ಅಧ್ಯಾಯ 28
‘ಇಡೀ ಭೂಮಿಯಲ್ಲಿ ಸಾಕ್ಷಿ ಕೊಡ್ತೀರ’
ಒಂದನೇ ಶತಮಾನದಲ್ಲಿ ಯೇಸುವಿನ ಶಿಷ್ಯರು ಶುರುಮಾಡಿದ ಕೆಲಸವನ್ನ ಯೆಹೋವನ ಸಾಕ್ಷಿಗಳು ಮುಂದುವರಿಸ್ತಿದ್ದಾರೆ
1. ಆರಂಭದ ಕ್ರೈಸ್ತರು ಮತ್ತು ಯೆಹೋವನ ಸಾಕ್ಷಿಗಳ ಮಧ್ಯ ಯಾವ ಹೋಲಿಕೆಗಳು ಇವೆ?
ಆರಂಭದ ಕ್ರೈಸ್ತರು ಹುರುಪಿಂದ ಸಾರಿದ್ರು. ಪವಿತ್ರಶಕ್ತಿಯ ಮಾರ್ಗದರ್ಶನ ಮತ್ತು ಸಹಾಯ ಪಡೀಬೇಕು ಅಂತ ಅವ್ರ ಹೃದಯ ಪ್ರಚೋದಿಸ್ತು. ಹಿಂಸೆನೂ ಅವರು ಸಾರೋದನ್ನ ತಡಿಯೋಕೆ ಆಗಲಿಲ್ಲ. ಹಾಗಾಗಿ ದೇವರ ಹೇರಳ ಆಶೀರ್ವಾದಗಳನ್ನ ಅವರು ಪಡೆದ್ರು. ಇದು ಇವತ್ತಿನ ಯೆಹೋವನ ಸಾಕ್ಷಿಗಳ ವಿಷ್ಯದಲ್ಲೂ ನಿಜ.
2, 3. ಅಪೊಸ್ತಲರ ಕಾರ್ಯ ಪುಸ್ತಕದ ವಿಶೇಷತೆ ಏನು?
2 ತುಂಬ ರೋಮಾಂಚನಕಾರಿ, ನಂಬಿಕೆ ಬಲಪಡಿಸೋ ಘಟನೆಗಳಿಂದ ತುಂಬಿರೋ ಅಪೊಸ್ತಲರ ಕಾರ್ಯ ಪುಸ್ತಕವನ್ನ ಓದಿದಾಗ ನಿಮಗೆ ಖಂಡಿತ ಪ್ರೋತ್ಸಾಹ ಸಿಕ್ಕಿರುತ್ತೆ. ಈ ಪುಸ್ತಕ ತುಂಬ ವಿಶೇಷವಾಗಿದೆ. ಯಾಕಂದ್ರೆ ಆರಂಭದ ಕ್ರೈಸ್ತರ ಇತಿಹಾಸವನ್ನ ದೇವರು ಬರೆಸಿಟ್ಟಿರೋ ಪುಸ್ತಕ ಇದೊಂದೇ ಆಗಿದೆ.
3 ಈ ಪುಸ್ತಕದಲ್ಲಿ 32 ದೇಶ, 54 ಪಟ್ಟಣ ಮತ್ತು 9 ದ್ವೀಪಗಳಲ್ಲಿರೋ ಒಟ್ಟು 95 ಜನ್ರ ಬಗ್ಗೆ ಇದೆ. ಸಾಮಾನ್ಯ ಜನರು, ಜಂಬದಿಂದ ಮೆರೀತಿದ್ದ ಧಾರ್ಮಿಕ ವ್ಯಕ್ತಿಗಳು, ಅಹಂಕಾರಿ ರಾಜಕಾರಣಿಗಳು, ಕ್ರೂರ ಹಿಂಸಕರು ಹೀಗೆ ಎಲ್ಲಾ ರೀತಿಯ ಜನ್ರ ರೋಮಾಂಚಕ ಘಟನೆಗಳು ಇದ್ರಲ್ಲಿದೆ. ಅದಕ್ಕಿಂತ ಮುಖ್ಯವಾಗಿ, ಒಂದನೇ ಶತಮಾನದಲ್ಲಿದ್ದ ಸಹೋದರ ಸಹೋದರಿಯರಿಗೆ ಜೀವನದಲ್ಲಿ ಸಾಮಾನ್ಯವಾಗಿ ಎಲ್ರಿಗೂ ಬರೋ ತರ ಸಮಸ್ಯೆಗಳು ಇದ್ರೂ ಅವರು ಸಿಹಿಸುದ್ದಿಯನ್ನ ಹೇಗೆ ಹುರುಪಿಂದ ಸಾರಿದ್ರು ಅಂತ ಇದೆ.
4. ಒಂದನೇ ಶತಮಾನದ ನಂಬಿಗಸ್ತ ಸಾಕ್ಷಿಗಳ ಜೊತೆ ನಮಗೊಂದು ವಿಶೇಷ ಬಂಧ ಇದೆ ಅನ್ನೋದಕ್ಕೆ ಕಾರಣ ಏನು?
4 ಈ ಪುಸ್ತಕದಲ್ಲಿ ಹುರುಪಿಂದ ಸಾರೋದಕ್ಕೆ ಹೆಸ್ರುವಾಸಿಯಾಗಿದ್ದ ಅಪೊಸ್ತಲ ಪೇತ್ರ ಮತ್ತು ಪೌಲ, ಪ್ರಿಯ ವೈದ್ಯ ಲೂಕ, ಧಾರಾಳ ಮನಸ್ಸಿನ ಬಾರ್ನಬ, ಧೈರ್ಯಶಾಲಿ ಸ್ತೆಫನ, ದಯೆ-ಪ್ರೀತಿ ತುಂಬಿದ ತಬಿಥಾ, ಅತಿಥಿ ಸತ್ಕಾರ ಮಾಡಿದ ಲುದ್ಯ ಮತ್ತು ಬೇರೆ ನಂಬಿಗಸ್ತ ಸಾಕ್ಷಿಗಳ ಬಗ್ಗೆ ಓದ್ತೀವಿ. ಈಗ ಇದೆಲ್ಲಾ ನಡೆದು ಸುಮಾರು 2,000 ವರ್ಷ ಆಗಿದೆ. ಆದ್ರೂ ನಮಗೆ ಅವ್ರ ಜೊತೆ ಒಂದು ವಿಶೇಷ ಬಂಧ ಇದೆ. ಯಾಕೆ? ಯಾಕಂದ್ರೆ ಜನ್ರಿಗೆ ಶಿಷ್ಯರಾಗೋಕೆ ಕಲಿಸಬೇಕು ಅನ್ನೋ ಆಜ್ಞೆಯನ್ನ ಯೇಸು ನಮಗೂ ಕೊಟ್ಟಿದ್ದಾನೆ. (ಮತ್ತಾ. 28:19, 20) ಈ ಕೆಲಸದಲ್ಲಿ ನಮಗೂ ಪಾಲು ಸಿಕ್ಕಿರೋದು ನಿಜಕ್ಕೂ ದೊಡ್ಡ ಆಶೀರ್ವಾದ!
