ಅಧ್ಯಾಯ 7
“ಸಹಿಸಿಕೊಂಡಿರುವವನನ್ನು ನಿಕಟವಾಗಿ ಪರಿಗಣಿಸಿ”
1-3. (ಎ) ಯೇಸು ಗೆತ್ಸೇಮನೆ ತೋಟದಲ್ಲಿ ಅನುಭವಿಸಿದ ಯಾತನೆಯ ತೀವ್ರತೆ ಎಷ್ಟಿತ್ತು? ಅದಕ್ಕೆ ಕಾರಣವೇನು? (ಬಿ) ತಾಳ್ಮೆಯ ಕುರಿತಾದ ಯೇಸುವಿನ ಮಾದರಿಯ ಬಗ್ಗೆ ಏನು ಹೇಳಬಹುದು? ಯಾವ ಪ್ರಶ್ನೆಗಳು ಏಳುತ್ತವೆ?
ಯೇಸು ತೀವ್ರ ಒತ್ತಡದಲ್ಲಿದ್ದಾನೆ. ಇಂಥ ಮಾನಸಿಕ ಹಾಗೂ ಭಾವನಾತ್ಮಕ ಯಾತನೆಯನ್ನು ಅವನು ಹಿಂದೆಂದೂ ಅನುಭವಿಸಿರಲಿಲ್ಲ. ಅವನ ಭೂಜೀವನ ಇನ್ನೇನು ಕೆಲವೇ ತಾಸುಗಳಲ್ಲಿ ಕೊನೆಗೊಳ್ಳಲಿದೆ. ಅವನು ತನ್ನ ಅಪೊಸ್ತಲರೊಂದಿಗೆ ಗೆತ್ಸೇಮನೆ ತೋಟಕ್ಕೆ ಬರುತ್ತಾನೆ. ಈ ಚಿರಪರಿಚಿತ ಸ್ಥಳಕ್ಕೆ ಅವನು ಈ ಮುಂಚೆಯೂ ಅನೇಕ ಸಲ ಅವರೊಂದಿಗೆ ಬಂದಿದ್ದನು. ಆದರೆ ಈ ರಾತ್ರಿ ಅವನು ಸ್ವಲ್ಪ ಏಕಾಂತವಾಗಿರಲು ಬಯಸುತ್ತಾನೆ. ಆದ್ದರಿಂದ ಅಪೊಸ್ತಲರನ್ನು ಅಲ್ಲೇ ಬಿಟ್ಟು ತೋಟದ ಮಧ್ಯಕ್ಕೆ ಹೋಗುತ್ತಾನೆ ಮತ್ತು ಅಲ್ಲಿ ಮೊಣಕಾಲೂರಿ ಪ್ರಾರ್ಥಿಸಲಾರಂಭಿಸುತ್ತಾನೆ. ಅವನು ಎಷ್ಟು ಶ್ರದ್ಧೆಯಿಂದ ಪ್ರಾರ್ಥಿಸಿದನೆಂದರೆ ಮತ್ತು ಅವನಿಗೆಷ್ಟು ದುಃಖವಾಯಿತೆಂದರೆ ಆ ಸಂದರ್ಭದಲ್ಲಿ ಅವನ ಬೆವರು “ನೆಲಕ್ಕೆ ಬೀಳುತ್ತಿರುವ ರಕ್ತದ ಹನಿಗಳಂತಿತ್ತು.”—ಲೂಕ 22:39-44.
2 ಯೇಸು ಅಷ್ಟು ಚಿಂತಿತನಾಗಿದ್ದುದು ಏತಕ್ಕೆ? ಬೇಗನೆ ತಾನು ದೈಹಿಕವಾಗಿ ಕಡುಕಷ್ಟಗಳನ್ನು ಅನುಭವಿಸಬೇಕಾಗಿದೆ ಎಂಬುದು ಅವನಿಗೆ ಗೊತ್ತಿತ್ತು. ಆದರೂ ಅವನ ಯಾತನೆಗೆ ಅದು ಕಾರಣವಾಗಿರಲಿಲ್ಲ. ಅವನ ಮನಸ್ಸಿನಲ್ಲಿ ಅದಕ್ಕಿಂತಲೂ ಮಹತ್ವಪೂರ್ಣ ವಿಚಾರಗಳಿದ್ದವು. ತನ್ನ ತಂದೆಯ ಹೆಸರಿನ ಬಗ್ಗೆ ಅವನಿಗೆ ಆಳವಾದ ಚಿಂತೆಯಿತ್ತು. ಮಾತ್ರವಲ್ಲ ತಾನು ನಂಬಿಗಸ್ತನಾಗಿ ಉಳಿಯುವುದರ ಮೇಲೆ ಮಾನವ ಕುಟುಂಬದ ಭವಿಷ್ಯತ್ತು ಅವಲಂಬಿತವಾಗಿದೆ ಎಂಬುದನ್ನು ಅವನು ಮನಗಂಡಿದ್ದನು. ಆದ್ದರಿಂದ ತಾನು ಕಷ್ಟಗಳನ್ನು ಸಹಿಸಿಕೊಳ್ಳುವುದು ಬಹಳ ಪ್ರಾಮುಖ್ಯ ಎಂಬುದು ಯೇಸುವಿಗೆ ಚೆನ್ನಾಗಿ ತಿಳಿದಿತ್ತು. ಅವನೆಲ್ಲಾದರೂ ವಿಫಲನಾಗುವಲ್ಲಿ ಅದು ಯೆಹೋವನ ಹೆಸರಿಗೆ ತುಂಬ ಕಳಂಕ ತರುತ್ತಿತ್ತು. ಆದರೆ ಯೇಸು ವಿಫಲನಾಗಲಿಲ್ಲ. ಆ ದಿನ ತನ್ನ ಕೊನೇ ಉಸಿರು ಹೋಗುವ ತುಸು ಮುಂಚೆ, ಸಹನೆ ಇಲ್ಲವೇ ತಾಳ್ಮೆಯ ಕುರಿತು ಅತ್ಯುತ್ಕೃಷ್ಟ ಮಾದರಿಯನ್ನಿಟ್ಟ ಯೇಸು ವಿಜಯೋತ್ಸಾಹದಿಂದ “ನೆರವೇರಿತು” ಎಂದು ಕೂಗಿ ಹೇಳಿದನು.—ಯೋಹಾನ 19:30.
3 “ಸಹಿಸಿಕೊಂಡಿರುವವನನ್ನು [ಯೇಸುವನ್ನು] ನಿಕಟವಾಗಿ ಪರಿಗಣಿಸಿರಿ” ಎಂದು ಬೈಬಲ್ ನಮ್ಮನ್ನು ಪ್ರೋತ್ಸಾಹಿಸುತ್ತದೆ. (ಇಬ್ರಿಯ 12:3) ಈ ವಿಷಯದಲ್ಲಿ ಕೆಲವೊಂದು ಪ್ರಮುಖ ಪ್ರಶ್ನೆಗಳು ಏಳುತ್ತವೆ. ಅವುಗಳೆಂದರೆ, ಯೇಸು ತಾಳಿಕೊಂಡ ಕೆಲವು ಪರೀಕ್ಷೆಗಳಾವುವು? ಅವುಗಳನ್ನು ತಾಳಿಕೊಳ್ಳಲು ಅವನಿಗೆ ಯಾವುದು ಸಹಾಯ ಮಾಡಿತು? ಅವನ ಮಾದರಿಯನ್ನು ನಾವು ಹೇಗೆ ಅನುಸರಿಸಬಹುದು? ಈ ಪ್ರಶ್ನೆಗಳನ್ನು ಉತ್ತರಿಸುವ ಮುಂಚೆ, ತಾಳ್ಮೆ ಅಂದರೇನು ಎಂಬುದನ್ನು ಪರಿಗಣಿಸೋಣ.
ತಾಳ್ಮೆ ಅಂದರೇನು?
4, 5. (ಎ) “ತಾಳ್ಮೆ” ಅಂದರೇನು? (ಬಿ) ತಪ್ಪಿಸಿಕೊಳ್ಳಲಾಗದ ಕಷ್ಟವನ್ನು ಅನುಭವಿಸುವುದಕ್ಕಿಂತಲೂ ಹೆಚ್ಚಿನದ್ದು ತಾಳ್ಮೆಯಲ್ಲಿ ಒಳಗೂಡಿದೆ ಎಂಬುದನ್ನು ನಾವು ಯಾವ ದೃಷ್ಟಾಂತದ ಮೂಲಕ ನಿರೂಪಿಸಬಹುದು?
