ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವಜನರ ಮಧ್ಯೆ ಭದ್ರತೆಯನ್ನು ಕಂಡುಕೊಳ್ಳಿರಿ

ದೇವಜನರ ಮಧ್ಯೆ ಭದ್ರತೆಯನ್ನು ಕಂಡುಕೊಳ್ಳಿರಿ

ಅಧ್ಯಾಯ 17

ದೇವಜನರ ಮಧ್ಯೆ ಭದ್ರತೆಯನ್ನು ಕಂಡುಕೊಳ್ಳಿರಿ

1, 2. ಮಾನವ ಕುಲದ ಪರಿಸ್ಥಿತಿಯು ಚಂಡಮಾರುತದಿಂದ ಧ್ವಂಸವಾದ ಒಂದು ಪ್ರದೇಶದ ಜನರ ಪರಿಸ್ಥಿತಿಯಂತೆ ಹೇಗಿದೆ?

 ಒಂದು ಬಿರುಸಾದ ಚಂಡಮಾರುತವು ನೀವು ಜೀವಿಸುವ ಪ್ರದೇಶವನ್ನು ಹಾಳುಗೆಡವಿದೆಯೆಂದು ಭಾವಿಸಿರಿ. ನಿಮ್ಮ ಮನೆ ನಾಶವಾಗಿದೆ, ಮತ್ತು ನಿಮ್ಮ ಸ್ವತ್ತುಗಳೆಲ್ಲ ನಷ್ಟಹೊಂದಿವೆ. ಆಹಾರ ಅಭಾವವಾಗಿದೆ. ಪರಿಸ್ಥಿತಿಯು ಆಶಾರಹಿತವಾಗಿ ಕಾಣುತ್ತದೆ. ಆಗ, ಅನಿರೀಕ್ಷಿತವಾಗಿ ಆಪತ್ಕಾಲದ ಪರಿಹಾರ ಸರಬರಾಯಿಗಳು ಬಂದು ತಲಪುತ್ತವೆ. ಆಹಾರ ಮತ್ತು ಬಟ್ಟೆಬರೆಗಳು ಹೇರಳವಾಗಿ ಒದಗಿಸಲ್ಪಡುತ್ತವೆ. ನಿಮಗಾಗಿ ಒಂದು ಹೊಸ ಮನೆಯನ್ನು ಕಟ್ಟಲಾಗುತ್ತದೆ. ಈ ಒದಗಿಸುವಿಕೆಗಳು ದೊರಕುವಂತೆ ಮಾಡಿದ ವ್ಯಕ್ತಿಗೆ ನೀವು ಕೃತಜ್ಞರಾಗಿರುವುದು ನಿಶ್ಚಯ.

2 ಇದಕ್ಕೆ ಸದೃಶವಾದ ಏನೊ ಇಂದು ಸಂಭವಿಸುತ್ತಿದೆ. ಆ ಚಂಡಮಾರುತದಂತೆ, ಆದಾಮ ಹವ್ವರ ದಂಗೆ ಮಾನವ ಕುಲಕ್ಕೆ ಮಹಾ ಹಾನಿಯನ್ನು ಉಂಟುಮಾಡಿದೆ. ಮಾನವ ಕುಲದ ಪ್ರಮೋದವನ್ಯ ನಿವಾಸವು ನಷ್ಟವಾಯಿತು. ಅಂದಿನಿಂದ ಮಾನವ ಸರಕಾರಗಳು ಜನರನ್ನು ಯುದ್ಧ, ಪಾತಕ ಮತ್ತು ಅನ್ಯಾಯದಿಂದ ಮರೆ ಮಾಡುವುದರಲ್ಲಿ ವಿಫಲಗೊಂಡಿವೆ. ಧರ್ಮವು ಜನಸಮೂಹಗಳು ಹಿತಕರವಾದ ಆತ್ಮಿಕಾಹಾರಕ್ಕಾಗಿ ಹಸಿವೆಯಿಂದಿರುವಂತೆ ಬಿಟ್ಟಿದೆ. ಆದರೆ ಆತ್ಮಿಕವಾಗಿ ಹೇಳುವಲ್ಲಿ, ಯೆಹೋವ ದೇವರು ಈಗ ಆಹಾರ, ಬಟ್ಟೆಬರೆ ಮತ್ತು ವಸತಿಯನ್ನು ಒದಗಿಸುತ್ತಿದ್ದಾನೆ. ಆತನು ಅದನ್ನು ಹೇಗೆ ಮಾಡುತ್ತಿದ್ದಾನೆ?

“ನಂಬಿಗಸ್ತನೂ ವಿವೇಕಿಯೂ ಆದಂಥ ಆಳು”

3. ಯೆಹೋವನು ಮಾನವ ಕುಲಕ್ಕೆ ಒದಗಿಸುವಿಕೆಗಳನ್ನು ಹೇಗೆ ಸರಬರಾಯಿ ಮಾಡುತ್ತಾನೆ, ಯಾವ ದೃಷ್ಟಾಂತಗಳು ತೋರಿಸುವಂತೆ?

3 ಪರಿಹಾರ ಸರಬರಾಯಿಗಳು ಸಾಮಾನ್ಯವಾಗಿ ಒಂದು ವ್ಯವಸ್ಥಾಪಿತ ಮಾಧ್ಯಮದ ಮೂಲಕ ಹಂಚಲ್ಪಡುತ್ತವೆ, ಮತ್ತು ಯೆಹೋವನು ಅದೇ ರೀತಿ ತನ್ನ ಜನರಿಗೆ ಆತ್ಮಿಕ ಒದಗಿಸುವಿಕೆಯನ್ನು ಮಾಡಿದ್ದಾನೆ. ಉದಾಹರಣೆಗೆ, ಇಸ್ರಾಯೇಲ್ಯರು ಸುಮಾರು 1,500 ವರ್ಷಗಳ ತನಕ “ಯೆಹೋವನ ಮಂಡಲಿ” ಯಾಗಿದ್ದರು. ಅವರಲ್ಲಿ ದೇವರ ಧರ್ಮೋಪದೇಶವನ್ನು ಕಲಿಸಲು ಆತನ ಮಾಧ್ಯಮವಾಗಿ ಸೇವೆ ಮಾಡಿದವರಿದ್ದರು. (1 ಪೂರ್ವಕಾಲವೃತ್ತಾಂತ 28:8; 2 ಪೂರ್ವಕಾಲವೃತ್ತಾಂತ 17:7-9) ಸಾ.ಶ. ಒಂದನೆಯ ಶತಮಾನದಲ್ಲಿ, ಯೆಹೋವನು ಕ್ರೈಸ್ತ ಸಂಸ್ಥೆಯನ್ನು ಉತ್ಪಾದಿಸಿದನು. ಸಭೆಗಳು ರಚಿಸಲ್ಪಟ್ಟವು, ಮತ್ತು ಅವು ಅಪೊಸ್ತಲರು ಮತ್ತು ಹಿರೀ ಪುರುಷರಿಂದ ರಚಿತವಾಗಿದ್ದ ಒಂದು ಆಡಳಿತ ಮಂಡಲಿಯ ನಿರ್ದೇಶನದಲ್ಲಿ ಕೆಲಸ ನಡೆಸಿದವು. (ಅ. ಕೃತ್ಯಗಳು 15:22-31) ಅದೇ ರೀತಿ ಇಂದು, ಯೆಹೋವನು ತನ್ನ ಜನರೊಂದಿಗೆ ಒಂದು ವ್ಯವಸ್ಥಾಪಿತ ಮಂಡಲಿಯ ಮೂಲಕ ವ್ಯವಹರಿಸುತ್ತಾನೆ. ಇದು ನಮಗೆ ಹೇಗೆ ಗೊತ್ತು?

