ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ?
ಅಧ್ಯಾಯ 8
ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ?
1, 2. ಮಾನವ ಕಷ್ಟಾನುಭವಕ್ಕೆ ಜನರು ಅನೇಕ ವೇಳೆ ಹೇಗೆ ಪ್ರತಿಕ್ರಿಯಿಸುತ್ತಾರೆ?
ವಿಪತ್ತುಗಳು ಬಡಿದು, ಸ್ವತ್ತು ನಷ್ಟವಾಗಿ, ಜೀವಗಳನ್ನು ಆಹುತಿ ತೆಗೆದುಕೊಳ್ಳುವಾಗ, ಇಂತಹ ಭಯಂಕರ ಸಂಗತಿಗಳು ಏಕೆ ಸಂಭವಿಸುತ್ತವೆಂದು ಅನೇಕರಿಗೆ ಅರ್ಥವಾಗುವುದಿಲ್ಲ. ಇತರರು ಪಾತಕಗಳ ವಿಸ್ತಾರ್ಯ, ಕ್ರೌರ್ಯ, ಸ್ವೇಚ್ಛಾಚಾರದಿಂದ ತ್ರಾಸಪಡುತ್ತಾರೆ. ‘ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ?’ ಎಂದು ನೀವೂ ಕುತೂಹಲಪಟ್ಟಿರಬಹುದು.
2 ಇದಕ್ಕೆ ತೃಪ್ತಿಕರವಾದ ಉತ್ತರವು ದೊರೆಯದ ಕಾರಣ, ಅನೇಕರು ದೇವರಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಆತನಿಗೆ ಮಾನವ ಕುಲದಲ್ಲಿ ಆಸಕ್ತಿಯಿಲ್ಲ ಎಂದು ಅವರ ಅನಿಸಿಕೆ. ಕಷ್ಟಾನುಭವವನ್ನು ಜೀವನದ ವಾಸ್ತವಾಂಶವೆಂದು ಅಂಗೀಕರಿಸುವವರು ಕಟುಭಾವವನ್ನು ತಾಳಿ, ಮಾನವ ಸಮಾಜದಲ್ಲಿರುವ ಸಕಲ ಕೆಟ್ಟತನಕ್ಕೆ ದೇವರ ಮೇಲೆ ದೋಷ ಹೊರಿಸುತ್ತಾರೆ. ನಿಮಗೆ ಅಂತಹ ಅನಿಸಿಕೆಗಳಾಗಿರುವಲ್ಲಿ, ನಿಸ್ಸಂಶಯವಾಗಿ ಈ ಸಂಗತಿಗಳ ಮೇಲಿನ ಬೈಬಲಿನ ಹೇಳಿಕೆಗಳಲ್ಲಿ ನೀವೂ ತೀರ ಆಸಕ್ತರಾಗಿರುವಿರಿ.
ಕಷ್ಟಾನುಭವವು ದೇವರಿಂದಲ್ಲ
3, 4. ಕೆಡುಕು ಮತ್ತು ಕಷ್ಟಾನುಭವ ಯೆಹೋವನಿಂದಲ್ಲವೆಂದು ನಮಗೆ ಏಕೆ ನಿಶ್ಚಯತೆ ಇರಬಲ್ಲದು?
3 ನಾವು ನಮ್ಮ ಸುತ್ತಲೂ ನೋಡುವ ಕಷ್ಟಾನುಭವವನ್ನು ಉಂಟುಮಾಡಿದ್ದು ಯೆಹೋವ ದೇವರಲ್ಲವೆಂದು ಬೈಬಲು ನಮಗೆ ಆಶ್ವಾಸನೆ ಕೊಡುತ್ತದೆ. ಉದಾಹರಣೆಗೆ, ಕ್ರೈಸ್ತ ಶಿಷ್ಯ ಯಾಕೋಬನು ಬರೆದುದು: “ಯಾವನಾದರೂ ಪಾಪಮಾಡುವದಕ್ಕೆ ಪ್ರೇರೇಪಿಸಲ್ಪಡುವಾಗ—ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ.” (ಯಾಕೋಬ 1:13) ವಿಷಯವು ಹೀಗಿರುವುದರಿಂದ, ಮಾನವ ಕುಲವನ್ನು ಪೀಡಿಸುತ್ತಿರುವ ಅನೇಕಾನೇಕ ಕಷ್ಟಗಳನ್ನು ದೇವರು ಉಂಟುಮಾಡಿರಸಾಧ್ಯವಿಲ್ಲ. ಜನರು ಸ್ವರ್ಗದ ಜೀವನಕ್ಕೆ ಯೋಗ್ಯರಾಗಲಿಕ್ಕಾಗಿ ಆತನು ಅವರ ಮೇಲೆ ಪರೀಕ್ಷೆಗಳನ್ನು ತರುವುದೂ ಇಲ್ಲ, ಅವರು ಹಿಂದಿನ ಜೀವಿತದಲ್ಲಿ ಮಾಡಿರುವರೆಂಬ ಊಹಿತ ದುಷ್ಕೃತ್ಯಗಳಿಗಾಗಿ ಜನರು ಕಷ್ಟಾನುಭವಿಸುವಂತೆ ಮಾಡುವುದೂ ಇಲ್ಲ.—ರೋಮಾಪುರ 6:7.
4 ಇದಕ್ಕೆ ಕೂಡಿಸಿ, ದೇವರ ಅಥವಾ ಕ್ರಿಸ್ತನ ಹೆಸರಿನಲ್ಲಿ ಅನೇಕ ಭಯಂಕರ ವಿಷಯಗಳು ಮಾಡಲ್ಪಟ್ಟಿವೆಯಾದರೂ, ಅವರಲ್ಲಿ ಯಾವನೂ ಅಂತಹ ವರ್ತನೆಗಳಿಗೆ ಒಪ್ಪಿಗೆ ಕೊಟ್ಟಿದ್ದಾನೆಂದು ಸೂಚಿಸುವ ಯಾವುದೂ ಬೈಬಲಿನಲ್ಲಿಲ್ಲ. ದೇವರನ್ನು ಮತ್ತು ಕ್ರಿಸ್ತನನ್ನು ಇಬ್ಬರನ್ನೂ ಸೇವಿಸುತ್ತೇವೆಂದು ವಾದಿಸಿದರೂ, ಮೋಸ, ವಂಚನೆ, ಕೊಲೆ ಮತ್ತು ಸೂರೆ ಹಾಗೂ ಮಾನವ ಕಷ್ಟಾನುಭವವನ್ನು ಉಂಟುಮಾಡುವ ಇತರ ಅನೇಕ ವಿಷಯಗಳನ್ನು ಮಾಡುವವರೊಂದಿಗೆ ದೇವರಿಗೂ ಕ್ರಿಸ್ತನಿಗೂ ಯಾವ ಸಂಬಂಧವೂ ಇಲ್ಲ. ವಾಸ್ತವವೇನಂದರೆ, “ದುಷ್ಟನ ನಡತೆಯು ಯೆಹೋವನಿಗೆ ಅಸಹ್ಯ.” ದೇವರು, “ದುಷ್ಟರಿಗೆ ದೂರ.”—ಜ್ಞಾನೋಕ್ತಿ 15:9, 29.
5. ಯೆಹೋವನ ಗುಣಗಳಲ್ಲಿ ಕೆಲವು ಯಾವುವು, ಮತ್ತು ತನ್ನ ಸೃಷ್ಟಿಜೀವಿಗಳ ಕುರಿತು ಆತನಿಗೆ ಹೇಗನಿಸುತ್ತದೆ?
