ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದುಷ್ಟಾತ್ಮ ಸೈನ್ಯಗಳನ್ನು ಪ್ರತಿಭಟಿಸಿರಿ

ದುಷ್ಟಾತ್ಮ ಸೈನ್ಯಗಳನ್ನು ಪ್ರತಿಭಟಿಸಿರಿ

ಅಧ್ಯಾಯ 12

ದುಷ್ಟಾತ್ಮ ಸೈನ್ಯಗಳನ್ನು ಪ್ರತಿಭಟಿಸಿರಿ

1. ದುಷ್ಟಾತ್ಮಗಳಿಗೆದುರಾದಾಗ ಯೇಸುವು ಹೇಗೆ ಪ್ರತಿಕ್ರಿಯಿಸಿದನು?

 ತನ್ನ ದೀಕ್ಷಾಸ್ನಾನವಾದ ಕೂಡಲೆ, ಯೇಸು ಕ್ರಿಸ್ತನು ಪ್ರಾರ್ಥನೆ ಮತ್ತು ಮನನ ಮಾಡಲಿಕ್ಕಾಗಿ ಯೂದಾಯದ ಅಡವಿಗೆ ಹೋದನು. ಅಲ್ಲಿ ಅವನು ದೇವರ ನಿಯಮವನ್ನು ಮುರಿಯುವಂತೆ ಪಿಶಾಚನಾದ ಸೈತಾನನು ಪ್ರಯತ್ನಿಸಿದನು. ಆದರೆ ಯೇಸುವು ಪಿಶಾಚನ ಪ್ರಲೋಭನೆಯನ್ನು ನಿರಾಕರಿಸಿದ ಕಾರಣ ಅವನ ಪಾಶದಲ್ಲಿ ಸಿಕ್ಕಿಬೀಳಲಿಲ್ಲ. ಯೇಸು ತನ್ನ ಭೂಮಿಯ ಮೇಲಿನ ಶುಶ್ರೂಷೆಯ ಸಮಯದಲ್ಲಿ ಬೇರೆ ದುಷ್ಟಾತ್ಮಗಳನ್ನು ಎದುರಿಸಿದನು. ಆದರೂ, ಅವನು ಅವರನ್ನು ಮತ್ತೆ ಮತ್ತೆ ಗದರಿಸಿ ಪ್ರತಿಭಟಿಸಿದನು.—ಲೂಕ 4:1-13; 8:26-34; 9:37-43.

2. ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

2 ಆ ಸಂಧಿಸುವಿಕೆಗಳನ್ನು ವರ್ಣಿಸುವ ಬೈಬಲ್‌ ವೃತ್ತಾಂತಗಳು, ದುಷ್ಟಾತ್ಮ ಸೈನ್ಯಗಳು ನಿಶ್ಚಯವಾಗಿ ಅಸ್ತಿತ್ವದಲ್ಲಿವೆಯೆಂದು ನಮಗೆ ಮನವರಿಕೆ ಮಾಡಬೇಕು. ಅವು ಜನರನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತವೆ. ಆದರೂ, ಈ ದುಷ್ಟಾತ್ಮಗಳನ್ನು ನಾವು ಪ್ರತಿಭಟಿಸಬಲ್ಲೆವು. ಆದರೆ ದುಷ್ಟಾತ್ಮಗಳು ಎಲ್ಲಿಂದ ಬರುತ್ತವೆ? ಅವು ಮಾನವರನ್ನು ಏಕೆ ವಂಚಿಸಪ್ರಯತ್ನಿಸುತ್ತವೆ? ಮತ್ತು ಅವುಗಳ ಉದ್ದೇಶಗಳನ್ನು ಸಾಧಿಸಲು ಅವು ಯಾವ ವಿಧಾನಗಳನ್ನು ಉಪಯೋಗಿಸುತ್ತವೆ? ಈ ಪ್ರಶ್ನೆಗಳಂತಹವುಗಳಿಗೆ ಉತ್ತರ ಕಂಡುಹಿಡಿಯುವುದು, ದುಷ್ಟಾತ್ಮ ಸೈನ್ಯಗಳನ್ನು ಪ್ರತಿಭಟಿಸಲು ನಿಮಗೆ ಸಹಾಯ ಮಾಡುವುದು.

ದುಷ್ಟಾತ್ಮಗಳು—ಅವುಗಳ ಮೂಲ ಮತ್ತು ಗುರಿ

3. ಪಿಶಾಚನಾದ ಸೈತಾನನು ಹೇಗೆ ಅಸ್ತಿತ್ವಕ್ಕೆ ಬಂದನು?

3 ಮನುಷ್ಯರನ್ನು ಸೃಷ್ಟಿಸುವುದಕ್ಕೆ ಎಷ್ಟೋ ಪೂರ್ವದಲ್ಲಿ ದೇವರು ಆತ್ಮ ಜೀವಿಗಳ ಒಂದು ಸಮೂಹವನ್ನು ನಿರ್ಮಿಸಿದನು. (ಯೋಬ 38:4, 7) 6 ನೆಯ ಅಧ್ಯಾಯದಲ್ಲಿ ವಿವರಿಸಿರುವಂತೆ, ಈ ದೇವದೂತರಲ್ಲಿ ಒಬ್ಬನು, ಮಾನವರು ದೇವರನ್ನು ಆರಾಧಿಸುವ ಬದಲು ತನ್ನನ್ನು ಆರಾಧಿಸಬೇಕೆಂಬ ಬಯಕೆಯನ್ನು ವಿಕಸಿಸಿದನು. ಆ ಉದ್ದೇಶವನ್ನು ಬೆನ್ನಟ್ಟುತ್ತಾ, ಈ ದುಷ್ಟ ದೂತನು ಸೃಷ್ಟಿಕರ್ತನನ್ನು ಪ್ರತಿಭಟಿಸಿ ಆತನ ಮೇಲೆ—ಪ್ರಥಮ ಸ್ತ್ರೀಗೆ ದೇವರು ಸುಳ್ಳುಗಾರನೆಂದು ಸಹ ಸೂಚಿಸಿ—ಮಿಥ್ಯಾಪವಾದವನ್ನು ಹೊರಿಸಿದನು. ಆದುದರಿಂದ ಸಮಂಜಸವಾಗಿಯೇ, ಈ ದಂಗೆಕೋರ ಆತ್ಮ ಜೀವಿಯು ಪಿಶಾಚ (ಮಿಥ್ಯಾಪವಾದಿ)ನಾದ ಸೈತಾನನು (ಪ್ರತಿಭಟಕ) ಎಂದು ಜ್ಞಾತನಾದನು.—ಆದಿಕಾಂಡ 3:1-5; ಯೋಬ 1:6.

4. ನೋಹನ ದಿನಗಳಲ್ಲಿ ಕೆಲವು ದೇವದೂತರು ಹೇಗೆ ಪಾಪಮಾಡಿದರು?

