ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 17

ಇದಕ್ಕಿಂತ “ಹೆಚ್ಚಿನ ಪ್ರೀತಿಯು ಯಾರಲ್ಲಿಯೂ ಇಲ್ಲ”

ಇದಕ್ಕಿಂತ “ಹೆಚ್ಚಿನ ಪ್ರೀತಿಯು ಯಾರಲ್ಲಿಯೂ ಇಲ್ಲ”

1-4. (ಎ) ಪಿಲಾತನು ತನ್ನ ಅರಮನೆಯ ಹೊರಗಡೆ ನೆರೆದಿದ್ದ ಉದ್ರಿಕ್ತ ಜನರ ಗುಂಪಿನ ಮುಂದೆ ಯೇಸು ಕ್ರಿಸ್ತನನ್ನು ಹಾಜರುಪಡಿಸಿದಾಗ ಏನು ಸಂಭವಿಸುತ್ತದೆ? (ಬಿ) ಅವಮಾನ ಮತ್ತು ಕಷ್ಟಾನುಭವಕ್ಕೆ ಯೇಸು ಹೇಗೆ ಪ್ರತಿಕ್ರಿಯಿಸಿದನು? ಯಾವ ಪ್ರಮುಖ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ?

ಇಸವಿ ಕ್ರಿ.ಶ. 33. ಪಸ್ಕಹಬ್ಬದ ದಿನದ ಮುಂಜಾನೆಯ ಸಮಯ. ರೋಮನ್‌ ರಾಜ್ಯಪಾಲ ಪೊಂತ್ಯ ಪಿಲಾತನು, “ಇಗೋ, ಈ ಮನುಷ್ಯನು!” ಎಂದು ಹೇಳುತ್ತಾ ತನ್ನ ಅರಮನೆಯ ಹೊರಗಡೆ ನೆರೆದಿದ್ದ ಉದ್ರಿಕ್ತ ಜನರ ಗುಂಪಿನ ಮುಂದೆ ಯೇಸು ಕ್ರಿಸ್ತನನ್ನು ಹಾಜರುಪಡಿಸುತ್ತಾನೆ. (ಯೋಹಾನ 19:5) ಕೆಲವು ದಿನಗಳ ಮುಂಚೆಯಷ್ಟೇ ಯೇಸು, ದೇವನೇಮಿತ ರಾಜನೋಪಾದಿ ವಿಜಯೋತ್ಸವದಿಂದ ಯೆರೂಸಲೇಮನ್ನು ಪ್ರವೇಶಿಸಿದ್ದನು ಮತ್ತು ಜನರ ಗುಂಪು ಅವನಿಗೆ ಜಯಕಾರ ಕೂಡ ಹಾಕಿತ್ತು. ಆದರೆ ಈಗ ಉದ್ರಿಕ್ತ ಗುಂಪು ಯೇಸುವಿನ ಬಗ್ಗೆ ತೀರಾ ವಿರುದ್ಧವಾದ ದೃಷ್ಟಿಕೋನ ಹೊಂದಿದೆ.

2 ಯೇಸುವಿಗೆ ರಾಜವೈಭವದ ಕೆನ್ನೀಲಿ ಬಣ್ಣದ ಮೇಲಂಗಿಯನ್ನು ಮತ್ತು ತಲೆಗೆ ಕಿರೀಟವನ್ನು ತೊಡಿಸಲಾಗಿದೆ. ಆದರೆ, ಕೊರಡೆಯೇಟಿನಿಂದ ಸೀಳಲ್ಪಟ್ಟು ರಕ್ತಸಿಕ್ತವಾಗಿದ್ದ ಮೈಗೆ ರಾಜವೈಭವದ ಮೇಲಂಗಿಯನ್ನು ತೊಡಿಸಿದ್ದು ಮತ್ತು ರಕ್ತಮಯವಾಗಿದ್ದ ನೆತ್ತಿಗೆ ಚೂಪಾದ ಮುಳ್ಳುಗಳಿಂದ ಹೆಣೆಯಲ್ಪಟ್ಟ ಕಿರೀಟವನ್ನು ಇಟ್ಟದ್ದು ಅವನ ಅರಸುತನವನ್ನು ಅಣಕಿಸಲಿಕ್ಕಾಗಿಯೇ. ಮುಖ್ಯ ಯಾಜಕರ ಕುಮ್ಮಕ್ಕಿನಿಂದ ಪ್ರಚೋದನೆಗೊಂಡ ಜನರು ತಮ್ಮ ಮುಂದೆ ಜರ್ಜರಿತನಾಗಿ ನಿಂತಿದ್ದ ಯೇಸುವಿಗೆ ಧಿಕ್ಕಾರ ಹಾಕುತ್ತಾರೆ. “ಅವನನ್ನು ಶೂಲಕ್ಕೇರಿಸು! ಅವನನ್ನು ಶೂಲಕ್ಕೇರಿಸು!” ಎಂದು ಯಾಜಕರು ಗಟ್ಟಿಯಾಗಿ ಕೂಗಿದರೆ, ಅವನ ಸಾವನ್ನೇ ಆಶಿಸುತ್ತಿದ್ದ ಜನರು “ಅವನು ಸಾಯಲೇಬೇಕು” ಎಂದು ಕಿರುಚುತ್ತಾರೆ.—ಯೋಹಾನ 19:1-7.

3 ಯೇಸು ಪ್ರಶಾಂತನಾಗಿ ಧೈರ್ಯದಿಂದ ಅವಮಾನ ಮತ್ತು ಕಷ್ಟಾನುಭವವನ್ನು ಮರುಮಾತೆತ್ತದೆ ಸಹಿಸಿಕೊಳ್ಳುತ್ತಾನೆ. * ಅವನು ಸಾಯಲಿಕ್ಕಾಗಿ ಪೂರ್ತಿ ಸಿದ್ಧನಾಗಿದ್ದಾನೆ. ಆ ಪಸ್ಕಹಬ್ಬದ ದಿನದಂದು ಯಾತನಾ ಕಂಬದ ಮೇಲಿನ ವೇದನಾಮಯ ಮರಣಕ್ಕೆ ಸಿದ್ಧಮನಸ್ಸಿನಿಂದ ತನ್ನನ್ನೇ ಒಪ್ಪಿಸಿಕೊಡುತ್ತಾನೆ.—ಯೋಹಾನ 19:17, 18, 30.

4 ಪ್ರಾಣವನ್ನೇ ಒಪ್ಪಿಸಿಕೊಡುವ ಮೂಲಕ ತನ್ನ ಹಿಂಬಾಲಕರ ನಿಜ ಸ್ನೇಹಿತನೆಂಬುದನ್ನು ಯೇಸು ರುಜುಪಡಿಸಿದನು. ಅವನಂದದ್ದು: “ಒಬ್ಬನು ತನ್ನ ಸ್ನೇಹಿತರಿಗೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾರಲ್ಲಿಯೂ ಇಲ್ಲ.” (ಯೋಹಾನ 15:13) ಇದು ಕೆಲವು ಪ್ರಮುಖ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಯೇಸು ಅಷ್ಟೊಂದು ಕಷ್ಟಾನುಭವಿಸಿ ಸಾಯುವ ಆವಶ್ಯಕತೆಯಾದರೂ ಏನಿತ್ತು? ಅವನು ಪ್ರಾಣಕೊಡಲು ಸಿದ್ಧನಿದ್ದದ್ದೇಕೆ? ಅವನ ‘ಸ್ನೇಹಿತರು’ ಮತ್ತು ಹಿಂಬಾಲಕರು ಆಗಿರುವ ನಾವು ಅವನ ಮಾದರಿಯನ್ನು ಹೇಗೆ ಅನುಕರಿಸಬಲ್ಲೆವು?