5 ಬೈಬಲು ಯೆಹೋವನನ್ನು, “ಕರುಣಾಸಾಗರನೂ ದಯಾಳುವೂ” ಆಗಿರುವವನಾಗಿ ವರ್ಣಿಸುತ್ತದೆ. (ಯಾಕೋಬ 5:11) “ಯೆಹೋವನು ನ್ಯಾಯವನ್ನು ಮೆಚ್ಚುವವನು,” ಎಂದು ಅದು ಘೋಷಿಸುತ್ತದೆ. (ಕೀರ್ತನೆ 37:28; ಯೆಶಾಯ 61:8) ಆತನು ಪ್ರತಿವೈರ ಸಾಧಿಸುವವನಲ್ಲ. ಆತನು ತನ್ನ ಸೃಷ್ಟಿಜೀವಿಗಳನ್ನು ಕನಿಕರದಿಂದ ಪರಾಮರಿಸಿ, ಅವೆಲ್ಲವುಗಳ ಸುಕ್ಷೇಮಕ್ಕಾಗಿ ಅವುಗಳಿಗೆ ಅತ್ಯುತ್ತಮವಾದುದನ್ನು ಕೊಡುತ್ತಾನೆ. (ಅ. ಕೃತ್ಯಗಳು 14:16, 17) ಭೂಮಿಯಲ್ಲಿ ಜೀವದ ಅತ್ಯಾರಂಭದಿಂದಲೇ ಯೆಹೋವನು ಅದನ್ನು ಮಾಡಿದ್ದಾನೆ.
ಪರಿಪೂರ್ಣವಾದೊಂದು ಆರಂಭ
6. ಮಾನವ ಕುಲದ ಆದಿ ಇತಿಹಾಸಕ್ಕೆ ಕೆಲವು ಐತಿಹ್ಯಗಳು ಹೇಗೆ ಸೂಚಿಸುತ್ತವೆ?
6 ನಮ್ಮೆಲ್ಲರಿಗೂ, ವೇದನೆ ಮತ್ತು ಕಷ್ಟಾನುಭವವನ್ನು ನೋಡಿ, ಅನುಭವಿಸಿ ರೂಢಿಯಾಗಿದೆ. ಆದಕಾರಣ, ಕಷ್ಟಾನುಭವವಿಲ್ಲದ ಒಂದು ಸಮಯವನ್ನು ಕಲ್ಪಿಸಿಕೊಳ್ಳುವುದು ಕಷ್ಟಕರವಾಗಬಹುದು. ಆದರೆ ಮಾನವ ಇತಿಹಾಸದ ಆರಂಭದಲ್ಲಿ ಅಂತಹದೇ ಪರಿಸ್ಥಿತಿಯಿತ್ತು. ಕೆಲವು ರಾಷ್ಟ್ರಗಳ ಐತಿಹ್ಯಗಳೂ ಇಂತಹ ಸಂತೋಷಕರವಾದ ಆರಂಭವನ್ನು ಅಪ್ರತ್ಯಕ್ಷವಾಗಿ ಸೂಚಿಸುತ್ತವೆ. ಗ್ರೀಕ್ ಪುರಾಣದಲ್ಲಿ, “ಮನುಷ್ಯನ ಐದು ಯುಗ” ಗಳಲ್ಲಿ ಒಂದನೆಯದ್ದು “ಸುವರ್ಣ ಯುಗ” ವೆಂದು ಕರೆಯಲ್ಪಟ್ಟಿತು. ಅದರಲ್ಲಿ ಮಾನವರು ಸಂತೋಷದ ಬಾಳ್ವೆಯನ್ನು, ಶ್ರಮ, ವೇದನೆ ಮತ್ತು ವಾರ್ಧಕ್ಯದ ಹಾಳುಗೆಡಹುವಿಕೆಯಿಲ್ಲದ ಬಾಳ್ವೆಯನ್ನು ನಡೆಸಿದರು. ಪುರಾಣದ ಪೀತ ಸಮ್ರಾಜ (ಹ್ವಾಂಗ್-ಡೀ)ನ ಕಾಲದಲ್ಲಿ, ಜನರು ಶಾಂತಿಯಲ್ಲಿ ಜೀವಿಸಿ, ಪ್ರಕೃತಿ ಶಕ್ತಿಗಳೊಂದಿಗೆ ಮತ್ತು ವನ್ಯ ಮೃಗಗಳೊಂದಿಗೆ ಸಹ ಸಾಮರಸ್ಯವನ್ನು ಅನುಭವಿಸಿದರೆಂದು ಚೀನೀಯರು ಹೇಳುತ್ತಾರೆ. ಪರ್ಸಿಯನರು, ಐಗುಪ್ತ್ಯರು, ಟಿಬೆಟಿನವರು, ಪೆರುವಿನವರು ಮತ್ತು ಮೆಕ್ಸಿಕನರು—ಇವರೆಲ್ಲರಲ್ಲಿ ಮಾನವ ಕುಲದ ಇತಿಹಾಸದ ಆರಂಭದಲ್ಲಿ ಸಂತೋಷ ಮತ್ತು ಪರಿಪೂರ್ಣತೆಯ ಒಂದು ಸಮಯದ ಐತಿಹ್ಯಗಳಿವೆ.
7. ದೇವರು ಭೂಮಿಯನ್ನು ಮತ್ತು ಮನುಷ್ಯ ಜಾತಿಯನ್ನು ಏಕೆ ಸೃಷ್ಟಿಸಿದನು?
7 ರಾಷ್ಟ್ರಗಳ ಈ ಪುರಾಣಗಳು, ಮಾನವ ಇತಿಹಾಸದ ಅತ್ಯಂತ ಹಳೆಯ ಲಿಖಿತ ದಾಖಲೆಯಾದ ಬೈಬಲನ್ನು ಕೇವಲ ಪ್ರತಿಧ್ವನಿಸುತ್ತವೆ, ಅಷ್ಟೆ. ದೇವರು ಪ್ರಥಮ ಮಾನವ ಜೊತೆಯಾದ ಆದಾಮ, ಹವ್ವರನ್ನು ಏದೆನ್ ತೋಟವೆಂದು ಕರೆಯಲ್ಪಟ್ಟ ಒಂದು ಪ್ರಮೋದವನದಲ್ಲಿ ಇಟ್ಟು ಅವರಿಗೆ, “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ,” ಎಂದು ಆಜ್ಞೆಕೊಟ್ಟನು ಎಂದು ಅದು ನಮಗೆ ಹೇಳುತ್ತದೆ. (ಆದಿಕಾಂಡ 1:28) ನಮ್ಮ ಆದಿ ಪಿತೃಗಳು ಪರಿಪೂರ್ಣತೆಯನ್ನು ಅನುಭೋಗಿಸಿದರು ಮತ್ತು ಸಮಸ್ತ ಭೂಮಿಯು, ಬಾಳಿಕೆ ಬರುವ ಶಾಂತಿ ಮತ್ತು ಸಂತೋಷದಿಂದ ಜೀವಿಸುವ ಪರಿಪೂರ್ಣ ಮಾನವ ಕುಟುಂಬದಿಂದ ನೆಲಸಲ್ಪಡುವುದನ್ನು ನೋಡುವ ಪ್ರತೀಕ್ಷೆ ಅವರಿಗಿತ್ತು. ಭೂಮಿಯನ್ನು ಮತ್ತು ಮಾನವ ಕುಲವನ್ನು ಸೃಷ್ಟಿಸುವುದರಲ್ಲಿ ದೇವರ ಉದ್ದೇಶವು ಅದಾಗಿತ್ತು.—ಯೆಶಾಯ 45:18.
