪೌಲ, ಸೀಲ, ತಿಮೊತಿ ಆ ದಾರಿಯಲ್ಲೇ ಪ್ರಯಾಣ ಮಾಡಿ ಎಫೆಸ ಮತ್ತು ಬೇರೆ ಪಟ್ಟಣಗಳನ್ನ ಭೇಟಿ ಮಾಡೋಕೆ ತುದಿಗಾಲಲ್ಲಿದ್ರು. ಅಲ್ಲಿ ಕ್ರಿಸ್ತನ ಬಗ್ಗೆ ಇನ್ನೂ ಕೇಳಿಸ್ಕೊಳ್ಳದಿದ್ದ ಸಾವಿರಾರು ಜನರಿದ್ರು. ಆದ್ರೆ ಅವರು ಆ ಪ್ರಯಾಣ ಆರಂಭಿಸೋ ಮುಂಚೆನೇ ಪವಿತ್ರಶಕ್ತಿ ಅವ್ರನ್ನ ತಡೀತು. ಯಾವ ರೀತಿ ತಡೀತು ಅಂತ ಬೈಬಲಲ್ಲಿ ಇಲ್ಲ. ಆದ್ರೆ ಏಷ್ಯಾದಲ್ಲಿ ಸಾರದ ಹಾಗೆ ಅವ್ರನ್ನ ತಡೀತು. ಯಾಕೆ? ಯೇಸು ಅವ್ರನ್ನ ಏಷ್ಯಾ ಮೈನರ್ ಮಾರ್ಗವಾಗಿ ಈಜಿಯನ್ ಸಮುದ್ರ ದಾಟಿ ಗ್ಯಾಂಗೀಟಿಸ್ ಅನ್ನೋ ಆ ಕಿರಿದಾದ ನದಿ ತೀರಕ್ಕೆ ಹೋಗೋಕೆ ಪವಿತ್ರಶಕ್ತಿ ಮೂಲಕ ಮಾರ್ಗದರ್ಶಿಸಿದನು.
3 ಪೌಲ ಮತ್ತು ಅವನ ಜೊತೆಯಿದ್ದ ಸಹೋದರರನ್ನ ಯೇಸು ಮಕೆದೋನ್ಯಕ್ಕೆ ಹೋಗೋದಕ್ಕೆ ಮಾರ್ಗದರ್ಶಿಸಿದನು. ಇದ್ರಿಂದ ನಾವು ಯಾವ ಮುಖ್ಯ ಪಾಠಗಳನ್ನ ಕಲೀಬಹುದು? ಈಗ ನಾವು, ಪೌಲ ಎರಡನೇ ಮಿಷನರಿ ಪ್ರಯಾಣ ಮಾಡ್ತಿದ್ದಾಗ ನಡೆದ ಕೆಲವು ಘಟನೆಗಳ ಬಗ್ಗೆ ನೋಡೋಣ. ಆ ಪ್ರಯಾಣ ಕ್ರಿ.ಶ. 49ರಲ್ಲಿ ಶುರು ಆಯ್ತು.
“ದೇವರು ನಮ್ಮನ್ನ ಕರೆದಿದ್ದಾನೆ” (ಅ. ಕಾ. 16:6-15)
4, 5. (ಎ) ಬಿಥೂನ್ಯದ ಹತ್ರ ಬಂದಾಗ ಪೌಲ ಮತ್ತು ಅವನ ಜೊತೆ ಇದ್ದವ್ರಿಗೆ ಏನಾಯ್ತು? (ಬಿ) ಶಿಷ್ಯರು ಯಾವ ತೀರ್ಮಾನ ಮಾಡಿದ್ರು? (ಸಿ) ಅದ್ರಿಂದ ಅವ್ರಿಗೆ ಹೇಗೆ ಒಳ್ಳೇದಾಯ್ತು?
4 ಪೌಲ ಮತ್ತು ಅವನ ಜೊತೆ ಇದ್ದ ಸಹೋದರರನ್ನ ಏಷ್ಯಾದಲ್ಲಿ ಸಾರದ ಹಾಗೆ ತಡೆದಾಗ ಅವರು ಬಿಥೂನ್ಯದ ನಗರಗಳಲ್ಲಿ ಸಾರೋಕೆ ಉತ್ತರದ ಕಡೆಗೆ ತಿರುಗಿದ್ರು. ಅಲ್ಲಿಗೆ ತಲುಪೋಕೆ ಅವರು ಫ್ರುಗ್ಯ ಮತ್ತು ಗಲಾತ್ಯದ ಕಡಿಮೆ ಜನ್ರಿದ್ದ ಪ್ರದೇಶಗಳಲ್ಲಿ ಪ್ರಯಾಣ ಮಾಡಿದ್ರು. ಆ ದಾರಿ ಕಲ್ಲುಹಾಸು ಇಲ್ಲದ ಮಣ್ಣಿನ ರಸ್ತೆಗಳಾಗಿತ್ತು. ಆದ್ರೆ ಅವರು ಬಿಥೂನ್ಯಕ್ಕೆ ಇನ್ನೇನು ತಲುಪಬೇಕು ಅಂತ ಇದ್ದಾಗ ಯೇಸು ಇನ್ನೊಂದು ಸಲ ಪವಿತ್ರಶಕ್ತಿ ಮೂಲಕ ಅವ್ರನ್ನ ತಡೆದನು. (ಅ. ಕಾ. 16:6, 7) ಆಗ ಅವ್ರಿಗೆ ತುಂಬ ಗಲಿಬಿಲಿ ಆಗಿದ್ದಿರಬೇಕು. ಏನನ್ನ ಸಾರಬೇಕು, ಹೇಗೆ ಸಾರಬೇಕು ಅಂತ ಅವ್ರಿಗೆ ಗೊತ್ತಿತ್ತು. ಆದ್ರೆ ಎಲ್ಲಿ ಸಾರಬೇಕಂತ ಗೊತ್ತಿರಲಿಲ್ಲ. ಒಂದರ್ಥದಲ್ಲಿ ಅವರು ಏಷ್ಯಾಗೆ ಹೋಗೋ ಬಾಗಿಲನ್ನ ತಟ್ಟಿದ್ರು, ಆದ್ರೆ ಅದು ತೆರೀಲಿಲ್ಲ. ಆಮೇಲೆ ಬಿಥೂನ್ಯದ ಬಾಗಿಲನ್ನ ತಟ್ಟಿದ್ರು, ಅದೂ ತೆರೀಲಿಲ್ಲ. ಆದ್ರೂ ಪೌಲ ಯಾವುದಾದರೊಂದು ಬಾಗಿಲು ತೆರೆಯೋ ತನಕ ತಟ್ತಾ ಇರಬೇಕಂತ ದೃಢತೀರ್ಮಾನ ಮಾಡಿದ್ದ. ಹಾಗಾಗಿ ಅವರು ಒಂದು ತೀರ್ಮಾನ ಮಾಡಿದ್ರು. ಇದೂ ಒಳ್ಳೇ ತೀರ್ಮಾನ ಅಲ್ಲ ಅನ್ನೋ ತರ ಅವ್ರಿಗನಿಸ್ತು. ಅವರು ಪಶ್ಚಿಮಕ್ಕೆ ತಿರುಗಿ ತುಂಬ ನಗರಗಳನ್ನ ದಾಟಿ 550 ಕಿ.ಮೀ. ಪ್ರಯಾಣ ಮಾಡಿ ತ್ರೋವದ ಬಂದರಿಗೆ ಬಂದ್ರು. ಇಲ್ಲಿಂದ ಅವರು ಮಕೆದೋನ್ಯಕ್ಕೆ ಹಡಗಲ್ಲಿ ಹೋಗಬಹುದಿತ್ತು. (ಅ. ಕಾ. 16:8) ಅಲ್ಲಿ ಪೌಲ ಮೂರನೇ ಸಲ ಬಾಗಿಲನ್ನ ತಟ್ಟಿದ. ಆಗ ಅದು ವಿಶಾಲವಾಗಿ ತೆರೀತು.
