ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 10

“ಎಂದು ಬರೆದಿದೆ”

“ಎಂದು ಬರೆದಿದೆ”

“ಈ ಶಾಸ್ತ್ರವಚನವು ಇಂದು ನೆರವೇರಿತು”

1-3. ನಜರೇತಿನ ಜನರು ಯಾವುದನ್ನು ಗ್ರಹಿಸುವಂತೆ ಯೇಸು ಬಯಸುತ್ತಾನೆ? ಅವನು ಯಾವ ಪುರಾವೆ ಕೊಡುತ್ತಾನೆ?

ಯೇಸು ತನ್ನ ಶುಶ್ರೂಷೆಯನ್ನು ಆರಂಭಿಸಿದ ದಿನಗಳಲ್ಲಿ ನಡೆದ ಘಟನೆ. ಕ್ರಿಸ್ತನು ತನ್ನ ಸ್ವಂತ ಊರಾದ ನಜರೇತಿಗೆ ಹಿಂದಿರುಗಿ ಹೋಗಿದ್ದಾನೆ. ದೀರ್ಘಕಾಲದ ಹಿಂದೆಯೇ ವಾಗ್ದಾನಿಸಲಾದ ಮೆಸ್ಸೀಯ ತಾನೇ ಎಂಬುದನ್ನು ಗ್ರಹಿಸುವಂತೆ ಅಲ್ಲಿನ ಜನರಿಗೆ ಸಹಾಯ ಮಾಡುವುದೇ ಅವನ ಉದ್ದೇಶವಾಗಿತ್ತು. ಅದಕ್ಕಾಗಿ ಅವನು ಯಾವ ಪುರಾವೆ ಕೊಡುತ್ತಾನೆ?

2 ಅನೇಕರು ಒಂದು ಅದ್ಭುತವನ್ನು ಎದುರುನೋಡುತ್ತಿದ್ದರು ಎಂಬದರಲ್ಲಿ ಯಾವ ಸಂದೇಹವೂ ಇಲ್ಲ. ಯೇಸು ನಡೆಸಿದ ಅನೇಕ ಆಶ್ಚರ್ಯಕರ ವಿಷಯಗಳನ್ನು ಅವರು ಈಗಾಗಲೇ ಕೇಳಿದ್ದರು. ಆದರೆ ಅವನು, ಅಂಥ ಅದ್ಭುತವನ್ನು ಇಲ್ಲಿ ಮಾಡುವುದಿಲ್ಲ. ಬದಲಿಗೆ, ತನ್ನ ವಾಡಿಕೆಯಂತೆ ಸಭಾಮಂದಿರಕ್ಕೆ ಹೋಗುತ್ತಾನೆ. ಅಲ್ಲಿ ಅವನು ಓದುವುದಕ್ಕಾಗಿ ಎದ್ದು ನಿಂತುಕೊಳ್ಳುತ್ತಾನೆ ಮತ್ತು ಯೆಶಾಯನ ಸುರುಳಿಯನ್ನು ಅವನಿಗೆ ನೀಡಲಾಗುತ್ತದೆ. ಬಹುಶಃ ಅದೊಂದು ಉದ್ದವಾದ ಸುರುಳಿಯಾಗಿದ್ದು ಎರಡು ಕೋಲುಗಳಲ್ಲಿ ಸುತ್ತಿಡಲಾಗಿತ್ತು. ಯೇಸು ನಿಧಾನವಾಗಿ ಒಂದು ಕೋಲಿನಿಂದ ಇನ್ನೊಂದು ಕೋಲಿಗೆ ಆ ಸುರುಳಿಯನ್ನು ಸುತ್ತುತ್ತಾ ತಾನು ಹುಡುಕುತ್ತಿದ್ದ ಭಾಗ ಸಿಕ್ಕಿದಾಗ ನಿಲ್ಲಿಸುತ್ತಾನೆ. ಬಳಿಕ ಆ ಭಾಗವನ್ನು ಅಂದರೆ, ಇಂದು ಯೆಶಾಯ 61:1-3 ರಲ್ಲಿ ಏನಿದೆಯೋ ಅದನ್ನು ಗಟ್ಟಿಯಾಗಿ ಓದುತ್ತಾನೆ.—ಲೂಕ 4:16-19.

3 ಅಲ್ಲಿದ್ದ ಸಭಿಕರಿಗೆ ಆ ಭಾಗವು ಸುಪರಿಚಿತವಾಗಿತ್ತು. ಅದು ಮೆಸ್ಸೀಯನ ಕುರಿತ ಪ್ರವಾದನೆಯಾಗಿತ್ತು. ಸಭಾಮಂದಿರದಲ್ಲಿದ್ದ ಎಲ್ಲರ ಕಣ್ಣುಗಳು ಯೇಸುವಿನ ಮೇಲೆ ನಾಟಿದ್ದವು. ಅಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ಮೌನ ಆವರಿಸಿತ್ತು. ಆಗ ಯೇಸು ಅದನ್ನು ವಿವರಿಸುತ್ತಾ, “ಈಗಷ್ಟೇ ನೀವು ಕೇಳಿಸಿಕೊಂಡ ಈ ಶಾಸ್ತ್ರವಚನವು ಇಂದು ನೆರವೇರಿತು” ಎಂದು ಹೇಳುತ್ತಾನೆ. ನೆರೆದಿದ್ದ ಸಭಿಕರು ಅವನಾಡಿದ ಚಿತ್ತಾಕರ್ಷಕ ಮಾತುಗಳನ್ನು ಕೇಳಿ ಆಶ್ಚರ್ಯಪಡುತ್ತಾರೆ. ಆದರೆ ಕೆಲವರು ಅದ್ಭುತವನ್ನು ಕಾಣಬಯಸುತ್ತಾರೆ. ಯೇಸುವಾದರೋ, ಧೈರ್ಯದಿಂದ ಅವರ ಅಪನಂಬಿಕೆಯನ್ನು ಬಯಲುಗೊಳಿಸಲು ಶಾಸ್ತ್ರವಚನಗಳಲ್ಲಿನ ಉದಾಹರಣೆಯನ್ನು ಉಪಯೋಗಿಸುತ್ತಾನೆ. ಆಗ ನಜರೇತಿನ ಜನರು ಅವನನ್ನು ಕೊಲ್ಲಲು ಪ್ರಯತ್ನಿಸುತ್ತಾರೆ.—ಲೂಕ 4:20-30.

4. ಯೇಸು ತನ್ನ ಶುಶ್ರೂಷೆಯಲ್ಲಿ ಯಾವ ನಮೂನೆಯನ್ನಿಟ್ಟನು? ಈ ಅಧ್ಯಾಯದಲ್ಲಿ ನಾವು ಏನನ್ನು ಚರ್ಚಿಸಲಿರುವೆವು?

4 ಯೇಸು ತನ್ನ ಶುಶ್ರೂಷೆಯಾದ್ಯಂತ ಕಾಪಾಡಿಕೊಂಡಿದ್ದ ಒಂದು ನಮೂನೆಯನ್ನು ಇಲ್ಲಿ ನಾವು ಕಾಣಬಹುದು. ಅವನು ದೇವರ ಪ್ರೇರಿತ ವಾಕ್ಯದ ಮೇಲೆ ಬಹಳವಾಗಿ ಆತುಕೊಂಡಿದ್ದನು. ಯೇಸು ಮಾಡಿದ ಅದ್ಭುತಗಳು ಅವನ ಮೇಲೆ ದೇವರ ಆತ್ಮವಿದೆ ಎಂಬುದನ್ನು ತೋರಿಸಿಕೊಡುವುದರಲ್ಲಿ ಮಹತ್ತರ ಪಾತ್ರವಹಿಸಿದವು ಎಂಬುದೇನೂ ನಿಜ. ಆದರೆ, ಯೇಸುವಿಗೆ ಬೇರೆ ಯಾವುದೂ ಪವಿತ್ರ ಶಾಸ್ತ್ರವಚನಗಳಷ್ಟು ಮಹತ್ವದ್ದಾಗಿರಲಿಲ್ಲ. ಈ ವಿಷಯದಲ್ಲಿ ಅವನಿಟ್ಟ ಮಾದರಿಯನ್ನು ನಾವೀಗ ಪರಿಗಣಿಸೋಣ. ನಮ್ಮ ನಾಯಕನು ದೇವರ ವಾಕ್ಯವನ್ನು ಹೇಗೆ ಉಲ್ಲೇಖಿಸಿದನು, ದೇವರ ವಾಕ್ಯವನ್ನು ಹೇಗೆ ಸಮರ್ಥಿಸಿದನು ಮತ್ತು ದೇವರ ವಾಕ್ಯವನ್ನು ಹೇಗೆ ವಿವರಿಸಿದನು ಎಂಬುದನ್ನು ನಾವು ಈ ಅಧ್ಯಾಯದಲ್ಲಿ ಚರ್ಚಿಸಲಿರುವೆವು.

