ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 6

ಸ್ತೆಫನ ‘ದೇವರ ಮೆಚ್ಚುಗೆ ಮತ್ತು ಶಕ್ತಿ ಪಡ್ಕೊಂಡಿದ್ದ’

ಸ್ತೆಫನ ‘ದೇವರ ಮೆಚ್ಚುಗೆ ಮತ್ತು ಶಕ್ತಿ ಪಡ್ಕೊಂಡಿದ್ದ’

ಹಿರೀಸಭೆ ಮುಂದೆ ಸ್ತೆಫನ ಭಯಪಡದೆ ಕೊಟ್ಟ ಸಾಕ್ಷಿಯಿಂದ ನಾವು ಕಲಿಯೋ ಪಾಠಗಳು

ಆಧಾರ: ಅಪೊಸ್ತಲರ ಕಾರ್ಯ 6:8–8:3

1-3. (ಎ) ಸ್ತೆಫನ ಯಾವ ಭಯಾನಕ ಪರಿಸ್ಥಿತಿಯಲ್ಲಿದ್ದ? (ಬಿ) ಆದ್ರೂ ಅವನು ಹೇಗಿದ್ದ? (ಸಿ) ನಾವು ಯಾವ ಪ್ರಶ್ನೆಗಳನ್ನ ಚರ್ಚೆ ಮಾಡ್ತೀವಿ?

 ಸ್ತೆಫನ ನ್ಯಾಯಾಲಯದ ಮುಂದೆ ವಿಚಾರಣೆಗಾಗಿ ನಿಂತಿದ್ದ. ಅದು ಯೆರೂಸಲೇಮಿನ ದೇವಾಲಯದ ಹತ್ರ ಇದ್ದ ಒಂದು ವಿಶಾಲ ಸಭಾಂಗಣ ಆಗಿತ್ತು. ಇಲ್ಲಿ 71 ಪುರುಷರು ಅರ್ಧವೃತ್ತಾಕಾರದಲ್ಲಿ ಕೂತಿದ್ರು. ಅವರು ಈ ನ್ಯಾಯಾಲಯದಲ್ಲಿ ಅಂದ್ರೆ ಹಿರೀಸಭೆಯಲ್ಲಿ ಸ್ತೆಫನನ ವಿಷ್ಯದಲ್ಲಿ ತೀರ್ಪು ಮಾಡೋಕೆ ಒಟ್ಟುಸೇರಿದ್ರು. ಅಲ್ಲಿದ್ದ ನ್ಯಾಯಧೀಶರೆಲ್ಲ ತುಂಬ ಅಧಿಕಾರ ಇದ್ದ ಪ್ರಭಾವಶಾಲಿ ಜನರಾಗಿದ್ರು. ಅವ್ರಲ್ಲಿ ಹೆಚ್ಚಿನವರಿಗೆ ಯೇಸುವಿನ ಈ ಶಿಷ್ಯನ ಮೇಲೆ ಒಂದಿಷ್ಟೂ ಗೌರವ ಇರಲಿಲ್ಲ, ಇಷ್ಟಾನೂ ಇರಲಿಲ್ಲ. ನ್ಯಾಯಧೀಶರನ್ನೆಲ್ಲ ಸಭೆ ಸೇರಿಸಿದವನು ಮಹಾ ಪುರೋಹಿತನಾದ ಕಾಯಫ. ಕೆಲವು ತಿಂಗಳ ಹಿಂದೆ ಯೇಸು ಕ್ರಿಸ್ತನಿಗೆ ಹಿರೀಸಭೆ ಮರಣಶಿಕ್ಷೆ ವಿಧಿಸಿದಾಗ ಅದರ ಅಧ್ಯಕ್ಷನಾಗಿದ್ದವನು ಇವನೇ. ಹಾಗಂತ ಸ್ತೆಫನನಿಗೆ ಹೆದರಿಕೆ ಆಯ್ತಾ?

2 ಈ ಸಮಯದಲ್ಲಿ ಸ್ತೆಫನನ ಮುಖಭಾವದಲ್ಲಿ ಏನೋ ವಿಶೇಷತೆ ಇತ್ತು. ನ್ಯಾಯಾಧೀಶರು ಅವನ ಕಡೆಗೆ ನೋಡಿದಾಗ ಅವನ ಮುಖ “ದೇವದೂತನ ಮುಖದ ತರ” ಇತ್ತು. (ಅ. ಕಾ. 6:15) ದೇವದೂತರು ಯೆಹೋವ ದೇವರ ಸಂದೇಶವನ್ನ ತಿಳಿಸುವವರು. ಅವರು ಕಿಂಚಿತ್ತೂ ಭಯಪಡದೆ, ಶಾಂತರಾಗಿ, ಸಮಾಧಾನದಿಂದ ಇರ್ತಾರೆ. ಸ್ತೆಫನನೂ ಹಾಗೇ ಇದ್ದ. ಇದನ್ನೇ ಆ ದ್ವೇಷತುಂಬಿದ ನ್ಯಾಯಾಧೀಶರು ಅವನ ಮುಖದಲ್ಲಿ ನೋಡಿದ್ರು. ಅವನು ಇಂಥ ಪರಿಸ್ಥಿತಿಯಲ್ಲೂ ಇಷ್ಟೊಂದು ಶಾಂತವಾಗಿ ಇರೋಕೆ ಕಾರಣ ಏನು?

3 ಇದನ್ನ ತಿಳ್ಕೊಳ್ಳೋದ್ರಿಂದ ಇವತ್ತು ಕ್ರೈಸ್ತರು ತುಂಬ ವಿಷ್ಯಗಳನ್ನ ಕಲಿಬಹುದು. ಸ್ತೆಫನ ನ್ಯಾಯಾಲಯದ ಮುಂದೆ ನಿಲ್ಲೋಕೆ ಕಾರಣ ಏನು? ಇಲ್ಲಿಗೆ ಬರೋ ಮುಂಚೆ ಅವನು ತನ್ನ ನಂಬಿಕೆಯನ್ನ ಹೇಗೆ ಸಮರ್ಥಿಸಿದ್ದ? ಅವನನ್ನ ನಾವು ಹೇಗೆಲ್ಲ ಅನುಕರಿಸಬಹುದು? ಅಂತ ತಿಳ್ಕೊಳ್ಳೋಣ.

‘ಅವರು ಜನ್ರನ್ನ ಕೆರಳಿಸಿದ್ರು’ (ಅ. ಕಾ. 6:8-15)

4, 5. (ಎ) ಸಭೆಗೆ ಸ್ತೆಫನ ಯಾಕೆ ಅಮೂಲ್ಯವಾಗಿದ್ದ? (ಬಿ) ಸ್ತೆಫನ ಯಾವ ಅರ್ಥದಲ್ಲಿ ‘ದೇವರ ಮೆಚ್ಚುಗೆ ಮತ್ತು ಶಕ್ತಿ ಪಡ್ಕೊಂಡಿದ್ದ?’

4 ನಾವೀಗಾಗಲೇ ನೋಡಿದ ತರ ಹೊಸದಾಗಿ ಆರಂಭವಾಗಿದ್ದ ಕ್ರೈಸ್ತ ಸಭೆಗೆ ಸ್ತೆಫನ ಅಮೂಲ್ಯವಾಗಿದ್ದ. ಅಪೊಸ್ತಲರು ಸಹಾಯ ಕೇಳಿದಾಗ ಮನಸಾರೆ ಮುಂದೆ ಬಂದ ದೀನರಾಗಿದ್ದ ಏಳು ಸಹೋದರರಲ್ಲಿ ಇವನೂ ಒಬ್ಬನಾಗಿದ್ದ ಅಂತ ಹಿಂದಿನ ಅಧ್ಯಾಯದಲ್ಲಿ ಕಲಿತ್ವಿ. ಯೆಹೋವ ಅವನಿಗೆ ಬೇರೆ ವರಗಳನ್ನ ಕೊಟ್ಟಿದ್ರೂ ಅವನು ದೀನನಾಗಿದ್ದ. ಕೆಲವು ಅಪೊಸ್ತಲರ ತರ ಅವನಿಗೂ “ದೊಡ್ಡದೊಡ್ಡ ಅದ್ಭುತಗಳನ್ನ” ಮಾಡೋ ಶಕ್ತಿ ಇತ್ತು ಅಂತ ಅಪೊಸ್ತಲರ ಕಾರ್ಯ 6:8 ಹೇಳುತ್ತೆ. ಅವನು ‘ದೇವರ ಮೆಚ್ಚುಗೆ ಮತ್ತು ಶಕ್ತಿ ಪಡ್ಕೊಂಡಿದ್ದ’ ಅಂತನೂ ಇದೆ. ಈ ಮಾತಿನ ಅರ್ಥ ಏನು?