4 ನಾವೆಲ್ಲರೂ ಆಗಾಗ ‘ನಾನಾ ವಿಧವಾದ ಪರೀಕ್ಷೆಗಳಿಂದ ದುಃಖಿಸುತ್ತೇವೆ.’ (1 ಪೇತ್ರ 1:6) ನಾವೊಂದು ಪರೀಕ್ಷೆಯನ್ನು ಎದುರಿಸುತ್ತಿರುವಲ್ಲಿ ಅದರರ್ಥ ನಾವು ತಾಳ್ಮೆ ತೋರಿಸುತ್ತಿದ್ದೇವೆಂದೋ? ಹಾಗೇನಿಲ್ಲ. “ತಾಳ್ಮೆ” ಎಂಬ ಗ್ರೀಕ್ ನಾಮಪದದ ಅರ್ಥ, “ಕಷ್ಟಗಳು ಬಂದಾಗ ಸ್ಥಿರವಾಗಿ ನಿಲ್ಲುವ ಇಲ್ಲವೇ ಅವುಗಳಿಗೆ ಮಣಿಯದಿರುವ ಸಾಮರ್ಥ್ಯ” ಎಂದಾಗಿದೆ. ಬೈಬಲ್ ಲೇಖಕರು ಉಪಯೋಗಿಸಿರುವ ತಾಳ್ಮೆ ಎಂಬ ಪದದ ಕುರಿತು ತಿಳಿಸುತ್ತಾ ಒಬ್ಬ ವಿದ್ವಾಂಸನು ಹೇಳುವುದು: “ಅನುಭವಿಸದೇ ಬೇರೆ ದಾರಿಯಿಲ್ಲ ಎಂಬ ಕಾರಣದಿಂದಲ್ಲ, ಬದಲಾಗಿ ಉಜ್ವಲ ನಿರೀಕ್ಷೆಯೊಂದಿಗೆ ಸಹಿಸಿಕೊಳ್ಳುವಂತಹ ಒಂದು ಮನೋಭಾವವೇ ಅದಾಗಿದೆ. . . . ಅದು, ಸಮಸ್ಯೆಯನ್ನು ಎದುರಿಸುತ್ತಿರುವಾಗಲೂ ಒಬ್ಬ ವ್ಯಕ್ತಿಯು ಸ್ಥಿರವಾಗಿ ನಿಲ್ಲುವಂತೆ ಮಾಡುವ ಒಂದು ಗುಣವಾಗಿದೆ. ಅದು ಕಡುಕಷ್ಟವನ್ನೂ ಸುಖವನ್ನಾಗಿ ಪರಿವರ್ತಿಸಬಲ್ಲ ಸದ್ಗುಣವಾಗಿದೆ. ಏಕೆಂದರೆ ಅದು ನೋವಿನಾಚೆಯಿರುವ ಗುರಿಯನ್ನು ನೋಡುತ್ತದೆ.”
5 ಹಾಗಾದರೆ, ತಾಳ್ಮೆಯೆಂದರೆ ತಪ್ಪಿಸಿಕೊಳ್ಳಲಾಗದ ಕಷ್ಟವನ್ನು ಅನುಭವಿಸುವುದು ಎಂದರ್ಥವಲ್ಲ. ಬೈಬಲಿಗನುಸಾರ ಅದರರ್ಥ, ಕಷ್ಟಗಳು ಬಂದಾಗ ಸ್ಥಿರವಾಗಿರುವುದು, ಯೋಗ್ಯ ಮನೋಭಾವವನ್ನು ಕಾಪಾಡಿಕೊಳ್ಳುವುದು ಮತ್ತು ನಿರೀಕ್ಷಾಭರಿತರಾಗಿರುವುದು ಆಗಿದೆ. ಒಂದು ದೃಷ್ಟಾಂತವನ್ನು ಪರಿಗಣಿಸಿ. ಇಬ್ಬರು ವ್ಯಕ್ತಿಗಳು ಭಿನ್ನ ಕಾರಣಗಳಿಗಾಗಿ ಬಂಧಿಸಲ್ಪಟ್ಟು ಒಂದೇ ಸೆರೆಮನೆಯಲ್ಲಿದ್ದಾರೆ. ಅವರಲ್ಲೊಬ್ಬನು ಪಾತಕಿ. ಅವನು ತನ್ನ ಶಿಕ್ಷೆಯನ್ನು ಗೋಳುಮೋರೆ ಹಾಕಿಕೊಂಡು ಅಸಹನೆಯಿಂದ ಅನುಭವಿಸುತ್ತಿದ್ದಾನೆ. ಆದರೆ ಇನ್ನೊಬ್ಬನು ನಿಜ ಕ್ರೈಸ್ತನಾಗಿದ್ದು ತನ್ನ ನಂಬಿಕೆಯ ಕಾರಣ ಸೆರೆಮನೆಯಲ್ಲಿದ್ದಾನೆ. ಅವನಾದರೋ ಚಂಚಲನಾಗದೇ ಸ್ಥಿರತೆಯಿಂದಿದ್ದಾನೆ ಮತ್ತು ಸಕಾರಾತ್ಮಕ ಮನೋಭಾವ ಇಟ್ಟುಕೊಂಡಿದ್ದಾನೆ. ಏಕೆಂದರೆ ಈ ಸನ್ನಿವೇಶವು ತನ್ನ ನಂಬಿಕೆಯನ್ನು ರುಜುಪಡಿಸಲು ಸಿಕ್ಕಿದ ಒಳ್ಳೇ ಅವಕಾಶವೆಂದು ಅವನು ಪರಿಗಣಿಸುತ್ತಾನೆ. ಇಲ್ಲಿ ಆ ಪಾತಕಿಯನ್ನು ನಾವೆಂದೂ ತಾಳ್ಮೆಯ ಉದಾಹರಣೆಯಾಗಿ ಪರಿಗಣಿಸಸಾಧ್ಯವಿಲ್ಲ. ಆದರೆ ಆ ನಂಬಿಗಸ್ತ ಕ್ರೈಸ್ತನು ಉತ್ಕೃಷ್ಟ ಗುಣವಾದ ತಾಳ್ಮೆಯ ಉದಾಹರಣೆಯಾಗಿದ್ದಾನೆ.—ಯಾಕೋಬ 1:2-4.
6. ನಾವು ತಾಳ್ಮೆಯನ್ನು ಹೇಗೆ ಬೆಳೆಸಿಕೊಳ್ಳಬಹುದು?
ಮತ್ತಾಯ 24:13) ಆದರೆ ಹುಟ್ಟುವಾಗಲೇ ನಾವು ಈ ಗುಣವನ್ನು ಪಡೆದಿರುವುದಿಲ್ಲ. ನಾವದನ್ನು ಬೆಳೆಸಿಕೊಳ್ಳಬೇಕು. ಹೇಗೆ? “ಸಂಕಟವು ತಾಳ್ಮೆಯನ್ನು ಉಂಟುಮಾಡುತ್ತದೆ” ಎಂಬುದಾಗಿ ರೋಮನ್ನರಿಗೆ 5:3 ತಿಳಿಸುತ್ತದೆ. ಹೌದು ನಾವು ನಿಜವಾಗಿಯೂ ತಾಳ್ಮೆಯನ್ನು ಬೆಳೆಸಿಕೊಳ್ಳಲು ಬಯಸುವುದಾದರೆ, ನಂಬಿಕೆಯ ಯಾವುದೇ ಪರೀಕ್ಷೆಗೆ ಹೆದರಿ ಹಿಂದೆಸರಿಯಬಾರದು. ಅವುಗಳನ್ನು ಎದುರಿಸಬೇಕು. ದಿನದಿನವೂ ನಾವು ದೊಡ್ಡ ಹಾಗೂ ಚಿಕ್ಕ ಪರೀಕ್ಷೆಗಳನ್ನು ಎದುರಿಸಿ ಜಯಿಸುವಾಗ ತಾಳ್ಮೆ ಹುಟ್ಟುತ್ತದೆ. ನಾವು ಒಂದೊಂದು ಪರೀಕ್ಷೆಯನ್ನು ಗೆದ್ದಾಗಲೂ ಅದು ಮುಂದಿನದ್ದನ್ನು ಎದುರಿಸಲು ನಮ್ಮನ್ನು ಬಲಗೊಳಿಸುತ್ತದೆ. ಹಾಗಿದ್ದರೂ ನಾವು ನಮ್ಮಷ್ಟಕ್ಕೇ ತಾಳ್ಮೆಯನ್ನು ಬೆಳೆಸಿಕೊಳ್ಳಲಾರೆವು. ನಾವು ‘ದೇವರು ಒದಗಿಸುವ ಶಕ್ತಿಯ ಮೇಲೆ ಹೊಂದಿಕೊಂಡಿದ್ದೇವೆ.’ (1 ಪೇತ್ರ 4:11) ಪರೀಕ್ಷೆಗಳ ಎದುರೂ ಸ್ಥಿರವಾಗಿ ಉಳಿಯುವಂತೆ ನಮಗೆ ಸಹಾಯ ಮಾಡಲಿಕ್ಕಾಗಿ ಯೆಹೋವನು ತನ್ನ ಮಗನ ಮಾದರಿಯನ್ನು ಒದಗಿಸುವ ಮೂಲಕ ಸಾಧ್ಯವಿರುವುದರಲ್ಲೇ ಅತ್ಯುತ್ತಮ ನೆರವನ್ನು ಒದಗಿಸಿದ್ದಾನೆ. ತಾಳ್ಮೆಯ ಕುರಿತ ಯೇಸುವಿನ ದೋಷರಹಿತ ದಾಖಲೆಯನ್ನು ನಾವೀಗ ಹತ್ತಿರದಿಂದ ಪರಿಗಣಿಸೋಣ.
