ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 12

“ದೃಷ್ಟಾಂತವನ್ನು ಉಪಯೋಗಿಸದೆ ಅವನೆಂದೂ ಅವರೊಂದಿಗೆ ಮಾತಾಡುತ್ತಿರಲಿಲ್ಲ”

“ದೃಷ್ಟಾಂತವನ್ನು ಉಪಯೋಗಿಸದೆ ಅವನೆಂದೂ ಅವರೊಂದಿಗೆ ಮಾತಾಡುತ್ತಿರಲಿಲ್ಲ”

1-3. (ಎ) ಯೇಸುವಿನೊಂದಿಗಿದ್ದ ಶಿಷ್ಯರಿಗೆ ಯಾವ ಅಪೂರ್ವ ಸುಯೋಗವಿತ್ತು? ತಾನು ಬೋಧಿಸುತ್ತಿದ್ದ ವಿಷಯಗಳನ್ನು ಅವರು ಸುಲಭವಾಗಿ ನೆನಪಿಡಸಾಧ್ಯವಾಗುವಂತೆ ಯೇಸು ಏನು ಮಾಡಿದನು? (ಬಿ) ಒಳ್ಳೆಯ ದೃಷ್ಟಾಂತಗಳನ್ನು ಸುಲಭವಾಗಿ ನೆನಪಿಸಿಕೊಳ್ಳಬಹುದು ಏಕೆ?

ಯೇಸುವಿನೊಂದಿಗಿದ್ದ ಶಿಷ್ಯರಿಗೆ ಒಂದು ಅಪೂರ್ವ ಸುಯೋಗವಿತ್ತು. ಸ್ವತಃ ಮಹಾ ಬೋಧಕನಿಂದ ಅವರು ಕಲಿತುಕೊಳ್ಳುತ್ತಿದ್ದರು. ದೇವರ ವಾಕ್ಯದಿಂದ ರೋಮಾಂಚಕ ಸತ್ಯಗಳನ್ನು ಅವನು ವಿವರಿಸುತ್ತಿದ್ದುದನ್ನು ಅವರು ತಮ್ಮ ಕಿವಿಯಾರೆ ಕೇಳಸಾಧ್ಯವಿತ್ತು. ಅವನ ಆ ಅಮೂಲ್ಯ ಮಾತುಗಳನ್ನೆಲ್ಲ ಸದ್ಯಕ್ಕೆ ಅವರು ತಮ್ಮ ಹೃದಮನಗಳಲ್ಲೇ ಬರೆದಿಡಬೇಕಿತ್ತು. ಏಕೆಂದರೆ, ಅವನ ಮಾತುಗಳನ್ನು ಲಿಖಿತ ರೂಪದಲ್ಲಿ ಬರೆದಿಡುವ ಸಮಯ ಇನ್ನೂ ಬಂದಿರಲಿಲ್ಲ. * ಹಾಗಾಗಿ, ತನ್ನ ಬೋಧನೆಗಳನ್ನು ಅವರು ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಯೇಸು ನೋಡಿಕೊಂಡನು. ಅದು ಹೇಗೆ? ತಾನು ಕಲಿಸಿದ ವಿಧದಿಂದಲೇ, ವಿಶೇಷವಾಗಿ ನೈಪುಣ್ಯದಿಂದ ದೃಷ್ಟಾಂತಗಳನ್ನು ಉಪಯೋಗಿಸುವ ಮೂಲಕ.

2 ಒಳ್ಳೆಯ ದೃಷ್ಟಾಂತಗಳು ಅಷ್ಟು ಸುಲಭವಾಗಿ ಮನಸ್ಸಿನಿಂದ ಮಾಸಿಹೋಗಲಾರವು. ಒಬ್ಬ ಸಾಹಿತಿ ಹೇಳುವಂತೆ, ದೃಷ್ಟಾಂತಗಳು “ಕಿವಿಗಳನ್ನು ಕಣ್ಣುಗಳಾಗಿ ಮಾರ್ಪಡಿಸುತ್ತವೆ” ಮತ್ತು ಹೀಗೆ ಅವು “ಕೇಳುಗರು ವಿಷಯಗಳನ್ನು ಮುಕ್ತವಾಗಿ ತಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವಂತೆ ಮಾಡುತ್ತವೆ.” ಸಾಮಾನ್ಯವಾಗಿ ವಿಷಯಗಳನ್ನು ನಾವು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವಾಗ ಅವು ಚೆನ್ನಾಗಿ ಅರ್ಥವಾಗುತ್ತವೆ. ಹಾಗಾಗಿ ದೃಷ್ಟಾಂತಗಳು ಕಷ್ಟಕರವಾದ ವಿಚಾರಗಳನ್ನು ಸಹ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಸಹಾಯ ಮಾಡುತ್ತವೆ. ದೃಷ್ಟಾಂತಗಳು ಮಾತುಗಳಿಗೆ ಜೀವ ತುಂಬಬಲ್ಲವು. ಕಲಿತ ಪಾಠಗಳನ್ನು ನಮ್ಮ ನೆನಪಿನಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡಬಲ್ಲವು.

3 ಭೂಮಿಯಲ್ಲಿ ಯಾವ ಬೋಧಕನೂ ಯೇಸು ಕ್ರಿಸ್ತನಷ್ಟು ನೈಪುಣ್ಯದಿಂದ ದೃಷ್ಟಾಂತಗಳನ್ನು ಉಪಯೋಗಿಸಲಾರ. ಅವನ ದೃಷ್ಟಾಂತಗಳನ್ನು ಇಂದಿಗೂ ಸುಲಭವಾಗಿ ನೆನಪಿಸಿಕೊಳ್ಳಬಹುದು. ಯೇಸು ಈ ಬೋಧನಾ ವಿಧಾನವನ್ನು ಏಕೆ ಹೆಚ್ಚಾಗಿ ಉಪಯೋಗಿಸಿದನು? ಅವನ ದೃಷ್ಟಾಂತಗಳು ಅಷ್ಟೊಂದು ಪರಿಣಾಮಕಾರಿಯಾಗಿರಲು ಕಾರಣವೇನು? ಈ ಬೋಧನಾ ವಿಧಾನವನ್ನು ಬಳಸಲು ನಾವು ಹೇಗೆ ಕಲಿಯಬಹುದು?

ಬೋಧನೆಯಲ್ಲಿ ಯೇಸು ದೃಷ್ಟಾಂತಗಳನ್ನು ಬಳಸಿದ ಕಾರಣ

4, 5. ಯೇಸು ದೃಷ್ಟಾಂತಗಳನ್ನು ಏಕೆ ಬಳಸಿದನು?

4 ಯೇಸು ದೃಷ್ಟಾಂತಗಳನ್ನು ಬಳಸಿರುವುದಕ್ಕೆ ಬೈಬಲ್‌ ಎರಡು ಮುಖ್ಯ ಕಾರಣಗಳನ್ನು ಕೊಡುತ್ತದೆ. ಮೊದಲನೆಯದಾಗಿ, ಅವನು ಹಾಗೆ ಮಾಡಿದ್ದು ಪ್ರವಾದನೆಯ ನೆರವೇರಿಕೆಯಾಗಿತ್ತು. ಮತ್ತಾಯ 13:34, 35​ರಲ್ಲಿ ನಾವು ಹೀಗೆ ಓದುತ್ತೇವೆ: “ಎಲ್ಲ ವಿಷಯಗಳನ್ನು ಯೇಸು ಜನರಿಗೆ ದೃಷ್ಟಾಂತಗಳ ಮೂಲಕ ತಿಳಿಸಿದನು. ವಾಸ್ತವದಲ್ಲಿ, ದೃಷ್ಟಾಂತವನ್ನು ಉಪಯೋಗಿಸದೆ ಅವನೆಂದೂ ಅವರೊಂದಿಗೆ ಮಾತಾಡುತ್ತಿರಲಿಲ್ಲ. ಹೀಗೆ ಪ್ರವಾದಿಯ ಮೂಲಕ ತಿಳಿಸಲ್ಪಟ್ಟ ಮಾತು ನೆರವೇರುವಂತಾಯಿತು. ಅದೇನೆಂದರೆ, ‘ನಾನು ದೃಷ್ಟಾಂತಗಳ ಮೂಲಕ ಮಾತಾಡುವೆನು; ಲೋಕಾದಿಯಿಂದ ಮರೆಯಾಗಿಡಲ್ಪಟ್ಟಿರುವ ವಿಷಯಗಳನ್ನು ಪ್ರಕಟಪಡಿಸುವೆನು.’” ಇಲ್ಲಿ ಮತ್ತಾಯನು ತಿಳಿಸಿದ ಪ್ರವಾದಿಯು ಕೀರ್ತನೆ 78:2​ರ ಲೇಖಕನಾಗಿದ್ದನು. ಆ ಕೀರ್ತನೆಗಾರನು ಯೇಸು ಜನಿಸುವ ನೂರಾರು ವರ್ಷಗಳ ಮುಂಚೆಯೇ ದೇವಪ್ರೇರಣೆಯಿಂದ ಇದನ್ನು ಬರೆದಿದ್ದನು. ಅಂದರೆ, ಮೆಸ್ಸೀಯನು ದೃಷ್ಟಾಂತಗಳ ಮೂಲಕ ಕಲಿಸುತ್ತಾನೆ ಎಂಬುದನ್ನು ನೂರಾರು ವರ್ಷಗಳ ಮೊದಲೇ ಯೆಹೋವನು ನಿಶ್ಚಯಿಸಿದ್ದನು. ಹಾಗಾದರೆ, ಈ ಬೋಧನಾ ವಿಧಾನವನ್ನು ಯೆಹೋವನು ತುಂಬಾ ಮಾನ್ಯಮಾಡುತ್ತಾನೆ ಎಂದಾಯಿತು.

