ಅಧ್ಯಾಯ 19
“ಮಾತಾಡ್ತಾನೇ ಇರು, ಸುಮ್ಮನಿರಬೇಡ”
ಪೌಲ ತನ್ನ ಖರ್ಚನ್ನ ತಾನೇ ನೋಡ್ಕೊಂಡ, ಆದ್ರೂ ಸಾರೋ ಕೆಲಸಕ್ಕೆ ಮೊದಲ್ನೇ ಸ್ಥಾನ ಕೊಟ್ಟ
ಆಧಾರ: ಅಪೊಸ್ತಲರ ಕಾರ್ಯ 18:1-22
1-3. (ಎ) ಅಪೊಸ್ತಲ ಪೌಲ ಕೊರಿಂಥಕ್ಕೆ ಯಾಕೆ ಬಂದಿದ್ದ? (ಬಿ) ಅವನಿಗೆ ಯಾವ ಸಮಸ್ಯೆಗಳಿತ್ತು?
ಅದು ಕ್ರಿ.ಶ. 50ನೇ ಇಸವಿ. ಆಗಲೇ ಅರ್ಧ ವರ್ಷ ಮುಗಿದು ಹೋಗಿತ್ತು. ಪೌಲ, ಶ್ರೀಮಂತ ವ್ಯಾಪಾರ ಕೇಂದ್ರವಾಗಿದ್ದ ಕೊರಿಂಥದಲ್ಲಿದ್ದ. a ಅಲ್ಲಿನವ್ರಲ್ಲಿ ಜಾಸ್ತಿ ಜನ ಗ್ರೀಕರು, ರೋಮನ್ನರು ಮತ್ತು ಯೆಹೂದ್ಯರಾಗಿದ್ರು. ಪೌಲ ಇಲ್ಲಿ, ವಸ್ತುಗಳನ್ನ ಖರೀದಿ ಮಾಡೋಕೆ ಅಥವಾ ಮಾರೋದಕ್ಕೆ ಬಂದಿರಲಿಲ್ಲ, ಕೆಲ್ಸ ಹುಡುಕೋದಕ್ಕೂ ಬಂದಿರಲಿಲ್ಲ. ಅದಕ್ಕಿಂತ ಮುಖ್ಯವಾದ ಕಾರಣಕ್ಕೆ ಅಂದ್ರೆ ದೇವರ ಸರ್ಕಾರದ ಬಗ್ಗೆ ಸಾಕ್ಷಿ ಕೊಡೋಕೆ ಇಲ್ಲಿಗೆ ಬಂದಿದ್ದ. ಆ ಊರಲ್ಲಿ ಪೌಲ ಉಳ್ಕೊಳ್ಳೋಕೆ ಸ್ಥಳ ಹುಡ್ಕೊಬೇಕಿತ್ತು. ತಾನು ಯಾರಿಗೂ ಹೊರೆ ಆಗಬಾರದು ಅನ್ನೋದು ಪೌಲನ ಆಸೆ ಆಗಿತ್ತು. ‘ಪೌಲ ಸಾರೋ ಕೆಲ್ಸ ಮಾಡೋದ್ರಿಂದ ನಾವು ಅವನಿಗೆ ದುಡ್ಡು ಕೊಟ್ಟು ಬೆಂಬಲ ಕೊಡಬೇಕು’ ಅಂತ ಸಹೋದರರು ಅಂದ್ಕೊಳ್ಳೋದು ಪೌಲನಿಗೆ ಇಷ್ಟ ಇರಲಿಲ್ಲ. ಹೀಗಿರೋವಾಗ ಅವನು ಏನು ಮಾಡ್ದ?
2 ಪೌಲನಿಗೆ ಡೇರೆ ಮಾಡೋ ಕೆಲಸ ಗೊತ್ತಿತ್ತು. ಇದೇನೂ ಸುಲಭದ ಕೆಲಸ ಆಗಿರಲಿಲ್ಲ. ಆದ್ರೂ ಪೌಲ ತನ್ನ ಖರ್ಚುಗಳನ್ನ ತಾನೇ ನೋಡ್ಕೊಳ್ಳೋಕೆ ಆ ಕೆಲಸ ಮಾಡೋಕೆ ರೆಡಿ ಇದ್ದ. ಹಾಗಾದ್ರೆ ಜನಜಂಗುಳಿಯಿಂದ ತುಂಬಿದ್ದ ಈ ನಗರದಲ್ಲಿ ಪೌಲನಿಗೆ ಕೆಲಸ ಸಿಕ್ತಾ? ಉಳ್ಕೊಳ್ಳೋಕೆ ಸರಿಯಾದ ಸ್ಥಳ ಸಿಗ್ತಾ? ಇಷ್ಟೆಲ್ಲಾ ಸಮಸ್ಯೆಗಳಿದ್ರೂ ತನ್ನ ಮುಖ್ಯ ಕೆಲಸ, ಸಾರೋದು ಅನ್ನೋದನ್ನ ಅವನು ಮರೀಲಿಲ್ಲ.
3 ಪೌಲ ಕೊರಿಂಥದಲ್ಲಿ ತುಂಬ ಸಮಯ ಇದ್ದಿದ್ರಿಂದ ಅವ್ನಿಗೆ ಸಾರೋ ಕೆಲಸದಲ್ಲಿ ತುಂಬ ಪ್ರತಿಫಲ ಸಿಕ್ತು. ಹಾಗಾದ್ರೆ ಪೌಲ ಕೊರಿಂಥದಲ್ಲಿ ಏನೆಲ್ಲಾ ಮಾಡಿದ? ನಮ್ಮ ಕ್ಷೇತ್ರದಲ್ಲೂ ಸಿಹಿಸುದ್ದಿನ ಚೆನ್ನಾಗಿ ಸಾರೋಕೆ ನಾವು ಅವನಿಂದ ಯಾವ ಪಾಠ ಕಲೀಬಹುದು?
‘ಡೇರೆ ಮಾಡೋ ಕೆಲಸದವರು’ (ಅ. ಕಾ. 18:1-4)
4, 5. (ಎ) ಪೌಲ ಕೊರಿಂಥದಲ್ಲಿದ್ದಾಗ ಎಲ್ಲಿ ಉಳ್ಕೊಂಡ? (ಬಿ) ಜೀವನಕ್ಕಾಗಿ ಅವನು ಯಾವ ಕೆಲ್ಸ ಮಾಡಿದ? (ಸಿ) ಪೌಲ ಡೇರೆ ಮಾಡೋ ಕೆಲ್ಸನಾ ಹೇಗೆ ಕಲ್ತಿರಬಹುದು?
