ಅಧ್ಯಾಯ 27
“ದೇವ್ರ ಆಳ್ವಿಕೆ ಬಗ್ಗೆ ಚೆನ್ನಾಗಿ ವಿವರಿಸಿ”
ಪೌಲ ರೋಮ್‌ನಲ್ಲಿ ಕೈದಿಯಾಗಿದ್ರೂ ಸಾರಿದ
ಆಧಾರ: ಅಪೊಸ್ತಲರ ಕಾರ್ಯ 28:11-31
1. ಪೌಲ ಮತ್ತು ಅವನ ಜೊತೆ ಇದ್ದವ್ರಿಗೆ ಯಾರ ಮೇಲೆ ಭರವಸೆ ಇತ್ತು? ಯಾಕೆ?
ಅದು ಕ್ರಿ.ಶ. 59. ಆಗ “ಸ್ಯೂಸ್ ಪುತ್ರರು” ಅನ್ನೋ ಚಿಹ್ನೆ ಇದ್ದ ಒಂದು ಹಡಗು ಮೆಡಿಟರೇನಿಯನ್‌ನ ಮಾಲ್ಟ ದ್ವೀಪದಿಂದ ಇಟಲಿಗೆ ಹೋಗ್ತಿತ್ತು. ಅದು ಬಹುಶಃ ಧಾನ್ಯಗಳನ್ನ ಸಾಗಿಸೋ ದೊಡ್ಡ ಹಡಗಾಗಿತ್ತು. ಅದ್ರಲ್ಲಿ ಕೈದಿಯಾಗಿದ್ದ ಪೌಲ ಮತ್ತು ಲೂಕ, ಅರಿಸ್ತಾರ್ಕ ಇದ್ರು. (ಅ. ಕಾ. 27:2) ಹಡಗಿನ ಸಿಬ್ಬಂದಿಗಳು ಸಂರಕ್ಷಣೆಗಾಗಿ ಗ್ರೀಕ್ ದೇವತೆ ಸ್ಯೂಸ್‌ನ ಅವಳಿ ಮಕ್ಕಳಾದ ಕಾಸ್ಟರ್ ಮತ್ತು ಪೋಲಕ್ಸ್‌ರನ್ನ ಬೇಡ್ಕೊಳ್ತಿದ್ರು. ಆದ್ರೆ ಪೌಲ ಮತ್ತು ಅವನ ಜೊತೆ ಇದ್ದವರು ಹಾಗೆ ಮಾಡಲಿಲ್ಲ. (ಅ. ಕಾ. 28:11) ಯಾಕಂದ್ರೆ ಅವರು ಯೆಹೋವನನ್ನ ಆರಾಧಿಸ್ತಿದ್ರು. ಆತನು ಅವ್ರಿಗೆ, ಪೌಲ ರೋಮಿನಲ್ಲಿ ಸಾಕ್ಷಿ ಕೊಡ್ತಾನೆ ಮತ್ತು ರೋಮಿನ ರಾಜನ ಮುಂದೆ ನಿಲ್ತಾನೆ ಅಂತ ಹೇಳಿದ್ದನು.—ಅ. ಕಾ. 23:11; 27:24.
2, 3. (ಎ) ಪೌಲ ಪ್ರಯಾಣ ಮಾಡ್ತಿದ್ದ ಹಡಗು ಯಾವ ಮಾರ್ಗವಾಗಿ ಸಾಗಿತು? (ಬಿ) ಈ ಪ್ರಯಾಣದ ಪೂರ್ತಿ ಪೌಲನಿಗೆ ಯಾರ ಬೆಂಬಲ ಇತ್ತು?
2 ಹಡಗು ಮೊದಲು ಸುರಕೂಸ್ ಅನ್ನೋ ಸ್ಥಳ ತಲುಪ್ತು. ಅದು ಸಿಸಿಲ್ಯದ ಸುಂದರ ಪಟ್ಟಣವಾಗಿದ್ದು ಅಥೆನ್ಸ್ ಮತ್ತು ರೋಮ್‌ನಷ್ಟೇ ಹೆಸ್ರುವಾಸಿಯಾಗಿತ್ತು. ಮೂರು ದಿನ ಆದ್ಮೇಲೆ ಆ ಹಡಗು ದಕ್ಷಿಣ ಇಟಲಿಯ ರೇಗಿಯಕ್ಕೆ ಹೋಯ್ತು. ಅಲ್ಲಿಂದ ಅದು ದಕ್ಷಿಣ ದಿಕ್ಕಿನಿಂದ ಬೀಸ್ತಿದ್ದ ಗಾಳಿಯ ಸಹಾಯದಿಂದ ತುಂಬ ವೇಗವಾಗಿ 320 ಕಿ.ಮೀ. ದೂರ ಪ್ರಯಾಣ ಮಾಡಿ ಮಾರನೇ ದಿನನೇ ಇಟಲಿಯ ಪೊತಿಯೋಲ (ಅದು ಈಗಿನ ನೇಪಲ್ಸ್‌ಗೆ ಹತ್ರದಲ್ಲಿದೆ) ಬಂದರಿಗೆ ಬಂದು ತಲುಪ್ತು.—ಅ. ಕಾ. 28:12, 13.
3 ಪೌಲ ಈಗ ರೋಮಿನ ಪ್ರಯಾಣದ ಕೊನೇ ಹಂತದಲ್ಲಿದ್ದ. ಅಲ್ಲಿ ಹೋದ ಮೇಲೆ ಅವನು ಚಕ್ರವರ್ತಿ ನೀರೋ ಮುಂದೆ ಮಾತಾಡಬೇಕಿತ್ತು. ಈ ಪ್ರಯಾಣದ ಪೂರ್ತಿ “ಎಲ್ಲ ತರದ ಸಾಂತ್ವನ ಕೊಡೋ ದೇವರು” ಪೌಲನ ಜೊತೆ ಇದ್ದನು. (2 ಕೊರಿಂ. 1:3) ದೇವರು ಅವನಿಗೆ ಕೊಡ್ತಿದ್ದ ಬೆಂಬಲನೂ ಕಡಿಮೆ ಆಗಿರಲಿಲ್ಲ, ಪೌಲನಿಗಿದ್ದ ಹುರುಪೂ ಕಡಿಮೆ ಆಗಿರಲಿಲ್ಲ. ಅದ್ರ ಬಗ್ಗೆನೇ ನಾವು ಈ ಅಧ್ಯಾಯದಲ್ಲಿ ಕಲಿಯೋಣ.
‘ಪೌಲನಿಗೆ ಖುಷಿ ಆಯ್ತು, ಅವನು ದೇವ್ರಿಗೆ ಕೃತಜ್ಞತೆ ಹೇಳಿದ’ (ಅ. ಕಾ. 28:14, 15)
4, 5. (ಎ) ಪೊತಿಯೋಲದಲ್ಲಿ ಪೌಲ ಮತ್ತು ಅವನ ಜೊತೆ ಇದ್ದವರನ್ನ ಹೇಗೆ ನೋಡ್ಕೊಂಡ್ರು? (ಬಿ) ಪೌಲನಿಗೆ ಅಷ್ಟೊಂದು ಸ್ವಾತಂತ್ರ್ಯ ಯಾಕೆ ಕೊಟ್ಟಿರಬಹುದು? (ಸಿ) ಜೈಲಿನಲ್ಲಿ ಇದ್ರೂ ಕ್ರೈಸ್ತರು ತಮ್ಮ ಒಳ್ಳೇ ನಡತೆಯಿಂದ ಯಾವ ಪ್ರಯೋಜನಗಳನ್ನ ಪಡೀಬಹುದು?