5. ಯೇಸು ಕ್ರಿಸ್ತನ ಶಿಷ್ಯರು ಮೊದಲು ಎಲ್ಲಿ ಸಾರೋಕೆ ಶುರು ಮಾಡಿದ್ರು?
5 ಯೇಸು ತನ್ನ ಶಿಷ್ಯರಿಗೆ, “ಪವಿತ್ರಶಕ್ತಿ ನಿಮ್ಮ ಮೇಲೆ ಬಂದಾಗ ನಿಮಗೆ ಬಲ ಸಿಗುತ್ತೆ. ಆಗ ನೀವು ಯೆರೂಸಲೇಮ್, ಯೂದಾಯ, ಸಮಾರ್ಯ ಮತ್ತು ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ” ಅಂತ ಆಜ್ಞೆ ಕೊಟ್ಟನು. (ಅ. ಕಾ. 1:8) ಅದ್ರ ಬಗ್ಗೆ ಸ್ವಲ್ಪ ಯೋಚ್ನೆ ಮಾಡಿ. ಮೊದಲು ಪವಿತ್ರಶಕ್ತಿ ‘ಯೆರೂಸಲೇಮಲ್ಲಿ’ ಸಾರೋಕೆ ಶಿಷ್ಯರಿಗೆ ಬಲ ಕೊಡ್ತು. (ಅ. ಕಾ. 1:1–8:3) ಆಮೇಲೆ ಅವರು ಪವಿತ್ರಶಕ್ತಿಯ ಮಾರ್ಗದರ್ಶನದಿಂದ “ಯೂದಾಯ, ಸಮಾರ್ಯ” ಪ್ರದೇಶಗಳಲ್ಲಿ ಸಾರಿದ್ರು. (ಅ. ಕಾ. 8:4–13:3) ಆಮೇಲೆ ಅವರು “ಇಡೀ ಭೂಮಿಯಲ್ಲಿ” ಸಾಕ್ಷಿ ಕೊಟ್ರು.—ಅ. ಕಾ. 13:4–28:31.
6, 7. ಸಿಹಿಸುದ್ದಿ ಸಾರೋ ವಿಷ್ಯದಲ್ಲಿ ಒಂದನೇ ಶತಮಾನದ ಕ್ರೈಸ್ತರಿಗಿಂತ ನಮಗೆ ಯಾವ ಅನುಕೂಲತೆಗಳಿವೆ?
6 ಒಂದನೇ ಶತಮಾನದ ಸಹೋದರರಿಗೆ ಸಾಕ್ಷಿ ಕೊಡೋದು ಅಷ್ಟು ಸುಲಭ ಆಗಿರಲಿಲ್ಲ. ಯಾಕಂದ್ರೆ ಅವ್ರ ಹತ್ರ ಇಡೀ ಬೈಬಲ್ ಇರಲಿಲ್ಲ. ಕ್ರಿ.ಶ. 41ರ ತನಕ ಅಂತೂ ಮತ್ತಾಯನ ಪುಸ್ತಕನೂ ಇರಲಿಲ್ಲ. ಕ್ರಿ.ಶ. 61ರಲ್ಲಿ ಲೂಕ ಅಪೊಸ್ತಲರ ಕಾರ್ಯ ಪುಸ್ತಕವನ್ನ ಬರೆದು ಮುಗಿಸೋದಕ್ಕೂ ಮುಂಚೆ ಪೌಲ ಕೆಲವು ಪತ್ರಗಳನ್ನ ಬರೆದಿದ್ದ. ಆರಂಭದ ಕ್ರೈಸ್ತರ ಹತ್ರ ಇಡೀ ಬೈಬಲಿನ ವೈಯಕ್ತಿಕ ಪ್ರತಿನೂ ಇರಲಿಲ್ಲ, ಆಸಕ್ತಿ ತೋರಿಸಿದವ್ರಿಗೆ ಕೊಡೋಕೆ ಯಾವ ಪ್ರಕಾಶನನೂ ಇರಲಿಲ್ಲ. ಈ ಯೆಹೂದಿ ಕ್ರೈಸ್ತರು ಯೇಸು ಕ್ರಿಸ್ತನ ಶಿಷ್ಯರಾಗೋದಕ್ಕಿಂತ ಮುಂಚೆ ಸಭಾಮಂದಿರಗಳಲ್ಲಿ ಬೈಬಲಿನ ಹೀಬ್ರು ಪುಸ್ತಕಗಳನ್ನ ಓದೋದನ್ನ ಬರೀ ಕೇಳಿಸ್ಕೊಂಡಿದ್ರು. (2 ಕೊರಿಂ. 3:14-16) ಸಾರೋವಾಗ ವಚನಗಳನ್ನ ನೆನಪಿಟ್ಕೊಂಡು ಹೇಳಬೇಕಂದ್ರೆ ಅವರು ಎಷ್ಟು ಚೆನ್ನಾಗಿ ಅಧ್ಯಯನ ಮಾಡಬೇಕಿತ್ತಲ್ವಾ.
7 ಇವತ್ತು ನಮ್ಮಲ್ಲಿ ಹೆಚ್ಚಿನವರ ಹತ್ರ ಬೈಬಲಿನ ವೈಯಕ್ತಿಕ ಪ್ರತಿ ಇದೆ ಮತ್ತು ಸಾಕಷ್ಟು ಬೈಬಲ್ ಸಾಹಿತ್ಯಗಳೂ ಇವೆ. ನಾವು 240 ದೇಶಗಳಲ್ಲಿ ಮತ್ತು ಬೇರೆ ಬೇರೆ ಭಾಷೆಗಳಲ್ಲಿ ಸಿಹಿಸುದ್ದಿಯನ್ನ ಸಾರಿ ಜನ್ರಿಗೆ ಯೇಸುವಿನ ಶಿಷ್ಯರಾಗೋಕೆ ಕಲಿಸ್ತಾ ಇದ್ದೀವಿ.
ಪವಿತ್ರಶಕ್ತಿಯಿಂದ ಬಲ ಸಿಗುತ್ತೆ
8, 9. (ಎ) ಪವಿತ್ರಶಕ್ತಿಯ ಸಹಾಯದಿಂದ ಯೇಸುವಿನ ಶಿಷ್ಯರು ಏನು ಮಾಡಿದ್ರು? (ಬಿ) ದೇವರ ಪವಿತ್ರಶಕ್ತಿಯ ಸಹಾಯದಿಂದ ನಂಬಿಗಸ್ತ ಆಳು ಏನು ಮಾಡ್ತಿದೆ?
