ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 24

“ಧೈರ್ಯವಾಗಿರು!”

“ಧೈರ್ಯವಾಗಿರು!”

ಪೌಲ ಒಳಸಂಚಿನಿಂದ ತಪ್ಪಿಸ್ಕೊಂಡ ಮತ್ತು ಫೆಲಿಕ್ಸನ ಮುಂದೆ ತನ್ನ ಪರವಾಗಿ ಮಾತಾಡಿದ

ಆಧಾರ: ಅಪೊಸ್ತಲರ ಕಾರ್ಯ 23:11–24:27

1, 2. ಪೌಲನಿಗೆ ಯೆರೂಸಲೇಮಲ್ಲಿ ಹಿಂಸೆ ಬಂದಾಗ ಯಾಕೆ ಆಶ್ಚರ್ಯ ಆಗಲಿಲ್ಲ?

 ಯೆರೂಸಲೇಮಲ್ಲಿ ರೊಚ್ಚಿಗೆದ್ದ ಜನ್ರ ಕೈಯಿಂದ ಪೌಲನನ್ನ ಕಾಪಾಡಿ ಕರ್ಕೊಂಡು ಬಂದು ಮತ್ತೆ ಜೈಲಿಗೆ ಹಾಕಿದ್ರು. ಹುರುಪಿನ ಅಪೊಸ್ತಲನಾದ ಪೌಲನಿಗೆ ಯೆರೂಸಲೇಮಲ್ಲಿ ಇಷ್ಟು ವಿರೋಧ-ಹಿಂಸೆ ಬಂದಿದ್ದನ್ನ ನೋಡಿ ಆಶ್ಚರ್ಯ ಆಗಲಿಲ್ಲ. ಯಾಕಂದ್ರೆ ಅವನು ಆ ಊರಲ್ಲಿ ‘ಬೇಡಿಗಳನ್ನೂ ಕಷ್ಟಗಳನ್ನೂ’ ಅನುಭವಿಸಬೇಕು ಅಂತ ಮುಂಚೆನೇ ಭವಿಷ್ಯವಾಣಿ ಆಗಿತ್ತು. (ಅ. ಕಾ. 20:22, 23) ಅವನಿಗೆ ಮುಂದೆ ಏನೇನಾಗುತ್ತೆ ಅಂತ ಪೂರ್ತಿ ಗೊತ್ತಿರಲಿಲ್ಲ. ಆದ್ರೂ ಯೇಸು ಕ್ರಿಸ್ತನ ಶಿಷ್ಯನಾಗಿದ್ರಿಂದ ಕಷ್ಟ ಅನುಭವಿಸಬೇಕಾಗುತ್ತೆ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು.—ಅ. ಕಾ. 9:16.

2 ಭವಿಷ್ಯವಾಣಿ ಹೇಳ್ತಿದ್ದ ಕೆಲವು ಕ್ರೈಸ್ತರು ಕೂಡ ಪೌಲನಿಗೆ, “ಯೆಹೂದ್ಯರು [ನಿನ್ನನ್ನ] ಕಟ್ಟಿಹಾಕಿ ಯೆಹೂದ್ಯರಲ್ಲದ ಜನ್ರ ಕೈಗೆ ಒಪ್ಪಿಸ್ತಾರೆ” ಅಂತ ಎಚ್ಚರಿಕೆ ಕೊಟ್ಟಿದ್ರು. (ಅ. ಕಾ. 21:4, 10, 11) ಅದೇ ತರ ಇತ್ತೀಚೆಗೆ ಯೆಹೂದ್ಯರ ಒಂದು ಗುಂಪು ಪೌಲನನ್ನ ಹಿಡಿದು ಕೊಲ್ಲೋಕೆ ತುಂಬ ಪ್ರಯತ್ನ ಮಾಡ್ತು. ಇದಾಗಿ ಸ್ವಲ್ಪ ಸಮಯದಲ್ಲೇ ಹಿರೀಸಭೆಯ ಸದಸ್ಯರ ಮಧ್ಯ ಪೌಲ ಹೇಳಿದ ಮಾತಿನ ಬಗ್ಗೆ ಕಿತ್ತಾಟ ಆದಾಗ ಸೇನಾಪತಿಗೆ ಅವರು ಅವನನ್ನ ಸಾಯಿಸಿಬಿಡ್ತಾರೆ ಅಂತ ಭಯ ಆಯ್ತು. ಆಗ ಅವನನ್ನ ರೋಮನ್‌ ಸೈನ್ಯದ ಜೈಲಿಗೆ ಹಾಕಿದ್ರು, ಆಮೇಲೆ ವಿಚಾರಣೆ ಮಾಡಿದ್ರು. ಆಗ ಪೌಲ ತನ್ನ ಮೇಲಿರೋ ಆರೋಪಗಳೆಲ್ಲ ಸುಳ್ಳು ಅಂತ ಸಾಬೀತು ಮಾಡಬೇಕು ಅಂತ ಅಂದ್ಕೊಂಡ. (ಅ. ಕಾ. 21:31; 23:10) ಇಷ್ಟೆಲ್ಲ ಕಷ್ಟ ಅನುಭವಿಸಿದ ಪೌಲನಿಗೆ ತುಂಬ ಪ್ರೋತ್ಸಾಹ ಬೇಕಲ್ವಾ!

3. ಸಾರೋ ಕೆಲಸನ ಮುಂದುವರಿಸೋಕೆ ನಮಗೆ ಯಾರಿಂದ ಪ್ರೋತ್ಸಾಹ ಸಿಗುತ್ತೆ?

3 ಈ ಅಂತ್ಯ ಕಾಲದಲ್ಲಿ “ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರನ್ನ ಆರಾಧಿಸ್ತಾ ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ” ಅಂತ ನಮಗೆ ಗೊತ್ತು. (2 ತಿಮೊ. 3:12) ಆಗ ನಮಗೆ ಸಾರೋ ಕೆಲಸನ ಮುಂದುವರಿಸೋಕೆ ಪ್ರೋತ್ಸಾಹ ಬೇಕಾಗುತ್ತೆ. ಅದಕ್ಕೇ “ನಂಬಿಗಸ್ತ, ವಿವೇಕಿ ಆದ ಆಳು” ಸಮಯಕ್ಕೆ ಸರಿಯಾಗಿ ಪತ್ರಿಕೆಗಳನ್ನ ಕೊಟ್ಟು, ಕೂಟಗಳನ್ನ ಏರ್ಪಾಡು ಮಾಡಿ ನಮಗೆ ಬಲ ತುಂಬ್ತಾ ಇದ್ದಾರೆ. ಇದಕ್ಕೆ ನಾವೆಷ್ಟು ಧನ್ಯವಾದ ಹೇಳಬೇಕಲ್ವಾ! (ಮತ್ತಾ. 24:45) ಸಿಹಿಸುದ್ದಿ ಸಾರೋದನ್ನ ನಿಲ್ಲಿಸೋಕೆ ಮತ್ತು ದೇವ ಜನ್ರನ್ನ ಗುಂಪಾಗಿ ನಾಶ ಮಾಡೋಕೆ ವಿರೋಧಿಗಳಿಗೆ ಆಗಲ್ಲ ಅಂತ ಯೆಹೋವ ಹೇಳಿದ್ದಾನೆ. (ಯೆಶಾ. 54:17; ಯೆರೆ. 1:19) ಆದ್ರೆ ಅಪೊಸ್ತಲ ಪೌಲನನ್ನ ವಿರೋಧಿಗಳು ಏನು ಮಾಡಿದ್ರು? ವಿರೋಧ ಇದ್ರೂ ಸಿಹಿಸುದ್ದಿ ಸಾರೋದನ್ನ ಮುಂದುವರಿಸೋಕೆ ಅವನಿಗೆ ಪ್ರೋತ್ಸಾಹ ಸಿಕ್ತಾ? ಹೇಗೆ ಸಿಕ್ತು? ಯಾರಿಂದ ಸಿಕ್ತು? ಪ್ರೋತ್ಸಾಹ ಸಿಕ್ಕಿದಾಗ ಪೌಲ ಏನು ಮಾಡಿದ? ಬನ್ನಿ ನೋಡೋಣ.

