ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇವು ಕೊನೆಯ ದಿವಸಗಳು!

ಇವು ಕೊನೆಯ ದಿವಸಗಳು!

ಅಧ್ಯಾಯ 11

ಇವು ಕೊನೆಯ ದಿವಸಗಳು!

1. ಲೋಕದೃಶ್ಯವನ್ನು ಅವಲೋಕಿಸುವಾಗ ಅನೇಕರು ಏಕೆ ತುಸು ದಿಗ್ಭ್ರಾಂತರಾಗುತ್ತಾರೆ, ಆದರೆ ಲೋಕಸಂಭವಗಳ ಒಂದು ಭರವಸಾರ್ಹ ವಿವರಣೆಯನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?

 ನಮ್ಮ ಗೊಂದಲಮಯ ಜಗತ್ತು ಈ ಸ್ಥಿತಿಗೆ ಹೇಗೆ ತಲಪಿತು? ನಾವೆತ್ತ ಸಾಗುತ್ತಿದ್ದೇವೆ? ನೀವು ಅಂತಹ ಪ್ರಶ್ನೆಗಳನ್ನು ಎಂದಾದರೂ ಕೇಳಿದ್ದುಂಟೊ? ಲೋಕದೃಶ್ಯವನ್ನು ನೋಡುವಾಗ ಅನೇಕರು ಕೊಂಚ ಮಟ್ಟಿಗೆ ದಿಗ್ಭ್ರಾಂತರಾಗುತ್ತಾರೆ. ಕಾದಾಟ, ರೋಗ, ಮತ್ತು ಪಾತಕದಂತಹ ವಾಸ್ತವಿಕತೆಗಳು, ಭವಿಷ್ಯವು ಏನು ಕಾದಿರಿಸಿದೆ ಎಂದು ಜನರು ಕುತೂಹಲಪಡುವಂತೆ ಮಾಡಿವೆ. ಸರಕಾರೀ ನೇತಾರರು ನೀಡುವ ನಿರೀಕ್ಷೆ ಕೊಂಚವೇ. ಆದರೂ, ಈ ಸಂಕಟಕರ ದಿವಸಗಳ ಭರವಸಾರ್ಹ ವಿವರಣೆಯೊಂದು ದೇವರಿಂದ ಆತನ ವಾಕ್ಯದಲ್ಲಿ ಲಭ್ಯವಿದೆ. ಕಾಲ ಪ್ರವಾಹದಲ್ಲಿ ನಾವೆಲ್ಲಿದ್ದೇವೆಂದು ನೋಡಲು ಬೈಬಲು ನಮಗೆ ಭರವಸಾರ್ಹವಾಗಿ ಸಹಾಯಮಾಡುತ್ತದೆ. ನಾವು ಸದ್ಯದ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ಇದ್ದೇವೆಂದು ಅದು ತೋರಿಸುತ್ತದೆ.—2 ತಿಮೊಥೆಯ 3:1.

2. ಯೇಸುವಿನ ಶಿಷ್ಯರು ಅವನಿಗೆ ಯಾವ ಪ್ರಶ್ನೆ ಹಾಕಿದರು, ಮತ್ತು ಅವನು ಹೇಗೆ ಉತ್ತರಕೊಟ್ಟನು?

2 ದೃಷ್ಟಾಂತಕ್ಕೆ, ತನ್ನ ಶಿಷ್ಯರು ಎಬ್ಬಿಸಿದ ಕೆಲವು ಪ್ರಶ್ನೆಗಳಿಗೆ ಯೇಸು ಕೊಟ್ಟ ಉತ್ತರವನ್ನು ಪರಿಗಣಿಸಿರಿ. ಯೇಸುವು ಸಾಯುವುದಕ್ಕೆ ಮೂರು ದಿವಸಗಳ ಮೊದಲು, ಅವರು ಅವನನ್ನು ಕೇಳಿದ್ದು: “ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನಾಗಿರುವುದು?” * (ಮತ್ತಾಯ 24:3, NW) ಉತ್ತರವಾಗಿ, ಈ ಭಕ್ತಿಹೀನ ವ್ಯವಸ್ಥೆಯು ತನ್ನ ಕೊನೆಯ ದಿವಸಗಳನ್ನು ಪ್ರವೇಶಿಸಿದೆಯೆಂದು ಸ್ಪಷ್ಟವಾಗಿ ತೋರಿಸುವ ನಿರ್ದಿಷ್ಟವಾದ ಲೋಕ ಘಟನೆಗಳ ಮತ್ತು ಪರಿಸ್ಥಿತಿಗಳ ಕುರಿತು ಯೇಸು ಹೇಳಿದನು.

3. ಯೇಸುವು ಆಳಲಾರಂಭಿಸಿದಾಗ ಲೋಕದ ಪರಿಸ್ಥಿತಿಗಳು ಹೆಚ್ಚು ಕೆಟ್ಟದಾದದ್ದು ಏಕೆ?

3 ಹಿಂದಿನ ಅಧ್ಯಾಯದಲ್ಲಿ ತೋರಿಸಲ್ಪಟ್ಟಂತೆ, ಬೈಬಲ್‌ ಕಾಲಗಣನೆಯು ದೇವರ ರಾಜ್ಯವು ಈಗಾಗಲೇ ಆಳಲಾರಂಭಿಸಿದೆ ಎಂಬ ತೀರ್ಮಾನಕ್ಕೆ ನಡೆಸುತ್ತದೆ. ಆದರೆ ಅದು ಹೇಗೆ ಸಾಧ್ಯ? ಸಂಗತಿಗಳು ಕೆಟ್ಟಿವೆ, ಉತ್ತಮಗೊಂಡಿಲ್ಲ. ವಾಸ್ತವವಾಗಿ, ದೇವರ ರಾಜ್ಯವು ಆಳಲು ಆರಂಭಿಸಿದೆ ಎಂಬುದರ ಬಲವಾದ ಸೂಚನೆ ಇದಾಗಿದೆ. ಹಾಗೇಕೆ? ಒಳ್ಳೆಯದು, ಯೇಸುವು ಸ್ವಲ್ಪ ಸಮಯ ‘ತನ್ನ ವೈರಿಗಳ ಮಧ್ಯೆ’ ಆಳುವನೆಂದು ಕೀರ್ತನೆ 110:2 ನಮಗೆ ತಿಳಿಸುತ್ತದೆ. ವಾಸ್ತವವಾಗಿ, ಸ್ವರ್ಗೀಯ ರಾಜನಾಗಿ ಅವನ ಪ್ರಥಮ ಕೃತ್ಯವು ಸೈತಾನನನ್ನೂ ಅವನ ದೆವ್ವದೂತರನ್ನೂ ಭೂಪರಿಸರಕ್ಕೆ ದೊಬ್ಬುವುದಾಗಿತ್ತು. (ಪ್ರಕಟನೆ 12:9) ಪರಿಣಾಮವೇನಾಯಿತು? ಪ್ರಕಟನೆ 12:12 ಮುಂತಿಳಿಸಿದಂತೆಯೇ ಇದಾಗಿತ್ತು: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ.” ನಾವು ಈಗ ಆ ‘ಸ್ವಲ್ಪ ಕಾಲದಲ್ಲಿ’ ಜೀವಿಸುತ್ತಿದ್ದೇವೆ.

4. ಕೊನೆಯ ದಿವಸಗಳ ಕೆಲವು ಲಕ್ಷಣಗಳಾವುವು, ಮತ್ತು ಅವು ಏನು ಸೂಚಿಸುತ್ತವೆ? (ರೇಖಾಚೌಕ ನೋಡಿ.)