ದುರುದ್ದೇಶದ ಒಂದು ಪಂಥಾಹ್ವಾನ
8. ಆದಾಮ, ಹವ್ವರು ಯಾವ ಆಜ್ಞೆಗೆ ವಿಧೇಯರಾಗುವರೆಂದು ನಿರೀಕ್ಷಿಸಲಾಗಿತ್ತು, ಆದರೆ ಏನು ಸಂಭವಿಸಿತು?
8 ದೇವರ ಅನುಗ್ರಹಪಾತ್ರರಾಗಿ ಉಳಿಯಬೇಕಾದರೆ, “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರ” ದಿಂದ ತಿನ್ನುವುದನ್ನು ಆದಾಮ, ಹವ್ವರು ತಡೆಯಬೇಕಾಗಿತ್ತು. (ಆದಿಕಾಂಡ 2:16, 17) ಅವರು ಯೆಹೋವನ ನಿಯಮಕ್ಕೆ ವಿಧೇಯರಾಗಿದ್ದಲ್ಲಿ, ಮಾನವ ಜೀವವನ್ನು ಕೆಡಿಸಲು ಕಷ್ಟಾನುಭವವಿರುತ್ತಿರಲಿಲ್ಲ. ದೇವರಾಜ್ಞೆಗೆ ವಿಧೇಯರಾಗುವ ಮೂಲಕ ಅವರು ಯೆಹೋವನಿಗೆ ತಮ್ಮ ಪ್ರೀತಿಯನ್ನೂ ಆತನಿಗೆ ತಮ್ಮ ಕರ್ತವ್ಯನಿಷ್ಠೆಯನ್ನೂ ಪ್ರದರ್ಶಿಸುತ್ತಿದ್ದರು. (1 ಯೋಹಾನ 5:3) ಆದರೆ ನಾವು 6 ನೆಯ ಅಧ್ಯಾಯದಲ್ಲಿ ಕಲಿತಂತೆ, ವಿಷಯಗಳು ಹಾಗೆ ಪರಿಣಮಿಸಲಿಲ್ಲ. ಸೈತಾನನಿಂದ ಪ್ರೇರಿಸಲ್ಪಟ್ಟವಳಾಗಿ, ಹವ್ವ ಆ ಮರದಿಂದ ಹಣ್ಣನ್ನು ತಿಂದಳು. ತರುವಾಯ, ಆದಾಮನು ಸಹ ಆ ನಿಷಿದ್ಧ ಹಣ್ಣಿನಲ್ಲಿ ಪಾಲು ತೆಗೆದುಕೊಂಡನು.
9. ಯೆಹೋವನನ್ನು ಒಳಗೂಡಿಸಿರುವ ಯಾವ ವಿವಾದಾಂಶವನ್ನು ಸೈತಾನನು ಎಬ್ಬಿಸಿದನು?
9 ಸಂಭವಿಸಿದ್ದರ ಗಂಭೀರತೆಯನ್ನು ನೀವು ಗ್ರಹಿಸುತ್ತೀರೊ? ಸೈತಾನನು ಸರ್ವೋನ್ನತನಾದ ಯೆಹೋವನ ಸ್ಥಾನವನ್ನು ಆಕ್ರಮಣ ಮಾಡುತ್ತಿದ್ದನು. “ನೀವು ಹೇಗೂ [“ನಿಶ್ಚಯವಾಗಿ,” NW] ಸಾಯುವದಿಲ್ಲ,” ಎಂದು ಹೇಳಿದ ಮೂಲಕ ಪಿಶಾಚನು, “ಸತ್ತೇ ಹೋಗುವಿ,” ಎಂಬ ದೇವರ ಮಾತುಗಳನ್ನು ವಿರೋಧಿಸಿದನು. ಸೈತಾನನ ಮುಂದಿನ ಮಾತುಗಳು, ಆದಾಮ ಮತ್ತು ಹವ್ವ ದೇವರಂತಾಗುವ ಸಾಧ್ಯತೆಯ ಕುರಿತು ಮತ್ತು ಹೀಗೆ ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ನಿರ್ಣಯಿಸಲು ಅವರಿಗೆ ದೇವರ ಆವಶ್ಯಕತೆ ಇಲ್ಲದಿರುವ ಕುರಿತು ಯೆಹೋವನು ಅವರನ್ನು ಅಜ್ಞಾನದಲ್ಲಿಟ್ಟಿದ್ದಾನೆಂದು ಸೂಚಿಸಿದವು. ಹೀಗೆ ಸೈತಾನನ ಪಂಥಾಹ್ವಾನವು ವಿಶ್ವ ಪರಮಾಧಿಕಾರಿಯೋಪಾದಿ ಯೆಹೋವನ ಸ್ಥಾನದ ಹಕ್ಕು ಮತ್ತು ಸಮಂಜಸತೆಯನ್ನು ವಿವಾದಕ್ಕೊಳಪಡಿಸಿತು.—ಆದಿಕಾಂಡ 2:17; 3:1-6.
10. ಸೈತಾನನು ಮಾನವರ ಕುರಿತು ಅಪ್ರತ್ಯಕ್ಷವಾಗಿ ಏನು ಸೂಚಿಸಿದನು?
10 ದೇವರಿಗೆ ವಿಧೇಯತೆಯು ಎಷ್ಟರ ತನಕ ಅವರ ಪ್ರಯೋಜನಕ್ಕಾಗಿರುವುದೋ, ಅಷ್ಟರ ತನಕ ಜನರು ದೇವರಿಗೆ ವಿಧೇಯರಾಗಿ ಉಳಿಯುವರೆಂದೂ ಪಿಶಾಚನಾದ ಸೈತಾನನು ಅಪ್ರತ್ಯಕ್ಷವಾಗಿ ಸೂಚಿಸಿದನು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಮಾನವ ಸಮಗ್ರತೆಯು ವಿವಾದಕ್ಕೊಳಗಾಯಿತು. ಯಾವ ಮನುಷ್ಯನೂ ಸ್ವಪ್ರೇರಣೆಯಿಂದ ದೇವರಿಗೆ ನಿಷ್ಠನಾಗಿ ಉಳಿಯನು ಎಂದು ಸೈತಾನನು ಆರೋಪ ಹೊರಿಸಿದನು. ಸೈತಾನನ ಈ ದುರುದ್ದೇಶದ ಹಕ್ಕುಸಾಧನೆಯು, ಸಾ.ಶ.ಪೂ. 1600ಕ್ಕೆ ಹಿಂದಿನ ಯಾವುದೊ ಒಂದು ಸಮಯದಲ್ಲಿ ಒಂದು ಮಹಾ ಪರೀಕ್ಷೆಗೆ ಒಳಪಟ್ಟ, ಯೆಹೋವನ ನಂಬಿಗಸ್ತ ಸೇವಕನಾಗಿದ್ದ ಯೋಬನ ಕುರಿತ ಬೈಬಲ್ ವೃತ್ತಾಂತದಲ್ಲಿ ಸ್ಪಷ್ಟವಾಗಿ ಪ್ರಕಟವಾಗುತ್ತದೆ. ನೀವು ಯೋಬನ ಪುಸ್ತಕದ ಮೊದಲ ಎರಡು ಅಧ್ಯಾಯಗಳನ್ನು ಓದುವಾಗ, ಮಾನವ ಕಷ್ಟಾನುಭವಕ್ಕಿರುವ ಕಾರಣ ಮತ್ತು ದೇವರು ಅದನ್ನೇಕೆ ಅನುಮತಿಸುತ್ತಾನೆಂಬುದಕ್ಕೆ ಒಳನೋಟವನ್ನು ಪಡೆಯಬಲ್ಲಿರಿ.
