ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 23

“ನಾನು ಹೇಳೋದನ್ನ ಕೇಳಿಸ್ಕೊಳ್ಳಿ”

“ನಾನು ಹೇಳೋದನ್ನ ಕೇಳಿಸ್ಕೊಳ್ಳಿ”

ಕೋಪದಿಂದ ಕುದೀತಿದ್ದ ಜನರ ಮುಂದೆ ಮತ್ತು ಹಿರೀಸಭೆ ಮುಂದೆ ಪೌಲ ಸತ್ಯವನ್ನ ಸಮರ್ಥಿಸಿದ

ಆಧಾರ: ಅಪೊಸ್ತಲರ ಕಾರ್ಯ 21:18–23:10

1, 2. (ಎ) ಅಪೊಸ್ತಲ ಪೌಲ ಯೆರೂಸಲೇಮಿಗೆ ಯಾಕೆ ಬಂದ? (ಬಿ) ಅಲ್ಲಿ ಅವನಿಗೆ ಏನೆಲ್ಲಾ ಕಷ್ಟಗಳು ಬಂತು?

 ಪೌಲ ಯೆರೂಸಲೇಮಿಗೆ ಮತ್ತೆ ಬಂದಿದ್ದ. ಅವನು ಕಿರಿದಾದ, ಜನ್ರಿಂದ ತುಂಬಿರೋ ರಸ್ತೆಯಲ್ಲಿ ನಡೀತಿದ್ದ. ಯೆರೂಸಲೇಮ್‌ ಪಟ್ಟಣಕ್ಕೆ ವಿಶೇಷ ಸ್ಥಾನ ಇತ್ತು. ಯಾಕಂದ್ರೆ ನೂರಾರು ವರ್ಷದಿಂದ ಅಲ್ಲಿ ಯೆಹೋವನ ಆರಾಧನೆ ನಡೀತಿತ್ತು. ಆ ಪಟ್ಟಣದ ಬಗ್ಗೆ, ಅದ್ರ ಇತಿಹಾಸದ ಬಗ್ಗೆ ಅಲ್ಲಿನವ್ರಿಗೆ ತುಂಬ ಹೆಮ್ಮೆ ಇತ್ತು. ಹಾಗಾಗಿ ಅಲ್ಲಿದ್ದ ಎಷ್ಟೋ ಕ್ರೈಸ್ತರಿಗೂ ಆ ಹಳೇ ರೀತಿ-ರಿವಾಜುಗಳನ್ನ ಬಿಡೋಕೆ ಆಗ್ತಿಲ್ಲ ಅಂತ ಪೌಲನಿಗೆ ಗೊತ್ತಿತ್ತು. ಅವ್ರಿಗೆ ದೇವರು ಮಾಡಿದ ಕೆಲವು ಬದಲಾವಣೆಗಳಿಗೆ ಹೊಂದ್ಕೊಳ್ಳೋಕೆ ಕಷ್ಟ ಆಗ್ತಿತ್ತು. ಅವ್ರಿನ್ನೂ ಮೋಶೆ ಕೊಟ್ಟ ನಿಯಮ ಪುಸ್ತಕವನ್ನೇ ಪಾಲಿಸೋಕೆ ಇಷ್ಟಪಡ್ತಿದ್ರು. ಹಾಗಾಗಿ ಪೌಲ ಆ ಪಟ್ಟಣದಲ್ಲಿದ್ದ ಕ್ರೈಸ್ತರಿಗೆ ಹಣಕಾಸಿನ ಸಹಾಯ ಅಷ್ಟೇ ಅಲ್ಲ, ಸರಿಯಾದ ರೀತೀಲಿ ಯೋಚ್ನೆ ಮಾಡೋಕೆ ಸಹಾಯ ಮಾಡಬೇಕು ಅಂದ್ಕೊಂಡ. ಅದಕ್ಕೇ ಅವನು ಎಫೆಸದಿಂದ ಯೆರೂಸಲೇಮಿಗೆ ಮತ್ತೆ ಬಂದಿದ್ದ. (ಅ. ಕಾ. 19:21) ಅಲ್ಲಿ ಅಪಾಯ ಬರುತ್ತೆ ಅಂತ ಗೊತ್ತಿದ್ರೂ ಅವನು ತನ್ನ ತೀರ್ಮಾನ ಬದಲಾಯಿಸಲಿಲ್ಲ.

2 ಪೌಲನಿಗೆ ಯೆರೂಸಲೇಮಲ್ಲಿ ಏನೆಲ್ಲಾ ಕಷ್ಟ ಬಂತು? ಒಂದು, ಪೌಲನ ಬಗ್ಗೆ ತಪ್ಪಾದ ಸುದ್ದಿ ಕೇಳಿಸ್ಕೊಂಡ ಕ್ರೈಸ್ತರಿಂದಾನೇ ಸಮಸ್ಯೆ ಬಂತು. ಇನ್ನೊಂದು ಅವನ ವಿರೋಧಿಗಳಿಂದ ದೊಡ್ಡ ಸಮಸ್ಯೆ ಬಂತು. ಅವರು ಅವನ ಮೇಲೆ ಸುಳ್ಳು ಆರೋಪ ಹಾಕಿ ಹೊಡೆದ್ರು, ಸಾಯಿಸ್ತೀವಿ ಅಂತ ಬೆದರಿಕೆ ಹಾಕಿದ್ರು. ಈ ಕಷ್ಟಗಳೆಲ್ಲಾ ಅವನಿಗೆ ಸತ್ಯವನ್ನ ಸಮರ್ಥಿಸೋಕೆ ಅವಕಾಶ ಕೊಡ್ತು. ಅಷ್ಟೇ ಅಲ್ಲ, ಇದನ್ನ ಎದುರಿಸೋವಾಗ ಅವನು ದೀನತೆ, ಧೈರ್ಯ ಮತ್ತು ನಂಬಿಕೆ ತೋರಿಸಿದ. ಇದ್ರ ಬಗ್ಗೆ ಓದೋವಾಗ ನಾವು ಇವತ್ತು ಹೇಗೆ ಆ ಗುಣಗಳನ್ನ ತೋರಿಸಬಹುದು ಅಂತ ಕಲಿಯೋಣ.

“ಅವರು ದೇವ್ರನ್ನ ಹಾಡಿಹೊಗಳೋಕೆ ಶುರುಮಾಡಿದ್ರು” (ಅ. ಕಾ. 21:18-20ಎ)

3-5. (ಎ) ಪೌಲ ಯೆರೂಸಲೇಮಲ್ಲಿ ಯಾರನ್ನ ಭೇಟಿ ಮಾಡೋಕೆ ಹೋದ? (ಬಿ) ಅವರ ಹತ್ರ ಪೌಲ ಯಾವುದ್ರ ಬಗ್ಗೆ ಚರ್ಚೆ ಮಾಡಿದ? (ಸಿ) ಪೌಲನ ತರ ಇವತ್ತು ನಾವು ಏನೆಲ್ಲಾ ಮಾಡಬಹುದು?

3 ಪೌಲ ಮತ್ತು ಅವನ ಜೊತೆ ಇದ್ದವರು ಯೆರೂಸಲೇಮಿಗೆ ಬಂದ ಮಾರನೇ ದಿನಾನೇ ಸಭೆ ನೋಡ್ಕೊಳ್ತಿದ್ದ ಹಿರಿಯರನ್ನ ಭೇಟಿ ಮಾಡೋಕೆ ಹೋದ್ರು. ಆ ಸಮಯದಲ್ಲಿ ಯಾವೆಲ್ಲಾ ಅಪೊಸ್ತಲರು ಬದುಕಿದ್ರು ಅನ್ನೋದ್ರ ಬಗ್ಗೆ ಈ ವೃತ್ತಾಂತದಲ್ಲಿ ಯಾವುದೇ ಮಾಹಿತಿ ಇಲ್ಲ. ಬಹುಶಃ ಆಗ ಅವರು ಭೂಮಿಯ ಬೇರೆ ಕಡೆಗಳಲ್ಲಿ ಸೇವೆ ಮಾಡೋಕೆ ಹೋಗಿರಬೇಕು. ಆದ್ರೆ ಯೇಸುವಿನ ತಮ್ಮನಾದ ಯಾಕೋಬ ಇನ್ನೂ ಅಲ್ಲೇ ಇದ್ದ. (ಗಲಾ. 2:9) ಪೌಲನ ಜೊತೆ “ಎಲ್ಲ ಹಿರಿಯರು” ಸೇರಿ ಬಂದಾಗ ಆ ಕೂಟದ ಅಧ್ಯಕ್ಷತೆ ಯಾಕೋಬ ವಹಿಸಿದ್ದ ಅನ್ಸುತ್ತೆ.—ಅ. ಕಾ. 21:18.