5 ಲೂಕ ಪುಸ್ತಕವನ್ನ ಬರೆದ ಲೂಕ ತ್ರೋವದಲ್ಲಿ ಈ ಸಹೋದರರ ಜೊತೆ ಸೇರ್ಕೊಂಡ. ಆಮೇಲೆ ಏನಾಯ್ತು ಅಂತ ಅವನೇ ಹೇಳ್ತಾನೆ ನೋಡಿ: “ಪೌಲನಿಗೆ ರಾತ್ರಿ ಒಂದು ದರ್ಶನ ಬಂತು. ಆ ದರ್ಶನದಲ್ಲಿ ಮಕೆದೋನ್ಯದ ಒಬ್ಬ ವ್ಯಕ್ತಿ ಪೌಲನ ಮುಂದೆ ನಿಂತು ‘ಮಕೆದೋನ್ಯಕ್ಕೆ ಬಂದು ನಮಗೆ ಸಹಾಯಮಾಡು’ ಅಂತ ಬೇಡ್ಕೊಳ್ತಾ ಇದ್ದ. ಪೌಲ ಈ ದರ್ಶನ ನೋಡಿದ ತಕ್ಷಣ ನಾವು ಮಕೆದೋನ್ಯಕ್ಕೆ ಹೊರಟ್ವಿ. ಯಾಕಂದ್ರೆ ಅಲ್ಲಿನ ಜನ್ರಿಗೆ ಸಿಹಿಸುದ್ದಿ ಹೇಳೋಕೆ ದೇವರು ನಮ್ಮನ್ನ ಕರೆದಿದ್ದಾನೆ ಅಂತ ಅರ್ಥಮಾಡ್ಕೊಂಡ್ವಿ.” a (ಅ. ಕಾ. 16:9, 10) ಕೊನೆಗೂ ಪೌಲನಿಗೆ ಎಲ್ಲಿ ಸಾರಬೇಕು ಅಂತ ಗೊತ್ತಾಯ್ತು. ಆಗ ಅವನಿಗೆ ಪ್ರಯಾಣವನ್ನ ಅರ್ಧ ದಾರಿಗೇ ನಿಲ್ಲಿಸದೆ ಇದ್ದಿದ್ದಕ್ಕೆ ತುಂಬ ಖುಷಿ ಆಗಿರಬೇಕು! ಈಗ ಈ ನಾಲ್ಕು ಸಹೋದರರು ಕೂಡಲೇ ಮಕೆದೋನ್ಯಕ್ಕೆ ಹಡಗಲ್ಲಿ ಬಂದ್ರು.
6, 7. (ಎ) ಪೌಲನ ಪ್ರಯಾಣದಲ್ಲಿ ನಡೆದ ಘಟನೆಗಳಿಂದ ನಾವೇನು ಕಲಿಬಹುದು? (ಬಿ) ಪೌಲನ ಅನುಭವದಿಂದ ನಮಗೆ ಯಾವ ಆಶ್ವಾಸನೆ ಸಿಗುತ್ತೆ?
6 ಈ ಘಟನೆಯಿಂದ ನಾವೇನು ಕಲಿಬಹುದು? ಪೌಲ ಏಷ್ಯಾದ ಕಡೆಗೆ ಹೋಗೋಕೆ ಶುರು ಮಾಡಿದ ಮೇಲೆನೇ ಪವಿತ್ರಶಕ್ತಿ ಸೂಚನೆ ಕೊಡ್ತು. ಬಿಥೂನ್ಯದ ಹತ್ತತ್ರ ಹೋದ ಮೇಲೆನೇ ಯೇಸು ಸೂಚನೆ ಕೊಟ್ಟನು. ತ್ರೋವಕ್ಕೆ ತಲುಪಿದ ಮೇಲೆನೇ ಮಕೆದೋನ್ಯಕ್ಕೆ ಹೋಗೋಕೆ ಹೇಳಿದನು. ಸಭೆಯ ಯಜಮಾನನಾದ ಯೇಸು ಇವತ್ತು ನಮ್ಮ ಜೊತೆನೂ ಇದೇ ತರ ನಡ್ಕೊಬಹುದು. (ಕೊಲೊ. 1:18) ಉದಾಹರಣೆಗೆ, ನಾವು ಪಯನೀಯರ್ ಸೇವೆ ಮಾಡಬೇಕು ಅಥವಾ ಹೆಚ್ಚು ಪ್ರಚಾರಕರ ಅಗತ್ಯ ಇರೋ ಕಡೆಗೆ ಹೋಗಬೇಕಂತ ತುಂಬ ಸಮಯದಿಂದ ಯೋಚ್ನೆ ಮಾಡ್ತಾ ಇರಬಹುದು. ಆದ್ರೆ ನಾವು ಆ ಗುರಿಗಳನ್ನ ತಲುಪೋಕೆ ಕೆಲವು ಹೆಜ್ಜೆಗಳನ್ನ ತಗೊಂಡ ಮೇಲೆನೇ ಯೇಸು ಪವಿತ್ರಶಕ್ತಿಯಿಂದ ನಮ್ಮನ್ನ ಮಾರ್ಗದರ್ಶಿಸಬಹುದು. ಯಾಕೆ? ಕಾರು ಓಡಿಸ್ತಾ ಇರುವಾಗ ಮಾತ್ರ ಒಬ್ಬ ಚಾಲಕ ಆ ಕಾರನ್ನ ಬಲಕ್ಕೆ ಅಥವಾ ಎಡಕ್ಕೆ ತಿರುಗಿಸೋಕೆ ಆಗುತ್ತೆ. ಅದೇ ತರ, ನಾವು ಮುಂದೆ ಹೆಜ್ಜೆ ಇಟ್ಟು ಹೋಗ್ತಾ ಇದ್ರೆ ಅಂದ್ರೆ ಮನಸಾರೆ ಪ್ರಯತ್ನ ಹಾಕಿದ್ರೆ ಮಾತ್ರ ಹೆಚ್ಚು ಸೇವೆ ಮಾಡೋಕೆ ಬೇಕಾದ ನಿರ್ದೇಶನವನ್ನ ಯೇಸು ನಮಗೆ ಕೊಡ್ತಾನೆ.
7 ನಾವು ಹಾಕಿದ ಪ್ರಯತ್ನಕ್ಕೆ ಫಲ ಸಿಗದಿದ್ರೆ ಏನು ಮಾಡಬೇಕು? ಪವಿತ್ರಶಕ್ತಿ ನಮಗೆ ಮಾರ್ಗದರ್ಶನ ಕೊಡ್ತಿಲ್ಲ ಅಂತ ನಮ್ಮ ಪ್ರಯತ್ನ ಬಿಟ್ಟುಬಿಡಬೇಕಾ? ಇಲ್ಲ. ಪೌಲನಿಗೂ ಆರಂಭದಲ್ಲೇ ಯಶಸ್ಸು ಸಿಗಲಿಲ್ಲ. ಆದ್ರೂ ಯಾವುದಾದರೊಂದು ಬಾಗಿಲು ತೆರೆಯೋ ತನಕ ಅವನು ತಟ್ತಾ ಹೋದ. ಅದೇ ತರ ನಾವು “ಜಾಸ್ತಿ ಸೇವೆ ಮಾಡೋ ಅವಕಾಶದ ಬಾಗಿಲು” ‘ಅಗಲವಾಗಿ ತೆರೆಯೋ’ ತನಕ ಹುಡುಕ್ತಾ ಇದ್ರೆ ನಮಗೂ ಯಶಸ್ಸು ಸಿಕ್ಕೇ ಸಿಗುತ್ತೆ.—1 ಕೊರಿಂ. 16:9.