5 “ದೇವರ ಮೆಚ್ಚುಗೆ” ಅನ್ನೋದಕ್ಕೆ ಇರೋ ಗ್ರೀಕ್‌ ಪದವನ್ನ “ಸೌಜನ್ಯತೆ” ಅಂತಾನೂ ಭಾಷಾಂತರ ಮಾಡಬಹುದು. ಸ್ತೆಫನ ದಯೆ ತೋರಿಸ್ತಿದ್ದ, ಮೃದು ಸ್ವಭಾವದ ವ್ಯಕ್ತಿಯಾಗಿದ್ದ. ಹಾಗಾಗಿ ಜನ್ರಿಗೆ ಅವನನ್ನ ನೋಡಿದ್ರೆ ಇಷ್ಟ ಆಗ್ತಿತ್ತು. ಅವನು ಎಷ್ಟು ಚೆನ್ನಾಗಿ ಮಾತಾಡ್ತಾ ಇದ್ದ ಅಂದ್ರೆ ಅವನು ಹೇಳ್ತಿದ್ದ ಬೈಬಲ್‌ ಸತ್ಯಗಳನ್ನ ಜನ ಒಪ್ಕೊತಿದ್ರು, ಅದ್ರಿಂದ ತಮಗೆ ಪ್ರಯೋಜ್ನ ಇದೆ ಅಂತ ಅರ್ಥ ಮಾಡ್ಕೊತಿದ್ರು. ಇದಕ್ಕೆಲ್ಲ ಯೆಹೋವನ ಶಕ್ತಿನೇ ಕಾರಣ ಆಗಿತ್ತು. ಯಾಕಂದ್ರೆ ದೇವರ ಪವಿತ್ರಶಕ್ತಿ ಅವನನ್ನ ನಡಿಸೋಕೆ ಅವನು ದೀನತೆಯಿಂದ ಬಿಟ್ಟುಕೊಟ್ಟಿದ್ದ. ತನಗೆ ಸಾಮರ್ಥ್ಯ ವರಗಳು ಸಿಕ್ಕಿದೆ ಅಂತ ಜಂಭ ಕೊಚ್ಕೊತಿರಲಿಲ್ಲ. ಅದನ್ನೆಲ್ಲಾ ಯೆಹೋವನೇ ಕೊಟ್ಟಿದ್ದು ಅಂತ ಮಹಿಮೆನಾ ಆತನಿಗೆ ಕೊಟ್ಟ. ಅಷ್ಟೇ ಅಲ್ಲ, ಜನರ ಮೇಲೆ ತನಗೆ ಪ್ರೀತಿ, ಕಾಳಜಿ ಇದೆ ಅಂತ ತೋರಿಸ್ಕೊಟ್ಟ. ಈ ಕಾರಣಗಳಿಂದಾನೇ ವಿರೋಧಿಗಳು ಅವನನ್ನ ದ್ವೇಷಿಸ್ತಿದ್ರು.

6-8. (ಎ) ಸ್ತೆಫನನ ವಿರೋಧಿಗಳು ಅವನ ಮೇಲೆ ಯಾವ ಎರಡು ವಿಷ್ಯಗಳ ಬಗ್ಗೆ ಆರೋಪ ಹಾಕಿದ್ರು? ಯಾಕೆ? (ಬಿ) ಸ್ತೆಫನನ ಮಾದರಿಯಿಂದ ಇವತ್ತು ನಮಗೆ ಹೇಗೆ ಪ್ರಯೋಜನ ಇದೆ?

6 ಅನೇಕರು ಸ್ತೆಫನನ ಜೊತೆ ವಾಗ್ವಾದ ಮಾಡೋಕೆ ಪ್ರಯತ್ನಿಸಿದ್ರು. ಆದ್ರೆ ಅವನು “ವಿವೇಕದಿಂದ, ಪವಿತ್ರಶಕ್ತಿಯ ಸಹಾಯದಿಂದ ಮಾತಾಡ್ತಿದ್ದ. ಹಾಗಾಗಿ ಆ ಜನ್ರ ವಾದ ಗೆಲ್ಲಲಿಲ್ಲ.” a ಹೀಗೆ ಸೋತು ಸುಣ್ಣ ಆಗಿದ್ದ ಅವರು ಕ್ರಿಸ್ತನ ಈ ಅಮಾಯಕ ಶಿಷ್ಯನ ಮೇಲೆ ಆರೋಪ ಹಾಕೋಕೆ ಕೆಲವು ಗಂಡಸರನ್ನ ‘ಗುಟ್ಟಾಗಿ ಕರೆಸಿದ್ರು.’ ಜೊತೆಗೆ, ಅವರು ಜನರನ್ನ, ಹಿರಿಯರನ್ನ, ಪಂಡಿತರನ್ನ “ಕೆರಳಿಸಿ” ಸ್ತೆಫನನನ್ನ ಬಲವಂತವಾಗಿ ಹಿರೀಸಭೆ ಮುಂದೆ ತರೋ ತರ ಮಾಡಿದ್ರು. (ಅ. ಕಾ. 6:9-12) ದೇವರ ಬಗ್ಗೆ ಮತ್ತು ಮೋಶೆ ಬಗ್ಗೆ ಸ್ತೆಫನ ಕೆಟ್ಟಕೆಟ್ಟದಾಗಿ ಮಾತಾಡ್ತಿದ್ದಾನೆ ಅಂತ ವಿರೋಧಿಗಳು ಎರಡು ವಿಷ್ಯಗಳ ಬಗ್ಗೆ ಆರೋಪ ಹಾಕಿದ್ರು. ಅದೇನು?

7 ಸ್ತೆಫನ “ದೇವಾಲಯದ ಬಗ್ಗೆ” ಅಂದ್ರೆ ಯೆರೂಸಲೇಮಿನ ಆಲಯಕ್ಕೆ ವಿರುದ್ಧವಾಗಿ ಮಾತಾಡೋ ಮೂಲಕ ದೇವರ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡಿದ ಅನ್ನೋ ಆರೋಪ ಹಾಕಿದ್ರು. (ಅ. ಕಾ. 6:13) ಮೋಶೆಯ ನಿಯಮ ಪುಸ್ತಕದ ವಿರುದ್ಧ ಮಾತಾಡೋ ಮೂಲಕ ಮತ್ತು ಅವನು ಬರೆದಿದ್ದ ಪದ್ಧತಿಗಳನ್ನ ಬದಲಾಯಿಸೋ ಮೂಲಕ ಮೋಶೆ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡಿದ ಅನ್ನೋ ಆರೋಪ ಹಾಕಿದ್ರು. ಆಗಿನ ಯೆಹೂದ್ಯರು ದೇವಾಲಯಕ್ಕೆ, ಮೋಶೆಯ ನಿಯಮ ಪುಸ್ತಕದಲ್ಲಿದ್ದ ಚಿಕ್ಕಪುಟ್ಟ ವಿವರಗಳಿಗೆ ಮತ್ತು ಅವ್ರೇ ಮಾಡ್ಕೊಂಡಿದ್ದ ಸಂಪ್ರದಾಯಗಳಿಗೆ ತುಂಬ ಮಹತ್ವ ಕೊಡ್ತಿದ್ರು. ಹಾಗಾಗಿ, ಸ್ತೆಫನನ ಮೇಲೆ ಹಾಕಿದ್ದ ಆರೋಪ ತುಂಬ ಗಂಭೀರವಾಗಿತ್ತು. ಅವರ ದೃಷ್ಟಿಯಲ್ಲಿ ಸ್ತೆಫನ ಒಬ್ಬ ಅಪಾಯಕಾರಿ ವ್ಯಕ್ತಿ ಆಗಿದ್ದ, ಮರಣಶಿಕ್ಷೆಗೆ ಅರ್ಹನಾಗಿದ್ದ!