4 ತರುವಾಯ ಬೇರೆ ದೇವದೂತರು ಪಿಶಾಚನಾದ ಸೈತಾನನ ಪಕ್ಷ ವಹಿಸಿದರು. ನೀತಿವಂತ ಮನುಷ್ಯನಾದ ನೋಹನ ದಿನಗಳಲ್ಲಿ, ಇವರಲ್ಲಿ ಕೆಲವರು ತಮ್ಮ ಸ್ವರ್ಗದ ಸೇವೆಯನ್ನು ತ್ಯಜಿಸಿ, ಭೂಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧಕ್ಕಾಗಿ ತಮಗಿದ್ದ ಕಾಮಾಸಕ್ತಿಯನ್ನು ತೃಪ್ತಿಪಡಿಸಲು ಮಾಂಸಿಕ ದೇಹಗಳನ್ನು ತೆಗೆದುಕೊಂಡರು. ಆ ಅವಿಧೇಯ ಪಥವನ್ನು ತೆಗೆದುಕೊಳ್ಳಲು ಸೈತಾನನು ಆ ದೇವದೂತರನ್ನು ಪ್ರಭಾವಿಸಿದನೆಂಬುದು ನಿಸ್ಸಂದೇಹ. ಯಾರು ಬಲಾತ್ಕಾರದ ಹಿಂಸಕರಾಗಿ ಪರಿಣಮಿಸಿದರೊ, ಆ ನೆಫೀಲಿಯರು ಎಂದು ಕರೆಯಲ್ಪಟ್ಟ ಮಿಶ್ರಜ ಸಂತಾನದ ತಂದೆಗಳಾಗುವಂತೆ ಇದು ಅವರನ್ನು ನಡೆಸಿತು. ಯೆಹೋವನು ಮಹಾ ಪ್ರಳಯವನ್ನು ಆಗಿಸಿದಾಗ, ಅದು ಭ್ರಷ್ಟರಾಗಿದ್ದ ಮಾನವಕುಲವನ್ನೂ ಈ ಅವಿಧೇಯ ದೂತರ ಪ್ರಕೃತಿ ವಿರುದ್ಧ ಸಂತಾನವನ್ನೂ ನಾಶಮಾಡಿತು. ಆ ದಂಗೆಕೋರ ದೇವದೂತರು ತಮ್ಮ ಮಾಂಸಿಕ ಶರೀರಗಳನ್ನು ತ್ಯಜನಮಾಡುತ್ತಾ, ಆತ್ಮ ಲೋಕಕ್ಕೆ ಹಿಂದಿರುಗುತ್ತಾ, ನಾಶನದಿಂದ ತಪ್ಪಿಸಿಕೊಂಡರು. ಆದರೆ ದೇವರು ಈ ದೆವ್ವಗಳನ್ನು ಆತ್ಮಿಕ ಅಂಧಕಾರದಲ್ಲಿರುವ ಬಹಿಷ್ಕೃತರಂತೆ ಉಪಚರಿಸುವ ಮೂಲಕ ನಿರ್ಬಂಧದಲ್ಲಿಟ್ಟನು. (ಆದಿಕಾಂಡ 6:1-7, 17; ಯೂದ 6) ಆದರೂ “ದೆವ್ವಗಳ ಒಡೆಯ” ನಾದ ಸೈತಾನನು ಮತ್ತು ಅವನ ದುಷ್ಟ ದೂತರು ತಮ್ಮ ದಂಗೆಯನ್ನು ಮುಂದೂಡುತ್ತಾ ಹೋಗಿದ್ದಾರೆ. (ಲೂಕ 11:15) ಅವರ ಗುರಿಯೇನು?

5. ಸೈತಾನನ ಮತ್ತು ಅವನ ದೆವ್ವಗಳ ಉದ್ದೇಶವೇನು, ಮತ್ತು ಜನರನ್ನು ಪಾಶದೊಳಗಾಗಿಸಲು ಅವರು ಏನನ್ನು ಉಪಯೋಗಿಸುತ್ತಾರೆ?

5 ಸೈತಾನನ ಮತ್ತು ಅವನ ದೆವ್ವಗಳ ದುರುದ್ದೇಶವು, ಯೆಹೋವ ದೇವರ ವಿರುದ್ಧ ಜನರನ್ನು ತಿರುಗಿಸುವುದೇ. ಆದಕಾರಣ, ಈ ದುಷ್ಟರು ಮಾನವ ಇತಿಹಾಸದಲ್ಲೆಲ್ಲ ಜನರನ್ನು ತಪ್ಪುದಾರಿಗೆಳೆಯುತ್ತಾ, ಬೆದರಿಸುತ್ತಾ, ಘಾತಿಸುತ್ತಾ ಇದ್ದಾರೆ. (ಪ್ರಕಟನೆ 12:9) ಆಧುನಿಕ ದಿನಗಳ ದೃಷ್ಟಾಂತಗಳು, ದೆವ್ವಾಕ್ರಮಣವು ಈಗ ಹಿಂದೆಂದಿಗಿಂತಲೂ ಹೆಚ್ಚು ಕ್ರೂರವಾಗಿದೆಯೆಂಬುದನ್ನು ದೃಢೀಕರಿಸುತ್ತವೆ. ಜನರನ್ನು ಹಿಡಿದುಹಾಕಲು, ದೆವ್ವಗಳು ಅನೇಕವೇಳೆ ಪ್ರೇತವ್ಯವಹಾರವನ್ನು, ಅದರ ಸಕಲ ರೂಪಗಳಲ್ಲಿ ಉಪಯೋಗಿಸುತ್ತವೆ. ಈ ಸೆಳೆವಸ್ತುವನ್ನು ದೆವ್ವಗಳು ಹೇಗೆ ಉಪಯೋಗಿಸುತ್ತವೆ, ಮತ್ತು ನೀವು ನಿಮ್ಮನ್ನು ಹೇಗೆ ಕಾಪಾಡಿಕೊಳ್ಳಬಲ್ಲಿರಿ?

ದುಷ್ಟಾತ್ಮಗಳು ನಿಮ್ಮನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುವ ವಿಧ

6. ಪ್ರೇತವ್ಯವಹಾರವೆಂದರೇನು, ಮತ್ತು ಅದರ ಕೆಲವು ರೂಪಗಳಾವುವು?

6 ಪ್ರೇತವ್ಯವಹಾರವೆಂದರೇನು? ದೆವ್ವಗಳೊಂದಿಗೆ, ಅಥವಾ ದುಷ್ಟಾತ್ಮಗಳೊಂದಿಗೆ, ಪ್ರತ್ಯಕ್ಷವಾಗಿಯಾಗಲಿ, ಮಾನವ ಮಾಧ್ಯಮದ ಮೂಲಕವಾಗಿಯಾಗಲಿ ಒಳಗೊಳ್ಳುವುದೇ. ಬೇಟೆಗಾರರಿಗೆ ಪ್ರಾಣಿಗಳ ಸೆಳೆಆಹಾರ ಏನು ಮಾಡುತ್ತದೋ ಅದನ್ನೇ ದೆವ್ವಗಳಿಗೆ ಪ್ರೇತವ್ಯವಹಾರವು ಮಾಡುತ್ತದೆ: ಅದು ಬೇಟೆಯ ಪ್ರಾಣಿಯನ್ನು ಆಕರ್ಷಿಸುತ್ತದೆ. ಮತ್ತು ಬೇಟೆಗಾರನು ಪ್ರಾಣಿಗಳನ್ನು ತನ್ನ ಪಾಶದೊಳಗೆ ಆಕರ್ಷಿಸಲು ವಿವಿಧ ರೀತಿಯ ಸೆಳೆವಸ್ತುಗಳನ್ನು ಬಳಸುವಂತೆಯೇ, ದುಷ್ಟಾತ್ಮಗಳು ಮಾನವರನ್ನು ತಮ್ಮ ನಿಯಂತ್ರಣದೊಳಕ್ಕೆ ತರಲಿಕ್ಕಾಗಿ ಪ್ರೇತವ್ಯವಹಾರದ ವಿವಿಧ ರೂಪಗಳನ್ನು ಪ್ರೋತ್ಸಾಹಿಸುತ್ತವೆ. (ಕೀರ್ತನೆ 119:110 ಹೋಲಿಸಿ.) ಇವುಗಳಲ್ಲಿ ಕೆಲವು ವಿಧಗಳು ಭವಿಷ್ಯಜ್ಞಾನ, ಮಾಯಾ ವಿದ್ಯೆ, ಶಕುನ ನೋಡುವುದು, ಮಾಟ, ಮಂತ್ರಮುಗ್ಧರಾಗಿಸುವುದು, ಮಾಧ್ಯಮಗಳನ್ನು ವಿಚಾರಿಸುವುದು, ಮತ್ತು ಸತ್ತವರನ್ನು ವಿಚಾರಿಸುವುದು, ಇವೇ.

