ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 4

“ಯೆಹೂದ ಕುಲದ ಸಿಂಹ”

“ಯೆಹೂದ ಕುಲದ ಸಿಂಹ”

“ನಾನೇ ಅವನು”

1-3. ಯೇಸುವಿಗೆ ಯಾವ ಅಪಾಯ ಬಂದೆರಗುತ್ತದೆ? ಅವನು ಹೇಗೆ ಪ್ರತಿಕ್ರಿಯಿಸುತ್ತಾನೆ?

ಜನರ ಗುಂಪೊಂದು ಯೇಸುವನ್ನು ಬಂಧಿಸಲಿಕ್ಕಾಗಿ ಹುಡುಕುತ್ತಾ ಬರುತ್ತಿದೆ. ಕತ್ತಿ ಮತ್ತು ದೊಣ್ಣೆಗಳನ್ನು ಹಿಡಿದ ಆ ದೊಡ್ಡ ಗುಂಪಿನೊಂದಿಗೆ ಸೈನಿಕರೂ ಇದ್ದಾರೆ. ಎಲ್ಲರ ಮನಸ್ಸಲ್ಲೂ ಕೇಡುಬಗೆಯುವ ಒಂದೇ ಒಂದು ಉದ್ದೇಶ ಕಾಣಬರುತ್ತಿದೆ. ಅವರು ಕತ್ತಲೆಯಲ್ಲಿ ಯೆರೂಸಲೇಮಿನ ಬೀದಿಯಿಂದ ಹೊರಟು ಕಿದ್ರೋನ್‌ ಕಣಿವೆಯ ಕಡೆಯಿಂದ ಆಲೀವ್‌ ಗುಡ್ಡದೆಡೆಗೆ ಹೋಗುತ್ತಿದ್ದಾರೆ. ಆಕಾಶದಲ್ಲಿ ಪೂರ್ಣ ಚಂದ್ರನಿರುವುದಾದರೂ ಅವರು ದೀವಟಿಗೆಗಳನ್ನೂ ದೀಪಗಳನ್ನೂ ಹಿಡಿದುಕೊಂಡಿದ್ದಾರೆ. ಅವರು ದೀಪಗಳನ್ನು ಹಿಡಿದಿರುವುದು ಮೋಡಗಳು ಚಂದ್ರನ ಬೆಳಕನ್ನು ಮರೆಮಾಡಿರುವುದರಿಂದ ದಾರಿಯನ್ನು ಬೆಳಗಿಸಲಿಕ್ಕೋ ಅಥವಾ ಯಾರನ್ನು ಹುಡುಕುತ್ತಿದ್ದಾರೋ ಅವನು ಕತ್ತಲೆಯಲ್ಲಿ ಅಡಗಿಕೊಂಡಿರಬಹುದು ಎಂಬ ಕಾರಣಕ್ಕೋ ಗೊತ್ತಿಲ್ಲ. ಆದರೆ ಇದಂತೂ ಸತ್ಯ: ಯೇಸು ಹೆದರಿಕೆಯಿಂದ ಮುದುಡಿ ಕುಳಿತಿರುತ್ತಾನೆ ಎಂದು ಯಾರಾದರೂ ನೆನಸಿದ್ದರೆ ಅವರಿಗೆ ಯೇಸುವಿನ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲ ಎಂದರ್ಥ.

2 ತನ್ನ ಮುಂದಿರುವ ಅಪಾಯದ ಬಗ್ಗೆ ಯೇಸುವಿಗೂ ಚೆನ್ನಾಗಿ ಗೊತ್ತಿತ್ತು. ಆದರೂ ತಪ್ಪಿಸಿಕೊಂಡು ಓಡುವ ಬದಲು ತಾನೆಲ್ಲಿದ್ದನೋ ಅಲ್ಲಿಯೇ ಇರುತ್ತಾನೆ. ಗುಂಪು ಹತ್ತಿರ ಬರುತ್ತದೆ. ಒಂದೊಮ್ಮೆ ಯೇಸುವಿನ ಭರವಸಾರ್ಹ ಸ್ನೇಹಿತನಾಗಿದ್ದ ಯೂದನೇ ಅದರ ನೇತೃತ್ವ ವಹಿಸಿರುತ್ತಾನೆ. ಕಪಟದಿಂದ ವಂದಿಸಿ ಮುದ್ದಿಡುವ ಮೂಲಕ ಯೂದನು ನಿರ್ಲಜ್ಜೆಯಿಂದ ತನ್ನ ಯಜಮಾನನಿಗೆ ದ್ರೋಹವೆಸಗುತ್ತಾನೆ. ಆದರೂ ಯೇಸು ವಿಚಲಿತನಾಗುವುದಿಲ್ಲ. ಅವನು ಮುಂದಕ್ಕೆ ಹೋಗಿ ಅವರಿಗೆ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳುತ್ತಾನೆ. ಅವರು, “ನಜರೇತಿನ ಯೇಸುವನ್ನು” ಎಂದು ಉತ್ತರಕೊಡುತ್ತಾರೆ.

3 ಬೇರೆ ಯಾರೇ ಆಗಿದ್ದರೂ ಶಸ್ತ್ರಾಸ್ತ್ರಗಳನ್ನು ಹಿಡಿದಿದ್ದ ಅಷ್ಟು ದೊಡ್ಡ ಗುಂಪಿನ ಮುಂದೆ ಹೋಗಲು ಭಯಪಡುತ್ತಿದ್ದರು. ಬಹುಶಃ ತಮ್ಮ ಮುಂದಿದ್ದ ಮನುಷ್ಯ ಸಹ ಹಾಗೆ ಭಯಪಡುತ್ತಾನೆಂದು ಆ ಜನರು ಅಂದುಕೊಂಡಿರಬೇಕು. ಆದರೆ ಯೇಸು ಧೃತಿಗೆಡುವುದಿಲ್ಲ, ಓಡಿಹೋಗುವುದೂ ಇಲ್ಲ, ಹೆದರಿ ಏನೋ ಒಂದು ಸುಳ್ಳನ್ನೂ ಒದರುವುದಿಲ್ಲ. ಬದಲಿಗೆ “ನಾನೇ ಅವನು” ಎಂದವರಿಗೆ ಹೇಳುತ್ತಾನೆ. ಅವನು ಶಾಂತನಾಗಿ ಯಾವುದೇ ಅಳುಕಿಲ್ಲದೇ ಧೈರ್ಯದಿಂದಿರುವುದನ್ನು ನೋಡಿ ಆ ಜನರು ಅಚ್ಚರಿಪಡುತ್ತಾರೆ. ಹೌಹಾರಿ ಹಿಂದೆ ಸರಿದು ನೆಲಕ್ಕೆ ಬೀಳುತ್ತಾರೆ.—ಯೋಹಾನ 18:1-6; ಮತ್ತಾಯ 26:45-50; ಮಾರ್ಕ 14:41-46.

4-6. (ಎ) ದೇವರ ಮಗನನ್ನು ಯಾವುದಕ್ಕೆ ಹೋಲಿಸಲಾಗಿದೆ? ಏಕೆ? (ಬಿ) ಯೇಸು ಧೈರ್ಯವನ್ನು ತೋರಿಸಿದ ಮೂರು ಕ್ಷೇತ್ರಗಳಾವುವು?

