ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 14

“ಜನರು ಗುಂಪುಗುಂಪಾಗಿ ಅವನ ಬಳಿಗೆ ಬಂದರು”

“ಜನರು ಗುಂಪುಗುಂಪಾಗಿ ಅವನ ಬಳಿಗೆ ಬಂದರು”

“ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ”

1-3. ಹೆತ್ತವರು ತಮ್ಮ ಮಕ್ಕಳನ್ನು ಯೇಸುವಿನ ಹತ್ತಿರಕ್ಕೆ ತರಲಾರಂಭಿಸಿದಾಗ ಏನಾಗುತ್ತದೆ? ಈ ಘಟನೆ ಯೇಸುವಿನ ಬಗ್ಗೆ ಏನನ್ನು ತಿಳಿಸುತ್ತದೆ?

ತನ್ನ ಭೂಜೀವಿತದ ಅಂತ್ಯ ವೇಗವಾಗಿ ಧಾವಿಸಿಬರುತ್ತಿದೆ ಎಂಬುದು ಯೇಸುವಿಗೆ ತಿಳಿದಿದೆ. ಅವನಿಗೆ ಕೆಲವೇ ವಾರಗಳು ಉಳಿದಿವೆ ಮತ್ತು ಮಾಡಲಿಕ್ಕೆ ಇನ್ನೂ ಅನೇಕ ಕೆಲಸಗಳಿವೆ. ಅವನು ಯೋರ್ದನ್‌ ನದಿಯ ಪೂರ್ವಕ್ಕಿರುವ ಪೆರಿಯ ಎಂಬಲ್ಲಿ ಅಪೊಸ್ತಲರೊಂದಿಗೆ ಸಾರುತ್ತಿದ್ದಾನೆ. ಅವರೆಲ್ಲರೂ ಸಾರುತ್ತಾ ದಕ್ಷಿಣದೆಡೆಗೆ ಅಂದರೆ ಯೆರೂಸಲೇಮಿನೆಡೆಗೆ ಮುಂದುವರಿಯುತ್ತಾರೆ. ಅಲ್ಲಿಯೇ ಯೇಸು, ತನ್ನ ಕೊನೆಯ ಹಾಗೂ ಗಮನಾರ್ಹ ಪಸ್ಕಹಬ್ಬವನ್ನು ಆಚರಿಸಲಿದ್ದನು.

2 ಕೆಲವೊಂದು ಧಾರ್ಮಿಕ ಮುಖಂಡರೊಂದಿಗೆ ಯೇಸು ಗಂಭೀರ ಚರ್ಚೆಯನ್ನು ಮಾಡಿದ್ದರಿಂದ ಅಲ್ಲಿನ ವಾತಾವರಣ ಸ್ವಲ್ಪಮಟ್ಟಿಗೆ ಪ್ರಕ್ಷುಬ್ಧವಾಗಿರುತ್ತದೆ. ಆ ಸಮಯದಲ್ಲಿ ಅವನನ್ನು ನೋಡಲು ಜನರು ತಮ್ಮ ಮಕ್ಕಳನ್ನು ಕರೆತರುತ್ತಾರೆ. ಅವರಲ್ಲಿ ಶಿಶುಗಳಿಂದ ಹಿಡಿದು ದೊಡ್ಡ ಮಕ್ಕಳ ವರೆಗೆ ಬೇರೆ ಬೇರೆ ಪ್ರಾಯದವರು ಇದ್ದರೆಂದು ತೋರುತ್ತದೆ. ಏಕೆಂದರೆ ಅವರಿಗೆ ಸೂಚಿಸುವಾಗ ಮೂಲಭಾಷೆಯಲ್ಲಿ ಮಾರ್ಕನು ಈ ಮುಂಚೆ 12 ವರ್ಷ ಪ್ರಾಯದ ಹುಡುಗಿಯನ್ನು ಸೂಚಿಸುವಾಗ ಬಳಸಿದ ಪದವನ್ನೇ ಬಳಸುತ್ತಾನೆ. ಆದರೆ ಲೂಕನು ‘ಶಿಶುಗಳು’ ಎಂಬ ಪದವನ್ನು ಉಪಯೋಗಿಸುತ್ತಾನೆ. (ಲೂಕ 18:15; ಮಾರ್ಕ 5:41, 42; 10:13) ಮಕ್ಕಳಿದ್ದಲ್ಲಿ ಸದ್ದುಗದ್ದಲ ಸಾಮಾನ್ಯ. ಆ ಮಕ್ಕಳೊಂದಿಗಿರಲು ತಮ್ಮ ಗುರುವಿಗೆ ಸಮಯವಿಲ್ಲ ಎಂದು ಭಾವಿಸಿದ ಯೇಸುವಿನ ಶಿಷ್ಯರು ಹೆತ್ತವರನ್ನು ಗದರಿಸುತ್ತಾರೆ. ಆಗ ಯೇಸು ಏನು ಮಾಡುತ್ತಾನೆ?

3 ಆ ಸಂದರ್ಭದಲ್ಲಿ ಯೇಸುವಿಗೂ ಕೋಪ ಬರುತ್ತದೆ. ಯಾರ ಮೇಲೆ? ಮಕ್ಕಳ ಮೇಲೋ? ಹೆತ್ತವರ ಮೇಲೋ? ಇಲ್ಲ, ಶಿಷ್ಯರ ಮೇಲೆಯೇ! ಅವನು, “ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ; ಅವುಗಳನ್ನು ತಡೆಯಲು ಪ್ರಯತ್ನಿಸಬೇಡಿ, ಏಕೆಂದರೆ ದೇವರ ರಾಜ್ಯವು ಇಂಥವರಿಗೆ ಸೇರಿದ್ದಾಗಿದೆ. ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಎಂದನ್ನುತ್ತಾನೆ. ಬಳಿಕ ಮಕ್ಕಳನ್ನು “ತನ್ನ ತೋಳುಗಳಲ್ಲಿ ಎತ್ತಿಕೊಂಡು” ಆಶೀರ್ವದಿಸುತ್ತಾನೆ. (ಮಾರ್ಕ 10:13-16) ಮಾರ್ಕನ ಈ ಮಾತುಗಳು, ಯೇಸು ಮಕ್ಕಳನ್ನು ಅಕ್ಕರೆಯಿಂದ ಅಪ್ಪಿಕೊಂಡನು ಎಂಬುದನ್ನು ಸೂಚಿಸುತ್ತವೆ. ಇದನ್ನೇ ಒಬ್ಬ ಭಾಷಾಂತರಗಾರನು, ಯೇಸು ಕೆಲವೊಂದು ಶಿಶುಗಳನ್ನು “ತೋಳಿನ ತೆಕ್ಕೆಯಲ್ಲಿ” ತೂಗಿದನು ಎಂದು ಹೇಳುತ್ತಾನೆ. ಖಂಡಿತವಾಗಿಯೂ ಯೇಸು ಮಕ್ಕಳನ್ನು ಇಷ್ಟಪಡುತ್ತಿದ್ದನು. ಆದರೆ ಇಲ್ಲಿ ನಾವು ಅವನ ಬಗ್ಗೆ ಇನ್ನೊಂದು ವಿಷಯವನ್ನೂ ಕಲಿಯುತ್ತೇವೆ. ಅವನು ಸ್ನೇಹಶೀಲ ವ್ಯಕ್ತಿಯಾಗಿದ್ದು ಅವನ ಬಳಿ ಬರಲು ಯಾರೂ ಹಿಂಜರಿಯುತ್ತಿರಲಿಲ್ಲ.

4, 5. (ಎ) ಯೇಸುವಿನ ಬಳಿ ಎಲ್ಲರೂ ಹಿಂಜರಿಕೆಯಿಲ್ಲದೆ ಬರಬಹುದಿತ್ತು ಎಂದು ನಾವು ಅಷ್ಟೊಂದು ಖಾತ್ರಿಯಿಂದ ಹೇಗೆ ಹೇಳಸಾಧ್ಯ? (ಬಿ) ಈ ಅಧ್ಯಾಯದಲ್ಲಿ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?

