ಅಧ್ಯಾಯ ಆರು
ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆ
1, 2. (1) ಪ್ರಯಾಣದ ತಯಾರಿಯಲ್ಲಿರುವಾಗ ಹನ್ನ ಏಕೆ ದುಃಖದಿಂದಿದ್ದಳು? (2) ಹನ್ನಳ ಜೀವನಕಥೆಯಿಂದ ನಾವೇನು ಕಲಿಯಬಹುದು?
ಹನ್ನಳು ಪ್ರಯಾಣದ ತಯಾರಿಯಲ್ಲಿ ತಲ್ಲೀನಳಾಗಿ ತನ್ನ ನೋವನ್ನು ಮರೆಯಲು ಪ್ರಯತ್ನಿಸುತ್ತಿದ್ದಳು. ಅಸಲಿಗೆ ಈ ಸಂದರ್ಭ ಸಂಭ್ರಮದ ಸಮಯವಾಗಿರಬೇಕಿತ್ತು. ಏಕೆಂದರೆ ಆಕೆಯ ಗಂಡ ಎಲ್ಕಾನ ಪ್ರತಿ ವರ್ಷದಂತೆ ಈ ವರ್ಷವೂ ಇಡೀ ಕುಟುಂಬವನ್ನು ಶೀಲೋವಿನಲ್ಲಿದ್ದ ದೇವಗುಡಾರಕ್ಕೆ ಆರಾಧನೆಗೆಂದು ಕರಕೊಂಡು ಹೋಗಲಿಕ್ಕಿದ್ದನು. ಇಂಥ ಹಬ್ಬಗಳಲ್ಲಿ ಎಲ್ಲರೂ ಆನಂದದಿಂದ ಇರಬೇಕೆಂಬುದು ಯೆಹೋವನ ಅಪೇಕ್ಷೆಯಾಗಿತ್ತು. (ಧರ್ಮೋಪದೇಶಕಾಂಡ 16:15 ಓದಿ.) ಬಾಲ್ಯದಿಂದಲೂ ಈ ಹಬ್ಬಗಳಲ್ಲಿ ಆನಂದಿಸಿದ್ದ ಹನ್ನಳ ಸನ್ನಿವೇಶ ಇತ್ತೀಚಿನ ವರ್ಷಗಳಲ್ಲಿ ಬದಲಾಗಿತ್ತು.
2 ಎಲ್ಕಾನ ಹನ್ನಳನ್ನು ತುಂಬ ಪ್ರೀತಿಸುತ್ತಿದ್ದ. ಆದರೆ ಅವನಿಗೆ ಇಬ್ಬರು ಹೆಂಡತಿಯರು. ಇನ್ನೊಬ್ಬಳ ಹೆಸರು ಪೆನಿನ್ನ. ಹನ್ನಳ ಬಾಳಲ್ಲಿ ನೋವು ತುಂಬಿಸಲಿಕ್ಕೆಂದೇ ಆಕೆ ಟೊಂಕ ಕಟ್ಟಿ ನಿಂತಿದ್ದಳೆಂದು ಕಾಣುತ್ತದೆ. ವಾರ್ಷಿಕ ಹಬ್ಬಗಳಲ್ಲೂ ಹನ್ನಳಿಗೆ ನೋವುಣಿಸುವ ಒಂದು ವಿಧಾನವನ್ನು ಯೋಚಿಸಿಟ್ಟಿದ್ದಳು. ಅದೇನಾಗಿತ್ತು? ಇದಕ್ಕಿಂತಲೂ ಮುಖ್ಯವಾಗಿ, ತನ್ನ ನಿಯಂತ್ರಣದಲ್ಲಿಲ್ಲದ ಸನ್ನಿವೇಶವನ್ನು ನಿಭಾಯಿಸಲು ಹನ್ನಳಿಗೆ ಯೆಹೋವನಲ್ಲಿದ್ದ ನಂಬಿಕೆ ಹೇಗೆ ಸಹಾಯಮಾಡಿತು? ಇಂದು ಜೀವನದ ಆನಂದವನ್ನು ಹೀರುವಂಥ ಸವಾಲುಗಳು ನಿಮಗೂ ಇರಬಹುದು. ಹಾಗಿರುವಲ್ಲಿ ಹನ್ನಳ ಕಥೆ ನಿಮಗೆ ಉತ್ತೇಜನಕರವಾಗಿರುವುದು ಖಂಡಿತ.
“ನೀನು ವ್ಯಸನಪಡುವದೇಕೆ?”
3, 4. (1) ಹನ್ನಳಿಗೆ ಯಾವ ಎರಡು ದೊಡ್ಡ ಸಮಸ್ಯೆಗಳಿದ್ದವು? (2) ಪ್ರತಿಯೊಂದು ಸಮಸ್ಯೆ ಏಕೆ ತುಂಬ ಕಷ್ಟಕರವಾಗಿತ್ತು?
3 ಹನ್ನಳ ಜೀವನದಲ್ಲಿ ಎರಡು ದೊಡ್ಡ ಸಮಸ್ಯೆಗಳಿದ್ದವೆಂದು ಬೈಬಲ್ ತೋರಿಸುತ್ತದೆ. ಒಂದು ಅವಳನ್ನು ದ್ವೇಷಿಸುತ್ತಿದ್ದ ಸವತಿ, ಇನ್ನೊಂದು ಅವಳ ಬಂಜೆತನ. ಸವತಿಯ ಕಿರಿಕಿರಿಯ ಬಗ್ಗೆ ಅವಳೇನಾದರೂ ಮಾಡಬಹುದಿತ್ತು ಆದರೆ ಬಂಜೆತನದ ಬಗ್ಗೆ
ಅವಳಿಂದೇನೂ ಮಾಡಲು ಸಾಧ್ಯವಿರಲಿಲ್ಲ. ಮಕ್ಕಳನ್ನು ಬಯಸುವ ಯಾವ ಹೆಣ್ಣಿಗೂ ಬಂಜೆತನ ನುಂಗಲಾರದ ತುತ್ತು. ಅದೂ ಅಲ್ಲದೆ ಆಗಿನ ಕಾಲದ ಸಂಸ್ಕೃತಿಗನುಸಾರ ಕುಟುಂಬದ ಹೆಸರನ್ನು ಉಳಿಸಿಕೊಳ್ಳಲು ಮಗು ಬೇಕೇ ಬೇಕಿತ್ತು. ಆದ್ದರಿಂದ ಬಂಜೆತನ ಹೆಣ್ಣೊಬ್ಬಳ ಬದುಕನ್ನು ಬರಡಾಗಿಸುತ್ತಿತ್ತು. ನಾಚಿಕೆ ಅವಮಾನಕ್ಕೆ ಗುರಿಯಾಗಿಸುತ್ತಿತ್ತು.4 ಹನ್ನಳು ತನ್ನ ಈ ಸ್ಥಿತಿಯನ್ನು ಹೇಗಾದರೂ ಸಹಿಸಿಕೊಳ್ಳುತ್ತಿದ್ದಳೊ ಏನೋ. ಆದರೆ ಪೆನಿನ್ನಳ ವರ್ತನೆಯಿಂದಾಗಿ ಆ ನೋವನ್ನು ಸಹಿಸಿಕೊಳ್ಳಲು ತುಂಬ ಕಷ್ಟವಾಯಿತು. ಬಹುಪತ್ನಿತ್ವ ಇದ್ದ ಕುಟುಂಬಗಳಲ್ಲಿ ಪತ್ನಿಯರ ಮಧ್ಯೆ ಪ್ರತಿಸ್ಪರ್ಧೆ, ಕಚ್ಚಾಟ, ಮನೋವ್ಯಥೆ ಸರ್ವಸಾಮಾನ್ಯವಾಗಿತ್ತು. ಆ ಪದ್ಧತಿ, ಏದೆನ್ ತೋಟದಲ್ಲಿ ದೇವರು ಸ್ಥಾಪಿಸಿದ್ದ ಏಕಪತ್ನಿತ್ವದ ಮಟ್ಟಕ್ಕೆ ತದ್ವಿರುದ್ಧವಾಗಿತ್ತು. (ಆದಿ. 2:24) ಹೀಗೆ, ಬಹುಪತ್ನಿತ್ವದ ಪದ್ಧತಿಯ ಬಗ್ಗೆ ಬೈಬಲ್ ಒಂದು ವಿಷಣ್ಣ ಚಿತ್ರಣ ಕೊಡುತ್ತದೆ. ಎಲ್ಕಾನನ ಮನೆಯಲ್ಲಿದ್ದ ಪರಿಸ್ಥಿತಿ ಇದಕ್ಕೆ ಹಿಡಿದ ಕನ್ನಡಿಯಂತಿದೆ.