4 ಅಂಥ ಭಾರಿ ಅಪಾಯವನ್ನು ಯೇಸು ಸ್ವಲ್ಪವೂ ವಿಚಲಿತನಾಗದೆ ತನ್ನನ್ನು ತಾನೇ ನಿಗ್ರಹಿಸಿಕೊಂಡು ಹೇಗೆ ಎದುರಿಸಸಾಧ್ಯವಾಯಿತು? ಒಂದೇ ಪದದಲ್ಲಿ ಉತ್ತರಿಸುವುದಾದರೆ ಅವನಲ್ಲಿದ್ದ ಧೈರ್ಯವೇ ಅದಕ್ಕೆ ಕಾರಣ. ಇದು ಒಬ್ಬ ನಾಯಕನಲ್ಲಿ ಇರಲೇಬೇಕಾದ ಮತ್ತು ಇತರರು ಬಯಸುವ ಕೆಲವು ಗುಣಗಳಲ್ಲಿ ಒಂದು. ಧೈರ್ಯದ ವಿಷಯದಲ್ಲಿ ಯಾವ ಮಾನವನೂ ಯೇಸುವನ್ನು ಮೀರಿಸಸಾಧ್ಯವಿಲ್ಲ, ಅವನಿಗೆ ಸರಿಸಾಟಿಯೂ ಆಗಸಾಧ್ಯವಿಲ್ಲ. ಹಿಂದಿನ ಅಧ್ಯಾಯದಲ್ಲಿ ಯೇಸು ಎಷ್ಟು ದೀನನೂ ನಮ್ರನೂ ಅಗಿದ್ದನೆಂಬುದನ್ನು ನಾವು ಕಲಿತೆವು. ಆದ್ದರಿಂದ ಅವನನ್ನು “ಕುರಿಮರಿ” ಎಂದು ಸೂಕ್ತವಾಗಿಯೇ ಕರೆಯಲಾಗಿದೆ. (ಯೋಹಾನ 1:29) ಆದರೆ ಯೇಸುವಿನ ಧೈರ್ಯವು ಅವನಿಗೆ ಇನ್ನೊಂದು ನಿರೂಪಣೆಯನ್ನು ಕೊಡುತ್ತದೆ. ದೇವರ ಮಗನನ್ನು “ಯೆಹೂದ ಕುಲದ ಸಿಂಹ” ಎಂದು ಸಹ ಬೈಬಲ್‌ ಹೇಳುತ್ತದೆ.—ಪ್ರಕಟನೆ 5:5.

5 ಸಿಂಹ ಅಂದ ಕೂಡಲೇ ನಮ್ಮ ಮನಸ್ಸಿನ ಮುಂದೆ ಧೈರ್ಯದ ಚಿತ್ರಣ ಮೂಡುತ್ತದೆ. ಪ್ರಾಯದ ಸಿಂಹದೆದುರು ನೀವೆಂದಾದರೂ ಮುಖಾಮುಖಿ ನಿಂತಿದ್ದೀರೋ? ಹಾಗೇನಾದರೂ ನಿಂತಿರುವಲ್ಲಿ ಖಂಡಿತ ನೀವು ಮೃಗಾಲಯದಲ್ಲಿನ ಬೋನಿನಾಚೆ ಸುರಕ್ಷಿತ ಸ್ಥಳದಲ್ಲಿ ನಿಂತಿದ್ದಿರಬೇಕು. ಆದರೆ ಅಂಥ ಅನುಭವವೂ ಎದೆಯಲ್ಲಿ ನಡುಕವನ್ನು ಹುಟ್ಟಿಸುತ್ತದೆ. ಈ ಬಲಾಢ್ಯ ಜೀವಿಯ ಮುಖವನ್ನು ನೀವು ನೋಡುವಲ್ಲಿ ಅದು ಕೂಡ ನಿಮ್ಮನ್ನೇ ದಿಟ್ಟಿಸಿನೋಡುತ್ತದೆ. ಸಿಂಹವೊಂದು ಯಾವುದಕ್ಕಾದರೂ ಹೆದರಿ ಓಡಿಹೋಗಿದ್ದನ್ನು ನೀವೆಂದಾದರೂ ಕೇಳಿದ್ದುಂಟೋ? “ಯಾವದಕ್ಕೂ ಹೆದರಿ ಓರೆಯಾಗದ ಮೃಗರಾಜನಾದ ಸಿಂಹ,” ಎಂದು ಬೈಬಲ್‌ ಸಹ ತಿಳಿಸುತ್ತದೆ. (ಜ್ಞಾನೋಕ್ತಿ 30:30) ಯೇಸುವಿನಲ್ಲೂ ಅಂಥದ್ದೇ ಧೈರ್ಯವಿದೆ.

6 ಅವನು ಧೈರ್ಯದಿಂದ ಸತ್ಯದ ಪರವಾಗಿ ನಿಂತನು, ನ್ಯಾಯವನ್ನು ಎತ್ತಿಹಿಡಿದನು ಮತ್ತು ವಿರೋಧವನ್ನು ಎದುರಿಸಿದನು. ಯೇಸು ಸಿಂಹದಂತೆ ಧೈರ್ಯ ತೋರಿಸಿದ ಈ ಮೂರು ಕ್ಷೇತ್ರಗಳನ್ನು ನಾವೀಗ ಚರ್ಚಿಸೋಣ. ಅಷ್ಟೇ ಅಲ್ಲ, ನಾವೆಲ್ಲರೂ ಸ್ವಭಾವತಃ ಧೈರ್ಯಶಾಲಿಗಳು ಆಗಿರಲಿ ಇಲ್ಲದಿರಲಿ ಧೈರ್ಯವನ್ನು ತೋರಿಸುವುದರಲ್ಲಿ ಯೇಸುವನ್ನು ಹೇಗೆ ಅನುಕರಿಸಬಹುದು ಎಂಬುದನ್ನೂ ನೋಡೋಣ.

ಅವನು ಧೈರ್ಯದಿಂದ ಸತ್ಯದ ಪರ ನಿಂತನು

7-9. (ಎ) ಯೇಸು 12 ವರ್ಷದವನಾಗಿದ್ದಾಗ ಏನು ಸಂಭವಿಸಿತು? ಆ ಸನ್ನಿವೇಶ ಸ್ವಲ್ಪ ಹೆದರಿಕೆ ಹುಟ್ಟಿಸುವಂತಿತ್ತು ಏಕೆ? (ಬಿ) ದೇವಾಲಯದಲ್ಲಿ ಬೋಧಕರೊಂದಿಗೆ ಇದ್ದಾಗ ಯೇಸು ಹೇಗೆ ಧೈರ್ಯ ತೋರಿಸಿದನು?

7 “ಸುಳ್ಳಿಗೆ ತಂದೆ” ಆಗಿರುವ ಸೈತಾನನು ಆಳುತ್ತಿರುವ ಲೋಕದಲ್ಲಿ ಸತ್ಯದ ಪರವಾಗಿ ನಿಲ್ಲಲು ಧೈರ್ಯ ಬೇಕೇ ಬೇಕು. (ಯೋಹಾನ 8:44; 14:30) ಅಂಥ ನಿಲುವನ್ನು ತೆಗೆದುಕೊಳ್ಳಲಿಕ್ಕಾಗಿ ಯೇಸು ದೊಡ್ಡವನಾಗುವ ತನಕ ಕಾಯಲಿಲ್ಲ. ಅವನು 12 ವರ್ಷದವನಾಗಿದ್ದಾಗ ಪಸ್ಕಹಬ್ಬವನ್ನು ಆಚರಿಸಲು ಯೆರೂಸಲೇಮಿಗೆ ಹೋದ ಸಂದರ್ಭದಲ್ಲಿ ಜನಜಂಗುಳಿಯಲ್ಲಿ ಹೆತ್ತವರಿಂದ ಬೇರ್ಪಟ್ಟನು. ಯೋಸೇಫ ಮತ್ತು ಮರಿಯ ಮೂರು ದಿನಗಳ ತನಕ ಹುಡುಗನಿಗಾಗಿ ಹುಡುಕಿ ಹುಡುಕಿ ಸುಸ್ತಾದರು. ಕೊನೆಯಲ್ಲಿ ಅವನನ್ನು ದೇವಾಲಯದಲ್ಲಿ ಕಂಡುಕೊಂಡರು. ಅಲ್ಲಿ ಅವನೇನು ಮಾಡುತ್ತಿದ್ದನು? “ದೇವಾಲಯದಲ್ಲಿ ಬೋಧಕರ ಮಧ್ಯೆ ಕುಳಿತುಕೊಂಡು ಅವರಿಗೆ ಕಿವಿಗೊಡುತ್ತಾ ಪ್ರಶ್ನೆಯನ್ನು ಕೇಳುತ್ತಾ” ಇದ್ದನು. (ಲೂಕ 2:41-50) ಅಲ್ಲಿದ್ದ ಸನ್ನಿವೇಶವನ್ನು ಸ್ವಲ್ಪ ಗಮನಿಸಿ.