4 ಒಂದುವೇಳೆ ಯೇಸು ಕಟ್ಟುನಿಟ್ಟಿನ, ಸ್ನೇಹಶೀಲನಲ್ಲದ, ದರ್ಪದ ವ್ಯಕ್ತಿಯಾಗಿದ್ದಲ್ಲಿ ಆ ಮಕ್ಕಳು ಅವನ ಹತ್ತಿರವೂ ಸುಳಿಯುತ್ತಿರಲಿಲ್ಲ. ಅಲ್ಲದೆ ಆ ಮಕ್ಕಳ ಹೆತ್ತವರು ಕೂಡ ಅಷ್ಟು ಸಲೀಸಾಗಿ ಅವನ ಹತ್ತಿರ ಬರುತ್ತಿರಲಿಲ್ಲ. ಆ ದೃಶ್ಯವನ್ನು ಸ್ವಲ್ಪ ಊಹಿಸಿಕೊಳ್ಳಿ. ದಯಾಮಯಿ ಯೇಸು ಮಕ್ಕಳೆಡೆಗೆ ಮಮತೆ ತೋರಿಸುತ್ತಿದ್ದಾನೆ. ಅವರನ್ನು ಆಶೀರ್ವದಿಸುತ್ತಿದ್ದಾನೆ. ಮತ್ತು ಹೀಗೆ ದೇವರ ದೃಷ್ಟಿಯಲ್ಲಿ ಮಕ್ಕಳು ತುಂಬ ಅಮೂಲ್ಯರೆಂದು ಹೇಳುತ್ತಿದ್ದಾನೆ. ಇದನ್ನೆಲ್ಲ ನೋಡಿದ ಆ ಮಕ್ಕಳ ಹೆತ್ತವರ ಮೊಗ ಖುಷಿಯಿಂದ ಅರಳಿರುವುದನ್ನು ನೀವು ಕಾಣುವುದಿಲ್ಲವೇ? ಆ ಸಂದರ್ಭದಲ್ಲಿ ಯೇಸುವಿನ ಹೆಗಲ ಮೇಲೆ ತುಂಬ ಜವಾಬ್ದಾರಿಯಿತ್ತು. ಆದರೂ ಹಿಂಜರಿಕೆಯಿಲ್ಲದೆ ಜನರು ಅವನ ಬಳಿ ಬಂದರು.

5 ಯಾರೆಲ್ಲ ಯೇಸುವಿನ ಬಳಿಗೆ ಹಿಂಜರಿಕೆಯಿಲ್ಲದೆ ಬಂದರು? ಅವನನ್ನು ಅಷ್ಟೊಂದು ಸ್ನೇಹಶೀಲ ವ್ಯಕ್ತಿಯನ್ನಾಗಿ ಮಾಡಿದ್ದು ಯಾವುದು? ಮತ್ತು ಈ ವಿಷಯದಲ್ಲಿ ನಾವು ಹೇಗೆ ಯೇಸುವಿನಂತಿರಬಲ್ಲೆವು? ಅದನ್ನೀಗ ನೋಡೋಣ.

ಯಾರೆಲ್ಲಾ ಹಿಂಜರಿಕೆಯಿಲ್ಲದೆ ಯೇಸುವಿನ ಬಳಿಗೆ ಬಂದರು?

6-8. ಯೇಸು ಹೆಚ್ಚಾಗಿ ಯಾರೊಂದಿಗೆ ಬೆರೆಯುತ್ತಿದ್ದನು? ಅವರ ಕಡೆಗೆ ಅವನಿಗಿದ್ದ ಮನೋಭಾವವು ಧಾರ್ಮಿಕ ಮುಖಂಡರ ಮನೋಭಾವಕ್ಕಿಂತ ಹೇಗೆ ಭಿನ್ನವಾಗಿತ್ತು?

6 ನೀವು ಸುವಾರ್ತಾ ವೃತ್ತಾಂತಗಳನ್ನು ಓದುವಾಗ, ಅಸಂಖ್ಯಾತ ಜನರು ಯೇಸುವಿನ ಬಳಿಗೆ ಬರಲು ಹಿಂದೆಮುಂದೆ ನೋಡಲಿಲ್ಲ ಎಂಬುದನ್ನು ತಿಳಿದು ಆಶ್ಚರ್ಯವಾಗಬಹುದು. ಉದಾಹರಣೆಗೆ, ಅವನ ಬಗ್ಗೆ ಓದುವಾಗೆಲ್ಲ, “ದೊಡ್ಡ ಗುಂಪು” ಎಂಬ ಪದವನ್ನು ಹಲವು ಬಾರಿ ನಾವು ನೋಡುತ್ತೇವೆ. ‘ಗಲಿಲಾಯದಿಂದ ಜನರ ದೊಡ್ಡ ಗುಂಪು ಅವನನ್ನು ಹಿಂಬಾಲಿಸಿತು.’ “ಜನರು ಗುಂಪುಗುಂಪಾಗಿ ಅವನ ಬಳಿಗೆ ಬಂದರು.” ‘ಜನರ ದೊಡ್ಡ ಗುಂಪು ಅವನೊಂದಿಗೆ ಪ್ರಯಾಣಿಸಿತು.’ (ಮತ್ತಾಯ 4:25; 15:30; ಲೂಕ 14:25) ಹೌದು, ಯೇಸುವಿನ ಸುತ್ತ ಅನೇಕ ಸಾರಿ ಜನಸಾಗರವೇ ಸೇರಿ ಬರುತ್ತಿತ್ತು.

7 ಹೆಚ್ಚಾಗಿ ಅವರು ಜನಸಾಮಾನ್ಯರಾಗಿದ್ದರು. ಅವರನ್ನು ಧಾರ್ಮಿಕ ಮುಖಂಡರು ತುಚ್ಛವಾಗಿ ಕಾಣುತ್ತಿದ್ದರು. ಫರಿಸಾಯರು ಮತ್ತು ಯಾಜಕರು ಬಹಿರಂಗವಾಗಿ, “ಧರ್ಮಶಾಸ್ತ್ರವನ್ನು ಅರಿಯದ ಈ ಜನರು ಶಾಪಗ್ರಸ್ತರು” ಎಂದು ಹೇಳಿದರು. (ಯೋಹಾನ 7:49) ಇಂಥ ಮನೋಭಾವ ಪ್ರಚಲಿತದಲ್ಲಿತ್ತು ಎಂಬುದನ್ನು ತದನಂತರದ ರಬ್ಬಿಗಳ ಬರಹಗಳು ರುಜುಪಡಿಸುತ್ತವೆ. ಅನೇಕ ಧಾರ್ಮಿಕ ಮುಖಂಡರು ಆ ಜನರನ್ನು ಎಷ್ಟು ತುಚ್ಛವಾಗಿ ಕಾಣುತ್ತಿದ್ದರೆಂದರೆ, ಅವರೊಂದಿಗೆ ಊಟಮಾಡಲು, ವಸ್ತುಗಳನ್ನು ಖರೀದಿಸಲು ಅಥವಾ ಸಹವಸಿಸಲೂ ನಿರಾಕರಿಸುತ್ತಿದ್ದರು. ಅಷ್ಟೇ ಅಲ್ಲ, ಮೌಖಿಕ ನಿಯಮವನ್ನು ತಿಳಿಯದ ಅಂಥ ಜನರಿಗೆ ಪುನರುತ್ಥಾನದ ನಿರೀಕ್ಷೆಯೂ ಇಲ್ಲ ಎಂಬುದಾಗಿ ಕೆಲವರು ವಾದಮಾಡುತ್ತಿದ್ದರು. ಹಾಗಾಗಿ ಅನೇಕ ದೀನ ಜನರು ಧಾರ್ಮಿಕ ಮುಖಂಡರಿಂದ ಸಹಾಯ ಅಥವಾ ಮಾರ್ಗದರ್ಶನವನ್ನು ಕೇಳುವ ಬದಲು ದೂರವೇ ಉಳಿದಿದ್ದಿರಬೇಕು. ಆದರೆ ಯೇಸು ಭಿನ್ನನಾಗಿದ್ದನು.