7. ಪ್ರೇತವ್ಯವಹಾರವು ಎಷ್ಟು ವ್ಯಾಪಕವಾಗಿದೆ, ಮತ್ತು ಅದು ಕ್ರೈಸ್ತದೇಶಗಳು ಎನಿಸಿಕೊಳ್ಳುವುವುಗಳಲ್ಲಿಯೂ ಉಚ್ಛ್ರಾಯ ಸ್ಥಿತಿಯಲ್ಲಿರುವುದೇಕೆ?

7 ಈ ಸೆಳೆವಸ್ತು ಕಾರ್ಯಸಾಧಕ, ಏಕೆಂದರೆ ಪ್ರೇತವ್ಯವಹಾರವು ಲೋಕಾದ್ಯಂತವಾಗಿ ಜನರನ್ನು ಆಕರ್ಷಿಸುತ್ತದೆ. ಕಾಡುಹಳ್ಳಿಗಳಲ್ಲಿ ಜೀವಿಸುತ್ತಿರುವವರು ಮಾಂತ್ರಿಕರ ಬಳಿಗೆ ಹೋಗುತ್ತಾರೆ, ಮತ್ತು ನಗರಗಳ ಆಫೀಸು ಕೆಲಸಗಾರರು ಜ್ಯೋತಿಷಿಗಳನ್ನು ವಿಚಾರಿಸುತ್ತಾರೆ. ಪ್ರೇತವ್ಯವಹಾರವು ನಾಮಾಂಕಿತ ಕ್ರೈಸ್ತ ದೇಶಗಳಲ್ಲಿಯೂ ಉಚ್ಛ್ರಾಯ ಸ್ಥಿತಿಯಲ್ಲಿದೆ. ಅಮೆರಿಕದಲ್ಲಿಯೆ, ಮೊತ್ತದಲ್ಲಿ 1,00,00,000 ಕ್ಕಿಂತಲೂ ಹೆಚ್ಚು ಚಲಾವಣೆಯಿರುವ 30 ಪತ್ರಿಕೆಗಳು ಪ್ರೇತವ್ಯವಹಾರದ ವಿವಿಧ ರೂಪಗಳಿಗೆ ಮೀಸಲಾಗಿರಿಸಲ್ಪಟ್ಟಿವೆ ಎಂದು ಸಂಶೋಧನೆಯು ಸೂಚಿಸುತ್ತದೆ. ಬ್ರೆಸಿಲಿನವರು ಪ್ರತಿ ವರ್ಷ 50 ಕೋಟಿ ಡಾಲರುಗಳನ್ನು ಪ್ರೇತವ್ಯವಹಾರ ವಸ್ತುಗಳ ಸಂಬಂಧದಲ್ಲಿ ಖರ್ಚುಮಾಡುತ್ತಾರೆ. ಆದರೂ, ಆ ದೇಶದಲ್ಲಿ ಪ್ರೇತವ್ಯವಹಾರದ ಆರಾಧನಾ ಕೇಂದ್ರಗಳಿಗೆ ಹೋಗುವವರಲ್ಲಿ 80 ಪ್ರತಿಶತ ಜನರು ಮ್ಯಾಸ್‌ ಆರಾಧನೆಗೂ ಹಾಜರಾಗುವ ದೀಕ್ಷಾಸ್ನಾತ ಕ್ಯಾತೊಲಿಕರು. ಕೆಲವು ಪಾದ್ರಿಗಳೂ ಪ್ರೇತವ್ಯವಹಾರವನ್ನು ಆಚರಿಸುವುದರಿಂದ, ಅನೇಕ ಧಾರ್ಮಿಕ ಜನರು ಅದನ್ನು ಆಚರಿಸುವುದು ದೇವರಿಂದ ಅಂಗೀಕರಿಸಲ್ಪಡುತ್ತದೆ ಎಂದೆಣಿಸುತ್ತಾರೆ. ಆದರೆ ಅದು ಅಂಗೀಕರಿಸಲ್ಪಡುತ್ತದೊ?

ಬೈಬಲು ಪ್ರೇತವ್ಯವಹಾರ ಆಚಾರವನ್ನು ಖಂಡಿಸುವುದರ ಕಾರಣ

8. ಪ್ರೇತವ್ಯವಹಾರದ ಕುರಿತ ಶಾಸ್ತ್ರಸಂಬಂಧವಾದ ನೋಟವೇನು?

8 ಪ್ರೇತವ್ಯವಹಾರದ ಕೆಲವು ವಿಧಗಳು ಒಳ್ಳೆಯ ಆತ್ಮಗಳನ್ನು ಸಂಪರ್ಕಿಸುವ ಸಾಧನವೆಂದು ನಿಮಗೆ ಕಲಿಸಲ್ಪಟ್ಟಿರುವುದಾದರೆ, ಬೈಬಲು ಪ್ರೇತವ್ಯವಹಾರದ ಕುರಿತು ಏನು ಹೇಳುತ್ತದೆಂದು ತಿಳಿಯಲು ನೀವು ಆಶ್ಚರ್ಯಪಟ್ಟೀರಿ. ಯೆಹೋವನ ಜನರು ಎಚ್ಚರಿಸಲ್ಪಟ್ಟದ್ದು: “ಸತ್ತವರಲ್ಲಿ ವಿಚಾರಿಸುವವರ ಮತ್ತು ಬೇತಾಳಿಕರ ಹತ್ತಿರ ಹೋಗಬಾರದು; ಅವರ ಆಲೋಚನೆಯನ್ನು ಕೇಳಿ ಅಶುದ್ಧರಾಗಬಾರದು.” (ಯಾಜಕಕಾಂಡ 19:31, ಓರೆಅಕ್ಷರಗಳು ನಮ್ಮವು; 20:6, 27) ಬೈಬಲಿನ ಪ್ರಕಟನೆ ಪುಸ್ತಕವು, “ಮಾಟಗಾರರು” “ಬೆಂಕಿ ಗಂಧಕಗಳುರಿಯುವ ಕೆರೆ” ಯಲ್ಲಿ, “ಎರಡನೆಯ [ನಿತ್ಯ] ಮರಣ” ದಲ್ಲಿ ಅಂತ್ಯಗೊಳ್ಳುವರೆಂಬ ಎಚ್ಚರಿಕೆಯನ್ನು ಕೊಡುತ್ತದೆ. (ಪ್ರಕಟನೆ 21:8; 22:15) ಪ್ರೇತವ್ಯವಹಾರದ ಎಲ್ಲ ವಿಧಗಳನ್ನು ಯೆಹೋವ ದೇವರು ಅಸಮ್ಮತಿಸುತ್ತಾನೆ. (ಧರ್ಮೋಪದೇಶಕಾಂಡ 18:10-12) ಸಂಗತಿಯು ಹಾಗೇಕೆ?

9. ಆತ್ಮಲೋಕದಿಂದ ಬರುವ ಆಧುನಿಕ ದಿನದ ಸಂದೇಶಗಳು ಯೆಹೋವನಿಂದಲ್ಲವೆಂದು ನಾವು ಏಕೆ ತೀರ್ಮಾನಿಸಬಲ್ಲೆವು?

