ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 1

“ನನ್ನನ್ನು ಹಿಂಬಾಲಿಸಿರಿ”—ಯೇಸುವಿನ ಈ ಮಾತುಗಳ ಅರ್ಥವೇನು?

“ನನ್ನನ್ನು ಹಿಂಬಾಲಿಸಿರಿ”—ಯೇಸುವಿನ ಈ ಮಾತುಗಳ ಅರ್ಥವೇನು?

“ನಾನು ನಿತ್ಯಜೀವಕ್ಕೆ ಬಾಧ್ಯನಾಗಬೇಕಾದರೆ ಏನು ಮಾಡಬೇಕು?”

1, 2. ಒಬ್ಬ ಮನುಷ್ಯನಿಗೆ ಸಿಗಬಹುದಾದ ಅತಿ ಶ್ರೇಷ್ಠ ಆಮಂತ್ರಣ ಯಾವುದು? ನಾವು ಯಾವ ಪ್ರಶ್ನೆಯನ್ನು ಕೇಳಿಕೊಳ್ಳಬೇಕು?

ನಿಮ್ಮ ಮನಸ್ಸಿಗೆ ಅತಿ ಹೆಚ್ಚು ಮುದನೀಡಿರುವ ಆಮಂತ್ರಣ ಯಾವುದು? ಪ್ರಾಯಶಃ ಅದು ನಿಮ್ಮ ಪ್ರಾಣಸ್ನೇಹಿತನ ವಿವಾಹದ ಆಮಂತ್ರಣ ಪತ್ರವಾಗಿರಬಹುದು. ಅಥವಾ ತುಂಬ ಪ್ರಮುಖವಾದ ಒಂದು ಹುದ್ದೆಯನ್ನು ವಹಿಸಿಕೊಳ್ಳುವಂತೆ ದೊರೆತ ಆಮಂತ್ರಣ ಅದಾಗಿರಬಹುದು. ಅಂಥ ಆಮಂತ್ರಣಗಳು ನಿಮ್ಮನ್ನರಸಿಕೊಂಡು ಬಂದಾಗ ನಿಸ್ಸಂದೇಹವಾಗಿಯೂ ನೀವು ಬಹಳ ಸಂಭ್ರಮಿಸಿರುತ್ತೀರಿ. ಮಾತ್ರವಲ್ಲ, ಅವುಗಳು ನಿಮಗೆ ಸಂದ ಗೌರವವೆಂದು ಎಣಿಸಿರುತ್ತೀರಿ. ಆದರೆ ನಿಜವೇನೆಂದರೆ, ಎಲ್ಲಕ್ಕಿಂತಲೂ ಮಿಗಿಲಾದ ಒಂದು ಶ್ರೇಷ್ಠ ಆಮಂತ್ರಣ ನಿಮಗೆ ಸಿಕ್ಕಿದೆ. ಹೌದು ನಮ್ಮಲ್ಲಿ ಪ್ರತಿಯೊಬ್ಬರಿಗೂ ಅದು ದೊರೆತಿದೆ. ಆ ಆಮಂತ್ರಣಕ್ಕೆ ನಾವು ಓಗೊಡುತ್ತೇವೋ ಇಲ್ಲವೋ ಎಂಬ ನಿರ್ಧಾರವು ನಮ್ಮ ಮೇಲೆ ಅಗಾಧ ಪ್ರಭಾವಬೀರುತ್ತದೆ. ನಮ್ಮ ಜೀವನದಲ್ಲೇ ನಾವು ಮಾಡುವ ಅತಿ ದೊಡ್ಡ ನಿರ್ಧಾರ ಅದಾಗಿರುತ್ತದೆ.

2 ಅದು ಯಾವ ಆಮಂತ್ರಣ? ಸರ್ವಶಕ್ತ ದೇವರಾದ ಯೆಹೋವನ ಏಕೈಕಜಾತ ಪುತ್ರನಾದ ಯೇಸು ಕ್ರಿಸ್ತನು ನೀಡಿರುವ ಆಮಂತ್ರಣವೇ ಅದಾಗಿದೆ. ಅದು ಬೈಬಲಿನಲ್ಲಿ ಮತ್ತಾಯ 4:19​ರಲ್ಲಿ ದಾಖಲಾಗಿದೆ. ಅಲ್ಲಿ ಯೇಸು, “ನನ್ನನ್ನು ಹಿಂಬಾಲಿಸಿರಿ” ಎಂದು ಆಮಂತ್ರಿಸುತ್ತಿದ್ದಾನೆ. ಯೇಸು ಈ ಆಮಂತ್ರಣವನ್ನು ನಮ್ಮೆಲ್ಲರಿಗೂ ಕೊಟ್ಟಿದ್ದಾನೆ. ಆದ್ದರಿಂದ, ‘ನಾನು ಅದಕ್ಕೆ ಓಗೊಡುತ್ತೇನೋ?’ ಎಂದು ನಮ್ಮಲ್ಲಿ ಪ್ರತಿಯೊಬ್ಬರೂ ಕೇಳಿಕೊಳ್ಳಬೇಕು. ಅಂಥ ಆಮಂತ್ರಣವನ್ನು ಯಾರು ತಾನೇ ನಿರಾಕರಿಸುತ್ತಾರೆ ಎಂದು ನೀವು ಯೋಚಿಸಬಹುದು. ಆಶ್ಚರ್ಯಕರ ಸಂಗತಿಯೇನೆಂದರೆ ಹೆಚ್ಚಿನ ಜನರು ನಿರಾಕರಿಸುತ್ತಾರೆ. ಯಾಕೆಂದು ಗೊತ್ತೋ?

3, 4. (ಎ) ಯೇಸುವಿನ ಬಳಿ ನಿತ್ಯಜೀವದ ಕುರಿತು ವಿಚಾರಿಸಲು ಬಂದ ವ್ಯಕ್ತಿಯಲ್ಲಿ ಒಬ್ಬ ಮನುಷ್ಯನು ಸಾಮಾನ್ಯವಾಗಿ ಬಯಸುವ ಯಾವ ಮೂರು ವಿಷಯಗಳಿದ್ದವು? (ಬಿ) ಐಶ್ವರ್ಯವಂತ ಯುವ ಅಧಿಕಾರಿಯಲ್ಲಿ ಯೇಸು ಯಾವ ಒಳ್ಳೇ ಗುಣಗಳನ್ನು ನೋಡಿದ್ದಿರಬೇಕು?

3 ಒಂದು ಉದಾಹರಣೆ ಗಮನಿಸಿ. ಇದೇ ಆಮಂತ್ರಣವನ್ನು ಸುಮಾರು 2,000 ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ನೇರವಾಗಿ ಯೇಸುವಿನಿಂದ ಪಡೆದುಕೊಂಡಿದ್ದನು. ಅವನು ಒಬ್ಬ ಗೌರವಾನ್ವಿತ ವ್ಯಕ್ತಿಯಾಗಿದ್ದನು. ಸಾಮಾನ್ಯವಾಗಿ ಒಬ್ಬ ಮನುಷ್ಯನು ಬಯಸುವ ವಿಷಯಗಳಲ್ಲಿ ಕಡಿಮೆಪಕ್ಷ ಮೂರು ವಿಷಯಗಳು ಅವನಲ್ಲಿದ್ದವು. ಅವುಗಳೆಂದರೆ ತಾರುಣ್ಯ, ಸಂಪತ್ತು ಮತ್ತು ಅಧಿಕಾರ. ಬೈಬಲ್‌ ಸಹ ಅವನನ್ನು “ಯೌವನಸ್ಥ,” “ಐಶ್ವರ್ಯವಂತ” ಮತ್ತು “ಅಧಿಕಾರಿ” ಎಂದು ವರ್ಣಿಸುತ್ತದೆ. (ಮತ್ತಾಯ 19:20; ಲೂಕ 18:18, 23) ಆದರೆ, ಅವೆಲ್ಲವುಗಳಿಗಿಂತಲೂ ಪ್ರಮುಖವಾದ ಇನ್ನೊಂದು ವಿಷಯವನ್ನು ಅವನಲ್ಲಿ ಕಾಣಬಹುದಾಗಿತ್ತು. ಅವನು ಮಹಾ ಬೋಧಕನಾದ ಯೇಸುವಿನ ಕುರಿತು ಕೇಳಿಸಿಕೊಂಡಿದ್ದನು ಮತ್ತು ತಾನು ಕೇಳಿಸಿಕೊಂಡಿದ್ದನ್ನು ಇಷ್ಟಪಟ್ಟನು.