6 ನಾವು ರಕ್ಷಣೆ ಪಡೆಯಬೇಕಾದರೆ ತಾಳ್ಮೆ ಬೇಕೇ ಬೇಕು. (ಯೇಸು ಏನನ್ನು ತಾಳಿಕೊಂಡನು?
7, 8. ತನ್ನ ಭೂಜೀವನದ ಅಂತ್ಯ ಸಮೀಪಿಸುತ್ತಿದ್ದಂತೆ ಯೇಸು ಏನನ್ನು ತಾಳಿಕೊಂಡನು?
7 ತನ್ನ ಭೂಜೀವನದ ಅಂತ್ಯ ಸಮೀಪಿಸುತ್ತಿದ್ದಂತೆ ಮೇಲಿಂದ ಮೇಲೆ ತನಗಾದ ಕ್ರೌರ್ಯವನ್ನು ಯೇಸು ತಾಳಿಕೊಂಡನು. ಕೊನೇ ರಾತ್ರಿಯಂದು ಅವನಿಗಿದ್ದ ಮಾನಸಿಕ ಒತ್ತಡದ ಜೊತೆಗೆ ಅವನಿಗಾಗಿರಬಹುದಾದ ನಿರಾಶೆ ಮತ್ತು ಅವಮಾನದ ಕುರಿತು ಸ್ವಲ್ಪ ಪರಿಗಣಿಸಿ. ಅವನ ನಿಕಟ ಒಡನಾಡಿಯೇ ಅವನಿಗೆ ವಿಶ್ವಾಸದ್ರೋಹ ಬಗೆದನು. ಆಪ್ತ ಸ್ನೇಹಿತರು ಅವನನ್ನು ಬಿಟ್ಟುಹೋದರು. ಅವನನ್ನು ಕಾನೂನುಬಾಹಿರವಾಗಿ ವಿಚಾರಣೆಗೊಳಪಡಿಸಲಾಯಿತು. ಮತ್ತು ಅಲ್ಲಿನ ಸರ್ವೋಚ್ಛ ಧಾರ್ಮಿಕ ನ್ಯಾಯಾಲಯದ ಸದಸ್ಯರು ಅವನನ್ನು ಗೇಲಿ ಮಾಡಿದರು, ಮುಖದ ಮೇಲೆ ಉಗುಳಿದರು, ಮುಷ್ಟಿಯಿಂದ ಗುದ್ದಿದರು. ಆದಾಗ್ಯೂ ಅವೆಲ್ಲವನ್ನೂ ಅವನು ಶಾಂತಚಿತ್ತನಾಗಿ ಧೈರ್ಯದಿಂದ ತಾಳಿಕೊಂಡನು.—ಮತ್ತಾಯ 26:46-49, 56, 59-68.
8 ಕೊನೆಯ ತಾಸುಗಳಲ್ಲಿ ಯೇಸು ಭೀಕರ ದೈಹಿಕ ಯಾತನೆಯನ್ನು ತಾಳಿಕೊಂಡನು. ಅವನಿಗೆ ಕೊರಡೆಯಿಂದ ಹೊಡಿಸಲಾಯಿತು. ಅದು ಎಷ್ಟು ಕ್ರೂರವಾಗಿತ್ತೆಂದರೆ ‘ಅವನ ಮೈಮೇಲೆ ಪಟ್ಟೆಯಾಕಾರದ ಸೀಳು ಗಾಯಗಳಾದವು ಮತ್ತು ಬಹಳ ರಕ್ತನಷ್ಟವಾಯಿತು’ ಎಂದು ವಿವರಿಸಲಾಗಿದೆ. ‘ಗರಿಷ್ಠ ನೋವು ಮತ್ತು ವೇದನೆ ಅನುಭವಿಸುತ್ತ ನಿಧಾನವಾಗಿ ಸಾಯುವ ರೀತಿಯಲ್ಲಿ’ ಶೂಲಕ್ಕೇರಿಸಿ ಅವನಿಗೆ ಮರಣದಂಡನೆ ನೀಡಲಾಯಿತು. ಅವನ ಕೈಕಾಲುಗಳನ್ನು ಕಂಬಕ್ಕೆ ಸೇರಿಸಿ ದೊಡ್ಡ ಮೊಳೆಗಳನ್ನು ಜಡಿಯುತ್ತಿದ್ದಾಗ ಯೋಹಾನ 19:1, 16-18) ಕಂಬವನ್ನು ನೇರವಾಗಿ ಎತ್ತಿ ನಿಲ್ಲಿಸುವಾಗ ಅವನಿಗಾದ ವಿಪರೀತ ನೋವನ್ನು ಚಿತ್ರಿಸಿಕೊಳ್ಳಿ. ಅವನ ಇಡೀ ದೇಹವೇ ಆ ಮೊಳೆಗಳ ಆಧಾರದಿಂದ ತೂಗುತ್ತಿತ್ತು ಮತ್ತು ಗಾಯವಾದ ಅವನ ಬೆನ್ನು ಆ ಕಂಬಕ್ಕೆ ಉಜ್ಜುತ್ತಿತ್ತು. ಅಷ್ಟೇ ಅಲ್ಲ, ಈ ತೀಕ್ಷ್ಣ ದೈಹಿಕ ಯಾತನೆಯೊಂದಿಗೆ ಈ ಅಧ್ಯಾಯದ ಆರಂಭದಲ್ಲಿ ತಿಳಿಸಿದಂಥ ಮಾನಸಿಕ ಒತ್ತಡವನ್ನೂ ಅವನು ಅನುಭವಿಸುತ್ತಿದ್ದನು.
ಅವನಿಗಾಗುತ್ತಿದ್ದ ವೇದನೆಯನ್ನು ಸ್ವಲ್ಪ ಊಹಿಸಿಕೊಳ್ಳಲು ಪ್ರಯತ್ನಿಸಿ. (9. ನಮ್ಮ “ಯಾತನಾ ಕಂಬವನ್ನು” ಹೊತ್ತುಕೊಂಡು ಯೇಸುವನ್ನು ಹಿಂಬಾಲಿಸುವುದರ ಅರ್ಥವೇನು?