4 ಆಗ ಪೌಲ ಆ ಹಿರಿಯರಿಗೆ ವಂದಿಸಿದ. ಆಮೇಲೆ “ತನ್ನ ಸೇವೆ ಮೂಲಕ ಯೆಹೂದ್ಯರಲ್ಲದ ಜನ್ರ ಮುಂದೆ ದೇವರು ಮಾಡಿದ ಎಲ್ಲ ವಿಷ್ಯಗಳನ್ನ ಅವ್ರಿಗೆ ವಿವರಿಸೋಕೆ ಶುರುಮಾಡಿದ.” (ಅ. ಕಾ. 21:19) ಇದನ್ನೆಲ್ಲ ಕೇಳಿದಾಗ ಆ ಸಹೋದರರಿಗೆ ತುಂಬ ಪ್ರೋತ್ಸಾಹ ಸಿಕ್ಕಿರುತ್ತೆ! ಇವತ್ತೂ ಇದೇ ತರ ಸಾರೋ ಕೆಲಸದಲ್ಲಿ ಬೇರೆಬೇರೆ ದೇಶಗಳಲ್ಲಿ ಆಗ್ತಿರೋ ಪ್ರಗತಿ ಬಗ್ಗೆ ಕೇಳುವಾಗ ನಮಗೂ ತುಂಬ ಖುಷಿ ಆಗುತ್ತೆ ಅಲ್ವಾ?—ಜ್ಞಾನೋ. 25:25.

5 ಆ ಕೂಟದಲ್ಲಿ ಪೌಲ ಯೂರೋಪಿನಿಂದ ತಂದ ಕಾಣಿಕೆ ಬಗ್ಗೆ ಹೇಳಿರಬೇಕು. ಆ ಸಹೋದರರು ದೂರದೂರದ ಪ್ರದೇಶಗಳಲ್ಲಿ ಇದ್ರೂ ಇಷ್ಟು ಕಾಳಜಿ ತೋರಿಸಿದ್ದನ್ನ ನೋಡಿದಾಗ ಅಲ್ಲಿದ್ದ ಸಹೋದರರಿಗೆ ತುಂಬ ಸಂತೋಷ ಆಗಿರಬೇಕು. ಅದಕ್ಕೇ ಪೌಲ ಹೇಳಿದ್ದನ್ನ ಕೇಳಿ ಆ ಹಿರಿಯರು “ದೇವ್ರನ್ನ ಹಾಡಿಹೊಗಳೋಕೆ ಶುರುಮಾಡಿದ್ರು.” (ಅ. ಕಾ. 21:20ಎ) ಇವತ್ತು ಕೂಡ ನೈಸರ್ಗಿಕ ವಿಪತ್ತಿಂದ ಅಥವಾ ಗಂಭೀರ ಕಾಯಿಲೆಯಿಂದ ಕಷ್ಟ ಪಡ್ತಿರೋ ಸಹೋದರ ಸಹೋದರಿಯರಿಗೆ ಬೇರೆ ಕಡೆ ಇರೋ ಸಹೋದರರು ತಕ್ಕ ಸಮಯದಲ್ಲಿ ಸಹಾಯ ಮಾಡ್ತಾರೆ, ಪ್ರೋತ್ಸಾಹದ ಮಾತುಗಳನ್ನ ಹೇಳ್ತಾರೆ. ಇದನ್ನ ನೋಡಿದಾಗ ನಮಗೂ ಸಂತೋಷ ಆಗುತ್ತೆ ಅಲ್ವಾ!

ಇನ್ನೂ ತುಂಬ ಜನ “ನಿಯಮ ಪುಸ್ತಕವನ್ನ ತಪ್ಪದೇ ಪಾಲಿಸ್ತಾ ಇದ್ದಾರೆ” (ಅ. ಕಾ. 21:20ಬಿ, 21)

6. ಪೌಲನಿಗೆ ಯಾವ ಸಮಸ್ಯೆ ಬಗ್ಗೆ ಗೊತ್ತಾಯ್ತು?

6 ಆಮೇಲೆ ಹಿರಿಯರು ಪೌಲನಿಗೆ ಅವನ ಬಗ್ಗೆ ಇರೋ ತಪ್ಪಾದ ಸುದ್ದಿಗಳಿಂದ ಯೆಹೂದದಲ್ಲಾದ ಸಮಸ್ಯೆ ಬಗ್ಗೆ ಹೇಳಿದ್ರು. ಅವರು ಹೀಗಂದ್ರು: “ಸಹೋದರ, ಯೆಹೂದ್ಯರಲ್ಲಿ ಎಷ್ಟೋ ಸಾವಿರ ಮಂದಿ ಕ್ರೈಸ್ತರಾಗಿದ್ದನ್ನ ನೀನು ನೋಡ್ತಾನೇ ಇದ್ದೀಯ. ಅವ್ರೆಲ್ಲ ನಿಯಮ ಪುಸ್ತಕವನ್ನ ತಪ್ಪದೇ ಪಾಲಿಸ್ತಾ ಇದ್ದಾರೆ. ಆದ್ರೆ ಅವರು ನಿನ್ನ ಬಗ್ಗೆ ಕೆಲವು ಗಾಳಿಸುದ್ದಿ ಕೇಳಿಸ್ಕೊಂಡಿದ್ದಾರೆ. ಬೇರೆ ದೇಶಗಳಲ್ಲಿ ವಾಸಿಸ್ತಿರೋ ಯೆಹೂದ್ಯರು ತಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬೇಕಾಗಿಲ್ಲ ಅಂತ ನೀನು ಹೇಳ್ತಾ ಇದ್ದೀಯಂತೆ. ಆಚಾರ-ವಿಚಾರಗಳನ್ನ ಮಾಡಬೇಡಿ, ಮೋಶೆಯ ನಿಯಮ ಪುಸ್ತಕವನ್ನ ಪಾಲಿಸಬೇಡಿ ಅಂತ ಕಲಿಸ್ತಾ ಇದ್ದೀಯಂತೆ.” aಅ. ಕಾ. 21:20ಬಿ, 21.

7, 8. (ಎ) ಯೆಹೂದದಲ್ಲಿದ್ದ ತುಂಬ ಕ್ರೈಸ್ತರಿಗೆ ಯಾವ ತಪ್ಪಾದ ಅಭಿಪ್ರಾಯ ಇತ್ತು? (ಬಿ) ಯೆಹೂದಿ ಕ್ರೈಸ್ತರ ಆ ತಪ್ಪಭಿಪ್ರಾಯ ಧರ್ಮಭ್ರಷ್ಟತೆ ಆಗಿರಲಿಲ್ಲ ಯಾಕೆ?

7 ನಿಯಮ ಪುಸ್ತಕ ರದ್ದಾಗಿ 20ಕ್ಕಿಂತ ಜಾಸ್ತಿ ವರ್ಷ ಆಗಿದ್ರೂ ತುಂಬ ಕ್ರೈಸ್ತರು ಯಾಕೆ ಇನ್ನೂ ಅದನ್ನೇ ಪಾಲಿಸಬೇಕು ಅಂತ ಹಟಹಿಡಿದ್ರು? (ಕೊಲೊ. 2:14) ಕ್ರಿ.ಶ. 49ರಲ್ಲಿ ಅಪೊಸ್ತಲರು ಮತ್ತು ಹಿರಿಯರು ಯೆರೂಸಲೇಮಲ್ಲಿ ಕೂಟ ನಡೆಸಿ, ಯೆಹೂದ್ಯರಲ್ಲದ ಕ್ರೈಸ್ತರು ಸುನ್ನತಿ ಮಾಡಿಸ್ಕೊಳ್ಳಬೇಕಿಲ್ಲ ಮತ್ತು ಅವರು ನಿಯಮ ಪುಸ್ತಕವನ್ನ ಪಾಲಿಸಬೇಕಾಗಿಲ್ಲ ಅಂತ ಎಲ್ಲಾ ಸಭೆಗಳಿಗೆ ಪತ್ರ ಬರೆದು ಕಳಿಸಿದ್ರು. (ಅ. ಕಾ. 15:23-29) ಆದ್ರೆ ಆ ಪತ್ರದಲ್ಲಿ ಯೆಹೂದಿ ಕ್ರೈಸ್ತರ ಬಗ್ಗೆ ಏನೂ ಹೇಳಿರಲಿಲ್ಲ. ಅವರು ಕೂಡ ಇನ್ನು ಮುಂದೆ ಮೋಶೆಯ ನಿಯಮ ಪುಸ್ತಕವನ್ನ ಪಾಲಿಸಬೇಕಾಗಿಲ್ಲ ಅನ್ನೋದು ಅವ್ರಲ್ಲಿ ತುಂಬ ಜನ್ರಿಗೆ ಅರ್ಥ ಆಗಿರಲಿಲ್ಲ.

