ಮಾಹಿತಿ ಇರುವಲ್ಲಿ ಹೋಗಲು

ನಸೀಬ್‌ ನಮ್ಮ ಜೀವಿತಗಳನ್ನು ಆಳುತ್ತದೊ? ಅಥವಾ ಖುದಾ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾನೊ?

ನಸೀಬ್‌ ನಮ್ಮ ಜೀವಿತಗಳನ್ನು ಆಳುತ್ತದೊ? ಅಥವಾ ಖುದಾ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾನೊ?

ನಸೀಬ್‌ ನಮ್ಮ ಜೀವಿತಗಳನ್ನು ಆಳುತ್ತದೊ? ಅಥವಾ ಖುದಾ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾನೊ?

ಈ ಎರಡು ಪ್ರಶ್ನೆಗಳಿಗೆ ನೀವು ಹೇಗೆ ಉತ್ತರಿಸುವಿರಿ? ಈ ಹಿಂದೆ ನೀವೆಂದೂ ಈ ವಿಷಯದ ಕುರಿತು ಚಿಂತಿಸಿಲ್ಲದಿರಬಹುದು ನಿಜ. ಅಥವಾ ಈ ಪ್ರಶ್ನೆಗಳು ಒಂದಕ್ಕೊಂದು ಹೇಗೆ ಸಂಬಂಧಿಸಿವೆ ಎಂದು ಕುತೂಹಲಪಡುತ್ತಾ, ನೀವು ಹೀಗೆ ಹೇಳಬಹುದು: ‘ನಾವು ಏನು ಮಾಡುತ್ತೇವೋ ಅದಕ್ಕಾಗಿ ಖುದಾ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡುವುದು ನಿಶ್ಚಯ. ನಮ್ಮ ನಸೀಬ್‌ನಲ್ಲಿ ಏನಿದೆಯೋ ಅದು ಖಂಡಿತವಾಗಿಯೂ ಆಗುವುದು.’

ನಿಮ್ಮ ಅಭಿಪ್ರಾಯವು ಇದಾಗಿರುವಲ್ಲಿ, ದಯವಿಟ್ಟು ಇದರ ಬಗ್ಗೆ ತುಸು ಆಲೋಚಿಸಿರಿ!

ನಮ್ಮನ್ನು ಯಾರು ಹೊಣೆಗಾರರನ್ನಾಗಿ ಮಾಡುತ್ತಾನೆ? ಖುದಾ. ಹಾಗಾದರೆ, ನಮ್ಮ ನಸೀಬನ್ನು ಯಾರು ನಿರ್ಧರಿಸುತ್ತಾರೆ? ಅದು ಕೂಡ “ಖುದಾ” ಎಂದು ಅನೇಕರು ಉತ್ತರಿಸುವರು. ಹಾಗೆ ಹೇಳುವುದು ನ್ಯಾಯವಾಗಿದೆಯೋ? ಯಾವುದೋ ಒಂದು ಕೆಲಸವನ್ನು ಮಾಡುವಂತೆ ನೀವು ಒಬ್ಬ ವ್ಯಕ್ತಿಯನ್ನು ಒತ್ತಾಯಿಸಿ, ತದನಂತರ ಆ ಕೆಲಸವನ್ನು ಮಾಡಿದ್ದಕ್ಕಾಗಿ ನೀವು ಅವನ ಮೇಲೆ ದೂರು ಹೊರಿಸುವಿರೊ? ತನ್ನ ಬೇಟಾ ಮನೆಯಿಂದ ಹೊರಗೆ ಹೋಗದಂತೆ ಮಾಡಲಿಕ್ಕಾಗಿ, ಬೆಳಗ್ಗಿನ ಹೊತ್ತು ಮನೆಬಾಗಿಲುಗಳಿಗೆ ಬೀಗಹಾಕಿಹೋಗುವ ಒಬ್ಬ ಅಬ್ಬನ ಉದಾಹರಣೆಯನ್ನು ಪರಿಗಣಿಸಿರಿ. ಅದೇ ದಿನ ಸಾಯಂಕಾಲ ಅವನು ಮನೆಗೆ ಬಂದಾಗ, ತನ್ನ ಬೇಟಾ ಇಡೀ ದಿನ ಮನೆಯಲ್ಲೇ ಉಳಿದಿದ್ದಾನೆ ಎಂಬುದು ಅವನಿಗೆ ಗೊತ್ತಾಗುತ್ತದೆ. ಆಗ, ನೀನು ಯಾಕೆ ಹೊರಗೆ ಹೋಗಲಿಲ್ಲ ಎಂದು ಆ ಅಬ್ಬ ತನ್ನ ಬೇಟಾನನ್ನು ಕೇಳಿ, ಬಹುಶಃ ಅವನನ್ನು ಸೋಮಾರಿಯೆಂದು ದಂಡಿಸುವುದಾದರೆ ಆಗೇನು? ಹಾಗೆ ಮಾಡುವುದು ನ್ಯಾಯವಾದೀತೊ? ಅಂತಹ ಒಬ್ಬ ಅಬ್ಬನ ಕುರಿತು ನಿಮ್ಮ ಅಭಿಪ್ರಾಯವೇನು?