5. (1) ಪೆನಿನ್ನ ಏಕೆ ಹನ್ನಳಿಗೆ ಉಪದ್ರವ ಕೊಡುತ್ತಿದ್ದಳು? (2) ಅವಳು ಹೇಗೆ ಹನ್ನಳನ್ನು ನೋಯಿಸುತ್ತಿದ್ದಳು?
5 ಎಲ್ಕಾನ ಹನ್ನಳನ್ನೇ ಹೆಚ್ಚು ಪ್ರೀತಿಸುತ್ತಿದ್ದ. ಯೆಹೂದ್ಯರ ಪಾರಂಪರ್ಯ ಕಥೆಗನುಸಾರ ಅವನು ಮೊದಲು ಮದುವೆಯಾದದ್ದು ಹನ್ನಳನ್ನು. ಕೆಲವು ವರ್ಷಗಳ ನಂತರ ಪೆನಿನ್ನಳನ್ನು ಮದುವೆಯಾದ. ನಿಜಾಂಶ ಏನೇ ಇರಲಿ ಪೆನಿನ್ನಳಿಗಂತೂ ಹನ್ನಳನ್ನು ಕಂಡರೆ ತುಂಬ ಹೊಟ್ಟೆಯುರಿ. ಆದ್ದರಿಂದ ಆಕೆಗೆ ಬೇರೆ ಬೇರೆ ವಿಧಗಳಲ್ಲಿ ಉಪದ್ರವ ಕೊಡುತ್ತಿದ್ದಳು. ತನಗೆ ಮಾತ್ರ ಸಂತಾನಭಾಗ್ಯ ಇದೆ ಅನ್ನೋ ಕಾರಣಕ್ಕೆ ತುಂಬ ಮೆರೆಯುತ್ತಿದ್ದಳು. ಆಕೆಗೆ ಒಂದರ ನಂತರ ಒಂದು ಮಗು ಹುಟ್ಟಿದಂತೆ ಆಕೆಯ ದರ್ಪವೂ ಹೆಚ್ಚುತ್ತಾ ಹೋಯಿತು. ಹನ್ನಳ ಮೇಲೆ ಕನಿಕರಪಟ್ಟು, ಆಕೆಯನ್ನು ಸಂತೈಸುವ ಬದಲು ಆಕೆಯ ಗಾಯದ ಮೇಲೆ ಉಪ್ಪುಸವರುತ್ತಿದ್ದಳು. “ಆಕೆಯನ್ನು ಕೆಣಕಿ ನೋಯಿಸುತ್ತಿದ್ದಳು” ಎನ್ನುತ್ತದೆ ಬೈಬಲ್. (1 ಸಮು. 1:6) ಹೌದು, ಹನ್ನಳನ್ನು ನೋಯಿಸೋದೆ ಅವಳ ಗುರಿಯಾಗಿತ್ತು. ಅದನ್ನು ಸಾಧಿಸಿದಳು ಸಹ.
6, 7. (1) ಎಲ್ಕಾನ ಸಂತೈಸಲು ಪ್ರಯತ್ನಿಸಿದಾಗ ಹನ್ನಳು ಪೆನಿನ್ನ ಕೊಡುತ್ತಿದ್ದ ಕಷ್ಟದ ಬಗ್ಗೆ ಏಕೆ ಹೇಳಿರಲಿಕ್ಕಿಲ್ಲ? (2) ಹನ್ನಳ ಬಂಜೆತನ ಯೆಹೋವನ ಅಪ್ರಸನ್ನತೆಯ ಸೂಚನೆಯಾಗಿತ್ತೇ? ವಿವರಿಸಿ. (ಪಾದಟಿಪ್ಪಣಿ ನೋಡಿ.)
6 ಹನ್ನಳನ್ನು ಮೂದಲಿಸಲು ಪೆನಿನ್ನ ತುಂಬ ಇಷ್ಟಪಡುತ್ತಿದ್ದದ್ದು ಅವರು ಪ್ರತಿ ವರ್ಷ ಶೀಲೋವಿಗೆ ಹಬ್ಬ ಆಚರಿಸಲು ಹೋಗುತ್ತಿದ್ದಾಗ ಎಂದು ತೋರುತ್ತದೆ. ಅಲ್ಲಿ ಎಲ್ಕಾನನು ಯೆಹೋವನಿಗೆ ಯಜ್ಞವನ್ನು ಅರ್ಪಿಸಿದಾಗ ಅದರ ಭಾಗಗಳನ್ನು 1 ಸಮು. 1:4-8.