11. ಯೋಬನು ಯಾವ ವಿಧದ ಮನುಷ್ಯನಾಗಿದ್ದನು, ಆದರೆ ಸೈತಾನನು ಯಾವ ದೋಷಾರೋಪಣೆಯನ್ನು ಮಾಡಿದನು?
11 “ನಿರ್ದೋಷಿಯೂ ಯಥಾರ್ಥಚಿತ್ತನೂ” ಆಗಿದ್ದ ಯೋಬನು ಸೈತಾನನಿಂದ ಆಕ್ರಮಣಕ್ಕೊಳಗಾದನು. ಮೊದಲನೆಯದಾಗಿ, ಸೈತಾನನು, “ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ?” ಎಂಬ ಪ್ರಶ್ನೆಯನ್ನೆಬ್ಬಿಸಿ, ಯೋಬನಲ್ಲಿ ದುರುದ್ದೇಶಗಳಿದ್ದವೆಂದು ಅಪ್ರತ್ಯಕ್ಷವಾಗಿ ಸೂಚಿಸಿದನು. ಬಳಿಕ, ಪಿಶಾಚನು ಕುತಂತ್ರದಿಂದ, ಯೆಹೋವನು ಯೋಬನನ್ನು ಕಾಪಾಡುವ ಮತ್ತು ಆಶೀರ್ವದಿಸುವ ಮೂಲಕ ಅವನ ಕರ್ತವ್ಯನಿಷ್ಠೆಯನ್ನು ಖರೀದಿಸಿದ್ದಾನೆಂದು ಆರೋಪ ಹೊರಿಸಿ, ದೇವರನ್ನೂ ಯೋಬನನ್ನೂ ದೂಷಿಸಿದನು. ಸೈತಾನನು ಯೆಹೋವನಿಗೆ ಸವಾಲೊಡ್ಡಿದ್ದು: “ನಿನ್ನ ಕೈನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.”—ಯೋಬ 1:8-11.
12. (ಎ) ಸೈತಾನನು ಯೋಬನನ್ನು ಪರೀಕ್ಷಿಸುವಂತೆ ದೇವರು ಅನುಮತಿಸಿದ್ದರೆ ಮಾತ್ರ ಯಾವ ಪ್ರಶ್ನೆಗಳು ಉತ್ತರಿಸಲ್ಪಡಸಾಧ್ಯವಿತ್ತು? (ಬಿ) ಯೋಬನ ಪರೀಕ್ಷೆ ಯಾವುದರಲ್ಲಿ ಫಲಿಸಿತು?
12 ದೇವರಿಂದ ತಾನು ಪಡೆದಿರುವ ಸಕಲ ಒಳಿತಿಗಾಗಿ ಮಾತ್ರ ಯೋಬನು ಯೆಹೋವನನ್ನು ಸೇವಿಸುತ್ತಿದ್ದನೊ? ಯೋಬನ ಸಮಗ್ರತೆಯು ಪರೀಕ್ಷೆಯಡಿಯಲ್ಲಿ ಸ್ಥಿರವಾಗಿ ನಿಲ್ಲಸಾಧ್ಯವಿತ್ತೊ? ಸರದಿಯಾಗಿ, ತನ್ನ ಸೇವಕನನ್ನು ಪರೀಕ್ಷೆಗೊಳಗಾಗುವಂತೆ ಅನುಮತಿಸುವಷ್ಟು ಭರವಸೆ ಯೆಹೋವನಲ್ಲಿತ್ತೊ? ಸೈತಾನನು ಯೋಬನ ಮೇಲೆ ಅತಿ ಕಠಿನ ಪರೀಕ್ಷೆಯನ್ನು ತರುವಂತೆ ಅನುಮತಿಸುವಲ್ಲಿ ಈ ಪ್ರಶ್ನೆಗಳು ಉತ್ತರಿಸಲ್ಪಡಸಾಧ್ಯವಿತ್ತು. ಯೋಬನ ಪುಸ್ತಕದಲ್ಲಿ ಕಥನಿಸಿರುವಂತೆ, ದೇವರು ಅನುಮತಿಸಿದ ಪರೀಕ್ಷೆಯ ಕೆಳಗೆ ಯೋಬನ ನಂಬಿಗಸ್ತಿಕೆಯ ಮಾರ್ಗವು, ಯೆಹೋವನ ನೀತಿ ಮತ್ತು ಮನುಷ್ಯನ ಸಮಗ್ರತೆಯ ಪೂರ್ತಿ ನಿರ್ದೋಷೀಕರಣವಾಗಿ ಪರಿಣಮಿಸಿತು.—ಯೋಬ 42:1, 2, 12.
13. ಏದೆನಿನಲ್ಲಿ ಮತ್ತು ಯೋಬನಿಗೆ ಏನು ಸಂಭವಿಸಿತೋ ಅದರಲ್ಲಿ ನಾವು ಹೇಗೆ ಸೇರಿಕೊಂಡಿದ್ದೇವೆ?
13 ಆದರೂ, ಏದೆನ್ ತೋಟದಲ್ಲಿ ನಡೆದುದಕ್ಕೂ ಮನುಷ್ಯನಾದ ಯೋಬನಿಗೆ ಸಂಭವಿಸಿದುದಕ್ಕೂ ಹೆಚ್ಚು ಆಳವಾದ ಅರ್ಥಗರ್ಭಿತತೆಯಿದೆ. ಸೈತಾನನು ಎತ್ತಿದ ವಿವಾದಾಂಶಗಳು ಸಕಲ ಮಾನವ ಕುಲವನ್ನು—ಇಂದು ನಮ್ಮ ಸಮೇತ—ಒಳಗೂಡಿಸುತ್ತವೆ. ದೇವರ ನಾಮ ದೂಷಣೆಗೊಳಗಾಯಿತು ಮತ್ತು ಆತನ ಪರಮಾಧಿಕಾರ ಪಂಥಾಹ್ವಾನಕ್ಕೊಳಗಾಯಿತು. ದೇವರ ಸೃಷ್ಟಿಯಾದ ಮನುಷ್ಯನ ಯಥಾರ್ಥತೆಯು ವಿವಾದಕ್ಕೊಳಗಾಯಿತು. ಈ ವಿವಾದಾಂಶಗಳು ತೀರ್ಮಾನಿಸಲ್ಪಡಬೇಕಾಗಿದ್ದವು.
ವಿವಾದಾಂಶಗಳನ್ನು ಬಗೆಹರಿಸುವ ವಿಧ
14. ದುರುದ್ದೇಶದ ಪಂಥಾಹ್ವಾನವನ್ನು ಎದುರಿಸುವಾಗ ಒಬ್ಬ ಆಪಾದಿತ ವ್ಯಕ್ತಿಯು ಏನು ಮಾಡಬಹುದು?