8 ದುಃಖದ ವಿಷ್ಯ ಏನಂದ್ರೆ, ಧಾರ್ಮಿಕ ಜನರು ಈ ರೀತಿ ಕುತಂತ್ರ ಮಾಡಿ ದೇವರ ಸೇವಕರಿಗೆ ತೊಂದರೆ ಕೊಡೋದು ಸಾಮಾನ್ಯ. ಇವತ್ತೂ ಯೆಹೋವನ ಸಾಕ್ಷಿಗಳನ್ನ ಹಿಂಸಿಸೋಕೆ ಧಾರ್ಮಿಕ ಜನರು ರಾಜಕೀಯ ನಾಯಕರಿಗೆ ಕುಮ್ಮಕ್ಕು ಕೊಡ್ತಾರೆ. ವಿರೋಧಿಗಳು ಸತ್ಯವನ್ನ ತಿರುಚಿ ಮಾತಾಡಿದಾಗ ಅಥವಾ ನಮ್ಮ ಮೇಲೆ ಆರೋಪಗಳನ್ನ ಹಾಕಿದಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು? ಈ ವಿಷ್ಯದಲ್ಲಿ ಸ್ತೆಫನನಿಂದ ನಾವು ತುಂಬ ಕಲಿಬಹುದು.

‘ಮಹಾ ದೇವರ’ ಬಗ್ಗೆ ಧೈರ್ಯದಿಂದ ಸಾಕ್ಷಿ ಕೊಟ್ಟ (ಅ. ಕಾ. 7:1-53)

9, 10. (ಎ) ಹಿರೀಸಭೆ ಮುಂದೆ ಸ್ತೆಫನ ಹೇಳಿದ ಮಾತುಗಳ ಬಗ್ಗೆ ಟೀಕಾಕಾರರು ಏನಂತಾರೆ? (ಬಿ) ನಾವೇನನ್ನ ಜ್ಞಾಪಕ ಮಾಡ್ಕೊಬೇಕು?

9 ಈ ಅಧ್ಯಾಯದ ಆರಂಭದಲ್ಲಿ ಹೇಳಿದ ತರ ತನ್ನ ವಿರುದ್ಧ ಹಾಕಿರೋ ಆರೋಪಗಳನ್ನ ಕೇಳಿಸ್ಕೊಂಡಾಗ ಸ್ತೆಫನನ ಮುಖ ದೇವದೂತನ ಮುಖದ ತರ ಶಾಂತವಾಗಿತ್ತು. ಆ ಆರೋಪಗಳ ಬಗ್ಗೆ ಕಾಯಫ ಸ್ತೆಫನನಿಗೆ, “ಇವರು ಹೇಳೋದು ಸತ್ಯನಾ?” ಅಂತ ಕೇಳಿದ. (ಅ. ಕಾ. 7:1) ಆಗ ಸ್ತೆಫನ ಮಾತಾಡೋ ಸರದಿ ಬಂತು. ಈ ಅವಕಾಶವನ್ನ ಅವನು ಚೆನ್ನಾಗಿ ಬಳಸ್ಕೊಂಡ.

10 ಸ್ತೆಫನ ತುಂಬ ಹೊತ್ತು ಮಾತಾಡಿದ್ರೂ ತನ್ನ ಮೇಲಿದ್ದ ಆರೋಪದ ಬಗ್ಗೆ ಮಾತೇ ಎತ್ತಲಿಲ್ಲ ಅಂತಾರೆ ಕೆಲವು ಟೀಕಾಕಾರರು. ಆದ್ರೆ ನಿಜ ಏನಂದ್ರೆ, ಸಿಹಿಸುದ್ದಿಯ ಪರವಾಗಿ ಮಾತಾಡೋದು ಹೇಗೆ ಅನ್ನೋ ವಿಷ್ಯದಲ್ಲಿ ಸ್ತೆಫನ ಒಂದು ಒಳ್ಳೇ ಮಾದರಿ ಇಟ್ಟಿದ್ದಾನೆ. (1 ಪೇತ್ರ 3:15) ಸ್ತೆಫನನ ಮೇಲಿದ್ದ ಆರೋಪ ಏನಾಗಿತ್ತು ಅಂತ ಜ್ಞಾಪಕ ಮಾಡ್ಕೊಳ್ಳಿ. ಅದು, ಅವನು ದೇವಾಲಯದ ವಿರುದ್ಧ ಮಾತಾಡಿ ದೇವರ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡ್ತಿದ್ದಾನೆ ಮತ್ತು ನಿಯಮ ಪುಸ್ತಕದ ವಿರುದ್ಧ ಮಾತಾಡಿ ಮೋಶೆ ಬಗ್ಗೆನೂ ಕೆಟ್ಟದಾಗಿ ಮಾತಾಡ್ತಿದ್ದಾನೆ ಅಂತಾಗಿತ್ತು. ಸ್ತೆಫನ ತನ್ನ ಉತ್ತರದಲ್ಲಿ ಇಸ್ರಾಯೇಲಿನ ಇತಿಹಾಸದ ಮೂರು ಕಾಲಘಟ್ಟಗಳ ಸಾರಾಂಶ ಕೊಟ್ಟ. ಅದ್ರಲ್ಲೂ ಕೆಲವೊಂದು ಅಂಶಗಳನ್ನ ಜಾಗರೂಕತೆಯಿಂದ ಎತ್ತಿಹೇಳಿದ. ಆ ಮೂರು ಕಾಲಘಟ್ಟಗಳನ್ನ ಈಗ ಒಂದೊಂದಾಗಿ ನೋಡೋಣ.

11, 12. (ಎ) ಸ್ತೆಫನ ಅಬ್ರಹಾಮನ ಉದಾಹರಣೆಯನ್ನ ಹೇಗೆ ಚೆನ್ನಾಗಿ ಉಪಯೋಗಿಸಿದ? (ಬಿ) ಸ್ತೆಫನ ಯಾಕೆ ಯೋಸೇಫನ ಬಗ್ಗೆ ಹೇಳಿದ?

11 ಇಸ್ರಾಯೇಲ್ಯರ ಪೂರ್ವಜರಿದ್ದ ಕಾಲ. (ಅ. ಕಾ. 7:1-16 ) ಸ್ತೆಫನ ಅಬ್ರಹಾಮನ ಬಗ್ಗೆ ಹೇಳ್ತಾ ತನ್ನ ಮಾತನ್ನ ಆರಂಭಿಸಿದ. ಅಬ್ರಹಾಮ ದೇವರಿಗೆ ತುಂಬಾ ನಂಬಿಕೆ ತೋರಿಸಿದ್ರಿಂದ ಯೆಹೂದ್ಯರು ಅವನನ್ನ ಗೌರವಿಸ್ತಿದ್ರು. ಹೀಗೆ, ತಾನೂ ಯೆಹೂದ್ಯರೂ ಒಪ್ಪುವಂಥ ವಿಷ್ಯದ ಬಗ್ಗೆ ಮಾತಾಡಿದ. ‘ಮಹಾ ದೇವರಾದ’ ಯೆಹೋವ ಮೊದಲನೇ ಸಲ ಅಬ್ರಹಾಮನಿಗೆ ಮೆಸಪಟೇಮ್ಯದಲ್ಲಿ ಕಾಣಿಸ್ಕೊಂಡ ಅಂತ ಒತ್ತಿಹೇಳಿದ. (ಅ. ಕಾ. 7:2) ಆಗ ಅಬ್ರಹಾಮ ಮಾತು ಕೊಟ್ಟ ದೇಶದಲ್ಲಿ ವಿದೇಶಿಯಾಗಿದ್ದ. ಅವನಿಗೆ ಆಗ ದೇವಾಲಯನೂ ಇರಲಿಲ್ಲ, ಮೋಶೆಯ ನಿಯಮ ಪುಸ್ತಕನೂ ಇರಲಿಲ್ಲ. ಹಾಗಿರುವಾಗ, ದೇವಾಲಯ ಮತ್ತು ನಿಯಮ ಪುಸ್ತಕದ ಏರ್ಪಾಡಿದ್ರೆ ಮಾತ್ರ ಒಬ್ಬ ವ್ಯಕ್ತಿ ದೇವರಿಗೆ ನಂಬಿಗಸ್ತನಾಗಿ ಇರೋಕೆ ಸಾಧ್ಯ ಅಂತ ಹೇಗೆ ತಾನೇ ಹೇಳಬಹುದು?