8. (ಎ) ಫಿಲಿಪ್ಪಿ ನಗರದ ಬಗ್ಗೆ ಹೇಳಿ. (ಬಿ) ಪೌಲ ‘ಪ್ರಾರ್ಥನೆ ಮಾಡೋಕೆ ಜನ ಕೂಡಿಬರೋ ಜಾಗದಲ್ಲಿ’ ಸಾರಿದಾಗ ಏನಾಯ್ತು?
8 ಮಕೆದೋನ್ಯ ತಲುಪಿದ ಮೇಲೆ ಪೌಲ ಮತ್ತು ಅವನ ಜೊತೆ ಇದ್ದವರು ಫಿಲಿಪ್ಪಿಗೆ ಹೋದ್ರು. ಈ ನಗರದ ಜನ್ರಿಗೆ ತಾವು ರೋಮಿನ ಪ್ರಜೆಗಳು ಅನ್ನೋ ಹೆಮ್ಮೆ ಇತ್ತು. ಈ ನಗರದಲ್ಲಿದ್ದ ನಿವೃತ್ತ ರೋಮನ್ ಸೈನಿಕರಿಗೆ ಇದು ‘ಪುಟ್ಟ ರೋಮ್’ ತರಾನೇ ಇತ್ತು. ಈ ಊರ ಬಾಗಿಲಿನ ಹೊರಗಿದ್ದ ಒಂದು ಕಿರಿದಾದ ನದಿ ದಡದಲ್ಲಿದ್ದ ಒಂದು ಜಾಗವನ್ನ ಪೌಲ ಮತ್ತು ಅವನ ಜೊತೆ ಇದ್ದವರು ನೋಡಿ ಅದು ‘ಪ್ರಾರ್ಥನೆ ಮಾಡೋಕೆ ಜನ ಕೂಡಿಬರೋ ಜಾಗ ಅಂತ ಅಂದ್ಕೊಂಡ್ರು.’ b ಸಬ್ಬತ್ ದಿನ ಅವರು ಮತ್ತೆ ಆ ಜಾಗಕ್ಕೆ ಹೋದ್ರು. ಅಲ್ಲಿ ದೇವರನ್ನ ಆರಾಧಿಸೋಕಂತ ತುಂಬ ಹೆಂಗಸರು ಸೇರಿಬಂದಿದ್ರು. ಶಿಷ್ಯರು ಅಲ್ಲೇ ಕೂತು ಅವ್ರ ಹತ್ರ ಮಾತಾಡಿದ್ರು. ಲುದ್ಯ ಅನ್ನೋ ಸ್ತ್ರೀ ಅವರು ಹೇಳ್ತಿದ್ದ “ವಿಷ್ಯಗಳನ್ನ ಗಮನಕೊಟ್ಟು ಕೇಳಿಸ್ಕೊಂಡು ಒಪ್ಕೊಳ್ಳೋ ತರ ಯೆಹೋವ ಅವಳ ಹೃದಯವನ್ನ ಪೂರ್ತಿ ತೆರೆದನು.” ಅವರು ಕಲಿಸಿದ ವಿಷ್ಯ ಅವಳಿಗೆ ತುಂಬ ಇಷ್ಟ ಆಯ್ತು. ಅವಳೂ ಅವಳ ಮನೆಯವರೆಲ್ಲರೂ ದೀಕ್ಷಾಸ್ನಾನ ಪಡ್ಕೊಂಡ್ರು. ಆಮೇಲೆ ಪೌಲ ಮತ್ತು ಅವನ ಜೊತೆ ಇದ್ದವರನ್ನ ತನ್ನ ಮನೆಯಲ್ಲೇ ಉಳ್ಕೊಳ್ಳೋಕೆ ಏರ್ಪಾಡು ಮಾಡಿದಳು. c—ಅ. ಕಾ. 16:13-15.
9. (ಎ) ಇವತ್ತು ತುಂಬ ಜನ ಪೌಲನ ತರ ಏನು ಮಾಡಿದ್ದಾರೆ? (ಬಿ) ಅವ್ರಿಗೆ ಯಾವ ಆಶೀರ್ವಾದಗಳು ಸಿಕ್ಕಿವೆ?
9 ಲುದ್ಯ ದೀಕ್ಷಾಸ್ನಾನ ತಗೊಂಡಾಗ ಎಲ್ರಿಗೂ ಎಷ್ಟು ಖುಷಿ ಆಗಿರಬೇಕಲ್ವಾ! ‘ಮಕೆದೋನ್ಯಕ್ಕೆ ಬನ್ನಿ’ ಅನ್ನೋ ಆಮಂತ್ರಣವನ್ನ ಸ್ವೀಕರಿಸಿದ್ದಕ್ಕೆ ಪೌಲನಿಗೆ ಸಾರ್ಥಕ ಅನಿಸಿರಬೇಕು. ಅಷ್ಟೇ ಅಲ್ಲ, ಆ ದೇವಭಕ್ತ ಸ್ತ್ರೀಯರ ಪ್ರಾರ್ಥನೆಗಳಿಗೆ ಉತ್ರ ಕೊಡೋಕೆ ಯೆಹೋವ ತನ್ನನ್ನೂ ತನ್ನ ಜೊತೆ ಇದ್ದವರನ್ನೂ ಬಳಸಿದ್ದಕ್ಕೆ ಅವನಿಗೆ ತುಂಬ ಸಂತೋಷ ಆಗಿರಬೇಕು. ಇವತ್ತು ಕೂಡ ತುಂಬ ಜನ ಯುವಕರು, ವಯಸ್ಸಾದವರು, ಮದುವೆ ಆದವರು, ಮದುವೆ ಆಗದವರು ಅಗತ್ಯ ಇರೋ ಜಾಗಗಳಿಗೆ ಹೋಗಿ ಸೇವೆ ಮಾಡ್ತಿದ್ದಾರೆ. ಅಲ್ಲಿ ಅವ್ರಿಗೆ ಬೇರೆ ಬೇರೆ ತರದ ಕಷ್ಟಗಳು ಬರುತ್ತೆ. ಆದ್ರೆ ಲುದ್ಯಳ ತರ ಇರೋ ಜನ್ರಿಗೆ ಬೈಬಲ್ ಕಲಿಸಿದಾಗ ಸಿಗೋ ತೃಪ್ತಿ ಮುಂದೆ ಆ ಕಷ್ಟಗಳು ಏನೂ ಅಲ್ಲ ಅಂತ ಅವ್ರಿಗೆ ಅನಿಸುತ್ತೆ. ಹಾಗಾದ್ರೆ ನೀವು ಸ್ವಲ್ಪ ಹೊಂದಾಣಿಕೆ ಮಾಡ್ಕೊಂಡು ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡೋಕೆ ಆಗುತ್ತಾ? ಹಾಗೆ ಮಾಡಿದ್ರೆ ಆಶೀರ್ವಾದಗಳ ಸುರಿಮಳೆನೇ ಸುರಿಯುತ್ತೆ! ಉದಾಹರಣೆಗೆ, 20 ವರ್ಷದ ಏರನ್ ಅನ್ನೋ ಸಹೋದರ ಮಧ್ಯ ಅಮೆರಿಕದ ಒಂದು ದೇಶಕ್ಕೆ ಸೇವೆ ಮಾಡೋಕೆ ಹೋದ. ಅವನು ಹೇಳೋದು: “ಬೇರೆ ದೇಶದಲ್ಲಿ ಸೇವೆ ಮಾಡ್ತಾ ಇರೋದ್ರಿಂದ ಯೆಹೋವ ದೇವರಿಗೆ ಇನ್ನೂ ಹತ್ರ ಆಗಿದ್ದೀನಿ. ಸೇವೆಯಂತೂ ತುಂಬಾ ಚೆನ್ನಾಗಿದೆ. ಎಂಟು ಬೈಬಲ್ ಅಧ್ಯಯನಗಳನ್ನ ಮಾಡ್ತಿದ್ದೀನಿ!” ಬರೀ ಏರನ್ ಅಷ್ಟೇ ಅಲ್ಲ, ಬೇರೆ ಕಡೆ ಹೋಗಿ ಈ ತರ ಸೇವೆ ಮಾಡ್ರಿರೋ ಎಷ್ಟೋ ಸಹೋದರ ಸಹೋದರಿಯರು ಇದನ್ನೇ ಹೇಳಿದ್ದಾರೆ.