5 ಎರಡನೆಯದಾಗಿ, ಯಾರ ‘ಹೃದಯವು ಕೊಬ್ಬಿದೆಯೋ’ ಅಂಥವರನ್ನು ಕಂಡುಹಿಡಿಯಲಿಕ್ಕಾಗಿ ತಾನು ದೃಷ್ಟಾಂತಗಳನ್ನು ಉಪಯೋಗಿಸಿದೆನೆಂದು ಯೇಸು ವಿವರಿಸಿದನು. (ಮತ್ತಾಯ 13:10-15; ಯೆಶಾಯ 6:9, 10) ಜನರ ಹೃದಯದಲ್ಲಿ ಏನಿದೆಯೆಂಬುದನ್ನು ಅವನ ದೃಷ್ಟಾಂತಗಳು ಹೊರಗೆಡವಿದ್ದು ಹೇಗೆ? ಕೆಲವೊಂದು ವಿದ್ಯಮಾನಗಳಲ್ಲಿ, ಜನರು ತನ್ನ ಮಾತಿನ ಅರ್ಥವನ್ನು ಪೂರ್ಣವಾಗಿ ತಿಳಿದುಕೊಳ್ಳಲಿಕ್ಕಾಗಿ ವಿವರಗಳನ್ನು ಕೇಳಲೆಂದು ಯೇಸು ದೃಷ್ಟಾಂತಗಳನ್ನು ಉಪಯೋಗಿಸಿದನು. ದೀನ ಜನರು ಸಿದ್ಧಮನಸ್ಸಿನಿಂದ ಕೇಳಿ ತಿಳಿದುಕೊಂಡರು. ಆದರೆ, ಅಹಂಕಾರಿಗಳು ಅಥವಾ ತಾತ್ಸಾರ ಮನೋಭಾವದವರು ಕೇಳಲಿಲ್ಲ. (ಮತ್ತಾಯ 13:36; ಮಾರ್ಕ 4:34) ಹೀಗೆ, ಯೇಸುವಿನ ದೃಷ್ಟಾಂತಗಳು, ಯಾರು ಸತ್ಯಕ್ಕಾಗಿ ನಿಜವಾಗಿಯೂ ಹಸಿದಿದ್ದರೋ ಅವರಿಗೆ ಅದನ್ನು ಪ್ರಕಟಿಸಿದವು. ಆದರೆ, ಅಹಂಕಾರಿಗಳಿಂದ ಸತ್ಯವನ್ನು ಮರೆಮಾಚಿದವು.

6. ಯೇಸುವಿನ ದೃಷ್ಟಾಂತಗಳು ಇತರ ಯಾವ ಉದ್ದೇಶಗಳನ್ನು ಪೂರೈಸಿದವು?

6 ಯೇಸುವಿನ ದೃಷ್ಟಾಂತಗಳು ಇತರ ಅನೇಕ ಉದ್ದೇಶಗಳನ್ನೂ ಪೂರೈಸಿದವು. ಅವು ಜನರ ಆಸಕ್ತಿಯನ್ನು ಕೆರಳಿಸಿ ಅವರು ಕಿವಿಗೊಡುವಂತೆ ಮಾಡಿದವು. ವಿಷಯಗಳನ್ನು ಸುಲಭವಾಗಿ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವಂತೆಯೂ ಅವುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತೆಯೂ ನೆರವಾದವು. ಈ ಅಧ್ಯಾಯದ ಆರಂಭದಲ್ಲಿ ನಾವು ಗಮನಿಸಿದಂತೆ, ಜನರು ಯೇಸುವಿನ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಅವು ಸಹಾಯ ಮಾಡಿದವು. ಯೇಸು ದೃಷ್ಟಾಂತಗಳನ್ನು ಧಾರಾಳವಾಗಿ ಉಪಯೋಗಿಸಿದ ಒಂದು ಉತ್ತಮ ಉದಾಹರಣೆ ಪರ್ವತ ಪ್ರಸಂಗವಾಗಿದ್ದು, ಇದು ಮತ್ತಾಯ 5:3​ರಿಂದ 7:27​ರಲ್ಲಿ ದಾಖಲಾಗಿದೆ. ಒಂದು ಅಂದಾಜಿಗನುಸಾರ ಈ ಪ್ರಸಂಗದಲ್ಲಿ 50ಕ್ಕಿಂತಲೂ ಹೆಚ್ಚು ‘ಅಲಂಕಾರ’ಗಳಿವೆ. ಇದರ ಮಹತ್ವ ನಮಗೆ ಗೊತ್ತಾಗುತ್ತದೋ? ಈ ಪ್ರಸಂಗವನ್ನು ಕೇವಲ 20 ನಿಮಿಷಗಳಲ್ಲಿ ಗಟ್ಟಿಯಾಗಿ ಓದಿಮುಗಿಸಬಹುದು. ಅಂದರೆ, ಹತ್ತಿರತ್ತಿರ 20 ಸೆಕೆಂಡುಗಳಿಗೆ ಒಮ್ಮೆ ಯೇಸು ಅಲಂಕಾರವನ್ನು ಬಳಸಿದಂತಾಯ್ತು! ದೃಷ್ಟಾಂತಗಳನ್ನು ಉಪಯೋಗಿಸುವ ಮೌಲ್ಯ ಯೇಸುವಿಗೆ ಚೆನ್ನಾಗಿಯೇ ತಿಳಿದಿತ್ತಲ್ಲವೇ!

7. ಯೇಸು ದೃಷ್ಟಾಂತಗಳನ್ನು ಬಳಸಿದ ರೀತಿಯನ್ನು ನಾವು ಏಕೆ ಅನುಕರಿಸಬೇಕು?

7 ಯೇಸುವಿನ ಹಿಂಬಾಲಕರಾದ ನಾವು ದೃಷ್ಟಾಂತಗಳ ಉಪಯೋಗವನ್ನೂ ಸೇರಿಸಿ ಅವನ ಎಲ್ಲ ಬೋಧನಾ ವಿಧಾನಗಳನ್ನು ಅನುಕರಿಸಲು ಬಯಸುತ್ತೇವೆ. ಮಸಾಲೆ ಪದಾರ್ಥಗಳನ್ನು ಬೆರೆಸಿದ ಆಹಾರ ಹೇಗೆ ಬಾಯಲ್ಲಿ ನೀರು ಬರಿಸುತ್ತದೋ, ಹಾಗೆಯೇ ಒಳ್ಳೆಯ ದೃಷ್ಟಾಂತಗಳನ್ನು ನಮ್ಮ ಬೋಧನೆಯಲ್ಲಿ ಬೆರೆಸುವಾಗ ಅವು ಜನರನ್ನು ಆಕರ್ಷಿಸುತ್ತವೆ. ಮಾತ್ರವಲ್ಲ, ಚೆನ್ನಾಗಿ ಯೋಚಿಸಿ ಬಳಸಿದ ದೃಷ್ಟಾಂತಗಳು ಪ್ರಮುಖ ಸತ್ಯಗಳನ್ನು ಸುಲಭಗ್ರಾಹ್ಯವನ್ನಾಗಿ ಮಾಡುತ್ತವೆ. ಯೇಸುವಿನ ದೃಷ್ಟಾಂತಗಳನ್ನು ಅಷ್ಟೊಂದು ಪರಿಣಾಮಕಾರಿಯನ್ನಾಗಿ ಮಾಡಿದ ಕೆಲವು ಅಂಶಗಳನ್ನು ನಾವು ಮೊದಲು ಪರೀಕ್ಷಿಸೋಣ. ಆಗ, ಈ ಅಮೂಲ್ಯ ಬೋಧನಾ ವಿಧಾನವನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆಂದು ತಿಳಿದುಕೊಳ್ಳಲು ನಮಗೆ ಸಾಧ್ಯವಾಗುವುದು.

