ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 25

“ಈ ಕೇಸನ್ನ ರೋಮಿನ ರಾಜನ ಹತ್ರ ತಗೊಂಡು ಹೋಗ್ತೀನಿ”

“ಈ ಕೇಸನ್ನ ರೋಮಿನ ರಾಜನ ಹತ್ರ ತಗೊಂಡು ಹೋಗ್ತೀನಿ”

ಸಿಹಿಸುದ್ದಿಯನ್ನ ಸಮರ್ಥಿಸೋದ್ರಲ್ಲಿ ಪೌಲನ ಮಾದರಿ

ಆಧಾರ: ಅಪೊಸ್ತಲರ ಕಾರ್ಯ 25:1–26:32

1, 2. (ಎ) ಪೌಲ ಯಾವ ಪರಿಸ್ಥಿತಿಯಲ್ಲಿದ್ದ? (ಬಿ) ಪೌಲ ರೋಮಿನ ರಾಜನ ಹತ್ರ ಹೋಗಿದ್ದನ್ನ ನೋಡಿದಾಗ ನಮಗೆ ಯಾವ ಪ್ರಶ್ನೆ ಬರುತ್ತೆ?

 ಪೌಲ ಕೈಸರೈಯದಲ್ಲಿ ಇದ್ದಾಗ ಸೈನಿಕರ ಬಿಗಿ ಬಂದೋಬಸ್ತಿನಲ್ಲಿದ್ದ. ಇದಕ್ಕೂ ಎರಡು ವರ್ಷ ಮುಂಚೆ ಅವನು ಯೆಹೂದಕ್ಕೆ ವಾಪಸ್‌ ಹೋಗಿದ್ದ. ಹೀಗೆ ಹೋಗಿ ಕೆಲವೇ ದಿನದಲ್ಲಿ ಯೆಹೂದ್ಯರು ಏನಿಲ್ಲಾಂದ್ರೂ ಮೂರು ಸಲ ಪೌಲನನ್ನ ಕೊಲ್ಲೋಕೆ ಪ್ರಯತ್ನಿಸಿದ್ರು. (ಅ. ಕಾ. 21:27-36; 23:10, 12-15, 27) ಆದ್ರೆ ಅವ್ರಿಂದ ಆಗಲಿಲ್ಲ. ಹಾಗಂತ ಅವರು ಪ್ರಯತ್ನನೂ ಬಿಡಲಿಲ್ಲ. ಪೌಲನಿಗೆ ತನ್ನನ್ನ ಇನ್ನೊಂದು ಸಲ ವೈರಿಗಳ ಕೈಗೆ ಒಪ್ಪಿಸ್ತಾರೆ ಅಂತ ಗೊತ್ತಾದಾಗ ಅವನು ರೋಮನ್‌ ರಾಜ್ಯಪಾಲ ಫೆಸ್ತನಿಗೆ “ನನ್ನ ಈ ಕೇಸನ್ನ ರೋಮಿನ ರಾಜನ ಹತ್ರ ತಗೊಂಡು ಹೋಗ್ತೀನಿ!” ಅಂತ ಹೇಳಿದ.—ಅ. ಕಾ. 25:11.

2 ಪೌಲನ ಈ ನಿರ್ಧಾರ ಯೆಹೋವ ದೇವರ ಇಷ್ಟದ ತರ ಇತ್ತಾ? ನಾವು ಈ ಪ್ರಶ್ನೆಗೆ ಉತ್ರ ತಿಳ್ಕೊಳ್ಳೋದು ತುಂಬ ಮುಖ್ಯ. ಯಾಕಂದ್ರೆ ಕೊನೇ ಕಾಲದಲ್ಲಿರೋ ನಾವು ಕೂಡ ದೇವರ ಸರ್ಕಾರದ ಬಗ್ಗೆ ಎಲ್ಲಾ ಜನ್ರಿಗೆ ಸಾರ್ತಿದ್ದೀವಿ. ಇದ್ರ ಬಗ್ಗೆ ತಿಳ್ಕೊಳ್ಳೋದ್ರಿಂದ ನಾವು ‘ಸಿಹಿಸುದ್ದಿ ಪರವಾಗಿ ಮಾತಾಡೋಕೆ, ಆ ಸುದ್ದಿ ಸಾರೋಕೆ ಕಾನೂನುಬದ್ಧ ಹಕ್ಕು ಪಡಿಯೋಕೆ’ ಪೌಲ ಉಪಯೋಗಿಸಿದ ವಿಧಾನವನ್ನೇ ಉಪಯೋಗಿಸಬಹುದಾ ಅಂತ ತಿಳ್ಕೊಬಹುದು.—ಫಿಲಿ. 1:7.

“ರೋಮಿನ ರಾಜನ ನ್ಯಾಯಾಲಯದಲ್ಲಿ ನಿಂತಿದ್ದೀನಿ” (ಅ. ಕಾ. 25:1-12)

3, 4. (ಎ) ಪೌಲನನ್ನ ಯೆರೂಸಲೇಮಿಗೆ ಕರ್ಕೊಂಡು ಬಂದು ವಿಚಾರಣೆ ಮಾಡಬೇಕು ಅಂತ ಯೆಹೂದ್ಯರು ಫೆಸ್ತನನ್ನ ಕೇಳೋಕೆ ಕಾರಣ ಏನು? (ಬಿ) ಪೌಲ ಹೇಗೆ ಬಚಾವಾದ? (ಸಿ) ಯೆಹೋವ ದೇವರು ಪೌಲನಿಗೆ ಸಹಾಯ ಮಾಡಿದ ತರನೇ ಇವತ್ತು ನಮಗೂ ಹೇಗೆ ಸಹಾಯ ಮಾಡ್ತಾನೆ?