‘ಆಣೆಯಿಟ್ಟು ಮಾಡಿದ್ದ ಒಳಸಂಚು ಹಾಳಾಯ್ತು’ (ಅ. ಕಾ. 23:11-34)

4, 5. (ಎ) ಪೌಲನಿಗೆ ಯಾವ ಪ್ರೋತ್ಸಾಹ ಸಿಕ್ತು? (ಬಿ) ಅದು ಹೇಗೆ ಸರಿಯಾದ ಸಮಯಕ್ಕೆ ಸಿಕ್ತು?

4 ಪೌಲನಿಗೆ ಬೇಕಾಗಿದ್ದ ಪ್ರೋತ್ಸಾಹ ಅವನನ್ನ ಹಿರೀಸಭೆಯಿಂದ ಕಾಪಾಡಿದ ಆ ರಾತ್ರಿನೇ ಸಿಕ್ತು. “ಆ ರಾತ್ರಿ ಪ್ರಭು ಪೌಲನ ಹತ್ರ ನಿಂತ್ಕೊಂಡು ‘ಧೈರ್ಯವಾಗಿರು! ನೀನು ಯೆರೂಸಲೇಮಲ್ಲಿ ನನ್ನ ಬಗ್ಗೆ ಚೆನ್ನಾಗಿ ಸಾರಿದ ತರ ರೋಮಲ್ಲೂ ನನ್ನ ಬಗ್ಗೆ ಸಾರಬೇಕು’ ಅಂದನು” ಅಂತ ದೇವರ ವಾಕ್ಯ ಹೇಳುತ್ತೆ. (ಅ. ಕಾ. 23:11) ಯೇಸು ಹೇಳಿದ ಈ ಮಾತುಗಳಿಂದ ಪೌಲನಿಗೆ, ತಾನು ಬಿಡುಗಡೆ ಆಗ್ತೀನಿ ಅನ್ನೋ ಭರವಸೆ ಸಿಕ್ತು. ‘ರೋಮ್‌ಗೆ ಹೋಗೋ ತನಕ ಬದುಕಿರ್ತೀನಿ, ಅಲ್ಲಿ ಯೇಸು ಬಗ್ಗೆ ಸಾಕ್ಷಿ ಕೊಡೋ ಅವಕಾಶ ನನಗೆ ಸಿಗುತ್ತೆ’ ಅಂತ ಪೌಲನಿಗೆ ಗೊತ್ತಾಯ್ತು.

“40ಕ್ಕಿಂತ ಜಾಸ್ತಿ ಜನ ಪೌಲನನ್ನ ಸಾಯಿಸೋಕೆ ಹೊಂಚು ಹಾಕಿ ಕಾಯ್ತಾ ಇದ್ದಾರೆ.”—ಅಪೊಸ್ತಲರ ಕಾರ್ಯ 23:21

5 ಹೀಗೆ ಪೌಲನಿಗೆ ಸರಿಯಾದ ಸಮಯಕ್ಕೆ ಪ್ರೋತ್ಸಾಹ ಸಿಕ್ತು. ಆದ್ರೆ ಮಾರನೇ ದಿನ ಸುಮಾರು 40 ಜನ ಯೆಹೂದ್ಯರು “ಪೌಲನನ್ನ ಕೊಲ್ಲೋಕೆ ಸಂಚು ಮಾಡಿದ್ರು. ಅವನನ್ನ ಸಾಯಿಸದೆ ನಾವೇನಾದ್ರೂ ತಿಂದ್ರೆ ಕುಡಿದ್ರೆ ನಮ್ಮ ಮೇಲೆ ಶಾಪ ಬರಲಿ ಅಂತ ಆಣೆ ಇಟ್ರು.” ಹೀಗೆ ‘ಆಣೆ ಮಾಡಿದ್ರಿಂದ’ ಪೌಲನನ್ನ ಕೊಲ್ಲಲೇಬೇಕು ಅಂತ ಅವರು ಪಣತೊಟ್ಟಿದ್ರು ಅಂತ ಗೊತ್ತಾಗುತ್ತೆ. ಒಂದುವೇಳೆ ಅವರು ಮಾಡಿದ ಒಳಸಂಚು ನಡೀಲಿಲ್ಲಾಂದ್ರೆ ತಮಗೆ ಶಾಪ ಬರುತ್ತೆ ಅಥವಾ ಕೆಟ್ಟದಾಗುತ್ತೆ ಅಂತ ಅವರು ನಂಬಿದ್ರು. (ಅ. ಕಾ. 23:12-15) ಹಾಗಾಗಿ ಅವರು ಮಾಡಿದ ಸಂಚನ್ನ ಪುರೋಹಿತರಿಗೆ ಮತ್ತು ಹಿರಿಯರಿಗೆ ಹೇಳಿ ಅವ್ರ ಒಪ್ಪಿಗೆನೂ ಪಡ್ಕೊಂಡ್ರು. ಅವರು ಮಾಡಿದ ಸಂಚು ಏನಾಗಿತ್ತು? ಪೌಲನನ್ನ ಹಿರೀಸಭೆಯಲ್ಲಿ ಇನ್ನೂ ಚೆನ್ನಾಗಿ ವಿಚಾರಣೆ ಮಾಡಬೇಕಂತ ಹೇಳಿ ಕರ್ಕೊಂಡು ಬಂದು ಆಮೇಲೆ ದಾರೀಲಿ ಹೊಂಚುಹಾಕಿ ಅವನನ್ನ ಕೊಂದುಬಿಡೋದೇ ಆಗಿತ್ತು!

6. (ಎ) ಪೌಲನನ್ನ ಕೊಲ್ಲೋಕೆ ಮಾಡಿದ ಒಳಸಂಚಿನ ಬಗ್ಗೆ ಸೇನಾಪತಿಗೆ ಹೇಗೆ ಗೊತ್ತಾಯ್ತು? (ಬಿ) ಇದ್ರಿಂದ ಇವತ್ತಿರೋ ಯುವ ಜನರು ಏನು ಕಲಿಬಹುದು?

6 ಆದ್ರೆ ಈ ಒಳಸಂಚಿನ ಬಗ್ಗೆ ಪೌಲನ ಸೋದರಳಿಯನಿಗೆ ಹೇಗೋ ಗೊತ್ತಾಯ್ತು. ಅವನು ಈ ವಿಷ್ಯವನ್ನ ಪೌಲನಿಗೆ ಹೇಳಿದ. ಆಗ ಪೌಲ ಆ ಯುವಕನಿಗೆ ಈ ವಿಷ್ಯವನ್ನ ರೋಮನ್‌ ಸೇನೆಯ ಸೇನಾಪತಿಯಾದ ಕ್ಲೌದ್ಯ ಲೂಸ್ಯನಿಗೆ ಹೇಳೋಕೆ ಹೇಳಿದ. (ಅ. ಕಾ. 23:16-22) ಪೌಲನ ಸೋದರಳಿಯನ ತರಾನೇ ಇವತ್ತು ಕೂಡ ಎಷ್ಟೋ ಯುವ ಸಹೋದರ ಸಹೋದರಿಯರು ಧೈರ್ಯಶಾಲಿಗಳಾಗಿದ್ದಾರೆ. ಅವರು ತಮಗಿಂತ ಯೆಹೋವನ ಜನ್ರ ಕ್ಷೇಮಕ್ಕೆ ಪ್ರಾಮುಖ್ಯತೆ ಕೊಡ್ತಾರೆ. ಯೆಹೋವ ದೇವರ ಸೇವೆಯನ್ನ ನಿಯತ್ತಿಂದ ಮಾಡ್ತಿದ್ದಾರೆ. ಇವ್ರನ್ನ ಯೆಹೋವ ತುಂಬ ಪ್ರೀತಿಸ್ತಾನೆ.