ಸರಳವಾದ ಹೋಲಿಕೆ

ಯೇಸು ಪಕ್ಷಿಗಳನ್ನೂ ಪುಷ್ಪಗಳನ್ನೂ ಬಳಸಿ ದೇವರು ನಮ್ಮ ಕುರಿತು ಕಾಳಜಿವಹಿಸುತ್ತಾನೆ ಎಂಬುದನ್ನು ಹೇಗೆ ದೃಷ್ಟಾಂತಿಸಿದನು?

8, 9. ಯೇಸು ಸರಳ ಹೋಲಿಕೆಗಳನ್ನು ಹೇಗೆ ಬಳಸಿದನು? ಅವನು ಉಪಯೋಗಿಸಿದ ಹೋಲಿಕೆಗಳು ಏಕೆ ಅಷ್ಟೊಂದು ಪ್ರಭಾವಶಾಲಿಯಾಗಿದ್ದವು?

8 ಯೇಸು ತನ್ನ ಬೋಧನೆಯಲ್ಲಿ ಹೋಲಿಕೆಗಳನ್ನು ಉಪಯೋಗಿಸಿದನು. ಅವು ಜಟಿಲವಾಗಿರದೆ, ಕೆಲವೇ ಕೆಲವು ಶಬ್ದಗಳಿಂದ ಕೂಡಿದ್ದವು. ಆದರೂ, ಆ ಸರಳ ಮಾತುಗಳು ಜನರ ಮನಸ್ಸಿನಲ್ಲಿ ಚಿತ್ರಣಗಳನ್ನು ಮೂಡಿಸಿ ಪ್ರಮುಖ ಆಧ್ಯಾತ್ಮಿಕ ಸತ್ಯಗಳನ್ನು ಸ್ಪಷ್ಟವಾಗಿ ಕಲಿಸಿದವು. ಉದಾಹರಣೆಗೆ, ದಿನನಿತ್ಯದ ಅಗತ್ಯಗಳ ಕುರಿತು ಅನಾವಶ್ಯಕವಾಗಿ ಚಿಂತಿಸಬೇಡಿ ಎಂದು ತನ್ನ ಶಿಷ್ಯರಿಗೆ ಹೇಳುವಾಗ, “ಆಕಾಶದ ಪಕ್ಷಿ” ಮತ್ತು “ಹೊಲದ ಲಿಲಿಹೂವು”ಗಳಿಗೆ ಹೋಲಿಸಿ ಅವನು ಮಾತಾಡಿದನು. ಪಕ್ಷಿಗಳು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಹಾಗೆಯೇ ಲಿಲಿಹೂವುಗಳು ದುಡಿಯುವುದಿಲ್ಲ, ನೂಲುವುದಿಲ್ಲ. ಆದರೂ ದೇವರು ಅವುಗಳನ್ನು ನೋಡಿಕೊಳ್ಳುತ್ತಾನೆ. ಇಲ್ಲಿ ಯೇಸು ಏನು ಹೇಳಲು ಬಯಸುತ್ತಿದ್ದಾನೆಂದು ಸುಲಭವಾಗಿ ಗ್ರಹಿಸಿಬಿಡಬಹುದು. ದೇವರು ಪಕ್ಷಿ, ಹೂವುಗಳನ್ನು ನೋಡಿಕೊಳ್ಳುವುದಾದರೆ, ‘ಮೊದಲು ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರುವ’ ಮಾನವರನ್ನು ಖಂಡಿತವಾಗಿಯೂ ಇನ್ನಷ್ಟು ಚೆನ್ನಾಗಿ ನೋಡಿಕೊಳ್ಳುವನು.—ಮತ್ತಾಯ 6:26, 28-33.

9 ಯೇಸು ರೂಪಕಾಲಂಕಾರಗಳನ್ನು ಧಾರಾಳವಾಗಿ ಬಳಕೆ ಮಾಡಿಕೊಂಡನು. ಅವು ಇನ್ನಷ್ಟು ಪ್ರಭಾವಶಾಲಿಯಾದ ಹೋಲಿಕೆಗಳಾಗಿದ್ದವು. ರೂಪಕಾಲಂಕಾರವೆಂದರೆ, ಒಂದು ವಸ್ತುವನ್ನು ಇನ್ನೊಂದಾಗಿದೆ ಎಂದು ಹೇಳುವುದಾಗಿದೆ. ಯೇಸುವಿನ ಈ ಹೋಲಿಕೆಗಳು ಸಹ ತುಂಬಾ ಸರಳವಾಗಿದ್ದವು. ಒಮ್ಮೆ ಅವನು ತನ್ನ ಶಿಷ್ಯರಿಗೆ, “ನೀವು ಲೋಕದ ಬೆಳಕಾಗಿದ್ದೀರಿ” ಎಂದು ಹೇಳಿದನು. ಯೇಸು ಬಳಸಿದ ಈ ರೂಪಕಾಲಂಕಾರದ ಅರ್ಥವನ್ನು ಗ್ರಹಿಸಲು ಶಿಷ್ಯರಿಗೇನೂ ಕಷ್ಟವಾಗಲಿಲ್ಲ. ತಮ್ಮ ನಡೆನುಡಿಗಳಿಂದ ಆಧ್ಯಾತ್ಮಿಕ ಸತ್ಯದ ಬೆಳಕನ್ನು ಪ್ರಜ್ವಲಿಸಬಹುದು ಮತ್ತು ಹೀಗೆ ದೇವರಿಗೆ ಮಹಿಮೆ ಸಲ್ಲಿಸುವಂತೆ ಇತರರಿಗೆ ನೆರವಾಗಬಹುದು ಎಂಬುದನ್ನು ಅವರು ಚೆನ್ನಾಗಿ ಅರಿತುಕೊಂಡರು. (ಮತ್ತಾಯ 5:14-16) ಯೇಸು ಉಪಯೋಗಿಸಿದ ಇತರ ಕೆಲವು ರೂಪಕಾಲಂಕಾರಗಳು ಹೀಗಿವೆ: “ನೀವು ಭೂಮಿಯ ಉಪ್ಪಾಗಿದ್ದೀರಿ” ಮತ್ತು “ನಾನೇ ದ್ರಾಕ್ಷಿಯ ಬಳ್ಳಿ, ನೀವು ಕೊಂಬೆಗಳು.” (ಮತ್ತಾಯ 5:13; ಯೋಹಾನ 15:5) ಇಂಥ ಅಲಂಕಾರಗಳು ತುಂಬಾ ಸರಳವಾಗಿದ್ದು ಪ್ರಭಾವಶಾಲಿಯಾಗಿವೆ.

10. ನಿಮ್ಮ ಬೋಧನೆಯಲ್ಲಿ ದೃಷ್ಟಾಂತಗಳನ್ನು ಹೇಗೆ ಬಳಸಬಹುದೆಂಬುದನ್ನು ತೋರಿಸುವ ಕೆಲವು ಉದಾಹರಣೆಗಳು ಯಾವುವು?