ಯೇಸು ಕಷ್ಟಾನುಭವಿಸಿ ಸಾಯುವ ಆವಶ್ಯಕತೆಯಿತ್ತೊ?

5. ತಾನು ಏನೆಲ್ಲ ಪರೀಕ್ಷೆಗಳನ್ನು ಅನುಭವಿಸಲಿದ್ದೇನೆ ಎಂಬುದರ ಕುರಿತ ವಿವರಗಳನ್ನು ಯೇಸು ಹೇಗೆ ತಿಳಿದುಕೊಂಡನು?

5 ವಾಗ್ದತ್ತ ಮೆಸ್ಸೀಯನಾದ ಯೇಸುವಿಗೆ, ತಾನು ಏನೆಲ್ಲ ಕಷ್ಟಗಳನ್ನು ಅನುಭವಿಸಲಿದ್ದೇನೆ ಎಂಬುದು ಚೆನ್ನಾಗಿ ತಿಳಿದಿತ್ತು. ಹೀಬ್ರು ಶಾಸ್ತ್ರವಚನಗಳು ಮೆಸ್ಸೀಯನ ಕಷ್ಟಾನುಭವ ಮತ್ತು ಮರಣದ ಬಗೆಗಿನ ವಿವರಗಳನ್ನು ಮುಂತಿಳಿಸಿದ್ದವು ಮತ್ತು ಆ ಪ್ರವಾದನೆಗಳನ್ನು ಯೇಸು ಅರಿತಿದ್ದನು. (ಯೆಶಾಯ 53:3-7, 12; ದಾನಿಯೇಲ 9:26) ಏನೇನು ಪರೀಕ್ಷೆಗಳನ್ನು ಎದುರಿಸಲಿದ್ದೇನೆಂದು ಅವನು ಒಂದಕ್ಕಿಂತ ಹೆಚ್ಚು ಬಾರಿ ತನ್ನ ಶಿಷ್ಯರಿಗೆ ತಿಳಿಸಿದ್ದನು. (ಮಾರ್ಕ 8:31; 9:31) ತನ್ನ ಕೊನೇ ಪಸ್ಕಹಬ್ಬವನ್ನು ಆಚರಿಸಲಿಕ್ಕಾಗಿ ಯೆರೂಸಲೇಮಿಗೆ ಹೋಗುತ್ತಿದ್ದಾಗ ತನ್ನ ಅಪೊಸ್ತಲರಿಗೆ ಅವನು ಸ್ಪಷ್ಟವಾಗಿ ತಿಳಿಸಿದ್ದು: “ಮನುಷ್ಯಕುಮಾರನು ಮುಖ್ಯ ಯಾಜಕರ ಹಾಗೂ ಶಾಸ್ತ್ರಿಗಳ ಕೈಗೆ ಒಪ್ಪಿಸಲ್ಪಡುವನು; ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಅನ್ಯಜನರ ಕೈಗೆ ಒಪ್ಪಿಸುವರು. ಮತ್ತು ಅವರು ಅವನನ್ನು ಅಪಹಾಸ್ಯಮಾಡಿ ಅವನ ಮೇಲೆ ಉಗುಳಿ ಅವನನ್ನು ಕೊರಡೆಗಳಿಂದ ಹೊಡೆದು ಕೊಲ್ಲುವರು.” (ಮಾರ್ಕ 10:33, 34) ಇವುಗಳೇನು ಬರಿಯ ಮಾತುಗಳಾಗಿರಲಿಲ್ಲ. ನಾವಿಗಾಗಲೇ ನೋಡಿರುವಂತೆ ಯೇಸುವಿಗೆ ಅಪಹಾಸ್ಯ ಮಾಡಲಾಯಿತು, ಮುಖದ ಮೇಲೆ ಉಗುಳಲಾಯಿತು, ಕೊರಡೆಗಳಿಂದ ಹೊಡೆಯಲಾಯಿತು ಮತ್ತು ಕೊಲ್ಲಲಾಯಿತು.

6. ಯೇಸು ಕಷ್ಟಾನುಭವಿಸಿಯೇ ಯಾಕೆ ಸಾಯಬೇಕಿತ್ತು?

6 ಆದರೆ ಯೇಸು ಕಷ್ಟಾನುಭವಿಸಿಯೇ ಯಾಕೆ ಸಾಯಬೇಕಿತ್ತು? ಅದಕ್ಕೆ ಹಲವು ಪ್ರಮುಖ ಕಾರಣಗಳಿದ್ದವು. ಮೊದಲನೆಯದಾಗಿ, ನಿಷ್ಠಾವಂತನಾಗಿ ಉಳಿಯುವ ಮೂಲಕ ಯೇಸು ತನ್ನ ಸಮಗ್ರತೆಯನ್ನು ರುಜುಪಡಿಸಬಹುದಿತ್ತು ಮತ್ತು ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಬಹುದಿತ್ತು. ಮಾನವರು ಸ್ವಾರ್ಥ ಲಾಭಕ್ಕಾಗಿ ದೇವರನ್ನು ಆರಾಧಿಸುತ್ತಾರೆಂದು ಸೈತಾನನು ಮಾಡಿದ ಸುಳ್ಳು ಆರೋಪವನ್ನು ಜ್ಞಾಪಿಸಿಕೊಳ್ಳಿ. (ಯೋಬ 2:1-5) ಯೇಸು, “ಯಾತನಾ ಕಂಬದ ಮೇಲೆ ಮರಣವನ್ನು ಹೊಂದುವಷ್ಟರ ಮಟ್ಟಿಗೆ” ನಂಬಿಗಸ್ತನಾಗಿ ಉಳಿಯುವ ಮೂಲಕ ಸೈತಾನನ ಆ ಹುರುಳಿಲ್ಲದ ಆರೋಪಕ್ಕೆ ಸಾಧ್ಯವಿರುವುದರಲ್ಲೇ ಉತ್ತಮ ಉತ್ತರ ಕೊಟ್ಟನು. (ಫಿಲಿಪ್ಪಿ 2:8; ಜ್ಞಾನೋಕ್ತಿ 27:11) ಎರಡನೆಯದಾಗಿ, ಮೆಸ್ಸೀಯನ ಕಷ್ಟಾನುಭವ ಮತ್ತು ಮರಣವು ಇತರರ ಪಾಪಗಳನ್ನು ಪರಿಹರಿಸಲಿತ್ತು. (ಯೆಶಾಯ 53:5, 10; ದಾನಿಯೇಲ 9:24) ಯೇಸು “ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ” ಕೊಡುವ ಮೂಲಕ ದೇವರೊಂದಿಗೆ ಅನುಗ್ರಹಭರಿತ ಸಂಬಂಧವನ್ನು ನಾವು ಹೊಂದುವಂತೆ ದಾರಿತೆರೆದನು. (ಮತ್ತಾಯ 20:28) ಮೂರನೆಯದಾಗಿ, ಎಲ್ಲ ತರಹದ ಪರೀಕ್ಷೆಗಳು ಮತ್ತು ಕಷ್ಟಗಳನ್ನು ತಾಳಿಕೊಳ್ಳುವ ಮೂಲಕ ಯೇಸು ‘ನಮ್ಮಂತೆಯೇ ಎಲ್ಲ ವಿಷಯಗಳಲ್ಲಿ ಪರೀಕ್ಷಿತನಾದನು.’ ಆದ್ದರಿಂದ ಅವನು “ನಮ್ಮ ಬಲಹೀನತೆಗಳ ಕಡೆಗೆ ಅನುತಾಪಪಡಲು” ಶಕ್ತನಾದ ಸಹಾನುಭೂತಿಯುಳ್ಳ ಮಹಾ ಯಾಜಕನಾಗಿದ್ದಾನೆ.—ಇಬ್ರಿಯ 2:17, 18; 4:15.