4. ಆಧುನಿಕ ಸಮಯಗಳಲ್ಲಿ ಯಾರು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಗಿ ಪರಿಣಮಿಸಿದ್ದಾರೆ, ಮತ್ತು ದೇವರ ಆತ್ಮಿಕ ಒದಗಿಸುವಿಕೆಗಳು ಹೇಗೆ ದೊರಕಿಸಲ್ಪಡುತ್ತಿವೆ?

4 ರಾಜ್ಯಾಧಿಕಾರದಲ್ಲಿ ತನ್ನ ಸಾನ್ನಿಧ್ಯದ ಸಮಯದಲ್ಲಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ತನ್ನ ಹಿಂಬಾಲಕರಿಗೆ “ಹೊತ್ತು ಹೊತ್ತಿಗೆ ಆಹಾರವನ್ನು” ಒದಗಿಸುತ್ತಿರುವುದನ್ನು ಕಂಡುಕೊಳ್ಳಲಾಗುವುದೆಂದು ಯೇಸು ಹೇಳಿದನು. (ಮತ್ತಾಯ 24:45-47) ಯೇಸುವು 1914 ರಲ್ಲಿ ಸ್ವರ್ಗೀಯ ಅರಸನಾಗಿ ಸ್ಥಾಪಿಸಲ್ಪಟ್ಟಾಗ, ಈ “ಆಳು” ಯಾರಾಗಿ ಪರಿಣಮಿಸಿದನು? ನಿಶ್ಚಯವಾಗಿಯೂ ಕ್ರೈಸ್ತ ಪ್ರಪಂಚದ ವೈದಿಕ ವರ್ಗವು ಇದಾಗಿರಲಿಲ್ಲ. ಅಧಿಕಾಂಶವಾಗಿ, ಅವರು ತಮ್ಮ ಹಿಂಡುಗಳಿಗೆ, I ನೆಯ ಲೋಕ ಯುದ್ಧದಲ್ಲಿ ತಮ್ಮ ಸ್ವಂತ ರಾಷ್ಟ್ರೀಯ ಸರಕಾರಗಳಿಗೆ ಬೆಂಬಲ ಕೊಟ್ಟ ಪ್ರಚಾರವನ್ನು ಉಣಿಸುತ್ತಿದ್ದರು. ಆದರೆ ಯೋಗ್ಯವೂ ಸಮಯೋಚಿತವೂ ಆದ ಆತ್ಮಿಕಾಹಾರವು, ದೇವರ ಪವಿತ್ರಾತ್ಮಾಭಿಷಿಕ್ತರಾಗಿದ್ದ ಮತ್ತು “ಚಿಕ್ಕ ಹಿಂಡು” ಎಂದು ಯೇಸು ಯಾವುದನ್ನು ಕರೆದನೋ ಅದರ ಭಾಗವಾಗಿದ್ದ ಸತ್ಯ ಕ್ರೈಸ್ತರ ಗುಂಪಿನ ಮೂಲಕ ಹಂಚಲಾಗುತ್ತಿತ್ತು. (ಲೂಕ 12:32) ಈ ಅಭಿಷಿಕ್ತ ಕ್ರೈಸ್ತರು ಮನುಷ್ಯನ ಸರಕಾರಗಳ ಬದಲಾಗಿ ದೇವರ ರಾಜ್ಯವನ್ನು ಸಾರಿದರು. ಪರಿಣಾಮವಾಗಿ, ಗತ ವರುಷಗಳಲ್ಲಿ ಲಕ್ಷಾಂತರ ಮಂದಿ ನೀತಿಯ ಪ್ರವೃತ್ತಿಯ “ಬೇರೆ ಕುರಿಗಳು” ಸತ್ಯಧರ್ಮವನ್ನು ಆಚರಿಸುವುದರಲ್ಲಿ ಅಭಿಷಿಕ್ತ “ಆಳ”ನ್ನು ಕೂಡಿಕೊಂಡಿದ್ದಾರೆ. (ಯೋಹಾನ 10:16) ಆ ‘ನಂಬಿಗಸ್ತ ಆಳು’ ಮತ್ತು ಅದರ ವರ್ತಮಾನ ಕಾಲದ ಆಡಳಿತ ಮಂಡಲಿಯನ್ನು ಉಪಯೋಗಿಸುತ್ತಾ, ಆತ್ಮಿಕ ಆಹಾರ, ವಸ್ತ್ರ ಮತ್ತು ವಸತಿಯನ್ನು, ಈ ಒದಗಿಸುವಿಕೆಗಳನ್ನು ಯಾರು ಬಯಸುತ್ತಾರೋ ಅವರೆಲ್ಲರಿಗೆ ದೊರಕಿಸುವಂತೆ ದೇವರು ತನ್ನ ವ್ಯವಸ್ಥಿತ ಜನರನ್ನು ನಡೆಸುತ್ತಾನೆ.

“ಹೊತ್ತುಹೊತ್ತಿಗೆ ಆಹಾರ”

5. ಇಂದು ಲೋಕದಲ್ಲಿ ಯಾವ ಆತ್ಮಿಕ ಪರಿಸ್ಥಿತಿ ಅಸ್ತಿತ್ವದಲ್ಲಿದೆ, ಆದರೆ ಯೆಹೋವನು ಈ ವಿಷಯದಲ್ಲಿ ಏನು ಮಾಡುತ್ತಿದ್ದಾನೆ?

5 “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ [“ಯೆಹೋವನ,” NW] ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು,” ಎಂದು ಯೇಸು ಹೇಳಿದನು. (ಮತ್ತಾಯ 4:4) ಆದರೆ ದುಃಖಕರವಾಗಿ, ಜನರಲ್ಲಿ ಮಹಾ ಅಧಿಕಾಂಶ, ದೇವರ ಮಾತುಗಳಿಗೆ ಕಿವಿಗೊಡುತ್ತಿಲ್ಲ. ಯೆಹೋವನ ಪ್ರವಾದಿಯಾದ ಆಮೋಸನು ಮುಂತಿಳಿಸಿದಂತೆ, “ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮ” ಇಲ್ಲಿದೆ. (ಆಮೋಸ 8:11) ಅತಿ ಧಾರ್ಮಿಕ ಜನರು ಸಹ ಆತ್ಮಿಕವಾಗಿ ಉಪವಾಸ ಬೀಳುತ್ತಿದ್ದಾರೆ. ಆದರೂ, “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ಯೆಹೋವನ ಚಿತ್ತವಾಗಿದೆ. (1 ತಿಮೊಥೆಯ 2:3, 4) ಅದಕ್ಕನುಸಾರವಾಗಿ, ಆತನು ಆತ್ಮಿಕಾಹಾರವನ್ನು ಹೇರಳವಾಗಿ ಒದಗಿಸುತ್ತಿದ್ದಾನೆ. ಆದರೆ ಅದನ್ನು ಎಲ್ಲಿ ಪಡೆಯಸಾಧ್ಯವಿದೆ?

