ದೇವರನ್ನು ಸದಾಕಾಲ ಸೇವಿಸುವುದನ್ನು ನಿಮ್ಮ ಗುರಿಯಾಗಿ ಮಾಡಿಕೊಳ್ಳಿರಿ
ಅಧ್ಯಾಯ 18
ದೇವರನ್ನು ಸದಾಕಾಲ ಸೇವಿಸುವುದನ್ನು ನಿಮ್ಮ ಗುರಿಯಾಗಿ ಮಾಡಿಕೊಳ್ಳಿರಿ
1, 2. ದೇವರ ಜ್ಞಾನದ ಸ್ವಾಮ್ಯವಲ್ಲದೆ ಇನ್ನೇನು ಅವಶ್ಯವಿದೆ?
ನೀವು ಮಹಾ ನಿಕ್ಷೇಪಗಳಿರುವ ಒಂದು ಕೋಣೆಗೆ ನಡೆಸುವ ಬೀಗ ಹಾಕಿದ ಬಾಗಿಲ ಮುಂದೆ ನಿಂತಿದ್ದೀರಿ ಎಂದು ಭಾವಿಸಿರಿ. ಒಬ್ಬ ಅಧಿಕೃತ ವ್ಯಕ್ತಿಯು ನಿಮಗೆ ಕೀಲಿ ಕೈಯನ್ನು ಕೊಟ್ಟು, ಈ ಅಮೂಲ್ಯ ವಸ್ತುಗಳಲ್ಲಿ ಏನು ಬೇಕಾದರೂ ತೆಗೆದುಕೊಳ್ಳಬಹುದೆಂದು ಹೇಳಿದ್ದಾನೆ ಎಂದುಕೊಳ್ಳೋಣ. ಆ ಕೀಲಿ ಕೈಯನ್ನು ಬಳಸುವ ಹೊರತು ಅದು ನಿಮಗೆ ಯಾವ ಒಳಿತನ್ನೂ ಮಾಡದು. ಅದೇ ರೀತಿ, ಜ್ಞಾನವು ನಿಮಗೆ ಪ್ರಯೋಜನವನ್ನು ತರಬೇಕಾದರೆ, ನೀವು ಅದನ್ನು ಬಳಸಬೇಕು.
2 ದೇವರ ಜ್ಞಾನದ ವಿಷಯದಲ್ಲಿ ಇದು ಪ್ರತ್ಯೇಕವಾಗಿ ಸತ್ಯ. ವಾಸ್ತವವಾಗಿ, ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ನಿಷ್ಕೃಷ್ಟ ಜ್ಞಾನವು ನಿತ್ಯಜೀವವೆಂದರ್ಥ. (ಯೋಹಾನ 17:3) ಆದರೂ, ಆ ಜ್ಞಾನದ ಬರಿಯ ಸ್ವಾಮ್ಯದ ಮೂಲಕ ಆ ಪ್ರತೀಕ್ಷೆಯನ್ನು ಸಿದ್ಧಿಸಿಕೊಳ್ಳಸಾಧ್ಯವಿಲ್ಲ. ನೀವು ಒಂದು ಬೆಲೆಬಾಳುವ ಕೀಲಿ ಕೈಯನ್ನು ಉಪಯೋಗಿಸುವಂತೆಯೇ, ನಿಮ್ಮ ಜೀವನದಲ್ಲಿ ದೇವರ ಜ್ಞಾನವನ್ನು ಅನ್ವಯಿಸಿಕೊಳ್ಳುವ ಆವಶ್ಯಕತೆ ನಿಮಗಿದೆ. ದೇವರ ಇಷ್ಟವನ್ನು ಮಾಡುವವರು “ಪರಲೋಕರಾಜ್ಯಕ್ಕೆ ಸೇರು” ವರು ಎಂದು ಯೇಸು ಹೇಳಿದನು. ಅಂತಹ ವ್ಯಕ್ತಿಗಳು ದೇವರನ್ನು ಸದಾಕಾಲ ಸೇವಿಸಲು ಸುಯೋಗವುಳ್ಳವರಾಗಸಾಧ್ಯವಿದೆ.—ಮತ್ತಾಯ 7:21; 1 ಯೋಹಾನ 2:17.
3. ನಮಗಾಗಿ ದೇವರ ಇಷ್ಟವೇನು?
3 ದೇವರ ಇಷ್ಟವೇನೆಂದು ಕಲಿತ ಬಳಿಕ ಅದನ್ನು ಮಾಡುವುದು ಮಹತ್ವದ್ದು. ನಿಮಗಾಗಿರುವ ದೇವರ ಇಷ್ಟವೇನೆಂದು ನೀವು ಯೋಚಿಸುತ್ತೀರಿ? ಅದನ್ನು ಈ ಮಾತುಗಳಲ್ಲಿ ಚೆನ್ನಾಗಿ ಸಾರಾಂಶಿಸಸಾಧ್ಯವಿದೆ: ಯೇಸುವನ್ನು ಅನುಕರಿಸಿರಿ. ಒಂದನೆಯ ಪೇತ್ರ 2:21 ನಮಗನ್ನುವುದು: “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” ಹಾಗಾದರೆ ದೇವರ ಇಷ್ಟವನ್ನು ಮಾಡಬೇಕಾದರೆ, ನೀವು ಎಷ್ಟು ಒತ್ತಾಗಿ ಸಾಧ್ಯವೊ ಅಷ್ಟು ಒತ್ತಾಗಿ ಯೇಸುವಿನ ಮಾದರಿಯನ್ನು ಅನುಸರಿಸುವುದು ಅವಶ್ಯ. ದೇವರ ಜ್ಞಾನವನ್ನು ನೀವು ಉಪಯೋಗಕ್ಕೆ ಹಾಕುವುದು ಹಾಗೆಯೆ.
ಯೇಸುವು ದೇವರ ಜ್ಞಾನವನ್ನು ಉಪಯೋಗಿಸಿದ ವಿಧ
4. ಯೇಸುವಿಗೆ ಯೆಹೋವನ ವಿಷಯದಲ್ಲಿ ಅಷ್ಟೊಂದು ಏಕೆ ಗೊತ್ತಿದೆ, ಮತ್ತು ಈ ಜ್ಞಾನವನ್ನು ಅವನು ಹೇಗೆ ಉಪಯೋಗಿಸಿದ್ದಾನೆ?
4 ಇತರರಿಗಿರುವುದಕ್ಕಿಂತ ಹೆಚ್ಚು ಆಪ್ತವಾದ ದೇವರ ಜ್ಞಾನ ಯೇಸು ಕ್ರಿಸ್ತನಿಗಿದೆ. ಭೂಮಿಗೆ ಬರುವ ಮುನ್ನ ಅವನು ಸ್ವರ್ಗದಲ್ಲಿ ಯುಗಾಂತರಗಳಿಂದ ಯೆಹೋವ ದೇವರೊಂದಿಗೆ ಜೀವಿಸಿದನು ಮತ್ತು ಕೆಲಸಮಾಡಿದನು. (ಕೊಲೊಸ್ಸೆ 1:15, 16) ಮತ್ತು ಆ ಎಲ್ಲ ಜ್ಞಾನವನ್ನು ಯೇಸು ಏನು ಮಾಡಿದನು? ಅದರ ಬರಿಯ ಸ್ವಾಮ್ಯದಿಂದ ಅವನು ತೃಪ್ತನಾಗಲಿಲ್ಲ. ಯೇಸು ಅದರಂತೆ ಜೀವಿಸಿದನು. ಆ ಕಾರಣದಿಂದಲೇ ಅವನು ತನ್ನ ಜೊತೆ ಮಾನವರೊಂದಿಗಿನ ತನ್ನ ವ್ಯವಹಾರಗಳಲ್ಲಿ ಅಷ್ಟು ದಯೆಯುಳ್ಳವನು, ತಾಳ್ಮೆಯುಳ್ಳವನು ಮತ್ತು ಪ್ರೀತಿಸುವವನು ಆಗಿದ್ದನು. ಯೇಸುವು ಹೀಗೆ ತನ್ನ ಸ್ವರ್ಗೀಯ ಪಿತನನ್ನು ಅನುಕರಿಸಿ, ಯೆಹೋವನ ಮಾರ್ಗಗಳ ಮತ್ತು ವ್ಯಕ್ತಿತ್ವದ ತನ್ನ ಜ್ಞಾನಕ್ಕನುಸಾರವಾಗಿ ವರ್ತಿಸುತ್ತಿದ್ದನು.—ಯೋಹಾನ 8:23, 28, 29, 38; 1 ಯೋಹಾನ 4:8.