8 ಹಾಗಾದ್ರೆ ಯೆಹೂದಿ ಕ್ರೈಸ್ತರು ಕ್ರೈಸ್ತರಾಗಿರೋಕೆ ಯೋಗ್ಯರಲ್ಲ ಅಂತ ಇದ್ರ ಅರ್ಥನಾ? ಇಲ್ಲ. ಯಾಕಂದ್ರೆ ಅವರು ಕ್ರೈಸ್ತರಾಗೋ ಮುಂಚೆನೂ ಸುಳ್ಳು ದೇವರನ್ನ ಆರಾಧನೆ ಮಾಡ್ತಿರಲಿಲ್ಲ. ಕ್ರೈಸ್ತರಾದ ಮೇಲೂ ಸುಳ್ಳು ಧರ್ಮದ ಯಾವ ಆಚಾರ-ವಿಚಾರಗಳನ್ನೂ ಪಾಲಿಸ್ತಿರಲಿಲ್ಲ. ಅಷ್ಟೇ ಅಲ್ಲ, ಅವರು ಯಾವುದನ್ನ ಮುಖ್ಯ ಅಂತ ಹೇಳ್ತಿದ್ದಾರೋ ಆ ನಿಯಮ ಪುಸ್ತಕವನ್ನ ಯೆಹೋವನೇ ಕೊಟ್ಟಿದ್ದನು. ಇದ್ರಲ್ಲಿ ಕೆಟ್ಟ ದೇವದೂತರಿಗೆ ಸಂಬಂಧಪಟ್ಟ ಅಥವಾ ತಪ್ಪಾದ ವಿಷ್ಯಗಳು ಒಂದೂ ಇರಲಿಲ್ಲ. ಆದ್ರೆ ಆ ನಿಯಮ ಪುಸ್ತಕ ಹಳೇ ಒಪ್ಪಂದಕ್ಕೆ ಸಂಬಂಧಪಟ್ಟಿದ್ರಿಂದ ಕ್ರೈಸ್ತರು ಈಗ ಹೊಸ ಒಪ್ಪಂದದ ಪ್ರಕಾರ ದೇವರನ್ನ ಆರಾಧನೆ ಮಾಡಬೇಕಿತ್ತು. ಹಾಗಾಗಿ ಕ್ರೈಸ್ತರು ಮಾಡೋ ಆರಾಧನೆಯನ್ನ ಯೆಹೋವ ದೇವರು ಮೆಚ್ಕೊಳ್ಳಬೇಕಾದ್ರೆ ಅವರು ನಿಯಮ ಪುಸ್ತಕವನ್ನ ಪಾಲಿಸಬೇಕಾಗಿರಲಿಲ್ಲ. ಆದ್ರೆ ನಿಯಮ ಪುಸ್ತಕವನ್ನ ಪಾಲಿಸಲೇಬೇಕು ಅಂತ ಹಟಹಿಡಿದಿದ್ದ ಯೆಹೂದಿ ಕ್ರೈಸ್ತರು ಇದನ್ನ ಅರ್ಥ ಮಾಡ್ಕೊಳ್ಳಲಿಲ್ಲ. ಅವ್ರಿಗೆ ದೇವರು ಮಾಡಿದ್ದ ಹೊಸ ಏರ್ಪಾಡಿನ ಮೇಲೆ ನಂಬಿಕೆ ಇರಲಿಲ್ಲ. ಹಾಗಾಗಿ ದೇವರು ತನ್ನನ್ನ ಸರಿಯಾದ ರೀತಿಯಲ್ಲಿ ಹೇಗೆ ಆರಾಧನೆ ಮಾಡೋದು ಅಂತ ತಿಳಿಸಿದ್ದಕ್ಕೆ ತಕ್ಕ ಹಾಗೆ ಅವರು ತಮ್ಮ ಯೋಚ್ನೆಗಳನ್ನ ಸರಿ ಮಾಡ್ಕೊಬೇಕಿತ್ತು. bಯೆರೆ. 31:31-34; ಲೂಕ 22:20.

“ನಿನ್ನ ಬಗ್ಗೆ ಕೇಳಿದ ಗಾಳಿಸುದ್ದಿಯೆಲ್ಲ ಸುಳ್ಳು” (ಅ. ಕಾ. 21:22-26)

9. ಮೋಶೆಯ ನಿಯಮ ಪುಸ್ತಕದ ಬಗ್ಗೆ ಪೌಲ ಏನು ಕಲಿಸಿದ?

9 ಪೌಲ ಬೇರೆ ದೇಶಗಳಲ್ಲಿರೋ ಯೆಹೂದ್ಯರಿಗೆ ‘ನೀವು ಮಕ್ಕಳಿಗೆ ಸುನ್ನತಿ ಮಾಡಿಸಬೇಡಿ, ಯಾವುದೇ ಆಚಾರ-ವಿಚಾರಗಳನ್ನ ಮಾಡಬೇಡಿ, ಮೋಶೆಯ ನಿಯಮ ಪುಸ್ತಕವನ್ನ ಪಾಲಿಸಬೇಡಿ’ ಅಂತ ಕಲಿಸ್ತಿದ್ದಾನೆ ಅನ್ನೋ ಗಾಳಿಸುದ್ದಿ ಎಲ್ಲಾ ಕಡೆ ಹರಡಿತ್ತು. ಆದ್ರೆ ನಿಜವಾಗ್ಲೂ ಪೌಲ ಹಾಗೆ ಕಲಿಸ್ತಿದ್ನಾ? ಪೌಲ ಯೆಹೂದ್ಯರಲ್ಲದ ಜನ್ರಿಗೆ ಸಿಹಿಸುದ್ದಿ ಸಾರಿದ ಮತ್ತು ಆ ಜನ್ರು ನಿಯಮ ಪುಸ್ತಕವನ್ನ ಪಾಲಿಸಬೇಕಾಗಿಲ್ಲ ಅನ್ನೋದನ್ನ ವಿವರಿಸಿದ. ಮೋಶೆಯ ನಿಯಮ ಪುಸ್ತಕದಲ್ಲಿ ಹೇಳಿರೋ ತರ ಸುನ್ನತಿ ಮಾಡಿಸ್ಕೊಬೇಕು ಅಂತ ಯೆಹೂದ್ಯರಲ್ಲದ ಕ್ರೈಸ್ತರನ್ನ ಒತ್ತಾಯ ಮಾಡ್ತಿದ್ದವ್ರಿಗೆ ಹಾಗೆ ಮಾಡೋದು ಯಾಕೆ ತಪ್ಪು ಅಂತ ಹೇಳಿದ. (ಗಲಾ. 5:1-7) ಅಲ್ಲದೇ ಅವನು ಯಾವೆಲ್ಲ ಪಟ್ಟಣಗಳನ್ನ ಭೇಟಿ ಮಾಡಿದ್ನೋ ಅಲ್ಲಿದ್ದ ಯೆಹೂದ್ಯರಿಗೂ ಸಾರಿದ. ಅದ್ರಲ್ಲೂ ಯಾರು ಒಳ್ಳೇ ಪ್ರತಿಕ್ರಿಯೆ ತೋರಿಸಿದ್ರೊ ಅವ್ರಿಗೆ, ಯೇಸು ಸತ್ತಿದ್ರಿಂದ ನಿಯಮ ಪುಸ್ತಕ ರದ್ದಾಯ್ತು ಮತ್ತು ಒಬ್ಬ ವ್ಯಕ್ತಿ ನಿಯಮ ಪುಸ್ತಕ ಪಾಲಿಸೋದ್ರಿಂದಲ್ಲ, ಯೇಸು ಮೇಲೆ ನಂಬಿಕೆ ಇಡೋದ್ರಿಂದ ನೀತಿವಂತನಾಗ್ತಾನೆ ಅಂತ ವಿವರಿಸಿರಬೇಕು.—ರೋಮ. 2:28, 29; 3:21-26.

10. ಪೌಲ ಬೇರೆಯವರ ಭಾವನೆಗಳಿಗೆ ಹೇಗೆ ಬೆಲೆ ಕೊಟ್ಟ?