ಯೇಸು ಪ್ರಾಣಕೊಡಲು ಸಿದ್ಧನಿದ್ದದ್ದೇಕೆ?

7. ಭೂಮಿಗೆ ಬರಲು ಯೇಸು ಏನೆಲ್ಲ ತ್ಯಾಗಮಾಡಬೇಕಾಯಿತು?

7 ಯೇಸು ಏನನ್ನು ಮಾಡಲು ಸಿದ್ಧನಿದ್ದನು ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಕೆಳಗಿನ ಸನ್ನಿವೇಶದ ಕುರಿತು ಸ್ವಲ್ಪ ಯೋಚಿಸಿ. ಒಬ್ಬ ಮನುಷ್ಯನು ವಿದೇಶಕ್ಕೆ ಹೋಗಬೇಕೆಂದಿದ್ದಾನೆ. ಆದರೆ ಅಲ್ಲಿ ಹೆಚ್ಚಿನ ಜನರು ತನ್ನನ್ನು ವಿರೋಧಿಸಲಿದ್ದಾರೆ, ತನ್ನನ್ನು ಅವಮಾನಿಸಿ, ಕಷ್ಟಕೊಟ್ಟು, ಕೊನೆಯಲ್ಲಿ ಸಾಯಿಸಲಿದ್ದಾರೆ ಎಂಬ ವಿಚಾರಗಳೆಲ್ಲ ಅವನಿಗೆ ಮೊದಲೇ ತಿಳಿದಿವೆ. ಇಷ್ಟೆಲ್ಲಾ ವಿಚಾರಗಳು ಗೊತ್ತಿದ್ದರೂ ಅವನು ತನ್ನ ಮನೆಮಠ ಹಾಗೂ ಕುಟುಂಬವನ್ನು ಬಿಟ್ಟು ಅಲ್ಲಿಗೆ ಹೋಗಲು ಮನಸ್ಸು ಮಾಡುವನೋ? ಈಗ, ಯೇಸು ಏನು ಮಾಡಿದನೆಂಬುದನ್ನು ಪರಿಗಣಿಸಿ. ಭೂಮಿಗೆ ಬರುವ ಮುಂಚೆ ಯೇಸುವಿಗೆ ತನ್ನ ತಂದೆಯ ಬಳಿ ಅದ್ವಿತೀಯ ಸ್ಥಾನವಿತ್ತು. ಆದಾಗ್ಯೂ ಯೇಸು ಸಿದ್ಧಮನಸ್ಸಿನಿಂದ ತನ್ನ ಸ್ವರ್ಗೀಯ ವಾಸ ಬಿಟ್ಟು ಮಾನವನಾಗಿ ಭೂಮಿಗೆ ಬಂದನು. ಹೆಚ್ಚಿನ ಜನರು ತನ್ನನ್ನು ವಿರೋಧಿಸಲಿದ್ದಾರೆ, ತನ್ನನ್ನು ಕ್ರೂರವಾಗಿ ಅವಮಾನಿಸಲಾಗುವುದು, ತಾನು ಕಷ್ಟಾನುಭವಿಸಬೇಕಾಗುವುದು ಮತ್ತು ವೇದನಾಮಯ ಮರಣಕ್ಕೆ ಒಳಗಾಗಬೇಕಾಗುವುದು ಎಂಬುದು ಗೊತ್ತಿದ್ದರೂ ಅವನು ಭೂಮಿಗೆ ಬಂದನು. (ಫಿಲಿಪ್ಪಿ 2:5-7) ಈ ತ್ಯಾಗವನ್ನು ಮಾಡಲು ಯೇಸುವನ್ನು ಯಾವುದು ಪ್ರಚೋದಿಸಿತು?

8, 9. ತನ್ನ ಪ್ರಾಣವನ್ನು ಕೊಡಲು ಯೇಸುವನ್ನು ಯಾವುದು ಪ್ರಚೋದಿಸಿತು?

8 ಮುಖ್ಯವಾಗಿ, ತಂದೆಯ ಮೇಲಿದ್ದ ಗಾಢವಾದ ಪ್ರೀತಿ ಯೇಸುವನ್ನು ಪ್ರಚೋದಿಸಿತು. ಯೇಸು ತಾಳಿಕೊಂಡದ್ದು ತಾನೇ ಯೆಹೋವನ ಮೇಲೆ ಅವನಿಗಿದ್ದ ಪ್ರೀತಿಯನ್ನು ಸಾಬೀತುಪಡಿಸಿತು. ಅಂಥ ಪ್ರೀತಿ ಇದ್ದುದರಿಂದಲೇ ಯೇಸು ತನ್ನ ತಂದೆಯ ಹೆಸರು ಮತ್ತು ಕೀರ್ತಿಯ ಬಗ್ಗೆ ಚಿಂತಿಸಿದನು. (ಮತ್ತಾಯ 6:9; ಯೋಹಾನ 17:1-6, 26) ತನ್ನ ತಂದೆಯ ಹೆಸರಿನ ಮೇಲೆ ಹೊರಿಸಲಾಗಿರುವ ದೋಷಾರೋಪಣೆಯಿಂದ ಅದನ್ನು ಮುಕ್ತಗೊಳಿಸುವುದೇ ಯೇಸುವಿನ ಅತೀವ ಬಯಕೆಯಾಗಿತ್ತು. ತನ್ನ ತಂದೆಯ ಶ್ರೇಷ್ಠ ಹೆಸರನ್ನು ಪವಿತ್ರೀಕರಿಸುವುದರಲ್ಲಿ ತನ್ನ ಸಮಗ್ರತೆಗೂ ಪಾಲಿದೆ ಎಂಬುದು ಅವನಿಗೆ ತಿಳಿದಿತ್ತು. ಆದ್ದರಿಂದ ನೀತಿಯ ನಿಮಿತ್ತ ಕಷ್ಟಾನುಭವಿಸುವುದು ತನ್ನ ಪಾಲಿನ ಅತ್ಯುಚ್ಛ ಸುಯೋಗವೆಂದು ಅವನು ಎಣಿಸಿದನು.—1 ಪೂರ್ವಕಾಲವೃತ್ತಾಂತ 29:13.