5. ಯೇಸು ಏಕೆ ದೀಕ್ಷಾಸ್ನಾನ ಹೊಂದಿದನು, ಮತ್ತು ಅವನು ತನ್ನ ದೀಕ್ಷಾಸ್ನಾನದ ಅರ್ಥಕ್ಕೆ ತಕ್ಕಂತೆ ಹೇಗೆ ಜೀವಿಸಿದನು?
5 ಯೇಸುವಿನಲ್ಲಿದ್ದ ಜ್ಞಾನವು ಒಂದು ನಿರ್ಧಾರಕ ಹೆಜ್ಜೆಯನ್ನು ಅವನು ತೆಗೆದುಕೊಳ್ಳುವಂತೆಯೂ ಅವನನ್ನು ಪ್ರಚೋದಿಸಿತ್ತು. ಅವನು ಗಲಿಲಾಯದಿಂದ ಯೊರ್ದನ್ ನದಿಗೆ ಬಂದನು; ಅಲ್ಲಿ ಯೋಹಾನನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. (ಮತ್ತಾಯ 3:13-15) ಯೇಸುವಿನ ದೀಕ್ಷಾಸ್ನಾನವು ಏನನ್ನು ಸಂಕೇತಿಸಿತು? ಯೆಹೂದ್ಯನೋಪಾದಿ, ಅವನು ದೇವರಿಗೆ ಸಮರ್ಪಿತವಾಗಿದ್ದ ಒಂದು ಜನಾಂಗದೊಳಕ್ಕೆ ಹುಟ್ಟಿದನು. ಆದಕಾರಣ, ಯೇಸುವು ಹುಟ್ಟಿನಿಂದ ಸಮರ್ಪಿತನಾಗಿದ್ದನು. (ವಿಮೋಚನಕಾಂಡ 19:5, 6) ದೀಕ್ಷಾಸ್ನಾನಕ್ಕೆ ಸಮ್ಮತಿಸುವ ಮೂಲಕ, ಅವನು ಆ ಸಮಯದಲ್ಲಿ ತನಗಾಗಿ ಇದ್ದ ದೈವಿಕ ಇಷ್ಟವನ್ನು ಮಾಡಲು ಯೆಹೋವನಿಗೆ ತನ್ನನ್ನು ನೀಡಿಕೊಳ್ಳುತ್ತಿದ್ದನು. (ಇಬ್ರಿಯ 10:5, 7) ಮತ್ತು ಯೇಸುವು ತನ್ನ ದೀಕ್ಷಾಸ್ನಾನದ ಅರ್ಥಕ್ಕನುಸಾರ ಜೀವಿಸಿದನು. ದೇವರ ಜ್ಞಾನವನ್ನು ಪ್ರತಿ ಸಂದರ್ಭದಲ್ಲಿ ಜನರೊಂದಿಗೆ ಹಂಚಿಕೊಳ್ಳುತ್ತಾ, ಅವನು ಯೆಹೋವನ ಸೇವೆಯಲ್ಲಿ ತನ್ನನ್ನು ವ್ಯಯಿಸಿಕೊಂಡನು. ಅದು ತನಗೆ ಆಹಾರದಂತೆಯೂ ಇತ್ತು ಎಂದು ಹೇಳುತ್ತಾ, ಯೇಸುವು ದೇವರ ಇಷ್ಟವನ್ನು ಮಾಡುವುದರಲ್ಲಿ ಸಂತೋಷವನ್ನು ಕಂಡುಕೊಂಡನು.—ಯೋಹಾನ 4:34.
6. ಯೇಸು ತನ್ನನ್ನು ಯಾವ ರೀತಿಯಲ್ಲಿ ನಿರಾಕರಿಸಿಕೊಂಡನು?
6 ಯೆಹೋವನ ಇಷ್ಟವನ್ನು ಮಾಡುವುದು ತೀರ ದುಬಾರಿಯದ್ದು—ಅದಕ್ಕೆ ಅವನ ಜೀವವೂ ನಷ್ಟವಾಗುವುದು—ಎಂದು ಯೇಸುವು ಪೂರ್ಣವಾಗಿ ಗ್ರಹಿಸಿದ್ದನು. ಆದರೂ ಯೇಸು ತನ್ನನ್ನು ನಿರಾಕರಿಸಿ, ತನ್ನ ಸ್ವಂತ ಆವಶ್ಯಕತೆಗಳನ್ನು ಎರಡನೆಯ ಸ್ಥಾನದಲ್ಲಿಟ್ಟನು. ದೇವರ ಇಷ್ಟವನ್ನು ಮಾಡುವುದು ಸದಾ ಪ್ರಥಮವಾಗಿತ್ತು. ಈ ಸಂಬಂಧದಲ್ಲಿ, ಯೇಸುವಿನ ಪರಿಪೂರ್ಣ ಮಾದರಿಯನ್ನು ನಾವು ಹೇಗೆ ಅನುಸರಿಸಬಲ್ಲೆವು?
ನಿತ್ಯಜೀವಕ್ಕೆ ನಡೆಸುವ ಹೆಜ್ಜೆಗಳು
7. ದೀಕ್ಷಾಸ್ನಾನಕ್ಕೆ ಅರ್ಹನಾಗಲು ಒಬ್ಬನು ತೆಗೆದುಕೊಳ್ಳಬೇಕಾದ ಕೆಲವು ಹೆಜ್ಜೆಗಳಾವುವು?
7 ಯೇಸುವಿಗೆ ಅಸದೃಶವಾಗಿ, ನಾವು ಅಪರಿಪೂರ್ಣರು ಮತ್ತು ದೀಕ್ಷಾಸ್ನಾನದ ಜೀವನ ಘಟ್ಟವನ್ನು, ಇತರ ಮಹತ್ವದ ಹೆಜ್ಜೆಗಳನ್ನು ತೆಗೆದುಕೊಂಡ ಬಳಿಕ ಮಾತ್ರ ಮುಟ್ಟಬಲ್ಲೆವು. ಇದು ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ನಿಷ್ಕೃಷ್ಟ ಜ್ಞಾನವನ್ನು ನಮ್ಮ ಹೃದಯದೊಳಕ್ಕೆ ತೆಗೆದುಕೊಳ್ಳುವ ಮೂಲಕ ಆರಂಭವಾಗುತ್ತದೆ. ಹೀಗೆ ಮಾಡುವುದು ನಾವು ನಂಬಿಕೆಯನ್ನಿಡುವಂತೆಯೂ ದೇವರಿಗೆ ಗಾಢವಾದ ಪ್ರೀತಿಯುಳ್ಳವರಾಗುವಂತೆಯೂ ಮಾಡುತ್ತದೆ. (ಮತ್ತಾಯ 22:37-40; ರೋಮಾಪುರ 10:17; ಇಬ್ರಿಯ 11:6) ದೇವರ ನಿಯಮಗಳು, ಮೂಲಸೂತ್ರಗಳು ಮತ್ತು ಮಟ್ಟಗಳಿಗೆ ಹೊಂದಿಕೊಳ್ಳುವಿಕೆಯು ನಾವು ಪಶ್ಚಾತ್ತಾಪಪಡುವಂತೆ, ನಮ್ಮ ಗತ ಪಾಪಗಳಿಗೆ ದೈವಭಕ್ತಿಯ ಶೋಕವನ್ನು ವ್ಯಕ್ತಪಡಿಸುವಂತೆ ಪ್ರೇರಿಸಬೇಕು. ಇದು ಪರಿವರ್ತನೆಗೆ, ಅಂದರೆ ದೇವರ ಜ್ಞಾನವು ನಮ್ಮಲ್ಲಿರದಿದ್ದಾಗ ನಾವು ಅನುಸರಿಸಿದ ಯಾವುದೇ ತಪ್ಪು ಮಾರ್ಗದಿಂದ ಹಿಂದೆ ತಿರುಗಿ ಅದನ್ನು ತ್ಯಜಿಸುವುದಕ್ಕೆ ನಡೆಸುತ್ತದೆ. (ಅ. ಕೃತ್ಯಗಳು 3:19) ಸಹಜವಾಗಿಯೇ, ನಾವು ಯಾವುದು ನೀತಿಯೋ ಅದನ್ನು ಮಾಡುವ ಬದಲು ರಹಸ್ಯವಾಗಿ ಇನ್ನೂ ಯಾವುದಾದರೂ ಪಾಪವನ್ನು ಮಾಡುತ್ತಿರುವುದಾದರೆ ನಾವು ನಿಜವಾಗಿಯೂ ಹಿಂದೆ ತಿರುಗಿರುವುದೂ ಇಲ್ಲ, ದೇವರನ್ನು ಮೋಸಗೊಳಿಸಿರುವುದೂ ಇಲ್ಲ. ಯೆಹೋವನು ಸಕಲ ಕಪಟವನ್ನು ಕಂಡುಹಿಡಿಯುತ್ತಾನೆ.—ಲೂಕ 12:2, 3.