9 ಕ್ರಿಸ್ತನ ಹಿಂಬಾಲಕರಾದ ನಾವು ಏನನ್ನು ತಾಳಿಕೊಳ್ಳಬೇಕಾಗಬಹುದು? ಯೇಸು ಹೇಳಿದ್ದು: “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ, ಅವನು . . . ತನ್ನ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ನನ್ನನ್ನು ಹಿಂಬಾಲಿಸಲಿ.” (ಮತ್ತಾಯ 16:24) ಇಲ್ಲಿ “ಯಾತನಾ ಕಂಬ” ಎಂಬ ಅಭಿವ್ಯಕ್ತಿಯನ್ನು ಕಷ್ಟ, ಅವಮಾನ ಅಥವಾ ಮರಣವನ್ನು ಸೂಚಿಸಲು ಸಾಂಕೇತಿಕವಾಗಿ ಬಳಸಲಾಗಿದೆ. ಕ್ರಿಸ್ತನನ್ನು ಹಿಂಬಾಲಿಸುವುದು ಸುಲಭದ ಕೆಲಸವೇನಲ್ಲ. ನಮ್ಮ ಕ್ರೈಸ್ತ ಮಟ್ಟಗಳು ನಮ್ಮನ್ನು ಲೋಕದಿಂದ ಭಿನ್ನ ಜನರನ್ನಾಗಿ ಮಾಡುತ್ತವೆ. ನಾವು ಈ ಲೋಕದ ಭಾಗವಾಗಿರದೇ ಇರುವ ಕಾರಣ ಲೋಕವು ನಮ್ಮನ್ನು ದ್ವೇಷಿಸುತ್ತದೆ. (ಯೋಹಾನ 15:18-20; 1 ಪೇತ್ರ 4:4) ಹಾಗಿದ್ದರೂ ನಾವು ನಮ್ಮ ಯಾತನಾ ಕಂಬವನ್ನು ಹೊತ್ತುಕೊಳ್ಳಲು ಸಿದ್ಧರಿದ್ದೇವೆ. ಹೌದು, ನಾವು ಕಷ್ಟಗಳನ್ನು ಅನುಭವಿಸಲು, ಅಗತ್ಯಬಿದ್ದರೆ ಸಾಯಲೂ ತಯಾರಿದ್ದೇವೆ. ಆದರೆ ನಮ್ಮ ಆದರ್ಶಪ್ರಾಯ ಮಾರ್ಗದರ್ಶಕನನ್ನು ಹಿಂಬಾಲಿಸುವುದನ್ನು ಮಾತ್ರ ಎಂದೂ ನಿಲ್ಲಿಸೆವು.—2 ತಿಮೊಥೆಯ 3:12.
10-12. (ಎ) ತನ್ನ ಸುತ್ತಲಿದ್ದವರ ಅಪರಿಪೂರ್ಣತೆಗಳು ಯೇಸುವಿಗೆ ತಾಳ್ಮೆಯ ಪರೀಕ್ಷೆಯನ್ನೊಡ್ಡಿದ್ದು ಹೇಗೆ? (ಬಿ) ಯೇಸು ತಾಳಿಕೊಂಡ ಪರೀಕ್ಷಾದಾಯಕ ಸನ್ನಿವೇಶಗಳಲ್ಲಿ ಕೆಲವು ಯಾವುವು?
10 ಶುಶ್ರೂಷೆಯ ಸಮಯದಲ್ಲಿ, ಯೇಸು ತನ್ನ ಸುತ್ತಮುತ್ತ ಇದ್ದವರ ಅಪರಿಪೂರ್ಣತೆಗಳ ನಿಮಿತ್ತ ಪರೀಕ್ಷೆಗಳನ್ನು ಎದುರಿಸಿದನು. ಸ್ವಲ್ಪ ನೆನಪಿಸಿಕೊಳ್ಳಿ, ಭೂಮಿ ಹಾಗೂ ಅದರಲ್ಲಿನ ಎಲ್ಲಾ ಜೀವಿಗಳನ್ನು ಸೃಷ್ಟಿಸಲು ಯೆಹೋವನು ಬಳಸಿದ “ಶಿಲ್ಪಿ” ಯೇಸುವಾಗಿದ್ದನು. (ಜ್ಞಾನೋಕ್ತಿ 8:22-31) ಆದ್ದರಿಂದ ಮಾನವಕುಲಕ್ಕಾಗಿ ಯೆಹೋವನ ಉದ್ದೇಶ ಏನಾಗಿತ್ತು ಎಂಬುದು ಅವನಿಗೆ ತಿಳಿದಿತ್ತು. ಮಾನವರು ದೇವರ ಗುಣಗಳನ್ನು ಪ್ರತಿಫಲಿಸಬೇಕಿತ್ತು ಮತ್ತು ಪರಿಪೂರ್ಣ ಆರೋಗ್ಯದೊಂದಿಗೆ ಜೀವನವನ್ನು ಆನಂದಿಸಬೇಕಿತ್ತು. (ಆದಿಕಾಂಡ 1:26-28) ಭೂಮಿಯಲ್ಲಿದ್ದಾಗ ಯೇಸು ಪಾಪದ ದುರಂತಮಯ ಪರಿಣಾಮಗಳನ್ನು ಅತಿ ಹತ್ತಿರದಿಂದ ನೋಡಶಕ್ತನಾದನು. ಸ್ವತಃ ಮಾನವನೋಪಾದಿ ಅವನು ಮಾನವರ ಅನಿಸಿಕೆಗಳು ಮತ್ತು ಭಾವನೆಗಳನ್ನು ಅನುಭವಿಸಿದನು. ಆದಾಮ ಹವ್ವರಿಗಿದ್ದ ಪರಿಪೂರ್ಣತೆಯಿಂದ ಮಾನವರು ಈಗ ಎಷ್ಟು ದೂರ ಸರಿದಿದ್ದಾರೆ ಎಂಬುದನ್ನು ಕಣ್ಣಾರೆ ಕಾಣುವಾಗ ಅವನಿಗೆಷ್ಟು ನೋವಾಗಿರಬೇಕು! ಹೀಗೆ ತಾಳ್ಮೆಯ ಪರೀಕ್ಷೆಯೊಂದು ಯೇಸುವಿಗೆ ಎದುರಾಯಿತು. ಈ ಅಪರಿಪೂರ್ಣ ಮಾನವರನ್ನು ಎಂದೂ ಸರಿಮಾಡಲಾಗದು ಎಂದು ನೆನಸಿ ಹತಾಶನಾಗಿ ಅವನು ಸುಮ್ಮನಾದನೋ? ನಾವೀಗ ನೋಡೋಣ.
11 ಯೆಹೂದ್ಯರು ಯಾವುದೇ ಪ್ರತಿಕ್ರಿಯೆ ತೋರಿಸದಿದ್ದಾಗ ಯೇಸು ಎಷ್ಟು ವ್ಯಥೆಪಟ್ಟನೆಂದರೆ ಬಹಿರಂಗವಾಗಿ ಅತ್ತೇಬಿಟ್ಟನು. ಅವರ ಉದಾಸೀನತೆಯಿಂದಾಗಿ ಯೇಸುವಿನ ಹುರುಪು ಕಡಿಮೆಯಾಯಿತೋ ಅಥವಾ ಸಾರುವುದನ್ನು ಅವನು ನಿಲ್ಲಿಸಿಬಿಟ್ಟನೋ? ಇಲ್ಲ. “ಅವನು ಪ್ರತಿದಿನ ದೇವಾಲಯದಲ್ಲಿ ಬೋಧಿಸುತ್ತಿದ್ದನು.” (ಲೂಕ 19:41-44, 47) ಒಮ್ಮೆ, ಕೈಬತ್ತಿಹೋಗಿದ್ದ ಮನುಷ್ಯನನ್ನು ಯೇಸು ಸಬ್ಬತ್ ದಿನದಂದು ವಾಸಿಮಾಡುವನೋ ಎಂಬುದನ್ನು ನೋಡಲು ಫರಿಸಾಯರು ಹೊಂಚು ಹಾಕಿ ಕಾಯುತ್ತಿದ್ದರು. ಅವರ ಈ ವಿಚಾರಹೀನ ಹೃದಯಗಳ ನಿಮಿತ್ತ ಯೇಸು ‘ಬಹಳವಾಗಿ ದುಃಖಿಸಿದನು.’ ಆದರೆ ಆ ಸ್ವನೀತಿವಂತ ವಿರೋಧಿಗಳನ್ನು ನೋಡಿ ಯೇಸು ಅಂಜಿದನೋ? ಖಂಡಿತ ಇಲ್ಲ! ಸಭಾಮಂದಿರದ ಮಧ್ಯದಲ್ಲೇ ಆ ಮನುಷ್ಯನನ್ನು ಸ್ವಸ್ಥಪಡಿಸಿದನು.—ಮಾರ್ಕ 3:1-5.
