ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 1

‘ಹೋಗಿ ಜನ್ರಿಗೆ ಶಿಷ್ಯರಾಗೋಕೆ ಕಲಿಸಿ’

‘ಹೋಗಿ ಜನ್ರಿಗೆ ಶಿಷ್ಯರಾಗೋಕೆ ಕಲಿಸಿ’

ಅಪೊಸ್ತಲರ ಕಾರ್ಯ ಪುಸ್ತಕದ ಕಿರುನೋಟ ಮತ್ತು ಅದ್ರಲ್ಲಿ ನಮಗಿರೋ ಪಾಠ

1-6. ಸಾಕ್ಷಿಗಳು ಬೇರೆ ಬೇರೆ ಸನ್ನಿವೇಶಗಳಲ್ಲೂ ಸಾರ್ತಾರೆ ಅಂತ ತೋರಿಸೋ ಒಂದು ಅನುಭವ ಹೇಳಿ.

 ಘಾನದಲ್ಲಿರೋ ರೆಬೆಕ್ಕಾ ಅನ್ನೋ ಯೆಹೋವನ ಸಾಕ್ಷಿಗೆ ಅವಳ ಶಾಲೆನೇ ಸಾರೋ ಕ್ಷೇತ್ರ ಆಗಿತ್ತು. ಅವಳು ತನ್ನ ಶಾಲಾ ಬ್ಯಾಗ್‌ನಲ್ಲಿ ಯಾವಾಗ್ಲೂ ಬೈಬಲ್‌ ಸಾಹಿತ್ಯಗಳನ್ನ ಇಟ್ಕೊಳ್ತಿದ್ದಳು. ವಿರಾಮದ ಸಮಯದಲ್ಲಿ ಅವಳು ಬೇರೆ ವಿದ್ಯಾರ್ಥಿಗಳಿಗೆ ಸಾರೋಕೆ ಅವಕಾಶಕ್ಕಾಗಿ ಹುಡುಕ್ತಿದ್ದಳು. ಹೀಗೆ ರೆಬೆಕ್ಕಾಗೆ ಅನೇಕ ಸಹಪಾಠಿಗಳ ಜೊತೆ ಬೈಬಲ್‌ ಅಧ್ಯಯನ ಆರಂಭಿಸೋಕೆ ಆಯ್ತು.

2 ಆಫ್ರಿಕಾದ ಪೂರ್ವ ಕರಾವಳಿಯಿಂದ ಸ್ವಲ್ಪ ದೂರದಲ್ಲಿ ಮಡಗಾಸ್ಕರ್‌ ಅನ್ನೋ ದ್ವೀಪ ಇದೆ. ಅಲ್ಲಿ ಇಬ್ಬರು ಪಯನೀಯರರು ಸುಡೋ ಬಿಸಿಲಲ್ಲಿ 25 ಕಿ.ಮೀ. ದೂರ ನಡ್ಕೊಂಡು ಹೋಗಿ ಒಂದು ಹಳ್ಳಿಯಲ್ಲಿ ಜನ್ರಿಗೆ ಬೈಬಲ್‌ ಬಗ್ಗೆ ಕಲಿಸ್ತಿದ್ರು.

3 ಪರಾಗ್ವೆ ದೇಶದಲ್ಲಿರೋ ಸಾಕ್ಷಿಗಳು ಬೇರೆ 15 ದೇಶಗಳ ಸ್ವಯಂಸೇವಕರ ಜೊತೆ ಸೇರಿ ಒಂದು ಬೋಟ್‌ ಕಟ್ಟಿದ್ರು. ಪರಾಗ್ವೆ ಮತ್ತು ಪನಾಮ ನದಿಗಳ ಉದ್ದಕ್ಕೂ ವಾಸಮಾಡೋ ಜನ್ರನ್ನ ಭೇಟಿ ಮಾಡಿ ಸಿಹಿಸುದ್ದಿ ಸಾರಬೇಕು ಅಂತ ಹೀಗೆ ಮಾಡಿದ್ರು. ಅಲ್ಲಿಗೆ ಹೋಗೋಕೆ ದೋಣಿ ಬಿಟ್ರೆ ಬೇರೆ ದಾರಿ ಇರಲಿಲ್ಲ. 45 ಟನ್‌ ತೂಕ ಇರೋ ಈ ಬೋಟ್‌ನಲ್ಲಿ 12 ಜನ ವಾಸಮಾಡಬಹುದಿತ್ತು. ಹೀಗೆ ಆ ಸಹೋದರ ಸಹೋದರಿಯರು ಅಲ್ಲಿಗೆ ಹೋಗಿ ಅಲ್ಲಿನ ಜನ್ರಿಗೆ ಸಿಹಿಸುದ್ದಿ ಸಾರಿದ್ರು.

4 ಉತ್ತರದ ಅಲಾಸ್ಕದಲ್ಲಿರೋ ಸಾಕ್ಷಿಗಳು, ಬೇಸಿಗೆ ಕಾಲದಲ್ಲಿ ಬೇರೆಬೇರೆ ದೇಶಗಳಿಂದ ಹಡಗುಗಳಲ್ಲಿ ಅಲ್ಲಿಗೆ ಬರೋ ಪ್ರವಾಸಿಗರಿಗೆ ಸಿಹಿಸುದ್ದಿ ಸಾರಿದ್ರು. ಸ್ಥಳೀಯ ಸಾಕ್ಷಿಗಳು ಹಡಗು ನಿಲ್ಲೋ ಜಾಗಗಳಲ್ಲಿ ನಿಂತು ಬೇರೆಬೇರೆ ಭಾಷೆಗಳ ಬೈಬಲ್‌ ಸಾಹಿತ್ಯಗಳನ್ನ ಪ್ರದರ್ಶಿಸಿದ್ರು. ಒಂದು ಚಿಕ್ಕ ವಿಮಾನ ಬಳಸಿ ಸಾರಿಗೆ ವ್ಯವಸ್ಥೆ ಇಲ್ಲದ ದೂರದೂರದ ಹಳ್ಳಿಗಳಿಗೂ ಹೋಗಿ ಸಿಹಿಸುದ್ದಿ ಸಾರಿದ್ರು. ಹೀಗೆ ಅಲ್ಲಿದ್ದ ಅಲೂಟ್‌, ಆ್ಯಥಬಾಸ್ಕನ್‌, ಶಿಮ್‌ಶ್ಯನ್‌, ಕ್ಲಿಂಕೆಟ್‌ ಸಮುದಾಯಗಳ ಜನ್ರಿಗೆ ಸಿಹಿಸುದ್ದಿ ಸಾರಕ್ಕಾಯ್ತು.