8. ರಾಜ್ಯ ಸಾರುವಿಕೆಯ ಚಟುವಟಿಕೆಯಲ್ಲಿ ಭಾಗವಹಿಸಲು ಬಯಸುವಾಗ ನೀವು ಯಾವ ಕ್ರಮವನ್ನು ಕೈಕೊಳ್ಳಬೇಕು?
8 ನೀವು ಈಗ ದೇವರ ಜ್ಞಾನವನ್ನು ಒಳಗೆ ತೆಗೆದುಕೊಳ್ಳುತ್ತಿರುವುದರಿಂದ, ಆತ್ಮಿಕ ವಿಷಯಗಳನ್ನು ತೀರ ವೈಯಕ್ತಿಕವಾದ ರೀತಿಯಲ್ಲಿ ಪರಿಗಣಿಸುವುದು ಯೋಗ್ಯವಾಗಿರುವುದಿಲ್ಲವೆ? ನೀವು ಕಲಿಯುತ್ತಿರುವ ವಿಷಯಗಳನ್ನು ಪ್ರಾಯಶಃ ನೀವು ನಿಮ್ಮ ಸಂಬಂಧಿಕರಿಗೆ, ಮಿತ್ರರಿಗೆ ಮತ್ತು ಇತರರಿಗೆ ತಿಳಿಸಲು ಆತುರವುಳ್ಳವರಾಗಿದ್ದೀರಿ. ಕಾರ್ಯತಃ, ಯೇಸುವು ಅನೌಪಚಾರಿಕ ಸನ್ನಿವೇಶಗಳಲ್ಲಿ ಇತರರೊಂದಿಗೆ ಸುವಾರ್ತೆಯಲ್ಲಿ ಭಾಗಿಯಾದಂತೆಯೇ, ನೀವು ಆಗಲೆ ಇದನ್ನು ಮಾಡುತ್ತಿರಬಹುದು. (ಲೂಕ 10:38, 39; ಯೋಹಾನ 4:6-15) ಈಗ ನೀವು ಇನ್ನೂ ಹೆಚ್ಚನ್ನು ಮಾಡಲು ಬಯಸಬಹುದು. ಯೆಹೋವನ ಸಾಕ್ಷಿಗಳ ಕ್ರಮವಾದ ರಾಜ್ಯ ಸಾರುವಿಕೆಯ ಚಟುವಟಿಕೆಯಲ್ಲಿ ಸ್ವಲ್ಪವಾದರೂ ಭಾಗವಹಿಸಲು ನೀವು ಅರ್ಹರೂ ಶಕ್ತರೂ ಆಗಿದ್ದೀರೊ ಎಂದು ನಿರ್ಧರಿಸಲಿಕ್ಕಾಗಿ ಕ್ರೈಸ್ತ ಹಿರಿಯರು ನಿಮ್ಮೊಂದಿಗೆ ಮಾತನಾಡಲು ಸಂತೋಷಿಸುವರು. ನೀವು ಅರ್ಹರೂ ಶಕ್ತರೂ ಆಗಿರುವಲ್ಲಿ, ಒಬ್ಬ ಸಾಕ್ಷಿಯ ಜೊತೆಯಲ್ಲಿ ಶುಶ್ರೂಷೆಯಲ್ಲಿ ಹೋಗುವಂತೆ ಹಿರಿಯರು ಏರ್ಪಾಡುಗಳನ್ನು ಮಾಡುವರು. ಯೇಸುವಿನ ಶಿಷ್ಯರು ತಮ್ಮ ಶುಶ್ರೂಷೆಯನ್ನು ಕ್ರಮಬದ್ಧವಾದ ರೀತಿಯಲ್ಲಿ ನೆರವೇರಿಸುವಂತೆ ಅವನ ಉಪದೇಶಗಳನ್ನು ಅನುಸರಿಸಿದರು. (ಮಾರ್ಕ 6:7, 30; ಲೂಕ 10:1) ನೀವು ರಾಜ್ಯ ಸಂದೇಶವನ್ನು ಮನೆಯಿಂದ ಮನೆಗೆ ಮತ್ತು ಇತರ ವಿಧಗಳಲ್ಲಿ ಹಬ್ಬಿಸುವುದರಲ್ಲಿ ಪಾಲಿಗರಾಗುವಾಗ ತದ್ರೀತಿಯ ಸಹಾಯದಿಂದ ಪ್ರಯೋಜನ ಪಡೆಯುವಿರಿ.—ಅ. ಕೃತ್ಯಗಳು 20:20, 21.
9. ಒಬ್ಬ ವ್ಯಕ್ತಿಯು ದೇವರಿಗೆ ಸಮರ್ಪಣೆಯನ್ನು ಮಾಡುವುದು ಹೇಗೆ, ಮತ್ತು ಸಮರ್ಪಣೆಯು ಆ ವ್ಯಕ್ತಿಯ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
9 ಸಭೆಯ ಟೆರಿಟೊರಿಯಲ್ಲಿ ಎಲ್ಲ ತರಹದ ಜನರಿಗೆ ಸುವಾರ್ತೆಯನ್ನು ಸಾರುವುದು, ನೀತಿಪ್ರವೃತ್ತಿಯುಳ್ಳವರನ್ನು ಕಂಡುಹಿಡಿಯುವ ಒಂದು ವಿಧವಾಗಿದ್ದು, ನಿಮ್ಮಲ್ಲಿ ನಂಬಿಕೆಯಿದೆಯೆಂದು ರುಜುಪಡಿಸುವ ಸತ್ಕಾರ್ಯಗಳಲ್ಲಿ ಒಂದಾಗಿದೆ. (ಅ. ಕೃತ್ಯಗಳು 10:34, 35; ಯಾಕೋಬ 2:17, 18, 26) ಕ್ರೈಸ್ತ ಕೂಟಗಳಲ್ಲಿ ಕ್ರಮವಾದ ಉಪಸ್ಥಿತಿ ಮತ್ತು ಸಾರುವ ಕಾರ್ಯದಲ್ಲಿ ಅರ್ಥವತ್ತಾದ ಭಾಗ—ಇವು ಕೂಡ ನೀವು ಪಶ್ಚಾತ್ತಾಪಪಟ್ಟು, ಪರಿವರ್ತಿತರಾಗಿ, ಈಗ ದೇವರ ಜ್ಞಾನಾನುಸಾರ ಜೀವಿಸಲು ನಿರ್ಧರಿಸಿದ್ದೀರೆಂದು ಪ್ರದರ್ಶಿಸುವ ವಿಧಗಳಾಗಿವೆ. ಮುಂದಿನ ನ್ಯಾಯಸಮ್ಮತವಾದ ಹೆಜ್ಜೆಯು ಯಾವುದು? ಯೆಹೋವ ದೇವರಿಗೆ ಸಮರ್ಪಣೆಯನ್ನು ಮಾಡುವುದೇ. ಅಂದರೆ ಹೃತ್ಪೂರ್ವಕವಾದ ಪ್ರಾರ್ಥನೆಯಲ್ಲಿ, ನೀವು ಇಚ್ಛಾಪೂರ್ವಕವಾಗಿ ಮತ್ತು ಸಂಪೂರ್ಣ ಹೃದಯದಿಂದ ನಿಮ್ಮ ಜೀವವನ್ನು ದೇವರ ಇಷ್ಟವನ್ನು ಮಾಡಲು ಕೊಡುತ್ತಿದ್ದೀರಿ ಎಂದು ಆತನಿಗೆ ಹೇಳುತ್ತೀರಿ. ಇದು ನಿಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳಲು ಮತ್ತು ಯೇಸು ಕ್ರಿಸ್ತನ ಮೃದುವಾದ ನೊಗವನ್ನು ಅಂಗೀಕರಿಸಲು ಒಂದು ಮಾರ್ಗವಾಗಿದೆ.—ಮತ್ತಾಯ 11:29, 30.