9 ತನ್ನ ಪ್ರಾಣವನ್ನು ಕೊಡಲು ಯೇಸುವಿಗೆ ಇನ್ನೊಂದು ಪ್ರಚೋದನೆಯೂ ಇತ್ತು. ಅದುವೇ ಮಾನವಕುಲದ ಮೇಲಿನ ಪ್ರೀತಿ. ಈ ಪ್ರೀತಿ ಮಾನವ ಇತಿಹಾಸದ ಆರಂಭದಿಂದಲೇ ಅವನಲ್ಲಿತ್ತು. ಯೇಸು ಭೂಮಿಗೆ ಬರುವುದಕ್ಕೂ ಎಷ್ಟೋ ಸಮಯದ ಮುಂಚೆ “ಮಾನವಸಂತಾನದಲ್ಲಿ ಹರ್ಷಿಸುತ್ತಾ” ಇದ್ದನು ಎಂಬುದಾಗಿ ಬೈಬಲ್‌ ಪ್ರಕಟಪಡಿಸುತ್ತದೆ. (ಜ್ಞಾನೋಕ್ತಿ 8:30, 31) ಅವನು ಭೂಮಿಗೆ ಬಂದಾಗ ಈ ಪ್ರೀತಿ ಸ್ಪಷ್ಟವಾಗಿ ಕಾಣಸಿಕ್ಕಿತು. ಯೇಸು ಸಾಮಾನ್ಯ ಜನರಿಗಾಗಿ, ಅದರಲ್ಲೂ ನಿರ್ದಿಷ್ಟವಾಗಿ ತನ್ನ ಶಿಷ್ಯರಿಗಾಗಿ ಹಲವಾರು ವಿಧಗಳಲ್ಲಿ ಪ್ರೀತಿ ತೋರಿಸಿದ್ದನ್ನು ನಾವು ಹಿಂದಿನ ಮೂರು ಅಧ್ಯಾಯಗಳಲ್ಲಿ ನೋಡಿದ್ದೇವೆ. ಆದರೆ, ಕ್ರಿ.ಶ. 33ರ ನೈಸಾನ್‌ 14ರಂದು ಅವನು ನಮಗಾಗಿ ತನ್ನ ಪ್ರಾಣವನ್ನೇ ಒಪ್ಪಿಸಿಕೊಟ್ಟನು. (ಯೋಹಾನ 10:11) ನಮ್ಮ ಮೇಲಿನ ತನ್ನ ಪ್ರೀತಿಯನ್ನು ಯೇಸು ಇದಕ್ಕಿಂತಲೂ ಉತ್ತಮವಾದ ವಿಧದಲ್ಲಿ ತೋರಿಸಲು ಸಾಧ್ಯವೇ ಇರಲಿಲ್ಲ. ಈ ವಿಷಯದಲ್ಲಿ ನಾವು ಅವನನ್ನು ಅನುಕರಿಸಬೇಕೋ? ಹೌದು, ಖಂಡಿತ. ಏಕೆಂದರೆ ಹಾಗೆ ಮಾಡುವಂತೆ ನಮಗೆ ಆಜ್ಞೆಕೊಡಲಾಗಿದೆ.

“ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು”

10, 11. ಯೇಸು ತನ್ನ ಹಿಂಬಾಲಕರಿಗೆ ಕೊಟ್ಟ ಹೊಸ ಆಜ್ಞೆ ಯಾವುದು? ಅದರಲ್ಲಿ ಏನು ಸೇರಿದೆ? ಅದನ್ನು ನಾವು ಪಾಲಿಸುವುದು ಪ್ರಾಮುಖ್ಯವೇಕೆ?

10 ತಾನು ಸಾಯುವುದಕ್ಕೂ ಮುಂಚಿನ ರಾತ್ರಿಯಂದು ಯೇಸು ತನ್ನ ಆಪ್ತ ಶಿಷ್ಯರಿಗೆ, “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಅದೇನೆಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು” ಎಂದು ಹೇಳಿದನು. (ಯೋಹಾನ 13:34, 35) “ಒಬ್ಬರನ್ನೊಬ್ಬರು ಪ್ರೀತಿಸಬೇಕು” ಎಂಬುದು “ಒಂದು ಹೊಸ ಆಜ್ಞೆ” ಆಗಿದೆಯೇಕೆ? ಮೋಶೆಯ ಧರ್ಮಶಾಸ್ತ್ರದಲ್ಲಿ, “ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು” ಎಂಬ ಆಜ್ಞೆ ಈ ಮುಂಚೆಯೇ ಇತ್ತು. (ಯಾಜಕಕಾಂಡ 19:18) ಆದರೆ ಈ ಹೊಸ ಆಜ್ಞೆ ಹೆಚ್ಚಿನ ಪ್ರೀತಿಯನ್ನು ಅಂದರೆ, ಇತರರಿಗಾಗಿ ನಮ್ಮ ಪ್ರಾಣವನ್ನೇ ಒಪ್ಪಿಸಿಕೊಡುವ ಪ್ರೀತಿಯನ್ನು ಕೇಳಿಕೊಳ್ಳುತ್ತದೆ. ಇದನ್ನೇ ತಿಳಿಸುತ್ತಾ ಯೇಸು ಹೇಳಿದ್ದು: “ನಾನು ನಿಮ್ಮನ್ನು ಪ್ರೀತಿಸಿದ ಪ್ರಕಾರವೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದು ನನ್ನ ಆಜ್ಞೆಯಾಗಿದೆ. ಒಬ್ಬನು ತನ್ನ ಸ್ನೇಹಿತರಿಗೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾರಲ್ಲಿಯೂ ಇಲ್ಲ.” (ಯೋಹಾನ 15:12, 13) ವಾಸ್ತವದಲ್ಲಿ ಹೊಸ ಆಜ್ಞೆ ಹೀಗೆ ಹೇಳುವಂತಿದೆ: “ಇತರರನ್ನು ಕೇವಲ ನಿಮ್ಮಂತೆಯೇ ಅಲ್ಲ, ನಿಮಗಿಂತಲೂ ಹೆಚ್ಚಾಗಿ ಪ್ರೀತಿಸಿರಿ.” ಯೇಸುವಿನ ಜೀವನ ಮತ್ತು ಮರಣವು ನಿಜವಾಗಿಯೂ ಇಂಥ ಪ್ರೀತಿಯ ನಿದರ್ಶನವಾಗಿತ್ತು.

11 ಈ ಹೊಸ ಆಜ್ಞೆಯನ್ನು ನಾವು ಪಾಲಿಸುವುದು ಪ್ರಾಮುಖ್ಯವೇಕೆ? ಯೇಸುವಿನ ಈ ಮಾತುಗಳನ್ನು ನೆನಪಿಗೆ ತನ್ನಿ: “ನಿಮ್ಮ ಮಧ್ಯೆ [ಸ್ವತ್ಯಾಗದ] ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.” ಹೌದು, ಸ್ವತ್ಯಾಗದ ಪ್ರೀತಿಯು ನಮ್ಮನ್ನು ನಿಜ ಕ್ರೈಸ್ತರೆಂದು ಗುರುತಿಸುತ್ತದೆ. ನಾವು ಈ ಪ್ರೀತಿಯನ್ನು ಗುರುತಿಗಾಗಿ ಧರಿಸುವ ಬ್ಯಾಡ್ಜ್‌ಗೆ ಹೋಲಿಸಬಹುದು. ಯೆಹೋವನ ಸಾಕ್ಷಿಗಳ ವಾರ್ಷಿಕ ಅಧಿವೇಶನಗಳಿಗೆ ಹಾಜರಾಗುವವರು ಬ್ಯಾಡ್ಜ್‌ಗಳನ್ನು ಧರಿಸಿರುತ್ತಾರೆ. ಬ್ಯಾಡ್ಜ್‌ನಲ್ಲಿರುವ ಹೆಸರು ಮತ್ತು ಸಭೆ ಅದನ್ನು ಧರಿಸಿರುವವರನ್ನು ಗುರುತಿಸುತ್ತದೆ. ಅಂತೆಯೇ ಪರಸ್ಪರರಿಗಾಗಿರುವ ಸ್ವತ್ಯಾಗದ ಪ್ರೀತಿಯು ನಿಜ ಕ್ರೈಸ್ತರನ್ನು ಗುರುತಿಸುವ ಬ್ಯಾಡ್ಜ್‌ ಆಗಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಬ್ಯಾಡ್ಜ್‌ ಹೇಗೆ ಇತರರ ಕಣ್ಣಿಗೆ ಫಕ್ಕನೆ ಬೀಳುತ್ತದೋ ಅದೇ ರೀತಿ ಪರಸ್ಪರ ನಾವು ತೋರಿಸುವ ಪ್ರೀತಿಯು ಸ್ಪಷ್ಟವಾಗಿ ತೋರಿಬರಬೇಕು ಮತ್ತು ನಾವು ಕ್ರಿಸ್ತನ ನಿಜ ಹಿಂಬಾಲಕರೆಂಬದನ್ನು ಇತರರಿಗೆ ಹೇಳುವಂತಿರಬೇಕು. ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ಹೀಗೆ ಕೇಳಿಕೊಳ್ಳುವುದು ಉತ್ತಮ: ‘ಸ್ವತ್ಯಾಗದ ಪ್ರೀತಿಯೆಂಬ “ಬ್ಯಾಡ್ಜ್‌” ನನ್ನಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೊ?’

