ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 26

“ನಮ್ಮಲ್ಲಿ ಒಬ್ರೂ ಸಾಯಲ್ಲ”

“ನಮ್ಮಲ್ಲಿ ಒಬ್ರೂ ಸಾಯಲ್ಲ”

ಪೌಲ ದೇವರ ಮೇಲೆ ಎಷ್ಟು ನಂಬಿಕೆ ಇದೆ, ಜನರ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸಿದ

ಆಧಾರ: ಅಪೊಸ್ತಲರ ಕಾರ್ಯ 27:1–28:10

1, 2. (ಎ) ಪೌಲ ಮುಂಚೆ ಮಾಡಿದ ಪ್ರಯಾಣಗಳಿಗೂ ಈಗ ಮಾಡ್ತಿರೋ ಪ್ರಯಾಣಕ್ಕೂ ಯಾವ ವ್ಯತ್ಯಾಸ ಇತ್ತು? (ಬಿ) ಅವನ ಮನಸ್ಸಲ್ಲಿ ಯಾವ ಯೋಚ್ನೆಗಳು ಬಂದಿರಬೇಕು?

 “ನೀನು ರೋಮಿನ ರಾಜನ ಹತ್ರ ಹೋಗು” ಅಂತ ಫೆಸ್ತ ಪೌಲನಿಗೆ ಹೇಳಿದ. ಪೌಲ ಇದನ್ನ ಕೇಳಿದಾಗ ಇನ್ಮುಂದೆ ಏನೇನಾಗುತ್ತೆ ಅನ್ನೋದರ ಯೋಚ್ನೆ ಮಾಡೋಕೆ ಶುರುಮಾಡಿದ. ಎರಡು ವರ್ಷದಿಂದ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಇದ್ದವನಿಗೆ ಈ ಪ್ರಯಾಣ ಒಂದು ಬದಲಾವಣೆ ಆಗಿತ್ತು. (ಅ. ಕಾ. 25:12) ಈ ಮುಂಚೆ ಅವನು ಸಮುದ್ರ ಪ್ರಯಾಣ ಮಾಡಿದ್ದ. ಆದ್ರೆ ಅದೆಲ್ಲ ಸವಿನೆನಪುಗಳಾಗಿರಲಿಲ್ಲ. ಯಾಕಂದ್ರೆ ಆ ಪ್ರಯಾಣಗಳಲ್ಲಿ ಅವನು ತುಂಬ ಕಷ್ಟಗಳನ್ನ ಅನುಭವಿಸಿದ್ದ. ಅದೇ ತರ ಈ ಪ್ರಯಾಣದಲ್ಲೂ ಏನೆಲ್ಲಾ ಕಷ್ಟ ಕಾದಿದ್ಯೋ ಅಂತ ಯೋಚ್ನೆ ಮಾಡಿದ್ದಿರಬೇಕು. ಅಷ್ಟೇ ಅಲ್ಲ ರೋಮಿನ ರಾಜನ ಹತ್ರ ನಡೆಯೋ ವಿಚಾರಣೆ ಬಗ್ಗೆನೂ ಅವನು ಯೋಚ್ನೆ ಮಾಡಿರಬೇಕು.

2 ಪೌಲ ಮುಂಚೆ ಸಮುದ್ರ ಪ್ರಯಾಣ ಮಾಡಿದ್ದಾಗ ತುಂಬ ಸಲ ‘ಅಪಾಯಗಳನ್ನ’ ಎದುರಿಸಿದ್ದ. ಮೂರು ಸಲ ಅವನಿದ್ದ ಹಡಗು ಒಡೆದು ಹೋಗಿತ್ತು, ಒಂದು ಸಲ ಅಂತೂ ಹಡಗು ಒಡೆದು ಹೋದಾಗ ಅವನು ಸಮುದ್ರದಲ್ಲೇ ಇಡೀ ದಿನ ಅಂದ್ರೆ ಒಂದು ರಾತ್ರಿ ಒಂದು ಹಗಲು ಕಳೆದಿದ್ದ. (2 ಕೊರಿಂ. 11:25, 26) ಆಗ ಅವನು ಕೈದಿಯಾಗಿ ಅಲ್ಲ, ಒಬ್ಬ ಮಿಷನರಿಯಾಗಿ ಪ್ರಯಾಣ ಮಾಡ್ತಿದ್ದ. ಆದ್ರೆ ಈಗ ಒಬ್ಬ ಕೈದಿಯಾಗಿ ಕೈಸರೈಯದಿಂದ ರೋಮಿಗೆ ಸುಮಾರು 3,000 ಕಿ.ಮೀ. ಪ್ರಯಾಣ ಮಾಡ್ತಿದ್ದ. ಪೌಲ ಸುರಕ್ಷಿತವಾಗಿ ಅಲ್ಲಿಗೆ ಹೋಗ್ತಾನಾ? ಸುರಕ್ಷಿತವಾಗಿ ಹೋಗಿ ತಲುಪಿದ್ರೂ ಅಲ್ಲಿ ಅವನಿಗೆ ವಿಚಾರಣೆ ನಡೆದ ಮೇಲೆ ಶಿಕ್ಷೆ ಆಗುತ್ತಾ? ಒಂದು ವಿಷ್ಯ ಮರೀಬೇಡಿ, ಅವನಿಗೆ ತೀರ್ಪು ಕೊಡೋನು ಸೈತಾನನ ಲೋಕದಲ್ಲೇ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿದ್ದ.

3. (ಎ) ಪೌಲ ಏನಂತ ನಿರ್ಧಾರ ಮಾಡಿದ್ದ? (ಬಿ) ಈ ಅಧ್ಯಾಯದಲ್ಲಿ ನಾವು ಏನು ನೋಡ್ತೀವಿ?

3 ಪೌಲನ ಬಗ್ಗೆ ಇಷ್ಟೆಲ್ಲಾ ಓದಿದ ಮೇಲೆ ನಿಮಗೆ ಏನನಿಸುತ್ತೆ? ಅವನು ಭವಿಷ್ಯದ ಬಗ್ಗೆ ನಿರೀಕ್ಷೆ ಕಳ್ಕೊಂಡು ಪ್ರಯಾಣ ಮಾಡ್ತಿದ್ದಾನಾ? ಖಂಡಿತ ಇಲ್ಲ! ಅವನಿಗೆ ಮುಂದೆ ಕಷ್ಟಗಳು ಬರುತ್ತೆ ಅಂತ ಗೊತ್ತಿತ್ತು. ಆದ್ರೆ ಯಾವ ರೀತಿಯ ಕಷ್ಟಗಳು ಅಂತ ಗೊತ್ತಿರಲಿಲ್ಲ. ತನ್ನ ಕೈಯಲ್ಲಿ ಇಲ್ಲದ ವಿಷ್ಯಗಳ ಬಗ್ಗೆ ಯೋಚ್ನೆ ಮಾಡ್ತಾ ಸೇವೆಯಲ್ಲಿ ಸಿಗೋ ಖುಷಿಯನ್ನ ಕಳ್ಕೊಳ್ಳೋಕೆ ಅವನಿಗೆ ಇಷ್ಟ ಇರಲಿಲ್ಲ. (ಮತ್ತಾ. 6:27, 34) ತನಗೆ ಸಿಗೋ ಅವಕಾಶಗಳನ್ನ ಎಲ್ರಿಗೂ ಅಂದ್ರೆ ಅಧಿಕಾರಿಗಳಿಗೂ ಸಾರೋಕೆ ಉಪಯೋಗಿಸಬೇಕು ಅಂತ ಯೆಹೋವ ಇಷ್ಟಪಡ್ತಾನೆ ಅನ್ನೋದನ್ನ ಪೌಲ ಅರ್ಥ ಮಾಡ್ಕೊಂಡಿದ್ದ. (ಅ. ಕಾ. 9:15) ಏನೇ ಆದ್ರೂ ತನಗೆ ಸಿಕ್ಕಿದ ನೇಮಕನ ಚೆನ್ನಾಗಿ ಮಾಡಿ ಮುಗಿಸಬೇಕು ಅಂತ ನಿರ್ಧಾರ ಮಾಡಿದ್ದ. ನಮ್ಮ ಗುರಿನೂ ಅದೇ ಆಗಿರಬೇಕು ಅಲ್ವಾ? ನಾವೀಗ, ಪೌಲ ಹಡಗಲ್ಲಿ ರೋಮಿಗೆ ಹೋಗ್ತಾ ಇರುವಾಗ ಏನೇನಾಯ್ತು ಅಂತ ನೋಡೋಣ. ಅವನ ಮಾದರಿಯಿಂದ ನಾವೇನು ಕಲಿಬಹುದು ಅಂತನೂ ನೋಡೋಣ.