ದೀಕ್ಷಾಸ್ನಾನ—ನಿಮಗಾಗಿ ಅದಕ್ಕಿರುವ ಅರ್ಥ
10. ನೀವು ಯೆಹೋವನಿಗೆ ನಿಮ್ಮನ್ನು ಸಮರ್ಪಿಸಿಕೊಂಡ ಬಳಿಕ ಏಕೆ ದೀಕ್ಷಾಸ್ನಾನ ಹೊಂದಬೇಕು?
10 ಯೇಸುವಿಗನುಸಾರ, ಅವನ ಶಿಷ್ಯರಾಗುವ ಸಕಲರೂ ದೀಕ್ಷಾಸ್ನಾನ ಹೊಂದಬೇಕು. (ಮತ್ತಾಯ 28:19, 20) ನೀವು ದೇವರಿಗೆ ಸಮರ್ಪಣೆಯನ್ನು ಮಾಡಿದ ಮೇಲೆ ಇದೇಕೆ ಅಗತ್ಯ? ನೀವು ನಿಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡಿರುವುದರಿಂದ, ನೀವು ಆತನನ್ನು ಪ್ರೀತಿಸುತ್ತೀರೆಂದು ಆತನಿಗೆ ಗೊತ್ತಿದೆ. ಆದರೆ ದೇವರಿಗಾಗಿ ನಿಮಗಿರುವ ಪ್ರೀತಿಯನ್ನು ಇತರರಿಗೆ ತಿಳಿಯಪಡಿಸಲಿಕ್ಕಾಗಿ ನೀವು ಇನ್ನೂ ಹೆಚ್ಚಿನ ಕ್ರಮವನ್ನು ಕೈಕೊಳ್ಳುವಿರೆಂಬುದು ನಿಸ್ಸಂದೇಹ. ಒಳ್ಳೆಯದು, ಯೆಹೋವ ದೇವರಿಗೆ ಮಾಡಿರುವ ನಿಮ್ಮ ಸಮರ್ಪಣೆಯನ್ನು ಬಹಿರಂಗವಾಗಿ ತಿಳಿಯಪಡಿಸುವ ಸಂದರ್ಭವನ್ನು ದೀಕ್ಷಾಸ್ನಾನವು ನಿಮಗೆ ಕೊಡುತ್ತದೆ.—ರೋಮಾಪುರ 10:9, 10.
11. ದೀಕ್ಷಾಸ್ನಾನದ ಅರ್ಥವೇನು?
11 ದೀಕ್ಷಾಸ್ನಾನಕ್ಕಿರುವ ಸಾಂಕೇತಿಕಾರ್ಥ ಪುಷ್ಕಲ. ನೀರಿನಡಿಯಲ್ಲಿ ನೀವು ಮುಳುಗಿಸಲ್ಪಟ್ಟಿರುವಾಗ ಅಥವಾ “ಹೂಳಲ್ಪಟ್ಟಿರುವಾಗ,” ನೀವು ನಿಮ್ಮ ಹಿಂದಿನ ಜೀವನ ರೀತಿಗೆ ಸತ್ತಿದ್ದೀರಿ ಎಂಬಂತಿದೆ. ನೀವು ನೀರಿನಿಂದ ಹೊರಕ್ಕೆ ಬರುವಾಗ, ನೀವೊಂದು ಹೊಸ ಜೀವನಕ್ಕೆ, ನಿಮ್ಮ ಸ್ವಂತ ಇಷ್ಟದಿಂದಲ್ಲ, ದೇವರ ಇಷ್ಟದಿಂದ ಆಳಲ್ಪಡುವ ಜೀವನಕ್ಕೆ ಹೊರಬರುತ್ತೀರಿ ಎಂಬಂತಿದೆ. ನೀವು ಇನ್ನುಮುಂದೆ ತಪ್ಪುಗಳನ್ನೇ ಮಾಡುವುದಿಲ್ಲವೆಂದು ಇದರ ಅರ್ಥವಲ್ಲ ನಿಶ್ಚಯ, ಏಕೆಂದರೆ ನಾವೆಲ್ಲರೂ ಅಪರಿಪೂರ್ಣರು ಮತ್ತು ಈ ಕಾರಣದಿಂದ ದಿನಾಲೂ ಪಾಪ ಮಾಡುತ್ತೇವೆ. ಆದರೂ, ಯೆಹೋವನ ಸಮರ್ಪಿತ, ಸ್ನಾತ ಸೇವಕರೋಪಾದಿ, ನೀವು ಆತನೊಂದಿಗೆ ಒಂದು ವಿಶೇಷ ಸಂಬಂಧದೊಳಕ್ಕೆ ಪ್ರವೇಶಿಸಿರುವಿರಿ. ನಿಮ್ಮ ಪಶ್ಚಾತ್ತಾಪ ಮತ್ತು ದೀಕ್ಷಾಸ್ನಾನಕ್ಕೆ ನಿಮ್ಮ ದೈನ್ಯದ ಸಮ್ಮತಿಯ ಕಾರಣ, ಯೆಹೋವನು ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ನಿಮ್ಮ ಪಾಪಗಳನ್ನು ಕ್ಷಮಿಸಲು ಇಷ್ಟೈಸುತ್ತಾನೆ. ಹೀಗೆ ದೀಕ್ಷಾಸ್ನಾನವು ದೇವರ ಮುಂದೆ ಒಂದು ಶುದ್ಧವಾದ ಮನಸ್ಸಾಕ್ಷಿಗೆ ನಡೆಸುತ್ತದೆ.—1 ಪೇತ್ರ 3:21.
12. (ಎ) “ತಂದೆಯ . . . ಹೆಸರಿನಲ್ಲಿ,” (ಬಿ) ‘ಮಗನ ಹೆಸರಿನಲ್ಲಿ,’ (ಸಿ) ‘ಪವಿತ್ರಾತ್ಮದ ಹೆಸರಿನಲ್ಲಿ,’ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದರ ಅರ್ಥವೇನು?