4 ಆದಕಾರಣ, ಯೇಸುವಿನ ಸಾನ್ನಿಧ್ಯ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಬಗೆಗೆ ಸೂಚನೆಯೇನೆಂದು ಅವನನ್ನು ಕೇಳಲಾದಾಗ, ಅವನ ಉತ್ತರವು ಸ್ತಿಮಿತತೆಯದ್ದಾಗಿದ್ದುದು ಆಶ್ಚರ್ಯವಲ್ಲ. ಸೂಚನೆಯ ವಿವಿಧ ಅಂಶಗಳನ್ನು 102 ನೆಯ ಪುಟದ ರೇಖಾಚೌಕದಲ್ಲಿ ಕಂಡುಕೊಳ್ಳಬಹುದು. ನೀವು ನೋಡಸಾಧ್ಯವಿರುವಂತೆ, ಕ್ರೈಸ್ತ ಅಪೊಸ್ತಲರಾದ ಪೌಲ, ಪೇತ್ರ ಮತ್ತು ಯೋಹಾನರು ಕೊನೆಯ ದಿವಸಗಳ ಕುರಿತು ಇನ್ನೂ ಹೆಚ್ಚಿನ ವಿವರಗಳನ್ನು ನಮಗೆ ಒದಗಿಸುತ್ತಾರೆ. ಸೂಚನೆಯ ಮತ್ತು ಕೊನೆಯ ದಿವಸಗಳ ಅಧಿಕವಾದ ಲಕ್ಷಣಗಳು ಸಂಕಟಕರ ಪರಿಸ್ಥಿತಿಗಳನ್ನು ಒಳಗೂಡಿರುತ್ತವೆಂಬುದು ನಿಜ. ಆದರೂ, ಈ ಪ್ರವಾದನೆಗಳ ನೆರವೇರಿಕೆಯು ಈ ದುಷ್ಟ ವ್ಯವಸ್ಥೆಯು ಅದರ ಅಂತ್ಯವನ್ನು ಸಮೀಪಿಸುತ್ತಿದೆಯೆಂದು ನಮಗೆ ಮನವರಿಕೆ ಮಾಡಬೇಕು. ಕೊನೆಯ ದಿವಸಗಳ ಮುಖ್ಯಾಂಶಗಳಲ್ಲಿ ಕೆಲವನ್ನು ನಾವು ಸೂಕ್ಷ್ಮವಾಗಿ ನೋಡೋಣ.

ಕೊನೆಯ ದಿವಸಗಳ ಲಕ್ಷಣಗಳು

5, 6. ಕಾದಾಟ ಮತ್ತು ಕ್ಷಾಮಗಳ ಕುರಿತ ಪ್ರವಾದನೆಗಳು ಹೇಗೆ ನೆರವೇರುತ್ತಾ ಇವೆ?

5 “ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು.” (ಮತ್ತಾಯ 24:7, NW; ಪ್ರಕಟನೆ 6:4) ಲೇಖಕ ಅರ್ನೆಸ್ಟ್‌ ಹೆಮಿಂಗ್ವೆ I ನೆಯ ಲೋಕ ಯುದ್ಧವನ್ನು, “ಭೂಮಿಯ ಮೇಲೆ ನಡೆದಿರುವವುಗಳಲ್ಲಿ ಅತಿ ಬೃಹದಾಕಾರದ, ಕೊಲೆ ಮಾಡುವ, ಅವ್ಯವಸ್ಥೆಯ ಕಟುಕತನ” ಎಂದು ಕರೆದನು. ಜಗತ್ತು ಅಗ್ನಿಪರೀಕ್ಷೆಯಲ್ಲಿ—1914-1919, (ಇಂಗ್ಲಿಷ್‌) ಎಂಬ ಪುಸ್ತಕಕ್ಕನುಸಾರ, ಇದು “ಯುದ್ಧದ, ಮಾನವಕುಲದ ಅನುಭವದಲ್ಲಿ ನಡೆದ ಪ್ರಥಮ ಸಂಪೂರ್ಣ ಯುದ್ಧದ ಒಂದು ಹೊಸ ವ್ಯಾಪ್ತಿ. ಅದರ ಕಾಲಾವಧಿ, ತೀಕ್ಷ್ಣತೆ ಮತ್ತು ಪ್ರಮಾಣಗಳು ಹಿಂದೆ ಜ್ಞಾತವಾಗಿದ್ದ ಅಥವಾ ಸಾಮಾನ್ಯವಾಗಿ ನಿರೀಕ್ಷಿಸಲ್ಪಟ್ಟಿದ್ದ ಯಾವುದಕ್ಕಿಂತಲೂ ಅಧಿಕವಾಗಿತ್ತು.” ಆ ಬಳಿಕ I ನೆಯ ಲೋಕ ಯುದ್ಧಕ್ಕಿಂತ ಎಷ್ಟೋ ಹೆಚ್ಚು ನಾಶಕರವಾಗಿ ಪರಿಣಮಿಸಿದ II ನೆಯ ಲೋಕ ಯುದ್ಧವು ಬಂತು. ಇತಿಹಾಸದ ಪ್ರೊಫೆಸರ್‌ ಹ್ಯೂ ಥಾಮಸ್‌ ಹೇಳುವುದು: “ಇಪ್ಪತ್ತನೆಯ ಶತಮಾನದ ಮೇಲೆ ಮಶೀನ್‌ ಗನ್‌, ಟ್ಯಾಂಕ್‌, ಬಿ-52, ನ್ಯೂಕ್ಲಿಯರ್‌ ಬಾಂಬ್‌ ಮತ್ತು ಅಂತಿಮವಾಗಿ, ಕ್ಷಿಪಣಿ, ಆಧಿಪತ್ಯ ನಡೆಸಿದೆ. ಬೇರೆ ಯಾವುದೇ ಯುಗಕ್ಕಿಂತ ಹೆಚ್ಚು ರಕ್ತ ಸುರಿಸಿದ ಮತ್ತು ನಾಶಕರವಾದ ಯುದ್ಧಗಳು ಅದನ್ನು ಗುರುತಿಸಿವೆ.” ಶೀತಲ ಯುದ್ಧಾಂತ್ಯದ ಬಳಿಕ ನಿರಸ್ತ್ರೀಕರಣದ ಕುರಿತು ಧಾರಾಳವಾಗಿ ಹೇಳಲಾಗಿತ್ತೆಂಬುದು ನಿಜ. ಆದರೂ, ಪ್ರಸ್ತಾಪಿಸಲ್ಪಟ್ಟಿರುವ ಖೋತಾದ ಬಳಿಕವೂ 10,000 ದಿಂದ 20,000 ನ್ಯೂಕ್ಲಿಯರ್‌ ಸಿಡಿತಲೆಗಳು—II ನೆಯ ಲೋಕ ಯುದ್ಧದ ಸಮಯದಲ್ಲಿ ಬಳಸಲಾದ ಗುಂಡಿನ ಶಕ್ತಿಯ 900ಕ್ಕೂ ಹೆಚ್ಚು ಪಾಲು—ಉಳಿಯುವುವು ಎಂದು ಒಂದು ವರದಿಯು ಅಂದಾಜುಮಾಡುತ್ತದೆ.