ಪೆನಿನ್ನಳಿಗೂ ಆಕೆಯ ‘ಗಂಡು ಹೆಣ್ಣು ಮಕ್ಕಳಲ್ಲಿ’ ಪ್ರತಿಯೊಬ್ಬರಿಗೂ ಕೊಡುತ್ತಿದ್ದನು. ಆದರೆ ಮಕ್ಕಳಿಲ್ಲದ ಹನ್ನಳಿಗೆ ಆಕೆಯ ಭಾಗ ಮಾತ್ರ ಸಿಗುತ್ತಿತ್ತು. ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಪೆನಿನ್ನ ಹನ್ನಳ ಬಂಜೆತನವನ್ನು ಎತ್ತಿ ಆಡುತ್ತಾ ಹೀನೈಸುತ್ತಿದ್ದಳು. ಒಮ್ಮೆ ಅವಳೆಷ್ಟು ಚುಚ್ಚಿಮಾತಾಡಿದಳೆಂದರೆ ಪಾಪದ ಆ ಹೆಣ್ಣುಮಗಳು ಅತ್ತೇಬಿಟ್ಟಳು. ಏನೂ ತಿನ್ನಲಿಕ್ಕೆ ಆಗಲಿಲ್ಲ. ತನ್ನ ಮುದ್ದಿನ ಮಡದಿ ಹನ್ನಳು ಕೊರಗುತ್ತಾ ತಿನ್ನದೆ ಇರುವುದನ್ನು ಗಮನಿಸಿದ ಎಲ್ಕಾನ ಆಕೆಗೆ “ಹನ್ನಾ, ಏಕೆ ಅಳುತ್ತೀ? ಉಣ್ಣದಿರುವದಕ್ಕೇನು ಕಾರಣ? ನೀನು ವ್ಯಸನಪಡುವದೇಕೆ? ನಾನು ನಿನಗೆ ಹತ್ತು ಮಂದಿ ಮಕ್ಕಳಿಗಿಂತ ಹೆಚ್ಚಾಗಿದ್ದೇನಲ್ಲಾ” ಎಂದು ಹೇಳಿ ಆಕೆಯನ್ನು ಸಂತೈಸಲು ಪ್ರಯತ್ನಿಸಿದ.—7 ಮಕ್ಕಳಿಲ್ಲ ಎಂಬ ಕಾರಣಕ್ಕಾಗಿಯೇ ಹನ್ನ ಕೊರಗುತ್ತಿದ್ದಾಳೆ ಎನ್ನುವುದನ್ನು ಎಲ್ಕಾನ ಗ್ರಹಿಸಿದ್ದು ಮೆಚ್ಚತಕ್ಕ ಮಾತು. ಹನ್ನಳ ಮೇಲೆ ತನಗಿದ್ದ ಪ್ರೀತಿಯನ್ನು ಅವನು ವ್ಯಕ್ತಪಡಿಸಿದಾಗ ಅವಳ ನೊಂದ ಹೃದಯಕ್ಕೆ ನೆಮ್ಮದಿ ಸಿಕ್ಕಿರಬೇಕು. * ಆದರೆ ಅವನು ಪೆನಿನ್ನಳ ಬಗ್ಗೆ ಮಾತೆತ್ತಲಿಲ್ಲ. ನಡೆದ ವಿಷಯವನ್ನು ಹನ್ನಳು ಅವನಿಗೆ ಹೇಳಿದ್ದರ ಕುರಿತ ದಾಖಲೆಯೂ ಬೈಬಲಿನಲ್ಲಿಲ್ಲ. ಪೆನಿನ್ನಳ ನಿಜ ಬಣ್ಣ ಬಯಲಿಗೆಳೆದರೆ ತನ್ನ ಕಷ್ಟ ಹೆಚ್ಚಾಗುತ್ತದೆಂದು ಹನ್ನ ನೆನಸಿರಬಹುದು. ಎಲ್ಕಾನನಿಗೆ ಹೇಳಿದರೂ ಅವನು ಪರಿಸ್ಥಿತಿಯನ್ನು ನಿಜವಾಗಿ ಬದಲಾಯಿಸುತ್ತಿದ್ದನೇ? ಒಂದುವೇಳೆ ಹೇಳಿದರೆ, ಪೆನಿನ್ನ ಮಾತ್ರವಲ್ಲ ಅವಳ ಮಕ್ಕಳೂ ಸೇವಕಸೇವಕಿಯರೂ ಹನ್ನಳನ್ನು ಇನ್ನೂ ಹೆಚ್ಚು ಹಗೆಮಾಡುತ್ತಿದ್ದರಲ್ಲವೇ? ಅವಳ ಮನೆಯಲ್ಲೇ ಅವಳನ್ನು ಹೊರಗಿನವಳಂತೆ ಉಪಚರಿಸುವ ಸಾಧ್ಯತೆಯೂ ಇತ್ತು.
ಮನೆಯಲ್ಲಿ ದುರುಪಚಾರಕ್ಕೆ ಒಳಗಾದಾಗ ಹನ್ನ ಸಾಂತ್ವನಕ್ಕಾಗಿ ಯೆಹೋವನನ್ನು ಆಶ್ರಯಿಸಿದಳು
8. ಯಾರಾದರೂ ನಿಮ್ಮೊಂದಿಗೆ ಕೀಳಾಗಿ ವರ್ತಿಸಿದಾಗ ಅಥವಾ ನಿಮಗೆ ಅನ್ಯಾಯವಾದಾಗ, ಯೆಹೋವನು ನ್ಯಾಯವಂತ ಎನ್ನುವುದನ್ನು ನೆನಪಿಸಿಕೊಳ್ಳುವುದು ಏಕೆ ಸಾಂತ್ವನದಾಯಕ?
8 ಪೆನಿನ್ನ ಎಷ್ಟು ಕೀಳಾಗಿ ನಡಕೊಳ್ಳುತ್ತಿದ್ದಳೆಂದು ಎಲ್ಕಾನನಿಗೆ ಗೊತ್ತಿತ್ತೊ ಇಲ್ಲವೊ ಯೆಹೋವ ದೇವರಿಗಂತೂ ಎಲ್ಲವೂ ಗೊತ್ತಿತ್ತು. ಆದ್ದರಿಂದಲೇ ಇದು ಬೈಬಲಿನಲ್ಲಿ ದಾಖಲಾಗಿದೆ. ಇತರರಿಗೆ ಕ್ಷುಲ್ಲಕವೆಂದು ಕಾಣುವ ವಿಧಗಳಲ್ಲಿ ಕೆಲವರು ಹೊಟ್ಟೆಕಿಚ್ಚು ದ್ವೇಷವನ್ನು ಹೊರಗೆಡಹುತ್ತಾರೆ. ಇಂಥವರಿಗೆ ಈ ವೃತ್ತಾಂತವು ಎಲ್ಲವೂ ಯೆಹೋವನ ಗಮನಕ್ಕೆ ಬರುತ್ತದೆ ಎಂಬ ಎಚ್ಚರಿಕೆ ಕೊಡುತ್ತದೆ. ಮಾತ್ರವಲ್ಲ ಹನ್ನಳಂಥ ಅಮಾಯಕರಿಗೂ ಸೌಮ್ಯಭಾವದವರಿಗೂ ಸಾಂತ್ವನ ಕೊಡುತ್ತದೆ. ಏಕೆಂದರೆ ನ್ಯಾಯವಂತನಾದ ದೇವರು ಸರಿಯಾದ ಸಮಯದಲ್ಲಿ ಸರಿಯಾದ ವಿಧದಲ್ಲಿ ಧರ್ಮೋಪದೇಶಕಾಂಡ 32:4 ಓದಿ.) ಈ ಭರವಸೆ ಹನ್ನಳಿಗೆ ಇದ್ದದ್ದರಿಂದಲೇ ಆಕೆ ಯೆಹೋವನಲ್ಲಿ ಮೊರೆಯಿಟ್ಟಳು.
ವಿಷಯಗಳನ್ನು ಸರಿಪಡಿಸುತ್ತಾನೆಂದು ಅದು ತೋರಿಸುತ್ತದೆ. (“ಮೋರೆಯಲ್ಲಿ ದುಃಖವು ಕಾಣಲಿಲ್ಲ”
9. ಸವತಿಯ ವರ್ತನೆ ಬಗ್ಗೆ ಗೊತ್ತಿದ್ದರೂ ಹನ್ನಳು ಶೀಲೋವಿಗೆ ಹೋದದ್ದು ನಮಗೆ ಯಾವ ಪಾಠ ಕಲಿಸುತ್ತದೆ?