ಸ್ವತ್ಯಾಗದ ಪ್ರೀತಿಯಲ್ಲಿ ಏನು ಒಳಗೂಡಿದೆ?

12, 13. (ಎ) ನಾವು ಇತರರ ಮೇಲೆ ನಮಗಿರುವ ಪ್ರೀತಿಯನ್ನು ಎಷ್ಟರಮಟ್ಟಿಗೆ ತೋರಿಸಬೇಕು? (ಬಿ) ಸ್ವತ್ಯಾಗಿಗಳಾಗಿರುವುದರ ಅರ್ಥವೇನು?

12 ಯೇಸು ನಮ್ಮನ್ನು ಪ್ರೀತಿಸಿದಂತೆಯೇ ಅವನ ಹಿಂಬಾಲಕರಾಗಿರುವ ನಾವು ಇತರರನ್ನು ಪ್ರೀತಿಸಬೇಕು. ಇದರಲ್ಲಿ ಜೊತೆ ವಿಶ್ವಾಸಿಗಳಿಗಾಗಿ ತ್ಯಾಗಮಾಡಲು ಸಿದ್ಧರಿರುವುದೂ ಸೇರಿದೆ. ಎಷ್ಟರಮಟ್ಟಿಗೆ ತ್ಯಾಗಮಾಡಬೇಕು? ಬೈಬಲ್‌ ನಮಗನ್ನುವುದು: “ಅವನು ನಮಗೋಸ್ಕರ ತನ್ನ ಪ್ರಾಣವನ್ನು ಒಪ್ಪಿಸಿಕೊಟ್ಟದ್ದರಿಂದಲೇ ಪ್ರೀತಿ ಏನೆಂಬುದನ್ನು ನಾವು ತಿಳಿದುಕೊಂಡಿದ್ದೇವೆ ಮತ್ತು ನಮ್ಮ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಒಪ್ಪಿಸಿಕೊಡುವ ಹಂಗಿನಲ್ಲಿದ್ದೇವೆ.” (1 ಯೋಹಾನ 3:16) ಯೇಸುವಿನಂತೆಯೇ ನಾವು ಕೂಡ ಅಗತ್ಯ ಬೀಳುವಲ್ಲಿ ಇತರರಿಗಾಗಿ ಪ್ರಾಣವನ್ನು ಕೊಡಲೂ ಸಿದ್ಧರಿರಬೇಕು. ಹಿಂಸೆಯ ಸಂದರ್ಭಗಳಲ್ಲಿ, ನಾವು ಸ್ವತಃ ನಮ್ಮ ಜೀವವನ್ನು ತ್ಯಾಗಮಾಡುತ್ತೇವೇ ವಿನಃ ಕ್ರೈಸ್ತ ಸಹೋದರರಿಗೆ ದ್ರೋಹ ಮಾಡಿ ಅವರ ಜೀವಗಳನ್ನು ಅಪಾಯಕ್ಕೊಡ್ಡುವುದಿಲ್ಲ. ಕುಲ ಸಂಬಂಧಿತ ಇಲ್ಲವೇ ಜನಾಂಗೀಯ ಕಲಹಗಳಿರುವ ದೇಶಗಳಲ್ಲೂ, ನಮ್ಮ ಸಹೋದರರ ಕುಲ ಇಲ್ಲವೆ ಜನಾಂಗೀಯ ಹಿನ್ನೆಲೆ ಯಾವುದೇ ಆಗಿರಲಿ ನಮ್ಮ ಪ್ರಾಣವನ್ನು ಪಣಕ್ಕೊಡ್ಡಿಯಾದರೂ ಅವರನ್ನು ರಕ್ಷಿಸುವೆವು. ದೇಶಗಳು ಯುದ್ಧಗಳಲ್ಲಿ ತೊಡಗುವಾಗ, ನಾವು ಬೇಕಾದರೆ ಸೆರೆಮನೆಗೆ ಹೋಗುತ್ತೇವೆ ಅಥವಾ ಪ್ರಾಣಕೊಡಲೂ ತಯಾರಿರುತ್ತೇವೆ. ಆದರೆ ಜೊತೆವಿಶ್ವಾಸಿಗಳ ವಿರುದ್ಧವಾಗಲಿ, ಬೇರೆ ಯಾರ ವಿರುದ್ಧವಾಗಲಿ ಎಂದಿಗೂ ಆಯುಧಗಳನ್ನೆತ್ತೆವು.—ಯೋಹಾನ 17:14, 16; 1 ಯೋಹಾನ 3:10-12.

13 ನಮ್ಮ ಸಹೋದರರಿಗಾಗಿ ಪ್ರಾಣ ಕೊಡಲು ಸಿದ್ಧರಿರುವುದೊಂದೇ ಸ್ವತ್ಯಾಗದ ಪ್ರೀತಿಯನ್ನು ತೋರಿಸುವ ವಿಧವಲ್ಲ. ವಾಸ್ತವದಲ್ಲಿ ಅಂಥ ಮಹಾ ತ್ಯಾಗವನ್ನು ಮಾಡುವ ಸಂದರ್ಭ ನಮ್ಮಲ್ಲಿ ಹೆಚ್ಚಿನವರಿಗೆ ಈ ತನಕ ಒದಗಿಬಂದಿಲ್ಲ. ಪ್ರೀತಿಯ ನಿಮಿತ್ತ ಸಹೋದರರಿಗಾಗಿ ಪ್ರಾಣ ಕೊಡಲೂ ಸಿದ್ಧರಿರುವ ನಾವು ಅವರಿಗೆ ಸಹಾಯ ಮಾಡಲು ಚಿಕ್ಕಪುಟ್ಟ ತ್ಯಾಗಗಳನ್ನು ಮಾಡಲು ಸಿದ್ಧರಿರುವುದಿಲ್ಲವೊ? ಸ್ವತ್ಯಾಗಿಗಳಾಗಿರುವುದರ ಅರ್ಥ ಇತರರಿಗೆ ಒಳ್ಳೇದನ್ನು ಮಾಡುವುದಕ್ಕಾಗಿ ನಮ್ಮ ಸ್ವಂತ ಪ್ರಯೋಜನ ಅಥವಾ ಸುಖವನ್ನು ಬಿಟ್ಟುಕೊಡುವುದಾಗಿದೆ. ನಮಗೆ ತೊಂದರೆಯಾದರೂ ಸರಿ ನಾವು ಇತರರ ಅಗತ್ಯಗಳಿಗೆ ಮತ್ತು ಹಿತಾಸಕ್ತಿಗೆ ಮೊದಲ ಆದ್ಯತೆ ಕೊಡುತ್ತೇವೆ. (1 ಕೊರಿಂಥ 10:24) ಸ್ವತ್ಯಾಗದ ಪ್ರೀತಿಯನ್ನು ನಾವು ಯಾವೆಲ್ಲ ಪ್ರಾಯೋಗಿಕ ವಿಧಗಳಲ್ಲಿ ತೋರಿಸಬಹುದು?

