ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 8

“ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ”

“ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ”

1-4. (ಎ) ಯೇಸು ಸಮಾರ್ಯದ ಸ್ತ್ರೀಗೆ ಹೇಗೆ ಕೌಶಲಭರಿತವಾಗಿ ಬೋಧಿಸಿದನು? ಅದರ ಫಲಿತಾಂಶವೇನಾಗಿತ್ತು? (ಬಿ) ಅವನ ಅಪೊಸ್ತಲರು ಹೇಗೆ ಪ್ರತಿಕ್ರಿಯಿಸಿದರು?

ಯೇಸು ಮತ್ತು ಅವನ ಅಪೊಸ್ತಲರು ಅನೇಕ ತಾಸುಗಳಿಂದ ನಡೆಯುತ್ತಿದ್ದಾರೆ. ಅವರು ಯೂದಾಯದಿಂದ ಉತ್ತರಕ್ಕಿರುವ ಗಲಿಲಾಯದತ್ತ ಪ್ರಯಾಣಿಸುತ್ತಿದ್ದಾರೆ. ಸಮಾರ್ಯದ ಮೂಲಕ ಹಾದುಹೋಗುವ ಹತ್ತಿರದ ಮಾರ್ಗವಾಗಿ ಹೋಗುತ್ತಿರುವುದಾದರೂ ಅವರು ಅಲ್ಲಿಗೆ ತಲಪಲು 3 ದಿನಗಳಾದರೂ ಬೇಕು. ಸೂರ್ಯನು ನಡುನೆತ್ತಿಯ ಮೇಲೆ ಬರುವಷ್ಟರಲ್ಲಿ ಅವರು ನಡೆಯುತ್ತಾ ಸಿಖರ್‌ ಎಂಬ ಚಿಕ್ಕ ಪಟ್ಟಣ ತಲುಪಿಯಾಗಿತ್ತು. ಅಲ್ಲಿ ಅವರು ದಣಿವಾರಿಸಿಕೊಳ್ಳಲು ತಂಗುತ್ತಾರೆ.

2 ಅಪೊಸ್ತಲರು ಆಹಾರತರಲು ಹೋದ ಸಮಯದಲ್ಲಿ ಯೇಸು ಪಟ್ಟಣದ ಹೊರಗಡೆಯಿರುವ ಬಾವಿಯ ಬಳಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುತ್ತಾನೆ. ಆಗ ಅಲ್ಲಿಗೆ ನೀರನ್ನು ಸೇದಲು ಸ್ತ್ರೀಯೊಬ್ಬಳು ಬರುತ್ತಾಳೆ. ಯೇಸು ಅವಳನ್ನು ಕಂಡರೂ ಕಾಣದವನಂತೆ ಅಲಕ್ಷಿಸಬಹುದಿತ್ತು. ಅವನು ‘ಪ್ರಯಾಣದಿಂದ ದಣಿದಿದ್ದನು.’ (ಯೋಹಾನ 4:6) ಆದ್ದರಿಂದ, ಅವನು ಆ ಸಮಾರ್ಯದ ಸ್ತ್ರೀಗೆ ಸ್ವಲ್ಪವೂ ಗಮನಕೊಡದೆ ಹಾಗೇ ಕಣ್ಣುಮುಚ್ಚಿಕೊಂಡಿರಬಹುದಿತ್ತು. ಹಾಗೇನಾದರೂ ಯೇಸು ಮಾಡಿದ್ದರೂ ಆ ಸ್ತ್ರೀಗೆ ಆಶ್ಚರ್ಯವಾಗುತ್ತಿರಲಿಲ್ಲ. ಏಕೆಂದರೆ ನಾವು ಈ ಪುಸ್ತಕದ 4ನೇ ಅಧ್ಯಾಯದಲ್ಲಿ ನೋಡಿದಂತೆ, ಯೆಹೂದ್ಯರು ಸಮಾರ್ಯದವರನ್ನು ಕಡೆಗಣಿಸುತ್ತಿದ್ದರು. ಆದಾಗ್ಯೂ ಯೇಸು ಆಕೆಯೊಂದಿಗೆ ಮಾತನಾಡಲು ಆರಂಭಿಸುತ್ತಾನೆ.

3 ಅವನು ದೃಷ್ಟಾಂತದೊಂದಿಗೆ ಆರಂಭಿಸುತ್ತಾನೆ. ಅದು ಕೂಡ ಆಕೆಯ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ, ವಾಸ್ತವದಲ್ಲಿ ಆ ಸಂದರ್ಭದಲ್ಲಿ ಆಕೆ ಏನು ಮಾಡುತ್ತಿದ್ದಳೋ ಅದಕ್ಕೆ ಸಂಬಂಧಿಸಿದ ದೃಷ್ಟಾಂತವನ್ನು ಉಪಯೋಗಿಸುತ್ತಾನೆ. ನೀರನ್ನು ಸೇದಲು ಆಕೆ ಅಲ್ಲಿಗೆ ಬಂದಿದ್ದಳು. ಆದ್ದರಿಂದ ಯೇಸು ಆಕೆಯೊಂದಿಗೆ ಆಧ್ಯಾತ್ಮಿಕ ಬಾಯಾರಿಕೆಯನ್ನು ತಣಿಸುವ ಜೀವದಾಯಕ ನೀರಿನ ಬಗ್ಗೆ ಮಾತಾಡುತ್ತಾನೆ. ಆಕೆ ಕೇಳಿದ ಪ್ರಶ್ನೆಗಳು ಹಲವಾರು ಬಾರಿ ವಾಗ್ವಾದಕ್ಕೆ ನಡೆಸಸಾಧ್ಯವಿತ್ತು. * ಯೇಸು, ಅದಕ್ಕೆ ಅವಕಾಶ ಕೊಡದೆ ಜಾಣ್ಮೆಯಿಂದ ಸರಿಯಾದ ಹಾದಿಯಲ್ಲಿ ಸಂಭಾಷಣೆಯನ್ನು ಮುಂದುವರಿಸುತ್ತಾನೆ. ಶುದ್ಧಾರಾಧನೆ ಮತ್ತು ಯೆಹೋವ ದೇವರ ಕುರಿತಾದ ಆಧ್ಯಾತ್ಮಿಕ ವಿಚಾರಗಳನ್ನೇ ಮಾತಾಡುತ್ತಾನೆ. ಅವು ಬಹಳ ಪರಿಣಾಮಕಾರಿಯಾಗಿದ್ದವು. ಎಷ್ಟೆಂದರೆ, ಅದನ್ನು ಕೇಳಿದ ಸ್ತ್ರೀ ಅವುಗಳನ್ನು ಪಟ್ಟಣದ ಜನರಿಗೆ ತಲುಪಿಸುತ್ತಾಳೆ ಮತ್ತು ಅವರು ಕೂಡ ಯೇಸುವಿನ ಮಾತುಗಳನ್ನು ಕೇಳಿಸಿಕೊಳ್ಳಲು ಬಯಸುತ್ತಾರೆ.—ಯೋಹಾನ 4:3-42.