4 ಪೌಲ ಮತ್ತು ಅವನ ಜೊತೆ ಇದ್ದವ್ರಿಗೆ ಪೊತಿಯೋಲದಲ್ಲಿ “ಸಹೋದರರು ಸಿಕ್ಕಿದ್ರು. ಅವರು ಏಳು ದಿನ ನಮ್ಮ ಜೊತೆ ಇರಿ ಅಂತ ಬೇಡ್ಕೊಂಡ್ರು.” (ಅ. ಕಾ. 28:14) ಧಾರಾಳತೆ, ಅತಿಥಿಸತ್ಕಾರ ತೋರಿಸೋದ್ರಲ್ಲಿ ಆ ಸಹೋದರರು ಎಷ್ಟು ಒಳ್ಳೇ ಮಾದರಿ ಇಟ್ಟಿದ್ದಾರಲ್ವಾ! ಅವರು ಪೌಲ ಮತ್ತು ಅವನ ಜೊತೆ ಇದ್ದವ್ರಿಗೆ ಕಾಳಜಿ ತೋರಿಸಿದ್ರು. ಆದ್ರೆ ಅದಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ಪೌಲನಿಂದ ಪ್ರೋತ್ಸಾಹ ಪಡ್ಕೊಂಡ್ರು. ಆದ್ರೆ ಕೈದಿಯಾಗಿದ್ದ ಪೌಲನಿಗೆ ಇಷ್ಟು ಸ್ವಾತಂತ್ರ್ಯ ಯಾಕೆ ಕೊಟ್ರು? ಇದಕ್ಕೆ ಕಾರಣ ಪೌಲನ ನಡತೆ ಆಗಿರಬಹುದು. ಅವನು ರೋಮನ್ ಕಾವಲುಗಾರರ ನಂಬಿಕೆ ಗಳಿಸಿದ್ದ.
5 ಅದೇ ತರ ಇವತ್ತು ಯೆಹೋವನ ಸೇವಕರಿಗೂ ಜೈಲಿನಲ್ಲಿ, ಸೆರೆಶಿಬಿರಗಳಲ್ಲಿ ಜಾಸ್ತಿ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಇದಕ್ಕೆ ಕಾರಣ ಅವ್ರ ಒಳ್ಳೇ ನಡತೆನೇ. ಉದಾಹರಣೆಗೆ, ರೊಮೇನಿಯದಲ್ಲಿ ದರೋಡೆ ಮಾಡಿದ್ದಕ್ಕೆ 75 ವರ್ಷ ಶಿಕ್ಷೆ ಅನುಭವಿಸ್ತಿದ್ದ ಒಬ್ಬ ವ್ಯಕ್ತಿ ಬೈಬಲ್ ಅಧ್ಯಯನ ಮಾಡೋಕೆ ಶುರು ಮಾಡಿದ. ಕಲಿತಾ ಕಲಿತಾ ಅವನು ತನ್ನ ಗುಣ, ವ್ಯಕ್ತಿತ್ವದಲ್ಲಿ ತುಂಬ ಬದಲಾವಣೆ ಮಾಡ್ಕೊಂಡ. ಇದನ್ನ ನೋಡಿದ ಜೈಲಿನ ಅಧಿಕಾರಿಗಳು ಅವನನ್ನ ಯಾವುದೇ ಕಾವಲು ಇಲ್ಲದೆ ಪಟ್ಟಣಕ್ಕೆ ಹೋಗಿ ಜೈಲಿಗೆ ಬೇಕಾಗಿರೋ ವಸ್ತುಗಳನ್ನ ಖರೀದಿಸೋ ಕೆಲ್ಸ ಕೊಟ್ರು. ನಮ್ಮ ಒಳ್ಳೇ ನಡತೆಯಿಂದ ಹೀಗೆ ಸ್ವಾತಂತ್ರ್ಯ ಸಿಗುತ್ತೆ, ಅಷ್ಟೇ ಅಲ್ಲ ಮುಖ್ಯವಾಗಿ ಯೆಹೋವನಿಗೆ ಹೊಗಳಿಕೆ ಸಿಗುತ್ತೆ.—1 ಪೇತ್ರ 2:12.
6, 7. ರೋಮ್‌ನ ಸಹೋದರರು ಹೇಗೆ ಪ್ರೀತಿ ತೋರಿಸಿದ್ರು?
6 ಪೊತಿಯೋಲದಿಂದ ಪೌಲ ಮತ್ತೆ ಅವನ ಜೊತೆಗೆ ಇದ್ದವರು ಕಾಪುವ ವರೆಗೆ ಬಹುಶಃ ನಡ್ಕೊಂಡು ಹೋದ್ರು. ಇದು ರೋಮಿಗೆ ಹೋಗೋ ಅಪ್ಪಿಯ ಮಾರ್ಗವಾಗಿ ಸುಮಾರು 50 ಕಿ.ಮೀ. ದೂರದಲ್ಲಿತ್ತು. ಈ ಪ್ರಯಾಣ ವಿಶೇಷವಾಗಿತ್ತು. ಯಾಕಂದ್ರೆ ಈ ರಸ್ತೆನ ಲಾವಾರಸದಿಂದಾಗಿರೋ ದೊಡ್ಡ ಕಲ್ಲುಗಳಿಂದ ಮಾಡಿದ್ರು. ಈ ಪ್ರಸಿದ್ಧ ರಸ್ತೆಯಲ್ಲಿ ಪ್ರಯಾಣ ಮಾಡೋವಾಗ ಹಳ್ಳಿಯ ಸುಂದರ ದೃಶ್ಯಗಳು ಕಾಣ್ತಿತ್ತು. ಕೆಲವು ಕಡೆ ಮೆಡಿಟರೇನಿಯನ್ ಸಮುದ್ರ ತೀರನೂ ಕಾಣಿಸ್ತಿತ್ತು. ಹೀಗೆ ಇವರು ಸದಾ ನೀರಿರೋ ಪೊಂಟಿನ್ ಜವುಗು ಪ್ರದೇಶ ದಾಟಿ ಹೋದ್ರು. ಇದು ರೋಮಿಂದ 60 ಕಿ.ಮೀ ದೂರ ಇತ್ತು. ಇಲ್ಲೇ ಅಪ್ಪಿಯ ಪೇಟೆ ಕೂಡ ಇತ್ತು. ರೋಮ್‌ನಲ್ಲಿದ್ದ “ಸಹೋದರರಿಗೆ ನಾವು ಬರ್ತಿರೋ ಸುದ್ದಿ ಗೊತ್ತಾಗಿ” ಅವರು ಈ ಪೇಟೆಯ ವರೆಗೆ ಬಂದ್ರು ಅಂತ ಲೂಕ ಹೇಳಿದ್ದಾನೆ. ಇನ್ನು ಕೆಲವರು ರೋಮಿನಿಂದ 50 ಕಿ.ಮೀ. ದೂರದಲ್ಲಿದ್ದ ವಿಶ್ರಾಂತಿ ಸ್ಥಳವಾದ ತ್ರಿಛತ್ರಕ್ಕೆ ಬಂದು ಕಾಯ್ತಿದ್ರು. ಇದ್ರಿಂದ ಅವ್ರಿಗೆ ಪೌಲನ ಮೇಲೆ ಎಷ್ಟು ಪ್ರೀತಿ ಇತ್ತು ಅಂತ ಗೊತ್ತಾಗುತ್ತೆ!—ಅ. ಕಾ. 28:15.