ಸಭೆ ಮತ್ತು ಕುಟುಂಬದಲ್ಲಿ

14. (ಎ) ಹಿರಿಯರು ಯಾವ ತ್ಯಾಗಗಳನ್ನು ಮಾಡಬೇಕಾಗುತ್ತದೆ? (ಬಿ) ನಿಮ್ಮ ಸಭೆಯಲ್ಲಿ ಶ್ರಮವಹಿಸಿ ಕೆಲಸಮಾಡುತ್ತಿರುವ ಹಿರಿಯರ ಬಗ್ಗೆ ನಿಮಗೆ ಹೇಗನಿಸುತ್ತದೆ?

14 ‘ಮಂದೆಯನ್ನು ಪರಿಪಾಲಿಸಲಿಕ್ಕಾಗಿ’ ಸಭಾ ಹಿರಿಯರು ಹಲವಾರು ತ್ಯಾಗಗಳನ್ನು ಮಾಡುತ್ತಾರೆ. (1 ಪೇತ್ರ 5:2, 3) ಅವರು ತಮ್ಮ ಸ್ವಂತ ಕುಟುಂಬದ ಜವಾಬ್ದಾರಿಯನ್ನು ನೋಡಿಕೊಳ್ಳುವುದಲ್ಲದೇ, ಕೂಟದಲ್ಲಿನ ನೇಮಕಗಳನ್ನು ತಯಾರಿಸಲು, ಪರಿಪಾಲನೆಯ ಭೇಟಿ ಮಾಡಲು ಮತ್ತು ನ್ಯಾಯನಿರ್ಣಾಯಕ ವಿಷಯ ಮುಂತಾದ ಸಭಾ ಚಟುವಟಿಕೆಗಳನ್ನು ನೋಡಿಕೊಳ್ಳಲು ಸಾಯಂಕಾಲಗಳನ್ನು ಇಲ್ಲವೇ ವಾರಾಂತ್ಯಗಳನ್ನು ಬದಿಗಿರಿಸಬೇಕಾಗಬಹುದು. ಅನೇಕ ಹಿರಿಯರು ಇನ್ನೂ ಹೆಚ್ಚಿನ ತ್ಯಾಗಗಳನ್ನು ಮಾಡುತ್ತಾರೆ. ಅವರು ಸಮ್ಮೇಳನಗಳು ಮತ್ತು ಅಧಿವೇಶನಗಳಲ್ಲಿ ಶ್ರಮವಹಿಸಿ ಕೆಲಸಮಾಡುತ್ತಾರೆ. ಹಾಸ್ಪಿಟಲ್‌ ಲಿಏಸಾನ್‌ ಕಮಿಟಿ, ಪೇಷಂಟ್‌ ವಿಸಿಟೇಷನ್‌ ಗ್ರೂಪ್‌, ರೀಜನಲ್‌ ಬಿಲ್ಡಿಂಗ್‌ ಕಮಿಟಿ ಮುಂತಾದವುಗಳ ಸದಸ್ಯರಾಗಿಯೂ ಸೇವೆಸಲ್ಲಿಸುತ್ತಾರೆ. ಹಿರಿಯರೇ, ನಿಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ಮಂದೆಯ ಪರಿಪಾಲನೆಗಾಗಿ ಸಿದ್ಧಮನಸ್ಸಿನಿಂದ ಕೊಡುವಾಗ ನೀವು ಸ್ವತ್ಯಾಗದ ಪ್ರೀತಿಯನ್ನು ತೋರಿಸುತ್ತಿದ್ದೀರಿ ಎಂಬುದನ್ನು ಎಂದೂ ಮರೆಯದಿರಿ. (2 ಕೊರಿಂಥ 12:15) ನಿಮ್ಮ ನಿಸ್ವಾರ್ಥ ಪ್ರಯತ್ನಗಳನ್ನು ಯೆಹೋವನು ಮಾತ್ರವಲ್ಲ, ನೀವು ಪರಿಪಾಲಿಸುವ ಸಭೆಯ ಸದಸ್ಯರು ಸಹ ತುಂಬ ಮಾನ್ಯಮಾಡುವರು.—ಫಿಲಿಪ್ಪಿ 2:29; ಇಬ್ರಿಯ 6:10.

15. (ಎ) ಹಿರಿಯರ ಹೆಂಡತಿಯರು ಮಾಡುವ ಕೆಲವು ತ್ಯಾಗಗಳು ಯಾವುವು? (ಬಿ) ಮಂದೆಯ ಆರೈಕೆಯನ್ನು ಮಾಡಲು ಸಾಧ್ಯವಾಗುವಂತೆ ಗಂಡಂದಿರಿಗೆ ಬೆಂಬಲವಾಗಿ ನಿಂತಿರುವ ಸ್ತ್ರೀಯರ ಬಗ್ಗೆ ನಿಮಗೆ ಹೇಗನಿಸುತ್ತದೆ?

15 ಹಿರಿಯರ ಹೆಂಡತಿಯರ ಕುರಿತೇನು? ಮಂದೆಯ ಆರೈಕೆಯನ್ನು ಮಾಡಲು ಸಾಧ್ಯವಾಗುವಂತೆ ಗಂಡಂದಿರಿಗೆ ಬೆಂಬಲವಾಗಿ ಟೊಂಕಕಟ್ಟಿ ನಿಂತಿರುವ ಈ ಸ್ತ್ರೀಯರು ಸಹ ತ್ಯಾಗಗಳನ್ನು ಮಾಡುವುದಿಲ್ಲವೇ? ಸಭೆಯ ಕೆಲಸಗಳಿಗಾಗಿ ಗಂಡನು ಸಮಯ ಕೊಡಬೇಕಾದಾಗ ಖಂಡಿತವಾಗಿಯೂ ಹೆಂಡತಿ ತ್ಯಾಗಮಾಡಬೇಕಾಗುತ್ತದೆ. ಏಕೆಂದರೆ, ಸಭೆಯ ಕೆಲಸ ಇಲ್ಲದಿದ್ದಲ್ಲಿ ಬಹುಶಃ ಗಂಡನು ಆ ಸಮಯವನ್ನು ತನ್ನ ಕುಟುಂಬದೊಂದಿಗೆ ಕಳೆಯುತ್ತಿದ್ದನು. ಸಂಚರಣ ಮೇಲ್ವಿಚಾರಕರ ಹೆಂಡತಿಯರ ಬಗ್ಗೆಯೂ ಸ್ವಲ್ಪ ಯೋಚಿಸಿ. ಸಭೆಯಿಂದ ಸಭೆಗೆ ಮತ್ತು ಸರ್ಕಿಟ್‌ನಿಂದ ಸರ್ಕಿಟ್‌ಗೆ ತಮ್ಮ ಗಂಡಂದಿರು ಪ್ರಯಾಣಿಸುವಾಗ ಅವರ ಜೊತೆ ಹೋಗಲು ಅವರು ತ್ಯಾಗಮಾಡಬೇಕಿಲ್ಲವೇ? ಸ್ವಂತ ಮನೆ ಹೊಂದಿರಬೇಕೆಂಬ ಆಶೆಯನ್ನು ಅವರು ಬಿಟ್ಟುಬಿಡಬೇಕಾಗುತ್ತದೆ. ಮಾತ್ರವಲ್ಲ, ಅವರು ಪ್ರತಿ ವಾರವೂ ಬೇರೆ ಬೇರೆ ಮನೆಗಳಲ್ಲಿ ನೆಲೆಸಬೇಕಾಗುತ್ತದೆ. ತಮ್ಮ ಹಿತಕ್ಕಿಂತ ಹೆಚ್ಚಾಗಿ ಸಭೆಯ ಹಿತವನ್ನು ಸಿದ್ಧಮನಸ್ಸಿನಿಂದ ಬಯಸುವ ಹೆಂಡತಿಯರನ್ನು, ಅವರು ತೋರಿಸುವ ಸ್ವತ್ಯಾಗದ ಪ್ರೀತಿಯ ಹೇರಳ ಅಭಿವ್ಯಕ್ತಿಗಳಿಗಾಗಿ ಪ್ರಶಂಸಿಸಲೇಬೇಕು.—ಫಿಲಿಪ್ಪಿ 2:3, 4.

16. ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗಾಗಿ ಯಾವೆಲ್ಲ ತ್ಯಾಗಗಳನ್ನು ಮಾಡುತ್ತಾರೆ?

16 ನಾವು ಕುಟುಂಬದಲ್ಲಿ ಸ್ವತ್ಯಾಗದ ಪ್ರೀತಿಯನ್ನು ಹೇಗೆ ತೋರಿಸಬಹುದು? ಹೆತ್ತವರೇ, ನೀವು ನಿಮ್ಮ ಮಕ್ಕಳ ಆರೈಕೆ ಮಾಡಲು ಮತ್ತು ಅವರನ್ನು “ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ” ಬೆಳೆಸಲು ಬಹಳಷ್ಟು ತ್ಯಾಗಗಳನ್ನು ಮಾಡುತ್ತೀರಿ. (ಎಫೆಸ 6:4) ನಿಮ್ಮ ಕುಟುಂಬಕ್ಕೆ ಆಹಾರವನ್ನೂ ಮಕ್ಕಳಿಗೆ ಬಟ್ಟೆಬರೆ ಹಾಗೂ ಆಸರೆಯನ್ನೂ ಒದಗಿಸಲಿಕ್ಕಾಗಿ ಬಹುಶಃ ತೀರಾ ದಣಿಸುವ ಒಂದು ಉದ್ಯೋಗದಲ್ಲಿ ಅನೇಕ ತಾಸುಗಳ ತನಕ ನೀವು ದುಡಿಯಬೇಕಾಗಬಹುದು. ಸ್ವತಃ ತ್ಯಾಗಗಳನ್ನು ಮಾಡಿಯಾದರೂ ಜೀವನದ ಆವಶ್ಯಕತೆಗಳಿಂದ ಮಕ್ಕಳು ವಂಚಿತರಾಗದಂತೆ ನೀವು ನೋಡಿಕೊಳ್ಳುತ್ತೀರಿ. ಅಲ್ಲದೆ, ಮಕ್ಕಳೊಂದಿಗೆ ಅಧ್ಯಯನ ಮಾಡಲು, ಅವರನ್ನು ಕ್ರೈಸ್ತ ಕೂಟಗಳಿಗೆ ಕರೆದೊಯ್ಯಲು, ಅವರೊಂದಿಗೆ ಕ್ಷೇತ್ರ ಶುಶ್ರೂಷೆಯಲ್ಲಿ ಕೆಲಸಮಾಡಲು ಬಹಳಷ್ಟು ಶ್ರಮವಹಿಸುತ್ತೀರಿ. (ಧರ್ಮೋಪದೇಶಕಾಂಡ 6:6, 7) ನಿಮ್ಮ ಸ್ವತ್ಯಾಗದ ಪ್ರೀತಿಯು ಕುಟುಂಬದ ಮೂಲಕರ್ತನನ್ನು ಸಂತೋಷಪಡಿಸುತ್ತದೆ ಮತ್ತು ಅದು ನಿಮ್ಮ ಮಕ್ಕಳಿಗೆ ನಿತ್ಯಜೀವವನ್ನೂ ಒದಗಿಸಬಲ್ಲದು.—ಜ್ಞಾನೋಕ್ತಿ 22:6; ಎಫೆಸ 3:14, 15.

17. ಯೇಸುವಿನ ನಿಸ್ವಾರ್ಥ ಮನೋಭಾವವನ್ನು ಕ್ರೈಸ್ತ ಗಂಡಂದಿರು ಹೇಗೆ ಅನುಕರಿಸಬಹುದು?

17 ಗಂಡಂದಿರೇ, ನೀವು ಸ್ವತ್ಯಾಗದ ಪ್ರೀತಿಯನ್ನು ತೋರಿಸುವುದರಲ್ಲಿ ಯೇಸುವನ್ನು ಹೇಗೆ ಅನುಕರಿಸಬಲ್ಲಿರಿ? ಬೈಬಲ್‌ ಇದಕ್ಕೆ ಉತ್ತರ ನೀಡುವುದು: “ಗಂಡಂದಿರೇ, ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟಂತೆಯೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ.” (ಎಫೆಸ 5:25) ನಾವೀಗಾಗಲೇ ನೋಡಿರುವಂತೆ ಯೇಸು ತನ್ನ ಹಿಂಬಾಲಕರನ್ನು ಎಷ್ಟು ಪ್ರೀತಿಸಿದನೆಂದರೆ ಅವರಿಗಾಗಿ ತನ್ನ ಪ್ರಾಣವನ್ನೇ ಕೊಟ್ಟನು. ‘ತನ್ನನ್ನು ತಾನೇ ಮೆಚ್ಚಿಸಿಕೊಳ್ಳದ’ ಯೇಸುವಿನ ಈ ನಿಸ್ವಾರ್ಥ ಮನೋಭಾವವನ್ನು ಕ್ರಿಸ್ತನ ಹಿಂಬಾಲಕನಾಗಿರುವ ಗಂಡನು ಅನುಕರಿಸುತ್ತಾನೆ. (ರೋಮನ್ನರಿಗೆ 15:3) ಅಂಥ ಗಂಡನು ತನ್ನ ಹಿತಕ್ಕಿಂತ ಹೆಚ್ಚಾಗಿ ಹೆಂಡತಿಯ ಹಿತವನ್ನು ನೋಡಿಕೊಳ್ಳುತ್ತಾನೆ. ತಾನು ಹೇಳಿದ್ದೇ ನಡೆಯಬೇಕೆಂದು ಅವನು ಹಠಹಿಡಿಯುವುದಿಲ್ಲ. ಬದಲಾಗಿ ಶಾಸ್ತ್ರವಚನಗಳಲ್ಲಿನ ಮೂಲತತ್ತ್ವದ ಉಲ್ಲಂಘನೆಯಾಗದಿರುವ ಸಂದರ್ಭಗಳಲ್ಲಿ ಹೆಂಡತಿಯ ಸಲಹೆಗಳಿಗೆ ಕಿವಿಗೊಡಲೂ ಸಿದ್ಧನಿರುತ್ತಾನೆ. ಸ್ವತ್ಯಾಗದ ಪ್ರೀತಿಯನ್ನು ತೋರಿಸುವ ಗಂಡನು ಯೆಹೋವನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ ಮತ್ತು ತನ್ನ ಹೆಂಡತಿ ಮಕ್ಕಳ ಪ್ರೀತಿ ಗೌರವವನ್ನೂ ಸಂಪಾದಿಸುತ್ತಾನೆ.

ನೀವೇನು ಮಾಡುವಿರಿ?

18. ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಹೊಸ ಆಜ್ಞೆಯನ್ನು ಪಾಲಿಸಲು ನಮ್ಮನ್ನು ಯಾವುದು ಪ್ರಚೋದಿಸುತ್ತದೆ?