ದೇವರ ವಾಕ್ಯದ ಉಲ್ಲೇಖ

5. ತನ್ನ ಕೇಳುಗರು ಏನನ್ನು ತಿಳಿದುಕೊಳ್ಳಬೇಕೆಂದು ಯೇಸು ಬಯಸಿದನು? ತನ್ನ ಮಾತುಗಳ ಸತ್ಯತೆಯನ್ನು ಅವನು ಹೇಗೆ ರುಜುಪಡಿಸಿದನು?

5 ತನ್ನ ಸಂದೇಶದ ಮೂಲವನ್ನು ಜನರು ತಿಳಿದುಕೊಳ್ಳಬೇಕೆಂದು ಯೇಸು ಬಯಸಿದನು. “ನಾನು ಏನನ್ನು ಬೋಧಿಸುತ್ತೇನೋ ಅದು ನನ್ನದಲ್ಲ, ನನ್ನನ್ನು ಕಳುಹಿಸಿದಾತನಿಗೆ ಸೇರಿದ್ದು” ಎಂದು ಅವನು ಹೇಳಿದನು. (ಯೋಹಾನ 7:16) ಮತ್ತೊಂದು ಸಂದರ್ಭದಲ್ಲಿ ಅವನು, “ನನ್ನ ಸ್ವಪ್ರೇರಣೆಯಿಂದ ನಾನು ಏನೂ ಮಾಡದೆ ತಂದೆಯು ಕಲಿಸಿಕೊಟ್ಟಂತೆಯೇ ಈ ಎಲ್ಲ ವಿಷಯಗಳನ್ನು ಮಾತಾಡುತ್ತೇನೆ” ಎಂದು ತಿಳಿಸಿದನು. (ಯೋಹಾನ 8:28) ಅಷ್ಟೇ ಅಲ್ಲ, “ನಾನು ನಿಮಗೆ ಹೇಳುವ ವಿಷಯಗಳನ್ನು ಸ್ವಪ್ರೇರಣೆಯಿಂದ ಮಾತಾಡುವುದಿಲ್ಲ; ನನ್ನೊಂದಿಗೆ ಐಕ್ಯದಿಂದಿರುವ ತಂದೆಯು ತನ್ನ ಕ್ರಿಯೆಗಳನ್ನು ನಡಿಸುತ್ತಿದ್ದಾನೆ” ಎಂದು ಸಹ ಹೇಳಿದನು. (ಯೋಹಾನ 14:10) ಯೇಸು ತನ್ನ ಈ ಹೇಳಿಕೆಗಳ ಸತ್ಯತೆಯನ್ನು ರುಜುಪಡಿಸಿದ ಒಂದು ವಿಧ, ದೇವರ ಲಿಖಿತ ವಾಕ್ಯವನ್ನು ಪದೇ ಪದೇ ಉಲ್ಲೇಖಿಸುವ ಮೂಲಕವೇ ಆಗಿತ್ತು.

6, 7. (ಎ) ಯೇಸು ಎಷ್ಟು ವಿಸ್ತೃತವಾಗಿ ಹೀಬ್ರು ಶಾಸ್ತ್ರಗ್ರಂಥದಿಂದ ಉಲ್ಲೇಖಿಸಿದನು? ಅದೇಕೆ ಸಾಧಾರಣ ವಿಷಯವಲ್ಲ? (ಬಿ) ಶಾಸ್ತ್ರಿಗಳ ಬೋಧನೆಗಿಂತ ಯೇಸುವಿನ ಬೋಧನೆ ಯಾವ ರೀತಿಯಲ್ಲಿ ಭಿನ್ನವಾಗಿತ್ತು?

6 ಹೀಬ್ರು ಶಾಸ್ತ್ರಗ್ರಂಥದಲ್ಲಿರುವ ಅರ್ಧಕ್ಕಿಂತಲೂ ಹೆಚ್ಚು ಪುಸ್ತಕಗಳಿಂದ ಯೇಸು ನೇರವಾಗಿ ಇಲ್ಲವೇ ಪರೋಕ್ಷವಾಗಿ ಉಲ್ಲೇಖಿಸಿದನು ಎಂಬುದನ್ನು ದಾಖಲಾಗಿರುವ ಯೇಸುವಿನ ಮಾತುಗಳ ಸೂಕ್ಷ್ಮ ಅಧ್ಯಯನವು ತೋರಿಸಿಕೊಡುತ್ತದೆ. ಅದೇನು ಮಹಾ ಸಂಗತಿಯಲ್ಲ, ಯೇಸು ತನ್ನ ಮೂರೂವರೆ ವರ್ಷಗಳ ಸಾರ್ವಜನಿಕ ಬೋಧನೆ ಮತ್ತು ಸಾರುವ ಕೆಲಸದಲ್ಲಿ ಆ ಸಮಯದಲ್ಲಿ ಲಭ್ಯವಿದ್ದ ಎಲ್ಲ ಪ್ರೇರಿತ ಪುಸ್ತಕಗಳಿಂದ ಉಲ್ಲೇಖಿಸಬಹುದಿತ್ತು ಎಂದು ನೀವು ಹೇಳಬಹುದು. ಆದರೆ ವಾಸ್ತವದಲ್ಲಿ, ಅವನು ಎಲ್ಲ ಪುಸ್ತಕಗಳಿಂದ ಉಲ್ಲೇಖಿಸಿರುವ ಸಾಧ್ಯತೆಯೂ ಇದೆ. ಯೇಸು ಆಡಿದ ಮಾತುಗಳಲ್ಲಿ ಮತ್ತು ಮಾಡಿದ ಕಾರ್ಯಗಳಲ್ಲಿ ದಾಖಲಾಗಿರುವುದು ಬರೀ ಅಲ್ಪವಷ್ಟೇ ಎಂಬುದು ನೆನಪಿರಲಿ. (ಯೋಹಾನ 21:25) ನಿಜ ಹೇಳಬೇಕೆಂದರೆ, ದಾಖಲಾಗಿರುವ ಯೇಸುವಿನ ಎಲ್ಲ ಮಾತುಗಳನ್ನು ನೀವು ಕೇವಲ ಕೆಲವೇ ತಾಸುಗಳಲ್ಲಿ ಓದಿಮುಗಿಸಬಹುದು. ಈಗ ಇದನ್ನು ತುಸು ಯೋಚಿಸಿ! ದೇವರ ಕುರಿತು ಮತ್ತು ಆತನ ರಾಜ್ಯದ ಕುರಿತು ಕೆಲವೇ ತಾಸು ಮಾತಾಡುವ ಅವಕಾಶ ನಿಮಗೆ ಕೊಡಲಾಗಿದೆ. ಆ ಅಲ್ಪ ಅವಧಿಯಲ್ಲಿ, ಹೀಬ್ರು ಶಾಸ್ತ್ರಗ್ರಂಥದಲ್ಲಿರುವ ಅರ್ಧಕ್ಕಿಂತಲೂ ಹೆಚ್ಚು ಪುಸ್ತಕಗಳಿಂದ ಉಲ್ಲೇಖಿಸುವುದು ನಿಮ್ಮಿಂದ ಸಾಧ್ಯವೋ? ಮಾತ್ರವಲ್ಲ, ಹೆಚ್ಚಿನ ಸಂದರ್ಭಗಳಲ್ಲಿ ಯೇಸುವಿನ ಬಳಿ ಲಿಖಿತ ಸುರುಳಿಗಳಿರಲಿಲ್ಲ. ಸುಪ್ರಸಿದ್ಧವಾದ ತನ್ನ ಪರ್ವತ ಪ್ರಸಂಗವನ್ನು ಅವನು ನೀಡಿದಾಗ ಹಲವಾರು ಬಾರಿ, ನೇರವಾಗಿ ಮತ್ತು ಪರೋಕ್ಷವಾಗಿ ಹೀಬ್ರು ಶಾಸ್ತ್ರವಚನಗಳನ್ನು ಅವನು ಉಲ್ಲೇಖಿಸಿದನು. ಸುರುಳಿ ನೋಡಿಯೋ? ಇಲ್ಲ, ಜ್ಞಾಪಕಶಕ್ತಿಯಿಂದ!