8 ಯೇಸು ತನ್ನ ಬಗ್ಗೆ ಸಾಕ್ಷಿ ಕೊಡೋಕೆ ಶಿಷ್ಯರಿಗೆ ಆಜ್ಞೆ ಕೊಟ್ಟಾಗ ಹೀಗೆ ಹೇಳಿದನು: “ಪವಿತ್ರಶಕ್ತಿ ನಿಮ್ಮ ಮೇಲೆ ಬಂದಾಗ ನಿಮಗೆ ಬಲ ಸಿಗುತ್ತೆ.” ಪವಿತ್ರಶಕ್ತಿ ಅಥವಾ ದೇವರ ಶಕ್ತಿಯ ಮಾರ್ಗದರ್ಶನದಿಂದ ಯೇಸುವಿನ ಶಿಷ್ಯರು ಮುಂದೆ ಇಡೀ ಲೋಕದಲ್ಲಿ ಆತನ ಬಗ್ಗೆ ಸಾಕ್ಷಿ ಕೊಟ್ರು. ಪೇತ್ರ ಮತ್ತು ಪೌಲ ಪವಿತ್ರಶಕ್ತಿಯ ಸಹಾಯದಿಂದ ಕಾಯಿಲೆಗಳನ್ನ ವಾಸಿ ಮಾಡಿದ್ರು, ಕೆಟ್ಟ ದೇವದೂತರನ್ನ ಬಿಡಿಸಿದ್ರು, ಸತ್ತವರಿಗೆ ಮತ್ತೆ ಜೀವ ಕೊಟ್ರು! ಅವರು ಪವಿತ್ರಶಕ್ತಿಯ ಬಲದಿಂದ ಇದಕ್ಕಿಂತ ಮುಖ್ಯವಾದ ಒಂದು ಕೆಲಸವನ್ನೂ ಮಾಡಿದ್ರು. ಅಪೊಸ್ತಲರು ಮತ್ತು ಬೇರೆ ಶಿಷ್ಯರು ಶಾಶ್ವತ ಜೀವಕ್ಕೆ ನಡೆಸೋ ಸರಿಯಾದ ಜ್ಞಾನವನ್ನ ಬೇರೆಯವ್ರಿಗೆ ಕಲಿಸಿದ್ರು.—ಯೋಹಾ. 17:3.
9 ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದ ಸಮಯದಲ್ಲಿ ಯೇಸುವಿನ ಶಿಷ್ಯರಿಗೆ “ಪವಿತ್ರಶಕ್ತಿ ಸಿಕ್ತು. ಇದ್ರಿಂದ ಅವರು ಬೇರೆಬೇರೆ ಭಾಷೆ ಮಾತಾಡೋಕೆ ಶುರುಮಾಡಿದ್ರು.” ಹೀಗೆ ಅವರು “ದೇವರ ಅದ್ಭುತ ಕೆಲಸಗಳ ಬಗ್ಗೆ” ಬೇರೆಯವ್ರಿಗೆ ಹೇಳಿದ್ರು. (ಅ. ಕಾ. 2:1-4, 11) ಇವತ್ತು ನಮಗೆ ಅದ್ಭುತವಾಗಿ ಬೇರೆ ಬೇರೆ ಭಾಷೆಗಳಲ್ಲಿ ಮಾತಾಡೋ ಶಕ್ತಿ ಇಲ್ಲ. ಆದ್ರೂ ದೇವರ ಪವಿತ್ರಶಕ್ತಿಯ ಸಹಾಯದಿಂದ ನಂಬಿಗಸ್ತ ಆಳು ಬೇರೆ ಬೇರೆ ಭಾಷೆಗಳಲ್ಲಿ ಬೈಬಲ್ ಆಧಾರಿತ ಪ್ರಕಾಶನಗಳನ್ನ ತಯಾರಿ ಮಾಡಿ ಕೊಡ್ತಿದೆ. ಉದಾಹರಣೆಗೆ, ಪ್ರತಿ ತಿಂಗಳು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಕೋಟಿಗಟ್ಟಲೆ ಪ್ರತಿಗಳು ಪ್ರಿಂಟ್ ಆಗ್ತಿದೆ. ಅಷ್ಟೇ ಅಲ್ಲ, ನಮ್ಮ ವೆಬ್‌ಸೈಟ್ jw.orgನಲ್ಲಿ ಬೈಬಲ್ ಆಧಾರಿತ ಪ್ರಕಾಶನಗಳು ಮತ್ತು ವಿಡಿಯೋಗಳು 1,000ಕ್ಕಿಂತ ಹೆಚ್ಚು ಭಾಷೆಯಲ್ಲಿವೆ. ಇದೆಲ್ಲ ನಮಗೆ “ದೇವರ ಅದ್ಭುತ ಕೆಲಸಗಳ ಬಗ್ಗೆ” ಎಲ್ಲಾ ದೇಶ, ಕುಲ, ಭಾಷೆಗಳ ಜನ್ರಿಗೆ ಸಾರೋಕೆ ಸಹಾಯ ಮಾಡಿದೆ.—ಪ್ರಕ. 7:9.
10. ಬೈಬಲ್ ಭಾಷಾಂತರ ಕೆಲಸದಲ್ಲಿ 1989ರಿಂದ ಯಾವ ಪ್ರಗತಿಯಾಗಿದೆ?
10 ನಂಬಿಗಸ್ತ ಆಳು 1989ರಿಂದ ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ ತುಂಬ ಭಾಷೆಗಳಲ್ಲಿ ಸಿಗೋ ತರ ಮಾಡಿದೆ. ಈ ಬೈಬಲ್ ಈಗಾಗ್ಲೇ 200ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಭಾಷಾಂತರ ಆಗಿದೆ. ಇದ್ರ ಕೋಟಿಗಟ್ಟಲೆ ಪ್ರತಿಗಳು ಪ್ರಿಂಟ್ ಆಗಿದೆ, ಇನ್ನೂ ತುಂಬ ಪ್ರತಿಗಳು ಪ್ರಿಂಟ್ ಆಗ್ತಿದೆ. ಇದಕ್ಕೆಲ್ಲ ಕಾರಣ ದೇವರು ಮತ್ತು ಆತನ ಪವಿತ್ರಶಕ್ತಿ!
11. ಬೈಬಲ್ ಆಧಾರಿತ ಪ್ರಕಾಶನಗಳು ಹೇಗೆ ಭಾಷಾಂತರ ಆಗ್ತಿದೆ?
11 ಸಾವಿರಾರು ಸ್ವಯಂಸೇವಕರು 150ಕ್ಕೂ ಹೆಚ್ಚಿನ ದೇಶ-ದ್ವೀಪಗಳಲ್ಲಿ ಭಾಷಾಂತರ ಕೆಲಸವನ್ನ ಮಾಡ್ತಿದ್ದಾರೆ. ಇದ್ರ ಬಗ್ಗೆ ಆಶ್ಚರ್ಯಪಡೋ ಅಗತ್ಯ ಇಲ್ಲ. ಯಾಕಂದ್ರೆ ಭೂಮಿ ಮೇಲಿರೋ ಇದೊಂದೇ ಸಂಘಟನೆಗೆ ಪವಿತ್ರಶಕ್ತಿಯ ಮಾರ್ಗದರ್ಶನ ಇದೆ. ಪವಿತ್ರಶಕ್ತಿಯ ಸಹಾಯದಿಂದ ಅದು ಯೆಹೋವ ದೇವರ, ಆತನ ಮೆಸ್ಸೀಯ ರಾಜನ ಮತ್ತು ಈಗಾಗ್ಲೇ ಸ್ಥಾಪನೆ ಆಗಿರೋ ಸ್ವರ್ಗೀಯ ಆಳ್ವಿಕೆ ಬಗ್ಗೆ ಇಡೀ ಜಗತ್ತಲ್ಲಿ ಕೂಲಂಕಷವಾಗಿ ಅಂದ್ರೆ “ಚೆನ್ನಾಗಿ” ಸಾಕ್ಷಿ ಕೊಡೋ ಕೆಲಸವನ್ನ ಮಾಡ್ತಿದೆ.—ಅ. ಕಾ. 28:23.