3 ಫೆಸ್ತ ಯೆಹೂದದ ರಾಜ್ಯಪಾಲನಾಗಿ ಮೂರು ದಿನ ಆದಮೇಲೆ ಅವನು ಯೆರೂಸಲೇಮಿಗೆ ಹೋದ. a ಅಲ್ಲಿ ಮುಖ್ಯ ಪುರೋಹಿತರು, ಯೆಹೂದ್ಯರ ಪ್ರಮುಖ ಪುರುಷರು ಅವನ ಹತ್ರ ಹೋಗಿ ಪೌಲ ದೊಡ್ಡ-ದೊಡ್ಡ ತಪ್ಪು ಮಾಡಿದ್ದಾನೆ ಅಂತ ಆರೋಪ ಹಾಕಿದ್ರು. ಈ ಹೊಸ ರಾಜ್ಯಪಾಲನಿಗೆ ತಮ್ಮ ಜೊತೆ ಮತ್ತು ಎಲ್ಲಾ ಯೆಹೂದ್ಯರ ಜೊತೆ ಒಳ್ಳೇ ಸಂಬಂಧ ಕಾಪಾಡ್ಕೊಬೇಕು ಅನ್ನೋ ಒತ್ತಡ ಇದೆ ಅಂತ ಅವ್ರಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಅವರು ಪೌಲನನ್ನ ಯೆರೂಸಲೇಮಿಗೆ ಕರ್ಕೊಂಡು ಬಂದು ವಿಚಾರಣೆ ಮಾಡೋಕೆ ಫೆಸ್ತನಿಗೆ ಹೇಳಿದ್ರು. ಆದ್ರೆ ಇದ್ರ ಹಿಂದೆ ಒಂದು ಒಳಸಂಚು ಇತ್ತು. ಕೈಸರೈಯದಿಂದ ಯೆರೂಸಲೇಮಿಗೆ ಬರೋ ದಾರಿಯಲ್ಲೇ ಪೌಲನ ಕತೆ ಮುಗಿಸಿಬಿಡಬೇಕು ಅಂತ ಈ ವೈರಿಗಳು ಅಂದ್ಕೊಂಡಿದ್ರು. ಆದ್ರೆ ಫೆಸ್ತ, “ನಿಮ್ಮಲ್ಲಿ ಅಧಿಕಾರದಲ್ಲಿ ಇರುವವರು ನನ್ನ ಜೊತೆ ಬಂದು ಅವನ ತಪ್ಪುಗಳನ್ನ ಅಲ್ಲಿ ಹೇಳಬಹುದು” ಅಂತ ಹೇಳಿದ. (ಅ. ಕಾ. 25:5) ಹೀಗೆ ಇನ್ನೊಂದು ಸಲ ಪೌಲ ಬಚಾವಾದ.

4 ಯೆಹೋವ ದೇವರು ಪೌಲನ ವಿಚಾರಣೆಯ ಸಮಯದಲ್ಲೆಲ್ಲಾ ಯೇಸು ಕ್ರಿಸ್ತನ ಮೂಲಕ ಅವನಿಗೆ ಬಲ ಕೊಟ್ಟನು. ಈಗಾಗ್ಲೇ ಯೇಸು ಪೌಲನಿಗೆ ದರ್ಶನದಲ್ಲಿ ಕಾಣಿಸ್ಕೊಂಡು, “ಧೈರ್ಯವಾಗಿರು” ಅಂತ ಹೇಳಿದ್ದನು. (ಅ. ಕಾ. 23:11) ಇವತ್ತು ಕೂಡ ದೇವರ ಸೇವಕರು ಇಂಥದ್ದೇ ಅಡ್ಡಿ-ತಡೆ ಮತ್ತು ಬೆದರಿಕೆಗಳನ್ನ ಎದುರಿಸ್ತಾರೆ. ಹಾಗಂತ ನಮ್ಗೆ ಬರೋ ಪ್ರತಿಯೊಂದು ಕಷ್ಟದಲ್ಲೂ ಯೆಹೋವ ದೇವರು ನಮ್ಮನ್ನ ಕಾಪಾಡೋದಿಲ್ಲ. ಆದ್ರೆ ತಾಳ್ಕೊಳ್ಳೋಕೆ ಬೇಕಾದ ಶಕ್ತಿ ಮತ್ತು ವಿವೇಕ ಕೊಡ್ತಾನೆ. ದೇವರು ನಮಗೆ “ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿನ” ಕೊಡ್ತಾನೆ ಅನ್ನೋ ಗ್ಯಾರೆಂಟಿ ನಮಗಿದೆ.—2 ಕೊರಿಂ. 4:7.

5. ಫೆಸ್ತ ಪೌಲನ ಜೊತೆ ಹೇಗೆ ನಡ್ಕೊಂಡ?

5 ಕೆಲವು ದಿನ ಆದಮೇಲೆ ಫೆಸ್ತ ಕೈಸರೈಯದಲ್ಲಿ “ನ್ಯಾಯವಿಚಾರಣೆ ಮಾಡಲಿಕ್ಕಾಗಿ” ಕೂತ್ಕೊಂಡ. b ಅವನ ಮುಂದೆ ಪೌಲ ಮತ್ತು ಅವನ ಮೇಲೆ ಆರೋಪ ಹಾಕಿದವರು ನಿಂತಿದ್ರು. ಪೌಲನ ವೈರಿಗಳು ಅವನ ಮೇಲೆ ತುಂಬಾ ಆರೋಪಗಳ ಸುರಿಮಳೆನೇ ಸುರಿಸಿದ್ರು. ಆದ್ರೆ ಅದು ಸುಳ್ಳು ಅಂತ ತೋರಿಸೋಕೆ ಪೌಲ ವಾದಿಸ್ತಾ ಹೀಗಂದ, “ನಾನು ಯೆಹೂದ್ಯರ ನಿಯಮವನ್ನ ಮುರಿದಿಲ್ಲ. ದೇವಾಲಯದ ವಿರುದ್ಧ ಆಗಲಿ ರೋಮಿನ ರಾಜನ ವಿರುದ್ಧ ಆಗಲಿ ನಾನೇನೂ ತಪ್ಪು ಮಾಡಿಲ್ಲ.” ನಿಜ ಹೇಳಬೇಂದ್ರೆ, ಪೌಲ ಯಾವ ತಪ್ಪೂ ಮಾಡಿರಲಿಲ್ಲ, ಹಾಗಾಗಿ ಅವನಿಗೆ ಬಿಡುಗಡೆಯಾಗಬೇಕಿತ್ತು. ಆದ್ರೆ ಫೆಸ್ತ ಯಾವ ತೀರ್ಪು ಕೊಟ್ಟ ಗೊತ್ತಾ? ಯೆಹೂದ್ಯರ ಮೆಚ್ಚುಗೆ ಪಡಿಬೇಕು ಅನ್ನೋ ಆಸೆ ಫೆಸ್ತನಿಗೆ ಇದ್ದಿದ್ರಿಂದ ಪೌಲನಿಗೆ, “ನಿನಗೆ ಯೆರೂಸಲೇಮಲ್ಲಿ ಇರೋ ನ್ಯಾಯಾಲಯಕ್ಕೆ ಹೋಗಬೇಕಾ? ಅಲ್ಲಿ ನಿಂಗೆ ವಿಚಾರಣೆ ಆಗೋವಾಗ ನಾನೂ ಇರ್ತಿನಿ” ಅಂತ ಕೇಳಿದ. (ಅ. ಕಾ. 25:6-9) ನಿಜವಾಗ್ಲೂ ಇದೊಂದು ತಪ್ಪಾದ ಸಲಹೆ ಆಗಿತ್ತು! ಯಾಕಂದ್ರೆ ಪೌಲನನ್ನ ಯೆರೂಸಲೇಮಿಗೆ ಕಳಿಸಿದ್ರೆ ಅವನ ಮೇಲೆ ಆರೋಪ ಹಾಕಿದವ್ರೇ ತೀರ್ಪು ಮಾಡ್ತಿದ್ರು, ಗ್ಯಾರೆಂಟಿ ಅವನಿಗೆ ಮರಣ ಶಿಕ್ಷೆ ಕೊಡ್ತಿದ್ರು. ಈ ಸಂದರ್ಭದಲ್ಲಿ ಫೆಸ್ತನಿಗೆ ನ್ಯಾಯಕ್ಕಿಂತ ಜನ್ರ ಮೆಚ್ಚಿಗೆ ಪಡಿಯೋದೇ ಮುಖ್ಯ ಆಗಿತ್ತು. ಹಿಂದೆ ಯೇಸುವಿನ ವಿಷ್ಯದಲ್ಲಿ ರಾಜ್ಯಪಾಲನಾಗಿದ್ದ ಪೊಂತ್ಯ ಪಿಲಾತ ಕೂಡ ಇದೇ ತರ ಮಾಡಿದ್ದ. (ಯೋಹಾ. 19:12-16) ನಮ್ಮ ಕಾಲದಲ್ಲಿ ಕೂಡ ಕೆಲವು ನ್ಯಾಯಾಧೀಶರು ಜನರ ಮೆಚ್ಚಿಗೆ ಪಡೆಯೋಕೆ ನಮ್ಮ ವಿರುದ್ಧ ತಪ್ಪಾದ ತೀರ್ಪನ್ನ ಕೊಡಬಹುದು. ಹಾಗಾಗಿ, ದೇವಜನರಿಗೆ ಸಂಬಂಧಿಸಿದ ಕೇಸ್‌ಗಳಲ್ಲಿ ನ್ಯಾಯಾಲಯ ಸಾಕ್ಷ್ಯಾಧಾರಗಳಿಗೆ ವಿರುದ್ಧವಾದ ತೀರ್ಪು ಕೊಡೋದಾದ್ರೆ ನಾವು ಆಶ್ಚರ್ಯಪಡಬಾರದು.

