ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 16

“ಯೇಸು . . . ಕೊನೆಯ ವರೆಗೂ ಅವರನ್ನು ಪ್ರೀತಿಸಿದನು”

“ಯೇಸು . . . ಕೊನೆಯ ವರೆಗೂ ಅವರನ್ನು ಪ್ರೀತಿಸಿದನು”

1, 2. ಯೇಸು ತನ್ನ ಕೊನೆಯ ಸಾಯಂಕಾಲವನ್ನು ಅಪೊಸ್ತಲರೊಂದಿಗೆ ಹೇಗೆ ಕಳೆದನು? ಆ ಅಂತಿಮ ಕ್ಷಣಗಳು ಅವನಿಗೆ ಅಮೂಲ್ಯವಾಗಿದ್ದವೇಕೆ?

ಯೆರೂಸಲೇಮಿನಲ್ಲಿ, ಮನೆಯೊಂದರ ಮೇಲಂತಸ್ತಿನ ಕೋಣೆಯಲ್ಲಿ ಒಟ್ಟುಸೇರುವಂತೆ ಯೇಸು ತನ್ನ ಅಪೊಸ್ತಲರಿಗೆ ತಿಳಿಸಿದ್ದಾನೆ. ಅದು ಅವರೊಂದಿಗೆ ತಾನು ಕಳೆಯಲಿರುವ ಕೊನೆಯ ಸಾಯಂಕಾಲವೆಂಬುದು ಅವನಿಗೆ ಗೊತ್ತಿದೆ. ತನ್ನ ತಂದೆಯ ಬಳಿಗೆ ಅವನು ಹಿಂದಿರುಗಿ ಹೋಗುವ ಸಮಯ ಬಹಳ ಸನ್ನಿಹಿತವಾಗಿದೆ. ಇನ್ನೇನು ಕೆಲವೇ ತಾಸುಗಳಲ್ಲಿ ಯೇಸುವನ್ನು ಬಂಧಿಸಲಾಗುವುದು ಹಾಗೂ ಅವನ ನಂಬಿಕೆಯು ಕಠಿಣ ಪರೀಕ್ಷೆಗೊಳಗಾಗಲಿರುವುದು. ಸ್ವಲ್ಪದರಲ್ಲೇ ತಾನು ಸಾಯಲಿದ್ದೇನೆಂದು ಗೊತ್ತಿದ್ದರೂ ಯೇಸು ತನಗಿಂತಲೂ ತನ್ನ ಅಪೊಸ್ತಲರ ಅಗತ್ಯಗಳಿಗೆ ಹೆಚ್ಚಿನ ಪರಿಗಣನೆ ತೋರಿಸುತ್ತಾನೆ.

2 ತಾನವರನ್ನು ಬಿಟ್ಟುಹೋಗಲಿದ್ದೇನೆಂದು ಯೇಸು ಈಗಾಗಲೇ ಅಪೊಸ್ತಲರಿಗೆ ಮನದಟ್ಟು ಮಾಡಿದ್ದಾನೆ. ಆದರೂ ಮುಂದೆ ನಡೆಯಲಿರುವ ಘಟನೆಗಳನ್ನು ಎದುರಿಸಲಾಗುವಂತೆ ಅವರಿಗೆ ಇನ್ನಷ್ಟು ವಿಷಯಗಳನ್ನು ಅವನು ತಿಳಿಸಲು ಬಯಸುತ್ತಾನೆ. ಆದ್ದರಿಂದಲೇ, ಈ ಅಮೂಲ್ಯ ಅಂತಿಮ ಕ್ಷಣಗಳನ್ನು ಪ್ರಮುಖ ಪಾಠಗಳನ್ನು ಕಲಿಸಲಿಕ್ಕಾಗಿ ಉಪಯೋಗಿಸುತ್ತಾನೆ. ನಂಬಿಗಸ್ತರಾಗಿ ಉಳಿಯಲು ಆ ಪಾಠಗಳು ಅವರಿಗೆ ಸಹಾಯ ಮಾಡಲಿದ್ದವು. ಅವನ ಮಾತುಗಳಲ್ಲಿ ಸೌಹಾರ್ದತೆ ತುಂಬಿದೆ, ಆತ್ಮೀಯತೆ ಎದ್ದುಕಾಣುತ್ತಿದೆ. ಹಿಂದೆಂದೂ ಅವನು ಅಷ್ಟು ಆಪ್ತತೆಯಿಂದ ಮಾತಾಡಿರಲಿಲ್ಲ. ಯೇಸು ತನಗಿಂತಲೂ ತನ್ನ ಅಪೊಸ್ತಲರ ಅಗತ್ಯಗಳಿಗೆ ಏಕೆ ಅಷ್ಟು ಪರಿಗಣನೆ ತೋರಿಸುತ್ತಿದ್ದಾನೆ? ಅವರೊಂದಿಗಿನ ಈ ಕೊನೆಯ ತಾಸುಗಳು ಅವನಿಗೇಕೆ ಅಷ್ಟೊಂದು ಅಮೂಲ್ಯವಾಗಿವೆ? ಉತ್ತರವು ಪ್ರೀತಿ ಎಂಬ ಒಂದೇ ಶಬ್ದದಲ್ಲಿ ಅಡಗಿದೆ. ಹೌದು, ಅವನಿಗೆ ಅವರ ಮೇಲೆ ಅಗಾಧ ಪ್ರೀತಿಯಿದೆ.

3. ಯೇಸು ತನ್ನ ಹಿಂಬಾಲಕರಿಗೆ ಪ್ರೀತಿ ತೋರಿಸಲು ತನ್ನ ಕೊನೆಯ ರಾತ್ರಿಯ ವರೆಗೆ ಕಾದಿರಲಿಲ್ಲವೆಂಬುದು ನಮಗೆ ಹೇಗೆ ಗೊತ್ತು?

3 ದಶಕಗಳ ನಂತರ ಅಪೊಸ್ತಲ ಯೋಹಾನನು ಆ ಸಾಯಂಕಾಲ ನಡೆದ ಘಟನೆಯ ಕುರಿತು ತನ್ನ ಪ್ರೇರಿತ ದಾಖಲೆಯಲ್ಲಿ ಹೀಗೆ ಬರೆಯುತ್ತಾನೆ: “ಪಸ್ಕಹಬ್ಬಕ್ಕೆ ಮುಂಚೆ ಯೇಸು ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುವ ಗಳಿಗೆಯು ಬಂತೆಂಬುದನ್ನು ತಿಳಿದುಕೊಂಡದ್ದರಿಂದ, ಲೋಕದಲ್ಲಿದ್ದ ತನ್ನ ಸ್ವಂತದವರನ್ನು ಪ್ರೀತಿಸಿದ ಅವನು ಕೊನೆಯ ವರೆಗೂ ಅವರನ್ನು ಪ್ರೀತಿಸಿದನು.” (ಯೋಹಾನ 13:1) “ತನ್ನ ಸ್ವಂತದವರನ್ನು” ತಾನು ಪ್ರೀತಿಸುತ್ತೇನೆಂದು ತೋರಿಸಲು ಯೇಸು ಆ ರಾತ್ರಿಯ ವರೆಗೆ ಕಾದಿರಲಿಲ್ಲ. ತನ್ನ ಶುಶ್ರೂಷೆಯಾದ್ಯಂತ, ನಾನಾ ವಿಧಗಳಲ್ಲಿ ಅವನು ತನ್ನ ಶಿಷ್ಯರ ಮೇಲಿನ ಪ್ರೀತಿಯನ್ನು ತೋರಿಸಿಕೊಟ್ಟನು. ಅವನು ಪ್ರೀತಿ ತೋರಿಸಿದ ಕೆಲವು ವಿಧಗಳನ್ನು ತಿಳಿದುಕೊಳ್ಳುವುದು ನಮಗೆ ಪ್ರಯೋಜನಕರ. ಏಕೆಂದರೆ, ಈ ವಿಷಯದಲ್ಲಿ ನಾವು ಅವನನ್ನು ಅನುಕರಿಸುವಾಗ ನಾವು ಅವನ ನಿಜ ಶಿಷ್ಯರಾಗಿದ್ದೇವೆ ಎಂಬುದನ್ನು ತೋರಿಸಿಕೊಡುತ್ತೇವೆ.