4 ಪೌಲ ಕೊರಿಂಥಕ್ಕೆ ಬಂದ ಸ್ವಲ್ಪದರಲ್ಲೇ ಅಕ್ವಿಲ ಮತ್ತು ಪ್ರಿಸ್ಕಿಲ್ಲ (ಪ್ರಿಸ್ಕ) ಅನ್ನೋ ಯೆಹೂದಿ ದಂಪತಿ ಸಿಕ್ಕಿದ್ರು. ಅವರು ಮನಸಾರೆ ಅತಿಥಿಸತ್ಕಾರ ಮಾಡೋಕೆ ಹೆಸ್ರುವಾಸಿಯಾಗಿದ್ರು. ಕ್ಲೌದಿಯ ಚಕ್ರವರ್ತಿ “ಎಲ್ಲ ಯೆಹೂದ್ಯರು ರೋಮ್ ಪಟ್ಟಣವನ್ನ ಬಿಟ್ಟುಹೋಗಬೇಕು” ಅಂತ ಆಜ್ಞೆ ಕೊಟ್ಟಿದ್ರಿಂದ ಅವರು ಕೊರಿಂಥಕ್ಕೆ ಬಂದು ವಾಸವಾಗಿದ್ರು. (ಅ. ಕಾ. 18:1, 2) ಅವರು ಪೌಲನನ್ನ ತಮ್ಮ ಮನೆಗೆ ಮಾತ್ರವಲ್ಲ, ಕೆಲ್ಸಕ್ಕೂ ಅವ್ರ ಜೊತೆ ಸೇರಿಸ್ಕೊಂಡ್ರು. ಅದಕ್ಕೆ ಬೈಬಲ್, “ಅವರು ಸಹ ಪೌಲನ ತರಾನೇ ಡೇರೆ ಮಾಡೋ ಕೆಲಸ ಮಾಡ್ತಿದ್ರು. ಪೌಲ ಅವ್ರ ಮನೆಯಲ್ಲೇ ಇದ್ಕೊಂಡು ಅವ್ರ ಜೊತೆ ಕೆಲಸಮಾಡ್ತಿದ್ದ” ಅಂತ ಹೇಳುತ್ತೆ. (ಅ. ಕಾ. 18:3) ಪೌಲ ಕೊರಿಂಥದಲ್ಲಿ ಎಷ್ಟು ಸಮಯದ ವರೆಗೂ ಸಾರಿದ್ನೋ ಅಷ್ಟು ಸಮಯ ಈ ದಂಪತಿಯ ಮನೆಯಲ್ಲೇ ಇದ್ದ. ಪೌಲ, ಬೈಬಲಿನ ಭಾಗವಾಗಿರೋ ತನ್ನ ಕೆಲವು ಪತ್ರಗಳನ್ನ ಅಕ್ವಿಲ ಮತ್ತು ಪ್ರಿಸ್ಕಿಲ್ಲರ ಜೊತೆಯಲ್ಲಿ ಇರೋವಾಗಲೇ ಬರೆದಿರಬೇಕು. b
5 “ಗಮಲಿಯೇಲನ ಹತ್ರ ಶಿಕ್ಷಣ” ಪಡ್ಕೊಂಡ ಪೌಲ ಡೇರೆ ಕೆಲ್ಸ ಮಾಡೋಕೆ ಹೇಗೆ ಸಾಧ್ಯ? (ಅ. ಕಾ. 22:3) ಒಂದನೇ ಶತಮಾನದಲ್ಲಿ ಯೆಹೂದ್ಯರು, ತಮ್ಮ ಮಕ್ಕಳು ಎಷ್ಟೇ ಚೆನ್ನಾಗಿ ಓದಿದ್ರೂ ಅವ್ರಿಗೆ ಒಂದು ಕೈಕೆಲಸ ಕಲಿಸ್ತಿದ್ರು. ಅದ್ರಿಂದ ತಮ್ಮ ಗೌರವಕ್ಕೆ ಧಕ್ಕೆ ಆಗುತ್ತೆ ಅಂತ ಅವರು ಅಂದ್ಕೊತಿರಲಿಲ್ಲ. ಪೌಲ ಕಿಲಿಕ್ಯದ ತಾರ್ಸದವನಾಗಿದ್ದ. ಈ ಸ್ಥಳ ಡೇರೆ ಮಾಡೋಕೆ ಬಳಸೋ ಸಿಲಿಸಿಯಮ್ ಅನ್ನೊ ಬಟ್ಟೆಗೆ ಪ್ರಸಿದ್ಧವಾಗಿತ್ತು. ಹಾಗಾಗಿ ಪೌಲ ಚಿಕ್ಕ ವಯಸ್ಸಲ್ಲೇ ಈ ಡೇರೆ ಮಾಡೋ ಕೆಲಸನಾ ಕಲಿತಿರಬೇಕು. ಡೇರೆ ಮಾಡೋದ್ರಲ್ಲಿ ಏನೆಲ್ಲಾ ಕೆಲ್ಸ ಇರುತ್ತೆ ಗೊತ್ತಾ? ಡೇರೆ ಮಾಡೋ ಬಟ್ಟೆಯನ್ನ ನೇಯೋದು, ಆ ಗಟ್ಟಿ ಹಾಗೂ ಒರಟಾದ ಬಟ್ಟೆನಾ ಕತ್ತರಿಸೋದು, ಹೊಲಿಯೋದು ಇದೆಲ್ಲಾ ಸೇರಿತ್ತು. ಹಾಗಾಗಿ ಈ ಕೆಲ್ಸ ಅಷ್ಟು ಸುಲಭ ಆಗಿರಲಿಲ್ಲ.
6, 7. (ಎ) ಡೇರೆ ಮಾಡೋ ಕೆಲಸನ ಪೌಲ ಹೇಗೆ ನೋಡ್ತಿದ್ದ? (ಬಿ) ಅಕ್ವಿಲ ಪ್ರಿಸ್ಕಿಲ್ಲಗೂ ಅಂಥದ್ದೇ ಮನೋಭಾವ ಇತ್ತು ಅಂತ ಹೇಗೆ ಗೊತ್ತಾಗುತ್ತೆ? (ಸಿ) ನಮ್ಮ ಕಾಲದ ಕ್ರೈಸ್ತರು ಪೌಲ, ಅಕ್ವಿಲ ಮತ್ತು ಪ್ರಿಸ್ಕಿಲ್ಲರ ತರ ಏನು ಮಾಡ್ತಿದ್ದಾರೆ?
6 ಪೌಲ ತನ್ನ ಜೀವನದಲ್ಲಿ ಡೇರೆ ಮಾಡೋದೇ ಮುಖ್ಯ ಕೆಲಸ ಅಂತ ಯಾವತ್ತೂ ನೆನಸಲಿಲ್ಲ. ಸೇವೆ ಮಾಡೋಕೆ ಸಹಾಯ ಆಗಲಿ ಅಥವಾ ಜನರ ಹತ್ರ “ಏನೂ ತಗೊಳ್ಳದೆ” ಸಿಹಿಸುದ್ದಿ ಸಾರಬೇಕು ಅನ್ನೋ ಒಂದೇ ಕಾರಣಕ್ಕೆ ಅವನು ಈ ಕೆಲಸ ಮಾಡಿದ. (2 ಕೊರಿಂ. 11:7) ಅಕ್ವಿಲ ಮತ್ತು ಪ್ರಿಸ್ಕಿಲ್ಲ ಡೇರೆ ಮಾಡೋ ಕೆಲ್ಸನಾ ಹೇಗೆ ನೋಡ್ತಿದ್ರು? ಕ್ರೈಸ್ತರಾಗಿದ್ದ ಅವರೂ ಪೌಲನ ತರನೇ ಯೋಚ್ನೆ ಮಾಡ್ತಿದ್ರು ಅನ್ನೋದ್ರಲ್ಲಿ ಯಾವ ಸಂಶಯನೂ ಇಲ್ಲ. ಯಾಕಂದ್ರೆ ಕ್ರಿ.ಶ. 52ರಲ್ಲಿ ಪೌಲ ಕೊರಿಂಥದಿಂದ ಎಫೆಸಕ್ಕೆ ಹೋದಾಗ ಅಕ್ವಿಲ ಪ್ರಿಸ್ಕಿಲ್ಲ ಕೂಡ ಕೊರಿಂಥ ಬಿಟ್ಟು ಅವನ ಜೊತೆ ಹೋದ್ರು. ಎಫೆಸದಲ್ಲಿ ಅವರ ಮನೆಯನ್ನ ಸಭೆಯ ಕೂಟ ನಡೆಸೋಕೆ ಉಪಯೋಗಿಸಿದ್ರು. (1 ಕೊರಿಂ. 16:19) ಆಮೇಲೆ ಅವರು ರೋಮಿಗೆ ಹೋದ್ರು. ನಂತ್ರ ಎಫೆಸಕ್ಕೆ ವಾಪಸ್ ಬಂದ್ರು. ಹೀಗೆ ಈ ಹುರುಪಿನ ದಂಪತಿ ದೇವರ ಆಳ್ವಿಕೆಗೆ ಮೊದಲನೇ ಸ್ಥಾನ ಕೊಡ್ತಾ ಬೇರೆವ್ರ ಸೇವೆ ಮಾಡೋಕೆ ಮುಂದೆ ಬಂದ್ರು. ಅದಕ್ಕೆ, “ಬೇರೆ ಜನಾಂಗಗಳ ಎಲ್ಲ ಸಭೆಯವರೂ” ಅವರಿಗೆ ಧನ್ಯವಾದ ಹೇಳಿದ್ರು.—ರೋಮ. 16:3-5; 2 ತಿಮೊ. 4:19.