7, 8. ಪೌಲನ ಸುರಕ್ಷತೆಗಾಗಿ ಕ್ಲೌದ್ಯ ಲೂಸ್ಯ ಏನೆಲ್ಲಾ ಮಾಡಿದ?

7 ಪೌಲನ ವಿರುದ್ಧ ಮಾಡ್ತಿರೋ ಸಂಚಿನ ಬಗ್ಗೆ 1,000 ಸೈನಿಕರ ಮೇಲೆ ಸೇನಾಪತಿಯಾಗಿದ್ದ ಕ್ಲೌದ್ಯ ಲೂಸ್ಯನಿಗೆ ಗೊತ್ತಾದ ತಕ್ಷಣ ಅವನು ಸೈನಿಕರನ್ನ, ಕುದುರೆ ಸವಾರರನ್ನ, ಈಟಿ ಹಿಡ್ಕೊಂಡ ಸೈನಿಕರನ್ನ ಒಟ್ಟು 470 ಸೈನಿಕರನ್ನ ಸಿದ್ಧ ಮಾಡೋಕೆ ಹೇಳಿದ. ಅದೇ ರಾತ್ರಿ ಈ ಸೈನ್ಯ ಪೌಲನನ್ನ ಯೆರೂಸಲೇಮಿಂದ ಕೈಸರೈಯಕ್ಕೆ ಸುರಕ್ಷಿತವಾಗಿ ಕರ್ಕೊಂಡು ಬರಬೇಕಿತ್ತು. ಅಲ್ಲಿ ತಲುಪಿದ ತಕ್ಷಣ ರಾಜ್ಯಪಾಲನಾದ ಫೇಲಿಕ್ಸನಿಗೆ ಪೌಲನನ್ನ ಒಪ್ಪಿಸಬೇಕಿತ್ತು. a ಈ ಕೈಸರೈಯ ಯೂದಾಯದ ರೋಮನ್‌ ಮುಖ್ಯ ಕಾರ್ಯಾಲಯ ಆಗಿತ್ತು. ಅಲ್ಲಿ ಯೆಹೂದ್ಯರು ವಾಸವಾಗಿದ್ರೂ ಬೇರೆ ಜನ್ರೇ ಜಾಸ್ತಿ ಇದ್ರು. ಯೆರೂಸಲೇಮಲ್ಲಿದ್ದ ಹಾಗೆ ಇಲ್ಲಿ ಧರ್ಮಗಳ ಮಧ್ಯ ಕಚ್ಚಾಟ, ದಂಗೆ-ಗಲಭೆ ಯಾವುದೂ ಇರಲಿಲ್ಲ, ಇಲ್ಲಿನ ಜನ ತುಂಬ ಶಾಂತಿಯಿಂದ ಇರ್ತಿದ್ರು. ಕೈಸರೈಯ ಯೆಹೂದದಲ್ಲಿನ ರೋಮನ್‌ ಸೇನಾದಳದ ಮುಖ್ಯಕಾರ್ಯಾಲಯನೂ ಆಗಿತ್ತು.

8 ರೋಮಿನ ಕಾನೂನಿನ ಪ್ರಕಾರ ಲೂಸ್ಯ, ರಾಜ್ಯಪಾಲ ಫೇಲಿಕ್ಸನಿಗೆ ಪೌಲನ ಪ್ರಕರಣದ ಬಗ್ಗೆ ಪತ್ರ ಬರೆದ. ಆ ಪತ್ರದಲ್ಲಿ, ಪೌಲ ರೋಮಿನ ಪ್ರಜೆ ಅಂತ ತನಗೆ ಗೊತ್ತಾದಾಗ ಅವನನ್ನ ‘ಕೊಲ್ಲಬೇಕಂತ ಇದ್ದ’ ಯೆಹೂದ್ಯರಿಂದ ಕಾಪಾಡಿದ್ರ ಬಗ್ಗೆ ಬರೆದ. ಪೌಲನಿಗೆ “ಮರಣದಂಡನೆ ಕೊಡುವಷ್ಟು, ಜೈಲಿಗೆ ಹಾಕುವಷ್ಟು” ದೊಡ್ಡ ಅಪರಾಧ ಏನೂ ಅವನು ಮಾಡಿಲ್ಲ ಅಂತಾನೂ ಹೇಳಿದ. ಆದ್ರೂ ಅವನನ್ನ ಕೊಲ್ಲೋಕೆ ಸಂಚು ನಡೀತಾ ಇರೋದ್ರಿಂದ ಅವನನ್ನ ‘ನಿಮ್ಮ ಹತ್ರ ಕಳಿಸ್ತಾ ಇದ್ದೀನಿ, ನೀವೇ ಆರೋಪಗಳನ್ನ ವಿಚಾರಿಸಿ ಪೌಲನಿಗೆ ತೀರ್ಪು ಕೊಡಿ’ ಅಂತಾನೂ ಬರೆದ.—ಅ. ಕಾ. 23:25-30.

9. (ಎ) ರೋಮಿನ ಪ್ರಜೆಯಾಗಿದ್ದ ಪೌಲನ ಹಕ್ಕುಗಳನ್ನ ಹೇಗೆ ಉಲ್ಲಂಘಿಸಿದ್ರು? (ಬಿ) ನಾವು ನಮ್ಮ ದೇಶದಲ್ಲಿ ನಮಗಿರೋ ಹಕ್ಕುಗಳಿಂದ ಹೇಗೆ ಪ್ರಯೋಜನ ಪಡೀಬಹುದು?

9 ಲೂಸ್ಯ ಸತ್ಯವನ್ನೇ ಬರೆದಿದ್ನಾ? ಪೂರ್ತಿ ಸತ್ಯವನ್ನ ಬರೀಲಿಲ್ಲ. ರಾಜ್ಯಪಾಲನ ಮನಸ್ಸಲ್ಲಿ ತನ್ನ ಬಗ್ಗೆ ಒಳ್ಳೇ ಅಭಿಪ್ರಾಯ ಬರೋಕೆ ಅವನು ಪ್ರಯತ್ನಿಸ್ತಿದ್ದ ಅಂತ ಕಾಣುತ್ತೆ. ಅವನು ಪೌಲನನ್ನ ಕಾಪಾಡಿದ್ದು ಪೌಲ ರೋಮನ್‌ ಪ್ರಜೆ ಆಗಿದ್ರಿಂದ ಅಲ್ಲ. ಅಷ್ಟೇ ಅಲ್ಲ, ಪೌಲನಿಗೆ ‘ಎರಡು ಬೇಡಿ ಹಾಕಿದ್ದನ್ನ,’ ಆಮೇಲೆ ಅವನಿಗೆ “ಚಾಟಿಯಿಂದ ಹೊಡೆದು ವಿಚಾರಣೆ ಮಾಡೋಕೆ” ಆಜ್ಞೆ ಕೊಟ್ಟಿದ್ದನ್ನ ಲೂಸ್ಯ ಬರೆದಿರಲಿಲ್ಲ. (ಅ. ಕಾ. 21:30-34; 22:24-29) ಯಾಕಂದ್ರೆ ಅವನು ರೋಮನ್‌ ಪ್ರಜೆಯಾಗಿದ್ದ ಪೌಲನ ಹಕ್ಕುಗಳನ್ನ ಗೌರವಿಸಿರಲಿಲ್ಲ. ಇವತ್ತು ಸೈತಾನ ಕೂಡ ನಮ್ಮ ವಿರೋಧಿಗಳ ಮತಾಂಧತೆಯನ್ನ ಉಪಯೋಗಿಸ್ತಾ ನಮಗೆ ಜಾಸ್ತಿ ಹಿಂಸೆ ಕೊಡೋ ತರ ಮಾಡ್ತಾನೆ. ಕೆಲವು ಸಲ ನಮಗೆ ದೇವರನ್ನ ಆರಾಧನೆ ಮಾಡೋ ಹಕ್ಕಿದ್ರೂ ಅದು ನಮಗೆ ಸಿಗದೆ ಇರೋ ತರ ಮಾಡ್ತಾನೆ. ಆದ್ರೆ ಪೌಲನ ತರ ನಾವೂ ಒಬ್ಬ ಪ್ರಜೆಯಾಗಿ ನಮಗೆ ಇರೋ ಹಕ್ಕುಗಳನ್ನ ಬಳಸಿ ಕಾನೂನಿನ ರಕ್ಷಣೆ ಪಡೀಬಹುದು.