6. ಗತಕಾಲಗಳಲ್ಲಿ ಯೆಹೋವನು ತನ್ನ ಜನರನ್ನು ಆತ್ಮಿಕವಾಗಿ ಹೇಗೆ ಉಣಿಸಿದ್ದಾನೆ?

6 ಇತಿಹಾಸದಾದ್ಯಂತ, ಯೆಹೋವನು ತನ್ನ ಜನರಿಗೆ ಒಂದು ಗುಂಪಾಗಿ ಆತ್ಮಿಕ ಆಹಾರವನ್ನು ಹಂಚಿದ್ದಾನೆ. (ಯೆಶಾಯ 65:13) ದೃಷ್ಟಾಂತಕ್ಕೆ, ಇಸ್ರಾಯೇಲ್ಯ ಯಾಜಕರು ದೇವರ ಧರ್ಮಶಾಸ್ತ್ರದ ಗುಂಪು-ಉಪದೇಶಕ್ಕಾಗಿ ಪುರುಷರು, ಸ್ತ್ರೀಯರು ಮತ್ತು ಮಕ್ಕಳನ್ನು ಒಟ್ಟು ಸೇರಿಸಿದರು. (ಧರ್ಮೋಪದೇಶಕಾಂಡ 31:9, 12) ಆಡಳಿತ ಮಂಡಲಿಯ ನಿರ್ದೇಶನದಲ್ಲಿ, ಒಂದನೆಯ ಶತಮಾನದ ಕ್ರೈಸ್ತರು ಸಭೆಗಳನ್ನು ಸಂಘಟಿಸಿ ಸಮಸ್ತರ ಉಪದೇಶ ಮತ್ತು ಪ್ರೋತ್ಸಾಹನೆಗಾಗಿ ಕೂಟಗಳನ್ನು ನಡೆಸಿದರು. (ರೋಮಾಪುರ 16:5; ಫಿಲೆಮೋನ 1, 2) ಯೆಹೋವನ ಸಾಕ್ಷಿಗಳು ಈ ನಮೂನೆಯನ್ನು ಅನುಸರಿಸುತ್ತಾರೆ. ಅವರ ಎಲ್ಲ ಕೂಟಗಳಲ್ಲಿ ಉಪಸ್ಥಿತರಿರಲು ನಿಮ್ಮನ್ನು ಆದರಪೂರ್ವಕವಾಗಿ ಆಮಂತ್ರಿಸಲಾಗುತ್ತದೆ.

7. ಕ್ರೈಸ್ತ ಕೂಟಗಳಲ್ಲಿ ಕ್ರಮವಾದ ಉಪಸ್ಥಿತಿಯು ಜ್ಞಾನ ಮತ್ತು ನಂಬಿಕೆಗೆ ಹೇಗೆ ಸಂಬಂಧಪಡುತ್ತದೆ?

7 ನೀವು ನಿಮ್ಮ ವೈಯಕ್ತಿಕ ಬೈಬಲ್‌ ಅಧ್ಯಯನದಲ್ಲಿ ಆಗಲೆ ಹೆಚ್ಚಿನದನ್ನು ಕಲಿತಿರಬಹುದು ನಿಶ್ಚಯ. ಪ್ರಾಯಶಃ ಯಾರೋ ನಿಮಗೆ ಸಹಾಯ ಮಾಡಿರುತ್ತಾರೆ. (ಅ. ಕೃತ್ಯಗಳು 8:30-35) ಆದರೆ ನಿಮ್ಮ ನಂಬಿಕೆಯನ್ನು, ಯೋಗ್ಯ ರೀತಿಯ ಆರೈಕೆ ಮಾಡದಿರುವಲ್ಲಿ ಬಾಡಿ ಸಾಯುವ ಒಂದು ಸಸಿಗೆ ಹೋಲಿಸಬಹುದು. ಆದಕಾರಣ, ನೀವು ಯೋಗ್ಯವಾದ ಆತ್ಮಿಕ ಪೋಷಣೆಯನ್ನು ಪಡೆಯಬೇಕು. (1 ತಿಮೊಥೆಯ 4:6) ಕ್ರೈಸ್ತ ಕೂಟಗಳು, ನಿಮ್ಮನ್ನು ಆತ್ಮಿಕವಾಗಿ ಪೋಷಿಸಿ, ನೀವು ದೇವರ ಜ್ಞಾನದಲ್ಲಿ ವೃದ್ಧಿಯಾದ ಹಾಗೆ ನಂಬಿಕೆಯಲ್ಲಿ ಬೆಳೆಯುತ್ತಿರುವಂತೆ ಸಹಾಯಮಾಡಲಿಕ್ಕಾಗಿ ರಚಿಸಿರುವ ಉಪದೇಶದ ನಿರಂತರ ಕಾರ್ಯಕ್ರಮವನ್ನು ಒದಗಿಸುತ್ತವೆ.—ಕೊಲೊಸ್ಸೆ 1:9, 10.

8. ಯೆಹೋವನ ಸಾಕ್ಷಿಗಳ ಕೂಟಗಳಲ್ಲಿ ಉಪಸ್ಥಿತರಾಗಲು ನಾವೇಕೆ ಪ್ರೋತ್ಸಾಹಿಸಲ್ಪಡುತ್ತೇವೆ?