‘ಒಬ್ಬ ಅಬ್ಬ ಎಂದೂ ಹಾಗೆ ಮಾಡಲಾರನು’ ಎಂದು ನೀವು ಹೇಳುತ್ತೀರಿ. ಆದರೂ, ಖುದಾ ಹಾಗೆ ಮಾಡುತ್ತಾನೆ ಎಂಬುದು ಕೆಲವರ ಅಭಿಪ್ರಾಯ. ಒಳ್ಳೇದು ಹಾಗೂ ಕೆಟ್ಟದ್ದು—ಎರಡೂ ಖುದಾನಿಂದಲೇ ಬರುತ್ತಿದ್ದಲ್ಲಿ, ಮತ್ತು ಆತನೇ ನಮ್ಮ ಹಣೆಬರಹವನ್ನು ಬರೆದಿರುವಲ್ಲಿ, ನಾವು ಕೆಟ್ಟದ್ದನ್ನು ಮಾಡುವಾಗ ಆತನು ಏಕೆ ನಮ್ಮನ್ನು ಹೊಣೆಗಾರರನ್ನಾಗಿ ಮಾಡುವನು? ನಾವು ಏನು ಮಾಡುತ್ತೇವೋ ಅದನ್ನು ಖುದಾ ನಿರ್ಧರಿಸಿರುವಲ್ಲಿ, ನಮ್ಮ ಕೃತ್ಯಗಳಿಗೆ ನಾವು ಏಕೆ ಹೊಣೆಗಾರರಾಗಿರಬೇಕು? ನಮಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲದಿರುವ ವಿಷಯಕ್ಕೆ ನಾವೇಕೆ ಖುದಾಗೆ ಉತ್ತರಕೊಡಬೇಕು?

ಆದರೆ ಪ್ರಾಯಶಃ ಈಗ ನೀವು ಹೀಗೆ ಆಲೋಚಿಸುತ್ತಿರಬಹುದು: ‘ಇದು ತುಂಬ ಗಹನವಾದ ವಿಷಯ. ಹಾಗಾದರೆ, ಖುದಾನ ಮಾರ್ಗಗಳನ್ನು ನಾವೇಕೆ ಅರ್ಥಮಾಡಿಕೊಳ್ಳಬೇಕು? ಇದರ ಬಗ್ಗೆ ದೇವತಾಶಾಸ್ತ್ರಜ್ಞರೇ ವಾಗ್ವಾದ ನಡೆಸಲಿ.’