5 ಅಮೆರಿಕಾದ ಟೆಕ್ಸಾಸ್‌ನಲ್ಲಿರೋ ಲ್ಯಾರೀ ಅನ್ನೋ ಸಹೋದರನಿಗೆ ಒಂದು ಸಲ ಅಪಘಾತ ಆಗಿ ಗಾಲಿಕುರ್ಚಿಯಲ್ಲೇ ಇರಬೇಕಾದ ಪರಿಸ್ಥಿತಿ ಬಂತು. ಹಾಗಾಗಿ ಅವ್ರನ್ನ ನರ್ಸಿಂಗ್‌ ಹೋಮ್‌ಗೆ ಹಾಕಿದ್ರು. ಈ ನರ್ಸಿಂಗ್‌ ಹೋಮ್‌ ವೃದ್ಧರನ್ನ ನೋಡ್ಕೊಳ್ಳೋ ಜಾಗ ಆಗಿತ್ತು. ಆದ್ರೆ ಸಹೋದರ ಲ್ಯಾರೀ ಇದನ್ನೇ ತಮ್ಮ ಟೆರಿಟೊರಿಯಾಗಿ ಮಾಡ್ಕೊಂಡು ಬೇರೆಯವರಿಗೆ ಸಿಹಿಸುದ್ದಿ ಸಾರ್ತಾ ಬಿಜ಼ಿಯಾಗಿದ್ರು. ದೇವರ ಆಳ್ವಿಕೆ ಈ ಭೂಮಿ ಮೇಲೆ ಬಂದಾಗ ತಾನು ಮತ್ತೆ ನಡೀತೀನಿ ಅಂತ ಬೈಬಲ್‌ ಕೊಡೋ ನಿರೀಕ್ಷೆ ಬಗ್ಗೆನೂ ಹೇಳ್ತಿದ್ರು.—ಯೆಶಾ. 35:5, 6.

6 ಉತ್ತರ ಮಯನ್ಮಾರ್‌ನಲ್ಲಿ ನಡೀತಿದ್ದ ಸಮ್ಮೇಳನಕ್ಕೆ ಹಾಜರಾಗೋಕೆ ಯೆಹೋವನ ಸಾಕ್ಷಿಗಳ ಒಂದು ಗುಂಪು ಮ್ಯಾಂಡಲೇಯಿಂದ ದೋಣಿಯಲ್ಲಿ ಮೂರು ದಿನ ಪ್ರಯಾಣ ಮಾಡ್ತು. ಆ ಸಮಯದಲ್ಲೂ ಸಿಹಿಸುದ್ದಿ ಸಾರಬೇಕು ಅನ್ನೋ ಹುರುಪು ಅವ್ರಿಗೆ ಇದ್ದಿದ್ರಿಂದ ಅವರು ಬೈಬಲ್‌ ಸಾಹಿತ್ಯಗಳನ್ನ ತಮ್ಮ ಜೊತೆ ತಗೊಂಡು ಹೋಗಿ ದೋಣಿಯಲ್ಲಿದ್ದ ಪ್ರಯಾಣಿಕರಿಗೆ ಕೊಟ್ರು. ಪ್ರಯಾಣ ಮಾಡ್ತಾ ಮಾಡ್ತಾ ದೋಣಿ ಒಂದು ಊರು ಅಥವಾ ಪಟ್ಟಣದ ಹತ್ರ ನಿಂತಾಗೆಲ್ಲಾ ಈ ಪ್ರಚಾರಕರು ಬೇಗಬೇಗ ಇಳಿದು ಅಲ್ಲಿರೋ ಜನರ ಮನೆಗಳಿಗೆ ಹೋಗಿ ಸಾಹಿತ್ಯಗಳನ್ನ ಕೊಡ್ತಿದ್ರು. ವಾಪಸ್‌ ದೋಣಿಗೆ ಬಂದಾಗ ಅವ್ರಿಗೆ ‘ಹೊಸ ಸೇವಾ ಕ್ಷೇತ್ರ’ ಸಿದ್ಧವಾಗಿ ಇರ್ತಿತ್ತು! ಯಾಕಂದ್ರೆ ಹೊಸ ಪ್ರಯಾಣಿಕರು ಆ ದೋಣಿಯನ್ನ ಹತ್ತಿರುತ್ತಿದ್ರು.

7. (ಎ) ಯೆಹೋವನ ಆರಾಧಕರು ಯಾವೆಲ್ಲಾ ವಿಧಗಳಲ್ಲಿ ದೇವರ ಆಳ್ವಿಕೆ ಬಗ್ಗೆ ಸಾಕ್ಷಿ ಕೊಡ್ತಿದ್ದಾರೆ? (ಬಿ) ಅವರ ಗುರಿ ಏನು?

7 ಈ ಸಹೋದರ ಸಹೋದರಿಯರ ತರ, ಎಲ್ಲ ಯೆಹೋವನ ಆರಾಧಕರು ಇಡೀ ಲೋಕದಲ್ಲಿ ‘ದೇವ್ರ ಆಳ್ವಿಕೆ ಬಗ್ಗೆ ಚೆನ್ನಾಗಿ ವಿವರಿಸ್ತಿದ್ದಾರೆ.’ (ಅ. ಕಾ. 28:23) ಅವರು ಮನೆ ಸೇವೆ ಮಾಡ್ತಾರೆ, ದಾರಿಯಲ್ಲಿ ನಡೆಯೋರನ್ನ ಮಾತಾಡಿಸ್ತಾರೆ ಮತ್ತು ಪತ್ರಗಳನ್ನ ಬರೆದು, ಫೋನ್‌ ಮೂಲಕನೂ ಸಾರ್ತಾರೆ. ಬಸ್ಸಲ್ಲಿ ಪ್ರಯಾಣ ಮಾಡೋವಾಗ, ಪಾರ್ಕಲ್ಲಿ ನಡೆಯೋವಾಗ, ಕೆಲಸದ ಸ್ಥಳದಲ್ಲಿ ವಿರಾಮ ಇದ್ದಾಗ ದೇವರ ಆಳ್ವಿಕೆ ಬಗ್ಗೆ ಸಾಕ್ಷಿಕೊಡೋ ಅವಕಾಶಕ್ಕಾಗಿ ಹುಡುಕ್ತಾ ಇರ್ತಾರೆ. ಸಾರೋ ವಿಧಾನಗಳು ಬೇರೆಬೇರೆ ಆಗಿದ್ರೂ ಅವರ ಗುರಿ ಒಂದೇ. ಅದೇನಂದ್ರೆ ಜನರು ಸಿಕ್ಕಿದಲ್ಲೆಲ್ಲಾ ಅವ್ರಿಗೆ ಸಿಹಿಸುದ್ದಿ ಸಾರೋದೇ.—ಮತ್ತಾ. 10:11.