“ಗಾಳಿ ಜೋರಾಗಿ ಬೀಸ್ತಾ ಇತ್ತು” (ಅ. ಕಾ. 27:1-7ಎ)

4. (ಎ) ಪೌಲ ಎಂಥ ಹಡಗಲ್ಲಿ ಪ್ರಯಾಣ ಮಾಡಿದ? (ಬಿ) ಅವನ ಜೊತೆಯಲ್ಲಿ ಇನ್ನೂ ಯಾರಿದ್ರು?

4 ಪೌಲ ಮತ್ತು ಇನ್ನೂ ಬೇರೆ ಕೈದಿಗಳನ್ನ ಯೂಲ್ಯ ಅನ್ನೋ ರೋಮನ್‌ ಸೇನಾಪತಿ ಕೈಗೆ ಒಪ್ಪಿಸಿದ್ರು. ಇವ್ರನ್ನ ಕರ್ಕೊಂಡು ಹೋಗೋ ಜವಾಬ್ದಾರಿ ಅವನ ಹೆಗಲ ಮೇಲೆ ಇತ್ತು. ಹಾಗಾಗಿ ಅವನು ಕೈಸರೈಯಕ್ಕೆ ಬಂದಿದ್ದ ಸರಕು ಹಡಗಲ್ಲಿ ಪ್ರಯಾಣ ಮಾಡೋಕೆ ತೀರ್ಮಾನ ಮಾಡಿದ. ಆ ಹಡಗು ಏಷ್ಯಾ ಮೈನರ್‌ನ ಪಶ್ಚಿಮ ಕರಾವಳಿಯ ಅದ್ರಮಿತ್ತಿಯ ಅನ್ನೋ ಬಂದರಿನಿಂದ ಬಂದಿತ್ತು. ಅದು ಉತ್ತರದ ಕಡೆಗೆ ಆಮೇಲೆ ಪಶ್ಚಿಮದ ಕಡೆಗೆ ಹೋಗ್ತಿತ್ತು. ಹೋದಲ್ಲೆಲ್ಲ ಅಲ್ಲಲ್ಲಿ ನಿಲ್ಲಿಸಿ ಸರಕುಗಳನ್ನ ಇಳಿಸಿ ಬೇರೆ ಸರಕುಗಳನ್ನ ತಗೊಂಡು ಹೋಗ್ತಿತ್ತು. ಇಂಥ ಹಡಗು ಜನ ಪ್ರಯಾಣ ಮಾಡೋಕೆ ಅದ್ರಲ್ಲೂ ಕೈದಿಗಳಿಗೆ ಸೂಕ್ತವಾಗಿರಲಿಲ್ಲ. (“ ಸಮುದ್ರ ಪ್ರಯಾಣ ಮತ್ತು ವ್ಯಾಪಾರ ಮಾರ್ಗಗಳು” ಅನ್ನೋ ಚೌಕ ನೋಡಿ.) ಆ ಹಡಗಲ್ಲಿದ್ದ ಕೈದಿಗಳಲ್ಲಿ ಕ್ರೈಸ್ತನಾಗಿದ್ದವನು ಪೌಲನೊಬ್ಬನೇ ಅಲ್ಲ. ಕಡಿಮೆ ಪಕ್ಷ ಇಬ್ರು ಕ್ರೈಸ್ತರಾದ್ರೂ ಅವನ ಜೊತೆ ಇದ್ರು. ಅವರೇ ಅರಿಸ್ತಾರ್ಕ ಮತ್ತು ಲೂಕ. ಈ ಪ್ರಯಾಣದ ಬಗ್ಗೆ ಬರೆದಿದ್ದೂ ಲೂಕನೇ. ಇವ್ರಿಬ್ಬರೂ ತಮ್ಮ ಪ್ರಯಾಣದ ಖರ್ಚನ್ನ ತಾವೇ ನೋಡ್ಕೊಂಡ್ರಾ ಅಥವಾ ಅವರು ಪೌಲನ ಸೇವಕರು ಅನ್ನೋ ಕಾರಣಕ್ಕೆ ಅವ್ರನ್ನೂ ಜೊತೆಗೆ ಕರ್ಕೊಂಡರಾ ಅಂತ ನಮಗೆ ಸರಿಯಾಗಿ ಗೊತ್ತಿಲ್ಲ.—ಅ. ಕಾ. 27:1, 2.

5. (ಎ) ಸೀದೋನ್‌ನಲ್ಲಿ ಪೌಲನಿಗೆ ಯಾವ ಅವಕಾಶ ಸಿಕ್ತು? (ಬಿ) ಇದ್ರಿಂದ ನಾವೇನು ಕಲಿಬಹುದು?

5 ಒಂದಿನ ಕಳೆದ ಮೇಲೆ ಹಡಗು ಉತ್ತರದ ಕಡೆಗೆ 110 ಕಿ.ಮೀ. ದೂರದ ಸಿರಿಯಾದ ತೀರವಾದ ಸೀದೋನ್‌ನಲ್ಲಿ ನಿಲ್ತು. ಪೌಲ ರೋಮನ್‌ ಪ್ರಜೆ ಆಗಿದ್ರಿಂದ ಮತ್ತು ಅವನ ತಪ್ಪು ಇನ್ನೂ ಸಾಬೀತಾಗದೇ ಇದ್ದಿದ್ರಿಂದ ಯೂಲ್ಯ ಅವನ ಜೊತೆ ಬೇರೆ ಅಪರಾಧಿಗಳ ಜೊತೆ ನಡ್ಕೊಳ್ಳೋ ತರ ನಡ್ಕೊಳ್ಳಲಿಲ್ಲ. (ಅ. ಕಾ. 22:27, 28; 26:31, 32) ಪೌಲನಿಗೆ ತೀರಕ್ಕೆ ಹೋಗಿ ಅಲ್ಲಿರೋ ಕ್ರೈಸ್ತರನ್ನ ನೋಡೋಕೆ ಯೂಲ್ಯ ಅನುಮತಿ ಕೊಟ್ಟ. ತುಂಬ ಸಮಯ ಜೈಲಲ್ಲಿದ್ದ ಈ ಅಪೊಸ್ತಲನ ಸೇವೆ ಮಾಡೋಕೆ ಸಹೋದರ ಸಹೋದರಿಯರಿಗೆ ತುಂಬ ಖುಷಿಯಾಗಿರಬೇಕು! ನಮಗೂ ಇದೇ ತರ ಬೇರೆಯವ್ರಿಗೆ ಅತಿಥಿ ಸತ್ಕಾರ ಮಾಡೋಕೆ ಅವಕಾಶಗಳು ಸಿಗುತ್ತಾ? ನಾವು ಪ್ರೀತಿಯಿಂದ ಅತಿಥಿ ಸತ್ಕಾರ ಮಾಡಿದಾಗ ನಮಗೂ ತುಂಬ ಪ್ರೋತ್ಸಾಹ ಸಿಗುತ್ತೆ.—ಅ. ಕಾ. 27:3.

6-8. (ಎ) ಸೀದೋನ್‌ನಿಂದ ಕ್ನೀದದ ತನಕ ಪ್ರಯಾಣ ಹೇಗಿತ್ತು? (ಬಿ) ಪೌಲ ತನಗೆ ಸಿಕ್ಕಿದ ಅವಕಾಶಗಳನ್ನ ಏನು ಮಾಡಿದ?

6 ಆಮೇಲೆ ಸೀದೋನ್‌ನಿಂದ ಹಡಗು ಕರಾವಳಿಯಲ್ಲೇ ಹೋಗ್ತಾ ಪೌಲನ ಸ್ವಂತ ಊರಾದ ತಾರ್ಸದ ಹತ್ರದಲ್ಲಿದ್ದ ಕಿಲಿಕ್ಯ ದಾಟಿ ಮುಂದಕ್ಕೆ ಹೋಯ್ತು. ಆದ್ರೆ ಇದ್ರ ಮಧ್ಯೆ ಎಲ್ಲೂ ಹಡಗನ್ನ ನಿಲ್ಲಿಸಿದ್ರ ಬಗ್ಗೆ ಲೂಕ ಹೇಳಿಲ್ಲ, ಆದ್ರೆ “ಗಾಳಿ ಜೋರಾಗಿ ಬೀಸ್ತಾ ಇತ್ತು” ಅಂತ ಹೇಳಿದ್ದಾನೆ. (ಅ. ಕಾ. 27:4, 5) ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲದಿದ್ರೂ ಪೌಲನಂತೂ ಖಂಡಿತ ತನಗೆ ಸಿಕ್ಕಿದ ಒಂದೊಂದು ಅವಕಾಶವನ್ನ ಸಿಹಿಸುದ್ದಿ ಸಾರೋಕೆ ಬಳಸಿರ್ತಾನೆ. ಅವನು ತನ್ನ ಜೊತೆಯಲ್ಲಿದ್ದ ಕೈದಿಗಳಿಗೆ, ಬೇರೆ ಜನ್ರಿಗೆ, ಹಡಗಿನ ಸಿಬ್ಬಂದಿಗಳಿಗೆ, ಸೈನಿಕರಿಗೆ ಸಾರಿರ್ತಾನೆ. ಹಡಗು ಬಂದರಲ್ಲಿ ನಿಂತಾಗ ಆ ಬಂದರಲ್ಲಿದ್ದ ಜನ್ರಿಗೂ ಸಾರಿರ್ತಾನೆ. ನಾವು ಕೂಡ ಅದೇ ತರ ನಮಗೆ ಸಿಗೋ ಎಲ್ಲಾ ಅವಕಾಶಗಳನ್ನ ಸಿಹಿಸುದ್ದಿ ಸಾರೋಕೆ ಉಪಯೋಗಿಸ್ಕೊಳ್ತೀವಾ?