7 ಯೇಸು ದೇವರ ವಾಕ್ಯವನ್ನು ಪದೇ ಪದೇ ಉಲ್ಲೇಖಿಸಿದ್ದು, ಅವನಿಗೆ ಅದರ ಕಡೆಗೆ ತುಂಬ ಪೂಜ್ಯಭಾವವಿತ್ತು ಎಂಬುದನ್ನು ತೋರಿಸಿಕೊಟ್ಟಿತು. ಅವನ ಸಭಿಕರು, “ಅವನು ಬೋಧಿಸುವ ರೀತಿಯನ್ನು ಕಂಡು ಅತ್ಯಾಶ್ಚರ್ಯಪಟ್ಟರು. ಏಕೆಂದರೆ ಅವನು ಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಿದ್ದವನಂತೆ ಬೋಧಿಸುತ್ತಿದ್ದನು.” (ಮಾರ್ಕ 1:22) ಶಾಸ್ತ್ರಿಗಳು ಬೋಧಿಸುವಾಗ, ಹಳೆಯ ಕಾಲದ ರಬ್ಬಿಗಳ ಮಾತುಗಳನ್ನು ಹಾಗೂ ಮೌಖಿಕ ನಿಯಮಗಳನ್ನು ಉಲ್ಲೇಖಿಸಲು ಇಷ್ಟಪಡುತ್ತಿದ್ದರು. ಯೇಸು ಒಮ್ಮೆಯೂ ಮೌಖಿಕ ನಿಯಮವನ್ನಾಗಲಿ ಯಾವುದೇ ರಬ್ಬಿಯ ಮಾತನ್ನಾಗಲಿ ಉಲ್ಲೇಖಿಸಲಿಲ್ಲ. ಬದಲಿಗೆ ದೇವರ ವಾಕ್ಯವನ್ನು ಮಾತ್ರವೇ ಆಧಾರ ಗ್ರಂಥವಾಗಿ ಉಪಯೋಗಿಸಿದನು. ಪದೇ ಪದೇ ಅವನು “ಎಂದು ಬರೆದಿದೆ” ಎಂಬದಾಗಿ ಹೇಳಿರುವುದನ್ನು ನಾವು ಕಾಣಬಹುದು. ಜನರಿಗೆ ಕಲಿಸುವಾಗ ಮತ್ತು ಅವರ ಅಭಿಪ್ರಾಯಗಳನ್ನು ತಿದ್ದುವಾಗ ಅವನು ಪುನಃ ಪುನಃ ಇಂಥ ಪದಗಳನ್ನು ಉಪಯೋಗಿಸಿದನು.

8, 9. (ಎ) ಯೇಸು ದೇವಾಲಯವನ್ನು ಶುದ್ಧಪಡಿಸಿದಾಗ ದೇವರ ವಾಕ್ಯದ ವರ್ಚಸ್ಸನ್ನು ಹೇಗೆ ಎತ್ತಿ ಹಿಡಿದನು? (ಬಿ) ದೇವಾಲಯದಲ್ಲಿ ಧಾರ್ಮಿಕ ಮುಖಂಡರು ಯಾವ ರೀತಿಯಲ್ಲಿ ದೇವರ ವಾಕ್ಯಕ್ಕೆ ತುಂಬ ಅಗೌರವ ತೋರಿಸಿದರು?

8 ಯೇಸು ಯೆರೂಸಲೇಮಿನಲ್ಲಿದ್ದ ದೇವಾಲಯವನ್ನು ಶುದ್ಧಗೊಳಿಸಿದಾಗ, “‘ನನ್ನ ಆಲಯವು ಪ್ರಾರ್ಥನಾ ಮಂದಿರವೆನಿಸಿಕೊಳ್ಳುವುದು’ ಎಂದು ಬರೆದಿದೆ. ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡುತ್ತಿದ್ದೀರಿ” ಎಂದು ಹೇಳಿದನು. (ಮತ್ತಾಯ 21:12, 13; ಯೆಶಾಯ 56:7; ಯೆರೆಮೀಯ 7:11) ಒಂದು ದಿನ ಮುಂಚೆಯಷ್ಟೇ ಅವನು ಅಲ್ಲಿ ಅನೇಕ ಅದ್ಭುತಗಳನ್ನು ನಡೆಸಿದ್ದನು. ಅದನ್ನು ಕಂಡು ಪ್ರಭಾವಿತರಾದ ಮಕ್ಕಳು ಅವನನ್ನು ಹೊಗಳತೊಡಗಿದರು. ಇದರಿಂದ ಕುಪಿತರಾದ ಧಾರ್ಮಿಕ ಮುಖಂಡರು ಮಕ್ಕಳು ಹೇಳುತ್ತಿರುವುದು ಅವನಿಗೆ ಕೇಳುತ್ತಿದೆಯೋ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಯೇಸು, “ಹೌದು. ‘ಶಿಶುಗಳ ಬಾಯಿಂದಲೂ ಮೊಲೆಕೂಸುಗಳ ಬಾಯಿಂದಲೂ ಸ್ತುತಿಯನ್ನು ಸಿದ್ಧಿಗೆ ತಂದಿದ್ದೀ’ ಎಂಬುದನ್ನು ನೀವು ಎಂದೂ ಓದಲಿಲ್ಲವೇ?” ಎಂದುತ್ತರಿಸುತ್ತಾನೆ. (ಮತ್ತಾಯ 21:16; ಕೀರ್ತನೆ 8:2) ಅಲ್ಲಿ ನಡೆಯುತ್ತಿರುವುದನ್ನು ದೇವರ ವಾಕ್ಯವು ಅನುಮೋದಿಸುತ್ತದೆ ಎಂಬುದನ್ನು ಆ ಜನರು ತಿಳಿದುಕೊಳ್ಳಬೇಕೆಂಬುದೇ ಯೇಸುವಿನ ಬಯಕೆಯಾಗಿತ್ತು.

9 ಆ ಧಾರ್ಮಿಕ ಮುಖಂಡರು ಎರಡು ದಿನಗಳ ನಂತರ ಒಟ್ಟಾಗಿ ಯೇಸುವಿನ ಬಳಿ ಬಂದು, “ನೀನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೀ?” ಎಂದು ತಗಾದೆ ಮಾಡುತ್ತಾರೆ. (ಮತ್ತಾಯ 21:23) ತನ್ನ ಅಧಿಕಾರದ ಮೂಲವನ್ನು ಯೇಸು ಈಗಾಗಲೇ ಬಹಳಷ್ಟು ಸಲ ತಿಳಿಸಿದ್ದನು. ಅವನು ಒಂದು ಹೊಸ ತತ್ತ್ವವನ್ನು ರೂಪಿಸುತ್ತಾ ಹೊಸ ವಿಚಾರಗಳನ್ನು ಬೋಧಿಸುತ್ತಿರಲಿಲ್ಲ. ತನ್ನ ತಂದೆಯ ಪ್ರೇರಿತ ವಾಕ್ಯವು ಏನನ್ನು ತಿಳಿಸಿತೋ ಅದನ್ನು ಅನ್ವಯಿಸುತ್ತಿದ್ದನಷ್ಟೇ. ಹಾಗಾದರೆ, ಆ ಯಾಜಕರು ಮತ್ತು ಶಾಸ್ತ್ರಿಗಳು ಯೆಹೋವನಿಗೂ ಆತನ ವಾಕ್ಯಕ್ಕೂ ತುಂಬ ಅಗೌರವ ತೋರಿಸುತ್ತಿದ್ದರು. ಆದ್ದರಿಂದ, ಯೇಸು ಅವರ ಕೆಟ್ಟ ಇರಾದೆಗಳನ್ನು ಬಯಲುಪಡಿಸಿ ಅವರನ್ನು ಖಂಡಿಸಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ.—ಮತ್ತಾಯ 21:23-46.