12 ಹಿರೀಸಭೆಯಲ್ಲಿ ಸ್ತೆಫನನ ಮಾತು ಕೇಳ್ತಿದ್ದವರು ಅಬ್ರಹಾಮನ ವಂಶದವನಾಗಿದ್ದ ಯೋಸೇಫನಿಗೆ ತುಂಬ ಗೌರವ ಕೊಡ್ತಿದ್ರು. ಸ್ತೆಫನ ಅವ್ರಿಗೆ, ನೀತಿವಂತನಾಗಿದ್ದ ಯೋಸೇಫನಿಗೆ ಹಿಂಸೆ ಕೊಟ್ಟು ಗುಲಾಮನಾಗಿ ಮಾಡಿದ್ದು ಇಸ್ರಾಯೇಲ್‌ ಕುಲಗಳ ಪೂರ್ವಜರಾದ ಅವನ ಅಣ್ಣಂದಿರೇ ಅಂತ ನೆನಪಿಸಿದ. ಹಾಗಿದ್ರೂ ದೇವರು ಯೋಸೇಫನನ್ನ ಇಸ್ರಾಯೇಲ್‌ ಜನರನ್ನ ಬರಗಾಲದಿಂದ ಕಾಪಾಡೋಕೆ ಬಳಸಿದ. ಯೋಸೇಫ ಮತ್ತು ಯೇಸು ಮಧ್ಯೆ ಇದ್ದ ಹೋಲಿಕೆಗಳ ಬಗ್ಗೆ ಸ್ತೆಫನನಿಗೆ ಚೆನ್ನಾಗಿ ಗೊತ್ತಿತ್ತು. ಆದ್ರೂ ಅದನ್ನ ಹೇಳಿಲ್ಲ, ಯಾಕಂದ್ರೆ ಅಲ್ಲಿದ್ದವರು ತನ್ನ ಮಾತು ಕೇಳೋದನ್ನ ನಿಲ್ಲಿಸಬಾರದು ಅಂತ ಹೀಗೆ ಮಾಡಿದ.

13. (ಎ) ಮೋಶೆ ಬಗ್ಗೆ ಸ್ತೆಫನ ಹೇಳಿದ ವಿಷ್ಯದಿಂದ ಅವನ ಮೇಲಿದ್ದ ಆರೋಪಕ್ಕೆ ಹೇಗೆ ಉತ್ರ ಸಿಕ್ತು? (ಬಿ) ಹೀಗೆ ಸ್ತೆಫನ ಯಾವ ಮುಖ್ಯ ವಿಷ್ಯವನ್ನ ವಿವರಿಸಿದ?

13 ಮೋಶೆಯ ಕಾಲ. (ಅ. ಕಾ. 7:17-43 ) ಸ್ತೆಫನ ಮೋಶೆ ಬಗ್ಗೆ ತುಂಬ ಮಾತಾಡಿದ. ಇದು ಒಳ್ಳೇ ಉಪಾಯ ಆಗಿತ್ತು. ಯಾಕಂದ್ರೆ, ಹಿರೀಸಭೆಯ ಅನೇಕ ಸದಸ್ಯರು ಸದ್ದುಕಾಯರಾಗಿದ್ರು. ಅವರು ಬೈಬಲಿನ ಪುಸ್ತಕಗಳಲ್ಲಿ ಮೋಶೆ ಬರೆದ ಪುಸ್ತಕಗಳನ್ನ ಮಾತ್ರ ನಂಬ್ತಿದ್ರು. ಉಳಿದಿದ್ದನ್ನ ತಿರಸ್ಕರಿಸ್ತಿದ್ರು. ಮೋಶೆ ಬಗ್ಗೆ ಸ್ತೆಫನನ ಮೇಲೆ ಹಾಕಿದ್ದ ಆರೋಪನ ನೆನಪಿಸ್ಕೊಳ್ಳಿ. ಸ್ತೆಫನ ಮೋಶೆ ಬಗ್ಗೆ ಮಾತಾಡೋ ಮೂಲಕ ಮೋಶೆ ಮತ್ತು ನಿಯಮ ಪುಸ್ತಕದ ಮೇಲೆ ತನಗೆ ತುಂಬ ಗೌರವ ಇದೆ ಅಂತ ತೋರಿಸಿದ. ಹೀಗೆ ಆ ಆರೋಪಕ್ಕೆ ಸರಿಯಾದ ಉತ್ರ ಕೊಟ್ಟ. (ಅ. ಕಾ. 7:38) ಮೋಶೆ ಯಾರನ್ನ ಕಾಪಾಡಬೇಕು ಅಂತ ಪ್ರಯತ್ನಿಸಿದ್ನೋ ಅವರೇ ಅವನನ್ನ ತಿರಸ್ಕರಿಸಿದ್ದರ ಬಗ್ಗೆನೂ ಹೇಳಿದ. ಮೋಶೆ 40 ವರ್ಷದವನಾಗಿದ್ದಾಗ ಅವರು ಅವನನ್ನ ತಿರಸ್ಕರಿಸಿದ್ರು. ಇನ್ನೂ 40 ವರ್ಷ ಆದಮೇಲೆ ಅವರು ಪದೇ ಪದೇ ಅವನ ಅಧಿಕಾರವನ್ನ ಪ್ರಶ್ನಿಸಿದ್ರು. b ಹೀಗೆ ಸ್ತೆಫನ ನಿಧಾನವಾಗಿ ಒಂದು ಮುಖ್ಯ ವಿಷ್ಯವನ್ನ ವಿವರಿಸ್ತಾ ಬಂದ. ಅದೇನಂದ್ರೆ, ದೇವಜನರನ್ನ ನಡಿಸೋಕೆ ಯೆಹೋವ ನೇಮಿಸಿದ್ದವರನ್ನ ಜನರು ತಿರಸ್ಕರಿಸ್ತಾ ಬಂದಿದ್ರು.

14. ಮೋಶೆಯ ಉದಾಹರಣೆಯನ್ನ ಉಪಯೋಗಿಸಿ ಸ್ತೆಫನ ಯಾವ ಅಂಶಗಳನ್ನ ಸಮರ್ಥಿಸಿದ?

14 ಸ್ತೆಫನ ಅಲ್ಲಿದ್ದ ಜನ್ರಿಗೆ ಮೋಶೆ ಇಸ್ರಾಯೇಲಿನಿಂದ ತನ್ನಂಥ ಪ್ರವಾದಿ ಬರ್ತಾನೆ ಅಂತ ಹೇಳಿದ್ದನ್ನ ನೆನಪಿಸಿದ. ಆ ಪ್ರವಾದಿ ಯಾರು? ಅವನನ್ನ ಜನ ಸ್ವೀಕರಿಸ್ತಾರಾ? ಈ ಪ್ರಶ್ನೆಗಳಿಗೆ ಸ್ತೆಫನ ಆಗ್ಲೇ ಉತ್ರ ಕೊಡದೇ ಕೊನೆಯಲ್ಲಿ ಉತ್ರ ಕೊಟ್ಟ. ಆದ್ರೆ ಇನ್ನೊಂದು ಮುಖ್ಯ ವಿಷ್ಯ ಅಂದ್ರೆ, ದೇವರು ಮೋಶೆ ಜೊತೆ ಮಾತಾಡಿದಾಗ ಉರೀತಿದ್ದ ಪೊದೆ ಇದ್ದ ನೆಲ ಪವಿತ್ರ ಆದ ತರನೇ ಯಾವ ನೆಲ ಬೇಕಾದ್ರೂ ಪವಿತ್ರ ಆಗೋಕೆ ಸಾಧ್ಯ ಅಂತ ಮೋಶೆಗೆ ಗೊತ್ತಾಯ್ತು ಅನ್ನೋದ್ರ ಬಗ್ಗೆ ಮಾತಾಡಿದ. ಹಾಗಾದ್ರೆ ಯೆಹೋವನ ಆರಾಧನೆಯನ್ನ ಯೆರೂಸಲೇಮಿನ ದೇವಾಲಯದ ತರ ಇರೋ ಒಂದೇ ಒಂದು ಕಟ್ಟಡಕ್ಕೆ ಸೀಮಿತ ಮಾಡೋದು ಸರಿನಾ? ನೋಡೋಣ.