“ನನ್ನ ಪರ ನಾನೇ ಮಾತಾಡ್ತೀನಿ” (ಅ. ಕಾ. 23:35–24:21)

10. ಪೌಲನ ಮೇಲೆ ಯಾವ ದೊಡ್ಡ-ದೊಡ್ಡ ಆರೋಪಗಳನ್ನ ಹಾಕಿದ್ರು?

10 ಪೌಲನ ಮೇಲೆ ಆರೋಪ ಹಾಕಿದವರು ಯೆರೂಸಲೇಮಿಂದ ಬರೋ ತನಕ ಅವನನ್ನ ಕೈಸರೈಯದಲ್ಲಿ “ಹೆರೋದನ ಅರಮನೆಯಲ್ಲಿ” ಕಾವಲಲ್ಲಿ ಇಟ್ರು. (ಅ. ಕಾ. 23:35) ಐದು ದಿನ ಆದ್ಮೇಲೆ ಮಹಾ ಪುರೋಹಿತ ಅನನೀಯ, ತೆರ್ತುಲ್ಲ ಅನ್ನೋ ಒಬ್ಬ ವಕೀಲ ಮತ್ತು ಕೆಲವು ಹಿರಿಯರು ಅಲ್ಲಿಗೆ ಬಂದ್ರು. ತೆರ್ತುಲ್ಲ ಮೊದಲು ರಾಜ್ಯಪಾಲ ಫೇಲಿಕ್ಸ, ಯೆಹೂದ್ಯರಿಗಾಗಿ ಮಾಡ್ತಿದ್ದ ಎಲ್ಲಾ ವಿಷ್ಯಗಳಿಗಾಗಿ ಅವನನ್ನ ಹೊಗಳಿದ. ಫೇಲಿಕ್ಸನನ್ನ ತಮ್ಮ ಕಡೆಗೆ ಸೆಳೆಯೊಂದೇ ಅವನ ಉದ್ದೇಶ ಆಗಿತ್ತು. b ಆಮೇಲೆ ಅವನು ವಿಷ್ಯಕ್ಕೆ ಬಂದ. “[ಪೌಲ] ಜನ್ರ ತಲೆ ಕೆಡಿಸ್ತಿದ್ದಾನೆ. ಯೆಹೂದ್ಯರು ಸರ್ಕಾರದ ವಿರುದ್ಧ ದಂಗೆ ಏಳೋ ತರ ಮಾಡ್ತಿದ್ದಾನೆ. ನಜರೇತಿನವರ ಹೊಸ ಧರ್ಮದ ನಾಯಕ ಇವನೇ. ಇವನು ದೇವಾಲಯವನ್ನ ಅಪವಿತ್ರ ಮಾಡೋಕೆ ಪ್ರಯತ್ನಿಸಿದ. ಅದಕ್ಕೆ ನಾವು ಇವನನ್ನ ಹಿಡ್ಕೊಂಡ್ವಿ” ಅಂತ ತೆರ್ತುಲ್ಲ ಪೌಲನ ಮೇಲೆ ಆರೋಪ ಹಾಕಿದ. “ಈ ಆರೋಪಗಳೆಲ್ಲ ನಿಜ ಅಂತ ಯೆಹೂದ್ಯರು ಅವನ ಜೊತೆ ಸೇರ್ಕೊಂಡು ಹೇಳಿದ್ರು.” (ಅ. ಕಾ. 24:5, 6, 9) ಜನ್ರು ಸರ್ಕಾರದ ವಿರುದ್ಧ ದಂಗೆ ಏಳೋ ತರ ಮಾಡೋದು, ಅಪಾಯಕಾರಿಯಾದ ಹೊಸ ಧರ್ಮದ ನಾಯಕನಾಗಿರೋದು, ದೇವಾಲಯವನ್ನ ಅಪವಿತ್ರ ಮಾಡೋದು ಇದೆಲ್ಲ ದೊಡ್ಡ-ದೊಡ್ಡ ಆರೋಪಗಳಾಗಿದ್ವು. ಅದೆಲ್ಲ ಸಾಬೀತಾದ್ರೆ ಪೌಲನಿಗೆ ಮರಣದಂಡನೆ ಗ್ಯಾರಂಟಿ ಆಗಿತ್ತು.

11, 12. ಪೌಲ ತನ್ನ ಮೇಲೆ ಹಾಕಿದ ಆರೋಪಗಳೆಲ್ಲ ಸುಳ್ಳು ಅಂತ ಹೇಗೆ ಹೇಳಿದ?

11 ಆಮೇಲೆ ಪೌಲನಿಗೆ ಮಾತಾಡೋಕೆ ಅವಕಾಶ ಸಿಕ್ತು. “ನನ್ನ ಪರ ನಾನೇ ಮಾತಾಡ್ತೀನಿ” ಅಂತ ಪೌಲ ಮಾತಾಡೋಕೆ ಶುರುಮಾಡಿದ. ತನ್ನ ಮೇಲಿರೋ ಆರೋಪಗಳೆಲ್ಲಾ ಸುಳ್ಳು ಅಂತ ಹೇಳಿದ. ತಾನು ದೇವಾಲಯವನ್ನ ಅಪವಿತ್ರ ಮಾಡಲಿಲ್ಲ, ಜನ್ರನ್ನ ಸರ್ಕಾರದ ವಿರುದ್ಧ ದಂಗೆ ಏಳೋ ತರ ಮಾಡಲಿಲ್ಲ ಅಂದ. ನಾನು “ತುಂಬ ವರ್ಷ” ಯೆರೂಸಲೇಮಲ್ಲಿ ಇರಲಿಲ್ಲ, ಹಿಂಸೆ ಮತ್ತು ಬರಗಾಲದಿಂದ ಕಷ್ಟ ಪಡ್ತಿದ್ದ ಬಡ ಕ್ರೈಸ್ತರಿಗಾಗಿ “ಹಣ ಕೊಟ್ಟು ಸಹಾಯ” ಮಾಡೋಕೆ ಹೋಗಿದ್ದೆ ಅಂತ ಹೇಳಿದ. ಅಷ್ಟೇ ಅಲ್ಲ, ದೇವಾಲಯದ ಒಳಗೆ ಹೋಗೋ ಮುಂಚೆ “ಪದ್ಧತಿ ಪ್ರಕಾರ ಶುದ್ಧ ಮಾಡ್ಕೊಂಡಿದ್ದೆ,” “ದೇವ್ರ ನಿಯಮನಾಗಲಿ, ಮನುಷ್ಯರ ನಿಯಮನಾಗಲಿ ಮುರಿಯದೆ ಶುದ್ಧ ಮನಸ್ಸಾಕ್ಷಿ ಇರೋ” ತರ ನೋಡ್ಕೊಂಡೆ ಅಂತಾನೂ ಹೇಳಿದ.—ಅ. ಕಾ. 24:10-13, 16-18.