12. ಪೌಲ ಮತ್ತು ಬೇರೆ ಕ್ರೈಸ್ತರು ಸಾಕ್ಷಿ ಕೊಡೋ ಕೆಲಸವನ್ನ ಮಾಡೋಕೆ ಹೇಗೆ ಸಾಧ್ಯ ಆಯ್ತು?
12 ಪೌಲ ಪಿಸಿದ್ಯದ ಅಂತಿಯೋಕ್ಯದಲ್ಲಿ ಯೆಹೂದ್ಯರಿಗೆ ಮತ್ತು ಯೆಹೂದ್ಯರಲ್ಲದ ಜನ್ರಿಗೆ ಸಾಕ್ಷಿ ಕೊಟ್ಟಾಗ “ಶಾಶ್ವತ ಜೀವ ಪಡೆಯೋ ಯೋಗ್ಯತೆ ಇದ್ದ ಒಳ್ಳೇ ಮನಸ್ಸಿನ ಜನ್ರೆಲ್ಲ ಶಿಷ್ಯರಾದ್ರು” ಅಂತ ಲೂಕ ಹೇಳಿದ್ದಾನೆ. (ಅ. ಕಾ. 13:48) ಲೂಕ ಅಪೊಸ್ತಲರ ಕಾರ್ಯ ಪುಸ್ತಕದ ಕೊನೇಲಿ, ಪೌಲ “ಯಾವುದೇ ಅಡ್ಡಿತಡೆ ಇಲ್ಲದೆ ಧೈರ್ಯವಾಗಿ ದೇವ್ರ ಆಳ್ವಿಕೆ ಬಗ್ಗೆ ಸಾರ್ತಿದ್ದ” ಅಂತ ಹೇಳಿದ್ದಾನೆ. (ಅ. ಕಾ. 28:31) ಆಗ ಪೌಲ ಎಲ್ಲಿ ಸಾರ್ತಿದ್ದ? ಆಗಿನ ಲೋಕಸಾಮ್ರಾಜ್ಯದ ರಾಜಧಾನಿಯಾಗಿದ್ದ ರೋಮ್‌ನಲ್ಲಿ! ಅಲ್ಲಿ ಯೇಸುವಿನ ಶಿಷ್ಯರು ಬೇರೆ ಬೇರೆ ವಿಧಾನಗಳನ್ನ ಬಳಸಿ ಸಾರಿದ್ರು. ಇದನ್ನೆಲ್ಲ ಅವರು ಪವಿತ್ರಶಕ್ತಿಯ ಸಹಾಯ ಮತ್ತು ಮಾರ್ಗದರ್ಶನದಿಂದ ಮಾಡಿದ್ರು.
ಹಿಂಸೆ ಬಂದ್ರೂ ಸಾರೋದನ್ನ ಮುಂದುವರಿಸಿದ್ರು
13. ಹಿಂಸೆ ಬಂದಾಗ ನಾವು ಯಾಕೆ ಪ್ರಾರ್ಥನೆ ಮಾಡಬೇಕು?
13 ಯೇಸುವಿನ ಆರಂಭದ ಕ್ರೈಸ್ತರಿಗೆ ಹಿಂಸೆ ಬಂದಾಗ ತಮಗೆ ಧೈರ್ಯ ಕೊಡಪ್ಪಾ ಅಂತ ದೇವರನ್ನ ಬೇಡ್ಕೊಂಡ್ರು. ಆಗ ಏನಾಯ್ತು? ದೇವರು ಅವ್ರಿಗೆ ಪವಿತ್ರಶಕ್ತಿಯನ್ನ ಕೊಟ್ಟನು. ಇದ್ರಿಂದ ಅವರು ದೇವರ ವಾಕ್ಯದ ಬಗ್ಗೆ ಧೈರ್ಯವಾಗಿ ಮಾತಾಡಿದ್ರು. (ಅ. ಕಾ. 4:18-31) ಇವತ್ತು ನಮಗೂ ಕೂಡ ಹಿಂಸೆ ಬಂದಾಗ, ಸಾರುತ್ತಾ ಇರೋಕೆ ಬೇಕಾದ ಬಲ ಮತ್ತು ವಿವೇಕ ಕೊಡಪ್ಪಾ ಅಂತ ದೇವರಿಗೆ ಪ್ರಾರ್ಥನೆ ಮಾಡ್ತೀವಿ. (ಯಾಕೋ. 1:2-8) ದೇವರು ನಮಗೆ ಪವಿತ್ರಶಕ್ತಿ ಕೊಟ್ಟು ಸಹಾಯ ಮಾಡೋದ್ರಿಂದ ಸೇವೆಯನ್ನ ಮುಂದುವರಿಸ್ಕೊಂಡು ಹೋಗೋಕೆ ಆಗ್ತಿದೆ. ನಮಗೆ ತುಂಬ ವಿರೋಧ ಬರಲಿ, ಕ್ರೂರವಾಗಿ ಹಿಂಸೆ ಕೊಡಲಿ ಇನ್ಯಾವುದೇ ವಿಷ್ಯ ಆಗಲಿ ಸಾಕ್ಷಿ ಕೊಡೋ ಕೆಲಸವನ್ನ ಯಾವುದರಿಂದನೂ ಯಾರಿಂದನೂ ನಿಲ್ಲಿಸೋಕೆ ಆಗಲ್ಲ. ನಮಗೆ ಹಿಂಸೆ ಬರುವಾಗ ಪವಿತ್ರಶಕ್ತಿಗಾಗಿ ಮತ್ತು ಸಿಹಿಸುದ್ದಿಯನ್ನ ಸಾರೋಕೆ ಬೇಕಾದ ವಿವೇಕ ಹಾಗೂ ಧೈರ್ಯಕ್ಕಾಗಿ ಪ್ರಾರ್ಥಿಸಬೇಕು.—ಲೂಕ 11:13.
14, 15. (ಎ) “ಸ್ತೆಫನನ ಕೊಲೆ ಆದಮೇಲೆ” ಏನಾಯ್ತು? (ಬಿ) ನಮ್ಮ ಕಾಲದಲ್ಲಿ ಸೈಬೀರಿಯದ ತುಂಬ ಜನ ಹೇಗೆ ಸತ್ಯ ತಿಳ್ಕೊಂಡ್ರು?