14 ದೃಷ್ಟಾಂತದ ಸಲುವಾಗಿ, ನೀವು ಅನೇಕ ಮಕ್ಕಳಿರುವ ಒಂದು ಸಂತೋಷದ ಕುಟುಂಬದಲ್ಲಿ ಒಬ್ಬ ಪ್ರೀತಿಯ ಹೆತ್ತವರಾಗಿದ್ದೀರೆಂದು ಇಟ್ಟುಕೊಳ್ಳೋಣ. ನಿಮ್ಮ ನೆರೆಯವರಲ್ಲಿ ಒಬ್ಬನು, ನೀವು ಕೆಟ್ಟ ಹೆತ್ತವರಾಗಿದ್ದೀರೆಂಬ ಅಪವಾದಹಾಕಿ, ಸುಳ್ಳುಗಳನ್ನು ಹಬ್ಬಿಸುತ್ತಾನೆಂದು ಭಾವಿಸಿ. ಆ ನೆರೆಯವನು, ನಿಮ್ಮ ಮಕ್ಕಳು ನಿಮ್ಮನ್ನು ಪ್ರೀತಿಸುವುದಿಲ್ಲವೆಂದೂ, ಅವರು ನಿಮ್ಮೊಂದಿಗೆ ಬದುಕುವುದು ಅವರಿಗೆ ಇನ್ನಾವ ಉತ್ತಮ ಮಾರ್ಗವೂ ಇಲ್ಲದ ಕಾರಣವೆಂದೂ ಮತ್ತು ಯಾರಾದರೂ ಅವರಿಗೆ ಆ ಮಾರ್ಗ ತೋರಿಸುವಲ್ಲಿ ಅವರು ಬಿಟ್ಟುಹೋಗುವರೆಂದೂ ಹೇಳುವುದಾದರೆ, ‘ಅಸಂಬದ್ಧ!’ ಎಂದು ನೀವು ಹೇಳೀರಿ. ಸರಿ, ಆದರೆ ಅದನ್ನು ನೀವು ಹೇಗೆ ರುಜುಮಾಡುವಿರಿ? ಕೆಲವು ಹೆತ್ತವರು ಕೋಪದಿಂದ ಪ್ರತಿಕ್ರಿಯಿಸಿಯಾರು. ಇಂತಹ ಹಿಂಸಾತ್ಮಕ ಪ್ರತಿಕ್ರಿಯೆಯು, ಹೆಚ್ಚು ಸಮಸ್ಯೆಗಳನ್ನು ಸೃಷ್ಟಿಸುವುದು ಮಾತ್ರವಲ್ಲ, ಸುಳ್ಳುಗಳಿಗೆ ಬೆಂಬಲವನ್ನೂ ಕೊಡುವುದು. ಇಂತಹ ಸಮಸ್ಯೆಯೊಂದಿಗೆ ವ್ಯವಹರಿಸುವ ಒಂದು ತೃಪ್ತಿಕರವಾದ ವಿಧಾನವು, ನಿಮ್ಮ ಅಪವಾದಿ ತನ್ನ ಹೇಳಿಕೆಯನ್ನು ರುಜುಪಡಿಸುವಂತೆಯೂ ನಿಮ್ಮ ಮಕ್ಕಳು ನಿಮ್ಮನ್ನು ಯಥಾರ್ಥವಾಗಿ ಪ್ರೀತಿಸುತ್ತಾರೆಂದು ಸಾಕ್ಷಿ ನೀಡುವಂತೆಯೂ ಅವರಿಗೆ ಸಂದರ್ಭವನ್ನು ಕೊಡುವುದೇ.
15. ಸೈತಾನನ ಪಂಥಾಹ್ವಾನದೊಂದಿಗೆ ಹೇಗೆ ವ್ಯವಹರಿಸಲು ಯೆಹೋವನು ಆರಿಸಿಕೊಂಡನು?
15 ಯೆಹೋವನು ಪ್ರೀತಿಸುವ ಹೆತ್ತವನಂತಿದ್ದಾನೆ. ಆದಾಮ, ಹವ್ವರನ್ನು ಮಕ್ಕಳಿಗೆ ಹೋಲಿಸಬಹುದು, ಮತ್ತು ಸೈತಾನನು ಆ ಸುಳ್ಳಾಡುವ ನೆರೆಯವನ ಪಾತ್ರಕ್ಕೆ ತಕ್ಕವನಾಗುತ್ತಾನೆ. ದೇವರು ವಿವೇಕದಿಂದ ಸೈತಾನ, ಆದಾಮ ಮತ್ತು ಹವ್ವರನ್ನು ಕೂಡಲೆ ನಾಶಮಾಡದೆ, ಈ ತಪ್ಪಿತಸ್ಥರು ಸ್ವಲ್ಪ ಸಮಯಕ್ಕೆ ಜೀವಿಸುತ್ತಾ ಮುಂದುವರಿಯುವಂತೆ ಬಿಟ್ಟನು. ಇದು ನಮ್ಮ ಪ್ರಥಮ ಪಿತೃಗಳಿಗೆ ಮಾನವ ಕುಟುಂಬವನ್ನು ಪ್ರಾರಂಭಿಸಲು ಸಮಯವನ್ನು ಕೊಟ್ಟಿತು ಮತ್ತು ವಿವಾದಾಂಶಗಳು ಬಗೆಹರಿಸಲ್ಪಡುವಂತೆ ಇದು ಪಿಶಾಚನಿಗೆ ಅವನ ವಾದ ಸತ್ಯವಾಗಿದೆಯೋ ಎಂದು ರುಜುಮಾಡುವ ಸಂದರ್ಭವನ್ನು ಕೊಟ್ಟಿದೆ. ಆದರೂ, ಕೆಲವು ಮಾನವರು ತನಗೆ ನಿಷ್ಠರಾಗಿದ್ದು, ಹೀಗೆ ಸೈತಾನನನ್ನು ಸುಳ್ಳುಗಾರನೆಂದು ರುಜುಮಾಡುವರೆಂದು ದೇವರಿಗೆ ಆದಿಯಿಂದಲೇ ಗೊತ್ತಿತ್ತು. ಯೆಹೋವನು ಆತನನ್ನು ಪ್ರೀತಿಸುವವರನ್ನು ಆಶೀರ್ವದಿಸುತ್ತಾ ಮತ್ತು ಅವರಿಗೆ ಸಹಾಯಮಾಡುತ್ತಾ ಮುಂದುವರಿದಿದ್ದಾನೆಂಬುದಕ್ಕೆ ನಾವೆಷ್ಟು ಕೃತಜ್ಞರು!—2 ಪೂರ್ವಕಾಲವೃತ್ತಾಂತ 16:9; ಜ್ಞಾನೋಕ್ತಿ 15:3.
ಏನು ರುಜುವಾಗಿದೆ?
16. ಜಗತ್ತು ಹೇಗೆ ಸೈತಾನನ ಅಧಿಕಾರದೊಳಗೆ ಬಂದಿದೆ?