15, 16. (ಎ) ಸ್ತೆಫನನ ವಾದದಲ್ಲಿ ಪವಿತ್ರ ಡೇರೆಯ ವಿಷ್ಯ ಯಾಕೆ ಪ್ರಾಮುಖ್ಯ ಆಗಿತ್ತು? (ಬಿ) ಸ್ತೆಫನ ತನ್ನ ಚರ್ಚೆಯಲ್ಲಿ ಸೊಲೊಮೋನನ ದೇವಾಲಯದ ವಿಷ್ಯವನ್ನ ಹೇಗೆ ಬಳಸಿದ?

15 ಪವಿತ್ರ ಡೇರೆ ಮತ್ತು ದೇವಾಲಯ. (ಅ. ಕಾ. 7:44-50 ) ಯೆರೂಸಲೇಮಿನಲ್ಲಿ ದೇವಾಲಯ ಕಟ್ಟೋಕೂ ಮುಂಚೆ ಪವಿತ್ರ ಡೇರೆ ಕಟ್ಟೋಕೆ ದೇವರು ಮೋಶೆಗೆ ಅಪ್ಪಣೆ ಕೊಟ್ಟಿದ್ದನು ಅಂತ ಸ್ತೆಫನ ಆ ನ್ಯಾಯಾಲಯದಲ್ಲಿ ಇದ್ದವ್ರಿಗೆ ನೆನಪಿಸಿದ. ಈ ಡೇರೆಯನ್ನ ಎಲ್ಲಿ ಬೇಕಾದ್ರೂ ಸಾಗಿಸಬಹುದಾಗಿತ್ತು. ಅದನ್ನ ಆರಾಧನೆಗಾಗಿ ಮಾಡಲಾಗಿತ್ತು. ಆದ್ರೆ ಅದು ದೇವಾಲಯಕ್ಕಿಂತ ಕೀಳು ಅಂತ ಹೇಳೋ ಧೈರ್ಯ ಯಾರಿಗೂ ಇರಲಿಲ್ಲ. ಯಾಕಂದ್ರೆ ಮೋಶೆನೇ ಅದ್ರಲ್ಲಿ ಆರಾಧನೆ ಮಾಡಿದ್ದ ಅಲ್ವಾ?

16 ಸುಮಾರು ವರ್ಷಗಳಾದ ಮೇಲೆ, ಸೊಲೊಮೋನ ಯೆರೂಸಲೇಮಿನಲ್ಲಿ ದೇವಾಲಯ ಕಟ್ಟಿದಾಗ ದೇವರ ಪ್ರೇರಣೆಯಿಂದ ತನ್ನ ಪ್ರಾರ್ಥನೆಯಲ್ಲಿ ಒಂದು ಮುಖ್ಯ ಪಾಠವನ್ನ ತಿಳಿಸಿದ್ದ. ಅದು ಏನಂತ ಸ್ತೆಫನ ಹೀಗೆ ಹೇಳ್ತಾನೆ: “ಮಹೋನ್ನತ ದೇವರು ಮನುಷ್ಯ ಕಟ್ಟಿದ ಆಲಯದಲ್ಲಿ ವಾಸಮಾಡಲ್ಲ.” (ಅ. ಕಾ. 7:48; 2 ಪೂರ್ವ. 6:18) ಯೆಹೋವ ತನ್ನ ಇಷ್ಟವನ್ನ ನೆರವೇರಿಸೋಕೆ ದೇವಾಲಯವನ್ನ ಬಳಸಿರಬಹುದು. ಹಾಗಂತ ಆತನು ಆ ಆಲಯದಲ್ಲಿ ಇರ್ತಾನೆ ಅಂತ ಇದರ ಅರ್ಥ ಅಲ್ಲ. ಹಾಗಿರೋವಾಗ, ಮನುಷ್ಯರು ಕಟ್ಟಿರೋ ಒಂದು ಕಟ್ಟಡದಲ್ಲಿ ಮಾತ್ರ ದೇವರ ಆರಾಧನೆ ಮಾಡಬೇಕು ಅಂತ ಆತನ ಆರಾಧಕರು ನೆನಸಬಾರದು. ಅದಕ್ಕೆ ಸ್ತೆಫನ ಯೆಶಾಯ ಪುಸ್ತಕದಿಂದ ಈ ಮಾತನ್ನ ಹೇಳ್ತಾ ತನ್ನ ವಾದವನ್ನ ಒಳ್ಳೇ ರೀತಿಯಲ್ಲಿ ಮುಗಿಸಿದ: “ಯೆಹೋವ ಹೀಗೆ ಹೇಳ್ತಿದ್ದಾನೆ: ಆಕಾಶ ನನ್ನ ಸಿಂಹಾಸನ, ಭೂಮಿ ನನ್ನ ಪಾದಪೀಠ. ಹಾಗಿರುವಾಗ ನೀವು ನನಗಾಗಿ ಎಂಥಾ ಮನೆ ಕಟ್ತೀರಾ? ನಾನಿರೋಕೆ ಎಂಥಾ ಜಾಗ ಮಾಡ್ತೀರ? ನಾನೇ ಅಲ್ವಾ ಇದೆಲ್ಲ ಮಾಡಿದ್ದು?”—ಅ. ಕಾ. 7:49, 50; ಯೆಶಾ. 66:1, 2.

17. (ಎ) ವಿರೋಧಿಗಳ ಯೋಚ್ನೆ ತಪ್ಪಾಗಿತ್ತು ಅಂತ ಸ್ತೆಫನನ ಮಾತುಗಳಿಂದ ಹೇಗೆ ಗೊತ್ತಾಗುತ್ತೆ? (ಬಿ) ಅವನ ಮೇಲೆ ಹಾಕಿದ ಆರೋಪ ಸುಳ್ಳು ಅಂತ ಅವನ ಮಾತುಗಳಿಂದ ಹೇಗೆ ಗೊತ್ತಾಗುತ್ತೆ?

17 ಇಲ್ಲಿ ತನಕ ಸ್ತೆಫನ ಹಿರೀಸಭೆಯಲ್ಲಿ ಹೇಳಿದ ಮಾತನ್ನ ನೋಡಿದಾಗ ತನ್ನ ಮೇಲೆ ಆರೋಪ ಹಾಕಿದವರ ಯೋಚ್ನೆ ತಪ್ಪು ಅಂತ ಅವನು ಎಷ್ಟು ಜಾಣ್ಮೆಯಿಂದ ವಿವರಿಸಿದ ಅಂತ ಗೊತ್ತಾಗುತ್ತಲ್ವಾ? ಸ್ತೆಫನ ಯೆಹೋವ ತನ್ನ ಇಷ್ಟವನ್ನ ನೆರವೇರಿಸೋಕೆ ಮಣಿತಾನೆ ಮತ್ತು ಸಮಯಕ್ಕೆ ತಕ್ಕ ಹಾಗೆ ಹೊಂದಾಣಿಕೆಗಳನ್ನೂ ಮಾಡ್ಕೊಳ್ತಾನೆ, ಆತನು ಹಠಮಾರಿಯಲ್ಲ ಅಥವಾ ಸಂಪ್ರದಾಯಗಳಿಗೆ ಅಂಟ್ಕೊಳ್ಳಲ್ಲ ಅಂತ ತೋರಿಸ್ಕೊಟ್ಟ. ಸ್ತೆಫನನ ಮೇಲೆ ಆರೋಪ ಹಾಕಿದವ್ರಿಗೆ ಯೆರೂಸಲೇಮಿನ ದೇವಾಲಯದ ಮೇಲೆ, ಮೋಶೆಯ ನಿಯಮ ಪುಸ್ತಕಕ್ಕೆ ಸೇರಿಸಿ ಮಾಡ್ಕೊಂಡಿದ್ದ ಸಂಪ್ರದಾಯಗಳ ಮೇಲೆ ಅತಿಯಾದ ಪ್ರೀತಿ ಇತ್ತು. ಆದ್ರೆ ಅವರು ದೇವರು ಯಾಕೆ ದೇವಾಲಯವನ್ನ ಮತ್ತು ನಿಯಮ ಪುಸ್ತಕನ ಕೊಟ್ಟಿದ್ದಾನೆ ಅನ್ನೋದನ್ನೇ ಅರ್ಥ ಮಾಡ್ಕೊಂಡಿರಲಿಲ್ಲ! ಅದಕ್ಕೆ ಸ್ತೆಫನ ಅವ್ರಿಗೆ, ‘ಯೆಹೋವ ದೇವರ ಮಾತು ಕೇಳಿದ್ರೆ ನಿಯಮ ಪುಸ್ತಕಕ್ಕೆ, ದೇವಾಲಯಕ್ಕೆ ಗೌರವ ಕೊಟ್ಟ ಹಾಗಲ್ವಾ? ಇದಕ್ಕಿಂತ ಒಳ್ಳೇ ವಿಷ್ಯ ಬೇರೆ ಯಾವುದೂ ಇಲ್ಲ’ ಅಂತ ಹೇಳಿದ ಹಾಗಿತ್ತು. ಯಾಕಂದ್ರೆ, ಸ್ತೆಫನ ಯೆಹೋವನ ಮಾತು ಕೇಳಿ ಅದನ್ನ ಪಾಲಿಸ್ತಿದ್ದ. ಹೀಗೆ ಅವನು ಬೇರೆವ್ರು ಅವನ ಮೇಲೆ ಹಾಕಿದ ಆರೋಪಗಳೆಲ್ಲ ಸುಳ್ಳು ಅಂತ ತೋರಿಸ್ಕೊಟ್ಟ.