8 ಇತಿಹಾಸಕಾರರು ಹೇಳುವ ಪ್ರಕಾರ, ಕೆಲವು ಅಗ್ರಗಣ್ಯ ಧಾರ್ಮಿಕ ಮುಖಂಡರು ಹಬ್ಬದ ನಂತರ ದೇವಾಲಯದಲ್ಲಿ ಉಳಿದುಕೊಂಡು ವಿಶಾಲವಾದ ಅಂಗಳದಲ್ಲಿ ಕುಳಿತು ಬೋಧಿಸುತ್ತಿದ್ದರು. ಜನರು ಅವರ ಪಾದಗಳ ಬಳಿ ಕುಳಿತು ಅವರ ಮಾತುಗಳನ್ನು ಆಲಿಸುತ್ತಿದ್ದರು ಮತ್ತು ಪ್ರಶ್ನೆಗಳನ್ನು ಕೇಳುತ್ತಿದ್ದರು. ಆ ಬೋಧಕರು ಸುಶಿಕ್ಷಿತರಾಗಿದ್ದರು. ಅವರಿಗೆ ಮೋಶೆಯ ಧರ್ಮಶಾಸ್ತ್ರದ ಒಳ್ಳೇ ತಿಳಿವಳಿಕೆಯಿತ್ತು. ಅಷ್ಟೇ ಅಲ್ಲ ವರ್ಷಗಳಾದ್ಯಂತ ಕೂಡಿಸುತ್ತಾ ಬಂದ ಕ್ಲಿಷ್ಟಕರವಾದ ಅಸಂಖ್ಯ ಮಾನವ ನಿರ್ಮಿತ ನಿಯಮಗಳು ಮತ್ತು ಪದ್ಧತಿಗಳನ್ನು ಸಹ ತಿಳಿದುಕೊಂಡಿದ್ದರು. ಅವರ ಮಧ್ಯೆ ನೀವು ಕುಳಿತುಕೊಂಡಿರುವುದಾದರೆ ನಿಮಗೆ ಹೇಗನಿಸುತ್ತಿತ್ತು? ಹೆದರಿಕೆಯಾಗುತ್ತಿತ್ತೋ? ಹಾಗಾಗುವುದು ಸಹಜವೇ. ಒಂದುವೇಳೆ ನೀವು ಕೇವಲ 12 ವರ್ಷ ಪ್ರಾಯದವರಾಗಿರುತ್ತಿದ್ದರೆ ಆಗ? ಹೆಚ್ಚಿನ ಮಕ್ಕಳು ನಾಚಿಕೆ ಸ್ವಭಾವದವರಾಗಿರುತ್ತಾರೆ. (ಯೆರೆಮೀಯ 1:6) ಕೆಲವರು ಶಾಲೆಗಳಲ್ಲಿ ಅಧ್ಯಾಪಕರಿಗೆ ಮುಖ ತೋರಿಸಲಿಕ್ಕೂ ಹೆದರುತ್ತಾರೆ. ಅಧ್ಯಾಪಕರು ಏನಾದರೂ ಮಾಡಲು ಇಲ್ಲವೇ ಹೇಳಲು ಕೇಳಿಕೊಂಡಾಗ ಎಲ್ಲರ ಮುಂದೆ ನಿಲ್ಲಬೇಕಲ್ಲ, ಏನಾದರೂ ತಪ್ಪಾದರೆ ಎಲ್ಲರ ಮುಂದೆ ಮುಜುಗರ ಅನುಭವಿಸಬೇಕಾಗುತ್ತದಲ್ಲ ಎಂಬ ಭಯ ಅವರಿಗಿರಬಹುದು.

9 ಆದಾಗ್ಯೂ ಯೇಸು ಇಲ್ಲಿ ಆ ಸುಶಿಕ್ಷಿತ ಜನರ ನಡುವೆಯೇ ಕುಳಿತು ನಿರ್ಭಯದಿಂದ ಮರ್ಮಭೇದಕ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ. ಅಷ್ಟೇ ಅಲ್ಲ, ಆ ವೃತ್ತಾಂತ ಇನ್ನೂ ತಿಳಿಸುವುದು: “ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದವರೆಲ್ಲರೂ ಅವನ ತಿಳಿವಳಿಕೆಗೂ ಉತ್ತರಗಳಿಗೂ ಆಶ್ಚರ್ಯಪಡುತ್ತಾ ಇದ್ದರು.” (ಲೂಕ 2:47) ಆ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಅವನು ಏನು ಹೇಳಿದನೆಂಬುದಾಗಿ ಬೈಬಲ್‌ ನಮಗೆ ತಿಳಿಸುವುದಿಲ್ಲ. ಆದರೆ ಆ ಧಾರ್ಮಿಕ ಬೋಧಕರು ಕಲಿಸುತ್ತಿದ್ದ ಸುಳ್ಳನ್ನೇ ಗಿಳಿಪಾಠವಾಗಿ ಅವನು ಪುನರುಚ್ಚರಿಸುತ್ತಿರಲಿಲ್ಲ ಎಂಬುದಂತೂ ನಿಜ. (1 ಪೇತ್ರ 2:22) ಅದಕ್ಕೆ ಬದಲಾಗಿ ಅವನು ದೇವರ ವಾಕ್ಯದ ಸತ್ಯವನ್ನು ಎತ್ತಿಹಿಡಿದನು. ಕೇವಲ 12 ವರ್ಷದ ಬಾಲಕನು ಇಷ್ಟೊಂದು ಒಳನೋಟವುಳ್ಳವನಾಗಿ ಧೈರ್ಯದಿಂದ ಮಾತನಾಡುತ್ತಿರುವುದನ್ನು ನೋಡಿ ಅಲ್ಲಿದ್ದವರು ಆಶ್ಚರ್ಯಪಟ್ಟರು.

ಅನೇಕ ಕ್ರೈಸ್ತ ಯುವ ಜನರು ತಮ್ಮ ನಂಬಿಕೆಯನ್ನು ಧೈರ್ಯದಿಂದ ತಿಳಿಸುತ್ತಾರೆ

10. ಇಂದು ಯುವ ಕ್ರೈಸ್ತರು ಹೇಗೆ ಯೇಸುವಿನ ಧೈರ್ಯವನ್ನು ಅನುಕರಿಸುತ್ತಿದ್ದಾರೆ?

10 ಇಂದು ಅಸಂಖ್ಯ ಯುವ ಕ್ರೈಸ್ತರು ಯೇಸುವಿನ ಹೆಜ್ಜೆಜಾಡನ್ನು ಅನುಸರಿಸುತ್ತಿದ್ದಾರೆ. ಅವರು ಯೇಸುವಿನಂತೆ ಪರಿಪೂರ್ಣರಲ್ಲ ನಿಜ. ಆದರೂ ಸತ್ಯದ ಪರವಾಗಿ ನಿಲುವು ತೆಗೆದುಕೊಳ್ಳುವುದರಲ್ಲಿ ಯೇಸುವನ್ನು ಅನುಕರಿಸುತ್ತಾರೆ. ಅದಕ್ಕಾಗಿ ತಾವು ಸಾಕಷ್ಟು ದೊಡ್ಡವರಾಗಬೇಕೆಂಬುದಾಗಿ ಕಾಯುವುದಿಲ್ಲ. ಶಾಲೆಯಲ್ಲಿ ಅಥವಾ ತಾವು ನೆಲೆಸುವ ಸಮುದಾಯದಲ್ಲಿ ಅವರು ಜನರಿಗೆ ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳುತ್ತಾರೆ, ಕಿವಿಗೊಡುತ್ತಾರೆ ಮತ್ತು ಗೌರವಪೂರ್ವಕವಾಗಿ ಸತ್ಯವನ್ನು ಹಂಚಿಕೊಳ್ಳುತ್ತಾರೆ. (1 ಪೇತ್ರ 3:15) ತಮ್ಮ ಸಹಪಾಠಿಗಳು, ಅಧ್ಯಾಪಕರು ಮತ್ತು ನೆರೆಹೊರೆಯವರು ಕ್ರಿಸ್ತನ ಹಿಂಬಾಲಕರಾಗುವಂತೆ ಈ ಯುವ ಜನರು ಸಹಾಯ ಮಾಡಿದ್ದಾರೆ. ಅವರು ತೋರಿಸುವ ಧೈರ್ಯ ಯೆಹೋವನನ್ನು ಎಷ್ಟು ಸಂತೋಷಪಡಿಸಿರಬೇಕು! ಆತನ ವಾಕ್ಯವು ಇಂಥ ಯುವ ಜನರನ್ನು ಚೈತನ್ಯದಾಯಕ, ಹಿತಕರ ಹಾಗೂ ಅಸಂಖ್ಯವಾಗಿರುವ ಉದಯಕಾಲದ ಇಬ್ಬನಿಗೆ ಹೋಲಿಸಿದೆ.—ಕೀರ್ತನೆ 110:3.