12 ಹಾಗಿದ್ರೂ ಜನ “ಯಾವುದನ್ನ ‘ಹೊಸ ಧರ್ಮ’ ಅಂತ ಕರಿತಾ ಇದ್ದಾರೋ ಆ ‘ದೇವ್ರ ಮಾರ್ಗಕ್ಕೆ’” ಅನುಸಾರ ತಾನು ಪೂರ್ವಜರ ದೇವರಿಗೆ ಪವಿತ್ರ ಸೇವೆ ಮಾಡಿದ್ದೀನಿ ಅಂತ ಪೌಲ ಒಪ್ಕೊಂಡ. ಆದ್ರೆ “ನಿಯಮ ಪುಸ್ತಕದಲ್ಲಿ ಮತ್ತು ಪ್ರವಾದಿಗಳ ಗ್ರಂಥದಲ್ಲಿ ಬರೆದಿರೋ ಎಲ್ಲ ವಿಷ್ಯಗಳನ್ನ ನಾನು ನಂಬ್ತೀನಿ” ಅಂತ ಹೇಳಿದ. ತನ್ನ ಮೇಲೆ ಆರೋಪ ಹಾಕಿರೋ ಆ ಜನ್ರ ತರಾನೇ ತಾನು ಕೂಡ “ನೀತಿವಂತರು ಮತ್ತು ಅನೀತಿವಂತರು ಮತ್ತೆ ಬದುಕೋ ತರ ದೇವರು ಮಾಡ್ತಾನೆ” ಅಂತ ನಂಬಿದ್ದೀನಿ ಅಂತ ಹೇಳಿದ. ಆಮೇಲೆ, ತನ್ನ ಮೇಲೆ ಆರೋಪ ಹಾಕಿದವರು ತನ್ನ ವಿರುದ್ಧ ಸಾಕ್ಷ್ಯಾಧಾರಗಳನ್ನ ತರಲಿ ಅಂತ ಹೇಳಿದ. “ನನ್ನನ್ನ ಹಿರೀಸಭೆ ಮುಂದೆ ವಿಚಾರಣೆ ಮಾಡಿದಾಗ ನನ್ನಲ್ಲಿ ಏನು ತಪ್ಪು ಕಂಡುಹಿಡಿದ್ರು ಅಂತ ಈ ಜನ ಬೇಕಾದ್ರೆ ಈಗ ಹೇಳಲಿ. ನಾನು ಹಿರೀಸಭೆಯಲ್ಲಿ ನಿಂತಿದ್ದಾಗ ‘ಸತ್ತವ್ರಿಗೆ ಮತ್ತೆ ಜೀವ ಬರುತ್ತೆ ಅಂತ ನಾನು ನಂಬ್ತೀನಿ. ಅದಕ್ಕೆ ಇವತ್ತು ನನಗೆ ವಿಚಾರಣೆ ಆಗ್ತಿದೆ’ ಅಂತ ಜೋರಾಗಿ ಹೇಳಿದ್ದೆ. ಆ ಒಂದು ಮಾತನ್ನ ಹಿಡ್ಕೊಂಡು ಈ ಜನ ನನ್ನ ಮೇಲೆ ತಪ್ಪು ಹೊರಿಸಬಹುದು ಅಷ್ಟೇ” ಅಂತ ಪೌಲ ಹೇಳಿದ.—ಅ. ಕಾ. 24:14, 15, 20, 21.

13-15. ಅಧಿಕಾರಿಗಳಿಗೆ ಧೈರ್ಯವಾಗಿ ಸಾಕ್ಷಿಕೊಡೋದ್ರಲ್ಲಿ ಪೌಲ ಒಳ್ಳೇ ಮಾದರಿ ಇಟ್ಟಿದ್ದಾನೆ ಅಂತ ನಾವು ಹೇಗೆ ಹೇಳಬಹುದು?

13 ನಾವು ಯೆಹೋವ ದೇವರನ್ನ ಆರಾಧಿಸೋದ್ರಿಂದ ಕೆಲವು ಸಲ ಜನ್ರು ನಮ್ಮನ್ನ ಸರ್ಕಾರಿ ಅಧಿಕಾರಿಗಳ ಮುಂದೆ ನಿಲ್ಲಿಸಬಹುದು. ನಾವು ದೊಂಬಿ-ಗಲಭೆ ಮಾಡೋರು, ದೇಶದ್ರೋಹಿಗಳು ಅಥವಾ ಅಪಾಯಕಾರಿ ಧರ್ಮಕ್ಕೆ ಸೇರಿದವರು ಅಂತ ಸುಳ್ಳು ಆರೋಪಗಳನ್ನ ಹಾಕಬಹುದು. ಆಗ ನಾವು ಏನು ಮಾಡಬೇಕು? ಏನು ಮಾಡಬೇಕಂತ ಪೌಲ ತೋರಿಸ್ಕೊಟ್ಟಿದ್ದಾನೆ. ಅವನು ತೆರ್ತುಲ್ಲ ತರ ರಾಜ್ಯಪಾಲನನ್ನ ಸುಮ್ನೆ ಹೊಗಳಿ ಅವನನ್ನ ತನ್ನ ಕಡೆಗೆ ಎಳ್ಕೊಳ್ಳೋಕೆ ನೋಡಲಿಲ್ಲ. ಅವನು ಗೌರವದಿಂದ ಮಾತಾಡಿದ, ಸಮಾಧಾನವಾಗಿದ್ದ, ವಿವೇಚನೆಯಿಂದ ಮಾತಾಡಿದ, ಸತ್ಯವನ್ನೇ ಹೇಳಿದ, ಸ್ಪಷ್ಟವಾಗಿ ವಿವರಿಸಿದ. ‘ದೇವಾಲಯವನ್ನ ಅಶುದ್ಧ ಮಾಡಿದ್ದೀನಿ ಅಂತ ಆರೋಪ ಹಾಕಿದ್ದ “ಏಷ್ಯಾ ಪ್ರದೇಶದಿಂದ ಬಂದ ಕೆಲವು ಯೆಹೂದ್ಯರು” ಇಲ್ಲಿ ಬಂದಿಲ್ಲ. ಕಾನೂನು ಪ್ರಕಾರ ಅವರು ಇಲ್ಲಿಗೆ ಬರಬೇಕಿತ್ತು, ಆರೋಪಗಳನ್ನು ತಿಳಿಸಬೇಕಿತ್ತು’ ಅಂತನೂ ಅವನು ಹೇಳಿದ.—ಅ. ಕಾ. 24:18, 19.

14 ಎಲ್ಲಕ್ಕಿಂತ ಮುಖ್ಯವಾಗಿ ಪೌಲ ತಾನು ನಂಬೋ ವಿಷ್ಯಗಳ ಬಗ್ಗೆ ಧೈರ್ಯವಾಗಿ ಹೇಳಿದ. ಈ ಮುಂಚೆ ಅವನು ಹಿರೀಸಭೆಯಲ್ಲಿ ‘ಸತ್ತವರು ಮತ್ತೆ ಬದುಕಿ ಬರ್ತಾರೆ’ ಅನ್ನೋದರ ಬಗ್ಗೆ ಮಾತಾಡಿದಾಗ ದೊಡ್ಡ ಗಲಾಟೆನೇ ಆಗಿದ್ರೂ ಮತ್ತೆ ಅದ್ರ ಬಗ್ಗೆನೇ ಧೈರ್ಯವಾಗಿ ಮಾತಾಡಿದ. (ಅ. ಕಾ. 23:6-10) ಆ ನಿರೀಕ್ಷೆ ಬಗ್ಗೆ ಯಾಕೆ ಮತ್ತೆ-ಮತ್ತೆ ಹೇಳಿದ? ಯಾಕಂದ್ರೆ ಅವನು ಸಾರ್ತಾ ಇದ್ದಿದ್ದು ಯೇಸು ಬಗ್ಗೆ ಮತ್ತು ಆತನಿಗೆ ಮತ್ತೆ ಜೀವ ಬಂದಿದ್ದರ ಬಗ್ಗೆ. ಆದ್ರೆ ಆರೋಪ ಹಾಕಿರೋ ಜನ್ರು ಅದನ್ನ ಒಪ್ಕೊಳ್ತಾ ಇರಲಿಲ್ಲ. (ಅ. ಕಾ. 26:6-8, 22, 23) ಈ ಕಾರಣಕ್ಕೆ ಯೆಹೂದ್ಯರು ಅವನ ಮೇಲೆ ಇಲ್ಲದಿದ್ದ ಆರೋಪಗಳನ್ನೆಲ್ಲ ಹಾಕಿ ವಿಚಾರಣೆ ಮಾಡಿಸ್ತಾ ಇದ್ರು.