9 ಬೈಬಲು ಪೂರ್ತಿಗೊಳ್ಳುವ ಮೊದಲು ಕೆಲವು ಮಂದಿ ಮಾನವರೊಂದಿಗೆ ಸಂವಾದಿಸಲು ಯೆಹೋವನು ಒಳ್ಳೆಯ ಆತ್ಮಗಳನ್ನು, ಅಥವಾ ನೀತಿವಂತ ಆತ್ಮಗಳನ್ನು ಕಳುಹಿಸಿದನು. ಅದು ಪೂರ್ತಿಗೊಂಡಂದಿನಿಂದ, ಯೆಹೋವನನ್ನು ಅಂಗೀಕಾರಯೋಗ್ಯವಾಗಿ ಸೇವಿಸಲು ದೇವರ ವಾಕ್ಯವು ಮಾನವರಿಗೆ ಬೇಕಾದ ಮಾರ್ಗದರ್ಶನವನ್ನು ಒದಗಿಸಿದೆ. (2 ತಿಮೊಥೆಯ 3:16, 17; ಇಬ್ರಿಯ 1:1, 2) ಮಾಧ್ಯಮಗಳಿಗೆ ಸಂದೇಶಗಳನ್ನು ಕೊಡುತ್ತಾ ಆತನು ತನ್ನ ಪವಿತ್ರ ವಾಕ್ಯವನ್ನು ನಿರ್ಲಕ್ಷಿಸುವುದಿಲ್ಲ. ಆತ್ಮಲೋಕದಿಂದ ಬರುವ ಇಂತಹ ಎಲ್ಲ ಪ್ರಚಲಿತ ದಿನದ ಸಂದೇಶಗಳು ದುಷ್ಟಾತ್ಮಗಳಿಂದ ಬರುತ್ತವೆ. ಆದಕಾರಣ ನಾವು ಯಾವುದೇ ಪ್ರೇತವ್ಯವಹಾರ ಆಚಾರಗಳಲ್ಲಿ ಸಿಕ್ಕಿಕೊಳ್ಳಬಾರದೆಂದು ದೇವರು ನಮ್ಮನ್ನು ಪ್ರೀತಿಯಿಂದ ಎಚ್ಚರಿಸುತ್ತಾನೆ. (ಧರ್ಮೋಪದೇಶಕಾಂಡ 18:14; ಗಲಾತ್ಯ 5:19-21) ಇದಲ್ಲದೆ, ಅದರ ಕುರಿತು ಯೆಹೋವನ ನೋಟವೇನೆಂದು ನಮಗೆ ತಿಳಿದ ಬಳಿಕವೂ ನಾವು ಪ್ರೇತವ್ಯವಹಾರವನ್ನು ಆಚರಿಸುತ್ತಾ ಹೋಗುವುದಾದರೆ, ನಾವು ಆ ದಂಗೆಕೋರ ದುಷ್ಟಾತ್ಮಗಳ ಪಕ್ಷವಹಿಸುವವರಾಗಿ ದೇವರ ವೈರಿಗಳಾಗುವೆವು.—1 ಸಮುವೇಲ 15:23; 1 ಪೂರ್ವಕಾಲವೃತ್ತಾಂತ 10:13, 14; ಕೀರ್ತನೆ 5:4.

10. ಭವಿಷ್ಯಜ್ಞಾನವೆಂದರೇನು, ಮತ್ತು ನಾವು ಅದರಿಂದ ಏಕೆ ದೂರವಿರಬೇಕು?

10 ಪ್ರೇತವ್ಯವಹಾರದ ಒಂದು ಜನಪ್ರಿಯ ರೂಪವು ಭವಿಷ್ಯಜ್ಞಾನ—ಆತ್ಮಗಳ ಸಹಾಯದಿಂದ ಭವಿಷ್ಯದ ಅಥವಾ ಅಜ್ಞಾತದ ಕುರಿತು ಕಂಡುಹಿಡಿಯಲು ಪ್ರಯತ್ನಿಸುವುದಾಗಿದೆ. ಜ್ಯೋತಿಷ, ಮಣಿ ವೀಕ್ಷಣ, ಸ್ವಪ್ನಗಳ ಅರ್ಥವಿವರಣೆ, ಹಸ್ತ ಸಾಮುದ್ರಿಕ, ಮತ್ತು ಇಸ್ಪೀಟೆಲೆಗಳನ್ನು ಬಳಸಿ ಭವಿಷ್ಯ ಹೇಳುವುದು ಭವಿಷ್ಯಜ್ಞಾನದ ಕೆಲವು ರೂಪಗಳು. ಅನೇಕರು ಭವಿಷ್ಯಜ್ಞಾನವನ್ನು ಹಾನಿಕರವಲ್ಲದ ವಿನೋದವಾಗಿ ವೀಕ್ಷಿಸಿದರೂ, ಭವಿಷ್ಯ ಹೇಳುವವರೂ ದುಷ್ಟಾತ್ಮಗಳೂ ಪರಸ್ಪರ ಸಂಬಂಧವನ್ನು ಹೊಂದಿದ್ದಾರೆಂದು ಬೈಬಲು ತೋರಿಸುತ್ತದೆ. ಉದಾಹರಣೆಗೆ, ಅ. ಕೃತ್ಯಗಳು 16:16-19, (NW) ರಲ್ಲಿ ಒಬ್ಬ ಹುಡುಗಿ ‘ಕಣಿ ಹೇಳುವಿಕೆ’ ಯನ್ನು ಆಚರಿಸುವಂತೆ ಸಾಮರ್ಥ್ಯ ಕೊಟ್ಟ “ಕಣಿ ಹೇಳುವ ದೆವ್ವ”ದ ಕುರಿತು ಹೇಳುತ್ತದೆ. ಆದರೂ ಆ ದೆವ್ವವು ಹೊರಗೆ ಹಾಕಲ್ಪಟ್ಟಾಗ ಭವಿಷ್ಯ ನುಡಿಯುವ ಆಕೆಯ ಸಾಮರ್ಥ್ಯವು ನಷ್ಟವಾಯಿತು. ಭವಿಷ್ಯಜ್ಞಾನವು, ದೆವ್ವಗಳು ಜನರನ್ನು ತಮ್ಮ ಬಲೆಯೊಳಗೆ ಆಕರ್ಷಿಸಲು ಬಳಸುವ ಒಂದು ಸೆಳೆವಸ್ತುವಾಗಿದೆಯೆಂಬುದು ಸ್ಪಷ್ಟ.

11. ಸತ್ತವರನ್ನು ಸಂಪರ್ಕಿಸುವ ಪ್ರಯತ್ನಗಳು ಪಾಶದೊಳಕ್ಕೆ ನಡೆಸುವುದು ಹೇಗೆ?