11, 12. ಯೇಸು ದೊಡ್ಡವನಾದ ಮೇಲೂ ಸತ್ಯವನ್ನು ಸಮರ್ಥಿಸಲಿಕ್ಕಾಗಿ ಹೇಗೆ ಧೈರ್ಯ ತೋರಿಸಿದನು?

11 ದೊಡ್ಡವನಾದ ಮೇಲೂ ಯೇಸು ಸತ್ಯವನ್ನು ಸಮರ್ಥಿಸುವಾಗ ಪುನಃ ಪುನಃ ಧೈರ್ಯ ತೋರಿಸಿದನು. ಅನೇಕರು ಭಯಾನಕವೆಂದು ಪರಿಗಣಿಸುವ ಸನ್ನಿವೇಶ ಅವನಿಗೆ ಶುಶ್ರೂಷೆಯ ಆರಂಭದಲ್ಲೇ ಎದುರಾಯಿತು. ಯೆಹೋವನ ಶತ್ರುಗಳಲ್ಲೇ ಬಲಾಢ್ಯನಾದ ಮತ್ತು ಅಪಾಯಕಾರಿಯಾದ ಸೈತಾನನನ್ನು ಅವನು ಎದುರಿಸಬೇಕಾಯಿತು. ಸ್ವಲ್ಪ ಯೋಚಿಸಿ, ಆಗ ಯೇಸು ಒಬ್ಬ ಪ್ರಧಾನ ದೇವದೂತನಾಗಿರಲಿಲ್ಲ, ಸಾಮಾನ್ಯ ಮನುಷ್ಯನಾಗಿದ್ದನು. ಆದರೂ ಅವನು ಧೈರ್ಯದಿಂದ ಸೈತಾನನನ್ನು ಎದುರಿಸಿದನು. ದೇವಪ್ರೇರಿತ ಶಾಸ್ತ್ರವಚನಗಳನ್ನು ಸೈತಾನನು ತಪ್ಪಾಗಿ ಅನ್ವಯಿಸಿದಾಗ ಅದನ್ನು ಖಂಡಿಸಿದನು. “ಸೈತಾನನೇ ತೊಲಗಿಹೋಗು!” ಎಂದು ಧೈರ್ಯದಿಂದ ಆಜ್ಞಾಪಿಸುವ ಮೂಲಕ ಯೇಸು ಅವನೊಂದಿಗಿನ ಮುಖಾಬಿಲೆಯನ್ನು ಕೊನೆಗೊಳಿಸಿದನು.—ಮತ್ತಾಯ 4:2-11.

12 ಹೀಗೆ, ತನ್ನ ಶುಶ್ರೂಷೆಯ ಆರಂಭದಲ್ಲೇ ಯೇಸು ಮಾದರಿಯನ್ನಿಟ್ಟನು. ತನ್ನ ತಂದೆಯ ವಾಕ್ಯವು ತಿರುಚಲ್ಪಟ್ಟಾಗ ಅಥವಾ ತಪ್ಪಾಗಿ ಅನ್ವಯಿಸಲ್ಪಟ್ಟಾಗ ಅವನು ಸುಮ್ಮನಿರಲಿಲ್ಲ. ಧೈರ್ಯದಿಂದ ಅದನ್ನು ಸಮರ್ಥಿಸುತ್ತಾ ಎತ್ತಿಹಿಡಿದನು. ಧಾರ್ಮಿಕ ವಿಷಯಗಳಲ್ಲಿ ಇಂಥ ಅಪ್ರಾಮಾಣಿಕತೆಯು ಇಂದಿನಂತೆ ಅಂದು ಕೂಡ ಸರ್ವಸಾಮಾನ್ಯವಾಗಿತ್ತು. ತನ್ನ ದಿನಗಳ ಧಾರ್ಮಿಕ ನಾಯಕರುಗಳಿಗೆ ಯೇಸುವಂದದ್ದು: “ನೀವು ಪಾಲಿಸುತ್ತಾ ಬಂದಿರುವ ಸಂಪ್ರದಾಯದ ಮೂಲಕ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ.” (ಮಾರ್ಕ 7:13) ಆ ನಾಯಕರನ್ನು ಜನಸಾಮಾನ್ಯರು ಗೌರವಾದರಗಳಿಂದ ಕಾಣುತ್ತಿದ್ದರು. * ಆದರೆ ಯೇಸು ಅವರನ್ನು ಕುರುಡ ಮಾರ್ಗದರ್ಶಕರು, ಕಪಟಿಗಳು ಎಂದು ನಿರ್ಭಯದಿಂದ ಬಹಿರಂಗವಾಗಿ ಖಂಡಿಸಿದನು. (ಮತ್ತಾಯ 23:13, 16) ಯೇಸುವಿನ ಧೈರ್ಯಭರಿತ ಮಾದರಿಯ ಈ ಅಂಶವನ್ನು ನಾವು ಹೇಗೆ ಅನುಕರಿಸಬಹುದು?

13. ಯೇಸುವನ್ನು ಅನುಕರಿಸುವಾಗ ನಾವು ಏನನ್ನು ನೆನಪಿನಲ್ಲಿಡಬೇಕು? ಆದರೂ ಯಾವ ಅವಕಾಶ ನಮಗಿದೆ?

13 ಒಂದು ವಿಷಯವನ್ನು ನಾವು ನೆನಪಿನಲ್ಲಿಡಬೇಕು. ನಮಗೆ ಯೇಸುವಿನಂತೆ ಹೃದಯಗಳನ್ನು ಓದುವ ಸಾಮರ್ಥ್ಯವಾಗಲಿ, ತೀರ್ಪು ಮಾಡುವ ಅಧಿಕಾರವಾಗಲಿ ಇಲ್ಲ. ಆದರೂ ಸತ್ಯವನ್ನು ಧೈರ್ಯದಿಂದ ಸಮರ್ಥಿಸಿದ ಅವನ ರೀತಿಯನ್ನು ನಾವು ಅನುಕರಿಸಬಹುದು. ಉದಾಹರಣೆಗೆ, ದೇವರ, ಆತನ ಉದ್ದೇಶಗಳ ಮತ್ತು ವಾಕ್ಯದ ಕುರಿತು ಆಗಾಗ್ಗೆ ಕಲಿಸಲ್ಪಡುವ ಧಾರ್ಮಿಕ ಸುಳ್ಳುಗಳನ್ನು ನಾವು ಬಯಲಿಗೆಳೆಯಬಹುದು. ಹೀಗೆ, ಸೈತಾನನ ವಿಚಾರಧಾರೆಗಳಿಂದಾಗಿ ಕಾರ್ಗತ್ತಲಲ್ಲಿರುವ ಈ ಲೋಕದಲ್ಲಿ ಬೆಳಕನ್ನು ಪಸರಿಸಸಾಧ್ಯವಿದೆ. (ಮತ್ತಾಯ 5:14; ಪ್ರಕಟನೆ 12:9, 10) ಜನರ ಹೃದಯಗಳಲ್ಲಿ ಕಡುಭಯವನ್ನು ತುಂಬಿಸಿರುವ ಮತ್ತು ದೇವರೊಂದಿಗಿನ ಅವರ ಸಂಬಂಧಕ್ಕೆ ವಿಷಬೆರೆಸಿರುವ ಸುಳ್ಳು ಬೋಧನೆಗಳ ದಾಸತ್ವದಿಂದ ಹೊರಬರಲು ನಾವು ಅವರಿಗೆ ಸಹಾಯ ಮಾಡುತ್ತೇವೆ. “ಸತ್ಯವು ನಿಮ್ಮನ್ನು ಬಿಡುಗಡೆಮಾಡುವುದು” ಎಂಬ ಯೇಸುವಿನ ಮಾತುಗಳ ನೆರವೇರಿಕೆಯನ್ನು ನೋಡುವ ಎಂಥ ಅವಕಾಶ ನಮಗಿದೆ!—ಯೋಹಾನ 8:32.