ತಾಳ್ಮೆ ಕಾಯ್ದುಕೊಂಡನು

4, 5. (ಎ) ತನ್ನ ಶಿಷ್ಯರೊಂದಿಗಿನ ಒಡನಾಟದಲ್ಲಿ ಯೇಸು ತಾಳ್ಮೆಯಿಂದಿರುವ ಅಗತ್ಯವಿತ್ತೇಕೆ? (ಬಿ) ಗೆತ್ಸೇಮನೆ ತೋಟದಲ್ಲಿ ತನ್ನ ಮೂವರು ಅಪೊಸ್ತಲರು ಎಚ್ಚರವಾಗಿರದಿದ್ದಾಗ ಯೇಸು ಹೇಗೆ ಪ್ರತಿಕ್ರಿಯಿಸಿದನು?

4 ಪ್ರೀತಿ ಮತ್ತು ತಾಳ್ಮೆ ಯಾವಾಗಲೂ ಒಂದಕ್ಕೊಂದು ಹೊಸೆದುಕೊಂಡಿರುತ್ತವೆ. 1 ಕೊರಿಂಥ 13:4, ‘ಪ್ರೀತಿಯು ದೀರ್ಘ ಸಹನೆಯುಳ್ಳದ್ದು’ ಎಂದು ಹೇಳುತ್ತದೆ. ದೀರ್ಘ ಸಹನೆಯಲ್ಲಿ ಪರಸ್ಪರ ತಾಳ್ಮೆಯಿಂದ ಹೊಂದಿಕೊಂಡು ಹೋಗುವುದೂ ಸೇರಿದೆ. ಶಿಷ್ಯರೊಂದಿಗಿನ ಒಡನಾಟದಲ್ಲಿ ಯೇಸು ತಾಳ್ಮೆಯಿಂದ ಇರಬೇಕಾದ ಅಗತ್ಯವಿತ್ತೋ? ಖಂಡಿತವಾಗಿಯೂ! ನಾವು 3ನೇ ಅಧ್ಯಾಯದಲ್ಲಿ ನೋಡಿದಂತೆ, ಅವನ ಅಪೊಸ್ತಲರು ದೀನಭಾವವನ್ನು ಬೆಳೆಸಿಕೊಳ್ಳುವುದರಲ್ಲಿ ತುಂಬಾ ನಿಧಾನಿಗಳಾಗಿದ್ದರು. ತಮ್ಮೊಳಗೆ ಯಾರು ಶ್ರೇಷ್ಠರು ಎಂಬ ವಿಷಯದಲ್ಲಿ ಅವರು ಒಂದಕ್ಕಿಂತ ಹೆಚ್ಚು ಸಲ ವಾಗ್ವಾದ ಮಾಡಿದ್ದರು. ಆ ಸಮಯದಲ್ಲೆಲ್ಲಾ ಯೇಸುವಿನ ಪ್ರತಿಕ್ರಿಯೆ ಹೇಗಿತ್ತು? ಅಸಮಾಧಾನಗೊಂಡನೊ ಅಥವಾ ಕೋಪಗೊಂಡನೊ? ಇಲ್ಲ, ತಾಳ್ಮೆಯಿಂದ ಅವರಿಗೆ ಮನದಟ್ಟು ಮಾಡಲು ಪ್ರಯತ್ನಿಸಿದನು. ಅಷ್ಟೇಕೆ, ತನ್ನ ಕೊನೆಯ ರಾತ್ರಿಯಂದು ಈ ವಿಷಯವಾಗಿ ಪುನಃ ಅವರಲ್ಲಿ “ತೀಕ್ಷ್ಣ ವಾಗ್ವಾದ” ನಡೆದಾಗಲೂ ಅವನು ಸ್ವಲ್ಪವೂ ತಾಳ್ಮೆಗೆಡಲಿಲ್ಲ!—ಲೂಕ 22:24-30; ಮತ್ತಾಯ 20:20-28; ಮಾರ್ಕ 9:33-37.

5 ಅನಂತರ ಆ ರಾತ್ರಿ ಯೇಸು ಗೆತ್ಸೇಮನೆ ತೋಟಕ್ಕೆ 11 ಮಂದಿ ನಂಬಿಗಸ್ತ ಅಪೊಸ್ತಲರೊಂದಿಗೆ ಹೋದಾಗಲೂ ಮತ್ತೊಮ್ಮೆ ಅವನ ತಾಳ್ಮೆಗೆ ಪರೀಕ್ಷೆ ಎದುರಾಯಿತು. ಎಂಟು ಮಂದಿ ಅಪೊಸ್ತಲರನ್ನು ಯೇಸು ಅಲ್ಲೇ ಬಿಟ್ಟು ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ತೋಟದ ಒಳಭಾಗಕ್ಕೆ ಹೋದನು. ಅಲ್ಲಿ ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ತೀವ್ರವಾದ ದುಃಖಕ್ಕೆ ಒಳಗಾಗಿದೆ. ಇಲ್ಲೇ ಇದ್ದು ನನ್ನೊಂದಿಗೆ ಎಚ್ಚರವಾಗಿರಿ” ಎಂದು ಹೇಳಿದನು. ಬಳಿಕ, ಸ್ವಲ್ಪ ದೂರ ಹೋಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸತೊಡಗಿದನು. ಹಾಗೆ ತುಂಬಾ ಹೊತ್ತು ಪ್ರಾರ್ಥಿಸಿದ ನಂತರ ಆ ಮೂವರು ಅಪೊಸ್ತಲರ ಬಳಿಗೆ ಹಿಂತಿರುಗಿದನು. ಅಲ್ಲಿ ಅವರೇನು ಮಾಡುತ್ತಿದ್ದರು ಗೊತ್ತೇ? ಅವನ ಈ ಸಂಕಷ್ಟಕರವಾದ ಗಳಿಗೆಯಲ್ಲೂ ಅವರು ಗಾಢವಾಗಿ ನಿದ್ರಿಸುತ್ತಿದ್ದರು! ಎಚ್ಚರವಾಗಿರಲಿಲ್ಲ ಎಂಬ ಕಾರಣಕ್ಕಾಗಿ ಅವನು ಅವರನ್ನು ತರಾಟೆಗೆ ತೆಗೆದುಕೊಂಡನೋ? ಇಲ್ಲ, ತಾಳ್ಮೆಯಿಂದ ಬುದ್ಧಿಹೇಳಿದನು. ಅವರ ಮೇಲಿದ್ದ ಒತ್ತಡವನ್ನು ಮತ್ತು ಅವರ ಬಲಹೀನತೆಗಳನ್ನು ಅವನು ಅರ್ಥಮಾಡಿಕೊಂಡಿದ್ದನು ಎಂಬುದನ್ನು ಅವನಾಡಿದ ದಯಾಭರಿತ ಮಾತುಗಳು ತೋರಿಸಿಕೊಟ್ಟವು. * “ಹೃದಯವು ಸಿದ್ಧವಾಗಿದೆ ನಿಜ, ಆದರೆ ದೇಹಕ್ಕೆ ಬಲ ಸಾಲದು” ಎಂದವನು ಹೇಳಿದನು. ಆ ರಾತ್ರಿ ಒಂದಲ್ಲ ಮೂರು ಬಾರಿ ಅವರು ಈ ರೀತಿ ನಿದ್ರಿಸಿದರು. ಆದರೂ ಯೇಸು ಸ್ವಲ್ಪವೂ ತಾಳ್ಮೆಗೆಡಲಿಲ್ಲ.—ಮತ್ತಾಯ 26:36-46.

6. ಇತರರೊಂದಿಗೆ ವ್ಯವಹರಿಸುವಾಗ ನಾವು ಹೇಗೆ ಯೇಸುವನ್ನು ಅನುಕರಿಸಸಾಧ್ಯವಿದೆ?

