ದೇವರು ಯಾರ ಆರಾಧನೆಯನ್ನು ಅಂಗೀಕರಿಸುತ್ತಾನೆ?
ಅಧ್ಯಾಯ 5
ದೇವರು ಯಾರ ಆರಾಧನೆಯನ್ನು ಅಂಗೀಕರಿಸುತ್ತಾನೆ?
1. ಸಮಾರ್ಯದ ಓರ್ವ ಸ್ತ್ರೀಯು ಆರಾಧನೆಯ ಕುರಿತು ಏನು ತಿಳಿಯಬಯಸಿದಳು?
ನೀವು ಎಂದಾದರೂ, ‘ದೇವರು ಯಾರ ಆರಾಧನೆಯನ್ನು ಅಂಗೀಕರಿಸುತ್ತಾನೆ?’ ಎಂದು ಕುತೂಹಲಪಟ್ಟದ್ದುಂಟೊ? ಸಮಾರ್ಯದಲ್ಲಿ ಗೆರಿಜ್ಜೀಮ್ ಬೆಟ್ಟದ ಬಳಿ ಒಬ್ಬ ಸ್ತ್ರೀ, ಯೇಸು ಕ್ರಿಸ್ತನೊಡನೆ ಮಾತಾಡಿದಾಗ ಅವಳ ಮನಸ್ಸಿಗೆ ಅಂತಹ ಒಂದು ಪ್ರಶ್ನೆಯು ಬಂದಿದ್ದಿರಬಹುದು. ಸಮಾರ್ಯದವರ ಮತ್ತು ಯೆಹೂದ್ಯರ ಆರಾಧನೆಯ ಮಧ್ಯೆ ಇದ್ದ ಒಂದು ವ್ಯತ್ಯಾಸಕ್ಕೆ ಗಮನವನ್ನು ಸೆಳೆಯುತ್ತಾ, ಆಕೆ ಹೇಳಿದ್ದು: “ನಮ್ಮ ಹಿರಿಯರು ಈ ಬೆಟ್ಟದಲ್ಲಿ ದೇವಾರಾಧನೆಮಾಡುತ್ತಿದ್ದರು; ಆದರೆ ನೀವು ಆರಾಧನೆಮಾಡತಕ್ಕ ಸ್ಥಳವು ಯೆರೂಸಲೇಮಿನಲ್ಲಿ ಅದೆ ಅನ್ನುತ್ತೀರಿ.” (ಯೋಹಾನ 4:20) ಆ ಸಮಾರ್ಯದ ಸ್ತ್ರೀಗೆ ಯೇಸು, ದೇವರು ಎಲ್ಲ ಆರಾಧನೆಗಳನ್ನು ಅಂಗೀಕರಿಸುತ್ತಾನೆಂದು ಹೇಳಿದನೊ? ಅಥವಾ ದೇವರನ್ನು ಮೆಚ್ಚಿಸಲು ನಿರ್ದಿಷ್ಟ ವಿಷಯಗಳು ಅಗತ್ಯವೆಂದು ಅವನು ಹೇಳಿದನೊ?
2. ಆ ಸಮಾರ್ಯದ ಸ್ತ್ರೀಗೆ ಉತ್ತರ ಕೊಡುತ್ತಾ ಯೇಸು ಏನಂದನು?
2 ಯೇಸುವಿನ ಚಕಿತಗೊಳಿಸುವ ಉತ್ತರ ಇದಾಗಿತ್ತು: “ಒಂದು ಕಾಲ ಬರುತ್ತದೆ, ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ ಈ ಬೆಟ್ಟಕ್ಕೂ ಹೋಗುವದಿಲ್ಲ, ಯೆರೂಸಲೇಮಿಗೂ ಹೋಗುವದಿಲ್ಲ.” (ಯೋಹಾನ 4:21) ಸಮಾರ್ಯದವರು ಬಹುಕಾಲದಿಂದ ಯೆಹೋವನನ್ನೂ ಬೇರೆ ದೇವರುಗಳನ್ನೂ ಗೆರಿಜ್ಜೀಮ್ ಬೆಟ್ಟದ ಮೇಲೆ ಆರಾಧಿಸಿದರು. (2 ಅರಸು 17:25) ಈಗ ಯೇಸು ಕ್ರಿಸ್ತನು, ಆ ಸ್ಥಳವಾಗಲಿ ಯೆರೂಸಲೇಮಾಗಲಿ, ಸತ್ಯಾರಾಧನೆಗೆ ಪ್ರಾಮುಖ್ಯವಲ್ಲ ಎಂದು ಹೇಳಿದನು.