7 ಆಮೇಲೆ ಹಡಗು ಏಷ್ಯಾ ಮೈನರ್‌ನ ದಕ್ಷಿಣ ಕರಾವಳಿಯಲ್ಲಿರೋ ಮುರ ಅನ್ನೋ ಬಂದರಿಗೆ ಬಂತು. ಅಲ್ಲಿಂದ ಪೌಲ ಮತ್ತು ಅವನ ಜೊತೆಯಲ್ಲಿ ಇದ್ದವರು ಬೇರೆ ಹಡಗು ಅಂದ್ರೆ ರೋಮಿಗೆ ಹೋಗೋ ಹಡಗು ಹತ್ತಿದ್ರು. (ಅ. ಕಾ. 27:6) ಆ ಸಮಯದಲ್ಲಿ ಈಜಿಪ್ಟ್‌ ರೋಮಿನ ಉಗ್ರಾಣದ ತರ ಇತ್ತು. ಹಾಗಾಗಿ ದವಸ ಧಾನ್ಯಗಳನ್ನ ತುಂಬಿದ್ದ ಈಜಿಪ್ಟ್‌ನ ಹಡಗುಗಳು ಮುರ ಬಂದರಲ್ಲಿ ಇರ್ತಿದ್ವು. ಯೂಲ್ಯ ಅಂಥ ಒಂದು ಹಡಗನ್ನ ನೋಡಿ ಸೈನಿಕರಿಗೂ ಕೈದಿಗಳಿಗೂ ಅದನ್ನ ಹತ್ತೋಕೆ ಹೇಳಿದ. ಈ ಹಡಗು ಮುಂಚೆ ಹತ್ತಿದ್ದ ಹಡಗಿಗಿಂತ ತುಂಬ ದೊಡ್ಡದಾಗಿದ್ದಿರಬೇಕು. ಇದ್ರಲ್ಲಿ ಗೋಧಿ ಇತ್ತು ಜೊತೆಗೆ ಹಡಗಿನ ಸಿಬ್ಬಂದಿಗಳು, ಸೈನಿಕರು, ಕೈದಿಗಳು ಮತ್ತು ರೋಮಿಗೆ ಹೋಗ್ತಿದ್ದ ಬೇರೆ ಪ್ರಯಾಣಿಕರನ್ನೂ ಸೇರಿಸಿ ಒಟ್ಟು 276 ಜನರಿದ್ರು. ಈ ತರ ಬೇರೆ ಹಡಗು ಹತ್ತಿದ್ರಿಂದ ಪೌಲನಿಗೆ ಇನ್ನೂ ಜಾಸ್ತಿ ಜನ್ರಿಗೆ ಸಾರೋಕೆ ಅವಕಾಶ ಸಿಕ್ತು.

8 ಆಮೇಲೆ ಹಡಗು ಏಷ್ಯಾ ಮೈನರ್‌ನ ನೈಋತ್ಯ ಭಾಗದಲ್ಲಿರೋ ಕ್ನೀದದಲ್ಲಿ ನಿಲ್ತು. ಹಡಗು ಹೋಗ್ತಿರೋ ದಿಕ್ಕಿಗೇ ಗಾಳಿ ಬೀಸಿದ್ರೆ ಒಂದು ದಿನದಲ್ಲೇ ಅವರು ಬಂದು ತಲುಪ್ತಿದ್ರು. ಆದ್ರೆ ಲೂಕ “ತುಂಬ ದಿನ ನಿಧಾನವಾಗಿ ಪ್ರಯಾಣ ಮಾಡ್ತಾ ಕಷ್ಟಪಟ್ಟು ಕ್ನೀದಕ್ಕೆ ತಲಪಿದ್ವಿ” ಅಂತ ಹೇಳಿದ್ದಾನೆ. (ಅ. ಕಾ. 27:7ಎ) ಇದ್ರಿಂದ ಹವಾಮಾನ ಅನುಕೂಲವಾಗಿರಲಿಲ್ಲ ಅಂತ ಗೊತ್ತಾಗುತ್ತೆ. (“ ಮೆಡಿಟರೇನಿಯನ್‌ನ ಎದುರುಗಾಳಿ” ಅನ್ನೋ ಚೌಕ ನೋಡಿ.) ಸ್ವಲ್ಪ ಯೋಚ್ನೆ ಮಾಡಿ ನೋಡಿ. ಗಾಳಿ ವಿರುದ್ಧ ದಿಕ್ಕಿಗೆ ಜೋರಾಗಿ ಬೀಸ್ತಾ ಇದೆ, ದೊಡ್ಡ ದೊಡ್ಡ ಅಲೆಗಳು ಬಂದು ಹಡಗಿಗೆ ಬಡೀತಾ ಇದೆ. ಆಗ ಹಡಗಲ್ಲಿ ಇದ್ದವ್ರಿಗೆ ಎಷ್ಟು ಕಷ್ಟ ಆಗಿರುತ್ತೆ ಅಲ್ವಾ!

“ಬಿರುಗಾಳಿಯ ರಭಸ ಕಡಿಮೆ ಆಗಲಿಲ್ಲ” (ಅ. ಕಾ. 27:7ಬಿ-26)

9, 10. ಕ್ರೇತದ ಹತ್ರ ಪ್ರಯಾಣ ಮಾಡುವಾಗ ಯಾವೆಲ್ಲಾ ಸಮಸ್ಯೆಗಳು ಬಂತು?

9 ಹಡಗಿನ ನಾಯಕ ಕ್ನೀದದಿಂದ ಪಶ್ಚಿಮದ ಕಡೆಗೆ ಹೋಗೋಣ ಅಂತ ತೀರ್ಮಾನ ಮಾಡಿದ. ಆದ್ರೆ “ಗಾಳಿ ಜೋರಾಗಿ ಬೀಸ್ತಾ ಇದ್ದ ಕಾರಣ” ಹೋಗೋಕೆ ಆಗಲಿಲ್ಲ ಅಂತ ಲೂಕ ಬರೆದಿದ್ದಾನೆ. (ಅ. ಕಾ. 27:7ಬಿ) ಹಡಗು ತೀರವನ್ನ ಬಿಟ್ಟು ಮುಂದಕ್ಕೆ ಚಲಿಸುವಾಗ ವಾಯುವ್ಯದ ಕಡೆಯಿಂದ ಬೀಸಿದ ಪ್ರಬಲ ಗಾಳಿ ಹಡಗನ್ನ ಬಹಳ ವೇಗವಾಗಿ ದಕ್ಷಿಣದ ಕಡೆಗೆ ತಳ್ತಾ ಇತ್ತು. ಇದಕ್ಕೂ ಮುಂಚೆ ಇದೇ ತರ ಎದುರುಗಾಳಿ ಬೀಸಿದಾಗ ಕರಾವಳಿಯಲ್ಲಿ ಸಾಗ್ತಿದ್ದ ಹಡಗಿಗೆ ಸೈಪ್ರಸ್‌ ದ್ವೀಪದಿಂದಾಗಿ ಸಂರಕ್ಷಣೆ ಸಿಕ್ತು. ಅದೇ ತರ ಈ ಸಲನೂ ಹಡಗಿಗೆ ಕ್ರೇತ ದ್ವೀಪದಿಂದ ಸಂರಕ್ಷಣೆ ಸಿಕ್ತು. ಕ್ರೇತದ ಪೂರ್ವದಲ್ಲಿ ಈ ಹಡಗು ಸಲ್ಮೋನೆಯ ಭೂಶಿರವನ್ನ ದಾಟಿದ ಮೇಲೆ ಹವಾಮಾನ ಸ್ವಲ್ಪ ಸುಧಾರಿಸ್ತು. ಯಾಕಂದ್ರೆ ಹಡಗು ದ್ವೀಪದ ದಕ್ಷಿಣದಲ್ಲಿ ಇದ್ದಿದ್ರಿಂದ ಅಲ್ಲಿ ಗಾಳಿ ಅಷ್ಟು ಜೋರಾಗಿ ಬೀಸ್ತಾ ಇರಲಿಲ್ಲ. ಆಗ ಆ ಹಡಗಲ್ಲಿ ಇದ್ದವ್ರಿಗೆ ಎಷ್ಟು ನೆಮ್ಮದಿ ಆಗಿರಬೇಕಲ್ವಾ! ಆದ್ರೆ ಇಷ್ಟಕ್ಕೆ ಎಲ್ಲಾ ಮುಗಿಲಿಲ್ಲ. ಚಳಿಗಾಲ ಹತ್ರ ಇದ್ದಿದ್ರಿಂದ ಮುಂದಿನ ಪ್ರಯಾಣ ಅಷ್ಟು ಸುಲಭ ಆಗಿರಲ್ಲ ಅಂತ ಅವ್ರಿಗೆ ಗೊತ್ತಿತ್ತು.