6, 7 (ಎ) ಪೌಲ ಯಾಕೆ ರಾಜನಿಗೆ ಅಪೀಲು ಮಾಡಿದ? (ಬಿ) ಪೌಲನಿಂದ ನಾವೇನು ಕಲಿಬಹುದು?

6 ಫೆಸ್ತ ಯೆಹೂದ್ಯರನ್ನ ಮೆಚ್ಚಿಸೋಕೆ ತುಂಬಾ ಪ್ರಯತ್ನ ಮಾಡ್ತಿದ್ದನ್ನ ನೋಡಿದಾಗ ಪೌಲನಿಗೆ ತನ್ನ ಪ್ರಾಣಕ್ಕೆ ಅಪಾಯ ಇದೆ ಅಂತ ಗೊತ್ತಾಯ್ತು. ಅದಕ್ಕೆ ಪೌಲ ರೋಮನ್‌ ಪ್ರಜೆಯಾಗಿ ತನಗಿದ್ದ ಹಕ್ಕನ್ನ ಉಪಯೋಗಿಸ್ಕೊಂಡ. ಅವನು ಫೆಸ್ತನಿಗೆ, “ನಾನು ರೋಮಿನ ರಾಜನ ನ್ಯಾಯಾಲಯದಲ್ಲಿ ನಿಂತಿದ್ದೀನಿ. ನನಗೆ ವಿಚಾರಣೆ ಆಗಬೇಕಾಗಿರೋದು ಇಲ್ಲೇ. ನಾನು ಯೆಹೂದ್ಯರ ವಿರುದ್ಧ ಯಾವ ತಪ್ಪೂ ಮಾಡಿಲ್ಲ. ನಿನ್ಗೂ ಅದು ಚೆನ್ನಾಗಿ ಗೊತ್ತು . . . ನನ್ನ ಈ ಕೇಸನ್ನ ರೋಮಿನ ರಾಜನ ಹತ್ರ ತಗೊಂಡು ಹೋಗ್ತೀನಿ!” ಅಂತ ಹೇಳಿದ. ಆರೋಪಿ ಈ ರೀತಿ ಮನವಿ ಮಾಡಿದ್ರೆ ಅದ್ರಲ್ಲಿ ಯಾವುದೇ ಬದಲಾವಣೆ ಮಾಡೋದಕ್ಕೆ ಆಗ್ತಿರಲಿಲ್ಲ. ಅದಕ್ಕೆ ಫೆಸ್ತ “ರೋಮಿನ ರಾಜ ನಿನ್ನ ವಿಚಾರಣೆ ಮಾಡಬೇಕು ಅಂತ ಹೇಳಿದ್ಯಲ್ಲಾ. ಅದಕ್ಕೆ ನೀನು ರೋಮಿನ ರಾಜನ ಹತ್ರ ಹೋಗು” ಅಂತ ಹೇಳಿದ. (ಅ. ಕಾ. 25:10-12) ಪೌಲನಿಂದ ನಾವೇನು ಕಲಿಬಹುದು? ಪೌಲ ಉನ್ನತ ಅಧಿಕಾರಿಗಳಿಗೆ ಹೇಗೆ ಮನವಿ ಅಥವಾ ಅಪೀಲು ಮಾಡಿದ್ನೋ ಅದೇ ತರ ನಾವು ನ್ಯಾಯಕ್ಕಾಗಿ ಮನವಿ ಮಾಡಬಹುದು. ನಮ್ಮ ವಿರೋಧಿಗಳು ‘ನಿಯಮದ ಹೆಸ್ರಲ್ಲಿ ತೊಂದ್ರೆ ಮಾಡೋಕೆ’ ಪ್ರಯತ್ನಿಸಿದ್ರೆ ಅಥ್ವಾ ಸಾರೋ ಕೆಲ್ಸನ ನಿಲ್ಲಿಸೋಕೆ ಪ್ರಯತ್ನಿಸಿದ್ರೆ ನಾವು ಸಹಾಯಕ್ಕಾಗಿ ಕೋರ್ಟ್‌ ಮೆಟ್ಟಿಲೇರ್ತೀವಿ. cಕೀರ್ತ. 94:20.

7 ತಾನು ಮಾಡದೇ ಇರೋ ತಪ್ಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ ಮೇಲೆ ಪೌಲನಿಗೆ ತನ್ನ ಕೇಸ್‌ ಬಗ್ಗೆ ವಾದ ಮಾಡೋಕೆ ರೋಮಿನಲ್ಲಿ ಅವಕಾಶ ಸಿಕ್ತು. ಆದ್ರೆ ಅವನು ಅಲ್ಲಿಂದ ಹೋಗೋ ಮುಂಚೆ ಇನ್ನೊಬ್ಬ ಅಧಿಕಾರಿಯನ್ನ ನೋಡಬೇಕು ಅಂತಿದ್ದ.

ನಮ್ಮ ವಿರುದ್ಧ ತೀರ್ಪಾದಾಗ ನಾವು ಅಪೀಲು ಮಾಡ್ತೀವಿ

‘ನಂಗೆ ಹೇಳಿದ್ದನ್ನೇ ನಾನು ಮಾಡಿದೆ’ (ಅ. ಕಾ. 25:13–26:23)

8, 9. ಅಗ್ರಿಪ್ಪ ಕೈಸೆರೈಯಕ್ಕೆ ಯಾಕೆ ಬಂದ?