18. ನಾವು ಸ್ತೆಫನನನ್ನ ಯಾವೆಲ್ಲಾ ವಿಷ್ಯಗಳಲ್ಲಿ ಅನುಕರಿಸಬಹುದು?

18 ಸ್ತೆಫನನ ಮಾತುಗಳಿಂದ ನಾವೇನು ಕಲಿಬಹುದು? ಅವನಿಗೆ ಬೈಬಲಿನಲ್ಲಿರೋ ವಿಷ್ಯಗಳು ಚೆನ್ನಾಗಿ ಗೊತ್ತಿತ್ತು. ಅವನ ತರಾನೇ ನಾವು “ಪವಿತ್ರ ಗ್ರಂಥವನ್ನ ಸರಿಯಾಗಿ” ಬಳಸಬೇಕಂದ್ರೆ ದೇವರ ವಾಕ್ಯವನ್ನ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. (2 ತಿಮೊ. 2:15) ಜೊತೆಗೆ ಸ್ತೆಫನನ ತರ ಸೌಜನ್ಯ ಮತ್ತು ಜಾಣ್ಮೆ ತೋರಿಸಬೇಕು. ಸ್ತೆಫನ ತನ್ನನ್ನ ತುಂಬ ದ್ವೇಷಿಸ್ತಿದ್ದ ಜನರ ಹತ್ರ ಮಾತಾಡ್ತಿದ್ದಾಗ್ಲೂ ಆದಷ್ಟು ಅವನು ಮತ್ತು ಆ ಜನ ಇಬ್ರು ಒಪ್ಪೋ ವಿಷ್ಯಗಳ ಬಗ್ಗೆ ಮಾತಾಡ್ದ. ಜೊತೆಗೆ, ಹಿರಿಯರನ್ನ “ತಂದೆ ತರ ಇರುವವರೇ” ಅಂತ ಕರಿಯೋ ಮೂಲಕ ಅವ್ರಿಗೆ ಗೌರವ ತೋರಿಸಿದ. (ಅ. ಕಾ. 7:2) ನಾವು ಕೂಡ ದೇವರ ವಾಕ್ಯದಲ್ಲಿರೋ ಸತ್ಯಗಳನ್ನ “ಮೃದುವಾಗಿ, ತುಂಬ ಗೌರವದಿಂದ” ಹೇಳಬೇಕು.—1 ಪೇತ್ರ 3:15.

19. ಸ್ತೆಫನ ಹಿರೀಸಭೆಗೆ ಯೆಹೋವನ ತೀರ್ಪಿನ ಸಂದೇಶವನ್ನ ಹೇಗೆ ಧೈರ್ಯದಿಂದ ಹೇಳಿದ?

19 ಆದ್ರೂ ನಾವು ಜನ್ರಿಗೆಲ್ಲಿ ಕೋಪ ಬರುತ್ತೋ ಅಂತ ದೇವರ ವಾಕ್ಯದಲ್ಲಿರೋ ಸತ್ಯಗಳನ್ನ ಹೇಳದೇ ಇರಲ್ಲ. ಅಥವಾ ಯೆಹೋವನ ತೀರ್ಪಿನ ಸಂದೇಶಗಳ ಗಂಭೀರತೆಯನ್ನ ಕಮ್ಮಿ ಮಾಡಲ್ಲ. ಈ ವಿಷ್ಯದಲ್ಲಿ ಸ್ತೆಫನ ಒಳ್ಳೇ ಮಾದರಿ ಇಟ್ಟಿದ್ದಾನೆ. ಸ್ತೆಫನ ಹಿರೀಸಭೆಗೆ ಕೊಟ್ಟ ಆಧಾರಗಳು ‘ಬಂಡೆ ಮೇಲೆ ಮಳೆ ಸುರಿದ ಹಾಗೆ’ ವ್ಯರ್ಥವಾಗಿತ್ತು. ಆ ಕಲ್ಲು ಹೃದಯದ ನ್ಯಾಯಾಧೀಶರ ಯೋಚ್ನೆ ಸ್ವಲ್ಪನೂ ಬದಲಾಗಲಿಲ್ಲ ಅಂತ ಅವನಿಗೆ ಅರ್ಥ ಆಯ್ತು. ಹಾಗಾಗಿ ಅವರು ಯೋಸೇಫ, ಮೋಶೆ ಮತ್ತು ಎಲ್ಲಾ ಪ್ರವಾದಿಗಳನ್ನ ತಿರಸ್ಕರಿಸಿದ ಅವರ ಪೂರ್ವಜರ ತರಾನೇ ಇದ್ದಾರೆ ಅಂತ ಸ್ತೆಫನ ಪವಿತ್ರಶಕ್ತಿಯ ಸಹಾಯದಿಂದ ಒಂಚೂರೂ ಹೆದರದೆ ಹೇಳಿದ. (ಅ. ಕಾ. 7:51-53) ಮೋಶೆ ಮತ್ತು ಎಲ್ಲ ಪ್ರವಾದಿಗಳು ಯಾರ ಬಗ್ಗೆ ಭವಿಷ್ಯವಾಣಿ ಹೇಳಿದ್ರೋ ಆ ಮೆಸ್ಸೀಯನನ್ನೇ ಹಿರೀಸಭೆಯ ಈ ನ್ಯಾಯಾಧೀಶರು ಕೊಂದಿದ್ರು. ನಿಜ ಹೇಳಬೇಕಂದ್ರೆ, ಮೋಶೆಯ ನಿಯಮ ಪುಸ್ತಕವನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳದೇ ಅದನ್ನ ಮೀರಿದವರು ಇವರೇ!

“ಪ್ರಭು, ಯೇಸು, ನನ್ನ ಪ್ರಾಣವನ್ನ ನಿನಗೆ ಒಪ್ಪಿಸ್ತಾ ಇದ್ದೀನಿ” (ಅ. ಕಾ. 7:54–8:3)

“ಸ್ತೆಫನನ ಈ ಮಾತುಗಳನ್ನ ಕೇಳಿ ಅಲ್ಲಿದ್ದವ್ರಿಗೆ ತುಂಬ ಕೋಪ ಬಂತು. ಅವನನ್ನ ಕೊಲ್ಲಬೇಕಂತ ಅಂದ್ಕೊಂಡ್ರು.”—ಅಪೊಸ್ತಲರ ಕಾರ್ಯ 7:54

20, 21. (ಎ) ಸ್ತೆಫನನ ಮಾತುಗಳಿಗೆ ಹಿರೀಸಭೆ ಹೇಗೆ ಪ್ರತಿಕ್ರಿಯಿಸ್ತು? (ಬಿ) ಯೆಹೋವ ಅವನನ್ನ ಹೇಗೆ ಬಲಪಡಿಸಿದನು?