14 ಸ್ತೆಫನನನ್ನ ವಿರೋಧಿಗಳು ಕೊಲ್ಲೋ ಮುಂಚೆ ಅವನು ಧೈರ್ಯವಾಗಿ ಸಾಕ್ಷಿ ಕೊಟ್ಟ. (ಅ. ಕಾ. 6:5; 7:54-60) ಆ ಸಮಯದಲ್ಲಿ “ಮಹಾ ಹಿಂಸೆ” ಆರಂಭವಾದಾಗ ಅಪೊಸ್ತಲರನ್ನ ಬಿಟ್ಟು ಉಳಿದೆಲ್ಲಾ ಶಿಷ್ಯರು ಯೂದಾಯ ಮತ್ತು ಸಮಾರ್ಯದಲ್ಲಿ ಚೆಲ್ಲಾಪಿಲ್ಲಿ ಆದ್ರು. ಆದ್ರೆ ಇದ್ರಿಂದ ಸಾಕ್ಷಿ ಕೊಡೋ ಕೆಲಸ ನಿಂತುಹೋಗಲಿಲ್ಲ. ಆಗ ಫಿಲಿಪ್ಪ ಸಮಾರ್ಯಕ್ಕೆ ಹೋಗಿ “ಕ್ರಿಸ್ತನ ಬಗ್ಗೆ ಹೇಳೋಕೆ ಶುರುಮಾಡಿದ” ಮತ್ತು ಇದಕ್ಕೆ ಒಳ್ಳೇ ಫಲಿತಾಂಶಗಳು ಸಿಕ್ಕಿದ್ವು. (ಅ. ಕಾ. 8:1-8, 14, 15, 25) ಅಷ್ಟೇ ಅಲ್ಲದೆ, “ಸ್ತೆಫನನ ಕೊಲೆ ಆದಮೇಲೆ ಬೇರೆ ಶಿಷ್ಯರಿಗೂ ಹಿಂಸೆ ಬಂತು. ಹಾಗಾಗಿ ಅವರು ಫೊಯಿನಿಕೆ, ಸೈಪ್ರಸ್, ಅಂತಿಯೋಕ್ಯದ ತನಕ ಚೆಲ್ಲಾಪಿಲ್ಲಿಯಾದ್ರು. ಹಾಗೆ ಹೋದವರು ಯೆಹೂದ್ಯರಿಗೆ ಮಾತ್ರ ದೇವರ ಸಂದೇಶ ಹೇಳ್ತಿದ್ರು. ಆದ್ರೆ ಸೈಪ್ರಸ್ ಮತ್ತು ಕುರೇನ್ಯದಿಂದ ಅಂತಿಯೋಕ್ಯಕ್ಕೆ ಬಂದ ಶಿಷ್ಯರಲ್ಲಿ ಕೆಲವರು ಗ್ರೀಕ್ ಭಾಷೆ ಮಾತಾಡ್ತಿದ್ದ ಜನ್ರ ಜೊತೆ ಮಾತಾಡ್ತಾ ಅವ್ರಿಗೆ ಯೇಸು ಪ್ರಭು ಬಗ್ಗೆ ಸಿಹಿಸುದ್ದಿ ಹೇಳೋಕೆ ಶುರುಮಾಡಿದ್ರು.” (ಅ. ಕಾ. 11:19, 20) ಹೀಗೆ ಹಿಂಸೆ ಬಂದಾಗ ಸಿಹಿಸುದ್ದಿ ಹಬ್ಬೋದು ನಿಂತುಹೋಗಲಿಲ್ಲ. ಬದಲಿಗೆ ಕ್ರೈಸ್ತರು ಎಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿ ಹೋಗಿದ್ರೋ ಅಲ್ಲೆಲ್ಲ ಸಾರಿ ಸಿಹಿಸುದ್ದಿ ಇನ್ನೂ ಜಾಸ್ತಿ ಹಬ್ಬೋ ತರ ಮಾಡಿದ್ರು.
15 ನಮ್ಮ ಕಾಲದಲ್ಲೂ ಇದೇ ತರ ನಡೀತು. 1950ರ ವರ್ಷಗಳಲ್ಲಿ ಆಗಿನ ಸೋವಿಯತ್ ಒಕ್ಕೂಟದಲ್ಲಿ ಸಾವಿರಾರು ಯೆಹೋವನ ಸಾಕ್ಷಿಗಳನ್ನ ಸೈಬೀರಿಯಕ್ಕೆ ಗಡೀಪಾರು ಮಾಡಿಬಿಟ್ರು. ಅವರು ಬೇರೆ ಬೇರೆ ಕಡೆಗೆ ಹೋಗಿದ್ರಿಂದ ಸಿಹಿಸುದ್ದಿ ಆ ದೊಡ್ಡ ದೇಶದಲ್ಲಿ ಹಬ್ಬಿತು. 10,000 ಕಿ.ಮೀ. ದೂರದ ಆ ಪ್ರದೇಶಕ್ಕೆ ಹೋಗಿ ಸಿಹಿಸುದ್ದಿ ಸಾರೋಕೆ ಬೇಕಾದ ಹಣ ಆ ಸಾಕ್ಷಿಗಳ ಹತ್ರ ಇರಲಿಲ್ಲ. ಆದ್ರೆ ಸರ್ಕಾರನೇ ಅಷ್ಟು ದೂರಕ್ಕೆ ಅವ್ರನ್ನ ಕಳಿಸಿತ್ತು. “ಇದ್ರಿಂದ ಸೈಬೀರಿಯದಲ್ಲಿದ್ದ ಒಳ್ಳೇ ಮನಸ್ಸಿನ ಸಾವಿರಾರು ಜನರು ಸತ್ಯ ತಿಳ್ಕೊಳ್ಳೋಕೆ ಅಧಿಕಾರಿಗಳೇ ಸಹಾಯ ಮಾಡಿದ ಹಾಗಾಯ್ತು” ಅಂತ ಒಬ್ಬ ಸಹೋದರ ಹೇಳ್ತಾರೆ.
ಯೆಹೋವ ನಮ್ಮನ್ನ ತುಂಬ ಆಶೀರ್ವಾದ ಮಾಡಿದ್ದಾನೆ
16, 17. ಸಾಕ್ಷಿ ಕೊಡೋ ಕೆಲಸದ ಮೇಲೆ ಯೆಹೋವನ ಆಶೀರ್ವಾದ ಇತ್ತು ಅಂತ ಅಪೊಸ್ತಲ ಕಾರ್ಯ ಪುಸ್ತಕದಿಂದ ಹೇಗೆ ಗೊತ್ತಾಗುತ್ತೆ?