7 ನಿಜ ಹೇಳಬೇಕಂದ್ರೆ ಅಪ್ಪಿಯ ಪೇಟೆ ಪ್ರಯಾಣಿಕರಿಗೆ ವಿಶ್ರಾಂತಿ ಪಡ್ಕೊಳ್ಳೋಕೆ ಸೂಕ್ತವಾದ ಜಾಗ ಆಗಿರಲಿಲ್ಲ. ಅದ್ರ ಬಗ್ಗೆ ರೋಮನ್ ಕವಿ ಹೊರೇಸ್ ಹೀಗೆ ಹೇಳಿದ್ದಾನೆ: ಆ ಪೇಟೆ “ಪ್ರಯಾಣಿಕರಿಂದ ಕಿಕ್ಕಿರಿದಿತ್ತು ಮತ್ತು ಅಲ್ಲಿದ್ದ ಪ್ರವಾಸಿ ಗೃಹದ ಸಿಬ್ಬಂದಿಗಳು ತುಂಬಾ ಒರಟಾಗಿದ್ರು.” ಅಲ್ಲಿನ “ನೀರು ವಾಕರಿಕೆ ಬರಿಸೋ ತರ ಇತ್ತು.” ಅದಕ್ಕೆ ಆ ಕವಿ ಅಲ್ಲಿ ಊಟ ಕೂಡ ಮಾಡಲಿಲ್ಲವಂತೆ. ಇಷ್ಟೆಲ್ಲಾ ಸಮಸ್ಯೆಗಳಿದ್ರೂ ಆ ಜಾಗಕ್ಕೆ ರೋಮ್‌ನ ಸಹೋದರರು ಬಂದು, ಪೌಲ ಮತ್ತು ಅವನ ಜೊತೆ ಇದ್ದವರು ಬರೋ ತನಕ ಸಂತೋಷದಿಂದ ಕಾಯ್ತಿದ್ರು. ಅವ್ರ ಉದ್ದೇಶ ಪೌಲ ಮತ್ತು ಅವನ ಜೊತೆ ಇದ್ದವರ ಪ್ರಯಾಣದ ಕೊನೇ ಹಂತದಲ್ಲಿ ಅವ್ರ ಜೊತೆಗಿರಬೇಕು ಅನ್ನೋದೇ ಆಗಿತ್ತು.
8. ಸಹೋದರರನ್ನ “ನೋಡಿದಾಗ” ಪೌಲ ಯಾಕೆ ದೇವರಿಗೆ ಕೃತಜ್ಞತೆ ಹೇಳಿದ?
8 “ಅವ್ರನ್ನ ನೋಡಿದಾಗ ಪೌಲನಿಗೆ ತುಂಬ ಖುಷಿ ಆಯ್ತು. ಅವನು ದೇವ್ರಿಗೆ ಕೃತಜ್ಞತೆ ಹೇಳಿದ” ಅಂತ ಬೈಬಲ್ ಹೇಳುತ್ತೆ. (ಅ. ಕಾ. 28:15) ಆ ಪ್ರೀತಿಯ ಸಹೋದರರನ್ನ ನೋಡಿದಾಗ ಪೌಲನಿಗೆ ಬಲ ಮತ್ತು ಸಾಂತ್ವನ ಸಿಕ್ತು. ಪೌಲನಿಗೆ ಅವ್ರಲ್ಲಿ ಕೆಲವರ ಪರಿಚಯನೂ ಇತ್ತು. ಆದ್ರೆ ಅವನು ಯಾಕೆ ದೇವರಿಗೆ ಕೃತಜ್ಞತೆ ಹೇಳಿದ? ಅವರು ತೋರಿಸಿದ ಪ್ರೀತಿ ಸಾಮಾನ್ಯವಾದ ಪ್ರೀತಿ ಅಲ್ಲ, ಪವಿತ್ರಶಕ್ತಿಯ ಗುಣ ಅಂತ ಅವನಿಗೆ ಗೊತ್ತಿತ್ತು. (ಗಲಾ. 5:22) ಇವತ್ತು ಕೂಡ ಕ್ರೈಸ್ತರು ಬೇರೆವ್ರಿಗೋಸ್ಕರ ತ್ಯಾಗ ಮಾಡೋಕೆ, ಸಂಕಷ್ಟದಲ್ಲಿರೋರಿಗೆ ಸಾಂತ್ವನ ಕೊಡೋಕೆ ಪವಿತ್ರಶಕ್ತಿ ಪ್ರೇರಿಸುತ್ತೆ.—1 ಥೆಸ. 5:11, 14.
9. ಪೌಲನನ್ನ ಭೇಟಿಯಾದ ಸಹೋದರರ ತರ ನಾವೇನು ಮಾಡಬಹುದು?
9 ಉದಾಹರಣೆಗೆ ಸಂಚರಣ ಮೇಲ್ವಿಚಾರಕರಿಗೆ, ಮಿಷನರಿಗಳಿಗೆ ಮತ್ತು ಬೇರೆ ಪೂರ್ಣ ಸಮಯದ ಸೇವಕರಿಗೆ ಅತಿಥಿಸತ್ಕಾರ ಮಾಡೋಕೆ ಪವಿತ್ರಶಕ್ತಿ ದೀನತೆ ಇರೋರನ್ನ ಪ್ರೇರಿಸುತ್ತೆ. ಇಂಥ ಸೇವಕರು ಯೆಹೋವನ ಸೇವೆ ಮಾಡೋಕೆ ದೊಡ್ಡ ದೊಡ್ಡ ತ್ಯಾಗಗಳನ್ನ ಮಾಡಿದ್ದಾರೆ. ಹಾಗಾಗಿ ಹೀಗೆ ಕೇಳ್ಕೊಳ್ಳಿ: ‘ಸರ್ಕಿಟ್ ಮೇಲ್ವಿಚಾರಕರ ಭೇಟಿ ಸಮಯದಲ್ಲಿ ಅವ್ರಿಗೆ ಬೆಂಬಲ ಕೊಡೋಕೆ ನಾನೇನು ಮಾಡಬಹುದು? ಅವ್ರಿಗೆ ಮತ್ತು ಅವ್ರ ಹೆಂಡ್ತಿಗೆ ಅತಿಥಿಸತ್ಕಾರ ಮಾಡೋಕಾಗುತ್ತಾ? ಅವ್ರ ಜೊತೆ ಸೇವೆಗೆ ಹೋಗೋಕೆ ಆಗುತ್ತಾ?’ ಹೀಗೆ ಮಾಡಿದ್ರೆ ನಿಮಗೆ ತುಂಬ ಆಶೀರ್ವಾದ ಸಿಗುತ್ತೆ. ಇದೇ ತರ ರೋಮ್‌ನಿಂದ ಬಂದ ಸಹೋದರರಿಗೂ ಆಯ್ತು. ಪೌಲ ಮತ್ತೆ ಅವನ ಜೊತೆ ಇದ್ದವರು ತಮಗಾದ ಕೆಲವು ಒಳ್ಳೇ ಅನುಭವಗಳನ್ನ ಹೇಳಿದಾಗ ಅವ್ರಿಗೆ ತುಂಬಾ ಖುಷಿ ಆಯ್ತು!—ಅ. ಕಾ. 15:3, 4.
“ಎಲ್ಲ ಕಡೆ ಈ ಹೊಸ ಧರ್ಮದ ಬಗ್ಗೆನೇ ಮಾತಾಡ್ತಾ ಇದ್ದಾರೆ” (ಅ. ಕಾ. 28:16-22)
10. (ಎ) ರೋಮಿನಲ್ಲಿ ಪೌಲನ ಪರಿಸ್ಥಿತಿ ಹೇಗಿತ್ತು? (ಬಿ) ಪೌಲ ರೋಮನ್ನ ತಲುಪಿದ ಸ್ವಲ್ಪದರಲ್ಲೇ ಏನು ಮಾಡಿದ?