9 ಬೆಳಗ್ಗಿನ ಜಾವ. ಮನೆಯಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಹೊರಡುವ ಗಡಿಬಿಡಿಯಲ್ಲಿದ್ದರು. ಗುಡ್ಡಗಾಡು ಪ್ರದೇಶವಾದ ಎಫ್ರಾಯೀಮ್ನಿಂದ ಶೀಲೋವಿಗೆ 30ಕ್ಕಿಂತಲೂ ಹೆಚ್ಚು ಕಿ.ಮೀ. ದೂರ. * ಕಾಲ್ನಡಿಗೆಯಲ್ಲಿ ಅಲ್ಲಿ ತಲಪಲು ಆ ದೊಡ್ಡ ಕುಟುಂಬಕ್ಕೆ ಒಂದೆರಡು ದಿನಗಳಾದರೂ ಬೇಕಿತ್ತು. ಅಲ್ಲಿ ತನ್ನೊಂದಿಗೆ ಸವತಿ ಹೇಗೆ ನಡಕೊಳ್ಳಲಿಕ್ಕಿದ್ದಾಳೆಂದು ಹನ್ನಳಿಗೆ ಚೆನ್ನಾಗಿ ಗೊತ್ತಿತ್ತು. ಸುಮ್ಮನೆ ಸಮಸ್ಯೆಗೆ ತಲೆಯೊಡ್ಡುವುದೇಕೆ ಎಂದು ನೆನಸಿ ಆಕೆ ಬೇಕಿದ್ದರೆ ಮನೆಯಲ್ಲೇ ಕೂರಬಹುದಿತ್ತು. ಆದರೆ ಅವಳು ಹಾಗೆ ಮಾಡಲಿಲ್ಲ. ನಮಗೆ ಅವಳು ನಿಶ್ಚಯವಾಗಿಯೂ ಒಳ್ಳೇ ಮಾದರಿ. ಸಹೋದರ ಸಹೋದರಿಯರು ನಮ್ಮ ಜೊತೆ ಸರಿಯಾಗಿ ವರ್ತಿಸದಿದ್ದರೆ ನಾವೇನು ಮಾಡುತ್ತೇವೆ? ದೇವರಿಗೆ ಸಲ್ಲಿಸುವ ನಮ್ಮ ಆರಾಧನೆಗೆ ಅದು ಅಡ್ಡಬರುವಂತೆ ಬಿಡುತ್ತೇವಾ? ಹಾಗೆ ಬಿಟ್ಟರೆ, ಆ ಸನ್ನಿವೇಶವನ್ನು ತಾಳಿಕೊಳ್ಳಲು ಯೆಹೋವನು ಕೊಡುವ ಸಹಾಯವನ್ನು ನಾವೇ ದೂರ ತಳ್ಳಿದಂತಾಗುವುದು.
10, 11. (1) ಹನ್ನ ಏಕೆ ಬೇಗನೆ ದೇವಗುಡಾರಕ್ಕೆ ಹೋದಳು? (2) ತನ್ನ ತಂದೆಯಾದ ಯೆಹೋವನಿಗೆ ಪ್ರಾರ್ಥನೆಯಲ್ಲಿ ಹನ್ನ ಹೃದಯವನ್ನು ಹೇಗೆ ಬಿಚ್ಚಿಟ್ಟಳು?
10 ಗುಡ್ಡಗಾಡಿನ ಅಂಕುಡೊಂಕಾದ ರಸ್ತೆಗಳಲ್ಲಿ ದಿನವಿಡೀ ಪ್ರಯಾಣಿಸಿ ಆ ಕುಟುಂಬ ಶೀಲೋ ಹತ್ತಿರ ಬಂತು. ಅಲ್ಲಿಂದ ಅವರಿಗೆ ಗುಡ್ಡದ ಮೇಲಿದ್ದ ಶೀಲೋ ಕಾಣಿಸುತ್ತಿತ್ತು. ಅದರ ಸುತ್ತಲೂ ಅದಕ್ಕಿಂತಲೂ ಎತ್ತರವಾದ ಗುಡ್ಡಬೆಟ್ಟಗಳು. ಶೀಲೋವಿನ ಹತ್ತಿರಹತ್ತಿರ ಬರುತ್ತಿದ್ದಂತೆ ಹನ್ನಳು ಪ್ರಾರ್ಥನೆಯಲ್ಲಿ ಏನೇನು ಹೇಳಬೇಕು ಅನ್ನೋದರ ಬಗ್ಗೆ ತುಂಬ ಯೋಚಿಸುತ್ತಿದ್ದಿರಬೇಕು. ಅಲ್ಲಿಗೆ ಬಂದ ಮೇಲೆ ಇಡೀ ಕುಟುಂಬ ಒಟ್ಟಿಗೆ ಕೂತು ಊಟಮಾಡಿತು. ಆದಷ್ಟು ಬೇಗ ಹನ್ನ ಅವರಿಂದ ಬೇರೆಯಾಗಿ ದೇವಗುಡಾರಕ್ಕೆ ಹೋದಳು. ದ್ವಾರದ ನಿಲುವುಪಟ್ಟಿಗಳ ಬಳಿ ಮಹಾ ಯಾಜಕ ಏಲಿ ಕುಳಿತಿದ್ದನು. ಅದು ಅವಳ ಗಮನಕ್ಕೆ ಬರಲಿಲ್ಲ. ಅವಳ ಮನಸ್ಸೆಲ್ಲಾ ಒಳಗೆ ಹೋಗಿ ಪ್ರಾರ್ಥಿಸುವುದರ ಮೇಲಿತ್ತು. ದೇವಗುಡಾರದಲ್ಲಿ ಪ್ರಾರ್ಥಿಸುವಾಗ ದೇವರು ಖಂಡಿತ ಕಿವಿಗೊಡುತ್ತಾನೆಂಬ ನಂಬಿಕೆ ಆಕೆಗೆ. ತನ್ನ ಶೋಚನೀಯ ಸ್ಥಿತಿ
ಯಾರಿಗೂ ಅರ್ಥವಾಗದಿದ್ದರೂ ತನ್ನ ತಂದೆಯಾದ ದೇವರಿಗೆ ಅರ್ಥವಾಗುವುದೆಂಬ ಭರವಸೆ ಆಕೆಗಿತ್ತು. ಆಕೆಯ ಮನಸ್ಸಿನಲ್ಲಿ ತುಂಬಿದ್ದ ನೋವನ್ನು ದೇವರ ಮುಂದೆ ಎಳೆಎಳೆಯಾಗಿ ಬಿಚ್ಚಿಡುವಾಗ ಕಣ್ಣೀರ ಧಾರೆ ಜೊತೆಯಾಯಿತು.11 ಬಿಕ್ಕಳಿಸುತ್ತಾ ಯೆಹೋವನ ಹತ್ತಿರ ಮನಸ್ಸಿನ ನೋವನ್ನು ತೋಡಿಕೊಳ್ಳುತ್ತಿದ್ದಾಗ ಆಕೆಯ ಇಡೀ ಶರೀರ ಕಂಪಿಸುತ್ತಿತ್ತು. ಸ್ವರ ಹೊರಬರುತ್ತಿರಲಿಲ್ಲ. ತುಟಿಗಳು ಮಾತ್ರ ಅಲ್ಲಾಡುತ್ತಿದ್ದವು. ಆಕೆ ಬಹಳ ಹೊತ್ತಿನ ವರೆಗೆ ಪ್ರಾರ್ಥಿಸುತ್ತಾ ತಂದೆಯಾದ ದೇವರ ಮುಂದೆ ಹೃದಯ ತೆರೆದಿಟ್ಟಳು. ತಾಯಿಯಾಗಲು ತನಗಿರುವ ಹಂಬಲವನ್ನು ಪೂರೈಸುವಂತೆ ಅಂಗಲಾಚಿದಳು. ದೇವರಿಂದ ಈ ಆಶೀರ್ವಾದವನ್ನು ಕೋರಿದ್ದಷ್ಟೇ ಅಲ್ಲ, ತನ್ನಿಂದ ಸಾಧ್ಯವಿದ್ದದ್ದನ್ನು ಆತನಿಗೆ ಕೊಡಲೂ ಇಚ್ಛಿಸಿದಳು. ಆಕೆ ಒಂದು ಹರಕೆಹೊತ್ತಳು. ತನಗೊಂದು ಗಂಡುಮಗು ಹುಟ್ಟಿದರೆ ಅವನನ್ನು ಜೀವನಪರ್ಯಂತದ ಸೇವೆಗಾಗಿ ಯೆಹೋವನಿಗೆ ಅರ್ಪಿಸುವೆನೆಂದು ಮಾತುಕೊಟ್ಟಳು.—1 ಸಮು. 1:9-11.