8, 9. (ಎ) ಸಿಹಿಸುದ್ದಿ ಸಾರೋ ಕೆಲಸ ಎಲ್ಲಾ ಕಡೆ ಹಬ್ತಾ ಇರೋದು ಒಂದು ದೊಡ್ಡ ಅದ್ಭುತ ಯಾಕೆ? (ಬಿ) ನಮಗೆ ಯಾವ ಪ್ರಶ್ನೆ ಬರುತ್ತೆ? (ಸಿ) ಈ ಪ್ರಶ್ನೆಗೆ ಉತ್ತರ ತಿಳ್ಕೊಳೋಕೆ ನಾವು ಏನು ಮಾಡಬೇಕು?

8 ಈ ಪುಸ್ತಕವನ್ನ ಓದುತ್ತಿರೋ ಪ್ರೀತಿಯ ಸಹೋದರ ಸಹೋದರಿಯರೇ, 235ಕ್ಕೂ ಹೆಚ್ಚಿನ ದೇಶಗಳಲ್ಲಿ ಚೆನ್ನಾಗಿ ಸಿಹಿಸುದ್ದಿ ಸಾರುತ್ತಾ ಇರೋರಲ್ಲಿ ನೀವೂ ಒಬ್ಬರಾ? ನೀವೂ ಒಬ್ಬರಾಗಿದ್ದರೆ, ಇದರರ್ಥ ಸಾರೋ ಕೆಲಸದ ಪ್ರಗತಿಯಲ್ಲಿ ನಿಮ್ಮ ಪಾಲೂ ಇದೆ ಅಂತರ್ಥ! ಈ ಸಾರೋ ಕೆಲಸ ಲೋಕದ ಎಲ್ಲಾ ಕಡೆ ಹಬ್ತಾ ಇರೋದು ನಿಜಕ್ಕೂ ಒಂದು ದೊಡ್ಡ ಅದ್ಭುತನೇ! ಯಾಕಂದ್ರೆ ಯೆಹೋವನ ಸಾಕ್ಷಿಗಳಿಗೆ ಹಿಂಸೆ ಮತ್ತು ಸರಕಾರದಿಂದ ನಿಷೇಧ ಮುಂತಾದ ಕಷ್ಟ-ಸಮಸ್ಯೆ, ಅಡ್ಡಿ-ತಡೆಗಳು ಎದುರಾಗ್ತಿವೆ. ಹಾಗಿದ್ರೂ ಅವರು ಎಲ್ಲ ದೇಶಗಳ ಜನ್ರಿಗೆ ದೇವರ ಆಳ್ವಿಕೆ ಬಗ್ಗೆ ಸಾಕ್ಷಿ ಕೊಡ್ತಿದ್ದಾರೆ.

9 ಅಡ್ಡಿ-ತಡೆಗಳಿದ್ರೂ, ಸೈತಾನನಿಂದ ವಿರೋಧ ಬಂದ್ರೂ ಸಾರೋ ಕೆಲಸ ನಿಂತುಹೋಗದೆ ಇನ್ನೂ ಹೆಚ್ಚಾಗ್ತಾ ಇರೋದಕ್ಕೆ ಕಾರಣ ಏನು? ಉತ್ರನಾ ಈಗ ತಿಳ್ಕೊಳ್ಳೋಣ. ಅದಕ್ಕೆ ನಾವು ಒಂದನೇ ಶತಮಾನದಲ್ಲಿ ನಡೆದ ವಿಷ್ಯಗಳ ಬಗ್ಗೆ ತಿಳ್ಕೊಬೇಕು. ಯಾಕಂದ್ರೆ ಆಗ ಆರಂಭವಾದ ಸಾರೋ ಕೆಲಸವನ್ನೇ ಯೆಹೋವನ ಸಾಕ್ಷಿಗಳು ಈಗಲೂ ಮುಂದುವರಿಸ್ಕೊಂಡು ಹೋಗ್ತಿದ್ದಾರೆ.

ದೀರ್ಘಕಾಲ, ವಿಸ್ತಾರವಾಗಿ ನಡೆಯೋ ಕೆಲಸ

10. (ಎ) ಯೇಸು ಯಾವ ಕೆಲಸಕ್ಕೆ ತನ್ನನ್ನೇ ಮುಡಿಪಾಗಿಟ್ಟನು? (ಬಿ) ಈ ಕೆಲಸದ ಬಗ್ಗೆ ಆತನಿಗೆ ಏನು ಗೊತ್ತಿತ್ತು?

10 ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ ಸಾರೋಕೆ ಯೇಸು ಕ್ರಿಸ್ತ ತನ್ನ ಜೀವನನೇ ಮುಡಿಪಾಗಿಟ್ಟನು. ಕ್ರೈಸ್ತ ಸಭೆಯನ್ನ ಶುರು ಮಾಡಿದ್ದು ಈತನೇ, ಆ ಸಭೆ ಇವತ್ತಿನ ತನಕ ಇದೆ. ಯೇಸುಗೆ ಸಾರೋದು ಎಷ್ಟು ಇಷ್ಟ ಇತ್ತು ಅಂದ್ರೆ ಒಂದು ಸಲ “ನಾನು ದೇವರ ಆಳ್ವಿಕೆಯ ಸಿಹಿಸುದ್ದಿನ ಬೇರೆ ಊರುಗಳಿಗೂ ಸಾರಬೇಕಿದೆ. ನನ್ನನ್ನ ಕಳಿಸಿರೋದು ಇದಕ್ಕೇ” ಅಂತ ಹೇಳಿದನು. (ಲೂಕ 4:43) ತಾನು ಆರಂಭಿಸೋ ಕೆಲಸವನ್ನ ತಾನೊಬ್ಬನೇ ಮಾಡಿ ಮುಗಿಸೋಕೆ ಸಾಧ್ಯ ಇಲ್ಲ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಆದ್ರೆ ಆತನು ಸಾಯೋದಕ್ಕೆ ಸ್ವಲ್ಪ ಮುಂಚೆ “ಎಲ್ಲ ದೇಶಗಳಲ್ಲಿ” ಸಿಹಿಸುದ್ದಿ ಸಾರಲಾಗುತ್ತೆ ಅಂತ ಹೇಳಿದ್ದನು. (ಮಾರ್ಕ 13:10) ಹಾಗಾದ್ರೆ ಇದನ್ನ ಯಾರು ಮಾಡಿದ್ರು? ಹೇಗೆ ಮಾಡಿದ್ರು?