10 ಕೊನೆಗೂ, ಪೌಲ ಮತ್ತು ಅವನ ಜೊತೆಗಿದ್ದವರು ರೋಮ್ ತಲುಪಿದ್ರು. ಅಲ್ಲಿ “ಸೈನಿಕರ ಕಾವಲಲ್ಲಿ ಉಳಿಯೋಕೆ ಪೌಲನಿಗೆ ಅನುಮತಿ ಸಿಕ್ತು.” (ಅ. ಕಾ. 28:16) ಸಾಮಾನ್ಯವಾಗಿ ಈ ತರ ಕಾವಲಲ್ಲಿ ಇರೋರ ಕೈಗಳಿಗೆ ಬೇಡಿ ಹಾಕ್ತಿದ್ರು. ತಪ್ಪಿಸ್ಕೊಂಡು ಹೋಗಬಾರದು ಅಂತ ಹೀಗೆ ಮಾಡ್ತಿದ್ರು. ಆದ್ರೆ ಈ ಬೇಡಿಗಳು ಪೌಲ ಸಾರೋದನ್ನ ನಿಲ್ಲಿಸೋದಕ್ಕೆ ಆಯ್ತಾ? ಇಲ್ಲ. ಅವನು ಸ್ವಲ್ಪ ವಿಶ್ರಾಂತಿ ತಗೊಂಡು ಮೂರೇ ದಿನಗಳಲ್ಲಿ ಸಾಕ್ಷಿ ಕೊಡೋಕೆ ಮತ್ತು ತನ್ನ ಬಗ್ಗೆ ತಿಳಿಸೋಕೆ ರೋಮಲ್ಲಿದ್ದ ಯೆಹೂದ್ಯರ ಮುಖ್ಯಸ್ಥರನ್ನ ಬರೋಕೆ ಹೇಳಿದ.
11, 12. ರೋಮಿನಲ್ಲಿದ್ದ ಯೆಹೂದ್ಯರಿಗೆ ಪೌಲ ತನ್ನ ಬಗ್ಗೆ ಇರೋ ತಪ್ಪಭಿಪ್ರಾಯವನ್ನ ಸರಿಪಡಿಸೋಕೆ ಏನು ಮಾಡಿದ?
11 ಪೌಲ ಅವ್ರಿಗೆ ಹೀಗಂದ: “ಸಹೋದರರೇ, ನಾನು ನಮ್ಮ ಜನ್ರ ವಿರುದ್ಧ ಆಗಲಿ, ಪೂರ್ವಜರ ಆಚಾರವಿಚಾರಗಳ ವಿರುದ್ಧ ಆಗಲಿ ಏನೂ ಮಾಡಲಿಲ್ಲ. ಆದ್ರೂ ನನ್ನನ್ನ ಒಬ್ಬ ಕೈದಿನ ಕರ್ಕೊಂಡು ಬರೋ ತರ ಯೆರೂಸಲೇಮಿಂದ ಕರ್ಕೊಂಡು ಬಂದು ರೋಮನ್ನರ ಕೈಗೆ ಒಪ್ಪಿಸಿದ್ರು. ರೋಮನ್ನರು ನನ್ನನ್ನ ವಿಚಾರಣೆಮಾಡಿದಾಗ ಮರಣಶಿಕ್ಷೆ ಸಿಗುವಂಥ ತಪ್ಪೇನೂ ನಾನು ಮಾಡಿಲ್ಲ ಅಂತ ಗೊತ್ತಾಯ್ತು. ಹಾಗಾಗಿ ಅವರು ನನ್ನನ್ನ ಬಿಟ್ಟುಬಿಡೋಣ ಅಂದ್ಕೊಂಡ್ರು. ಆದ್ರೆ ಯೆಹೂದ್ಯರು ಅದಕ್ಕೆ ಒಪ್ಪಲಿಲ್ಲ. ಹಾಗಾಗಿ ನಾನು ರೋಮಿನ ರಾಜನ ಹತ್ರ ಮಾತಾಡಬೇಕು ಅಂತ ಕೇಳ್ಕೊಂಡೆ. ನನ್ನ ಸ್ವಂತ ಜನ್ರ ಮೇಲೆ ಆರೋಪ ಹಾಕಬೇಕು ಅಂತ ನಾನು ಹೀಗೆ ಮಾಡಿಲ್ಲ.”—ಅ. ಕಾ. 28:17-19.
12 ಪೌಲ ಅಲ್ಲಿಗೆ ಬಂದಿದ್ದ ಯೆಹೂದ್ಯರನ್ನ “ಸಹೋದರರೇ” ಅಂತ ಕರೆಯೋದ್ರ ಮೂಲಕ ತಾನೂ ಅವರಲ್ಲೊಬ್ಬ ಅನ್ನೋ ಭಾವನೆ ಮೂಡಿಸಿದ. ಅವ್ರಿಗೆ ತನ್ನ ಬಗ್ಗೆ ಏನಾದ್ರೂ ತಪ್ಪಭಿಪ್ರಾಯ ಇದ್ರೆ ಅದನ್ನ ಸರಿಪಡಿಸೋಕೆ ಪ್ರಯತ್ನಿಸಿದ. (1 ಕೊರಿಂ. 9:20) ತಾನು ಅಲ್ಲಿಗೆ ಬಂದಿದ್ದು ಆ ಯೆಹೂದ್ಯರ ಮೇಲೆ ಆರೋಪ ಹಾಕೋದಕ್ಕಲ್ಲ, ಬದಲಿಗೆ ರೋಮಿನ ರಾಜನಿಗೆ ಅಪೀಲು ಮಾಡೋಕೆ ಅಂತ ಹೇಳಿದ. ಅಲ್ಲಿನ ಯೆಹೂದ್ಯರಿಗೆ ಇದ್ರ ಬಗ್ಗೆ ಗೊತ್ತಿರಲಿಲ್ಲ. (ಅ. ಕಾ. 28:21) ಈ ವಿಷ್ಯನ ಯೆಹೂದದಲ್ಲಿ ಇದ್ದ ಯೆಹೂದ್ಯರು, ರೋಮಿನಲ್ಲಿರೋ ಯೆಹೂದ್ಯರಿಗೆ ಹೇಳೋಕೆ ಯಾಕೆ ತಡ ಆಯ್ತು? ಇದರ ಬಗ್ಗೆ ಒಂದು ಪುಸ್ತಕ ಹೀಗೆ ಹೇಳುತ್ತೆ: “ಚಳಿಗಾಲ ಮುಗಿದ ತಕ್ಷಣ ಇಟಲಿಗೆ ಬಂದ ಹಡಗುಗಳಲ್ಲಿ ಪೌಲ ಬಂದ ಹಡಗು ಮೊದಲನೇ ಹಡಗು ಆಗಿರಬೇಕು. ಅದಕ್ಕೆ ಯೆರೂಸಲೇಮಿನಲ್ಲಿದ್ದ ಯೆಹೂದಿ ಅಧಿಕಾರಿಗಳ ಪ್ರತಿನಿಧಿಗಳಾಗಲಿ, ಆರೋಪಕ್ಕೆ ಸಂಬಂಧಿಸಿದ ಪತ್ರವಾಗಲಿ ಇಲ್ಲಿಗೆ ಇನ್ನೂ ತಲುಪಿರಲಿಲ್ಲ.”
13, 14. (ಎ) ಪೌಲ ಹೇಗೆ ದೇವರ ಆಳ್ವಿಕೆ ಕಡೆಗೆ ಜನರ ಗಮನ ಸೆಳೆದ? (ಬಿ) ನಾವು ಹೇಗೆ ಅವನ ಮಾದರಿಯನ್ನ ಅನುಕರಿಸಬಹುದು?