ನೀವು ಸಹ ಈ ವಿಷಯದಲ್ಲಿ ಆಸಕ್ತರಾಗಿರಬೇಕು

ಆದರೂ, ಪುನರಾಲೋಚಿಸಿರಿ. ಈ ಪ್ರಶ್ನೆಗಳು ನಮಗೆಲ್ಲರಿಗೂ ಅನ್ವಯಿಸುತ್ತವೆ. ಈ ಲೋಕದಲ್ಲಿ ನಮಗೆ ಒಂದೇ ಒಂದು ಜೀವಿತವಿದೆ, ಮತ್ತು ಅದು ಬೇಗನೆ ಗತಿಸಿಹೋಗುತ್ತದೆ. ಈ ಮೇಲೆ ತಿಳಿಸಲ್ಪಟ್ಟಿರುವ ಪ್ರಶ್ನೆಗಳಿಗೆ ನಾವು ಕೊಡುವ ಉತ್ತರಗಳು, ನಾವು ನಡೆಸುವ ಜೀವನ ರೀತಿಯ ಮೇಲೆ ಗಾಢವಾದ ಪ್ರಭಾವ ಬೀರುತ್ತವೆ. ಖುದಾ ನಮ್ಮ ನಸೀಬನ್ನು ಈಗಾಗಲೇ ಗೊತ್ತುಪಡಿಸಿರುವಲ್ಲಿ, ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳಲು ಏಕೆ ಪ್ರಯತ್ನಿಸಬೇಕು? ಖುದಾ ಬಗ್ಗೆ ಕಲಿಯಲು ಸಹ ಏಕೆ ಮನಸ್ಸುಮಾಡಬೇಕು? “ಒಳ್ಳೇದು” ಮತ್ತು “ಕೆಟ್ಟದ್ದು,” “ಪಾಪ” ಮತ್ತು “ಪುಣ್ಯ” ಎಂಬ ಶಬ್ದಗಳು ಅರ್ಥಹೀನವಾಗುತ್ತವೆ. ನಾವು ಯಾವುದನ್ನು ತಪ್ಪೆಂದು ಭಾವಿಸುತ್ತೇವೋ ಅದನ್ನೇ ಮಾಡುವುದು ನಮ್ಮ ನಸೀಬ್‌ ಆಗಿರುವಲ್ಲಿ, ಏನೇ ಆದರೂ ನಾವು ಆ ಕೆಲಸವನ್ನು ಮಾಡಿಮುಗಿಸುತ್ತೇವೆ, ಏಕೆಂದರೆ ಈ ಮುಂಚೆಯೇ ನಿರ್ಧರಿಸಲ್ಪಟ್ಟಿರುವ ಸಂಗತಿಯನ್ನು ನಾವು ಬದಲಾಯಿಸಲಾರೆವು.

ಒಂದುವೇಳೆ ವಿಷಯಗಳು ಹಾಗಿರುವುದಾದರೆ, ಖುದಾ ಏಕೆ ತನ್ನ ಆಜ್ಞೆಗಳನ್ನು ನಮಗೆ ಕಲಿಸಿದ್ದಾನೆ? ಆತನು ಪೈಗಂಬರ್‌ಗಳನ್ನು ಏಕೆ ಕಳುಹಿಸಿದನು? ಖುದಾನ ವಾಕ್ಯವೆಂದು ಕರೆಯಲ್ಪಡುವ ಪುಸ್ತಕಗಳು ಏಕೆ ಬರೆಯಲ್ಪಟ್ಟವು? ಒಂದುವೇಳೆ ನಸೀಬ್‌ ತಾನೇ ಆಳ್ವಿಕೆ ನಡೆಸುವಲ್ಲಿ, ಈ ಎಲ್ಲ ವಿಚಾರಗಳು ಅರ್ಥಹೀನವಾಗಿರುವುದಿಲ್ಲವೊ? ಮಾನುಷ ಬುದ್ಧಿಶಕ್ತಿಯು, ಪರಸ್ಪರ ವ್ಯತಿರಿಕ್ತವಾಗಿರುವ ತರ್ಕಕ್ಕೆ ಆಕ್ಷೇಪವನ್ನೆತ್ತುತ್ತದೆ ಎಂಬುದು ಖಂಡಿತ. ಮಾನವರ ತಾರ್ಕಿಕ ಮನಸ್ಸು ಅದನ್ನು ಅಂಗೀಕರಿಸಲಾರದು.