4 ಆ ದಿನಗಳಲ್ಲಿ ಹೆಚ್ಚಿನ ಅಧಿಕಾರಿಗಳು ಯೇಸುವಿಗೆ ಗೌರವ ಕೊಡುತ್ತಿರಲಿಲ್ಲ. (ಯೋಹಾನ 7:48; 12:42) ಆದರೆ ಈ ಅಧಿಕಾರಿ ಅವರಂತಿರಲಿಲ್ಲ. ಅವನ ಕುರಿತು ಬೈಬಲ್‌ ನಮಗನ್ನುವುದು: “[ಯೇಸು] ತನ್ನ ದಾರಿಹಿಡಿದು ಹೋಗುತ್ತಿದ್ದಾಗ ಒಬ್ಬ ಮನುಷ್ಯನು ಓಡುತ್ತಾ ಬಂದು ಅವನ ಎದುರು ಮೊಣಕಾಲೂರಿ, ‘ಒಳ್ಳೇ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗಬೇಕಾದರೆ ಏನು ಮಾಡಬೇಕು?’ ಎಂದು ಕೇಳಿದನು.” (ಮಾರ್ಕ 10:17) ಯೇಸುವಿನೊಟ್ಟಿಗೆ ಮಾತಾಡಲು ಆ ವ್ಯಕ್ತಿ ಎಷ್ಟು ಆತುರದಿಂದಿದ್ದನು ಎಂಬುದನ್ನು ಗಮನಿಸಿರಿ. ಅವನು ದೀನ ಬಡಜನರಂತೆ ಸಾರ್ವಜನಿಕ ಸ್ಥಳದಲ್ಲಿ ಯೇಸುವಿನ ಬಳಿಗೆ ಓಡುತ್ತಾ ಬಂದನು. ಅಲ್ಲದೆ, ಕ್ರಿಸ್ತನ ಎದುರು ಗೌರವಪೂರ್ವಕವಾಗಿ ಮೊಣಕಾಲೂರಿದನು. ಹೀಗೆ ಅವನಲ್ಲಿ ಸ್ವಲ್ಪಮಟ್ಟಿಗೆ ದೀನತೆ ಮತ್ತು ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆ ಇತ್ತೆಂದು ಗೊತ್ತಾಗುತ್ತದೆ. ಇಂಥ ಒಳ್ಳೇ ಗುಣಗಳನ್ನು ಯೇಸು ಬಹಳ ಮಾನ್ಯಮಾಡಿದನು. (ಮತ್ತಾಯ 5:3; 18:4) ಆದ್ದರಿಂದ ‘ಯೇಸು ಅವನನ್ನು ದೃಷ್ಟಿಸಿ ನೋಡಿದ್ದರಲ್ಲಿ ಮತ್ತು ಅವನಿಗೆ ಆ ಮನುಷ್ಯನ ಮೇಲೆ ಪ್ರೀತಿ ಉಂಟಾದದ್ದರಲ್ಲಿ’ ಅಚ್ಚರಿಯೇನಿಲ್ಲ. (ಮಾರ್ಕ 10:21) ಯೇಸು ಆ ಯುವ ಅಧಿಕಾರಿಯ ಪ್ರಶ್ನೆಯನ್ನು ಹೇಗೆ ಉತ್ತರಿಸಿದನು?

ಅಸಾಧಾರಣ ಆಮಂತ್ರಣ

5. ಐಶ್ವರ್ಯವಂತ ಯುವ ವ್ಯಕ್ತಿಯ ಪ್ರಶ್ನೆಗೆ ಯೇಸು ಹೇಗೆ ಉತ್ತರಿಸಿದನು? “ಕೊರತೆ” ಎಂಬುದಾಗಿ ಹೇಳುವಾಗ ಆ ವ್ಯಕ್ತಿ ಬಡತನದ ಜೀವನ ನಡೆಸುವ ಆವಶ್ಯಕತೆಯಿರಲಿಲ್ಲ ಎಂಬುದು ನಮಗೆ ಹೇಗೆ ಗೊತ್ತು? (ಪಾದಟಿಪ್ಪಣಿಯನ್ನೂ ನೋಡಿ.)

5 ನಿತ್ಯಜೀವವನ್ನು ಪಡೆದುಕೊಳ್ಳುವ ಕುರಿತ ಪ್ರಮುಖ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಬೇಕಾದಷ್ಟು ಮಾಹಿತಿಯನ್ನು ತನ್ನ ತಂದೆ ಈಗಾಗಲೇ ಒದಗಿಸಿದ್ದಾನೆಂದು ಯೇಸು ಅವನಿಗೆ ತೋರಿಸಿದನು. ಯೇಸು ಶಾಸ್ತ್ರವಚನಗಳನ್ನು ಉಲ್ಲೇಖಿಸಿದನು ಮತ್ತು ಆ ಯುವ ವ್ಯಕ್ತಿ ತಾನು ಮೋಶೆಯ ಧರ್ಮಶಾಸ್ತ್ರವನ್ನು ಯಥಾವತ್ತಾಗಿ ಪಾಲಿಸುತ್ತಿದ್ದೇನೆಂದು ಸಮರ್ಥಿಸಿದನು. ಆದರೆ ಯೇಸು ತನ್ನ ಅಸಾಮಾನ್ಯ ಒಳನೋಟದಿಂದ ಅವನ ಆಂತರ್ಯದಲ್ಲಿ ಏನಿದೆ ಎಂಬುದನ್ನು ತಿಳಿದುಕೊಂಡನು. (ಯೋಹಾನ 2:25) ಆ ಅಧಿಕಾರಿಯಲ್ಲಿ ಗಂಭೀರವಾದ ಆಧ್ಯಾತ್ಮಿಕ ಸಮಸ್ಯೆಯಿತ್ತು. ಆದ್ದರಿಂದಲೇ ಯೇಸು ಅವನಿಗೆ, “ನಿನ್ನಲ್ಲಿ ಒಂದು ಕೊರತೆ ಇದೆ” ಎಂದು ಹೇಳಿದನು. ಆ “ಕೊರತೆ” ಏನಾಗಿತ್ತು? “ಹೋಗು, ನಿನ್ನ ಬಳಿ ಇರುವುದನ್ನೆಲ್ಲ ಮಾರಿ ಬಡವರಿಗೆ ಕೊಡು” ಎಂದು ಯೇಸು ಹೇಳಿದನು. (ಮಾರ್ಕ 10:21) ದೇವರ ಸೇವೆ ಮಾಡಲು ಒಬ್ಬ ವ್ಯಕ್ತಿ ಬಿಡಿಗಾಸನ್ನೂ ಇಟ್ಟುಕೊಂಡಿರಬಾರದು ಎಂದು ಯೇಸು ಇಲ್ಲಿ ಹೇಳುತ್ತಿದ್ದನೋ? ಇಲ್ಲ. * ಹೆಚ್ಚು ಪ್ರಮುಖವಾದ ವಿಷಯವೊಂದನ್ನು ಯೇಸು ತಿಳಿಸುತ್ತಿದ್ದನು.