10 ಅದಕ್ಕೆ ಲೂಕ “ಆ ದ್ವೀಪದ [ಕ್ರೇತದ] ಕರಾವಳಿಯಲ್ಲೇ ಕಷ್ಟಪಟ್ಟು ಮುಂದೆ ಸಾಗಿ ಚಂದರೇವು ಅನ್ನೋ ಸ್ಥಳಕ್ಕೆ ಬಂದ್ವಿ” ಅಂತ ಹೇಳಿದ್ದಾನೆ. ಹಡಗು ಈ ದ್ವೀಪದ ಮರೆಯಲ್ಲಿದ್ರೂ ಇದನ್ನ ನಿಯಂತ್ರಿಸೋದು ಕಷ್ಟವಾಗಿತ್ತು. ಕೊನೆಗೂ ಅವರು ಒಂದು ಚಿಕ್ಕ ಕೊಲ್ಲಿಯಲ್ಲಿ ಬಂದರನ್ನ ನೋಡಿ ಲಂಗರನ್ನ ಇಳಿಸಿದ್ರು. ಈ ಜಾಗ ಬಹುಶಃ ಕರಾವಳಿಯು ಉತ್ತರದ ಕಡೆಗೆ ತಿರುಗೋದಕ್ಕೂ ಸ್ವಲ್ಪ ಮುಂಚಿನ ಪ್ರದೇಶದಲ್ಲಿತ್ತು. ಅವರು ಅಲ್ಲಿ ಎಷ್ಟು ಸಮಯ ಇದ್ರು? ಲೂಕ “ತುಂಬ ದಿನ” ಅಂತ ಹೇಳಿದ್ದಾನೆ. ಆದ್ರೆ ಅದು ಪ್ರಯಾಣ ಮಾಡೋಕೆ ಸೂಕ್ತವಾದ ಸಮಯ ಆಗಿರಲಿಲ್ಲ. ಯಾಕಂದ್ರೆ ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಸಮುದ್ರ ಮಾರ್ಗಗಳನ್ನ ಗುರುತಿಸೋದು ತುಂಬ ಕಷ್ಟ ಆಗ್ತಿತ್ತು.—ಅ. ಕಾ. 27:8, 9.

11. (ಎ) ಪೌಲ ಹಡಗಲ್ಲಿ ಇದ್ದವ್ರಿಗೆ ಯಾವ ಸಲಹೆ ಕೊಟ್ಟ? (ಬಿ) ಆದ್ರೂ ಹಡಗಲ್ಲಿ ಇದ್ದವರು ಯಾವ ನಿರ್ಧಾರ ಮಾಡಿದ್ರು?

11 ಪೌಲನಿಗೆ ಮೆಡಿಟರೇನಿಯನ್‌ನಲ್ಲಿ ಪ್ರಯಾಣ ಮಾಡಿ ಅನುಭವ ಇದ್ದಿದ್ರಿಂದ ಅವನ ಹತ್ರ ತುಂಬ ಪ್ರಯಾಣಿಕರು ಸಲಹೆ ಕೇಳಿರಬೇಕು. ಆಗ ಪೌಲ ಪ್ರಯಾಣ ಮುಂದುವರಿಸೋದು ಒಳ್ಳೇದಲ್ಲ ಅಂತ ಹೇಳಿದ. ಪ್ರಯಾಣ ಮುಂದುವರಿಸಿದ್ರೆ ‘ಹಡಗಿಗೆ ಮತ್ತು ಅದ್ರಲ್ಲಿರೋ ಸಾಮಾನಿಗೆ ತುಂಬ ನಷ್ಟ ಆಗುತ್ತೆ, ನಮ್ಮ ಜೀವಕ್ಕೂ ಅಪಾಯ ಆಗುತ್ತೆ’ ಅಂದ. ಆದ್ರೆ ಹಡಗಿನ ನಾವಿಕನಿಗೆ ಮತ್ತು ಅದ್ರ ಯಜಮಾನನಿಗೆ ಪ್ರಯಾಣ ಮುಂದುವರಿಸೋಕೆ ಇಷ್ಟ ಇತ್ತು. ಅವ್ರಿಗೆ ಬೇಗ ಒಂದು ಸುರಕ್ಷಿತವಾದ ಜಾಗಕ್ಕೆ ಹೋಗಿ ಸೇರಬೇಕು ಅನ್ನೋ ಉದ್ದೇಶ ಇತ್ತು ಅನಿಸುತ್ತೆ. ಅದಕ್ಕೆ ಅವರು ಯೂಲ್ಯನನ್ನ ಹೇಗೋ ಒಪ್ಪಿಸಿದ್ರು. ಕರಾವಳಿಯಲ್ಲೇ ಮುಂದಕ್ಕೆ ಇದ್ದ ಫೊಯಿನಿಕ್ಸಕ್ಕೆ ಹೋಗಬೇಕು ಅನ್ನೋದು ಹೆಚ್ಚಿನವರ ಅಭಿಪ್ರಾಯ ಆಗಿತ್ತು. ಅಲ್ಲಿದ್ದ ಬಂದರು ದೊಡ್ಡದು ಮತ್ತು ಇನ್ನೂ ಚೆನ್ನಾಗಿತ್ತು ಅಂತ ಅನ್ಸುತ್ತೆ. ಹಾಗಾಗಿ ಅಲ್ಲಿ ಚಳಿಗಾಲ ಕಳೆಯೋಕೆ ಅನುಕೂಲವಾಗಿತ್ತು. ದಕ್ಷಿಣದ ಕಡೆಯಿಂದ ನಿಧಾನವಾಗಿ ಗಾಳಿ ಬೀಸಿದಾಗ ಪ್ರಯಾಣ ಮಾಡೋಕ್ಕೂ ಸುಲಭ ಅಂತ ಅಂದ್ಕೊಂಡು ಅಲ್ಲಿಂದ ಹೊರಟ್ರು.—ಅ. ಕಾ. 27:10-13.

12. (ಎ) ಕ್ರೇತದಿಂದ ಮುಂದಕ್ಕೆ ಹೋದ್ಮೇಲೆ ಯಾವೆಲ್ಲಾ ಸಮಸ್ಯೆಗಳು ಬಂತು? (ಬಿ) ಅಪಾಯದಿಂದ ತಪ್ಪಿಸ್ಕೊಳ್ಳೋಕೆ ಹಡಗಿನ ಸಿಬ್ಬಂದಿಗಳು ಏನೆಲ್ಲಾ ಮಾಡಿದ್ರು?