4 ಹಿಂದಿರುಗಿದ ಅಪೊಸ್ತಲರಿಗೆ, ಯೇಸು ಕೊಡುತ್ತಿದ್ದ ಗಮನಾರ್ಹ ಸಾಕ್ಷಿಯನ್ನು ನೋಡಿ ಹೇಗನಿಸಿತು? ಅವರು ಅದಕ್ಕಾಗಿ ಸಂತೋಷಗೊಂಡರೆಂಬ ಯಾವುದೇ ಸೂಚನೆಗಳಿಲ್ಲ. ಬದಲಾಗಿ, ಯೇಸು ಆಕೆಯೊಂದಿಗೆ ಮಾತನಾಡುತ್ತಿರುವುದನ್ನು ನೋಡಿ ಅವರು ಆಶ್ಚರ್ಯಪಟ್ಟರು. ಅವರು ಆಕೆಯನ್ನು ಮಾತನಾಡಿಸುವ ಗೋಜಿಗೂ ಹೋಗುವುದಿಲ್ಲ. ಆಕೆ ಹೋದ ಬಳಿಕ, ತಾವು ತಂದ ಆಹಾರವನ್ನು ಸೇವಿಸುವಂತೆ ಅವರು ಯೇಸುವಿಗೆ ಒತ್ತಾಯ ಮಾಡುತ್ತಾರೆ. ಆಗ ಯೇಸು ಹೀಗನ್ನುತ್ತಾನೆ: “ನಿಮಗೆ ತಿಳಿಯದಂಥ ಆಹಾರವು ನನ್ನ ಬಳಿಯಿದೆ.” ಕಕ್ಕಾಬಿಕ್ಕಿಯಾದ ಅವರು ಮೊದಲು ಈ ಮಾತುಗಳನ್ನು ಅಕ್ಷರಾರ್ಥವಾಗಿ ತೆಗೆದುಕೊಳ್ಳುತ್ತಾರೆ. ಅನಂತರ ಅವನೇ ಅವರಿಗೆ, “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರವಾಗಿದೆ” ಎಂದು ವಿವರಿಸುತ್ತಾನೆ. (ಯೋಹಾನ 4:32, 34) ಹೀಗೆ ತನ್ನ ಜೀವನದ ಮುಖ್ಯ ಕೆಲಸವು ಆಹಾರ ಸೇವಿಸುವುದಕ್ಕಿಂತ ಹೆಚ್ಚು ಪ್ರಾಮುಖ್ಯ ಎಂದವರಿಗೆ ಹೇಳುತ್ತಾನೆ. ಆ ಕೆಲಸದ ಕುರಿತು ಅವರು ಸಹ ತದ್ರೀತಿಯ ಮನೋಭಾವ ಇಟ್ಟುಕೊಳ್ಳುವಂತೆ ಅವನು ಬಯಸುತ್ತಾನೆ. ಆ ಕೆಲಸ ಯಾವುದು?

5. ಯೇಸುವಿನ ಜೀವನವೃತ್ತಿ ಯಾವುದಾಗಿತ್ತು? ಈ ಅಧ್ಯಾಯದಲ್ಲಿ ನಾವೇನನ್ನು ಪರಿಗಣಿಸಲಿದ್ದೇವೆ?

5 ಒಮ್ಮೆ ಯೇಸು, “ನಾನು ದೇವರ ರಾಜ್ಯದ ಸುವಾರ್ತೆಯನ್ನು . . . ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ” ಎಂದನು. (ಲೂಕ 4:43) ಹೌದು, ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ಮತ್ತು ಬೋಧಿಸಲೆಂದೇ ಯೇಸುವನ್ನು ಕಳುಹಿಸಲಾಗಿತ್ತು. * ಇಂದು ಯೇಸುವಿನ ಹಿಂಬಾಲಕರಿಗೂ ಅದೇ ಕೆಲಸವನ್ನು ಮಾಡಲಿಕ್ಕಿದೆ. ಆದ್ದರಿಂದ, ಯೇಸು ಏಕೆ ಸಾರಿದನು, ಏನನ್ನು ಸಾರಿದನು ಮತ್ತು ತನ್ನ ನೇಮಕದ ಬಗ್ಗೆ ಅವನಿಗೆ ಯಾವ ಮನೋಭಾವವಿತ್ತು ಎಂಬುದನ್ನು ನಾವು ಪರಿಗಣಿಸುವುದು ಪ್ರಾಮುಖ್ಯ.

ಯೇಸು ಏಕೆ ಸಾರಿದನು?

6, 7. ಸುವಾರ್ತೆಯನ್ನು ಇತರರೊಂದಿಗೆ ಹಂಚಿಕೊಳ್ಳುವ ಕುರಿತು “ಪ್ರತಿಯೊಬ್ಬ ಸಾರ್ವಜನಿಕ ಉಪದೇಶಕನು” ಯಾವ ಮನೋಭಾವ ಹೊಂದಿರಬೇಕೆಂದು ಯೇಸು ಬಯಸುತ್ತಾನೆ? ದೃಷ್ಟಾಂತಿಸಿ.

6 ಯೇಸುವಿಗೆ, ತಾನು ಕಲಿಸಿದ ಸತ್ಯದ ಬಗ್ಗೆ ಯಾವ ಅನಿಸಿಕೆಯಿತ್ತು ಎಂಬುದನ್ನು ನಾವೀಗ ಪರಿಗಣಿಸೋಣ. ತದನಂತರ, ತಾನು ಕಲಿಸಿದ ಜನರ ಕಡೆಗೆ ಅವನಿಗೆ ಯಾವ ಮನೋಭಾವವಿತ್ತು ಎಂಬುದನ್ನು ನೋಡೋಣ. ಯೆಹೋವನು ಬೋಧಿಸಿದ ಸತ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವಾಗ ತನಗೆ ಹೇಗನಿಸುತ್ತದೆ ಎಂಬುದನ್ನು ಯೇಸು ಕಣ್ಣಿಗೆ ಕಟ್ಟುವಂಥ ದೃಷ್ಟಾಂತದ ಮೂಲಕ ವ್ಯಕ್ತಪಡಿಸಿದನು. ಅವನಂದದ್ದು: “ಸ್ವರ್ಗದ ರಾಜ್ಯದ ವಿಷಯದಲ್ಲಿ ಬೋಧಿಸಲ್ಪಟ್ಟ ಪ್ರತಿಯೊಬ್ಬ ಸಾರ್ವಜನಿಕ ಉಪದೇಶಕನು ತನ್ನ ಬೊಕ್ಕಸದೊಳಗಿಂದ ಹೊಸ ವಸ್ತುಗಳನ್ನೂ ಹಳೇ ವಸ್ತುಗಳನ್ನೂ ಹೊರಗೆ ತರುವ ಮನುಷ್ಯನಿಗೆ, ಮನೆಯ ಯಜಮಾನನಿಗೆ ಹೋಲಿಕೆಯಾಗಿದ್ದಾನೆ.” (ಮತ್ತಾಯ 13:52) ಈ ದೃಷ್ಟಾಂತದಲ್ಲಿ ತಿಳಿಸಲ್ಪಟ್ಟ ಮನೆಯ ಯಜಮಾನನು ತನ್ನ ಬೊಕ್ಕಸದೊಳಗಿಂದ ವಸ್ತುಗಳನ್ನು ಹೊರಗೆ ತರುವುದೇಕೆ?