13 ಆಮೇಲೆ ಪೌಲ ಮುಂದಿನ ಮಾತನ್ನ ಹೇಳೋ ಮೂಲಕ ದೇವರ ಆಳ್ವಿಕೆ ಕಡೆಗೆ ಅವರ ಗಮನ ಸೆಳೆದ: “ಈ ವಿಷ್ಯ ಹೇಳೋಕೆ ನಾನು ನಿಮ್ಮನ್ನ ಇಲ್ಲಿ ಬರೋಕೆ ಹೇಳಿದೆ. ಇಸ್ರಾಯೇಲ್ಯರು ಏನು ನಂಬ್ತಾರೋ ಅದನ್ನೇ ನಾನು ನಂಬ್ತಾ ಇರೋದ್ರಿಂದ ನನ್ನ ಕೈಗೆ ಬೇಡಿ ಬಿದ್ದಿದೆ” ಅಂದ. (ಅ. ಕಾ. 28:20) ಇಸ್ರಾಯೇಲ್ಯರ ಆ ನಂಬಿಕೆಗೆ ಆಧಾರ ಮೆಸ್ಸೀಯ ಮತ್ತು ಆತನ ಆಳ್ವಿಕೆ ಆಗಿತ್ತು. ಇದೇ ಕ್ರೈಸ್ತ ಸಭೆಯ ಬೋಧನೆ ಆಗಿತ್ತು. ಅದಕ್ಕೆ ಯೆಹೂದಿ ಮುಖ್ಯಸ್ಥರು ಪೌಲನಿಗೆ ಹೀಗೆ ಉತ್ರ ಕೊಟ್ರು: “ಎಲ್ಲ ಕಡೆ ಈ ಹೊಸ ಧರ್ಮದ ಬಗ್ಗೆನೇ ಮಾತಾಡ್ತಾ ಇದ್ದಾರೆ. ಅದಕ್ಕೆ ಇದ್ರ ಬಗ್ಗೆ ನಿಂಗೆ ಏನು ಹೇಳೋಕಿದೆ ಅಂತ ಕೇಳಿಸ್ಕೊಳ್ಳೋಕೆ ನಮಗೆ ಆಸೆ ಇದೆ.”—ಅ. ಕಾ. 28:22.
14 ಸಿಹಿಸುದ್ದಿ ಸಾರೋ ಅವಕಾಶ ಸಿಗೋವಾಗ ನಾವೂ ಪೌಲನ ತರ ಏನು ಮಾಡಬಹುದು? ನಾವು ಮನೆಯವರಿಗೆ ಹೇಳೋ ವಿಷ್ಯ ಅಥ್ವಾ ಕೇಳೋ ಪ್ರಶ್ನೆ ಅವ್ರನ್ನ ಯೋಚಿಸೋ ತರ ಮಾಡಬೇಕು ಮತ್ತು ಅವ್ರ ಆಸಕ್ತಿ ಕೆರಳಿಸೋ ತರ ಮಾಡಬೇಕು. ಇದಕ್ಕಾಗಿ ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕ ಮತ್ತು ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ ಕಿರುಹೊತ್ತಗೆಯಲ್ಲಿ ಒಳ್ಳೇ ಸಲಹೆಗಳಿವೆ. ನೀವು ಇವುಗಳನ್ನ ಚೆನ್ನಾಗಿ ಉಪಯೋಗಿಸ್ತೀರಾ?
ಪೌಲ ‘ಚೆನ್ನಾಗಿ ವಿವರಿಸಿ’ ನಮಗೊಂದು ಮಾದರಿ ಇಟ್ಟ (ಅ. ಕಾ. 28:23-29)
15. ಪೌಲ ಸಾರಿದ ರೀತಿಯಿಂದ ನಾವು ಯಾವ ನಾಲ್ಕು ಅಂಶಗಳನ್ನ ಕಲಿಬಹುದು?
15 ರೋಮ್‌ನಲ್ಲಿದ್ದ ಯೆಹೂದ್ಯರು ಪೌಲನನ್ನ ಯಾವ ದಿನ ಭೇಟಿ ಮಾಡಬೇಕು ಅಂತ ಅಂದ್ಕೊಂಡಿದ್ರೋ ಆ ದಿನ ಅವನಿದ್ದ ಮನೆಗೆ ಬಂದ್ರು. ಆ ದಿನ “ತುಂಬಾ ಜನ” ಬಂದಿದ್ರು. ಪೌಲ “ಅವ್ರಿಗೆ ದೇವ್ರ ಆಳ್ವಿಕೆ ಬಗ್ಗೆ ಚೆನ್ನಾಗಿ ವಿವರಿಸಿದ. ಮೋಶೆಯ ನಿಯಮ ಪುಸ್ತಕವನ್ನ, ಪ್ರವಾದಿಗಳು ಬರೆದ ಪುಸ್ತಕಗಳನ್ನ ಉಪಯೋಗಿಸಿ ಯೇಸು ಬಗ್ಗೆ ಅರ್ಥಮಾಡಿಸೋಕೆ ಪ್ರಯತ್ನ ಮಾಡಿದ.” (ಅ. ಕಾ. 28:23) ಇಲ್ಲಿ ಪೌಲ ಸಾರಿದ ರೀತಿಯಿಂದ ನಾವು ನಾಲ್ಕು ಅಂಶಗಳನ್ನ ಕಲೀಬಹುದು. ಮೊದಲನೇದು, ಅವನು ಸಾರಿದ ಮುಖ್ಯ ವಿಷ್ಯ ದೇವರ ಆಳ್ವಿಕೆ ಬಗ್ಗೆ ಇತ್ತು. ಎರಡನೇದು, ಅವನು “ಅರ್ಥಮಾಡಿಸೋಕೆ” ಜನ್ರಿಗೆ ಇಷ್ಟವಾಗೋ ತರ ಮಾತಾಡಿದ. ಮೂರನೇದು, ನಿಯಮ ಪುಸ್ತಕದಿಂದ ತರ್ಕಿಸಿದ. ನಾಲ್ಕನೇದು, “ಬೆಳಗಿಂದ ಸಾಯಂಕಾಲದ ತನಕ” ಸಾರೋ ಮೂಲಕ ಬೇರೆಯವರ ಬಗ್ಗೆ ಕಾಳಜಿ ತೋರಿಸಿದ. ನಿಜವಾಗಿ ಪೌಲ ನಮಗೆ ಒಳ್ಳೇ ಮಾದರಿಯಾಗಿದ್ದಾನೆ! ಇದ್ರಿಂದ ಏನಾಯ್ತು ಗೊತ್ತಾ? “ಅವನು ಹೇಳಿದ್ದನ್ನ ಕೆಲವರು ನಂಬಿದ್ರು.” ಆದ್ರೆ ಇನ್ನು ಕೆಲವರು ನಂಬಲಿಲ್ಲ. ಆಮೇಲೆ, ಗಲಾಟೆ ಶುರು ಆಗಿದ್ರಿಂದ ಜನ ಅಲ್ಲಿಂದ “ಹೋಗೋಕೆ ಶುರುಮಾಡಿದ್ರು” ಅಂತ ಲೂಕ ಹೇಳಿದ್ದಾನೆ.—ಅ. ಕಾ. 28:24, 25ಎ.
16-18. (ಎ) ರೋಮ್‌ನಲ್ಲಿದ್ದ ಯೆಹೂದ್ಯರು ಸರಿಯಾಗಿ ಪ್ರತಿಕ್ರಿಯೆ ತೋರಿಸದಿದ್ದಾಗ ಪೌಲನಿಗೆ ಯಾಕೆ ಆಶ್ಚರ್ಯ ಆಗಲಿಲ್ಲ? (ಬಿ) ಜನ ಸಿಹಿಸುದ್ದಿ ಕೇಳಿಸ್ಕೊಳ್ಳದೇ ಇದ್ದಾಗ ನಾವು ಏನು ಮಾಡಬೇಕು?