12 ಆಮೇಲೆ ಇನ್ನೂ ದೊಡ್ಡ ಸಮಸ್ಯೆ ಬಂತು. ಈಶಾನ್ಯದಿಂದ “ಬಿರುಗಾಳಿ ಬೀಸಿತು.” ಆದ್ರೆ ಅವರು ಚಂದರೇವುಗಳಿಂದ 65 ಕಿ.ಮೀ. ದೂರದಲ್ಲಿದ್ದ “ಕೌಡ ಅನ್ನೋ ಒಂದು ಚಿಕ್ಕ ದ್ವೀಪಕ್ಕೆ ಅಂಟ್ಕೊಂಡು” ಪ್ರಯಾಣ ಮಾಡಿದ್ರಿಂದ, ಅದ್ರ ಮರೆಯಲ್ಲಿ ಸ್ವಲ್ಪ ಸಮಯ ಅವ್ರಿಗೆ ಸಂರಕ್ಷಣೆ ಸಿಕ್ತು. ಆದ್ರೂ ಹಡಗನ್ನ ಗಾಳಿ ದಕ್ಷಿಣದ ಕಡೆಗೆ ತಳ್ತಾ ಇದ್ದಿದ್ರಿಂದ ಆಫ್ರಿಕಾದ ಕರಾವಳಿಯ ಮರಳುದಂಡೆಗೆ ತಾಗಿ ಹಡಗು ಒಡೆದುಹೋಗೋ ಅಪಾಯ ಇತ್ತು. ಹಾಗಾಗಿ ನಾವಿಕರು ಹಡಗಿನ ಹಿಂಭಾಗದಲ್ಲಿ ಕಟ್ಟಿದ್ದ ಚಿಕ್ಕದೋಣಿಯನ್ನ ಎಳೆದು ಮೇಲೆ ಎತ್ತಿದ್ರು. ಇದನ್ನ ಮಾಡೋಕೆ ಅವ್ರಿಗೆ ತುಂಬ ಕಷ್ಟ ಆಯ್ತು. ಯಾಕಂದ್ರೆ ಅದ್ರಲ್ಲಿ ನೀರು ತುಂಬಿತ್ತು ಅನ್ಸುತ್ತೆ. ಆಮೇಲೆ ಅವರು ಹಡಗಿನ ಹಲಗೆಗಳು ಚೂರುಚೂರು ಆಗಬಾರದು ಅಂತ ಕೆಳಗಿಂದ ಹಡಗನ್ನ ಹಗ್ಗ, ಸರಪಳಿಗಳನ್ನ ಹಾಕಿ ಗಟ್ಟಿಯಾಗಿ ಕಟ್ಟಿದ್ರು. ಆಮೇಲೆ ಹಾಯಿಯನ್ನ ಬಿಚ್ಚಿ ಗಾಳಿ ಬೀಸ್ತಿದ್ದ ಕಡೆಗೆ ಹಡಗನ್ನ ತೇಲೋಕೆ ಬಿಟ್ರು. ಆಗ ಅವ್ರಿಗೆಲ್ಲ ಎಷ್ಟು ಭಯ ಆಗಿರಬಹುದು ಅಲ್ವಾ! ಅವರು ಇಷ್ಟೆಲ್ಲಾ ಮಾಡಿದ್ರೂ ಏನೂ ಪ್ರಯೋಜನ ಆಗಲಿಲ್ಲ. ಮೂರನೇ ದಿನ ಅವರು ಹಡಗು ಮುಳುಗದೆ ಇರೋಕೆ ಕೂವೆಮರವನ್ನ (ಹಡಗಿನ ಮಧ್ಯಭಾಗದ ಕಂಬವನ್ನ) ತೆಗೆದು ಬಿಸಾಕಿದ್ರು. ಯಾಕಂದ್ರೆ ‘ಬಿರುಗಾಳಿಯ ರಭಸ ಇನ್ನೂ ಕಡಿಮೆ ಆಗಿರಲಿಲ್ಲ.’—ಅ. ಕಾ. 27:14-19.

13. ಬಿರುಗಾಳಿ ಬೀಸ್ತಿದ್ದಾಗ ಹಡಗಲ್ಲಿದ್ದ ಜನ್ರ ಪರಿಸ್ಥಿತಿ ಹೇಗಿತ್ತು?

13 ಇದೆಲ್ಲ ನೋಡಿ ಹಡಗಲ್ಲಿದ್ದವರು ಭಯದಿಂದ ನಡುಗ್ತಿದ್ರು ಅನ್ಸುತ್ತೆ. ಆದ್ರೆ ಪೌಲ ಮತ್ತು ಅವನ ಜೊತೆ ಇದ್ದವರು ತಮಗೇನೂ ಆಗಲ್ಲ ಅಂತ ಧೈರ್ಯವಾಗಿದ್ರು. ಪೌಲ ರೋಮ್‌ನಲ್ಲಿ ಸಾಕ್ಷಿ ಕೊಡ್ತಾನೆ ಅಂತ ಒಡೆಯ ಈ ಹಿಂದೆ ಪೌಲನಿಗೆ ಮಾತು ಕೊಟ್ಟಿದ್ದನು. ಹಾಗೇ ಆಗುತ್ತೆ ಅಂತ ಒಬ್ಬ ದೇವದೂತ ಕೂಡ ಹೇಳಿದ್ದ. (ಅ. ಕಾ. 19:21; 23:11) ಆದ್ರೂ ಎರಡು ವಾರ ಹಗಲೂರಾತ್ರಿ ಬಿರುಗಾಳಿ ಬೀಸ್ತಾನೇ ಇತ್ತು, ಮಳೆ ಬಿಡದೆ ಸುರೀತಾ ಇತ್ತು, ಕಪ್ಪು ಮೋಡ ಮುಚ್ಕೊಂಡೇ ಇತ್ತು. ಸೂರ್ಯ-ನಕ್ಷತ್ರಗಳು ಯಾವುದೂ ಕಾಣಿಸ್ತಿರಲಿಲ್ಲ. ಹಾಗಾಗಿ ಹಡಗು ಎಲ್ಲಿ ತಲುಪಿದೆ, ಯಾವ ಕಡೆಗೆ ಹೋಗ್ತಿದೆ ಅಂತ ತಿಳ್ಕೊಳ್ಳೋಕೆ ನಾವಿಕ ಎಷ್ಟು ಪ್ರಯತ್ನಪಟ್ರೂ ಆಗಲಿಲ್ಲ. ಈ ಪರಿಸ್ಥಿತಿಲಿ ಊಟ ಮಾಡೋದು ದೂರದ ಮಾತಾಗಿತ್ತು. ಆ ಚಳಿ, ಮಳೆ, ಕಡಲಬೇನೆ (ಹಡಗಲ್ಲಿ ಪ್ರಯಾಣ ಮಾಡೋರಿಗೆ ಬರೋ ಕಾಯಿಲೆಗಳು) ಭಯ ಆತಂಕದಲ್ಲಿ ಯಾರಿಗೆ ತಾನೇ ಊಟ ಮಾಡಕ್ಕಾಗುತ್ತೆ ಹೇಳಿ?

14, 15. (ಎ) ಪೌಲ ಹಡಗಲ್ಲಿ ಇದ್ದವರ ಹತ್ರ ಮಾತಾಡೋವಾಗ ತಾನು ಈ ಮುಂಚೆನೇ ಕೊಟ್ಟ ಎಚ್ಚರಿಕೆ ಬಗ್ಗೆ ಯಾಕೆ ಹೇಳಿದ? (ಬಿ) ಪೌಲ ನಿರೀಕ್ಷೆಯ ಸಂದೇಶವನ್ನ ಹೇಳಿದ್ರಿಂದ ನಾವೇನು ಕಲಿಬಹುದು?

14 ಆಗ ಪೌಲ ಎದ್ದು ನಿಂತ. ತಾನು ಈ ಮುಂಚೆ ಕೊಟ್ಟ ಎಚ್ಚರಿಕೆ ಬಗ್ಗೆ ಹೇಳಿದ. ನಾವಿಕರ ತಪ್ಪನ್ನ ಎತ್ತಿ ಆಡೋಕೆ ಅದನ್ನ ಹೇಳಲಿಲ್ಲ. ಬದಲಿಗೆ, ತನ್ನ ಮಾತನ್ನ ಕೇಳೋದ್ರಿಂದ ಒಳ್ಳೇದಾಗುತ್ತೆ ಅಂತ ತೋರಿಸಿಕೊಡೋಕೆ ಹಾಗೆ ಹೇಳಿದ. ಆಮೇಲೆ ಅವನು, “ಪರವಾಗಿಲ್ಲ. ಧೈರ್ಯ ತಂದ್ಕೊಳ್ಳಿ ಅಂತ ಬೇಡ್ಕೊಳ್ತೀನಿ. ಯಾಕಂದ್ರೆ ನಾವು ಹಡಗನ್ನ ಮಾತ್ರ ಕಳ್ಕೊಳ್ತೀವಿ. ಆದ್ರೆ ನಮ್ಮಲ್ಲಿ ಒಬ್ರೂ ಸಾಯಲ್ಲ” ಅಂದ. (ಅ. ಕಾ. 27:21, 22) ಅದನ್ನ ಕೇಳಿಸ್ಕೊಂಡಾಗ ಆ ಜನ್ರಿಗೆಷ್ಟು ಸಮಾಧಾನ ಆಗಿರುತ್ತೆ ಅಲ್ವಾ! ಇಂಥ ನಿರೀಕ್ಷೆಯ ಸಂದೇಶವನ್ನ ಯೆಹೋವ ತನಗೆ ತಿಳಿಸಿದ್ದಿಕ್ಕೆ ಪೌಲನಿಗೂ ತುಂಬ ಸಂತೋಷ ಆಗಿರುತ್ತೆ! ಇವತ್ತು ಕೂಡ ಯೆಹೋವ ದೇವರು ಪ್ರತಿಯೊಬ್ಬ ಮನುಷ್ಯನ ಪ್ರಾಣದ ಬಗ್ಗೆ ಕಾಳಜಿವಹಿಸ್ತಾನೆ. ಅದಕ್ಕೆ ಅಪೊಸ್ತಲ ಪೇತ್ರ ಹೀಗೆ ಬರೆದಿದ್ದಾನೆ: “ಯಾರೂ ನಾಶ ಆಗಬಾರದು . . . ಎಲ್ರಿಗೂ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗಬೇಕು ಅನ್ನೋದೇ [ಯೆಹೋವ] ದೇವರ ಆಸೆ.” (2 ಪೇತ್ರ 3:9) ಹಾಗಾಗಿ ಇದನ್ನ ನಾವು ಮನಸ್ಸಲ್ಲಿ ಇಡಬೇಕು. ಯೆಹೋವ ಕೊಟ್ಟಿರೋ ನಿರೀಕ್ಷೆಯ ಸಂದೇಶವನ್ನ ನಮ್ಮಿಂದಾದಷ್ಟು ಜನ್ರಿಗೆ ಹೇಳಬೇಕು. ಇದು ತುಂಬ ಮುಖ್ಯ. ಯಾಕಂದ್ರೆ ಪ್ರತಿಯೊಬ್ಬ ವ್ಯಕ್ತಿಯ ಜೀವನೂ ಯೆಹೋವನ ದೃಷ್ಟಿಯಲ್ಲಿ ಅಮೂಲ್ಯ. ಆದ್ರೆ ಈಗ ಇಂಥ ಅಮೂಲ್ಯವಾಗಿರೋ ಜೀವಗಳು ಅಪಾಯದಲ್ಲಿವೆ.