“ಹೋಗಿ ಎಲ್ಲಾ ದೇಶದ ಜನ್ರಿಗೆ ನನ್ನ ಶಿಷ್ಯರಾಗೋಕೆ ಕಲಿಸಿ.”—ಮತ್ತಾಯ 28:19

11. (ಎ) ಯೇಸು ತನ್ನ ಶಿಷ್ಯರಿಗೆ ಯಾವ ಮುಖ್ಯ ಕೆಲಸ ಕೊಟ್ಟನು? (ಬಿ) ಇದನ್ನ ಮಾಡೋಕೆ ಅವ್ರಿಗೆ ಯಾವ ಬೆಂಬಲ ಸಿಗಲಿತ್ತು?

11 ಯೇಸು ಸತ್ತು ಮತ್ತೆ ಜೀವಂತವಾಗಿ ಎದ್ದು ಬಂದ ಮೇಲೆ ತನ್ನ ಶಿಷ್ಯರಿಗೆ ಕಾಣಿಸ್ಕೊಂಡು ಈ ಮುಖ್ಯ ಕೆಲಸವನ್ನ ಕೊಟ್ಟನು: “ಹಾಗಾಗಿ ನೀವು ಹೋಗಿ ಎಲ್ಲಾ ದೇಶದ ಜನ್ರಿಗೆ ನನ್ನ ಶಿಷ್ಯರಾಗೋಕೆ ಕಲಿಸಿ. ಅವ್ರಿಗೆ ತಂದೆ ಹೆಸ್ರಲ್ಲಿ, ಮಗನ ಹೆಸ್ರಲ್ಲಿ ಮತ್ತು ಪವಿತ್ರಶಕ್ತಿಯ ಹೆಸ್ರಲ್ಲಿ ದೀಕ್ಷಾಸ್ನಾನ ಮಾಡಿಸಿ. ನಾನು ನಿಮಗೆ ಹೇಳಿಕೊಟ್ಟ ಎಲ್ಲ ವಿಷ್ಯಗಳ ಪ್ರಕಾರ ನಡೆಯೋಕೆ ಅವ್ರಿಗೆ ಕಲಿಸಿ. ಈ ಲೋಕದ ಅಂತ್ಯಕಾಲ ಮುಗಿಯೋವರೆಗೂ ಯಾವಾಗ್ಲೂ ನಾನು ನಿಮ್ಮ ಜೊತೆ ಇರ್ತಿನಿ.” (ಮತ್ತಾ. 28:19, 20) “ನಾನು ನಿಮ್ಮ ಜೊತೆ ಇರ್ತಿನಿ” ಅನ್ನೋ ಯೇಸುವಿನ ಮಾತು, ಜನ್ರಿಗೆ ಸಾರುವಾಗ ಮತ್ತು ಕಲಿಸುವಾಗ ತನ್ನ ಹಿಂಬಾಲಕರಿಗೆ ತನ್ನ ಬೆಂಬಲ ಇರುತ್ತೆ ಅನ್ನೋದನ್ನ ಸೂಚಿಸುತ್ತೆ. ಈ ಬೆಂಬಲ ಅವ್ರಿಗೆ ಬೇಕಾಗಿತ್ತು. ಯಾಕಂದ್ರೆ ಅವರು ಬೇಗ ‘ಎಲ್ಲ ದೇಶದವರ ದ್ವೇಷಕ್ಕೆ’ ಗುರಿ ಆಗ್ತಿದ್ರು. (ಮತ್ತಾ. 24:9) ಶಿಷ್ಯರಿಗೆ ಬೆಂಬಲ ಕೊಡೋ ಇನ್ನೊಂದು ವಿಷ್ಯನೂ ಇತ್ತು. “ಇಡೀ ಭೂಮಿಯಲ್ಲಿ” ಸಾಕ್ಷಿಗಳಾಗಿರೋಕೆ ಅವರು ಪವಿತ್ರಶಕ್ತಿಯಿಂದ ಬಲ ಪಡ್ಕೊಳ್ತಾರೆ ಅಂತ ಯೇಸು ಸ್ವರ್ಗಕ್ಕೆ ಏರಿಹೋಗೋ ಸ್ವಲ್ಪ ಮುಂಚೆ ಹೇಳಿದ್ದನು.—ಅ. ಕಾ. 1:8.

12. (ಎ) ಯಾವ ಮುಖ್ಯ ಪ್ರಶ್ನೆಗಳು ಬರುತ್ತೆ? (ಬಿ) ನಾವು ಆ ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ಳೋದು ಯಾಕೆ ತುಂಬ ಮುಖ್ಯ?