7 ಪೌಲ, ಅಕ್ವಿಲ ಮತ್ತು ಪ್ರಿಸ್ಕಿಲ್ಲರ ಮಾದರಿಯನ್ನ ನಮ್ಮ ಕಾಲದ ಕ್ರೈಸ್ತರೂ ಅನುಕರಿಸ್ತಿದ್ದಾರೆ. ಹುರುಪಿನ ಸೇವೆ ಮಾಡೋ ಇವರು ‘ತುಂಬಾ ಖರ್ಚು ಮಾಡಿಸಿ ಬೇರೆವ್ರಿಗೆ ಭಾರವಾಗಿ ಇರಬಾರದು’ ಅನ್ನೋ ಉದ್ದೇಶದಿಂದ ಕಷ್ಟಪಟ್ಟು ಕೆಲಸಮಾಡ್ತಾರೆ. (1 ಥೆಸ. 2:9) ಜಾಸ್ತಿ ಸಮಯ ಸಿಹಿಸುದ್ದಿ ಸಾರಬೇಕು ಅಂತ ಅನೇಕರು ಪಾರ್ಟ್‌ಟೈಮ್ ಕೆಲ್ಸ ಮಾಡ್ತಾರೆ ಅಥವಾ ವರ್ಷದಲ್ಲಿ ಕೆಲವು ತಿಂಗಳಾದ್ರೂ ಕೆಲಸಮಾಡ್ತಾರೆ. ಹೀಗೆ ತಮ್ಮ ಖರ್ಚನ್ನ ತಾವೇ ನೋಡ್ಕೊಳ್ತಾ ಸಿಹಿಸುದ್ದಿ ಸಾರ್ತಿದ್ದಾರೆ. ನಿಜವಾಗಿ ಇವ್ರನ್ನ ಮೆಚ್ಚಲೇಬೇಕು. ಇನ್ನು ಕೆಲವರು ಅಕ್ವಿಲ ಪ್ರಿಸ್ಕಿಲ್ಲರ ತರ ಸಂಚರಣ ಮೇಲ್ವಿಚಾರಕರಿಗೆ ತಮ್ಮ ಮನೆಗಳಲ್ಲಿ ಉಳ್ಕೊಳ್ಳೋಕೆ ಅವಕಾಶ ಕೊಟ್ಟಿದ್ದಾರೆ. ಇದ್ರಿಂದ ಎಷ್ಟು ಪ್ರೋತ್ಸಾಹ ಮತ್ತು ಖುಷಿ ಸಿಗುತ್ತೆ ಅಂತ ಅವ್ರಿಗೆ ಚೆನ್ನಾಗಿ ಗೊತ್ತು. ಅದಕ್ಕೆ ಅವರು ‘ಅತಿಥಿಸತ್ಕಾರ ತೋರಿಸೋಕೆ ಅವಕಾಶಗಳನ್ನ ಹುಡುಕ್ತಾರೆ.’—ರೋಮ. 12:13.
‘ಕೊರಿಂಥದಲ್ಲಿದ್ದ ತುಂಬ ಜನ ನಂಬಿಕೆ ಇಟ್ರು’ (ಅ. ಕಾ. 18:5-8)
8, 9. (ಎ) ಪೌಲ ಯೆಹೂದ್ಯರಿಗೆ ಆಸಕ್ತಿಯಿಂದ ಸಾರ್ತಿದ್ದಾಗ ಬಂದ ವಿರೋಧಕ್ಕೆ ಹೇಗೆ ಪ್ರತಿಕ್ರಿಯಿಸಿದ? (ಬಿ) ಆಮೇಲೆ ಅವನು ಸಾರೋದಕ್ಕೆ ಎಲ್ಲಿಗೆ ಹೋದ?
8 ದೇವರ ಸೇವೆ ಮಾಡೋಕೆ ತನಗೆ ಸಹಾಯ ಆಗಲಿ ಅನ್ನೋ ಒಂದೇ ಒಂದು ಕಾರಣಕ್ಕೆ ಪೌಲ ಈ ಕೆಲಸ ಮಾಡ್ತಿದ್ದ. ಇದು ನಮಗೆ ಹೇಗೆ ಗೊತ್ತಾಗುತ್ತೆ? ಸೀಲ ಮತ್ತು ತಿಮೊತಿ ಮಕೆದೋನ್ಯ ಸಭೆಯವರು ಕೊಟ್ಟ ಉಡುಗೊರೆಗಳನ್ನ ಪೌಲನಿಗೆ ತಂದ್ಕೊಟ್ರು. (2 ಕೊರಿಂ. 11:9) ಆಗ ಅವನು ಏನು ಮಾಡ್ದ? ತಕ್ಷಣ, ‘ಜಾಸ್ತಿ ಸಮಯನ ಸಿಹಿಸುದ್ದಿ ಸಾರೋದ್ರಲ್ಲಿ ಕಳೀಯೋಕೆ ಶುರು ಮಾಡಿದ.’ (ಅ. ಕಾ. 18:5) ಆದ್ರೆ ಪೌಲ ಹೀಗೆ ಆಸಕ್ತಿಯಿಂದ ಸಾರೋವಾಗ ತುಂಬ ವಿರೋಧ ಬಂತು. ತುಂಬಾ ಯೆಹೂದ್ಯರು ಅವನ ಸಂದೇಶನ ಕಿವಿಗೆ ಹಾಕೊಳ್ಳಲಿಲ್ಲ. ಆಗ ಪೌಲ ಇದಕ್ಕೆ ನಾನು ಜವಾಬ್ದಾರನಲ್ಲ ಅಂತ ಅವ್ರಿಗೆ ತಿಳಿಸೋಕೆ ತನ್ನ ಬಟ್ಟೆ ಝಾಡಿಸಿ, “ನಿಮ್ಗೆ ಏನೇ ಆದ್ರೂ ಅದಕ್ಕೆ ಕಾರಣ ನೀವೇ. ಅದಕ್ಕೆ ಜವಾಬ್ದಾರಿ ನಾನಲ್ಲ. ಇವತ್ತಿಂದ ನಾನು ಯೆಹೂದ್ಯರಲ್ಲದ ಜನ್ರ ಹತ್ರ ಹೋಗ್ತೀನಿ” ಅಂತ ಹೇಳಿದ.—ಅ. ಕಾ. 18:6; ಯೆಹೆ. 3:18, 19.
