ಪ್ರಿಯ ಅಪ್ಪ-ಅಮ್ಮಂದಿರಿಗೆ
ನೀವು ಮಕ್ಕಳಿಗೆ ಕೊಡುತ್ತಿರೋ ಪ್ರೀತಿ ಮಾರ್ಗದರ್ಶನೆ ಸಂರಕ್ಷಣೆ ಇವೆಲ್ಲ ಒಳ್ಳೇ ಉಡುಗೊರೆಗಳು. ಆದರೂ ಇವೆಲ್ಲಕ್ಕಿಂತ ಅತ್ಯಮೂಲ್ಯವಾದ ಉಡುಗೊರೆಯೊಂದಿದೆ. ಅದನ್ನು ನಿಮ್ಮ ಮಗುವಿಗೆ ಕೊಡಲು ಬಯಸುತ್ತೀರಾ? ಯೆಹೋವ ದೇವರ ಬಗ್ಗೆ ಮತ್ತು ಬೈಬಲ್ ಸತ್ಯಗಳ ಬಗ್ಗೆ ಮಕ್ಕಳಿಗೆ ಕಲಿಸುವುದೇ ಆ ಉಡುಗೊರೆ. (ಯೋಹಾನ 17:3) ಈ ದೇವಜ್ಞಾನ ಮಕ್ಕಳಿಗೆ ದೇವರ ಮೇಲೆ ಅಪಾರ ಪ್ರೀತಿ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಚಿಕ್ಕ ವಯಸ್ಸಿನಿಂದಲೇ ಸ್ವಇಷ್ಟದಿಂದ ಯೆಹೋವ ದೇವರ ಸೇವೆ ಮಾಡಲು ಮಕ್ಕಳನ್ನು ಪ್ರೇರಿಸುತ್ತದೆ.—ಮತ್ತಾಯ 21:16.
ಬಹುತೇಕ ಹೆತ್ತವರ ಅನುಭವದ ಪ್ರಕಾರ, ಒಂದು ವಿಷಯವನ್ನು ಚಿಕ್ಕಚಿಕ್ಕ ಪಾಠಗಳ ಚಟುವಟಿಕೆಗಳ ಮೂಲಕ ಹೇಳಿಕೊಡುವಾಗ ಪುಟಾಣಿಗಳು ಚೆನ್ನಾಗಿ ಸ್ಪಂದಿಸುತ್ತಾರೆ. ಇದೇ ಕಾರಣಕ್ಕೇ ನನ್ನ ಬೈಬಲ್ ಪಾಠಗಳು ಅನ್ನೋ ಈ ಪ್ರಕಾಶನವನ್ನು ನಿಮ್ಮ ಕೈಗಿಡುತ್ತಿದ್ದೇವೆ. ಇದನ್ನು ಮೂರು ವರ್ಷದೊಳಗಿನ ಮಕ್ಕಳನ್ನು ಮನಸ್ಸಲ್ಲಿಟ್ಟು ತಯಾರಿಸಲಾಗಿದೆ. ಪಾಠಗಳನ್ನು ಸುಲಭವಾಗಿ ಅರ್ಥವಾಗುವ ಹಾಗೆ ರಚಿಸಲಾಗಿದೆ. ವರ್ಣರಂಜಿತ ಚಿತ್ರಗಳನ್ನು ಕೊಡಲಾಗಿದೆ. ಪಾಠಗಳ ಕೊನೆಯಲ್ಲಿ ಕೆಲವೊಂದು ಚಟುವಟಿಕೆಗಳನ್ನು ಕೊಡಲಾಗಿದೆ. ಈ ಕಿರುಹೊತ್ತಗೆಯಲ್ಲಿರುವ ಪಾಠಗಳನ್ನು ಮಕ್ಕಳಿಗೆ ಓದಿಹೇಳಿ. ಈ ಕಿರುಹೊತ್ತಗೆ ಮಕ್ಕಳಿಗೆ ಆಟಿಕೆ ಆಗದಿರಲಿ. ಬದಲಿಗೆ ಇದು ನಿಮ್ಮ ಮತ್ತು ನಿಮ್ಮ ಮಗುವಿನ ನಡುವಿನ ಸಂವಾದ ಸೇತುವಾಗಲಿ.
ನಿಮ್ಮ ಮಗುವಿಗೆ “ಶೈಶವದಿಂದಲೇ” ಬೈಬಲ್ ಸತ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಈ ಕಿರುಹೊತ್ತಗೆ ನೆರವಾಗುತ್ತದೆ ಅಂತ ನಾವು ನಂಬುತ್ತೇವೆ.—2 ತಿಮೊಥೆಯ 3:14, 15.
ನಿಮ್ಮ ಸಹೋದರರು,
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