7 ಒಂದೊಮ್ಮೆ ರಾಜ ಹಿಜ್ಕೀಯನು ತನ್ನ ಸ್ವತ್ತುಗಳನ್ನೆಲ್ಲ ಪ್ರದರ್ಶಿಸಿ ಹಾನಿಕರ ಪರಿಣಾಮಗಳನ್ನು ಎದುರಿಸಿದನು. ಆದರೆ ಈ ದೃಷ್ಟಾಂತದಲ್ಲಿ ತಿಳಿಸಲ್ಪಟ್ಟ ಮನೆಯ ಯಜಮಾನನು ಆ ರೀತಿಯಲ್ಲಿ ತನ್ನ ಸ್ವತ್ತುಗಳನ್ನು ಜಂಬದಿಂದ ಪ್ರದರ್ಶಿಸುತ್ತಿಲ್ಲ. (2 ಅರಸುಗಳು 20:13-20) ಹಾಗಾದರೆ ಮನೆಯ ಯಜಮಾನನ ಹೇತುವೇನಾಗಿದೆ? ಈ ಉದಾಹರಣೆಯನ್ನು ಪರಿಗಣಿಸಿ. ನಿಮ್ಮ ಅಚ್ಚುಮೆಚ್ಚಿನ ಶಿಕ್ಷಕನನ್ನು ಭೇಟಿಮಾಡಲು ನೀವು ಅವರ ಮನೆಗೆ ಹೋಗಿದ್ದೀರಿ. ಅವರು ಮೇಜಿನ ಡ್ರಾಯರನ್ನು ಎಳೆದು ಎರಡು ಪತ್ರಗಳನ್ನು ಹೊರತೆಗೆಯುತ್ತಾರೆ. ಅವುಗಳಲ್ಲೊಂದು ಹಳೆಯದಾಗಿದ್ದು ಹಳದಿ ಬಣ್ಣಕ್ಕೆ ತಿರುಗಿದೆ, ಮತ್ತೊಂದು ಹೊಸದಾಗಿದೆ. ಆ ಪತ್ರಗಳನ್ನು ಅವರು ತಮ್ಮ ತಂದೆಯಿಂದ ಪಡೆದಿದ್ದರು. ಒಂದನ್ನು ದಶಕಗಳ ಮುಂಚೆಯೇ ಅಂದರೆ ಬಾಲಕನಾಗಿದ್ದಾಗ ಪಡೆದಿದ್ದರೆ ಮತ್ತೊಂದು ಇತ್ತೀಚಿನ ದಿನಗಳದ್ದಾಗಿತ್ತು. ಆ ಪತ್ರಗಳನ್ನು ಅವರೆಷ್ಟು ಅಮೂಲ್ಯವೆಂದೆಣಿಸುತ್ತಾರೆ, ಅದರಲ್ಲಿದ್ದ ಸಲಹೆ ಅವರ ಜೀವನವನ್ನು ಹೇಗೆ ಬದಲಾಯಿಸಿತು, ಅದು ಹೇಗೆ ನಿಮಗೆ ಸಹಾಯಕರವಾಗಲಿದೆ ಎಂಬುದನ್ನೆಲ್ಲಾ ತಿಳಿಸುವಾಗ ಖುಷಿಯಿಂದ ಅವರ ಕಣ್ಣುಗಳು ಹೊಳೆಯುತ್ತವೆ. ನಿಜವಾಗಿಯೂ ಅವರು ಪತ್ರಗಳನ್ನು ಅಮೂಲ್ಯವೆಂದೆಣಿಸುತ್ತಾರೆ. ಅವು ಅವರ ಹೃದಯದಲ್ಲಿ ನೆಲೆಸಿವೆ. (ಲೂಕ 6:45) ಹೊಗಳಿಕೊಳ್ಳಲಿಕ್ಕಾಗಿ ಇಲ್ಲವೇ ಯಾವುದೇ ಲಾಭಗಳಿಸಲಿಕ್ಕಾಗಿ ಅವುಗಳನ್ನು ಅವರು ನಿಮಗೆ ತೋರಿಸುತ್ತಿಲ್ಲ. ಬದಲಾಗಿ ನಿಮ್ಮ ಪ್ರಯೋಜನಕ್ಕಾಗಿ ಮತ್ತು ಅವುಗಳ ಮೌಲ್ಯವನ್ನು ನಿಮಗೆ ತಿಳಿಸಲಿಕ್ಕಾಗಿ ತೋರಿಸುತ್ತಿದ್ದಾರೆ.

8. ಯಾವ ಕಾರಣಕ್ಕಾಗಿ ನಾವು ದೇವರ ವಾಕ್ಯದಿಂದ ಕಲಿಯುವ ಸತ್ಯಗಳನ್ನು ನಿಕ್ಷೇಪಗಳಂತೆ ಎಣಿಸುತ್ತೇವೆ?

8 ಮಹಾ ಬೋಧಕನಾದ ಯೇಸು ಕೂಡ ಅಂಥದ್ದೇ ಹೇತುಗಳಿಂದ ದೇವರ ಸತ್ಯಗಳನ್ನು ಇತರರೊಂದಿಗೆ ಹಂಚಿಕೊಂಡನು. ಅವನಿಗೆ ಆ ಸತ್ಯಗಳು ಬೆಲೆಕಟ್ಟಲಾಗದ ನಿಕ್ಷೇಪಗಳಂತಿದ್ದವು. ಅವನು ಅವುಗಳನ್ನು ಪ್ರೀತಿಸಿದನು ಮತ್ತು ಇತರರೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿದ್ದನು. “ಪ್ರತಿಯೊಬ್ಬ ಸಾರ್ವಜನಿಕ ಉಪದೇಶಕನು” ಅಂದರೆ, ತನ್ನ ಅನುಯಾಯಿಗಳೆಲ್ಲರೂ ಅದೇ ಮನೋಭಾವವನ್ನು ಹೊಂದಿರಬೇಕೆಂದು ಅವನು ಬಯಸಿದನು. ಆ ಮನೋಭಾವ ನಮ್ಮಲ್ಲಿದೆಯೋ? ದೇವರ ವಾಕ್ಯದಿಂದ ಕಲಿಯುವ ಪ್ರತಿಯೊಂದು ಸತ್ಯವನ್ನೂ ಪ್ರೀತಿಸಲು ನಮಗೆ ಹೇರಳ ಕಾರಣಗಳಿವೆ. ಅವುಗಳನ್ನು ನಾವು ತುಂಬ ಹಿಂದೆ ಪಡೆದುಕೊಂಡಿರಲಿ ಇಲ್ಲವೇ ಅವು ಇತ್ತೀಚಿನ ಬೆಳವಣಿಗೆಗಳಾಗಿರಲಿ, ನಾವಂತೂ ಸತ್ಯದ ಒಂದೊಂದು ಹರಳನ್ನೂ ಅಮೂಲ್ಯವೆಂದೆಣಿಸುತ್ತೇವೆ. ಯೆಹೋವನು ನಮಗೇನನ್ನು ಬೋಧಿಸಿದ್ದಾನೋ ಅವುಗಳ ಬಗ್ಗೆ ಇತರರೊಂದಿಗೆ ಹೃತ್ಪೂರ್ವಕ ಉತ್ಸಾಹದೊಂದಿಗೆ ನಾವು ಮಾತಾಡುತ್ತೇವೆ ಮತ್ತು ಅವುಗಳ ಕಡೆಗೆ ನಮಗಿರುವ ಪ್ರೀತಿಯನ್ನು ಕಾಪಾಡಿಕೊಳ್ಳುತ್ತೇವೆ. ಈ ಮೂಲಕ ಯೇಸುವಿನಂತೆಯೇ ನಾವು ಕೂಡ, ಇತರರು ಆ ನಿಕ್ಷೇಪಗಳನ್ನು ಪ್ರೀತಿಸತೊಡಗುವಂತೆ ಸಹಾಯ ಮಾಡುತ್ತೇವೆ.

9. (ಎ) ತಾನು ಯಾರಿಗೆ ಬೋಧಿಸಿದನೋ ಅವರ ಬಗ್ಗೆ ಯೇಸುವಿಗೆ ಹೇಗನಿಸಿತು? (ಬಿ) ಜನರ ಕಡೆಗೆ ಯೇಸುವಿಗಿದ್ದ ಮನೋಭಾವವನ್ನು ನಾವು ಹೇಗೆ ಅನುಕರಿಸಬಲ್ಲೆವು?