12 ತನ್ನ ಅನುಯಾಯಿಗಳು ಹೊಸ ಶಿಷ್ಯರನ್ನು, “ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ” ದೀಕ್ಷಾಸ್ನಾನ ಮಾಡಿಸಬೇಕೆಂದು ಯೇಸುವು ಆಜ್ಞಾಪಿಸಿದನು. (ಮತ್ತಾಯ 28:19) ಯೇಸು ಏನನ್ನು ಅರ್ಥೈಸಿದನು? “ತಂದೆಯ . . . ಹೆಸರಿನಲ್ಲಿ” ದೀಕ್ಷಾಸ್ನಾನವು, ಸ್ನಾತನಾಗುತ್ತಿರುವ ವ್ಯಕ್ತಿಯು ಯೆಹೋವ ದೇವರನ್ನು ಪೂರ್ಣ ಹೃದಯದಿಂದ ಸೃಷ್ಟಿಕರ್ತನೆಂದೂ ನ್ಯಾಯವಾದ ವಿಶ್ವ ಪರಮಾಧಿಕಾರಿಯೆಂದೂ ಅಂಗೀಕರಿಸುತ್ತಾನೆಂದು ಸೂಚಿಸುತ್ತದೆ. (ಕೀರ್ತನೆ 36:9; 83:18; ಪ್ರಸಂಗಿ 12:1) ‘ಮಗನ ಹೆಸರಿನಲ್ಲಿ’ ದೀಕ್ಷಾಸ್ನಾನ ಹೊಂದುವುದೆಂದರೆ, ಒಬ್ಬ ವ್ಯಕ್ತಿಯು ಯೇಸು ಕ್ರಿಸ್ತನನ್ನು—ಮತ್ತು ಪ್ರತ್ಯೇಕವಾಗಿ ಅವನ ಪ್ರಾಯಶ್ಚಿತ್ತ ಯಜ್ಞವನ್ನು—ದೇವರು ಒದಗಿಸಿದ ರಕ್ಷಣೆಯ ಏಕಮಾತ್ರ ಸಾಧನವೆಂದು ಒಪ್ಪಿಕೊಳ್ಳುತ್ತಾನೆಂದು ಅರ್ಥ. (ಅ. ಕೃತ್ಯಗಳು 4:12) ‘ಪವಿತ್ರಾತ್ಮದ ಹೆಸರಿನಲ್ಲಿ’ ದೀಕ್ಷಾಸ್ನಾನವು, ದೀಕ್ಷಾಸ್ನಾನದ ಅಭ್ಯರ್ಥಿಯು ಯೆಹೋವನ ಪವಿತ್ರಾತ್ಮವನ್ನು ಅಥವಾ ಕಾರ್ಯಕಾರಿ ಶಕ್ತಿಯನ್ನು, ದೇವರು ತನ್ನ ಉದ್ದೇಶಗಳನ್ನು ನೆರವೇರಿಸುವ ಮತ್ತು ತನ್ನ ಸೇವಕರು ಆತನ ಆತ್ಮನಿರ್ದೇಶಿತ ಸಂಸ್ಥೆಯೊಂದಿಗೆ ಆತನ ನೀತಿಯ ಇಷ್ಟವನ್ನು ಮಾಡಲು ಶಕ್ತಿಕೊಡುವ ಸಾಧನವೆಂಬುದಾಗಿ ಗುರುತಿಸುತ್ತಾನೆಂದು ಸೂಚಿಸುತ್ತದೆ.—ಆದಿಕಾಂಡ 1:2; ಕೀರ್ತನೆ 104:30; ಯೋಹಾನ 14:26; 2 ಪೇತ್ರ 1:21.
ನೀವು ದೀಕ್ಷಾಸ್ನಾನಕ್ಕೆ ಸಿದ್ಧರಾಗಿದ್ದೀರೊ?
13, 14. ಯೆಹೋವ ದೇವರನ್ನು ಸೇವಿಸಲು ಆಯ್ದುಕೊಳ್ಳುವುದಕ್ಕೆ ನಾವೇಕೆ ಭಯಪಡಬಾರದು?
13 ದೀಕ್ಷಾಸ್ನಾನಕ್ಕೆ ಇಷ್ಟು ಅರ್ಥವಿರುವಾಗ ಮತ್ತು ಅದು ಒಬ್ಬ ವ್ಯಕ್ತಿಯ ಜೀವನದಲ್ಲಿ ಅತಿ ಪ್ರಾಮುಖ್ಯವಾದ ಜೀವನ ಘಟ್ಟವಾಗಿರುವಾಗ, ಅದು ನೀವು ಇಡಲು ಭಯಪಡಬೇಕಾದ ಒಂದು ಹೆಜ್ಜೆಯಾಗಿದೆಯೆ? ನಿಶ್ಚಯವಾಗಿಯೂ ಇಲ್ಲ! ದೀಕ್ಷಾಸ್ನಾನ ಹೊಂದುವ ನಿರ್ಣಯವನ್ನು ಲಘುವಾಗಿ ತೆಗೆದುಕೊಳ್ಳಬಾರದಾದರೂ, ಅದು ನಿಮಗೆ ಮಾಡಸಾಧ್ಯವಿರುವ ನಿರ್ಣಯಗಳಲ್ಲಿ ಅತ್ಯಂತ ವಿವೇಕದ್ದೆಂಬುದು ನಿರ್ವಿವಾದಕರವಾಗಿದೆ.
14 ಯೆಹೋವ ದೇವರನ್ನು ಸೇವಿಸುವ ನಿಮ್ಮ ಆಯ್ಕೆಗೆ ರುಜುವಾತನ್ನು ದೀಕ್ಷಾಸ್ನಾನವು ಕೊಡುತ್ತದೆ. ನೀವು ಸಂಪರ್ಕಕ್ಕೆ ಬರುವ ಜನರ ಕುರಿತು ಯೋಚಿಸಿರಿ. ಒಂದಲ್ಲ ಒಂದು ವಿಧದಲ್ಲಿ, ಅವರಲ್ಲಿ ಪ್ರತಿಯೊಬ್ಬನು ಒಬ್ಬ ಯಜಮಾನನನ್ನು ಸೇವಿಸುತ್ತಿಲ್ಲವೆ? ಕೆಲವರು ಐಶ್ವರ್ಯದ ಚಾಕರಿ ಮಾಡುತ್ತಾರೆ. (ಮತ್ತಾಯ 6:24) ಇತರರು ತಮ್ಮ ಸ್ವಂತ ಬಯಕೆಗಳನ್ನು ನೆರವೇರಿಸುವುದನ್ನು ಪರಮಪ್ರಧಾನವಾಗಿ ಮಾಡುವ ಮೂಲಕ ತಮ್ಮ ಜೀವನೋಪಾಯಗಳನ್ನು ಶ್ರದ್ಧಾಪೂರ್ವಕವಾಗಿ ಬೆನ್ನಟ್ಟುತ್ತಾರೆ ಅಥವಾ ತಮಗೆ ತಾವೇ ಸೇವೆಮಾಡಿಕೊಳ್ಳುತ್ತಾರೆ. ಇನ್ನಿತರರು ಸುಳ್ಳು ದೇವರುಗಳ ಸೇವೆ ಮಾಡುತ್ತಾರೆ. ಆದರೆ ನೀವು, ಸತ್ಯ ದೇವರಾದ ಯೆಹೋವನನ್ನು ಸೇವಿಸಲು ಆರಿಸಿಕೊಂಡಿದ್ದೀರಿ. ಇನ್ನಾವನೂ ಅಷ್ಟು ದಯೆ, ಕನಿಕರ ಮತ್ತು ಪ್ರೀತಿಯನ್ನು ತೋರಿಸುವುದಿಲ್ಲ. ದೇವರು ಮಾನವರನ್ನು ರಕ್ಷಣೆಗೆ ನಿರ್ದೇಶಿಸುವ ಉದ್ದೇಶಭರಿತ ಕೆಲಸವನ್ನು ಕೊಟ್ಟು ಅವರನ್ನು ಗೌರವಿಸುತ್ತಾನೆ. ಆತನು ನಿತ್ಯಜೀವವನ್ನು ತನ್ನ ಸೇವಕರಿಗೆ ಪ್ರತಿಫಲವಾಗಿ ಕೊಡುತ್ತಾನೆ. ಯೇಸುವಿನ ಮಾದರಿಯನ್ನು ಅನುಸರಿಸುತ್ತಾ, ನಿಮ್ಮ ಜೀವವನ್ನು ಯೆಹೋವನಿಗೆ ಕೊಡುವುದು ಭಯಪಡಬೇಕಾದ ಮಾರ್ಗವಲ್ಲವೆಂಬುದು ನಿಶ್ಚಯ. ವಾಸ್ತವವಾಗಿ, ಅದು ದೇವರನ್ನು ಮೆಚ್ಚಿಸುವ ಏಕಮಾತ್ರ ಮಾರ್ಗವಾಗಿದ್ದು, ಪೂರ್ತಿ ನ್ಯಾಯಸಮ್ಮತವಾದುದಾಗಿದೆ.—1 ಅರಸುಗಳು 18:21.
15. ದೀಕ್ಷಾಸ್ನಾನಕ್ಕಿರುವ ಕೆಲವು ಸಾಮಾನ್ಯ ತಡೆಗಳಾವುವು?