ಇನ್ನೊಂದು ಕಡೆಯಲ್ಲಿ, ನಮಗೆ ಇಚ್ಛಾಸ್ವಾತಂತ್ರ್ಯವು ಇರುವುದಾದರೆ ಮತ್ತು ನಾವು ಏನು ಮಾಡುತ್ತೇವೋ ಅದಕ್ಕಾಗಿ ನಾವು ಖುದಾಗೆ ಲೆಕ್ಕವೊಪ್ಪಿಸಬೇಕಾಗಿರುವುದಾದರೆ, ನಾವು ನಮ್ಮ ಅಲ್ಪಾವಧಿಯ ಜೀವನವನ್ನು, ಖುದಾ ಮತ್ತು ಆತನ ಉದ್ದೇಶಗಳ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ಮತ್ತು ನಾವು ಹೇಗೆ ಜೀವಿಸಬೇಕೆಂದು ಆತನು ಬಯಸುತ್ತಾನೋ ಅದೇ ರೀತಿಯಲ್ಲಿ ಜೀವಿಸಲು ಉಪಯೋಗಿಸಬೇಕು. ಇದು ಜೀವಿಸುತ್ತಿರುವ ಪ್ರತಿಯೊಬ್ಬ ಮಾನವನ ವೈಯಕ್ತಿಕ ಜವಾಬ್ದಾರಿಯಾಗಿರುತ್ತದೆ. ನಮ್ಮ ಪರವಾಗಿ ಬೇರೆ ಯಾರೂ ಖುದಾಗೆ ಸೇವೆ ಸಲ್ಲಿಸಲು ಸಾಧ್ಯವಿಲ್ಲ. ಒಂದು ತುರ್ಕಿ ಭಾಷೆಯ ನಾಣ್ಣುಡಿ ಹೀಗೆ ಹೇಳುತ್ತದೆ: “ಪ್ರತಿಯೊಂದು ಕುರಿಮಾಂಸವನ್ನು ಅದರ ಕಾಲಿನಿಂದಲೇ ನೇತುಹಾಕಲಾಗುತ್ತದೆ.” ಅಂದರೆ, ಪ್ರತಿಯೊಬ್ಬನೂ ತನ್ನ ಸ್ವಂತ ದುಷ್ಕಾರ್ಯಗಳಿಗೆ ಉತ್ತರ ಕೊಡಲೇಬೇಕು.

ನಸೀಬ್‌ ನಮ್ಮ ಜೀವಿತಗಳನ್ನು ಆಳುತ್ತದೊ? ಅಥವಾ ಖುದಾ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾನೊ ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಕಂಡುಕೊಳ್ಳುವುದು ಏಕೆ ಪ್ರಾಮುಖ್ಯವಾಗಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರೊ?

ಉತ್ತರಗಳನ್ನು ಕಂಡುಕೊಳ್ಳುವ ಸ್ಥಳ

ನಾವು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಎಲ್ಲಿ ಕಂಡುಕೊಳ್ಳಬಲ್ಲೆವು? ಬೈಬಲಿನಲ್ಲಿಯೇ. ಇಸ್ಲಾಮ್‌ ಜಗತ್ತಿನಲ್ಲಿ ಇದು, ತೌರಾತ್‌, ಜಬೂರ್‌, ಮತ್ತು ಇಂಜೀಲ್‌ ಎಂದು ಪ್ರಸಿದ್ಧವಾಗಿದ್ದು, “ಖುದಾನ ವಾಕ್ಯ”ದೋಪಾದಿ ಅಂಗೀಕರಿಸಲ್ಪಡುತ್ತದೆ. * ಬೈಬಲಿನಲ್ಲಿ ನಾವು ಹೀಗೆ ಓದುತ್ತೇವೆ: “ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು ನನ್ನ ಸಕಲ ವಿಧಿಗಳನ್ನು ಕೈಕೊಂಡು ನೀತಿನ್ಯಾಯಗಳನ್ನು ನಡಿಸಿದರೆ ಸಾಯನು, ಬಾಳೇ ಬಾಳುವನು. ಕರ್ತನಾದ ಯೆಹೋವನು ಇಂತೆನ್ನುತ್ತಾನೆ—ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವುಂಟೋ? ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ನನಗೆ ಸಂತೋಷ.” (ಯೆಹೆಜ್ಕೇಲ 18:21, 23) ಇದು, ಒಬ್ಬ ದುಷ್ಟನು ತನ್ನ ದುರ್ಮಾರ್ಗಗಳನ್ನು ಬದಲಾಯಿಸಸಾಧ್ಯವಿದೆ ಎಂಬುದನ್ನು ರುಜುಪಡಿಸುತ್ತದೆ. ತನ್ನ ಜೀವಮಾನಕಾಲದಲ್ಲೆಲ್ಲ ದುಷ್ಟನಾಗಿಯೇ ಉಳಿಯುವುದು ಅವನ ನಸೀಬಾಗಿರುವುದಿಲ್ಲ.