16 ಜನ ಹೀಗೆ ನಡ್ಕೊಳ್ಳೋದನ್ನ ನೋಡಿದಾಗ ಪೌಲನಿಗೆ ಆಶ್ಚರ್ಯ ಆಗಲಿಲ್ಲ. ಯಾಕಂದ್ರೆ ಇದು ಬೈಬಲ್ ಭವಿಷ್ಯವಾಣಿಯ ನೆರವೇರಿಕೆ ಆಗಿತ್ತು. ಅಷ್ಟೇ ಅಲ್ಲ, ಜನ ಪೌಲನ ಹತ್ರ ಈ ತರ ನಡ್ಕೊಂಡಿದ್ದು ಇದೇ ಮೊದಲನೇ ಸಲ ಆಗಿರಲಿಲ್ಲ. (ಅ. ಕಾ. 13:42-47; 18:5, 6; 19:8, 9) ತನ್ನ ಮಾತನ್ನ ನಂಬದೆ ಹೋಗ್ತಿದ್ದ ಜನ್ರಿಗೆ ಪೌಲ, “ಪ್ರವಾದಿ ಯೆಶಾಯ ಪವಿತ್ರಶಕ್ತಿಯ ಸಹಾಯದಿಂದ ನಿಮ್ಮ ಪೂರ್ವಜರಿಗೆ ಹೇಳಿದ ಈ ಮಾತು ನಿಜಾನೇ: ನೀನು ಈ ಜನ್ರ ಹತ್ರ ಹೋಗಿ ಹೀಗೆ ಹೇಳು ‘ನೀವು ಎಷ್ಟು ಕೇಳಿಸ್ಕೊಂಡ್ರೂ ಅರ್ಥ ಆಗಲ್ಲ. ನೀವು ಎಷ್ಟು ನೋಡಿದ್ರೂ ಕಾಣಿಸಲ್ಲ. ಈ ಜನ್ರ ಹೃದಯ ಕಲ್ಲಿನ ತರ ಇದೆ’” ಅಂದ. (ಅ. ಕಾ. 28:25ಬಿ-27) ಮೂಲ ಭಾಷೆಯಲ್ಲಿ “ಕಲ್ಲಿನ ತರ ಇದೆ” ಅನ್ನೋದಕ್ಕೆ “ಕೊಬ್ಬಿದೆ” ಅಥವಾ “ದಪ್ಪವಾಗಿದೆ” ಅನ್ನೋ ಅರ್ಥ ಕೊಡೋ ಪದವನ್ನ ಉಪಯೋಗಿಸಲಾಗಿದೆ. ಹಾಗಾಗಿ, ದೇವರ ಸಂದೇಶ ಅವ್ರ ಹೃದಯಕ್ಕೆ ಮುಟ್ತಾ ಇರಲಿಲ್ಲ ಅಂತ ಗೊತ್ತಾಗುತ್ತೆ. ಅವರು ಸತ್ಯನ ಬೇಡ ಅಂದಿದ್ದು ನಿಜಕ್ಕೂ ದೊಡ್ಡ ದುರವಸ್ಥೆ!
17 ಆದ್ರೆ ಕೊನೇಲಿ ಪೌಲ, ಯೆಹೂದ್ಯರಲ್ಲದ ಜನರು “ಆ ಸಂದೇಶವನ್ನ ಖಂಡಿತ ಕೇಳ್ತಾರೆ” ಅಂದ. (ಅ. ಕಾ. 28:28; ಕೀರ್ತ. 67:2; ಯೆಶಾ. 11:10) ದೇವರ ಆಳ್ವಿಕೆಯ ಸಂದೇಶಕ್ಕೆ ಯೆಹೂದ್ಯರಲ್ಲದ ಜನ ಈಗಾಗ್ಲೇ ಒಳ್ಳೇ ರೀತಿ ಪ್ರತಿಕ್ರಿಯೆ ತೋರಿಸಿದ್ದನ್ನ ಪೌಲ ಕಣ್ಣಾರೆ ನೋಡಿದ್ದ, ಅದಕ್ಕೆ ಹೀಗೆ ಹೇಳಿದ.—ಅ. ಕಾ. 13:48; 14:27.
18 ಜನ ಸಿಹಿಸುದ್ದಿನ ಕೇಳಿಸ್ಕೊಳ್ಳದೇ ಇದ್ದಾಗ ಪೌಲನ ತರ ನಾವೂ ಬೇಜಾರ್ ಮಾಡ್ಕೊಬಾರದು. ಯಾಕಂದ್ರೆ ಜೀವಕ್ಕೆ ನಡೆಸೋ ದಾರಿಲಿ ಸ್ವಲ್ಪ ಜನ ಮಾತ್ರ ಹೋಗ್ತಾರೆ ಅಂತ ನಮಗೆ ಗೊತ್ತು. (ಮತ್ತಾ. 7:13, 14) ಆದ್ರೆ, ಒಳ್ಳೇ ಜನ ನಮ್ಮ ಜೊತೆ ಯೆಹೋವನನ್ನ ಆರಾಧಿಸೋಕೆ ಹೆಜ್ಜೆ ತಗೊಂಡಾಗ ನಾವು ಸಂತೋಷ ಪಡೋಣ ಮತ್ತು ಅವ್ರನ್ನ ಮನಸಾರೆ ಸ್ವಾಗತಿಸೋಣ.—ಲೂಕ 15:7.
“ದೇವ್ರ ಆಳ್ವಿಕೆ ಬಗ್ಗೆ ಸಾರ್ತಿದ್ದ” (ಅ. ಕಾ. 28:30, 31)
19. ಪೌಲ ಹೇಗೆ ತನ್ನ ಸನ್ನಿವೇಶವನ್ನ ಸಂಪೂರ್ಣವಾಗಿ ಉಪಯೋಗಿಸ್ಕೊಂಡ?
19 ಲೂಕ ತನ್ನ ಪುಸ್ತಕವನ್ನ ಈ ಒಳ್ಳೇ ಮಾತುಗಳನ್ನ ಹೇಳಿ ಮುಗಿಸಿದ್ದಾನೆ: “ಪೌಲ ತನ್ನ ಬಾಡಿಗೆ ಮನೆಯಲ್ಲಿ ಎರಡು ವರ್ಷ ಇದ್ದ. ಅವನ ಹತ್ರ ಬರುವವ್ರನ್ನೆಲ್ಲ ಪ್ರೀತಿಸಿ ಸ್ವಾಗತಿಸ್ತಾ ಇದ್ದ. ಯಾವುದೇ ಅಡ್ಡಿತಡೆ ಇಲ್ಲದೆ ಧೈರ್ಯವಾಗಿ ದೇವ್ರ ಆಳ್ವಿಕೆ ಬಗ್ಗೆ ಸಾರ್ತಿದ್ದ. ಪ್ರಭು ಯೇಸು ಕ್ರಿಸ್ತನ ಬಗ್ಗೆ ಕಲಿಸ್ತಾ ಇದ್ದ.” (ಅ. ಕಾ. 28:30, 31) ಪೌಲ ಅತಿಥಿಸತ್ಕಾರ, ನಂಬಿಕೆ ತೋರಿಸೋದ್ರಲ್ಲಿ ಮತ್ತು ಹುರುಪಿಂದ ಸೇವೆ ಮಾಡೋದ್ರಲ್ಲಿ ನಮ್ಮೆಲ್ಲರಿಗೂ ಒಳ್ಳೇ ಮಾದರಿ ಇಟ್ಟಿದ್ದಾನಲ್ವಾ!
20, 21. ಪೌಲ ರೋಮಿನಲ್ಲಿ ಮಾಡಿದ ಸೇವೆಯಿಂದಾಗಿ ಯಾರಿಗೆಲ್ಲ ಪ್ರಯೋಜನ ಆಯ್ತು?