16 ಸರಿ ಸುಮಾರು ಮಾನವ ಇತಿಹಾಸದಲ್ಲೆಲ್ಲ, ಮಾನವ ಕುಲದ ಮೇಲೆ ಅಧಿಕಾರ ನಡೆಸುವ ತನ್ನ ಹಂಚಿಕೆಗಳನ್ನು ಹೂಡಲು ಸೈತಾನನಿಗೆ ಪೂರ್ಣ ಸ್ವಾತಂತ್ರ್ಯವಿತ್ತು. ಬೇರೆ ವಿಷಯಗಳಲ್ಲದೆ, ಅವನು ರಾಜಕೀಯ ಶಕ್ತಿಗಳ ಮೇಲೆ ಪ್ರಭಾವವನ್ನು ನಿರ್ವಹಿಸಿ, ಯೆಹೋವನ ಬದಲಿಗೆ ಕುತಂತ್ರದಿಂದ ತನಗೆ ಆರಾಧನೆಯನ್ನು ಬರಿಸುವಂತಹ ಧರ್ಮಗಳನ್ನು ಉತ್ತೇಜಿಸಿದ್ದಾನೆ. ಹೀಗೆ ಪಿಶಾಚನು, “ಈ ಪ್ರಪಂಚದ ದೇವರು” ಆಗಿ ಪರಿಣಮಿಸಿದ್ದಾನೆ, ಮತ್ತು ಅವನನ್ನು, “ಇಹಲೋಕಾಧಿಪತಿ” ಎಂದು ಕರೆಯಲಾಗುತ್ತದೆ. (2 ಕೊರಿಂಥ 4:4; ಯೋಹಾನ 12:31) ನಿಜವಾಗಿಯೂ, “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಇದರ ಅರ್ಥವು, ಸಕಲ ಮಾನವ ಕುಲವನ್ನು ಯೆಹೋವ ದೇವರಿಂದ ಸೆಳೆಯಶಕ್ತನೆಂಬ ತನ್ನ ವಾದವನ್ನು ಸೈತಾನನು ರುಜುಪಡಿಸಿದ್ದಾನೆ ಎಂದಾಗುತ್ತದೊ? ನಿಶ್ಚಯವಾಗಿಯೂ ಇಲ್ಲ! ಸೈತಾನನನ್ನು ಅಸ್ತಿತ್ವದಲ್ಲಿರುವಂತೆ ಅನುಮತಿಸಿರುವಾಗ, ಯೆಹೋವನು ತನ್ನ ಸ್ವಂತ ಉದ್ದೇಶವನ್ನು ನಿರ್ವಹಿಸುತ್ತಾ ಮುಂದುವರಿದಿದ್ದಾನೆ. ಹಾಗಾದರೆ, ದುಷ್ಟತನಕ್ಕೆ ದೇವರ ಅನುಮತಿಯ ಕುರಿತು ಬೈಬಲು ಏನನ್ನು ಪ್ರಕಟಪಡಿಸುತ್ತದೆ?
17. ದುಷ್ಟತ್ವ ಮತ್ತು ಕಷ್ಟಾನುಭವದ ಕಾರಣದ ಕುರಿತು ನಾವು ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?
17 ದುಷ್ಟತ್ವ ಮತ್ತು ಕಷ್ಟಾನುಭವವು ಯೆಹೋವನಿಂದ ಉಂಟುಮಾಡಲ್ಪಟ್ಟಿಲ್ಲ. ಸೈತಾನನು ಈ ಜಗತ್ತಿನ ಅಧಿಪತಿ ಮತ್ತು ಈ ವಿಷಯಗಳ ವ್ಯವಸ್ಥೆಯ ದೇವನಾಗಿರುವುದರಿಂದ, ಅವನೂ ಅವನ ಪಕ್ಷದಲ್ಲಿರುವವರೂ ಮಾನವ ಸಮಾಜದ ಸದ್ಯದ ಪರಿಸ್ಥಿತಿ ಹಾಗೂ ಮಾನವ ಕುಲವು ಅನುಭವಿಸಿರುವ ಸಕಲ ದುರವಸ್ಥೆಗೆ ಕಾರಣಭೂತರು. ಇಂತಹ ಕಷ್ಟಗಳಿಗೆ ದೇವರು ಕಾರಣನೆಂದು ಯೋಗ್ಯವಾಗಿ ಯಾವನೂ ಹೇಳಸಾಧ್ಯವಿಲ್ಲ.—ರೋಮಾಪುರ 9:14.
18. ದುಷ್ಟತ್ವ ಮತ್ತು ಕಷ್ಟಾನುಭವಕ್ಕೆ ಯೆಹೋವನು ಕೊಟ್ಟ ಅನುಮತಿಯು, ದೇವರಿಂದ ಸ್ವತಂತ್ರವಾಗಿರುವ ಅಭಿಪ್ರಾಯದ ಕುರಿತು ಏನನ್ನು ರುಜುಪಡಿಸಿದೆ?
18 ಯೆಹೋವನು ದುಷ್ಟತ್ವ ಮತ್ತು ಕಷ್ಟಾನುಭವಕ್ಕೆ ಕೊಟ್ಟ ಅನುಮತಿಯು, ದೇವರಿಂದ ಸ್ವತಂತ್ರರಾಗಿರುವುದು ಹೆಚ್ಚು ಉತ್ತಮವಾದ ಲೋಕವನ್ನು ಉಂಟುಮಾಡಿಲ್ಲ ವೆಂಬುದನ್ನು ರುಜುಪಡಿಸಿದೆ. ಇತಿಹಾಸವು ಒಂದರ ನಂತರ ಇನ್ನೊಂದು ವಿಪತ್ತಿನಿಂದ ಗುರುತಿಸಲ್ಪಟ್ಟಿರುವುದನ್ನು ಅಲ್ಲಗಳೆಯಸಾಧ್ಯವಿಲ್ಲ. ಮಾನವರು ತಮ್ಮ ಸ್ವಂತ ಸ್ವತಂತ್ರ ಮಾರ್ಗವನ್ನು ಬೆನ್ನಟ್ಟಲು ಆರಿಸಿಕೊಂಡಿರುವುದು ಮತ್ತು ದೇವರ ವಾಕ್ಯ ಹಾಗೂ ಚಿತ್ತಕ್ಕಾಗಿ ನಿಜವಾದ ಪರಿಗಣನೆಯನ್ನು ತೋರಿಸದಿರುವುದು ಇದಕ್ಕೆ ಕಾರಣ. ಯೆಹೋವನ ಪುರಾತನ ಜನರು ಹಾಗೂ ಅವರ ಮುಖಂಡರು ‘ತಮ್ಮ ತಮ್ಮ ಮಾರ್ಗವನ್ನು’ ಅಪನಂಬಿಗಸ್ತಿಕೆಯಿಂದ ಬೆನ್ನಟ್ಟಿದಾಗ ಮತ್ತು ಆತನ ವಾಕ್ಯವನ್ನು ತಿರಸ್ಕರಿಸಿದಾಗ, ಪರಿಣಾಮಗಳು ವಿಪತ್ಕಾರಕವಾಗಿದ್ದವು. ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ದೇವರು ಅವರಿಗೆ ಹೇಳಿದ್ದು: “ಜ್ಞಾನಿಗಳು ಆಶಾಭಂಗಪಟ್ಟು ಬೆಬ್ಬರಬಿದ್ದು ಸಿಕ್ಕಿಕೊಂಡಿದ್ದಾರೆ; ಇಗೋ, ಯೆಹೋವನ ಮಾತನ್ನು ನಿರಾಕರಿಸಿದರು; ಅವರ ಜ್ಞಾನವು ಎಷ್ಟರದು?” (ಯೆರೆಮೀಯ 8:5, 6, 9) ಯೆಹೋವನ ಮಟ್ಟಗಳನ್ನು ಅನುಸರಿಸುವುದರಲ್ಲಿ ವಿಫಲಗೊಂಡು, ಸರ್ವಸಾಮಾನ್ಯವಾಗಿ ಮಾನವ ಕುಲವು ಉಲ್ಲೋಲ ಕಲ್ಲೋಲವಾದ ಸಮುದ್ರದಲ್ಲಿ ಎಸೆಯಲ್ಪಟ್ಟಿರುವ ಚುಕ್ಕಾಣಿಯಿಲ್ಲದ ಹಡಗಿನಂತಾಗಿದೆ.