12 ಇನ್ನೊಂದು ವಿಚಾರವೂ ಯೇಸುವಿಗೆ ಪರೀಕ್ಷೆಯನ್ನೊಡ್ಡಿರಬಹುದು. ಅದುವೇ ಅವನ ಆಪ್ತ ಶಿಷ್ಯರ ಬಲಹೀನತೆಗಳು. ನಾವು 3ನೇ ಅಧ್ಯಾಯದಲ್ಲಿ ಕಲಿತಂತೆ ಅವರು ಪದೇ ಪದೇ ಪ್ರಖ್ಯಾತಿಗಾಗಿ ಹಾತೊರೆದರು. (ಮತ್ತಾಯ 20:20-24; ಲೂಕ 9:46) ದೀನಭಾವ ತೋರಿಸುವಂತೆ ಯೇಸು ಅವರಿಗೆ ಒಂದಕ್ಕಿಂತ ಹೆಚ್ಚು ಬಾರಿ ಸಲಹೆ ನೀಡಿದನು. (ಮತ್ತಾಯ 18:1-6; 20:25-28) ಆದಾಗ್ಯೂ ಅವರದಕ್ಕೆ ಬೇಗನೆ ಸ್ಪಂದಿಸಲಿಲ್ಲ. ಅವನು ಅವರೊಂದಿಗೆ ಕಳೆದ ಕೊನೇ ರಾತ್ರಿಯಂದೂ, ಅವರ ಮಧ್ಯೆ ತಮ್ಮೊಳಗೆ ಯಾರು ಅತಿ ದೊಡ್ಡವನು ಎಂಬ ವಿಷಯದಲ್ಲಿ “ತೀಕ್ಷ್ಣ ವಾಗ್ವಾದ” ಉಂಟಾಯಿತು. (ಲೂಕ 22:24) ಇವರನ್ನು ಸರಿಮಾಡಲು ಸಾಧ್ಯವೇ ಇಲ್ಲವೆಂದು ನೆನಸುತ್ತಾ ಯೇಸು ಅವರನ್ನು ಹಾಗೆಯೇ ಬಿಟ್ಟುಬಿಟ್ಟನೋ? ಇಲ್ಲ. ಸದಾ ತಾಳ್ಮೆತೋರಿಸುತ್ತಾ, ಅವರಲ್ಲಿನ ಒಳ್ಳೇ ಗುಣಗಳನ್ನು ನೋಡುವುದನ್ನು ಮುಂದುವರಿಸುವ ಮೂಲಕ ಸಕಾರಾತ್ಮಕ ಮನೋಭಾವ ಇಟ್ಟುಕೊಂಡನು ಮತ್ತು ಅವರ ಮೇಲಿನ ನಿರೀಕ್ಷೆಯನ್ನು ಕಾಯ್ದುಕೊಂಡನು. ಅವರ ಹೃದಯದಲ್ಲಿ ಯೆಹೋವನಿಗಾಗಿ ಪ್ರೀತಿಯಿದೆ ಮತ್ತು ಅವರು ಆತನ ಚಿತ್ತವನ್ನು ಮಾಡಲು ನಿಜವಾಗಿಯೂ ಬಯಸುತ್ತಾರೆಂಬುದು ಯೇಸುವಿಗೆ ಗೊತ್ತಿತ್ತು.—ಲೂಕ 22:25-27.
13. ಯೇಸು ತಾಳಿಕೊಂಡಂಥದ್ದೇ ರೀತಿಯ ಯಾವ ಪರೀಕ್ಷೆಗಳನ್ನು ನಾವು ಎದುರಿಸಬಹುದು?
13 ಯೇಸು ತಾಳಿಕೊಂಡಂಥದ್ದೇ ಪರೀಕ್ಷೆಗಳು ನಮಗೂ ಎದುರಾಗಬಹುದು. ಉದಾಹರಣೆಗೆ, ರಾಜ್ಯ ಸಂದೇಶವನ್ನು ತಿಳಿಸುವಾಗ ಜನರು ಕೆಲವೊಮ್ಮೆ ಅದಕ್ಕೆ ಪ್ರತಿಕ್ರಿಯೆ ತೋರಿಸದಿರಬಹುದು ಅಥವಾ ಅದನ್ನು ವಿರೋಧಿಸಬಹುದು. ಅಂಥ ನಕಾರಾತ್ಮಕ ಪ್ರತಿಕ್ರಿಯೆಗಳಿಂದಾಗಿ ನಾವು ನಿರುತ್ತೇಜನಗೊಳ್ಳುತ್ತೇವೋ ಅಥವಾ ಹುರುಪಿನಿಂದ ಸಾರುತ್ತಾ ಮುಂದುವರಿಯುತ್ತೇವೋ? (ತೀತ 2:14) ನಮ್ಮ ಕ್ರೈಸ್ತ ಸಹೋದರರ ಅಪರಿಪೂರ್ಣತೆಗಳಿಂದಾಗಿಯೂ ನಾವು ಪರೀಕ್ಷೆಗೊಳಗಾಗಬಹುದು. ಯೋಚಿಸದೇ ಆಡಿದ ಒಂದು ಮಾತು ಇಲ್ಲವೇ ಮಾಡಿದ ಕೃತ್ಯವು ನಮ್ಮ ಮನಸ್ಸಿಗೆ ನೋವನ್ನುಂಟುಮಾಡಬಹುದು. (ಜ್ಞಾನೋಕ್ತಿ 12:18) ಜೊತೆ ವಿಶ್ವಾಸಿಗಳ ತಪ್ಪುಗಳನ್ನು ನೋಡಿ ನಾವು ಅವರನ್ನು ದೂರಮಾಡುತ್ತೇವೋ ಇಲ್ಲವೇ ಅವರ ದೋಷಗಳನ್ನು ಸಹಿಸುತ್ತಾ ಅವರಲ್ಲಿ ಒಳ್ಳೇದನ್ನು ಹುಡುಕಲು ಪ್ರಯತ್ನಿಸುತ್ತೇವೋ?—ಕೊಲೊಸ್ಸೆ 3:13.
ಯೇಸು ಏಕೆ ತಾಳಿಕೊಂಡನು?
14. ಸ್ಥಿರವಾಗಿ ನಿಲ್ಲುವಂತೆ ಯೇಸುವಿಗೆ ಯಾವೆರಡು ಅಂಶಗಳು ಸಹಾಯ ಮಾಡಿದವು?
14 ತಾನು ಅನುಭವಿಸಿದ ಅವಮಾನ, ನಿರಾಶೆ ಮತ್ತು ಕಷ್ಟಗಳ ಹೊರತೂ ಸ್ಥಿರವಾಗಿ ನಿಲ್ಲಲು ಹಾಗೂ ಸಮಗ್ರತೆ ಕಾಪಾಡಿಕೊಳ್ಳಲು ಯೇಸುವಿಗೆ ಯಾವುದು ಸಹಾಯ ಮಾಡಿತು? ಎರಡು ಗಮನಾರ್ಹ ಅಂಶಗಳು ಯೇಸುವಿಗೆ ಬೆಂಬಲ ನೀಡಿದವು. ಮೊದಲನೆಯದಾಗಿ, ಅವನು ಸ್ವರ್ಗದೆಡೆಗೆ ದೃಷ್ಟಿಸಿದನು ಅಂದರೆ ‘ತಾಳ್ಮೆಯನ್ನು ಒದಗಿಸುವ ದೇವರಿಗೆ’ ಮೊರೆಯಿಟ್ಟನು. (ರೋಮನ್ನರಿಗೆ 15:5) ಎರಡನೆಯದಾಗಿ, ಯೇಸು ಭವಿಷ್ಯತ್ತಿನೆಡೆಗೆ ನೋಡಿದನು. ಅಂದರೆ ತನ್ನ ತಾಳ್ಮೆ ಯಾವ ಫಲಿತಾಂಶಗಳನ್ನು ತರಲಿದೆ ಎಂಬುದರ ಮೇಲೆ ಗಮನ ನೆಟ್ಟನು. ಈ ಅಂಶಗಳನ್ನು ನಾವೀಗ ಒಂದೊಂದಾಗಿ ಪರಿಗಣಿಸೋಣ.