ಆತ್ಮ ಮತ್ತು ಸತ್ಯದಿಂದ ಆರಾಧನೆ
3. (ಎ) ಸಮಾರ್ಯದವರು ದೇವರನ್ನು ಏಕೆ ನಿಜವಾಗಿಯೂ ತಿಳಿದಿರಲಿಲ್ಲ? (ಬಿ) ನಂಬಿಗಸ್ತ ಯೆಹೂದ್ಯರು ಮತ್ತು ಇತರರಿಗೆ ದೇವರನ್ನು ತಿಳಿಯಲು ಹೇಗೆ ಸಾಧ್ಯವಿತ್ತು?
3 ಯೇಸು ಆ ಸಮಾರ್ಯದ ಸ್ತ್ರೀಗೆ ಮುಂದುವರಿಸಿ ಹೇಳಿದ್ದು: “ಬರಬೇಕಾದ ರಕ್ಷಣೆಯು ಯೆಹೂದ್ಯರೊಳಗಿಂದ ಬರುತ್ತದಷ್ಟೆ. ಆದದರಿಂದ ನಾವು ಅರಿತಿರುವದನ್ನೇ ಆರಾಧಿಸುವವರಾಗಿದ್ದೇವೆ; ನೀವು ಅರಿಯದೆ ಇರುವಂಥದನ್ನು ಆರಾಧಿಸುವವರು.” (ಯೋಹಾನ 4:22) ಸಮಾರ್ಯದವರಲ್ಲಿ ಸುಳ್ಳು ಧಾರ್ಮಿಕ ವಿಚಾರಗಳಿದ್ದು, ಅವರು ಬೈಬಲಿನ ಮೊದಲಿನ ಐದು ಪುಸ್ತಕಗಳನ್ನು ಮಾತ್ರ ಅಂಗೀಕರಿಸಿದರು, ಅದು ಕೂಡ, ಸಮಾರಿಟನ್ ಪೆಂಟಟ್ಯೂಕ್ ಎಂಬ ಅವರ ಸ್ವಂತ ಪರಿಷ್ಕರಣದಲ್ಲಿ ಮಾತ್ರ. ಆದಕಾರಣ, ಅವರು ದೇವರನ್ನು ನಿಜವಾಗಿಯೂ ತಿಳಿಯಲಿಲ್ಲ. ಆದರೆ ಯೆಹೂದ್ಯರಿಗೆ ಶಾಸ್ತ್ರೀಯ ಜ್ಞಾನವು ಒಪ್ಪಿಸಲ್ಪಟ್ಟಿತ್ತು. (ರೋಮಾಪುರ 3:1, 2) ನಂಬಿಗಸ್ತ ಯೆಹೂದ್ಯರಿಗೆ ಮತ್ತು ಆಲಿಸುವ ಇನ್ನಾರಿಗೂ ದೇವರನ್ನು ತಿಳಿಯಲು ಆವಶ್ಯಕವಾಗಿದ್ದುದನ್ನು ಶಾಸ್ತ್ರಗಳು ಕೊಟ್ಟಿದ್ದವು.
4. ಯೇಸುವಿಗನುಸಾರ, ಯೆಹೂದ್ಯರು ಮತ್ತು ಸಮಾರ್ಯದವರ ಆರಾಧನೆಯು ದೇವರಿಗೆ ಅಂಗೀಕಾರಾರ್ಹವಾಗಬೇಕಿದ್ದರೆ, ಅವರು ಏನು ಮಾಡುವ ಅವಶ್ಯವಿತ್ತು?