15 ಪೌಲ ಈಗಾಗ್ಲೇ ‘ದೇವರು ನಮ್ಮ ಪೂರ್ವಜರಿಗೆ ಕೊಟ್ಟ ಮಾತಿನ’ ಬಗ್ಗೆ ಹಡಗಲ್ಲಿದ್ದ ಎಷ್ಟೋ ಜನ್ರಿಗೆ ಹೇಳಿ ನಿರೀಕ್ಷೆ ಕೊಟ್ಟಿದ್ದ. (ಅ. ಕಾ. 26:6; ಕೊಲೊ. 1:5) ಆದ್ರೆ ಈಗ ಹಡಗು ಒಡೆದು ಹೋದ್ರೂ ಎಲ್ರೂ ಬದುಕಿ ಉಳಿತಾರೆ ಅನ್ನೋ ನಿರೀಕ್ಷೆ ಕೊಟ್ಟು ಅದಕ್ಕೆ ಆಧಾರನೂ ಕೊಟ್ಟ. ಅವನು ಹೀಗಂದ: “ನಾನು ಆರಾಧಿಸೋ ದೇವರು . . . ಒಬ್ಬ ದೂತನನ್ನ ನಿನ್ನೆ ರಾತ್ರಿ ನನ್ನ ಹತ್ರ ಕಳಿಸಿದ. ಅವನು ನನ್ನ ಪಕ್ಕದಲ್ಲಿ ನಿಂತು ‘ಪೌಲ, ಭಯಪಡಬೇಡ. ನೀನು ರೋಮಿಗೆ ಹೋಗ್ತೀಯ, ಅಲ್ಲಿ ನೀನು ರೋಮಿನ ರಾಜನನ್ನ ನೋಡ್ತೀಯ. ದೇವರು ನಿನ್ನನ್ನ ಮತ್ತು ನಿನ್ನ ಜೊತೆ ಪ್ರಯಾಣ ಮಾಡ್ತಿರೋ ಎಲ್ರನ್ನ ಕಾಪಾಡ್ತಾನೆ’ ಅಂದ. ಅದಕ್ಕೇ ಗೆಳೆಯರೇ, ಧೈರ್ಯವಾಗಿರಿ. ನಂಗೆ ದೇವ್ರ ಮೇಲೆ ನಂಬಿಕೆ ಇದೆ. ಆ ದೇವದೂತ ನಂಗೆ ಹೇಳಿದ ತರಾನೇ ದೇವರು ಮಾಡ್ತಾನೆ. ಆದ್ರೆ ನಮ್ಮ ಹಡಗು ಯಾವುದಾದ್ರೂ ಒಂದು ದ್ವೀಪದಲ್ಲಿ ಒಡೆದುಹೋಗುತ್ತೆ.”—ಅ. ಕಾ. 27:23-26.

“ಎಲ್ರೂ ಸುರಕ್ಷಿತವಾಗಿ ತೀರ ಮುಟ್ಟಿದ್ರು” (ಅ. ಕಾ. 27:27-44)

‘ಅವನು ಎಲ್ರ ಮುಂದೆ ದೇವ್ರಿಗೆ ಧನ್ಯವಾದ ಹೇಳಿದ.’—ಅಪೊಸ್ತಲರ ಕಾರ್ಯ 27:35

16, 17. (ಎ) ಪೌಲ ಯಾವ ಸಂದರ್ಭದಲ್ಲಿ ಪ್ರಾರ್ಥನೆ ಮಾಡಿದ? (ಬಿ) ಇದ್ರಿಂದ ಏನಾಯ್ತು? (ಸಿ) ಪೌಲ ಹೇಳಿದ ಮಾತು ಹೇಗೆ ನಿಜ ಆಯ್ತು?

16 ಆ ಎರಡು ಭಯಾನಕ ವಾರಗಳಲ್ಲಿ ಹಡಗು ಸುಮಾರು 870 ಕಿ.ಮೀ. ದೂರ ಬಂದುಬಿಟ್ಟಿತ್ತು. ಆದ್ರೆ ಈಗ ನಾವಿಕರಿಗೆ ನಾವು ಯಾವುದೋ ತೀರದ ಹತ್ರಕ್ಕೆ ಹೋಗ್ತಾ ಇದ್ದೀವಿ ಅಂತ ಗೊತ್ತಾಯ್ತು. ಯಾಕಂದ್ರೆ ಅವ್ರಿಗೆ ಅಲೆಗಳು ತೀರಕ್ಕೆ ಬಂದು ಅಪ್ಪಳಿಸೋ ಸದ್ದು ಕೇಳಿಸಿರಬೇಕು. ತಕ್ಷಣ ಅವರು ಹಡಗಿನ ಹಿಂಭಾಗದಿಂದ ಲಂಗರುಗಳನ್ನ ಕೆಳಗೆ ಬಿಟ್ರು. ಅಲೆಗಳ ಜೊತೆ ಹಡಗು ಮುಂದಕ್ಕೆ ಹೋಗಿ ಡಿಕ್ಕಿ ಹೊಡಿಬಾರದು ಮತ್ತು ಹಡಗಿನ ಮುಂಭಾಗ ತೀರದ ಕಡೆಗೆ ಮುಖ ಮಾಡ್ಕೊಂಡು ಇರಬೇಕು ಅಂತ ಹೀಗೆ ಮಾಡಿದ್ರು. ಹೇಗಾದ್ರೂ ಹಡಗನ್ನ ತೀರಕ್ಕೆ ತಂದು ನಿಲ್ಲಿಸಬೇಕು ಅಂತ ಅಂದ್ಕೊಂಡ್ರು. ಆದ್ರೆ ನಾವಿಕರಿಗೆ ಭಯ ಆಗಿದ್ರಿಂದ ಹಡಗಿಂದ ತಪ್ಪಿಸ್ಕೊಳ್ಳೋಕೆ ಪ್ರಯತ್ನಿಸಿದಾಗ ಸೈನಿಕರು ಅವ್ರನ್ನ ಹೋಗೋಕೆ ಬಿಡಲಿಲ್ಲ. ಯಾಕಂದ್ರೆ ಪೌಲ ಸೇನಾಪತಿ ಮತ್ತು ಸೈನಿಕರಿಗೆ, “ಈ ಜನ ಹಡಗಲ್ಲಿ ಇದ್ರೆ ಮಾತ್ರ ನೀವು ಬದುಕಿ ಉಳಿತೀರ” ಅಂತ ಹೇಳಿದ. ಹಡಗು ಆಕಡೆ ಈಕಡೆ ಹೊಯ್ದಾಡೋದು ಕಡಿಮೆ ಆಗಿದ್ರಿಂದ ಪೌಲ ಜನ್ರಿಗೆ ಊಟ ಮಾಡೋಕೆ ಹೇಳಿದ, ಬದುಕಿ ಉಳಿತೀರ ಅಂತ ಹೇಳಿದ. ಆಮೇಲೆ ‘ಎಲ್ರ ಮುಂದೆ ದೇವ್ರಿಗೆ ಧನ್ಯವಾದ ಹೇಳಿದ.’ (ಅ. ಕಾ. 27:31, 35) ಹೀಗೆ ದೇವರಿಗೆ ಧನ್ಯವಾದ ಹೇಳ್ತಾ ಹಡಗಲ್ಲಿದ್ದ ಲೂಕ, ಅರಿಸ್ತಾರ್ಕನಿಗೆ ಮತ್ತು ಇವತ್ತಿರೋ ಕ್ರೈಸ್ತರಿಗೆ ಒಳ್ಳೇ ಮಾದರಿ ಇಟ್ಟ. ಬೇರೆವ್ರ ಮುಂದೆ ನಾವು ಮಾಡೋ ಪ್ರಾರ್ಥನೆ ಹೇಗಿರಬೇಕು? ಅದನ್ನ ಕೇಳಿಸ್ಕೊಳ್ಳೋರಿಗೆ ಪ್ರೋತ್ಸಾಹ, ಧೈರ್ಯ, ನೆಮ್ಮದಿ ಸಿಗಬೇಕು.