10 ಆದ್ರೂ ಸಬ್ಬತ್‌ ದಿನ ಕೆಲಸ ಮಾಡಬಾರದು ಮತ್ತು ಕೆಲವೊಂದು ಆಹಾರ ತಿನ್ನಬಾರದು ಅನ್ನೋ ಯೆಹೂದಿ ಸಂಪ್ರದಾಯಗಳನ್ನ ಪಾಲಿಸ್ತಿದ್ದ ಜನ್ರನ್ನ ಪೌಲ ಅರ್ಥ ಮಾಡ್ಕೊಂಡ. (ರೋಮ. 14:1-6) ಅವನು ಸುನ್ನತಿ ‘ಮಾಡಿಸ್ಕೊಳ್ಳಿ ಅಂತಾನೋ, ಮಾಡಿಸ್ಕೊಬೇಡಿ ಅಂತಾನೋ’ ನಿಯಮ ಮಾಡಲಿಲ್ಲ. ಅಷ್ಟೇ ಅಲ್ಲ, ಅವನು ತಿಮೊತಿಗೆ ಸುನ್ನತಿ ಮಾಡಿಸಿದ್ದ. ತಿಮೊತಿಯ ತಂದೆ ಗ್ರೀಕ ಅಂತ ಯೆಹೂದ್ಯರಿಗೆ ಗೊತ್ತಿದ್ರಿಂದ ಅವರು ಅವನನ್ನ ದೂರಮಾಡಬಾರದು ಅನ್ನೋ ಉದ್ದೇಶದಿಂದ ಹೀಗೆ ಮಾಡಿದ. (ಅ. ಕಾ. 16:3) ಸುನ್ನತಿ ಮಾಡಿಸ್ಕೊಳ್ಳೋದು, ಮಾಡಿಸ್ಕೊಳ್ಳದೇ ಇರೋದು ಅವರವರಿಗೆ ಬಿಟ್ಟ ವಿಷ್ಯ ಆಗಿತ್ತು. ಅದಕ್ಕೇ ಪೌಲ ಗಲಾತ್ಯದವರಿಗೆ “ಸುನ್ನತಿ ಆದ್ರೂ ಆಗ್ದೆ ಇದ್ರೂ ಅದೇನೂ ಮುಖ್ಯ ಅಲ್ಲ, ಆದ್ರೆ ಪ್ರೀತಿಯಿಂದ ಕೆಲಸ ಮಾಡೋ ನಂಬಿಕೆನೇ ಮುಖ್ಯ” ಅಂತ ಹೇಳಿದ. (ಗಲಾ. 5:6) ಆದ್ರೆ ನಿಯಮ ಪುಸ್ತಕವನ್ನ ಪಾಲಿಸಬೇಕು ಅಂತಾನೋ ಅಥವಾ ಯೆಹೋವ ದೇವರು ನಮ್ಮ ಆರಾಧನೆನ ಮೆಚ್ಕೊಬೇಕು ಅಂತಾನೋ ಸುನ್ನತಿ ಮಾಡಿಸ್ಕೊಂಡ್ರೆ ಅದು ತಪ್ಪಾಗ್ತಿತ್ತು. ಯಾಕಂದ್ರೆ ಹಾಗೆ ಮಾಡೋದು ಅವ್ರಲ್ಲಿ ನಂಬಿಕೆ ಕಡಿಮೆ ಇದೆ ಅನ್ನೋದನ್ನ ತೋರಿಸ್ತಿತ್ತು.

11. (ಎ) ಹಿರಿಯರು ಪೌಲನಿಗೆ ಏನು ಮಾಡೋಕೆ ಹೇಳಿದ್ರು? (ಬಿ) ಅದನ್ನ ಮಾಡೋವಾಗ ಪೌಲ ಏನನ್ನ ಮಾಡಿರಲ್ಲ ಅಂತ ನಾವು ನಂಬಬಹುದು? (ಪಾದಟಿಪ್ಪಣಿನೂ ನೋಡಿ.)

11 ಪೌಲನ ಬಗ್ಗೆ ಹಬ್ಬಿದ್ದ ಗಾಳಿಸುದ್ದಿಗಳು ಸುಳ್ಳು ಅಂತ ಯೆಹೂದಿ ಕ್ರೈಸ್ತರಿಗೆ ಗೊತ್ತಿತ್ತು. ಆದ್ರೂ ಅವ್ರಿಗೆ ಅದ್ರ ಬಗ್ಗೆ ಸ್ವಲ್ಪ ಚಿಂತೆ ಇತ್ತು. ಹಾಗಾಗಿ ಹಿರಿಯರು ಪೌಲನಿಗೆ “ನಮ್ಮಲ್ಲಿ ಹರಕೆ ಮಾಡಿರೋ ನಾಲ್ಕು ಮಂದಿ ಇದ್ದಾರೆ. ಅವ್ರನ್ನ ನಿನ್ನ ಜೊತೆ ಕರ್ಕೊಂಡು ಹೋಗಿ ಆಚಾರದ ಪ್ರಕಾರ ಅವ್ರ ಜೊತೆ ನೀನು ಸಹ ನಿನ್ನನ್ನ ಶುದ್ಧ ಮಾಡ್ಕೊ. ದೇವ್ರಿಗೆ ಅವರು ಮಾಡಿರೋ ಹರಕೆ ತೀರಿಸೋಕೆ ಆಗೋ ಖರ್ಚನ್ನೆಲ್ಲ ನೀನೇ ನೋಡ್ಕೊ. ಆಗ ನಿನ್ನ ಬಗ್ಗೆ ಕೇಳಿದ ಗಾಳಿಸುದ್ದಿಯೆಲ್ಲ ಸುಳ್ಳು ಅಂತ, ನೀನು ನಿಯಮ ಪುಸ್ತಕದ ಪ್ರಕಾರ ನಡ್ಕೊಳ್ತೀಯ ಅಂತ ಎಲ್ರಿಗೂ ಗೊತ್ತಾಗುತ್ತೆ” ಅಂತ ಹೇಳಿದ್ರು. cಅ. ಕಾ. 21:23, 24.

12. ಪೌಲ ಹೊಂದಾಣಿಕೆ ಮಾಡ್ಕೊಳ್ಳೋಕೆ ಮತ್ತು ಸಹಕಾರ ಕೊಡೋಕೆ ರೆಡಿ ಇದ್ದ ಹೇಗೆ ತೋರಿಸಿದ?

12 ಆದ್ರೆ ಸಮಸ್ಯೆ ಇದ್ದಿದ್ದು ಪೌಲನಲ್ಲಿ ಅಲ್ಲ, ಆ ಕ್ರೈಸ್ತರಲ್ಲಿ. ಹಾಗಂತ ಅವನು ‘ಇದಕ್ಕೆಲ್ಲ ನನ್ನ ಬಗ್ಗೆ ಹಬ್ಬಿರೋ ಗಾಳಿಸುದ್ದಿ ಕಾರಣ ಅಲ್ಲ, ಮೋಶೆಯ ನಿಯಮ ಪುಸ್ತಕದ ಮೇಲೆ ಯೆಹೂದಿ ಕ್ರೈಸ್ತರಿಗಿರೋ ಅತಿಯಾದ ಪ್ರೀತಿ’ ಅಂತ ಹೇಳಬಹುದಿತ್ತು. ಆದ್ರೆ ಹಿರಿಯರು ಹೇಳೋ ಮಾತು ಎಲ್ಲಿ ತನಕ ದೇವರ ತತ್ವಗಳಿಗೆ ವಿರುದ್ಧವಾಗಿ ಇಲ್ವೋ ಅಲ್ಲಿ ತನಕ ಅವನು ಹೊಂದಾಣಿಕೆ ಮಾಡ್ಕೊಳ್ಳೋಕೆ ರೆಡಿ ಇದ್ದ. ಅದಕ್ಕೆ ಅವನು ಇದಕ್ಕೂ ಮುಂಚೆ ಹೀಗೆ ಬರೆದಿದ್ದ: “ನಾನು ನಿಯಮ ಪುಸ್ತಕ ಪಾಲಿಸುವವನಲ್ಲ, ಆದ್ರೂ ಅದನ್ನ ಪಾಲಿಸುವವ್ರನ್ನ ಕ್ರಿಸ್ತನ ದಾರಿಗೆ ತರೋಕೆ ಅವ್ರಿಗೆ ನಿಯಮ ಪುಸ್ತಕ ಪಾಲಿಸುವವನಾದೆ.” (1 ಕೊರಿಂ. 9:20) ಈ ಸಂದರ್ಭದಲ್ಲಿ ಪೌಲ ಹಿರಿಯರಿಗೆ ಸಹಕಾರ ಕೊಟ್ಟು ‘ನಿಯಮ ಪುಸ್ತಕ ಪಾಲಿಸುವವನಾದ.’ ಹೀಗೆ ಪೌಲ ನಮಗೆ ಒಳ್ಳೇ ಮಾದರಿ ಇಟ್ಟಿದ್ದಾನೆ. ನಾವು ಕೂಡ ಹಿರಿಯರಿಗೆ ಸಹಕಾರ ಕೊಡಬೇಕು. ಎಲ್ಲಾನೂ ನಮ್ಮ ಇಷ್ಟದ ಹಾಗೆ ಮಾಡಬೇಕಂತ ಹಟ ಹಿಡಿಬಾರದು.—ಇಬ್ರಿ. 13:17.

ಒಂದು ವಿಷ್ಯ ಮಾಡಿದ್ರೆ ಬೈಬಲ್‌ ತತ್ವ ಮುರಿದ ಹಾಗೆ ಆಗಲ್ಲ ಅಂತ ಅನಿಸಿದಾಗ ಪೌಲನ ತರ ನೀವೂ ಬಿಟ್ಕೊಡ್ತೀರಾ?