10 ನೀವು ಬೋಧನೆಯಲ್ಲಿ ದೃಷ್ಟಾಂತಗಳನ್ನು ಹೇಗೆ ಉಪಯೋಗಿಸಬಲ್ಲಿರಿ? ಉದ್ದವಾದ, ಜಟಿಲವಾದ ಕಥೆಗಳನ್ನು ನೀವು ಹೇಳಬೇಕಾಗಿಲ್ಲ. ಸರಳವಾಗಿರುವ ಹೋಲಿಕೆಗಳನ್ನು ತಿಳಿಸಲು ಪ್ರಯತ್ನಿಸಿದರೆ ಸಾಕು. ಉದಾಹರಣೆಗೆ, ಪುನರುತ್ಥಾನದ ವಿಷಯವಾಗಿ ನೀವು ಮಾತಾಡುತ್ತಿದ್ದೀರಿ ಎಂದು ಭಾವಿಸಿಕೊಳ್ಳಿ. ಮೃತರನ್ನು ಜೀವಂತ ಎಬ್ಬಿಸುವುದು ಯೆಹೋವ ದೇವರಿಗೇನೂ ದೊಡ್ಡ ಸಮಸ್ಯೆಯಲ್ಲ ಎಂಬುದನ್ನು ನೀವು ಹೇಳಬಯಸುತ್ತೀರಿ. ಯಾವ ಹೋಲಿಕೆ ನಿಮ್ಮ ಮನಸ್ಸಿಗೆ ಬರುತ್ತದೆ? ಬೈಬಲ್‌ ಮರಣವನ್ನು ರೂಪಕಾಲಂಕಾರವಾಗಿ ನಿದ್ರೆಗೆ ಹೋಲಿಸುತ್ತದೆ. ಆದ್ದರಿಂದ, ‘ನಿದ್ರೆ ಮಾಡುತ್ತಿರುವವರನ್ನು ನಾವು ಸುಲಭವಾಗಿ ಎಬ್ಬಿಸುವಂತೆಯೇ ದೇವರು ಮೃತರನ್ನು ಪುನರುತ್ಥಾನಗೊಳಿಸುವನೆಂದು’ ನೀವು ಹೇಳಬಹುದು. (ಯೋಹಾನ 11:11-14) ಮಕ್ಕಳ ಬೆಳವಣಿಗೆಗೆ ಪ್ರೀತಿ, ಮಮತೆ ಅಗತ್ಯ ಎಂದು ತೋರಿಸಬೇಕೆಂದಿದ್ದೀರಿ ಎಂದಿಟ್ಟುಕೊಳ್ಳಿ. ಯಾವ ಉದಾಹರಣೆಯನ್ನು ಉಪಯೋಗಿಸಬಹುದು? ಬೈಬಲ್‌, “ಮಕ್ಕಳು ಎಣ್ಣೇಮರದ ಸಸಿಗಳಂತಿರುವರು” ಎಂಬ ಹೋಲಿಕೆಯನ್ನು ಉಪಯೋಗಿಸುತ್ತದೆ. (ಕೀರ್ತನೆ 128:3) ಆದ್ದರಿಂದ ನೀವು, ‘ಒಂದು ಮರಕ್ಕೆ ಸೂರ್ಯನ ಬೆಳಕು ಹಾಗೂ ನೀರು ಅಗತ್ಯವಿರುವ ಹಾಗೆ ಮಗುವಿಗೆ ಪ್ರೀತಿ ಮಮತೆ ಅತ್ಯಾವಶ್ಯಕ’ ಎಂದು ಹೇಳಬಹುದು. ಹೋಲಿಕೆಗಳು ಸರಳವಾಗಿದ್ದಷ್ಟು ನಿಮ್ಮ ಕೇಳುಗರು ವಿಷಯವನ್ನು ಸುಲಭವಾಗಿ ಗ್ರಹಿಸಿಕೊಳ್ಳುವರು.

ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ದೃಷ್ಟಾಂತಗಳು

11. ಯೇಸು ಬಾಲ್ಯದ ದಿನಗಳಲ್ಲಿ ಗಲಿಲಾಯದಲ್ಲಿ ಗಮನಿಸಿದ ಸಂಗತಿಗಳು ಅವನ ದೃಷ್ಟಾಂತಗಳಲ್ಲಿ ಬಿಂಬಿತವಾದವು ಎಂಬದಕ್ಕೆ ಉದಾಹರಣೆಗಳನ್ನು ನೀಡಿ.

11 ಜನರ ಬದುಕಿಗೆ ಸಂಬಂಧಿಸಿದ ದೃಷ್ಟಾಂತಗಳನ್ನು ಉಪಯೋಗಿಸುವುದರಲ್ಲಿ ಯೇಸು ನಿಸ್ಸೀಮನಾಗಿದ್ದನು. ಅವನ ಅನೇಕ ದೃಷ್ಟಾಂತಗಳು ದಿನನಿತ್ಯದ ಬದುಕನ್ನು ಬಿಂಬಿಸುತ್ತಿದ್ದವು. ಇವುಗಳನ್ನು ಅವನು ಬಹುಶಃ ಗಲಿಲಾಯದಲ್ಲಿ ಬಾಲ್ಯ ಕಳೆದಾಗ ಗಮನಿಸಿದ್ದಿರಬೇಕು. ಅವನ ಬಾಲ್ಯದ ದಿನಗಳ ಕುರಿತು ತುಸು ಯೋಚಿಸಿ. ತನ್ನ ತಾಯಿ ಬೀಸುವ ಕಲ್ಲಿನಲ್ಲಿ ಹಿಟ್ಟು ಮಾಡಿದ್ದು, ಹಿಟ್ಟಿಗೆ ಹುಳಿ ಸೇರಿಸಿದ್ದು, ದೀಪ ಹೊತ್ತಿಸಿದ್ದು, ಮನೆಗುಡಿಸಿದ್ದು ಇತ್ಯಾದಿಗಳನ್ನೆಲ್ಲಾ ಅವನು ಎಷ್ಟೋ ಸಲ ನೋಡಿರಬೇಕು. (ಮತ್ತಾಯ 13:33; 24:41; ಲೂಕ 15:8) ಬೆಸ್ತರು ತಮ್ಮ ಬಲೆಗಳನ್ನು ಗಲಿಲಾಯ ಸಮುದ್ರದಲ್ಲಿ ಇಳಿಬಿಟ್ಟದ್ದನ್ನು ಸಹ ಅವನು ಅನೇಕ ಸಲ ನೋಡಿದ್ದಿರಬೇಕು. (ಮತ್ತಾಯ 13:47) ಅದೇ ರೀತಿ, ಎಷ್ಟೋ ಸಲ ಮಕ್ಕಳು ಮಾರುಕಟ್ಟೆಗಳಲ್ಲಿ ಆಟವಾಡುತ್ತಿದ್ದುದನ್ನು ಗಮನಿಸಿದ್ದಿರಬೇಕು. (ಮತ್ತಾಯ 11:16) ಬೀಜ ಬಿತ್ತನೆ, ವಿವಾಹೋತ್ಸವ, ಬಿಸಿಲಿಗೆ ಮಾಗಿ ನಿಂತ ಹೊಲದ ತೆನೆಗಳು ಇಂತಹ ದಿನನಿತ್ಯ ಜೀವನಕ್ಕೆ ಸಂಬಂಧಿಸಿದ ಸಂಗತಿಗಳನ್ನು ಅವನು ಕಣ್ಣಾರೆ ಕಂಡಿದ್ದನು. ಹಾಗಾಗಿಯೇ ತನ್ನ ದೃಷ್ಟಾಂತಗಳಲ್ಲಿ ಅವುಗಳನ್ನು ಬಳಸಿದನು.—ಮತ್ತಾಯ 13:3-8; 25:1-12; ಮಾರ್ಕ 4:26-29.

12, 13. ದಯಾಪರ ಸಮಾರ್ಯದವನ ಸಾಮ್ಯದಲ್ಲಿ, “ಯೆರೂಸಲೇಮಿನಿಂದ ಇಳಿದು ಯೆರಿಕೋವಿಗೆ” ಹೋಗುವ ದಾರಿಯ ಕುರಿತು ಯೇಸು ಹೇಳಿದ್ದು ಗಮನಾರ್ಹವಾಗಿದೆ ಏಕೆ?