12. ಪ್ರಾರ್ಥನೆಯ ವಿಷಯದಲ್ಲಿ ನಾವೇನನ್ನು ಮನಸ್ಸಿನಲ್ಲಿಡಬೇಕೆಂದು ಹನ್ನಳ ಮಾದರಿ ತೋರಿಸುತ್ತದೆ?
12 ಹೀಗೆ ಹನ್ನ ಪ್ರಾರ್ಥನೆಯ ವಿಷಯದಲ್ಲಿ ದೇವರ ಎಲ್ಲ ಸೇವಕರಿಗೆ ಮಾದರಿ. ಒಂದು ಮಗು ತನ್ನ ಪ್ರೀತಿಯ ಅಪ್ಪನಲ್ಲಿ ಪೂರ್ಣ ಭರವಸೆಯಿಟ್ಟು ಯಾವುದೇ ಅಳುಕಿಲ್ಲದೆ, ಮನಬಿಚ್ಚಿ ಮಾತಾಡುವಂತೆಯೇ ತನ್ನ ಜನರು ತಮ್ಮೆಲ್ಲ ಚಿಂತೆಗಳನ್ನು ತನಗೆ ಹೇಳುವಂತೆ ಯೆಹೋವನು ಕೇಳಿಕೊಳ್ಳುತ್ತಾನೆ. (ಕೀರ್ತನೆ 62:8; 1 ಥೆಸಲೊನೀಕ 5:17 ಓದಿ.) ಪ್ರಾರ್ಥಿಸುವುದರ ಬಗ್ಗೆ ಅಪೊಸ್ತಲ ಪೇತ್ರನು ದೇವಪ್ರೇರಿತನಾಗಿ ಈ ಸಾಂತ್ವನದಾಯಕ ಮಾತುಗಳನ್ನು ಬರೆದನು: “ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7.
13, 14. (1) ಹನ್ನಳ ಬಗ್ಗೆ ಏಲಿ ತಪ್ಪಾಗಿ ನೆನಸಲು ಕಾರಣವೇನು? (2) ಹನ್ನಳು ಏಲಿಗೆ ಪ್ರತಿಕ್ರಿಯಿಸಿದ ವಿಧ ಹೇಗೆ ನಂಬಿಕೆಯ ಉತ್ತಮ ಮಾದರಿಯಾಗಿದೆ?
13 ಯೆಹೋವನಂತೆ ಮನುಷ್ಯರು ನಮ್ಮ ಕಷ್ಟಗಳನ್ನು ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಹನ್ನಳ ವಿಷಯದಲ್ಲೂ ಹೀಗೆ ಆಯಿತು. ಹನ್ನಳು ಅಳುತ್ತಾ ಪ್ರಾರ್ಥಿಸುತ್ತಿದ್ದಾಗ ಒಂದು ಧ್ವನಿ ಕೇಳಿ ಚಕಿತಳಾದಳು. “ನಿನ್ನ ಅಮಲು ಇನ್ನೂ ಇಳಿಯಲಿಲ್ಲವೋ? ದ್ರಾಕ್ಷಾರಸದ ಮತ್ತು ನಿನ್ನನ್ನು ಬಿಟ್ಟು ಹೋಗಲಿ” ಎಂದು ಅತ್ತಲಿಂದ ಬಂದ ಧ್ವನಿ ಮಹಾ ಯಾಜಕ ಏಲಿಯದ್ದಾಗಿತ್ತು. ಆಕೆ ಬಿಕ್ಕುತ್ತಿರುವುದನ್ನು, ಆಕೆಯ ತುಟಿಗಳು ಅದುರುತ್ತಿರುವುದನ್ನು, ಆಕೆಯ ಹಾವಭಾವವನ್ನು ಅವನು ಗಮನಿಸಿದ್ದನು. ಏನಾಯಿತೆಂದು ಕೇಳುವ ಬದಲು ಪಾನಮತ್ತಳಾಗಿದ್ದಾಳೆ ಎಂದು ತಪ್ಪಾಗಿ ನೆನಸಿದನು.—1 ಸಮು. 1:12-14.
14 ಮೊದಲೇ ಸಂಕಟದಲ್ಲಿದ್ದ ಹನ್ನಳ ಮೇಲೆ ಎಂಥ ಆರೋಪ! ಅದೂ 1 ಸಮು. 1:15-17.
ಗೌರವಾನ್ವಿತ ಸ್ಥಾನದಲ್ಲಿರುವ ವ್ಯಕ್ತಿಯಿಂದ! ಹನ್ನಳು ಇನ್ನಷ್ಟು ನೊಂದಿರಬೇಕಲ್ಲವೇ? ಆದರೆ ಆಗಲೂ ಆಕೆ ತೋರಿಸಿದ ನಂಬಿಕೆ ಪ್ರಶಂಸಾರ್ಹ. ನಮಗೆ ಒಳ್ಳೇ ಮಾದರಿ ಸಹ. ಯೆಹೋವನಿಗೆ ತಾನು ಸಲ್ಲಿಸುವ ಆರಾಧನೆಗೆ ಒಬ್ಬನ ತಪ್ಪು ಅಡ್ಡಬರುವಂತೆ ಆಕೆ ಬಿಡಲಿಲ್ಲ. ಗೌರವದಿಂದಲೇ ಏಲಿಗೆ ಉತ್ತರಕೊಟ್ಟಳು. ತನ್ನ ಸನ್ನಿವೇಶ ವಿವರಿಸಿದಳು. ಏಲಿ ತನ್ನ ತಪ್ಪನ್ನು ಅರಿತು, ಬಹುಶಃ ಮೃದು ಧ್ವನಿಯಲ್ಲಿ “ಸಮಾಧಾನದಿಂದ ಹೋಗು; ಇಸ್ರಾಯೇಲ್ ದೇವರು ನಿನ್ನ ಪ್ರಾರ್ಥನೆಯನ್ನು ನೆರವೇರಿಸಲಿ” ಎಂದು ಹೇಳಿದನು.—15, 16. (1) ಹನ್ನಳು ಆರಾಧನೆಗಾಗಿ ಗುಡಾರಕ್ಕೆ ಬಂದದ್ದು, ಯೆಹೋವನಲ್ಲಿ ಹೃದಯ ತೋಡಿಕೊಂಡದ್ದು ಆಕೆಯ ಮೇಲೆ ಯಾವ ಪರಿಣಾಮ ಬೀರಿತು? (2) ನಕಾರಾತ್ಮಕ ಭಾವನೆಗಳು ನಮ್ಮನ್ನು ಕಾಡುವಾಗ ಹನ್ನಳಂತೆ ನಾವೇನು ಮಾಡಬಹುದು?