17 ಪೌಲ ಪ್ರಾರ್ಥನೆ ಮಾಡಿದ ಮೇಲೆ, “ಅವ್ರೆಲ್ಲ ಧೈರ್ಯ ತಂದ್ಕೊಂಡ್ರು, ಊಟ ಮಾಡೋಕೆ ಶುರುಮಾಡಿದ್ರು.” (ಅ. ಕಾ. 27:36) ಆಮೇಲೆ ಅವರು, ಹಡಗು ಹಗುರವಾದ್ರೆ ನೀರಲ್ಲಿ ಇನ್ನೂ ಮೇಲೆ ತೇಲುತ್ತೆ ಅಂತ ಹಡಗಲ್ಲಿದ್ದ ಗೋಧಿಯನ್ನೆಲ್ಲ ಸಮುದ್ರಕ್ಕೆ ಎಸೆದ್ರು. ಮಾರನೇ ದಿನ ಬೆಳಿಗ್ಗೆ ಅವರು ಹಡಗನ್ನ ಆ ತೀರದ ಕಡೆ ನಡೆಸೋಕೆ ಲಂಗರುಗಳನ್ನ ಕತ್ತರಿಸಿ, ಚುಕ್ಕಾಣಿಗಳಿಗೆ ಕಟ್ಟಿದ ಹಗ್ಗಗಳನ್ನ ಸಡಿಲಿಸಿ, ಮುಂಭಾಗದ ಚಿಕ್ಕ ಹಾಯಿಯನ್ನ ಗಾಳಿಗೆ ಮೇಲೆತ್ತಿ ಕಟ್ಟಿದ್ರು. ಆಗ ಹಡಗಿನ ಮುಂಭಾಗ ಮರಳದಿಬ್ಬಕ್ಕೆ ಡಿಕ್ಕಿ ಹೊಡೆದು ಅಲ್ಲಾಡದೆ ನಿಲ್ತು. ಆದ್ರೆ ಹಿಂಭಾಗ ಒಡೆಯೋಕೆ ಶುರು ಆಯ್ತು. ಆಗ ಕೆಲವು ಸೈನಿಕರು ಕೈದಿಗಳು ತಪ್ಪಿಸ್ಕೊಂಡು ಹೋಗಬಾರದು ಅಂತ ಅವ್ರನ್ನ ಕೊಲ್ಲೋಕೆ ಹೋದ್ರು. ಆದ್ರೆ ಯೂಲ್ಯ ತಡೆದ. ಎಲ್ರಿಗೂ ಈಜಿಕೊಂಡು ಅಥವಾ ಹಲಗೆಗಳ ಸಹಾಯದಿಂದ ತೇಲ್ತಾ ತೀರಕ್ಕೆ ಹೋಗೋಕೆ ಹೇಳಿದ. ಎಲ್ಲಾ ಪೌಲ ಹೇಳಿದ ತರಾನೇ ಆಯ್ತು. ಹಡಗಲ್ಲಿದ್ದ 276 ಜನ ಪಾರಾದ್ರು, “ಎಲ್ರೂ ಸುರಕ್ಷಿತವಾಗಿ ತೀರ ಮುಟ್ಟಿದ್ರು.” ಆದ್ರೆ ಆ ಜಾಗ ಯಾವುದು ಗೊತ್ತಾ? —ಅ. ಕಾ. 27:44.

“ನಮ್ಮನ್ನ ತುಂಬ ಚೆನ್ನಾಗಿ ನೋಡ್ಕೊಂಡ್ರು” (ಅ. ಕಾ. 28:1-10)

18-20. (ಎ) ಮಾಲ್ಟದ ಜನ ಹಡಗಲ್ಲಿ ಇದ್ದವ್ರನ್ನ ಹೇಗೆ “ತುಂಬ ಚೆನ್ನಾಗಿ ನೋಡ್ಕೊಂಡ್ರು?” (ಬಿ) ದೇವರು ಪೌಲನಿಂದ ಯಾವ ಅದ್ಭುತ ಮಾಡಿಸಿದನು?

18 ಅದೇ ಮಾಲ್ಟ ದ್ವೀಪ. ಇದು ಸಿಸಿಲಿ ಪ್ರದೇಶದ ದಕ್ಷಿಣದಲ್ಲಿತ್ತು. (“ ಮಾಲ್ಟ ಎಲ್ಲಿದೆ?” ಅನ್ನೋ ಚೌಕ ನೋಡಿ.) ಅಲ್ಲಿನ ಜನ್ರ ಭಾಷೆ ಬೇರೆ ಆಗಿದ್ರೂ ಅಲ್ಲಿನ ಜನ ಅವ್ರನ್ನ “ತುಂಬ ಚೆನ್ನಾಗಿ ನೋಡ್ಕೊಂಡ್ರು.” (ಅ. ಕಾ. 28:2) ನೀರಿಂದ ಒದ್ದೆಯಾಗಿ ಚಳಿಯಿಂದ ನಡುಗ್ತಿದ್ದ ಈ ಅಪರಿಚಿತರಿಗೋಸ್ಕರ ಅವರು ಬೆಂಕಿ ಹೊತ್ತಿಸಿದ್ರು. ಇದ್ರಿಂದ ಅಷ್ಟು ಚಳಿ-ಮಳೆ ಇದ್ರೂ ಚಳಿಕಾಯಿಸ್ಕೊಂಡು ಬೆಚ್ಚಗಿರೋಕೆ ಆಯ್ತು. ಆಮೇಲೆ ಅಲ್ಲೊಂದು ಅದ್ಭುತ ನಡೀತು.

19 ಪೌಲ ಅಲ್ಲಿದ್ದವ್ರಿಗೆ ಚಳಿಕಾಯಿಸ್ಕೊಳ್ಳೋಕೆ ಕಟ್ಟಿಗೆ ಕೂಡಿಸಿ ಬೆಂಕಿಗೆ ಹಾಕ್ತಿದ್ದ. ಆಗ ಒಂದು ವಿಷಕಾರಿ ಹಾವು (ವೈಪರ್‌) ಅವನ ಕೈಗೆ ಸುತ್ಕೊಂಡು ಕಚ್ಚಿಬಿಡ್ತು. ಇದು ದೇವರಿಂದ ಸಿಕ್ಕಿದ ಶಿಕ್ಷೆ ಅಂತ ಮಾಲ್ಟದ ಜನ ಭಾವಿಸಿದ್ರು. a

20 ಪೌಲನಿಗೆ ಹಾವು ಕಚ್ಚಿದ್ದನ್ನ ನೋಡಿದಾಗ ಅವನ ‘ಶರೀರ ಊದ್ಕೊಳ್ಳುತ್ತೆ’ ಅಂತ ಅಲ್ಲಿನ ಜನ ಅಂದ್ಕೊಂಡ್ರು. ‘ಶರೀರ ಊದ್ಕೊಳ್ಳುತ್ತೆ’ ಅನ್ನೋದಕ್ಕೆ ಮೂಲ ಭಾಷೆಯಲ್ಲಿ “ವೈದ್ಯಕೀಯ ಪದ” ಬಳಸಲಾಗಿದೆ ಅಂತ ಒಂದು ಪುಸ್ತಕ ಹೇಳುತ್ತೆ. “ಪ್ರಿಯ ವೈದ್ಯ ಲೂಕ” ಇಂಥ ಪದಗಳನ್ನ ಬಳಸಿರೋದ್ರಲ್ಲಿ ಆಶ್ಚರ್ಯ ಇಲ್ಲ. (ಅ. ಕಾ. 28:6; ಕೊಲೊ. 4:14) ಅದೇನೇ ಆಗಿರಲಿ, ಪೌಲ ಆ ಹಾವನ್ನ ಏನು ಮಾಡಿದ? ಬೆಂಕಿಗೆ ಝಾಡಿಸಿಬಿಟ್ಟ, ಅವನಿಗೆ ಏನೂ ತೊಂದ್ರೆ ಆಗಲಿಲ್ಲ.