9 ಹೀಗಾದ ಮೇಲೆ ಪೌಲ ಎಲ್ಲಿ ಹೋಗಿ ಸಾರೋದಕ್ಕಿದ್ದ? ಸಭಾಮಂದಿರದ ಪಕ್ಕದಲ್ಲೇ ತೀತ ಯುಸ್ತ ಅನ್ನೋ ವ್ಯಕ್ತಿ ಮನೆ ಇತ್ತು. ಇವನು ಯೆಹೂದಿ ಮತಕ್ಕೆ ಮತಾಂತರ ಆಗಿದ್ದ ಅನ್ಸುತ್ತೆ. ಇವನು ಪೌಲನನ್ನ ತನ್ನ ಮನೆಗೆ ಸ್ವಾಗತಿಸಿದ. ಅದಕ್ಕೆ ಪೌಲ ಸಭಾಮಂದಿರದಿಂದ ನೇರವಾಗಿ ಈ ಯುಸ್ತನ ಮನೆಗೆ ಹೋದ. (ಅ. ಕಾ. 18:7) ಕೊರಿಂಥದಲ್ಲಿದ್ದಷ್ಟು ದಿನ ಪೌಲ ಅಕ್ವಿಲ ಪ್ರಿಸ್ಕಿಲ್ಲರ ಮನೆಯಲ್ಲೇ ಉಳ್ಕೊಂಡಿದ್ದ. ಆದ್ರೆ ಯುಸ್ತನ ಮನೆನ ಪೌಲ ಸೇವೆ ಮಾಡೋಕೆ ಉಪಯೋಗಿಸ್ತಿದ್ದ.
10. ಪೌಲ ಬೇರೆ ಜನಾಂಗದವ್ರಿಗೆ ಮಾತ್ರ ಸಾರೋ ತೀರ್ಮಾನ ಮಾಡಿರಲಿಲ್ಲ ಅಂತ ಹೇಗೆ ಗೊತ್ತು?
10 ಪೌಲ, ಇನ್ನು ಮುಂದೆ ನಾನು ಬೇರೆ ಜನಾಂಗಗಳ ಜನರ ಹತ್ರ ಹೋಗ್ತೀನಿ ಅಂತ ಹೇಳಿದ್ದ. ಹಾಗಂತ ಅವನು ಬರೀ ಬೇರೆ ಜನಾಂಗದವ್ರಿಗೆ ಮಾತ್ರ ಸಿಹಿಸುದ್ದಿ ಸಾರಿದ್ನಾ? ಯೆಹೂದ್ಯರಿಗೆ, ಯೆಹೂದಿ ಮತಕ್ಕೆ ಮತಾಂತರ ಆದವ್ರಿಗೆ ಸಾರಲೇ ಇಲ್ವಾ? ಅವ್ರಿಗೆ ದೇವರ ಬಗ್ಗೆ ತಿಳ್ಕೊಳ್ಳೋಕೆ ಆಸಕ್ತಿ ಇದ್ರೂ ಹೇಳ್ಲಿಲ್ವಾ? ಖಂಡಿತ ಅವನು ಆ ರೀತಿ ಮಾಡಿರೋಕೆ ಸಾಧ್ಯ ಇಲ್ಲ. ಯಾಕಂದ್ರೆ ಸಭಾಮಂದಿರಕ್ಕೆ ಹೋಗ್ತಿದ್ದ ಎಷ್ಟೋ ಯೆಹೂದ್ಯರು ಕ್ರೈಸ್ತರಾದ್ರು. ಉದಾಹರಣೆಗೆ, “ಸಭಾಮಂದಿರದ ಅಧಿಕಾರಿ ಕ್ರಿಸ್ಪ ಮತ್ತು ಅವನ ಕುಟುಂಬದವರು ಯೇಸು ಕ್ರಿಸ್ತನ ಶಿಷ್ಯರಾದ್ರು. ಕೊರಿಂಥದಲ್ಲಿದ್ದ ತುಂಬ ಜನ್ರೂ ಸಿಹಿಸುದ್ದಿ ಕೇಳಿಸ್ಕೊಂಡು ನಂಬಿ ದೀಕ್ಷಾಸ್ನಾನ ತಗೊಂಡ್ರು” ಅಂತ ಬೈಬಲ್ ಹೇಳುತ್ತೆ. (ಅ. ಕಾ. 18:8) ಹೀಗೆ ತೀತ ಯುಸ್ತನ ಮನೆಯಲ್ಲೇ ಕ್ರೈಸ್ತರು ಸಭೆ ಸೇರಿ ಬರ್ತಿದ್ರು. ಕೊರಿಂಥದಲ್ಲಿ ಹೊಸದಾಗಿ ಸಭೆ ಶುರುವಾಯ್ತು. ಲೂಕ ಅಪೊಸ್ತಲರ ಕಾರ್ಯ ಪುಸ್ತಕನ ಘಟನೆಗಳು ನಡೆದ ಕ್ರಮದಲ್ಲೇ ಬರೆದಿದ್ರಿಂದ ನಾವು ಇನ್ನೊಂದು ವಿಷ್ಯ ತಿಳ್ಕೊಬಹುದು. ಅದೇನಂದ್ರೆ, ಪೌಲ ತನ್ನ ಬಟ್ಟೆಯನ್ನ ಝಾಡಿಸಿದ ಘಟನೆ ಆದಮೇಲೆನೇ ಈ ಯೆಹೂದಿಗಳು ಮತ್ತು ಯೆಹೂದಿ ಮತಕ್ಕೆ ಮತಾಂತರ ಆದವರು ಕ್ರೈಸ್ತರಾದ್ರು. ಇದ್ರಿಂದ ಪೌಲ ಬೇರೆ ಜನಾಂಗದವ್ರಿಗಷ್ಟೇ ಅಲ್ಲ ಯೆಹೂದ್ಯರಿಗೂ ಸಾರಿದ, ಹೀಗೆ ಪರಿಸ್ಥಿತಿಗಳಿಗೆ ತಕ್ಕಂತೆ ಹೊಂದಾಣಿಕೆ ಮಾಡ್ಕೊತಿದ್ದ ಅಂತ ಗೊತ್ತಾಗುತ್ತೆ.
11. ಇವತ್ತು ಯೆಹೋವನ ಸಾಕ್ಷಿಗಳು ಕ್ರೈಸ್ತರು ಅಂತ ಹೇಳ್ಕೊಳ್ಳೋ ಜನ್ರಿಗೆ ಸಾರೋವಾಗ ಪೌಲನ ತರ ಹೇಗೆ ಸಹಾಯ ಮಾಡ್ತಾರೆ?