“ಜನ್ರೆಲ್ಲ ಸೇರಿ . . . ಬಯ್ತಾ ಇದ್ರು” (ಅ. ಕಾ. 16:16-24)
10. ಪೌಲ ಮತ್ತು ಅವನ ಜೊತೆ ಇದ್ದವರ ಮೇಲೆ ಬಂದ ವಿರೋಧದ ಹಿಂದೆ ಕೆಟ್ಟ ದೇವದೂತರ ಕೈವಾಡ ಇತ್ತು ಅಂತ ಹೇಗೆ ಗೊತ್ತಾಗುತ್ತೆ?
10 ಮಕೆದೋನ್ಯದಲ್ಲಿ ಸೈತಾನನಿಗೆ ಮತ್ತು ಕೆಟ್ಟ ದೇವದೂತರಿಗೆ ಸವಾಲೆಸೆಯುವವರೇ ಇರಲಿಲ್ಲ. ಆದ್ರೂ ಈ ಕ್ಷೇತ್ರದಲ್ಲೂ ಸಿಹಿಸುದ್ದಿ ಬೇರೂರುತ್ತಾ ಇತ್ತು. ಇದನ್ನ ನೋಡಿದಾಗ ಸೈತಾನನಿಗೆ ತುಂಬ ಕೋಪ ಬಂದಿರಬೇಕು. ಹಾಗಾಗಿ ಪೌಲ ಮತ್ತು ಅವನ ಜೊತೆ ಇದ್ದ ಸಹೋದರರ ಮೇಲೆ ಬಂದ ವಿರೋಧದ ಹಿಂದೆ ಕೆಟ್ಟ ದೇವದೂತರ ಕೈವಾಡ ಖಂಡಿತ ಇದ್ದಿರುತ್ತೆ. ಪೌಲ ಮತ್ತು ಅವನ ಜೊತೆ ಇದ್ದವರು ಪ್ರಾರ್ಥನೆ ನಡೆಯೋ ಆ ಜಾಗಕ್ಕೆ ಹೋಗಿ ಸಾರ್ತಾನೇ ಇದ್ರು. ಅಲ್ಲಿ ಒಬ್ಬ ಸೇವಕಿ ಭವಿಷ್ಯ ಹೇಳಿ ತನ್ನ ಯಜಮಾನರಿಗೆ ತುಂಬ ಹಣ ಸಂಪಾದಿಸಿ ಕೊಡ್ತಿದ್ದಳು. ಅವಳಿಗೆ ಕೆಟ್ಟ ದೇವದೂತ ಹಿಡಿದಿದ್ದ. ಅವಳು ಈ ಸಹೋದರರ ಹಿಂದೆ ಹಿಂದೆ ಹೋಗ್ತಾ, “ಇವರು ಸರ್ವೋನ್ನತ ದೇವ್ರ ಸೇವಕ್ರು. ರಕ್ಷಣೆ ಸಿಗಬೇಕಂದ್ರೆ ಏನು ಮಾಡಬೇಕು ಅಂತ ಇವರು ನಿಮಗೆ ಹೇಳ್ತಾರೆ” ಅಂತ ಕೂಗಿ ಹೇಳ್ತಾ ಇದ್ದಳು. ಅವಳು ಹೇಳ್ತಿದ್ದ ಭವಿಷ್ಯವಾಣಿಗಳು ಮತ್ತು ಪೌಲ ಕಲಿಸ್ತಿದ್ದ ವಿಷ್ಯಗಳು ಎರಡೂ ಒಂದೇ ಮೂಲದಿಂದ ಬಂದಿದೆ ಅಂತ ತೋರಿಸೋ ಉದ್ದೇಶದಿಂದ ಕೆಟ್ಟ ದೇವದೂತರೇ ಅವಳು ಹಾಗೆ ಕೂಗಿ ಹೇಳೋ ತರ ಮಾಡಿರಬೇಕು. ಹೀಗೆ ಮಾಡಿದ್ರೆ ಜನ್ರ ಗಮನವನ್ನ ಕ್ರಿಸ್ತನ ಶಿಷ್ಯರ ಕಡೆಯಿಂದ ಬೇರೆ ಕಡೆಗೆ ಸೆಳೆಯೋಕೆ ಆಗ್ತಿತ್ತು. ಆದ್ರೆ ಪೌಲ ಅವಳಿಂದ ಕೆಟ್ಟ ದೇವದೂತನನ್ನ ಹೊರಗಟ್ಟಿ ಅವಳು ಸುಮ್ಮನಾಗೋ ತರ ಮಾಡಿದ.—ಅ. ಕಾ. 16:16-18.
11. ಕೆಟ್ಟ ದೇವದೂತನನ್ನ ಹುಡುಗಿಯಿಂದ ಹೊರಗಟ್ಟಿದ ಮೇಲೆ ಪೌಲ ಮತ್ತು ಸೀಲನಿಗೆ ಏನಾಯ್ತು?
11 ಸುಲಭವಾಗಿ ಹಣ ಬರ್ತಾ ಇದ್ದಿದ್ದು ಕೈತಪ್ಪಿತ್ತು ಅಂತ ಗೊತ್ತಾದಾಗ ಆ ಸೇವಕಿಯ ಯಜಮಾನರ ಕೋಪ ನೆತ್ತಿಗೇರಿತು. ಅವರು ಪೌಲ ಮತ್ತು ಸೀಲನನ್ನ ಸಂತೆಯಲ್ಲಿ ನ್ಯಾಯಾಧೀಶರ ಹತ್ರ ಎಳ್ಕೊಂಡು ಬಂದ್ರು. ಈ ನ್ಯಾಯಾಧೀಶರು ರೋಮನ್ನ ಪ್ರತಿನಿಧಿಸೋ ಅಧಿಕಾರಿಗಳಾಗಿದ್ರು, ತೀರ್ಪು ಕೊಡ್ತಿದ್ರು. ಆ ಯಜಮಾನರು ನ್ಯಾಯಾಧೀಶರಿಗೆ, “ರೋಮಿನ ಜನ್ರಾದ ನಮಗೆ ಪಾಲಿಸೋಕಾಗದ ತಪ್ಪುತಪ್ಪು ಆಚಾರ-ವಿಚಾರಗಳನ್ನ ಇವರು ಕಲಿಸ್ತಾ ಇದ್ದಾರೆ” ಅಂತ ಹೇಳಿದ್ರು. ಹೀಗೆ ಅವರ ಪೂರ್ವಗ್ರಹ ಮತ್ತು ದೇಶಪ್ರೇಮವನ್ನ ಬಡಿದೆಬ್ಬಿಸೋ ರೀತಿಯಲ್ಲಿ ಮಾತಾಡಿದ್ರು. ಇದನ್ನ ಕೇಳಿದ ತಕ್ಷಣ “[ಸಂತೆಯಲ್ಲಿದ್ದ] ಜನ್ರೆಲ್ಲ ಸೇರಿ ಪೌಲ ಮತ್ತು ಸೀಲನಿಗೆ ಬಯ್ತಾ ಇದ್ರು” ಮತ್ತು “ಅವ್ರಿಗೆ ಕೋಲಿಂದ ಹೊಡಿಯೋಕೆ ನ್ಯಾಯಾಧೀಶರು ಅಪ್ಪಣೆಕೊಟ್ರು.” ಆಮೇಲೆ ಅವರು ಪೌಲ ಮತ್ತು ಸೀಲನನ್ನ ಎಳ್ಕೊಂಡು ಹೋಗಿ ಜೈಲಿಗೆ ಹಾಕಿದ್ರು. ಜೈಲಿನ ಯಜಮಾನ ಅವ್ರನ್ನ ಜೈಲಿನ ಒಳಕೋಣೆಯಲ್ಲಿ ಹಾಕಿ ಅವ್ರ ಕಾಲುಗಳಿಗೆ ಬೇಡಿ ಹಾಕಿಸಿದ. (ಅ. ಕಾ. 16:19-24) ಅವನು ಜೈಲಿನ ಬಾಗಿಲನ್ನ ಮುಚ್ಚಿದಾಗ ಎಷ್ಟು ಕತ್ತಲೆ ತುಂಬ್ಕೊಳ್ತು ಅಂದ್ರೆ ಪೌಲ ಮತ್ತು ಸೀಲನಿಗೆ ಒಬ್ರಿಗೆ ಇನ್ನೊಬ್ರ ಮುಖನೇ ಕಾಣಿಸ್ತಿರಲಿಲ್ಲ. ಆದ್ರೆ ಯೆಹೋವ ದೇವರು ಇದನ್ನೆಲ್ಲ ನೋಡ್ತಾ ಇದ್ದನು.—ಕೀರ್ತ. 139:12.