6 ತನ್ನ ಅಪೊಸ್ತಲರು ಒಂದಲ್ಲ ಒಂದು ದಿನ ಸರಿಹೋಗುವರು ಎಂಬ ನಿರೀಕ್ಷೆಯನ್ನು ಯೇಸು ಎಂದೂ ಬಿಟ್ಟುಕೊಟ್ಟಿರಲಿಲ್ಲ ಎಂಬ ವಿಷಯ ಗಮನಾರ್ಹವಾಗಿದೆ. ಅವನ ತಾಳ್ಮೆಗೆ ಉತ್ತಮ ಫಲ ಸಿಕ್ಕಿತ್ತು. ಆ ನಂಬಿಗಸ್ತ ಪುರುಷರು, ದೀನಮನಸ್ಸುಳ್ಳವರಾಗಿರುವುದು ಹಾಗೂ ಎಚ್ಚರದಿಂದಿರುವುದು ಏಕೆ ಪ್ರಾಮುಖ್ಯ ಎಂಬುದನ್ನು ಕಲಿತುಕೊಂಡರು. (1 ಪೇತ್ರ 3:8; 4:7) ನಾವು ಇತರರೊಂದಿಗೆ ವ್ಯವಹರಿಸುವಾಗ ಯೇಸುವನ್ನು ಹೇಗೆ ಅನುಕರಿಸಬಹುದು? ಮುಖ್ಯವಾಗಿ ಹಿರಿಯರು ತುಂಬಾ ತಾಳ್ಮೆವಹಿಸಬೇಕು. ಹಿರಿಯನೊಬ್ಬನು ಆಯಾಸಗೊಂಡಿರುವ ಇಲ್ಲವೇ ತನ್ನದೇ ಚಿಂತೆಯಿಂದ ವ್ಯಾಕುಲನಾಗಿರುವ ಸಮಯದಲ್ಲೇ ಜೊತೆ ವಿಶ್ವಾಸಿಯೊಬ್ಬನು ನೆರವಿಗಾಗಿ ಕೇಳಿಕೊಳ್ಳಬಹುದು. ಕೆಲವೊಮ್ಮೆ ನೆರವಿನ ಅಗತ್ಯವಿರುವವರು ತಮಗೆ ನೀಡಲ್ಪಟ್ಟ ಸಲಹೆಗೆ ಮಂದಗತಿಯಲ್ಲಿ ಪ್ರತಿಕ್ರಿಯಿಸಬಹುದು. ಈ ಎಲ್ಲ ಸಂದರ್ಭಗಳಲ್ಲೂ, ಹಿರಿಯರು ತಾಳ್ಮೆವಹಿಸುತ್ತಾ “ಸೌಮ್ಯಭಾವದಿಂದ” ಉಪದೇಶಿಸಿ “ಮಂದೆಯನ್ನು ಕೋಮಲತೆಯಿಂದ” ನೋಡಿಕೊಳ್ಳಬೇಕು. (2 ತಿಮೊಥೆಯ 2:24, 25; ಅ. ಕಾರ್ಯಗಳು 20:28, 29) ಹೆತ್ತವರು ಸಹ ತಾಳ್ಮೆಯನ್ನು ತೋರಿಸುವುದರಲ್ಲಿ ಯೇಸುವನ್ನು ಅನುಕರಿಸಬೇಕು. ಕೆಲವೊಮ್ಮೆ ಮಕ್ಕಳು ಸಲಹೆ ಅಥವಾ ತಿದ್ದುಪಾಟಿಗೆ ಬೇಗನೆ ಸ್ಪಂದಿಸಲಾರರು. ಅಂಥ ಸಮಯದಲ್ಲಿ ನಿರಾಶರಾಗದೆ ತಮ್ಮ ಮಕ್ಕಳಿಗೆ ತರಬೇತಿ ನೀಡುವುದನ್ನು ಮುಂದುವರಿಸಲು ಪ್ರೀತಿ ಮತ್ತು ತಾಳ್ಮೆ ಹೆತ್ತವರಿಗೆ ನೆರವಾಗುವುದು. ಅಂಥ ತಾಳ್ಮೆಗೆ ದೊರಕುವ ಪ್ರತಿಫಲವಾದರೋ ಅಪಾರ.—ಕೀರ್ತನೆ 127:3.

ಶಿಷ್ಯರ ಅಗತ್ಯಗಳನ್ನು ನೋಡಿಕೊಂಡನು

7. ಯೇಸು ತನ್ನ ಶಿಷ್ಯರ ಶಾರೀರಿಕ ಮತ್ತು ಭೌತಿಕ ಅಗತ್ಯಗಳನ್ನು ಯಾವ ರೀತಿಯಲ್ಲಿ ನೋಡಿಕೊಂಡನು?

7 ಪ್ರೀತಿ ನಿಸ್ವಾರ್ಥ ಕಾರ್ಯಗಳಲ್ಲಿ ತೋರಿಬರುತ್ತದೆ. (1 ಯೋಹಾನ 3:17, 18) ಅದು “ಸ್ವಹಿತವನ್ನು ಹುಡುಕುವುದಿಲ್ಲ.” (1 ಕೊರಿಂಥ 13:5) ತನ್ನ ಶಿಷ್ಯರ ಶಾರೀರಿಕ ಮತ್ತು ಭೌತಿಕ ಅಗತ್ಯಗಳನ್ನು ನೋಡಿಕೊಳ್ಳುವಂತೆ ಪ್ರೀತಿ ಯೇಸುವನ್ನು ಪ್ರೇರೇಪಿಸಿತು. ಕೆಲವೊಮ್ಮೆ ಅವರು ತಮ್ಮ ಅಗತ್ಯಗಳನ್ನು ವ್ಯಕ್ತಪಡಿಸುವ ಮೊದಲೇ ಅವರ ಆವಶ್ಯಕತೆಗಳನ್ನು ಅವನು ಪೂರೈಸುತ್ತಿದ್ದನು. ಅವರು ಆಯಾಸಗೊಂಡಿರುವುದನ್ನು ಕಂಡ ಕೂಡಲೇ, “ಏಕಾಂತವಾದ ಸ್ಥಳಕ್ಕೆ ಬಂದು ತುಸು ದಣಿವಾರಿಸಿಕೊಳ್ಳಿರಿ” ಎಂದು ಅವನು ಅವರಿಗೆ ಸಲಹೆಯಿತ್ತನು. (ಮಾರ್ಕ 6:31) ಅವರು ಹಸಿದಿದ್ದಾರೆ ಎಂಬುದನ್ನು ಮನಗಂಡಾಗ, ಊಟದ ಏರ್ಪಾಡನ್ನು ಮಾಡಲು ಮೊದಲ ಹೆಜ್ಜೆ ತೆಗೆದುಕೊಂಡನು. ತನ್ನ ಬೋಧನೆಯನ್ನು ಆಲಿಸಲು ಬಂದಿದ್ದ ಇತರ ಸಾವಿರಾರು ಜನರೊಂದಿಗೆ ಅವರಿಗೆ ಆಹಾರ ಒದಗಿಸಿದನು.—ಮತ್ತಾಯ 14:19, 20; 15:35-37.

8, 9. (ಎ) ಯೇಸು ತನ್ನ ಶಿಷ್ಯರ ಆಧ್ಯಾತ್ಮಿಕ ಅಗತ್ಯಗಳನ್ನು ಮನಗಂಡನು ಹಾಗೂ ಪೂರೈಸಿದನು ಎಂಬುದನ್ನು ಯಾವುದು ಸೂಚಿಸುತ್ತದೆ? (ಬಿ) ಯಾತನಾಕಂಭದಲ್ಲಿದ್ದಾಗ ಯೇಸು ತನ್ನ ತಾಯಿಯ ಕಡೆಗೆ ತನಗಿರುವ ಕಾಳಜಿಯನ್ನು ಹೇಗೆ ತೋರಿಸಿಕೊಟ್ಟನು?

8 ಯೇಸು ತನ್ನ ಶಿಷ್ಯರ ಆಧ್ಯಾತ್ಮಿಕ ಅಗತ್ಯಗಳನ್ನು ಸಹ ಮನಗಂಡು ಪೂರೈಸಿದನು. (ಮತ್ತಾಯ 4:4; 5:3) ಬೋಧನೆ ಮಾಡುವಾಗಲೆಲ್ಲ ಅವರಿಗೆ ಹೆಚ್ಚಿನ ಗಮನ ನೀಡಿದನು. ಪರ್ವತ ಪ್ರಸಂಗವನ್ನು ವಿಶೇಷವಾಗಿ ಅವನ ಶಿಷ್ಯರ ಪ್ರಯೋಜನಾರ್ಥವಾಗಿಯೇ ನೀಡಲಾಗಿತ್ತು. (ಮತ್ತಾಯ 5:1, 2, 13-16) ದೃಷ್ಟಾಂತಗಳನ್ನು ಉಪಯೋಗಿಸಿ ಬೋಧಿಸಿದ ನಂತರ, “ಪ್ರತ್ಯೇಕವಾಗಿದ್ದಾಗ ಅವನು ತನ್ನ ಶಿಷ್ಯರಿಗೆ ಎಲ್ಲ ವಿಷಯಗಳನ್ನು ವಿವರಿಸಿ ಹೇಳುತ್ತಿದ್ದನು.” (ಮಾರ್ಕ 4:34) ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ಯೇಸು ನೇಮಿಸಿದನು. ಹೀಗೆ, ತಾನು ಸ್ವರ್ಗಕ್ಕೆ ಹಿಂತಿರುಗಿ ಹೋದ ನಂತರವೂ ತನ್ನ ಶಿಷ್ಯರಿಗೆ ಯಥೇಚ್ಛವಾದ ಆಧ್ಯಾತ್ಮಿಕ ಆಹಾರ ಸಿಗುವಂತೆ ನೋಡಿಕೊಂಡನು. ಯೇಸುವಿನ ಆತ್ಮಾಭಿಷಿಕ್ತ ಸಹೋದರರಲ್ಲಿ ಭೂಮಿಯಲ್ಲಿರುವವರು ಈ ಆಳು ವರ್ಗದಲ್ಲಿ ಒಳಗೂಡಿದ್ದು, ಅದು ಕ್ರಿ.ಶ. ಒಂದನೇ ಶತಮಾನದಿಂದ ಇಂದಿನ ವರೆಗೂ ನಂಬಿಗಸ್ತಿಕೆಯಿಂದ ಆಧ್ಯಾತ್ಮಿಕ ಆಹಾರವನ್ನು “ತಕ್ಕ ಸಮಯಕ್ಕೆ” ಒದಗಿಸುತ್ತಿದೆ.—ಮತ್ತಾಯ 24:45.