4 ವಾಸ್ತವವಾಗಿ, ಯೆಹೂದ್ಯರು ಮತ್ತು ಸಮಾರ್ಯದವರು ಇವರಿಬ್ಬರೂ ದೇವರನ್ನು ಮೆಚ್ಚಿಸಲಿಕ್ಕಾಗಿ ತಮ್ಮ ಆರಾಧನಾ ವಿಧವನ್ನು ಹೊಂದಿಸಿಕೊಳ್ಳಬೇಕೆಂದು ಯೇಸುವು ತೋರಿಸಿದನು. ಅವನು ಹೇಳಿದ್ದು: “ಸತ್ಯಭಾವದಿಂದ ದೇವಾರಾಧನೆಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ; ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ. ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ [“ಆತ್ಮ ಮತ್ತು ಸತ್ಯದಿಂದ,” NW] ಆರಾಧಿಸಬೇಕು ಅಂದನು.” (ಯೋಹಾನ 4:23, 24) ನಾವು ದೇವರನ್ನು ‘ಆತ್ಮದಿಂದ,’ ನಂಬಿಕೆ ಮತ್ತು ಪ್ರೀತಿ ತುಂಬಿದ ಹೃದಯಗಳಿಂದ ಪ್ರಚೋದಿತರಾಗಿ ಆರಾಧಿಸುವುದು ಅಗತ್ಯ. ದೇವರ ವಾಕ್ಯವಾದ ಬೈಬಲನ್ನು ಅಧ್ಯಯನ ಮಾಡುವ ಮೂಲಕ ಮತ್ತು ಆತನ ಪ್ರಕಟಿತ ಸತ್ಯಾನುಸಾರ ಆತನನ್ನು ಆರಾಧಿಸುವ ಮೂಲಕ ನಮಗೆ “ಸತ್ಯದಿಂದ” ಆತನನ್ನು ಆರಾಧಿಸುವುದು ಸಾಧ್ಯ. ಹಾಗೆ ಮಾಡಲು ನೀವು ಆತುರವುಳ್ಳವರಾಗಿದ್ದೀರೊ?
5. (ಎ) “ಆರಾಧನೆ”ಯ ಅರ್ಥವೇನು? (ಬಿ) ದೇವರು ನಮ್ಮ ಆರಾಧನೆಯನ್ನು ಅಂಗೀಕರಿಸಬೇಕೆಂದು ಬಯಸುವಲ್ಲಿ ನಾವೇನು ಮಾಡಬೇಕು?
5 ದೇವರು ಸತ್ಯ ಆರಾಧನೆಯನ್ನು ಬಯಸುತ್ತಾನೆಂದು ಯೇಸು ಒತ್ತಿಹೇಳಿದನು. ಯೆಹೋವನಿಗೆ ಅನಂಗೀಕೃತವಾದ ಆರಾಧನಾ ರೀತಿಗಳಿವೆಯೆಂದು ಇದು ತೋರಿಸುತ್ತದೆ. ದೇವರನ್ನು ಆರಾಧಿಸುವುದೆಂದರೆ ಆತನಿಗೆ ಪೂಜ್ಯ ಸನ್ಮಾನವನ್ನು ಕೊಡುವುದು ಮತ್ತು ಆತನಿಗೆ ಪವಿತ್ರ ಸೇವೆಯನ್ನು ಸಲ್ಲಿಸುವುದು ಎಂದರ್ಥ. ಒಬ್ಬ ಬಲಾಢ್ಯನಾದ ಪ್ರಭುವಿಗೆ ಸನ್ಮಾನವನ್ನು ತೋರಿಸಲು ನೀವು ಬಯಸುವಲ್ಲಿ, ಆತನನ್ನು ಸೇವಿಸಲು ನೀವು ಆತುರಪಟ್ಟು ಆತನಿಗೆ ಮೆಚ್ಚಿಕೆಯಾಗುವುದನ್ನು ಮಾಡುವುದು ಸಂಭಾವ್ಯ. ಹಾಗಾದರೆ, ನಾವು ದೇವರನ್ನು ಮೆಚ್ಚಿಸಬಯಸುವುದು ಖಂಡಿತ. ಆದುದರಿಂದ, ‘ನನ್ನ ಧರ್ಮ ನನಗೆ ಒಗ್ಗುತ್ತದೆ,’ ಎಂದು ಕೇವಲ ಹೇಳುವ ಬದಲಿಗೆ, ನಮ್ಮ ಆರಾಧನೆಯು ದೇವರ ಆವಶ್ಯಕತೆಗಳಿಗೆ ಹೊಂದಿಕೆಯಾಗಿದೆ ಎಂಬುದನ್ನು ನಾವು ಖಾತರಿ ಮಾಡಿಕೊಳ್ಳುವುದು ಅಗತ್ಯ.
ತಂದೆಯ ಚಿತ್ತವನ್ನು ಮಾಡುವುದು
6, 7. ತನ್ನ ಶಿಷ್ಯರೆಂದು ವಾದಿಸುವ ಕೆಲವರನ್ನು ಯೇಸುವು ಏಕೆ ಒಪ್ಪಿಕೊಳ್ಳುವುದಿಲ್ಲ?