11 ನೀವು ಕುಟುಂಬದ ಒಬ್ಬ ಪ್ರಿಯ ಸದಸ್ಯನ ಅಥವಾ ಆಪ್ತ ಮಿತ್ರನೊಬ್ಬನ ಮರಣದಿಂದಾಗಿ ಶೋಕಿಸುತ್ತಿರುವುದಾದರೆ, ಇನ್ನೊಂದು ಸೆಳೆವಸ್ತುವಿನಿಂದ ಸುಲಭವಾಗಿಯೆ ಆಕರ್ಷಿಸಲ್ಪಡಬಲ್ಲಿರಿ. ಒಬ್ಬ ದುರಾತ್ಮ ಮಾಧ್ಯಮನು ನಿಮಗೆ ಒಂದು ವಿಶೇಷ ಸಮಾಚಾರವನ್ನು ಕೊಟ್ಟಾನು, ಅಥವಾ ಸತ್ತಿರುವ ವ್ಯಕ್ತಿಯದ್ದಾಗಿ ಭಾಸವಾಗುವ ಸ್ವರದಲ್ಲಿ ಮಾತಾಡಿಯಾನು. ಎಚ್ಚರಿಕೆ! ಮೃತರೊಂದಿಗೆ ಮಾತಾಡುವ ಪ್ರಯತ್ನಗಳು ಒಂದು ಪಾಶದೊಳಗೆ ನಡೆಸುತ್ತವೆ. ಏಕೆ? ಏಕೆಂದರೆ ಮೃತರಿಗೆ ಮಾತಾಡಲು ಸಾಧ್ಯವಿರುವುದಿಲ್ಲ. ನೀವು ನಿಸ್ಸಂದೇಹವಾಗಿ ಮರುಜ್ಞಾಪಿಸಿಕೊಳ್ಳುವಂತೆ, ಮರಣದಲ್ಲಿ ಮನುಷ್ಯನು, “ತನ್ನ ನೆಲಕ್ಕೆ ಹಿಂದಿರುಗುತ್ತಾನೆ; ಅವನ ಯೋಚನೆಗಳು ಅದೇ ದಿನದಲ್ಲಿ ನಿಶ್ಚಯವಾಗಿ ಹಾಳಾಗುತ್ತವೆ,” ಎಂದು ದೇವರ ವಾಕ್ಯವು ಸರಳವಾಗಿ ಹೇಳುತ್ತದೆ. ಮೃತರಿಗೆ “ಯಾವುದರ ಅರಿವೂ ಇಲ್ಲ.” (ಕೀರ್ತನೆ 146:4; ಪ್ರಸಂಗಿ 9:5, 10, NW) ಇದಲ್ಲದೆ, ಮೃತರ ಸ್ವರವನ್ನು ಅನುಕರಿಸಿ, ಸತ್ತಿರುವವನ ಕುರಿತು ಒಬ್ಬ ದುರಾತ್ಮ ಮಾಧ್ಯಮನಿಗೆ ಮಾಹಿತಿ ನೀಡುವವರೆಂದು ಪ್ರಸಿದ್ಧಿಹೊಂದಿರುವವರು ವಾಸ್ತವವಾಗಿ ದೆವ್ವಗಳೇ. (1 ಸಮುವೇಲ 28:3-19) ಹೀಗೆ “ಸತ್ತವರನ್ನು ವಿಚಾರಿಸುವ” ಯಾವನಾದರೂ ದುಷ್ಟಾತ್ಮಗಳಿಂದ ಪಾಶದೊಳಗೆ ಬೀಳಿಸಲ್ಪಡುತ್ತಿದ್ದು, ಯೆಹೋವ ದೇವರ ಚಿತ್ತಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದಾನೆ.—ಧರ್ಮೋಪದೇಶಕಾಂಡ 18:11, 12; ಯೆಶಾಯ 8:19.

ಆಕರ್ಷಣೆಯಿಂದ ಆಕ್ರಮಣಕ್ಕೆ

12, 13. ದೆವ್ವಗಳು ಜನರನ್ನು ಶೋಧನೆಗೊಳಪಡಿಸುವುದರಲ್ಲಿ ಮತ್ತು ಪೀಡಿಸುವುದರಲ್ಲಿ ಪಟ್ಟುಹಿಡಿಯುತ್ತವೆಂಬುದಕ್ಕೆ ಯಾವ ರುಜುವಾತಿದೆ?

12 ಪ್ರೇತವ್ಯವಹಾರದ ಸಂಬಂಧದಲ್ಲಿ ದೇವರ ವಾಕ್ಯದ ಸಲಹೆಯಂತೆ ನೀವು ವರ್ತಿಸುವಾಗ, ನೀವು ದೆವ್ವಗಳ ಸೆಳೆವಸ್ತುವನ್ನು ನಿರಾಕರಿಸುತ್ತೀರಿ. (ಹೋಲಿಸಿ ಕೀರ್ತನೆ 141:9, 10; ರೋಮಾಪುರ 12:9.) ಅಂದರೆ, ದುಷ್ಟಾತ್ಮಗಳು ನಿಮ್ಮನ್ನು ವಶಮಾಡಿಕೊಳ್ಳಲು ಪ್ರಯತ್ನಿಸುವುದನ್ನು ನಿಲ್ಲಿಸುವುವೆಂದು ಇದರ ಅರ್ಥವೊ? ಅಲ್ಲವೇ ಅಲ್ಲ! ಯೇಸುವನ್ನು ಮೂರು ಬಾರಿ ಶೋಧಿಸಿದ ಬಳಿಕ, ಸೈತಾನನು “ಸ್ವಲ್ಪಕಾಲ ಆತನನ್ನು ಬಿಟ್ಟು ಹೊರಟುಹೋದನು.” (ಲೂಕ 4:13) ತದ್ರೀತಿ, ಹಟಮಾರಿತನದ ಆತ್ಮಗಳು ಜನರನ್ನು ಆಕರ್ಷಿಸುವುದು ಮಾತ್ರವಲ್ಲ, ಅವರ ಮೇಲೆ ಆಕ್ರಮಣವನ್ನೂ ನಡೆಸುತ್ತವೆ.

13 ದೇವರ ಸೇವಕ ಯೋಬನ ಮೇಲೆ ಸೈತಾನನ ಆಕ್ರಮಣದ ಕುರಿತ ನಮ್ಮ ಹಿಂದಿನ ಪರಿಗಣನೆಯನ್ನು ಮರುಜ್ಞಾಪಿಸಿಕೊಳ್ಳಿರಿ. ಪಿಶಾಚನು, ಅವನ ಜಾನುವಾರುಗಳ ನಷ್ಟ, ಮತ್ತು ಅವನ ಸೇವಕರಲ್ಲಿ ಹೆಚ್ಚಿನವರ ಮರಣವನ್ನು ಉಂಟುಮಾಡಿದನು. ಸೈತಾನನು ಯೋಬನ ಮಕ್ಕಳನ್ನೂ ಕೊಂದನು. ಬಳಿಕ, ಅವನು ಯೋಬನನ್ನೇ ಒಂದು ವೇದನಾಮಯ ವ್ಯಾಧಿಯಿಂದ ಹೊಡೆದನು. ಆದರೆ ಯೋಬನು ಯೆಹೋವನಿಗೆ ತನ್ನ ಸಮಗ್ರತೆಯನ್ನು ಕಾಪಾಡಿಕೊಂಡನು ಮತ್ತು ಬಹಳವಾಗಿ ಆಶೀರ್ವದಿಸಲ್ಪಟ್ಟನು. (ಯೋಬ 1:7-19; 2:7, 8; 42:12) ಅಂದಿನಿಂದ, ದೆವ್ವಗಳು ಕೆಲವು ಜನರನ್ನು ಮೂಕರನ್ನಾಗಿ ಅಥವಾ ಕುರುಡರನ್ನಾಗಿ ಮಾಡಿ, ಮಾನವರ ಕಷ್ಟಾನುಭವಗಳಲ್ಲಿ ಆನಂದಿಸುತ್ತಾ ಮುಂದುವರಿಯುತ್ತಿವೆ. (ಮತ್ತಾಯ 9:32, 33; 12:22; ಮಾರ್ಕ 5:2-5) ಇಂದು, ದೆವ್ವಗಳು ಕೆಲವರನ್ನು ಲೈಂಗಿಕವಾಗಿ ಪೀಡಿಸುತ್ತವೆಂದೂ, ಇತರರನ್ನು ಮತಿವಿಕಲತೆಗೆ ನಡೆಸುತ್ತವೆಂದೂ ವರದಿಗಳು ತೋರಿಸುತ್ತವೆ. ಅವು ಇನ್ನಿತರರನ್ನು, ಯಾವುವು ದೇವರಿಗೆ ವಿರೋಧವಾದ ಪಾಪಗಳಾಗಿವೆಯೋ ಅಂತಹ ಕೊಲೆ ಮತ್ತು ಆತ್ಮಹತ್ಯಕ್ಕೆ ಪ್ರಚೋದಿಸುತ್ತವೆ. (ಧರ್ಮೋಪದೇಶಕಾಂಡ 5:17; 1 ಯೋಹಾನ 3:15) ಆದರೂ, ಈ ದುಷ್ಟಾತ್ಮಗಳು ಒಮ್ಮೆ ಬಲೆಯಲ್ಲಿ ಬೀಳಿಸಿರುವ ಸಾವಿರಾರು ಜನರಿಗೆ ಸ್ವತಂತ್ರರಾಗಲು ಸಾಧ್ಯವಾಗಿದೆ. ಇದು ಅವರಿಗೆ ಹೇಗೆ ಸಾಧ್ಯವಾಗಿದೆ? ಪ್ರಧಾನವಾದ ಮೂರು ಹೆಜ್ಜೆಗಳನ್ನು ತೆಗೆದುಕೊಳ್ಳುವ ಮೂಲಕ ಅವರಿದನ್ನು ಮಾಡಿದ್ದಾರೆ.