21. (ಎ) ಲೂಕ ಯಾವ ವಿಷ್ಯಗಳ ಬಗ್ಗೆ ಸ್ಪಷ್ಟವಾದ, ಸರಿಯಾದ ಮಾಹಿತಿ ಕೊಟ್ಟಿದ್ದಾನೆ? (ಬಿ) ಪೌಲ ಯಾವ ಅದ್ಭುತ ಮಾಡಿದ? (ಸಿ) ಇದನ್ನ ನೋಡಿದ ಮಾಲ್ಟದ ಜನ ಏನು ಮಾಡಿದ್ರು?

21 ಆ ದ್ವೀಪದಲ್ಲಿ ಪೊಪ್ಲಿಯ ಅನ್ನೋ ಒಬ್ಬ ಶ್ರೀಮಂತ ಜಮೀನುದಾರ ಇದ್ದ. ಅವನು ಮಾಲ್ಟದಲ್ಲಿನ ಮುಖ್ಯ ರೋಮನ್‌ ಅಧಿಕಾರಿ ಆಗಿದ್ದಿರಬಹುದು. ಲೂಕ ಅವನನ್ನ “ಆ ದ್ವೀಪದ ಮುಖ್ಯಸ್ಥ” ಅಂತ ಹೇಳಿದ್ದಾನೆ. ಮಾಲ್ಟದಲ್ಲಿ ಸಿಕ್ಕಿದ ಎರಡು ಶಿಲಾಶಾಸನಗಳಲ್ಲೂ ಇದೇ ಬಿರುದನ್ನ ಉಪಯೋಗಿಸಿದ್ದಾರೆ. ಅವನು ಪೌಲ ಮತ್ತು ಅವನ ಜೊತೆಗಾರರನ್ನ ಕರೆದು ಮೂರು ದಿನ ಅತಿಥಿ ಸತ್ಕಾರ ಮಾಡಿದ. ಆಗ ಪೊಪ್ಲಿಯನ ಅಪ್ಪನಿಗೆ ಹುಷಾರಿಲ್ಲದೆ ಆಯ್ತು. “ಪೊಪ್ಲಿಯನ ಅಪ್ಪನಿಗೆ ಜ್ವರ ಮತ್ತು ರಕ್ತಭೇದಿ ಆಗಿತ್ತು. ಅದಕ್ಕೆ ಅವನು ಹುಷಾರಿಲ್ಲದೆ ಮಲಗಿದ್ದ” ಅಂತ ಲೂಕ ಬರೆದಿದ್ದಾನೆ. ಇಲ್ಲಿ ಕೂಡ ಲೂಕ ಕಾಯಿಲೆಯ ಲಕ್ಷಣಗಳನ್ನ ಸ್ಪಷ್ಟವಾಗಿ ಹೇಳಿದ್ದಾನೆ. ಪೌಲ ಪ್ರಾರ್ಥನೆ ಮಾಡಿ ತನ್ನ ಕೈಗಳನ್ನ ಪೊಪ್ಲಿಯನ ಅಪ್ಪನ ಮೇಲಿಟ್ಟ. ಆಗ ಅವನಿಗೆ ವಾಸಿ ಆಯ್ತು. ಈ ಅದ್ಭುತ ನೋಡಿ ಅಲ್ಲಿನ ಜನರು ಹುಷಾರಿಲ್ಲದವರನ್ನ ಪೌಲನ ಹತ್ರ ಕರ್ಕೊಂಡು ಬಂದ್ರು. ಜೊತೆಗೆ ಅವರು ಪೌಲ ಮತ್ತು ಅವನ ಜೊತೆ ಇದ್ದವರಿಗೆ ಉಡುಗೊರೆಗಳನ್ನೂ ಕೊಟ್ರು. ಅಷ್ಟೇ ಅಲ್ಲ, ಅವ್ರಿಗೆ ಮುಂದಕ್ಕೆ ಪ್ರಯಾಣ ಮಾಡೋಕೆ ಬೇಕಾದ ವಸ್ತುಗಳನ್ನೂ ಕೊಟ್ರು.—ಅ. ಕಾ. 28:7-10.

22. (ಎ) ರೋಮಿಗೆ ಪ್ರಯಾಣ ಮಾಡಿದ್ದರ ಬಗ್ಗೆ ಲೂಕ ಬರೆದ ಘಟನೆ ಬಗ್ಗೆ ಒಬ್ಬ ಪ್ರೊಫೆಸರ್‌ ಏನಂತ ಹೇಳಿದ್ದಾರೆ? (ಬಿ) ಮುಂದಿನ ಅಧ್ಯಾಯದಲ್ಲಿ ನಾವು ಯಾವುದ್ರ ಬಗ್ಗೆ ನೋಡ್ತೀವಿ?

22 ಪೌಲ ಮಾಡಿದ ಈ ಪ್ರಯಾಣದ ಬಗ್ಗೆ ನಾವು ಇಲ್ಲಿ ತನಕ ನೋಡಿದ ವಿಷ್ಯಗಳೆಲ್ಲ ನಿಜವಾಗ್ಲೂ ನಡೆದ ಘಟನೆಗಳು. ಲೂಕ ಬರೆದಿರೋದೆಲ್ಲ ನೂರಕ್ಕೆ ನೂರು ಸತ್ಯ. ಇದ್ರ ಬಗ್ಗೆ ಒಬ್ಬ ಪ್ರೊಫೆಸರ್‌ ಹೀಗೆ ಹೇಳಿದ್ದಾರೆ: “ಲೂಕ ಬರೆದ ಈ ಘಟನೆ . . . ಇಡೀ ಬೈಬಲಲ್ಲೇ ತುಂಬ ವಿವರಣೆ ಇರೋ ಘಟನೆಯಾಗಿದೆ. ಅದ್ರಲ್ಲಿ ಮೊದಲನೇ ಶತಮಾನದಲ್ಲಿನ ಸಮುದ್ರಯಾನದ ಬಗ್ಗೆ ಹೇಳಿರೋ ವಿವರಣೆಗಳು ಮತ್ತು ಪೂರ್ವ ಮೆಡಿಟರೇನಿಯನ್‌ನಲ್ಲಿನ ಹವಾಮಾನದ ಚಿತ್ರಣ ಎಷ್ಟು ಸರಿಯಾಗಿದೆ ಅಂದ್ರೆ ಅದನ್ನ ಒಬ್ಬನ ದಿನಚರಿ ಪುಸ್ತಕವನ್ನ ಆಧರಿಸಿ ಬರೆದಿರಬೇಕು.” ಲೂಕ ಪೌಲನ ಜೊತೆಯಲ್ಲಿ ಪ್ರಯಾಣ ಮಾಡುವಾಗ ಈ ತರ ದಿನಚರಿ ಬರೀತಾ ಇದ್ದ ಅನ್ಸುತ್ತೆ. ಈ ಪ್ರಯಾಣದಲ್ಲಿ ಮುಂದೆ ಏನಾಯ್ತು ಅಂತನೂ ಅವನು ತುಂಬ ವಿಷ್ಯಗಳನ್ನ ಬರೆದ. ಪೌಲ ಕೊನೆಗೂ ರೋಮಿಗೆ ತಲುಪಿದ. ಅಲ್ಲಿ ಏನಾಯ್ತು? ಇದ್ರ ಬಗ್ಗೆ ಮುಂದಿನ ಅಧ್ಯಾಯದಲ್ಲಿ ನೋಡೋಣ.

a ಮಾಲ್ಟದ ಜನ್ರಿಗೆ ಅಂಥ ಹಾವುಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು, ಯಾಕಂದ್ರೆ ಆಗಿನ ಕಾಲದಲ್ಲಿ ಆ ದ್ವೀಪದಲ್ಲಿ ಇಂಥಾ ವೈಪರ್‌ಗಳಿದ್ವು. ಆದ್ರೆ ಈಗ ಅಲ್ಲಿ ವೈಪರ್‌ಗಳಿಲ್ಲ. ಶತಮಾನಗಳಿಂದ ಆದ ಹವಾಮಾನ ಬದಲಾವಣೆಯಿಂದ ಅಥವಾ ಆ ದ್ವೀಪದಲ್ಲಿ ಜನಸಂಖ್ಯೆ ಜಾಸ್ತಿ ಆಗಿದ್ರಿಂದ ವೈಪರ್‌ಗಳು ಕಣ್ಮರೆ ಆಗಿರಬಹುದು.