10. ದೇವರ ವಾಕ್ಯವನ್ನು ಉಪಯೋಗಿಸುವುದರಲ್ಲಿ ನಾವು ಯೇಸುವನ್ನು ಹೇಗೆ ಅನುಕರಿಸಬಹುದು? ಯೇಸುವಿಗೆ ಲಭ್ಯವಿರದಿದ್ದ ಯಾವ ಸಹಾಯಕಗಳು ನಮ್ಮ ಬಳಿ ಇವೆ?

10 ಯೇಸುವಿನಂತೆ, ಇಂದು ನಿಜ ಕ್ರೈಸ್ತರು ಶುಶ್ರೂಷೆಯಲ್ಲಿ ದೇವರ ವಾಕ್ಯದ ಮೇಲೆ ಪೂರ್ಣವಾಗಿ ಆತುಕೊಳ್ಳುತ್ತಾರೆ. ಯೆಹೋವನ ಸಾಕ್ಷಿಗಳು ಯಾವಾಗಲೂ ಬೈಬಲಿನಿಂದ ಸಂದೇಶ ತಿಳಿಸಲು ಉತ್ಸುಕರಾಗಿರುತ್ತಾರೆ ಎಂಬುದು ಲೋಕದಾದ್ಯಂತ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ನಮ್ಮ ಪ್ರಕಾಶನಗಳು ಬೈಬಲ್‌ ವಚನಗಳನ್ನು ಧಾರಾಳವಾಗಿ ಉಲ್ಲೇಖಿಸುತ್ತವೆ. ನಮ್ಮ ಶುಶ್ರೂಷೆಯಲ್ಲೂ ನಾವು ಅದನ್ನೇ ಮಾಡುತ್ತೇವೆ. ಜನರೊಂದಿಗೆ ಮಾತಾಡುವಾಗಲೆಲ್ಲ ಶಾಸ್ತ್ರಗ್ರಂಥವನ್ನು ಬಳಸಲು ಪ್ರಯತ್ನಿಸುತ್ತೇವೆ. (2 ತಿಮೊಥೆಯ 3:16) ಬೈಬಲಿನಿಂದ ವಾಕ್ಯಗಳನ್ನು ಓದಿ ತಿಳಿಸುವಂತೆ ಮತ್ತು ದೇವರ ವಾಕ್ಯದ ಮೌಲ್ಯ ಹಾಗೂ ಅರ್ಥವನ್ನು ಚರ್ಚಿಸುವಂತೆ ಯಾರಾದರೂ ಅನುಮತಿಸುವಾಗ ನಮಗೆಷ್ಟು ಖುಷಿಯಾಗುತ್ತದೆ! ಯೇಸುವಿನಂತೆ ಪರಿಪೂರ್ಣವಾದ ಜ್ಞಾಪಕಶಕ್ತಿ ನಮಗಿಲ್ಲ. ಆದರೆ, ಯೇಸುವಿಗೆ ಲಭ್ಯವಿರದಿದ್ದ ಅನೇಕ ಸಹಾಯಕಗಳು ನಮ್ಮ ಬಳಿ ಇವೆ. ಹೆಚ್ಚೆಚ್ಚು ಭಾಷೆಗಳಲ್ಲಿ ಸಂಪೂರ್ಣ ಬೈಬಲ್‌ ಲಭ್ಯವಾಗುತ್ತಿರುವುದರ ಜೊತೆಗೆ ಯಾವುದೇ ಬೈಬಲ್‌ ವಚನವನ್ನು ಕ್ಷಣಮಾತ್ರದಲ್ಲಿ ಕಂಡುಕೊಳ್ಳಲು ಸಹಾಯಮಾಡುವ ಅನೇಕ ಬೈಬಲ್‌ ಸಹಾಯಕಗಳು ಸಹ ನಮ್ಮ ಬಳಿ ಇವೆ. ಆದ್ದರಿಂದ ನಾವು, ಪ್ರತಿಯೊಂದು ಸಂದರ್ಭದಲ್ಲೂ ಶಾಸ್ತ್ರವಚನಗಳನ್ನು ಉಲ್ಲೇಖಿಸುತ್ತಾ ಜನರ ಗಮನವನ್ನು ಬೈಬಲಿನೆಡೆಗೆ ತಿರುಗಿಸುವ ನಿರ್ಧಾರ ಉಳ್ಳವರಾಗಿರೋಣ.

ದೇವರ ವಾಕ್ಯದ ಸಮರ್ಥನೆ

11. ದೇವರ ವಾಕ್ಯವನ್ನು ಯೇಸು ಆಗಾಗ ಸಮರ್ಥಿಸಬೇಕಾಯಿತು ಏಕೆ?

11 ದೇವರ ವಾಕ್ಯ ಆಗಾಗ ಖಂಡನೆಗೆ ಒಳಗಾಗುತ್ತಿದ್ದುದನ್ನು ಯೇಸು ನೋಡಿದನು. ಆದರೆ, ಅವನೇನೂ ಅದಕ್ಕೆ ಆಶ್ಚರ್ಯಪಡಲಿಲ್ಲ. ಯೇಸು ತಂದೆಯ ಬಳಿ ಪ್ರಾರ್ಥಿಸುತ್ತಾ, “ನಿನ್ನ ವಾಕ್ಯವೇ ಸತ್ಯವು” ಎಂದು ಹೇಳಿದನು. (ಯೋಹಾನ 17:17) ಸೈತಾನನು “ಈ ಲೋಕದ ಅಧಿಪತಿ” ಮತ್ತು “ಅವನು ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ” ಎಂಬ ವಿಷಯವು ಯೇಸುವಿಗೆ ಚೆನ್ನಾಗಿ ತಿಳಿದಿತ್ತು. (ಯೋಹಾನ 8:44; 14:30) ಸೈತಾನನು ಒಡ್ಡಿದ ಪ್ರಲೋಭನೆಗಳನ್ನು ನಿಭಾಯಿಸುವಾಗ ಯೇಸು ಮೂರು ಸಲ ಶಾಸ್ತ್ರವಚನಗಳನ್ನು ಉಲ್ಲೇಖಿಸಿದನು. ಸೈತಾನನು ಕೀರ್ತನೆಗಳಿಂದ ಒಂದು ವಚನವನ್ನು ತಿಳಿಸಿ, ಬೇಕೆಂದೇ ತಪ್ಪಾಗಿ ಅನ್ವಯಿಸಿದನು. ಆದರೆ ಯೇಸು ದೇವರ ವಾಕ್ಯವನ್ನು ಸಮರ್ಥಿಸುತ್ತಾ ಅವನಿಗೆ ಉತ್ತರಕೊಟ್ಟನು.—ಮತ್ತಾಯ 4:6, 7.

12-14. (ಎ) ಮೋಶೆಯ ಧರ್ಮಶಾಸ್ತ್ರಕ್ಕೆ ಧಾರ್ಮಿಕ ಮುಖಂಡರು ಯಾವ ರೀತಿಯಲ್ಲಿ ಅಗೌರವ ತೋರಿಸಿದರು? (ಬಿ) ಯೇಸು ದೇವರ ವಾಕ್ಯವನ್ನು ಹೇಗೆ ಸಮರ್ಥಿಸಿದನು?