ದುಷ್ಟಾತ್ಮಗಳನ್ನು ಪ್ರತಿಭಟಿಸುವ ವಿಧ

14. ಒಂದನೆಯ ಶತಮಾನದ ಎಫೆಸದ ಕ್ರೈಸ್ತರ ಮಾದರಿಗೆ ಹೊಂದಿಕೆಯಲ್ಲಿ, ನೀವು ದುಷ್ಟಾತ್ಮಗಳನ್ನು ಹೇಗೆ ಪ್ರತಿಭಟಿಸಬಲ್ಲಿರಿ?

14 ದುಷ್ಟಾತ್ಮಗಳನ್ನು ಪ್ರತಿಭಟಿಸಿ ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ಅವುಗಳ ಪಾಶದೊಳಗಿಂದ ನೀವು ಕಾಪಾಡಿಕೊಳ್ಳಬಲ್ಲ ಒಂದು ವಿಧ ಯಾವುದು? ವಿಶ್ವಾಸಿಗಳಾಗುವ ಮೊದಲು ಪ್ರೇತವ್ಯವಹಾರವನ್ನು ಆಚರಿಸಿದ್ದ ಒಂದನೆಯ ಶತಮಾನದ ಎಫೆಸದ ಕ್ರೈಸ್ತರು ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಂಡರು. “ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು” ಎಂದು ನಾವು ಓದುತ್ತೇವೆ. (ಅ. ಕೃತ್ಯಗಳು 19:19) ನೀವು ಪ್ರೇತವ್ಯವಹಾರವನ್ನು ಆಚರಿಸಿಯೇ ಇಲ್ಲವಾದರೂ ಪ್ರೇತವ್ಯವಹಾರದ ಬಳಕೆಗಳಿರುವ ಅಥವಾ ಲಕ್ಷಣಗಳಿರುವ ಯಾವುದೇ ವಸ್ತುವನ್ನು ತೊರೆದುಬಿಡಿರಿ. ಇದರಲ್ಲಿ ಪುಸ್ತಕಗಳು, ಪತ್ರಿಕೆಗಳು, ವಿಡಿಯೊಗಳು, ಪ್ರಕಟನೆಯ ಚೀಟಿಗಳು, ಹಾಡುಗಳ ರೆಕಾರ್ಡಿಂಗ್‌ಗಳು, ಮತ್ತು ಪ್ರೇತವ್ಯವಹಾರ ಉದ್ದೇಶಗಳಿಗಾಗಿ ಬಳಸಿರುವ ವಸ್ತುಗಳು ಸೇರಿವೆ. ಮೂರ್ತಿಗಳು, ತಾಯಿತಗಳು, ರಕ್ಷಣೆಗಾಗಿ ಧರಿಸುವ ಇತರ ವಸ್ತುಗಳು ಮತ್ತು ಪ್ರೇತವ್ಯವಹಾರ ನಡೆಸುತ್ತಿರುವವರಿಂದ ಪಡೆದಿರುವ ಕೊಡುಗೆಗಳು ಸಹ ಇದರಲ್ಲಿ ಸೇರಿರುತ್ತವೆ. (ಧರ್ಮೋಪದೇಶಕಾಂಡ 7:25, 26; 1 ಕೊರಿಂಥ 10:21) ದೃಷ್ಟಾಂತಕ್ಕಾಗಿ: ಥಾಯ್‌ಲೆಂಡ್‌ನ ಒಂದು ವಿವಾಹಿತ ಜೊತೆಯನ್ನು ದೆವ್ವಗಳು ದೀರ್ಘಕಾಲದಿಂದ ಪೀಡಿಸುತ್ತಿದ್ದವು. ಬಳಿಕ ಅವರು ಪ್ರೇತವ್ಯವಹಾರದೊಂದಿಗೆ ಜೊತೆಗೊಂಡಿದ್ದ ವಸ್ತುಗಳನ್ನು ತೊಲಗಿಸಿಬಿಟ್ಟರು. ಪರಿಣಾಮವೇನಾಯಿತು? ಅವರಿಗೆ ದೆವ್ವಾಕ್ರಮಣದಿಂದ ಉಪಶಮನ ದೊರೆತು, ಆ ಬಳಿಕ ಅವರು ನಿಜವಾದ ಆತ್ಮಿಕ ಪ್ರಗತಿಯನ್ನು ಮಾಡಿದರು.

15. ದುಷ್ಟಾತ್ಮ ಸೈನ್ಯಗಳನ್ನು ಪ್ರತಿಭಟಿಸುವುದರಲ್ಲಿ, ಇನ್ನೊಂದು ಅಗತ್ಯವಾದ ಹೆಜ್ಜೆಯು ಯಾವುದು?

15 ದುಷ್ಟಾತ್ಮಗಳನ್ನು ಪ್ರತಿಭಟಿಸುವ ಇನ್ನೊಂದು ಅಗತ್ಯ ಹೆಜ್ಜೆಯು, ದೇವದತ್ತ ಆತ್ಮಿಕ ರಕ್ಷಾಕವಚದ ಸಂಪೂರ್ಣ ಉಡುಪನ್ನು ಧರಿಸುವ ವಿಷಯದಲ್ಲಿ ಅಪೊಸ್ತಲ ಪೌಲನು ಕೊಟ್ಟ ಬುದ್ಧಿವಾದವನ್ನು ಅನ್ವಯಿಸುವುದೇ. (ಎಫೆಸ 6:11-17) ಕ್ರೈಸ್ತರು ದುಷ್ಟಾತ್ಮಗಳ ವಿರೋಧವಾಗಿ ತಮಗಿರುವ ರಕ್ಷಣೆಗಳನ್ನು ಬಲಪಡಿಸಿಕೊಳ್ಳಬೇಕು. ಈ ಹೆಜ್ಜೆಯಲ್ಲಿ ಏನು ಸೇರಿದೆ? “ಮತ್ತು ನಂಬಿಕೆಯೆಂಬ ಗುರಾಣಿಯನ್ನು ಹಿಡುಕೊಳ್ಳಿರಿ; ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ,” ಎಂದನು ಪೌಲನು. ನಿಜ, ನಿಮ್ಮ ನಂಬಿಕೆ ಎಷ್ಟು ಹೆಚ್ಚು ಬಲಾಢ್ಯವಾಗಿದೆಯೋ, ದುಷ್ಟಾತ್ಮ ಸೈನ್ಯಗಳನ್ನು ಪ್ರತಿಭಟಿಸುವ ನಿಮ್ಮ ಸಾಮರ್ಥ್ಯವೂ ಅಷ್ಟೇ ಹೆಚ್ಚಾಗಿರುವುದು.—ಮತ್ತಾಯ 17:14-20.

16. ನೀವು ನಿಮ್ಮ ನಂಬಿಕೆಯನ್ನು ಹೇಗೆ ಬಲಪಡಿಸಬಲ್ಲಿರಿ?