15, 16. (ಎ) ತಾಳಿಕೊಳ್ಳಲಿಕ್ಕಾಗಿ ಯೇಸು ತನ್ನ ಸ್ವಶಕ್ತಿಯ ಮೇಲೆ ಆತುಕೊಳ್ಳಲಿಲ್ಲ ಎಂಬುದನ್ನು ಯಾವುದು ತೋರಿಸುತ್ತದೆ? (ಬಿ) ತನ್ನ ತಂದೆಯ ಬಗ್ಗೆ ಯೇಸುವಿಗೆ ಯಾವ ಭರವಸೆಯಿತ್ತು? ಯಾಕೆ?
ಇಬ್ರಿಯ 5:7) ಇಲ್ಲಿ ಯೇಸು ಬಿನ್ನಹಗಳನ್ನು ಮಾತ್ರವಲ್ಲ ಯಾಚನೆಗಳನ್ನೂ “ಸಲ್ಲಿಸಿದನು” ಎಂಬುದನ್ನು ಗಮನಿಸಿ. “ಯಾಚನೆ” ಎಂಬ ಪದ ವಿಶೇಷವಾದ ಹೃತ್ಪೂರ್ವಕ ಮತ್ತು ಶ್ರದ್ಧಾಪೂರ್ವಕ ವಿನಂತಿಯನ್ನು ಅಂದರೆ ಸಹಾಯ ಬೇಡುವುದನ್ನು ಸೂಚಿಸುತ್ತದೆ. “ಯಾಚನೆಗಳನ್ನೂ” ಎಂದು ಬಹುವಚನವನ್ನು ಉಪಯೋಗಿಸಿರುವುದು ಯೇಸು ಒಂದಕ್ಕಿಂತ ಹೆಚ್ಚು ಬಾರಿ ಯೆಹೋವನಲ್ಲಿ ಬೇಡಿದ್ದನು ಎಂಬುದನ್ನು ತೋರಿಸುತ್ತದೆ. ವಾಸ್ತವದಲ್ಲಿ ಯೇಸು, ಗೆತ್ಸೇಮನೆ ತೋಟದಲ್ಲಿ ಪುನಃ ಪುನಃ ಹಲವಾರು ಬಾರಿ ಶ್ರದ್ಧೆಯಿಂದ ಪ್ರಾರ್ಥಿಸಿದ್ದನು.—ಮತ್ತಾಯ 26:36-44.
15 ಯೇಸು ದೇವರ ಪರಿಪೂರ್ಣ ಮಗನಾಗಿದ್ದರೂ ತನ್ನ ಸ್ವಂತ ಶಕ್ತಿಯಿಂದ ಎಲ್ಲವನ್ನು ತಾಳಿಕೊಳ್ಳುತ್ತೇನೆಂದು ನೆನಸಲಿಲ್ಲ. ಅದಕ್ಕೆ ಬದಲಾಗಿ ಅವನು ತನ್ನ ಸ್ವರ್ಗೀಯ ತಂದೆಯೆಡೆಗೆ ತಿರುಗಿದನು ಮತ್ತು ಮೇಲಣ ಸಹಾಯಕ್ಕಾಗಿ ಪ್ರಾರ್ಥಿಸಿದನು. ಅಪೊಸ್ತಲ ಪೌಲನು ಬರೆದದ್ದು: “ಕ್ರಿಸ್ತನು . . . ತನ್ನನ್ನು ಮರಣದಿಂದ ಕಾಪಾಡಲು ಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸುತ್ತಾ ಯಾಚನೆಗಳನ್ನೂ ಬಿನ್ನಹಗಳನ್ನೂ ಸಲ್ಲಿಸಿದನು.” (16 ತನ್ನ ಯಾಚನೆಗಳನ್ನು ಯೆಹೋವನು ಉತ್ತರಿಸುವನು ಎಂಬ ಪೂರ್ಣ ಭರವಸೆ ಯೇಸುವಿಗಿತ್ತು. ಏಕೆಂದರೆ ತನ್ನ ತಂದೆ ‘ಪ್ರಾರ್ಥನೆಯನ್ನು ಕೇಳುವವನಾಗಿದ್ದಾನೆ’ ಎಂಬುದು ಅವನಿಗೆ ಗೊತ್ತಿತ್ತು. (ಕೀರ್ತನೆ 65:2) ಮಾನವಪೂರ್ವ ಅಸ್ತಿತ್ವದಲ್ಲಿ ಈ ಜ್ಯೇಷ್ಠಪುತ್ರನು, ತನ್ನ ತಂದೆ ನಿಷ್ಠಾವಂತ ಆರಾಧಕರ ಪ್ರಾರ್ಥನೆಗಳನ್ನು ಹೇಗೆ ಉತ್ತರಿಸುತ್ತಾನೆಂಬುದನ್ನು ಕಂಡಿದ್ದನು. ಉದಾಹರಣೆಗೆ, ಪ್ರವಾದಿ ದಾನಿಯೇಲನು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತಿದ್ದಾಗ, ಅವನ ಪ್ರಾರ್ಥನೆ ಮುಗಿಯುವ ಮೊದಲೇ ಉತ್ತರಕೊಡಲಿಕ್ಕಾಗಿ ಒಬ್ಬ ದೇವದೂತನನ್ನು ಯೆಹೋವನು ಕಳುಹಿಸಿದ್ದನ್ನು ಈ ಮಗನು ಕಣ್ಣಾರೆ ಕಂಡಿದ್ದನು. (ದಾನಿಯೇಲ 9:20, 21) ಹಾಗಾದರೆ ತನ್ನ ಏಕೈಕಜಾತ ಪುತ್ರನು “ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸುತ್ತಾ” ತನ್ನ ಹೃದಯವನ್ನು ಬಿಚ್ಚಿಡುವಾಗ ಅವನ ತಂದೆ ಹೇಗೆ ತಾನೇ ಕೇಳದೇ ಇರಸಾಧ್ಯ? ಯೆಹೋವನು ತನ್ನ ಮಗನ ವಿನಂತಿಗಳನ್ನು ಉತ್ತರಿಸಿದನು ಮತ್ತು ಉಗ್ರ ಪರೀಕ್ಷೆಯ ಸಮಯದಲ್ಲಿ ತಾಳಿಕೊಳ್ಳುವಂತೆ ದೇವದೂತನನ್ನು ಕಳುಹಿಸಿ ಅವನನ್ನು ಬಲಪಡಿಸಿದನು.—ಲೂಕ 22:43.
17. ತಾಳಿಕೊಳ್ಳಲಿಕ್ಕಾಗಿ ನಾವೇಕೆ ಸ್ವರ್ಗದೆಡೆಗೆ ನೋಡಬೇಕು? ನಾವದನ್ನು ಹೇಗೆ ಮಾಡಬಲ್ಲೆವು?
17 ನಾವು ಕೂಡ ತಾಳಿಕೊಳ್ಳಬೇಕಾದರೆ ಸ್ವರ್ಗದೆಡೆಗೆ ಅಂದರೆ, ‘ಶಕ್ತಿಯನ್ನು ಕೊಡುವಾತನಾದ’ ದೇವರ ಕಡೆಗೆ ನೋಡಬೇಕು. (ಫಿಲಿಪ್ಪಿ 4:13) ದೇವರ ಪರಿಪೂರ್ಣ ಮಗನೇ ಸಹಾಯಕ್ಕಾಗಿ ಯೆಹೋವನಿಗೆ ಯಾಚಿಸಬೇಕಿತ್ತಾದರೆ ನಮ್ಮ ಕುರಿತೇನು? ಯೇಸುವಿನಂತೆ ನಾವು ಕೂಡ ಯೆಹೋವನಲ್ಲಿ ಪುನಃ ಪುನಃ ಬೇಡಬೇಕಾದೀತು. (ಮತ್ತಾಯ 7:7) ದೇವದೂತರು ನಮ್ಮನ್ನು ಭೇಟಿಮಾಡುವರೆಂದು ನಾವು ನಿರೀಕ್ಷಿಸಸಾಧ್ಯವಿಲ್ಲ. ಆದರೂ ಒಂದು ವಿಷಯದಲ್ಲಂತೂ ನಾವು ನಿಶ್ಚಿತರಾಗಿರಬಲ್ಲೆವು. ಅದೇನೆಂದರೆ, ‘ಹಗಲೂರಾತ್ರಿ ಯಾಚನೆಗಳನ್ನೂ ಪ್ರಾರ್ಥನೆಗಳನ್ನೂ ಪಟ್ಟುಹಿಡಿದು ಮಾಡುವ’ ನಿಷ್ಠಾವಂತ ಕ್ರೈಸ್ತರ ಬೇಡಿಕೆಗಳನ್ನು ನಮ್ಮ ಪ್ರೀತಿಪೂರ್ವಕ ದೇವರು ಖಂಡಿತ ಈಡೇರಿಸುವನು. (1 ತಿಮೊಥೆಯ 5:5) ಅನಾರೋಗ್ಯ, ಆಪ್ತರೊಬ್ಬರ ನಿಧನ, ವಿರೋಧಿಗಳ ಹಿಂಸೆ, ಹೀಗೆ ಪರೀಕ್ಷೆ ಯಾವುದೇ ರೂಪದಲ್ಲಿ ಬರಲಿ ವಿವೇಕ, ಧೈರ್ಯ ಮತ್ತು ತಾಳಿಕೊಳ್ಳಲು ಬಲಕ್ಕಾಗಿ ನಾವು ಮಾಡುವ ಶ್ರದ್ಧಾಪೂರ್ವಕ ಪ್ರಾರ್ಥನೆಗಳನ್ನು ಯೆಹೋವನು ಖಂಡಿತ ಉತ್ತರಿಸುವನು.—2 ಕೊರಿಂಥ 4:7-11; ಯಾಕೋಬ 1:5.