“ಇವನು ಸಾಯಬೇಕು!” (ಅ. ಕಾ. 21:27–22:30)

13. (ಎ) ದೇವಾಲಯದಲ್ಲಿ ಕೆಲವು ಯೆಹೂದ್ಯರು ಯಾಕೆ ಗಲಭೆ ಎಬ್ಬಿಸಿದ್ರು? (ಬಿ) ಪೌಲನನ್ನ ಯಾರು, ಹೇಗೆ ಕಾಪಾಡಿದ್ರು?

13 ಆದ್ರೆ ಇವರು ದೇವಾಲಯಕ್ಕೆ ಹೋದಾಗ ಒಂದು ಸಮಸ್ಯೆ ಆಯ್ತು. ಆ ನಾಲ್ಕು ಗಂಡಸರು ಮಾಡ್ಕೊಂಡಿದ್ದ ಹರಕೆಯ ದಿನಗಳು ಇನ್ನೇನು ಮುಗೀತಾ ಬಂದಿತ್ತು. ಆಗ ಏಷ್ಯಾದಿಂದ ಬಂದಿದ್ದ ಯೆಹೂದ್ಯರು ಪೌಲನನ್ನ ನೋಡಿ ‘ಇವನು ದೇವಾಲಯಕ್ಕೆ ಯೆಹೂದ್ಯರಲ್ಲದ ಜನ್ರನ್ನ ಕರ್ಕೊಂಡು ಬಂದಿದ್ದಾನೆ’ ಅಂತ ಅವನ ಮೇಲೆ ಆರೋಪ ಹಾಕಿದ್ರು. ಹೀಗೆ ಅಲ್ಲಿ ಗಲಭೆ ಶುರು ಆಯ್ತು. ಆಗ ರೋಮನ್‌ ಸೇನಾಪತಿ ಪೌಲನನ್ನ ಬಂಧಿಸಿದ. ಆ ಸೇನಾಪತಿ ಮಧ್ಯ ಬರದೇ ಇದ್ದಿದ್ರೆ ಆ ಯೆಹೂದ್ಯರು ಪೌಲನನ್ನ ಹೊಡೆದು ಕೊಂದೇ ಬಿಡ್ತಿದ್ರು. ಆದ್ರೆ ಸೇನಾಪತಿ ಪೌಲನ ಪ್ರಾಣ ಏನೋ ಕಾಪಾಡಿದ, ಆದ್ರೆ ಅವನು ಬಿಡುಗಡೆ ಆಗೋಕೆ ನಾಲ್ಕಕ್ಕಿಂತ ಜಾಸ್ತಿ ವರ್ಷನೇ ಬೇಕಾಯ್ತು. ಹಾಗಂತ ಪೌಲನಿಗೆ ಬಂದ ಸಮಸ್ಯೆಗಳು ಇಲ್ಲಿಗೇ ಮುಗೀಲಿಲ್ಲ. ಪೌಲನ ಮೇಲೆ ಯಾಕೆ ದಾಳಿ ಮಾಡಿದ್ರಿ ಅಂತ ಸೇನಾಪತಿ ಯೆಹೂದ್ಯರನ್ನ ಕೇಳಿದಾಗ ಅವರು ಬೇರೆ ಬೇರೆ ಆರೋಪಗಳನ್ನ ಹಾಕಿದ್ರು. ಆದ್ರೆ ಆ ಗಲಾಟೆ ಸದ್ದಿಗೆ ಅವರು ಹೇಳಿದ್ದೇನೂ ಅವನಿಗೆ ಅರ್ಥ ಆಗಲಿಲ್ಲ. ಪರಿಸ್ಥಿತಿ ಎಷ್ಟು ಹಾಳಾಯ್ತಂದ್ರೆ ರೋಮನ್‌ ಸೈನಿಕರು ಪೌಲನನ್ನ ಅಲ್ಲಿಂದ ಎತ್ಕೊಂಡು ಹೋಗಬೇಕಾಯ್ತು. ಸೈನಿಕರು ಉಳ್ಕೊಂಡಿರೋ ಜಾಗದ ಒಳಗೆ ಇನ್ನೇನು ಹೋಗಬೇಕಂತ ಇದ್ದಾಗ ಪೌಲ ಸೇನಾಪತಿಗೆ, “ಈ ಜನ್ರ ಹತ್ರ ಮಾತಾಡೋಕೆ ದಯವಿಟ್ಟು ನಂಗೆ ಅನುಮತಿ ಕೊಡು” ಅಂದ. (ಅ. ಕಾ. 21:39) ಅದಕ್ಕೆ ಸೇನಾಪತಿ ಒಪ್ಪಿದ. ಆಗ ಪೌಲ ಧೈರ್ಯದಿಂದ ತನ್ನ ನಂಬಿಕೆಯನ್ನ ಸಮರ್ಥಿಸೋಕೆ ಮುಂದೆ ಬಂದ.

14, 15. (ಎ) ಪೌಲ ಯೆಹೂದ್ಯರಿಗೆ ಏನು ವಿವರಿಸಿದ? (ಬಿ) ಯೆಹೂದ್ಯರು ಪೌಲನ ಮೇಲೆ ಯಾಕಿಷ್ಟು ಕೋಪ ಮಾಡ್ಕೊಂಡಿದ್ದಾರೆ ಅಂತ ತಿಳ್ಕೊಳ್ಳೋಕೆ ಸೇನಾಪತಿ ಏನೆಲ್ಲಾ ಮಾಡಿದ?

14 “ನಾನು ಹೇಳೋದನ್ನ ಕೇಳಿಸ್ಕೊಳ್ಳಿ” ಅಂತ ಪೌಲ ತನ್ನ ಮಾತುಗಳನ್ನ ಆರಂಭಿಸಿದ. (ಅ. ಕಾ. 22:1) ಪೌಲ ಅವ್ರ ಹತ್ರ ಹೀಬ್ರು ಭಾಷೆಯಲ್ಲಿ ಮಾತಾಡಿದ್ರಿಂದ ಅವರು ಸ್ವಲ್ಪ ಸಮಾಧಾನವಾಗಿ ಕೇಳಿಸ್ಕೊಳ್ಳೋಕೆ ಮನಸ್ಸು ಮಾಡಿದ್ರು. ಆಗ ಪೌಲ ತಾನು ಯಾಕೆ ಕ್ರಿಸ್ತನ ಶಿಷ್ಯನಾದೆ ಅಂತ ವಿವರಿಸ್ತಾ ಬಂದ. ಅದ್ರಲ್ಲಿ ಅವನು ಹೇಳಿದ ವಿಷ್ಯಗಳು ನಿಜನಾ ಸುಳ್ಳಾ ಅಂತ ಯೆಹೂದ್ಯರೇ ಪರೀಕ್ಷೆ ಮಾಡಬಹುದಿತ್ತು. ಅವನು ಏನೇನು ಹೇಳಿದ? ಪೌಲ ಪ್ರಸಿದ್ಧ ಗಮಲಿಯೇಲನ ಹತ್ರ ಶಿಕ್ಷಣ ಪಡೆದಿದ್ದ. ಅಷ್ಟೇ ಅಲ್ಲ, ಕ್ರಿಸ್ತನ ಶಿಷ್ಯರನ್ನ ಕಂಡ್ರೆ ಅವನು ಬಿಡ್ತಾ ಇರಲಿಲ್ಲ, ಹಿಂಸೆ ಕೊಡ್ತಿದ್ದ. ಇದು ಅಲ್ಲಿದ್ದ ಕೆಲವ್ರಿಗೂ ಗೊತ್ತಿತ್ತು. ಆದ್ರೆ ಅವನು ದಮಸ್ಕಕ್ಕೆ ಹೋಗ್ತಿದ್ದಾಗ ಮತ್ತೆ ಜೀವಂತವಾಗಿ ಬಂದಿದ್ದ ಯೇಸು ದರ್ಶನ ಕೊಟ್ಟು ಅವನ ಹತ್ರ ಮಾತಾಡಿದ್ದ. ಪೌಲನ ಜೊತೆಯಲ್ಲಿ ಪ್ರಯಾಣ ಮಾಡ್ತಾ ಇದ್ದವ್ರಿಗೆ ಪ್ರಕಾಶಮಾನವಾದ ಬೆಳಕು ಕಾಣಿಸ್ತು, ಒಂದು ಧ್ವನಿನೂ ಕೇಳಿಸ್ತು. ಆದ್ರೆ ಆ ಮಾತು ಅವ್ರಿಗೆ ಸ್ಪಷ್ಟವಾಗಿ ಅರ್ಥ ಆಗಲಿಲ್ಲ. (ಅ. ಕಾ. 9:7; 22:9) ಪೌಲ ಈ ದರ್ಶನದಿಂದಾಗಿ ಕುರುಡನಾಗಿದ್ದ. ಹಾಗಾಗಿ ಅವನ ಜೊತೆ ಇದ್ದವ್ರೇ ಅವನನ್ನ ದಮಸ್ಕಕ್ಕೆ ಕರ್ಕೊಂಡು ಹೋಗಬೇಕಾಯ್ತು. ಅಲ್ಲಿನ ಯೆಹೂದ್ಯರಿಗೆ ಚಿರಪರಿಚಿತನಾಗಿದ್ದ ಅನನೀಯ ಅನ್ನೋ ವ್ಯಕ್ತಿ ಅದ್ಭುತ ಮಾಡಿ ಪೌಲನಿಗೆ ಮತ್ತೆ ಕಣ್ಣು ಕಾಣಿಸೋ ತರ ಮಾಡಿದ.