12 ನಮಗೆ ಈ ಮುಖ್ಯ ಪ್ರಶ್ನೆಗಳು ಬರಬಹುದು: ಯೇಸುವಿನ ಅಪೊಸ್ತಲರು ಮತ್ತು ಒಂದನೇ ಶತಮಾನದಲ್ಲಿದ್ದ ಬೇರೆ ಶಿಷ್ಯರು ಈ ಕೆಲಸಕ್ಕೆ ಮಹತ್ವ ಕೊಟ್ರಾ? ಕ್ರೈಸ್ತ ಸ್ತ್ರೀಪುರುಷರ ಈ ಚಿಕ್ಕ ಗುಂಪು ತೀವ್ರ ಹಿಂಸೆ ಬಂದ್ರೂ ದೇವರ ಆಳ್ವಿಕೆ ಬಗ್ಗೆ ಚೆನ್ನಾಗಿ ಸಾಕ್ಷಿ ನೀಡ್ತಾ? ಶಿಷ್ಯರಾಗೋಕೆ ಜನ್ರಿಗೆ ಕಲಿಸೋ ಕೆಲಸದಲ್ಲಿ ಅವ್ರಿಗೆ ಸ್ವರ್ಗೀಯ ಬೆಂಬಲ ಮತ್ತು ಯೆಹೋವನ ಪವಿತ್ರಶಕ್ತಿಯ ಸಹಾಯ ಸಿಕ್ತಾ? ಈ ಪ್ರಶ್ನೆಗಳಿಗೆ ಮತ್ತು ಬೇರೆ ಪ್ರಶ್ನೆಗಳಿಗೆ ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಉತ್ತರ ಸಿಗುತ್ತೆ. ಈ ಉತ್ತರಗಳನ್ನ ನಾವು ತಿಳ್ಕೊಳ್ಳೋದು ತುಂಬ ಮುಖ್ಯ. ಯಾಕಂದ್ರೆ, ತಾನು ಕೊಟ್ಟ ಕೆಲಸ “ಈ ಲೋಕದ ಅಂತ್ಯಕಾಲ ಮುಗಿಯೋವರೆಗೂ” ಮುಂದುವರಿಯುತ್ತೆ ಅಂತ ಯೇಸು ಹೇಳಿದ್ದಾನೆ. ಹಾಗಾಗಿ ಈ ಆಜ್ಞೆ ಎಲ್ಲಾ ನಿಜ ಕ್ರೈಸ್ತರಿಗೆ ಅಂದ್ರೆ ಈ ಕೊನೇ ದಿನಗಳಲ್ಲಿ ಜೀವಿಸ್ತಿರೋ ನಮಗೂ ಅನ್ವಯಿಸುತ್ತೆ. ಹಾಗಾಗಿ, ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಹೇಳಿರೋ ಐತಿಹಾಸಿಕ ವಿಷ್ಯಗಳ ಬಗ್ಗೆ ನಮಗೂ ತಿಳ್ಕೊಳ್ಳೋಕೆ ಆಸಕ್ತಿ ಇದೆ.

ಅಪೊಸ್ತಲರ ಕಾರ್ಯ ಪುಸ್ತಕದ ಕಿರುನೋಟ

13, 14. (ಎ) ಅಪೊಸ್ತಲರ ಕಾರ್ಯ ಪುಸ್ತಕವನ್ನ ಯಾರು ಬರೆದ್ರು? (ಬಿ) ಈ ಪುಸ್ತಕದಲ್ಲಿ ಕೊಡಲಾದ ಮಾಹಿತಿಯನ್ನ ಲೇಖಕ ಹೇಗೆ ಪಡೆದ? (ಸಿ) ಈ ಪುಸ್ತಕದಲ್ಲಿ ಏನೆಲ್ಲ ಇದೆ?

13 ಅಪೊಸ್ತಲರ ಕಾರ್ಯ ಪುಸ್ತಕವನ್ನ ಯಾರು ಬರೆದ್ರು? ಅದರ ಬರಹಗಾರ ಯಾರಂತ ಈ ಪುಸ್ತಕದಲ್ಲಿ ಹೇಳಿಲ್ಲ. ಆದ್ರೆ ಲೂಕ ಅನ್ನೋ ಪುಸ್ತಕವನ್ನ ಬರೆದವನೇ ಈ ಪುಸ್ತಕವನ್ನೂ ಬರೆದ ಅಂತ ಇದರ ಆರಂಭದ ಮಾತುಗಳಿಂದ ಗೊತ್ತಾಗುತ್ತೆ. (ಲೂಕ 1:1-4; ಅ. ಕಾ. 1:1, 2) ಅದಕ್ಕೆ “ಪ್ರಿಯ ವೈದ್ಯ” ಮತ್ತು ಸೂಕ್ಷ್ಮ ವಿವರಗಳನ್ನ ದಾಖಲಿಸಿದ ಇತಿಹಾಸಗಾರ ಲೂಕನೇ ಅಪೊಸ್ತಲರ ಕಾರ್ಯ ಪುಸ್ತಕವನ್ನ ಬರೆದಿರಬಹುದು ಅಂತ ಹಿಂದಿನ ಕಾಲದಿಂದಲೂ ಹೇಳ್ತಾರೆ. (ಕೊಲೊ. 4:14) ಕ್ರಿ.ಶ. 33ರಲ್ಲಿ ಯೇಸು ಸ್ವರ್ಗಕ್ಕೆ ಹೋದಾಗಿಂದ ಕ್ರಿ.ಶ. 61ರಲ್ಲಿ ಅಪೊಸ್ತಲ ಪೌಲನನ್ನ ಜೈಲಿಗೆ ಹಾಕಿದ್ದರ ತನಕ ಇರೋ ಮಾಹಿತಿ ಈ ಪುಸ್ತಕದಲ್ಲಿದೆ. ಹೀಗೆ 28 ವರ್ಷಗಳ ಘಟನೆಗಳು ಇದ್ರಲ್ಲಿ ದಾಖಲಾಗಿವೆ. ಲೂಕ ಈ ಪುಸ್ತಕದಲ್ಲಿ “ಅವರು” ಅನ್ನೋ ಪದ ಬಳಸಿ ವಿಷ್ಯಗಳನ್ನ ವಿವರಿಸಿದ್ರೂ ಆಗಾಗ “ನಾವು” ಅನ್ನೋ ಪದ ಬಳಸಿದ್ದಾನೆ. “ನಾವು” ಅನ್ನೋ ಪದ, ಲೂಕ ಹೇಳಿದ ಎಷ್ಟೋ ಘಟನೆಗಳು ನಡೆಯೋವಾಗ ಅವನೂ ಅಲ್ಲಿದ್ದ ಅಂತ ಸೂಚಿಸುತ್ತೆ. (ಅ. ಕಾ. 16:8-10; 20:5; 27:1) ಲೂಕ ಏನೇನು ನಡೀತು ಅಂತ ಚೆನ್ನಾಗಿ ಪರಿಶೋಧಿಸಿ ಬರೀತಿದ್ದ. ಅದಕ್ಕೆ ಅವನು ಈ ಪುಸ್ತಕದಲ್ಲಿ ಬರೆದಿರೋ ವಿಷ್ಯಗಳನ್ನ ಪೌಲ, ಬಾರ್ನಬ, ಫಿಲಿಪ್ಪ ಮತ್ತು ಬೇರೆಯವ್ರಿಂದ ಕೇಳಿ ತಿಳ್ಕೊಂಡಿರಬಹುದು.