ಅವನು ಧೈರ್ಯದಿಂದ ನ್ಯಾಯವನ್ನು ಎತ್ತಿಹಿಡಿದನು

14, 15. (ಎ) ಯೇಸು “ನ್ಯಾಯವೇನೆಂಬುದನ್ನು” ಸ್ಪಷ್ಟಪಡಿಸಿದ ಒಂದು ವಿಧ ಯಾವುದು? (ಬಿ) ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡುತ್ತಿದ್ದಾಗ ಯೇಸು ಯಾವ ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ?

14 ಮೆಸ್ಸೀಯನು ಅನ್ಯಜನಾಂಗಗಳಿಗೆ “ನ್ಯಾಯವೇನೆಂಬುದನ್ನು” ಸ್ಪಷ್ಟಪಡಿಸುವನು ಎಂಬುದಾಗಿ ಬೈಬಲ್‌ ಪ್ರವಾದನೆ ಮುಂತಿಳಿಸಿತು. (ಮತ್ತಾಯ 12:18; ಯೆಶಾಯ 42:1) ನಿಜವಾಗಿಯೂ ಯೇಸು ಭೂಮಿಯಲ್ಲಿದ್ದಾಗ ಹಾಗೆ ಮಾಡಲಾರಂಭಿಸಿದನು. ಬಹು ಧೈರ್ಯದಿಂದ ಅವನು ಜನರೊಂದಿಗಿನ ವ್ಯವಹಾರದಲ್ಲಿ ಯಾವಾಗಲೂ ತಾನು ನ್ಯಾಯವಂತನು ಮತ್ತು ನಿಷ್ಪಕ್ಷಪಾತಿ ಎಂದು ತೋರಿಸಿದನು. ಉದಾಹರಣೆಗೆ, ಅವನು ತನ್ನ ಸುತ್ತಮುತ್ತಲೂ ಪ್ರಚಲಿತದಲ್ಲಿದ್ದ ಅಶಾಸ್ತ್ರೀಯವಾದ ಅಂಧಾಭಿಮಾನ ಮತ್ತು ಧರ್ಮಾಂಧತೆಯನ್ನು ಅಂಗೀಕರಿಸಲು ನಿರಾಕರಿಸಿದನು.

15 ಯೇಸು ಸಿಖರ್‌ ಎಂಬ ಪಟ್ಟಣದ ಬಾವಿಯ ಬಳಿ ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡಿದಾಗ ಅವನ ಶಿಷ್ಯರಿಗೆ ನಂಬಲಾಗಲಿಲ್ಲ. ಏಕೆ? ಆ ದಿನಗಳಲ್ಲಿ ಯೆಹೂದ್ಯರು ಸಮಾರ್ಯದವರನ್ನು ಕಂಡರೆ ಅಸಹ್ಯಪಡುತ್ತಿದ್ದರು. ಈ ಕೀಳ್ಭಾವನೆ ತುಂಬ ಸಮಯದ ಮುಂಚಿನಿಂದಲೂ ಅಸ್ತಿತ್ವದಲ್ಲಿತ್ತು. (ಎಜ್ರ 4:4) ಅದಲ್ಲದೆ, ಕೆಲವು ರಬ್ಬಿಗಳು ಸ್ತ್ರೀಯರನ್ನು ಹೀನಾಯವಾಗಿ ಕಾಣುತ್ತಿದ್ದರು. ಸಮಯಾನಂತರ ಬರವಣಿಗೆಯಲ್ಲಿ ಹಾಕಲ್ಪಟ್ಟ ರಬ್ಬಿಗಳ ನಿಯಮಗಳಲ್ಲಿ ಪುರುಷನು ಸ್ತ್ರೀಯೊಂದಿಗೆ ಮಾತನಾಡಬಾರದೆಂಬ ನಿಯಮವಿತ್ತು. ದೇವರ ಧರ್ಮಶಾಸ್ತ್ರವನ್ನು ತಿಳಿದುಕೊಳ್ಳಲಿಕ್ಕೆ ಸ್ತ್ರೀಯರು ಅರ್ಹರಲ್ಲ ಎಂಬುದಾಗಿ ಸಹ ಅವರು ಹೇಳುತ್ತಿದ್ದರು. ಸಮಾರ್ಯದ ಸ್ತ್ರೀಯರನ್ನಂತೂ ಅಶುದ್ಧರೆಂದೇ ಪರಿಗಣಿಸಲಾಗುತ್ತಿತ್ತು. ನ್ಯಾಯವಲ್ಲದ ಅಂಥ ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಯೇಸು ಗಣನೆಗೆ ತೆಗೆದುಕೊಳ್ಳದೇ ಸಮಾರ್ಯದ ಆ ಸ್ತ್ರೀಗೆ (ಆಕೆ ಅನೈತಿಕ ಜೀವನ ನಡೆಸುತ್ತಿದ್ದಳು) ಬಹಿರಂಗವಾಗಿ ಬೋಧಿಸಿದನು. ತಾನು ಮೆಸ್ಸೀಯನೆಂಬ ಗುರುತನ್ನೂ ಆಕೆಗೆ ಪ್ರಕಟಪಡಿಸಿದನು.—ಯೋಹಾನ 4:5-27.

16. ಪೂರ್ವಕಲ್ಪಿತ ಅಭಿಪ್ರಾಯದ ವಿಷಯದಲ್ಲಿ ಇತರರಿಗಿಂತ ಭಿನ್ನರಾಗಿರಲು ಕ್ರೈಸ್ತರಿಗೆ ಧೈರ್ಯ ಅಗತ್ಯವೇಕೆ?

16 ತುಂಬ ಕೀಳಾಗಿ ಪೂರ್ವಕಲ್ಪಿತ ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿಗಳನ್ನು ನೀವು ನೋಡಿದ್ದೀರೋ? ಅಂಥವರು ಇನ್ನೊಂದು ಜಾತಿಯ ಇಲ್ಲವೇ ರಾಷ್ಟ್ರದ ಜನರನ್ನು ಗೇಲಿಮಾಡುತ್ತಾರೆ, ವಿರುದ್ಧ ಲಿಂಗದವರ ಕುರಿತು ಅಸಹ್ಯವಾಗಿ ಮಾತಾಡುತ್ತಾರೆ ಅಥವಾ ಆರ್ಥಿಕವಾಗಿ ಇಲ್ಲವೇ ಸಾಮಾಜಿಕವಾಗಿ ಕಡಿಮೆ ಅಂತಸ್ತುಳ್ಳವರನ್ನು ತುಚ್ಛವಾಗಿ ಕಾಣುತ್ತಾರೆ. ಕ್ರಿಸ್ತನ ಹಿಂಬಾಲಕರು ಅಂಥ ದ್ವೇಷಮಯ ಭಾವನೆಗಳನ್ನು ಬೆಂಬಲಿಸುವುದಿಲ್ಲ. ಅಂಥ ಭಾವನೆಯ ಚಿಕ್ಕ ಸುಳಿವನ್ನು ಸಹ ತಮ್ಮ ಹೃದಯದಿಂದ ಹೋಗಲಾಡಿಸಲು ಬಹಳವಾಗಿ ಶ್ರಮಿಸುತ್ತಾರೆ. (ಅ. ಕಾರ್ಯಗಳು 10:34) ಈ ವಿಷಯದಲ್ಲಿ ನ್ಯಾಯವಂತರಾಗಿರಲು ನಮ್ಮಲ್ಲಿ ಪ್ರತಿಯೊಬ್ಬರೂ ಧೈರ್ಯವನ್ನು ಬೆಳೆಸಿಕೊಳ್ಳಬೇಕು.

17. ದೇವಾಲಯದಲ್ಲಿ ಯೇಸು ಯಾವ ಕ್ರಿಯೆ ಕೈಗೊಂಡನು? ಏಕೆ?