15 ಪೌಲನ ತರಾನೇ ನಾವು ಕೂಡ ಧೈರ್ಯವಾಗಿ ಸಿಹಿಸುದ್ದಿ ಸಾರಬಹುದು. ಅಷ್ಟೇ ಅಲ್ಲ ಯೇಸು ತನ್ನ ಶಿಷ್ಯರಿಗೆ “ನನ್ನ ಶಿಷ್ಯರಾಗಿರೋ ಕಾರಣ ನಿಮ್ಮನ್ನ ಜನ್ರೆಲ್ಲ ದ್ವೇಷಿಸ್ತಾರೆ. ಆದ್ರೆ ಕೊನೆ ತನಕ ತಾಳ್ಕೊಂಡ್ರೆ ರಕ್ಷಣೆ ಸಿಗುತ್ತೆ” ಅಂತ ಹೇಳಿರೋ ಮಾತಿಂದ ನಾವು ಬಲ ಪಡ್ಕೊಬಹುದು. ನಮ್ಮನ್ನ ಯಾರಾದ್ರೂ ವಿಚಾರಣೆ ಮಾಡುವಾಗ ಏನು ಮಾತಾಡಬೇಕು ಅಂತ ಚಿಂತೆ ಮಾಡಬೇಕಾ? ಇಲ್ಲ. ಯಾಕಂದ್ರೆ, “ಅವರು ನಿಮ್ಮನ್ನ ವಿಚಾರಿಸೋಕೆ ಹಿಡ್ಕೊಂಡು ಹೋಗುವಾಗ ಏನು ಮಾತಾಡಬೇಕು ಅಂತ ತುಂಬ ತಲೆಕೆಡಿಸ್ಕೊಳ್ಳಬೇಡಿ. ಏನು ಹೇಳಬೇಕು ಅಂತ ಆ ಸಮಯ ಬಂದಾಗ ನಿಮಗೇ ಗೊತ್ತಾಗುತ್ತೆ, ಅದನ್ನೇ ಹೇಳಿ. ಯಾಕಂದ್ರೆ ಅಲ್ಲಿ ಮಾತಾಡೋದು ನೀವಲ್ಲ, ಪವಿತ್ರಶಕ್ತಿನೇ” ಅಂತ ಯೇಸು ಮಾತು ಕೊಟ್ಟಿದ್ದಾನೆ.—ಮಾರ್ಕ 13:9-13.

‘ಫೇಲಿಕ್ಸನಿಗೆ ತುಂಬ ಭಯ ಆಯ್ತು’ (ಅ. ಕಾ. 24:22-27)

16, 17. (ಎ) ಪೌಲನ ವಿಚಾರಣೆ ನಡೀತಿದ್ದಾಗ ಫೇಲಿಕ್ಸ ಏನು ಮಾಡಿದ ಮತ್ತು ಏನು ಹೇಳಿದ? (ಬಿ) ಫೇಲಿಕ್ಸ ಭಯಪಡೋಕೆ ಕಾರಣ ಏನಾಗಿರಬಹುದು? (ಸಿ) ಆದ್ರೂ ಅವನು ಯಾಕೆ ಪೌಲನನ್ನ ತುಂಬ ಸಲ ಕರೆಸಿಕೊಂಡ?

16 ರಾಜ್ಯಪಾಲ ಫೇಲಿಕ್ಸ ಕ್ರೈಸ್ತರ ನಂಬಿಕೆಗಳ ಬಗ್ಗೆ ಕೇಳಿಸ್ಕೊಳ್ತಾ ಇರೋದು ಇದೇ ಮೊದಲ ಸಲ ಅಲ್ಲ, ಮುಂಚೆನೂ ಕೇಳಿಸ್ಕೊಂಡಿದ್ದ. “ಫೇಲಿಕ್ಸನಿಗೆ ‘ದೇವ್ರ ಮಾರ್ಗದ’ [ಕ್ರಿಸ್ತನ ಶಿಷ್ಯರಿಗೆ ಕ್ರೈಸ್ತರು ಅನ್ನೋ ಹೆಸ್ರು ಬರೋ ಮುಂಚೆ ಅವ್ರನ್ನ ‘ಮಾರ್ಗಕ್ಕೆ’ ಸೇರಿದವರು ಅಂತ ಜನ ಕರೀತಿದ್ರು.] ಬಗ್ಗೆ ಚೆನ್ನಾಗಿ ಗೊತ್ತಿದ್ರಿಂದ ಆ ವಿಚಾರಣೆಯನ್ನ ಅಲ್ಲಿಗೇ ನಿಲ್ಲಿಸಿದ. ಆಮೇಲೆ “ಸೇನಾಪತಿ ಲೂಸ್ಯ ಬಂದ ಮೇಲೆ ಈ ವಿಷ್ಯಕ್ಕೆ ಒಂದು ತೀರ್ಮಾನ ಹೇಳ್ತೀನಿ” ಅಂದ. ಆಮೇಲೆ ಸೇನಾಧಿಕಾರಿಗೆ ‘ಪೌಲನನ್ನ ಕಾವಲಲ್ಲಿ ಇಡು. ಅವನಿಗೆ ಸ್ವಲ್ಪ ಸ್ವಾತಂತ್ರ್ಯನೂ ಕೊಡು. ಅವನ ಜನ ಬಂದು ಅವನಿಗೆ ಸಹಾಯ ಮಾಡೋದಾದ್ರೆ ಬಿಟ್ಟುಬಿಡು’ ಅಂತ ಆಜ್ಞೆ ಕೊಟ್ಟ.”—ಅ. ಕಾ. 24:22, 23.

17 ಸ್ವಲ್ಪ ದಿನ ಆದ್ಮೇಲೆ ಫೇಲಿಕ್ಸ, ಯೆಹೂದ್ಯಳಾಗಿದ್ದ ತನ್ನ ಹೆಂಡತಿ ದ್ರೂಸಿಲ್ಲ ಪೌಲನನ್ನ ಕರೆಸಿ ಮಾತಾಡಿಸಿದ್ರು. ಆಗ ಪೌಲ, “ಕ್ರಿಸ್ತ ಯೇಸುವಿನ ಮೇಲೆ ನಂಬಿಕೆ ಇಡೋದು ಅಂದ್ರೆ ಏನು ಅಂತ ವಿವರಿಸಿದ. ಅದನ್ನ ಅವರು ಕೇಳಿಸ್ಕೊಂಡ್ರು.” (ಅ. ಕಾ. 24:24) ಆದ್ರೆ “ನೀತಿ ಬಗ್ಗೆ, ಸ್ವನಿಯಂತ್ರಣದ ಬಗ್ಗೆ ಮತ್ತು ದೇವರು ಮುಂದೆ ಮಾಡೋ ನ್ಯಾಯವಿಚಾರಣೆ ಬಗ್ಗೆ” ಅವನು ಹೇಳಿದಾಗ ಫೇಲಿಕ್ಸನಿಗೆ ತುಂಬ ಭಯ ಆಯ್ತು. ಯಾಕಂದ್ರೆ ಪೌಲ ಹೇಳಿದ ವಿಷ್ಯಗಳನ್ನ ಕೇಳಿದಾಗ ತನ್ನ ಜೀವನದಲ್ಲಿ ಮಾಡಿದ ಕೆಟ್ಟ ವಿಷ್ಯಗಳ ಬಗ್ಗೆ ಅವನ ಮನಸ್ಸಾಕ್ಷಿ ಚುಚ್ಚಿರಬೇಕು. ಅದಕ್ಕೇ ಅವನು ಪೌಲನಿಗೆ, “ಸದ್ಯಕ್ಕೆ ನೀನು ಈಗ ಹೋಗು. ಸಮಯ ಸಿಕ್ಕಿದಾಗ ಇನ್ನೊಂದು ಸಲ ನಿನ್ನನ್ನ ಕರಿತೀನಿ” ಅಂತ ಹೇಳಿ ಕಳಿಸಿಬಿಟ್ಟ. ಆಮೇಲೆ ಫೇಲಿಕ್ಸ ತುಂಬ ಸಲ ಪೌಲನನ್ನ ಕರೆಸಿಕೊಂಡ. ಆದ್ರೆ ಅವನು ಹಾಗೆ ಮಾಡಿದ್ದು ಸತ್ಯ ಕಲಿಬೇಕನ್ನೋ ಆಸೆಯಿಂದಲ್ಲ, ಬದಲಿಗೆ ಪೌಲ ತನಗೆ ಲಂಚ ಕೊಡಬಹುದು ಅನ್ನೋ ಆಸೆಯಿಂದ.—ಅ. ಕಾ. 24:25, 26.