16 ಒಂದನೇ ಶತಮಾನದಲ್ಲಿದ್ದ ಕ್ರೈಸ್ತರ ಮೇಲೆ ಯೆಹೋವನ ಆಶೀರ್ವಾದ ಇತ್ತು ಅನ್ನೋದ್ರಲ್ಲಿ ಸಂಶಯನೇ ಇಲ್ಲ. ಪೌಲ ಮತ್ತು ಬೇರೆ ಕ್ರೈಸ್ತರು ಸತ್ಯದ ಬೀಜ ಬಿತ್ತಿದ್ರು ಮತ್ತು ನೀರು ಹಾಕಿದ್ರು, “ಆದ್ರೆ ಅದನ್ನ ಬೆಳೆಸ್ತಾ ಬಂದಿದ್ದು ದೇವರು.” (1 ಕೊರಿಂ. 3:5, 6) ಯೆಹೋವನ ಆಶೀರ್ವಾದ ಇದ್ದಿದ್ದಕ್ಕೇ ತುಂಬಾ ಜನ್ರು ಆತನ ಆರಾಧಕರಾದ್ರು ಅಂತ ಅಪೊಸ್ತಲರ ಕಾರ್ಯ ಪುಸ್ತಕದಿಂದ ನಮಗೆ ಚೆನ್ನಾಗಿ ಗೊತ್ತಾಗುತ್ತೆ. ಉದಾಹರಣೆಗೆ, “ತುಂಬ ಜನ ದೇವರ ಬಗ್ಗೆ ಕಲಿತ್ರು. ಯೆರೂಸಲೇಮಲ್ಲಿ ಶಿಷ್ಯರ ಸಂಖ್ಯೆ ಈ ಮುಂಚೆಗಿಂತ ತುಂಬ ಹೆಚ್ಚಾಯ್ತು” ಅಂತ ಆ ಪುಸ್ತಕ ಹೇಳುತ್ತೆ. (ಅ. ಕಾ. 6:7) ಹೀಗೆ ಕ್ರೈಸ್ತರು ಬೇರೆ ಬೇರೆ ಜಾಗಕ್ಕೆ ಹೋಗಿ ಸಾರಿದ್ರು. “ಯೂದಾಯ, ಗಲಿಲಾಯ, ಸಮಾರ್ಯದಲ್ಲಿದ್ದ ಸಭೆಗಳಲ್ಲಿ ಸಮಾಧಾನ ಇತ್ತು. ಯಾವುದೇ ವಿರೋಧ ಬರ್ಲಿಲ್ಲ. ಶಿಷ್ಯರ ಸಂಖ್ಯೆ ಹೆಚ್ಚಾಯ್ತು. ಯಾಕಂದ್ರೆ ಅವರು ಯೆಹೋವನ ಮೇಲೆ ಭಯಭಕ್ತಿಯಿಂದ ಜೀವನ ಮಾಡ್ತಾ ಇದ್ರು. ಅಷ್ಟೇ ಅಲ್ಲ ಪವಿತ್ರಶಕ್ತಿಯ ಬಲ ಅವ್ರಿಗೆ ಸಿಕ್ತಾ ಇತ್ತು.”—ಅ. ಕಾ. 9:31.
17 ಸಿರಿಯದ ಅಂತಿಯೋಕ್ಯದಲ್ಲಿ ಕ್ರೈಸ್ತರು ಧೈರ್ಯದಿಂದ ಸಾರಿದ್ರು. ಇದ್ರಿಂದ ಯೆಹೂದ್ಯರಷ್ಟೇ ಅಲ್ಲ, ಗ್ರೀಕ್ ಭಾಷೆ ಮಾತಾಡೋ ಜನ್ರಿಗೂ ಸತ್ಯ ಕೇಳಿಸ್ಕೊಳ್ಳೋಕೆ ಆಯ್ತು. “ಅಷ್ಟೇ ಅಲ್ಲ ಯೆಹೋವ ಅವ್ರಿಗೆ ಸಹಾಯ ಮಾಡಿದ್ರಿಂದ ತುಂಬ ಜನ ಯೇಸು ಪ್ರಭು ಮೇಲೆ ನಂಬಿಕೆಯಿಟ್ಟು ಆತನ ಶಿಷ್ಯರಾದ್ರು” ಅಂತ ಅಪೊಸ್ತಲರ ಕಾರ್ಯ ಪುಸ್ತಕ ಹೇಳುತ್ತೆ. (ಅ. ಕಾ. 11:21) ಇದಿಷ್ಟೇ ಅಲ್ಲ, ಆ ಪಟ್ಟಣದಲ್ಲಿ “ಯೆಹೋವನ ಸಂದೇಶ ಎಲ್ಲ ಕಡೆ ಹಬ್ತಾ ಇತ್ತು. ತುಂಬ ಜನ ಶಿಷ್ಯರಾಗ್ತಾ ಇದ್ರು” ಅಂತಾನೂ ಅದು ಹೇಳುತ್ತೆ. (ಅ. ಕಾ. 12:24) ಪೌಲ ಮತ್ತು ಅವನ ಜೊತೆ ಇದ್ದವರು ಯೆಹೂದ್ಯರಲ್ಲದ ಜನ್ರಿಗೆ ಚೆನ್ನಾಗಿ ಸಾಕ್ಷಿ ಕೊಟ್ಟಿದ್ರಿಂದ “ಯೆಹೋವನ ಸಂದೇಶ ಆತನ ಶಕ್ತಿಯಿಂದ ಎಲ್ಲಾ ಕಡೆ ಹಬ್ತಾ ಹೋಯ್ತು. ತುಂಬ ಜನ ಅದನ್ನ ನಂಬಿದ್ರು.”—ಅ. ಕಾ. 19:20.
18, 19. (ಎ) ನಮಗೆ ‘ಯೆಹೋವ ಸಹಾಯ’ ಮಾಡ್ತಿದ್ದಾನೆ ಅಂತ ನಾವು ಹೇಗೆ ಹೇಳಬಹುದು? (ಬಿ) ಯೆಹೋವ ತನ್ನ ಜನ್ರಿಗೆ ಸಹಾಯ ಮಾಡ್ತಾನೆ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.
18 ‘ಯೆಹೋವ ಅವ್ರಿಗೆ ಸಹಾಯ ಮಾಡಿದ’ ತರಾನೇ ಇವತ್ತು ನಮಗೂ ಸಹಾಯ ಮಾಡ್ತಿದ್ದಾನೆ. ಅದಕ್ಕೇ ಇವತ್ತು ತುಂಬ ಜನ ಸತ್ಯ ಕಲೀತಾ ಇದ್ದಾರೆ, ದೇವರಿಗೆ ತಮ್ಮನ್ನ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಳ್ತಿದ್ದಾರೆ. ಅಷ್ಟೇ ಅಲ್ಲ, ಪೌಲ ಮತ್ತು ಬೇರೆ ಕ್ರೈಸ್ತರ ತರಾನೇ ನಾವು ಕೂಡ ಎಷ್ಟೇ ವಿರೋಧ, ಹಿಂಸೆ ಬಂದ್ರೂ ತಾಳ್ಕೊಂಡು ಸಾರೋ ಕೆಲಸವನ್ನ ಮುಂದುವರಿಸ್ಕೊಂಡು ಹೋಗ್ತಾ ಇದ್ದೀವಿ. ಇದಕ್ಕೆಲ್ಲ ಯೆಹೋವನ ಸಹಾಯ ಮತ್ತು ಆಶೀರ್ವಾದನೇ ಕಾರಣ. (ಅ. ಕಾ. 14:19-21) ಯೆಹೋವ ನಮಗೆ ಯಾವಾಗ್ಲೂ ಸಹಾಯ ಮಾಡ್ತಾನೆ. ನಮಗೆ ಏನೇ ಪರೀಕ್ಷೆ-ಆಪತ್ತು ಬಂದ್ರೂ “ಆತನ ಕೈಗಳು ಯಾವಾಗ್ಲೂ [ನಮಗೆ] ಆಧಾರವಾಗಿ ಇರುತ್ತೆ.” (ಧರ್ಮೋ. 33:27) ಯೆಹೋವ ತನ್ನ ಮಹಾ ಹೆಸ್ರಿಗೋಸ್ಕರ ನಮ್ಮ ಕೈಹಿಡಿದೇ ಹಿಡಿತಾನೆ, ಯಾವತ್ತೂ ಕೈ ಬಿಡಲ್ಲ ಅನ್ನೋದನ್ನ ನೆನಪಲ್ಲಿ ಇಡೋಣ.—1 ಸಮು. 12:22; ಕೀರ್ತ. 94:14.