9 ಯೇಸು ತಾನು ಯಾರಿಗೆ ಬೋಧಿಸಿದನೋ ಅವರನ್ನೂ ಬಹಳವಾಗಿ ಪ್ರೀತಿಸಿದನು. ನಾವದನ್ನು ಭಾಗ 3ರಲ್ಲಿ ಪೂರ್ಣವಾಗಿ ಚರ್ಚಿಸುವೆವು. ಮೆಸ್ಸೀಯನು “ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ”ರುವನು ಎಂಬುದಾಗಿ ಪ್ರವಾದನೆ ಮುಂತಿಳಿಸಿತು. (ಕೀರ್ತನೆ 72:13) ನಿಜವಾಗಿಯೂ ಯೇಸು ಜನರ ಕಾಳಜಿವಹಿಸಿದನು. ಅವರ ಯೋಚನೆಗಳು ಮತ್ತು ಅಭಿಪ್ರಾಯಗಳನ್ನು ತಿಳಿದುಕೊಳ್ಳುವುದರಲ್ಲಿ ಆಸಕ್ತನಾಗಿದ್ದನು. ಅವರ ಮೇಲೆ ಒತ್ತಡವನ್ನು ಹೇರಿದ ಹೊರೆಗಳ ಬಗ್ಗೆ ಮತ್ತು ಸತ್ಯವನ್ನು ಗ್ರಹಿಸದಂತೆ ಅವರನ್ನು ತಡೆಹಿಡಿದಿದ್ದ ಅಡ್ಡಿತಡೆಗಳ ಬಗ್ಗೆ ಅವನು ಚಿಂತಿತನಾಗಿದ್ದನು. (ಮತ್ತಾಯ 11:28; 16:13; 23:13, 15) ಉದಾಹರಣೆಗೆ, ಸಮಾರ್ಯದ ಸ್ತ್ರೀಯನ್ನು ನೆನಪಿಗೆ ತಂದುಕೊಳ್ಳಿ. ಯೇಸು ವೈಯಕ್ತಿಕ ಕಳಕಳಿ ತೋರಿಸಿದ್ದರಿಂದಾಗಿ ಆಕೆ ಬಹಳ ಪ್ರಭಾವಿತಳಾದಳು ಎಂಬುದರಲ್ಲಿ ಸಂದೇಹವಿಲ್ಲ. ಆಕೆಯ ವೈಯಕ್ತಿಕ ಪರಿಸ್ಥಿತಿಯನ್ನು ಯೇಸು ವಿವೇಚಿಸಿ ತಿಳಿದುಕೊಂಡದ್ದನ್ನು ಆಕೆ ಮನಗಂಡಾಗ ಅವನನ್ನು ಪ್ರವಾದಿಯೆಂದು ನಂಬಿದಳು ಹಾಗೂ ಅವನ ಬಗ್ಗೆ ಇತರರಿಗೆ ಹೇಳಲು ಪ್ರಚೋದಿತಳಾದಳು. (ಯೋಹಾನ 4:16-19, 39) ಆದರೆ, ಯೇಸುವಿನ ಅನುಯಾಯಿಗಳು ತಾವು ಸಾರುವಂಥ ಜನರ ಹೃದಯಗಳಲ್ಲೇನಿದೆ ಎಂಬದನ್ನು ಓದಲಾರರು. ಆದಾಗ್ಯೂ ನಾವು ಯೇಸುವಿನಂತೆ ಜನರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸಬಲ್ಲೆವು. ಅವರ ಕಡೆಗೆ ನಮಗಿರುವ ಚಿಂತೆಯನ್ನು ವ್ಯಕ್ತಪಡಿಸಬಲ್ಲೆವು ಮತ್ತು ಅವರ ಆಸಕ್ತಿ, ಸಮಸ್ಯೆಗಳು ಹಾಗೂ ಅಗತ್ಯಗಳಿಗನುಸಾರ ನಮ್ಮ ಮಾತುಗಳನ್ನು ಹೆಣೆಯಬಲ್ಲೆವು.

ಯೇಸು ಏನನ್ನು ಸಾರಿದನು?

10, 11. (ಎ) ಯೇಸು ಏನನ್ನು ಸಾರಿದನು? (ಬಿ) ದೇವರ ರಾಜ್ಯದ ಅಗತ್ಯ ಹೇಗೆ ಉದ್ಭವಿಸಿತು?

10 ಯೇಸು ಏನನ್ನು ಸಾರಿದನು? ನೀವು ಇದಕ್ಕುತ್ತರವನ್ನು, ಯೇಸುವನ್ನು ಪ್ರತಿನಿಧಿಸುತ್ತೇವೆಂದು ಹೇಳಿಕೊಳ್ಳುವ ಅನೇಕ ಚರ್ಚುಗಳ ಬೋಧನೆಗಳಲ್ಲಿ ಹುಡುಕುವಲ್ಲಿ, ಅವನು ಯಾವುದೋ ವಿಧದ ಸಾಮಾಜಿಕ ಸುಧಾರಣೆಯನ್ನು ಘೋಷಿಸಿದನು ಎಂಬ ತೀರ್ಮಾನಕ್ಕೆ ಖಂಡಿತ ಬರುವಿರಿ. ಅಥವಾ, ಅವನು ರಾಜಕೀಯ ಸುಧಾರಣೆಯನ್ನು ಬೋಧಿಸಿದನು ಇಲ್ಲವೇ ಪ್ರತಿಯೊಬ್ಬನ ವೈಯಕ್ತಿಕ ರಕ್ಷಣೆಯೇ ಎಲ್ಲಕ್ಕಿಂತ ಪ್ರಾಮುಖ್ಯವೆಂದು ತಿಳಿಸಿದನು ಎಂಬ ಅಭಿಪ್ರಾಯ ನಿಮ್ಮಲ್ಲಿ ಮೂಡಬಹುದು. ಆದರೆ ಈ ಮುಂಚೆ ನಾವು ಗಮನಿಸಿದಂತೆ, ಯೇಸು ಸ್ಪಷ್ಟವಾಗಿ ಹೇಳಿದ್ದು: “ನಾನು ದೇವರ ರಾಜ್ಯದ ಸುವಾರ್ತೆಯನ್ನು . . . ಪ್ರಕಟಿಸಬೇಕಾಗಿದೆ.” ಅದರಲ್ಲಿ ಏನು ಒಳಗೂಡಿತ್ತು?

11 ಯೆಹೋವನ ಪರಮಾಧಿಕಾರದ ಬಗ್ಗೆ ಸೈತಾನನು ಆದಿಯಲ್ಲಿ ಸವಾಲೆಸೆದಾಗ ಯೇಸು ಸ್ವರ್ಗದಲ್ಲಿ ಉಪಸ್ಥಿತನಿದ್ದನು ಎಂಬದನ್ನು ನೆನಪಿಸಿಕೊಳ್ಳಿ. ಯೆಹೋವನು ಅನ್ಯಾಯಗಾರನು, ತನ್ನ ಸೃಷ್ಟಿಜೀವಿಗಳ ಒಳ್ಳೇದನ್ನು ಬಯಸದ ಪ್ರಭು ಎಂಬುದಾಗಿ ಸೈತಾನನು ತನ್ನ ತಂದೆಯ ಮೇಲೆ ಸುಳ್ಳಾರೋಪ ಹೊರಿಸಿದಾಗ ಯೇಸುವಿಗೆಷ್ಟು ನೋವಾಗಿರಬೇಕು! ಇಡೀ ಮಾನವಕುಲದ ಹೆತ್ತವರಾಗಲಿದ್ದ ಆದಾಮ ಹವ್ವರು ಸೈತಾನನ ಸುಳ್ಳಾರೋಪವನ್ನು ನಂಬಿದಾಗ ದೇವರ ಮಗನೆಷ್ಟು ನೊಂದಿರಬೇಕು! ಆ ದಂಗೆಯ ಕಾರಣದಿಂದಲೇ ಮಾನವ ಕುಟುಂಬವು ಪಾಪ ಮತ್ತು ಮರಣದಿಂದ ಬಾಧಿತರಾಗಿದ್ದನ್ನು ಮಗನು ನೋಡಿದ್ದನು. (ರೋಮನ್ನರಿಗೆ 5:12) ಆದರೂ ತನ್ನ ತಂದೆಯು ಮುಂದೊಂದು ದಿನ ತನ್ನ ರಾಜ್ಯದ ಮೂಲಕ ಎಲ್ಲವನ್ನೂ ಸರಿಪಡಿಸುವನು ಎಂಬುದನ್ನು ಕಲಿತಾಗ ಅವನೆಷ್ಟು ಪುಳಕಗೊಂಡಿರಬೇಕು!