15 ಆಮೇಲೆ ಪೌಲ ಅಲ್ಲಿಂದ ಯೆರೂಸಲೇಮಿಗೆ ವಾಪಸ್‌ ಬಂದ್ಮೇಲೆ ಯೇಸು ಇನ್ನೊಂದು ಸಲ ದೇವಾಲಯದಲ್ಲಿ ಕಾಣಿಸ್ಕೊಂಡ ಅಂತ ಪೌಲ ವಿವರಿಸಿದ. ಇದನ್ನ ಕೇಳಿದಾಗ ಯೆಹೂದ್ಯರಿಗೆ ಎಲ್ಲಿಲ್ಲದ ಕೋಪ ಬಂತು. ಅವರು, “ಇವನು ಇನ್ನೊಂದು ಕ್ಷಣನೂ ಬದುಕಿರಬಾರದು. ಇವನು ಸಾಯಬೇಕು!” ಅಂತ ಕಿರುಚಿದ್ರು. (ಅ. ಕಾ. 22:22) ಪೌಲನನ್ನ ಕಾಪಾಡೋಕೆ ಸೇನಾಪತಿ ಅವನನ್ನ ಸೈನಿಕರು ಉಳ್ಕೊಂಡಿರೋ ಜಾಗಕ್ಕೆ ಕರ್ಕೊಂಡು ಹೋದ. ಯೆಹೂದ್ಯರು ಪೌಲನ ಮೇಲೆ ಯಾಕಿಷ್ಟು ಕೋಪ ಮಾಡ್ಕೊಂಡಿದ್ದಾರೆ ಅಂತ ತಿಳ್ಕೊಳ್ಳೋಕೆ ಸೇನಾಪತಿ ಅವನನ್ನ ಚಾಟಿಯಿಂದ ಹೊಡೆದು ವಿಚಾರಿಸೋಕೆ ಹೇಳಿದ. ಆದ್ರೆ ಪೌಲ ತಾನೊಬ್ಬ ರೋಮನ್‌ ಪ್ರಜೆ ಅಂತ ಹೇಳಿ ಕಾನೂನಿಂದ ಸಿಗೋ ಸಂರಕ್ಷಣೆ ಪಡ್ಕೊಂಡ. ಇವತ್ತು ಕೂಡ ಯೆಹೋವನ ಆರಾಧಕರು ಕಾನೂನಿಂದ ಸಿಗೋ ಸಂರಕ್ಷಣೆಯನ್ನ ಉಪಯೋಗಿಸ್ಕೊಂಡು ತಮ್ಮ ನಂಬಿಕೆಯನ್ನ ಸಮರ್ಥಿಸ್ತಾರೆ. (“ ರೋಮನ್‌ ಕಾನೂನು ಮತ್ತು ಪ್ರಜೆಗಳು” ಹಾಗೂ “ ನಮ್ಮ ಕಾಲದಲ್ಲಿ ನ್ಯಾಯಕ್ಕಾಗಿ ಹೋರಾಟ” ಅನ್ನೋ ಚೌಕ ನೋಡಿ.) ಪೌಲ ರೋಮನ್‌ ಪ್ರಜೆ ಅಂತ ಗೊತ್ತಾದಾಗ ಸೇನಾಪತಿ ಬೇರೆ ರೀತೀಲಿ ವಿಷ್ಯ ತಿಳ್ಕೊಬೇಕಂತ ಅರ್ಥ ಮಾಡ್ಕೊಂಡ. ಅವನು ಮಾರನೇ ದಿನ ಪೌಲನನ್ನ ಯೆಹೂದಿಗಳ ಉಚ್ಛ ನ್ಯಾಯಾಲಯವಾದ ಹಿರೀಸಭೆಯಲ್ಲಿ ಹಾಜರುಮಾಡಿದ.

“ನಾನೊಬ್ಬ ಫರಿಸಾಯ” (ಅ. ಕಾ. 23:1-10)

16, 17. (ಎ) ಪೌಲ ಹಿರೀಸಭೆಯಲ್ಲಿ ಮಾತಾಡಿದಾಗ ಏನಾಯ್ತು? ವಿವರಿಸಿ. (ಬಿ) ಪೌಲನಿಗೆ ಹೊಡೆದಾಗ ಅವನು ಹೇಗೆ ದೀನತೆ ಇದೆ ಅಂತ ತೋರಿಸ್ಕೊಟ್ಟ?

16 ಹಿರೀಸಭೆಯಲ್ಲಿ ಪೌಲ ಹೀಗೆ ಮಾತಾಡೋಕೆ ಶುರುಮಾಡಿದ: “ಸಹೋದರರೇ, ಇವತ್ತಿನ ತನಕ ನಾನು ದೇವ್ರ ಮುಂದೆ ಯಾವ ತಪ್ಪೂ ಮಾಡಿಲ್ಲ ಅಂತ ನನ್ನ ಮನಸ್ಸಾಕ್ಷಿ ಹೇಳ್ತಾ ಇದೆ.” (ಅ. ಕಾ. 23:1) ಅವನು ಇದನ್ನ ಹೇಳಿದ ತಕ್ಷಣ, “ಮಹಾ ಪುರೋಹಿತ ಅನನೀಯ ಪೌಲನ ಬಾಯಿ ಮೇಲೆ ಹೊಡೆಯೋಕೆ ಪಕ್ಕದಲ್ಲಿ ನಿಂತವ್ರಿಗೆ ಹೇಳಿದ.” (ಅ. ಕಾ. 23:2) ಇದು ದೊಡ್ಡ ಅವಮಾನ ಆಗಿತ್ತು! ಸಾಕ್ಷ್ಯಾಧಾರಗಳನ್ನ ಕೇಳಿಸ್ಕೊಳ್ಳೋ ಮುಂಚೆನೇ ಪೌಲನನ್ನ ಸುಳ್ಳುಗಾರ ಅಂತ ಅವನು ತೀರ್ಮಾನ ಮಾಡಿಬಿಟ್ಟ. ಅದಕ್ಕೇ ಪೌಲ, “ಸುಣ್ಣ ಬಳಿದಿರೋ ಗೋಡೆ ತರ ಇರುವವನೇ, ದೇವರು ನಿನಗೆ ಹೊಡಿತಾನೆ. ನಿಯಮ ಪುಸ್ತಕದ ಪ್ರಕಾರ ನಂಗೆ ತೀರ್ಪು ಮಾಡೋಕೆ ಕೂತ್ಕೊಂಡಿರೋ ನೀನೇ ನನ್ನನ್ನ ಹೊಡಿ ಅಂತ ಹೇಳಿ ನಿಯಮ ಪುಸ್ತಕವನ್ನ ಮೀರ್ತಾ ಇದ್ದೀಯಾ?” ಅಂತ ಕೇಳಿದ.—ಅ. ಕಾ. 23:3.