12 ಪವಿತ್ರ ಶಾಸ್ತ್ರಗಳನ್ನು ಇತರರು ತಪ್ಪಾಗಿ ಅನ್ವಯಿಸಿ ದುರುಪಯೋಗ ಮಾಡಿದಾಗೆಲ್ಲ ಯೇಸು ಸುಮ್ಮನಿರಲಿಲ್ಲ, ದೇವರ ವಾಕ್ಯವನ್ನು ಸಮರ್ಥಿಸಿದನು. ಅವನ ಕಾಲದಲ್ಲಿದ್ದ ಧಾರ್ಮಿಕ ಮುಖಂಡರು ದೇವರ ವಾಕ್ಯವನ್ನು ಸರಿಯಾಗಿ ಬೋಧಿಸಲಿಲ್ಲ. ಮೋಶೆಯ ಧರ್ಮಶಾಸ್ತ್ರದಲ್ಲಿದ್ದ ಸಣ್ಣಪುಟ್ಟ ವಿವರಗಳಿಗೆ ಅವರು ಅಗತ್ಯ ಮೀರಿ ಒತ್ತುನೀಡಿದರು. ಆದರೆ, ಅದರ ನಿಯಮಗಳಿಗೆ ಆಧಾರವಾಗಿದ್ದ ಮೂಲತತ್ತ್ವಗಳನ್ನು ಅನ್ವಯಿಸುವುದರತ್ತ ಅವರು ಕಿಂಚಿತ್ತೂ ಗಮನಕೊಡಲಿಲ್ಲ. ಹೀಗೆ ಅವರು ಬಾಹ್ಯ ವಿಷಯಗಳಿಗೆ ಹೆಚ್ಚು ಗಮನ ನೀಡಿ ಪೊಳ್ಳಾದ ಆರಾಧನೆಗೆ ಒತ್ತುಕೊಟ್ಟರೇ ವಿನಃ ಅದರಲ್ಲಿ ಒಳಗೂಡಿದ್ದ ನ್ಯಾಯ, ಕರುಣೆ ಮತ್ತು ನಂಬಿಗಸ್ತಿಕೆಯಂಥ ಪ್ರಮುಖ ವಿಷಯಗಳಿಗೆ ಒತ್ತುಕೊಡಲಿಲ್ಲ. (ಮತ್ತಾಯ 23:23) ಯೇಸು ಹೇಗೆ ದೇವರ ವಾಕ್ಯವನ್ನು ಸಮರ್ಥಿಸಿದನು?

13 ತನ್ನ ಪರ್ವತ ಪ್ರಸಂಗದಲ್ಲಿ ಯೇಸು ಮೋಶೆಯ ಧರ್ಮಶಾಸ್ತ್ರದ ಕಟ್ಟಳೆಗಳ ಕುರಿತು ತಿಳಿಸುವಾಗ, “. . . ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ” ಎಂಬ ಮಾತನ್ನು ಪದೇ ಪದೇ ಬಳಸಿದನು. ಅನಂತರ ಅವನು “ಆದರೆ ನಾನು ನಿಮಗೆ ಹೇಳುವುದೇನೆಂದರೆ” ಎಂದು ಮಾತನ್ನು ಮುಂದುವರಿಸುತ್ತಿದ್ದನು. ಮತ್ತು ಧರ್ಮಶಾಸ್ತ್ರದಲ್ಲಿರುವ ನಿಯಮಗಳಿಗೆ ಅಗತ್ಯಕ್ಕಿಂತ ಹೆಚ್ಚು ಒತ್ತುಕೊಡುವ ಬದಲು ಆ ನಿಯಮಗಳ ಹಿಂದಿದ್ದ ಮೂಲತತ್ತ್ವವನ್ನು ವಿವರಿಸುತ್ತಿದ್ದನು. ಯೇಸು ಧರ್ಮಶಾಸ್ತ್ರಕ್ಕೆ ವಿರೋಧವಾಗಿ ಮಾತಾಡುತ್ತಿದ್ದನೋ? ಖಂಡಿತ ಇಲ್ಲ, ಅವನದನ್ನು ಸಮರ್ಥಿಸುತ್ತಿದ್ದನು. ಉದಾಹರಣೆಯೊಂದನ್ನು ತೆಗೆದುಕೊಳ್ಳಿ. “ನರಹತ್ಯ ಮಾಡಬಾರದು” ಎಂಬ ನಿಯಮ ಜನರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ, ಯೇಸು ಅವರಿಗೆ, ಒಬ್ಬನನ್ನು ಹಗೆಮಾಡುವುದು ಆ ನಿಯಮದ ಇಂಗಿತವನ್ನೇ ಉಲ್ಲಂಘಿಸುವುದೆಂದು ಹೇಳಿದನು. ಹಾಗೆಯೇ ತನ್ನ ಸಂಗಾತಿಯಲ್ಲದ ವ್ಯಕ್ತಿಯೆಡೆಗೆ ಕಾಮೋದ್ರೇಕಭಾವ ಹೊಂದಿರುವುದು, ವ್ಯಭಿಚಾರವನ್ನು ಖಂಡಿಸುವ ದೈವಿಕ ನಿಯಮದ ಹಿಂದಿರುವ ಮೂಲತತ್ತ್ವದ ಬುಡಕ್ಕೆ ಕೊಡಲಿ ಹಾಕಿದಂತಿರುವುದು.—ಮತ್ತಾಯ 5:17, 18, 21, 22, 27-39.

14 ಯೇಸು ಕೊನೆಗೆ ಹೇಳಿದ್ದು: “‘ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ದ್ವೇಷಿಸಬೇಕು’ ಎಂದು ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ. ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ; ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸುತ್ತಾ ಇರಿ.” (ಮತ್ತಾಯ 5:43, 44) ಇಲ್ಲಿ, “ನಿನ್ನ ವೈರಿಯನ್ನು ದ್ವೇಷಿಸಬೇಕು” ಎಂಬ ಆಜ್ಞೆ ದೇವರ ವಾಕ್ಯದಿಂದ ತೆಗೆಯಲ್ಪಟ್ಟದ್ದೋ? ಇಲ್ಲ, ಇದು ಧಾರ್ಮಿಕ ಮುಖಂಡರು ಸ್ವತಃ ರೂಪಿಸಿ ಬೋಧಿಸಿದ ಆಜ್ಞೆಯಾಗಿತ್ತು. ಅವರು ಮಾನವ ಆಲೋಚನೆಯನ್ನು ಬೆರೆಸಿ ಪರಿಪೂರ್ಣವಾಗಿದ್ದ ದೇವರ ಧರ್ಮಶಾಸ್ತ್ರದ ಮೌಲ್ಯವನ್ನು ಕಡಿಮೆಗೊಳಿಸಿದರು. ಯೇಸುವಾದರೋ ದೇವರ ವಾಕ್ಯವನ್ನು ಧೈರ್ಯದಿಂದ ಸಮರ್ಥಿಸುತ್ತಾ ಮಾನವ ಸಂಪ್ರದಾಯಗಳ ಹಾನಿಕರ ಪ್ರಭಾವದಿಂದ ಅದನ್ನು ಸಂರಕ್ಷಿಸಿದನು.—ಮಾರ್ಕ 7:9-13.

15. ಧಾರ್ಮಿಕ ಮುಖಂಡರು ದೇವರ ಧರ್ಮಶಾಸ್ತ್ರದ ನಿಯಮಗಳು ಅತಿ ಕಟ್ಟುನಿಟ್ಟಾಗಿವೆ ಹಾಗೂ ಭಾರವಾಗಿವೆ ಎಂಬಂತೆ ಬಿಂಬಿಸಲು ಯತ್ನಿಸಿದಾಗ ಯೇಸು ಹೇಗೆ ದೇವರ ವಾಕ್ಯವನ್ನು ಸಮರ್ಥಿಸಿದನು?