8 ಪೌಲ ಕೈಸರನಿಗೆ ಮನವಿ ಮಾಡಿ ಕೆಲವು ದಿನ ಆದ ಮೇಲೆ, ರಾಜ ಅಗ್ರಿಪ್ಪ ತನ್ನ ಸಹೋದರಿಯಾದ ಬೆರ್ನಿಕೆ ಜೊತೆ ಹೊಸ ರಾಜ್ಯಪಾಲನಾದ ಫೆಸ್ತನನ್ನ “ಭೇಟಿ ಮಾಡಿ ಮಾತಾಡೋಕೆ” ಕೈಸರೈಯಕ್ಕೆ ಬಂದ. d ರೋಮನ್‌ ಆಳ್ವಿಕೆ ಸಮಯದಲ್ಲಿ, ಹೊಸದಾಗಿ ನೇಮಕ ಆಗಿರೋ ರಾಜ್ಯಪಾಲನನ್ನ ಅಧಿಕಾರಿಗಳು ಭೇಟಿಯಾಗೋದು ರೂಢಿಯಾಗಿತ್ತು. ಈ ಕಾರಣಕ್ಕೇ ಅಗ್ರಿಪ್ಪ ಫೆಸ್ತನನ್ನ ಭೇಟಿಯಾದ. ಹೀಗೆ ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಅವನ ಜೊತೆ ಒಳ್ಳೇ ಸಂಬಂಧ ಬೆಳೆಸೋಕೆ ಅಗ್ರಿಪ್ಪ ಪ್ರಯತ್ನಿಸ್ತಿದ್ದ. ಇದ್ರಿಂದ ಮುಂದೆ ಅವನಿಗೆ ಲಾಭ ಆಗ್ತಿತ್ತು.—ಅ. ಕಾ. 25:13.

9 ಫೆಸ್ತ ಪೌಲನ ಬಗ್ಗೆ ಹೇಳಿದಾಗ ಅಗ್ರಿಪ್ಪನಿಗೆ ಕುತೂಹಲ ಆಯ್ತು. ಮಾರನೇ ದಿನ ಈ ಇಬ್ರು ಅಧಿಕಾರಿಗಳು ಭವ್ಯವಾಗಿ ಅಲಂಕರಿಸ್ಕೊಂಡು ಗತ್ತಿಂದ ನ್ಯಾಯಾಲಯದ ಒಳಗೆ ಬಂದು ಕೂತ್ಕೊಂಡ್ರು. ಆದ್ರೆ ಅವ್ರ ಗತ್ತು ಪೌಲನ ಮಾತಿನ ಮುಂದೆ ಏನೇನು ಇರಲಿಲ್ಲ.—ಅ. ಕಾ. 25:22-27.

10, 11. (ಎ) ಪೌಲ ಅಗ್ರಿಪ್ಪನಿಗೆ ಹೇಗೆ ಗೌರವ ಕೊಟ್ಟ? (ಬಿ) ಪೌಲ ತನ್ನ ಬಗ್ಗೆ ಯಾವೆಲ್ಲಾ ವಿಷ್ಯಗಳನ್ನ ಅಗ್ರಿಪ್ಪನಿಗೆ ಹೇಳಿದ?

10 ಮೊದಲು ಪೌಲ ತನ್ನ ವಾದ ಮಂಡಿಸೋಕೆ ಅವಕಾಶ ಕೊಟ್ಟಿದ್ದಕ್ಕೆ ಅಗ್ರಿಪ್ಪ ರಾಜನಿಗೆ ಧನ್ಯವಾದ ಹೇಳಿದ. ಜೊತೆಗೆ ರಾಜನಿಗೆ ಯೆಹೂದ್ಯರ ಎಲ್ಲ ಆಚಾರಗಳ ಬಗ್ಗೆ ಮತ್ತೆ ಅದಕ್ಕೆ ಸಂಬಂಧಪಟ್ಟ ವಿವಾದಗಳ ಬಗ್ಗೆ ಚೆನ್ನಾಗಿ ಗೊತ್ತಿದೆ ಅಂತ ಹೊಗಳಿದ. ಆಮೇಲೆ ತನ್ನ ಜೀವನದಲ್ಲಿ ಏನಾಯ್ತು ಅಂತ ವಿವರಿಸಿದ. “ನಾನೊಬ್ಬ ಫರಿಸಾಯ . . . ಬೇರೆ ಎಲ್ಲ ಯೆಹೂದ್ಯರಿಗಿಂತ ಫರಿಸಾಯರು ತುಂಬ ಕಟ್ಟುನಿಟ್ಟಾಗಿ ಇರ್ತಾರೆ” ಅಂದ. (ಅ. ಕಾ. 26:5) ಪೌಲ ಫರಿಸಾಯನಾಗಿದ್ದಾಗ ದೇವರು ಹೇಳಿದ ಹಾಗೆ ಮೆಸ್ಸೀಯ ಬರ್ತಾನೆ ಅಂತ ಕಾಯ್ತಿದ್ದ. ಆಮೇಲೆ ಅವನಿಗೆ ಯೇಸು ಕ್ರಿಸ್ತನೇ ಮೆಸ್ಸೀಯ ಅಂತ ಗೊತ್ತಾದಾಗ ಎಲ್ರಿಗೂ ಅದ್ರ ಬಗ್ಗೆ ಹೇಳಿದ. ಪೌಲ ಅಷ್ಟೇ ಅಲ್ಲ ಅವನ ಶತ್ರುಗಳು ಕೂಡ ದೇವರು ಕೊಟ್ಟಿರೋ ಈ ಮಾತು ನೆರವೇರೋದನ್ನ ನೋಡೋಕೆ ಕಾಯ್ತಿದ್ರು. ಆದ್ರೆ ಈ ಕಾರಣಕ್ಕೆ ನನ್ನನ್ನ ವಿಚಾರಣೆ ಮಾಡ್ತಿದ್ದಾರೆ ಅಂತ ಪೌಲ ಅಗ್ರಿಪ್ಪನ ಹತ್ರ ಹೇಳಿದ. ಅಗ್ರಿಪ್ಪ ಈ ವಿಷ್ಯ ಕೇಳಿದಾಗ ಪೌಲ ಮುಂದೆ ಇನ್ನೂ ಏನು ಹೇಳ್ತಾನೆ ಅಂತ ಆಸಕ್ತಿಯಿಂದ ಕಾಯ್ತಿದ್ದ. e