17 ಇದನ್ನ ನೋಡಿ ಅಲ್ಲಿದ್ದ ಕೆಲವ್ರಿಗೆ ಆಶ್ಚರ್ಯ ಆಯ್ತು. ಪೌಲನನ್ನ ಹೊಡೆದಿದ್ದಕ್ಕಲ್ಲ, ಬದಲಿಗೆ ಪೌಲ ಕೊಟ್ಟ ಉತ್ರ ಕೇಳಿ ಅವ್ರಿಗೆ ಅವ್ರನ್ನೇ ನಂಬಕ್ಕಾಗಲಿಲ್ಲ. ಅದಕ್ಕವರು “ದೇವ್ರ ಮಹಾ ಪುರೋಹಿತನನ್ನ ಅವಮಾನ ಮಾಡೋಕೆ ನಿನಗೆಷ್ಟು ಧೈರ್ಯ?” ಅಂತ ಕೇಳಿದ್ರು. ಅದಕ್ಕೆ ಪೌಲ ಹೇಗೆ ಉತ್ರ ಕೊಟ್ಟ? ಅವನು ಕೊಟ್ಟ ಉತ್ರದಿಂದ ಅವನಲ್ಲಿ ಎಷ್ಟು ದೀನತೆ ಇತ್ತು, ಅವನು ನಿಯಮ ಪುಸ್ತಕಕ್ಕೆ ಎಷ್ಟು ಗೌರವ ಕೊಡ್ತಿದ್ದ ಅಂತ ಗೊತ್ತಾಗುತ್ತೆ. “ಸಹೋದರರೇ, ಪವಿತ್ರಗ್ರಂಥದಲ್ಲಿ ‘ನಿಮ್ಮ ಜನ್ರ ಅಧಿಕಾರಿಯನ್ನ ಬಯ್ಯಬೇಡಿ’ ಅಂತ ಬರೆದಿರೋದು ನಂಗೊತ್ತು. ಆತನು ಮಹಾ ಪುರೋಹಿತ ಅಂತ ಗೊತ್ತಾಗದೆ ಮಾತಾಡಿಬಿಟ್ಟೆ” ಅಂತ ಹೇಳಿದ. d (ಅ. ಕಾ. 23:4, 5; ವಿಮೋ. 22:28) ಆಮೇಲೆ ಅವನು ಮಾತಾಡೋ ರೀತಿಯನ್ನೇ ಬದಲಾಯಿಸಿದ. ಹಿರೀಸಭೆಯಲ್ಲಿ ಇರೋರು ಫರಿಸಾಯರು ಮತ್ತು ಸದ್ದುಕಾಯರು ಅನ್ನೋದನ್ನ ಮನಸ್ಸಲ್ಲಿಟ್ಟು ಹೀಗಂದ: “ಸಹೋದರರೇ, ನಾನೊಬ್ಬ ಫರಿಸಾಯ, ಫರಿಸಾಯರ ಕುಟುಂಬದಲ್ಲೇ ಹುಟ್ಟಿದ್ದೀನಿ. ಸತ್ತವ್ರನ್ನ ದೇವರು ಮತ್ತೆ ಎಬ್ಬಿಸ್ತಾನೆ ಅಂತ ನಾನು ನಂಬ್ತೀನಿ. ಅದಕ್ಕೇ ನನ್ನನ್ನ ವಿಚಾರಣೆ ಮಾಡ್ತಿದ್ದಾರೆ.”—ಅ. ಕಾ. 23:6.

ಬೇರೆ ಧರ್ಮದವರ ಹತ್ರ ಮಾತಾಡುವಾಗ ಪೌಲನ ತರ ಇಬ್ಬರೂ ಒಪ್ಪೋ ವಿಷ್ಯಗಳ ಬಗ್ಗೆ ಮಾತಾಡ್ತೀವಿ

18. (ಎ) ಪೌಲ ತಾನೊಬ್ಬ ಫರಿಸಾಯ ಅಂತ ಯಾಕೆ ಹೇಳಿದ? (ಬಿ) ಕೆಲವೊಂದು ಸಲ ನಾವೂ ಅದೇ ತರ ಹೇಗೆ ಮಾತಾಡಬಹುದು?

18 ಪೌಲ ತಾನೊಬ್ಬ ಫರಿಸಾಯ ಅಂತ ಯಾಕೆ ಹೇಳಿದ? ಯಾಕಂದ್ರೆ ಅವನು “ಫರಿಸಾಯರ ಕುಟುಂಬದಲ್ಲೇ” ಹುಟ್ಟಿದ್ದ. ಹಾಗಾಗಿ ತುಂಬ ಜನ ಅವನನ್ನ ಈಗ್ಲೂ ಒಬ್ಬ ಫರಿಸಾಯನ ತರನೇ ನೋಡ್ತಿದ್ರು. e ಆದ್ರೆ ಸತ್ತವರು ಮತ್ತೆ ಬದುಕೋದರ ಬಗ್ಗೆ ಫರಿಸಾಯರ ನಂಬಿಕೆನೇ ಬೇರೆ, ಪೌಲ ನಂಬಿಕೆನೇ ಬೇರೆ ಆಗಿತ್ತು. ಹಾಗಿರುವಾಗ ಪೌಲ ಹೇಗೆ ತನ್ನನ್ನ “ಫರಿಸಾಯ” ಅಂತ ಹೇಳಿದ? ಸತ್ತ ಮೇಲೆ ಆತ್ಮ ಬದುಕಿ ಉಳಿಯುತ್ತೆ ಮತ್ತು ನೀತಿವಂತರ ಆತ್ಮ ಮತ್ತೆ ಮನುಷ್ಯರ ಶರೀರಕ್ಕೆ ಹೋಗಿ ಬದುಕುತ್ತೆ ಅಂತ ಫರಿಸಾಯರು ನಂಬ್ತಿದ್ರು. ಆದ್ರೆ ಪೌಲ ಇದನ್ನೆಲ್ಲ ನಂಬ್ತಿರಲಿಲ್ಲ. ಅವನು ಸತ್ತವರು ಮತ್ತೆ ಬದುಕೋದರ ಬಗ್ಗೆ ಯೇಸು ಕಲಿಸಿದ್ದನ್ನ ನಂಬ್ತಿದ್ದ. (ಯೋಹಾ. 5:25-29) ಆದ್ರೂ ಸತ್ತವರು ಮತ್ತೆ ಬದುಕ್ತಾರೆ ಅಂತ ನಂಬದಿದ್ದ ಸದ್ದುಕಾಯರ ತರ ಅಲ್ಲ, ಫರಿಸಾಯರ ತರ ಮತ್ತೆ ಬದುಕೋ ನಿರೀಕ್ಷೆನ ತಾನು ನಂಬ್ತೀನಿ ಅನ್ನೋದನ್ನ ಪೌಲ ಒಪ್ಕೊಂಡ. ನಾವು ಕೂಡ ಕ್ಯಾಥೊಲಿಕ್‌ ಅಥವಾ ಪ್ರೊಟೆಸ್ಟೆಂಟ್‌ ಜನ್ರ ಹತ್ರ ಇದೇ ತರ ಮಾಡಬಹುದು. ಉದಾಹರಣೆಗೆ, ಅವರು ತ್ರಯೈಕ್ಯನ ನಂಬ್ತಾರೆ, ನಾವು ಬೈಬಲಲ್ಲಿ ಹೇಳಿರೋ ದೇವರನ್ನ ನಂಬ್ತೀವಿ. ಆದ್ರೂ ನಾವಿಬ್ರೂ ದೇವರು ಇದ್ದಾನೆ ಅಂತ ನಂಬ್ತೀವಿ. ಹಾಗಾಗಿ ‘ನಾವೂ ದೇವರನ್ನ ನಂಬ್ತೀವಿ’ ಅಂತ ಅವ್ರಿಗೆ ಹೇಳಬಹುದು.

19. ಹಿರೀಸಭೆಯಲ್ಲಿ ನಡೀತಿದ್ದ ಕೂಟದಲ್ಲಿ ಯಾಕೆ ಗಲಾಟೆ ಶುರು ಆಯ್ತು?

19 ಪೌಲ ಹೇಳಿದ ಆ ಮಾತು ಹಿರೀಸಭೆಯಲ್ಲೇ ಒಡಕು ತಂತು. ಅದ್ರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: “ಅಲ್ಲಿ ತುಂಬ ಸದ್ದುಗದ್ದಲ ಆಯ್ತು. ಫರಿಸಾಯರ ಪಕ್ಷದಲ್ಲಿದ್ದ ಕೆಲವು ಪಂಡಿತರು ‘ಈ ವ್ಯಕ್ತಿದು ಏನೂ ತಪ್ಪಿಲ್ಲ. ಒಬ್ಬ ದೇವದೂತ ಅಥವಾ ಕಣ್ಣಿಗೆ ಕಾಣದ ಜೀವಿ ಅವನ ಜೊತೆ ಮಾತಾಡಿರೋದಾದ್ರೆ—.’ ಅಂತ ಹೇಳಿ ತುಂಬ ವಾದ ಮಾಡಿದ್ರು.” (ಅ. ಕಾ. 23:9) ಸದ್ದುಕಾಯರು ದೇವದೂತರಿದ್ದಾರೆ ಅಂತ ನಂಬ್ತಿರಲಿಲ್ಲ. ಹಾಗಾಗಿ ಪೌಲನ ಹತ್ರ ಒಬ್ಬ ದೇವದೂತ ಮಾತಾಡಿರಬಹುದು ಅನ್ನೋ ಮಾತನ್ನಂತೂ ಅವರು ಒಪ್ಕೊಂಡಿರಲ್ಲ. (“ ಸದ್ದುಕಾಯರು ಮತ್ತು ಫರಿಸಾಯರು” ಅನ್ನೋ ಚೌಕ ನೋಡಿ.) ಅಲ್ಲಿ ಗಲಾಟೆ ಎಷ್ಟು ಜಾಸ್ತಿ ಆಯ್ತಂದ್ರೆ ಆ ರೋಮನ್‌ ಸೇನಾಪತಿ ಮತ್ತೆ ಪೌಲನನ್ನ ಅಲ್ಲಿಂದ ಕಾಪಾಡಬೇಕಾಗಿ ಬಂತು. (ಅ. ಕಾ. 23:10) ಹಾಗಾದ್ರೆ ಪೌಲ ಅಪಾಯದಿಂದ ಸಂಪೂರ್ಣವಾಗಿ ಪಾರಾದ್ನಾ? ಇಲ್ಲ. ಮುಂದೆ ಏನಾಯ್ತು? ಉತ್ರ ಮುಂದಿನ ಅಧ್ಯಾಯದಲ್ಲಿದೆ.