6 “ಆಹಾರದ ಅಭಾವಗಳಿರುವುವು.” (ಮತ್ತಾಯ 24:7, NW; ಪ್ರಕಟನೆ 6:5, 6, 8) 1914 ರಿಂದ ಹಿಡಿದು ಕಡಮೆ ಪಕ್ಷ 20 ದೊಡ್ಡ ಕ್ಷಾಮಗಳಾದರೂ ಆಗಿಹೋಗಿವೆ. ಕ್ಲೇಶಕ್ಕೊಳಗಾಗಿರುವ ಪ್ರದೇಶಗಳಲ್ಲಿ ಇಥಿಯೋಪ್ಯ, ಕೆಂಬೋಡಿಯ, ಗ್ರೀಸ್‌, ಚೀನ, ನೈಜಿರಿಯ, ಬಾಂಗ್ಲಾದೇಶ, ಬುರುಂಡಿ, ಭಾರತ, ರಷ್ಯ, ರುಆಂಡ, ಸುಡಾನ್‌ ಮತ್ತು ಸೊಮಾಲಿಯ ಸೇರಿವೆ. ಆದರೆ ಕ್ಷಾಮವು ಸದಾ ಆಹಾರದ ಕೊರತೆಯಿಂದಲೇ ಆಗುವುದಿಲ್ಲ. ವ್ಯವಸಾಯ ವಿಜ್ಞಾನಿಗಳ ಮತ್ತು ಅರ್ಥಶಾಸ್ತ್ರಜ್ಞರ ಒಂದು ಗುಂಪು ತೀರ್ಮಾನಿಸಿದ್ದು: “ಇತ್ತೀಚಿನ ದಶಕಗಳಲ್ಲಿ ಲೋಕದ ಆಹಾರ ಸರಬರಾಯಿ ಅದರ ಜನಸಂಖ್ಯೆಗಿಂತ ಹೆಚ್ಚು ವೇಗದಲ್ಲಿ ಬೆಳೆದಿದೆ. ಆದರೆ ಕಡಮೆ ಪಕ್ಷ 80 ಕೋಟಿ ಜನರು ಕಡು ಬಡತನದಲ್ಲಿ ಬದುಕುವುದರಿಂದ . . . ತಮ್ಮನ್ನು ಅಸ್ಥಿಗತ ನ್ಯೂನ ಪೋಷಣೆಯಿಂದ ಎತ್ತುವಂತೆ ಆ ಸಮೃದ್ಧಿಯಿಂದ ಸಾಕಷ್ಟನ್ನು ಖರೀದಿಸಲು ಅಶಕ್ತರಾಗಿದ್ದಾರೆ.” ಬೇರೆ ಉದಾಹರಣೆಗಳಲ್ಲಿ ರಾಜಕೀಯ ತಲೆಹಾಕುವಿಕೆಗಳು ಒಳಗೂಡಿವೆ. ತಮ್ಮ ದೇಶಗಳು ದೊಡ್ಡ ಮೊತ್ತದ ಆಹಾರವನ್ನು ರಫ್ತು ಮಾಡುತ್ತಿದ್ದಾಗ ಅಲ್ಲಿನ ಸಾವಿರಾರು ಜನರು ಉಪವಾಸಬಿದ್ದ ಎರಡು ಉದಾಹರಣೆಗಳನ್ನು, ಟೊರಾಂಟೊ ವಿಶ್ವವಿದ್ಯಾನಿಲಯದ ಡಾ. ಅಬ್ದೆಲ್ಗಲೀಲ್‌ ಎಲ್ಮೆಕಿ ಉದಾಹರಿಸುತ್ತಾರೆ. ಸರಕಾರಗಳು ತಮ್ಮ ಪೌರರನ್ನು ಉಣಿಸುವ ಬದಲಾಗಿ ತಮ್ಮ ಯುದ್ಧಗಳಿಗೆ ಹಣ ಒದಗಿಸಲು ವಿದೇಶೀಯ ಹಣವನ್ನು ಗಳಿಸುವ ಕುರಿತು ಎಷ್ಟೋ ಹೆಚ್ಚು ಚಿಂತಿತರಾಗಿರುವಂತೆ ಕಂಡಿತು. ಡಾ. ಎಲ್ಮೆಕಿಯ ತೀರ್ಮಾನವೇನು? ಕ್ಷಾಮವು ಅನೇಕವೇಳೆ, “ವಿತರಣೆ ಮತ್ತು ಸರಕಾರೀ ಕಾರ್ಯನೀತಿಯ ವಿಚಾರವಾಗಿದೆ.”

7. ಇಂದು ಅಂಟುರೋಗಗಳ ಕುರಿತ ನಿಜತ್ವಗಳೇನು?

7 “ಅಂಟುರೋಗಗಳು.” (ಲೂಕ 21:11, NW; ಪ್ರಕಟನೆ 6:8) 1918-19ರ ಸ್ಪ್ಯಾನಿಷ್‌ ಇನ್‌ಫ್ಲುಯೆನ್ಸ ಕಡಮೆ ಪಕ್ಷ 2.1 ಕೋಟಿ ಜೀವಗಳನ್ನು ಆಹುತಿ ತೆಗೆದುಕೊಂಡಿತು. ದ ಗ್ರೇಟ್‌ ಎಪಿಡೆಮಿಕ್‌ ಎಂಬ ಪುಸ್ತಕದಲ್ಲಿ ಎ. ಎ. ಹೋಲಿಂಗ್‌ ಬರೆಯುವುದು: “ಇತಿಹಾಸದಲ್ಲಿ ಲೋಕವು ಹಿಂದೆಂದೂ ಅಷ್ಟು ಹೆಚ್ಚು ಮಾನವರನ್ನು ಅಷ್ಟು ಬೇಗನೆ ಕೊಂದ ಕೊಲೆಗಾರನಿಂದ ಧ್ವಂಸವಾದದ್ದಿಲ್ಲ.” ಇಂದು ಅಂಟುರೋಗಗಳು ಅತ್ಯುಗ್ರವಾಗುತ್ತಾ ಇವೆ. ಪ್ರತಿ ವರ್ಷ ಕ್ಯಾನ್ಸರ್‌ 50 ಲಕ್ಷ ಜನರನ್ನು ಕೊಲ್ಲುತ್ತದೆ, ಅತಿಭೇದಿ ರೋಗಗಳು 30 ಲಕ್ಷಕ್ಕೂ ಹೆಚ್ಚು ಶಿಶುಗಳ ಮತ್ತು ಮಕ್ಕಳ ಜೀವಗಳನ್ನು ಅಪಹರಿಸುತ್ತವೆ, ಮತ್ತು ಕ್ಷಯರೋಗ 30 ಲಕ್ಷ ಜನರನ್ನು ಸಂಹರಿಸುತ್ತದೆ. ಉಸಿರಾಟ ಸಂಬಂಧದ ಸೋಂಕುಗಳು, ಮುಖ್ಯವಾಗಿ ನ್ಯುಮೋನಿಯ, ಐದು ವರ್ಷ ವಯಸ್ಸಿಗೆ ಕೆಳಗಿನ 35 ಲಕ್ಷ ಎಳೆಯರನ್ನು ವಾರ್ಷಿಕವಾಗಿ ಕೊಲ್ಲುತ್ತವೆ. ಮತ್ತು ತತ್ತರಗುಟ್ಟಿಸುವ 250 ಕೋಟಿ ಜನರು—ಜಗತ್ತಿನ ಜನಸಂಖ್ಯೆಯ ಅರ್ಧಾಂಶ—ಸಾಕಷ್ಟಿಲ್ಲದ ಅಥವಾ ಮಲಿನಗೊಂಡಿರುವ ನೀರಿನಿಂದ ಹುಟ್ಟಿಬರುವ ಮತ್ತು ನ್ಯೂನ ನೈರ್ಮಲ್ಯದಿಂದಾಗುವ ರೋಗಗಳಿಂದ ನರಳುತ್ತಾರೆ. ಮನುಷ್ಯನ ಗಮನಾರ್ಹ ವೈದ್ಯಕೀಯ ಸಾಧನೆಗಳ ಹೊರತೂ, ಅವನು ಅಂಟುರೋಗಗಳನ್ನು ನಿರ್ಮೂಲಗೊಳಿಸಲು ಅಶಕ್ತನು ಎಂಬುದರ ಹೆಚ್ಚಿಗೆಯ ಮರುಜ್ಞಾಪನವನ್ನು ಏಡ್ಸ್‌ ಒದಗಿಸುತ್ತದೆ.