9 ತನ್ನ ಮರಣದ ದಿನದಂದು, ಯೇಸು ತನ್ನ ಪ್ರೀತಿಪಾತ್ರರ ಆಧ್ಯಾತ್ಮಿಕ ಹಿತಕ್ಷೇಮದ ಕುರಿತು ತನಗಿರುವ ಕಾಳಜಿಯನ್ನು ಮನಃಸ್ಪರ್ಶಿಸುವಂಥ ರೀತಿಯಲ್ಲಿ ತೋರಿಸಿದನು. ಆ ಘಟನೆಯನ್ನು ಚಿತ್ರಿಸಿಕೊಳ್ಳಿ. ಯೇಸು ಯಾತನಾಕಂಭದಲ್ಲಿ ವಿಪರೀತ ನೋವನ್ನು ಅನುಭವಿಸುತ್ತಿದ್ದಾನೆ. ಉಸಿರನ್ನು ಎಳೆದುಕೊಳ್ಳುವುದಕ್ಕಾಗಿ ಅವನು ತನ್ನ ಪಾದಗಳನ್ನು ಒತ್ತಿ ದೇಹವನ್ನು ಮೇಲೆಳೆದುಕೊಳ್ಳಬೇಕಿತ್ತು. ಹಾಗೆ ಮಾಡುವಾಗ, ಚಾವಟಿಯೇಟಿನಿಂದ ಗಾಯಗೊಂಡಿದ್ದ ಬೆನ್ನು ಆ ಯಾತನಾಕಂಭಕ್ಕೆ ಉಜ್ಜಲ್ಪಟ್ಟಿರಬೇಕು. ಮಾತ್ರವಲ್ಲ, ಮೊಳೆ ಜಡಿದು ಉಂಟಾದ ಪಾದದ ಗಾಯವು ದೇಹದ ಭಾರದಿಂದಾಗಿ ಇನ್ನಷ್ಟು ಆಳಕ್ಕೆ ಹರಿದು ಸಹಿಸಲಸಾಧ್ಯವಾದ ನೋವನ್ನು ಉಂಟುಮಾಡಿರಬೇಕು. ಉಸಿರಾಡುವುದು ಕಷ್ಟವಾದ್ದರಿಂದ ಮಾತಾಡುವುದು ಯೇಸುವಿಗೆ ಸುಲಭವಾಗಿರಲಿಲ್ಲ. ಒಂದೊಂದು ಅಕ್ಷರವನ್ನು ನುಡಿಯುವುದೂ ವೇದನಾಮಯವಾಗಿತ್ತು. ಆದರೂ ಕೊನೆ ಉಸಿರೆಳೆಯುವುದರೊಳಗೆ ನೋವನ್ನು ನುಂಗಿ ಅವನು ಮಾತಾಡಿದನು ಮತ್ತು ಅದು ತನ್ನ ತಾಯಿಯಾದ ಮರಿಯಳ ಮೇಲೆ ಅವನಿಟ್ಟಿದ್ದ ಅಪಾರ ಪ್ರೀತಿಯನ್ನು ತೋರಿಸಿಕೊಟ್ಟಿತು. ಅವನು ತನ್ನ ತಾಯಿಯನ್ನು ಹಾಗೂ ಪಕ್ಕದಲ್ಲಿ ನಿಂತಿದ್ದ ಅಪೊಸ್ತಲ ಯೋಹಾನನನ್ನು ನೋಡಿ, ಅಲ್ಲಿರುವವರಿಗೆ ಕೇಳಿಸುವಷ್ಟು ಗಟ್ಟಿಯಾದ ಸ್ವರದಲ್ಲಿ “ಸ್ತ್ರೀಯೇ ನೋಡು! ನಿನ್ನ ಮಗನು!” ಎಂದು ಮರಿಯಳಿಗೆ ಹೇಳಿದನು. ಅನಂತರ ಯೋಹಾನನಿಗೆ, “ನೋಡು! ನಿನ್ನ ತಾಯಿ!” ಎಂದು ಹೇಳಿದನು. (ಯೋಹಾನ 19:26, 27) ಆ ನಂಬಿಗಸ್ತ ಅಪೊಸ್ತಲನು ಮರಿಯಳ ಶಾರೀರಿಕ ಮತ್ತು ಭೌತಿಕ ಅಗತ್ಯಗಳನ್ನು ಮಾತ್ರವಲ್ಲ, ಆಧ್ಯಾತ್ಮಿಕ ಹಿತಾಸಕ್ತಿಯನ್ನೂ ನೋಡಿಕೊಳ್ಳುವನು ಎಂಬುದು ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. *

ಪ್ರೀತಿಯುಳ್ಳ ಹೆತ್ತವರು ತಾಳ್ಮೆ ತೋರಿಸುತ್ತಾರೆ ಮತ್ತು ತಮ್ಮ ಮಕ್ಕಳ ಅಗತ್ಯಗಳನ್ನು ಪೂರೈಸುತ್ತಾರೆ

10. ಹೆತ್ತವರು ತಮ್ಮ ಮಕ್ಕಳ ಅಗತ್ಯಗಳನ್ನು ನೋಡಿಕೊಳ್ಳುವಾಗ ಹೇಗೆ ಯೇಸುವನ್ನು ಅನುಕರಿಸಸಾಧ್ಯವಿದೆ?

10 ಯೇಸುವಿನ ಮಾದರಿಯ ಕುರಿತು ಮನನಮಾಡುವುದು ಪ್ರಯೋಜನಕರ ಎಂಬುದನ್ನು ಪ್ರೀತಿಯುಳ್ಳ ಹೆತ್ತವರು ಕಂಡುಕೊಳ್ಳುತ್ತಾರೆ. ತನ್ನ ಕುಟುಂಬವನ್ನು ನಿಜವಾಗಿಯೂ ಪ್ರೀತಿಸುವ ಒಬ್ಬ ತಂದೆ ಅವರಿಗೆ ಅಗತ್ಯವಿರುವ ಭೌತಿಕ ವಿಷಯಗಳನ್ನು ಒದಗಿಸಿ ಕೊಡುವನು. (1 ತಿಮೊಥೆಯ 5:8) ಸಮತೋಲನವನ್ನು ಕಾಪಾಡಿಕೊಳ್ಳುವ ಕುಟುಂಬದ ತಲೆಯು ವಿರಾಮ ಹಾಗೂ ಮನೋರಂಜನೆಗಾಗಿಯೂ ಸಮಯವನ್ನು ಬದಿಗಿರಿಸುವನು. ಎಲ್ಲಕ್ಕಿಂತ ಹೆಚ್ಚಾಗಿ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳ ಆಧ್ಯಾತ್ಮಿಕ ಅಗತ್ಯಗಳನ್ನು ಚೆನ್ನಾಗಿ ನೋಡಿಕೊಳ್ಳುವರು. ಹೇಗೆ? ಅಂಥ ಹೆತ್ತವರು ಕ್ರಮಬದ್ಧವಾದ ಕುಟುಂಬ ಬೈಬಲ್‌ ಅಧ್ಯಯನಕ್ಕಾಗಿ ಏರ್ಪಾಡು ಮಾಡುವರು. ಮಾತ್ರವಲ್ಲ, ತಮ್ಮ ಮಕ್ಕಳ ಭಕ್ತಿವೃದ್ಧಿಗೆ ಸಹಾಯ ಮಾಡುವಂಥ ಹಾಗೂ ಅವರದರಲ್ಲಿ ಆನಂದಿಸುವಂಥ ರೀತಿಯಲ್ಲಿ ಆ ಅಧ್ಯಯನವನ್ನು ನಡೆಸುವರು. (ಧರ್ಮೋಪದೇಶಕಾಂಡ 6:6, 7) ಹೆತ್ತವರು ತಮ್ಮ ಮಾತು ಹಾಗೂ ಮಾದರಿಯ ಮೂಲಕ ಶುಶ್ರೂಷೆಯು ತುಂಬಾ ಪ್ರಮುಖವಾದ ಚಟುವಟಿಕೆಯಾಗಿದೆ ಎಂಬುದನ್ನು ತಮ್ಮ ಮಕ್ಕಳಿಗೆ ಕಲಿಸಿಕೊಡುವರು. ಅಲ್ಲದೆ, ಕ್ರೈಸ್ತ ಕೂಟಗಳಿಗೆ ತಯಾರಿಸುವುದು ಮತ್ತು ಹಾಜರಾಗುವುದು ಸಹ ತಮ್ಮ ಆಧ್ಯಾತ್ಮಿಕ ರೂಢಿಯಲ್ಲಿನ ಪ್ರಮುಖ ಸಂಗತಿಗಳಾಗಿವೆ ಎಂಬುದನ್ನು ಮನದಟ್ಟು ಮಾಡಿಸುವರು.—ಇಬ್ರಿಯ 10:24, 25.