15 ಹನ್ನಳು ಆರಾಧನೆಗಾಗಿ ಗುಡಾರಕ್ಕೆ ಬಂದದ್ದು, ಯೆಹೋವನಲ್ಲಿ ಹೃದಯ ತೋಡಿಕೊಂಡದ್ದು ಆಕೆಯ ಮೇಲೆ ಯಾವ ಪರಿಣಾಮ ಬೀರಿತು? ಆಕೆ “ಹೊರಟುಹೋಗಿ ಊಟಮಾಡಿದಳು. ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ” ಎನ್ನುತ್ತದೆ ವೃತ್ತಾಂತ. (1 ಸಮು. 1:18) ಹೌದು ಹನ್ನಳ ಮನಸ್ಸು ಹೂವಿನಷ್ಟು ಹಗುರವಾಯಿತು. ಒಂದರ್ಥದಲ್ಲಿ ತನ್ನ ಹೆಗಲ ಮೇಲಿದ್ದ ಭಾವನಾತ್ಮಕ ಹೊರೆಯನ್ನು ಬಲಿಷ್ಠನಾದ ತನ್ನ ಸ್ವರ್ಗೀಯ ತಂದೆಯ ಹೆಗಲ ಮೇಲೆ ಹಾಕಿಬಿಟ್ಟಿದ್ದಳು. (ಕೀರ್ತನೆ 55:22 ಓದಿ.) ಯೆಹೋವನಿಗೆ ಯಾವುದೇ ಸಮಸ್ಯೆ ಭಾರವೆನಿಸುತ್ತದೋ? ಇಲ್ಲ! ಅಂದು ಇಂದು ಮುಂದೆಂದಿಗೂ ಆತನಿಗೆ ಹಾಗನಿಸದು.
16 ದುಃಖದಿಂದ ಜಜ್ಜಿಹೋದಾಗ, ಕಂಗೆಟ್ಟಾಗ ನಾವು ಹನ್ನಳಂತೆ ದೇವರೊಂದಿಗೆ ಮನಬಿಚ್ಚಿ ಮಾತಾಡಬೇಕು. ಆತನು “ಪ್ರಾರ್ಥನೆಯನ್ನು ಕೇಳುವವ” ಎನ್ನುತ್ತದೆ ಬೈಬಲ್. (ಕೀರ್ತ. 65:2) ನಾವು ನಂಬಿಕೆಯಿಂದ ಪ್ರಾರ್ಥಿಸಿದರೆ, ನಮ್ಮ ಮನಸ್ಸಲ್ಲಿರುವ ದುಃಖ ಕರಗಿ “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ”ಯನ್ನು ಅನುಭವಿಸುವೆವು.—ಫಿಲಿ. 4:6, 7.
“ನಮ್ಮ ದೇವರೇ ಅಸಮಾನವಾದ ಆಶ್ರಯದುರ್ಗ”
17, 18. (1) ಹನ್ನಳ ಹರಕೆಯನ್ನು ಎಲ್ಕಾನ ಹೇಗೆ ಬೆಂಬಲಿಸಿದನು? (2) ಇನ್ನು ಮುಂದೆ ಪೆನಿನ್ನ ಹನ್ನಳಿಗೆ ಏನು ಮಾಡಲು ಆಗಲಿಲ್ಲ?
17 ಮರುದಿನ ಬೆಳಗ್ಗೆ ಹನ್ನ ಎಲ್ಕಾನನ ಜೊತೆಗೆ ಪುನಃ ದೇವಗುಡಾರಕ್ಕೆ ಹೋದಳು. ತಾನು ದೇವರಲ್ಲಿ ಮಾಡಿದ್ದ ಕೋರಿಕೆ ಹಾಗೂ ಆತನಿಗೆ ಮಾಡಿದ್ದ ಹರಕೆಯ ಬಗ್ಗೆ ಆಕೆ ಗಂಡನಿಗೆ ಈಗಾಗಲೇ ಹೇಳಿರಬೇಕು. ಏಕೆಂದರೆ ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಹೆಂಡತಿ ಹೊತ್ತ ಹರಕೆ ಗಂಡನಿಗೆ ಒಪ್ಪಿಗೆಯಾಗದಿದ್ದರೆ ಅದನ್ನು ರದ್ದುಗೊಳಿಸುವ ಹಕ್ಕು ಅವನಿಗಿತ್ತು. (ಅರ. 30:10-15) ಆದರೆ ಆ ನಂಬಿಗಸ್ತ ಪುರುಷನು ಅದನ್ನು ರದ್ದು ಮಾಡಲಿಲ್ಲ. ಬದಲಿಗೆ ಅವರಿಬ್ಬರು ಸೇರಿ ದೇವಗುಡಾರದಲ್ಲಿ ಯೆಹೋವನನ್ನು ಆರಾಧಿಸಿದರು. ಅನಂತರ ಊರಿಗೆ ಹಿಂದಿರುಗಿದರು.
18 ಇನ್ನು ಮುಂದೆ ಹನ್ನಳ ಮನನೋಯಿಸಲು ಅಸಾಧ್ಯ ಎಂದು ಪೆನಿನ್ನಳಿಗೆ ಗೊತ್ತಾದದ್ದು ಯಾವಾಗ? ವೃತ್ತಾಂತ ಇದನ್ನು ತಿಳಿಸುವುದಿಲ್ಲ. ಆದರೆ “ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ” ಎಂಬ ಮಾತುಗಳು ಅಂದಿನಿಂದ ಹನ್ನಳು ಖುಷಿಯಿಂದಿದ್ದಳು ಎನ್ನುವುದನ್ನು ಸೂಚಿಸುತ್ತವೆ. ತಾನೆಷ್ಟೇ ಹೀನೈಸಿದರೂ ಅದು ಹನ್ನಳ ಮೇಲೆ ಪರಿಣಾಮ ಬೀರುವುದಿಲ್ಲವೆಂದು ಪೆನಿನ್ನಳಿಗೆ ಸ್ವಲ್ಪದರಲ್ಲಿ ಗೊತ್ತಾಗಿರಬಹುದು. ಬೈಬಲಿನಲ್ಲಿ ಮುಂದೆಲ್ಲೂ ಆಕೆಯ ಹೆಸರಿಲ್ಲ.
19. (1) ಹನ್ನಳಿಗೆ ಯಾವ ಆಶೀರ್ವಾದ ಸಿಕ್ಕಿತು? (2) ತನಗೆ ಆಶೀರ್ವಾದ ಕೊಟ್ಟಾತನನ್ನು ಮರೆತಿಲ್ಲವೆಂದು ಹೇಗೆ ತೋರಿಸಿದಳು?