17 ಯೇಸುವಿನಲ್ಲಿದ್ದ ಧೈರ್ಯ, ದೇವರ ಸೇವಕರ ಮತ್ತು ಆರಾಧನಾ ಏರ್ಪಾಡುಗಳ ಶುದ್ಧತೆಗಾಗಿ ಹೋರಾಡುವಂತೆಯೂ ಅವನನ್ನು ಪ್ರಚೋದಿಸಿತು. ತನ್ನ ಶುಶ್ರೂಷೆಯ ಆರಂಭದಲ್ಲಿ ಯೇಸು ಯೆರೂಸಲೇಮಿನ ದೇವಾಲಯವನ್ನು ಪ್ರವೇಶಿಸಿದಾಗ ಅಲ್ಲಿ ಮಾರಾಟಗಾರರು ಮತ್ತು ಹಣವಿನಿಮಯಗಾರರು ವ್ಯಾಪಾರವಹಿವಾಟು ನಡೆಸುತ್ತಿರುವುದನ್ನು ನೋಡಿ ಅವನಿಗೆ ಆಘಾತವಾಯಿತು. ಅದನ್ನು ಸಹಿಸಲಾರದೆ ನೀತಿಯುತ ಕೋಪದಿಂದ ಯೇಸು ಆ ಲೋಭಿ ಜನರನ್ನು ಅವರ ಸಾಮಾನುಗಳೊಂದಿಗೆ ಹೊರದಬ್ಬಿದನು. (ಯೋಹಾನ 2:13-17) ತನ್ನ ಶುಶ್ರೂಷೆಯ ಕೊನೆಯಲ್ಲೂ ಅಂಥದ್ದೇ ಕ್ರಿಯೆಗೈದನು. (ಮಾರ್ಕ 11:15-18) ಹಾಗೆ ಮಾಡಿದ್ದಕ್ಕಾಗಿ ಅವನು ಕೆಲವರ ಶತ್ರುತ್ವವನ್ನು ಕಟ್ಟಿಕೊಳ್ಳಬೇಕಾಯಿತು. ಆದರೂ ಅವನು ಹಿಂದೆಸರಿಯಲಿಲ್ಲ. ಏಕೆ? ಬಾಲ್ಯದಿಂದಲೂ ಆ ದೇವಾಲಯವನ್ನು ಅವನು ತನ್ನ ತಂದೆಯ ಮನೆಯೆಂದು ಕರೆಯುತ್ತಿದ್ದನು ಮತ್ತು ಅದನ್ನೇ ಕ್ರಿಯೆಯಲ್ಲಿ ತೋರಿಸಿಕೊಟ್ಟನು. (ಲೂಕ 2:49) ದೇವಾಲಯದಲ್ಲಿ ನಡೆಸಲಾಗುತ್ತಿದ್ದ ಶುದ್ಧಾರಾಧನೆಯನ್ನು ಕಲುಷಿತಗೊಳಿಸುವ ಪ್ರಯತ್ನ ನಡೆಯುತ್ತಿದ್ದುದು ತೀರಾ ಅನ್ಯಾಯವಾಗಿತ್ತು ಮತ್ತು ಅವನು ಅದನ್ನೆಂದೂ ಮನ್ನಿಸಸಾಧ್ಯವಿರಲಿಲ್ಲ. ಆಲಯದ ಕಡೆಗಿನ ಅಭಿಮಾನ ತಕ್ಕ ಕ್ರಿಯೆ ಕೈಗೊಳ್ಳಲು ಬೇಕಾದ ಧೈರ್ಯವನ್ನು ಅವನಿಗೆ ಕೊಟ್ಟಿತು.

18. ಸಭೆಯ ಶುದ್ಧತೆಯ ವಿಷಯದಲ್ಲಿ ಇಂದು ಕ್ರೈಸ್ತರು ಹೇಗೆ ಧೈರ್ಯ ತೋರಿಸಬಲ್ಲರು?

18 ತದ್ರೀತಿಯಲ್ಲಿ ಇಂದು ಕ್ರಿಸ್ತನ ಹಿಂಬಾಲಕರು ಕೂಡ ದೇವರ ಸೇವಕರ ಮತ್ತು ಆರಾಧನಾ ಏರ್ಪಾಡುಗಳ ಶುದ್ಧತೆಯನ್ನು ನೋಡಿಕೊಳ್ಳಬೇಕು. ಅವರು, ಜೊತೆಕ್ರೈಸ್ತನೊಬ್ಬನು ಗಂಭೀರ ತಪ್ಪುಕೃತ್ಯವನ್ನು ಮಾಡಿರುವುದನ್ನು ನೋಡಿಯೂ ನೋಡದಂತೆ ಕಣ್ಣು ಮುಚ್ಚಿಕೊಂಡು ಸುಮ್ಮನಿರುವುದಿಲ್ಲ. ಅವರದರ ಕುರಿತು ಆ ವ್ಯಕ್ತಿಯ ಬಳಿ ಅಥವಾ ಹಿರಿಯರ ಬಳಿ ಧೈರ್ಯದಿಂದ ಮಾತಾಡುತ್ತಾರೆ. (1 ಕೊರಿಂಥ 1:11) ಹೀಗೆ ಸಭೆಯ ಹಿರಿಯರಿಗೆ ವಿಷಯ ತಿಳಿದಿದೆ ಎಂಬುದನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ. ಹಿರಿಯರು ಆಧ್ಯಾತ್ಮಿಕವಾಗಿ ಅಸ್ವಸ್ಥರಾದ ಅಂಥವರಿಗೆ ಸಹಾಯ ಕೊಡಬಲ್ಲರು. ಮಾತ್ರವಲ್ಲ, ಯೆಹೋವನ ಕುರಿಗಳ ಶುದ್ಧ ನಿಲುವನ್ನು ಕಾಪಾಡಲು ಕ್ರಮಕೈಗೊಳ್ಳಬಲ್ಲರು.—ಯಾಕೋಬ 5:14, 15.

19, 20. (ಎ) ಯೇಸುವಿನ ದಿನಗಳಲ್ಲಿ ಯಾವ ಅನ್ಯಾಯಗಳು ತುಂಬಿದ್ದವು? ಯೇಸುವಿಗೆ ಯಾವ ಒತ್ತಡವಿತ್ತು? (ಬಿ) ರಾಜಕೀಯದಲ್ಲಿ ಮತ್ತು ಹಿಂಸಾಕೃತ್ಯಗಳಲ್ಲಿ ಒಳಗೂಡಲು ಕ್ರಿಸ್ತನ ಹಿಂಬಾಲಕರು ಏಕೆ ನಿರಾಕರಿಸುತ್ತಾರೆ? ಅದಕ್ಕಾಗಿ ಅವರಿಗೆ ಸಿಕ್ಕಿರುವ ಒಂದು ಆಶೀರ್ವಾದ ಯಾವುದು?

19 ಇಡೀ ಲೋಕದಲ್ಲಿದ್ದ ಸಾಮಾಜಿಕ ಅನ್ಯಾಯದ ವಿರುದ್ಧ ಯೇಸು ಹೋರಾಡಿದನೋ? ಖಂಡಿತವಾಗಿಯೂ ಅವನ ಸುತ್ತಮುತ್ತ ಅನ್ಯಾಯವೇ ತುಂಬಿಕೊಂಡಿತ್ತು. ಅವನ ತವರೂರನ್ನು ವಿದೇಶಿಯರಾದ ರೋಮನ್ನರು ಆಳುತ್ತಿದ್ದರು. ಅವರು ತಮ್ಮ ಶಕ್ತಿಶಾಲಿ ಮಿಲಿಟರಿ ಪಡೆಗಳಿಂದ ಯೆಹೂದ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು, ಅತಿಯಾದ ತೆರಿಗೆಗಳನ್ನು ಹೊರಿಸಿದ್ದರು ಮತ್ತು ಅವರ ಧಾರ್ಮಿಕ ಆಚರಣೆಗಳಲ್ಲೂ ಮೂಗು ತುರುಕಿಸುತ್ತಿದ್ದರು. ಆದ್ದರಿಂದಲೇ, ಆ ದಿನಗಳಲ್ಲಿನ ಅನೇಕ ಜನರು ಯೇಸು ರಾಜಕೀಯರಂಗ ಪ್ರವೇಶಿಸಬೇಕೆಂದು ಬಯಸುತ್ತಿದ್ದರು. (ಯೋಹಾನ 6:14, 15) ಆಗಲೂ ಅವನು ಧೈರ್ಯ ತೋರಿಸಬೇಕಾಗಿತ್ತು.