14 ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಏನಿದೆ? ಲೂಕ ಮೊದಲು ಬರೆದ ಲೂಕ ಅನ್ನೋ ಪುಸ್ತಕದಲ್ಲಿ ಯೇಸು ಹೇಳಿದ ಮತ್ತು ಮಾಡಿದ ವಿಷ್ಯಗಳ ಬಗ್ಗೆ ಬರೆದಿದ್ದಾನೆ. ಆದ್ರೆ ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಯೇಸುವಿನ ಶಿಷ್ಯರು ಹೇಳಿದ ಮತ್ತು ಮಾಡಿದ ವಿಷ್ಯಗಳ ಬಗ್ಗೆ ಬರೆದಿದ್ದಾನೆ. ಆ ಶಿಷ್ಯರಲ್ಲಿ ಅನೇಕರನ್ನ “ಅಷ್ಟೇನೂ ಓದಿಲ್ಲದ ಸಾಮಾನ್ಯ ಜನ ಅಂತ” ಕ್ರೈಸ್ತರಲ್ಲದವರು ನೆನಸ್ತಿದ್ರು. ಆದ್ರೆ ಇವರು ತುಂಬಾ ಅಸಾಧಾರಣ ಕೆಲಸಗಳನ್ನ ಮಾಡಿದ್ರು, ಅದ್ರ ಬಗ್ಗೆನೇ ಈ ಪುಸ್ತಕದಲ್ಲಿ ಇದೆ. (ಅ. ಕಾ. 4:13) ಚುಟುಕಾಗಿ ಹೇಳೋದಾದ್ರೆ, ಪವಿತ್ರಶಕ್ತಿಯ ಸಹಾಯದಿಂದ ಬರೆದ ಈ ಪುಸ್ತಕ ಕ್ರೈಸ್ತ ಸಭೆಯ ಸ್ಥಾಪನೆ ಮತ್ತು ಬೆಳವಣಿಗೆ ಹೇಗೆ ಆಯ್ತು ಅಂತ ತಿಳಿಸುತ್ತೆ. ಒಂದನೇ ಶತಮಾನದ ಕ್ರೈಸ್ತರು ಹೇಗೆ ಸಾರಿದ್ರು ಅನ್ನೋದ್ರ ಬಗ್ಗೆ ಅಂದ್ರೆ ಅವರ ವಿಧಾನಗಳ ಮತ್ತು ಮನೋಭಾವದ ಬಗ್ಗೆ ಈ ಪುಸ್ತಕ ತಿಳಿಸುತ್ತೆ. (ಅ. ಕಾ. 4:31; 5:42) ಸಿಹಿಸುದ್ದಿಯನ್ನ ಎಲ್ಲಾ ಕಡೆ ಹಬ್ಬಿಸೋದ್ರಲ್ಲಿ ಪವಿತ್ರಶಕ್ತಿ ಹೇಗೆ ಸಹಾಯ ಮಾಡ್ತು ಅಂತ ವರ್ಣಿಸುತ್ತೆ. (ಅ. ಕಾ. 8:29, 39, 40; 13:1-3; 16:6; 18:24, 25) ಅಪೊಸ್ತಲರ ಕಾರ್ಯ ಪುಸ್ತಕ ಬೈಬಲಿನ ಮುಖ್ಯ ವಿಷ್ಯದ ಬಗ್ಗೆನೂ ಮಾತಾಡುತ್ತೆ. ಅದೇ ಕ್ರಿಸ್ತನ ನಾಯಕತ್ವದಲ್ಲಿ ದೇವರ ಆಳ್ವಿಕೆ ಮೂಲಕ ಆಗೋ ದೇವರ ಹೆಸರಿನ ಪವಿತ್ರೀಕರಣ. ಕಡು ವಿರೋಧ ಬಂದ್ರೂ ಶಿಷ್ಯರು ಸಿಹಿಸುದ್ದಿಯನ್ನ ಹೇಗೆ ಸಾರಿದ್ರು ಅಂತ ತಿಳಿಸುತ್ತೆ.—ಅ. ಕಾ. 8:12; 19:8; 28:30, 31.

15. ಅಪೊಸ್ತಲರ ಕಾರ್ಯ ಪುಸ್ತಕ ಓದಿದ್ರೆ ಏನು ಪ್ರಯೋಜನ ಇದೆ?

15 ಬೈಬಲಿನ ಅಪೊಸ್ತಲರ ಕಾರ್ಯ ಪುಸ್ತಕವನ್ನ ಓದೋವಾಗ ಮೈ ಜುಮ್‌ ಅನ್ನುತ್ತೆ, ಅಷ್ಟೇ ಅಲ್ಲ ನಮ್ಮ ನಂಬಿಕೆನೂ ಬಲ ಆಗುತ್ತೆ. ಆರಂಭದಲ್ಲಿದ್ದ ಕ್ರೈಸ್ತರ ಹುರುಪು ಮತ್ತು ಧೈರ್ಯದ ಬಗ್ಗೆ ಧ್ಯಾನಿಸಿದ್ರೆ ನಮ್ಮಲ್ಲೂ ಹುರುಪು ಮತ್ತು ಧೈರ್ಯ ಜಾಸ್ತಿ ಆಗುತ್ತೆ. ಒಂದನೇ ಶತಮಾನದಲ್ಲಿದ್ದ ನಮ್ಮ ಆ ಸಹೋದರ ಸಹೋದರಿಯರ ನಂಬಿಕೆಯನ್ನ ಅನುಕರಿಸಬೇಕು ಅನ್ಸುತ್ತೆ. ಇದ್ರಿಂದ, ‘ಹೋಗಿ ಜನ್ರಿಗೆ ಶಿಷ್ಯರಾಗೋಕೆ ಕಲಿಸಿ’ ಅನ್ನೋ ಆಜ್ಞೆಯನ್ನ ಪಾಲಿಸೋಕೆ ಸಹಾಯ ಆಗುತ್ತೆ. ಅಪೊಸ್ತಲರ ಕಾರ್ಯ ಪುಸ್ತಕವನ್ನ ಚೆನ್ನಾಗಿ ಓದಿ ಅದ್ರಲ್ಲಿರೋ ವಿಷ್ಯಗಳನ್ನ ತಿಳ್ಕೊಬೇಕು ಅಂತ ಈ ಪುಸ್ತಕವನ್ನ ರಚಿಸಲಾಗಿದೆ.