12 ಯೇಸು ತನ್ನ ದೃಷ್ಟಾಂತಗಳಲ್ಲಿ, ಜನರಿಗೆ ಚಿರಪರಿಚಿತವಾಗಿದ್ದ ವಿವರಗಳನ್ನು ಬಳಸಿದನು. ಉದಾಹರಣೆಗೆ, ದಯಾಪರ ಸಮಾರ್ಯದವನ ಸಾಮ್ಯವನ್ನು ಅವನು ಆರಂಭಿಸಿದ್ದು: “ಒಬ್ಬ ಮನುಷ್ಯನು ಯೆರೂಸಲೇಮಿನಿಂದ ಇಳಿದು ಯೆರಿಕೋವಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನನ್ನು ಸುಲಿಗೆಮಾಡಿ, ಚೆನ್ನಾಗಿ ಹೊಡೆದು ಅರೆಜೀವಮಾಡಿ ಬಿಟ್ಟುಹೋದರು.” (ಲೂಕ 10:30) ಇಲ್ಲಿ ಯೇಸು, “ಯೆರೂಸಲೇಮಿನಿಂದ ಇಳಿದು ಯೆರಿಕೋವಿಗೆ” ಹೋಗುವ ದಾರಿಯ ಕುರಿತು ಹೇಳಿದ್ದು ಗಮನಾರ್ಹವಾಗಿತ್ತು. ಏಕೆಂದರೆ, ಈ ಸಾಮ್ಯವನ್ನು ಹೇಳುವಾಗ ಯೇಸು ಯೆರೂಸಲೇಮಿನ ಪಕ್ಕದಲ್ಲೇ ಇರುವ ಯೂದಾಯದಲ್ಲಿದ್ದನು. ಹಾಗಾಗಿ ಆ ದಾರಿಯ ಬಗ್ಗೆ ಅಲ್ಲಿದ್ದ ಜನರಿಗೆ ಚೆನ್ನಾಗಿಯೇ ತಿಳಿದಿತ್ತು. ಆ ದಾರಿ ಅಪಾಯಕಾರಿಯಾಗಿತ್ತು. ಅದರಲ್ಲೂ ಒಬ್ಬರೇ ಹೋಗುವುದು ಆಪತ್ತಿಗೆ ಎಡೆಮಾಡಿಕೊಡುತ್ತಿತ್ತು. ಅದು ಅನೇಕ ತಿರುವುಮುರುವುಗಳನ್ನು ಹೊಂದಿದ್ದು ನಿರ್ಜನವಾಗಿತ್ತು ಮತ್ತು ಕಳ್ಳಕಾಕರಿಗೆ ಹೊಂಚುಹಾಕಲು ಅನುವುಮಾಡಿಕೊಟ್ಟಿತ್ತು.

13 “ಯೆರೂಸಲೇಮಿನಿಂದ ಇಳಿದು ಯೆರಿಕೋವಿಗೆ” ಹೋಗುವ ದಾರಿಯ ಕುರಿತು ಇನ್ನಿತರ ಚಿರಪರಿಚಿತ ವಿವರಗಳನ್ನು ಯೇಸು ತನ್ನ ಸಾಮ್ಯದಲ್ಲಿ ತಿಳಿಸಿದನು. ಆ ಸಾಮ್ಯಕ್ಕನುಸಾರ, ಮೊದಲು ಒಬ್ಬ ಯಾಜಕ, ನಂತರ ಒಬ್ಬ ಲೇವಿಯ ಆ ದಾರಿಯಾಗಿ ಬಂದರು. ಆದರೆ ಅವರಿಬ್ಬರು ಸಹ ಗಾಯಾಳುವನ್ನು ವಿಚಾರಿಸುವ ಗೊಡವೆಗೂ ಹೋಗಲಿಲ್ಲ. (ಲೂಕ 10:31, 32) ಯಾಜಕರು ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು ಮತ್ತು ಲೇವಿಯರು ಅವರಿಗೆ ಸಹಾಯಮಾಡುತ್ತಿದ್ದರು. ಅನೇಕ ಯಾಜಕರ ಮತ್ತು ಲೇವಿಯರ ಮನೆ ಯೆರಿಕೋವಿನಲ್ಲಿದ್ದು, ದೇವಾಲಯದ ಸೇವೆ ಮುಗಿದ ನಂತರ ಅವರು ಅಲ್ಲಿಗೆ ಹೋಗುತ್ತಿದ್ದರು. ಯೆರಿಕೋ ಯೆರೂಸಲೇಮಿನಿಂದ ಕೇವಲ 23 ಕಿ.ಮೀ. ದೂರದಲ್ಲಿತ್ತು. ಹಾಗಾಗಿ, ಯಾಜಕರನ್ನು ಮತ್ತು ಲೇವಿಯರನ್ನು ಆ ದಾರಿಯಲ್ಲಿ ಕಾಣಸಾಧ್ಯವಿತ್ತು. ಅವರು “ಯೆರೂಸಲೇಮಿನಿಂದ” ಯೆರಿಕೋವಿನ ಕಡೆಗೆ “ಇಳಿದು” ಬರುತ್ತಿದ್ದರು ಎಂದು ಯೇಸು ಹೇಳಿದ್ದನ್ನೂ ಗಮನಿಸಿ. ಅದನ್ನು ಅವನ ಕೇಳುಗರು ಸುಲಭವಾಗಿ ಅರ್ಥಮಾಡಿಕೊಳ್ಳಸಾಧ್ಯವಿತ್ತು. ಏಕೆಂದರೆ, ಯೆರೂಸಲೇಮ್‌ ಯೆರಿಕೋವಿಗಿಂತಲೂ ಎತ್ತರ ಪ್ರದೇಶದಲ್ಲಿತ್ತು. ಆದ್ದರಿಂದ, ಪ್ರಯಾಣಿಕರು “ಯೆರೂಸಲೇಮಿನಿಂದ ಇಳಿದು ಯೆರಿಕೋವಿಗೆ” ಹೋಗಬೇಕಿತ್ತು. * ಯೇಸು ತನ್ನ ಕೇಳುಗರನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದನು ಎಂಬುದು ಸುಸ್ಪಷ್ಟ.

14. ದೃಷ್ಟಾಂತಗಳನ್ನು ಉಪಯೋಗಿಸುವಾಗ ನಾವು ಹೇಗೆ ನಮ್ಮ ಕೇಳುಗರನ್ನು ಮನಸ್ಸಿನಲ್ಲಿಡಸಾಧ್ಯವಿದೆ?

14 ದೃಷ್ಟಾಂತಗಳನ್ನು ಉಪಯೋಗಿಸುವಾಗ ನಾವು ಸಹ ನಮ್ಮ ಕೇಳುಗರನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ದೃಷ್ಟಾಂತಗಳನ್ನು ಆರಿಸಿಕೊಳ್ಳುವಾಗ, ನಮ್ಮ ಕೇಳುಗರ ಕುರಿತು ಯಾವೆಲ್ಲ ವಿಷಯಗಳನ್ನು ಮನಸ್ಸಿನಲ್ಲಿಡಬೇಕು? ಅವರ ವಯಸ್ಸು, ಸಂಸ್ಕೃತಿ, ಕೌಟುಂಬಿಕ ಹಿನ್ನೆಲೆ, ವೃತ್ತಿ ಮುಂತಾದವುಗಳಿಗೆ ನಾವು ಗಮನಕೊಡಬೇಕು. ಉದಾಹರಣೆಗೆ, ಬೇಸಾಯದ ವಿವರಗಳಿರುವ ದೃಷ್ಟಾಂತವೊಂದು ನಗರ ಪ್ರದೇಶಕ್ಕಿಂತ ಕೃಷಿ ಪ್ರದೇಶದ ಜನರಿಗೆ ಸುಲಭವಾಗಿ ಅರ್ಥವಾಗಬಹುದು. ನಮ್ಮ ಕೇಳುಗರ ಬದುಕಿನ ಆಗುಹೋಗುಗಳು—ಅವರ ಮಕ್ಕಳು, ಮನೆ, ಹವ್ಯಾಸ, ಆಹಾರ ಪದ್ಧತಿ—ದೃಷ್ಟಾಂತಗಳಿಗೆ ತಕ್ಕ ವಿಷಯಗಳನ್ನು ಒದಗಿಸಬಹುದು.

ಸೃಷ್ಟಿಯಲ್ಲಿನ ದೃಷ್ಟಾಂತಗಳು

15. ಸೃಷ್ಟಿಯ ಬಗ್ಗೆ ಯೇಸುವಿಗೆ ಎಲ್ಲ ತಿಳಿದಿತ್ತು ಎಂಬುದು ಸೋಜಿಗದ ಸಂಗತಿಯಲ್ಲವೇಕೆ?