8 ಯೇಸು ಸಾಮಾನ್ಯ ಜನರೊಂದಿಗೆ ಮುಕ್ತವಾಗಿ ಬೆರೆತನು. ಅವರೊಂದಿಗೆ ಊಟಮಾಡಿದನು, ಅವರನ್ನು ವಾಸಿಮಾಡಿದನು, ಅವರಿಗೆ ಬೋಧಿಸಿದನು ಮತ್ತು ನಿರೀಕ್ಷೆಯನ್ನು ಒದಗಿಸಿದನು. ಅದೇ ಸಂದರ್ಭದಲ್ಲಿ, ಹೆಚ್ಚಿನ ಜನರು ಯೆಹೋವನಿಗೆ ಸೇವೆಸಲ್ಲಿಸುವ ಅವಕಾಶವನ್ನು ತಿರಸ್ಕರಿಸುವರು ಎಂಬ ವಾಸ್ತವದ ಅರಿವು ಕೂಡ ಅವನಿಗಿತ್ತು. (ಮತ್ತಾಯ 7:13, 14) ಆದರೂ ಪ್ರತಿ ವ್ಯಕ್ತಿಯ ಬಗ್ಗೆ ಅವನು ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಂಡಿದ್ದನು ಮತ್ತು ಒಳ್ಳೇದನ್ನು ಮಾಡುವ ಬಯಕೆ ಅನೇಕರಲ್ಲಿದೆ ಎಂಬುದನ್ನು ಗ್ರಹಿಸಿದನು. ಯೇಸುವಿಗೂ ಕಲ್ಲು ಹೃದಯದ ಯಾಜಕರು ಮತ್ತು ಯೇಸುವಿಗೂ ಎಷ್ಟೊಂದು ವ್ಯತ್ಯಾಸ! ಕುತೂಹಲದ ಸಂಗತಿಯೇನೆಂದರೆ, ಯಾಜಕರು ಮತ್ತು ಫರಿಸಾಯರು ಸಹ ಯೇಸುವಿನ ಬಳಿಗೆ ಬರಲು ಹಿಂಜರಿಯಲಿಲ್ಲ. ಅವರಲ್ಲಿ ಅನೇಕರು ತಮ್ಮ ಜೀವನವನ್ನು ಬದಲಾಯಿಸಿ ಅವನನ್ನು ಹಿಂಬಾಲಿಸಿದರು. (ಅ. ಕಾರ್ಯಗಳು 6:7; 15:5) ಕೆಲವು ಐಶ್ವರ್ಯವಂತರು ಹಾಗೂ ಪ್ರಭಾವಿ ವ್ಯಕ್ತಿಗಳು ಕೂಡ ಯೇಸು ಸ್ನೇಹಶೀಲ ವ್ಯಕ್ತಿ ಎಂಬುದಾಗಿ ಕಂಡುಕೊಂಡರು.—ಮಾರ್ಕ 10:17, 22.

9. ಸ್ತ್ರೀಯರು ಯೇಸುವಿನ ಬಳಿಗೆ ಹಿಂಜರಿಕೆಯಿಲ್ಲದೆ ಬರಲು ಕಾರಣವೇನು?

9 ಸ್ತ್ರೀಯರು ಕೂಡ ಹಿಂಜರಿಕೆಯಿಲ್ಲದೆ ಯೇಸುವಿನ ಬಳಿ ಬರುತ್ತಿದ್ದರು. ಧಾರ್ಮಿಕ ಮುಖಂಡರಾದರೋ ಅವರನ್ನು ಅಲಕ್ಷಿಸುತ್ತಿದ್ದರು. ಸ್ತ್ರೀಯರಿಗೆ ಯಾರಾದರೂ ಬೋಧಿಸಿದರೆ ರಬ್ಬಿಗಳು ಮುಖ ಸಿಂಡರಿಸಿಕೊಳ್ಳುತ್ತಿದ್ದರು. ನ್ಯಾಯವಿಚಾರಣೆಯ ಸಂದರ್ಭದಲ್ಲಿ ಸ್ತ್ರೀಯರು ಸಾಕ್ಷಿ ಹೇಳುವಂತಿರಲಿಲ್ಲ. ಅವರ ಸಾಕ್ಷ್ಯ ನಂಬಲರ್ಹವಾಗಿರಲಿಲ್ಲ. ತಾವು ಸ್ತ್ರೀಯರಾಗಿ ಹುಟ್ಟಿರದಿರುವುದಕ್ಕೆ ಕೃತಜ್ಞತೆ ಸೂಚಿಸುತ್ತಾ ರಬ್ಬಿಗಳು ದೇವರಿಗೆ ಪ್ರಾರ್ಥನೆ ಕೂಡ ಮಾಡಿದರು! ಸ್ತ್ರೀಯರು ಯೇಸುವಿನಲ್ಲಿ ಆ ರೀತಿಯ ಯಾವುದೇ ಮನೋಭಾವವನ್ನು ಕಾಣಲಿಲ್ಲ. ಅವನಿಂದ ಕಲಿತುಕೊಳ್ಳುವ ಹಂಬಲದಿಂದ ಅನೇಕರು ಅವನ ಬಳಿಗೆ ಬಂದರು. ಉದಾಹರಣೆಗೆ, ಲಾಜರನ ಸಹೋದರಿಯಾದ ಮಾರ್ಥಳು ಅಡುಗೆ ತಯಾರಿಸುವುದರಲ್ಲೇ ಮುಳುಗಿದ್ದಾಗ ಅವಳ ಸಹೋದರಿಯಾದ ಮರಿಯಳು ಕರ್ತನ ಪಾದಗಳ ಬಳಿಯಲ್ಲಿ ಕುಳಿತುಕೊಂಡು ಅವನ ಮಾತುಗಳನ್ನು ಗಮನಕೊಟ್ಟು ಕೇಳುತ್ತಿದ್ದಳು. ಸರಿಯಾದ ಆದ್ಯತೆಗಳನ್ನು ಇಟ್ಟದ್ದಕ್ಕಾಗಿ ಯೇಸು ಮರಿಯಳನ್ನು ಪ್ರಶಂಸಿಸಿದನು.—ಲೂಕ 10:39-42.

10. ಅಸ್ವಸ್ಥರೊಂದಿಗೆ ವ್ಯವಹರಿಸಿದ ವಿಧದಲ್ಲಿ ಯೇಸು ಧಾರ್ಮಿಕ ಮುಖಂಡರಿಗಿಂತ ಹೇಗೆ ಭಿನ್ನನಾಗಿದ್ದನು?

10 ಅಸ್ವಸ್ಥರನ್ನು ಧಾರ್ಮಿಕ ಮುಖಂಡರು ಸಮಾಜದಿಂದ ಬಹಿಷ್ಕೃತರಂತೆ ನೋಡುತ್ತಿದ್ದರು. ಆದರೆ ಅವರು ಯೇಸುವಿನ ಬಳಿ ಗುಂಪು ಗುಂಪಾಗಿ ಒಟ್ಟುಸೇರುತ್ತಿದ್ದರು. ಆರೋಗ್ಯದ ಹಿತದೃಷ್ಟಿಯಿಂದ ಮೋಶೆಯ ಧರ್ಮಶಾಸ್ತ್ರವು ಕುಷ್ಠರೋಗಿಗಳನ್ನು ಸಾರ್ವಜನಿಕ ಸಂಪರ್ಕದಿಂದ ದೂರವಿಟ್ಟಿತಾದರೂ ಅವರ ಮೇಲೆ ದೌರ್ಜನ್ಯ ನಡೆಸಲು ಯಾವುದೇ ಅನುಮತಿಯಿರಲಿಲ್ಲ. (ಯಾಜಕಕಾಂಡ, ಅಧ್ಯಾಯ 13) ಸಮಯಾನಂತರ ರಬ್ಬಿಗಳ ನಿಯಮಗಳು, ಕುಷ್ಠರೋಗಿಗಳು ಮಲದಂತೆ ಹೊಲಸಾಗಿದ್ದಾರೆ ಎಂಬದಾಗಿ ತಿಳಿಸಿದವು. ಕೆಲವು ಧಾರ್ಮಿಕ ಮುಖಂಡರಂತೂ ಕುಷ್ಠರೋಗಿಗಳನ್ನು ದೂರವಿಡಲಿಕ್ಕಾಗಿ ಅವರೆಡೆಗೆ ಕಲ್ಲುಗಳನ್ನು ಸಹ ಎಸೆಯುತ್ತಿದ್ದರು! ಈ ರೀತಿಯ ಉಪಚಾರಕ್ಕೆ ಒಳಗಾದವರು ಯಾವುದೇ ಬೋಧಕನನ್ನು ಸಮೀಪಿಸಲು ಧೈರ್ಯ ಮಾಡುವ ಸನ್ನಿವೇಶವನ್ನು ಊಹಿಸಿಕೊಳ್ಳುವುದೂ ಕಷ್ಟ. ಆದರೆ ಕುಷ್ಠರೋಗಿಗಳು ಹಿಂಜರಿಕೆಯಿಲ್ಲದೆ ಯೇಸುವಿನ ಬಳಿಗೆ ಬರುತ್ತಿದ್ದರು. ಅವರಲ್ಲೊಬ್ಬನು ತನ್ನ ನಂಬಿಕೆಯನ್ನು ಹೀಗೆ ವ್ಯಕ್ತಪಡಿಸಿದನು: “ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ.” (ಲೂಕ 5:12) ಯೇಸುವಿನ ಪ್ರತಿಕ್ರಿಯೆಯನ್ನು ನಾವು ಮುಂದಿನ ಅಧ್ಯಾಯದಲ್ಲಿ ಚರ್ಚಿಸಲಿರುವೆವು. ಸದ್ಯಕ್ಕೆ, ಯೇಸುವನ್ನು ಜನರು ಸುಲಭವಾಗಿ ಸಮೀಪಿಸಸಾಧ್ಯವಿತ್ತು ಎನ್ನಲು ಈ ಅತ್ಯುತ್ಕೃಷ್ಟ ರುಜುವಾತು ಸಾಕೆನಿಸುತ್ತದೆ.