ಕ್ಷಮಾಭಾವ ತೋರಿಸಿದನು

11. ಕ್ಷಮಾಭಾವದ ಕುರಿತು ಯೇಸು ತನ್ನ ಹಿಂಬಾಲಕರಿಗೆ ಏನು ಕಲಿಸಿದನು?

11 ಕ್ಷಮಾಭಾವವು ಪ್ರೀತಿಯ ಒಂದು ಅಂಶವಾಗಿದೆ. (ಕೊಲೊಸ್ಸೆ 3:13, 14) ಪ್ರೀತಿ “ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ” ಎಂದು 1 ಕೊರಿಂಥ 13:5 ಹೇಳುತ್ತದೆ. ಕ್ಷಮಾಭಾವ ಹೊಂದಿರುವುದು ಎಷ್ಟು ಪ್ರಾಮುಖ್ಯ ಎಂದು ಬಹಳಷ್ಟು ಸಲ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು. ಇತರರನ್ನು “ಏಳು ಸಾರಿಯಲ್ಲ, ಎಪ್ಪತ್ತೇಳು ಸಾರಿ,” ಅಂದರೆ ಲೆಕ್ಕಿಸಲಾರದಷ್ಟು ಸಲ ಕ್ಷಮಿಸುವಂತೆ ಪ್ರೋತ್ಸಾಹಿಸಿದನು. (ಮತ್ತಾಯ 18:21, 22) ತಪ್ಪು ಮನಗಾಣಿಸಲ್ಪಟ್ಟ ನಂತರ ಒಬ್ಬ ಪಾಪಿಯು ಪಶ್ಚಾತ್ತಾಪಪಡುವುದಾದರೆ ಅವನನ್ನು ಕ್ಷಮಿಸುವಂತೆ ಯೇಸು ಶಿಷ್ಯರಿಗೆ ಕಲಿಸಿದನು. (ಲೂಕ 17:3, 4) ಕಪಟಿ ಫರಿಸಾಯರಂತೆ ಯೇಸು ಬಾಯಿಮಾತಿನಲ್ಲಿ ಮಾತ್ರ ಕಲಿಸಲಿಲ್ಲ, ಮಾದರಿಯ ಮೂಲಕವೂ ಕಲಿಸಿದನು. (ಮತ್ತಾಯ 23:2-4) ತನ್ನ ವಿಶ್ವಾಸಾರ್ಹ ಗೆಳೆಯನೊಬ್ಬನು ಕೈಕೊಟ್ಟಾಗ ಯೇಸು ಹೇಗೆ ಕ್ಷಮಾಭಾವ ತೋರಿಸಿದನು ಎಂಬುದನ್ನು ನಾವೀಗ ನೋಡೋಣ.

12, 13. (ಎ) ಯೇಸು ದಸ್ತಗಿರಿಯಾದ ರಾತ್ರಿಯಂದು ಪೇತ್ರನು ಯಾವ ರೀತಿಯಲ್ಲಿ ಅವನಿಗೆ ಕೈಕೊಟ್ಟನು? (ಬಿ) ಯೇಸು ಕ್ಷಮಿಸಿರಿ ಎಂದು ಸಾರಿದ್ದಷ್ಟೇ ಅಲ್ಲ ಹೆಚ್ಚನ್ನು ಮಾಡಿದನು ಎಂಬುದನ್ನು ಅವನ ಪುನರುತ್ಥಾನದ ನಂತರದ ಕಾರ್ಯಗಳು ಹೇಗೆ ತೋರಿಸಿಕೊಟ್ಟವು?

12 ಪೇತ್ರನು ಯೇಸುವಿನ ಆತ್ಮೀಯ ಗೆಳೆಯನಾಗಿದ್ದನು. ಕೆಲವೊಮ್ಮೆ ದುಡುಕಿನ ಸ್ವಭಾವ ತೋರಿಸುತ್ತಿದ್ದರೂ ಸ್ನೇಹಪೂರ್ಣ ವ್ಯಕ್ತಿಯಾಗಿದ್ದನು. ಯೇಸು ಪೇತ್ರನ ಒಳ್ಳೆಯ ಗುಣಗಳನ್ನು ತಿಳಿದುಕೊಂಡಿದ್ದನು ಮತ್ತು ಅವನಿಗೆ ಕೆಲವು ವಿಶೇಷ ಸೇವಾವಕಾಶಗಳನ್ನು ನೀಡಿದನು. ಯೇಸುವಿನ ಕೆಲವು ಅದ್ಭುತಗಳನ್ನು ಪ್ರತ್ಯಕ್ಷವಾಗಿ ನೋಡುವ ಸದವಕಾಶ ಯಾಕೋಬ ಮತ್ತು ಯೋಹಾನರೊಡನೆ ಪೇತ್ರನಿಗೂ ದೊರೆಯಿತು. 12 ಮಂದಿ ಅಪೊಸ್ತಲರಲ್ಲಿ ಉಳಿದವರ್ಯಾರಿಗೂ ಆ ಅವಕಾಶ ಸಿಕ್ಕಿರಲಿಲ್ಲ. (ಮತ್ತಾಯ 17:1, 2; ಲೂಕ 8:49-55) ನಾವು ಈ ಮೊದಲೇ ಗಮನಿಸಿರುವಂತೆ, ಯೇಸು ದಸ್ತಗಿರಿಯಾದ ರಾತ್ರಿಯಂದು ಯೇಸುವಿನ ಸಂಗಡ ಗೆತ್ಸೇಮನೆ ತೋಟದ ಒಳಭಾಗಕ್ಕೆ ಹೋಗಿದ್ದ ಅಪೊಸ್ತಲರಲ್ಲಿ ಪೇತ್ರನು ಒಬ್ಬನಾಗಿದ್ದನು. ಹಾಗಿದ್ದರೂ, ಅದೇ ರಾತ್ರಿ ಯೇಸುವನ್ನು ಮೋಸದಿಂದ ಬಂಧಿಸಿದಾಗ, ಇತರ ಅಪೊಸ್ತಲರೊಡನೆ ಪೇತ್ರನೂ ಯೇಸುವನ್ನು ಬಿಟ್ಟು ಓಡಿಹೋದನು. ಅನಂತರ, ಯೇಸುವನ್ನು ಅಕ್ರಮವಾಗಿ ವಿಚಾರಣೆಗೊಳಪಡಿಸುತ್ತಿದ್ದಾಗ ಪೇತ್ರನು ತುಸು ಧೈರ್ಯ ತೋರಿಸಿ ಹೊರಗೆ ನಿಂತಿದ್ದನು. ಆದರೂ ಹೆದರಿಕೆಯಿಂದ ಒಂದು ಗಂಭೀರ ತಪ್ಪನ್ನು ಮಾಡಿಬಿಟ್ಟನು. ಯೇಸು ಯಾರೋ ತನಗೆ ಗೊತ್ತಿಲ್ಲ ಎಂಬದಾಗಿ ಮೂರುಬಾರಿ ಸುಳ್ಳು ಹೇಳಿದನು. (ಮತ್ತಾಯ 26:69-75) ಇದಕ್ಕೆ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ನಿಮ್ಮ ಆತ್ಮೀಯ ಮಿತ್ರನೊಬ್ಬನು ಈ ರೀತಿಯಲ್ಲಿ ನಿಮಗೆ ಕೈಕೊಡುವಲ್ಲಿ ನೀವು ಹೇಗೆ ಪ್ರತಿಕ್ರಿಯಿಸುವಿರಿ?