6. ಯೇಸು ಯಾವ ಆಮಂತ್ರಣ ನೀಡಿದನು? ಅದಕ್ಕೆ ಐಶ್ವರ್ಯವಂತ ಯುವ ಅಧಿಕಾರಿ ಪ್ರತಿಕ್ರಿಯಿಸಿದ ರೀತಿ ಅವನ ಆಂತರ್ಯವನ್ನು ಹೇಗೆ ಬಯಲುಪಡಿಸಿತು?

6 ಅವನಲ್ಲಿದ್ದ ಕೊರತೆಯನ್ನು ಹೊರಗೆಡಹುವ ಸಲುವಾಗಿ ಯೇಸು ಅದ್ಭುತವಾದ ಅವಕಾಶವೊಂದನ್ನು ಅವನ ಮುಂದಿಟ್ಟನು. “ಬಂದು ನನ್ನ ಹಿಂಬಾಲಕನಾಗು” ಎಂಬ ಕರೆನೀಡಿದನು. ತನ್ನನ್ನು ಹಿಂಬಾಲಿಸುವಂತೆ ಸ್ವತಃ ಸರ್ವೋನ್ನತ ದೇವರ ಮಗನೇ ಆ ವ್ಯಕ್ತಿಗೆ ಆಮಂತ್ರಣ ನೀಡುತ್ತಿರುವುದನ್ನು ಸ್ವಲ್ಪ ಕಲ್ಪಿಸಿಕೊಳ್ಳಿ! ಅಷ್ಟೇ ಅಲ್ಲ ಅವನ ಊಹೆಗೂ ಮೀರಿದ ಪ್ರತಿಫಲವನ್ನು ಯೇಸು ಅವನಿಗೆ ವಾಗ್ದಾನಿಸಿದನು. ಯೇಸುವಂದದ್ದು: “ಆಗ ಸ್ವರ್ಗದಲ್ಲಿ ನಿನಗೆ ಸಂಪತ್ತಿರುವುದು.” ಯುವ ಅಧಿಕಾರಿ ಈ ಉಜ್ವಲ ಆಮಂತ್ರಣವನ್ನು ಕೂಡಲೇ ಸ್ವೀಕರಿಸಿ ಅವಕಾಶವನ್ನು ಸದುಪಯೋಗಿಸಿಕೊಂಡನೋ? ಆ ವೃತ್ತಾಂತ ತಿಳಿಸುವುದು: “ಆದರೆ ಆ ಮನುಷ್ಯನ ಬಳಿ ಬಹಳ ಆಸ್ತಿಯಿದ್ದ ಕಾರಣ ಅವನು ಆ ಮಾತನ್ನು ಕೇಳಿ ವ್ಯಸನಗೊಂಡು ದುಃಖದಿಂದ ಹೊರಟುಹೋದನು.” (ಮಾರ್ಕ 10:21, 22) ಹೀಗೆ ಯೇಸುವಿನ ಅನಿರೀಕ್ಷಿತ ಮಾತುಗಳು ಆ ವ್ಯಕ್ತಿಯ ಹೃದಯದಲ್ಲಿದ್ದ ಸಮಸ್ಯೆಯೊಂದನ್ನು ಪ್ರಕಟಪಡಿಸಿದವು. ಅವನು ತನ್ನ ಆಸ್ತಿಯನ್ನೂ ಅದರಿಂದ ಸಿಗುತ್ತಿದ್ದ ಸ್ಥಾನಮಾನಗಳನ್ನೂ ಪ್ರೀತಿಸುತ್ತಿದ್ದನು. ವಿಷಾದಕರವಾಗಿ ಅಂಥ ವಿಷಯಗಳ ಮೇಲೆ ಅವನಿಗಿದ್ದ ಪ್ರೀತಿ ಕ್ರಿಸ್ತನ ಮೇಲಿನ ಪ್ರೀತಿಗಿಂತ ಹೆಚ್ಚಾಗಿತ್ತು. ಯೇಸು ಮತ್ತು ಯೆಹೋವನ ಕಡೆಗೆ ಪೂರ್ಣಹೃದಯದ, ಸ್ವತ್ಯಾಗದ ಪ್ರೀತಿ ಅವನಲ್ಲಿರಲಿಲ್ಲ. ಅದುವೇ ಅವನಲ್ಲಿದ್ದ “ಕೊರತೆ” ಆಗಿತ್ತು. ಆ ಯುವ ವ್ಯಕ್ತಿಯಲ್ಲಿ ಅಂಥ ಪ್ರೀತಿಯ ಕೊರತೆಯಿದ್ದುದರಿಂದಲೇ ಅವನು ಆ ಅಸಾಧಾರಣ ಆಮಂತ್ರಣವನ್ನು ನಿರಾಕರಿಸಿಬಿಟ್ಟನು! ಆ ವ್ಯಕ್ತಿಗೆ ನೀಡಿದ ಆಮಂತ್ರಣ ನಿಮಗೆ ಹೇಗೆ ಅನ್ವಯಿಸುತ್ತದೆ?

7. ಯೇಸು ನೀಡಿದ ಆಮಂತ್ರಣ ಇಂದು ನಮಗೂ ಹೇಗೆ ಅನ್ವಯವಾಗುತ್ತದೆ?

7 ಯೇಸು ಕೇವಲ ಆ ಮನುಷ್ಯನಿಗೆ ಅಥವಾ ಕೆಲವು ಮಂದಿ ಜನರಿಗೆ ಮಾತ್ರ ಆ ಆಮಂತ್ರಣ ನೀಡಲಿಲ್ಲ. “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ, ಅವನು . . . ಎಡೆಬಿಡದೆ ನನ್ನನ್ನು ಹಿಂಬಾಲಿಸಲಿ” ಎಂದು ಅವನು ಹೇಳಿದನು. (ಲೂಕ 9:23) “ಯಾವನಿಗಾದರೂ” “ಮನಸ್ಸಿದ್ದರೆ” ಅವನು ಕ್ರಿಸ್ತನ ಹಿಂಬಾಲಕನಾಗಲು ಸಾಧ್ಯ ಎಂಬುದನ್ನು ಗಮನಿಸಿ. ಅಂಥ ಸಹೃದಯದ ಜನರನ್ನು ದೇವರು ತನ್ನ ಪುತ್ರನ ಬಳಿಗೆ ಸೆಳೆಯುತ್ತಾನೆ. (ಯೋಹಾನ 6:44) ಯೇಸುವಿನ ಆಮಂತ್ರಣಕ್ಕೆ ಓಗೊಡುವ ಅವಕಾಶ ಕೇವಲ ಶ್ರೀಮಂತರಿಗೆ, ಬಡವರಿಗೆ, ಒಂದು ಕುಲ ಅಥವಾ ರಾಷ್ಟ್ರದವರಿಗೆ ಇಲ್ಲವೇ ಕೇವಲ ಆ ಸಮಯದಲ್ಲಿ ಜೀವಿಸುತ್ತಿದ್ದವರಿಗೆ ಮಾತ್ರವಲ್ಲ, ಎಲ್ಲರಿಗೂ ಇತ್ತು. ಆದ್ದರಿಂದಲೇ “ಬಂದು ನನ್ನ ಹಿಂಬಾಲಕನಾಗು” ಎಂದು ಯೇಸು ನೀಡಿದ ಆಮಂತ್ರಣ ನಿಮಗೂ ಅನ್ವಯವಾಗುತ್ತದೆ. ಆದರೆ ನೀವು ಕ್ರಿಸ್ತನನ್ನೇ ಏಕೆ ಹಿಂಬಾಲಿಸಬೇಕು? ಮತ್ತು ಅದರ ಅರ್ಥವೇನು?

ಯಾಕೆ ಕ್ರಿಸ್ತನ ಹಿಂಬಾಲಕರಾಗಬೇಕು?

8. ಮಾನವರಿಗೆ ಯಾರ ಆವಶ್ಯಕತೆಯಿದೆ? ಏಕೆ?