12. (ಎ) ಕ್ರಿಸ್ತನ ಶಿಷ್ಯರು ಹಿಂಸೆ ಬಂದಾಗ ಏನು ಮಾಡಿದ್ರು? ಯಾಕೆ? (ಬಿ) ಸೈತಾನ ಮತ್ತು ಅವನ ದೂತರು ಯಾವ ತರದ ವಿರೋಧಗಳನ್ನ ಈಗ್ಲೂ ತರ್ತಾರೆ?
12 ಕೆಲವು ವರ್ಷಗಳ ಹಿಂದೆ ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದ್ದನು: “ಜನ . . . ನಿಮಗೂ ಹಿಂಸೆ ಕೊಡ್ತಾರೆ.” (ಯೋಹಾ. 15:20) ಹಾಗಾಗಿ ಪೌಲ ಮತ್ತು ಅವನ ಜೊತೆ ಇದ್ದ ಸಹೋದರರು ಮಕೆದೋನ್ಯಕ್ಕೆ ಹೋದಾಗ ವಿರೋಧವನ್ನ ಎದುರಿಸೋಕೆ ತಯಾರಾಗೇ ಹೋಗಿದ್ರು. ಹಿಂಸೆ ಬಂದಾಗ ‘ದೇವರು ನಮ್ಮನ್ನ ಮೆಚ್ಕೊಂಡಿಲ್ಲ, ಅದಕ್ಕೆ ಹಿಂಸೆ ಬಂತು’ ಅಂತ ಅಂದ್ಕೊಂಡ್ರಾ? ಇಲ್ಲ. ಸೈತಾನ ಕೋಪದಿಂದ ಹೀಗೆಲ್ಲಾ ಮಾಡ್ತಿದ್ದಾನೆ ಅಂತ ಅರ್ಥ ಅವರು ಮಾಡ್ಕೊಂಡ್ರು. ಸೈತಾನನ ದೂತರು ಫಿಲಿಪ್ಪಿಯಲ್ಲಿ ಬಳಸಿದ ಅದೇ ತಂತ್ರವನ್ನೇ ಇವತ್ತೂ ಬಳಸ್ತಾರೆ. ವಿರೋಧಿಗಳು ಸ್ಕೂಲ್‌ಗಳಲ್ಲಿ ಮತ್ತು ಕೆಲಸದ ಜಾಗಗಳಲ್ಲಿ ನಮ್ಮ ಬಗ್ಗೆ ತಪ್ಪು ತಪ್ಪು ಆರೋಪ ಹಾಕಿ ವಿರೋಧ ತರ್ತಾರೆ. ಕೆಲವು ದೇಶಗಳಲ್ಲಿ ಧಾರ್ಮಿಕ ವಿರೋಧಿಗಳು ನ್ಯಾಯಾಲಯಗಳಲ್ಲಿ ನಮ್ಮ ಮೇಲೆ ಆರೋಪಗಳನ್ನ ಹಾಕ್ತಾರೆ. ‘ಸಾಕ್ಷಿಗಳು “ನಮ್ಮ ಸಂಪ್ರದಾಯ, ನಂಬಿಕೆಗೆ” ವಿರುದ್ಧವಾಗಿರೋ ಪದ್ಧತಿಗಳನ್ನ ಕಲಿಸಿ ಗಲಿಬಿಲಿ ಮಾಡ್ತಿದ್ದಾರೆ’ ಅಂತ ಅವರು ಹೇಳ್ತಾರೆ. ಇನ್ನು ಕೆಲವು ಕಡೆಗಳಲ್ಲಿ, ನಮ್ಮ ಸಹೋದರ ಸಹೋದರಿಯರನ್ನ ಹೊಡಿದಿದ್ದಾರೆ ಮತ್ತು ಜೈಲಿಗೆ ಹಾಕಿದ್ದಾರೆ. ಆದ್ರೆ ಇದನ್ನೆಲ್ಲ ಯೆಹೋವ ದೇವರು ನೋಡ್ತಿದ್ದಾನೆ.—1 ಪೇತ್ರ 3:12.
“ತಡಮಾಡದೆ . . . ದೀಕ್ಷಾಸ್ನಾನ ತಗೊಂಡ್ರು” (ಅ. ಕಾ. 16:25-34)
13. ಜೈಲಿನ ಯಜಮಾನ “ನನಗೆ ರಕ್ಷಣೆ ಸಿಗಬೇಕಂದ್ರೆ ನಾನೇನು ಮಾಡ್ಬೇಕು?” ಅಂತ ಯಾಕೆ ಕೇಳಿದ?
13 ಪೌಲ ಮತ್ತು ಸೀಲ ತಾವು ಅಂದ್ಕೊಳ್ಳದೇ ಇದ್ದಾಗ ಹಿಂಸೆ ಬಂದಿದ್ರಿಂದ ಅದನ್ನ ಅರಗಿಸ್ಕೊಳ್ಳೋಕೆ ಅವ್ರಿಗೆ ಸ್ವಲ್ಪ ಸಮಯ ಹಿಡಿದಿರಬೇಕು. ಮಧ್ಯರಾತ್ರಿ ಆಗೋಷ್ಟರಲ್ಲಿ ಅವರು ಸುಧಾರಿಸ್ಕೊಂಡು “ಪ್ರಾರ್ಥನೆ ಮಾಡ್ತಾ ಗೀತೆ ಹಾಡ್ತಾ ದೇವ್ರ ಗುಣಗಾನ ಮಾಡ್ತಾ ಇದ್ರು.” ಆಗ ಇದ್ದಕ್ಕಿದ್ದ ಹಾಗೆ ಒಂದು ಭೂಕಂಪ ಆಯ್ತು. ಇಡೀ ಜೈಲಿಗೆ ಜೈಲೇ ಅಲುಗಾಡ್ತು! ಜೈಲಿನ ಯಜಮಾನ ನಿದ್ದೆಯಿಂದ ಎದ್ದಾಗ ಅದ್ರ ಬಾಗಿಲುಗಳು ತೆರೆದಿರೋದನ್ನ ನೋಡಿ ತುಂಬ ಹೆದರಿಹೋದ. ಕೈದಿಗಳೆಲ್ಲ ತಪ್ಪಿಸ್ಕೊಂಡು ಹೋಗಿರ್ತಾರೆ, ಇದ್ರಿಂದ ತನಗೆ ಶಿಕ್ಷೆ ಗ್ಯಾರಂಟಿ ಅಂತ ಅಂದ್ಕೊಂಡ. ಅದಕ್ಕೆ “ತನ್ನ ಕತ್ತಿ ತೆಗೆದು ಆತ್ಮಹತ್ಯೆ ಮಾಡ್ಕೊಳ್ಳೋಕೆ ಮುಂದಾದ.” ತಕ್ಷಣ ಪೌಲ, “ಹಾಗೆ ಮಾಡಬೇಡ. ನಾವೆಲ್ಲ ಇಲ್ಲೇ ಇದ್ದೀವಿ” ಅಂತ ಕೂಗಿ ಹೇಳಿದ. ಆಗ ಜೈಲಿನ ಯಜಮಾನ, “ನನಗೆ ರಕ್ಷಣೆ ಸಿಗಬೇಕಂದ್ರೆ ನಾನೇನು ಮಾಡ್ಬೇಕು?” ಅಂತ ಕೇಳಿದ. ಆಗ ಅವರು, “ಯೇಸು ಪ್ರಭು ಮೇಲೆ ನಂಬಿಕೆ ಇಡು. ಆಗ ನಿನಗೂ ನಿನ್ನ ಕುಟುಂಬಕ್ಕೂ ರಕ್ಷಣೆ ಸಿಗುತ್ತೆ” ಅಂತ ಹೇಳಿದ್ರು. ಯಾಕಂದ್ರೆ ಅವನನ್ನ ಕಾಪಾಡೋಕೆ ಪೌಲ ಮತ್ತು ಸೀಲನಿಂದ ಸಾಧ್ಯ ಇರಲಿಲ್ಲ, ಯೇಸುಗೆ ಮಾತ್ರ ಸಾಧ್ಯ ಇತ್ತು ಅಂತ ಅವ್ರಿಗೆ ಗೊತ್ತಿತ್ತು.—ಅ. ಕಾ. 16:25-31.