13 ಪೇತ್ರನನ್ನು ಕ್ಷಮಿಸಲು ಯೇಸು ಸಿದ್ಧನಿದ್ದನು. ತಾನು ಮಾಡಿದ ಪಾಪದ ಹೊರೆಯ ಕೆಳಗೆ ಪೇತ್ರನು ನಲುಗಿ ಹೋಗಿದ್ದಾನೆಂದು ಯೇಸು ತಿಳಿದುಕೊಂಡನು. ಹೌದು, ಪಶ್ಚಾತ್ತಾಪಪಟ್ಟಿದ್ದ ಆ ಅಪೊಸ್ತಲನು ‘ವ್ಯಥೆಪಟ್ಟು ಅತ್ತಿದ್ದನು.’ (ಮಾರ್ಕ 14:72) ತಾನು ಪುನರುತ್ಥಾನಗೊಂಡ ದಿನದಂದು ಯೇಸು ಪೇತ್ರನಿಗೆ ಕಾಣಿಸಿಕೊಂಡನು. ಬಹುಶಃ, ಆ ಅಪೊಸ್ತಲನನ್ನು ಸಂತೈಸಿ ಭರವಸೆ ಮೂಡಿಸಲಿಕ್ಕಿರಬೇಕು. (ಲೂಕ 24:34; 1 ಕೊರಿಂಥ 15:5) ಇದಾಗಿ ಎರಡೇ ತಿಂಗಳೊಳಗೆ, ಪಂಚಾಶತ್ತಮ ದಿನದಂದು ಯೆರೂಸಲೇಮಿನಲ್ಲಿನ ಜನರ ಗುಂಪಿಗೆ ಸಾಕ್ಷಿ ನೀಡುವುದರಲ್ಲಿ ಮುಂದಾಳತ್ವ ವಹಿಸುವಂತೆ ಅನುಮತಿಸುವ ಮೂಲಕ ಯೇಸು ಪೇತ್ರನಿಗೆ ಮನ್ನಣೆ ಕೊಟ್ಟನು. (ಅ. ಕಾರ್ಯಗಳು 2:14-40) ಇನ್ನೊಂದು ವಿಷಯವನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ತನಗೆ ಕೈಕೊಟ್ಟು ಓಡಿಹೋಗಿದ್ದ ಉಳಿದ ಅಪೊಸ್ತಲರ ಕಡೆಗೂ ಯೇಸು ಯಾವುದೇ ಕಹಿಭಾವನೆ ಇಟ್ಟುಕೊಂಡಿರಲಿಲ್ಲ. ಬದಲಿಗೆ ತನ್ನ ಪುನರುತ್ಥಾನದ ನಂತರವೂ ಅಪೊಸ್ತಲರನ್ನು “ನನ್ನ ಸಹೋದರರು” ಎಂದು ಕರೆದನು. (ಮತ್ತಾಯ 28:10) ಕ್ಷಮಿಸಿರಿ ಎಂದು ಯೇಸು ಸಾರಿದ್ದಷ್ಟೇ ಅಲ್ಲ ಅದನ್ನು ಮಾಡಿತೋರಿಸಿದನು ಎಂಬುದು ಸ್ಪಷ್ಟವಾಗುವುದಿಲ್ಲವೇ?

14. ನಾವು ಏಕೆ ಇತರರನ್ನು ಕ್ಷಮಿಸಲು ಕಲಿತುಕೊಳ್ಳಬೇಕು? ಕ್ಷಮಿಸಲು ನಾವು ಸಿದ್ಧರಾಗಿದ್ದೇವೆ ಎಂಬುದನ್ನು ಹೇಗೆ ತೋರಿಸಿಕೊಡಬಹುದು?

14 ಕ್ರಿಸ್ತನ ಶಿಷ್ಯರಾಗಿರುವ ನಾವು ಇತರರನ್ನು ಕ್ಷಮಿಸಲು ಕಲಿತುಕೊಳ್ಳಬೇಕು. ಏಕೆ? ಏಕೆಂದರೆ, ನಾವು ಯೇಸುವಿನಂತಿರದೇ ಅಪರಿಪೂರ್ಣರಾಗಿದ್ದೇವೆ. ನಮ್ಮ ವಿರುದ್ಧ ತಪ್ಪುಮಾಡುವ ಇತರರು ಸಹ ಅಪರಿಪೂರ್ಣರಾಗಿದ್ದಾರೆ. ಆಗಿಂದಾಗ್ಗೆ ನಾವೆಲ್ಲರೂ ನಮ್ಮ ನಡೆನುಡಿಗಳಲ್ಲಿ ಎಡವುತ್ತೇವೆ. (ರೋಮನ್ನರಿಗೆ 3:23; ಯಾಕೋಬ 3:2) ಕರುಣೆ ತೋರಿಸುವುದು ಯೋಗ್ಯವಾಗಿರುವಾಗ ನಾವು ಇತರರನ್ನು ಕ್ಷಮಿಸುವುದಾದರೆ ದೇವರು ನಮ್ಮ ಪಾಪಗಳನ್ನು ಕ್ಷಮಿಸಲು ಸಾಧ್ಯವಾಗುವುದು. (ಮಾರ್ಕ 11:25) ಹಾಗಾದರೆ, ನಮ್ಮ ವಿರುದ್ಧ ಪಾಪಮಾಡುವ ಇತರರನ್ನು ನಾವು ಕ್ಷಮಿಸಲು ಸಿದ್ಧರಿದ್ದೇವೆ ಎಂಬುದನ್ನು ಹೇಗೆ ತೋರಿಸಿಕೊಡಬಹುದು? ಹೆಚ್ಚಿನ ವಿದ್ಯಮಾನಗಳಲ್ಲಿ, ಇತರರ ಚಿಕ್ಕಪುಟ್ಟ ಪಾಪ ಮತ್ತು ತಪ್ಪುಗಳನ್ನು ಮನ್ನಿಸಲು ಪ್ರೀತಿಯು ನೆರವಾಗುವುದು. (1 ಪೇತ್ರ 4:8) ನಮ್ಮ ವಿರುದ್ಧ ಪಾಪಮಾಡಿದವರು ಪೇತ್ರನಂತೆ ನಿಜವಾಗಿ ಪಶ್ಚಾತ್ತಾಪಪಟ್ಟಾಗ ನಾವು ಯೇಸುವನ್ನು ಅನುಕರಿಸುತ್ತಾ ಸಿದ್ಧಮನಸ್ಸಿನಿಂದ ಕ್ಷಮಿಸಬೇಕು. ಅಸಮಾಧಾನದ ಭಾವನೆಗಳನ್ನು ಇಟ್ಟುಕೊಳ್ಳುವ ಬದಲು ಅದನ್ನು ಮರೆತುಬಿಡುವ ವಿವೇಕದ ಮಾರ್ಗವನ್ನು ನಾವು ಆಯ್ಕೆಮಾಡಬೇಕು. (ಎಫೆಸ 4:32) ಹೀಗೆ ಮಾಡುವಲ್ಲಿ ನಾವು ಸಭೆಯ ಶಾಂತಿಯನ್ನು ವರ್ಧಿಸುವೆವು ಮಾತ್ರವಲ್ಲ ನಮಗೂ ಮನಶ್ಶಾಂತಿಯಿರುವುದು.—1 ಪೇತ್ರ 3:11.

ಭರವಸೆ ಇಟ್ಟನು

15. ಶಿಷ್ಯರಲ್ಲಿ ಕುಂದುಕೊರತೆಗಳಿದ್ದರೂ ಯೇಸು ಏಕೆ ಅವರಲ್ಲಿ ಭರವಸೆಯಿಟ್ಟನು?