15 ಆದರೂ, ದೀಕ್ಷಾಸ್ನಾನವು ಒತ್ತಡದಿಂದಾಗಿ ತೆಗೆದುಕೊಳ್ಳಬೇಕಾದ ಹೆಜ್ಜೆಯಲ್ಲ. ಅದು ನಿಮ್ಮ ಮತ್ತು ಯೆಹೋವನ ನಡುವಿನ ಒಂದು ವೈಯಕ್ತಿಕ ವಿಚಾರವಾಗಿದೆ. (ಗಲಾತ್ಯ 6:4) ನೀವು ಆತ್ಮಿಕ ಪ್ರಗತಿಯನ್ನು ಮಾಡಿರುವಂತೆ, ನೀವು ಹೀಗೆ ಕುತೂಹಲಪಟ್ಟಿರಬಹುದು: “ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು?” (ಅ. ಕೃತ್ಯಗಳು 8:35, 36) ನೀವು ಸ್ವತಃ ಹೀಗೆ ಕೇಳಿಕೊಳ್ಳಬಹುದು, ‘ಕುಟುಂಬದ ವಿರೋಧವು ನನ್ನನ್ನು ತಡೆದು ಹಿಡಿದಿದೆಯೊ? ನಾನು ಇನ್ನೂ ಯಾವುದಾದರೂ ಅಶಾಸ್ತ್ರೀಯ ಸನ್ನಿವೇಶದಲ್ಲಿ ಅಥವಾ ಪಾಪಾಚರಣೆಯಲ್ಲಿ ಸಿಕ್ಕಿಕೊಂಡಿದ್ದೇನೊ? ಸಮುದಾಯದ ಒಪ್ಪಿಗೆಯನ್ನು ಕಳೆದುಕೊಳ್ಳುವ ಭಯವು ನನಗಿರುವುದು ಸಾಧ್ಯವೊ?’ ಇವು ಪರಿಗಣಿಸಬೇಕಾದ ಕೆಲವು ಸಂಗತಿಗಳು, ಆದರೆ ಅವುಗಳನ್ನು ವ್ಯಾವಹಾರಿಕವಾಗಿ ತೂಗಿ ನೋಡಿರಿ.
16. ಯೆಹೋವನನ್ನು ಸೇವಿಸುವುದರಿಂದ ನೀವು ಹೇಗೆ ಪ್ರಯೋಜನ ಪಡೆಯುವಿರಿ?
16 ಯೆಹೋವನನ್ನು ಸೇವಿಸುವುದರ ಪ್ರಯೋಜನಗಳನ್ನು ಎಣಿಕೆಗೆ ತೆಗೆದುಕೊಳ್ಳದೆ, ವೆಚ್ಚಗಳನ್ನು ತೂಗಿ ನೋಡುವುದು ವ್ಯಾವಹಾರಿಕವಲ್ಲ. ಉದಾಹರಣೆಗೆ, ಕುಟುಂಬ ವಿರೋಧದ ಸಂಗತಿಯನ್ನು ಪರಿಗಣಿಸಿರಿ. ತನ್ನನ್ನು ಹಿಂಬಾಲಿಸುತ್ತಿರುವುದರಿಂದ ತನ್ನ ಶಿಷ್ಯರು ಸಂಬಂಧಿಕರನ್ನು ಕಳೆದುಕೊಂಡರೂ, ಅವರು ಒಂದು ಹೆಚ್ಚು ದೊಡ್ಡದಾದ ಆತ್ಮಿಕ ಕುಟುಂಬವನ್ನು ಸಂಪಾದಿಸುವರೆಂದು ಯೇಸುವು ವಚನಕೊಟ್ಟನು. (ಮಾರ್ಕ 10:29, 30) ಈ ಜೊತೆ ವಿಶ್ವಾಸಿಗಳು ನಿಮಗೆ ಸಹೋದರ ಪ್ರೇಮವನ್ನು ತೋರಿಸಿ, ನೀವು ಹಿಂಸೆಯನ್ನು ತಾಳಿಕೊಳ್ಳುವಂತೆ ಸಹಾಯ ಮಾಡಿ, ಜೀವದ ದಾರಿಯ ಮೇಲೆ ನಿಮ್ಮನ್ನು ಬೆಂಬಲಿಸುವರು. (1 ಪೇತ್ರ 5:9) ನೀವು ಸಮಸ್ಯೆಗಳನ್ನು ನಿಭಾಯಿಸುವಂತೆ ಮತ್ತು ಇತರ ಪಂಥಾಹ್ವಾನಗಳನ್ನು ಜಯಪ್ರದವಾಗಿ ಎದುರಿಸುವಂತೆ, ವಿಶೇಷವಾಗಿ ಸಭೆಯ ಹಿರಿಯರು ನಿಮಗೆ ಸಹಾಯ ಮಾಡಬಲ್ಲರು. (ಯಾಕೋಬ 5:14-16) ಈ ಲೋಕದಲ್ಲಿ ಒಪ್ಪಿಗೆಯನ್ನು ಕಳೆದುಕೊಳ್ಳುವ ವಿಷಯದಲ್ಲಿಯಾದರೊ, ನೀವು ಹೀಗೆ ಕೇಳಿಕೊಳ್ಳುವುದು ಹಿತಕರವಾಗಿರಬಹುದು, ‘ನಾನು ಆಯ್ದುಕೊಂಡಿರುವ ಜೀವನ ಪಥದಿಂದಾಗಿ ವಿಶ್ವದ ಸೃಷ್ಟಿಕರ್ತನು ಹರ್ಷಿಸುವಂತೆ ಮಾಡಿ, ಆತನ ಒಪ್ಪಿಗೆಯಿರುವುದಕ್ಕೆ ಯಾವುದು ತಾನೆ ಹೋಲಿಕೆಯುಳ್ಳದ್ದಾಗಿರಸಾಧ್ಯವಿದೆ?’—ಜ್ಞಾನೋಕ್ತಿ 27:11.
ನಿಮ್ಮ ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ಅನುಗುಣವಾಗಿ ಜೀವಿಸುವುದು
17. ದೀಕ್ಷಾಸ್ನಾನವನ್ನು ಅಂತ್ಯದ ಬದಲಿಗೆ ಒಂದು ಆರಂಭವೆಂದು ನೀವು ಏಕೆ ವೀಕ್ಷಿಸಬೇಕು?
17 ದೀಕ್ಷಾಸ್ನಾನವು ನಿಮ್ಮ ಆತ್ಮಿಕ ಪ್ರಗತಿಯ ಅಂತ್ಯವಲ್ಲವೆಂಬುದನ್ನು ಜ್ಞಾಪಿಸಿಕೊಳ್ಳುವುದು ಪ್ರಾಮುಖ್ಯ. ಅದು ದೀಕ್ಷಿತ ಶುಶ್ರೂಷಕನಾಗಿ ಮತ್ತು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ದೇವರಿಗೆ ಜೀವಾವಧಿ ಸೇವೆಯ ಆರಂಭವನ್ನು ಗುರುತಿಸುತ್ತದೆ. ದೀಕ್ಷಾಸ್ನಾನವು ಅತಿ ಮುಖ್ಯವಾದ ಪ್ರಾಧಾನ್ಯವುಳ್ಳದ್ದಾದರೂ, ಅದು ರಕ್ಷಣೆಗೆ ಖಾತರಿಯನ್ನು ಕೊಡುವುದಿಲ್ಲ. ಯೇಸು ಹೀಗೆನ್ನಲಿಲ್ಲ: ‘ದೀಕ್ಷಾಸ್ನಾನ ಪಡೆದುಕೊಂಡ ಪ್ರತಿಯೊಬ್ಬನೂ ರಕ್ಷಣೆ ಹೊಂದುವನು.’ ಬದಲಾಗಿ, “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು,” ಎಂದು ಅವನಂದನು. (ಮತ್ತಾಯ 24:13) ಆದುದರಿಂದ, ನಿಮ್ಮ ಜೀವಿತದಲ್ಲಿ ದೇವರ ರಾಜ್ಯವನ್ನು ಸರ್ವಪ್ರಧಾನ ವಿಚಾರವಾಗಿ ಮಾಡುವ ಮೂಲಕ ಅದನ್ನು ಪ್ರಥಮವಾಗಿ ಹುಡುಕುವುದು ಮಹತ್ವದ್ದಾಗಿದೆ.—ಮತ್ತಾಯ 6:25-34.
18. ದೀಕ್ಷಾಸ್ನಾನಾನಂತರ, ಬೆನ್ನಟ್ಟಲಿಕ್ಕಿರುವ ಕೆಲವು ಗುರಿಗಳಾವುವು?