19 ಯೆಹೋವ ತನ್ನ ಜನ್ರ ಕೈಬಿಡಲ್ಲ ಅನ್ನೋದಕ್ಕೆ ಒಂದು ಉದಾಹರಣೆ ನೋಡಿ. ಸಹೋದರ ಹೆರಾಲ್ಡ್ ಆ್ಯಪ್ಟ್ ಸಿಹಿಸುದ್ದಿ ಸಾರೋದನ್ನ ನಿಲ್ಲಿಸದೇ ಇದ್ದಿದ್ರಿಂದ ಅವ್ರನ್ನ ಎರಡನೇ ಮಹಾಯುದ್ಧದ ಸಮಯದಲ್ಲಿ ನಾಜ಼ಿಗಳು ಜಾಕ್ಸನ್‌ಹೌಜನ್‌ನ ಸೆರೆಶಿಬಿರಕ್ಕೆ ಹಾಕಿದ್ರು. 1942ರ ಮೇ ತಿಂಗಳಲ್ಲಿ ಗೆಸ್ಟಪೊ ಅಧಿಕಾರಿಗಳು, ಅವ್ರ ಮನೆಗೆ ಹೋಗಿ ಅವ್ರ ಹೆಂಡತಿ ಎಲ್ಸಾರನ್ನ ಬಂಧಿಸಿದ್ರು ಮತ್ತು ಅವ್ರ ಪುಟಾಣಿ ಮಗಳನ್ನೂ ತಗೊಂಡು ಹೋದ್ರು. ಎಲ್ಸಾರನ್ನ ಬೇರೆ ಬೇರೆ ಸೆರೆಶಿಬಿರಗಳಿಗೆ ಕಳಿಸಿದ್ರು. ಅದ್ರ ಬಗ್ಗೆ ಸಹೋದರಿ ಎಲ್ಸಾ ಹೀಗೆ ಹೇಳ್ತಾರೆ: “ನಾನು ಜರ್ಮನಿ ಸೆರೆಶಿಬಿರಗಳಲ್ಲಿದ್ದಾಗ ಒಂದು ಒಳ್ಳೇ ಪಾಠ ಕಲಿಯಕ್ಕಾಯ್ತು. ಜೀವನದಲ್ಲಿ ನಮಗೆ ತುಂಬ ಕಷ್ಟವಾದ ಪರೀಕ್ಷೆ ಬಂದಾಗ ಯೆಹೋವನ ಪವಿತ್ರಶಕ್ತಿ ಹೇಗೆ ಬಲ ತುಂಬುತ್ತೆ ಅಂತ ಕಲಿತೆ. ನನ್ನನ್ನ ಬಂಧಿಸೋದಕ್ಕೆ ಮುಂಚೆ ಒಬ್ಬ ಸಹೋದರಿ ಬರೆದ ಪತ್ರವನ್ನ ನಾನು ಓದಿದ್ದೆ. ಅದ್ರಲ್ಲಿ ಆಕೆ ‘ಕಠಿಣ ಪರೀಕ್ಷೆ ಬಂದಾಗ ಯೆಹೋವನ ಪವಿತ್ರಶಕ್ತಿ ನಮ್ಮ ಮನಸ್ಸು ಶಾಂತವಾಗಿ, ಸಮಾಧಾನವಾಗಿ ಇರೋಕೆ ಸಹಾಯ ಮಾಡುತ್ತೆ’ ಅಂತ ಬರೆದಿದ್ರು. ಇದೆಲ್ಲ ನಿಜವಾಗ್ಲೂ ನಡೆಯುತ್ತಾ ಅಂತ ನನಗನಿಸ್ತು. ಆದ್ರೆ ನಂಗೇ ಕಷ್ಟಗಳು ಬಂದಾಗ ಆಕೆ ಹೇಳಿದ್ದು ನಿಜ ಅಂತ ಗೊತ್ತಾಯ್ತು. ನಿಮಗೆ ಇದ್ರ ಅನುಭವ ಆಗಿಲ್ಲಾಂದ್ರೆ ಅರ್ಥ ಮಾಡ್ಕೊಳ್ಳೋಕೆ ಸ್ವಲ್ಪ ಕಷ್ಟಾನೇ. ಆದ್ರೆ ನನಗೆ ಇದರ ಅನುಭವ ಆಗಿರೋದ್ರಿಂದ ಅದು ನಿಜವಾಗ್ಲೂ ಆಗುತ್ತೆ ಅಂತ ಗೊತ್ತಾಗಿದೆ.”
ಚೆನ್ನಾಗಿ ಸಾಕ್ಷಿ ಕೊಡ್ತಾ ಇರಿ!
20. (ಎ) ಪೌಲ ಗೃಹಬಂಧನದಲ್ಲಿ ಇದ್ದಾಗ ಏನು ಮಾಡಿದ? (ಬಿ) ಇದ್ರಿಂದ ಜಾಸ್ತಿ ಸೇವೆ ಮಾಡೋಕಾಗದೇ ಇರೋ ಕೆಲವು ಸಹೋದರ ಸಹೋದರಿಯರಿಗೆ ಯಾವ ಪ್ರೋತ್ಸಾಹ ಸಿಕ್ಕಿದೆ?