ಅಧ್ಯಯನ ಮಾಡೋಕೆ ಅದ್ಭುತವಾದ ಪುಸ್ತಕ

16. ಈ ಪುಸ್ತಕದ ಮೂರು ಉದ್ದೇಶ ಏನು?

16 ಈ ಪುಸ್ತಕದ ಉದ್ದೇಶ ಏನು? (1) ಸಾರೋ ಮತ್ತು ಕಲಿಸೋ ಕೆಲಸಕ್ಕೆ ಯೆಹೋವ ತನ್ನ ಪವಿತ್ರಶಕ್ತಿಯ ಮೂಲಕ ಬೆಂಬಲ ಕೊಡ್ತಾನೆ ಅನ್ನೋ ನಮ್ಮ ಭರವಸೆಯನ್ನ ಹೆಚ್ಚಿಸೋದು, (2) ಒಂದನೇ ಶತಮಾನದ ಶಿಷ್ಯರ ಮಾದರಿ ಬಗ್ಗೆ ತಿಳ್ಕೊಂಡು ಸೇವೆ ಮಾಡೋ ನಮ್ಮ ಹುರುಪನ್ನ ಹೆಚ್ಚಿಸೋದು, (3) ಸಭೆ ಮತ್ತು ಸಾರೋ ಕೆಲಸನ ನೋಡ್ಕೊಳ್ಳೋರ ಮೇಲೆ, ಯೆಹೋವನ ಸಂಘಟನೆ ಮೇಲೆ ನಮಗಿರೋ ಗೌರವವನ್ನ ಹೆಚ್ಚಿಸೋದು.

17, 18. (ಎ) ಈ ಪುಸ್ತಕ ಹೇಗಿದೆ? (ಬಿ) ವೈಯಕ್ತಿಕ ಅಧ್ಯಯನದಲ್ಲಿ ಸಹಾಯವಾಗೋ ಯಾವ ವೈಶಿಷ್ಟ್ಯಗಳು ಇದರಲ್ಲಿವೆ?

17 ಈ ಪುಸ್ತಕ ಹೇಗಿದೆ? ಇದ್ರಲ್ಲಿ ಎಂಟು ವಿಭಾಗಗಳಿವೆ. ಪ್ರತಿಯೊಂದು ವಿಭಾಗ ಅಪೊಸ್ತಲರ ಕಾರ್ಯ ಪುಸ್ತಕದ ಸ್ವಲ್ಪ ಭಾಗವನ್ನ ಆವರಿಸುತ್ತೆ. ಅಪೊಸ್ತಲರ ಕಾರ್ಯ ಪುಸ್ತಕದ ವಚನಗಳನ್ನ ಒಂದೊಂದಾಗಿ ಚರ್ಚಿಸೋದು ಈ ಪ್ರಕಾಶನದ ಗುರಿಯಲ್ಲ. ಬದಲಿಗೆ, ಈ ಬೈಬಲ್‌ ಪುಸ್ತಕದಲ್ಲಿರೋ ಘಟನೆಗಳಿಂದ ನಮಗಿರೋ ಪಾಠ ಏನು ಮತ್ತು ಅವನ್ನ ನಾವು ಅನ್ವಯಿಸೋದು ಹೇಗೆ ಅಂತ ಅರ್ಥಮಾಡಿಸೋದೇ ಇದರ ಗುರಿ. ಪ್ರತಿಯೊಂದು ಅಧ್ಯಾಯದ ಶೀರ್ಷಿಕೆ ಕೆಳಗಿರೋ ವಾಕ್ಯದಲ್ಲಿ ಆ ಅಧ್ಯಾಯದ ಸಾರಾಂಶ ಇದೆ. ಅಪೊಸ್ತಲರ ಕಾರ್ಯ ಪುಸ್ತಕದ ಯಾವ ವಚನಗಳನ್ನ ಚರ್ಚಿಸಲಾಗುತ್ತೆ ಅಂತ ಅದರ ಕೆಳಗೆ ಕೊಡಲಾಗಿದೆ.

18 ವೈಯಕ್ತಿಕ ಬೈಬಲ್‌ ಅಧ್ಯಯನದಲ್ಲಿ ಸಹಾಯ ಆಗೋ ಬೇರೆ ವೈಶಿಷ್ಟ್ಯಗಳೂ ಈ ಪುಸ್ತಕದಲ್ಲಿವೆ. ಅಪೊಸ್ತಲರ ಕಾರ್ಯ ಪುಸ್ತಕದ ರೋಮಾಂಚಕಾರಿ ಘಟನೆಗಳನ್ನ ಕಣ್ಣಿಗೆ ಕಟ್ಟೋ ತರ ತೋರಿಸೋ ಸುಂದರ ಚಿತ್ರಗಳಿವೆ. ನೀವು ಈ ಬೈಬಲ್‌ ಪುಸ್ತಕದ ಬಗ್ಗೆ ಧ್ಯಾನಿಸುವಾಗ ಆ ಘಟನೆಗಳನ್ನ ಚಿತ್ರಿಸ್ಕೊಳ್ಳೋಕೆ ಇವು ನಿಮಗೆ ಸಹಾಯ ಮಾಡುತ್ತೆ. ಅನೇಕ ಅಧ್ಯಾಯಗಳಲ್ಲಿ ಹೆಚ್ಚಿನ ಮಾಹಿತಿ ಇರೋ ಚೌಕಗಳಿವೆ. ಕೆಲವು ಚೌಕಗಳಲ್ಲಿ ನಂಬಿಕೆಯಲ್ಲಿ ಮಾದರಿಗಳಾಗಿದ್ದ ಬೈಬಲ್‌ ಕಾಲದ ವ್ಯಕ್ತಿಗಳ ಬಗ್ಗೆ ಇದೆ. ಇನ್ನೂ ಕೆಲವು ಚೌಕಗಳಲ್ಲಿ ಅಪೊಸ್ತಲರ ಕಾರ್ಯ ಪುಸ್ತಕದಲ್ಲಿರೋ ಸ್ಥಳಗಳು, ಘಟನೆಗಳು, ಪದ್ಧತಿಗಳು ಅಥವಾ ಇತರ ವ್ಯಕ್ತಿಗಳ ಬಗ್ಗೆ ಮಾಹಿತಿ ಇದೆ.