20 ಸ್ತೆಫನ ಸತ್ಯನ ಸ್ಪಷ್ಟವಾಗಿ ಬಿಚ್ಚಿ ಇಟ್ಟಿದ್ರಿಂದ ಆ ನ್ಯಾಯಾಧೀಶರು ಕೆಂಡಾಮಂಡಲ ಆದ್ರು. ಕೋಪ ಮಾಡ್ಕೊಂಡು ಅವನ ಮೇಲೆ ರೇಗಾಡಿದ್ರು. ಇದನ್ನೆಲ್ಲಾ ನೋಡಿದ ನಂಬಿಗಸ್ತನಾದ ಸ್ತೆಫನನಿಗೆ ಒಂದು ವಿಷ್ಯ ಗ್ಯಾರಂಟಿ ಆಯ್ತು. ಅದೇನಂದ್ರೆ ತನ್ನ ಗುರು ಯೇಸುಗೇ ಕರುಣೆ ತೋರಿಸದವರು ತನಗೂ ಕರುಣೆ ತೋರಿಸಲ್ಲ!

21 ಮುಂದೆ ಬರೋ ಕಷ್ಟಗಳನ್ನ ಎದುರಿಸೋಕೆ ಸ್ತೆಫನನಿಗೆ ಧೈರ್ಯ ಬೇಕಿತ್ತು. ಆಗ ದೇವರು ಕೊಟ್ಟ ದರ್ಶನದಿಂದ ಅವನು ತುಂಬ ಪ್ರೋತ್ಸಾಹ ಪಡ್ಕೊಂಡಿದ್ದ. ಆ ದರ್ಶನದಲ್ಲಿ ಸ್ತೆಫನ ದೇವರು ಉನ್ನತ ಸ್ಥಾನದಲ್ಲಿ ಕೂತಿರೋದನ್ನ ಮತ್ತು ದೇವ್ರ ಬಲಗಡೆಯಲ್ಲಿ ಯೇಸು ನಿಂತಿರೋದನ್ನ ನೋಡಿದ! ಸ್ತೆಫನ ದರ್ಶನನ ವಿವರಿಸ್ತಿದ್ದಾಗ ಆ ನ್ಯಾಯಾಧೀಶರು ತಮ್ಮ ಕಿವಿ ಮುಚ್ಕೊಂಡ್ರು. ಯಾಕಂದ್ರೆ ಈ ಹಿಂದೆ ಯೇಸು, ‘ನಾನೇ ಮೆಸ್ಸೀಯ ಮತ್ತು ಆದಷ್ಟು ಬೇಗ ನಾನು ನನ್ನ ತಂದೆಯ ಬಲಗಡೆಯಲ್ಲಿ ಕೂತುಕೊಳ್ತೀನಿ’ ಅಂತ ಇದೇ ನ್ಯಾಯಾಲಯಕ್ಕೆ ಹೇಳಿದ್ದನು. (ಮಾರ್ಕ 14:62) ಯೇಸು ಹೇಳಿದ್ದು ನಿಜ ಅಂತ ಸ್ತೆಫನನ ದರ್ಶನದಿಂದ ಗೊತ್ತಾಯ್ತು. ಈ ಹಿರೀಸಭೆ ಮೆಸ್ಸೀಯನಿಗೇ ದ್ರೋಹಬಗೆದು ಅವನನ್ನ ಕೊಂದಿತ್ತು! ಈಗ ಸ್ತೆಫನನನ್ನ ಕಲ್ಲೆಸೆದು ಕೊಲ್ಲೋಕೆ ಅವರೆಲ್ಲ ಒಂದಾಗಿ ಮುಂದೆ ಬಂದಿದ್ರು. c

22, 23. (ಎ) ಸ್ತೆಫನನ ಸಾವು ಯಾವ ವಿಧಗಳಲ್ಲಿ ಅವನ ಗುರು ಯೇಸುವಿನ ಸಾವಿನ ತರಾನೇ ಇತ್ತು? (ಬಿ) ಇವತ್ತು ಕ್ರೈಸ್ತರು ಸ್ತೆಫನನ ತರ ಯೆಹೋವನನ್ನ ಯಾಕೆ ಪೂರ್ತಿ ನಂಬಬಹುದು?

22 ತನ್ನ ಗುರು ಯೇಸು ಸಾಯುವಾಗ ಹೇಗಿದ್ನೋ ಸ್ತೆಫನನೂ ಹಾಗೇ ಇದ್ದ. ಅಂದ್ರೆ ಅವನಲ್ಲಿ ಶಾಂತ ಮನಸ್ಸು, ಯೆಹೋವನ ಮೇಲೆ ಪೂರ್ತಿ ನಂಬಿಕೆ ಮತ್ತು ತನ್ನನ್ನ ಕೊಲ್ಲುತ್ತಿದ್ದವರ ಕಡೆಗೆ ಕ್ಷಮಾಭಾವ ಇತ್ತು. ಅದಕ್ಕೇ ಅವನು “ಪ್ರಭು, ಯೇಸು, ನನ್ನ ಪ್ರಾಣವನ್ನ ನಿನಗೆ ಒಪ್ಪಿಸ್ತಾ ಇದ್ದೀನಿ” ಅಂದ. ದರ್ಶನದಲ್ಲಿ ಯೇಸು ತನ್ನ ತಂದೆ ಜೊತೆ ಇದ್ದಿದ್ದು ಅವನಿಗೆ ಆಗಲೂ ಕಾಣಿಸ್ತಾ ಇದ್ದಿದ್ರಿಂದ ಹಾಗೆ ಹೇಳಿರಬೇಕು. “ಸತ್ತವ್ರನ್ನ ಬದುಕಿಸೋದೂ ಅವ್ರಿಗೆ ಜೀವ ಕೊಡೋದೂ ನಾನೇ” ಅಂತ ಯೇಸು ಹೇಳಿದ ಮಾತೂ ಸ್ತೆಫನನಿಗೆ ಖಂಡಿತ ಗೊತ್ತಿರಬೇಕು, ಅದು ಅವನಿಗೆ ಧೈರ್ಯ ತುಂಬಿರಬೇಕು. (ಯೋಹಾ. 11:25) ಕೊನೆಯಲ್ಲಿ, ಅವನು ದೇವರಿಗೆ ಪ್ರಾರ್ಥನೆ ಮಾಡ್ತಾ ಜೋರಾಗಿ “ಯೆಹೋವನೇ, ಈ ಪಾಪಕ್ಕೆ ಇವ್ರನ್ನ ಶಿಕ್ಷಿಸಬೇಡ” ಅಂತ ಕೂಗಿ ಪ್ರಾಣಬಿಟ್ಟ.—ಅ. ಕಾ. 7:59, 60.

23 ಹೀಗೆ ಸ್ತೆಫನ ಬೈಬಲ್‌ ದಾಖಲೆಯ ಪ್ರಕಾರ ಕ್ರಿಸ್ತನ ಹಿಂಬಾಲಕರಲ್ಲೇ ಮೊದಲನೇ ಹುತಾತ್ಮನಾದ. (“ ಯಾವ ಅರ್ಥದಲ್ಲಿ ‘ಹುತಾತ್ಮ’?” ಅನ್ನೋ ಚೌಕ ನೋಡಿ.) ಬೇಜಾರಿನ ವಿಷ್ಯ ಏನಂದ್ರೆ, ಅವನೇ ಕೊನೆಯವನಲ್ಲ. ಇವತ್ತಿಗೂ ಧರ್ಮಾಂಧರು, ರಾಜಕೀಯ ಛಲವಾದಿಗಳು ಮತ್ತು ಇತರ ಕ್ರೂರ ವಿರೋಧಿಗಳು ಯೆಹೋವನ ಕೆಲವು ನಂಬಿಗಸ್ತ ಸೇವಕರನ್ನ ಕೊಲ್ತಿದ್ದಾರೆ. ಆದ್ರೂ ನಾವು ಸ್ತೆಫನನ ತರ ಯೆಹೋವನನ್ನ ಪೂರ್ತಿ ನಂಬಬೇಕು. ಯಾಕಂದ್ರೆ, ಯೇಸು ಈಗ ರಾಜನಾಗಿದ್ದಾನೆ, ಆತನಿಗೆ ಯೆಹೋವ ಅಪಾರ ಶಕ್ತಿ-ಅಧಿಕಾರ ಕೊಟ್ಟಿದ್ದಾನೆ. ಹಾಗಾಗಿ ತನ್ನ ನಂಬಿಗಸ್ತ ಹಿಂಬಾಲಕರನ್ನ ಮತ್ತೆ ಜೀವಂತವಾಗಿ ಎಬ್ಬಿಸ್ತಾನೆ. ಅದನ್ನ ತಡೆಯೋಕೆ ಯಾರಿಂದನೂ ಸಾಧ್ಯ ಇಲ್ಲ.—ಯೋಹಾ. 5:28, 29.