8 ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾದ ಒಂದು ಸತ್ಯವಿದೆ. ಅದೇನೆಂದರೆ, ನಮಗೆ ಒಬ್ಬ ಉತ್ತಮ ನಾಯಕನ ಆವಶ್ಯಕತೆಯಿದೆ. ಇದನ್ನು ಎಲ್ಲರೂ ಒಪ್ಪಿಕೊಳ್ಳಲಾರರು. ಅದೇನೇ ಇರಲಿ, ಆ ಆವಶ್ಯಕತೆಯಂತೂ ಇದ್ದೇ ಇದೆ. ಈ ಅನಂತ ಸತ್ಯದ ಕುರಿತು ಯೆಹೋವನ ಪ್ರವಾದಿಯಾದ ಯೆರೆಮೀಯನು, “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು” ಎಂದು ಬರೆದನು. (ಯೆರೆಮೀಯ 10:23) ಮಾನವರಿಗೆ ಸ್ವತಃ ತಮ್ಮನ್ನೇ ಆಳುವ ಸಾಮರ್ಥ್ಯವಾಗಲಿ ಹಕ್ಕಾಗಲಿ ಇಲ್ಲ. ಮಾನವ ಚರಿತ್ರೆಯಲ್ಲಿ ದುರಾಡಳಿತ ನಡೆಸಿದ ನಾಯಕರ ಒಂದು ಉದ್ದ ಪಟ್ಟಿಯೇ ಇದೆ. (ಪ್ರಸಂಗಿ 8:9) ಯೇಸುವಿನ ಕಾಲದಲ್ಲಿದ್ದ ಜನನಾಯಕರು ಜನರನ್ನು ದಬ್ಬಾಳಿಕೆ ಮತ್ತು ಶೋಷಣೆಗೆ ಒಳಪಡಿಸಿ ದಾರಿ ತಪ್ಪಿಸಿದರು. “ಇವರು ಕುರುಬನಿಲ್ಲದ ಕುರಿಗಳ ಹಾಗೆ” ಇದ್ದಾರೆಂದು ಹೇಳಿದಾಗ ಯೇಸು ಅಲ್ಲಿದ್ದ ಸಾಮಾನ್ಯ ಜನರ ಸ್ಥಿತಿಗತಿಯನ್ನು ಚಿತ್ರಿಸುತ್ತಿದ್ದನು. (ಮಾರ್ಕ 6:34) ಇಂದು ಸಹ ಮಾನವಕುಲದ ಪರಿಸ್ಥಿತಿ ಬೇರೆಯಾಗಿಲ್ಲ. ಒಂದು ಸಮೂಹವಾಗಿ ಮತ್ತು ವ್ಯಕ್ತಿಗತವಾಗಿ ನಾವು ಭರವಸೆಯಿಡಬಲ್ಲ ಮತ್ತು ಗೌರವಿಸಬಲ್ಲ ಒಬ್ಬ ನಾಯಕನ ಜರೂರಿ ನಮಗಿದೆ. ಯೇಸು ಅಂಥ ನಾಯಕನೋ? ಹೌದೆನ್ನಲು ನಮಗಿರುವ ಹಲವಾರು ಕಾರಣಗಳನ್ನು ನೋಡಿರಿ.

9. ಬೇರೆ ಎಲ್ಲ ನಾಯಕರಿಗಿಂತಲೂ ಯೇಸು ಹೇಗೆ ಭಿನ್ನನಾಗಿದ್ದಾನೆ?

9 ಮೊದಲ ಕಾರಣ, ಯೇಸುವನ್ನು ಸ್ವತಃ ಯೆಹೋವ ದೇವರೇ ಆರಿಸಿದ್ದಾನೆ. ಹೆಚ್ಚಿನ ಜನನಾಯಕರನ್ನು ಅಪರಿಪೂರ್ಣ ಮಾನವರು ಆರಿಸುತ್ತಾರೆ. ಇವರು ಹೆಚ್ಚಿನ ಸಲ ಮೋಸಹೋಗಿ ತಪ್ಪಾದ ನಿರ್ಣಯ ಮಾಡುತ್ತಾರೆ. ಆದರೆ ಯೇಸು ಮಾನವ ಜನನಾಯಕರಿಗಿಂತ ಪೂರ್ತಿ ಭಿನ್ನನಾಗಿದ್ದಾನೆ. ಅವನ ಬಿರುದೇ ಇದನ್ನು ತೋರಿಸುತ್ತದೆ. “ಮೆಸ್ಸೀಯ” ಎಂಬ ಪದದಂತೆಯೇ “ಕ್ರಿಸ್ತ” ಎಂಬ ಪದದ ಅರ್ಥವು “ಅಭಿಷಿಕ್ತನು” ಎಂದಾಗಿದೆ. ಹೌದು, ಯೇಸು ಅಭಿಷಿಕ್ತನಾಗಿದ್ದಾನೆ ಅಥವಾ ಪವಿತ್ರ ಸ್ಥಾನಕ್ಕಾಗಿ ವಿಶೇಷವಾಗಿ ನೇಮಕಗೊಂಡಿದ್ದಾನೆ. ಅದು ಸಹ ಬೇರೆ ಯಾರಿಂದಲೂ ಅಲ್ಲ ನಮ್ಮ ವಿಶ್ವಪರಮಾಧಿಕಾರಿಯಿಂದ! ತನ್ನ ಪುತ್ರನ ಕುರಿತು ಯೆಹೋವ ದೇವರು ಹೇಳಿದ್ದು: “ಇಗೋ! ನಾನು ಆರಿಸಿಕೊಂಡಿರುವ ಸೇವಕನು; ನನ್ನ ಪ್ರಿಯನು; ನನ್ನ ಪ್ರಾಣವು ಇವನನ್ನು ಮೆಚ್ಚಿದೆ! ನಾನು ಇವನ ಮೇಲೆ ನನ್ನ ಆತ್ಮವನ್ನು ಇರಿಸುವೆನು.” (ಮತ್ತಾಯ 12:18) ಯಾವ ರೀತಿಯ ನಾಯಕನು ನಮ್ಮನ್ನು ಉತ್ತಮವಾಗಿ ಆಳುವನು ಎಂಬುದನ್ನು ನಮ್ಮ ಸೃಷ್ಟಿಕರ್ತನಿಗಿಂತ ಚೆನ್ನಾಗಿ ಬೇರೆ ಯಾರು ಬಲ್ಲರು? ಯೆಹೋವನ ವಿವೇಕ ಅಪಾರವಾಗಿದೆ. ಆದ್ದರಿಂದ ಅವನ ಆಯ್ಕೆಯಲ್ಲಿ ನಾವು ನಿಶ್ಚಿಂತೆಯಿಂದ ಭರವಸೆಯಿಡಬಹುದು.—ಜ್ಞಾನೋಕ್ತಿ 3:5, 6.

10. ಯೇಸುವಿಗಿಂತ ಶ್ರೇಷ್ಠ ಮಾದರಿ ಮಾನವರಿಗೆ ಸಿಗಸಾಧ್ಯವಿಲ್ಲ ಏಕೆ?