6 ನಾವು ಮತ್ತಾಯ 7:21-23ನ್ನು ಓದಿ, ಸಕಲ ಆರಾಧನೆಗಳು ದೇವರಿಗೆ ಅಂಗೀಕಾರಾರ್ಹವೊ ಎಂಬುದನ್ನು ನಿರ್ಣಯಿಸುವ ಒಂದು ನಿರ್ಧಾರಕ ಅಂಶವನ್ನು ಬೇರ್ಪಡಿಸಲು ಸಾಧ್ಯವೊ ಎಂದು ನೋಡೋಣ. ಯೇಸು ಹೇಳಿದ್ದು: “ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು. ಸ್ವಾಮೀ, ಸ್ವಾಮೀ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು [ದುಷ್ಟಾತ್ಮ ಜೀವಿಗಳನ್ನು] ಬಿಡಿಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ—ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.”
7 ಯೇಸು ಕ್ರಿಸ್ತನನ್ನು ಕರ್ತನೆಂದು ಒಪ್ಪಿಕೊಳ್ಳುವುದು ಸತ್ಯಾರಾಧನೆಯಲ್ಲಿ ಆವಶ್ಯಕ. ಆದರೆ ಯೇಸುವಿನ ಶಿಷ್ಯರೆಂದು ಹೇಳಿಕೊಳ್ಳುವ ಅನೇಕರ ಆರಾಧನೆಯಲ್ಲಿ ಏನೋ ಕಾಣೆಯಾಗಲಿಕ್ಕಿತ್ತು. ಕೆಲವರು “ಮಹತ್ಕಾರ್ಯಗಳನ್ನು,” ಊಹಿತ ಅದ್ಭುತ ವಾಸಿ ಮಾಡುವಿಕೆಯಂಥವುಗಳನ್ನು, ಮಾಡುವರೆಂದು ಅವನು ಹೇಳಿದನು. ಆದರೂ, ಯೇಸುವು ಯಾವುದನ್ನು ಅತ್ಯಾವಶ್ಯಕವೆಂದು ಹೇಳಿದನೋ ಅದನ್ನು ಮಾಡಲು ಅವರು ತಪ್ಪಲಿದ್ದರು. ಅವರು ‘[ಆತನ] ತಂದೆಯ ಚಿತ್ತದಂತೆ ಮಾಡುವವರು’ ಆಗಿರುವುದಿಲ್ಲ. ನಾವು ದೇವರನ್ನು ಮೆಚ್ಚಿಸಲು ಬಯಸುತ್ತಿರುವುದಾದರೆ, ಆ ತಂದೆಯ ಚಿತ್ತವೇನೆಂಬುದನ್ನು ಕಲಿತು, ಅನಂತರ ಅದನ್ನು ಮಾಡಬೇಕು.
ನಿಷ್ಕೃಷ್ಟ ಜ್ಞಾನ—ಒಂದು ಸಂರಕ್ಷಣೆ
8. ನಾವು ದೇವರ ಚಿತ್ತವನ್ನು ಮಾಡಬೇಕಾದರೆ ಏನು ಅಗತ್ಯವಿದೆ, ಮತ್ತು ಯಾವ ತಪ್ಪಾದ ವೀಕ್ಷಣಗಳಿಂದ ನಾವು ದೂರವಿರಬೇಕು?
8 ದೇವರ ಚಿತ್ತವನ್ನು ಮಾಡಲು ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು—ಇವರಿಬ್ಬರ ನಿಷ್ಕೃಷ್ಟ ಜ್ಞಾನವು ಬೇಕಾಗುತ್ತದೆ. ಇಂತಹ ಜ್ಞಾನವು ನಿತ್ಯಜೀವಕ್ಕೆ ನಡೆಸುತ್ತದೆ. ಆದುದರಿಂದ ದೇವರ ವಾಕ್ಯವಾದ ಬೈಬಲಿನಿಂದ ನಿಷ್ಕೃಷ್ಟ ಜ್ಞಾನವನ್ನು ಸಂಪಾದಿಸುವ ವಿಷಯವನ್ನು ನಾವೆಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬಯಸುವುದು ಖಂಡಿತ. ನಾವು ನಮ್ಮ ಆರಾಧನೆಯಲ್ಲಿ ಯಥಾರ್ಥರೂ ಹುರುಪುಳ್ಳವರೂ ಆಗಿರುವಷ್ಟರ ತನಕ ನಾವು ಚಿಂತಿತರಾಗುವ ಆವಶ್ಯಕತೆಯಿಲ್ಲ ಎಂದು ಕೆಲವರನ್ನುತ್ತಾರೆ. ‘ನಿಮ್ಮ ಜ್ಞಾನವು ಎಷ್ಟು ಕಡಮೆಯೋ ಅಷ್ಟು ಕಡಮೆ ನಿಮ್ಮಿಂದ ನಿರೀಕ್ಷಿಸಲಾಗುತ್ತದೆ,’ ಎಂದು ಇತರರು ವಾದಿಸುತ್ತಾರೆ. ಆದರೂ, ನಾವು ದೇವರ ಮತ್ತು ಆತನ ಉದ್ದೇಶಗಳ ಜ್ಞಾನದಲ್ಲಿ ವರ್ಧಿಸುವಂತೆ ಬೈಬಲು ನಮ್ಮನ್ನು ಪ್ರೋತ್ಸಾಹಿಸುತ್ತದೆ.—ಎಫೆಸ 4:13; ಫಿಲಿಪ್ಪಿ 1:9; ಕೊಲೊಸ್ಸೆ 1:9.