14. (ಎ) ಪೌಲ ಮತ್ತು ಸೀಲ ಜೈಲಿನ ಯಜಮಾನನಿಗೆ ಯಾವ ಸಹಾಯ ಮಾಡಿದ್ರು? (ಬಿ) ಹಿಂಸೆಯನ್ನ ಸಂತೋಷದಿಂದ ತಾಳ್ಕೊಂಡಿದ್ದ ಪೌಲ ಮತ್ತು ಸೀಲನಿಗೆ ಯಾವ ಆಶೀರ್ವಾದ ಸಿಕ್ತು?
14 ಜೈಲಿನ ಯಜಮಾನ ಆ ಪ್ರಶ್ನೆಯನ್ನ ನಿಜವಾಗ್ಲೂ ರಕ್ಷಣೆ ಪಡೆಯೋಕೆ ಕೇಳಿದ ಅಂತ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. ಜೈಲಿನ ಯಜಮಾನ ಯೆಹೂದ್ಯನಾಗಿರಲಿಲ್ಲ ಮತ್ತು ಅವನಿಗೆ ಪವಿತ್ರಗ್ರಂಥದ ಪರಿಚಯನೂ ಇರಲಿಲ್ಲ. ಹಾಗಾಗಿ ಅವನು ಕ್ರೈಸ್ತನಾಗೋ ಮುಂಚೆ ಪವಿತ್ರಗ್ರಂಥದಲ್ಲಿದ್ದ ಮೂಲಭೂತ ಸತ್ಯಗಳನ್ನ ಕಲಿಬೇಕಿತ್ತು ಮತ್ತು ಒಪ್ಕೊಳ್ಳಬೇಕಿತ್ತು. ಅದಕ್ಕೆ ಪೌಲ ಮತ್ತು ಸೀಲ ಸ್ವಲ್ಪ ಸಮಯ ತಗೊಂಡು ಅವನಿಗೆ “ಯೆಹೋವನ ಸಂದೇಶವನ್ನ ಹೇಳಿದ್ರು.” ಅವನಿಗೆ ಪವಿತ್ರಗ್ರಂಥನ ಕಲಿಸೋದ್ರಲ್ಲಿ ಅವರು ಎಷ್ಟು ಮುಳುಗಿಹೋಗಿದ್ರು ಅಂದ್ರೆ ಹೊಡೆತದಿಂದಾದ ನೋವನ್ನ ಮರೆತೇ ಹೋದ್ರು. ಆದ್ರೆ ಜೈಲಿನ ಯಜಮಾನ ಅವ್ರ ಬೆನ್ನ ಮೇಲಿದ್ದ ಗಾಯಗಳನ್ನ ನೋಡಿ ಅವುಗಳನ್ನ ತೊಳೆದ. “ತಡಮಾಡದೆ ಅವನು, ಅವನ ಕುಟುಂಬದವ್ರೆಲ್ಲ ದೀಕ್ಷಾಸ್ನಾನ ತಗೊಂಡ್ರು.” ಹಿಂಸೆಯನ್ನ ಸಂತೋಷದಿಂದ ತಾಳ್ಕೊಂಡಿದ್ದ ಪೌಲ ಮತ್ತು ಸೀಲನಿಗೆ ಎಂಥ ಆಶೀರ್ವಾದ ಸಿಕ್ತು ಅಲ್ವಾ!—ಅ. ಕಾ. 16:32-34.
15. (ಎ) ಇವತ್ತು ಎಷ್ಟೋ ಸಹೋದರ ಸಹೋದರಿಯರು ಪೌಲ ಮತ್ತು ಸೀಲನ ತರ ಏನು ಮಾಡಿದ್ದಾರೆ? (ಬಿ) ನಮ್ಮ ಟೆರಿಟೊರಿಯಲ್ಲಿರೋ ಮನೆಗಳಿಗೆ ನಾವು ಯಾಕೆ ಮತ್ತೆ ಮತ್ತೆ ಭೇಟಿಮಾಡ್ತಾ ಇರಬೇಕು?
15 ಇವತ್ತು ನಂಬಿಕೆಯ ಕಾರಣ ಜೈಲಿಗೆ ಹೋದ ಎಷ್ಟೋ ಸಹೋದರ ಸಹೋದರಿಯರು ಪೌಲ ಮತ್ತು ಸೀಲನ ತರ ಜೈಲಲ್ಲಿರೋರಿಗೆ ಸಿಹಿಸುದ್ದಿ ಸಾರ್ತಿದ್ದಾರೆ. ಅದಕ್ಕೆ ಒಳ್ಳೇ ಪ್ರತಿಫಲನೂ ಸಿಕ್ಕಿದೆ. ಉದಾಹರಣೆಗೆ, ನಮ್ಮ ಚಟುವಟಿಕೆಗಳ ಮೇಲೆ ನಿಷೇಧ ಇದ್ದ ಒಂದು ದೇಶದಲ್ಲಿ ಏನಾಯ್ತು ನೋಡಿ. ಒಂದು ಸಮಯದಲ್ಲಿ ಅಲ್ಲಿ ಯೆಹೋವನ ಸಾಕ್ಷಿಗಳಲ್ಲಿ 40 ಪರ್ಸೆಂಟ್ ಜನ್ರು ಸತ್ಯ ಕಲಿತಿದ್ದು ಜೈಲಲ್ಲಿದ್ದಾಗಲೇ! (ಯೆಶಾ. 54:17) ಜೈಲಿನ ಯಜಮಾನ ಭೂಕಂಪ ಆದ್ಮೇಲೆನೇ ಸಹಾಯಕ್ಕಾಗಿ ಕೇಳ್ಕೊಂಡ. ಅದೇ ತರ, ಇವತ್ತು ಜನ ತಾವು ಚೆನ್ನಾಗಿದ್ದಾಗ ಸಿಹಿಸುದ್ದಿಗೆ ಸರಿಯಾಗಿ ಪ್ರತಿಕ್ರಿಯಿಸದೇ ಇರಬಹುದು. ಆದ್ರೆ ಅವರ ಜೀವನದಲ್ಲಿ ಏನಾದ್ರೂ ಕಷ್ಟ ಬಂದು ಜೀವನನೇ ತಲೆಕೆಳಗಾದಾಗ ಸಿಹಿಸುದ್ದಿ ಕೇಳಿಸ್ಕೊಳ್ಳೋಕೆ ಮನಸ್ಸು ಮಾಡಬಹುದು. ಹಾಗಾಗಿ ನಮ್ಮ ಟೆರಿಟೊರಿಯಲ್ಲಿರೋ ಜನ್ರಿಗೆ ಅಗತ್ಯ ಇದ್ದಾಗ ಸಹಾಯ ಮಾಡೋಕೆ ನಾವು ಯಾವಾಗ್ಲೂ ರೆಡಿ ಇರಬೇಕು. ಅವ್ರಿಗೆ ಸಿಹಿಸುದ್ದಿ ಸಾರೋಕೆ ಮತ್ತೆ ಮತ್ತೆ ಭೇಟಿಮಾಡ್ತಾ ಇರಬೇಕು.