15 ಪ್ರೀತಿ ಇದ್ದ ಕಡೆ ಭರವಸೆ ಇದ್ದೇ ಇರುತ್ತದೆ. ಪ್ರೀತಿ “ಎಲ್ಲವನ್ನೂ ನಂಬುತ್ತದೆ.” * (1 ಕೊರಿಂಥ 13:7) ಪ್ರೀತಿಯಿಂದ ಪ್ರಚೋದಿತನಾದ ಯೇಸು ತನ್ನ ಶಿಷ್ಯರಲ್ಲಿ ಕುಂದುಕೊರತೆಗಳಿದ್ದರೂ ಅವರ ಮೇಲೆ ಭರವಸೆಯಿಟ್ಟನು. ಅವರ ಮೇಲೆ ಅವನಿಗೆ ಅಪಾರ ವಿಶ್ವಾಸವಿತ್ತು. ಅವರ ಹೃದಯದಲ್ಲಿ ಯೆಹೋವನೆಡೆಗೆ ನಿಜ ಪ್ರೀತಿ ತುಂಬಿದೆ ಮತ್ತು ಆತನ ಚಿತ್ತ ಮಾಡುವ ಹಂಬಲ ಅವರಿಗಿದೆ ಎಂಬ ನಂಬಿಕೆ ಅವನಿಗಿತ್ತು. ಅವರು ತಪ್ಪುಗಳನ್ನು ಮಾಡಿದಾಗಲೂ ಯೇಸು ಅವರ ಇರಾದೆಯನ್ನು ಸಂಶಯಿಸಲಿಲ್ಲ. ಉದಾಹರಣೆಗೆ, ಅಪೊಸ್ತಲರಾದ ಯಾಕೋಬ ಮತ್ತು ಯೋಹಾನರು ಯೇಸುವಿನ ರಾಜ್ಯದಲ್ಲಿ ಅವನ ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುವ ಅವಕಾಶ ನೀಡಬೇಕೆಂದು ತಾಯಿಯ ಮೂಲಕ ಕೇಳಿಕೊಂಡರು. ಆ ಸಂದರ್ಭದಲ್ಲಿ ಯೇಸು ಅವರ ನಿಷ್ಠೆಯನ್ನು ಪ್ರಶ್ನಿಸಿ ಅಪೊಸ್ತಲರ ಸ್ಥಾನದಿಂದ ಅವರನ್ನು ವಜಾಮಾಡಲಿಲ್ಲ.—ಮತ್ತಾಯ 20:20-28.

16, 17. ಯೇಸು ತನ್ನ ಶಿಷ್ಯರಿಗೆ ಯಾವ ಯಾವ ಜವಾಬ್ದಾರಿಗಳನ್ನು ವಹಿಸಿಕೊಟ್ಟನು?

16 ಯೇಸು ತನ್ನ ಶಿಷ್ಯರಿಗೆ ನಾನಾ ಜವಾಬ್ದಾರಿಗಳನ್ನು ವಹಿಸಿಕೊಡುವ ಮೂಲಕ ಅವರ ಮೇಲಿನ ಭರವಸೆಯನ್ನು ತೋರ್ಪಡಿಸಿದನು. ಎರಡು ಸಂದರ್ಭಗಳಲ್ಲಿ ಅವನು ಅದ್ಭುತಮಾಡಿ ಕೊಂಚವೇ ಆಹಾರವನ್ನು ಬಹಳವಾಗಿ ಮಾರ್ಪಡಿಸಿ, ಅದನ್ನು ಜನರಿಗೆ ಹಂಚುವ ಜವಾಬ್ದಾರಿಯನ್ನು ತನ್ನ ಶಿಷ್ಯರಿಗೆ ವಹಿಸಿದನು. (ಮತ್ತಾಯ 14:19; 15:36) ತನ್ನ ಕೊನೆಯ ಪಸ್ಕ ಆಚರಣೆಗಾಗಿ ಬೇಕಾದ ಸಿದ್ಧತೆಗಳನ್ನು ಯೆರೂಸಲೇಮಿನಲ್ಲಿ ಮಾಡುವಂತೆ ಪೇತ್ರ ಹಾಗೂ ಯೋಹಾನರಿಗೆ ನೇಮಕ ಕೊಟ್ಟನು. ಆಚರಣೆಗಾಗಿ ಬೇಕಾದ ಕುರಿಮರಿ, ದ್ರಾಕ್ಷಾಮದ್ಯ, ಹುಳಿಯಿಲ್ಲದ ರೊಟ್ಟಿ, ಕಹಿಪಲ್ಯ ಮುಂತಾದವುಗಳನ್ನು ಕೊಂಡುತರುವ ಕೆಲಸವನ್ನು ಅವರು ನೋಡಿಕೊಂಡರು. ಅದೇನು ಕ್ಷುಲ್ಲಕ ನೇಮಕವಾಗಿರಲಿಲ್ಲ. ಪಸ್ಕಹಬ್ಬದ ಆಚರಣೆಯನ್ನು ಸೂಕ್ತ ರೀತಿಯಲ್ಲಿ ಮಾಡಬೇಕೆಂದು ಮೋಶೆಯ ಧರ್ಮಶಾಸ್ತ್ರ ಆಜ್ಞಾಪಿಸಿತು ಮತ್ತು ಆ ಧರ್ಮಶಾಸ್ತ್ರವನ್ನು ಯೇಸು ಚಾಚೂತಪ್ಪದೆ ಪಾಲಿಸಬೇಕಿತ್ತು. ಮಾತ್ರವಲ್ಲ, ಆ ಸಂಜೆ ಯೇಸು ಅದೇ ದ್ರಾಕ್ಷಾಮದ್ಯ ಮತ್ತು ಹುಳಿಯಿಲ್ಲದ ರೊಟ್ಟಿಯನ್ನು ಪ್ರಮುಖ ಕುರುಹುಗಳನ್ನಾಗಿ ಉಪಯೋಗಿಸಿ ತನ್ನ ಮರಣದ ಜ್ಞಾಪಕಾಚರಣೆಯನ್ನು ಸ್ಥಾಪಿಸಿದನು.—ಮತ್ತಾಯ 26:17-19; ಲೂಕ 22:8, 13.

17 ಮಹತ್ವಪೂರ್ಣವಾದ ಬೇರೆ ಜವಾಬ್ದಾರಿಗಳನ್ನು ಸಹ ಶಿಷ್ಯರಿಗೆ ವಹಿಸುವುದು ಒಳ್ಳೇದೆಂದು ಯೇಸು ಕಂಡುಕೊಂಡನು. ನಾವು ಈಗಾಗಲೇ ಗಮನಿಸಿರುವಂತೆ, ಆಧ್ಯಾತ್ಮಿಕ ಆಹಾರವನ್ನು ವಿತರಿಸುವ ಮಹತ್ವದ ಹೊಣೆಯನ್ನು ಅವನು ಭೂಮಿಯಲ್ಲಿರುವ ತನ್ನ ಅಭಿಷಿಕ್ತ ಹಿಂಬಾಲಕರಿಗೆ ವಹಿಸಿದನು. (ಲೂಕ 12:42-44) ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಭಾರಿ ನೇಮಕವನ್ನು ತನ್ನ ಶಿಷ್ಯರ ಕೈಗೆ ಒಪ್ಪಿಸಿದ ವಿಷಯವನ್ನೂ ನೆನಪು ಮಾಡಿಕೊಳ್ಳಿ. (ಮತ್ತಾಯ 28:18-20) ಈಗ ಅಗೋಚರನಾಗಿದ್ದರೂ ಮತ್ತು ಸ್ವರ್ಗದಿಂದ ಆಳುತ್ತಿದ್ದರೂ, ಯೇಸು ಭೂಮಿಯಲ್ಲಿರುವ ತನ್ನ ಸಭೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಆಧ್ಯಾತ್ಮಿಕವಾಗಿ ಅರ್ಹರಾಗಿರುವ ಹಾಗೂ ‘ಮನುಷ್ಯರಿಗೆ ದಾನಗಳಾಗಿರುವ’ ಪುರುಷರಿಗೆ ವಹಿಸಿದ್ದಾನೆ.—ಎಫೆಸ 4:8, 11, 12.

18-20. (ಎ) ಜೊತೆ ವಿಶ್ವಾಸಿಗಳಲ್ಲಿ ನಾವು ನಂಬಿಕೆ ಹಾಗೂ ಭರವಸೆಯಿಟ್ಟಿದ್ದೇವೆ ಎಂಬುದನ್ನು ಹೇಗೆ ತೋರಿಸಸಾಧ್ಯವಿದೆ? (ಬಿ) ಜವಾಬ್ದಾರಿ ವಹಿಸಿಕೊಡುವ ವಿಷಯದಲ್ಲಿ ಯೇಸುವಿನ ಮಾದರಿಯನ್ನು ನಾವು ಹೇಗೆ ಅನುಕರಿಸಸಾಧ್ಯವಿದೆ? (ಸಿ) ಮುಂದಿನ ಅಧ್ಯಾಯದಲ್ಲಿ ನಾವೇನನ್ನು ಚರ್ಚಿಸಲಿರುವೆವು?