11. ಅಪರಾಧಿ ಪ್ರಜ್ಞೆಯಿಂದ ಕುಗ್ಗಿಹೋದವರು ಕೂಡ ಹಿಂಜರಿಕೆಯಿಲ್ಲದೆ ಯೇಸುವಿನ ಬಳಿ ಬರುತ್ತಿದ್ದರು ಎಂಬುದನ್ನು ಯಾವ ಉದಾಹರಣೆ ತೋರಿಸುತ್ತದೆ? ಅದು ಪ್ರಾಮುಖ್ಯವೇಕೆ?

11 ಅಪರಾಧಿ ಪ್ರಜ್ಞೆಯಿಂದ ಕುಗ್ಗಿಹೋದವರು ಕೂಡ ಹಿಂಜರಿಕೆಯಿಲ್ಲದೆ ಯೇಸುವಿನ ಬಳಿ ಬರುತ್ತಿದ್ದರು. ಉದಾಹರಣೆಗೆ, ಯೇಸು ಫರಿಸಾಯನೊಬ್ಬನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಏನು ಸಂಭವಿಸಿತೆಂಬುದನ್ನು ಗಮನಿಸಿ. ಪಾಪಿಷ್ಠಳೆಂದು ಊರಿನಲ್ಲೆಲ್ಲ ಪ್ರಸಿದ್ಧಳಾದ ಒಬ್ಬ ಸ್ತ್ರೀಯು ಒಳಗೆ ಬಂದಳು ಮತ್ತು ಅವನ ಪಾದಗಳ ಬಳಿ ಕುಳಿತುಕೊಂಡು ತನ್ನ ತಪ್ಪನ್ನು ನೆನಸಿ ಅಳುತ್ತಿದ್ದಳು. ಅವಳ ಕಣ್ಣೀರು ಅವನ ಪಾದಗಳನ್ನು ತೋಯಿಸುತ್ತಿತ್ತು ಮತ್ತು ಆಕೆ ತನ್ನ ತಲೆಯ ಕೂದಲಿನಿಂದ ಅವುಗಳನ್ನು ಒರೆಸಿದಳು. ಯೇಸುವಿನ ಆತಿಥೇಯನಾದರೋ, ಆಕೆಯನ್ನು ಹತ್ತಿರಬರಲು ಬಿಟ್ಟದ್ದಕ್ಕಾಗಿ ಯೇಸುವನ್ನು ತನ್ನೊಳಗೇ ದೂಷಿಸಿದನು. ಆದರೆ ಯೇಸು, ಯಥಾರ್ಥವಾಗಿ ಪಶ್ಚಾತ್ತಾಪಪಟ್ಟ ಆಕೆಯನ್ನು ಪ್ರೀತಿಯಿಂದ ಶ್ಲಾಘಿಸುತ್ತಾ, ಯೆಹೋವನ ಕ್ಷಮಾಪಣೆಯ ಖಾತ್ರಿಯನ್ನು ಆಕೆಗಿತ್ತನು. (ಲೂಕ 7:36-50) ಅಪರಾಧಿ ಪ್ರಜ್ಞೆಯಿಂದ ಕುಗ್ಗಿಹೋಗಿರುವ ಜನರಿಗೆ ಸಹಾಯ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚು ಇದೆ. ದೇವರೊಂದಿಗಿನ ಅವರ ಸಂಬಂಧವನ್ನು ಪುನಃಸ್ಥಾಪಿಸಲು ಸಹಾಯಮಾಡುವಂಥ ವ್ಯಕ್ತಿಗಳನ್ನು ಅವರು ಹಿಂಜರಿಕೆಯಿಲ್ಲದೆ ಸಮೀಪಿಸಬೇಕಿದೆ. ಯೇಸುವನ್ನು ಅಷ್ಟೊಂದು ಸ್ನೇಹಶೀಲ ವ್ಯಕ್ತಿಯನ್ನಾಗಿ ಮಾಡಿದ್ದು ಯಾವುದು?

ಯೇಸುವನ್ನು ಸ್ನೇಹಶೀಲ ವ್ಯಕ್ತಿಯನ್ನಾಗಿ ಮಾಡಿದ್ದು ಯಾವುದು?

12. ಜನರು ಹಿಂಜರಿಕೆಯಿಲ್ಲದೆ ಯೇಸುವಿನ ಬಳಿಗೆ ಬರುತ್ತಿದ್ದ ವಿಚಾರ ಆಶ್ಚರ್ಯಕರವಲ್ಲವೇಕೆ?

12 ಯೇಸು ತನ್ನ ಪ್ರಿಯ ಸ್ವರ್ಗೀಯ ತಂದೆಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದನು. (ಯೋಹಾನ 14:9) ಯೆಹೋವನು, “ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಹಳ ದೂರವಾಗಿರುವುದಿಲ್ಲ” ಎಂಬದಾಗಿ ಬೈಬಲ್‌ ನಮಗೆ ಜ್ಞಾಪಿಸುತ್ತದೆ. (ಅ. ಕಾರ್ಯಗಳು 17:27) “ಪ್ರಾರ್ಥನೆಯನ್ನು ಕೇಳುವವ”ನಾದ ಯೆಹೋವನನ್ನು, ಆತನ ನಂಬಿಗಸ್ತ ಸೇವಕರು ಹಾಗೂ ಯಾರು ಯಥಾರ್ಥವಾಗಿ ಆತನನ್ನು ಹುಡುಕಿ ಆತನ ಸೇವೆಮಾಡಲು ಬಯಸುತ್ತಾರೋ ಅವರೆಲ್ಲರೂ ಯಾವ ಸಮಯದಲ್ಲಿ ಬೇಕಾದರೂ ಸಮೀಪಿಸಬಹುದು. (ಕೀರ್ತನೆ 65:2) ಸ್ವಲ್ಪ ಊಹಿಸಿಕೊಳ್ಳಿ, ಯೆಹೋವನು ವಿಶ್ವದಲ್ಲೇ ಹೆಚ್ಚು ಬಲಿಷ್ಠನೂ ಉನ್ನತನೂ ಆಗಿದ್ದಾನೆ. ಆದರೂ ಆತನನ್ನು ಪ್ರತಿಯೊಬ್ಬರೂ ಹಿಂಜರಿಕೆಯಿಲ್ಲದೆ ಸಮೀಪಿಸಬಹುದು! ತನ್ನ ತಂದೆಯಂತೆಯೇ ಯೇಸು ಜನರನ್ನು ಪ್ರೀತಿಸುತ್ತಾನೆ. ಮುಂಬರುವ ಅಧ್ಯಾಯಗಳಲ್ಲಿ, ಯೇಸುವಿನ ಹೃದಯದಾಳದಲ್ಲಿದ್ದ ಆ ಪ್ರೀತಿಯ ಬಗ್ಗೆ ನಾವು ಚರ್ಚಿಸಲಿದ್ದೇವೆ. ಜನರ ಮೇಲೆ ಅವನಿಗೆ ಪ್ರೀತಿಯಿರುವುದನ್ನು ಇತರರು ಸುಲಭವಾಗಿ ನೋಡಬಹುದಿತ್ತು. ಜನರು ಹಿಂಜರಿಕೆಯಿಲ್ಲದೆ ಯೇಸುವಿನ ಬಳಿಗೆ ಬರುತ್ತಿದ್ದುದಕ್ಕೆ ಇದೊಂದು ಮುಖ್ಯ ಕಾರಣ. ನಾವೀಗ, ಯೇಸು ಹೇಗೆ ಅಂಥ ಪ್ರೀತಿಯನ್ನು ತೋರಿಸಿದನೆಂಬುದಕ್ಕೆ ಕೆಲವು ಉದಾಹರಣೆಗಳನ್ನು ಪರಿಗಣಿಸೋಣ.

13. ಹೆತ್ತವರು ಯೇಸುವನ್ನು ಹೇಗೆ ಅನುಕರಿಸಬಹುದು?