a ಅಲ್ಲಿ ಯೆಹೂದಿ ಕ್ರೈಸ್ತರು ತುಂಬ ಜನ ಇದ್ದಿದ್ರಿಂದ ಸಭೆಗಳೂ ತುಂಬ ಇದ್ದಿರಬೇಕು. ಅವರು ಕೂಟಗಳನ್ನ ನಡೆಸೋಕೆ ಮನೆಗಳಲ್ಲಿ ಸೇರಿಬರ್ತಿದ್ರು.

b ಕೆಲವು ವರ್ಷ ಆದ್ಮೇಲೆ, ಅಪೊಸ್ತಲ ಪೌಲ ಇಬ್ರಿಯರಿಗೆ ಅಥವಾ ಯೆಹೂದ್ಯರಿಗೆ ಪತ್ರ ಬರೆದಾಗ ಅದ್ರಲ್ಲಿ ಹೊಸ ಒಪ್ಪಂದ ಯಾಕೆ ಶ್ರೇಷ್ಠವಾಗಿದೆ ಅಂತ ಹೇಳಿದ. ಹಳೇ ಒಪ್ಪಂದದ ಬದಲು ಈಗ ಹೊಸ ಒಪ್ಪಂದ ಬಂದಿದೆ ಅನ್ನೋದನ್ನೂ ಸ್ಪಷ್ಟವಾಗಿ ಹೇಳಿದ. ಅದಕ್ಕೋಸ್ಕರ ಅವ್ರಿಗೆ ಅರ್ಥ ಆಗೋ ತರ, ಅವ್ರನ್ನ ಒಪ್ಪಿಸೋ ತರ ಚೆನ್ನಾಗಿ ವಿವರಿಸಿದ. ಇದ್ರಿಂದ ಯೆಹೂದಿ ಕ್ರೈಸ್ತರಿಗೆ ಸಹಾಯ ಆಗ್ತಿತ್ತು. ಮೋಶೆ ಕೊಟ್ಟ ನಿಯಮ ಪುಸ್ತಕವನ್ನ ಪಾಲಿಸಬೇಕು ಅಂತ ಹೇಳೋರ ಹತ್ರ ಮಾತಾಡೋಕೆ ಅವ್ರಿಗೆ ಸುಲಭ ಆಗ್ತಿತ್ತು. ಅಷ್ಟೇ ಅಲ್ಲ, ಮೋಶೆಯ ನಿಯಮ ಪುಸ್ತಕಕ್ಕೆ ತುಂಬ ಪ್ರಾಮುಖ್ಯತೆ ಕೊಡ್ತಿದ್ದ ಕ್ರೈಸ್ತರು ತಮ್ಮನ್ನ ತಿದ್ಕೊಂಡು ಹೊಸ ಏರ್ಪಾಡಿನ ಮೇಲೆ ನಂಬಿಕೆ ಇಡೋಕೆ ಇದು ಸಹಾಯ ಮಾಡಿರಬೇಕು.—ಇಬ್ರಿ. 8:7-13.

c ಆ ಗಂಡಸರು ನಾಜೀರರ ಹರಕೆಯನ್ನ ಮಾಡಿದ್ರು ಅಂತ ಪಂಡಿತರು ಹೇಳ್ತಾರೆ. (ಅರ. 6:1-21) ಮೋಶೆಯ ನಿಯಮ ಪುಸ್ತಕನೇ ರದ್ದಾಗಿರುವಾಗ ಅದ್ರಲ್ಲಿ ಹೇಳಿರೋ ನಾಜೀರರ ಹರಕೆನೂ ರದ್ದಾಗಿರುತ್ತೆ ಅಂತ ಪೌಲನಿಗೆ ಗೊತ್ತಿತ್ತು. ಆದ್ರೂ ಈ ಹರಕೆಯನ್ನ ತೀರಿಸೋದು ತಪ್ಪಲ್ಲ ಅಂತ ಪೌಲನಿಗೆ ಅನಿಸಿರಬೇಕು. ಅದಕ್ಕೆ ಅವನು ಅವ್ರ ಜೊತೆ ಹೋಗಿ ಅವ್ರ ಖರ್ಚನ್ನ ನೋಡ್ಕೊಂಡಿದ್ರಲ್ಲಿ ಏನೂ ತಪ್ಪಿಲ್ಲ. ಆದ್ರೆ ನಿರ್ದಿಷ್ಟವಾಗಿ ಅವರು ಯಾವ ರೀತಿಯ ಹರಕೆಯನ್ನ ಮಾಡ್ಕೊಂಡಿದ್ರು ಅಂತ ನಮಗೆ ಗೊತ್ತಿಲ್ಲ. ಆದ್ರೆ ಸಾಮಾನ್ಯವಾಗಿ ನಾಜೀರರು ತಮ್ಮ ಪಾಪ ಶುದ್ಧೀಕರಿಸೋಕೆ ಪ್ರಾಣಿ ಬಲಿ ಕೊಡ್ತಿದ್ರು. ಆದ್ರೆ ಪೌಲ ಇದನ್ನ ಮಾಡೋಕೆ ಖಂಡಿತ ಒಪ್ಪಿರಲ್ಲ. ಯಾಕಂದ್ರೆ ಯೇಸು ತನ್ನ ಪರಿಪೂರ್ಣ ಜೀವವನ್ನ ಬಲಿಯಾಗಿ ಕೊಟ್ಟ ಮೇಲೆ ಯಾವ ಪ್ರಾಣಿ ಬಲಿಗೂ ಪಾಪವನ್ನ ಪರಿಹರಿಸೋಕೆ ಆಗಲ್ಲ. ಆ ಸಮಯದಲ್ಲಿ ಪೌಲ ಏನೆಲ್ಲಾ ಮಾಡಿದ ಅಂತ ಬೈಬಲಲ್ಲಿ ಇಲ್ಲ. ಆದ್ರೆ ಅವನು ತನ್ನ ಮನಸ್ಸಾಕ್ಷಿ ಒಪ್ಪದಿರೋ ಯಾವುದನ್ನೂ ಮಾಡಿರಲ್ಲ ಅಂತ ನಾವು ಗ್ಯಾರೆಂಟಿಯಾಗಿ ಹೇಳಬಹುದು.

d ಪೌಲನಿಗೆ ಕಣ್ಣಿನ ಸಮಸ್ಯೆ ಇದ್ದಿದ್ರಿಂದ ಅದು ಮಹಾ ಪುರೋಹಿತ ಅಂತ ಅವನಿಗೆ ಗೊತ್ತಾಗ್ಲಿಲ್ಲ ಅಂತ ಕೆಲವರು ಹೇಳ್ತಾರೆ ಅಥವಾ ಅವನು ಯೆರೂಸಲೇಮಿಂದ ಬೇರೆ ಕಡೆ ಹೋಗಿ ತುಂಬ ವರ್ಷ ಆಗಿದ್ರಿಂದ ಅವನಿಗೆ ಆಗಿನ ಮಹಾ ಪುರೋಹಿತ ಯಾರು ಅಂತ ಗೊತ್ತಿಲ್ಲದೆ ಇದ್ದಿರಬೇಕು ಅಥವಾ ತನಗೆ ಹೊಡೆಯೋಕೆ ಆಜ್ಞೆ ಕೊಟ್ಟವರು ಯಾರು ಅಂತ ಪೌಲನಿಗೆ ಆ ಜನಜಂಗುಳಿಯಲ್ಲಿ ಕಾಣಿಸಿರಲ್ಲ.

e ಕ್ರಿ.ಶ. 49ರಲ್ಲಿ ಯೆಹೂದ್ಯರಲ್ಲದ ಜನ್ರು ಮೋಶೆಯ ನಿಯಮ ಪುಸ್ತಕವನ್ನ ಪಾಲಿಸಬೇಕಾ ಅಂತ ಅಪೊಸ್ತಲರು ಮತ್ತು ಹಿರಿಯರು ಚರ್ಚೆ ಮಾಡಿದಾಗ ಅಲ್ಲಿ “ಮುಂಚೆ ಫರಿಸಾಯರಾಗಿದ್ದ ಕೆಲವು ಸಹೋದರರು” ಇದ್ರು ಅಂತ ಬೈಬಲ್‌ ಹೇಳುತ್ತೆ. (ಅ. ಕಾ. 15:5) ಇಂಥ ಸಹೋದರರನ್ನ ಜನ್ರು ಫರಿಸಾಯರು ಅಂತಾನೇ ಗುರುತಿಸ್ತಿದ್ರು.