18. ಫೇಲಿಕ್ಸ ಮತ್ತು ಅವನ ಹೆಂಡತಿಗೆ ಪೌಲ “ನೀತಿ ಬಗ್ಗೆ, ಸ್ವನಿಯಂತ್ರಣದ ಬಗ್ಗೆ ಮತ್ತು ದೇವರು ಮುಂದೆ ಮಾಡೋ ನ್ಯಾಯವಿಚಾರಣೆ ಬಗ್ಗೆ” ಯಾಕೆ ಹೇಳಿದ?

18 ಫೇಲಿಕ್ಸ ಮತ್ತು ಅವನ ಹೆಂಡತಿಗೆ ಪೌಲ “ನೀತಿ ಬಗ್ಗೆ, ಸ್ವನಿಯಂತ್ರಣದ ಬಗ್ಗೆ ಮತ್ತು ದೇವರು ಮುಂದೆ ಮಾಡೋ ನ್ಯಾಯವಿಚಾರಣೆ ಬಗ್ಗೆ” ಯಾಕೆ ಹೇಳಿದ? ಅವ್ರಿಗೆ ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಡೋರು ಏನೆಲ್ಲಾ ಮಾಡಬೇಕು ಅಂತ ತಿಳ್ಕೊಳ್ಳೋಕೆ ಇಷ್ಟ ಇತ್ತು. ಹಾಗಾಗಿ ಪೌಲನಿಗೆ ಅವ್ರ ಹಿನ್ನೆಲೆ ಚೆನ್ನಾಗಿ ಗೊತ್ತಿತ್ತು. ಅವರು ಅನೈತಿಕ ಜೀವನ ಮಾಡ್ತಿದ್ರು, ಕ್ರೂರವಾಗಿ ಅನ್ಯಾಯವಾಗಿ ನಡ್ಕೊಳ್ತಿದ್ರು. ಅದಕ್ಕೆ ಪೌಲ, ಯೇಸುವಿನ ಶಿಷ್ಯರಾಗೋಕೆ ಇಷ್ಟಪಡೋರು ಹೇಗಿರಬೇಕು ಅನ್ನೋದನ್ನ ಹೇಳಿದ. ಫೇಲಿಕ್ಸ ಮತ್ತು ಅವನ ಹೆಂಡತಿಯ ಜೀವನ ರೀತಿ ದೇವರ ನಿಯಮಗಳಿಗೆ ವಿರುದ್ಧವಾಗಿದೆ ಅಂತ ಪೌಲನ ಮಾತುಗಳು ತೋರಿಸ್ಕೊಡ್ತು. ಎಲ್ಲಾ ಮನುಷ್ಯರು ಏನು ಯೋಚ್ನೆ ಮಾಡ್ತಾರೋ, ಮಾತಾಡ್ತಾರೋ, ಹೇಗೆ ನಡ್ಕೊಳ್ತಾರೋ ಅದಕ್ಕೆ ದೇವರಿಗೆ ಲೆಕ್ಕ ಕೊಡಬೇಕು ಅನ್ನೋದನ್ನ ಅವ್ರಿಗೆ ನೆನಪಿಸಿದ. ಅಷ್ಟೇ ಅಲ್ಲ ಪೌಲನಿಗೆ ಫೇಲಿಕ್ಸ ಕೊಡೋ ತೀರ್ಪಿಗಿಂತ ದೇವರು ಕೊಡೋ ತೀರ್ಪೇ ತುಂಬ ಮುಖ್ಯ ಅಂತ ಅರ್ಥ ಮಾಡ್ಕೊಬೇಕು ಅಂತ ಇಷ್ಟಪಟ್ಟ. ಹಾಗಾಗಿ ಫೇಲಿಕ್ಸನಿಗೆ ‘ಭಯ ಆಗಿದ್ರಲ್ಲಿ’ ಆಶ್ಚರ್ಯ ಏನಿಲ್ಲ.

19, 20. (ಎ) ಕೆಲವ್ರಿಗೆ ಸತ್ಯ ಕಲಿಯೋಕೆ ಆಸೆ ಇದೆ ಅನ್ನೋ ತರ ಕಂಡ್ರೂ ಬದಲಾವಣೆ ಮಾಡ್ಕೊಳ್ಳೋಕೆ ಇಷ್ಟ ಇಲ್ಲದಿದ್ರೆ ನಾವೇನು ಮಾಡಬೇಕು? (ಬಿ) ಫೇಲಿಕ್ಸ ಪೌಲನ ಸ್ನೇಹಿತನಾಗಿರಲಿಲ್ಲ ಅಂತ ನಮಗೆ ಹೇಗೆ ಗೊತ್ತಾಗುತ್ತೆ?

19 ನಾವು ಕೂಡ ಸೇವೆಗೆ ಹೋದಾಗ ಫೇಲಿಕ್ಸನ ತರ ಇರೋ ಜನ್ರು ಸಿಗ್ತಾರೆ. ಅವ್ರಿಗೆ ಸತ್ಯದ ಬಗ್ಗೆ ತಿಳ್ಕೊಳ್ಳೋಕೆ ಇಷ್ಟ ಇದೆ ಅನ್ನೋ ತರ ನಮಗೆ ಅನಿಸಬಹುದು. ಆದ್ರೆ ಅವ್ರಿಗೆ ಬೈಬಲ್‌ ಹೇಳೋ ತರ ಬದಲಾವಣೆ ಮಾಡ್ಕೊಳ್ಳೋಕೆ ಇಷ್ಟ ಇಲ್ಲದಿರಬಹುದು. ಇಂಥವರ ವಿಷ್ಯದಲ್ಲಿ ನಾವು ಹುಷಾರಾಗಿ ಇರಬೇಕು. ಆದ್ರೂ ಪೌಲನ ತರ ನಾವು ಕೂಡ ಅವ್ರಿಗೆ ಜಾಣ್ಮೆಯಿಂದ ದೇವರ ನೀತಿ-ನಿಯಮಗಳ ಬಗ್ಗೆ ಹೇಳಬೇಕು. ಆಗ ಸತ್ಯ ಅವ್ರ ಮನಸ್ಸು ಮುಟ್ಟಬಹುದು, ಬದಲಾವಣೆ ಮಾಡ್ಕೊಳ್ಳೋಕೆ ಮನಸ್ಸು ಮಾಡಬಹುದು. ಒಂದುವೇಳೆ ತಪ್ಪಾದ ಜೀವನ ರೀತಿಯನ್ನ ಬಿಡೋಕೆ ಅವ್ರಿಗೆ ಇಷ್ಟ ಇಲ್ಲ ಅಂತ ನಮಗೆ ಗೊತ್ತಾದ್ರೆ ಅವ್ರನ್ನ ಬಿಟ್ಟು ನಾವು ಸತ್ಯ ಕಲಿಯೋಕೆ ಇಷ್ಟಪಡೋ ಬೇರೆ ಜನ್ರನ್ನ ಹುಡುಕಬೇಕು.