16 ನಿಮ್ಮ ನಂಬಿಕೆಯನ್ನು ನೀವು ಹೇಗೆ ಬಲಪಡಿಸಬಲ್ಲಿರಿ? ಬೈಬಲನ್ನು ಅಭ್ಯಸಿಸುವುದನ್ನು ಮತ್ತು ನಿಮ್ಮ ಜೀವನದಲ್ಲಿ ಅದರ ಸಲಹೆಯನ್ನು ಅನ್ವಯಿಸುವುದನ್ನು ಮುಂದುವರಿಸುವ ಮೂಲಕವೇ. ಒಬ್ಬನ ನಂಬಿಕೆಗಿರುವ ಬಲವು ಅಧಿಕಾಂಶ ಅದರ ಅಸ್ತಿವಾರ—ದೇವರ ಜ್ಞಾನ—ದ ಸ್ಥಿರತೆಯ ಮೇಲೆ ಹೊಂದಿಕೊಳ್ಳುತ್ತದೆ. ಬೈಬಲನ್ನು ಅಭ್ಯಸಿಸಿದಂತೆ ನೀವು ಸಂಪಾದಿಸಿ ಹೃದಯಕ್ಕೆ ಹಚ್ಚಿಕೊಂಡ ನಿಷ್ಕೃಷ್ಟ ಜ್ಞಾನವು ನಿಮ್ಮ ನಂಬಿಕೆಯನ್ನು ಬಲಪಡಿಸಿದೆಯೆಂದು ನೀವು ಸಮ್ಮತಿಸುವುದಿಲ್ಲವೊ? (ರೋಮಾಪುರ 10:10, 17) ಆದಕಾರಣ, ನೀವು ಈ ಅಧ್ಯಯನವನ್ನು ಮುಂದುವರಿಸಿ, ಯೆಹೋವನ ಸಾಕ್ಷಿಗಳ ಕೂಟಗಳಲ್ಲಿ ಉಪಸ್ಥಿತರಾಗುವುದನ್ನು ನಿಮ್ಮ ರೂಢಿಯಾಗಿ ಮಾಡುವಾಗ, ನಿಸ್ಸಂದೇಹವಾಗಿ ನಿಮ್ಮ ನಂಬಿಕೆಯು ಇನ್ನೂ ಹೆಚ್ಚು ಭದ್ರವಾಗಲಿರುವುದು. (ರೋಮಾಪುರ 1:11, 12; ಕೊಲೊಸ್ಸೆ 2:6, 7) ಅದು ದೆವ್ವಾಕ್ರಮಣಕ್ಕೆ ವಿರುದ್ಧವಾಗಿ ಬಲವತ್ತಾದ ಬುರುಜಾಗಿರುವುದು.—1 ಯೋಹಾನ 5:5.

17. ದುಷ್ಟಾತ್ಮ ಸೈನ್ಯಗಳನ್ನು ಪ್ರತಿಭಟಿಸಲು ಇನ್ನೂ ಹೆಚ್ಚಿನ ಯಾವ ಹೆಜ್ಜೆಗಳು ಅವಶ್ಯವಿರಬಹುದು?

17 ದುಷ್ಟಾತ್ಮ ಸೈನ್ಯಗಳನ್ನು ಪ್ರತಿಭಟಿಸಲು ದೃಢನಿಶ್ಚಯ ಮಾಡಿರುವ ವ್ಯಕ್ತಿಯೊಬ್ಬನು ಇನ್ನಾವ ಹೆಚ್ಚಿನ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು? ಎಫೆಸದ ಕ್ರೈಸ್ತರಿಗೆ ಸಂರಕ್ಷಣೆಯ ಅಗತ್ಯವಿತ್ತು, ಏಕೆಂದರೆ ಅವರು ದೆವ್ವನಂಬಿಕೆ ತುಂಬಿದ್ದ ನಗರದಲ್ಲಿ ಜೀವಿಸುತ್ತಿದ್ದರು. ಆದಕಾರಣ, “ನೀವು ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ . . . ದೇವರನ್ನು ಪ್ರಾರ್ಥಿಸಿರಿ,” ಎಂದು ಪೌಲನು ಅವರಿಗೆ ಹೇಳಿದನು. (ಎಫೆಸ 6:18) ದೆವ್ವಗಳು ತುಂಬಿದ ಲೋಕದಲ್ಲಿ ನಾವು ಜೀವಿಸುವುದರಿಂದ, ದುಷ್ಟಾತ್ಮಗಳನ್ನು ಪ್ರತಿಭಟಿಸುವುದರಲ್ಲಿ ದೇವರ ಸಂರಕ್ಷಣೆಗಾಗಿ ಅತ್ಯಾಸಕ್ತಿಯಿಂದ ಪ್ರಾರ್ಥಿಸುವುದು ಆವಶ್ಯಕ. (ಮತ್ತಾಯ 6:13) ಈ ಸಂಬಂಧದಲ್ಲಿ, ಕ್ರೈಸ್ತ ಸಭೆಯ ನೇಮಿತ ಹಿರಿಯರ ಆತ್ಮಿಕ ನೆರವು ಮತ್ತು ಪ್ರಾರ್ಥನೆಗಳು ಸಹಾಯಕರ.—ಯಾಕೋಬ 5:13-15.

ದುಷ್ಟಾತ್ಮಗಳ ವಿರುದ್ಧ ನಿಮ್ಮ ಹೋರಾಟವನ್ನು ನಡೆಸುತ್ತಿರ್ರಿ

18, 19. ದೆವ್ವಗಳು ಒಬ್ಬ ವ್ಯಕ್ತಿಗೆ ಪುನಃ ತೊಂದರೆ ಕೊಡುವುದಾದರೆ ಏನು ಮಾಡಸಾಧ್ಯವಿದೆ?

18 ಆದರೂ, ಈ ಮೂಲ ಹೆಜ್ಜೆಗಳನ್ನು ತೆಗೆದುಕೊಂಡ ಮೇಲೆಯೂ ಕೆಲವರು ದುಷ್ಟಾತ್ಮಗಳಿಂದ ತೊಂದರೆಗೀಡಾಗಿದ್ದಾರೆ. ಉದಾಹರಣೆಗೆ, ಕೋಟ್‌ಡೀವಾರ್‌ನ ಒಬ್ಬ ಮನುಷ್ಯನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸಿ, ತನ್ನ ತಾಯಿತಗಳನ್ನೆಲ್ಲ ನಾಶಮಾಡಿದನು. ಆ ಬಳಿಕ ಅವನು ಉತ್ತಮ ಪ್ರಗತಿಯನ್ನು ಮಾಡಿ, ಯೆಹೋವನಿಗೆ ತನ್ನ ಜೀವವನ್ನು ಸಮರ್ಪಿಸಿಕೊಂಡು, ದೀಕ್ಷಾಸ್ನಾನ ಹೊಂದಿದನು. ಆದರೆ ಅವನ ದೀಕ್ಷಾಸ್ನಾನವಾಗಿ ಒಂದು ವಾರಾನಂತರ, ದೆವ್ವಗಳು ಅವನಿಗೆ ಪುನಃ ತೊಂದರೆಕೊಡಲಾರಂಭಿಸಿದವು, ಮತ್ತು ಅವನು ಹೊಸದಾಗಿ ಕಂಡುಕೊಂಡಿದ್ದ ನಂಬಿಕೆಯನ್ನು ತ್ಯಜಿಸುವಂತೆ ವಾಣಿಗಳು ಅವನಿಗೆ ಹೇಳಿದವು. ಇದು ನಿಮಗೆ ಸಂಭವಿಸುವುದಾದರೆ, ನೀವು ಯೆಹೋವನ ಸಂರಕ್ಷಣೆಯನ್ನು ಕಳೆದುಕೊಂಡಿದ್ದೀರಿ ಎಂದು ಇದರ ಅರ್ಥವೊ? ಹಾಗಿರಬೇಕೆಂದಿಲ್ಲ.