“ಈಗ ಯಾರಿಗೂ ಗೊತ್ತಾಗದ ಹಾಗೆ ನಮ್ಮನ್ನ ಕಳಿಸಿಬಿಡಬೇಕಂತ ಇದ್ದಾರಾ?” (ಅ. ಕಾ. 16:35-40)
16. ಪೌಲ ಮತ್ತು ಸೀಲನನ್ನ ಹೊಡಿಸಿದ ಮಾರನೇ ದಿನ ಸನ್ನಿವೇಶ ಹೇಗೆ ಪೂರ್ತಿ ಬದಲಾಯ್ತು?
16 ಪೌಲ ಮತ್ತು ಸೀಲನನ್ನ ಹೊಡೆಸಿದ ಮಾರನೇ ದಿನ ಬೆಳಿಗ್ಗೆ ನ್ಯಾಯಾಧೀಶರು ಅವ್ರನ್ನ ಬಿಟ್ಟುಬಿಡೋಕೆ ಹೇಳಿದ್ರು. ಆದ್ರೆ ಪೌಲ, “ನಾವು ರೋಮಿನ ಪ್ರಜೆಗಳು. ಅವರು ನಮ್ಮನ್ನ ವಿಚಾರಣೆ ಮಾಡದೆ ಎಲ್ರ ಮುಂದೆ ಹೊಡೆದು ಜೈಲಿಗೆ ಹಾಕಿದ್ರು. ಈಗ ಯಾರಿಗೂ ಗೊತ್ತಾಗದ ಹಾಗೆ ನಮ್ಮನ್ನ ಕಳಿಸಿಬಿಡಬೇಕಂತ ಇದ್ದಾರಾ? ಅದಾಗಲ್ಲ! ಅವ್ರೇ ಬಂದು ನಮ್ಮನ್ನ ಹೊರಗೆ ಕರ್ಕೊಂಡು ಹೋಗಬೇಕು” ಅಂತ ಹೇಳಿದ. ಆಗ ಆ ನ್ಯಾಯಾಧೀಶರಿಗೆ ಅವರಿಬ್ರೂ ರೋಮಿನ ಪ್ರಜೆಗಳು, ನಾವು ಅವ್ರ ಹಕ್ಕುಗಳನ್ನ ಉಲ್ಲಂಘಿಸಿದ್ದೀವಿ ಅಂತ “ಭಯ ಶುರುವಾಯ್ತು.” d ಹಾಗಾಗಿ ಸನ್ನಿವೇಶ ಪೂರ್ತಿ ಬದಲಾಯ್ತು. ಅವರು ಹಿಂದಿನ ದಿನ ಶಿಷ್ಯರಿಗೆ ಎಲ್ಲರ ಮುಂದೆ ಹೊಡೆಸಿದ್ರು. ಹಾಗಾಗಿ ಎಲ್ಲರ ಮುಂದೆ ಕ್ಷಮೆ ಕೇಳಬೇಕಾಯ್ತು. ಅವರು ಪೌಲ ಮತ್ತು ಸೀಲನನ್ನ ಪಟ್ಟಣ ಬಿಟ್ಟುಹೋಗಿ ಅಂತ ಬೇಡ್ಕೊಂಡ್ರು. ಅದಕ್ಕೆ ಅವರಿಬ್ರೂ ಒಪ್ಪಿದ್ರು. ಆದ್ರೆ ಹೋಗೋಕೆ ಮುಂಚೆ ಸ್ವಲ್ಪ ಸಮಯ ತಗೊಂಡು ಹೊಸ ಶಿಷ್ಯರನ್ನ ಪ್ರೋತ್ಸಾಹಿಸಿದ ಮೇಲೆ ಅಲ್ಲಿಂದ ಹೋದ್ರು. ಯಾಕಂದ್ರೆ ಅಲ್ಲಿ ತುಂಬ ಜನ ಶಿಷ್ಯರಾಗ್ತಾ ಇದ್ರು.
17. ಪೌಲ ಮತ್ತು ಸೀಲನ ತಾಳ್ಮೆ ನೋಡಿ ಹೊಸ ಶಿಷ್ಯರು ಯಾವ ಮುಖ್ಯ ಪಾಠ ಕಲಿತಿರಬೇಕು?
17 ಪೌಲ ಮತ್ತು ಸೀಲ ತಾವು ರೋಮಿನ ಪ್ರಜೆಗಳು ಅಂತ ಮೊದಲೇ ಹೇಳಿದಿದ್ರೆ ಬಹುಶಃ ಅವ್ರನ್ನ ಹೊಡೀತಾ ಇರಲಿಲ್ಲ. (ಅ. ಕಾ. 22:25, 26) ಯಾಕೆ ಹೇಳಿಲ್ಲ? ಹಾಗೇನಾದ್ರೂ ಹೇಳಿದ್ರೆ ಅವರು ತಮ್ಮ ಹಕ್ಕನ್ನ ಉಪಯೋಗಿಸಿ ಕ್ರಿಸ್ತನಿಗಾಗಿ ಕಷ್ಟ ಅನುಭವಿಸೋದ್ರಿಂದ ತಪ್ಪಿಸ್ಕೊಂಡ್ರು ಅಂತ ಪಿಲಿಪ್ಪಿಯಲ್ಲಿದ್ದ ಶಿಷ್ಯರಿಗೆ ಅನಿಸ್ತಿತ್ತು. ಇನ್ನು ರೋಮಿನ ಪ್ರಜೆಗಳಲ್ಲದ ಶಿಷ್ಯರಿಗೆ ನಂಬಿಕೆ ಕಮ್ಮಿ ಆಗೋಗ್ತಿತ್ತು. ಯಾಕಂದ್ರೆ ನಮಗೆ ಆ ಹಕ್ಕು ಇಲ್ಲದೇ ಇದ್ದಿದ್ರಿಂದ ಶಿಕ್ಷೆ ಅನುಭವಿಸೋದು ಬಿಟ್ರೆ ಬೇರೆ ದಾರಿ ಇಲ್ಲ ಅಂತ ಅವ್ರಿಗೆ ಅನಿಸ್ತಿತ್ತು. ಆದ್ರೆ ಪೌಲ ಮತ್ತೆ ಸೀಲ ಈ ಶಿಕ್ಷೆಯನ್ನ ತಾಳ್ಕೊಳ್ಳೋದ್ರ ಮೂಲಕ ಅವ್ರೆಲ್ಲರಿಗೂ ಮಾದರಿ ಇಟ್ರು. ಯೇಸುವಿನ ಹಿಂಬಾಲಕರಿಗೆ ಹಿಂಸೆ ಬರುತ್ತೆ, ಬಂದ್ರೂ ಅದನ್ನ ತಾಳ್ಕೊಬಹುದು ಅಂತ ಮೊದಲು ತೋರಿಸ್ಕೊಟ್ರು. ಆಮೇಲೆ ತಮ್ಮ ಪೌರತ್ವದ ಹಕ್ಕನ್ನ ಪರಿಗಣಿಸೋಕೆ ನ್ಯಾಯಾಧೀಶರಿಗೆ ಹೇಳಿದ್ರು. ಯಾಕೆ? ಯಾಕಂದ್ರೆ ನ್ಯಾಯಾಧೀಶರು ಕಾನೂನಿಗೆ ವಿರುದ್ಧವಾಗಿ ನಡ್ಕೊಂಡಿದ್ದೀವಿ ಅಂತ ಜನ್ರ ಮುಂದೆ ಒಪ್ಕೊಳ್ಳೋಕೆ ಹೀಗೆ ಮಾಡಿದ್ರು. ಇದ್ರಿಂದ ಮುಂದೆ ಕ್ರೈಸ್ತರಿಗೆ ಹಿಂಸೆ ಕೊಡೋ ಮುಂಚೆ ನ್ಯಾಯಾಧೀಶರು ಒಂದು ಸಲ ಯೋಚ್ನೆ ಮಾಡ್ತಿದ್ರು ಮತ್ತು ಕಾನೂನಿನಿಂದ ಕ್ರೈಸ್ತರಿಗೆ ಸ್ವಲ್ಪಮಟ್ಟಿಗಾದ್ರೂ ಸಂರಕ್ಷಣೆ ಸಿಗ್ತಿತ್ತು.