18. ಕಷ್ಟಗಳ ಬದಲು ತನ್ನ ಮುಂದೆ ಇಡಲ್ಪಟ್ಟಿದ್ದ ವಿಷಯಗಳ ಮೇಲೆ ಯೇಸು ಹೇಗೆ ಗಮನನೆಟ್ಟನು?
18 ತಾಳಿಕೊಳ್ಳಲು ಯೇಸುವಿಗೆ ಸಹಾಯ ಮಾಡಿದ ಎರಡನೇ ಅಂಶವೇನೆಂದರೆ ಅವನು ಭವಿಷ್ಯದೆಡೆಗೆ ನೋಡಿದನು. ಕಷ್ಟದಾಚೆ ತನಗೆ ಏನು ಕಾದಿರಿಸಲ್ಪಟ್ಟಿದೆ ಎಂಬುದರ ಮೇಲೆ ಗಮನನೆಟ್ಟಿದ್ದನು. ‘ಅವನು ತನ್ನ ಮುಂದೆ ಇಡಲ್ಪಟ್ಟಿದ್ದ ಆನಂದಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಯಾತನಾ ಕಂಬವನ್ನು ಸಹಿಸಿಕೊಂಡನು’ ಎಂಬುದಾಗಿ ಯೇಸುವಿನ ಬಗ್ಗೆ ಬೈಬಲ್ ಹೇಳುತ್ತದೆ. (ಇಬ್ರಿಯ 12:2) ಯೇಸುವಿನ ಮಾದರಿಯು, ನಿರೀಕ್ಷೆ, ಆನಂದ ಮತ್ತು ತಾಳ್ಮೆ ಹೇಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ. ಇದನ್ನು ಹೀಗೆ ಸಾರಾಂಶಿಸಬಹುದು. ನಿರೀಕ್ಷೆ ಆನಂದ ತರುತ್ತದೆ ಮತ್ತು ಆನಂದ ತಾಳಿಕೊಳ್ಳುವಂತೆ ಸಾಧ್ಯಮಾಡುತ್ತದೆ. (ರೋಮನ್ನರಿಗೆ 15:13; ಕೊಲೊಸ್ಸೆ 1:11) ಯೇಸುವಿಗೆ ಅತ್ಯದ್ಭುತ ಪ್ರತೀಕ್ಷೆಗಳಿದ್ದವು. ತನ್ನ ನಂಬಿಗಸ್ತಿಕೆಯು ತನ್ನ ತಂದೆಯ ಪರಮಾಧಿಕಾರವನ್ನು ನಿರ್ದೋಷೀಕರಿಸುವುದು ಮತ್ತು ಮಾನವಕುಲವನ್ನು ಪಾಪ ಹಾಗೂ ಮರಣದಿಂದ ಬಿಡುಗಡೆಗೊಳಿಸುವುದು ಎಂಬುದು ಅವನಿಗೆ ಗೊತ್ತಿತ್ತು. ಅಲ್ಲದೆ, ರಾಜನಾಗಿ ಆಳುವ ಮೂಲಕ ಮತ್ತು ಮಹಾ ಯಾಜಕನಾಗಿ ಸೇವೆಸಲ್ಲಿಸುವ ಮೂಲಕ ವಿಧೇಯ ಮಾನವಕುಲಕ್ಕೆ ಹೆಚ್ಚುವರಿ ಆಶೀರ್ವಾದಗಳನ್ನು ತರುವ ನಿರೀಕ್ಷೆಯೂ ಯೇಸುವಿಗಿತ್ತು. (ಮತ್ತಾಯ 20:28; ಇಬ್ರಿಯ 7:23-26) ತನ್ನ ಮುಂದಿದ್ದ ಪ್ರತೀಕ್ಷೆ ಮತ್ತು ನಿರೀಕ್ಷೆಯ ಮೇಲೆ ಗಮನನೆಡುವ ಮೂಲಕ ಯೇಸು ಅಪರಿಮಿತ ಆನಂದವನ್ನು ಕಂಡುಕೊಂಡನು ಮತ್ತು ಆ ಆನಂದವೇ ತಾಳಿಕೊಳ್ಳುವಂತೆ ಅವನಿಗೆ ಸಹಾಯ ಮಾಡಿತು.
19. ನಂಬಿಕೆಯ ಪರೀಕ್ಷೆಗಳನ್ನು ಎದುರಿಸುವಾಗ ನಮ್ಮಲ್ಲಿ ನಿರೀಕ್ಷೆ, ಆನಂದ ಮತ್ತು ತಾಳ್ಮೆ ಒಟ್ಟಿಗೆ ಕೆಲಸಮಾಡುವಂತೆ ಹೇಗೆ ಬಿಡಬಲ್ಲೆವು?
19 ಯೇಸುವಿನಂತೆಯೇ ನಮ್ಮಲ್ಲಿ ನಿರೀಕ್ಷೆ, ಆನಂದ ಮತ್ತು ತಾಳ್ಮೆ ಒಟ್ಟಿಗೆ ಕೆಲಸಮಾಡುವಂತೆ ನಾವು ಬಿಡಬೇಕು. ಅಪೊಸ್ತಲ ಪೌಲನು ಹೇಳಿದ್ದು: “ನಿರೀಕ್ಷೆಯಲ್ಲಿ ಆನಂದಿಸಿರಿ.” ತದನಂತರ ಅವನು ಇನ್ನೂ ಕೂಡಿಸಿದ್ದು: “ಸಂಕಟದಲ್ಲಿರುವಾಗ ತಾಳಿಕೊಳ್ಳಿರಿ.” (ರೋಮನ್ನರಿಗೆ 12:12) ಪ್ರಸ್ತುತ ದಿನಗಳಲ್ಲಿ ನೀವು ನಂಬಿಕೆಯ ಉಗ್ರ ಪರೀಕ್ಷೆಯನ್ನು ಎದುರಿಸುತ್ತಿದ್ದೀರೋ? ಹಾಗಾದರೆ ಭವಿಷ್ಯತ್ತಿನೆಡೆಗೆ ನೋಡಿರಿ. ನೀವು ತೋರಿಸುವ ತಾಳ್ಮೆ ಯೆಹೋವನ ಹೆಸರಿಗೆ ಮಹಿಮೆ ತರುತ್ತದೆ ಎಂಬುದನ್ನು ಎಂದಿಗೂ ಮರೆಯದಿರಿ. ಅಮೂಲ್ಯ ರಾಜ್ಯ ನಿರೀಕ್ಷೆಯ ಮೇಲೆಯೇ ನಿಮ್ಮ ಗಮನನೆಟ್ಟಿರಿ. ಬರಲಿರುವ ದೇವರ ನೂತನ ಲೋಕದಲ್ಲಿ ಸ್ವತಃ ನಿಮ್ಮನ್ನೇ ಚಿತ್ರಿಸಿಕೊಳ್ಳಿ ಮತ್ತು ಪರದೈಸಿನ ಆಶೀರ್ವಾದಗಳನ್ನು ನೀವು ಸ್ವತಃ ಆನಂದಿಸುತ್ತಿರುವುದನ್ನು ಕಲ್ಪಿಸಿಕೊಳ್ಳಿ. ಯೆಹೋವನ ಪರಮಾಧಿಕಾರದ ನಿರ್ದೋಷೀಕರಣ, ಭೂಮಿಯಿಂದ ದುಷ್ಟತನದ ತೆಗೆದುಹಾಕುವಿಕೆ ಮತ್ತು ಅಸ್ವಸ್ಥತೆ ಹಾಗೂ ಮರಣದ ನಿರ್ಮೂಲನ ಇವೆಲ್ಲವುಗಳನ್ನು ಸೇರಿಸುತ್ತಾ ಯೆಹೋವನು ವಾಗ್ದಾನಿಸಿರುವ ಎಲ್ಲ ವಿಸ್ಮಯಕರ ವಿಷಯಗಳನ್ನು ಎದುರುನೋಡುವುದು ನಿಮ್ಮ ಹೃದಯಗಳಲ್ಲಿ ಆನಂದವನ್ನು ತುಂಬಿಸುವುದು. ಮತ್ತು ಆ ಆನಂದ ಯಾವುದೇ ಪರೀಕ್ಷೆಗಳು ಬಂದರೂ ತಾಳಿಕೊಳ್ಳಲು ನಿಮಗೆ ಸಹಾಯ ಮಾಡುವುದು. ರಾಜ್ಯ ನಿರೀಕ್ಷೆಗೆ ಹೋಲಿಸುವಾಗ ಈ ವ್ಯವಸ್ಥೆಯಲ್ಲಿ ನಾವು ಅನುಭವಿಸುವ ಯಾವುದೇ ಕಷ್ಟವು, “ಕ್ಷಣಮಾತ್ರದ್ದೂ ಹಗುರವಾದದ್ದೂ ಆಗಿರುತ್ತದೆ.”—2 ಕೊರಿಂಥ 4:17.