19 ಪರಿಪೂರ್ಣ ಮಾನವನಾದ ಯೇಸು ಕ್ರಿಸ್ತನಿಗೆ ದೈವಿಕ ಸಂರಕ್ಷಣೆಯಿದ್ದರೂ, ಅವನಿಗೆ ದುಷ್ಟಾತ್ಮಜೀವಿಯಾದ ಪಿಶಾಚನಾದ ಸೈತಾನನ ವಾಣಿ ಕೇಳಿಬಂತು. ಅಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ಯೇಸುವು ತೋರಿಸಿದನು. “ಸೈತಾನನೇ, ನೀನು ತೊಲಗಿ ಹೋಗು,” ಎಂದು ಅವನು ಪಿಶಾಚನಿಗೆ ಹೇಳಿದನು. (ಮತ್ತಾಯ 4:3-10) ಅದೇ ರೀತಿಯಲ್ಲಿ, ನೀವು ಆತ್ಮಲೋಕದ ವಾಣಿಗಳನ್ನು ಕೇಳಲು ನಿರಾಕರಿಸಬೇಕು. ಸಹಾಯಕ್ಕಾಗಿ ಯೆಹೋವನನ್ನು ಕರೆಯುವ ಮೂಲಕ ದುಷ್ಟಾತ್ಮಗಳನ್ನು ಪ್ರತಿಭಟಿಸಿರಿ. ಹೌದು, ದೇವರ ಹೆಸರನ್ನು ಉಪಯೋಗಿಸುತ್ತಾ ಗಟ್ಟಿಯಾಗಿ ಪ್ರಾರ್ಥಿಸಿರಿ. ಜ್ಞಾನೋಕ್ತಿ 18:10 ಹೇಳುವುದು: “ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.” ಕೋಟ್‌ಡೀವಾರ್‌ನ ಆ ಕ್ರೈಸ್ತ ಮನುಷ್ಯನು ಇದನ್ನು ಮಾಡಿದನು, ಮತ್ತು ದುಷ್ಟಾತ್ಮಗಳು ಅವನನ್ನು ಪೀಡಿಸುವುದನ್ನು ನಿಲ್ಲಿಸಿದವು.—ಕೀರ್ತನೆ 124:8; 145:18.

20. ಸಾರಾಂಶವಾಗಿ, ದುಷ್ಟಾತ್ಮಗಳನ್ನು ಪ್ರತಿಭಟಿಸಲು ನೀವೇನು ಮಾಡಬಲ್ಲಿರಿ?

20 ದುಷ್ಟಾತ್ಮಗಳು ಅಸ್ತಿತ್ವದಲ್ಲಿರುವಂತೆ ಯೆಹೋವನು ಬಿಟ್ಟಿದ್ದಾನಾದರೂ, ಆತನು ವಿಶೇಷವಾಗಿ ತನ್ನ ಜನರ ಪರವಾಗಿ ತನ್ನ ಶಕ್ತಿಯನ್ನು ತೋರಿಸುತ್ತಾನೆ, ಮತ್ತು ಆತನ ನಾಮವು ಭೂಮಿಯಲ್ಲೆಲ್ಲ ಘೋಷಿಸಲ್ಪಡುತ್ತಿದೆ. (ವಿಮೋಚನಕಾಂಡ 9:16) ನೀವು ದೇವರಿಗೆ ನಿಕಟವಾಗಿ ಇರುವಲ್ಲಿ, ನಿಮಗೆ ದುಷ್ಟಾತ್ಮಗಳ ಭಯವಿರಬೇಕೆಂದಿಲ್ಲ. (ಅರಣ್ಯಕಾಂಡ 23:21, 23; ಯಾಕೋಬ 4:7, 8; 2 ಪೇತ್ರ 2:9) ಅವರ ಶಕ್ತಿ ಪರಿಮಿತ. ಅವರಿಗೆ ನೋಹನ ದಿನಗಳಲ್ಲಿ ಶಿಕ್ಷೆ ವಿಧಿಸಲಾಗಿತ್ತು, ಇತ್ತೀಚಿನ ದಿನಗಳಲ್ಲಿ ಅವರನ್ನು ಸ್ವರ್ಗದಿಂದ ದೊಬ್ಬಲಾಗಿತ್ತು, ಮತ್ತು ಈಗ ಅಂತಿಮ ನ್ಯಾಯತೀರ್ಪನ್ನು ಕಾಯುತ್ತಿದ್ದಾರೆ. (ಯೂದ 6; ಪ್ರಕಟನೆ 12:9; 20:1-3, 7-10, 14) ವಾಸ್ತವವೇನಂದರೆ, ಆಗಮಿಸುತ್ತಿರುವ ತಮ್ಮ ನಾಶನದ ಭಯದಲ್ಲಿ ಅವರಿದ್ದಾರೆ. (ಯಾಕೋಬ 2:19) ಹೀಗೆ, ದುಷ್ಟಾತ್ಮಗಳು ಯಾವುದೊ ವಿಧದ ಸೆಳೆವಸ್ತುವಿನಿಂದ ನಿಮ್ಮನ್ನು ಆಕರ್ಷಿಸಲು ಪ್ರಯತ್ನಿಸಲಿ, ಯಾವುದೇ ವಿಧದಲ್ಲಿ ನಿಮ್ಮ ಮೇಲೆ ಆಕ್ರಮಣ ನಡೆಸಲಿ, ನೀವು ಅವುಗಳನ್ನು ಪ್ರತಿಭಟಿಸಬಲ್ಲಿರಿ. (2 ಕೊರಿಂಥ 2:11) ಪ್ರೇತವ್ಯವಹಾರದ ಪ್ರತಿಯೊಂದು ವಿಧದಿಂದಲೂ ದೂರವಾಗಿರಿ, ದೇವರ ವಾಕ್ಯದ ಸಲಹೆಯನ್ನು ಅನ್ವಯಿಸಿರಿ, ಮತ್ತು ಯೆಹೋವನ ಒಪ್ಪಿಗೆಗಾಗಿ ಪ್ರಯತ್ನಿಸಿರಿ. ವಿಳಂಬಿಸದೆ ಇದನ್ನು ಮಾಡಿರಿ, ಏಕೆಂದರೆ ದುಷ್ಟಾತ್ಮ ಸೈನ್ಯಗಳನ್ನು ನೀವು ಪ್ರತಿಭಟಿಸುವುದರ ಮೇಲೆ ನಿಮ್ಮ ಜೀವವು ಹೊಂದಿಕೊಂಡಿದೆ!

ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ

ದುಷ್ಟಾತ್ಮಗಳು ಜನರನ್ನು ತಪ್ಪುದಾರಿಗೆ ಎಳೆಯಲು ಹೇಗೆ ಪ್ರಯತ್ನಿಸುತ್ತವೆ?

ಪ್ರೇತವ್ಯವಹಾರವನ್ನು ಬೈಬಲು ಏಕೆ ಖಂಡಿಸುತ್ತದೆ?

ಒಬ್ಬ ವ್ಯಕ್ತಿಯು ದುಷ್ಟಾತ್ಮ ಸೈನ್ಯಗಳಿಂದ ಹೇಗೆ ಸ್ವತಂತ್ರನಾಗಬಲ್ಲನು?

ದುಷ್ಟಾತ್ಮಗಳನ್ನು ನೀವು ಏಕೆ ಪ್ರತಿಭಟಿಸುತ್ತಾ ಮುಂದುವರಿಯಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 110ರಲ್ಲಿರುವ ಚಿತ್ರ]

ನೀವು ಪ್ರೇತವ್ಯವಹಾರವನ್ನು ಅದರ ಅನೇಕ ರೂಪಗಳಲ್ಲಿ ಹೇಗೆ ವೀಕ್ಷಿಸುತ್ತೀರಿ?