11 ಪೌಲ ಕ್ರೈಸ್ತರಿಗೆ ತುಂಬಾ ಹಿಂಸೆ ಕೊಡ್ತಿದ್ರ ಬಗ್ಗೆ ಹೇಳ್ತಾ ಹೀಗಂದ, “ಒಂದು ಸಮಯದಲ್ಲಿ ನಾನೂ ನಜರೇತಿನ ಯೇಸು ವಿರುದ್ಧ ತುಂಬ ಕೆಲಸಗಳನ್ನ ಮಾಡಬೇಕು ಅಂತ ನಂಬಿದ್ದೆ . . . ನಂಗೆ ಅವ್ರ [ಯೇಸುವಿನ ಶಿಷ್ಯರ] ಮೇಲೆ ತುಂಬ ಕೋಪ ಇದ್ದಿದ್ರಿಂದ ಅವ್ರಿಗೆ ಹಿಂಸೆ ಕೊಡೋಕೆ ಬೇರೆಬೇರೆ ಊರುಗಳಿಗೂ ಹೋದೆ.” (ಅ. ಕಾ. 26:9-11) ಪೌಲ ಈ ಮಾತನ್ನ ಬಣ್ಣ ಕಟ್ಟಿ ಹೇಳ್ತಿರಲಿಲ್ಲ. ಯಾಕಂದ್ರೆ ಪೌಲ ಕ್ರೈಸ್ತರಿಗೆ ಹಿಂಸೆ ಕೊಟ್ಟಿದ್ರ ಬಗ್ಗೆ ತುಂಬಾ ಜನ್ರಿಗೆ ಗೊತ್ತಿತ್ತು. (ಗಲಾ. 1:13, 23) ‘ಇಂಥ ಒಬ್ಬ ವ್ಯಕ್ತಿ ಹೇಗೆ ಬದಲಾದ?’ ಅನ್ನೋ ಪ್ರಶ್ನೆ ಅಗ್ರಿಪ್ಪನನ್ನ ಕಾಡ್ತಿತ್ತು.

12, 13. (ಎ) ಪೌಲ ತಾನು ಹೇಗೆ ಬದಲಾದೆ ಅಂತ ಹೇಳಿದ? (ಬಿ) ಪೌಲ ಯಾವ ಅರ್ಥದಲ್ಲಿ ‘ಮುಳ್ಳಿನ ಕೋಲಿಗೆ ಒದಿತಾ ಇದ್ದ?’

12 ಆ ಪ್ರಶ್ನೆಗೆ ಪೌಲನ ಮುಂದಿನ ಮಾತು ಉತ್ರ ಕೊಡ್ತು. ಅವನು ಹೇಳಿದ್ದು, “ಒಂದು ಸಾರಿ ನಂಗೆ ದಮಸ್ಕಕ್ಕೆ ಹೋಗೋಕೆ ಮುಖ್ಯ ಪುರೋಹಿತರು ಅಧಿಕಾರ ಮತ್ತು ಅಪ್ಪಣೆ ಕೊಟ್ರು. ರಾಜನೇ, ದಾರಿಯಲ್ಲಿ ಹೋಗ್ತಿರುವಾಗ ಮಧ್ಯಾಹ್ನದ ಹೊತ್ತಲ್ಲಿ ಸೂರ್ಯನಿಗಿಂತ ಹೆಚ್ಚು ಬೆಳಕು ಬೆಳ್ಳಗೆ ನನ್ನ ಸುತ್ತಲೂ ನನ್ನ ಜೊತೆ ಇದ್ದವ್ರ ಸುತ್ತಲೂ ಮಿಂಚಿತು. ಆಗ ನಾವೆಲ್ಲ ನೆಲಕ್ಕೆ ಬಿದ್ವಿ. ಒಂದು ಧ್ವನಿ ನಂಗೆ ಹೀಬ್ರು ಭಾಷೆಯಲ್ಲಿ ‘ಸೌಲ, ಸೌಲ, ನಂಗೆ ಯಾಕೆ ಹಿಂಸೆ ಕೊಡ್ತಾ ಇದ್ದೀಯಾ? ನನ್ನ ವಿರುದ್ಧ ಹೋರಾಡಿದ್ರೆ [“ಮುಳ್ಳಿನ ಕೋಲಿಗೆ ಒದಿತಾ ಇದ್ರೆ,” ಪಾದಟಿಪ್ಪಣಿ] ನಿನಗೇ ನೋವಾಗುತ್ತೆ’ ಅಂತ ಹೇಳೋದನ್ನ ಕೇಳಿಸ್ಕೊಂಡೆ. ಆಗ ನಾನು ‘ಪ್ರಭು, ನೀನು ಯಾರು?’ ಅಂತ ಕೇಳಿದೆ. ಅದಕ್ಕೆ ಪ್ರಭು ನಂಗೆ ‘ನೀನು ಹಿಂಸಿಸ್ತಾ ಇರೋ ಯೇಸುನೇ ನಾನು’” ಅಂದ. fಅ. ಕಾ. 26:12-15.

13 ಈ ಅದ್ಭುತ ಘಟನೆ ನಡೆಯೋ ಮುಂಚೆ, ಪೌಲ ಒಂದರ್ಥದಲ್ಲಿ ‘ಮುಳ್ಳಿನ ಕೋಲಿಗೆ ಒದಿತಾ ಇದ್ದ.’ ಈ ಕೋಲು ಉದ್ದವಾಗಿರ್ತಿತ್ತು, ಅದ್ರ ತುದಿಯಲ್ಲಿ ಚೂಪಾದ ಲೋಹ ಇರ್ತಿತ್ತು. ಬೈಬಲ್‌ ಕಾಲದಲ್ಲಿ ಈ ಮುಳ್ಳಿನ ಕೋಲನ್ನ ಹಿಂಡಿನಿಂದ ದೂರ ಹೋಗೋ ಪ್ರಾಣಿಗಳನ್ನ ವಾಪಸ್‌ ಹಿಂಡಿಗೆ ಸೇರಿಸೋಕೆ ಉಪಯೋಗಿಸ್ತಿದ್ರು. ಒಂದುವೇಳೆ ಆ ಪ್ರಾಣಿ ಹಠ ಮಾಡ್ತಾ ಆ ಮುಳ್ಳಿನ ಕೋಲನ್ನ ಒದಿತಾ ಇದ್ರೆ ಅದಕ್ಕೇ ಗಾಯ ಆಗ್ತಿತ್ತು. ಅದೇ ರೀತಿ ಪೌಲ ದೇವರ ಇಷ್ಟಕ್ಕೆ ವಿರುದ್ಧ ನಡ್ಕೊಳ್ಳೋದ್ರ ಮೂಲಕ ದೇವರ ಜೊತೆಗಿರೋ ಸ್ನೇಹನ ಹಾಳುಮಾಡ್ಕೊಂಡು ತನಗೇ ನೋವು ಮಾಡ್ಕೊಳ್ತಿದ್ದ. ಅವನಿಗೆ ಸರಿಯಾಗಿ ಮಾರ್ಗದರ್ಶನ ಕೊಡೋರು ಯಾರು ಇರಲಿಲ್ಲ. ಅದಕ್ಕೆ ಯೇಸು ಮತ್ತೆ ಜೀವಂತವಾಗಿ ಎದ್ದು ಬಂದ ಮೇಲೆ ದಮಸ್ಕಕ್ಕೆ ಹೋಗ್ತಿದ್ದ ಪೌಲನಿಗೆ ಪ್ರತ್ಯಕ್ಷ ಆಗಿ ಅವನ ಯೋಚ್ನೆಗಳನ್ನ ಬದಲಾಯಿಸಿದನು.—ಯೋಹಾ. 16:1, 2.