15 ಯೇಸುವಿನ ಅನೇಕ ದೃಷ್ಟಾಂತಗಳು ನಿಸರ್ಗದ ಕುರಿತು ಅಂದರೆ, ಗಿಡಮರ, ಪ್ರಾಣಿಪಕ್ಷಿ, ಹವಾಮಾನ ಮೊದಲಾದ ವಿಚಾರಗಳ ಕುರಿತು ಅವನಿಗಿದ್ದ ಜ್ಞಾನವನ್ನು ತಿಳಿಯಪಡಿಸಿದವು. (ಮತ್ತಾಯ 16:2, 3; ಲೂಕ 12:24, 27) ಅಂಥ ಜ್ಞಾನವನ್ನು ಅವನು ಪಡೆದುಕೊಂಡಿದ್ದಾದರೂ ಹೇಗೆ? ಗಲಿಲಾಯದಲ್ಲಿ ಬೆಳೆದು ದೊಡ್ಡವನಾಗುವ ಸಂದರ್ಭದಲ್ಲಿ ಸೃಷ್ಟಿಯನ್ನು ಲಕ್ಷ್ಯಗೊಟ್ಟು ಗಮನಿಸಲು ಅವನಿಗೆ ಸಾಕಷ್ಟು ಸಮಯವಕಾಶ ಇತ್ತೆಂಬುದರಲ್ಲಿ ಎರಡು ಮಾತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ, ಯೇಸು “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನೂ ಆಗಿದ್ದಾನೆ.” ಮತ್ತು ಸಕಲವನ್ನು ಸೃಷ್ಟಿಸಲು ಯೆಹೋವನು ಅವನನ್ನು ಕುಶಲ “ಶಿಲ್ಪಿಯಂತೆ” ಉಪಯೋಗಿಸಿದನು. (ಕೊಲೊಸ್ಸೆ 1:15, 16; ಜ್ಞಾನೋಕ್ತಿ 8:30, 31) ಆದ್ದರಿಂದಲೇ ಸೃಷ್ಟಿಯ ಬಗ್ಗೆ ಯೇಸುವಿಗೆ ಎಲ್ಲ ತಿಳಿದಿತ್ತು ಎಂಬುದು ಸೋಜಿಗದ ಸಂಗತಿಯಲ್ಲ. ಈ ಜ್ಞಾನವನ್ನು ಅವನು ಹೇಗೆ ಕೌಶಲದಿಂದ ಬಳಸಿಕೊಂಡನು ಎಂಬುದನ್ನು ನಾವೀಗ ನೋಡೋಣ.

16, 17. (ಎ) ಕುರಿಗಳ ಗುಣಲಕ್ಷಣ ಯೇಸುವಿಗೆ ಚೆನ್ನಾಗಿ ಗೊತ್ತಿತ್ತು ಎಂಬುದನ್ನು ಯಾವುದು ತೋರಿಸುತ್ತದೆ? (ಬಿ) ಕುರಿಗಳು ನಿಜವಾಗಿಯೂ ತಮ್ಮ ಕುರುಬನ ಸ್ವರಕ್ಕೆ ಕಿವಿಗೊಡುತ್ತವೆ ಎಂಬುದನ್ನು ಯಾವ ಉದಾಹರಣೆ ತೋರಿಸುತ್ತದೆ?

16 ಯೇಸು ತಾನೊಬ್ಬ “ಒಳ್ಳೆಯ ಕುರುಬನು” ಎಂದೂ ತನ್ನ ಹಿಂಬಾಲಕರನ್ನು ‘ಕುರಿಗಳೆಂದೂ’ ಹೇಳಿದ್ದನ್ನು ಜ್ಞಾಪಿಸಿಕೊಳ್ಳಿ. ಯೇಸುವಿನ ಈ ಮಾತುಗಳು ಅವನಿಗೆ ಕುರಿಗಳ ಸ್ವಭಾವ ಚೆನ್ನಾಗಿ ತಿಳಿದಿತ್ತು ಎಂಬುದನ್ನು ಸೂಚಿಸುತ್ತವೆ. ಕುರುಬ ಮತ್ತು ಕುರಿಗಳ ನಡುವೆ ಅವಿಚ್ಛಿನ್ನ ಬಾಂಧವ್ಯವಿತ್ತೆಂಬುದು ಯೇಸುವಿಗೆ ಗೊತ್ತಿತ್ತು. ಈ ವಿಶ್ವಾಸಪಾತ್ರ ಪ್ರಾಣಿಗಳು ತಮ್ಮ ಕುರುಬನ ಮಾರ್ಗದರ್ಶನವನ್ನು ಮೀರದೇ ಅವನನ್ನು ನಂಬಿಗಸ್ತಿಕೆಯಿಂದ ಹಿಂಬಾಲಿಸುತ್ತವೆಂದು ಯೇಸು ಗಮನಿಸಿದ್ದನು. ಕುರಿಗಳು ಯಾಕೆ ತಮ್ಮ ಕುರುಬನನ್ನು ಹಿಂಬಾಲಿಸುತ್ತವೆ? “ಕುರಿಗಳಿಗೆ ಅವನ ಸ್ವರವು ತಿಳಿದಿರುವುದರಿಂದ” ಎಂದು ಯೇಸು ಹೇಳಿದನು. (ಯೋಹಾನ 10:2-4, 11) ಕುರಿಗಳು ನಿಜವಾಗಿಯೂ ತಮ್ಮ ಕುರುಬನ ಸ್ವರ ತಿಳಿದಿರುತ್ತವೋ?

17 ಜಾರ್ಜ್‌ ಎ. ಸ್ಮಿತ್‌ ಎಂಬವರು ಕುರಿಗಳ ಬಗ್ಗೆ ತಾವು ಖುದ್ದಾಗಿ ಗಮನಿಸಿದ ವಿಷಯವನ್ನು, ದ ಹಿಸ್ಟಾರಿಕಲ್‌ ಜಿಯಾಗ್ರಫಿ ಆಫ್‌ ದ ಹೋಲಿ ಲ್ಯಾಂಡ್‌ ಎಂಬ ತಮ್ಮ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ: “ಒಮ್ಮೊಮ್ಮೆ ಮಧ್ಯಾಹ್ನ ನಾವು ಯೂದಾಯದ ಬಾವಿಯೊಂದರ ಬಳಿ ವಿರಮಿಸುತ್ತಿದ್ದೆವು. ಅಲ್ಲಿಗೆ ಮೂರ್ನಾಲ್ಕು ಕುರುಬರು ತಮ್ಮ ಮಂದೆಗಳೊಂದಿಗೆ ಬರುತ್ತಿದ್ದರು. ಒಂದು ಮಂದೆಯ ಕುರಿಗಳು ಇನ್ನೊಂದು ಮಂದೆಯ ಕುರಿಗಳೊಂದಿಗೆ ಬೆರೆಯುತ್ತಿದ್ದವು. ಈ ಕುರುಬರು ಹೇಗೆ ತಮ್ಮ ತಮ್ಮ ಮಂದೆಗಳನ್ನು ಬೇರ್ಪಡಿಸುತ್ತಾರೆಂದು ನಾವು ಯೋಚಿಸುತ್ತಿದ್ದೆವು. ಅವುಗಳು ನೀರು ಕುಡಿದು ಕುಣಿದು ಕುಪ್ಪಳಿಸಿದ ನಂತರ ಆ ಕುರುಬರು ಕಣಿವೆಯ ಬೇರೆ ಬೇರೆ ದಿಕ್ಕಿಗೆ ನಡೆದರು ಮತ್ತು ಪ್ರತಿಯೊಬ್ಬರು ವಿಶಿಷ್ಟ ಶೈಲಿಯಲ್ಲಿ ಕೂಗತೊಡಗಿದರು. ಕೂಡಲೇ ಕುರಿಗಳು ಬೇರ್ಪಟ್ಟು ತಮ್ಮ ತಮ್ಮ ಕುರುಬನನ್ನು ಸೇರಿಕೊಂಡವು. ಬಂದ ರೀತಿಯಲ್ಲೇ ಸುವ್ಯವಸ್ಥಿತವಾಗಿ ಹೊರಟುಹೋದವು.” ಯೇಸು ನಿಜಕ್ಕೂ ಒಂದು ಉತ್ತಮ ದೃಷ್ಟಾಂತವನ್ನೇ ಆರಿಸಿಕೊಂಡಿದ್ದನು. ಅವನ ಬೋಧನೆಗಳನ್ನು ಗುರುತಿಸಿ ಪಾಲಿಸಿ ಅವನ ಮಾರ್ಗದರ್ಶನವನ್ನು ಅನುಸರಿಸುವುದಾದರೆ ನಾವು ‘ಒಳ್ಳೆಯ ಕುರುಬನ’ ಕಣ್ಗಾವಲಿನಲ್ಲಿ ಆರೈಕೆ ಪಡೆಯುವೆವು ಎಂಬುದನ್ನು ತಿಳಿಸಲಿಕ್ಕಾಗಿ ಇದಕ್ಕಿಂತ ಒಳ್ಳೆಯ ದೃಷ್ಟಾಂತ ಅವನಿಗೆ ಸಿಗಸಾಧ್ಯವಿರಲಿಲ್ಲ.