13 ಯೇಸು ತಮ್ಮ ಮೇಲೆ ವೈಯಕ್ತಿಕ ಕಾಳಜಿಯಿಟ್ಟಿದ್ದಾನೆ ಎಂಬುದನ್ನು ಜನರು ಸುಲಭವಾಗಿ ಗ್ರಹಿಸಿದರು. ತುಂಬ ಒತ್ತಡವಿದ್ದಾಗಲೂ ವೈಯಕ್ತಿಕ ಕಾಳಜಿ ತೋರಿಸಲು ಯೇಸು ತಪ್ಪಿಹೋಗಲಿಲ್ಲ. ನಾವೀಗಾಗಲೇ ನೋಡಿರುವಂತೆ, ಹೆತ್ತವರು ತಮ್ಮ ಮಕ್ಕಳನ್ನು ಯೇಸುವಿನ ಬಳಿ ಕರೆತಂದಾಗ ಅವನು ತುಂಬ ಕಾರ್ಯಮಗ್ನನಾಗಿದ್ದನು ಹಾಗೂ ಭಾರಿ ಜವಾಬ್ದಾರಿಗಳನ್ನು ಹೊತ್ತಿದ್ದನು. ಆದರೂ ಮಕ್ಕಳಿಗಾಗಿ ತನ್ನ ಸಮಯ ಕೊಟ್ಟನು. ಹೆತ್ತವರಿಗಾಗಿ ಅವನೆಂಥ ಉತ್ತಮ ಮಾದರಿಯನ್ನಿಟ್ಟಿದ್ದಾನೆ! ಇಂದಿನ ಲೋಕದಲ್ಲಿ ಮಕ್ಕಳನ್ನು ಬೆಳೆಸುವುದು ಅಷ್ಟೇನೂ ಸುಲಭವಲ್ಲ. ಆದರೂ ಹೆತ್ತವರು ಹೇಗಿರಬೇಕೆಂದರೆ, ಮಕ್ಕಳು ಯಾವುದೇ ಸಮಯದಲ್ಲಿ ಅವರ ಬಳಿ ಹಿಂಜರಿಕೆಯಿಲ್ಲದೆ ಬರುವಂತಿರಬೇಕು. ಮಕ್ಕಳು ನೆರವು ಕೇಳುವ ಎಲ್ಲಾ ಸಂದರ್ಭಗಳಲ್ಲಿ ಅವರಿಗಾಗಿ ಸಮಯ ಮಾಡಿಕೊಳ್ಳಲು ಸಾಧ್ಯವಾಗದು ಎಂಬುದು ಹೆತ್ತವರಾದ ನಿಮಗೆ ತಿಳಿದೇ ಇದೆ. ಅಂಥ ಸಂದರ್ಭಗಳಲ್ಲಿ, ಆದಷ್ಟು ಬೇಗನೇ ಅವರಿಗಾಗಿ ಬಿಡುವು ಮಾಡಿಕೊಳ್ಳುವಿರೆಂದು ನೀವು ಅವರಿಗೆ ಆಶ್ವಾಸನೆ ಕೊಡಬಲ್ಲಿರೋ? ಕೊಟ್ಟ ಮಾತಿಗೆ ನೀವು ತಪ್ಪದಿರುವಲ್ಲಿ ತಾಳ್ಮೆಯಿಂದ ಕಾಯುವುದರಲ್ಲಿ ಪ್ರಯೋಜನಗಳಿವೆ ಎಂಬುದನ್ನು ನಿಮ್ಮ ಮಕ್ಕಳು ಕಲಿತುಕೊಳ್ಳುವರು. ಅಲ್ಲದೆ, ಯಾವುದೇ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಬಂದರೂ ಸಹಾಯಕ್ಕಾಗಿ ಹೆತ್ತವರಾದ ನಿಮ್ಮನ್ನು ಸಮೀಪಿಸಬಹುದು ಎಂಬುದನ್ನೂ ಅವರು ಕಲಿಯುವರು.

14-16. (ಎ) ತನ್ನ ಪ್ರಥಮ ಅದ್ಭುತವನ್ನು ನಡೆಸುವಂತೆ ಯೇಸುವನ್ನು ಯಾವ ಸನ್ನಿವೇಶಗಳು ಪ್ರಚೋದಿಸಿದವು? ಅದು ನಿಜಕ್ಕೂ ಅದ್ಭುತಕಾರ್ಯವಾಗಿತ್ತೇಕೆ? (ಬಿ) ಕಾನಾದಲ್ಲಿ ಯೇಸು ಮಾಡಿದ ಅದ್ಭುತ ಅವನ ಕುರಿತು ಏನನ್ನು ತಿಳಿಸುತ್ತದೆ? ಅದು ಹೆತ್ತವರಿಗೆ ಯಾವ ಪಾಠವನ್ನು ಕಲಿಸುತ್ತದೆ?

14 ಜನರನ್ನು ಕಾಡಿಸುತ್ತಿದ್ದ ಚಿಂತೆಗಳನ್ನು ಯೇಸು ತನ್ನ ಚಿಂತೆಗಳೋ ಎಂಬಂತೆ ಗಂಭೀರವಾಗಿ ತೆಗೆದುಕೊಂಡನು ಮತ್ತು ಅದನ್ನು ಅವರಿಗೆ ವ್ಯಕ್ತಪಡಿಸಿದನು ಸಹ. ಉದಾಹರಣೆಗಾಗಿ ಯೇಸು ಮಾಡಿದ ಪ್ರಥಮ ಅದ್ಭುತವನ್ನು ತೆಗೆದುಕೊಳ್ಳಿ. ಅವನು ಗಲಿಲಾಯದ ಕಾನಾ ಊರಿನಲ್ಲಿ ಒಂದು ಮದುವೆಯ ಔತಣಕ್ಕೆ ಹಾಜರಾಗಿದ್ದನು. ಅಲ್ಲಿ ದ್ರಾಕ್ಷಾಮದ್ಯ ಖಾಲಿಯಾಗಿ ಮುಜುಗರದ ಸನ್ನಿವೇಶವೊಂದು ಉದ್ಭವಿಸಿತು. ಈ ಸಂಗತಿಯನ್ನು ಯೇಸುವಿನ ತಾಯಿಯಾದ ಮರಿಯಳು ಮಗನಿಗೆ ತಿಳಿಸುತ್ತಾಳೆ. ಯೇಸು ಏನು ಮಾಡುತ್ತಾನೆ? ಕಲ್ಲಿನ ಆರು ಹಂಡೆಗಳಲ್ಲಿ ನೀರು ತುಂಬಿಸುವಂತೆ ಅವನು ಅಲ್ಲಿದ್ದ ಸೇವಕರಿಗೆ ಹೇಳುತ್ತಾನೆ. ತದನಂತರ ಅದರಿಂದ ಸ್ವಲ್ಪವನ್ನು ತೆಗೆದುಕೊಂಡು ಹೋಗಿ ಔತಣದ ನಿರ್ದೇಶಕನಿಗೆ ಕೊಟ್ಟು ರುಚಿನೋಡುವಂತೆ ಕೇಳಿದಾಗ ಆಶ್ಚರ್ಯ! ಆ ನೀರು ಉತ್ತಮ ಗುಣಮಟ್ಟದ ದ್ರಾಕ್ಷಾಮದ್ಯವಾಗಿತ್ತು! ಅದೇನೋ ಕೈಚಳಕ ಇಲ್ಲವೇ ಚಮತ್ಕಾರದಿಂದಾಗಿತ್ತೋ? ಇಲ್ಲ, ನೀರು ‘ದ್ರಾಕ್ಷಾಮದ್ಯವಾಗಿ ಮಾರ್ಪಟ್ಟಿತ್ತು.’ (ಯೋಹಾನ 2:1-11) ಒಂದು ವಸ್ತುವನ್ನು ಇನ್ನೊಂದಾಗಿ ಮಾರ್ಪಡಿಸುವುದು ಬಹುಕಾಲದಿಂದಲೂ ಜನರ ಕನಸಾಗಿದೆ. ಶತಮಾನಗಳಿಂದಲೂ ರಸವಿದ್ಯಾತಜ್ಞರು ಸೀಸ ಎಂಬ ಲೋಹವನ್ನು ಚಿನ್ನವಾಗಿ ಮಾರ್ಪಡಿಸಲು ಪ್ರಯತ್ನಿಸಿದ್ದಾರೆ. ಸೀಸ ಮತ್ತು ಚಿನ್ನ ವಾಸ್ತವದಲ್ಲಿ ಒಂದೇ ಬಗೆಯ ಧಾತುಗಳಾಗಿರುವುದಾದರೂ ಅವರದರಲ್ಲಿ ಯಶ ಸಾಧಿಸಿಲ್ಲ. * ನೀರು ಮತ್ತು ದ್ರಾಕ್ಷಾಮದ್ಯದ ಕುರಿತೇನು? ರಸಾಯನ ವಿಜ್ಞಾನದ ಪ್ರಕಾರ ನೀರು ಎರಡು ಮೂಲವಸ್ತುಗಳ ಸರಳ ಸಂಯೋಗವಾಗಿದೆ. ಆದರೆ ದ್ರಾಕ್ಷಾಮದ್ಯದಲ್ಲಿ ಹೆಚ್ಚುಕಡಿಮೆ ಸಾವಿರ ಘಟಕಗಳಿವೆ. ಅವುಗಳಲ್ಲಿ ಹೆಚ್ಚಿನವು ಕ್ಲಿಷ್ಟ ಸಂಯುಕ್ತಗಳಾಗಿವೆ! ಮದುವೆಯ ಔತಣದಲ್ಲಿ ದ್ರಾಕ್ಷಾಮದ್ಯ ಖಾಲಿಯಾದಾಗ ಆ ಚಿಕ್ಕ ಸಮಸ್ಯೆಯನ್ನು ಬಗೆಹರಿಸಲಿಕ್ಕಾಗಿ ಯೇಸು ಅಷ್ಟೊಂದು ದೊಡ್ಡ ಅದ್ಭುತಕಾರ್ಯವನ್ನು ನಡಿಸಿದ್ದೇಕೆ?