14, 15. ಜೀವನದಲ್ಲಿ ತಾನು ಮಾಡಿದ ಬದಲಾವಣೆಗಳ ಬಗ್ಗೆ ಪೌಲ ಏನಂತ ಹೇಳಿದ?

14 ಪೌಲ ತನ್ನ ಜೀವನದಲ್ಲಿ ತುಂಬಾ ಬದಲಾವಣೆಗಳನ್ನ ಮಾಡ್ಕೊಂಡ. ಅದ್ರ ಬಗ್ಗೆ ಅವನು ಅಗ್ರಿಪ್ಪನ ಹತ್ರ ಹೀಗಂದ: “ಸ್ವರ್ಗದಿಂದ ಬಂದ ಆ ದರ್ಶನದಲ್ಲಿ ಯೇಸು ನಂಗೆ ಹೇಳಿದ್ದನ್ನೇ ನಾನು ಮಾಡಿದೆ. ‘ಪಶ್ಚಾತ್ತಾಪಪಡಿ, ತಪ್ಪು ತಿದ್ಕೊಂಡು ಜೀವನ ಮಾಡಿ. ದೇವ್ರ ಹತ್ರ ವಾಪಸ್‌ ಬನ್ನಿ’ ಅನ್ನೋ ಸಂದೇಶನ ಮೊದಲು ದಮಸ್ಕಕ್ಕೆ ಹೋಗಿ ಸಾರಿದೆ. ಆಮೇಲೆ ಯೆರೂಸಲೇಮಲ್ಲಿ, ಇಡೀ ಯೂದಾಯದಲ್ಲಿ ಸುತ್ತಾಡಿ ಯೆಹೂದ್ಯರಿಗೂ ಯೆಹೂದ್ಯರಲ್ಲದ ಜನ್ರಿಗೂ ಈ ಸಂದೇಶ ಸಾರಿದೆ.” (ಅ. ಕಾ. 26:19, 20) ಯೇಸು ದರ್ಶನದಲ್ಲಿ ಕೊಟ್ಟ ನೇಮಕವನ್ನ ಕೆಲವು ವರ್ಷಗಳಿಂದ ಪೌಲ ಮಾಡ್ತಾ ಬಂದಿದ್ದ. ಪೌಲ ಹೇಳಿದ ಸಿಹಿಸುದ್ದಿಯನ್ನ ಯಾರು ಕೇಳಿಸ್ಕೊಂಡ್ರೋ ಅವರು ತಮ್ಮ ಅನೈತಿಕ ಮತ್ತು ಅಪ್ರಾಮಾಣಿಕ ಜೀವನ ಬಿಟ್ಟು ದೇವರ ಕಡೆಗೆ ತಿರುಗಿಕೊಂಡ್ರು. ದೇವರ ನಿಯಮಗಳನ್ನ ಪಾಲಿಸ್ತಾ ಶಾಂತಿಯಿಂದ ಇದ್ರು.

15 ಪೌಲ ಮಾಡಿದ ಕೆಲ್ಸದಿಂದ ಇಷ್ಟೆಲ್ಲಾ ಪ್ರಯೋಜನ ಇದ್ರೂ ಅವನನ್ನ ವಿರೋಧಿಸ್ತಿದ್ದ ಜನ್ರಿಗೆ ಇದು ಲೆಕ್ಕನೇ ಇರಲಿಲ್ಲ. ಆಮೇಲೆ ಪೌಲ ಹೀಗೆ ಹೇಳಿದ: “ಅದಕ್ಕೇ ಯೆಹೂದ್ಯರು ದೇವಾಲಯದಲ್ಲಿ ನನ್ನನ್ನ ಹಿಡಿದು ಸಾಯಿಸೋಕೆ ಪ್ರಯತ್ನ ಮಾಡಿದ್ರು. ಆದ್ರೆ ದೇವರು ನಂಗೆ ಸಹಾಯ ಮಾಡಿದ್ರಿಂದ ಇವತ್ತಿನ ತನಕ ನಾನು ಚಿಕ್ಕವರಿಂದ ದೊಡ್ಡವರ ತನಕ ಸಾರ್ತಾ ಇದ್ದೀನಿ.”—ಅ. ಕಾ. 26:21, 22.

16. ನ್ಯಾಯಾಧೀಶರು ಮತ್ತು ಅಧಿಕಾರಿಗಳ ಮುಂದೆ ನಾವು ಪೌಲನ ತರ ಹೇಗೆ ಮಾತಾಡಬಹುದು?

16 ಸತ್ಯ ಕ್ರೈಸ್ತರಾದ ನಾವು ನಮ್ಮ ನಂಬಿಕೆ ಬಗ್ಗೆ ಪ್ರಶ್ನೆ ‘ಕೇಳೋ ಪ್ರತಿಯೊಬ್ರಿಗೂ ಉತ್ರ ಕೊಡೋಕೆ ಯಾವಾಗ್ಲೂ ಸಿದ್ಧವಾಗಿರಬೇಕು.’ (1 ಪೇತ್ರ 3:15) ನಾವು ನಮ್ಮ ನಂಬಿಕೆ ಬಗ್ಗೆ ನ್ಯಾಯಾಧೀಶರು ಮತ್ತು ಅಧಿಕಾರಿಗಳ ಮುಂದೆ ಹೇಗೆ ಮಾತಾಡಬಹುದು ಅಂತ ಪೌಲನಿಂದ ಕಲಿಬಹುದು. ಅಗ್ರಿಪ್ಪ ಮತ್ತು ಫೆಸ್ತನ ಜೊತೆ ಮಾತಾಡಿದ ತರನೇ ಮಾತಾಡಬಹುದು. ಬೈಬಲ್‌ ನಿಯಮಗಳನ್ನ ಪಾಲಿಸಿದ್ರಿಂದ ನಮಗೆ ಮತ್ತು ಬೇರೆಯವ್ರಿಗೆ ಹೇಗೆ ಪ್ರಯೋಜನ ಸಿಕ್ಕಿದೆ ಅಂತ ಗೌರವದಿಂದ ಹೇಳಬಹುದು. ಹೀಗೆ ಮಾಡೋದ್ರಿಂದ, ನಮ್ಮ ಪರವಾಗಿ ಒಳ್ಳೇ ತೀರ್ಮಾನ ಕೊಡೋಕೆ ನ್ಯಾಯಾಧೀಶರಿಗೆ ಸಹಾಯ ಆಗುತ್ತೆ.

“ನನ್ನನ್ನ ಕ್ರೈಸ್ತನನ್ನಾಗಿ ಬದಲಾಯಿಸಿ ಬಿಡ್ತೀಯ” (ಅ. ಕಾ. 26:24-32)

17. (ಎ) ಪೌಲನ ವಾದ ಕೇಳಿ ಫೆಸ್ತ ಹೇಗೆ ಪ್ರತಿಕ್ರಿಯಿಸಿದ? (ಬಿ) ಇವತ್ತು ಅದೇ ತರ ಕೆಲವರು ಏನು ಮಾಡ್ತಾರೆ?