20 ಅಪೊಸ್ತಲರ ಕಾರ್ಯ ಪುಸ್ತಕದ ಕೊನೇಲಿ ಪೌಲ ಹುರುಪಿಂದ “ದೇವ್ರ ಆಳ್ವಿಕೆ ಬಗ್ಗೆ ಸಾರ್ತಿದ್ದ” ಅಂತ ಹೇಳಿದೆ. (ಅ. ಕಾ. 28:31) ಅವನು ಗೃಹಬಂಧನದಲ್ಲಿ ಇದ್ದಾಗ ರೋಮಿನಲ್ಲಿ ಮನೆಮನೆ ಸೇವೆ ಮಾಡೋಕೆ ಅವನಿಗೆ ಅನುಮತಿ ಇರಲಿಲ್ಲ. ಆದ್ರೂ ತನ್ನನ್ನ ಭೇಟಿ ಮಾಡೋಕೆ ಬಂದವರಿಗೆಲ್ಲಾ ಅವನು ಸಾಕ್ಷಿ ಕೊಟ್ಟ. ಇವತ್ತು ತುಂಬ ಸಹೋದರ ಸಹೋದರಿಯರು ಇದೇ ತರದ ಪರಿಸ್ಥಿತಿಯಲ್ಲಿ ಇದ್ದಾರೆ. ಕೆಲವರಿಗೆ ವಯಸ್ಸಾಗಿದೆ, ಕಾಯಿಲೆ ಇದೆ ಅಥವಾ ಅಂಗವಿಕಲತೆ ಇರೋದ್ರಿಂದ ಆಶ್ರಮಗಳಲ್ಲಿ ಇದ್ದಾರೆ. ಹಾಗಾಗಿ ಅವ್ರಿಗೆ ಹೊರಗೆ ಹೋಗಿ ಸೇವೆ ಮಾಡಕ್ಕಾಗಲ್ಲ. ಆದ್ರೂ ಅವ್ರಿಗೆ ದೇವರ ಮೇಲಿರೋ ಪ್ರೀತಿ ಮತ್ತು ಸಿಹಿಸುದ್ದಿ ಸಾರಬೇಕು ಅನ್ನೋ ಆಸೆ ಒಂಚೂರೂ ಕಡಿಮೆ ಆಗಿಲ್ಲ. ನಾವು ಅಂಥವರಿಗೋಸ್ಕರ ಪ್ರಾರ್ಥನೆ ಮಾಡಬೇಕು. ಯೆಹೋವನ ಬಗ್ಗೆ, ಆತನ ಅದ್ಭುತ ಉದ್ದೇಶದ ಬಗ್ಗೆ ಕಲಿಯೋಕೆ ಆಸೆ ಇರೋ ಜನ್ರು ಅಂಥ ಸಹೋದರ ಸಹೋದರಿಯರ ಹತ್ರ ಹೋಗೋ ತರ ಮಾಡು ಅಂತ ನಮ್ಮ ಸ್ವರ್ಗೀಯ ಅಪ್ಪನ ಹತ್ರ ಬೇಡ್ಕೊಬೇಕು.
21. ನಾವು ತಡಮಾಡದೆ ಈಗಲೇ ಯಾಕೆ ಸಾಕ್ಷಿ ಕೊಡಬೇಕು?
21 ನಮ್ಮಲ್ಲಿ ತುಂಬ ಸಹೋದರ ಸಹೋದರಿಯರಿಗೆ ಮನೆ-ಮನೆ ಸೇವೆ ಮಾಡೋಕೆ ಆಗುತ್ತೆ. ಜನ್ರಿಗೆ ಕಲಿಸೋಕೆ ಇರೋ ಇನ್ನೂ ಬೇರೆ ಬೇರೆ ವಿಧಾನಗಳಲ್ಲಿ ಭಾಗವಹಿಸೋಕೂ ಆಗುತ್ತೆ. ಹಾಗಾಗಿ ನಾವೆಲ್ಲರೂ “ಇಡೀ ಭೂಮಿಯಲ್ಲಿ” ಸಾಕ್ಷಿ ಕೊಡೋಕೆ ನಮ್ಮಿಂದ ಆಗೋದನ್ನೆಲ್ಲ ಮಾಡೋಣ. ಹೀಗೆ ಹುರುಪಿಂದ ದೇವರ ಆಳ್ವಿಕೆ ಬಗ್ಗೆ ಬೇರೆಯವ್ರಿಗೆ ಸಾರೋಣ, ತಡಮಾಡೋದು ಬೇಡ. ಯಾಕಂದ್ರೆ, ನಾವು ಕೊನೇ ದಿನಗಳಲ್ಲಿ ಇದ್ದೀವಿ ಅನ್ನೋದರ “ಸೂಚನೆ” ನಮಗೆ ಸ್ಪಷ್ಟವಾಗಿ ಕಾಣ್ತಿದೆ. (ಮತ್ತಾ. 24:3-14) ನಮಗಿರೋ ಒಂದೊಂದು ಕ್ಷಣವನ್ನೂ ಚೆನ್ನಾಗಿ ಉಪಯೋಗಿಸ್ಕೊಬೇಕು. ಯಾಕಂದ್ರೆ ನಮಗೆ ಮಾಡೋಕೆ ‘ಒಡೆಯನ ಕೆಲಸ ಇನ್ನೂ ಹೆಚ್ಚು ಇದೆ.’—1 ಕೊರಿಂ. 15:58.
22. ಯೆಹೋವನ ದಿನಕ್ಕಾಗಿ ಕಾಯ್ತಾ ಇರುವಾಗ ನಾವು ಯಾವ ತೀರ್ಮಾನ ಮಾಡಬೇಕು?
22 ನಾವು “ಯೆಹೋವನ ಮಹಾದಿನ, ಭಯವಿಸ್ಮಯಕಾರಿ ದಿನ ಬರೋದಕ್ಕೆ” ಕಾಯ್ತಾ ಇರುವಾಗ, ಏನೇ ಆದ್ರೂ ಧೈರ್ಯವಾಗಿ ಸಾಕ್ಷಿ ಕೊಡ್ತಾ ಇರಬೇಕು ಅಂತ ತೀರ್ಮಾನ ಮಾಡೋಣ. (ಯೋವೇ. 2:30) ಹೀಗೆ ಸಾರುವಾಗ “ಕಲಿಯೋಕೆ ಜಾಸ್ತಿ ಆಸಕ್ತಿ” ಇದ್ದ ಬೆರೋಯದವರಂಥ ಜನರು ನಮಗೆ ಸಿಗ್ತಾರೆ. (ಅ. ಕಾ. 17:10, 11) “ಶಭಾಷ್, ನೀನು ಒಳ್ಳೇ ಆಳು, ನಂಬಿಗಸ್ತ ಆಳು!” ಅನ್ನೋ ಮಾತನ್ನ ಕೇಳಿಸ್ಕೊಳ್ಳೋ ತನಕ ನಾವು ಸಾರ್ತಾನೇ ಇರೋಣ. (ಮತ್ತಾ. 25:23) ಶಿಷ್ಯರಾಗೋಕೆ ಜನ್ರಿಗೆ ಕಲಿಸೋ ಈ ಕೆಲಸವನ್ನ ಹುರುಪಿಂದ ಮಾಡ್ತಾ ಯೆಹೋವನಿಗೆ ಯಾವಾಗ್ಲೂ ನಿಯತ್ತಾಗಿ ಇರೋಣ. ಆಗ ನಾವು ‘ದೇವ್ರ ಆಳ್ವಿಕೆ ಬಗ್ಗೆ ಚೆನ್ನಾಗಿ ವಿವರಿಸೋ’ ಅವಕಾಶ ಸಿಕ್ಕಿದ್ದಕ್ಕೆ ಸದಾಕಾಲ ಸಂತೋಷ ಪಡ್ತೀವಿ.