19. ಸೈತಾನನು ಸಕಲ ಮಾನವರನ್ನು ದೇವರ ವಿರುದ್ಧ ತಿರುಗಿಸಲಾರನು ಎಂಬುದಕ್ಕೆ ಯಾವ ರುಜುವಾತಿದೆ?
19 ದುಷ್ಟತ್ವ ಮತ್ತು ಕಷ್ಟಾನುಭವಕ್ಕೆ ದೇವರ ಅನುಮತಿಯು, ಸೈತಾನನು ಸಕಲ ಮಾನವ ಕುಲವನ್ನು ಯೆಹೋವನಿಂದ ತಿರುಗಿಸಲು ಶಕ್ತನಾಗಿಲ್ಲ ಎಂಬುದನ್ನೂ ರುಜುಪಡಿಸಿದೆ. ಯಾವುದೇ ಶೋಧನೆಗಳು ಮತ್ತು ಆಪತ್ತುಗಳು ಅವರ ಮೇಲೆ ತರಲ್ಪಟ್ಟರೂ ದೇವರಿಗೆ ನಂಬಿಗಸ್ತರಾಗಿ ಉಳಿದ ವ್ಯಕ್ತಿಗಳು ಯಾವಾಗಲೂ ಇದ್ದರೆಂದು ಇತಿಹಾಸವು ತೋರಿಸುತ್ತದೆ. ಶತಮಾನಗಳಲ್ಲಿ, ಯೆಹೋವನ ಶಕ್ತಿಯು ಆತನ ಸೇವಕರ ಪರವಾಗಿ ತೋರಿಸಲ್ಪಟ್ಟಿದೆ, ಮತ್ತು ಆತನ ನಾಮವು ಭೂಮಿಯಲ್ಲೆಲ್ಲ ಘೋಷಿಸಲ್ಪಟ್ಟಿದೆ. (ವಿಮೋಚನಕಾಂಡ 9:16; 1 ಸಮುವೇಲ 12:22) ಇಬ್ರಿಯ 11 ನೆಯ ಅಧ್ಯಾಯವು, ಹೇಬೆಲ, ಹನೋಕ, ನೋಹ, ಅಬ್ರಹಾಮ ಮತ್ತು ಮೋಶೆ ಸೇರಿರುವ ನಂಬಿಗಸ್ತರ ಒಂದು ಉದ್ದ ಸಾಲಿನ ಕುರಿತು ನಮಗೆ ತಿಳಿಸುತ್ತದೆ. ಇಬ್ರಿಯ 12:1 ಅವರನ್ನು, ‘ಸಾಕ್ಷಿಗಳ ಒಂದು ಮಹಾ ಮೇಘ,’ ಎಂದು ಕರೆಯುತ್ತದೆ. ಅವರು ಯೆಹೋವನಲ್ಲಿ ಕದಲದ ನಂಬಿಕೆಯ ಮಾದರಿಗಳಾಗಿದ್ದರು. ಆಧುನಿಕ ಸಮಯಗಳಲ್ಲಿಯೂ, ಅನೇಕರು ಮುರಿಯಲಾಗದ ಸಮಗ್ರತೆಯಲ್ಲಿ ತಮ್ಮ ಜೀವಗಳನ್ನು ದೇವರಿಗೆ ಸಮರ್ಪಿಸಿದ್ದಾರೆ. ತಮ್ಮ ನಂಬಿಕೆ ಮತ್ತು ಪ್ರೀತಿಯ ಮೂಲಕ ಇಂತಹ ವ್ಯಕ್ತಿಗಳು, ಸೈತಾನನು ಸಕಲ ಮಾನವರನ್ನು ದೇವರ ವಿರುದ್ಧವಾಗಿ ತಿರುಗಿಸಲಾರನೆಂದು ನಿರ್ಣಾಯಕವಾಗಿ ರುಜುಮಾಡುತ್ತಾರೆ.
20. ದುಷ್ಟತ್ವ ಮತ್ತು ಕಷ್ಟಾನುಭವ ಮುಂದುವರಿಯುವಂತೆ ದೇವರು ಬಿಟ್ಟದ್ದು, ದೇವರ ಮತ್ತು ಮಾನವ ಕುಲದ ಸಂಬಂಧದಲ್ಲಿ ಏನನ್ನು ರುಜುಪಡಿಸಿದೆ?
20 ಕೊನೆಯದಾಗಿ, ದುಷ್ಟತ್ವ ಮತ್ತು ಕಷ್ಟಾನುಭವವು ಮುಂದುವರಿಯುವಂತೆ ಯೆಹೋವನು ಅನುಮತಿಸಿರುವುದು, ಅವರ ಅನಂತಾಶೀರ್ವಾದ ಮತ್ತು ಸಂತೋಷಕ್ಕಾಗಿ ಮಾನವ ಕುಲದ ಮೇಲೆ ಆಳುವ ಸಾಮರ್ಥ್ಯ ಮತ್ತು ಹಕ್ಕು ಕೇವಲ ಸೃಷ್ಟಿಕರ್ತನಾದ ಯೆಹೋವನಿಗಿದೆ ಎಂಬ ರುಜುವಾತನ್ನು ಒದಗಿಸಿದೆ. ಶತಮಾನಗಳಲ್ಲಿ, ಮಾನವ ಕುಲವು ಸರಕಾರಗಳ ಅನೇಕ ರೂಪಗಳನ್ನು ಪ್ರಯೋಗಿಸಿ ನೋಡಿದೆ. ಆದರೆ ಪರಿಣಾಮವೇನಾಗಿದೆ? ಇಂದು ರಾಷ್ಟ್ರಗಳನ್ನು ಎದುರಿಸುವ ಜಟಿಲ ಸಮಸ್ಯೆಗಳು ಮತ್ತು ಬಿಕ್ಕಟ್ಟುಗಳು, ನಿಜವಾಗಿಯೂ, ಬೈಬಲು ಸೂಚಿಸುವಂತೆ, “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿ” ಮಾಡಿರುವುದಕ್ಕೆ ಧಾರಾಳ ರುಜುವಾತಾಗಿವೆ. (ಪ್ರಸಂಗಿ 8:9) ಯೆಹೋವನು ಮಾತ್ರ ನಮ್ಮ ರಕ್ಷಣೆಗೆ ಬಂದು ತನ್ನ ಮೂಲ ಉದ್ದೇಶವನ್ನು ನೆರವೇರಿಸಬಲ್ಲನು. ಆತನು ಇದನ್ನು ಹೇಗೆ ಮಾಡುವನು, ಮತ್ತು ಯಾವಾಗ?
21. ಸೈತಾನನಿಗೆ ಏನು ಮಾಡಲಾಗುವುದು, ಮತ್ತು ಇದನ್ನು ನೆರವೇರಿಸಲು ಯಾರನ್ನು ಉಪಯೋಗಿಸಲಾಗುವುದು?