10 ಎರಡನೇ ಕಾರಣ, ಯೇಸು ನಮಗಾಗಿ ಪರಿಪೂರ್ಣ ಹಾಗೂ ಸ್ಫೂರ್ತಿದಾಯಕ ಮಾದರಿ ಇಟ್ಟಿದ್ದಾನೆ. ಒಬ್ಬ ಶ್ರೇಷ್ಠ ನಾಯಕನು ತನ್ನ ಅನುಯಾಯಿಗಳು ಇಷ್ಟಪಡುವ ಹಾಗೂ ಅನುಕರಿಸುವ ಗುಣಗಳನ್ನು ಹೊಂದಿರುತ್ತಾನೆ. ಮೊದಲು ಅವನೇ ಉತ್ತಮ ಮಾದರಿಯನ್ನಿಡುತ್ತಾನೆ. ಹೀಗೆ ಉತ್ತಮ ವ್ಯಕ್ತಿಗಳಾಗುವಂತೆ ಇತರರಿಗೆ ಸ್ಫೂರ್ತಿನೀಡುತ್ತಾನೆ. ಒಬ್ಬ ನಾಯಕನಲ್ಲಿ ನೀವು ಇಷ್ಟಪಡುವ ಗುಣಗಳಾವುವು? ಧೈರ್ಯವೋ? ವಿವೇಕವೋ? ಸಹಾನುಭೂತಿಯೋ? ಕಷ್ಟಗಳು ಎದುರಾದಾಗ ತೋರಿಸುವ ದೃಢನಿಷ್ಠೆಯ ಕುರಿತೇನು? ಯೇಸುವಿನ ಭೂಜೀವಿತದ ಕುರಿತು ನೀವು ಅಧ್ಯಯನ ಮಾಡುವಾಗ ಅವನಲ್ಲಿ ಈ ಗುಣಗಳಲ್ಲದೆ ಇನ್ನೂ ಅನೇಕ ಗುಣಗಳಿದ್ದವು ಎಂಬುದನ್ನು ತಿಳಿದುಕೊಳ್ಳುವಿರಿ. ತನ್ನ ಸ್ವರ್ಗೀಯ ತಂದೆಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುತ್ತಿದ್ದ ಯೇಸುವಿನಲ್ಲಿ ಆತನ ಎಲ್ಲ ಗುಣಗಳು ಇದ್ದವು. ಎಲ್ಲ ರೀತಿಯಲ್ಲೂ ಅವನು ಪರಿಪೂರ್ಣ ಮಾನವನಾಗಿದ್ದನು. ಆದ್ದರಿಂದಲೇ, ಅವನ ಪ್ರತಿಯೊಂದು ನಡೆ, ನುಡಿ ಮತ್ತು ಭಾವನೆಯಲ್ಲಿ ನಾವು ಅನುಕರಿಸಬಹುದಾದ ವಿಷಯ ಸಿಕ್ಕೇ ಸಿಗುತ್ತದೆ. ಯೇಸು “ತನ್ನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ ನಿಮಗೋಸ್ಕರ ಮಾದರಿಯನ್ನು ತೋರಿಸಿ ಹೋದನು” ಎಂದು ಬೈಬಲ್‌ ತಿಳಿಸುತ್ತದೆ.—1 ಪೇತ್ರ 2:21.

11. ಯೇಸು ತಾನೊಬ್ಬ “ಒಳ್ಳೆಯ ಕುರುಬನು” ಎಂದು ತೋರಿಸಿಕೊಟ್ಟದ್ದು ಹೇಗೆ?

11 ಮೂರನೇ ಕಾರಣ, “ನಾನೇ ಒಳ್ಳೆಯ ಕುರುಬನು” ಎಂಬ ತನ್ನ ಮಾತಿಗನುಸಾರ ಯೇಸು ಜೀವಿಸಿದನು. (ಯೋಹಾನ 10:14) “ಒಳ್ಳೆಯ ಕುರುಬನು” ಎಂಬ ಮಾತು ಬೈಬಲ್‌ ಕಾಲದಲ್ಲಿ ಜೀವಿಸುತ್ತಿದ್ದ ಜನರಿಗೆ ಚಿರಪರಿಚಿತವಾಗಿತ್ತು. ಆಗಿನ ಕಾಲದಲ್ಲಿ ಕುರುಬರು ತಮ್ಮ ಮಂದೆಯಲ್ಲಿದ್ದ ಕುರಿಗಳನ್ನು ನೋಡಿಕೊಳ್ಳಲು ತುಂಬ ಶ್ರಮವಹಿಸುತ್ತಿದ್ದರು. ಒಬ್ಬ “ಒಳ್ಳೆಯ ಕುರುಬನು” ತನ್ನ ಪ್ರಾಣಕ್ಕಿಂತಲೂ ಮಂದೆಯ ಹಿತಾಸಕ್ತಿ ಹಾಗೂ ಸುರಕ್ಷತೆಗೆ ಹೆಚ್ಚು ಮಹತ್ವ ಕೊಡುತ್ತಿದ್ದನು. ಉದಾಹರಣೆಗೆ, ಯೇಸುವಿನ ಪೂರ್ವಜನಾದ ದಾವೀದನು ಬಾಲ್ಯದಿಂದಲೂ ಕುರುಬನಾಗಿದ್ದಲ್ಲದೆ, ಕ್ರೂರಮೃಗದ ಬಾಯಿಂದ ಕುರಿಯನ್ನು ಕಾಪಾಡಲಿಕ್ಕಾಗಿ ಒಂದಕ್ಕಿಂತ ಹೆಚ್ಚು ಬಾರಿ ತನ್ನ ಸ್ವಂತ ಜೀವವನ್ನೇ ಪಣಕ್ಕೊಡ್ಡಿದ್ದನು. (1 ಸಮುವೇಲ 17:34-36) ಯೇಸುವಾದರೋ ಇನ್ನೂ ಒಂದು ಹೆಜ್ಜೆ ಮುಂದೆ ಹೋದನು. ತನ್ನ ಹಿಂಬಾಲಕರಿಗಾಗಿ ಪ್ರಾಣವನ್ನೇ ತೆತ್ತನು. (ಯೋಹಾನ 10:15) ಇಂಥ ಸ್ವತ್ಯಾಗದ ಮನೋಭಾವ ಇಂದು ಎಷ್ಟು ಮಂದಿ ನಾಯಕರಲ್ಲಿದೆ?

12, 13. (ಎ) ಕುರುಬನು ಕುರಿಗಳನ್ನು ತಿಳಿದಿರುವುದು ಮತ್ತು ಕುರಿಗಳು ಕುರುಬನನ್ನು ತಿಳಿದಿರುವುದು ಹೇಗೆ? (ಬಿ) ಒಳ್ಳೆಯ ಕುರುಬನ ನಾಯಕತ್ವದ ಕೆಳಗಿರಲು ನೀವು ಬಯಸುವುದೇಕೆ?