15 ಧಾರ್ಮಿಕ ಮುಖಂಡರು, ದೇವರ ಧರ್ಮಶಾಸ್ತ್ರದ ನಿಯಮಗಳು ಅತಿ ಕಟ್ಟುನಿಟ್ಟಾಗಿವೆ ಹಾಗೂ ತುಂಬಾ ಭಾರವಾಗಿವೆ ಎಂಬಂತೆ ಬಿಂಬಿಸುವ ಮೂಲಕವೂ ಅದನ್ನು ದೂಷಣೆಗೆ ಒಳಪಡಿಸಿದರು. ಒಮ್ಮೆ ಯೇಸುವಿನ ಶಿಷ್ಯರು ಹೊಲದ ಮೂಲಕ ಹಾದುಹೋಗುತ್ತಿದ್ದಾಗ, ಕೆಲವು ತೆನೆಗಳನ್ನು ಕಿತ್ತುಕೊಂಡರು. ಕೂಡಲೇ ಕೆಲವು ಫರಿಸಾಯರು, ಶಿಷ್ಯರು ಸಬ್ಬತ್‌ ದಿನದ ನಿಯಮವನ್ನು ಉಲ್ಲಂಘಿಸಿದರೆಂದು ಆರೋಪಿಸಿದರು. ಅವರ ಈ ಸಂಕುಚಿತ ನೋಟವನ್ನು ತಪ್ಪೆಂದು ತೋರಿಸಲಿಕ್ಕಾಗಿ ಯೇಸು ಶಾಸ್ತ್ರವಚನಗಳಲ್ಲಿದ್ದ ಉದಾಹರಣೆಯೊಂದನ್ನು ಉಪಯೋಗಿಸುತ್ತಾ ದೇವರ ವಾಕ್ಯವನ್ನು ಸಮರ್ಥಿಸಿದನು. ಯಾಜಕರು ಹೊರತು ಮತ್ತಾರಿಗೂ ತಿನ್ನಲು ಸಮ್ಮತವಲ್ಲದ ನೈವೇದ್ಯದ ರೊಟ್ಟಿಗಳನ್ನು ದಾವೀದ ಮತ್ತು ಅವನ ಸಂಗಡಿಗರು ತೆಗೆದು ತಿಂದ ಘಟನೆಯ ಕುರಿತಾಗಿ ಧರ್ಮಶಾಸ್ತ್ರದಲ್ಲಿದ್ದ ಒಂದೇ ಒಂದು ಉಲ್ಲೇಖವನ್ನು ಅವನು ಬಳಸಿದನು. ಈ ಮೂಲಕ ಯೆಹೋವನ ಕರುಣೆ ಮತ್ತು ಅನುಕಂಪವನ್ನು ಆ ಫರಿಸಾಯರು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂಬುದನ್ನು ತೋರಿಸಿಕೊಟ್ಟನು.—ಮಾರ್ಕ 2:23-27.

16. ವಿಚ್ಛೇದನದ ಕುರಿತು ತಿಳಿಸಲಾದ ಮೋಶೆಯ ಆಜ್ಞೆಯನ್ನು ಧಾರ್ಮಿಕ ಮುಖಂಡರು ಹೇಗೆ ಬದಲಾಯಿಸಿಕೊಂಡರು? ಅದಕ್ಕೆ ಯೇಸು ಹೇಗೆ ಪ್ರತಿಕ್ರಿಯಿಸಿದನು?

16 ಧಾರ್ಮಿಕ ಮುಖಂಡರು ಕುಂಟುನೆವಗಳನ್ನು ಬಳಸುತ್ತಾ ದೇವರ ಧರ್ಮಶಾಸ್ತ್ರದ ಪ್ರಭಾವಗುಂದಿಸಲಿಕ್ಕಾಗಿ ಒಳಸಂಚು ಹೂಡಿದರು. ಉದಾಹರಣೆಗೆ, ಗಂಡನು ತನ್ನ ಹೆಂಡತಿಯಲ್ಲಿ “ಏನೋ ಅವಲಕ್ಷಣವನ್ನು” ಕಂಡರೆ ಆಕೆಗೆ ವಿಚ್ಛೇದನ ನೀಡಬಹುದೆಂದು ಧರ್ಮಶಾಸ್ತ್ರ ತಿಳಿಸಿತ್ತು. ಖಂಡಿತವಾಗಿಯೂ ಇಲ್ಲಿ ತಿಳಿಸಲಾಗಿರುವ ಅವಲಕ್ಷಣ, ಕುಟುಂಬದವರಿಗೆ ಅವಮಾನ ತರುವಂಥ ಗಂಭೀರ ವಿಷಯವಾಗಿತ್ತು. (ಧರ್ಮೋಪದೇಶಕಾಂಡ 24:1) ಆದರೆ, ಅದನ್ನೇ ಧಾರ್ಮಿಕ ಮುಖಂಡರು ಒಂದು ನೆವವಾಗಿ ತೆಗೆದುಕೊಂಡು ಬಿಟ್ಟಿದ್ದರು. ಯೇಸುವಿನ ಸಮಯದಷ್ಟಕ್ಕೆಲ್ಲ, ಕ್ಷುಲ್ಲಕ ಕಾರಣಗಳಿಗೆ—ಅಕಸ್ಮಾತ್‌ ಅಡುಗೆ ಸ್ವಲ್ಪ ಸೀದು ಹೋದರೂ—ವಿಚ್ಛೇದನ ನೀಡಲು ಅವರು ಅನುಮತಿಸುತ್ತಿದ್ದರು! * ಮೋಶೆ ಪ್ರೇರಿತನಾಗಿ ಬರೆದ ಮಾತುಗಳನ್ನು ಆ ಮುಖಂಡರು ತುಂಬಾ ತಪ್ಪಾಗಿ ಅನ್ವಯಿಸುತ್ತಿದ್ದರು ಎಂಬುದನ್ನು ಯೇಸು ಬಹಿರಂಗಪಡಿಸಿದನು. ಅನಂತರ ಅವನು ವಿವಾಹದ ಕುರಿತು ಆರಂಭದಲ್ಲಿದ್ದ ಯೆಹೋವನ ಮಟ್ಟವನ್ನು ಅಂದರೆ ಏಕಪತ್ನೀತ್ವವನ್ನು ಪುನಃಸ್ಥಾಪಿಸಿ, ವಿಚ್ಛೇದನಕ್ಕಿರುವ ಏಕಮಾತ್ರ ಯೋಗ್ಯ ಕಾರಣ ಹಾದರ ಮಾತ್ರವೇ ಎಂದು ಹೇಳಿದನು.—ಮತ್ತಾಯ 19:3-12.

17. ದೇವರ ವಾಕ್ಯವನ್ನು ಸಮರ್ಥಿಸುವ ವಿಷಯದಲ್ಲಿ ಕ್ರೈಸ್ತರು ಇಂದು ಯೇಸುವನ್ನು ಹೇಗೆ ಅನುಕರಿಸಬಹುದು?

17 ಇಂದು ಕ್ರಿಸ್ತನ ಹಿಂಬಾಲಕರು ಸಹ ಪವಿತ್ರ ಶಾಸ್ತ್ರಗ್ರಂಥವು ದೂಷಣೆಗೆ ಗುರಿಯಾಗುವಾಗ ದೇವರ ವಾಕ್ಯವನ್ನು ಸಮರ್ಥಿಸುತ್ತಾರೆ. ದೇವರ ವಾಕ್ಯದಲ್ಲಿರುವ ನೈತಿಕ ಮಟ್ಟಗಳು ಓಬೀರಾಯನ ಕಾಲದವು, ಈಗ ಪ್ರಯೋಜನಕ್ಕೆ ಬಾರವು ಎಂದು ಹೇಳುವ ಮೂಲಕ ಧಾರ್ಮಿಕ ಮುಖಂಡರು ಬೈಬಲಿನ ಮೌಲ್ಯವನ್ನು ಗೌಣವಾಗಿಸುತ್ತಿದ್ದಾರೆ. ಧರ್ಮಗಳು ಸುಳ್ಳನ್ನು ಬೋಧಿಸಿ ಅದು ಬೈಬಲಿನ ಉಪದೇಶವೆಂದು ಹೇಳುವಾಗಲೂ ಬೈಬಲ್‌ ದೂಷಣೆಗೆ ಗುರಿಯಾಗುತ್ತದೆ. ದೇವರ ವಾಕ್ಯದ ಪವಿತ್ರ ಸತ್ಯವನ್ನು ಸಮರ್ಥಿಸುವುದು ನಮ್ಮ ಪಾಲಿನ ಸುಯೋಗವೆಂದು ನಾವೆಣಿಸುತ್ತೇವೆ. ಉದಾಹರಣೆಗೆ, ದೇವರು ತ್ರಯೈಕ್ಯದ ಭಾಗವಲ್ಲವೆಂದು ನಾವು ತೋರಿಸುತ್ತೇವೆ. (ಧರ್ಮೋಪದೇಶಕಾಂಡ 4:39) ಆದರೆ ನಾವದನ್ನು ಸೌಮ್ಯಭಾವ ಹಾಗೂ ಆಳವಾದ ಗೌರವ ತೋರಿಸುತ್ತಾ ಜಾಣ್ಮೆಯಿಂದ ಮಾಡುತ್ತೇವೆ.—1 ಪೇತ್ರ 3:15.