12, 13. ದೇವರ ರಾಜ್ಯವು ಯಾವ ಅನ್ಯಾಯಗಳನ್ನು ಸರಿಪಡಿಸುವುದು? ಆ ರಾಜ್ಯವನ್ನು ಯೇಸು ತನ್ನ ಶುಶ್ರೂಷೆಯ ಮುಖ್ಯ ವಿಷಯವಾಗಿ ಮಾಡಿದ್ದು ಹೇಗೆ?

12 ಎಲ್ಲಕ್ಕಿಂತ ಮೊದಲಾಗಿ, ಯಾವ ವಿವಾದಾಂಶವನ್ನು ಬಗೆಹರಿಸಬೇಕಿತ್ತು? ಯೆಹೋವನ ಪರಿಶುದ್ಧ ನಾಮವು ಪವಿತ್ರೀಕರಿಸಲ್ಪಡಬೇಕಿತ್ತು. ಸೈತಾನ ಮತ್ತು ಅವನ ಪಕ್ಷದವರು ಯೆಹೋವನ ನಾಮದ ಮೇಲೆ ಹೊರಿಸಿರುವ ನಿಂದನೆಯ ಪ್ರತಿಯೊಂದು ಕುರುಹನ್ನೂ ಇಲ್ಲವಾಗಿಸಬೇಕಿತ್ತು. ಯೆಹೋವನು ಆಳ್ವಿಕೆ ನಡೆಸುವ ವಿಧ ಅಂದರೆ ಆತನ ಪರಮಾಧಿಕಾರ ನಿರ್ದೋಷೀಕರಿಸಲ್ಪಡಬೇಕಿತ್ತು. ಯೇಸು ಈ ಪ್ರಮುಖ ವಿವಾದಾಂಶಗಳನ್ನು ಯಾವುದೇ ಮಾನವರಿಗಿಂತ ಉತ್ತಮವಾಗಿ ಅರ್ಥಮಾಡಿಕೊಂಡನು. ಮಾದರಿ ಪ್ರಾರ್ಥನೆಯಲ್ಲಿ, ಮೊದಲು ತನ್ನ ತಂದೆಯ ನಾಮವು ಪವಿತ್ರೀಕರಿಸಲ್ಪಡುವಂತೆ, ನಂತರ ತನ್ನ ತಂದೆಯ ರಾಜ್ಯವು ಬರುವಂತೆ ಮತ್ತು ತದನಂತರ ದೇವರ ಚಿತ್ತವು ಭೂಮಿಯಲ್ಲಿ ನೆರವೇರುವಂತೆ ಕೇಳಿಕೊಳ್ಳಲು ತನ್ನ ಹಿಂಬಾಲಕರಿಗೆ ಬೋಧಿಸಿದನು. (ಮತ್ತಾಯ 6:9, 10) ಕ್ರಿಸ್ತ ಯೇಸು ಅರಸನಾಗಿರುವ ದೇವರ ರಾಜ್ಯವು ಬೇಗನೆ ಸೈತಾನನ ಭ್ರಷ್ಟ ವ್ಯವಸ್ಥೆಯಿಂದ ಭೂಮಿಯನ್ನು ಪಾರುಮಾಡಲಿರುವುದು ಮತ್ತು ಯೆಹೋವನ ನೀತಿಯುತ ಆಳ್ವಿಕೆಯನ್ನು ಶಾಶ್ವತವಾಗಿ ನೆಲೆಗೊಳಿಸುವುದು.—ದಾನಿಯೇಲ 2:44.

13 ಆ ರಾಜ್ಯವೇ ಯೇಸುವಿನ ಶುಶ್ರೂಷೆಯ ಮುಖ್ಯ ವಿಷಯವಾಗಿತ್ತು. ಅವನ ಎಲ್ಲ ಮಾತುಗಳು ಮತ್ತು ಕಾರ್ಯಗಳು ಆ ರಾಜ್ಯ ಏನಾಗಿದೆ ಮತ್ತು ಅದು ಯೆಹೋವನ ಉದ್ದೇಶವನ್ನು ಹೇಗೆ ಪೂರೈಸಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದವು. ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ತನ್ನ ಉದ್ದೇಶದಿಂದ ತನ್ನನ್ನು ಪಕ್ಕಕ್ಕೆ ಸರಿಸುವಂತೆ ಅವನು ಯಾವದನ್ನೂ ಅನುಮತಿಸಲಿಲ್ಲ. ಅವನ ದಿನಗಳಲ್ಲಿ, ಅನೇಕ ಸಾಮಾಜಿಕ ಸಮಸ್ಯೆಗಳು ಬಲವಾಗಿ ಬೇರೂರಿದ್ದವು. ಅನ್ಯಾಯದ ಕೃತ್ಯಗಳು ತುಂಬಿಹೋಗಿದ್ದವು. ಆದರೂ ಅವನ ಗಮನ ಮಾತ್ರ ತನ್ನ ಸಂದೇಶ ಮತ್ತು ಕೆಲಸದ ಮೇಲೆ ನೆಟ್ಟಿತ್ತು. ಯೇಸು ಹಾಗೆ ಗಮನ ನೆಟ್ಟಿದ್ದರ ಅರ್ಥ, ಅವನು ಸಂಕುಚಿತ ಮನೋಭಾವದವನೂ ನಿರ್ದಯಿಯೂ ಬೇಸರಹುಟ್ಟಿಸುವವನೂ ಆಗಿದ್ದನೆಂದೋ? ಖಂಡಿತ ಇಲ್ಲ!

14, 15. (ಎ) ಯೇಸು ತಾನು “ಸೊಲೊಮೋನನಿಗಿಂತಲೂ ಹೆಚ್ಚಿನವನು” ಎಂದು ಹೇಗೆ ತೋರಿಸಿದನು? (ಬಿ) ನಾವೇನನ್ನು ಸಾರುತ್ತೇವೋ ಆ ವಿಷಯದಲ್ಲಿ ಯೇಸುವನ್ನು ಹೇಗೆ ಅನುಕರಿಸಬಲ್ಲೆವು?