11 ಇಂದು ಕೂಡ ಲೋಕದ ಎಲ್ಲಾ ಕಡೆ ಬೇರೆ ಬೇರೆ ಪಂಗಡಗಳ ಚರ್ಚುಗಳಿವೆ. ಅವು ತಮ್ಮ ಸದಸ್ಯರನ್ನ ಬಿಗಿ ಹಿಡಿತದಲ್ಲಿ ಇಟ್ಕೊಂಡಿವೆ. ಇನ್ನು ಕೆಲ್ವು ಕಡೆ, ಕ್ರೈಸ್ತರು ಅಂತ ಹೇಳ್ಕೊಳ್ಳೋ ಮಿಷನರಿಗಳು ತುಂಬ ಜನ್ರನ್ನ ಮತಾಂತರ ಮಾಡಿದ್ದಾರೆ. ಒಂದನೇ ಶತಮಾನದ ಕೊರಿಂಥದಲ್ಲಿದ್ದ ಯೆಹೂದ್ಯರ ತರ ಇವರೂ ಸಂಪ್ರದಾಯದ ಕಪಿಮುಷ್ಠಿಯಲ್ಲಿದ್ದಾರೆ. ಆದ್ರೆ ಯೆಹೋವನ ಸಾಕ್ಷಿಗಳಾದ ನಾವು ಅವ್ರ ತರ ಇಲ್ಲ. ನಾವು ಪೌಲನ ತರ ಹುರುಪಿನಿಂದ ಅಂಥ ಜನ್ರ ಹತ್ರ ಹೋಗಿ ಬೈಬಲನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡ್ತೀವಿ. ಅವರು ನಮ್ಮನ್ನ ವಿರೋಧಿಸಿದ್ರೂ ಅಥವಾ ಅವ್ರ ಧಾರ್ಮಿಕ ಮುಖಂಡರು ನಮ್ಮನ್ನ ಹಿಂಸಿಸಿದ್ರೂ ನಾವು ನಿರೀಕ್ಷೆ ಕಳ್ಕೊಳ್ಳಲ್ಲ, ಅವ್ರಿಗೆ ಸಹಾಯ ಮಾಡೋಕೆ ಪ್ರಯತ್ನಿಸ್ತೀವಿ. ಯಾಕಂದ್ರೆ, ಅಂಥವರಲ್ಲೂ ಕೆಲವ್ರಿಗೆ ‘ದೇವರ ಸೇವೆ ಮಾಡೋಕೆ ತುಂಬ ಹುರುಪಿರುತ್ತೆ ಆದ್ರೆ ದೇವರ ಇಷ್ಟ ಏನಂತ ಅವ್ರಿಗೆ ಸರಿಯಾಗಿ ಗೊತ್ತಿರಲ್ಲ.’ ಹಾಗಾಗಿ ಅವ್ರನ್ನ ನಾವು ಹುಡುಕಿ ಕಂಡ್ಕೊಬೇಕು.—ರೋಮ. 10:2.
“ಈ ಪಟ್ಟಣದಲ್ಲಿ ಇನ್ನೂ ತುಂಬ ಜನ ಇದ್ದಾರೆ” (ಅ. ಕಾ. 18:9-17)
12. ದರ್ಶನದಲ್ಲಿ ಪೌಲನಿಗೆ ಯಾವ ಆಶ್ವಾಸನೆ ಸಿಕ್ತು?
12 ಪೌಲನಿಗೆ ಕೊರಿಂಥದಲ್ಲಿ ಸಾರೋದನ್ನ ಮುಂದುವರಿಸಬೇಕಾ ಬೇಡ್ವಾ ಅನ್ನೋ ಸಂಶಯ ಮನಸ್ಸಲ್ಲಿ ಕಾಡ್ತಿತ್ತು. ಆದ್ರೆ ಯೇಸು ದರ್ಶನದ ಮೂಲಕ ಕಾಣಿಸ್ಕೊಂಡ ರಾತ್ರಿ ಅದು ಪರಿಹಾರ ಆಯ್ತು. ಯಾಕಂದ್ರೆ ಯೇಸು ಆ ದರ್ಶನದಲ್ಲಿ ಅವನಿಗೆ, “ಭಯಪಡಬೇಡ, ಮಾತಾಡ್ತಾನೇ ಇರು, ಸುಮ್ಮನಿರಬೇಡ. ಯಾಕಂದ್ರೆ, ನಾನು ನಿನ್ನ ಜೊತೆ ಇದ್ದೀನಿ. ಯಾರೂ ನಿಂಗೆ ಹಾನಿ ಮಾಡಲ್ಲ. ನನ್ನ ಮೇಲೆ ನಂಬಿಕೆ ಇಡುವವರು ಈ ಪಟ್ಟಣದಲ್ಲಿ ಇನ್ನೂ ತುಂಬ ಜನ ಇದ್ದಾರೆ” ಅಂತ ಹೇಳಿದನು. (ಅ. ಕಾ. 18:9, 10) ಈ ದರ್ಶನದಿಂದ ಪೌಲನಿಗೆ ಎಷ್ಟು ಪ್ರೋತ್ಸಾಹ ಸಿಕ್ಕಿರಬೇಕು ಅಲ್ವಾ! ಪೌಲನಿಗೆ ಏನೂ ತೊಂದ್ರೆ ಆಗಲ್ಲ ಮತ್ತು ಸತ್ಯ ತಿಳ್ಕೊಳ್ಳೋಕೆ ಬಯಸೋ ಎಷ್ಟೋ ಜನ ಆ ನಗರದಲ್ಲಿದ್ದಾರೆ ಅಂತ ಸ್ವತಃ ಯೇಸುನೇ ಆಶ್ವಾಸನೆ ನೀಡಿದನು. ಈ ದರ್ಶನಕ್ಕೆ ಪೌಲ ಹೇಗೆ ಪ್ರತಿಕ್ರಿಯಿಸಿದ? ‘ಒಂದೂವರೆ ವರ್ಷ ಅಲ್ಲೇ ಇದ್ದು ಅವ್ರಿಗೆ ದೇವ್ರ ಸಂದೇಶ ಕಲಿಸಿದ’ ಅಂತ ಬೈಬಲ್ ಹೇಳುತ್ತೆ.—ಅ. ಕಾ. 18:11.
13. (ಎ) ನ್ಯಾಯಸ್ಥಾನದ ಮುಂದೆ ಬರ್ತಿದ್ದ ಹಾಗೆ ಪೌಲನಿಗೆ ಯಾವ ಘಟನೆ ನೆನಪಾಗಿರಬಹುದು? (ಬಿ) ಆದ್ರೆ ಹಿಂದೆ ಆದ ತರ ಈಗ ಆಗೋದಿಲ್ಲ ಅನ್ನೋದಕ್ಕೆ ಅವನಿಗೆ ಯಾವ ಆಧಾರ ಇತ್ತು?
13 ಕೊರಿಂಥದಲ್ಲಿ ಒಂದು ವರ್ಷ ಕಳೆದ ಮೇಲೆ, ತನಗೆ ಒಡೆಯನ ಬೆಂಬಲ ಇದೆ ಅನ್ನೋದಕ್ಕೆ ಪೌಲನಿಗೆ ಇನ್ನೊಂದು ಆಧಾರ ಸಿಕ್ತು. “ಯೆಹೂದ್ಯರೆಲ್ಲ ಸೇರ್ಕೊಂಡು ಪೌಲನ ವಿರುದ್ಧ ಹೋದ್ರು. ಅವನನ್ನ ರಾಜ್ಯಪಾಲನ ಮುಂದೆ ವಿಚಾರಣೆಗೆ ಕರ್ಕೊಂಡು ಬಂದ್ರು.” (ಅ. ಕಾ. 18:12) ಈ ನ್ಯಾಯಸ್ಥಾನ ನೀಲಿ-ಬಿಳಿ ಬಣ್ಣದ ಅಮೃತಶಿಲೆಯ ಎತ್ತರದ ವೇದಿಕೆಯಾಗಿದ್ದು ಅದು ಅಲಂಕಾರಿಕ ಕೆತ್ತನೆಗಳಿಂದ ಕೂಡಿತ್ತು, ಅಲ್ಲದೇ ಇದು ಕೊರಿಂಥದ ಮಾರುಕಟ್ಟೆ ಹತ್ರ ಇದ್ದಿರಬೇಕು ಅಂತ ಕೆಲವರು ಹೇಳ್ತಾರೆ. ನ್ಯಾಯಸ್ಥಾನದ ಮುಂದೆ ತುಂಬ ಜನ ಕೂಡಿ ಬರುವಷ್ಟು ದೊಡ್ಡದಾದ ಅಂಗಣ ಅಲ್ಲಿತ್ತು. ಅಗೆತಶಾಸ್ತ್ರಜ್ಞರ ಪ್ರಕಾರ ಈ ನ್ಯಾಯಸ್ಥಾನ ಸಭಾಮಂದಿರ ಮತ್ತು ಯುಸ್ತನ ಮನೆಯಿಂದ ಕೆಲವೇ ಹೆಜ್ಜೆ ದೂರದಲ್ಲಿದ್ದಿರಬೇಕು. ಯೆಹೂದ್ಯರು ಪೌಲನನ್ನ ನ್ಯಾಯಸ್ಥಾನದ ಮುಂದೆ ಕರ್ಕೊಂಡು ಬರ್ತಿದ್ದ ಹಾಗೆ ಮೊದಲನೇ ಕ್ರೈಸ್ತ ಹುತಾತ್ಮ ಅಂತ ಕರೀತಿದ್ದ ಸ್ತೆಫನನನ್ನ ಕಲ್ಲೆಸೆದು ಕೊಂದಿದ್ದು ಅವನಿಗೆ ನೆನಪಾಗಿರಬಹುದು. ಸೌಲ ಅನ್ನೋ ಹೆಸ್ರಿದ್ದ ಇದೇ ಪೌಲ ‘ಸ್ತೆಫನನನ್ನ ಕೊಲ್ಲೋದಕ್ಕೆ ಬೆಂಬಲಿಸಿದ್ದ.’ (ಅ. ಕಾ. 8:1) ಹಾಗಾದ್ರೆ ಪೌಲನಿಗೂ ಇದೇ ತರ ಆಗಲಿಕ್ಕಿತ್ತಾ? ಇಲ್ಲ, ಯಾಕಂದ್ರೆ, “ಯಾರೂ ನಿಂಗೆ ಹಾನಿ ಮಾಡಲ್ಲ” ಅಂತ ಅವನಿಗೆ ಈಗಾಗ್ಲೇ ಒಡೆಯ ಹೇಳಿದ್ದನು.—ಅ. ಕಾ. 18:10.