24. (ಎ) ಸ್ತೆಫನನ ಕೊಲೆಯಲ್ಲಿ ಸೌಲನಿಗೂ ಪಾಲಿತ್ತು ಅಂತ ಹೇಗೆ ಹೇಳಬಹುದು? (ಬಿ) ಸ್ತೆಫನನ ಸಾವು ತುಂಬ ವರ್ಷಗಳ ತನಕ ಒಳ್ಳೇ ಪ್ರಭಾವ ಬೀರಿತು ಅಂತ ಹೇಗೆ ಹೇಳಬಹುದು?

24 ನಡೆದದ್ದನ್ನೆಲ್ಲಾ ಸೌಲ ಅನ್ನೋ ಹೆಸರಿನ ಯುವಕ ನೋಡ್ತಾ ನಿಂತಿದ್ದ. ಅವನು ಸ್ತೆಫನನ ಕೊಲೆಗೆ ಒಪ್ಪಿಗೆ ಕೊಟ್ಟಿದ್ದ. ಅದಕ್ಕೇ ಅವನು ಕಲ್ಲೆಸೆಯೋ ಜನರ ಮೇಲಂಗಿಗಳನ್ನ ಕಾಯ್ತಾ ಇದ್ದ. ಸ್ತೆಫನ ಸತ್ತ ಮೇಲಂತೂ ಸೌಲ ಕ್ರೈಸ್ತರನ್ನ ಇನ್ನೂ ಜಾಸ್ತಿ ಹಿಂಸೆ ಮಾಡೋಕೆ ಶುರು ಮಾಡ್ದ. ಆದ್ರೆ ಸ್ತೆಫನನ ಸಾವು ತುಂಬ ವರ್ಷಗಳ ತನಕ ಒಳ್ಳೇ ಪ್ರಭಾವವನ್ನೂ ಬೀರಲಿತ್ತು. ಅವನ ಮಾದರಿ ಬೇರೆ ಕ್ರೈಸ್ತರಿಗೆ ನಂಬಿಗಸ್ತರಾಗಿ ಇರೋಕೆ ಮತ್ತು ಇದೇ ರೀತಿಯ ಜಯ ಪಡಿಯೋಕೆ ಬಲಕೊಡ್ತು. ಅಷ್ಟೇ ಅಲ್ಲ, ಸ್ತೆಫನನ ಸಾವಿನಲ್ಲಿ ತನಗೂ ಪಾಲಿತ್ತು ಅಂತ ನೆನಪಿಸ್ಕೊಂಡು ಸೌಲ (ಮುಂದೆ ಅವನಿಗೆ ಪೌಲ ಅನ್ನೋ ಹೆಸ್ರು ಬಂತು) ಮುಂದೆ ತುಂಬ ಪರಿತಪಿಸಿದ. (ಅ. ಕಾ. 22:20) ಸ್ತೆಫನನನ್ನ ಕೊಲ್ಲೋಕೆ ಸಹಾಯ ಮಾಡಿದ್ರೂ, ಪೌಲ “ನಾನು ದೇವರದ್ದೇ ತಪ್ಪು ಅಂತ ಹೇಳ್ತಿದ್ದೆ, ದೇವಜನ್ರಿಗೆ ಹಿಂಸೆ ಕೊಡ್ತಿದ್ದೆ, ದುರಹಂಕಾರಿ ಆಗಿದ್ದೆ” ಅಂತ ಒಪ್ಕೊಂಡ. (1 ತಿಮೊ. 1:13) ಪೌಲ ಸ್ತೆಫನನನ್ನ ಮತ್ತು ಅವನ ಕೊನೇ ಮಾತುಗಳನ್ನ ಯಾವತ್ತೂ ಮರಿಯಲ್ಲ ಅನ್ನೋದು ಸ್ಪಷ್ಟ. ಸ್ತೆಫನ ಹೇಳಿದ ಎಷ್ಟೋ ವಿಷ್ಯಗಳನ್ನ ಪೌಲ ತನ್ನ ಕೆಲವು ಭಾಷಣಗಳಲ್ಲಿ, ಪತ್ರಗಳಲ್ಲಿ ಬಳಸಿದ್ದಾನೆ. (ಅ. ಕಾ. 7:48; 17:24; ಇಬ್ರಿ. 9:24) ಆಮೇಲೆ ‘ದೇವರ ಮೆಚ್ಚುಗೆ ಮತ್ತು ಶಕ್ತಿ ಪಡ್ಕೊಂಡಿದ್ದ’ ಸ್ತೆಫನನ ತರಾನೇ ಪೌಲ ಕೂಡ ನಂಬಿಕೆ ಮತ್ತು ಧೈರ್ಯ ತೋರಿಸಿದ. ಹಾಗಾದ್ರೆ ನಾವೂ ಸ್ತೆಫನನನ್ನ ಅನುಕರಿಸೋಣ್ವಾ?

a ಈ ವಿರೋಧಿಗಳಲ್ಲಿ ಕೆಲವರು ‘ತಮ್ಮದೇ ಸಭಾಮಂದಿರ ಮಾಡ್ಕೊಂಡಿದ್ರು.’ ಇವ್ರು, ರೋಮನ್ನರು ಈ ಹಿಂದೆ ಬಂಧಿಸಿ ನಂತರ ಬಿಡುಗಡೆ ಮಾಡಿದ ಜನರಾಗಿರಬಹುದು ಅಥವಾ ಈ ಹಿಂದೆ ಗುಲಾಮರಾಗಿದ್ದು ಆಮೇಲೆ ಬಿಡುಗಡೆಯಾಗಿ ಯೆಹೂದ್ಯರಾಗಿ ಮತಾಂತರ ಆದವರು ಇದ್ದಿರಬಹುದು. ಇನ್ನೂ ಕೆಲವರು ತಾರ್ಸದ ಸೌಲನಂತೆ ಕಿಲಿಕ್ಯದವರಾಗಿದ್ರು. ಸ್ತೆಫನನ ಜೊತೆ ವಾದ ಮಾಡಿ ಗೆಲ್ಲೋಕೆ ಆಗದಿರೋ ಕಿಲಿಕ್ಯದ ಜನರಲ್ಲಿ ಸೌಲ ಇದ್ನೋ ಇಲ್ವೋ ಅಂತ ಈ ಘಟನೆಯಿಂದ ಗೊತ್ತಾಗಲ್ಲ.

b ಬೈಬಲಿನಲ್ಲಿ ಇನ್ನೆಲ್ಲೂ ಸಿಗದಿರೋ ಮಾಹಿತಿ ಸ್ತೆಫನನ ಮಾತಿನಲ್ಲಿ ಸಿಗುತ್ತೆ. ಉದಾಹರಣೆಗೆ, ಮೋಶೆಗೆ ಈಜಿಪ್ಟಿನಲ್ಲಿ ಸಿಕ್ಕಿದ ವಿದ್ಯಾಭ್ಯಾಸ, ಅಲ್ಲಿಂದ ಓಡಿಹೋದಾಗ ಅವನ ವಯಸ್ಸು ಮತ್ತು ಮಿದ್ಯಾನಿನಲ್ಲಿ ಅವನಿದ್ದ ಕಾಲಾವಧಿ.

c ರೋಮನ್‌ ಕಾನೂನಿನ ಪ್ರಕಾರ ಮರಣ ಶಿಕ್ಷೆ ವಿಧಿಸೋ ಅಧಿಕಾರ ಹಿರೀಸಭೆಗೆ ಇರಲಿಲ್ಲ ಅಂತ ಕಾಣುತ್ತೆ. (ಯೋಹಾ. 18:31) ಅದೇನೇ ಆಗಿದ್ರೂ, ಸ್ತೆಫನನ ಸಾವು ಹಗೆತುಂಬಿದ ಜನರ ಗುಂಪು ನಡೆಸಿದ ಕೊಲೆಯಾಗಿತ್ತೇ ಹೊರತು ನ್ಯಾಯಾಲಯದ ತೀರ್ಪಿನ ಪರಿಣಾಮ ಆಗಿರಲಿಲ್ಲ ಅಂತ ಗೊತ್ತಾಗುತ್ತೆ.