15 ಆ ಸಮಸ್ಯೆಯು ವಧುವರರಿಗೆ ಚಿಕ್ಕದಾಗಿರಲಿಲ್ಲ. ಪುರಾತನ ಇಸ್ರಾಯೇಲಿನಲ್ಲಿ ಅತಿಥಿಗಳಿಗೆ ಅತಿಥಿಸತ್ಕಾರ ತೋರಿಸುವುದು ತುಂಬ ಪ್ರಮುಖ ಸಂಗತಿಯಾಗಿತ್ತು. ವಿವಾಹದ ಔತಣದಲ್ಲಿ ದ್ರಾಕ್ಷಾಮದ್ಯ ಖಾಲಿಯಾಗುತ್ತಿದ್ದಲ್ಲಿ ಅದು ವಧುವರರಿಗೆ ಬಹಳಷ್ಟು ನಾಚಿಕೆ ಹಾಗೂ ಮುಜುಗರವನ್ನು ಉಂಟುಮಾಡುತ್ತಿತ್ತು. ಅಲ್ಲದೆ, ಅವರ ಮದುವೆಯ ದಿನದ ಸಂಭ್ರಮವೇ ಮರೆಯಾಗುತ್ತಿತ್ತು ಮತ್ತು ಮುಂಬರುವ ವರ್ಷಗಳಲ್ಲೂ ಅದರ ಕಹಿನೆನಪುಗಳು ಉಳಿದುಕೊಳ್ಳುತ್ತಿದ್ದವು. ಆದ್ದರಿಂದಲೇ ಆ ಸಮಸ್ಯೆ ಅವರಿಗೆ ಚಿಕ್ಕದಾಗಿರಲಿಲ್ಲ ಮತ್ತು ಯೇಸು ಸಹ ಅದನ್ನು ಗಂಭೀರವಾಗಿ ತೆಗೆದುಕೊಂಡನು. ಹಾಗಾಗಿ ಅವನು ಆ ಅದ್ಭುತ ಮಾಡಿದನು. ಜನರು ತಮ್ಮ ಚಿಂತೆಗಳನ್ನು ಹಿಡಿದುಕೊಂಡು ಯೇಸುವಿನ ಬಳಿ ಏಕೆ ಬರುತ್ತಿದ್ದರು ಎಂಬುದು ನಿಮಗೀಗ ಗೊತ್ತಾಯಿತೋ?

ನೀವು ಸ್ನೇಹಶೀಲರಾಗಿದ್ದೀರಿ ಮತ್ತು ಮಕ್ಕಳ ಬಗ್ಗೆ ನಿಮಗೆ ಕಾಳಜಿಯಿದೆ ಎಂಬುದನ್ನು ವ್ಯಕ್ತಪಡಿಸಿ

16 ಇಲ್ಲಿ ಕೂಡ, ಹೆತ್ತವರು ಅಮೂಲ್ಯ ಪಾಠವೊಂದನ್ನು ಕಲಿಯಬಲ್ಲರು. ನಿಮ್ಮ ಮಕ್ಕಳು ಸಮಸ್ಯೆಯಿಂದ ಕುಗ್ಗಿ ನಿಮ್ಮ ಬಳಿಗೆ ಬರುವಲ್ಲಿ ನೀವೇನು ಮಾಡುವಿರಿ? ಅದೇನು ದೊಡ್ಡ ಸಮಸ್ಯೆಯಲ್ಲ ಎಂದು ಹೇಳಿಬಿಡುವ ಮನಸ್ಸು ನಿಮಗಾಗಬಹುದು. ಅವರ ಸಮಸ್ಯೆ ಕೇಳಿ ನಿಮಗೆ ನಗು ಕೂಡ ಬರಬಹುದು. ನಿಮ್ಮ ಸಮಸ್ಯೆಗಳಿಗೆ ಹೋಲಿಸುವಾಗ ಮಕ್ಕಳ ಸಮಸ್ಯೆ ತೀರಾ ಚಿಕ್ಕದಾಗಿ ತೋರಬಹುದು. ಆದರೆ ನೆನಪಿಡಿ, ಅದು ಮಕ್ಕಳಿಗೆ ಚಿಕ್ಕದೇನಲ್ಲ! ಪ್ರೀತಿಪಾತ್ರರೂ ಕಣ್ಮಣಿಗಳೂ ಆದ ನಿಮ್ಮ ಮಕ್ಕಳನ್ನು ಆ ಸಮಸ್ಯೆ ಕಾಡಿಸುತ್ತಿರುವಲ್ಲಿ ನೀವೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದೋ? ಅವರಿಗೆ ಯಾವ ಸಮಸ್ಯೆಗಳು ಕಾಡುತ್ತಿವೆಯೋ ಅವುಗಳ ಬಗ್ಗೆ ನಿಮಗೂ ಚಿಂತೆಯಿದೆ ಎಂಬುದನ್ನು ಮಕ್ಕಳಿಗೆ ವ್ಯಕ್ತಪಡಿಸಿ. ಆಗ ಮಕ್ಕಳು ಏನೇ ಸಮಸ್ಯೆಯಿರಲಿ ಹಿಂಜರಿಕೆಯಿಲ್ಲದೆ ನಿಮ್ಮ ಬಳಿಗೆ ಓಡಿಬರುವರು.

17. ಸೌಮ್ಯಭಾವದ ವಿಷಯದಲ್ಲಿ ಯೇಸು ಯಾವ ಮಾದರಿಯನ್ನಿಟ್ಟನು? ಆ ಗುಣವು ಬಲದ ದ್ಯೋತಕವೇಕೆ?

17 ನಾವು 3ನೇ ಅಧ್ಯಾಯದಲ್ಲಿ ಚರ್ಚಿಸಿರುವಂತೆ, ಯೇಸು ಸೌಮ್ಯಭಾವದವನೂ ದೀನನೂ ಆಗಿದ್ದನು. (ಮತ್ತಾಯ 11:29) ಸೌಮ್ಯಭಾವವು ಆಕರ್ಷಕ ಗುಣವಾಗಿದ್ದು, ಒಬ್ಬ ವ್ಯಕ್ತಿಯ ಹೃದಯದಲ್ಲಿ ದೀನತೆ ಇದೆ ಎಂಬುದನ್ನು ತೋರಿಸುತ್ತದೆ. ಇದು ದೇವರ ಪವಿತ್ರಾತ್ಮದ ಫಲದ ಭಾಗವಾಗಿದೆ. ಮತ್ತು ದೈವಿಕ ವಿವೇಕಕ್ಕೂ ದೀನತೆಗೂ ನಂಟಿದೆ. (ಗಲಾತ್ಯ 5:22, 23; ಯಾಕೋಬ 3:13) ಬಹಳ ಕೋಪವನ್ನು ಉಂಟುಮಾಡುವ ಸನ್ನಿವೇಶಗಳಲ್ಲೂ ಯೇಸು ತನ್ನನ್ನೇ ನಿಯಂತ್ರಿಸಿಕೊಂಡನು. ಅವನಲ್ಲಿದ್ದ ಸೌಮ್ಯಭಾವವು ಖಂಡಿತ ಬಲಹೀನತೆಯಾಗಿರಲಿಲ್ಲ. ಈ ಗುಣದ ಬಗ್ಗೆ ಒಬ್ಬ ವಿದ್ವಾಂಸನು ಹೇಳಿದ್ದು: “ಸೌಮ್ಯತೆಯಲ್ಲಿ ಉಕ್ಕಿನ ಬಲವಿದೆ.” ಕೋಪವನ್ನು ನಿಗ್ರಹಿಸಿಕೊಂಡು ಸೌಮ್ಯಭಾವವನ್ನು ತೋರಿಸಬೇಕೆಂದರೆ ಬಲ ಅತ್ಯಾವಶ್ಯಕ. ಆದರೆ ನಾವು ಶ್ರಮಿಸುವುದಾದರೆ ಖಂಡಿತ ಯೆಹೋವನು ನಮಗೆ ಸಹಾಯ ಮಾಡುವನು ಮತ್ತು ನಾವು ಸೌಮ್ಯಭಾವವನ್ನು ತೋರಿಸುವುದರಲ್ಲಿ ಯೇಸುವನ್ನು ಅನುಕರಿಸಲು ಶಕ್ತರಾಗುವೆವು. ಆಗ ಜನರು ನಮ್ಮ ಬಳಿಗೆ ಬರಲು ಹಿಂಜರಿಯರು.