20 ಫೇಲಿಕ್ಸನ ಮನಸ್ಸಲ್ಲಿದ್ದ ಉದ್ದೇಶ ಈ ವಚನದಿಂದ ಗೊತ್ತಾಗುತ್ತೆ: “ಎರಡು ವರ್ಷ ಕಳೆದು ಹೋಯ್ತು. ಆಮೇಲೆ ಫೇಲಿಕ್ಸನಿಗೆ ಬದಲಾಗಿ ಪೋರ್ಕಿಯ ಫೆಸ್ತ ಆ ಸ್ಥಾನಕ್ಕೆ ಬಂದ. ಫೇಲಿಕ್ಸ ಯೆಹೂದ್ಯರ ಮೆಚ್ಚುಗೆ ಪಡಿಬೇಕಂತ ಪೌಲನನ್ನ ಜೈಲಲ್ಲೇ ಇರಿಸಿದ್ದ.” (ಅ. ಕಾ. 24:27) ಫೇಲಿಕ್ಸ ಪೌಲನ ಸ್ನೇಹಿತನಾಗಿರಲಿಲ್ಲ. ಯಾಕಂದ್ರೆ “ದೇವ್ರ ಮಾರ್ಗದ” ಹಿಂಬಾಲಕರು ದೇಶದ್ರೋಹಿಗಳೂ ಅಲ್ಲ, ಕ್ರಾಂತಿಕಾರಿಗಳೂ ಅಲ್ಲ ಅಂತ ಫೇಲಿಕ್ಸನಿಗೆ ಗೊತ್ತಿತ್ತು. (ಅ. ಕಾ. 19:23) ಪೌಲ ರೋಮಿನ ಯಾವ ನಿಯಮವನ್ನೂ ಮುರಿದಿಲ್ಲ ಅಂತಾನೂ ಅವನಿಗೆ ಗೊತ್ತಿತ್ತು. ಆದ್ರೂ “ಯೆಹೂದ್ಯರ ಮೆಚ್ಚುಗೆ ಪಡಿಬೇಕಂತ” ಪೌಲನನ್ನ ಸುಮ್ನೆ ಜೈಲಲ್ಲಿ ಇಟ್ಟಿದ್ದ.

21. (ಎ) ಪೋರ್ಕಿಯ ಫೆಸ್ತ ರಾಜ್ಯಪಾಲನಾದ ಮೇಲೂ ಪೌಲನಿಗೆ ಏನಾಯ್ತು? (ಬಿ) ಪೌಲನಿಗೆ ಯಾವುದು ಬಲ ತುಂಬಿತ್ತು?

21 ಅಪೊಸ್ತಲರ ಕಾರ್ಯ 24ನೇ ಅಧ್ಯಾಯದ ಕೊನೇ ವಚನದಲ್ಲಿ ಹೇಳಿದ ಹಾಗೆ, ಫೇಲಿಕ್ಸನ ಬದಲು ಪೋರ್ಕಿಯ ಫೆಸ್ತ ರಾಜ್ಯಪಾಲ ಆದಾಗ್ಲೂ ಪೌಲ ಜೈಲಲ್ಲೇ ಇದ್ದ. ಹೀಗೆ ಒಂದಾದ ಮೇಲೆ ಒಂದು ವಿಚಾರಣೆಗೆ ಪೌಲ ತುಂಬ ಅಧಿಕಾರಿಗಳ ಮುಂದೆ ನಿಲ್ಲಬೇಕಾಗಿ ಬಂತು. ಧೈರ್ಯಶಾಲಿ ಪೌಲನನ್ನ “ರಾಜ್ಯಪಾಲರ ಹತ್ರ, ರಾಜರ ಹತ್ರ ಎಳ್ಕೊಂಡು” ಹೋದ್ರು. (ಲೂಕ 21:12) ಆಗಿನ ಕಾಲದಲ್ಲಿ ಎಲ್ರಿಗಿಂತ ಜಾಸ್ತಿ ಅಧಿಕಾರದಲ್ಲಿದ್ದ ವ್ಯಕ್ತಿ ಹತ್ರನೂ ವಿಚಾರಣೆ ಮಾಡೋಕೆ ಅವನನ್ನ ಕರ್ಕೊಂಡು ಹೋದ್ರು. ಅವನಿಗೂ ಪೌಲ ಸಾಕ್ಷಿ ಕೊಟ್ಟ. ಅದ್ರ ಬಗ್ಗೆ ನಾವು ಮುಂದಿನ ಅಧ್ಯಾಯದಲ್ಲಿ ನೋಡೋಣ. ಇಷ್ಟೆಲ್ಲ ನಡೆದ್ರೂ ಪೌಲನ ನಂಬಿಕೆ ಮಾತ್ರ ಸಾಸಿವೆ ಕಾಳಷ್ಟೂ ಕಮ್ಮಿ ಆಗಲಿಲ್ಲ. “ಧೈರ್ಯವಾಗಿರು!” ಅಂತ ಯೇಸು ಹೇಳಿದ್ದ ಮಾತು ಪೌಲನಲ್ಲಿ ತುಂಬ ಬಲ ತುಂಬಿತ್ತು ಅನ್ನೋದ್ರಲ್ಲಿ ಸಂಶಯನೇ ಇಲ್ಲ!

a ಫೇಲಿಕ್ಸ—ಯೆಹೂದದ ರಾಜ್ಯಪಾಲ” ಅನ್ನೋ ಚೌಕ ನೋಡಿ.

b ತೆರ್ತುಲ್ಲ ಫೇಲಿಕ್ಸನಿಗೆ ದೇಶದಲ್ಲಿ “ಸಮಾಧಾನದಿಂದ ಜೀವನ” ಮಾಡೋ ತರ ಮಾಡಿದಿಕ್ಕೆ ಧನ್ಯವಾದ ಹೇಳಿದ. ಆದ್ರೆ ನಿಜ ಏನಂದ್ರೆ, ಯೆಹೂದದಲ್ಲಿ ಬೇರೆ ರಾಜ್ಯಪಾಲರಿಗಿಂತ ಫೇಲಿಕ್ಸನ ಸಮಯದಲ್ಲೇ ಶಾಂತಿ ಕಡಿಮೆ ಇತ್ತು. ಯೆಹೂದ್ಯರು ರೋಮಿನ ವಿರುದ್ಧ ದಂಗೆ ಎದ್ದ ಮೇಲೆ ಪರಿಸ್ಥಿತಿ ಇನ್ನೂ ಹಾಳಾಯ್ತು. ಫೇಲಿಕ್ಸ ಯೆಹೂದ್ಯರಿಗೆ ಮಾಡಿರೋ ಸುಧಾರಣೆಗಳಿಗೆ ತೆರ್ತುಲ್ಲ “ನಾವೆಲ್ಲೇ ಹೋದ್ರೂ ನಿನಗೆ ಋಣಿಗಳಾಗಿರ್ತಿವಿ” ಅಂತ ಹೇಳಿರೋದು ಕೂಡ ಸತ್ಯವಾಗಿರಲಿಲ್ಲ. ಯಾಕಂದ್ರೆ ಫೇಲಿಕ್ಸ ಯೆಹೂದ್ಯರಿಗೆ ಅನ್ಯಾಯ ಮಾಡ್ತಿದ್ದ, ದಬ್ಬಾಳಿಕೆ ಮಾಡ್ತಿದ್ದ. ಯೆಹೂದ್ಯರು ಪ್ರತಿಭಟನೆ ಮಾಡಿದಾಗ ಅವ್ರ ಜೊತೆ ತುಂಬ ಕ್ರೂರವಾಗಿ ನಡ್ಕೊಂಡಿದ್ದ. ಹಾಗಾಗಿ ಹೆಚ್ಚಿನ ಯೆಹೂದ್ಯರಿಗೆ ಅವನ ಮೇಲೆ ಒಂಚೂರೂ ಗೌರವ ಇರಲಿಲ್ಲ.—ಅ. ಕಾ. 24:2, 3.