17 ಪೌಲನ ಈ ವಾದ ಕೇಳಿ ಆ ಇಬ್ಬರು ಅಧಿಕಾರಿಗಳ ಕೋಪ ನೆತ್ತಿಗೇರಿತು. ಮುಂದೆ ಏನಾಯ್ತು ಅಂತ ನೋಡಿ: “ಪೌಲ ಹೀಗೆ ಮಾತಾಡ್ತಾ ಇರುವಾಗ ಫೆಸ್ತ ಜೋರಾಗಿ ‘ಪೌಲ ನಿಂಗೆ ಹುಚ್ಚು ಹಿಡಿದಿದೆ! ತುಂಬ ಓದಿ ನಿನ್ನ ತಲೆ ಕೆಟ್ಟಿದೆ!’ ಅಂದ.” (ಅ. ಕಾ. 26:24) ಇವತ್ತು ಕೂಡ ಫೆಸ್ತನ ತರನೇ ಕೋಪ ತೋರಿಸೋ ಜನರಿದ್ದಾರೆ. ಬೈಬಲಿನಲ್ಲಿರೋ ಸಿಹಿಸುದ್ದಿಯನ್ನ ಅವರು ಭ್ರಮೆ ಅಂತ ನೆನಸ್ತಾರೆ. ಈ ಲೋಕದಲ್ಲಿರೋ ಜ್ಞಾನಿಗಳಿಗೆ ಸತ್ತವರು ಜೀವಂತವಾಗಿ ಮತ್ತೆ ಎದ್ದು ಬರ್ತಾರೆ ಅನ್ನೋ ಬೈಬಲ್‌ ಬೋಧನೆನಾ ನಂಬೋಕೆ ಕಷ್ಟ ಆಗುತ್ತೆ.

18. (ಎ) ಪೌಲ ಫೆಸ್ತನಿಗೆ ಏನಂತ ಉತ್ರ ಕೊಟ್ಟ? (ಬಿ) ಅದಕ್ಕೆ ಅಗ್ರಿಪ್ಪ ಹೇಗೆ ಪ್ರತಿಕ್ರಿಯಿಸಿದ?

18 ಪೌಲ ರಾಜಪಾಲನಿಗೆ ಹೀಗೆ ಉತ್ರ ಕೊಟ್ಟ: “ಮಹಾ ಪ್ರಭು ಫೆಸ್ತ, ನಂಗೆ ಹುಚ್ಚು ಹಿಡಿದಿಲ್ಲ. ನಾನು ಹೇಳ್ತಾ ಇರೋದು ನಿಜ. ನಾನು ಚೆನ್ನಾಗಿ ಯೋಚನೆ ಮಾಡಿ ಮಾತಾಡ್ತಾ ಇದ್ದೀನಿ. ನಾನು ಯಾರ ಜೊತೆ ಮುಚ್ಚುಮರೆ ಇಲ್ಲದೆ ಮಾತಾಡ್ತಾ ಇದ್ದೀನೋ ಆ ರಾಜನಿಗೆ ಈ ವಿಷ್ಯಗಳ ಬಗ್ಗೆ ಚೆನ್ನಾಗಿ ಗೊತ್ತು . . . ಅಗ್ರಿಪ್ಪ ರಾಜಾ, ನೀನು ಪ್ರವಾದಿಗಳು ಹೇಳಿದ್ದನ್ನ ನಂಬ್ತೀಯಾ? ನೀನು ನಂಬ್ತೀಯ ಅಂತ ನಂಗೊತ್ತು” ಅಂದ. ಆಗ ಅಗ್ರಿಪ್ಪ ಪೌಲನಿಗೆ, “ನಿನಗೆ ಇನ್ನು ಸ್ವಲ್ಪ ಸಮಯ ಕೊಟ್ರೆ ನನ್ನನ್ನ ಕ್ರೈಸ್ತನನ್ನಾಗಿ ಬದಲಾಯಿಸಿ ಬಿಡ್ತೀಯ” ಅಂದ. (ಅ. ಕಾ. 26:25-28) ಇಲ್ಲಿ ಅಗ್ರಿಪ್ಪನಿಗೆ ನಿಜವಾಗಿ ಕ್ರೈಸ್ತನಾಗೋಕೆ ಇಷ್ಟ ಇತ್ತೋ ಇಲ್ವೋ ನಮಗೆ ಗೊತ್ತಿಲ್ಲ. ಆದ್ರೆ ಪೌಲನ ಮಾತುಗಳು ಅವನ ಮೇಲೆ ಪ್ರಭಾವ ಬೀರಿದಂತೂ ನಿಜ.

19. ಪೌಲನ ಬಗ್ಗೆ ಫೆಸ್ತ ಮತ್ತು ಅಗ್ರಿಪ್ಪ ಯಾವ ತೀರ್ಮಾನ ಮಾಡಿದ್ರು?

19 ಆಮೇಲೆ ಅಗ್ರಿಪ್ಪ ಮತ್ತೆ ಫೆಸ್ತ ಎದ್ದು ನಿಂತ್ರು. ಇದ್ರಿಂದ ವಿಚಾರಣೆ ಅಲ್ಲಿಗೆ ಮುಗಿತು ಅಂತ ಗೊತ್ತಾಯ್ತು. ಅವರಿಬ್ರೂ “ಅಲ್ಲಿಂದ ಹೋಗ್ತಾ ಇದ್ದಾಗ ‘ಮರಣಶಿಕ್ಷೆ ಕೊಡುವಂಥ ತಪ್ಪಾಗಲಿ, ಜೈಲಿಗೆ ಹಾಕುವಷ್ಟು ದೊಡ್ಡ ಅಪರಾಧವಾಗಲಿ ಈ ಮನುಷ್ಯ ಮಾಡಿಲ್ಲ’ ಅಂತ ಮಾತಾಡ್ಕೊಂಡ್ರು. ಆಮೇಲೆ ಅಗ್ರಿಪ್ಪ ಫೆಸ್ತನಿಗೆ ‘ಈ ಮನುಷ್ಯ ತನ್ನ ಕೇಸನ್ನ ರಾಜನ ಹತ್ರ ತಗೊಂಡು ಹೋಗೋಕೆ ಕೇಳದೆ ಇದ್ದಿದ್ರೆ ಇವನನ್ನ ಬಿಡುಗಡೆ ಮಾಡಬಹುದಿತ್ತು’ ಅಂದ.” (ಅ. ಕಾ. 26:31, 32) ಪೌಲ ನಿರಪರಾಧಿ ಅಂತ ಅವ್ರಿಗೆ ಗೊತ್ತಾಯ್ತು. ಈ ಘಟನೆ ಆದ ಮೇಲೆ, ಅವ್ರಿಗೆ ಕ್ರೈಸ್ತರ ಬಗ್ಗೆ ಒಳ್ಳೇ ಅಭಿಪ್ರಾಯ ಬಂದಿರಬೇಕು.

20. ಪೌಲ ಪ್ರಭಾವಶಾಲಿ ಅಧಿಕಾರಿಗಳಿಗೆ ಸಾಕ್ಷಿ ಕೊಟ್ಟಿದ್ದು ವ್ಯರ್ಥ ಆಯ್ತಾ? ವಿವರಿಸಿ.