18 ಯೆಹೋವನಿಗೆ ನೀವು ಮಾಡುವ ಸೇವೆಯಲ್ಲಿ ತಾಳಿಕೊಳ್ಳಲು, ನೀವು ನಿಮಗಾಗಿ ಆತ್ಮಿಕ ಗುರಿಗಳನ್ನು ಇಡಬಯಸುವಿರಿ. ಒಂದು ಯೋಗ್ಯವಾದ ಗುರಿಯು ನಿಮಗಿರುವ ದೇವರ ಜ್ಞಾನವನ್ನು ಆತನ ವಾಕ್ಯದ ಕ್ರಮವಾದ ವೈಯಕ್ತಿಕ ಅಧ್ಯಯನದ ಮೂಲಕ ಹೆಚ್ಚಿಸುವುದೇ. ಬೈಬಲಿನ ದೈನಂದಿನ ವಾಚನಕ್ಕಾಗಿ ಯೋಜಿಸಿರಿ. (ಕೀರ್ತನೆ 1:1, 2) ಕ್ರೈಸ್ತ ಕೂಟಗಳಲ್ಲಿ ಕ್ರಮವಾಗಿ ಉಪಸ್ಥಿತರಾಗಿರಿ, ಏಕೆಂದರೆ ನೀವು ಅಲ್ಲಿ ಕಂಡುಕೊಳ್ಳುವ ಸಹವಾಸವು ನಿಮಗೆ ಆತ್ಮಿಕ ಬಲವನ್ನು ಕೊಡಲು ಸಹಾಯ ಮಾಡುವುದು. ನಿಮ್ಮ ಮಟ್ಟಿಗೆ, ಸಭಾ ಕೂಟಗಳಲ್ಲಿ ಹೇಳಿಕೆ ನೀಡುವುದನ್ನು ಮತ್ತು ಹೀಗೆ, ಯೆಹೋವನನ್ನು ಸ್ತುತಿಸಿ ಇತರರ ಭಕ್ತಿವೃದ್ಧಿಮಾಡಲು ಪ್ರಯತ್ನಿಸುವುದನ್ನು ನಿಮ್ಮ ಗುರಿಯಾಗಿ ಏಕೆ ಮಾಡಬಾರದು? (ರೋಮಾಪುರ 1:11, 12) ನಿಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸುವುದು ಇನ್ನೊಂದು ಗುರಿಯಾಗಿರಬಹುದು.—ಲೂಕ 11:2-4.
19. ನೀವು ಯಾವ ಗುಣಗಳನ್ನು ಪ್ರದರ್ಶಿಸುವಂತೆ ಪವಿತ್ರಾತ್ಮವು ನಿಮಗೆ ಸಹಾಯ ಮಾಡಬಲ್ಲದು?
19 ನಿಮ್ಮ ದೀಕ್ಷಾಸ್ನಾನದ ಅರ್ಥಕ್ಕೆ ತಕ್ಕ ಹಾಗೆ ನೀವು ಜೀವಿಸಬೇಕಾದರೆ, ನೀವು ಏನು ಮಾಡುತ್ತೀರೊ ಅದಕ್ಕೆ ಎಡೆಬಿಡದ ಗಮನವನ್ನು ಕೊಟ್ಟು, ದೇವರ ಪವಿತ್ರಾತ್ಮವು ನಿಮ್ಮಲ್ಲಿ ಪ್ರೀತಿ, ಸಂತೋಷ, ಶಾಂತಿ, ಸೈರಣೆ, ದಯೆ, ಸೌಶೀಲ್ಯ, ನಂಬಿಕೆ, ಸಾಧುತ್ವ ಮತ್ತು ಆತ್ಮ ನಿಯಂತ್ರಣದಂತಹ ಗುಣಗಳನ್ನು ಉತ್ಪನ್ನಮಾಡುವಂತೆ ಬಿಡಬೇಕು. (ಗಲಾತ್ಯ 5:22, 23; 2 ಪೇತ್ರ 3:11) ಯೆಹೋವನು ತನ್ನ ಪವಿತ್ರಾತ್ಮವನ್ನು, ಅದಕ್ಕಾಗಿ ಪ್ರಾರ್ಥಿಸುವ ಮತ್ತು ಆತನ ನಂಬಿಗಸ್ತ ಸೇವಕರಾಗಿ ಆತನಿಗೆ ವಿಧೇಯರಾಗುವ ಎಲ್ಲರಿಗೆ ಕೊಡುತ್ತಾನೆಂಬುದನ್ನು ಜ್ಞಾಪಕದಲ್ಲಿಡಿರಿ. (ಲೂಕ 11:13; ಅ. ಕೃತ್ಯಗಳು 5:32) ಆದುದರಿಂದ ಆತನ ಆತ್ಮಕ್ಕಾಗಿ ದೇವರಿಗೆ ಪ್ರಾರ್ಥಿಸಿ, ಆತನನ್ನು ಮೆಚ್ಚಿಸುವ ಗುಣಗಳನ್ನು ಪ್ರದರ್ಶಿಸುವುದರಲ್ಲಿ ಆತನ ಸಹಾಯಕ್ಕಾಗಿ ಕೇಳಿಕೊಳ್ಳಿರಿ. ನೀವು ದೇವರಾತ್ಮದ ಪ್ರಭಾವಕ್ಕೆ ಪ್ರತಿವರ್ತಿಸಿದಂತೆ ಅಂತಹ ಗುಣಗಳು ನಿಮ್ಮ ನಡೆನುಡಿಗಳಲ್ಲಿ ಹೆಚ್ಚು ವ್ಯಕ್ತವಾಗುವುವು. ಕ್ರೈಸ್ತ ಸಭೆಯಲ್ಲಿರುವ ಪ್ರತಿಯೊಬ್ಬನು, ಹೆಚ್ಚೆಚ್ಚಾಗಿ ಕ್ರಿಸ್ತನಂತಾಗುವಂತೆ “ನೂತನ ವ್ಯಕ್ತಿತ್ವ” ವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆಂಬುದು ನಿಶ್ಚಯ. (ಕೊಲೊಸ್ಸೆ 3:9-14, NW) ಇದನ್ನು ಮಾಡುವುದರಲ್ಲಿ ನಮ್ಮಲ್ಲಿ ಪ್ರತಿಯೊಬ್ಬನು ವಿಭಿನ್ನ ಪಂಥಾಹ್ವಾನಗಳನ್ನು ಎದುರಿಸುತ್ತಾನೆ, ಏಕೆಂದರೆ ನಾವು ಆತ್ಮಿಕ ಪ್ರಗತಿಯ ವಿವಿಧ ಹಂತಗಳಲ್ಲಿದ್ದೇವೆ. ನೀವು ಅಪರಿಪೂರ್ಣರಾಗಿರುವುದರಿಂದ, ಕ್ರಿಸ್ತಸದೃಶ ವ್ಯಕ್ತಿತ್ವವನ್ನು ಹೊಂದಲಿಕ್ಕಾಗಿ ನೀವು ಕಷ್ಟಪಟ್ಟು ಕೆಲಸಮಾಡಬೇಕು. ಆದರೆ ಈ ಸಂಬಂಧದಲ್ಲಿ ಎಂದೂ ನಿರಾಶರಾಗಬೇಡಿರಿ, ಏಕೆಂದರೆ ದೇವರ ಸಹಾಯದಿಂದ ಇದು ಸಾಧ್ಯ.
20. ಶುಶ್ರೂಷೆಯಲ್ಲಿ ಯೇಸುವನ್ನು ನೀವು ಯಾವ ವಿಧಗಳಲ್ಲಿ ಅನುಕರಿಸಬಲ್ಲಿರಿ?