8. ಜನರು “ಧನಪ್ರೇಮಿಗಳು” ಆಗಿ ಕಂಡುಬರುವುದು ಹೇಗೆ?

8 “ಮನುಷ್ಯರು . . . ಧನಪ್ರೇಮಿಗಳೂ . . . ಆಗಿರುವರು.” (2 ತಿಮೊಥೆಯ 3:2, NW) ಲೋಕದ ಸುತ್ತಲಿರುವ ದೇಶಗಳಲ್ಲಿ ಜನರಿಗೆ ಹೆಚ್ಚು ಮಹತ್ತರವಾದ ಐಶ್ವರ್ಯಕ್ಕಾಗಿ ತಣಿಸಲಾಗದ ಹಸಿವೆಯಿದೆ. ಅನೇಕವೇಳೆ ಒಬ್ಬನ “ಸಾಫಲ್ಯ” ವನ್ನು ಅವನ ಸಂಬಳದಿಂದ, “ಸಾಧನೆ” ಯನ್ನು ಅವನಿಗಿರುವ ಸೊತ್ತಿನಿಂದ ಅಳೆಯಲಾಗುತ್ತದೆ. “ಪ್ರಾಪಂಚಿಕತೆಯು ಅಮೆರಿಕನ್‌ ಸಮಾಜದಲ್ಲಿ ಪ್ರಚೋದಕ ಶಕ್ತಿಗಳಲ್ಲಿ ಒಂದಾಗಿರುತ್ತಾ ಮುಂದುವರಿಯುವುದು . . . ಮತ್ತು ಇತರ ದೊಡ್ಡ ಮಾರುಕಟ್ಟೆಗಳಲ್ಲಿ ಸಹ ವೃದ್ಧಿಯಾಗುತ್ತಿರುವ ಪ್ರಮುಖ ಶಕ್ತಿಯಾಗಿರುವುದು,” ಎಂದು ಒಂದು ಜಾಹೀರಾತು ಏಜನ್ಸಿಯ ಉಪಾಧ್ಯಕ್ಷರು ಘೋಷಿಸಿದರು. ನೀವು ಜೀವಿಸುವಲ್ಲಿ ಇದು ನಡೆಯುತ್ತಿದೆಯೊ?

9. ಮುಂತಿಳಿಸಲ್ಪಟ್ಟ ಹೆತ್ತವರಿಗೆ ಅವಿಧೇಯತೆಯ ವಿಷಯದಲ್ಲಿ ಏನು ಹೇಳಸಾಧ್ಯವಿದೆ?

9 “ಹೆತ್ತವರಿಗೆ ಅವಿಧೇಯರು.” (2 ತಿಮೊಥೆಯ 3:2, NW) ಇಂದಿನ ದಿವಸಗಳ ಹೆತ್ತವರಲ್ಲಿ, ಉಪಾಧ್ಯಾಯರಲ್ಲಿ ಮತ್ತು ಇತರರಲ್ಲಿ, ಅನೇಕ ಮಕ್ಕಳು ಅಗೌರವಿಗಳೂ ಅವಿಧೇಯರೂ ಆಗಿದ್ದಾರೆಂಬುದಕ್ಕೆ ನೇರವಾದ ಸಾಕ್ಷ್ಯಗಳಿವೆ. ಈ ಎಳೆಯರಲ್ಲಿ ಕೆಲವರು ಅವರ ಹೆತ್ತವರ ದುರ್ನಡತೆಗೆ ಪ್ರತಿಕ್ರಿಯೆಯನ್ನು ತೋರಿಸುತ್ತಿದ್ದಾರೆ ಅಥವಾ ಅದನ್ನು ಅನುಕರಿಸುತ್ತಿದ್ದಾರೆ. ಮಕ್ಕಳು ಹೆಚ್ಚುತ್ತಿರುವ ಸಂಖ್ಯೆಗಳಲ್ಲಿ ಶಾಲೆ, ಕಾನೂನು, ಧರ್ಮ ಮತ್ತು ತಮ್ಮ ಹೆತ್ತವರಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಅವುಗಳ ವಿರುದ್ಧ ದಂಗೆಯೇಳುತ್ತಿದ್ದಾರೆ. “ಪ್ರವಣತೆಯಾಗಿ, ಅವರಿಗೆ ಯಾವುದಕ್ಕೂ ಅತಿ ಕಡಮೆ ಗೌರವವಿರುವಂತೆ ಕಾಣುತ್ತದೆ,” ಎನ್ನುತ್ತಾರೆ ಒಬ್ಬ ನುರಿತ ಉಪಾಧ್ಯಾಯರು. ಆದರೆ ಸಂತೋಷಕರವಾಗಿ, ಅನೇಕ ದೇವಭಯವುಳ್ಳ ಮಕ್ಕಳು ನಡತೆಯಲ್ಲಿ ಆದರ್ಶಪ್ರಾಯರಾಗಿದ್ದಾರೆ.

10, 11. ಜನರು ಉಗ್ರರು ಮತ್ತು ಸ್ವಾಭಾವಿಕ ಮಮತೆಯಲ್ಲಿ ಕೊರತೆಯುಳ್ಳವರೆಂಬುದಕ್ಕೆ ಯಾವ ಪುರಾವೆಯಿದೆ?

10 “ಉಗ್ರರು.” (2 ತಿಮೊಥೆಯ 3:3) “ಉಗ್ರ” ವೆಂದು ಭಾಷಾಂತರವಾಗಿರುವ ಗ್ರೀಕ್‌ ಪದದ ಅರ್ಥವು ‘ಪಳಗಿಸಿಲ್ಲದ, ಮಾನವ ಅನುಕಂಪ ಅಥವಾ ಅನಿಸಿಕೆಯ ಕೊರತೆಯಿರುವುದು,’ ಎಂದಾಗಿದೆ. ಇಂದಿನ ಅನೇಕ ಹಿಂಸಾಚಾರ ನಡೆಸುವವರಿಗೆ ಇದು ಎಷ್ಟು ಒಳ್ಳೆಯದಾಗಿ ಹೊಂದಿಕೊಳ್ಳುತ್ತದೆ! “ಜೀವನವು ಎಷ್ಟು ಗಾಯಗೊಳಿಸುವಂತಹದ್ದು, ಭಯಂಕರತೆಯಿಂದ ಎಷ್ಟು ರಕ್ತಮಯವಾಗಿದೆಯೆಂದರೆ, ದಿನದ ವಾರ್ತೆಗಳನ್ನು ಓದಲು ಒಬ್ಬನಿಗೆ ಗಡುಸಾದ ಹೊಟ್ಟೆಯು ಬೇಕಾಗುತ್ತದೆ,” ಎಂದಿತು ಒಂದು ಸಂಪಾದಕೀಯ. ಅನೇಕ ಯುವ ಜನರು ತಮ್ಮ ವರ್ತನೆಗಳ ಪರಿಣಾಮಗಳಿಗೆ ತಮ್ಮನ್ನು ಕುರುಡರನ್ನಾಗಿ ಮಾಡಿಕೊಳ್ಳುತ್ತಾರೆಂದು ಕಾಣುತ್ತದೆ, ಎಂದು ಒಬ್ಬ ಹೌಸಿಂಗ್‌ ಪೊಲೀಸ್‌ ಸಾರ್ಜೆಂಟನು ಗಮನಿಸಿದನು. ಅವನು ಹೇಳಿದ್ದು: “‘ನಾಳೆಯ ವಿಷಯ ನಾನರಿಯೆ. ಈ ದಿನ ನಾನು ಬಯಸುವುದನ್ನು ಪಡೆಯುವೆ’ ಎಂಬ ಅನಿಸಿಕೆಯಿದೆ.”