8 ಕೂಟಗಳು ಇನ್ನೊಂದು ಪ್ರಧಾನ ಉದ್ದೇಶವನ್ನು ಪೂರೈಸುತ್ತವೆ. ಪೌಲನು ಬರೆದುದು: “ನಾವು ಪ್ರೀತಿ ಮತ್ತು ಉತ್ತಮ ಕಾರ್ಯಗಳಿಗಾಗಿ ಪ್ರೇರಿಸಲು ಒಬ್ಬರನ್ನೊಬ್ಬರು ಗಮನಿಸೋಣ; . . . ನಮ್ಮ ಒಟ್ಟುಗೂಡುವಿಕೆಯನ್ನು ಬಿಟ್ಟುಬಿಡುವುದಲ್ಲ.” (ಇಬ್ರಿಯ 10:24, 25, NW) “ಪ್ರೇರಿಸು” ಎಂದು ಭಾಷಾಂತರಿತವಾದ ಗ್ರೀಕ್‌ ಪದಕ್ಕೆ “ಹರಿತ ಮಾಡು” ಎಂಬ ಅರ್ಥವೂ ಇರಸಾಧ್ಯವಿದೆ. ಬೈಬಲಿನ ಒಂದು ಜ್ಞಾನೋಕ್ತಿಯು ಹೇಳುವುದು: “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು.” (ಜ್ಞಾನೋಕ್ತಿ 27:17) ನಮ್ಮೆಲ್ಲರಿಗೂ ನಿರಂತರದ ‘ಹರಿತ ಮಾಡುವಿಕೆ’ ಅಗತ್ಯ. ಲೋಕದ ಪ್ರತಿದಿನದ ಒತ್ತಡಗಳು ನಮ್ಮ ನಂಬಿಕೆಯನ್ನು ಮೊಂಡುಮಾಡ ಸಾಧ್ಯವಿದೆ. ನಾವು ಕ್ರೈಸ್ತ ಕೂಟಗಳಲ್ಲಿ ಉಪಸ್ಥಿತರಾಗುವಾಗ, ಅಲ್ಲಿ ಪ್ರೋತ್ಸಾಹನೆಯು ವಿನಿಮಯಗೊಳ್ಳುತ್ತದೆ. (ರೋಮಾಪುರ 1:11, 12) ಸಭೆಯ ಸದಸ್ಯರು ಅಪೊಸ್ತಲ ಪೌಲನ, “ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ” ಎಂಬ ಬುದ್ಧಿವಾದವನ್ನು ಅನುಸರಿಸುತ್ತಾರೆ, ಮತ್ತು ಇಂತಹ ವಿಷಯಗಳು ನಮ್ಮ ನಂಬಿಕೆಯನ್ನು ಹರಿತಗೊಳಿಸುತ್ತವೆ. (1 ಥೆಸಲೊನೀಕ 5:11) ಕ್ರೈಸ್ತ ಕೂಟಗಳಲ್ಲಿ ಕ್ರಮವಾದ ಸಮಕ್ಷಮವು ನಾವು ದೇವರನ್ನು ಪ್ರೀತಿಸುತ್ತೇವೆಂದು ಸೂಚಿಸಿ, ನಮಗೆ ಆತನನ್ನು ಸ್ತುತಿಸುವ ಸಂದರ್ಭಗಳನ್ನು ಒದಗಿಸುತ್ತದೆ.—ಕೀರ್ತನೆ 35:18.

“ಪ್ರೀತಿಯನ್ನು ಧರಿಸಿಕೊಳ್ಳಿರಿ”

9. ಪ್ರೀತಿಯನ್ನು ಪ್ರದರ್ಶಿಸುವುದರಲ್ಲಿ ಯೆಹೋವನು ಹೇಗೆ ಮಾದರಿಯನ್ನಿಟ್ಟಿದ್ದಾನೆ?

9 ಪೌಲನು ಬರೆದುದು: “ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.” (ಕೊಲೊಸ್ಸೆ 3:14) ಯೆಹೋವನು ಕೃಪೆದೋರಿ ಈ ಬಟ್ಟೆಬರೆಯನ್ನು ನಮಗೆ ಒದಗಿಸಿದ್ದಾನೆ. ಯಾವ ವಿಧದಲ್ಲಿ? ಕ್ರೈಸ್ತರು ಪ್ರೀತಿಯನ್ನು ಪ್ರದರ್ಶಿಸಬಲ್ಲರು ಏಕೆಂದರೆ ಅದು ಯೆಹೋವನ ಪವಿತ್ರಾತ್ಮದ ದೇವದತ್ತ ಫಲಗಳಲ್ಲಿ ಒಂದಾಗಿದೆ. (ಗಲಾತ್ಯ 5:22, 23) ನಾವು ನಿತ್ಯಜೀವವನ್ನು ಹೊಂದುವಂತೆ ತನ್ನ ಏಕಜಾತ ಪುತ್ರನನ್ನು ಕಳುಹಿಸುವ ಮೂಲಕ ಯೆಹೋವನು ತಾನೇ ಅತ್ಯಂತ ಮಹಾ ಪ್ರೀತಿಯನ್ನು ಪ್ರದರ್ಶಿಸಿದ್ದಾನೆ. (ಯೋಹಾನ 3:16) ಪ್ರೀತಿಯ ಈ ಪರಮ ಪ್ರದರ್ಶನವು ಈ ಗುಣವನ್ನು ವ್ಯಕ್ತಪಡಿಸುವುದರಲ್ಲಿ ನಮಗೆ ಒಂದು ಮಾದರಿಯನ್ನು ಒದಗಿಸಿದೆ. “ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ,” ಎಂದು ಬರೆದನು ಅಪೊಸ್ತಲ ಯೋಹಾನನು.—1 ಯೋಹಾನ 4:11.

10. “ಸಹೋದರರ ಸಂಪೂರ್ಣ ಸಂಘ” ದಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?

10 ರಾಜ್ಯ ಸಭಾಗೃಹದ ಕೂಟಗಳಲ್ಲಿ ನಿಮ್ಮ ಉಪಸ್ಥಿತಿಯು, ಪ್ರೀತಿಯನ್ನು ತೋರಿಸುವ ಒಂದು ಅತ್ಯುತ್ತಮ ಸಂದರ್ಭವನ್ನು ನಿಮಗೆ ಒದಗಿಸುವುದು. ಅಲ್ಲಿ ನೀವು ಭಾರಿ ವೈವಿಧ್ಯದ ಜನರನ್ನು ಭೇಟಿಯಾಗುವಿರಿ. ನೀವು ಒಡನೆ ಅವರಲ್ಲಿ ಅನೇಕರಿಗೆ ಆಕರ್ಷಿತರಾಗುವಿರಿ ಎಂಬುದು ನಿಸ್ಸಂಶಯ. ಯೆಹೋವನನ್ನು ಸೇವಿಸುವವರಲ್ಲಿಯೂ ವ್ಯಕ್ತಿತ್ವಗಳು ಭಿನ್ನವಾಗಿವೆ ನಿಶ್ಚಯ. ಪ್ರಾಯಶಃ ಈ ಹಿಂದೆ, ನಿಮ್ಮ ಅಭಿರುಚಿಗಳಲ್ಲಿಯೋ ಸ್ವಭಾವ ಲಕ್ಷಣಗಳಲ್ಲಿಯೋ ಭಾಗಿಯಾಗದವರನ್ನು ನೀವು ಸುಮ್ಮನೆ ವರ್ಜಿಸಿರಬಹುದು. ಆದರೆ ಕ್ರೈಸ್ತರು “ಸಹೋದರರ ಸಂಪೂರ್ಣ ಸಂಘಕ್ಕೆ ಪ್ರೀತಿಯುಳ್ಳವರು” ಆಗಿರಬೇಕು. (1 ಪೇತ್ರ 2:17, NW) ಆದುದರಿಂದ, ರಾಜ್ಯ ಸಭಾಗೃಹದಲ್ಲಿರುವವರೊಡನೆ—ಪ್ರಾಯ, ವ್ಯಕ್ತಿತ್ವ, ಕುಲ ಅಥವಾ ಶಿಕ್ಷಣದ ಮಟ್ಟವು ನಿಮ್ಮದಕ್ಕಿಂತ ಭಿನ್ನವಾಗಿರಬಹುದಾದ ವ್ಯಕ್ತಿಗಳೊಂದಿಗೆ—ಪರಿಚಿತರಾಗುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿರಿ. ಪ್ರತಿಯೊಬ್ಬನು ಯಾವುದಾದರೊಂದು ಪ್ರೀತಿಪಾತ್ರವಾಗುವ ಗುಣದಲ್ಲಿ ಅತಿಶಯಿಸುತ್ತಾನೆಂದು ನೀವು ಕಂಡುಹಿಡಿಯುವುದು ಸಂಭವನೀಯ.