18 ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಹೊಸ ಆಜ್ಞೆಯನ್ನು ಪಾಲಿಸುವುದು ಅಷ್ಟೇನೂ ಸುಲಭವಲ್ಲ. ಆದರೂ ಹಾಗೆ ಮಾಡಲು ನಮಗೆ ಬಲವಾದ ಪ್ರಚೋದನೆಯಿದೆ. ಪೌಲನು ಬರೆದದ್ದು: “ಕ್ರಿಸ್ತನಿಗಿರುವ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ; ಏಕೆಂದರೆ ಒಬ್ಬ ಮನುಷ್ಯನು ಎಲ್ಲರಿಗೋಸ್ಕರ ಸತ್ತನೆಂದು ನಾವು ತೀರ್ಮಾನಿಸಿದ್ದೇವೆ; . . . ಜೀವಿಸುವವರು ಇನ್ನು ಮುಂದೆ ಸ್ವತಃ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎಬ್ಬಿಸಲ್ಪಟ್ಟವನಿಗಾಗಿ ಜೀವಿಸುವಂತೆ ಅವನು ಎಲ್ಲರಿಗೋಸ್ಕರ ಸತ್ತನು.” (2 ಕೊರಿಂಥ 5:14, 15) ನಮಗಾಗಿ ಯೇಸು ಸತ್ತಿರುವಾಗ, ನಾವು ಅವನಿಗಾಗಿ ಜೀವಿಸಬಾರದೇ? ಅವನಿಟ್ಟಿರುವ ಸ್ವತ್ಯಾಗದ ಪ್ರೀತಿಯ ಮಾದರಿಯನ್ನು ಅನುಸರಿಸುವ ಮೂಲಕ ನಾವದನ್ನು ಮಾಡಬಲ್ಲೆವು.

19, 20. ಯೆಹೋವನು ನಮಗೆ ಯಾವ ಅತ್ಯಮೂಲ್ಯ ಉಡುಗೊರೆಯನ್ನು ಒದಗಿಸಿದ್ದಾನೆ? ನಾವದನ್ನು ಸ್ವೀಕರಿಸುತ್ತೇವೆಂದು ಹೇಗೆ ತೋರಿಸಬಲ್ಲೆವು?

19 “ಒಬ್ಬನು ತನ್ನ ಸ್ನೇಹಿತರಿಗೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾರಲ್ಲಿಯೂ ಇಲ್ಲ” ಎಂದು ಹೇಳುವಾಗ ಯೇಸು ಏನನ್ನೂ ಉತ್ಪ್ರೇಕ್ಷಿಸಿ ಹೇಳುತ್ತಿರಲಿಲ್ಲ. (ಯೋಹಾನ 15:13) ನಮಗೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಟ್ಟದ್ದು, ನಮ್ಮ ಮೇಲೆ ಅವನಿಗಿದ್ದ ಪ್ರೀತಿಯ ಶ್ರೇಷ್ಠ ಅಭಿವ್ಯಕ್ತಿಯಾಗಿತ್ತು. ಆದರೆ, ಇನ್ನೊಬ್ಬ ವ್ಯಕ್ತಿ ನಮ್ಮ ಮೇಲೆ ಇದಕ್ಕಿಂತಲೂ ಹೆಚ್ಚಿನ ಪ್ರೀತಿ ತೋರಿಸಿದ್ದಾನೆ. ಯೇಸು ವಿವರಿಸಿದ್ದು: “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” (ಯೋಹಾನ 3:16) ದೇವರು ನಮ್ಮನ್ನು ಎಷ್ಟು ಪ್ರೀತಿಸುತ್ತಾನೆಂದರೆ ತನ್ನ ಮಗನನ್ನೇ ನಮಗೋಸ್ಕರ ವಿಮೋಚನಾ ಮೌಲ್ಯವಾಗಿ ಒದಗಿಸಿ ಪಾಪ ಮತ್ತು ಮರಣದಿಂದ ಮುಕ್ತರಾಗುವಂತೆ ನಮಗೆ ದಾರಿತೆರೆದಿದ್ದಾನೆ. (ಎಫೆಸ 1:7) ಈ ವಿಮೋಚನಾ ಮೌಲ್ಯವು ಯೆಹೋವನು ಒದಗಿಸುವ ಅತ್ಯಮೂಲ್ಯ ಉಡುಗೊರೆಯಾಗಿದೆ. ಹಾಗಿದ್ದರೂ ಅದನ್ನು ಸ್ವೀಕರಿಸುವಂತೆ ಆತನೆಂದೂ ನಮ್ಮನ್ನು ಬಲವಂತಪಡಿಸುವುದಿಲ್ಲ.

20 ಹೌದು, ಯೆಹೋವನ ಆ ಉಡುಗೊರೆಯನ್ನು ಸ್ವೀಕರಿಸುವ ಆಯ್ಕೆಯನ್ನು ಸ್ವತಃ ನಾವೇ ಮಾಡಬೇಕು. ಅದನ್ನು ಹೇಗೆ ಮಾಡಬಲ್ಲೆವು? ಆತನ ಮಗನಲ್ಲಿ “ನಂಬಿಕೆಯಿಡುವ” ಮೂಲಕವೇ. ನಮ್ಮಲ್ಲಿ ನಂಬಿಕೆಯಿದೆ ಎಂದು ಹೇಳಿದರೆ ಮಾತ್ರ ಸಾಲದು. ಅದನ್ನು ಕ್ರಿಯೆಗಳಲ್ಲಿ ಅಂದರೆ ನಮ್ಮ ಜೀವನರೀತಿಯಲ್ಲಿ ತೋರ್ಪಡಿಸಬೇಕು. (ಯಾಕೋಬ 2:26) ಅನುದಿನವೂ ಯೇಸು ಕ್ರಿಸ್ತನನ್ನು ಹಿಂಬಾಲಿಸುತ್ತಾ ಇರುವ ಮೂಲಕ ನಮಗೆ ಅವನಲ್ಲಿ ನಂಬಿಕೆ ಇದೆಯೆಂಬುದನ್ನು ತೋರ್ಪಡಿಸಸಾಧ್ಯವಿದೆ. ಹೀಗೆ ಮಾಡುವುದು ಈಗ ಮಾತ್ರವಲ್ಲ ಮುಂದೆಯೂ ಸಮೃದ್ಧ ಆಶೀರ್ವಾದಗಳನ್ನು ತರುವುದು. ಇದನ್ನೇ ಈ ಪುಸ್ತಕದ ಕೊನೆಯ ಅಧ್ಯಾಯವು ವಿವರಿಸುವುದು.

^ ಪ್ಯಾರ. 3 ಆ ದಿನದಂದು ಎರಡು ಸಂದರ್ಭಗಳಲ್ಲಿ ಯೇಸುವಿನ ಮುಖದ ಮೇಲೆ ಉಗುಳಲಾಯಿತು. ಮೊದಲು ಧಾರ್ಮಿಕ ಮುಖಂಡರು ಮತ್ತು ತದನಂತರ ರೋಮನ್‌ ಸೈನಿಕರು ಅವನ ಮುಖದ ಮೇಲೆ ಉಗುಳಿದರು. (ಮತ್ತಾಯ 26:59-68; 27:27-30) ಈ ರೀತಿ ತನ್ನನ್ನು ತುಚ್ಛವಾಗಿ ನಡೆಸಿಕೊಂಡರೂ ಅವನು ಮರುಮಾತೆತ್ತಲಿಲ್ಲ. “ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಲಿಲ್ಲ” ಎಂಬ ಪ್ರವಾದನೆಯನ್ನು ಯೇಸು ಹೀಗೆ ನೆರವೇರಿಸಿದನು.—ಯೆಶಾಯ 50:6.