11 “ಸ್ವಾಭಾವಿಕವಾದ ಮಮತೆಯಿಲ್ಲದವರು.” (2 ತಿಮೊಥೆಯ 3:3, NW) ಈ ಪದ ಸಮೂಹವನ್ನು “ನಿರ್ದಯದ, ಅಮಾನುಷ,” ಎಂಬ ಅರ್ಥಬರುವ ಮತ್ತು “ಸ್ವಾಭಾವಿಕವಾದ, ಕೌಟುಂಬಿಕ ಮಮತೆಯ ಕೊರತೆ” ಯನ್ನು ಸೂಚಿಸುವ ಗ್ರೀಕ್‌ ಪದದಿಂದ ಭಾಷಾಂತರಿಸಲಾಗುತ್ತದೆ. (ದ ನ್ಯೂ ಇಂಟರ್‌ನ್ಯಾಷನಲ್‌ ಡಿಕ್‌ಷನರಿ ಆಫ್‌ ನ್ಯೂ ಟೆಸ್ಟಮೆಂಟ್‌ ತಿಯಾಲೊಜಿ) ಹೌದು, ಅದು ಎಲ್ಲಿ ಹೇರಳವಾಗಿರಬೇಕೊ ಅಲ್ಲಿ, ಅಂದರೆ ಮನೆಯಲ್ಲಿ ಮಮತೆಯು ಅನೇಕವೇಳೆ ಕಾಣದೆ ಹೋಗುತ್ತದೆ. ವಿವಾಹ ಜೊತೆಗಳ, ಮಕ್ಕಳ ಮತ್ತು ವೃದ್ಧರಾದ ಹೆತ್ತವರ ಕಡೆಗೆ ಸಹ ಅಪಪ್ರಯೋಗದ ವರ್ತನೆಗಳ ವರದಿಗಳು ಮನಸ್ಸು ಕಲಕುವಷ್ಟು ಸಾಮಾನ್ಯವಾಗಿವೆ. ಒಂದು ಸಂಶೋಧಕ ತಂಡವು ಹೇಳಿದ್ದು: “ಮಾನವ ಹಿಂಸಾಚಾರ—ಅದು ಹೊಡೆತವಾಗಿರಲಿ, ನೂಕಾಗಿರಲಿ, ಚೂರಿಯಿಂದ ಇರಿತವಾಗಿರಲಿ, ಬಂದೂಕಿನ ಹೊಡೆತವಾಗಿರಲಿ—ನಮ್ಮ ಸಮಾಜದ ಬೇರೆಲ್ಲಿಗಿಂತಲೂ ಕುಟುಂಬ ವೃತ್ತದಲ್ಲಿ ಹೆಚ್ಚು ಪದೇ ಪದೇ ಸಂಭವಿಸುತ್ತದೆ.”

12. ದೇವಭಕ್ತಿಯ ಒಂದು ರೂಪವು ಮಾತ್ರ ಜನರಲ್ಲಿದೆ ಎಂದು ಏಕೆ ಹೇಳಸಾಧ್ಯವಿದೆ?

12 “ದೇವಭಕ್ತಿಯ ರೂಪವಿದ್ದರೂ ಅದರ ಬಲಕ್ಕೆ ಸುಳ್ಳಾಗಿ ವರ್ತಿಸುವವರು.” (2 ತಿಮೊಥೆಯ 3:5, NW) ಬೈಬಲಿಗೆ ಜೀವನಗಳನ್ನು ಹೆಚ್ಚು ಉತ್ತಮ ಸ್ಥಿತಿಗೆ ಬದಲಾಯಿಸುವ ಶಕ್ತಿಯಿದೆ. (ಎಫೆಸ 4:22-24) ಆದರೂ, ಇಂದು ಅನೇಕರು ತಮ್ಮ ಧರ್ಮವನ್ನು, ಅದರ ಮರೆಯಲ್ಲಿ, ದೇವರನ್ನು ಅಸಮಾಧಾನಗೊಳಿಸುವ ಅನೀತಿಯ ಚಟುವಟಿಕೆಗಳನ್ನು ಮುಂದುವರಿಸುವ ಒಂದು ಪರದೆಯಂತೆ ಉಪಯೋಗಿಸುತ್ತಾರೆ. ಸುಳ್ಳಾಡುವುದು, ಕದಿಯುವುದು ಮತ್ತು ಲೈಂಗಿಕ ದುರ್ನಡತೆಗಳು ಅನೇಕವೇಳೆ ಧಾರ್ಮಿಕ ಮುಖಂಡರಿಂದ ಮನ್ನಿಸಲ್ಪಡುತ್ತವೆ. ಅನೇಕ ಧರ್ಮಗಳು ಪ್ರೀತಿಯನ್ನು ಸಾರಿದರೂ ಕಾದಾಟವನ್ನು ಬೆಂಬಲಿಸುತ್ತವೆ. ಇಂಡಿಯ ಟುಡೇ ಪತ್ರಿಕೆಯ ಒಂದು ಸಂಪಾದಕೀಯವು ಅವಲೋಕಿಸುವುದು: “ಪರಮ ಸೃಷ್ಟಿಕರ್ತನ ಹೆಸರಿನಲ್ಲಿ ಮಾನವರು ತಮ್ಮ ಸಹಜೀವಿಗಳ ವಿರುದ್ಧ ಅತಿ ಅಸಹ್ಯಕರವಾದ ಪಾಶವೀಯತೆಯನ್ನು ಗೈದಿದ್ದಾರೆ.” ವಾಸ್ತವವಾಗಿ, ಇತ್ತೀಚಿನ ಸಮಯಗಳ ಎರಡು ಅತ್ಯಂತ ರಕ್ತಮಯ ಹೋರಾಟಗಳು—ಲೋಕ ಯುದ್ಧಗಳು I ಮತ್ತು II—ಕ್ರೈಸ್ತಪ್ರಪಂಚದ ಮಧ್ಯದಲ್ಲಿ ಹೊರಚಿಮ್ಮಿದವು.

13. ಭೂಮಿಯು ಧ್ವಂಸಗೊಳಿಸಲ್ಪಡುತ್ತಿರುವುದಕ್ಕೆ ಯಾವ ರುಜುವಾತಿದೆ?