ದೇವರ ವಾಕ್ಯದ ವಿವರಣೆ

18, 19. ದೇವರ ವಾಕ್ಯದ ಅರ್ಥವಿವರಣೆ ನೀಡುವ ಅಸಾಮಾನ್ಯ ಸಾಮರ್ಥ್ಯ ಯೇಸುವಿಗಿತ್ತು ಎಂಬುದನ್ನು ಯಾವ ಉದಾಹರಣೆ ತೋರಿಸುತ್ತದೆ?

18 ಹೀಬ್ರು ಶಾಸ್ತ್ರಗಳು ಬರೆಯಲ್ಪಡುತ್ತಿದ್ದಾಗ ಯೇಸು ಸ್ವರ್ಗದಲ್ಲಿದ್ದನು. ಭೂಮಿಗೆ ಬಂದು ದೇವರ ವಾಕ್ಯವನ್ನು ವಿವರಿಸುವ ಅವಕಾಶ ಲಭಿಸಿದಾಗ ಅವನಿಗೆ ಎಂಥ ಮಹಾದಾನಂದ ಆಗಿದ್ದಿರಬೇಕು! ಉದಾಹರಣೆಗೆ, ಅವನ ಪುನರುತ್ಥಾನವಾದ ನಂತರ ನಡೆದ ಘಟನೆಯೊಂದರ ಕುರಿತು ಸ್ವಲ್ಪ ಯೋಚಿಸಿ. ಅವನ ಇಬ್ಬರು ಶಿಷ್ಯರು ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಿದ್ದಾಗ ದಾರಿಯಲ್ಲಿ ಅವರನ್ನು ಅವನು ಭೇಟಿಯಾಗುತ್ತಾನೆ. ಅವನು ಯಾರೆಂದು ಅವರಿಗೆ ಮೊದಲು ಗುರುತು ಸಿಗದೆ, ತಮ್ಮ ಮೆಚ್ಚಿನ ನಾಯಕನ ಮರಣದಿಂದ ತಮಗಾದ ದುಃಖದುಮ್ಮಾನವನ್ನು ಅವನಲ್ಲಿ ತೋಡಿಕೊಳ್ಳುತ್ತಾರೆ. ಅದಕ್ಕೆ ಯೇಸುವಿನ ಪ್ರತಿಕ್ರಿಯೆ ಹೇಗಿತ್ತು? ಅವನು, “ಮೋಶೆಯ ಮತ್ತು ಎಲ್ಲ ಪ್ರವಾದಿಗಳ ಗ್ರಂಥದಿಂದ ಆರಂಭಿಸಿ, ಶಾಸ್ತ್ರಗ್ರಂಥದಾದ್ಯಂತ ತನ್ನ ಕುರಿತು ತಿಳಿಸಲ್ಪಟ್ಟಿರುವ ವಿಷಯಗಳನ್ನು ಅವರಿಗೆ ವಿವರಿಸಿದನು.” ಅದು ಅವರ ಮೇಲೆ ಯಾವ ಪ್ರಭಾವ ಬೀರಿತು? ಅವರು ಪರಸ್ಪರ, “ಅವನು ದಾರಿಯಲ್ಲಿ ನಮ್ಮೊಂದಿಗೆ ಮಾತಾಡುತ್ತಿದ್ದಾಗಲೂ ನಮಗೆ ಶಾಸ್ತ್ರಗ್ರಂಥವನ್ನು ಸಂಪೂರ್ಣವಾಗಿ ವಿವರಿಸಿ ಹೇಳುತ್ತಿದ್ದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ?” ಎಂದು ಮಾತಾಡಿಕೊಂಡರು.—ಲೂಕ 24:15-32.

19 ಬಳಿಕ ಅದೇ ದಿನ ಯೇಸು ತನ್ನ ಅಪೊಸ್ತಲರನ್ನು ಹಾಗೂ ಇತರರನ್ನು ಭೇಟಿಯಾದನು. ಅವರಿಗಾಗಿ ಅವನು ಏನು ಮಾಡಿದನೆಂದು ತುಸು ಗಮನಿಸಿ: ‘ಆಮೇಲೆ ಅವನು ಶಾಸ್ತ್ರಗ್ರಂಥದ ಅರ್ಥವನ್ನು ಗ್ರಹಿಸುವಂತೆ ಅವರ ಮನಸ್ಸುಗಳನ್ನು ಪೂರ್ಣವಾಗಿ ತೆರೆದನು.’ (ಲೂಕ 24:45) ಅವರಿಗಾಗಿ ಮತ್ತು ಇತರ ಕೇಳುಗರಿಗಾಗಿ ಎಷ್ಟೋ ಸಲ ಅವನು ಹೀಗೆ ಮಾಡಿದ್ದನು. ಆ ಹರ್ಷಮಯ ಸಂದರ್ಭಗಳನ್ನು ಇದು ಅವರ ನೆನಪಿಗೆ ತಂದಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಅವನು ಎಷ್ಟೋ ಸಲ ಚಿರಪರಿಚಿತವಾದ ವಚನಗಳನ್ನು ಉಲ್ಲೇಖಿಸಿ ಅವುಗಳ ಅರ್ಥವನ್ನು ವಿವರಿಸಿದನು. ಅವನ ವಿವರಣೆಯು ಹೇಗಿತ್ತೆಂದರೆ, ಚಿರಪರಿಚಿತ ವಚನಗಳಾದರೂ ಅವು ಪ್ರತಿ ಬಾರಿ ಕೇಳುಗರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತಿದ್ದವು. ಅವರು ದೇವರ ವಾಕ್ಯದಿಂದ ಹೊಸದಾದ ಮತ್ತು ಗಹನವಾದ ವಿಚಾರಗಳನ್ನು ಕಲಿತುಕೊಳ್ಳುತ್ತಿದ್ದರು.

20, 21. ಉರಿಯುವ ಪೊದೆಯ ಬಳಿ ಯೆಹೋವನು ಮೋಶೆಗೆ ಹೇಳಿದ ಮಾತುಗಳನ್ನು ಯೇಸು ಯಾವ ರೀತಿಯಲ್ಲಿ ವಿವರಿಸಿದನು?

20 ಒಂದು ಸಂದರ್ಭದಲ್ಲಿ, ಯೇಸು ಸದ್ದುಕಾಯರ ಗುಂಪಿನೊಂದಿಗೆ ಮಾತಾಡುತ್ತಿದ್ದನು. ಈ ಸದ್ದುಕಾಯರು ಯೆಹೂದ್ಯರ ಒಂದು ಪಂಗಡವಾಗಿದ್ದು ಅದರ ಯಾಜಕ ವರ್ಗದೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಅವರು ಪುನರುತ್ಥಾನವನ್ನು ನಂಬುತ್ತಿರಲಿಲ್ಲ. ಯೇಸು ಅವರಿಗೆ, “ಸತ್ತವರ ಪುನರುತ್ಥಾನದ ವಿಷಯದಲ್ಲಿ, ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೊ? ಆತನು ಸತ್ತವರಿಗಲ್ಲ, ಜೀವಿತರಿಗೆ ದೇವರಾಗಿದ್ದಾನೆ” ಎಂದು ಹೇಳಿದನು. (ಮತ್ತಾಯ 22:31, 32) ಈ ಶಾಸ್ತ್ರವಚನ ಅವರಿಗೆ ಸುಪರಿಚಿತವಾಗಿತ್ತು. ಸದ್ದುಕಾಯರು ಬಹಳವಾಗಿ ಗೌರವಿಸುತ್ತಿದ್ದ ಮೋಶೆಯೇ ಅದನ್ನು ಬರೆದಿದ್ದನು. ಯೇಸುವಿನ ಅರ್ಥವಿವರಣೆಯ ಶೈಲಿಯಲ್ಲಿರುವ ಪ್ರಭಾವವನ್ನು ನೀವು ಊಹಿಸಬಲ್ಲಿರೋ?