19 ಶೀಲೋವಿನಿಂದ ಹಿಂದಿರುಗಿದ ಹನ್ನಳಿಗೆ ಮನಶ್ಶಾಂತಿ ಇದ್ದದ್ದು ಮಾತ್ರವಲ್ಲ ತಿಂಗಳುಗಳು ಉರುಳಿದಂತೆ ಸಂತೋಷಪಡಲು ಕಾರಣವೂ ಸಿಕ್ಕಿತು. ಆಕೆ ಗರ್ಭವತಿಯಾದಳು! ಆದರೆ ಈ ಆನಂದದ ಮಧ್ಯೆಯೂ ತನಗೆ ಈ ಆಶೀರ್ವಾದ ಲಭಿಸಿದ್ದು ಯಾರಿಂದ ಎಂಬದನ್ನು ಆಕೆ ಅರೆಕ್ಷಣವೂ ಮರೆಯಲಿಲ್ಲ. ಆದ್ದರಿಂದ ಮಗು ಹುಟ್ಟಿದಾಗ ಸಮುವೇಲ ಎಂದು ಹೆಸರಿಟ್ಟಳು. ಸಮುವೇಲ ಅಂದರೆ “ದೇವರ ಹೆಸರು” ಎಂದರ್ಥ. ಇದು ದೇವರ ಹೆಸರಿನಲ್ಲಿ ಕೋರುವುದನ್ನು ಸೂಚಿಸುತ್ತದೆ. ಹನ್ನಳು ಅದನ್ನೇ ಮಾಡಿದಳು. ಆಕೆ ಆ ವರ್ಷ ಎಲ್ಕಾನ ಮತ್ತು ಕುಟುಂಬದವರೊಂದಿಗೆ ಶೀಲೋವಿಗೆ ಹೋಗಲಿಲ್ಲ. ಮಗು ಮೊಲೆಬಿಡುವ ತನಕ ಅಂದರೆ ಮೂರು ವರ್ಷ ತುಂಬುವವರೆಗೂ ಆಕೆ ಮನೆಯಲ್ಲೇ ಇದ್ದಳು. ಆಮೇಲೆ ತನ್ನ ಪುಟ್ಟ ಕಂದನಿಂದ ಬೇರ್ಪಡುವ ದಿನಕ್ಕಾಗಿ ತನ್ನ ಮನಸ್ಸನ್ನು ಗಟ್ಟಿಮಾಡಿಕೊಂಡಳು.
20. ಯೆಹೋವನಿಗೆ ಮಾಡಿದ ಹರಕೆಯನ್ನು ಹನ್ನ ಎಲ್ಕಾನರು ಹೇಗೆ ತೀರಿಸಿದರು?
20 ಮಗನನ್ನು ಬಿಟ್ಟಿರುವುದು ಆಕೆಗೆ ಅಷ್ಟು ಸುಲಭವಾಗಿರಲಿಕ್ಕಿಲ್ಲ. ಶೀಲೋವಿನ ದೇವಗುಡಾರದಲ್ಲಿ ಸಮುವೇಲನನ್ನು ಬಹುಶಃ ಅಲ್ಲಿ ಸೇವೆಸಲ್ಲಿಸುತ್ತಿದ್ದ ಸ್ತ್ರೀಯರು ಚೆನ್ನಾಗಿ ನೋಡಿಕೊಳ್ಳುವರು ಎಂದು ಹನ್ನಳಿಗೆ ಗೊತ್ತಿತ್ತು. ಇದರ ಬಗ್ಗೆ ಅವಳಿಗೆ ಸಂಶಯವಿರಲಿಲ್ಲ. ಆದರೆ ಅವನಿನ್ನೂ ತುಂಬ ಚಿಕ್ಕವನಲ್ಲವೇ? ತನ್ನ ಮುದ್ದುಕಂದ ತನ್ನ ಬಳಿಯೇ ಇರಬೇಕೆಂದು ಹೆತ್ತ ಕರುಳು ಬಯಸದೇ? ಹಾಗಿದ್ದರೂ ಹನ್ನ ಎಲ್ಕಾನರು ಮಗನನ್ನು ದೇವಗುಡಾರಕ್ಕೆ ಕರೆತಂದರು. ಅರೆಮನಸ್ಸಿನಿಂದಲ್ಲ, ಕೃತಜ್ಞತಾಭಾವದಿಂದ. ಅವರು ಅಲ್ಲಿ ಯಜ್ಞಗಳನ್ನು ಅರ್ಪಿಸಿದರು. ಅನಂತರ, ವರ್ಷಗಳ ಹಿಂದೆ ಹನ್ನ ಮಾಡಿದ ಹರಕೆಯನ್ನು ಏಲಿಗೆ ಜ್ಞಾಪಿಸಿ ಸಮುವೇಲನನ್ನು ಅವನಿಗೆ ಒಪ್ಪಿಸಿದರು.
21. ಹನ್ನಳ ಪ್ರಾರ್ಥನೆ ಅವಳ ಗಾಢ ನಂಬಿಕೆಯನ್ನು ಹೇಗೆ ತೋರಿಸುತ್ತದೆ? (“ ಗಮನಸೆಳೆಯುವ ಎರಡು ಪ್ರಾರ್ಥನೆಗಳು” ಚೌಕ ಸಹ ನೋಡಿ.)
1 ಸಮುವೇಲ 2:1-10 ರಲ್ಲಿ ದಾಖಲಾಗಿರುವ ಆ ಪ್ರಾರ್ಥನೆಯನ್ನು ನೀವು ಓದುವಾಗ ಪ್ರತಿ ಸಾಲಿನಲ್ಲೂ ಆಕೆಯ ಗಾಢ ನಂಬಿಕೆಯನ್ನು ನೋಡಬಲ್ಲಿರಿ. ಯೆಹೋವನು ಗರ್ವಿಷ್ಠರ ಸೊಕ್ಕಡಗಿಸಲು, ದಬ್ಬಾಳಿಕೆಗೊಳಗಾದವರನ್ನು ಆಶೀರ್ವದಿಸಲು, ದುಷ್ಟರ ನಾಶಮಾಡಲು, ಶಿಷ್ಟರ ರಕ್ಷಿಸಲು ತನ್ನ ಶಕ್ತಿಯನ್ನು ಅದ್ಭುತ ರೀತಿಯಲ್ಲಿ ಬಳಸುತ್ತಾನೆ ಎಂದು ಕೊಂಡಾಡಿದಳು. ತನ್ನ ತಂದೆಯಾದ ದೇವರನ್ನು ಆತನ ಅಪೂರ್ವ ಪವಿತ್ರತೆ, ನ್ಯಾಯ ಮತ್ತು ನಂಬಿಗಸ್ತಿಕೆಗಾಗಿ ಸ್ತುತಿಸಿದಳು. “ನಮ್ಮ ದೇವರೇ ಅಸಮಾನವಾದ ಆಶ್ರಯದುರ್ಗ” ಎಂದು ಹೇಳಲು ಹನ್ನಳಿಗೆ ಸಕಾರಣವಿತ್ತು. ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾದವರು ಆತನ ಮೊರೆಹೋಗಬಲ್ಲರು ಏಕೆಂದರೆ ಯೆಹೋವನು ಬದಲಾಗದವನು, ಆಶ್ರಯದಾತನು, ಸಂಪೂರ್ಣವಾಗಿ ಭರವಸಾರ್ಹನು.