14, 15. (ಎ) ಯೆಹೂದ್ಯರು ಪೌಲನ ವಿರುದ್ಧ ಯಾವ ಆರೋಪ ಹಾಕಿದ್ರು? (ಬಿ) ಗಲ್ಲಿಯೋನ ಆ ಆರೋಪವನ್ನ ಯಾಕೆ ತಳ್ಳಿಹಾಕಿದ? (ಸಿ) ಸೋಸ್ಥೆನನಿಗೆ ಏನಾಯ್ತು? (ಡಿ) ಈ ಘಟನೆ ಆದಮೇಲೆ ಏನಾಗಿರಬಹುದು?
14 ಪೌಲ ನ್ಯಾಯಸ್ಥಾನದ ಮುಂದೆ ಬಂದಾಗ ಏನಾಯ್ತು? ಅಲ್ಲಿ ಅಖಾಯದ ರಾಜ್ಯಪಾಲನಾಗಿದ್ದ ಗಲ್ಲಿಯೋನ ನ್ಯಾಯಾಧೀಶನಾಗಿ ಕೂತಿದ್ದ. ಇವನು ರೋಮನ್ ತತ್ವಜ್ಞಾನಿ ಸೆನಿಕನ ಅಣ್ಣ. ಯೆಹೂದ್ಯರು ಪೌಲನ ವಿರುದ್ಧ “ಇವನು ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ದೇವ್ರನ್ನ ಆರಾಧಿಸೋಕೆ ಜನ್ರಿಗೆ ಕಲಿಸ್ತಿದ್ದಾನೆ” ಅಂತ ಆರೋಪ ಹಾಕಿದ್ರು. (ಅ. ಕಾ. 18:13) ಪೌಲ ಕಾನೂನಿಗೆ ವಿರುದ್ಧವಾಗಿ ಮತಾಂತರ ಮಾಡ್ತಿದ್ದಾನೆ ಅನ್ನೋದು ಯೆಹೂದ್ಯರ ಆರೋಪವಾಗಿತ್ತು. ಆದ್ರೆ ಗಲ್ಲಿಯೋನನಿಗೆ, ಪೌಲ ಯಾವುದೇ ‘ತಪ್ಪು’ ಅಥವಾ “ಘೋರ ಅಪರಾಧ” ಮಾಡಿಲ್ಲ ಅಂತ ಚೆನ್ನಾಗಿ ಗೊತ್ತಿತ್ತು. (ಅ. ಕಾ. 18:14) ಅಲ್ಲದೇ ಯೆಹೂದ್ಯರ ವಾದವಿವಾದದಲ್ಲಿ ಸೇರಿಕೊಳ್ಳೋಕೆ ಅವನಿಗೆ ಇಷ್ಟ ಇರಲಿಲ್ಲ. ಅದಕ್ಕೇ ಪೌಲ ತನ್ನನ್ನ ಸಮರ್ಥಿಸೋಕೆ ಒಂದು ಪದ ಆಡೋಕೂ ಮುಂಚೆನೇ ಗಲ್ಲಿಯೋನ ಆ ಆರೋಪವನ್ನೇ ತಳ್ಳಿಹಾಕಿದ. ಇದ್ರಿಂದ ಆರೋಪ ಹಾಕಿದ ಜನ ಕೋಪ ಮಾಡ್ಕೊಂಡು ಸೋಸ್ಥೆನನ ಮೇಲೆ ತಮ್ಮ ಕೋಪ ತೀರಿಸ್ಕೊಂಡ್ರು. ಅವರು ಸೋಸ್ಥೆನನನ್ನ ಹಿಡಿದು “ಅಲ್ಲೇ ಹೊಡೆಯೋಕೆ ಶುರುಮಾಡಿದ್ರು.” ಇವನು ಕ್ರಿಸ್ಪನ ಬದಲಿಗೆ ಸಭಾಮಂದಿರದ ಅಧಿಕಾರಿಯಾಗಿದ್ದ.—ಅ. ಕಾ. 18:17.
15 ಜನ ಸೋಸ್ಥೆನನನ್ನ ಹೊಡೆಯೋವಾಗ ಗಲ್ಲಿಯೋನ ಯಾಕೆ ತಡೀಲಿಲ್ಲ? ಸೋಸ್ಥೆನ ಪೌಲನ ವಿರುದ್ಧ ಎದ್ದ ಗುಂಪಿನ ನಾಯಕ, ಅವನಿಗೆ ತಕ್ಕ ಶಾಸ್ತಿ ಆಗ್ತಿದೆ ಅಂತ ಗಲ್ಲಿಯೋನ ನೆನಸಿರಬೇಕು. ಅದು ನಿಜಾನೋ ಸುಳ್ಳೋ ಗೊತ್ತಿಲ್ಲ, ಆದ್ರೆ ಅದೇನೇ ಆಗಿರಲಿ, ಈ ಘಟನೆಯಿಂದ ಒಂದು ಒಳ್ಳೇ ವಿಷ್ಯ ಆಯ್ತು. ತುಂಬಾ ವರ್ಷ ಆದಮೇಲೆ ಪೌಲ ಕೊರಿಂಥ ಸಭೆಗೆ ಬರೆದ ಮೊದಲನೇ ಪತ್ರದಲ್ಲಿ ಸೊಸ್ಥೆನ ಅನ್ನೋ ವ್ಯಕ್ತಿಯನ್ನ ಸಹೋದರ ಅಂತ ಕರೆದಿದ್ದಾನೆ. (1 ಕೊರಿಂ. 1:1, 2) ಕೊರಿಂಥದಲ್ಲಿ ಹೊಡೆತ ತಿಂದ ಸೋಸ್ಥೆನನೇ ಈ ಸೊಸ್ಥೆನ ಆಗಿದ್ರೆ ಆ ಘಟನೆಯಿಂದ ಅವನು ಕ್ರೈಸ್ತನಾಗೋದಕ್ಕೆ ಖಂಡಿತ ಸಹಾಯ ಆಗಿದ್ದಿರಬೇಕು.