12 ಯೇಸು ಇನ್ನೊಂದು ಅರ್ಥದಲ್ಲೂ “ಒಳ್ಳೆಯ ಕುರುಬನು.” ಅವನು, “ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ ಮತ್ತು ನನ್ನ ಕುರಿಗಳು ನನ್ನನ್ನು ತಿಳಿದಿವೆ” ಎಂದು ಹೇಳಿದನು. (ಯೋಹಾನ 10:15) ಯೇಸು ಕೊಟ್ಟ ಕಣ್ಣಿಗೆಕಟ್ಟುವಂಥ ಈ ವಿವರಣೆಯ ಕುರಿತು ಸ್ವಲ್ಪ ಯೋಚಿಸಿ. ಸಾಮಾನ್ಯ ಮನುಷ್ಯನೊಬ್ಬನ ಕಣ್ಣಿಗೆ ಕುರಿಮಂದೆಯು ಕೇವಲ ಮೈತುಂಬಾ ಉಣ್ಣೆಯಿರುವ ಪ್ರಾಣಿಗಳ ಹಿಂಡಂತೆ ತೋರುವುದಷ್ಟೇ. ಆದರೆ ಕುರುಬನು ಒಂದೊಂದು ಕುರಿಯನ್ನೂ ತುಂಬ ಹತ್ತಿರದಿಂದ ಬಲ್ಲನು. ಯಾವ ಕುರಿ ಬೇಗನೆ ಮರಿಹಾಕಲಿದೆ, ಅದಕ್ಕೆ ಯಾವ ಸಹಾಯ ನೀಡಬೇಕು ಎಂಬುದನ್ನು ಅವನು ಚೆನ್ನಾಗಿ ತಿಳಿದಿರುತ್ತಾನೆ. ಮಾತ್ರವಲ್ಲ, ಯಾವ ಕುರಿಮರಿ ತುಂಬ ನಿತ್ರಾಣವಾಗಿ ಹೆಚ್ಚು ದೂರ ನಡೆಯಲು ಅಶಕ್ತವಾಗಿದೆ, ಯಾವುದನ್ನು ಎತ್ತಿಕೊಳ್ಳಬೇಕು, ಯಾವ ಕುರಿ ಕಾಯಿಲೆಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ ಅಥವಾ ಗಾಯಗೊಂಡಿದೆ ಎಂಬುದನ್ನೆಲ್ಲ ತಿಳಿದುಕೊಂಡಿರುತ್ತಾನೆ. ಕುರಿಗಳು ಸಹ ತಮ್ಮ ಕುರುಬನನ್ನು ಚೆನ್ನಾಗಿ ತಿಳಿದಿರುತ್ತವೆ. ಅವು ಅವನ ಸ್ವರವನ್ನು ಗುರುತಿಸುತ್ತವೆ. ಎಂದಿಗೂ ಇನ್ನೊಬ್ಬ ಕುರುಬನ ಸ್ವರಕ್ಕೆ ಓಗೊಡುವುದಿಲ್ಲ. ಕುರುಬನ ಎಚ್ಚರಿಕೆಯ ಕೂಗನ್ನು ಕೇಳಿದಾಗ ತಕ್ಷಣ ಪ್ರತಿಕ್ರಿಯಿಸುತ್ತವೆ. ಅವನು ನಡೆಸಿದಲ್ಲಿಗೆ ಅವು ಹಿಂಬಾಲಿಸುತ್ತಾ ಹೋಗುತ್ತವೆ. ಮತ್ತು ಅವುಗಳನ್ನು ಎಲ್ಲಿಗೆ ನಡೆಸಬೇಕೆಂದು ಕುರುಬನಿಗೂ ಗೊತ್ತಿರುತ್ತದೆ. ಎಲ್ಲಿ ಹುಲುಸಾದ ಹಸಿರು ಹುಲ್ಲಿದೆ, ಯಾವ ತೊರೆಯ ನೀರು ಶುದ್ಧವೂ ಸ್ವಚ್ಛವೂ ಆಗಿದೆ, ಯಾವ ಹುಲ್ಲುಗಾವಲು ಸುರಕ್ಷಿತ ಎಂಬುವುದೆಲ್ಲ ಅವನಿಗೆ ಗೊತ್ತು. ಅವನ ಕಣ್ಗಾವಲಿನಲ್ಲಿ ಕುರಿಗಳು ನಿರ್ಭಯವಾಗಿ ಮೇಯುತ್ತವೆ.—ಕೀರ್ತನೆ 23.

13 ಇಂಥದ್ದೇ ನಾಯಕತ್ವವನ್ನು ನೀವೂ ಬಯಸುವುದಿಲ್ಲವೇ? ತನ್ನ ಹಿಂಬಾಲಕರನ್ನು ಇದೇ ರೀತಿಯಲ್ಲಿ ಉಪಚರಿಸಿರುವ ಅನುಪಮ ದಾಖಲೆ ಒಳ್ಳೆಯ ಕುರುಬನಾದ ಯೇಸುವಿನ ಬಳಿ ಇದೆ. ಈಗ ಮತ್ತು ನಿತ್ಯ ಭವಿಷ್ಯತ್ತಿನಲ್ಲೂ ಸಂತೋಷಕರ ಮತ್ತು ತೃಪ್ತಿದಾಯಕ ಜೀವನದ ಕಡೆಗೆ ನಿಮ್ಮನ್ನು ನಡೆಸುವ ಮಾತನ್ನೂ ಅವನು ಕೊಡುತ್ತಾನೆ. (ಯೋಹಾನ 10:10, 11; ಪ್ರಕಟನೆ 7:16, 17) ಆದ್ದರಿಂದ ನಾವೀಗ, ಕ್ರಿಸ್ತನನ್ನು ಹಿಂಬಾಲಿಸುವುದರಲ್ಲಿ ಏನು ಒಳಗೂಡಿದೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಬೇಕಿದೆ.

ಕ್ರಿಸ್ತನ ಹಿಂಬಾಲಕರಾಗುವುದರ ಅರ್ಥ

14, 15. ಕ್ರಿಸ್ತನ ಹಿಂಬಾಲಕರಾಗಲು ಬರೀ ಕ್ರೈಸ್ತರೆಂದು ಹೇಳಿಕೊಳ್ಳುವುದಾಗಲಿ, ಭಾವನಾತ್ಮಕವಾಗಿ ಯೇಸುವಿಗೆ ಹತ್ತಿರವಾಗುವುದಾಗಲಿ ಸಾಲದು ಏಕೆ?

14 ಇಂದು ಸಹಸ್ರಾರು ಜನರು ತಾವು ಕ್ರಿಸ್ತನ ಆಮಂತ್ರಣವನ್ನು ಸ್ವೀಕರಿಸಿದ್ದೇವೆಂದು ನೆನಸುತ್ತಾರೆ. ತಮ್ಮನ್ನು ಕ್ರೈಸ್ತರೆಂದೂ ಹೇಳಿಕೊಳ್ಳುತ್ತಾರೆ. ಪ್ರಾಯಶಃ ತಮ್ಮ ಹೆತ್ತವರು ದೀಕ್ಷಾಸ್ನಾನ ಮಾಡಿಸಿದ್ದರಿಂದ ಯಾವುದೋ ಒಂದು ಚರ್ಚಿನ ಸದಸ್ಯರೂ ಆಗಿರುತ್ತಾರೆ. ಅಥವಾ ಯೇಸುವಿನೊಂದಿಗೆ ತಾವು ಭಾವನಾತ್ಮಕವಾಗಿ ಹತ್ತಿರವಾಗಿದ್ದೇವೆಂದು ಹೇಳಿಕೊಳ್ಳುತ್ತಾ ಅವನನ್ನು ತಮ್ಮ ರಕ್ಷಕನೆಂದು ಸ್ವೀಕರಿಸಿರುತ್ತಾರೆ. ಆದರೆ ಇದು ಅವರನ್ನು ಕ್ರಿಸ್ತನ ಹಿಂಬಾಲಕರನ್ನಾಗಿ ಮಾಡುತ್ತದೋ? ತನ್ನ ಹಿಂಬಾಲಕರಾಗುವಂತೆ ಯೇಸು ನಮ್ಮನ್ನು ಆಮಂತ್ರಿಸಿದಾಗ ಯೇಸುವಿನ ಮನಸ್ಸಿನಲ್ಲಿ ಈ ವಿಚಾರಧಾರೆಯಿತ್ತೋ? ಇದಕ್ಕಿಂತ ಹೆಚ್ಚಿನದ್ದು ಒಳಗೂಡಿದೆ.