21 ಬಳಿಕ ಹನ್ನ ಒಂದು ಪ್ರಾರ್ಥನೆಮಾಡಿದಳು. ಆ ಪ್ರಾರ್ಥನೆಯನ್ನು ದೇವರು ತನ್ನ ವಾಕ್ಯದಲ್ಲಿ ಸೇರಿಸುವುದಕ್ಕೆ ಯೋಗ್ಯವೆಂದೆಣಿಸಿದನು.22, 23. (1) ಹೆತ್ತವರಿಗೆ ತನ್ನ ಮೇಲೆ ಪ್ರೀತಿ ಇದೆಯೆಂಬ ಖಾತ್ರಿ ಸಮುವೇಲನಿಗೆ ಇತ್ತೇಕೆ? (2) ಯೆಹೋವನು ಹನ್ನಳನ್ನು ಇನ್ನಷ್ಟು ಆಶೀರ್ವದಿಸಿದ್ದು ಹೇಗೆ?
22 ಯೆಹೋವನಲ್ಲಿ ಇಷ್ಟೊಂದು ನಂಬಿಕೆಯಿದ್ದ ತಾಯಿ ಇದ್ದದ್ದು ಖಂಡಿತವಾಗಿ ಪುಟ್ಟ ಸಮುವೇಲನಿಗೆ ಒಂದು ವರವಾಗಿತ್ತು. ಅವನು ಬೆಳೆಯುತ್ತಾ ಹೋದಂತೆ ಅವನಿಗೆ ತಾಯಿಯ ನೆನಪಾಗಿರಲೇಬೇಕು. ಆದರೆ ಆಕೆ ತನ್ನನ್ನು ಮರೆತಿಲ್ಲವೆಂಬ ಖಾತ್ರಿ ಅವನಿಗಿತ್ತು. ವರ್ಷ ವರ್ಷವೂ ಶೀಲೋವಿಗೆ ಬರುತ್ತಿದ್ದ ಹನ್ನಳು ತನ್ನ ಮಗ ದೇವಗುಡಾರದಲ್ಲಿ ಸೇವೆಸಲ್ಲಿಸುವಾಗ ತೊಟ್ಟುಕೊಳ್ಳಲಿಕ್ಕಾಗಿ ತೋಳಿಲ್ಲದ ಅಂಗಿಯನ್ನು ಹೊಲಿದು ತರುತ್ತಿದ್ದಳು. ಆ ಅಂಗಿಯ ಒಂದೊಂದು ಹೊಲಿಗೆಯಲ್ಲೂ ಆಕೆಯ ಪ್ರೀತಿಮಮತೆ ತುಂಬಿತ್ತು. (1 ಸಮುವೇಲ 2:19 ಓದಿ.) ಆಕೆ ಆ ಹೊಸ ಅಂಗಿಯನ್ನು ಮಗನಿಗೆ ತೊಡಿಸುತ್ತಿರುವುದನ್ನು, ಕೈಯಿಂದ ಸವರಿ ಸರಿಮಾಡುವುದನ್ನು, ಅವನೊಂದಿಗೆ ದಯೆಯಿಂದ ಪ್ರೋತ್ಸಾಹದ ಮಾತುಗಳನ್ನಾಡುತ್ತಾ ಪ್ರೀತಿವಾತ್ಸಲ್ಯದಿಂದ ಕಣ್ತುಂಬಿಕೊಳ್ಳುತ್ತಿರುವುದನ್ನು ನಾವು ಊಹಿಸಿಕೊಳ್ಳಬಹುದು. ಇಂಥ ತಾಯಿಯನ್ನು ಪಡೆಯುವ ಆಶೀರ್ವಾದ ಹೊಂದಿದ್ದ ಸಮುವೇಲನು ದೊಡ್ಡವನಾಗಿ ತನ್ನ ಹೆತ್ತವರಿಗೂ ಇಡೀ ಇಸ್ರಾಯೇಲ್ ಜನಾಂಗಕ್ಕೂ ವರವಾದನು.
23 ಯೆಹೋವನು ಹನ್ನಳನ್ನು ಮರೆಯಲಿಲ್ಲ. ಇನ್ನಷ್ಟು ಮಕ್ಕಳನ್ನು ಕೊಟ್ಟು ಆಕೆಯನ್ನು ಆಶೀರ್ವದಿಸಿದನು. ಆಕೆ ಎಲ್ಕಾನನಿಗೆ ಇನ್ನೂ ಐದು ಮಂದಿ ಮಕ್ಕಳನ್ನು ಹೆತ್ತುಕೊಟ್ಟಳು. (1 ಸಮು. 2:21) ಆದರೆ ಹನ್ನಳಿಗಿದ್ದ ಅತ್ಯಂತ ದೊಡ್ಡ ಆಶೀರ್ವಾದ ತಂದೆಯಾದ ಯೆಹೋವನೊಂದಿಗಿದ್ದ ಬಂಧವೇ ಆಗಿತ್ತು. ಈ ಬಂಧ ವರ್ಷಗಳು ಸಂದಂತೆ ಹೆಚ್ಚೆಚ್ಚು ಬಲವಾಗುತ್ತಾ ಹೋಯಿತು. ಹನ್ನಳ ನಂಬಿಕೆಯನ್ನು ಅನುಕರಿಸುತ್ತಾ ಹೋದಂತೆ ಯೆಹೋವನೊಂದಿಗಿನ ನಿಮ್ಮ ಬಂಧವೂ ಬಲಗೊಳ್ಳಲಿ!
^ ಪ್ಯಾರ. 7 “ಯೆಹೋವನು ಆಕೆಗೆ ಮಕ್ಕಳನ್ನು ಕೊಡಲಿಲ್ಲ” ಎಂದು ಬೈಬಲ್ ಹೇಳುತ್ತದೆ. ಇದರರ್ಥ ಆತನಿಗೆ ಅವಳ ಮೇಲೆ ಕೋಪ ಇತ್ತು ಎಂದಲ್ಲ. ಏಕೆಂದರೆ ಆಕೆ ನಮ್ರಳೂ ನಂಬಿಗಸ್ತಳೂ ಆಗಿದ್ದಳು. (1 ಸಮು. 1:5) ದೇವರು ಸ್ವಲ್ಪ ಸಮಯದ ವರೆಗೆ ಅನುಮತಿಸಿದಂಥ ಸಂಗತಿಗಳನ್ನು ಸ್ವತಃ ಆತನೇ ನಡೆಸಿದ್ದಾನೆ ಎಂಬಂತೆ ಬೈಬಲಿನಲ್ಲಿ ಕೆಲವೊಮ್ಮೆ ವರ್ಣಿಸಲಾಗಿದೆ.
^ ಪ್ಯಾರ. 9 ಯೇಸುವಿನ ದಿನದ ಅರಿಮಥಾಯ ಎಂಬ ಊರು ಮತ್ತು ಎಲ್ಕಾನನ ಊರಾದ ರಾಮಾ ಎರಡೂ ಒಂದೇ ಆಗಿದ್ದಿರಬಹುದು. ಇದಕ್ಕನುಸಾರ ಈ ಅಂತರವನ್ನು ಅಳೆಯಲಾಗಿದೆ.