18. (ಎ) ಇವತ್ತಿರೋ ಹಿರಿಯರು ಪೌಲನ ತರ ಏನು ಮಾಡ್ತಾರೆ? (ಬಿ) ನಾವು ಇವತ್ತು ಹೇಗೆ ‘ಸಿಹಿಸುದ್ದಿ ಪರವಾಗಿ ಮಾತಾಡಿ, ಆ ಸುದ್ದಿ ಸಾರೋಕೆ ಕಾನೂನುಬದ್ಧ ಹಕ್ಕು ಪಡೀತೀವಿ?’
18 ಇವತ್ತು ಸಭೆಯಲ್ಲಿರೋ ಹಿರಿಯರು ತಮ್ಮ ಮಾದರಿಯ ಮೂಲಕನೂ ಮಾರ್ಗದರ್ಶನ ಕೊಡ್ತಾರೆ. ಸಹೋದರ ಸಹೋದರಿಯರು ಏನು ಮಾಡಬೇಕಂತ ಕ್ರೈಸ್ತ ಕುರುಬರು ಬಯಸ್ತಾರೋ ಅದನ್ನೇ ಸ್ವತಃ ಅವರು ಮನಸಾರೆ ಮಾಡ್ತಾರೆ. ಸಂರಕ್ಷಣೆ ಪಡೆಯೋಕೆ ಕಾನೂನುಬದ್ಧ ಹಕ್ಕುಗಳನ್ನ ಹೇಗೆ ಮತ್ತು ಯಾವಾಗ ಉಪಯೋಗಿಸಬೇಕಂತ ಅವರು ಪೌಲನ ತರ ಜಾಗರೂಕತೆಯಿಂದ ಯೋಚ್ನೆ ಮಾಡಿ ಹೆಜ್ಜೆ ತಗೊತಾರೆ. ನಾವು ಸ್ವತಂತ್ರವಾಗಿ ಆರಾಧನೆ ಮಾಡೋಕೆ, ಕಾನೂನುಬದ್ಧ ಸಂರಕ್ಷಣೆ ಪಡೆಯೋಕೆ ಅಗತ್ಯ ಇದ್ದಾಗ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನ್ಯಾಯಾಲಯಕ್ಕೂ ಹೋಗ್ತೀವಿ. ಇದನ್ನೆಲ್ಲಾ ನಾವು ಯಾವ ಉದ್ದೇಶದಿಂದ ಮಾಡ್ತೀವಿ? ಪೌಲ ಜೈಲಲ್ಲಿದ್ದು ಈ ಘಟನೆ ನಡೆದು ಸುಮಾರು ಹತ್ತು ವರ್ಷ ಆದ್ಮೇಲೆ ಫಿಲಿಪ್ಪಿ ಸಭೆಯವ್ರಿಗೆ ಬರೆದ ವಿಷ್ಯದಿಂದ ಅದು ನಮಗೆ ಗೊತ್ತಾಗುತ್ತೆ. ಸಮಾಜ ಸುಧಾರಣೆ ಮಾಡೋದು ನಮ್ಮ ಉದ್ದೇಶ ಅಲ್ಲ. ಬದಲಿಗೆ ‘ಸಿಹಿಸುದ್ದಿ ಪರವಾಗಿ ಮಾತಾಡಿ, ಆ ಸುದ್ದಿ ಸಾರೋಕೆ ಕಾನೂನುಬದ್ಧ ಹಕ್ಕು ಪಡಿಯೋದೇ’ ನಮ್ಮ ಉದ್ದೇಶ. (ಫಿಲಿ. 1:7) ಹೀಗೆ ನ್ಯಾಯಾಲಯದಲ್ಲಿ ಕೇಸ್ ಹಾಕಿದಾಗ ನಾವು ಗೆಲ್ಲಲಿ ಸೋಲಲಿ, ಪೌಲ ಮತ್ತು ಅವನ ಜೊತೆ ಇದ್ದ ಸಹೋದರರ ತರ ನಾವು ಕೂಡ ಪವಿತ್ರಶಕ್ತಿ ಎಲ್ಲೆಲ್ಲಿ ಮಾರ್ಗದರ್ಶಿಸುತ್ತೋ ಅಲ್ಲೆಲ್ಲಾ ಹೋಗಿ ‘ಸಿಹಿಸುದ್ದಿ ಹೇಳ್ತಾ’ ಇರ್ತೀವಿ.—ಅ. ಕಾ. 16:10.
a “ ಅಪೊಸ್ತಲರ ಕಾರ್ಯ ಪುಸ್ತಕವನ್ನ ಲೂಕ ಬರೆದ” ಅನ್ನೋ ಚೌಕ ನೋಡಿ.
b ಫಿಲಿಪ್ಪಿಯಲ್ಲಿ ಮುಖ್ಯವಾಗಿ ರೋಮನ್ ಸೈನ್ಯದವರೇ ಇರ್ತಾ ಇದ್ದಿದ್ರಿಂದ ಅಲ್ಲಿ ಯೆಹೂದ್ಯರಿಗೆ ಸಭಾಮಂದಿರ ಕಟ್ಟೋಕೆ ಅನುಮತಿ ಸಿಕ್ಕಿರಲ್ಲ ಅನ್ಸುತ್ತೆ ಅಥವಾ ಒಂದು ಊರಲ್ಲಿ ಸಭಾಮಂದಿರ ಸ್ಥಾಪಿಸೋಕೆ ಇರಬೇಕಾದಷ್ಟು ಅಂದ್ರೆ ಕಡಿಮೆಪಕ್ಷ 10 ಯೆಹೂದಿ ಗಂಡಸರೂ ಈ ನಗರದಲ್ಲಿ ಇರಲಿಲ್ಲ ಅನ್ಸುತ್ತೆ.
c “ ನೇರಳೆ ಬಣ್ಣದ ಬಟ್ಟೆಗಳನ್ನ ಮಾರ್ತಿದ್ದ ಲುದ್ಯ” ಅನ್ನೋ ಚೌಕ ನೋಡಿ.
d ಪ್ರಜೆಗಳಿಗೆ ಯಾವಾಗ್ಲೂ ಸರಿಯಾದ ವಿಧಾನದಲ್ಲಿ ವಿಚಾರಣೆ ನಡಿಬೇಕು ಮತ್ತು ವಿಚಾರಣೆಯಲ್ಲಿ ಅಪರಾಧಿ ಅಂತ ಸಾಬೀತಾಗದೆ ಸಾರ್ವಜನಿಕವಾಗಿ ಶಿಕ್ಷೆ ಕೊಡಬಾರದು ಅಂತ ರೋಮಿನ ಕಾನೂನು ಹೇಳಿತ್ತು.