ಬೈಬಲಿನ ಇನ್ನೊಂದು ಭಾಗದಿಂದ ಇದೇ ರೀತಿಯ ನಿರ್ಣಯಕ್ಕೆ ನಾವು ಬರಸಾಧ್ಯವಿದೆ: “ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್‌ ವಂಶದವರ ಮೇಲೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ. ಹೀಗಿರಲು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ ನನ್ನ ಪರವಾಗಿ ಅವರನ್ನು ಎಚ್ಚರಿಸು. ನಾನು ದುಷ್ಟನಿಗೆ—ಸತ್ತೇ ಸಾಯುವಿ ಎಂದು ನುಡಿಯುವಾಗ ನೀನು ಅವನನ್ನು ಎಚ್ಚರಿಸದೆಯೂ ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಅವನಿಗೆ ಬುದ್ಧಿಹೇಳದೆಯೂ ಇದ್ದರೆ ಆ ದುಷ್ಟನು ತನ್ನ ಅಪರಾಧದಿಂದ ಸಾಯಬೇಕಾಗುವದು; ಅವನ ಮರಣಕ್ಕಾಗಿ ನಿನಗೇ ಮುಯ್ಯಿತೀರಿಸುವೆನು.”—ಯೆಹೆಜ್ಕೇಲ 3:17, 18.

ಹೌದು, ನಸೀಬ್‌ ಮನುಷ್ಯನ ಜೀವಿತವನ್ನು ಆಳುವುದಿಲ್ಲವೆಂದು ಖುದಾನ ವಾಕ್ಯವು ಸ್ಪಷ್ಟವಾಗಿ ಹೇಳುತ್ತದೆ. ಮನುಷ್ಯನು ಆಯ್ಕೆ ಮಾಡಬಲ್ಲನು. ಅವನು ಒಳ್ಳೇದನ್ನು ಇಲ್ಲವೇ ಕೆಟ್ಟದ್ದನ್ನು ಮಾಡಬಲ್ಲನು. ಮತ್ತು ಒಂದುವೇಳೆ ಅವನು ಗೊತ್ತಿಲ್ಲದೇ ಕೆಟ್ಟದ್ದನ್ನು ಮಾಡುವುದಾದರೆ, ಅವನು ಸತ್ಯವನ್ನು ಕಲಿತಾಗ, ಒಳ್ಳೇದನ್ನು ಮಾಡಸಾಧ್ಯವಿದೆ ಮತ್ತು ಹೀಗೆ ಜೀವವನ್ನು ಗಳಿಸಸಾಧ್ಯವಿದೆ. ಸರಳವಾಗಿ ಹೇಳುವುದಾದರೆ, ನಮ್ಮ ಕೃತ್ಯಗಳಿಗೆ ನಾವೇ ಹೊಣೆಗಾರರಾಗಿದ್ದೇವೆ.

ನೀವು ಹೇಗೆ ಆಯ್ಕೆಮಾಡಬಲ್ಲಿರಿ?

ನಮ್ಮ ಪ್ರೀತಿಯ ಖುದಾನಲ್ಲಿ ಯಾವುದೇ ದುಷ್ಟತನವು ಇಲ್ಲ ಎಂದು ಬೈಬಲ್‌ ಹೇಳುತ್ತದೆ. ಪ್ರೀತಿಪೂರ್ಣನಾದ ಈ ಖುದಾ ಹೇಳುವುದು: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮ್ಯಾಕಾಶಗಳು ಸಾಕ್ಷಿಗಳಾಗಿರಲಿ. ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ.” (ಧರ್ಮೋಪದೇಶಕಾಂಡ 30:19) ಖುದಾ ಮನುಷ್ಯನನ್ನು ಇಚ್ಛಾಸ್ವಾತಂತ್ರ್ಯದ ಮನೋಭಾವದೊಂದಿಗೆ ಸೃಷ್ಟಿಸಿದನು. ಮಾನವರು, ಖುದಾನ ಉದ್ದೇಶಗಳಿಗೆ ಹೊಂದಿಕೆಯಲ್ಲಿ ಕಾರ್ಯನಡಿಸುವುದನ್ನು ನಿಲ್ಲಿಸಲು ನಿರ್ಧರಿಸಿದಾಗ, ಮೃತ್ಯುವಿಗೆ ತುತ್ತಾದರು. ಆದರೂ, ನೀವು ಜೀವಿತವನ್ನು ಆರಿಸಿಕೊಳ್ಳಸಾಧ್ಯವಿದೆ. ಆದರೆ ಸ್ವತಃ ನೀವೇ ಆ ಆಯ್ಕೆಯನ್ನು ಮಾಡಬೇಕಾಗಿದೆ. ನಿಮ್ಮ ಪರವಾಗಿ ಬೇರೆ ಯಾರೂ ಆ ಆಯ್ಕೆಯನ್ನು ಮಾಡಲು ಸಾಧ್ಯವಿಲ್ಲ.