20 ಪೌಲ ಈ ಪ್ರಭಾವಶಾಲಿ ಅಧಿಕಾರಿಗಳಿಗೆ ಸಿಹಿಸುದ್ದಿ ಸಾರಿದ. ಆದ್ರೆ ಅವರು ಕ್ರೈಸ್ತರಾಗಲಿಲ್ಲ. ಹಾಗಾದ್ರೆ ಅಪೊಸ್ತಲ ಪೌಲ ಅವರ ಮುಂದೆ ವಾದಿಸಿದ್ದು ವ್ಯರ್ಥ ಆಯ್ತಾ? ಇಲ್ಲ. ಇದಾದ ಮೇಲೆ ಪೌಲನನ್ನ ಯೂದಾಯದಲ್ಲಿ ‘ರಾಜ್ಯಪಾಲರ ಹತ್ರ, ರಾಜರ ಹತ್ರ ಎಳ್ಕೊಂಡು ಹೋಗಿದ್ರಿಂದ’ ರೋಮನ್‌ ಅಧಿಕಾರಿಗಳಿಗೆ ಸಾಕ್ಷಿ ಕೊಡೋಕೆ ಆಯ್ತು. ಇಲ್ಲದಿದ್ರೆ ಈ ಅವಕಾಶನೇ ಅವ್ರಿಗೆ ಸಿಕ್ತಿರಲಿಲ್ಲ. (ಲೂಕ 21:12, 13) ಪೌಲ ಪರೀಕ್ಷೆಗಳನ್ನ ಅನುಭವಿಸ್ತಾ ನಂಬಿಕೆ ತೋರಿಸಿದ್ರಿಂದ ತುಂಬಾ ಸಹೋದರ ಸಹೋದರಿಯರಿಗೆ ಪ್ರೋತ್ಸಾಹ ಸಿಕ್ತು.—ಫಿಲಿ. 1:12-14.

21. ಸಾರೋ ಕೆಲಸನ ಮಾಡ್ತಾ ಇದ್ರೆ ಯಾವ ಒಳ್ಳೇ ಫಲಿತಾಂಶ ಸಿಗುತ್ತೆ?

21 ಇವತ್ತು ಕೂಡ ನಾವು ಪರೀಕ್ಷೆ, ವಿರೋಧ ಬಂದ್ರೂ ಸಾರೋ ಕೆಲಸನ ಮಾಡ್ತಾ ಇದ್ರೆ ಒಳ್ಳೇ ಫಲಿತಾಂಶ ಸಿಕ್ಕೇ ಸಿಗುತ್ತೆ. ಯಾರಿಗೆ ಗೊತ್ತು ಸಿಹಿಸುದ್ದಿ ಕೇಳಿಸ್ಕೊಳ್ಳೋಕೆ ಅವಕಾಶನೇ ಸಿಗದ ಅಧಿಕಾರಿಗಳಿಗೆ ನಾವು ಸಾಕ್ಷಿ ಕೊಡಬಹುದು. ನಾವು ನಂಬಿಕೆ ತೋರಿಸಿದ್ರೆ, ತಾಳ್ಕೊಂಡ್ರೆ ನಮ್ಮ ಕ್ರೈಸ್ತ ಸಹೋದರ ಸಹೋದರಿಯರು ನಮ್ಮನ್ನ ನೋಡಿ ಪ್ರೋತ್ಸಾಹ ಪಡ್ಕೊತಾರೆ. ಇದ್ರಿಂದ ಅವರು ಇನ್ನೂ ಹೆಚ್ಚು ಧೈರ್ಯವಾಗಿ ಸಿಹಿಸುದ್ದಿಯನ್ನ ಎಲ್ಲಾ ಕಡೆ ಸಾರಬಹುದು.

b ಒಂದು ವೇದಿಕೆ ಮೇಲೆ ಇಟ್ಟಿರೋ ಕುರ್ಚಿಯನ್ನ “ನ್ಯಾಯಸ್ಥಾನ” ಅಂತ ಕರೀತಿದ್ರು. ಈ ಉನ್ನತ ಸ್ಥಾನ ನ್ಯಾಯಾಧೀಶನ ತೀರ್ಪು ಕೊನೇ ನಿರ್ಧಾರ ಮತ್ತು ಅದನ್ನ ಎಲ್ರೂ ಗೌರವಿಸಬೇಕು ಅನ್ನೋದನ್ನ ಸೂಚಿಸ್ತಿತ್ತು. ಯೇಸು ಮೇಲೆ ಇದ್ದ ಆರೋಪಗಳ ವಿಚಾರಣೆ ಮಾಡುವಾಗ ಪಿಲಾತ ಕೂಡ ಇಂಥದ್ದೇ ಒಂದು ನ್ಯಾಯಸ್ಥಾನದಲ್ಲಿ ಕೂತಿದ್ದ.

d ರಾಜ ಹೆರೋದ ಅಗ್ರಿಪ್ಪ II” ಅನ್ನೋ ಚೌಕ ನೋಡಿ.

e ಕ್ರೈಸ್ತನಾಗಿದ್ದ ಪೌಲ ಯೇಸುವನ್ನ ಮೆಸ್ಸೀಯ ಅಂತ ಒಪ್ಕೊಂಡ. ಆದ್ರೆ ಯೆಹೂದ್ಯರು ಒಪ್ಕೊಳ್ಳಿಲ್ಲ. ಅದಕ್ಕೆ ಅವರು ಪೌಲನನ್ನ ಧರ್ಮಭ್ರಷ್ಟನ ತರ ನೋಡಿದ್ರು.—ಅ. ಕಾ. 21:21, 27, 28.

f ಪೌಲ “ಮಧ್ಯಾಹ್ನ ಹೊತ್ತಲ್ಲಿ” ಪ್ರಯಾಣ ಮಾಡಿದ್ದರ ಬಗ್ಗೆ ಒಬ್ಬ ಬೈಬಲ್‌ ವಿದ್ವಾಂಸ ಹೀಗೆ ಹೇಳಿದ: “ಸಾಮಾನ್ಯವಾಗಿ ಒಬ್ಬ ಪ್ರಯಾಣಿಕ ಏನಾದ್ರೂ ತುಂಬ ತುರ್ತಿನ ಕೆಲಸ ಇದ್ರೆ ಮಾತ್ರ ಮಧ್ಯಾಹ್ನದ ಸುಡುಬಿಸಿಲಲ್ಲಿ ವಿಶ್ರಾಂತಿ ಪಡ್ಕೊಳ್ಳದೆ ಪ್ರಯಾಣ ಮಾಡ್ತಿದ್ದ. ಇದ್ರಿಂದ ಕ್ರೈಸ್ತರಿಗೆ ಹಿಂಸೆ ಕೊಡೋದ್ರಲ್ಲಿ ಪೌಲನಿಗೆ ಎಷ್ಟು ಆಸಕ್ತಿ ಇತ್ತು ಅಂತ ಗೊತ್ತಾಗುತ್ತೆ.”