14 ಯೇಸುವಿನ ಬೋಧನೆಗಳು ಆಸಕ್ತಿಕರವೂ ವೈವಿಧ್ಯಮಯವೂ ಆಗಿರುವುದನ್ನು ನಾವು ಈ ಭಾಗದಾದ್ಯಂತ ನೋಡಲಿದ್ದೇವೆ. ಅವನು ಜನರ ಹೃದಯಗಳನ್ನು ತಲುಪಿದನು. ಈ ವಿಷಯದಲ್ಲಿ ನಮಗೆ ವಿವೇಕಿ ಅರಸನಾದ ಸೊಲೊಮೋನನ ನೆನಪಾಗಬಹುದು. ಯೆಹೋವನು ತನಗೆ ಬರೆಯಲು ಪ್ರೇರಿಸಿದ ವಿಚಾರಗಳನ್ನು ತಿಳಿಯಪಡಿಸಲಿಕ್ಕಾಗಿ ಅವನು ಹರ್ಷಕರ ಮಾತುಗಳನ್ನು, ಒಪ್ಪಿಗೆಯ ಸತ್ಯದ ಮಾತುಗಳನ್ನು ಹುಡುಕಿದನು. (ಪ್ರಸಂಗಿ 12:10) ಯೆಹೋವನು ಆ ಅಪರಿಪೂರ್ಣ ಮನುಷ್ಯನಿಗೆ “ಮನೋವಿಶಾಲತೆಯನ್ನೂ” ಅನುಗ್ರಹಿಸಿದನು. ಇದು ಅವನಿಗೆ ಪಕ್ಷಿಗಳಿಂದ ಹಿಡಿದು ಮೀನುಗಳ ವರೆಗೆ ಮತ್ತು ಮರಗಳಿಂದ ಹಿಡಿದು ಮೃಗಗಳ ವರೆಗೆ ವೈವಿಧ್ಯಮಯ ವಿಷಯಗಳನ್ನು ಮಾತಾಡುವಂತೆ ಸಾಧ್ಯಮಾಡಿತು. ಸೊಲೊಮೋನನ ಮಾತುಗಳನ್ನು ಕೇಳಿಸಿಕೊಳ್ಳಲು ಜನರು ಬಹುದೂರದಿಂದ ಬರುತ್ತಿದ್ದರು. (1 ಅರಸುಗಳು 4:29-34) ಆದರೂ ಯೇಸು, “ಸೊಲೊಮೋನನಿಗಿಂತಲೂ ಹೆಚ್ಚಿನವನು.” (ಮತ್ತಾಯ 12:42) ಸೊಲೊಮೋನನಿಗಿಂತಲೂ ಹೆಚ್ಚು “ಮನೋವಿಶಾಲತೆ” ಹೊಂದಿರುವ ಯೇಸುವೇ ಹೆಚ್ಚು ವಿವೇಕಿಯಾಗಿದ್ದಾನೆ. ಜನರಿಗೆ ಬೋಧಿಸುತ್ತಿದ್ದಾಗ ಯೇಸು ದೇವರ ವಾಕ್ಯವಲ್ಲದೇ, ಪಕ್ಷಿಗಳು, ಪ್ರಾಣಿಗಳು, ಮೀನು, ಕೃಷಿ, ಹವಾಗುಣ, ಸದ್ಯದ ಘಟನೆಗಳು, ಇತಿಹಾಸ ಹಾಗೂ ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ತನಗಿದ್ದ ಶ್ರೇಷ್ಠ ಜ್ಞಾನವನ್ನು ಉಪಯೋಗಿಸಿದನು. ಅದೇಸಮಯದಲ್ಲಿ, ಅವನು ತನ್ನ ಜ್ಞಾನವನ್ನೆಂದೂ ಇತರರ ಮೆಚ್ಚುಗೆ ಗಳಿಸಲಿಕ್ಕಾಗಿ ಬಳಸಲಿಲ್ಲ. ಅವನ ಸಂದೇಶ ಸರಳವೂ ಸ್ಪಷ್ಟವೂ ಆಗಿತ್ತು. ಅವನ ಮಾತುಗಳನ್ನು ಕೇಳಿಸಿಕೊಳ್ಳಲು ಜನರು ಹರ್ಷಿಸುತ್ತಿದ್ದುದರಲ್ಲಿ ಆಶ್ಚರ್ಯವಿಲ್ಲ!—ಮಾರ್ಕ 12:37; ಲೂಕ 19:48.

15 ಇಂದು ಕ್ರೈಸ್ತರು ಯೇಸುವಿನ ಮಾರ್ಗವನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಅವನಂತೆ ನಮಗೆ ಅಪರಿಮಿತ ವಿವೇಕ ಹಾಗೂ ಜ್ಞಾನವಿಲ್ಲ. ಆದರೂ ನಮ್ಮಲ್ಲಿ ಸ್ವಲ್ಪಮಟ್ಟಿಗಿನ ಜ್ಞಾನ ಹಾಗೂ ಅನುಭವವಿದೆ. ದೇವರ ವಾಕ್ಯದ ಸತ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವಾಗ ನಾವದನ್ನು ಬಳಸಬಲ್ಲೆವು. ಉದಾಹರಣೆಗೆ ಹೆತ್ತವರು, ಯೆಹೋವನಿಗೆ ತನ್ನ ಮಕ್ಕಳ ಮೇಲೆ ಎಷ್ಟು ಪ್ರೀತಿಯಿದೆ ಎಂಬುದನ್ನು ದೃಷ್ಟಾಂತಿಸಲಿಕ್ಕಾಗಿ, ಮಕ್ಕಳನ್ನು ಬೆಳೆಸಿದ ತಮ್ಮ ಸ್ವಂತ ಅನುಭವವನ್ನೇ ಉಪಯೋಗಿಸಬಹುದು. ಇತರರು ಐಹಿಕ ಕೆಲಸದಿಂದ, ಶಾಲೆಯಿಂದ ಅಥವಾ ಜನರ ಬಗ್ಗೆ ಅವರಿಗಿರುವ ಜ್ಞಾನದಿಂದ ಮತ್ತು ಸದ್ಯದ ಘಟನೆಗಳಿಂದ ಉದಾಹರಣೆಗಳನ್ನು ಇಲ್ಲವೇ ದೃಷ್ಟಾಂತಗಳನ್ನು ತಿಳಿಸಬಹುದು. ಆದರೆ ಅದೇಸಮಯದಲ್ಲಿ, ದೇವರ ರಾಜ್ಯದ ಸುವಾರ್ತೆ ಎಂಬ ನಮ್ಮ ಸಂದೇಶದಿಂದ ಬೇರೆಡೆಗೆ ಗಮನ ಸೆಳೆಯದಂತೆ ಜಾಗರೂಕತೆ ವಹಿಸಬೇಕು.—1 ತಿಮೊಥೆಯ 4:16.

ಶುಶ್ರೂಷೆಯ ಕಡೆಗೆ ಯೇಸುವಿಗಿದ್ದ ಮನೋಭಾವ

16, 17. (ಎ) ಶುಶ್ರೂಷೆಯ ಬಗ್ಗೆ ಯೇಸುವಿಗೆ ಯಾವ ಮನೋಭಾವವಿತ್ತು? (ಬಿ) ಶುಶ್ರೂಷೆಯೇ ತನ್ನ ಜೀವನದ ಪ್ರಧಾನಬಿಂದುವೆಂದು ಯೇಸು ಹೇಗೆ ತೋರಿಸಿದನು?

16 ಯೇಸು ತನ್ನ ಶುಶ್ರೂಷೆಯನ್ನು ಅಮೂಲ್ಯ ನಿಕ್ಷೇಪವೆಂದೆಣಿಸಿದನು. ಗೊಂದಲಮಯ ಮಾನವ ನಿರ್ಮಿತ ಬೋಧನೆ ಮತ್ತು ಆಚಾರಗಳನ್ನು ಕಲಿಸಿ ತನ್ನ ಸ್ವರ್ಗೀಯ ತಂದೆಯನ್ನು ಜನರಿಂದ ಮರೆಮಾಡದೆ, ಆತನು ನಿಜವಾಗಿಯೂ ಹೇಗಿದ್ದಾನೋ ಹಾಗೆ ಪರಿಚಯಮಾಡಿಕೊಳ್ಳಲು ಅವರಿಗೆ ಸಹಾಯ ಮಾಡುವುದರಲ್ಲಿ ಹರ್ಷಿಸಿದನು. ಯೆಹೋವನೊಂದಿಗೆ ಅನುಗ್ರಹದಾಯಕ ಸಂಬಂಧ ಹಾಗೂ ನಿತ್ಯಜೀವದ ನಿರೀಕ್ಷೆಯನ್ನು ಪಡೆಯುವಂತೆ ಜನರಿಗೆ ಸಹಾಯ ಮಾಡುವುದು ಯೇಸುವಿಗೆ ಅಚ್ಚುಮೆಚ್ಚಿನ ವಿಷಯವಾಗಿತ್ತು. ಸುವಾರ್ತೆಯ ಮೂಲಕ ಜನರಿಗೆ ಸಾಂತ್ವನ ಹಾಗೂ ಆನಂದವನ್ನು ಉಂಟುಮಾಡಲು ಹರ್ಷಿಸಿದನು. ತನ್ನಲ್ಲಿ ಅಂಥ ಅನಿಸಿಕೆಗಳಿವೆಯೆಂದು ಯೇಸು ಹೇಗೆ ತೋರಿಸಿದನು? ಮೂರು ವಿಧಗಳನ್ನು ಪರಿಗಣಿಸಿ.