‘ಅವನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಿರಿ’
20, 21. ತಾಳ್ಮೆಯ ಸಂಬಂಧದಲ್ಲಿ ಯೆಹೋವನು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ? ನಮ್ಮ ದೃಢನಿರ್ಧಾರ ಏನಾಗಿರಬೇಕು?
20 ತನ್ನ ಹಿಂಬಾಲಕರಾಗಿರುವುದು ಅಷ್ಟೇನೂ ಸುಲಭವಲ್ಲ, ಅದು ತಾಳ್ಮೆಯನ್ನು ಕೇಳಿಕೊಳ್ಳುತ್ತದೆಂದು ಯೇಸುವಿಗೆ ಗೊತ್ತಿತ್ತು. (ಯೋಹಾನ 15:20) ಆದ್ದರಿಂದ ತನ್ನ ಮಾದರಿಯು ಇತರರನ್ನು ಬಲಪಡಿಸುವುದು ಎಂಬುದನ್ನು ತಿಳಿದಿದ್ದ ಯೇಸು ಇತರರಿಗೆ ದಾರಿತೋರಿಸಲು ಸಿದ್ಧನಿದ್ದನು. (ಯೋಹಾನ 16:33) ಯೇಸು ತಾಳ್ಮೆಯ ಕುರಿತ ಪರಿಪೂರ್ಣ ಮಾದರಿಯನ್ನಿಟ್ಟನು. ನಾವಾದರೋ ಪರಿಪೂರ್ಣತೆಯಿಂದ ಎಷ್ಟೋ ದೂರದಲ್ಲಿದ್ದೇವೆ. ಯೆಹೋವನು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ? ಪೇತ್ರನು ವಿವರಿಸುವುದು: “ಕ್ರಿಸ್ತನು ಸಹ ನಿಮಗೋಸ್ಕರ ಕಷ್ಟವನ್ನು ಅನುಭವಿಸಿ ನೀವು ತನ್ನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ ನಿಮಗೋಸ್ಕರ ಮಾದರಿಯನ್ನು ತೋರಿಸಿ ಹೋದನು.” (1 ಪೇತ್ರ 2:21) ಕಷ್ಟಗಳನ್ನು ಎದುರಿಸುವ ವಿಷಯದಲ್ಲಿ ಯೇಸು ನಮಗೆ “ಮಾದರಿಯನ್ನು” ಅಂದರೆ ನಕಲು ಮಾಡಲಿಕ್ಕಾಗಿ ಒಂದು ನಮೂನೆಯನ್ನು ತೋರಿಸಿ ಹೋದನು. * ಅವನು ತೋರಿಸಿದ ತಾಳ್ಮೆಯ ದಾಖಲೆಯನ್ನು ‘ಹೆಜ್ಜೆಜಾಡಿಗೆ’ ಅಥವಾ ಹೆಜ್ಜೆಗುರುತುಗಳಿಗೆ ಹೋಲಿಸಬಹುದು. ನಾವು ಅವುಗಳನ್ನು ಪರಿಪೂರ್ಣವಾಗಿ ಹಿಂಬಾಲಿಸಲಾರೆವು ಆದರೆ ‘ನಿಕಟವಾಗಿಯಂತೂ’ ಹಿಂಬಾಲಿಸಬಲ್ಲೆವು.
21 ಆದ್ದರಿಂದ ನಮ್ಮಿಂದ ಎಷ್ಟು ಸಾಧ್ಯವಾಗುತ್ತೋ ಅಷ್ಟರ ಮಟ್ಟಿಗೆ ಯೇಸುವಿನ ಮಾದರಿಯನ್ನು ಅನುಸರಿಸಲು ದೃಢನಿರ್ಧಾರ ಮಾಡೋಣ. ನಾವು ಯೇಸುವಿನ ಹೆಜ್ಜೆಜಾಡನ್ನು ಹೆಚ್ಚು ನಿಕಟವಾಗಿ ಅನುಸರಿಸಿದಂತೆ “ಕಡೇ ವರೆಗೆ” ಅಂದರೆ ಈ ವಿಷಯಗಳ ವ್ಯವಸ್ಥೆಯ ಕೊನೇ ವರೆಗೆ ಅಥವಾ ನಮ್ಮ ಸದ್ಯದ ಜೀವನದ ಕೊನೇ ವರೆಗೆ ತಾಳಿಕೊಳ್ಳಲು ನಾವು ಹೆಚ್ಚೆಚ್ಚು ಶಕ್ತರಾಗುವೆವು ಎಂಬುದನ್ನು ಮರೆಯದಿರೋಣ. ಇವುಗಳಲ್ಲಿ ಯಾವುದು ಮೊದಲು ಬರುವುದೋ ನಮಗೆ ಗೊತ್ತಿಲ್ಲ. ಆದರೆ ನಮ್ಮ ತಾಳ್ಮೆಗಾಗಿ ಯೆಹೋವನು ನಿತ್ಯಕ್ಕೂ ನಮ್ಮನ್ನು ಆಶೀರ್ವದಿಸುವನು ಎಂಬುದಂತೂ ನಮಗೆ ಗೊತ್ತಿದೆ.—ಮತ್ತಾಯ 24:13.
^ ಪ್ಯಾರ. 20 “ಮಾದರಿ” ಎಂದು ಭಾಷಾಂತರಿಸಲ್ಪಟ್ಟ ಗ್ರೀಕ್ ಪದದ ಅಕ್ಷರಾರ್ಥ “ಬರವಣಿಗೆಯ ಪ್ರತಿ” ಎಂದಾಗಿದೆ. ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ ಈ ಪದವನ್ನು ಉಪಯೋಗಿಸಿದ ಏಕೈಕ ಬರಹಗಾರ ಪೇತ್ರನಾಗಿದ್ದಾನೆ. ಇದು ಮಕ್ಕಳು ತಮ್ಮ ನೋಟ್ ಬುಕ್‌ನಲ್ಲಿ ನಕಲು ಮಾಡಲು ಬಳಸುವ ‘ಮೂಲಪ್ರತಿಗೆ’ ಸೂಚಿಸುತ್ತದೆ. ಮೂಲ ಅಕ್ಷರಗಳನ್ನು ನಕಲು ಮಾಡಬೇಕಾದರೆ ಮಕ್ಕಳು ಆ ಪರಿಪೂರ್ಣ ಮಾದರಿಯನ್ನು ಸರಿಯಾಗಿ ಅನುಕರಿಸಬೇಕಾಗಿದೆ.