ನೀವು ಹೇಗೆ ಜೀವವನ್ನು ಆಯ್ದುಕೊಳ್ಳುತ್ತೀರಿ? ಮೊದಲಾಗಿ, ಬೈಬಲು ಖುದಾನಿಂದ ಪ್ರೇರಿತವಾದ ವಾಕ್ಯವಾಗಿದೆ ಎಂಬ ಭರವಸೆ ನಿಮ್ಮಲ್ಲಿರಬೇಕು. ಈ ಕಾರಣದಿಂದ, ಆ ಪುಸ್ತಕವನ್ನು ಶ್ರದ್ಧಾಪೂರ್ವಕವಾಗಿ ಹಾಗೂ ನಿಷ್ಪಕ್ಷಪಾತ ಮನೋಭಾವದಿಂದ ಅಭ್ಯಾಸಮಾಡುವ ಅಗತ್ಯವಿದೆ. ತದನಂತರ ಖುದಾ, ಮನುಷ್ಯನನ್ನು ಏಕೆ ಸೃಷ್ಟಿಸಿದನು, ನಾವು ಏಕೆ ಸಾಯುತ್ತೇವೆ, ಮರಣಾನಂತರ ಏನು ಸಂಭವಿಸುತ್ತದೆ, ಮತ್ತು ನೀವು ಖುದಾನನ್ನು ಹೇಗೆ ಪ್ರಸನ್ನಗೊಳಿಸಸಾಧ್ಯವಿದೆ ಎಂಬುದನ್ನು ಬೈಬಲಿನಿಂದ ಕಲಿಯಬೇಕು.

‘ಇದು ತುಂಬ ಕಷ್ಟದ ಕೆಲಸ; ನಾನು ಇದನ್ನು ಮಾಡಲಾರೆ’ ಎಂದು ಹೇಳಬೇಡಿ. ಖುದಾನೇ ಸ್ವತಃ ಜೀವವಾಗ್ದಾನವನ್ನು ಕೊಟ್ಟು, ಬಳಿಕ ಕೆಲವು ವ್ಯಕ್ತಿಗಳಿಗೆ ಅದನ್ನು ಕಂಡುಹಿಡಿಯಲು ಅಸಾಧ್ಯವಾಗುವಂತೆ ಮಾಡುವನೊ? ನಮಗೆ ಅಗತ್ಯವಿರುವ ಮಾಹಿತಿಯು ಬೈಬಲಿನಲ್ಲಿ ಇರುವುದಾದರೆ, ಆ ಪುಸ್ತಕದ ಪರಿಶೋಧನೆಯಲ್ಲಿ ಖುದಾ ನಮಗೆ ಸಹಾಯ ಮಾಡಲಾರನೊ? ಕೇವಲ ನೀವು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಬೇಕು ಅಷ್ಟೇ. ನೀವು ಮಾಡಸಾಧ್ಯವಿರುವ ಅತಿ ಪ್ರಯೋಜನಕರ ವಿಷಯವು ಇದೇ ಆಗಿದೆ.