9. ನಿಷ್ಕೃಷ್ಟ ಜ್ಞಾನವು ನಮ್ಮನ್ನು ಹೇಗೆ ಕಾಪಾಡುತ್ತದೆ, ಮತ್ತು ಇಂತಹ ಸಂರಕ್ಷಣೆ ನಮಗೆ ಏಕೆ ಅವಶ್ಯ?
9 ಇಂತಹ ಜ್ಞಾನವು ನಮ್ಮ ಆರಾಧನೆಯು ಮಲಿನಗೊಳ್ಳುವುದರ ವಿರುದ್ಧ ಒಂದು ಸಂರಕ್ಷಣೆಯಾಗಿದೆ. “ಪ್ರಕಾಶರೂಪವುಳ್ಳ ದೇವದೂತ” ನಂತೆ ತೋರಿಸಿಕೊಳ್ಳುವ ಒಬ್ಬ ನಿರ್ದಿಷ್ಟ ಆತ್ಮಜೀವಿಯ ಕುರಿತು ಅಪೊಸ್ತಲ ಪೌಲನು ಮಾತಾಡಿದನು. (2 ಕೊರಿಂಥ 11:14) ಹೀಗೆ ವೇಷ ಹಾಕಿಕೊಳ್ಳುತ್ತಾ, ಈ ಆತ್ಮಜೀವಿಯು—ಸೈತಾನನು—ದೇವರ ಚಿತ್ತಕ್ಕೆ ವ್ಯತಿರಿಕ್ತವಾದ ಸಂಗತಿಗಳನ್ನು ನಾವು ಮಾಡುವಂತೆ ನಮ್ಮನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಾನೆ. ಸೈತಾನನೊಡನೆ ಜೊತೆಗೂಡಿರುವ ಬೇರೆ ಆತ್ಮಜೀವಿಗಳು ಸಹ ಜನರ ಆರಾಧನೆಯನ್ನು ಮಲಿನಗೊಳಿಸುತ್ತಿವೆ, ಏಕೆಂದರೆ ಪೌಲನು ಹೇಳಿದ್ದು: “ಆದರೆ ಅನ್ಯಜನರು ತಾವು ಅರ್ಪಿಸುವ ಬಲಿಗಳನ್ನು ದೇವರಿಗಲ್ಲ ದೆವ್ವಗಳಿಗೆ ಅರ್ಪಿಸುತ್ತಾರೆ.” (1 ಕೊರಿಂಥ 10:20) ಅನೇಕರು, ದೇವರು ಬಯಸಿದಂತಹದ್ದನ್ನು ತಾವು ಮಾಡುತ್ತಿರದಿದ್ದರೂ, ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುತ್ತಿದ್ದೇವೆಂದು ನೆನಸಿರುವುದು ಸಂಭಾವ್ಯ. ಅವರು ಅಶುದ್ಧವಾದ ಮಿಥ್ಯಾರಾಧನೆಯೊಳಕ್ಕೆ ದಾರಿ ತಪ್ಪಿಸಲ್ಪಡುತ್ತಿದ್ದರು. ನಾವು ಸೈತಾನನ ಮತ್ತು ದೆವ್ವಗಳ ವಿಷಯ ಹೆಚ್ಚನ್ನು ಆಮೇಲೆ ಕಲಿಯುವೆವಾದರೂ, ದೇವರ ಈ ವೈರಿಗಳು ಮಾನವ ಕುಲದ ಆರಾಧನೆಯನ್ನು ನಿಶ್ಚಯವಾಗಿ ಮಲಿನಗೊಳಿಸುತ್ತಾ ಬಂದಿವೆ.