16. ಯೇಸು ಪೌಲನಿಗೆ ಹೇಳಿದ ಮಾತಿಂದ ನಮಗೆ ಯಾವ ಪ್ರೋತ್ಸಾಹ ಸಿಗುತ್ತೆ?
16 ಪೌಲ ಸಾರ್ತಿದ್ದ ಸಂದೇಶವನ್ನ ಯೆಹೂದ್ಯರು ತಿರಸ್ಕರಿಸಿದ ಮೇಲೆ ಯೇಸು ಅವನಿಗೆ ಏನ್ ಹೇಳಿದ ಅಂತ ಸ್ವಲ್ಪ ನೆನಪಿಸ್ಕೊಳ್ಳಿ. “ಭಯಪಡಬೇಡ, ಮಾತಾಡ್ತಾನೇ ಇರು, ಸುಮ್ಮನಿರಬೇಡ. ಯಾಕಂದ್ರೆ, ನಾನು ನಿನ್ನ ಜೊತೆ ಇದ್ದೀನಿ” ಅಂತ ಹೇಳಿದ. (ಅ. ಕಾ. 18:9, 10) ಆ ಮಾತುಗಳನ್ನ ನಾವು ಯಾವಾಗ್ಲೂ ನೆನಪಲ್ಲಿಡಬೇಕು. ಅದ್ರಲ್ಲೂ ಮುಖ್ಯವಾಗಿ ನಮ್ಮ ಸಂದೇಶವನ್ನ ಜನ ತಿರಸ್ಕರಿಸಿದಾಗ ನೆನಪಲ್ಲಿಡಬೇಕು. ಯಾಕಂದ್ರೆ ಯೆಹೋವ ಜನರ ಹೃದಯದಲ್ಲಿ ಏನಿದೆ ಅಂತ ನೋಡ್ತಾನೆ ಮತ್ತು ಒಳ್ಳೇ ಹೃದಯದ ಜನ್ರನ್ನ ತನ್ನ ಕಡೆಗೆ ಖಂಡಿತ ಸೆಳೀತಾನೆ. (1 ಸಮು. 16:7; ಯೋಹಾ. 6:44) ಈ ವಿಷ್ಯನ ನಾವು ಮನಸ್ಸಲ್ಲಿ ಇಟ್ಕೊಂಡ್ರೆ ಸಾರೋ ಕೆಲಸದಲ್ಲಿ ನಾವು ಬಿಜ಼ಿಯಾಗಿ ಇರ್ತೀವಿ. ಪ್ರತಿ ವರ್ಷ ಲಕ್ಷಗಟ್ಟಲೆ ಜನ ದೀಕ್ಷಾಸ್ನಾನ ತಗೊಳ್ತಿದ್ದಾರೆ. ಅಂದ್ರೆ ಪ್ರತಿದಿನ ನೂರಾರು ಜನ್ರಿಗೆ ದೀಕ್ಷಾಸ್ನಾನ ಆಗ್ತಿದೆ. “ಎಲ್ಲಾ ದೇಶದ ಜನ್ರಿಗೆ ನನ್ನ ಶಿಷ್ಯರಾಗೋಕೆ ಕಲಿಸಿ” ಅನ್ನೋ ಆಜ್ಞೆಯನ್ನ ಪಾಲಿಸೋರಿಗೆ “ಈ ಲೋಕದ ಅಂತ್ಯಕಾಲ ಮುಗಿಯೋವರೆಗೂ ಯಾವಾಗ್ಲೂ ನಾನು ನಿಮ್ಮ ಜೊತೆ ಇರ್ತಿನಿ” ಅಂತ ಯೇಸು ಮಾತುಕೊಟ್ಟಿದ್ದಾನೆ.—ಮತ್ತಾ. 28:19, 20.
ಅ. ಕಾ. 18:18-22)
“ಯೆಹೋವನಿಗೆ ಇಷ್ಟ ಇದ್ರೆ” (17, 18. ಪೌಲ ಎಫೆಸಕ್ಕೆ ಪ್ರಯಾಣಿಸೋವಾಗ ಯಾವೆಲ್ಲಾ ವಿಷ್ಯಗಳ ಬಗ್ಗೆ ಯೋಚ್ನೆ ಮಾಡಿದ್ದಿರಬಹುದು?
17 ಪೌಲನ ಮೇಲೆ ಆರೋಪ ಹಾಕಿದವರ ಕಡೆಗೆ ಗಲ್ಲಿಯೋನ ತೋರಿಸಿದ ಮನೋಭಾವದಿಂದಾಗಿ ಕೊರಿಂಥದಲ್ಲಿ ಹೊಸದಾಗಿ ಆರಂಭವಾದ ಕ್ರೈಸ್ತ ಸಭೆಗೆ ಸ್ವಲ್ಪ ಸಮಯ ಶಾಂತಿ ಸಿಕ್ತಾ? ಅದಕ್ಕೆ ಯಾವುದೇ ಆಧಾರಗಳಿಲ್ಲ. ಆದ್ರೆ ಪೌಲ ಕೊರಿಂಥದಿಂದ ಹೋಗೋಕೆ ಮುಂಚೆ “ತುಂಬ ದಿನ ಅಲ್ಲೇ ಇದ್ದ” ಅಂತ ಬೈಬಲ್ ಹೇಳುತ್ತೆ. ಆಮೇಲೆ ಕ್ರಿ.ಶ. 52ರ ವಸಂತಕಾಲದಲ್ಲಿ ಅವನು ಕೊರಿಂಥದಿಂದ 11 ಕಿ.ಮೀ. ಪೂರ್ವದಲ್ಲಿದ್ದ ಕೆಂಕ್ರೆಯ ಬಂದರಿನಿಂದ ಹಡಗಿನಲ್ಲಿ ಸಿರಿಯಕ್ಕೆ ಹೋಗಬೇಕು ಅಂತ ನಿರ್ಧಾರ ಮಾಡಿದ. ಅವನು ಕೆಂಕ್ರೆಯಿಂದ ಹೋಗೋಕೆ ಮುಂಚೆ “ಹರಕೆ ಮಾಡಿದ ಹಾಗೇ ತನ್ನ ತಲೆಕೂದಲನ್ನ ಕತ್ತರಿಸಿದ.” c (ಅ. ಕಾ. 18:18) ಆಮೇಲೆ ಅವನು ಅಕ್ವಿಲ ಪ್ರಿಸ್ಕಿಲ್ಲರನ್ನ ಕರ್ಕೊಂಡು ಈಜಿಯನ್ ಸಮುದ್ರ ಮಾರ್ಗವಾಗಿ ಏಷ್ಯಾ ಮೈನರ್‌ನ ಎಫೆಸಕ್ಕೆ ಬಂದ.