17 ಮೊದಲನೆಯದಾಗಿ, ಯೇಸು ಶುಶ್ರೂಷೆಯನ್ನು ತನ್ನ ಜೀವನದ ಪ್ರಧಾನಬಿಂದುವಾಗಿ ಮಾಡಿದನು. ರಾಜ್ಯದ ಕುರಿತು ಮಾತಾಡುವುದೇ ಅವನ ಜೀವನವೃತ್ತಿ, ಜೀವನಸಾಧನೆ ಮತ್ತು ಮುಖ್ಯ ಅಭಿರುಚಿಯಾಗಿತ್ತು. ಆದ್ದರಿಂದಲೇ 5ನೇ ಅಧ್ಯಾಯದಲ್ಲಿ ತಿಳಿಸಲಾದಂತೆ, ಯೇಸು ವಿವೇಕಯುತವಾಗಿ ತನ್ನ ಜೀವನವನ್ನು ಸರಳವಾಗಿಟ್ಟನು. ಇತರರಿಗೆ ಸಲಹೆ ನೀಡಿದ್ದು ಮಾತ್ರವಲ್ಲ ಸ್ವತಃ ತನ್ನ ಕಣ್ಣುಗಳನ್ನು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಿದನು. ಹಣವನ್ನು ವ್ಯಯಿಸಿ ಕಾಲಕಾಲಕ್ಕೆ ದುರಸ್ತಿಗೊಳಿಸಬೇಕಾಗಿರುವ ಇಲ್ಲವೇ ಬದಲಿಸಬೇಕಾಗಿರುವ ಅನೇಕ ವಸ್ತುಗಳ ಅಪಕರ್ಷಣೆ ಅವನಿಗಿರಲಿಲ್ಲ. ಯಾವುದೇ ವಿಷಯವು ಶುಶ್ರೂಷೆಯನ್ನು ಮಾಡುವುದರಿಂದ ತನ್ನನ್ನು ಅನಗತ್ಯವಾಗಿ ಅಪಕರ್ಷಿಸದಂತೆ ಅವನು ಸರಳ ಜೀವನ ನಡೆಸಿದನು.—ಮತ್ತಾಯ 6:22; 8:20.

18. ಯೇಸು ಶುಶ್ರೂಷೆಯಲ್ಲಿ ತನ್ನನ್ನೇ ಹೇಗೆ ಪೂರ್ತಿಯಾಗಿ ತೊಡಗಿಸಿಕೊಂಡನು?

18 ಎರಡನೆಯದಾಗಿ, ಯೇಸು ಶುಶ್ರೂಷೆಯಲ್ಲಿ ತನ್ನನ್ನೇ ಪೂರ್ತಿಯಾಗಿ ತೊಡಗಿಸಿಕೊಂಡನು. ಅದಕ್ಕಾಗಿ ಅಪಾರ ಶ್ರಮವಹಿಸಿದನು. ಜನರಿಗೆ ಸುವಾರ್ತೆಯನ್ನು ಸಾರಲಿಕ್ಕಾಗಿ ಪ್ಯಾಲೆಸ್ಟೈನ್‌ ಆದ್ಯಂತ ನೂರಾರೂ ಕಿಲೋಮೀಟರ್‌ ನಡೆದನು. ಮನೆಗಳಲ್ಲಿ, ಬೀದಿ ಚೌಕಗಳಲ್ಲಿ, ಮಾರುಕಟ್ಟೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅವನು ಜನರೊಂದಿಗೆ ಮಾತನಾಡಿದನು. ಇದಕ್ಕೆಂದೇ, ವಿಶ್ರಾಂತಿಯನ್ನೂ ಅನ್ನಪಾನಗಳನ್ನೂ ತನ್ನ ಅತ್ಯಾಪ್ತ ಸ್ನೇಹಿತರೊಂದಿಗೆ ವಿಶ್ರಮಿಸಲು ದೊರೆತ ಅತ್ಯಲ್ಪ ಸಮಯವನ್ನೂ ತ್ಯಾಗಮಾಡಿದನು. ಅಷ್ಟೇಕೆ, ಸಾಯುವಾಗಲೂ ದೇವರ ರಾಜ್ಯದ ಸುವಾರ್ತೆಯನ್ನು ಇತರರಿಗೆ ಹಂಚಿದನು!—ಲೂಕ 23:39-43.

19, 20. ಸಾರುವ ಕೆಲಸವು ತುರ್ತಿನದ್ದೆಂಬುದನ್ನು ಯೇಸು ಹೇಗೆ ದೃಷ್ಟಾಂತಿಸಿದನು?

19 ಮೂರನೆಯದಾಗಿ, ಯೇಸು ಶುಶ್ರೂಷೆಯನ್ನು ತುರ್ತಿನ ವಿಷಯವೆಂದು ಪರಿಗಣಿಸಿದನು. ಸಿಖರ್‌ ಊರಿನ ಹೊರಗೆ, ಬಾವಿಯ ಬಳಿ ಸಮಾರ್ಯದ ಸ್ತ್ರೀಯೊಂದಿಗೆ ಅವನು ನಡೆಸಿದ ಸಂಭಾಷಣೆಯನ್ನು ನೆನಪಿಸಿಕೊಳ್ಳಿ. ಆ ಸಂದರ್ಭದಲ್ಲಿ, ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವ ತುರ್ತು ಅಗತ್ಯವನ್ನು ಯೇಸುವಿನ ಅಪೊಸ್ತಲರು ಸ್ಪಷ್ಟವಾಗಿ ಗ್ರಹಿಸಲಿಲ್ಲ. ಯೇಸು ಅವರಿಗಂದದ್ದು: “ಕೊಯ್ಲಿನ ಕಾಲ ಬರಲು ಇನ್ನೂ ನಾಲ್ಕು ತಿಂಗಳುಗಳಿವೆ ಎಂದು ನೀವು ಹೇಳುತ್ತೀರಲ್ಲವೆ? ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಕೊಯ್ಲಿಗೆ ಸಿದ್ಧವಾಗಿವೆ ಎಂದು ನಾನು ನಿಮಗೆ ಹೇಳುತ್ತೇನೆ.”—ಯೋಹಾನ 4:35.

20 ಯೇಸು ಈ ದೃಷ್ಟಾಂತವನ್ನು ಆಗ ಇದ್ದ ಋತುವಿನಿಂದ ಆರಿಸಿಕೊಂಡನು. ಅದು ಕಿಸ್ಲೇವ್‌ ತಿಂಗಳಾಗಿತ್ತು (ನವೆಂಬರ್‌/ಡಿಸೆಂಬರ್‌). ಇನ್ನು ನಾಲ್ಕು ತಿಂಗಳ ತನಕ ಅಂದರೆ ನೈಸಾನ್‌ 14ರ ಪಸ್ಕಹಬ್ಬದ ವರೆಗೆ ಜವೆಗೋದಿಯ ಕೊಯ್ಲು ಆರಂಭವಾಗುತ್ತಿರಲಿಲ್ಲ. ಆದ್ದರಿಂದ ಆ ಸಮಯದಲ್ಲಿ ರೈತರು ಕೊಯ್ಲಿನ ತರಾತುರಿಯಲ್ಲಿರಲಿಲ್ಲ. ಅವರಿಗೆ ಇನ್ನೂ ಬಹಳಷ್ಟು ಸಮಯಾವಕಾಶವಿತ್ತು. ಆದರೆ ಜನರ ಕೊಯ್ಲಿನ ಕುರಿತೇನು? ಅನೇಕರು ಕೇಳಿ ಕಲಿತುಕೊಳ್ಳಲು, ಕ್ರಿಸ್ತನ ಶಿಷ್ಯರಾಗಲು ಮತ್ತು ಯೆಹೋವನು ಅವರಿಗೆ ಲಭ್ಯಗೊಳಿಸಿದ ಅದ್ಭುತಕರ ನಿರೀಕ್ಷೆಯನ್ನು ಪಡೆದುಕೊಳ್ಳಲು ತಯಾರಿದ್ದರು. ಈ ಸಾಂಕೇತಿಕ ಹೊಲಗಳನ್ನೇ ಯೇಸು ನೋಡುತ್ತಿದ್ದನು. ತೆನೆಗಳು ಮಾಗಿರುವುದನ್ನು ಮತ್ತು ಅವು ಗಾಳಿಗೆ ತೊನೆದಾಡುತ್ತಿರುವುದನ್ನು, ಹೀಗೆ ಕೊಯ್ಲಿಗೆ ಸಿದ್ಧವಿರುವುದಾಗಿ ಸೂಚನೆ ಕೊಡುತ್ತಿರುವುದನ್ನು ಅವನು ನೋಡಸಾಧ್ಯವಿತ್ತು. ಇದೇ ಸೂಕ್ತ ಸಮಯವಾಗಿತ್ತು ಮತ್ತು ತುರ್ತಿನಿಂದ ಕೆಲಸ ಮಾಡಬೇಕಿತ್ತು! ಆದ್ದರಿಂದಲೇ, ಒಂದು ಊರಿನ ಜನರು ಯೇಸುವನ್ನು ತಮ್ಮಲ್ಲೇ ಇಟ್ಟುಕೊಳ್ಳಲು ಪ್ರಯತ್ನಿಸಿದಾಗ, “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ” ಎಂದವನು ಹೇಳಿದನು.—ಲೂಕ 4:43.