13 “ಭೂಮಿಯನ್ನು ನಾಶಮಾಡುವುದು.” (ಪ್ರಕಟನೆ 11:18, NW) 104 ನೋಬೆಲ್‌ ಪ್ರಶಸ್ತಿ ವಿಜೇತರು ಸೇರಿದ ಲೋಕಾದ್ಯಂತದ 1,600ಕ್ಕೂ ಹೆಚ್ಚು ವಿಜ್ಞಾನಿಗಳು, ಚಿಂತಿತ ವಿಜ್ಞಾನಿಗಳ ಸಂಘ (ಯುಸಿಎಸ್‌) ಹೊರಡಿಸಿದಂತಹ, ಒಂದು ಎಚ್ಚರಿಕೆಯನ್ನು ಅನುಮೋದಿಸಿ ತಿಳಿಸಿದ್ದು: “ಮಾನವ ಜೀವಿಗಳು ಮತ್ತು ಪ್ರಾಕೃತಿಕ ಲೋಕವು ಒಂದು ಆಘಾತ ಪಥದಲ್ಲಿವೆ. . . . ಆ ಬೆದರಿಕೆಗಳನ್ನು ತಪ್ಪಿಸುವ ಸಂದರ್ಭವು ಕಳೆದುಕೊಳ್ಳಲ್ಪಡುವ ಮೊದಲು ಕೆಲವೇ ದಶಕಗಳಿಗಿಂತ ಹೆಚ್ಚು ಉಳಿದಿರುವುದಿಲ್ಲ.” ಮನುಷ್ಯನ ಜೀವಾಪಾಯವನ್ನುಂಟುಮಾಡುವ ಅಭ್ಯಾಸಗಳು, “ಲೋಕವನ್ನು ಎಷ್ಟು ಬದಲಾಯಿಸಬಹುದೆಂದರೆ, ಅದು ನಮಗೆ ಗೊತ್ತಿರುವ ಪ್ರಕಾರ ಜೀವವನ್ನು ಪೋಷಿಸಲು ಸಾಮರ್ಥ್ಯವಿಲ್ಲದ್ದಾಗುವುದು,” ಎಂದು ಆ ವರದಿ ಹೇಳಿತು. ಓಸೋನ್‌ ವಿರೇಚನ, ಜಲ ಮಾಲಿನ್ಯ, ಕಾಡು ಕಡಿತ, ಮಣ್ಣಿನ ಉತ್ಪಾದನಾ ಶಕ್ತಿನಷ್ಟ, ಮತ್ತು ಅನೇಕ ಪ್ರಾಣಿ ಮತ್ತು ಸಸ್ಯಜಾತಿಗಳ ನಾಶ—ಇವು ಮನಸ್ಸು ಕೊಡಲೇ ಬೇಕಾದ ಜರೂರಿಯ ಸಮಸ್ಯೆಗಳೆಂದು ಉದಾಹರಿಸಲ್ಪಟ್ಟವು. ಯುಸಿಎಸ್‌ ಹೇಳಿದ್ದು: “ಆ ಜೀವದ ಅನ್ಯೋನ್ಯಾಶ್ರಯ ಜಾಲದಲ್ಲಿ ನಮ್ಮ ಹಸ್ತಕ್ಷೇಪವು ವ್ಯಾಪಕವಾದ ಪರಿಣಾಮಗಳನ್ನು—ಯಾವುದರ ಬಲಕ್ರಿಯಾಶಾಸ್ತ್ರವನ್ನು ನಾವು ಅಪೂರ್ಣವಾಗಿ ತಿಳಿದಿದ್ದೇವೆಯೋ ಆ ಜೀವಶಾಸ್ತ್ರೀಯ ವ್ಯೂಹಗಳ ಕುಸಿತಗಳನ್ನು ಸೇರಿಸಿ ವಿಯೋಜಿಸಬಲ್ಲದು.”

14. ಮತ್ತಾಯ 24:14 ನಮ್ಮ ದಿವಸಗಳಲ್ಲಿ ನೆರವೇರುತ್ತಿದೆಯೆಂದು ನೀವು ಹೇಗೆ ರುಜುಮಾಡಬಲ್ಲಿರಿ?

14 “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಲ್ಲೆಲ್ಲ ಸಾರಲ್ಪಡುವುದು.” (ಮತ್ತಾಯ 24:14, NW) ಸಕಲ ರಾಷ್ಟ್ರಗಳಿಗೆ ಸಾಕ್ಷಿಯಾಗಿ ರಾಜ್ಯದ ಸುವಾರ್ತೆಯು ಭೂವ್ಯಾಪಕವಾಗಿ ಸಾರಲ್ಪಡುವುದೆಂದು ಯೇಸು ಮುಂತಿಳಿಸಿದನು. ದೈವಿಕ ಸಹಾಯ ಮತ್ತು ಆಶೀರ್ವಾದದಿಂದಾಗಿ, ಲಕ್ಷಾಂತರ ಯೆಹೋವನ ಸಾಕ್ಷಿಗಳು ಕೋಟ್ಯಂತರ ತಾಸುಗಳನ್ನು ಈ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕಾರ್ಯದಲ್ಲಿ ವಿನಿಯೋಗಿಸುತ್ತಿದ್ದಾರೆ. (ಮತ್ತಾಯ 28:19, 20) ಹೌದು, ತಾವು ಸುವಾರ್ತೆಯನ್ನು ಪ್ರಕಟಿಸದಿರುವಲ್ಲಿ ರಕ್ತಾಪರಾಧಿಗಳಾಗುವೆವೆಂದು ಸಾಕ್ಷಿಗಳು ಸ್ಪಷ್ಟವಾಗಿ ಗ್ರಹಿಸುತ್ತಾರೆ. (ಯೆಹೆಜ್ಕೇಲ 3:18, 19) ಆದರೆ ಪ್ರತಿ ವರ್ಷ ಸಾವಿರಾರು ಮಂದಿ ರಾಜ್ಯದ ಸಂದೇಶಕ್ಕೆ ಕೃತಜ್ಞತೆಯಿಂದ ಓಗೊಟ್ಟು ಸತ್ಯ ಕ್ರೈಸ್ತರಾಗಿ, ಅಂದರೆ, ಯೆಹೋವನ ಸಾಕ್ಷಿಗಳಾಗಿ ತಮ್ಮ ನಿಲುವನ್ನು ತೆಗೆದುಕೊಳ್ಳುತ್ತಾರೆಂಬುದಕ್ಕಾಗಿ ಅವರು ಹರ್ಷಿಸುತ್ತಾರೆ. ಯೆಹೋವನನ್ನು ಸೇವಿಸಿ ಹೀಗೆ ದೇವರ ಜ್ಞಾನವನ್ನು ಹಬ್ಬಿಸುವುದು ಒಂದು ಅಮೂಲ್ಯ ಸುಯೋಗವಾಗಿದೆ. ಮತ್ತು ಈ ಸುವಾರ್ತೆಯನ್ನು ನಿವಾಸಿತ ಭೂಮಿಯಲ್ಲೆಲ್ಲ ಸಾರಿದ ಬಳಿಕ ಈ ದುಷ್ಟ ವ್ಯವಸ್ಥೆಯ ಅಂತ್ಯ ಬರುವುದು.

ಸಾಕ್ಷ್ಯಕ್ಕೆ ಪ್ರತಿಕ್ರಿಯಿಸಿರಿ

15. ಸದ್ಯದ ದುಷ್ಟ ವ್ಯವಸ್ಥೆ ಹೇಗೆ ಅಂತ್ಯಗೊಳ್ಳುವುದು?