20 ತನ್ನ ರಾಜ್ಯವು ಈ ಲೋಕದ್ದಲ್ಲ ಎಂಬುದಾಗಿ ಯೇಸು ತಿಳಿಸಿದನು. ಆ ದಿನಗಳಲ್ಲಿ ನಡೆಯುತ್ತಿದ್ದ ರಾಜಕೀಯ ಕಾದಾಟಗಳಲ್ಲಿ ಭಾಗವಹಿಸುವ ಬದಲು ದೇವರ ರಾಜ್ಯದ ಸುವಾರ್ತೆ ಸಾರುವುದರತ್ತ ಗಮನಹರಿಸುವಂತೆ ಯೇಸು ತನ್ನ ಮಾದರಿಯ ಮೂಲಕ ಶಿಷ್ಯರಿಗೆ ತರಬೇತಿ ನೀಡಿದನು. (ಯೋಹಾನ 17:16; 18:36) ಜನರ ಗುಂಪು ತನ್ನನ್ನು ಬಂಧಿಸಲು ಬಂದಾಗ ತಟಸ್ಥತೆಯ ಕುರಿತ ಬಲವಾದ ಪಾಠವನ್ನು ಅವನು ಕಲಿಸಿದನು. ಪೇತ್ರನಾದರೋ ಆ ಸಂದರ್ಭದಲ್ಲಿ ಹಿಂದೆಮುಂದೆ ನೋಡದೆ ಏಕಾಏಕಿ ಕತ್ತಿಯನ್ನು ಬೀಸಿ ಒಬ್ಬನಿಗೆ ಗಾಯ ಮಾಡಿದ್ದನು. ಪೇತ್ರನ ಈ ಕ್ರಿಯೆಯೇನು ತಪ್ಪಾಗಿರಲಿಲ್ಲ ಎಂಬಂತೆ ತೋರಬಹುದು. ಯಾವತ್ತಾದರೂ ಹಿಂಸೆಯನ್ನು ಸಮರ್ಥಿಸಬಹುದೆಂದರೆ ಅದು ಕೇವಲ ಆ ರಾತ್ರಿಯಲ್ಲೇ. ಏಕೆಂದರೆ ಆ ರಾತ್ರಿ ದೇವರ ನಿರಪರಾಧಿ ಮಗನ ಮೇಲೆ ದಾಳಿನಡೆಯುತ್ತಿತ್ತು. ಆದಾಗ್ಯೂ, ಆ ಸಂದರ್ಭದಲ್ಲಿ ಯೇಸು ತನ್ನ ಭೂಹಿಂಬಾಲಕರಿಗೆ ಮಾದರಿಯನ್ನಿಟ್ಟನು. ಅವನಂದದ್ದು: “ನಿನ್ನ ಕತ್ತಿಯನ್ನು ಒರೆಗೆ ಸೇರಿಸು; ಕತ್ತಿಯನ್ನು ಹಿಡಿಯುವವರೆಲ್ಲರು ಕತ್ತಿಯಿಂದಲೇ ನಾಶವಾಗುವರು.” ಈ ಮಾತುಗಳು ಇಂದಿಗೂ ಅನ್ವಯವಾಗುತ್ತವೆ. (ಮತ್ತಾಯ 26:51-54) ಕ್ರಿಸ್ತನ ಹಿಂಬಾಲಕರೋಪಾದಿ ಅಂಥ ಶಾಂತಿಯುತ ನಿಲುವನ್ನು ತೆಗೆದುಕೊಳ್ಳಲು ಖಂಡಿತವಾಗಿಯೂ ಅಂದು ಧೈರ್ಯದ ಅಗತ್ಯವಿತ್ತು. ಇಂದು ಕೂಡ ಇದೆ. ಆಧುನಿಕ ದಿನಗಳಲ್ಲಿ ಯುದ್ಧಗಳು, ಸರಣಿ ಹತ್ಯಾಕಾಂಡಗಳು, ದಂಗೆಗಳು ಮತ್ತು ಇನ್ನಿತರ ಹಿಂಸಾಕೃತ್ಯಗಳು ಅಪಾರ ಸಂಖ್ಯೆಯಲ್ಲಿ ನಡೆದಿರುವುದಾದರೂ ದೇವಜನರು ಕ್ರೈಸ್ತ ತಾಟಸ್ಥ್ಯ ತೋರಿಸಿದ್ದರಿಂದಾಗಿ ಒಳ್ಳೇ ದಾಖಲೆಯನ್ನು ಹೊಂದಿದ್ದಾರೆ. ಈ ಅಪ್ಪಟ ದಾಖಲೆಯೇ ಅವರು ತೋರಿಸಿದ ಧೈರ್ಯಕ್ಕೆ ದಕ್ಕಿದ ಒಂದು ಆಶೀರ್ವಾದವಾಗಿದೆ.

ಅವನು ಧೈರ್ಯದಿಂದ ವಿರೋಧವನ್ನು ಎದುರಿಸಿದನು

21, 22. (ಎ) ಜೀವನದ ಉಗ್ರ ಪರೀಕ್ಷೆಯನ್ನು ಎದುರಿಸುವ ಮುಂಚೆ ಯೇಸು ಯಾವ ಸಹಾಯ ಪಡೆದನು? (ಬಿ) ಕೊನೆಯ ತನಕವೂ ಯೇಸು ಹೇಗೆ ಧೈರ್ಯವಂತನಾಗಿದ್ದನು?

21 ಭೂಮಿಯಲ್ಲಿ ಕಡುವಿರೋಧವನ್ನು ಎದುರಿಸಬೇಕಾಗುವುದು ಎಂಬುದು ಯೆಹೋವನ ಮಗನಿಗೆ ಸಾಕಷ್ಟು ಮುಂಚೆಯೇ ತಿಳಿದಿತ್ತು. (ಯೆಶಾಯ 50:4-7) ಅವನು ಅನೇಕಸಲ ಜೀವಬೆದರಿಕೆಯನ್ನು ಎದುರಿಸಿದನು. ಈ ಅಧ್ಯಾಯದ ಆರಂಭದಲ್ಲಿ ತಿಳಿಸಲಾದ ಘಟನೆ ಅದರಲ್ಲಿ ಕೊನೆಯದ್ದು. ಅಂಥ ಅಪಾಯಗಳ ಎದುರಲ್ಲೂ ಯೇಸು ಹೇಗೆ ಧೈರ್ಯ ತೋರಿಸಿದನು? ಆ ಗುಂಪು ಅವನನ್ನು ಬಂಧಿಸಲು ಬರುವ ಮುಂಚೆ ಯೇಸು ಏನು ಮಾಡುತ್ತಿದ್ದನೆಂಬುದು ನಿಮಗೆ ಗೊತ್ತೋ? ಅವನು ಕಟ್ಟಾಸಕ್ತಿಯಿಂದ ಯೆಹೋವನಿಗೆ ಪ್ರಾರ್ಥಿಸುತ್ತಿದ್ದನು. ಮತ್ತು ಯೆಹೋವನೇನು ಮಾಡಿದನು? ಯೇಸು “ಅನುಗ್ರಹಪೂರ್ವಕವಾಗಿ ಕೇಳಲ್ಪಟ್ಟನು” ಎಂಬುದಾಗಿ ಬೈಬಲ್‌ ನಮಗೆ ತಿಳಿಸುತ್ತದೆ. (ಇಬ್ರಿಯ 5:7) ಯೆಹೋವನು ಸ್ವರ್ಗದಿಂದ ದೇವದೂತನನ್ನು ಕಳುಹಿಸಿ ತನ್ನ ಧೀರ ಮಗನನ್ನು ಬಲಪಡಿಸಿದನು.—ಲೂಕ 22:42, 43.