11. ಯೆಹೋವನ ಜನರ ಮಧ್ಯೆ ವ್ಯಕ್ತಿತ್ವಗಳ ವೈವಿಧ್ಯದಿಂದ ನೀವೇಕೆ ಕ್ಷೋಭೆಗೊಳ್ಳಬಾರದು?

11 ಸಭೆಯಲ್ಲಿ ವ್ಯಕ್ತಿತ್ವಗಳ ಅನೇಕತೆಯು ನಿಮ್ಮನ್ನು ಕ್ಷೋಭೆಗೊಳಪಡಿಸುವ ಅಗತ್ಯವಿಲ್ಲ. ದೃಷ್ಟಾಂತಕ್ಕೆ, ರಸ್ತೆಯಲ್ಲಿ ನಿಮ್ಮ ಪಕ್ಕದಲ್ಲಿ ಅನೇಕ ವಾಹನಗಳು ಪ್ರಯಾಣಿಸುತ್ತಿವೆಯೆಂದು ಭಾವಿಸಿರಿ. ಎಲ್ಲವೂ ಒಂದೇ ವೇಗದಲ್ಲಿ ಚಲಿಸುತ್ತಲೂ ಇಲ್ಲ, ಒಂದೇ ಸ್ಥಿತಿಯಲ್ಲಿಯೂ ಇರುವುದಿಲ್ಲ. ಕೆಲವು ವಾಹನಗಳು ಅನೇಕ ಮೈಲು ಪ್ರಯಾಣಿಸಿವೆ, ಆದರೆ ಬೇರೆಯವು ನಿಮ್ಮಂತೆ ಈಗ ತಾನೆ ಹೊರಟಿವೆ. ಆದರೂ ಈ ಭಿನ್ನತೆಗಳನ್ನು ಲಕ್ಷಿಸದೆ, ಎಲ್ಲವೂ ರಸ್ತೆಯಲ್ಲಿ ಪ್ರಯಾಣಿಸುತ್ತಿವೆ. ಸಭೆಯನ್ನು ರಚಿಸುವ ವ್ಯಕ್ತಿಗಳ ವಿಷಯದಲ್ಲಿಯೂ ಹೀಗೆಯೇ. ಎಲ್ಲರೂ ಕ್ರೈಸ್ತ ಗುಣಗಳನ್ನು ಒಂದೇ ವೇಗದಲ್ಲಿ ಬೆಳೆಸಿಕೊಳ್ಳುವುದಿಲ್ಲ. ಅಲ್ಲದೆ, ಎಲ್ಲರೂ ಒಂದೇ ಶಾರೀರಿಕ ಅಥವಾ ಭಾವಾತ್ಮಕ ಸ್ಥಿತಿಯಲ್ಲಿರುವುದಿಲ್ಲ. ಕೆಲವರು ಅನೇಕ ವರ್ಷಗಳಿಂದ ಯೆಹೋವನನ್ನು ಸೇವಿಸುತ್ತಿದ್ದಾರೆ; ಇತರರು ಈಗತಾನೇ ಆರಂಭಿಸಿದ್ದಾರೆ. ಆದರೂ, ಎಲ್ಲರು ನಿತ್ಯಜೀವಕ್ಕೆ ಹೋಗುವ ಮಾರ್ಗದಲ್ಲಿ, “ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆ” ಯಿಂದ ಪ್ರಯಾಣಿಸುತ್ತಿದ್ದಾರೆ. (1 ಕೊರಿಂಥ 1:10) ಆದುದರಿಂದ, ಸಭೆಯಲ್ಲಿರುವವರ ಬಲಗಳಿಗಾಗಿ—ಬಲಹೀನತೆಗಳಿಗಾಗಿಯಲ್ಲ—ನೋಡಿರಿ. ಹಾಗೆ ಮಾಡುವುದು ನಿಮ್ಮ ಹೃದಯವನ್ನು ಉಲ್ಲಾಸಗೊಳಿಸುವುದು, ಏಕೆಂದರೆ ದೇವರು ಈ ಜನರ ಮಧ್ಯೆ ನಿಜವಾಗಿಯೂ ಇದ್ದಾನೆಂದು ನೀವು ಗ್ರಹಿಸುವಿರಿ. ಮತ್ತು ನೀವು ಇಲ್ಲಿ ಇರಬಯಸುವಿರಿ ನಿಶ್ಚಯ.—1 ಕೊರಿಂಥ 14:25.

12, 13. (ಎ) ಸಭೆಯಲ್ಲಿ ಯಾರಾದರೂ ನಿಮ್ಮನ್ನು ನೋಯಿಸುವಲ್ಲಿ, ನೀವೇನು ಮಾಡಬಲ್ಲಿರಿ? (ಬಿ) ದ್ವೇಷಕ್ಕೆ ಇಂಬು ಕೊಡದಿರುವುದು ಪ್ರಾಮುಖ್ಯವೇಕೆ?

12 ಎಲ್ಲ ಮಾನವರೂ ಅಪರಿಪೂರ್ಣರಾಗಿರುವುದರಿಂದ, ಕೆಲವೊಮ್ಮೆ ಸಭೆಯಲ್ಲಿ ಯಾವನಾದರೂ ನಿಮ್ಮನ್ನು ರೇಗಿಸುವ ಏನನ್ನೋ ಹೇಳಬಹುದು ಅಥವಾ ಮಾಡಬಹುದು. (ರೋಮಾಪುರ 3:23) ಶಿಷ್ಯ ಯಾಕೋಬನು ವಾಸ್ತವಿಕವಾಗಿ ಬರೆದುದು: “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ [“ಪರಿಪೂರ್ಣ ಮನುಷ್ಯನು,” NW] . . . ಆಗಿದ್ದಾನೆ.” (ಯಾಕೋಬ 3:2) ಯಾರಾದರೂ ನಿಮ್ಮ ಮನಸ್ಸನ್ನು ನೋಯಿಸಿದರೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಬೈಬಲಿನ ಒಂದು ಜ್ಞಾನೋಕ್ತಿ ಹೇಳುವುದು: “ಮನುಷ್ಯನ ವಿವೇಕವು [“ಒಳನೋಟ,” NW] ಅವನ ಸಿಟ್ಟಿಗೆ ಅಡ್ಡಿ; [ಪರರ] ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.” (ಜ್ಞಾನೋಕ್ತಿ 19:11) ಒಳನೋಟವಿರುವುದೆಂದರೆ ಒಂದು ಸನ್ನಿವೇಶದ ಮೇಲ್ಮೈಯ ಕೆಳಗೆ ನೋಡುವುದು, ಒಂದು ನಿರ್ದಿಷ್ಟ ರೀತಿಯಲ್ಲಿ ಒಬ್ಬ ವ್ಯಕ್ತಿಯು ಮಾತಾಡುವಂತೆ ಮತ್ತು ವರ್ತಿಸುವಂತೆ ಮಾಡುವುದರ ಮೂಲಕಾರಣಗಳನ್ನು ಗ್ರಹಿಸುವುದು ಎಂದರ್ಥ. ನಮ್ಮಲ್ಲಿ ಹೆಚ್ಚಿನವರು ನಮ್ಮ ಸ್ವಂತ ದೋಷಗಳನ್ನು ಮನ್ನಿಸಲಿಕ್ಕಾಗಿ ತುಂಬ ಒಳನೋಟವನ್ನು ಬಳಸುತ್ತೇವೆ. ಇತರರ ಅಪರಿಪೂರ್ಣತೆಗಳನ್ನು ಅರ್ಥಮಾಡಿಕೊಂಡು ಅವನ್ನು ಮರೆಮಾಡಲು ಸಹ ಅದನ್ನು ಏಕೆ ಬಳಸಬಾರದು?—ಮತ್ತಾಯ 7:1-5; ಕೊಲೊಸ್ಸೆ 3:13.