15 ಯಾವ ರಾಷ್ಟ್ರಗಳ ಜನರಲ್ಲಿ ಹೆಚ್ಚಿನವರು ತಮ್ಮನ್ನು ಕ್ರೈಸ್ತರೆಂದು ಹೇಳಿಕೊಳ್ಳುತ್ತಾರೋ ಆ ಕ್ರೈಸ್ತಪ್ರಪಂಚವನ್ನು ಪರಿಗಣಿಸಿ. ಈ ಕ್ರೈಸ್ತಪ್ರಪಂಚ ಯೇಸು ಕ್ರಿಸ್ತನ ಬೋಧನೆಗಳನ್ನು ಸ್ವಲ್ಪವಾದರೂ ಪಾಲಿಸುತ್ತಿದೆಯೋ? ಅಥವಾ ನಾವು ಅಂಥ ರಾಷ್ಟ್ರಗಳಲ್ಲಿ ಲೋಕದ ಇತರ ಕಡೆಗಳಲ್ಲಿರುವಂತೆಯೇ ದ್ವೇಷ, ದಬ್ಬಾಳಿಕೆ, ಪಾತಕ ಮತ್ತು ಅನ್ಯಾಯವನ್ನೇ ನೋಡುತ್ತಿದ್ದೇವೋ? ಗಾಂಧೀಜಿಯವರು ಒಮ್ಮೆ ಹೇಳಿದ್ದು: “ಮಾನವಕುಲಕ್ಕಾಗಿ ಯೇಸುವಿನಷ್ಟು ಒಳಿತನ್ನು ಮಾಡಿರುವ ಇನ್ನೊಬ್ಬ ವ್ಯಕ್ತಿಯನ್ನು ನಾನರಿಯೆ. ವಾಸ್ತವದಲ್ಲಿ ಕ್ರೈಸ್ತತ್ವದಲ್ಲಿ ಯಾವುದೇ ತಪ್ಪಿಲ್ಲ.” ಅವರು ಇನ್ನೂ ಹೇಳಿದ್ದು: “ಸಮಸ್ಯೆಯಿರುವುದು ಕ್ರೈಸ್ತರಾದ ನಿಮ್ಮಲ್ಲಿ. ನೀವು ಸ್ವಲ್ಪವೂ ನಿಮ್ಮ ಸ್ವಂತ ಬೋಧನೆಗಳಿಗೆ ಅನುಸಾರವಾಗಿ ಜೀವಿಸುವುದಿಲ್ಲ.”

16, 17. ನಾಮಮಾತ್ರದ ಕ್ರೈಸ್ತರಲ್ಲಿ ಯಾವ ಕೊರತೆಯಿದೆ? ಅವರಿಂದ ಕ್ರಿಸ್ತನ ನಿಜ ಹಿಂಬಾಲಕರನ್ನು ಯಾವುದು ಪ್ರತ್ಯೇಕಿಸುತ್ತದೆ?

16 ತನ್ನ ನಿಜ ಹಿಂಬಾಲಕರನ್ನು ಅವರ ಮಾತಿನಿಂದಾಗಲಿ ಹೆಸರಿನಿಂದಾಗಲಿ ಗುರುತಿಸಲಾಗುವುದಿಲ್ಲ, ಬದಲಿಗೆ ಅವರು ಮಾಡುವ ಕ್ರಿಯೆಗಳಿಂದಲೇ ಗುರುತಿಸಲಾಗುವುದು ಎಂದು ಯೇಸು ಹೇಳಿದನು. ಉದಾಹರಣೆಗೆ, “ನನ್ನನ್ನು ‘ಕರ್ತನೇ, ಕರ್ತನೇ’ ಎಂದು ಹೇಳುವ ಪ್ರತಿಯೊಬ್ಬನೂ ಸ್ವರ್ಗದ ರಾಜ್ಯವನ್ನು ಪ್ರವೇಶಿಸುವುದಿಲ್ಲ; ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ಪ್ರವೇಶಿಸುವನು” ಎಂದು ಅವನು ಒಮ್ಮೆ ಹೇಳಿದನು. (ಮತ್ತಾಯ 7:21) ಯೇಸುವನ್ನು ತಮ್ಮ ಕರ್ತನೆಂದು ಹೇಳಿಕೊಳ್ಳುವ ಅನೇಕರು ಆತನ ತಂದೆಯ ಚಿತ್ತವನ್ನು ಮಾಡದಿರಲು ಕಾರಣವೇನು? ಆ ಐಶ್ವರ್ಯವಂತ ಯುವ ಅಧಿಕಾರಿಯನ್ನು ಸ್ವಲ್ಪ ನೆನಪಿಸಿಕೊಳ್ಳಿ. ಅವನಂತೆಯೇ, ನಾಮಮಾತ್ರದ ಕ್ರೈಸ್ತರಲ್ಲಿಯೂ “ಕೊರತೆ” ಇದೆ. ಯೇಸುವಿನ ಮೇಲೆ ಮತ್ತು ಅವನನ್ನು ಕಳುಹಿಸಿಕೊಟ್ಟಾತನ ಮೇಲೆ ಅವರಿಗೆ ಪೂರ್ಣಪ್ರಾಣದ ಪ್ರೀತಿ ಇಲ್ಲ.

17 ಆದರೆ, ಕ್ರೈಸ್ತರೆಂದು ಹೇಳಿಕೊಳ್ಳುವ ಕೋಟ್ಯಂತರ ಜನರು ತಾವು ಕ್ರಿಸ್ತನನ್ನು ಪ್ರೀತಿಸುತ್ತೇವೆಂದು ಹೇಳಿಕೊಳ್ಳುತ್ತಿಲ್ಲವೋ? ಹೌದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಯೇಸು ಹಾಗೂ ಯೆಹೋವನ ಮೇಲಿನ ಪ್ರೀತಿ ಬರೀ ಬಾಯಿಮಾತಿಗಿಂತಲೂ ಹೆಚ್ಚನ್ನು ಅವಶ್ಯಪಡಿಸುತ್ತದೆ. “ಯಾರಾದರೂ ನನ್ನನ್ನು ಪ್ರೀತಿಸುವುದಾದರೆ ಅವನು ನನ್ನ ಮಾತುಗಳನ್ನು ಕೈಕೊಂಡು ನಡೆಯುವನು” ಎಂದು ಯೇಸು ತಾನೇ ಹೇಳಿದ್ದಾನೆ. (ಯೋಹಾನ 14:23) ತನ್ನನ್ನು ಒಬ್ಬ ಕುರುಬನಿಗೆ ಹೋಲಿಸುತ್ತಾ, “ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ತಿಳಿದಿದ್ದೇನೆ ಮತ್ತು ಅವು ನನ್ನ ಹಿಂದೆ ಬರುತ್ತವೆ” ಎಂದು ಸಹ ಅವನು ಹೇಳಿದ್ದಾನೆ. (ಯೋಹಾನ 10:27) ಹಾಗಾದರೆ, ಕ್ರಿಸ್ತನ ಮೇಲೆ ನಮಗೆ ಪ್ರೀತಿಯಿದೆ ಎಂಬುದು ಕೇವಲ ನಮ್ಮ ಬಾಯಿಮಾತಿನಿಂದಾಗಲಿ ಭಾವನೆಗಳಿಂದಾಗಲಿ ಅಲ್ಲ ಮುಖ್ಯವಾಗಿ ನಮ್ಮ ಕ್ರಿಯೆಗಳಿಂದ ರುಜುವಾಗುತ್ತದೆ.

18, 19. (ಎ) ಯೇಸುವಿನ ಕುರಿತ ಕಲಿಕೆ ಏನು ಮಾಡುವಂತೆ ನಮ್ಮನ್ನು ಪ್ರಭಾವಿಸಬೇಕು? (ಬಿ) ಈ ಪುಸ್ತಕದ ಉದ್ದೇಶವೇನಾಗಿದೆ? ಕ್ರಿಸ್ತನ ಹಿಂಬಾಲಕರೆಂದು ಬಹಳ ಸಮಯದಿಂದಲೂ ಭಾವಿಸುತ್ತಿರುವವರಿಗೆ ಸಹ ಇದು ಹೇಗೆ ನೆರವಾಗುತ್ತದೆ?

18 ನಮ್ಮ ಕ್ರಿಯೆಗಳು ನಮ್ಮ ಅಂತರಂಗ ಹೇಗಿದೆ ಎಂಬುದನ್ನು ತೋರಿಸಿಕೊಡುತ್ತವೆ. ಆದ್ದರಿಂದ ಮೊದಲು ನಮ್ಮ ಅಂತರಂಗವನ್ನು ಸರಿಪಡಿಸಬೇಕು. “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ” ಎಂದನು ಯೇಸು. (ಯೋಹಾನ 17:3) ನಾವು ಯೇಸುವಿನ ಕುರಿತ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡು ಅದನ್ನು ಧ್ಯಾನಿಸುವುದಾದರೆ ನಮ್ಮ ಅಂತರಂಗ ಅಥವಾ ಹೃದಯ ಪ್ರಭಾವಿಸಲ್ಪಡುವುದು. ನಾವು ಅವನನ್ನು ಹೆಚ್ಚೆಚ್ಚು ಪ್ರೀತಿಸತೊಡಗುವೆವು ಹಾಗೂ ಅವನನ್ನು ಹಿಂಬಾಲಿಸುವ ಅಪೇಕ್ಷೆ ದಿನದಿನವೂ ನಮ್ಮಲ್ಲಿ ತೀವ್ರವಾಗುವುದು.