18. ಯಾವ ಉದಾಹರಣೆಯು ಯೇಸುವಿನ ನ್ಯಾಯಸಮ್ಮತತೆಯನ್ನು ಪ್ರಕಟಪಡಿಸುತ್ತದೆ? ಈ ಗುಣವಿರುವ ವ್ಯಕ್ತಿಯನ್ನು ಜನರು ಹಿಂಜರಿಕೆಯಿಲ್ಲದೆ ಸಮೀಪಿಸುತ್ತಾರೆಂದು ಹೇಗೆ ಹೇಳಬಲ್ಲಿರಿ?

18 ಯೇಸು ನ್ಯಾಯಸಮ್ಮತನಾಗಿದ್ದನು. ಅವನು ತೂರ್‌ ಪ್ರಾಂತದಲ್ಲಿದ್ದಾಗ ಒಬ್ಬಾಕೆ ಸ್ತ್ರೀಯು ಅವನ ಬಳಿ ಬಂದಳು. ಕಾರಣ, ಆಕೆಯ ಮಗಳಿಗೆ ‘ದೆವ್ವದ ಕಾಟ ಬಹಳವಾಗಿತ್ತು.’ ಆಕೆ ತನ್ನಿಂದ ಏನು ನಿರೀಕ್ಷಿಸಿದ್ದಳೋ ಅದನ್ನು ಮಾಡಲು ತನಗಿಷ್ಟವಿಲ್ಲ ಎಂಬುದನ್ನು ಯೇಸು ಮೂರು ಸಲ ಬೇರೆಬೇರೆ ರೀತಿಯಲ್ಲಿ ತಿಳಿಸಿದನು. ಮೊದಲು ಅವನು ಉತ್ತರಕೊಡದೆ ಮೌನವಾಗಿ ಉಳಿದನು. ಎರಡನೆಯದಾಗಿ, ಆಕೆ ಏನು ಕೇಳಿದಳೋ ಅದನ್ನು ತಾನೇಕೆ ಮಾಡುವಂತಿಲ್ಲ ಎಂಬುದಕ್ಕೆ ಕಾರಣ ಕೊಟ್ಟನು. ಮೂರನೆಯದಾಗಿ, ದೃಷ್ಟಾಂತ ಕೊಡುವ ಮೂಲಕ ಅದನ್ನು ಇನ್ನಷ್ಟು ಸ್ಪಷ್ಟಗೊಳಿಸಿದನು. ಆದರೆ ಅವನು ಸ್ನೇಹರಹಿತನಾಗಿ ಇಲ್ಲವೇ ಕಟುವಾಗಿ ಉತ್ತರಿಸಿದನೋ? ತನ್ನಂಥ ಶ್ರೇಷ್ಠ ವ್ಯಕ್ತಿಯನ್ನು ಪ್ರಶ್ನಿಸುವ ಮೂಲಕ ಆಕೆ ತನ್ನ ಮೇಲೆಯೇ ಅಪಾಯವನ್ನು ಎಳೆದುಕೊಳ್ಳುತ್ತಿದ್ದಾಳೆ ಎಂಬುದಾಗಿ ಸೂಚಿಸಿದನೋ? ಇಲ್ಲ, ಈ ಸ್ತ್ರೀ ಅವನೊಡನೆ ಮಾತಾಡುವಾಗ ನಿರಾಳವಾಗಿದ್ದಳು. ಆಕೆ ಸಹಾಯ ಕೇಳಿದ್ದು ಮಾತ್ರವಲ್ಲ, ತನಗೆ ನೆರವಾಗಲು ಅವನಿಗೆ ಇಷ್ಟವಿಲ್ಲ ಎಂಬುದು ಸುವ್ಯಕ್ತವಾದ ಮೇಲೂ ಪಟ್ಟುಹಿಡಿದಳು. ಅವಳ ಆ ದೃಢ ನಂಬಿಕೆಯನ್ನು ಗುರುತಿಸಿದ ಯೇಸು ಆಕೆಯ ಮಗಳನ್ನು ವಾಸಿಮಾಡಿದನು. (ಮತ್ತಾಯ 15:22-28) ಯೇಸುವಿನ ನ್ಯಾಯಸಮ್ಮತತೆ, ಕಿವಿಗೊಡುವ ಸಿದ್ಧಮನಸ್ಸು ಮತ್ತು ಸೂಕ್ತವಾಗಿರುವಾಗ ಮಣಿಯುವಿಕೆ ಈ ಎಲ್ಲಾ ಗುಣಗಳಿಂದಾಗಿಯೇ ಜನರು ಅವನ ಬಳಿ ಬರಲು ಹಾತೊರೆಯುತ್ತಿದ್ದರು.

ನೀವು ಸ್ನೇಹಶೀಲರಾಗಿದ್ದೀರೋ?

19. ನಾವು ಸ್ನೇಹಶೀಲ ವ್ಯಕ್ತಿಗಳೋ ಅಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು?

19 ತಾವು ಸ್ನೇಹಶೀಲ ವ್ಯಕ್ತಿಗಳೆಂದು ಹೇಳಿಕೊಳ್ಳಲು ಜನರು ಇಷ್ಟಪಡುತ್ತಾರೆ. ಉದಾಹರಣೆಗೆ ಅಧಿಕಾರಯುತ ಸ್ಥಾನಗಳಲ್ಲಿರುವ ಕೆಲವರು, ತಾವು ಸದಾ ಲಭ್ಯರಿದ್ದೇವೆ, ತಮ್ಮ ಕೆಳಗೆ ಕೆಲಸಮಾಡುವವರು ಮುಕ್ತವಾಗಿ ಯಾವಾಗ ಬೇಕಾದರೂ ತಮ್ಮನ್ನು ಭೇಟಿಮಾಡಬಹುದು ಎಂಬುದಾಗಿ ಹೇಳುತ್ತಿರುತ್ತಾರೆ. ಆದರೆ ಬೈಬಲ್‌ನಲ್ಲಿ ಬಲವಾದ ಈ ಎಚ್ಚರಿಕೆಯಿದೆ: “ಸ್ನೇಹಿತರೆಂದು ಹೇಳಿಕೊಳ್ಳುವವರು ಬಹು ಮಂದಿ; ನಂಬಿಗಸ್ತನಾದ ಸ್ನೇಹಿತನು ಎಲ್ಲಿ ಸಿಕ್ಕುವನು?” (ಜ್ಞಾನೋಕ್ತಿ 20:6) ನಾವು ಸ್ನೇಹಶೀಲ ವ್ಯಕ್ತಿಗಳೆಂದು ಹೇಳಿಕೊಳ್ಳುವುದು ಸುಲಭ. ಆದರೆ ನಾವು ನಿಜವಾಗಿಯೂ ಯೇಸುವಿನ ಪ್ರೀತಿಯ ಈ ಅಂಶವನ್ನು ಅನುಕರಿಸುತ್ತಿದ್ದೇವೋ? ಇದಕ್ಕೆ ಉತ್ತರವು, ನಾವು ನಮ್ಮನ್ನು ಹೇಗೆ ವೀಕ್ಷಿಸುತ್ತೇವೋ ಅದರಲ್ಲಲ್ಲ ಬದಲಾಗಿ ಇತರರು ನಮ್ಮನ್ನು ಹೇಗೆ ವೀಕ್ಷಿಸುತ್ತಾರೋ ಅದರಲ್ಲಿ ನಮಗೆ ಸಿಗುತ್ತದೆ. ಪೌಲನಂದದ್ದು: “ನಿಮ್ಮ ನ್ಯಾಯಸಮ್ಮತತೆಯು ಎಲ್ಲ ಮನುಷ್ಯರಿಗೆ ತಿಳಿದುಬರಲಿ.” (ಫಿಲಿಪ್ಪಿ 4:5) ನಮ್ಮಲ್ಲಿ ಪ್ರತಿಯೊಬ್ಬರೂ ಹೀಗೆ ಕೇಳಿಕೊಳ್ಳಬೇಕು: ‘ಇತರರು ನನ್ನನ್ನು ಹೇಗೆ ವೀಕ್ಷಿಸುತ್ತಾರೆ? ನನಗೆ ಒಳ್ಳೆಯ ಹೆಸರಿದೆಯೇ?’