18 ಪೌಲ ಕೆಂಕ್ರೆಯಿಂದ ಪ್ರಯಾಣಿಸೋವಾಗ, ಕೊರಿಂಥದಲ್ಲಿ ನಡೆದ ಘಟನೆಗಳ ಬಗ್ಗೆ ಅವನು ಯೋಚ್ನೆ ಮಾಡಿರಬೇಕು. ಅದ್ರಲ್ಲಿ ಅವನಿಗೆ ತುಂಬ ಸವಿನೆನಪುಗಳಿತ್ತು, ಸಂತೃಪ್ತಿಪಡೋಕೆ ತುಂಬಾ ಕಾರಣಗಳೂ ಇತ್ತು. ಅಲ್ಲಿ ಅವನು ಮಾಡಿದ 18 ತಿಂಗಳ ಸೇವೆಯಿಂದ ಒಳ್ಳೇ ಪ್ರತಿಫಲ ಸಿಕ್ತು. ಅಲ್ಲಿ ಮೊದಲ ಸಭೆ ಶುರು ಆಯ್ತು, ಯುಸ್ತನ ಮನೆಯನ್ನ ಕೂಟ ನಡೆಸೋ ಜಾಗವಾಗಿ ಬಳಸಿದ್ರು, ಯುಸ್ತ, ಕ್ರಿಸ್ಪ ಮತ್ತೆ ಅವನ ಮನೆಯವರು, ಇನ್ನೂ ತುಂಬ ಜನ ಕ್ರೈಸ್ತರಾದ್ರು. ಹೊಸದಾಗಿ ಸತ್ಯಕ್ಕೆ ಬಂದ ಇವರೆಲ್ಲರನ್ನ ಪೌಲ ತುಂಬ ಪ್ರೀತಿಸ್ತಿದ್ದ. ಸಮಯ ಹೋದ ಹಾಗೆ ಅವನು ಅವ್ರಿಗೆ ಪತ್ರ ಬರೆದ, ಅದ್ರಲ್ಲಿ ಅವ್ರನ್ನ ‘ಹೃದಯದ ಮೇಲೆ ಬರೆದಿರೋ ಪತ್ರಗಳು’ ಅಂತ ವರ್ಣಿಸಿದ. ಬೈಬಲ್ ಸತ್ಯ ತಿಳ್ಕೊಳ್ಳೋಕೆ ನಾವು ಯಾರಿಗೆ ಸಹಾಯ ಮಾಡ್ತೀವೋ ಅವ್ರ ಜೊತೆ ನಮ್ಗೂ ಒಳ್ಳೇ ಸ್ನೇಹ ಸಂಬಂಧ ಬೆಳೆಯುತ್ತೆ. ‘ಹೃದಯದ ಮೇಲೆ ಬರೆದಿರೋ ಪತ್ರಗಳ’ ತರ ಇರೋ ಅವ್ರನ್ನ ನೋಡುವಾಗ ನಮಗೆಷ್ಟು ತೃಪ್ತಿ ಆಗುತ್ತೆ ಅಲ್ವಾ!—2 ಕೊರಿಂ. 3:1-3.
19, 20. (ಎ) ಎಫೆಸಕ್ಕೆ ತಲುಪಿದ ಕೂಡಲೆ ಪೌಲ ಏನು ಮಾಡಿದ? (ಬಿ) ಗುರಿಗಳನ್ನ ಮುಟ್ಟೋಕೆ ಪ್ರಯತ್ನಿಸೋ ವಿಷ್ಯದಲ್ಲಿ ನಾವು ಪೌಲನಿಂದ ಏನು ಕಲೀಬಹುದು?
19 ಪೌಲ ಎಫೆಸ ತಲುಪಿದ ಕೂಡಲೆ ತನ್ನ ಮುಖ್ಯ ಕೆಲಸವನ್ನ ಮಾಡೋಕೆ ಶುರು ಮಾಡಿದ. ಅವನು ‘ಸಭಾಮಂದಿರಕ್ಕೆ ಹೋಗಿ ಯೆಹೂದ್ಯರಿಗೆ ವಚನಗಳನ್ನ ವಿವರಿಸಿದ.’ (ಅ. ಕಾ. 18:19) ಈ ಸಂದರ್ಭದಲ್ಲಿ ಪೌಲ ಎಫೆಸದಲ್ಲಿ ಸ್ವಲ್ಪ ಸಮಯ ಮಾತ್ರ ಉಳ್ಕೊಂಡ. ಅಲ್ಲಿನವರು ಜಾಸ್ತಿ ಸಮಯ ಉಳ್ಕೊ ಅಂತ ಕೇಳ್ಕೊಂಡ್ರೂ “ಅವನು ಒಪ್ಪಲಿಲ್ಲ.” ಅವ್ರಿಗೆ ವಿದಾಯ ಹೇಳೋವಾಗ ಅವನು, “ಯೆಹೋವನಿಗೆ ಇಷ್ಟ ಇದ್ರೆ ನಾನು ಮತ್ತೆ ನಿಮ್ಮ ಹತ್ರ ಬರ್ತೀನಿ” ಅಂದ. (ಅ. ಕಾ. 18:20, 21) ಯಾಕಂದ್ರೆ ಅಲ್ಲಿ ಇನ್ನೂ ತುಂಬ ಜನ್ರಿಗೆ ಸಾರಬೇಕು ಅಂತ ಪೌಲನಿಗೆ ಗೊತ್ತಿತ್ತು. ಪುನಃ ಎಫೆಸಕ್ಕೆ ಬರೋ ಆಸೆ ಇದ್ರೂ ಪೌಲ ಅದನ್ನ ಯೆಹೋವನಿಗೆ ಬಿಟ್ಟ. ಇದು ನಮ್ಮೆಲ್ಲರಿಗೂ ಒಂದು ಒಳ್ಳೇ ಮಾದರಿ ಅಲ್ವಾ? ಯೆಹೋವ ದೇವರ ಸೇವೆಯನ್ನ ಜಾಸ್ತಿ ಮಾಡೋಕೆ ಗುರಿಗಳನ್ನ ಇಟ್ಟು ಮುಂದೆ ಹೆಜ್ಜೆ ಹಾಕ್ತಾ ಇರಬೇಕು. ಆದ್ರೆ ಯಾವಾಗ್ಲೂ ಯೆಹೋವನ ಮಾರ್ಗದರ್ಶನದ ಮೇಲೆ ಅವಲಂಬಿಸಬೇಕು ಮತ್ತು ಆತನ ಇಷ್ಟದ ಪ್ರಕಾರ ನಡ್ಕೊಬೇಕು.—ಯಾಕೋ. 4:15.
20 ಆಮೇಲೆ ಪೌಲ, ಅಕ್ವಿಲ ಮತ್ತು ಪ್ರಿಸ್ಕಿಲ್ಲರನ್ನ ಎಫೆಸದಲ್ಲೇ ಬಿಟ್ಟು ಸಮುದ್ರ ಮಾರ್ಗವಾಗಿ ಕೈಸರೈಯಕ್ಕೆ ಹೋದ. ಅವನು “ಯೆರೂಸಲೇಮ್ ಸಭೆಗೆ” ಹೋಗಿ ಅಲ್ಲಿನವರನ್ನ ಮಾತಾಡಿಸಿದ. (ಅ. ಕಾ. 18:22) ಆಮೇಲೆ ಸಿರಿಯದ ಅಂತಿಯೋಕ್ಯಕ್ಕೆ ಹೋದ (ಮಿಷನರಿ ಪ್ರಯಾಣ ಮಾಡದೆ ಇದ್ದಾಗ ಸಾಮಾನ್ಯವಾಗಿ ಪೌಲ ಇಲ್ಲೇ ಉಳ್ಕೊಳ್ತಿದ್ದ). ಹೀಗೆ ಅವನು ತನ್ನ ಎರಡನೇ ಮಿಷನರಿ ಪ್ರಯಾಣವನ್ನ ಯಶಸ್ವಿಕರವಾಗಿ ಮುಗಿಸಿದ. ಆದ್ರೆ ಅವನ ಕೊನೆ ಮಿಷನರಿ ಪ್ರಯಾಣದಲ್ಲಿ ಏನೆಲ್ಲಾ ಆಯ್ತು ಗೊತ್ತಾ?
a “ ಕೊರಿಂಥ—ಎರಡು ಬಂದರುಗಳಿರೋ ಪಟ್ಟಣ” ಅನ್ನೋ ಚೌಕ ನೋಡಿ.
b “ ಪ್ರೋತ್ಸಾಹ ನೀಡಿದ ಪೌಲನ ಪತ್ರಗಳು” ಅನ್ನೋ ಚೌಕ ನೋಡಿ.