22 ಬಲಗೊಳಿಸಲ್ಪಟ್ಟ ಸ್ವಲ್ಪಸಮಯದಲ್ಲೇ ಯೇಸು ತನ್ನ ಅಪೊಸ್ತಲರಿಗೆ, “ಏಳಿರಿ ಹೋಗೋಣ” ಎಂದು ಹೇಳಿದನು. (ಮತ್ತಾಯ 26:46) ಆ ಮಾತುಗಳಲ್ಲಿದ್ದ ಧೈರ್ಯವನ್ನು ಸ್ವಲ್ಪ ಗಮನಿಸಿ. ತನ್ನ ಸ್ನೇಹಿತರಿಗೆ ಹಾನಿಯೇನೂ ಮಾಡಬೇಡಿ ಎಂದು ತಾನು ಗುಂಪಿನ ಜನರಬಳಿ ಕೇಳಿಕೊಳ್ಳಲಿದ್ದೇನೆ, ಈ ಒಡನಾಡಿಗಳು ತನ್ನನ್ನು ಬಿಟ್ಟು ಓಡಿಹೋಗುವರು ಹಾಗೂ ತನ್ನ ಜೀವನದ ಉಗ್ರ ಪರೀಕ್ಷೆಯನ್ನು ಎದುರಿಸಲು ತಾನೀಗ ಹೋಗುತ್ತಿದ್ದೇನೆ ಎಂಬೆಲ್ಲ ವಿಷಯಗಳು ಗೊತ್ತಿದ್ದರೂ ಅವನು “ಹೋಗೋಣ” ಎಂದು ಹೇಳಿದನು. ಕಾನೂನುಬಾಹಿರವಾಗಿಯೂ ಅನ್ಯಾಯವಾಗಿಯೂ ಜನರು ತನಗೆ ನೀಡಿದ ಕಷ್ಟ, ಮೂದಲಿಕೆ, ಚಿತ್ರಹಿಂಸೆ ಇವುಗಳನ್ನೆಲ್ಲ ಅನುಭವಿಸಿ ಕೊನೆಯಲ್ಲಿ ವೇದನಾದಾಯಕ ಮರಣ ಹೊಂದುವಾಗ ಅವನೊಂದಿಗೆ ಯಾರೊಬ್ಬರೂ ಇರಲಿಲ್ಲ. ಎಲ್ಲವನ್ನು ಅವನೊಬ್ಬನೇ ಅನುಭವಿಸಿದ್ದನು. ಈ ಎಲ್ಲ ಪರೀಕ್ಷೆಯಲ್ಲಿ ಅವನನ್ನು ಜಯಿಸುವಂತೆ ಮಾಡಿದ್ದು ಧೈರ್ಯವೇ.

23. ಅಪಾಯ ಮತ್ತು ಜೀವಬೆದರಿಕೆ ಎದುರಿಸುವಾಗ ಯೇಸು ಭಂಡ ಧೈರ್ಯ ಪ್ರದರ್ಶಿಸುತ್ತಿದ್ದನೋ? ವಿವರಿಸಿ.

23 ಯೇಸು ಅಪಾಯವನ್ನು ಲೆಕ್ಕಿಸದೆ ಭಂಡ ಧೈರ್ಯ ತೋರಿಸಿದನೋ? ಇಲ್ಲ. ಏಕೆಂದರೆ ಭಂಡ ಧೈರ್ಯಕ್ಕೂ ನಿಜ ಧೈರ್ಯಕ್ಕೂ ಯಾವುದೇ ಸಂಬಂಧವಿಲ್ಲ. ನಿಜ ಹೇಳಬೇಕೆಂದರೆ, ದೇವರ ಚಿತ್ತವನ್ನು ಮಾಡುತ್ತಿರಲಿಕ್ಕಾಗಿ ಜಾಗರೂಕತೆಯಿಂದ ಇರುವಂತೆ ಮತ್ತು ಅಪಾಯವಿರುವಾಗ ವಿವೇಕದಿಂದ ಹಿಂದೆಸರಿಯುವಂತೆ ಸ್ವತಃ ಯೇಸುವೇ ತನ್ನ ಶಿಷ್ಯರಿಗೆ ಕಲಿಸಿದ್ದಾನೆ. (ಮತ್ತಾಯ 4:12; 10:16) ಆದರೆ ಈ ಸಂದರ್ಭದಲ್ಲಿ ಹಿಂದೆಸರಿಯುವ ಯಾವುದೇ ಮಾರ್ಗ ಉಳಿದಿಲ್ಲ ಎಂಬುದು ಯೇಸುವಿಗೆ ತಿಳಿದಿತ್ತು. ದೇವರ ಚಿತ್ತ ಏನಾಗಿದೆ ಎಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಸಮಗ್ರತೆ ಕಾಪಾಡಿಕೊಳ್ಳಲು ಯೇಸು ದೃಢನಿರ್ಣಯ ಮಾಡಿ ಆಗಿತ್ತು. ಆದ್ದರಿಂದ ಉಳಿದಿರುವ ಒಂದೇ ಒಂದು ಮಾರ್ಗ ಮುಂದಡಿ ಇಡುವುದು ಅಂದರೆ ಪರೀಕ್ಷೆಯನ್ನು ಎದುರಿಸುವುದಾಗಿತ್ತು.

ಹಿಂಸೆಯ ಎದುರಲ್ಲೂ ಯೆಹೋವನ ಸಾಕ್ಷಿಗಳು ಧೈರ್ಯ ತೋರಿಸಿದ್ದಾರೆ

24. ಯಾವುದೇ ಪರೀಕ್ಷೆ ಬರಲಿ ಅದನ್ನು ಧೈರ್ಯದಿಂದ ಎದುರಿಸಬಲ್ಲೆವು ಎಂಬ ನಿಶ್ಚಿತಾಭಿಪ್ರಾಯದಿಂದ ನಾವಿರಬಹುದು ಏಕೆ?

24 ಯೇಸುವಿನ ಹಿಂಬಾಲಕರು ಕೂಡ ತಮ್ಮ ನಾಯಕನ ಹೆಜ್ಜೆಜಾಡಿನಲ್ಲಿ ಧೈರ್ಯದಿಂದ ಎಷ್ಟೊಂದು ಬಾರಿ ನಡೆದಿದ್ದಾರೆ! ಅಪಹಾಸ್ಯ, ಹಿಂಸೆ, ಬಂಧನ, ಸೆರೆವಾಸ, ಚಿತ್ರಹಿಂಸೆ ಅಷ್ಟೇ ಅಲ್ಲ ಮರಣವನ್ನು ಕೂಡ ಅನೇಕರು ಧೈರ್ಯದಿಂದ ಎದುರಿಸಿದ್ದಾರೆ. ಅಪರಿಪೂರ್ಣ ಮಾನವರಿಗೆ ಅಂಥ ಧೈರ್ಯ ಎಲ್ಲಿಂದ ಬರುತ್ತದೆ? ಅದು ಸುಮ್ಮನೆ ತನ್ನಿಂದ ತಾನೇ ಬರುವುದಿಲ್ಲ. ಯೇಸು ಮೇಲಣಿಂದ ಸಹಾಯ ಪಡೆದಂತೆಯೇ ಅವನ ಹಿಂಬಾಲಕರು ಕೂಡ ಪಡೆಯುತ್ತಾರೆ. (ಫಿಲಿಪ್ಪಿ 4:13) ಭವಿಷ್ಯದಲ್ಲಿ ಏನೇ ಬರಲಿ ಹೆದರದಿರಿ. ನಿಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ದೃಢನಿರ್ಣಯ ಮಾಡಿಕೊಂಡಿರಿ. ಅಗತ್ಯವಿರುವ ಧೈರ್ಯವನ್ನು ಯೆಹೋವನು ನಿಮಗೆ ಕೊಡುವನು. “ಧೈರ್ಯವಾಗಿರಿ! ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಹೇಳಿದ ನಮ್ಮ ನಾಯಕನಾದ ಯೇಸುವಿನ ಮಾದರಿಯಿಂದ ಬಲವನ್ನು ಪಡೆದುಕೊಳ್ಳಿರಿ.—ಯೋಹಾನ 16:33.

^ ಪ್ಯಾರ. 12 ಪ್ರವಾದಿಗಳ ಮತ್ತು ದೇಶಭಕ್ತರ ಸಮಾಧಿಗಳಂತೆಯೇ ರಬ್ಬಿಗಳ ಸಮಾಧಿಗಳನ್ನೂ ಗೌರವದಿಂದ ಕಾಣಲಾಗುತ್ತಿತ್ತು ಎಂಬುದನ್ನು ಇತಿಹಾಸಕಾರರು ಗಮನಿಸಿದ್ದಾರೆ.