21. ನಾವು ಯೇಸುವನ್ನು ಹೇಗೆ ಅನುಕರಿಸಬಲ್ಲೆವು?

21 ನಾವು ಈಗಾಗಲೇ ಚರ್ಚಿಸಿದ ಮೂರು ವಿಧಗಳಲ್ಲೂ ನಾವು ಯೇಸುವನ್ನು ಅನುಕರಿಸಸಾಧ್ಯವಿದೆ. ಕ್ರೈಸ್ತ ಶುಶ್ರೂಷೆಯನ್ನು ನಮ್ಮ ಜೀವನದ ಪ್ರಧಾನಬಿಂದುವಾಗಿ ನಾವು ಮಾಡಬಲ್ಲೆವು. ನಮಗೆ ಕೌಟುಂಬಿಕ ಹಾಗೂ ಐಹಿಕ ಜವಾಬ್ದಾರಿಗಳಿರುವುದಾದರೂ ಯೇಸುವಿನಂತೆ ಶುಶ್ರೂಷೆಯಲ್ಲಿ ಹುರುಪಿನಿಂದ ಕ್ರಮವಾಗಿ ಭಾಗವಹಿಸುವುದರ ಮೂಲಕ ಅದಕ್ಕೆ ಪ್ರಥಮ ಸ್ಥಾನ ಕೊಡುತ್ತೇವೆಂಬುದನ್ನು ತೋರಿಸಬಲ್ಲೆವು. (ಮತ್ತಾಯ 6:33; 1 ತಿಮೊಥೆಯ 5:8) ನಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ಉದಾರವಾಗಿ ಕೊಟ್ಟು ಶುಶ್ರೂಷೆಯನ್ನು ಬೆಂಬಲಿಸುವ ಮೂಲಕ ನಾವು ನಮ್ಮನ್ನು ಅದರಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಬಲ್ಲೆವು. (ಲೂಕ 13:24) ಮತ್ತು ನಮ್ಮ ಕೆಲಸ ಬಹಳ ತುರ್ತಿನದ್ದಾಗಿದೆ ಎಂಬುದನ್ನು ನಾವು ಯಾವಾಗಲೂ ಮನಸ್ಸಿನಲ್ಲಿಡಬಲ್ಲೆವು. (2 ತಿಮೊಥೆಯ 4:2) ಸಾರಲು ಸಿಗುವ ಪ್ರತಿಯೊಂದು ಅವಕಾಶವನ್ನು ನಾವು ಬಳಸಿಕೊಳ್ಳಬೇಕು!

22. ಮುಂದಿನ ಅಧ್ಯಾಯದಲ್ಲಿ ಏನನ್ನು ಪರಿಗಣಿಸಲಾಗುವುದು?

22 ತನ್ನ ಮರಣದ ನಂತರವೂ ಆ ಕೆಲಸ ಮುಂದುವರಿಯುವಂತೆ ನೋಡಿಕೊಳ್ಳುವ ಮೂಲಕವೂ ಅದು ಪ್ರಾಮುಖ್ಯ ಎಂಬುದನ್ನು ಯೇಸು ತೋರಿಸಿಕೊಟ್ಟನು. ಸಾರುವ ಮತ್ತು ಬೋಧಿಸುವ ಕೆಲಸವನ್ನು ಮುಂದುವರಿಸುವಂತೆ ಅವನು ತನ್ನ ಶಿಷ್ಯರಿಗೆ ಆಜ್ಞೆಯಿತ್ತನು. ಆ ಆಜ್ಞೆಯೇ ಮುಂದಿನ ಅಧ್ಯಾಯದ ಮುಖ್ಯ ವಿಷಯವಾಗಿದೆ.

^ ಪ್ಯಾರ. 3 ಉದಾಹರಣೆಗೆ, ಯೆಹೂದ್ಯನಾದ ಅವನೇಕೆ ಸಮಾರ್ಯದವಳಾದ ತನ್ನೊಂದಿಗೆ ಮಾತನಾಡುತ್ತಿದ್ದಾನೆಂದು ಕೇಳುವ ಮೂಲಕ, ಆ ಎರಡು ಜನಾಂಗಗಳ ಮಧ್ಯೆ ಶತಮಾನಗಳಿಂದಲೂ ಇದ್ದ ದ್ವೇಷವನ್ನು ಆಕೆ ಸೂಚಿಸುತ್ತಾಳೆ. (ಯೋಹಾನ 4:9) ತಾವು ಯಾಕೋಬನ ವಂಶಜರೆಂದು ಕೂಡ ಆಕೆ ಪ್ರತಿಪಾದಿಸುತ್ತಾಳೆ. ಈ ವಿಚಾರವನ್ನು ಆ ದಿನಗಳಲ್ಲಿ ಯೆಹೂದ್ಯರು ದೃಢವಾಗಿ ಅಲ್ಲಗಳೆಯುತ್ತಿದ್ದರು. (ಯೋಹಾನ 4:12) ಅಲ್ಲದೆ, ಸಮಾರ್ಯದವರು ವಿದೇಶಿ ಜನರ ವಂಶಜರೆಂಬುದನ್ನು ಸೂಚಿಸಲಿಕ್ಕಾಗಿ ಅವರನ್ನು ಕೂತಾನ್ಯರು ಎಂಬ ಹೆಸರಿನಿಂದ ಕರೆಯುತ್ತಿದ್ದರು.

^ ಪ್ಯಾರ. 5 ಸಾರುವುದರ ಅರ್ಥ, ಒಂದು ಸಂದೇಶವನ್ನು ಘೋಷಿಸುವುದು ಅಥವಾ ಪ್ರಕಟಿಸುವುದಾಗಿದೆ. ಬೋಧಿಸುವುದರ ಅರ್ಥವೂ ಇದೇ ಆಗಿರುವುದಾದರೂ ಅದರಲ್ಲಿ, ಸಂದೇಶವನ್ನು ಹೆಚ್ಚು ಆಳವಾಗಿ ಮತ್ತು ವಿವರವಾಗಿ ತಿಳಿಸುವುದು ಸೇರಿದೆ. ವಿದ್ಯಾರ್ಥಿಗಳು ಏನನ್ನು ಕೇಳಿಸಿಕೊಳ್ಳುತ್ತಾರೋ ಅದಕ್ಕನುಸಾರ ಕ್ರಿಯೆಗೈಯುವಂತೆ ಪ್ರಚೋದಿಸಲಿಕ್ಕಾಗಿ ಅವರ ಹೃದಯಗಳನ್ನು ತಲುಪುವ ಮಾರ್ಗಗಳನ್ನು ಹುಡುಕುವುದೂ ಉತ್ತಮ ಬೋಧನೆಯಲ್ಲಿ ಸೇರಿದೆ.