ಉಳಿದಿರುವ ಸಮಯವು ತುಂಬ ಕಡಿಮೆ

ತಡಮಾಡಬೇಡಿರಿ. ಇದು ತುರ್ತಿನ ಸಮಯ. ಈ ವಿಷಯಗಳ ವ್ಯವಸ್ಥೆಯ ಖಯಾಮತ್‌ನ ದಿನಗಳನ್ನು ಗುರುತಿಸುವ ಸಂಘಟಿತ “ಸೂಚನೆ”ಗಳನ್ನು ನಾವು ಬೈಬಲಿನಲ್ಲಿ ಕಂಡುಕೊಳ್ಳುತ್ತೇವೆ. (ಮತ್ತಾಯ 24:3) ಆ ಸೂಚನೆಯ ಕೆಲವು ಭಾಗಗಳು ಇಲ್ಲಿ ಕೊಡಲ್ಪಟ್ಟಿವೆ:

“ಜನಕ್ಕೆ ವಿರುದ್ಧವಾಗಿ ಜನವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು.” “ಆಹಾರದ ಅಭಾವಗಳು ಉಂಟಾಗುವವು.” (ಮತ್ತಾಯ 24:7, NW) “ಮಹಾ ಭೂಕಂಪಗಳಾಗುವವು.” “ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಅಂಟುರೋಗಗಳು ಉಂಟಾಗುವವು.” (ಲೂಕ 21:11, NW) “ಅಧರ್ಮವು ಹೆಚ್ಚಾಗುವದು.”—ಮತ್ತಾಯ 24:12.

ಇವು ಮತ್ತು ಸೂಚನೆಯ ಇನ್ನಿತರ ಭಾಗಗಳು, 1914ರಂದಿನಿಂದ ನೆರವೇರುತ್ತಿವೆ ಹಾಗೂ ಈಗ ನಾವು ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಬಂದು ಮುಟ್ಟಿದ್ದೇವೆ. ಅಂತ್ಯವು ತುಂಬ ತ್ವರಿತಗತಿಯಲ್ಲಿ ಸನ್ನಿಹಿತವಾಗುತ್ತಿದೆ ಎಂಬುದನ್ನು ಪುರಾವೆಯು ಸ್ಪಷ್ಟಪಡಿಸುತ್ತದೆ.

ಈ ಕಾರಣದಿಂದಲೇ, ತಡಮಾಡದೆ ಬೈಬಲನ್ನು ಪರೀಕ್ಷಿಸಿರಿ ಎಂದು ನಾವು ನಿಮಗೆ ಕರೆಕೊಡುತ್ತೇವೆ. ಖುದಾನ ವಾಕ್ಯವು ನಮಗೆ ಹೇಳುವುದು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ. ಒಳ್ಳೇದಾಗಲಿ ಕೆಟ್ಟದಾಗಲಿ ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸುವ ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು.”—ಪ್ರಸಂಗಿ 12:13, 14.