19 ಅದೇ ಈ ಪುಸ್ತಕದ ಉದ್ದೇಶವಾಗಿದೆ. ಯೇಸುವಿನ ಜೀವನ ಮತ್ತು ಶುಶ್ರೂಷೆಯ ಸಾರಾಂಶವನ್ನು ಒದಗಿಸುವುದು ಈ ಪುಸ್ತಕದ ಆಶಯವಲ್ಲ. ಬದಲಿಗೆ, ಯೇಸುವನ್ನು ಹಿಂಬಾಲಿಸುವುದು ಹೇಗೆಂಬುದನ್ನು ಕಂಡುಕೊಳ್ಳಲು ನಮಗೆ ಸಹಾಯ ಮಾಡುವುದಾಗಿದೆ. * ಶಾಸ್ತ್ರವಚನವೆಂಬ ಕನ್ನಡಿಯಲ್ಲಿ ನೋಡಿ ‘ನಾನು ನಿಜವಾಗಿಯೂ ಯೇಸುವನ್ನು ಹಿಂಬಾಲಿಸುತ್ತಿದ್ದೇನೋ?’ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲು ನೆರವಾಗುವಂತೆ ಇದನ್ನು ಸಿದ್ಧಪಡಿಸಲಾಗಿದೆ. (ಯಾಕೋಬ 1:23-25) ಒಳ್ಳೆಯ ಕುರುಬನಾದ ಯೇಸುವಿನಿಂದ ಮಾರ್ಗದರ್ಶಿಸಲ್ಪಡುತ್ತಿರುವ ಕುರಿ ನೀವಾಗಿದ್ದೀರಿ ಎಂದು ನೀವು ಬಹಳ ಸಮಯದಿಂದ ಭಾವಿಸುತ್ತಿರಬಹುದು. ಆದರೂ ನಾವೆಲ್ಲರೂ ಪ್ರಗತಿಮಾಡಬೇಕಾದ ಕ್ಷೇತ್ರ ಇದ್ದೇ ಇರುತ್ತದೆ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಲ್ಲವೇ? “ನೀವು ನಂಬಿಕೆಯಲ್ಲಿ ಇದ್ದೀರೋ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಾ ಇರಿ, ನೀವು ಏನಾಗಿದ್ದೀರಿ ಎಂಬುದನ್ನು ಪ್ರಮಾಣೀಕರಿಸುತ್ತಾ ಇರಿ” ಎಂದು ಬೈಬಲ್‌ ಸಹ ಪ್ರೋತ್ಸಾಹಿಸುತ್ತದೆ. (2 ಕೊರಿಂಥ 13:5) ಹಾಗಾದರೆ, ಸ್ವತಃ ಯೆಹೋವನೇ ನೇಮಿಸಿರುವ ಒಳ್ಳೆಯ ಪ್ರೀತಿಪರ ಕುರುಬನಾದ ಯೇಸುವಿನಿಂದ ಮಾರ್ಗದರ್ಶಿಸಲ್ಪಡುತ್ತಾ ಇದ್ದೇವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಪಡುವ ಶ್ರಮವೆಲ್ಲವೂ ಸಾರ್ಥಕ.

20. ಮುಂದಿನ ಅಧ್ಯಾಯದಲ್ಲಿ ನಾವು ಏನನ್ನು ಕಲಿಯಲಿದ್ದೇವೆ?

20 ಈ ಪುಸ್ತಕದ ಅಧ್ಯಯನವು ಯೇಸು ಹಾಗೂ ಯೆಹೋವನ ಮೇಲಿರುವ ನಿಮ್ಮ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಲಿ. ಆ ಪ್ರೀತಿಯು ನಿಮ್ಮ ಜೀವನವನ್ನು ಮಾರ್ಗದರ್ಶಿಸುವಾಗ ಈ ಲೋಕದಲ್ಲೂ ನೀವು ಶಾಂತಿ ಮತ್ತು ಸಂತೃಪ್ತಿಯನ್ನು ಹೇರಳವಾಗಿ ಕಂಡುಕೊಳ್ಳುವಿರಿ. ಮಾತ್ರವಲ್ಲ, ನಮಗೆ ಒಳ್ಳೆಯ ಕುರುಬನನ್ನು ಕೊಟ್ಟದ್ದಕ್ಕಾಗಿ ಯೆಹೋವನನ್ನು ಸದಾಕಾಲ ಸ್ತುತಿಸಲು ಜೀವಿಸಿರುವಿರಿ. ಕ್ರಿಸ್ತನ ಕುರಿತ ನಮ್ಮ ಅಧ್ಯಯನವು ಸರಿಯಾದ ಅಡಿಪಾಯದ ಮೇಲೆ ಆಧರಿತವಾಗಿರಬೇಕು. ಅದಕ್ಕಾಗಿ, ಯೆಹೋವನ ಉದ್ದೇಶದಲ್ಲಿ ಯೇಸುವಿನ ಪಾತ್ರವೇನೆಂದು ನಾವು ಪರೀಕ್ಷಿಸಬೇಕು. ಇದನ್ನೇ 2ನೇ ಅಧ್ಯಾಯದಲ್ಲಿ ಕಲಿಯಲಿದ್ದೇವೆ.

^ ಪ್ಯಾರ. 5 ಯೇಸು ತನ್ನನ್ನು ಹಿಂಬಾಲಿಸಿದ ಪ್ರತಿಯೊಬ್ಬರಿಗೂ ಸ್ವತ್ತುಗಳನ್ನು ಮಾರಿಬನ್ನಿ ಎಂದು ಹೇಳಲಿಲ್ಲ. ದೇವರ ರಾಜ್ಯವನ್ನು ಹಣವಂತರು ಸೇರುವುದು ಕಷ್ಟಕರವೆಂದು ಹೇಳಿದರೂ, “ದೇವರಿಗೆ ಎಲ್ಲವೂ ಸಾಧ್ಯ” ಎಂದು ಸಹ ಅವನು ಹೇಳಿದನು. (ಮಾರ್ಕ 10:23, 27) ಅಷ್ಟೇ ಅಲ್ಲ, ಕೆಲವು ಐಶ್ವರ್ಯವಂತ ಜನರು ಕ್ರಿಸ್ತನ ಹಿಂಬಾಲಕರಾದರು. ಕ್ರೈಸ್ತ ಸಭೆಯಲ್ಲಿ ಅಂಥವರಿಗೆ ಐಶ್ವರ್ಯದ ಕುರಿತು ನಿರ್ದಿಷ್ಟ ಸಲಹೆಗಳನ್ನು ಕೊಡಲಾಯಿತಾದರೂ ತಮ್ಮ ಎಲ್ಲ ಸಂಪತ್ತನ್ನು ಬಡವರಿಗೆ ದಾನಮಾಡಿ ಎಂಬುದಾಗಿ ಹೇಳಲಾಗಿಲ್ಲ.—1 ತಿಮೊಥೆಯ 6:17.

^ ಪ್ಯಾರ. 19 ಯೇಸುವಿನ ಜೀವನ ಹಾಗೂ ಶುಶ್ರೂಷೆಯ ಸಾರಾಂಶವನ್ನು ಕಾಲಾನುಕ್ರಮದಲ್ಲಿ ತಿಳಿದುಕೊಳ್ಳಲಿಕ್ಕಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಎಂಬ ಪುಸ್ತಕವನ್ನು ನೋಡಿ.