13 ನಾವು ಯೆಹೋವನ ಕ್ಷಮೆಯನ್ನು ಪಡೆಯಬೇಕಾದರೆ ನಾವು ಇತರರನ್ನು ಕ್ಷಮಿಸತಕ್ಕದೆಂಬುದನ್ನು ಎಂದಿಗೂ ಮರೆಯಬೇಡಿ. (ಮತ್ತಾಯ 6:9, 12, 14, 15) ನಾವು ಸತ್ಯವನ್ನು ಆಚರಣೆಗೆ ತರುತ್ತಿರುವುದಾದರೆ, ನಾವು ಇತರರನ್ನು ಪ್ರೀತಿಯ ವಿಧದಲ್ಲಿ ಉಪಚರಿಸುವೆವು. (1 ಯೋಹಾನ 1:6, 7; 3:14-16; 4:20, 21) ಆದುದರಿಂದ, ಸಭೆಯಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಸಮಸ್ಯೆಯನ್ನು ನೀವು ಎದುರಿಸುವುದಾದರೆ, ದ್ವೇಷಕ್ಕೆ ಇಂಬುಕೊಡುವ ವಿರುದ್ಧ ಹೋರಾಡಿರಿ. ನೀವು ಪ್ರೀತಿಯನ್ನು ಧರಿಸಿರುವುದಾದರೆ, ಸಮಸ್ಯೆಯನ್ನು ಬಗೆಹರಿಸಲು ನೀವು ಪ್ರಯತ್ನಿಸುವಿರಿ ಮತ್ತು ನೀವು ಮನಸ್ಸನ್ನು ನೋಯಿಸಿದ್ದರೆ ಕ್ಷಮೆಯಾಚಿಸಲು ನೀವು ಹಿಂಜರಿಯುವುದಿಲ್ಲ.—ಮತ್ತಾಯ 5:23, 24; 18:15-17.

14. ನಾವು ಯಾವ ಗುಣಗಳನ್ನು ಧರಿಸಿಕೊಳ್ಳಬೇಕು?

14 ನಮ್ಮ ಆತ್ಮಿಕ ಉಡುಪಿನಲ್ಲಿ ಪ್ರೀತಿಗೆ ಒತ್ತಾಗಿ ಸಂಬಂಧಿಸಿದ ಇನ್ನಿತರ ಗುಣಗಳೂ ಸೇರಿರಬೇಕು. ಪೌಲನು ಬರೆದುದು: “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.” ಪ್ರೀತಿಯಲ್ಲಿ ಸೇರಿಕೊಂಡಿರುವ ಈ ಗುಣಗಳು ದೈವಭಕ್ತಿಯ “ನೂತನ ಸ್ವಭಾವ” [“ನೂತನ ವ್ಯಕ್ತಿತ್ವ,” NW]ದ ಭಾಗವಾಗಿವೆ. (ಕೊಲೊಸ್ಸೆ 3:10, 12) ನಿಮ್ಮನ್ನು ಈ ರೀತಿಯಲ್ಲಿ ಧರಿಸಿಕೊಳ್ಳಲು ನೀವು ಪ್ರಯತ್ನಪಡುವಿರೊ? ವಿಶೇಷವಾಗಿ ನೀವು ಸಹೋದರ ಪ್ರೀತಿಯನ್ನು ಧರಿಸಿಕೊಳ್ಳುವುದಾದರೆ, ಯೇಸುವಿನ ಶಿಷ್ಯರನ್ನು ಗುರುತಿಸುವ ಚಿಹ್ನೆಯು ನಿಮಗಿರುವುದು, ಏಕೆಂದರೆ ಅವನು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:35.

ಭದ್ರತೆಯ ಒಂದು ಸ್ಥಳ

15. ಸಭೆಯು ಒಂದು ಮರೆಯಂತೆ ಹೇಗಿದೆ?

15 ಸಭೆಯು ಒಂದು ಮರೆಯಾಗಿ, ನಿಮಗೆ ಭದ್ರವಾಗಿರುವ ಅನಿಸಿಕೆಯಾಗಸಾಧ್ಯವಿರುವ ಒಂದು ಸುರಕ್ಷಿತ ಆಶ್ರಯವಾಗಿಯೂ ಕಾರ್ಯನಡೆಸುತ್ತದೆ. ಅದರಲ್ಲಿ, ದೇವರ ದೃಷ್ಟಿಯಲ್ಲಿ ಸರಿಯಾಗಿರುವುದನ್ನು ಮಾಡಲು ಪ್ರಯತ್ನಿಸುವ ಪ್ರಾಮಾಣಿಕ ಹೃದಯದ ಜನರನ್ನು ನೀವು ಕಂಡುಕೊಳ್ಳುವಿರಿ. ಅವರಲ್ಲಿ ಅನೇಕರು, ನೀವು ಯಾವುದನ್ನು ಜಯಿಸಲು ಹೋರಾಡುತ್ತಿರಬಹುದೊ ಅವೇ ಕೆಟ್ಟ ಅಭ್ಯಾಸಗಳು ಮತ್ತು ಮನೋಭಾವಗಳನ್ನು ತ್ಯಜಿಸಿದ್ದಾರೆ. (ತೀತ 3:3) ಅವರು ನಿಮಗೆ ಸಹಾಯಮಾಡಬಲ್ಲರು, ಏಕೆಂದರೆ “ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ,” ಎಂದು ನಮಗೆ ಹೇಳಲಾಗುತ್ತದೆ. (ಗಲಾತ್ಯ 6:2) ಸ್ವಾಭಾವಿಕವಾಗಿ, ನಿತ್ಯಜೀವಕ್ಕೆ ನಡೆಸುವ ಪಥವನ್ನು ಬೆನ್ನಟ್ಟುವುದು, ಕಟ್ಟಕಡೆಯದಾಗಿ ನಿಮ್ಮ ಸ್ವಂತ ಜವಾಬ್ದಾರಿಯಾಗಿದೆ. (ಗಲಾತ್ಯ 6:5; ಫಿಲಿಪ್ಪಿ 2:12) ಆದರೂ, ಯೆಹೋವನು ಕ್ರೈಸ್ತ ಸಭೆಯನ್ನು, ಸಹಾಯ ಮತ್ತು ಬೆಂಬಲದ ಒಂದು ಅದ್ಭುತಕರವಾದ ಸಾಧನವಾಗಿ ಒದಗಿಸಿದ್ದಾನೆ. ನಿಮ್ಮ ಸಮಸ್ಯೆಗಳು ಎಷ್ಟೇ ಸಂಕಟಕರವಾಗಿರಲಿ, ನಿಮಗೆ ದೊರೆಯಬಲ್ಲ ಅಮೂಲ್ಯವಾದ ಸಂಪನ್ಮೂಲವೊಂದಿದೆ—ಕ್ಲೇಶ ಅಥವಾ ನಷ್ಟದ ಸಮಯಗಳಲ್ಲಿ ನಿಮಗೆ ಬೆಂಬಲಕೊಟ್ಟು ನಿಲ್ಲುವ ಪ್ರೀತಿಯ ಒಂದು ಸಭೆ.—ಹೋಲಿಸಿ ಲೂಕ 10:29-37; ಅ. ಕೃತ್ಯಗಳು 20:35.