21 ಕ್ರಿ.ಪೂ. 1514ರ ಸುಮಾರಿಗೆ ಮೋಶೆ, ಉರಿಯುವ ಪೊದೆಯ ಬಳಿ ಯೆಹೋವನೊಂದಿಗೆ ಮಾತಾಡಿದ್ದನು. (ವಿಮೋಚನಕಾಂಡ 3:2, 6) ಆ ಸಮಯದಷ್ಟಕ್ಕೆ ಅಬ್ರಹಾಮನು ಮರಣಪಟ್ಟು 329 ವರ್ಷಗಳು, ಇಸಾಕನು ಮರಣಪಟ್ಟು 224 ಮತ್ತು ಯಾಕೋಬನು ಮರಣಪಟ್ಟು 197 ವರ್ಷಗಳು ಸಂದಿದ್ದವು. ಹಾಗಿದ್ದರೂ ಯೆಹೋವನು, “ನಾನು” ಅವರಿಗೆ ದೇವರಾಗಿದ್ದೇನೆ ಎಂದು ಹೇಳಿದನು. ಯೆಹೋವನು, ಕಾಲ್ಪನಿಕ ಪಾತಾಳಲೋಕವನ್ನು ಆಳುವ ಸತ್ತವರ ವಿಧರ್ಮಿ ದೇವನಲ್ಲ ಎಂಬುದು ಆ ಸದ್ದುಕಾಯರಿಗೆ ಚೆನ್ನಾಗಿ ತಿಳಿದಿತ್ತು. ಹೌದು, ಯೇಸು ಹೇಳಿದಂತೆ, ಯೆಹೋವನು “ಜೀವಿತರಿಗೆ ದೇವರಾಗಿದ್ದಾನೆ.” ಹಾಗಾದರೆ, ಯೇಸುವಿನ ತರ್ಕವೇನಾಗಿತ್ತು? ಅವನು ಹೇಳಿದ್ದು: “ಅವರೆಲ್ಲರೂ ಆತನಿಗೆ ಜೀವಿಸುವವರೇ.” (ಲೂಕ 20:38) ಯೆಹೋವನ ನೆಚ್ಚಿನ ಸೇವಕರು ಮರಣಪಟ್ಟರೂ ಆತನ ಅಪರಿಮಿತ ಹಾಗೂ ಮಾಸದ ಸ್ಮರಣೆಯಲ್ಲಿ ಸುರಕ್ಷಿತವಾಗಿರುವರು. ಅಂಥವರನ್ನು ಪುನರುತ್ಥಾನಗೊಳಿಸುವ ಯೆಹೋವನ ಉದ್ದೇಶ ಎಷ್ಟು ನಿಶ್ಚಿತವೆಂದರೆ, ಅವರು ಜೀವಂತವಾಗಿದ್ದಾರೋ ಎಂಬಂತೆ ಬಿಂಬಿಸಲಾಗಿದೆ. (ರೋಮನ್ನರಿಗೆ 4:16, 17) ದೇವರ ವಾಕ್ಯದ ಕುರಿತ ಅಸಾಮಾನ್ಯ ವಿವರಣೆ ಇದಾಗಿಲ್ಲವೇ? “ಜನರ ಗುಂಪುಗಳು . . . ಅತ್ಯಾಶ್ಚರ್ಯಪಟ್ಟ”ದ್ದರಲ್ಲಿ ಕೌತುಕವಿಲ್ಲ!—ಮತ್ತಾಯ 22:33.

22, 23. (ಎ) ದೇವರ ವಾಕ್ಯವನ್ನು ವಿವರಿಸುವ ವಿಷಯದಲ್ಲಿ ನಾವು ಯೇಸುವನ್ನು ಹೇಗೆ ಅನುಕರಿಸಬಹುದು? (ಬಿ) ಮುಂದಿನ ಅಧ್ಯಾಯದಲ್ಲಿ ನಾವು ಏನನ್ನು ಪರಿಗಣಿಸಲಿರುವೆವು?

22 ದೇವರ ವಾಕ್ಯವನ್ನು ಯೇಸು ವಿವರಿಸಿದಂಥ ರೀತಿಯನ್ನು ಅನುಕರಿಸುವ ಸುಯೋಗ ಇಂದು ಕ್ರೈಸ್ತರಿಗಿದೆ. ನಮಗೆ ಪರಿಪೂರ್ಣ ಜ್ಞಾಪಕಶಕ್ತಿ ಇಲ್ಲ ನಿಜ. ಆದರೂ, ಜನರಿಗೆ ಈಗಾಗಲೇ ತಿಳಿದಿರುವ ವಚನದ ಕುರಿತು ನಾವು ಮಾತಾಡಬಹುದು ಮತ್ತು ಆ ವಚನದಲ್ಲಿ ಅವರು ಇಷ್ಟರವರೆಗೆ ಪರಿಗಣಿಸದ ಸತ್ಯಾಂಶಗಳನ್ನು ಅವರಿಗೆ ವಿವರಿಸಬಹುದು. ಉದಾಹರಣೆಗೆ, ಅವರು ತಮ್ಮ ಜೀವಮಾನವಿಡೀ “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ” ಎಂದು ಪುನರುಚ್ಛರಿಸಿರಬಹುದು. ಆದರೆ ಅವರಿಗೆ ದೇವರ ನಾಮವಾಗಲಿ ಆತನ ರಾಜ್ಯ ಏನೆಂಬುದಾಗಲಿ ತಿಳಿದಿರಲಿಕ್ಕಿಲ್ಲ. (ಮತ್ತಾಯ 6:9, 10, BSI) ಅಂಥ ಬೈಬಲ್‌ ಸತ್ಯಗಳನ್ನು ಸ್ಪಷ್ಟವಾಗಿಯೂ ಸರಳವಾಗಿಯೂ ವಿವರಿಸಲು ಯಾರಾದರೂ ಅವಕಾಶಕೊಡುವಾಗ ಅದು ನಿಜಕ್ಕೂ ಸುಯೋಗವಾಗಿರುತ್ತದಲ್ಲವೇ?

23 ದೇವರ ವಾಕ್ಯದಿಂದ ಉಲ್ಲೇಖಿಸುವುದು, ಅದನ್ನು ಸಮರ್ಥಿಸುವುದು ಮತ್ತು ಅದನ್ನು ವಿವರಿಸುವುದು, ಸತ್ಯವನ್ನು ಇತರರೊಂದಿಗೆ ಹಂಚಿಕೊಂಡ ಯೇಸುವಿನ ವಿಧಾನವನ್ನು ಅನುಕರಿಸಲು ಇರುವ ಕೀಲಿಕೈಗಳಾಗಿವೆ. ಮುಂದಿನ ಅಧ್ಯಾಯದಲ್ಲಿ, ಮನಸ್ಪರ್ಶಿಸುವಂಥ ರೀತಿಯಲ್ಲಿ ಯೇಸು ತನ್ನ ಕೇಳುಗರಿಗೆ ಬೈಬಲ್‌ ಸತ್ಯಗಳನ್ನು ಕಲಿಸಿದ ಕೆಲವು ಪರಿಣಾಮಕಾರಿ ವಿಧಾನಗಳನ್ನು ಪರಿಗಣಿಸಲಿದ್ದೇವೆ.

^ ಪ್ಯಾರ. 16 “ಕಾರಣ ಯಾವುದಾದರೂ ಸರಿಯೇ (ಅಂಥ ಅನೇಕ ಕಾರಣಗಳನ್ನು ಹೊಂದಿರುವುದಾಗಿ ಪುರುಷರು ಹೇಳಿಕೊಳ್ಳುತ್ತಿದ್ದರು)” ವಿಚ್ಛೇದನ ನೀಡಬಹುದಾಗಿತ್ತು ಎಂದು ಒಂದನೆಯ ಶತಮಾನದ ಇತಿಹಾಸಕಾರ ಜೋಸಿಫಸ್‌ ತಿಳಿಸುತ್ತಾನೆ. ಅವನೂ ವಿಚ್ಛೇದನ ಪಡೆದಿದ್ದ ಒಬ್ಬ ಫರಿಸಾಯನಾಗಿದ್ದನು.