ಹಿರಿಯರು ಸ್ನೇಹಶೀಲರಾಗಿರಲು ಶ್ರಮಿಸುತ್ತಾರೆ

20. (ಎ) ಕ್ರೈಸ್ತ ಹಿರಿಯರು ಸ್ನೇಹಶೀಲರಾಗಿರುವುದು ಏಕೆ ಪ್ರಾಮುಖ್ಯ? (ಬಿ) ಹಿರಿಯರಿಂದ ನಾವೇನನ್ನು ನಿರೀಕ್ಷಿಸುತ್ತೇವೋ ಆ ವಿಷಯಗಳಲ್ಲಿ ನಾವು ನ್ಯಾಯಸಮ್ಮತತೆ ಏಕೆ ತೋರಿಸಬೇಕು?

20 ವಿಶೇಷವಾಗಿ ಕ್ರೈಸ್ತ ಹಿರಿಯರು ಸ್ನೇಹಶೀಲ ವ್ಯಕ್ತಿಗಳಾಗಿರಲು ಪ್ರಯತ್ನಿಸಬೇಕು. ಯೆಶಾಯ 32:1, 2​ರಲ್ಲಿ ದಾಖಲಿಸಲ್ಪಟ್ಟ ವರ್ಣನೆಗನುಸಾರ ಜೀವಿಸುವುದು ಅವರ ಶ್ರದ್ಧಾಪೂರ್ವಕ ಬಯಕೆಯಾಗಿದೆ. ಅದನ್ನುವುದು: “ಒಬ್ಬ ಪುರುಷನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.” ಒಬ್ಬ ಹಿರಿಯನು ಸ್ನೇಹಶೀಲನಾಗಿರುವಲ್ಲಿ ಮಾತ್ರ ಅಂಥ ಸಂರಕ್ಷಣೆ, ಚೈತನ್ಯ ಹಾಗೂ ಉಪಶಮನ ನೀಡಬಲ್ಲನು. ಆದರೆ ಇದನ್ನು ಮಾಡುವುದು ಯಾವಾಗಲೂ ಸುಲಭವಲ್ಲ. ಏಕೆಂದರೆ ಈ ಸಂಕಷ್ಟಕರ ಸಮಯಗಳಲ್ಲಿ ಹಿರಿಯರಿಗೆ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಲಿಕ್ಕಿದೆ. ಹಾಗಿದ್ದರೂ, ಯೆಹೋವನ ಕುರಿಗಳ ಅಗತ್ಯಗಳನ್ನು ಪೂರೈಸಲು ಸಮಯವಿಲ್ಲದಷ್ಟು ಕಾರ್ಯಮಗ್ನರಾಗಿ ಇದ್ದಾರೆಂಬ ಅಭಿಪ್ರಾಯವನ್ನು ಅವರು ಇತರರಲ್ಲಿ ಮೂಡಿಸಬಾರದು. (1 ಪೇತ್ರ 5:2) ಸಭೆಯ ಇತರ ಸದಸ್ಯರು ಸಹ, ದೀನ ಹಾಗೂ ಸಹಕಾರ ಮನೋಭಾವ ತೋರಿಸುತ್ತಾ ಆ ನಂಬಿಗಸ್ತ ಪುರುಷರಿಂದ ಅತಿಯಾದದ್ದನ್ನು ನಿರೀಕ್ಷಿಸದೇ ನ್ಯಾಯಸಮ್ಮತರಾಗಿರಬೇಕು.—ಇಬ್ರಿಯ 13:17.

21. ಹೆತ್ತವರು ಎಲ್ಲಾ ಸಮಯಗಳಲ್ಲೂ ತಮ್ಮ ಮಕ್ಕಳಿಗೆ ಲಭ್ಯರಿರುವಂತೆ ಹೇಗೆ ನೋಡಿಕೊಳ್ಳಬಹುದು? ಮುಂದಿನ ಅಧ್ಯಾಯದಲ್ಲಿ ನಾವೇನನ್ನು ಪರಿಗಣಿಸಲಿದ್ದೇವೆ?

21 ಹೆತ್ತವರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಸದಾ ತಯಾರಿರಬೇಕು. ಅದು ತುಂಬ ಪ್ರಾಮುಖ್ಯ. ತಂದೆ ಅಥವಾ ತಾಯಿಯಲ್ಲಿ ತಮ್ಮ ಅಂತರಂಗವನ್ನು ತೋಡಿಕೊಳ್ಳುವುದು ಸುರಕ್ಷಿತವೆಂದು ಮಕ್ಕಳೆಣಿಸಬೇಕೆಂದು ಹೆತ್ತವರು ಬಯಸುತ್ತಾರೆ. ಆದ್ದರಿಂದ ಕ್ರೈಸ್ತ ಹೆತ್ತವರು ಸೌಮ್ಯಭಾವದವರೂ ನ್ಯಾಯಸಮ್ಮತರೂ ಆಗಿರುವತ್ತ ಜೋಕೆವಹಿಸಬೇಕು. ಮಕ್ಕಳು ತಮ್ಮ ತಪ್ಪನ್ನು ವರದಿಸುವಾಗ ಇಲ್ಲವೇ ತಪ್ಪಾದ ಆಲೋಚನೆಯೊಂದನ್ನು ವ್ಯಕ್ತಪಡಿಸುವಾಗ ಅತಿಯಾಗಿ ಪ್ರತಿಕ್ರಿಯಿಸಬಾರದು. ಹೆತ್ತವರೋಪಾದಿ ಮಕ್ಕಳನ್ನು ತರಬೇತುಗೊಳಿಸುವಾಗ ಸಂವಾದದ ದಾರಿಯನ್ನು ಯಾವಾಗಲೂ ತೆರೆದಿಡಲು ಶ್ರಮಿಸಬೇಕು. ಖಂಡಿತವಾಗಿಯೂ ನಾವೆಲ್ಲರೂ ಯೇಸುವಿನಂತೆ ಸ್ನೇಹಶೀಲರಾಗಿರಲು ಬಯಸುತ್ತೇವೆ. ಮುಂದಿನ ಅಧ್ಯಾಯದಲ್ಲಿ, ಯೇಸುವನ್ನು ಸ್ನೇಹಶೀಲ ವ್ಯಕ್ತಿಯನ್ನಾಗಿ ಮಾಡಿದ ಪ್ರಧಾನ ಗುಣಗಳಲ್ಲಿ ಒಂದಾದ ಕೋಮಲ ಕನಿಕರವನ್ನು ನಾವು ಚರ್ಚಿಸಲಿದ್ದೇವೆ.

^ ಪ್ಯಾರ. 14 ಸೀಸ ಮತ್ತು ಚಿನ್ನ ಮೂಲವಸ್ತುಗಳ ಆವರ್ತ ಕೋಷ್ಟಕದಲ್ಲಿ ಹತ್ತಿರ ಹತ್ತಿರ ಬರುತ್ತವೆ ಎಂಬುದು ರಸಾಯನಶಾಸ್ತ್ರದ ವಿದ್ಯಾರ್ಥಿಗಳಿಗೆ ಗೊತ್ತಿರುತ್ತದೆ. ಅವುಗಳ ಪರಮಾಣುವಿನ ನ್ಯೂಕ್ಲಿಯಸ್‌ನಲ್ಲಿರುವ ಪ್ರೋಟಾನ್‌ಗಳ ಸಂಖ್ಯೆಯಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ. ಚಿನ್ನಕ್ಕಿಂತ ಸೀಸದಲ್ಲಿ ಮೂರು ಪ್ರೋಟಾನ್‌ಗಳು ಹೆಚ್ಚಿವೆಯಷ್ಟೇ. ಆಧುನಿಕ ಕಾಲದ ಭೌತವಿಜ್ಞಾನಿಗಳು ಸ್ವಲ್ಪಪ್ರಮಾಣದಲ್ಲಿ ಸೀಸವನ್ನು ಚಿನ್ನವಾಗಿ ಪರಿವರ್ತಿಸಿದ್ದಾರೆ. ಆದರೆ ಅದಕ್ಕೆ ತಗಲಿದ ಶ್ರಮ ಹಾಗೂ ಖರ್ಚು ಅಷ್ಟಿಷ್ಟಲ್ಲ.