20 ಪೌಲ ಈ ತರ ಪ್ರೀತಿಯಿಂದ ಸ್ವಾಗತಿಸಿದವರಲ್ಲಿ ಒನೆಸಿಮ ಒಬ್ಬನಾಗಿದ್ದ. ಅವನು ಕೊಲೊಸ್ಸೆಯಿಂದ ಓಡಿಬಂದ ದಾಸನಾಗಿದ್ದ. ಪೌಲ ಒನೆಸಿಮನಿಗೆ ಕ್ರೈಸ್ತನಾಗೋಕೆ ಸಹಾಯ ಮಾಡಿದ. ಹೀಗೆ ಅವನು ಪೌಲನಿಗೆ “ಪ್ರೀತಿಯ ನಂಬಿಗಸ್ತ ಸಹೋದರ” ಆದ. ಅವನ ಬಗ್ಗೆ ಪೌಲ, “ನನ್ನ ಮಗ ಒನೆಸಿಮ” ಅಂತ ಹೇಳಿದ್ದಾನೆ. “ನಾನು ಅವನಿಗೆ ಅಪ್ಪ ತರ ಇದ್ದೆ” ಅಂತನೂ ಹೇಳಿದ್ದಾನೆ. (ಕೊಲೊ. 4:9; ಫಿಲೆ. 10-12) ಒನೆಸಿಮ ಪೌಲನನ್ನ ತುಂಬ ಪ್ರೋತ್ಸಾಹ ಮಾಡಿದ್ದಿರಬೇಕು ಅಂತ ಇದ್ರಿಂದ ಗೊತ್ತಾಗುತ್ತೆ. a
21 ಪೌಲನ ಒಳ್ಳೇ ಮಾದರಿಯಿಂದಾಗಿ ಇನ್ನೂ ತುಂಬ ಜನ್ರಿಗೆ ಪ್ರಯೋಜನ ಆಯ್ತು. ಅವನು ಫಿಲಿಪ್ಪಿಯವರಿಗೆ ಹೀಗೆ ಬರೆದ: “ನಾನು ಈ ಪರಿಸ್ಥಿತಿಯಲ್ಲಿ ಇರೋದು ಸಿಹಿಸುದ್ದಿ ಇನ್ನೂ ಹರಡೋಕೆ ಸಹಾಯ ಆಗಿದೆ. ಕ್ರಿಸ್ತನಿಂದಾಗಿ ನಾನು ಜೈಲಲ್ಲಿದ್ದೀನಿ ಅಂತ ಅರಮನೆಯ ಎಲ್ಲ ಕಾವಲುಗಾರರಿಗೆ ಮತ್ತು ಬೇರೆಯವ್ರಿಗೆ ಗೊತ್ತಾಗಿದೆ. ನಾನು ಜೈಲಲ್ಲಿ ಇರೋದನ್ನ ನೋಡಿ ಒಡೆಯನ ಸೇವೆ ಮಾಡೋ ಎಷ್ಟೋ ಸಹೋದರರ ನಂಬಿಕೆ ಬಲವಾಗಿದೆ. ಹಾಗಾಗಿ ಅವರು ಭಯಪಡದೆ ದೇವರ ಸಂದೇಶವನ್ನ ಇನ್ನೂ ಧೈರ್ಯವಾಗಿ ಸಾರ್ತಿದ್ದಾರೆ.”—ಫಿಲಿ. 1: 12-14.
22. ಪೌಲ ರೋಮಿನ ಜೈಲಲ್ಲಿದ್ದಾಗ ತನ್ನ ಸಮಯವನ್ನ ಹೇಗೆ ಚೆನ್ನಾಗಿ ಉಪಯೋಗಿಸಿದ?
22 ಪೌಲ ಜೈಲಲ್ಲಿ ಇದ್ದ ಸಮಯವನ್ನ ಕೆಲವು ಮುಖ್ಯ ಪತ್ರ ಬರೆಯೋಕೆ ಉಪಯೋಗಿಸಿದ. ಆ ಪತ್ರಗಳು ಈಗ ಪವಿತ್ರಗ್ರಂಥದ ಗ್ರೀಕ್ ಪುಸ್ತಕಗಳ ಭಾಗವಾಗಿವೆ. b ಪೌಲ ಯಾರಿಗೆ ಈ ಪತ್ರಗಳನ್ನ ಬರೆದನೋ ಅವ್ರಿಗೆ ಅಂದ್ರೆ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಿಗೆ ಅವುಗಳಿಂದ ತುಂಬ ಪ್ರಯೋಜನ ಆಯ್ತು. ಪವಿತ್ರಶಕ್ತಿಯ ಸಹಾಯದಿಂದ ಬರೆದ ಆ ಪತ್ರಗಳು ಅವತ್ತಿನ ತರಾನೇ ಇವತ್ತಿಗೂ ನಮಗೆ ಪ್ರಯೋಜನ ತರುತ್ತೆ.—2 ತಿಮೊ. 3:16, 17.
23, 24. ಪೌಲನ ತರ ಇವತ್ತು ಕೂಡ ಕ್ರೈಸ್ತರನ್ನ ಅನ್ಯಾಯವಾಗಿ ಜೈಲಿಗೆ ಹಾಕಿದ್ರೂ ಅವರು ಹೇಗೆ ಸಂತೋಷವಾಗಿದ್ದಾರೆ?
23 ಪೌಲ ಬಿಡುಗಡೆ ಆಗೋಷ್ಟರಲ್ಲಿ ಕೈಸರೈಯದಲ್ಲಿ ಎರಡು ವರ್ಷ ಮತ್ತು ರೋಮಿನಲ್ಲಿ ಎರಡು ವರ್ಷ, ಒಟ್ಟು ನಾಲ್ಕು ವರ್ಷ ಜೈಲುವಾಸ ಅನುಭವಿಸಿದ್ದ. ಇದ್ರ ಬಗ್ಗೆ ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಏನು ಹೇಳಿಲ್ಲ. c (ಅ. ಕಾ. 23:35; 24:27) ಆದ್ರೂ ಅವನು ಸಿಹಿಸುದ್ದಿ ಸಾರುತ್ತಾ ಸಂತೋಷವಾಗಿದ್ದ. ಇವತ್ತು ಕೂಡ ಯೆಹೋವನ ಸಾಕ್ಷಿಗಳನ್ನ ಅವರ ನಂಬಿಕೆಯ ಕಾರಣ ಅನ್ಯಾಯವಾಗಿ ಜೈಲಿಗೆ ಹಾಕಿದ್ದಾರೆ. ಆದ್ರೆ ಅವರು ಕೂಡ ಸಿಹಿಸುದ್ದಿ ಸಾರುತ್ತಾ ಸಂತೋಷವಾಗಿದ್ದಾರೆ. ಉದಾಹರಣೆಗೆ, ಸ್ಪೇನ್‌ನ ಆಡೊಲ್ಫೊ ಅನ್ನೋ ಸಹೋದರನನ್ನ ಕ್ರೈಸ್ತ ನಂಬಿಕೆ ಕಾರಣ ಜೈಲಿಗೆ ಹಾಕಿದ್ರು. ಒಬ್ಬ ಅಧಿಕಾರಿ ಅವರಿಗೆ ಹೀಗೆ ಹೇಳಿದ: “ನಿನ್ನನ್ನ ನೋಡಿದ್ರೆ ನಮ್ಗೆ ಆಶ್ಚರ್ಯ ಆಗುತ್ತೆ. ನಾವು ನಿಂಗೆ ತುಂಬ ಕಷ್ಟ ಕೊಡ್ತಿದ್ದೀವಿ. ನಾವು ಎಷ್ಟು ಕಷ್ಟ ಕೊಡ್ತೀವೋ ನೀನು ಅಷ್ಟೇ ಸಂತೋಷವಾಗಿ ಇದ್ದೀಯ ಮತ್ತೆ ಮೃದುವಾಗಿ ಮಾತಾಡ್ತೀಯ.”