ಜನರ ಜೀವ ಅಪಾಯದಲ್ಲಿ ಇರೋದ್ರಿಂದ ನಿಮಗೆ ಕೊಟ್ಟಿರೋ ಟೆರಿಟೊರಿಯಲ್ಲಿ ಹುರುಪಿಂದ ಸಾರಿ

19. ನಾವು ಆಗಾಗ ಏನಂತ ಸ್ವಪರೀಕ್ಷೆ ಮಾಡ್ಕೊಬೇಕು?

19 ಅಲ್ಲದೇ ಪ್ರಾಮಾಣಿಕವಾಗಿ ಸ್ವಪರೀಕ್ಷೆ ಮಾಡ್ಕೊಳ್ಳೋಕೆ ಈ ಪ್ರಕಾಶನ ಸಹಾಯ ಮಾಡುತ್ತೆ. ನೀವು ಪ್ರಚಾರಕರಾಗಿ ಎಷ್ಟೇ ವರ್ಷಗಳಾಗಿದ್ರೂ ನೀವು ಜೀವನದಲ್ಲಿ ಯಾವುದಕ್ಕೆ ಮೊದಲನೇ ಸ್ಥಾನ ಕೊಡ್ತಿದ್ದೀರ, ಸೇವೆ ಬಗ್ಗೆ ನಿಮ್ಮ ಮನೋಭಾವ ಏನು ಅಂತ ಆಗಾಗ ಪರೀಕ್ಷಿಸ್ಕೊಳ್ಳಿ. (2 ಕೊರಿಂ. 13:5) ಅದಕ್ಕಾಗಿ, ಹೀಗೆ ಕೇಳ್ಕೊಳ್ಳಿ: ‘ದೀಕ್ಷಾಸ್ನಾನ ತಗೊಂಡಾಗ ಸೇವೆ ಮಾಡೋಕೆ ಇದ್ದ ಹುರುಪು ಈಗ್ಲೂ ಇದ್ಯಾ? (1 ಕೊರಿಂ. 7:29-31) ನಾನು ಸಿಹಿಸುದ್ದಿ ಸಾರೋವಾಗ ಬಲವಾದ ನಂಬಿಕೆಯಿಂದ ಮಾತಾಡ್ತೀನಾ? (1 ಥೆಸ. 1:5, 6) ನನ್ನಿಂದಾದಷ್ಟು ಜನ್ರಿಗೆ ಸಿಹಿಸುದ್ದಿ ಸಾರ್ತಾ ಇದ್ದೀನಾ, ಶಿಷ್ಯರಾಗೋಕೆ ಕಲಿಸ್ತಾ ಇದ್ದೀನಾ?’—ಕೊಲೊ. 3:23.

20, 21. (ಎ) ನಮಗೆ ಕೊಟ್ಟಿರೋ ಸಾರೋ ಕೆಲಸ ಯಾಕೆ ತುಂಬ ಮುಖ್ಯ? (ಬಿ) ನಮ್ಮ ದೃಢನಿರ್ಧಾರ ಏನಾಗಿರಬೇಕು?

20 ಸಾರೋ ಮತ್ತು ಕಲಿಸೋ ಕೆಲಸ ತುಂಬ ಮುಖ್ಯ ಅಂತ ಯಾವತ್ತೂ ಮರೆಯದಿರೋಣ. ಯಾಕಂದ್ರೆ ಈ ಲೋಕ ಬೇಗ ನಾಶ ಆಗುತ್ತೆ. ಒಂದೊಂದು ದಿನ ಕಳೆದ ಹಾಗೆ ನಾವು ಆ ನಾಶಕ್ಕೆ ಹತ್ರ ಆಗ್ತಿದ್ದೀವಿ. ತುಂಬಾ ಜನರ ಜೀವ ಅಪಾಯದಲ್ಲಿ ಇದೆ. ಅವರು ಅರ್ಮಗೆದ್ದೋನ್‌ ಪಾರಾಗಬೇಕಾದ್ರೆ ಏನ್‌ ಮಾಡಬೇಕು ಅಂತ ನಾವು ಅವ್ರಿಗೆ ಹೇಳಬೇಕು. ನಮ್ಮ ಸಂದೇಶಕ್ಕೆ ಕಿವಿಗೊಡೋ ಒಳ್ಳೇ ಮನಸ್ಸಿನ ಜನ ಇನ್ನೂ ಎಷ್ಟಿದ್ದಾರೋ ನಮಗೆ ಗೊತ್ತಿಲ್ಲ. (ಅ. ಕಾ. 13:48) ಆದ್ರೆ ಕಾಲ ಮಿಂಚಿ ಹೋಗೋ ಮುಂಚೆ ಅಂಥವರಿಗೆ ಸಹಾಯ ಮಾಡೋದು ನಮ್ಮ ಜವಾಬ್ದಾರಿ.—1 ತಿಮೊ. 4:16.

21 ಹಾಗಾಗಿ ಒಂದನೇ ಶತಮಾನದ ಹುರುಪಿಂದ ದೇವರ ಆಳ್ವಿಕೆ ಬಗ್ಗೆ ಸಾರಿದ ಪ್ರಚಾರಕರ ಮಾದರಿಯನ್ನ ನಾವು ಅನುಕರಿಸೋದು ತುಂಬ ಮುಖ್ಯ. ಈ ಪುಸ್ತಕವನ್ನ ಚೆನ್ನಾಗಿ ಅಧ್ಯಯನ ಮಾಡಿದ್ರೆ ನಮ್ಮಲ್ಲಿರೋ ಹುರುಪು ಮತ್ತು ಧೈರ್ಯ ಮುಂಚೆಗಿಂತ ಜಾಸ್ತಿ ಆಗುತ್ತೆ. ‘ದೇವ್ರ ಆಳ್ವಿಕೆ ಬಗ್ಗೆ ಚೆನ್ನಾಗಿ ವಿವರಿಸ್ತಾ’ ಇರಬೇಕು ಅನ್ನೋ ನಮ್ಮ ನಿರ್ಧಾರ ಬಲ ಆಗುತ್ತೆ.—ಅ. ಕಾ. 28:23.