16. ಸಭೆಯ ಹಿರಿಯರು ಯಾವ ನೆರವನ್ನು ಒದಗಿಸುತ್ತಾರೆ?

16 ನಿಮ್ಮ ಬೆಂಬಲಕ್ಕಾಗಿ ಒಟ್ಟುಸೇರುವವರಲ್ಲಿ “ಮನುಷ್ಯರಿಗೆ ದಾನಗಳು,” [“ಪುರುಷರಲ್ಲಿ ಕೊಡುಗೆಗಳು,” NW]—ಇಚ್ಛಾಪೂರ್ವಕವಾಗಿ ಮತ್ತು ಅತ್ಯಾಸಕ್ತಿಯಿಂದ ಹಿಂಡನ್ನು ಪಾಲಿಸುವ ಸಭೆಯ ನೇಮಿತ ಹಿರಿಯರು, ಅಥವಾ ಮೇಲ್ವಿಚಾರಕರು ಇದ್ದಾರೆ. (ಎಫೆಸ 4:8, 11, 12; ಅ. ಕೃತ್ಯಗಳು 20:28; 1 ಪೇತ್ರ 5:2, 3) ಅವರ ಕುರಿತು ಯೆಶಾಯನು ಪ್ರವಾದಿಸಿದ್ದು: “ಮತ್ತು ಒಬ್ಬ ಪುರುಷನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.”—ಯೆಶಾಯ 32:2.

17. (ಎ) ಯೇಸುವು ವಿಶೇಷವಾಗಿ ಯಾವ ರೀತಿಯ ಸಹಾಯವನ್ನು ಕೊಡಲು ಬಯಸಿದನು? (ಬಿ) ತನ್ನ ಜನರಿಗೆ ಯಾವ ಒದಗಿಸುವಿಕೆಯನ್ನು ಮಾಡುವ ವಚನವನ್ನು ದೇವರು ಕೊಟ್ಟನು?

17 ಯೇಸುವು ಭೂಮಿಯಲ್ಲಿದ್ದಾಗ, ಧಾರ್ಮಿಕ ನೇತಾರರ ಪ್ರೀತಿಯ ಮೇಲ್ವಿಚಾರಣೆಯು ದುಃಖಕರವಾಗಿ ಕೊರತೆಯುಳ್ಳದ್ದಾಗಿತ್ತು. ಜನರ ಸ್ಥಿತಿಗತಿಯು ಅವನ ಮನಸ್ಸನ್ನು ಆಳವಾಗಿ ಕರಗಿಸಿತು, ಮತ್ತು ಅವರಿಗೆ ವಿಶೇಷವಾಗಿ ಆತ್ಮಿಕವಾಗಿ ಸಹಾಯಮಾಡಲು ಅವನು ಬಯಸಿದನು. “ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ” ಎಂದು ಯೇಸು ಅವರ ಮೇಲೆ ಕನಿಕರಪಟ್ಟನು. (ಮತ್ತಾಯ 9:36) ಇದು ಈ ದಿನದಲ್ಲಿ ಯಾತನಾಮಯ ಸಮಸ್ಯೆಗಳನ್ನು ತಾಳಿಕೊಂಡರೂ ಆತ್ಮಿಕ ಸಹಾಯ ಮತ್ತು ದುಃಖಶಮನಕ್ಕಾಗಿ ಹೋಗಲು ಯಾರೂ ಇಲ್ಲದ ಅನೇಕರ ಅವಸ್ಥೆಯನ್ನು ಎಷ್ಟು ಚೆನ್ನಾಗಿ ವರ್ಣಿಸುತ್ತದೆ! ಆದರೆ ಯೆಹೋವನ ಜನರಿಗೆ ಆತ್ಮಿಕ ಸಹಾಯ ನಿಶ್ಚಯವಾಗಿಯೂ ಇದೆ, ಏಕೆಂದರೆ ಆತನು ವಚನ ಕೊಟ್ಟದ್ದು: “ನಾನು ಅವುಗಳ ಮೇಲೆ ಕುರುಬರನ್ನು ನೇಮಿಸುವೆನು, ಅವರು ಅವುಗಳನ್ನು ಮೇಯಿಸುವರು; ಅವು ಇನ್ನು ಭಯಪಡವು, ಬೆದರವು, ಅವುಗಳಲ್ಲಿ ಒಂದೂ ಕಡಿಮೆಯಾಗದು.”—ಯೆರೆಮೀಯ 23:4.

18. ನಮಗೆ ಆತ್ಮಿಕ ಸಹಾಯ ಅಗತ್ಯವಿದ್ದರೆ ನಾವೇಕೆ ಒಬ್ಬ ಹಿರಿಯನನ್ನು ಸಮೀಪಿಸಬೇಕು?

18 ಸಭೆಯ ನೇಮಿತ ಹಿರಿಯರ ಪರಿಚಯ ಮಾಡಿಕೊಳ್ಳಿರಿ. ಅವರಿಗೆ ದೇವರ ಜ್ಞಾನವನ್ನು ಅನ್ವಯಿಸುವುದರಲ್ಲಿ ಹೆಚ್ಚು ಅನುಭವವಿದೆ, ಏಕೆಂದರೆ ಬೈಬಲಿನಲ್ಲಿ ಕೊಡಲ್ಪಟ್ಟಿರುವ ಮೇಲ್ವಿಚಾರಕರ ಅರ್ಹತೆಗಳನ್ನು ಅವರು ತಲಪಿದ್ದಾರೆ. (1 ತಿಮೊಥೆಯ 3:1-7; ತೀತ 1:5-9) ದೇವರ ಆವಶ್ಯಕತೆಗಳೊಂದಿಗೆ ಘರ್ಷಿಸುವ ಒಂದು ಚಟವನ್ನು ಅಥವಾ ಒಂದು ಗುಣವನ್ನು ಜಯಿಸಲು ನಿಮಗೆ ಆತ್ಮಿಕ ಸಹಾಯವು ಅವಶ್ಯವಿರುವಲ್ಲಿ, ಅವರಲ್ಲಿ ಒಬ್ಬನನ್ನು ಸಮೀಪಿಸಲು ಹಿಂಜರಿಯಬೇಡಿರಿ. ಹಿರಿಯರು ಪೌಲನ ಈ ಸಲಹೆಯನ್ನು ಅನುಸರಿಸುತ್ತಾರೆಂದು ನೀವು ಕಂಡುಕೊಳ್ಳುವಿರಿ: “ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರಲ್ಲಿಯೂ ದೀರ್ಘಶಾಂತರಾಗಿರಿ.”—1 ಥೆಸಲೊನೀಕ 2:7, 8; 5:14.