20 ನಿಮ್ಮ ಆತ್ಮಿಕ ಗುರಿಗಳಲ್ಲಿ ಯೇಸುವಿನ ಆನಂದಮಯ ಮಾದರಿಯನ್ನು ಹೆಚ್ಚು ಒತ್ತಾಗಿ ಅನುಕರಿಸುವ ಗುರಿಯೂ ಇರಬೇಕು. (ಇಬ್ರಿಯ 12:1-3) ಅವನು ಶುಶ್ರೂಷೆಯನ್ನು ಪ್ರೀತಿಸಿದನು. ರಾಜ್ಯ ಸಾರುವಿಕೆಯ ಚಟುವಟಿಕೆಯಲ್ಲಿ ಭಾಗವಹಿಸುವುದು ನಿಮ್ಮ ಸುಯೋಗವಾಗಿರುವಲ್ಲಿ, ಅದು ನಿಯತಕ್ರಮದ್ದಾಗುವಂತೆ ಬಿಡಬೇಡಿರಿ. ಯೇಸುವು ಮಾಡಿದಂತೆ, ದೇವರ ರಾಜ್ಯದ ಕುರಿತು ಇತರರಿಗೆ ಕಲಿಸುವುದರಲ್ಲಿ ತೃಪ್ತಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿರಿ. ಒಬ್ಬ ಬೋಧಕರೋಪಾದಿ ನೀವು ಪ್ರಗತಿಯನ್ನು ಮಾಡಲಿಕ್ಕಾಗಿ ಸಭೆಯು ಒದಗಿಸುವ ಉಪದೇಶವನ್ನು ಕಾರ್ಯರೂಪಕ್ಕೆ ಹಾಕಿರಿ. ಮತ್ತು ಯೆಹೋವನು ನಿಮ್ಮ ಶುಶ್ರೂಷೆಯನ್ನು ನಿರ್ವಹಿಸಲು ನಿಮಗೆ ಬಲವನ್ನು ಕೊಡಬಲ್ಲನೆಂಬ ಆಶ್ವಾಸನೆಯುಳ್ಳವರಾಗಿರಿ.—1 ಕೊರಿಂಥ 9:19-23.
21. (ಎ) ನಂಬಿಗಸ್ತರಾದ ದೀಕ್ಷಾಸ್ನಾತ ವ್ಯಕ್ತಿಗಳನ್ನು ಯೆಹೋವನು ನಿಧಿಯಂತೆ ನೋಡುತ್ತಾನೆಂದು ನಮಗೆ ಹೇಗೆ ಗೊತ್ತು? (ಬಿ) ಈ ದುಷ್ಟ ವಿಷಯಗಳ ವ್ಯವಸ್ಥೆಯ ಮೇಲೆ ದೇವರ ತೀರ್ಪು ಜಾರಿಯಾಗುವಾಗ ನಮ್ಮ ಪಾರಾಗುವಿಕೆಗೆ ದೀಕ್ಷಾಸ್ನಾನವು ಪ್ರಾಮುಖ್ಯವೆಂದು ಯಾವುದು ತೋರಿಸುತ್ತದೆ?
21 ಯೇಸುವನ್ನು ಹಿಂಬಾಲಿಸಲು ನಂಬಿಗಸ್ತಿಕೆಯಿಂದ ಪ್ರಯತ್ನಿಸುವ ಒಬ್ಬ ಸಮರ್ಪಿತ, ಸ್ನಾತ ವ್ಯಕ್ತಿಯು ದೇವರಿಗೆ ವಿಶೇಷತೆಯುಳ್ಳವನಾಗಿದ್ದಾನೆ. ಯೆಹೋವನು ಕೋಟ್ಯಂತರವಾಗಿರುವ ಸಕಲ ಮಾನವ ಹೃದಯಗಳನ್ನು ಪರೀಕ್ಷಿಸುತ್ತಾನೆ, ಮತ್ತು ಇಂತಹ ವ್ಯಕ್ತಿಗಳು ಎಷ್ಟು ವಿರಳವೆಂದು ಬಲ್ಲಾತನಾಗಿದ್ದಾನೆ. ಆತನು ಅವರನ್ನು ನಿಧಿಗಳು, “ಇಷ್ಟವಸ್ತುಗಳು” ಎಂದೆಣಿಸುತ್ತಾನೆ. (ಹಗ್ಗಾಯ 2:7) ದೇವರು ಇಂತಹವರನ್ನು, ಬೇಗನೆ ಈ ದುಷ್ಟ ವಿಷಯಗಳ ವ್ಯವಸ್ಥೆಯ ಮೇಲೆ ತನ್ನ ತೀರ್ಪನ್ನು ಜಾರಿಗೆ ತರುವಾಗ ಪಾರಾಗಲು ಗುರುತಿಸಲ್ಪಟ್ಟವರಾಗಿ ವೀಕ್ಷಿಸುತ್ತಾನೆಂದು ಬೈಬಲ್ ಪ್ರವಾದನೆಗಳು ತೋರಿಸುತ್ತವೆ. (ಯೆಹೆಜ್ಕೇಲ 9:1-6; ಮಲಾಕಿಯ 3:16, 18) ನೀವು “ನಿತ್ಯಜೀವಕ್ಕೆ ಯೋಗ್ಯವಾದ ಪ್ರವೃತ್ತಿ” ಉಳ್ಳವರೊ? (ಅ. ಕೃತ್ಯಗಳು 13:48, NW) ದೇವರನ್ನು ಸೇವಿಸುವ ಒಬ್ಬರಾಗಿ ಗುರುತಿಸಲ್ಪಡುವುದು ನಿಮ್ಮ ಶ್ರದ್ಧಾಪೂರ್ವಕವಾದ ಬಯಕೆಯಾಗಿದೆಯೆ? ಸಮರ್ಪಣೆಯೂ ದೀಕ್ಷಾಸ್ನಾನವೂ ಆ ಗುರುತಿನ ಭಾಗವಾಗಿವೆ, ಮತ್ತು ಬದುಕಿ ಉಳಿಯುವಿಕೆಗೆ ಅವು ಆವಶ್ಯಕವಾಗಿವೆ.
22. “ಮಹಾ ಸಮೂಹ”ವು ಯಾವ ಪ್ರತೀಕ್ಷೆಗಳನ್ನು ಮುನ್ನೋಡಬಹುದು?
22 ಭೌಗೋಳಿಕ ಜಲಪ್ರಳಯದ ಬಳಿಕ, ನೋಹನೂ ಅವನ ಕುಟುಂಬವೂ ನಾವೆಯೊಳಗಿಂದ ಒಂದು ಶುದ್ಧೀಕರಿಸಲ್ಪಟ್ಟ ಭೂಮಿಗೆ ಬಂದರು. ಅದೇ ರೀತಿ ಇಂದು, ದೇವರ ಜ್ಞಾನವನ್ನು ತಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಂಡು ಯೆಹೋವನ ಮೆಚ್ಚಿಕೆಯನ್ನು ಗಳಿಸುವ ಒಂದು “ಮಹಾ ಸಮೂಹ”ಕ್ಕೆ, ಈ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಪಾರಾಗುವ ಮತ್ತು ಚಿರಸ್ಥಾಯಿಯಾಗಿ ಶುದ್ಧೀಕರಿಸಲ್ಪಟ್ಟ ಭೂಮಿಯ ಮೇಲೆ ನಿತ್ಯಜೀವವನ್ನು ಅನುಭವಿಸುವ ಪ್ರತೀಕ್ಷೆಯಿದೆ. (ಪ್ರಕಟನೆ 7:9, 14) ಆ ಜೀವಿತವು ಹೇಗಿರುವುದು?
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
ನಿಮಗಿರುವ ಯೆಹೋವನ ಜ್ಞಾನವನ್ನು ನೀವು ಹೇಗೆ ಬಳಸಬೇಕೆಂದು ಆತನು ಬಯಸುತ್ತಾನೆ?
ದೀಕ್ಷಾಸ್ನಾನಕ್ಕೆ ನಡೆಸುವ ಕೆಲವು ಹೆಜ್ಜೆಗಳಾವುವು?
ದೀಕ್ಷಾಸ್ನಾನವು ಒಂದು ಅಂತ್ಯವಲ್ಲ, ಒಂದು ಆರಂಭವಾಗಿದೆ ಏಕೆ?
ನಾವು ನಮ್ಮ ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ತಕ್ಕಂತೆ ಹೇಗೆ ಜೀವಿಸಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
[ಪುಟ 172ರಲ್ಲಿರುವ ಚಿತ್ರ]
ನೀವು ಪ್ರಾರ್ಥನೆಯಲ್ಲಿ ದೇವರಿಗೆ ಒಂದು ಸಮರ್ಪಣೆಯನ್ನು ಮಾಡಿದ್ದೀರೊ?
[ಪುಟ 174ರಲ್ಲಿರುವ ಚಿತ್ರಗಳು]
ದೀಕ್ಷಾಸ್ನಾನ ಮಾಡಿಸಿ ಕೊಳ್ಳುವುದರಿಂದ ನಿಮ್ಮನ್ನು ಯಾವುದು ತಡೆಯುತ್ತದೆ?