ಈ ಕಷ್ಟಕರವಾದ ಖಯಾಮತ್‌ನ ದಿನಗಳಲ್ಲಿ, ನೀವು ಹೇಗೆ ಜೀವಿತಕ್ಕಾಗಿರುವ ವಿವೇಕಯುತವಾದ ಆಯ್ಕೆಯನ್ನು ಮಾಡಸಾಧ್ಯವಿದೆ ಎಂಬುದರ ಕುರಿತು ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ಬಯಸುವಲ್ಲಿ, ದಯಮಾಡಿ ಈ ಕೆಳಗಿನ ವಿಳಾಸಗಳಲ್ಲಿ ಒಂದಕ್ಕೆ ಪತ್ರವನ್ನು ಬರೆಯಿರಿ, ಮತ್ತು ನಿಮಗೆ ಸಹಾಯ ಮಾಡಲು ನಾವು ತುಂಬ ಸಂತೋಷಿಸುವೆವು.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 13 ಕುರಾನಿನಲ್ಲಿ ನಾವು ಹೀಗೆ ಓದುತ್ತೇವೆ: “ಆ ನಂತರ ಆ ಪ್ರವಾದಿಗಳ ಹಿಂದೆಯೇ ಮರ್ಯಮಳ ಪುತ್ರ ‘ಈಸಾ’ರನ್ನು, ‘ತೌರಾತ್‌’ದಿಂದ ಅವರ ಮುಂದಿರುವ ಅಧ್ಯಾಪನಗಳನ್ನು ದೃಢಗೊಳಿಸಲಿಕ್ಕಾಗಿ, ನಾವು ನಿಯೋಗಿಸಿ ಕಳುಹಿಸಿದೆವು. ಅವರಿಗೆ ನಾವು ‘ಇಂಜೀಲ’ನ್ನು ದಯಪಾಲಿಸಿದೆವು. ಅದರಲ್ಲಿ ಸನ್ಮಾರ್ಗ ನಿರ್ದೇಶನ ಹಾಗೂ ಸತ್ಯ ಪ್ರಕಾಶವೂ ಇತ್ತು. ಅದು ತೌರತ್‌ದಲ್ಲಿಂದ ಅದರ ಮುಂದಿರುವದನ್ನು ದೃಢಗೊಳಿಸುವದೂ, ಖುದಾನ ಭಕ್ತರಿಗೆ ಸನ್ಮಾರ್ಗನಿರ್ದೇಶಕವೂ ಸಾರೋಪದೇಶವೂ ಆಗಿದೆ. ‘ಇಂಜೀಲ್‌’ ಅನುಯಾಯಿಗಳು ಅದರಲ್ಲಿ ಅಲ್ಲಾಹನು ಅವತೀರ್ಣಗೊಳಿಸಿದುದಕ್ಕನುಸಾರ ವಿಧಿ ಕಲ್ಪಿಸಲಿ (ಎಂದು ನಾವು ಆಜ್ಞಾಪಿಸಿದೆವು.) ಅಲ್ಲಾಹನು ಅವತೀರ್ಣಗೊಳಿಸಿದ ನಿಯಮಕ್ಕೊಪ್ಪುವಂತೆ ಯಾರು ವಿಧಿಸುವುದಿಲ್ಲವೋ, ಅವರೇ ಧರ್ಮಭ್ರಷ್ಟರು.” ([ಐದನೆಯ ಸೂರ], 46 ಮತ್ತು 47ನೆಯ ವಚನಗಳು) ಬೈಬಲಿನ ಭಾಗಗಳಾಗಿರುವ ತೌರಾತ್‌, ಜಬೂರ್‌, ಮತ್ತು ಇಂಜೀಲ್‌ಗಳು ಈಗ ತಿದ್ದಲ್ಪಟ್ಟು ಭ್ರಷ್ಟಗೊಂಡಿವೆ ಎಂದು ಕೆಲವರು ವಾದಿಸುತ್ತಾರೆ. ಆದರೆ ಅಂತಹ ವಾದವು, ಸ್ವತಃ ಖುದಾನೇ ತಾನು ಕೊಟ್ಟಂತಹ ಪುಸ್ತಕಗಳನ್ನು ಸಂರಕ್ಷಿಸಲು ಅಸಮರ್ಥನಾದನು ಎಂಬರ್ಥವನ್ನು ಕೊಡುತ್ತದೆ. ಹೀಗೆ ಪ್ರತಿಪಾದಿಸುವವರು, ಖುದಾ ದುರ್ಬಲನೆಂದು ಆತನ ಮೇಲೆ ದೋಷಾರೋಪವನ್ನು ಹೊರಿಸುವವರಾಗಿದ್ದಾರೆ.

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟ ಬೈಬಲ್‌ ಭಾಷಾಂತರ ‘ಸತ್ಯವೇದವು’ ಆಗಿದೆ. NW ಎಂದು ಬರೆದಿರುವಲ್ಲಿ ಭಾಷಾಂತರವು ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌—ವಿದ್‌ ರೆಫರೆನ್ಸಸ್‌ನಿಂದ ತೆಗೆಯಲ್ಪಟ್ಟಿದೆ.

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಕುರಾನಿನ ಉಲ್ಲೇಖಗಳು ದಿವ್ಯ ಕುರ್‌ಆನ್‌—ಅರಬೀ ಮೂಲ ಸಹಿತ ಕನ್ನಡಾನುವಾದದಿಂದ ತೆಗೆಯಲ್ಪಟ್ಟಿವೆ.

[ಪುಟ 7 ರಲ್ಲಿರುವ ಚಿತ್ರ ಕೃಪೆ]

ಫೋಟೊ ಕ್ರೆಡಿಟ್‌: Car interior on cover: H. Armstrong Roberts.