ಯೆಹೋವನ ಜನರೊಂದಿಗೆ ಭದ್ರತೆಯನ್ನು ಅನುಭವಿಸಿರಿ

19. ತನ್ನ ಸಂಸ್ಥೆಯೊಳಗೆ ಭದ್ರತೆಯನ್ನು ಹುಡುಕುವವರಿಗೆ ಯೆಹೋವನು ಯಾವ ಆಶೀರ್ವಾದಗಳನ್ನು ಅನುಗ್ರಹಿಸಿದ್ದಾನೆ?

19 ನಾವು ಅಪರಿಪೂರ್ಣ ಪರಿಸ್ಥಿತಿಗಳ ಮಧ್ಯೆ ಈಗ ಜೀವಿಸುತ್ತೇವಾದರೂ, ಯೆಹೋವನು ನಮಗೆ ಆತ್ಮಿಕ ಆಹಾರ, ಬಟ್ಟೆ ಮತ್ತು ಆಶ್ರಯವನ್ನು ಒದಗಿಸುತ್ತಾನೆ. ಒಂದು ಭೌತಿಕ ಪ್ರಮೋದವನದ ಪ್ರಯೋಜನಗಳನ್ನು ಅನುಭವಿಸಲು ದೇವರ ವಾಗ್ದಾನಿತ ನೂತನ ಲೋಕಕ್ಕಾಗಿ ನಾವು ಕಾಯಬೇಕೆಂಬುದು ನಿಶ್ಚಯ. ಆದರೆ ಯೆಹೋವನ ಸಂಸ್ಥೆಯ ಭಾಗವಾಗಿರುವವರು ಸದ್ಯ ಒಂದು ಆತ್ಮಿಕ ಪ್ರಮೋದವನದ ಭದ್ರತೆಯನ್ನು ಅನುಭವಿಸುತ್ತಿದ್ದಾರೆ. ಅವರ ಕುರಿತು ಯೆಹೆಜ್ಕೇಲನು ಪ್ರವಾದಿಸಿದ್ದು: “ಅವರು ಯಾರಿಗೂ ಹೆದರದೆ ನೆಮ್ಮದಿಯಾಗಿ ವಾಸಿಸುವರು.”—ಯೆಹೆಜ್ಕೇಲ 34:28; ಕೀರ್ತನೆ 4:8.

20. ಆತನ ಆರಾಧನೆಗಾಗಿ ನಾವು ತ್ಯಾಗಮಾಡಬಹುದಾದ ಯಾವುದಕ್ಕೂ ಯೆಹೋವನು ಹೇಗೆ ಪ್ರತಿಫಲವನ್ನು ಕೊಡುವನು?

20 ಯೆಹೋವನು ತನ್ನ ವಾಕ್ಯ ಮತ್ತು ಸಂಸ್ಥೆಯ ಮೂಲಕ ಪ್ರೀತಿಯ ಆತ್ಮಿಕ ಒದಗಿಸುವಿಕೆಗಳನ್ನು ಮಾಡುವುದಕ್ಕೆ ನಾವೆಷ್ಟು ಕೃತಜ್ಞರಾಗಿರಬಲ್ಲೆವು! ದೇವಜನರ ಸಮೀಪಕ್ಕೆ ಬನ್ನಿರಿ. ನೀವು ದೇವರ ಜ್ಞಾನವನ್ನು ತೆಗೆದುಕೊಳ್ಳುವುದಕ್ಕಾಗಿ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳು ಏನು ಯೋಚಿಸಾರು ಎಂದು ಭಯಪಟ್ಟು ಹಿಮ್ಮೆಟ್ಟಬೇಡಿರಿ. ನೀವು ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸ ಮಾಡುತ್ತಿರುವುದರಿಂದ ಮತ್ತು ರಾಜ್ಯ ಸಭಾಗೃಹದಲ್ಲಿ ಕೂಟಗಳಲ್ಲಿ ಉಪಸ್ಥಿತರಾಗುತ್ತಿರುವುದರಿಂದ ಕೆಲವರು ಅಸಮ್ಮತಿಸಬಹುದು. ಆದರೆ ದೇವರು ಆತನ ಆರಾಧನೆಗಾಗಿ ನೀವು ಏನು ತ್ಯಾಗಮಾಡಿದ್ದೀರೋ ಅದಕ್ಕಿಂತ ಹೆಚ್ಚಿನ ಪ್ರತಿಫಲವನ್ನು ಕೊಡುವನು. (ಮಲಾಕಿಯ 3:10) ಅದಲ್ಲದೆ, ಯೇಸು ಹೇಳಿದ್ದು: “ಯಾವನು ನನ್ನ ನಿಮಿತ್ತವೂ ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟು ಬಿಟ್ಟಿರುವನೋ ಅವನಿಗೆ ಈಗಿನ ಕಾಲದಲ್ಲಿ ಮನೆ ಅಣ್ಣ ತಮ್ಮ ಅಕ್ಕ ತಂಗಿ ತಾಯಿ ಮಕ್ಕಳು ಭೂಮಿ ಇವೆಲ್ಲವೂ ಹಿಂಸೆಗಳು ಸಹಿತವಾಗಿ ನೂರರಷ್ಟು ಸಿಕ್ಕೇ ಸಿಕ್ಕುತ್ತವೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು.” (ಮಾರ್ಕ 10:29, 30) ಹೌದು, ನೀವು ಏನೇ ಬಿಟ್ಟುಬಂದಿರಲಿ ಅಥವಾ ತಾಳಿಕೊಳ್ಳಬೇಕಾಗಿ ಬರಲಿ, ನೀವು ದೇವಜನರ ಮಧ್ಯೆ ಆಹ್ಲಾದಕರವಾದ ಒಡನಾಟ ಮತ್ತು ಆತ್ಮಿಕ ಭದ್ರತೆಯನ್ನು ಕಂಡುಕೊಳ್ಳುವಿರಿ.

ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ

“ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಯಾರು?

ನಮ್ಮನ್ನು ಆತ್ಮಿಕವಾಗಿ ಉಣಿಸಲು ಯೆಹೋವನು ಯಾವ ಒದಗಿಸುವಿಕೆಯನ್ನು ಮಾಡಿದ್ದಾನೆ?

ಕ್ರೈಸ್ತ ಸಭೆಯಲ್ಲಿರುವವರು ನಮಗೆ ಹೇಗೆ ಸಹಾಯ ಮಾಡಬಲ್ಲರು?

[ಅಧ್ಯಯನ ಪ್ರಶ್ನೆಗಳು]

[ಪುಟ 165ರಲ್ಲಿ ಇಡೀ ಪುಟದ ಚಿತ್ರ]