15 ಈ ವ್ಯವಸ್ಥೆಯು ಹೇಗೆ ಅಂತ್ಯಗೊಳ್ಳುವುದು? ಈ ಲೋಕದ ರಾಜಕೀಯ ಘಟಕಾಂಶವು ಮಿಥ್ಯಾಧರ್ಮದ ಲೋಕ ಸಾಮ್ರಾಜ್ಯವಾದ “ಮಹಾ ಬಾಬೆಲ್‌” ಮೇಲೆ ಆಕ್ರಮಣ ಮಾಡುವುದರೊಂದಿಗೆ ಆರಂಭವಾಗುವ ಒಂದು “ಮಹಾ ಸಂಕಟ” ವನ್ನು ಬೈಬಲು ಮುಂತಿಳಿಸುತ್ತದೆ. (ಮತ್ತಾಯ 24:21; ಪ್ರಕಟನೆ 17:5, 16) ಈ ಸಮಯಾವಧಿಯಲ್ಲಿ, ‘ಸೂರ್ಯ ಕತ್ತಲಾಗುವುದು, ಚಂದ್ರ ಅದರ ಪ್ರಕಾಶವನ್ನು ಕೊಡದು, ನಕ್ಷತ್ರಗಳು ಆಕಾಶದಿಂದ ಬೀಳುವುವು, ಮತ್ತು ಆಕಾಶಗಳ ಶಕ್ತಿಗಳು ಅಲುಗಾಡಿಸಲ್ಪಡುವುವು,’ ಎಂದು ಯೇಸುವಂದನು. (ಮತ್ತಾಯ 24:29) ಇದು ಆಕಾಶದ ಅಕ್ಷರಶಃ ಆಕಾಶಸ್ಥ ಉತ್ಪಾತಗಳನ್ನು ಸೂಚಿಸಬಹುದು. ಹೇಗಿದ್ದರೂ, ಧಾರ್ಮಿಕ ಜಗತ್ತಿನ ಉಜ್ವಲ ಬೆಳಕುಗಳು ಬಯಲುಮಾಡಲ್ಪಟ್ಟು ನಿರ್ಮೂಲಗೊಳಿಸಲ್ಪಡುವರು. ಅನಂತರ “ಮಾಗೋಗ್‌ ದೇಶದ . . . ಗೋಗ” ಎಂದು ಕರೆಯಲ್ಪಡುವ ಸೈತಾನನು, ಯೆಹೋವನ ಜನರ ಮೇಲೆ ಸರ್ವಶಕ್ತಿಯನ್ನು ಬಳಸಿ ದಾಳಿಮಾಡಲು ಭ್ರಷ್ಟರಾಗಿರುವ ಜನರನ್ನು ಉಪಯೋಗಿಸುವನು. ಆದರೆ ಸೈತಾನನು ಜಯಹೊಂದನು, ಏಕೆಂದರೆ ದೇವರು ಅವರ ರಕ್ಷಣೆಗಾಗಿ ಬರುವನು. (ಯೆಹೆಜ್ಕೇಲ 38:1, 2, 14-23) “ಮಹಾ ಸಂಕಟವು” ತನ್ನ ಪರಮಾವಧಿಯನ್ನು “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧ” ವಾದ ಅರ್ಮಗೆದೋನ್‌ನಲ್ಲಿ ತಲಪುವುದು. ಅದು ಸೈತಾನನ ಭೂಸಂಸ್ಥೆಯ ಪ್ರತಿಯೊಂದು ಕೊನೆಯ ಸುಳಿವನ್ನೂ ಬರಿದುಮಾಡಿ, ಪಾರಾಗುವ ಮಾನವಕುಲಕ್ಕೆ ಅನಂತಾಶೀರ್ವಾದಗಳು ಹರಿಯುವಂತೆ ದಾರಿ ಮಾಡಿಕೊಡುವುದು.—ಪ್ರಕಟನೆ 7:9, 14; 11:15; 16:14, 16; 21:3, 4.

16. ಕೊನೆಯ ದಿವಸಗಳ ಪ್ರವಾದಿಸಲ್ಪಟ್ಟ ಅಂಶಗಳು ನಮ್ಮ ಸಮಯಕ್ಕೆ ಅನ್ವಯಿಸುತ್ತವೆಂದು ನಮಗೆ ಹೇಗೆ ಗೊತ್ತು?

16 ಕಡೇ ದಿವಸಗಳನ್ನು ವರ್ಣಿಸುವ ಪ್ರವಾದನೆಗಳ ಕೆಲವು ಅಂಶಗಳನ್ನು, ಅವುಗಳಷ್ಟಕ್ಕೇ ನೋಡುವಲ್ಲಿ, ಇತಿಹಾಸದ ಬೇರೆ ಅವಧಿಗಳಿಗೆ ಅನ್ವಯಿಸುವಂತೆ ಕಾಣಬಹುದು. ಆದರೆ ಸಂಯೋಜಿಸಿದಾಗ, ಪ್ರವಾದಿಸಲ್ಪಟ್ಟ ಸಾಕ್ಷ್ಯಗಳು ನಮ್ಮ ದಿವಸವನ್ನು ಗುರುತಿಸುತ್ತವೆ. ದೃಷ್ಟಾಂತಕ್ಕಾಗಿ: ಒಬ್ಬ ವ್ಯಕ್ತಿಯ ಬೆರಳೊತ್ತನ್ನು ರೂಪಿಸುವ ರೇಖೆಗಳು ಇನ್ನಾವ ವ್ಯಕ್ತಿಗೂ ಸೇರಿರಸಾಧ್ಯವಿಲ್ಲದ ಒಂದು ನಮೂನೆಯನ್ನು ರಚಿಸುತ್ತವೆ. ತದ್ರೀತಿ, ಕೊನೆಯ ದಿವಸಗಳಿಗೆ ಅವುಗಳ ಖುದ್ದಾದ ಗುರುತುಗಳು ಅಥವಾ ಸಂಭವಗಳ ನಮೂನೆಯಿದೆ. ಇವು ಇನ್ನಾವುದೇ ಸಮಯಾವಧಿಗೆ ಸೇರದ ಒಂದು “ಬೆರಳೊತ್ತ”ನ್ನು ರಚಿಸುತ್ತವೆ. ದೇವರ ಸ್ವರ್ಗೀಯ ರಾಜ್ಯವು ಈಗ ಆಳುತ್ತಿದೆಯೆಂಬ ಬೈಬಲ್‌ ಸೂಚನೆಗಳೊಂದಿಗೆ ಪರಿಗಣಿಸುವಾಗ, ಸಾಕ್ಷ್ಯವು, ಇವು ನಿಜವಾಗಿಯೂ ಕೊನೆಯ ದಿವಸಗಳೆಂದು ತೀರ್ಮಾನಿಸಲು ಒಂದು ಸ್ಥಿರಾಧಾರವನ್ನು ಒದಗಿಸುತ್ತದೆ. ಇದಲ್ಲದೆ, ಈಗಿನ ದುಷ್ಟ ವ್ಯವಸ್ಥೆಯು ಬೇಗನೆ ನಾಶಮಾಡಲ್ಪಡುವುದು ಎಂಬುದಕ್ಕೆ ಸ್ಪಷ್ಟವಾದ ಶಾಸ್ತ್ರೀಯ ರುಜುವಾತಿದೆ.

17. ಇವು ಕೊನೆಯ ದಿವಸಗಳೆಂಬ ಜ್ಞಾನವು ಏನು ಮಾಡುವಂತೆ ನಮ್ಮನ್ನು ಪ್ರಚೋದಿಸಬೇಕು?