21 ಆದಾಮ, ಹವ್ವರು ಸೈತಾನನ ಹೂಟಕ್ಕೆ ಬಲಿಬಿದ್ದ ಕೂಡಲೆ, ದೇವರು ಒಂದು ರಕ್ಷಣಾ ಮಾಧ್ಯಮದ ಕುರಿತ ತನ್ನ ಉದ್ದೇಶವನ್ನು ಪ್ರಕಟಿಸಿದನು. ಯೆಹೋವನು ಸೈತಾನನ ಕುರಿತು ಹೀಗೆಂದು ಘೋಷಿಸಿದನು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:15) ಪಿಶಾಚನು ತನ್ನ ದುಷ್ಕೃತ್ಯಗಳನ್ನು ಮಾಡುತ್ತಿರಲು ಸದಾ ಅನುಮತಿಸಲ್ಪಡುವುದಿಲ್ಲವೆಂಬ ಖಾತರಿಯನ್ನು ಆ ಘೋಷಣೆ ಕೊಟ್ಟಿತು. ಮೆಸ್ಸೀಯ ಸಂಬಂಧಿತ ರಾಜ್ಯದ ರಾಜನೋಪಾದಿ, ವಾಗ್ದಾನಿತ ಸಂತಾನವಾದ ಯೇಸು ಕ್ರಿಸ್ತನು, ‘ಸೈತಾನನ ತಲೆಯನ್ನು ಜಜ್ಜುವನು.’ ಹೌದು, “ಶೀಘ್ರವಾಗಿ,” ಯೇಸುವು ದಂಗೆಕೋರ ಸೈತಾನನನ್ನು ಜಜ್ಜುವನು!—ರೋಮಾಪುರ 16:20.
ನೀವೇನು ಮಾಡುವಿರಿ?
22. (ಎ) ನೀವು ಯಾವ ಪ್ರಶ್ನೆಗಳನ್ನು ಎದುರಿಸತಕ್ಕದ್ದು? (ಬಿ) ಸೈತಾನನು ದೇವರಿಗೆ ನಂಬಿಗಸ್ತರಾಗಿರುವವರ ಮೇಲೆ ಕೋಪವನ್ನು ಕಾರುತ್ತಾನಾದರೂ, ಅವರಿಗೆ ಯಾವುದರ ಖಾತರಿಯಿರಬಲ್ಲದು?
22 ಒಳಗೂಡಿರುವ ವಿವಾದಾಂಶಗಳನ್ನು ತಿಳಿದಿರುವ ನೀವು ಯಾರ ಪಕ್ಷದಲ್ಲಿ ನಿಲ್ಲುವಿರಿ? ನಿಮ್ಮ ಕ್ರಿಯೆಗಳ ಮೂಲಕ ನೀವು ಯೆಹೋವನ ಕರ್ತವ್ಯನಿಷ್ಠ ಬೆಂಬಲಿಗರೆಂದು ನೀವು ರುಜುಪಡಿಸುವಿರೊ? ತನಗಿರುವ ಸಮಯವು ಕೊಂಚವೆಂದು ಸೈತಾನನಿಗೆ ತಿಳಿದಿರುವುದರಿಂದ, ದೇವರಿಗೆ ಸಮಗ್ರತೆಯನ್ನು ತೋರಿಸಬಯಸುವವರ ಮೇಲೆ ತನ್ನ ಕೋಪವನ್ನು ಕಾರಲು ಅವನು ತನಗೆ ಸಾಧ್ಯವಿರುವುದನ್ನೆಲ್ಲ ಮಾಡುವನು. (ಪ್ರಕಟನೆ 12:12) ಆದರೆ ಸಹಾಯಕ್ಕಾಗಿ ದೇವರ ಕಡೆಗೆ ನೀವು ನೋಡಬಲ್ಲಿರಿ, ಏಕೆಂದರೆ, “ಕರ್ತನು [“ಯೆಹೋವನು,” NW] ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ . . . ಬಲ್ಲವನಾಗಿದ್ದಾನೆ.” (2 ಪೇತ್ರ 2:9) ನಿಮಗೆ ತಾಳಸಾಧ್ಯವಿರುವುದನ್ನು ಮೀರಿ ನೀವು ಪರೀಕ್ಷಿಸಲ್ಪಡುವಂತೆ ಆತನು ಬಿಡನು. ಮತ್ತು ಆ ಶೋಧನೆಗಳನ್ನು ನೀವು ತಾಳಶಕ್ತರಾಗುವಂತೆ ಆತನು ಮಾರ್ಗವನ್ನೂ ಮಾಡಿಕೊಡುವನು.—1 ಕೊರಿಂಥ 10:13.
23. ನಾವು ಭರವಸೆಯಿಂದ ಏನನ್ನು ಎದುರು ನೋಡಬಲ್ಲೆವು?
23 ಭರವಸೆಯಿಂದ, ನಾವು ಅರಸನಾದ ಯೇಸು ಕ್ರಿಸ್ತನು ಸೈತಾನನ ಮತ್ತು ಅವನನ್ನು ಹಿಂಬಾಲಿಸುವವರೆಲ್ಲರ ವಿರುದ್ಧ ಕ್ರಮವನ್ನು ಕೈಕೊಳ್ಳುವ ಸಮಯವನ್ನು ಮುನ್ನೋಡೋಣ. (ಪ್ರಕಟನೆ 20:1-3) ಯೇಸುವು, ಮಾನವ ಕುಲವು ಅನುಭವಿಸಿರುವ ದುಸ್ಥಿತಿ ಮತ್ತು ಕ್ಷೋಭೆಗೆ ಹೊಣೆಗಾರರಾಗಿರುವವರೆಲ್ಲರನ್ನು ನಿರ್ಮೂಲಮಾಡುವನು. ಆ ಸಮಯದ ವರೆಗೆ ಕಷ್ಟಾನುಭವದ ಒಂದು ವಿಶೇಷ ರೀತಿಯ ವೇದನಾಮಯ ರೂಪವು, ಮರಣದಲ್ಲಿ ನಮ್ಮ ಪ್ರಿಯರ ನಷ್ಟವೇ. ಅವರಿಗೇನು ಸಂಭವಿಸುತ್ತದೆಂದು ಕಂಡುಹಿಡಿಯಲು ಮುಂದಿನ ಅಧ್ಯಾಯವನ್ನು ಓದಿರಿ.
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
ಯೆಹೋವನು ಮಾನವ ಕಷ್ಟಾನುಭವಗಳನ್ನು ಉಂಟುಮಾಡುವುದಿಲ್ಲವೆಂದು ನಮಗೆ ಹೇಗೆ ಗೊತ್ತು?
ಏದೆನಿನಲ್ಲಿ ಸೈತಾನನಿಂದ ಯಾವ ವಿವಾದಾಂಶಗಳು ಎಬ್ಬಿಸಲ್ಪಟ್ಟು ಯೋಬನ ದಿನದಲ್ಲಿ ಸ್ಪಷ್ಟಗೊಳಿಸಲ್ಪಟ್ಟವು?
ಕಷ್ಟಾನುಭವಕ್ಕೆ ದೇವರ ಅನುಮತಿಯು ಏನನ್ನು ರುಜುಪಡಿಸಿದೆ?
[ಅಧ್ಯಯನ ಪ್ರಶ್ನೆಗಳು]