18. ಯೆಹೋವನ ಸೃಷ್ಟಿಗಳ ಕುರಿತ ಮಾಹಿತಿಯನ್ನು ನಾವು ಎಲ್ಲಿಂದ ಕಲೆಹಾಕಬಹುದು?

18 ಸೃಷ್ಟಿಯಲ್ಲಿನ ದೃಷ್ಟಾಂತಗಳನ್ನು ಉಪಯೋಗಿಸಲು ನಾವು ಹೇಗೆ ಕಲಿಯಬಹುದು? ಪ್ರಾಣಿಗಳ ಎದ್ದುಕಾಣುವ ಸ್ವಭಾವಗಳನ್ನು ಉಪಯೋಗಿಸಿ ನಾವು ಸರಳ ಮತ್ತು ಪರಿಣಾಮಕಾರಿಯಾದ ದೃಷ್ಟಾಂತಗಳನ್ನು ಹೇಳಬಹುದು. ಯೆಹೋವನು ಮಾಡಿದ ಸೃಷ್ಟಿಯ ಕುರಿತ ಮಾಹಿತಿಯನ್ನು ನಾವು ಎಲ್ಲಿಂದ ಕಲೆಹಾಕಬಹುದು? ಬೈಬಲಿನಲ್ಲಿ ವಿವಿಧ ಜಾತಿಯ ಪ್ರಾಣಿಗಳ ಬಗ್ಗೆ ಹೇರಳ ಮಾಹಿತಿಯಿದ್ದು, ಕೆಲವೊಮ್ಮೆ ಅದು ಪ್ರಾಣಿಗಳ ಸ್ವಭಾವಗಳನ್ನು ದೃಷ್ಟಾಂತರೂಪದಲ್ಲಿ ತಿಳಿಸುತ್ತದೆ. ಬೆಟ್ಟದ ಜಿಂಕೆ ಅಥವಾ ಚಿರತೆಯಂತೆ ವೇಗವಾಗಿ, ಹಾವುಗಳಂತೆ ಜಾಗರೂಕರಾಗಿ ಮತ್ತು ಪಾರಿವಾಳಗಳಂತೆ ನಿಷ್ಕಪಟಿಗಳಾಗಿ ಇರಿ ಎಂಬದಾಗಿ ಬೈಬಲ್‌ ಹೇಳುತ್ತದೆ. * (1 ಪೂರ್ವಕಾಲವೃತ್ತಾಂತ 12:8; ಹಬಕ್ಕೂಕ 1:8; ಮತ್ತಾಯ 10:16) ಇತರ ಅಮೂಲ್ಯ ಮಾಹಿತಿಗಳನ್ನು ಯೆಹೋವನ ಸಾಕ್ಷಿಗಳಿಂದ ಪ್ರಕಟಿತಗೊಂಡಿರುವ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಹಾಗೂ ಇತರ ಸಾಹಿತ್ಯಗಳಿಂದ ಪಡೆದುಕೊಳ್ಳಬಹುದು. ಈ ಪ್ರಕಾಶನಗಳು ಹೇಗೆ ಯೆಹೋವನ ಅನೇಕಾನೇಕ ಅದ್ಭುತ ಸೃಷ್ಟಿಗಳಿಂದ ಆರಿಸಿ ತೆಗೆದ ಸರಳ ಹೋಲಿಕೆಗಳನ್ನು ಉಪಯೋಗಿಸುತ್ತವೆ ಎಂಬುದನ್ನು ಗಮನಿಸುವುದರಿಂದ ನೀವು ಹೆಚ್ಚನ್ನು ಕಲಿತುಕೊಳ್ಳಬಹುದು.

ಚಿರಪರಿಚಿತ ಉದಾಹರಣೆಗಳಿಂದ ದೃಷ್ಟಾಂತಗಳು

19, 20. (ಎ) ಸುಳ್ಳು ನಂಬಿಕೆಯನ್ನು ಬಯಲುಪಡಿಸಲು ಯೇಸು ಯಾವ ರೀತಿಯಲ್ಲಿ ಆಗತಾನೇ ನಡೆದ ಒಂದು ಘಟನೆಯನ್ನು ಬಳಸಿದನು? (ಬಿ) ಬೋಧಿಸುವಾಗ ಜೀವನದಲ್ಲಿನ ನೈಜ ಘಟನೆಗಳನ್ನು ಮತ್ತು ಅನುಭವಗಳನ್ನು ನಾವು ಹೇಗೆ ಉಪಯೋಗಿಸಬಹುದು?

19 ಜೀವನದಲ್ಲಿ ಸಂಭವಿಸಿದ ನೈಜ ಘಟನೆಯಾಧಾರಿತ ಉದಾಹರಣೆಗಳಿಂದಲೂ ಪರಿಣಾಮಕಾರಿ ದೃಷ್ಟಾಂತಗಳನ್ನು ಆರಿಸಿಕೊಳ್ಳಬಹುದು. ಒಮ್ಮೆ ಯೇಸು, ಆಗತಾನೇ ನಡೆದ ಒಂದು ಘಟನೆಯನ್ನು ದೃಷ್ಟಾಂತವಾಗಿ ಬಳಸಿ ಪಾಪಿಗಳು ಅಥವಾ ಶಿಕ್ಷೆಗೆ ಪಾತ್ರರಾಗಿರುವವರೇ ದುರ್ಘಟನೆಗಳಿಗೆ ಬಲಿಯಾಗುತ್ತಾರೆ ಎಂಬ ನಂಬಿಕೆ ಸುಳ್ಳೆಂದು ಬಯಲುಪಡಿಸಿದನು. ಅವನು ಹೇಳಿದ್ದು: “ಸಿಲೊವಾಮಿನಲ್ಲಿ ಬುರುಜುಬಿದ್ದು ಸತ್ತ ಆ ಹದಿನೆಂಟು ಮಂದಿ, ಯೆರೂಸಲೇಮಿನಲ್ಲಿ ವಾಸಿಸುತ್ತಿರುವ ಇತರ ಎಲ್ಲರಿಗಿಂತ ಹೆಚ್ಚು ಪಾಪಿಗಳಾಗಿ ಕಂಡುಬಂದರೆಂದು ನೀವು ಭಾವಿಸುತ್ತೀರೊ?” (ಲೂಕ 13:4) ಆ 18 ಮಂದಿ ತಮ್ಮ ಪಾಪದ ನಿಮಿತ್ತ ದೇವರ ಕೋಪಕ್ಕೆ ಗುರಿಯಾಗಿ ನಾಶವಾಗಿರಲಿಲ್ಲ. ಬದಲಿಗೆ, “ಕಾಲವೂ ಪ್ರಾಪ್ತಿಯೂ” ಅವರ ದುರಂತಮಯ ಮರಣಕ್ಕೆ ಕಾರಣವಾಗಿತ್ತು. (ಪ್ರಸಂಗಿ 9:11) ಹೀಗೆ ಯೇಸು, ಜನರಿಗೆ ಚೆನ್ನಾಗಿ ತಿಳಿದಿದ್ದ ಒಂದು ಘಟನೆಯನ್ನು ಹೇಳುವ ಮೂಲಕ ಸುಳ್ಳು ಬೋಧನೆಯನ್ನು ತಪ್ಪೆಂದು ತೋರಿಸಿಕೊಟ್ಟನು.