24 ಹೋಗ್ತಾ ಹೋಗ್ತಾ ಅಧಿಕಾರಿಗಳಿಗೆ ಆಡೊಲ್ಫೊ ಮೇಲೆ ಎಷ್ಟು ನಂಬಿಕೆ ಇತ್ತು ಅಂದ್ರೆ ಅವರ ಜೈಲಿನ ಕೋಣೆಯ ಬಾಗಿಲನ್ನ ತೆರೆದೇ ಇಡ್ತಿದ್ರು. ಸೈನಿಕರು ಬಂದು ಅವರ ಹತ್ರ ಬೈಬಲ್ ಬಗ್ಗೆ ಮಾತಾಡ್ತಿದ್ರು. ಜೈಲಿನ ಕಾವಲುಗಾರರಲ್ಲಿ ಒಬ್ಬ ಆಡೊಲ್ಛೊರವರ ಕೋಣೆಗೆ ಹೋಗಿ ಬೈಬಲ್ ಓದ್ತಿದ್ದ. ಆ ಸಮಯದಲ್ಲಿ ಆಡೊಲ್ಫೊ, ಬೇರೆ ಸೈನಿಕರು ಯಾರಾದ್ರೂ ಬರ್ತಾರಾ ಅಂತ ಕಾವಲು ಕಾಯ್ತಿದ್ರು! ಇಂಥಾ ಕಷ್ಟದ ಸನ್ನಿವೇಶಗಳಲ್ಲೂ ನಂಬಿಗಸ್ತ ಸಾಕ್ಷಿಗಳು “ದೇವರ ಸಂದೇಶವನ್ನ ಇನ್ನೂ ಧೈರ್ಯವಾಗಿ ಸಾರ್ತಿದ್ದಾರೆ.” ಇವ್ರೆಲ್ಲಾ ನಿಜಕ್ಕೂ ನಮ್ಮೆಲ್ಲರಿಗೂ ಒಳ್ಳೇ ಮಾದರಿ ಅಲ್ವಾ?
25, 26. (ಎ) 30 ವರ್ಷ ಕಳೆಯೋಷ್ಟರಲ್ಲಿ ಪೌಲ ಯಾವ ಭವಿಷ್ಯವಾಣಿ ನಿಜ ಆಗೋದನ್ನ ನೋಡಿದ? (ಬಿ) ನಮ್ಮ ಕಾಲದಲ್ಲಿ ಈ ಭವಿಷ್ಯವಾಣಿ ಹೇಗೆ ನಿಜ ಆಗ್ತಿದೆ?
25 ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಕ್ರೈಸ್ತರು ಸಿಹಿಸುದ್ದಿ ಸಾರೋದಕ್ಕೆ ಏನೆಲ್ಲಾ ಮಾಡಿದ್ರು ಅನ್ನೋ ರೋಮಾಂಚಕಾರಿ ವಿಷ್ಯಗಳಿವೆ. ಆ ಪುಸ್ತಕದ ಕೊನೆಲಿ ಪೌಲ ಗೃಹಬಂಧನದಲ್ಲಿ ಇದ್ರೂ ತನ್ನ ಹತ್ರ ಬರೋರಿಗೆಲ್ಲ ‘ದೇವರ ಸಂದೇಶದ ಬಗ್ಗೆ ಸಾರ್ತಿದ್ದ’ ಅಂತ ಹೇಳುತ್ತೆ. ಈ ಕೊನೇ ಮಾತುಗಳು ನಿಜವಾಗ್ಲೂ ನಮ್ಮ ಮನಸ್ಸು ಮುಟ್ಟುತ್ತೆ! ಈ ಪುಸ್ತಕದ ಮೊದಲನೇ ಅಧ್ಯಾಯದಲ್ಲಿ ಯೇಸು ತನ್ನ ಶಿಷ್ಯರಿಗೆ “ಪವಿತ್ರಶಕ್ತಿ ನಿಮ್ಮ ಮೇಲೆ ಬಂದಾಗ ನಿಮಗೆ ಬಲ ಸಿಗುತ್ತೆ. ಆಗ ನೀವು ಯೆರೂಸಲೇಮ್, ಯೂದಾಯ, ಸಮಾರ್ಯ ಮತ್ತು ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ” ಅಂತ ಹೇಳಿದ್ದನ್ನ ನಾವು ಓದಿದ್ವಿ. (ಅ. ಕಾ. 1:8) ಈ ಆಜ್ಞೆ ಕೊಟ್ಟು 30 ವರ್ಷ ಕಳೆಯೋಷ್ಟರಲ್ಲಿ, ದೇವರ ಆಳ್ವಿಕೆಯ ಸಂದೇಶ “ಭೂಮಿಯಲ್ಲೆಲ್ಲ” ಹಬ್ಬಿತು. d (ಕೊಲೊ. 1:23) ಇದ್ರಿಂದ, ದೇವರ ಪವಿತ್ರಶಕ್ತಿಗೆ ಎಷ್ಟು ಶಕ್ತಿ ಇದೆ ಅಂತ ಗೊತ್ತಾಗುತ್ತೆ ಅಲ್ವಾ!—ಜೆಕ. 4:6.
26 ಅದೇ ಪವಿತ್ರಶಕ್ತಿ ಭೂಮಿಯಲ್ಲಿ ಉಳಿದಿರೋ ಕ್ರಿಸ್ತನ ಸಹೋದರರಿಗೂ ಅವರ ಜೊತೆಗಾರರಾದ ‘ಬೇರೆ ಕುರಿಗಳಿಗೂ’ ಇವತ್ತು ಬಲ ಕೊಡ್ತಿದೆ. ಇದ್ರಿಂದ ಅವರು 240 ದೇಶಗಳಲ್ಲಿ ‘ದೇವರ ಆಳ್ವಿಕೆ ಬಗ್ಗೆ ಚೆನ್ನಾಗಿ ವಿವರಿಸ್ತಿದ್ದಾರೆ.’ (ಯೋಹಾ. 10:16; ಅ. ಕಾ. 28:23) ನೀವು ಈ ಕೆಲಸದಲ್ಲಿ ಪೂರ್ತಿಯಾಗಿ ಭಾಗವಹಿಸ್ತಾ ಇದ್ದೀರಾ?
a ಪೌಲನಿಗೆ ಒನೆಸಿಮನನ್ನ ತನ್ನ ಜೊತೆಯಲ್ಲೇ ಇಟ್ಕೊಳ್ಳೋಕೆ ಇಷ್ಟ ಇತ್ತು. ಆದ್ರೆ ರೋಮನ್ ನಿಯಮದ ಪ್ರಕಾರ ಅವನನ್ನ ಇಟ್ಕೊಳ್ಳೋಕೆ ಆಗ್ತಿರಲಿಲ್ಲ. ಯಾಕಂದ್ರೆ ಒನೆಸಿಮ ಕ್ರೈಸ್ತನಾಗಿದ್ದ ಫಿಲೆಮೋನನ ದಾಸನಾಗಿದ್ದ. ಅದಕ್ಕೆ ಒನೆಸಿಮ ಪೌಲ ಕೊಟ್ಟ ಪತ್ರ ತಗೊಂಡು ಫಿಲೆಮೋನನ ಹತ್ರ ವಾಪಸ್ ಹೋದ. ಆ ಪತ್ರದಲ್ಲಿ ಪೌಲ ಫಿಲೆಮೋನನಿಗೆ, ಸೇವಕನಾದ ಒನೆಸಿಮ ಕ್ರೈಸ್ತ ಸಹೋದರನಾಗಿರೋದ್ರಿಂದ ಅವನನ್ನ ಪ್ರೀತಿಯಿಂದ ಸ್ವಾಗತಿಸೋಕೆ ಹೇಳಿದ.—ಫಿಲೆ. 13-19.
b “ ಪೌಲ ಮೊದಲ ಸಲ ರೋಮಿನ ಜೈಲಲ್ಲಿದ್ದಾಗ ಬರೆದ ಐದು ಪತ್ರಗಳು” ಅನ್ನೋ ಚೌಕ ನೋಡಿ.
c “ ಕ್ರಿ.ಶ. 61ರ ನಂತರ ಪೌಲನ ಜೀವನ” ಅನ್ನೋ ಚೌಕ ನೋಡಿ.
d “ ‘ಸಿಹಿಸುದ್ದಿ ಭೂಮಿಯಲ್ಲೆಲ್ಲ ಮುಟ್ಟಿದೆ’” ಅನ್ನೋ ಚೌಕ ನೋಡಿ.