17 ಇವು ಕೊನೆಯ ದಿವಸಗಳೆಂಬ ಸಾಕ್ಷ್ಯಕ್ಕೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಇದನ್ನು ಪರಿಗಣಿಸಿರಿ: ಒಂದು ಭಯಂಕರವಾಗಿ ನಾಶಕರವಾದ ಚಂಡಮಾರುತವು ಆಸನ್ನವಾಗಿರುವಲ್ಲಿ, ನಾವು ತಾಮಸ ಮಾಡದೆ ಮುಂಜಾಗ್ರತೆಯ ಕ್ರಮಗಳನ್ನು ಕೈಕೊಳ್ಳುವೆವು. ಸರಿ, ಈ ಸದ್ಯದ ವ್ಯವಸ್ಥೆಗಾಗಿ ಬೈಬಲು ಮುಂತಿಳಿಸುವ ವಿಷಯವು ನಮ್ಮನ್ನು ಕ್ರಿಯೆಗೆ ಪ್ರಚೋದಿಸಬೇಕು. (ಮತ್ತಾಯ 16:1-3) ಈ ಲೋಕ ವ್ಯವಸ್ಥೆಯ ಕೊನೆಯ ದಿವಸಗಳಲ್ಲಿ ನಾವು ಜೀವಿಸುತ್ತಿದ್ದೇವೆಂದು ನಮಗೆ ಸ್ಪಷ್ಟವಾಗಿ ನೋಡಸಾಧ್ಯವಿದೆ. ಇದು ದೇವರ ಅನುಗ್ರಹವನ್ನು ಸಂಪಾದಿಸಲಿಕ್ಕಾಗಿ ಅಗತ್ಯವಿರುವ ಯಾವುದೇ ಸರಿಹೊಂದಿಸಿಕೊಳ್ಳುವಿಕೆಯನ್ನು ಮಾಡಲು ನಮ್ಮನ್ನು ಪ್ರಚೋದಿಸಬೇಕು. (2 ಪೇತ್ರ 3:3, 10-12) ತನ್ನನ್ನು ರಕ್ಷಣಾ ನಿಯೋಗಿಯಾಗಿ ಸೂಚಿಸಿಕೊಳ್ಳುತ್ತಾ, ಯೇಸುವು ತುರ್ತಿನ ಕರೆಯನ್ನು ಧ್ವನಿಸುತ್ತಾನೆ: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು. ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ.”— ಲೂಕ 21:34-36.

[ಪಾದಟಿಪ್ಪಣಿಗಳು]

^ ಕೆಲವು ಬೈಬಲುಗಳು “ವಿಷಯಗಳ ವ್ಯವಸ್ಥೆ”ಯ ಬದಲಿಗೆ “ಲೋಕ” ಎಂಬ ಪದವನ್ನು ಬಳಸುತ್ತವೆ. ಡಬ್ಲ್ಯೂ. ಇ. ವೈನ್‌ ಅವರ ಎಕ್ಸ್‌ಪೊಸಿಟರಿ ಡಿಕ್‌ಷನರಿ ಆಫ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ ಹೇಳುವುದೇನಂದರೆ, ಆಯ್‌ಆನ್‌ ಎಂಬ ಗ್ರೀಕ್‌ ಪದವು, “ಒಂದು ಅನಿರ್ದಿಷ್ಟ ಸಮಯಾವಧಿಯನ್ನು, ಅಥವಾ ಆ ಅವಧಿಯಲ್ಲಿ ಏನು ಸಂಭವಿಸುತ್ತದೋ ಅದಕ್ಕೆ ಸಂಬಂಧಕವಾಗಿ ವೀಕ್ಷಿಸಲ್ಪಟ್ಟ ಸಮಯವನ್ನು ಸೂಚಿಸುತ್ತದೆ.” ಪಾರ್ಕ್‌ಹರ್‌ಸ್ಟ್‌ ಅವರ ಗ್ರೀಕ್‌ ಆ್ಯಂಡ್‌ ಇಂಗ್ಲಿಷ್‌ ಲೆಕ್ಸಿಕನ್‌ ಟು ದ ನ್ಯೂ ಟೆಸ್ಟಮೆಂಟ್‌ (17 ನೆಯ ಪುಟ), ಇಬ್ರಿಯ 1:2 ರಲ್ಲಿ ಆಯ್‌ಆನಿಸ್‌ (ಬಹುವಚನ) ಎಂಬುದರ ಉಪಯೋಗವನ್ನು ಚರ್ಚಿಸುವಾಗ, “ವಿಷಯಗಳ ಈ ವ್ಯವಸ್ಥೆ” ಎಂಬ ಅಭಿವ್ಯಕ್ತಿಯನ್ನು ಸೇರಿಸುತ್ತದೆ. ಆದಕಾರಣ “ವಿಷಯಗಳ ವ್ಯವಸ್ಥೆ” ಎಂಬ ಭಾಷಾಂತರವು ಮೂಲ ಗ್ರೀಕ್‌ ಗ್ರಂಥಪಾಠಕ್ಕೆ ಹೊಂದಿಕೆಯಲ್ಲಿದೆ.

ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ

ಕ್ರಿಸ್ತನ ಆಳಿಕೆಯ ಆರಂಭದಲ್ಲಿ ಲೋಕ ವಿಕಸನಗಳ ಕುರಿತು ಬೈಬಲು ಏನನ್ನು ಮುಂತಿಳಿಸಿತು?

ಕೊನೆಯ ದಿವಸಗಳ ಕೆಲವು ಲಕ್ಷಣಗಳಾವುವು?

ಇವು ಕೊನೆಯ ದಿವಸಗಳೆಂದು ನಿಮಗೆ ಯಾವುದು ಮನವರಿಕೆ ಮಾಡುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 102ರಲ್ಲಿರುವ ಚೌಕ]

ಕೊನೆಯ ದಿವಸಗಳ ಕೆಲವು ಲಕ್ಷಣಗಳು

• ಅಭೂತಪೂರ್ವ ಕಾದಾಟ.—ಮತ್ತಾಯ 24:7; ಪ್ರಕಟನೆ 6:4.

• ಕ್ಷಾಮ.—ಮತ್ತಾಯ 24:7; ಪ್ರಕಟನೆ 6:5, 6, 8.

• ಅಂಟುರೋಗಗಳು.—ಲೂಕ 21:11; ಪ್ರಕಟನೆ 6:8.

• ಹೆಚ್ಚುತ್ತಿರುವ ನಿಯಮರಾಹಿತ್ಯ.—ಮತ್ತಾಯ 24:12.

• ಭೂಮಿಯ ಧ್ವಂಸಮಾಡುವಿಕೆ.—ಪ್ರಕಟನೆ 11:18.

• ಭೂಕಂಪಗಳು.—ಮತ್ತಾಯ 24:7.

• ನಿಭಾಯಿಸಲು ಕಠಿನವಾದ ಸಮಯಗಳು.—2 ತಿಮೊಥೆಯ 3:1.

• ಹಣಕ್ಕಾಗಿ ಹದಗೆಟ್ಟ ಪ್ರೀತಿ.—2 ತಿಮೊಥೆಯ 3:2.

• ಹೆತ್ತವರಿಗೆ ಅವಿಧೇಯತೆ.—2 ತಿಮೊಥೆಯ 3:2.

• ಸ್ವಾಭಾವಿಕ ಮಮತೆಯ ಕೊರತೆ.—2 ತಿಮೊಥೆಯ 3:3.

• ದೇವರಿಗಿಂತ ಭೋಗಗಳನ್ನು ಹೆಚ್ಚು ಪ್ರೀತಿಸುವುದು.—2 ತಿಮೊಥೆಯ 3:4.

• ಆತ್ಮನಿಯಂತ್ರಣದ ಕೊರತೆ.—2 ತಿಮೊಥೆಯ 3:3.

• ಸೌಶೀಲ್ಯಪ್ರೇಮರಹಿತರು.—2 ತಿಮೊಥೆಯ 3:3.

• ಆಸನ್ನವಾಗಿರುವ ಅಪಾಯವನ್ನು ಗಮನಿಸದಿರುವುದು.—ಮತ್ತಾಯ 24:39.

• ಕುಚೋದ್ಯಗಾರರು ಕೊನೆಯ ದಿವಸಗಳ ರುಜುವಾತನ್ನು ನಿರಾಕರಿಸುತ್ತಾರೆ.—2 ಪೇತ್ರ 3:3, 4.

• ದೇವರ ರಾಜ್ಯದ ಭೌಗೋಲಿಕ ಸಾರುವಿಕೆ.—ಮತ್ತಾಯ 24:14.

[ಪುಟ 101ರಲ್ಲಿ ಇಡೀ ಪುಟದ ಚಿತ್ರ]