18 ಯೇಸುವಿನ ಈ ಮಾದರಿಯನ್ನು ನಾವು ಇತರರೊಂದಿಗಿನ ನಮ್ಮ ವ್ಯವಹಾರದಲ್ಲಿ ಹೇಗೆ ಅನುಕರಿಸಬಹುದು? ನಮ್ಮ ಜೊತೆ ವಿಶ್ವಾಸಿಗಳಲ್ಲಿ ನಾವು ನಂಬಿಕೆ ಮತ್ತು ಭರವಸೆಯಿಡುವುದು ಪ್ರೀತಿಯ ದ್ಯೋತಕವಾಗಿದೆ. ಪ್ರೀತಿ ಸದಾ ಧನಾತ್ಮಕವಾಗಿರುತ್ತದೆ ಋಣಾತ್ಮಕವಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಕೆಲವರು ನಮ್ಮ ಮನಸ್ಸಿಗೆ ಬೇಸರತರಬಹುದು. ಕೆಲವೊಂದು ಸಂದರ್ಭಗಳಲ್ಲಂತೂ ಇಂತಹ ವಿಷಯಗಳು ಆಗಾಗ ನಡೆದುಬಿಡಬಹುದು. ಆಗ ಇತರರ ಇರಾದೆಗಳು ತಪ್ಪಾಗಿವೆ ಎಂಬ ದುಡುಕಿನ ತೀರ್ಮಾನಕ್ಕೆ ಬಂದುಬಿಡದಂತೆ ಪ್ರೀತಿ ನಮ್ಮನ್ನು ತಡೆಯುತ್ತದೆ. (ಮತ್ತಾಯ 7:1, 2) ನಾವು ನಮ್ಮ ಜೊತೆ ವಿಶ್ವಾಸಿಗಳ ಕುರಿತು ಧನಾತ್ಮಕ ನೋಟ ಇಟ್ಟುಕೊಳ್ಳುವುದಾದರೆ, ಆಧ್ಯಾತ್ಮಿಕವಾಗಿ ಕಟ್ಟುವಂಥ ವಿಧದಲ್ಲಿ ನಾವು ಅವರನ್ನು ಉಪಚರಿಸುತ್ತೇವೇ ವಿನಃ ಕೆಡವುದಿಲ್ಲ.—1 ಥೆಸಲೊನೀಕ 5:11.

19 ಜವಾಬ್ದಾರಿಯನ್ನು ಇತರರಿಗೆ ವಹಿಸಿಕೊಡುವ ಯೇಸುವಿನ ಮಾದರಿಯನ್ನು ಅನುಕರಿಸಲು ನಮ್ಮಿಂದಾಗುವುದೋ? ಸಭೆಗಳಲ್ಲಿ ಜವಾಬ್ದಾರಿಯ ಸ್ಥಾನಗಳಲ್ಲಿರುವವರು ಸೂಕ್ತವಾದ ಹಾಗೂ ಅರ್ಥಗರ್ಭಿತವಾದ ಕೆಲಸಗಳನ್ನು ಇತರರಿಗೆ ವಹಿಸಿಕೊಡುವುದು ಹಾಗೂ ಅವರದನ್ನು ಮಾಡಿಮುಗಿಸುತ್ತಾರೆ ಎಂಬ ಭರವಸೆ ಹೊಂದಿರುವುದು ಪ್ರಯೋಜನಕರ. ಹೀಗೆ ಮಾಡುವ ಮೂಲಕ ನುರಿತ ಹಿರಿಯರು, ಸಭೆಗೆ ಸಹಾಯ ಮಾಡಲಿಕ್ಕಾಗಿ “ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವ” ಅರ್ಹರಾದ ಸಹೋದರರಿಗೆ ಅಮೂಲ್ಯವಾದ ಸೂಕ್ತ ತರಬೇತಿಯನ್ನು ಒದಗಿಸಸಾಧ್ಯವಿದೆ. (1 ತಿಮೊಥೆಯ 3:1; 2 ತಿಮೊಥೆಯ 2:2) ಅಂತಹ ತರಬೇತಿ ತುಂಬ ಮುಖ್ಯ. ಏಕೆಂದರೆ, ರಾಜ್ಯಕ್ಕೆ ಸಂಬಂಧಿಸಿದ ಕೆಲಸಕಾರ್ಯಗಳನ್ನು ಯೆಹೋವನು ವೇಗವಾಗಿ ವರ್ಧಿಸುತ್ತಿದ್ದಾನೆ ಮತ್ತು ಅವನ್ನು ನೋಡಿಕೊಳ್ಳಲು ತರಬೇತಿ ಹೊಂದಿರುವ ಅರ್ಹ ಪುರುಷರ ಅಗತ್ಯ ಬಹಳಷ್ಟಿದೆ.—ಯೆಶಾಯ 60:22.

20 ಇತರರಿಗೆ ಪ್ರೀತಿ ತೋರಿಸುವ ವಿಷಯದಲ್ಲಿ ಯೇಸು ನಮಗೆ ಅಸಾಧಾರಣ ಮಾದರಿಯಿಟ್ಟಿದ್ದಾನೆ. ಎಲ್ಲಾ ವಿಷಯಗಳಲ್ಲಿ ನಾವು ಅವನನ್ನು ಅನುಕರಿಸುವುದಾದರೂ ಅವನ ಪ್ರೀತಿಯನ್ನು ಅನುಕರಿಸುವುದು ಎಲ್ಲಕ್ಕಿಂತಲೂ ಪ್ರಾಮುಖ್ಯ. ಅವನು ನಮ್ಮ ಮೇಲಿಟ್ಟಿರುವ ಪ್ರೀತಿಯ ದ್ಯೋತಕವಾಗಿ ತನ್ನ ಜೀವವನ್ನೇ ನಮಗಾಗಿ ಅರ್ಪಿಸಿದನು. ಪ್ರೀತಿಯ ಆ ಮಹಾನ್‌ ಅಭಿವ್ಯಕ್ತಿಯ ಕುರಿತಾಗಿ ನಾವು ಮುಂದಿನ ಅಧ್ಯಾಯದಲ್ಲಿ ಚರ್ಚಿಸಲಿದ್ದೇವೆ.

^ ಪ್ಯಾರ. 5 ಆ ಅಪೊಸ್ತಲರ ನಿದ್ರೆಗೆ ಬರೀ ದೈಹಿಕ ಆಯಾಸ ಮಾತ್ರವೇ ಕಾರಣವಾಗಿರಲಿಲ್ಲ. ಈ ಘಟನೆಯನ್ನೇ ಲೂಕ 22:45​ರಲ್ಲಿರುವ ದಾಖಲೆಯು, ಯೇಸು “ಅವರು ದುಃಖದಿಂದ ಭಾರವಾಗಿ ನಿದ್ರೆಮಾಡುತ್ತಿರುವುದನ್ನು ನೋಡಿದನು” ಎಂಬದಾಗಿ ತಿಳಿಸುತ್ತದೆ.

^ ಪ್ಯಾರ. 9 ಆ ಸಮಯದಷ್ಟಕ್ಕೆ ಮರಿಯಳು ವಿಧವೆಯಾಗಿದ್ದಿರಬೇಕು ಮತ್ತು ಅವಳ ಇತರ ಮಕ್ಕಳು ಯೇಸುವಿನ ಶಿಷ್ಯರಾಗಿರಲಿಲ್ಲವೆಂದು ತೋರುತ್ತದೆ.—ಯೋಹಾನ 7:5.

^ ಪ್ಯಾರ. 15 ಇದರರ್ಥ, ಪ್ರೀತಿ ಎಲ್ಲವನ್ನೂ ನಂಬಿ ಮೋಸಹೋಗುವ ಗುಣ ಎಂದಲ್ಲ. ಬದಲಿಗೆ ಪ್ರೀತಿಯು ಅನಾವಶ್ಯಕವಾಗಿ ತಪ್ಪುಹುಡುಕುವುದಿಲ್ಲ ಅಥವಾ ಸಂಶಯಿಸುವುದಿಲ್ಲ. ದುಡುಕಿ ಇತರರ ಇರಾದೆಗಳನ್ನು ತೀರ್ಪುಮಾಡುವುದಿಲ್ಲ ಇಲ್ಲವೇ ತಪ್ಪೆಂದು ಹೇಳುವುದಿಲ್ಲ.