20 ನಾವು ಬೋಧಿಸುವಾಗ ಜೀವನದಲ್ಲಿನ ನೈಜ ಘಟನೆಗಳನ್ನು ಮತ್ತು ಅನುಭವಗಳನ್ನು ಹೇಗೆ ಉಪಯೋಗಿಸಬಹುದು? ತನ್ನ ಸಾನ್ನಿಧ್ಯದ ಸೂಚನೆಯ ಕುರಿತು ಯೇಸು ತಿಳಿಸಿದ ಪ್ರವಾದನೆಯ ನೆರವೇರಿಕೆಯ ಬಗ್ಗೆ ನೀವು ಚರ್ಚಿಸುತ್ತಿದ್ದೀರೆಂದು ಭಾವಿಸಿ. (ಮತ್ತಾಯ 24:3-14) ಆ ಸೂಚನೆಯಲ್ಲಿನ ಕೆಲವು ಅಂಶಗಳು ನೆರವೇರುತ್ತಿವೆಯೆಂದು ತೋರಿಸಲು ಯುದ್ಧ, ಕ್ಷಾಮ ಅಥವಾ ಭೂಕಂಪಗಳ ಕುರಿತ ಇತ್ತೀಚಿನ ಸುದ್ದಿಯನ್ನು ನೀವು ತಿಳಿಸಬಹುದು. ಅಥವಾ ಹೊಸ ವ್ಯಕ್ತಿತ್ವ ಧರಿಸಿಕೊಳ್ಳಲಿಕ್ಕಾಗಿ ಯಾವ ಬದಲಾವಣೆ ಅವಶ್ಯ ಎಂಬುದನ್ನು ತಿಳಿಸಲು ಒಂದು ನೈಜ ಅನುಭವವನ್ನು ಉಪಯೋಗಿಸಲು ಬಯಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. (ಎಫೆಸ 4:20-24) ಅಂಥ ಅನುಭವವನ್ನು ನೀವೆಲ್ಲಿ ಕಂಡುಕೊಳ್ಳಬಹುದು? ನಮ್ಮ ಸಹೋದರ ಸಹೋದರಿಯರ ವೈವಿಧ್ಯಮಯ ಹಿನ್ನೆಲೆಗಳನ್ನು ನೀವು ಪರಿಗಣಿಸಬಹುದು. ಇಲ್ಲವೇ, ಯೆಹೋವನ ಸಾಕ್ಷಿಗಳ ಪ್ರಕಾಶನಗಳಲ್ಲಿರುವ ಒಂದು ಅನುಭವವನ್ನು ಆಯ್ದುಕೊಳ್ಳಬಹುದು.

21. ದೇವರ ವಾಕ್ಯದ ಪರಿಣಾಮಕಾರಿ ಬೋಧಕರಿಗೆ ಯಾವ ಆಶೀರ್ವಾದಗಳು ಸಿಗುತ್ತವೆ?

21 ನಿಜಕ್ಕೂ, ಯೇಸು ಒಬ್ಬ ನುರಿತ ಬೋಧಕನೇ ಸರಿ! ನಾವು ಈ ಭಾಗದಲ್ಲಿ ಗಮನಿಸಿದಂತೆ, ‘ಬೋಧಿಸುವುದು ಮತ್ತು ಸುವಾರ್ತೆ ಸಾರುವುದು’ ಅವನ ಬಾಳಕಾರ್ಯವಾಗಿತ್ತು. (ಮತ್ತಾಯ 4:23) ಅದು ನಮ್ಮ ಬಾಳಕಾರ್ಯ ಕೂಡ ಆಗಿದೆ. ಪರಿಣಾಮಕಾರಿ ಬೋಧಕರಿಗೆ ಸಿಗುವ ಆಶೀರ್ವಾದಗಳು ಅಷ್ಟಿಷ್ಟಲ್ಲ. ಬೋಧಿಸುವಾಗ ನಾವು ಇತರರಿಗೆ ಕೊಡುತ್ತೇವೆ ಮತ್ತು ಹಾಗೆ ಕೊಡುವುದು ಸಂತೋಷವನ್ನು ತರುತ್ತದೆ. (ಅ. ಕಾರ್ಯಗಳು 20:35) ಅಪ್ಪಟ ಹಾಗೂ ಚಿರಮೌಲ್ಯವುಳ್ಳ ಒಂದನ್ನು ಅಂದರೆ ಯೆಹೋವ ದೇವರ ಕುರಿತ ಸತ್ಯವನ್ನು ನಾವು ಇತರರಿಗೆ ತಿಳಿಸುತ್ತಿದ್ದೇವೆ ಎಂಬುದನ್ನು ಗ್ರಹಿಸುವಾಗ ಆಗುವ ಉಲ್ಲಾಸವೇ ಆ ಸಂತೋಷವಾಗಿದೆ. ಭೂಮಿಯಲ್ಲಿ ಜೀವಿಸಿರುವವರಲ್ಲಿಯೇ ಮಹಾ ಬೋಧಕನಾದ ಯೇಸುವಿನ ಮಾದರಿಯನ್ನು ನಾವು ಅನುಸರಿಸುತ್ತಿದ್ದೇವೆ ಎಂಬುದನ್ನು ತಿಳಿಯುವುದರಿಂದ ಸಿಗುವ ಸಂತೃಪ್ತಿ ಸಹ ನಮಗಿರುವುದು.

^ ಪ್ಯಾರ. 1 ಯೇಸುವಿನ ಭೂಜೀವನದ ಕುರಿತ ಮೊದಲ ದಾಖಲೆಯು ‘ಮತ್ತಾಯನ ಸುವಾರ್ತೆ’ಯಾಗಿದೆ. ದೇವರಿಂದ ಪ್ರೇರೇಪಣೆಗೊಂಡ ಈ ದಾಖಲೆಯು ಯೇಸು ಮರಣಪಟ್ಟು ಸುಮಾರು ಎಂಟು ವರ್ಷಗಳ ಬಳಿಕವಷ್ಟೇ ಬರೆಯಲ್ಪಟ್ಟಿತು.

^ ಪ್ಯಾರ. 13 ಯಾಜಕ ಮತ್ತು ಲೇವಿಯನು ಸಹ “ಯೆರೂಸಲೇಮಿನಿಂದ” ಇಳಿದುಬರುತ್ತಿದ್ದರೆಂದು ಯೇಸು ಹೇಳಿದನು. ಅಂದರೆ, ಅವರು ದೇವಾಲಯದಿಂದ ಬರುತ್ತಿದ್ದರೇ ವಿನಃ ಅಲ್ಲಿಗೆ ಹೋಗುತ್ತಿರಲಿಲ್ಲ. ಹಾಗಾಗಿ, ಸತ್ತಿರುವಂತೆ ತೋರುತ್ತಿದ್ದ ವ್ಯಕ್ತಿಯಿಂದ ಅಪವಿತ್ರವಾಗಿ ದೇವಾಲಯದಲ್ಲಿ ಸೇವೆಮಾಡುವ ಅರ್ಹತೆಯನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳುವ ಕಾರಣಕ್ಕಾಗಿ ಅವರು ದಾರಿಯ ಆಚೇ ಬದಿಯಿಂದ ಬಂದಿದ್ದಿರಬಹುದು ಎಂದು ಯಾರೂ ಹೇಳಸಾಧ್ಯವಿರಲಿಲ್ಲ.—ಯಾಜಕಕಾಂಡ 21:1; ಅರಣ್ಯಕಾಂಡ 19:16.

^ ಪ್ಯಾರ. 18 ಪ್ರಾಣಿಗಳ ಸ್ವಭಾವಗಳನ್ನು ಬೈಬಲ್‌ ಸಾಂಕೇತಿಕ ಅರ್ಥದಲ್ಲಿ ಉಪಯೋಗಿಸಿರುವ ವ್ಯಾಪಕ ಪಟ್ಟಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿತಗೊಂಡಿರುವ ಇನ್‌ಸೈಟ್‌ ಆನ್‌ ದ ಸ್ಕ್ರಿಪ್ಚರ್ಸ್‌, ಸಂಪುಟ 1, ಪುಟ. 268, 270-271 ನೋಡಿ.