10. ಯಾವನಾದರೂ ನಿಮ್ಮ ನೀರಿನ ಸರಬರಾಯಿಗೆ ಬೇಕೆಂದು ವಿಷ ಹಾಕುವಲ್ಲಿ ನೀವೇನು ಮಾಡುವಿರಿ, ಮತ್ತು ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವು ನಾವೇನು ಮಾಡುವಂತೆ ನಮ್ಮನ್ನು ಸನ್ನದ್ಧರಾಗಿ ಮಾಡುತ್ತದೆ?
10 ನಿಮ್ಮ ನೀರಿನ ಸರಬರಾಯಿಗೆ ಯಾವನೋ ಬೇಕೆಂದು ವಿಷ ಹಾಕಿದ್ದಾನೆಂದು ನಿಮಗೆ ತಿಳಿದಿರುವಲ್ಲಿ, ನೀವು ಅದರಿಂದ ಕುಡಿಯುತ್ತಾ ಹೋಗುವಿರೊ? ಸುರಕ್ಷಿತವಾದ, ಶುದ್ಧ ನೀರಿನ ಉಗಮವನ್ನು ಕಂಡು ಹಿಡಿಯಲು ನೀವು ಒಡನೆ ಕ್ರಮವನ್ನು ಕೈಕೊಳ್ಳುವಿರಿ ನಿಶ್ಚಯ. ಹಾಗೆಯೇ, ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವು, ನಾವು ಸತ್ಯ ಧರ್ಮವನ್ನು ಗುರುತಿಸುವಂತೆಯೂ ಆರಾಧನೆಯನ್ನು ದೇವರಿಗೆ ಅನಂಗೀಕಾರಯೋಗ್ಯವಾಗಿ ಮಾಡುವ ಮಾಲಿನ್ಯಗಳನ್ನು ತೊರೆದುಬಿಡುವಂತೆಯೂ ಸನ್ನದ್ಧರಾಗಿ ಮಾಡುತ್ತದೆ.
ಮನುಷ್ಯರ ಕಟ್ಟಳೆಗಳು ತತ್ವಗಳಾಗಿ
11. ಅನೇಕ ಯೆಹೂದ್ಯರ ಆರಾಧನೆಯಲ್ಲಿ ಯಾವ ತಪ್ಪಿತ್ತು?
11 ಯೇಸುವು ಭೂಮಿಯಲ್ಲಿದ್ದಾಗ, ಅನೇಕ ಯೆಹೂದ್ಯರು ದೇವರ ನಿಷ್ಕೃಷ್ಟ ಜ್ಞಾನಾನುಸಾರ ವರ್ತಿಸಲಿಲ್ಲ. ಆದಕಾರಣ ಯೆಹೋವನ ಮುಂದೆ ಶುದ್ಧವಾದ ನಿಲುವಿರುವ ಆ ಸಂದರ್ಭವನ್ನು ಅವರು ಕಳೆದುಕೊಂಡರು. ಅವರ ಕುರಿತು ಪೌಲನು ಬರೆದುದು: “ದೇವರಲ್ಲಿ ಆಸಕ್ತರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿಕೊಡುತ್ತೇನೆ; ಆದರೂ ಅವರ ಆಸಕ್ತಿ [“ನಿಷ್ಕೃಷ್ಟ,” NW] ಜ್ಞಾನಾನುಸಾರವಾದದ್ದಲ್ಲ.” (ರೋಮಾಪುರ 10:2) ಅವರು ದೇವರು ಹೇಳಿದ್ದಕ್ಕೆ ಕಿವಿಗೊಡುವ ಬದಲಾಗಿ ಆತನನ್ನು ಆರಾಧಿಸುವುದು ಹೇಗೆಂದು ತಾವೇ ನಿರ್ಣಯಿಸಿಕೊಂಡರು.
12. ಇಸ್ರಾಯೇಲಿನ ಆರಾಧನೆಯನ್ನು ಯಾವುದು ಮಲಿನಗೊಳಿಸಿತು, ಮತ್ತು ಪರಿಣಾಮವೇನಾಯಿತು?
12 ಇಸ್ರಾಯೇಲ್ಯರು ಆದಿಯಲ್ಲಿ ದೇವದತ್ತವಾದ ಶುದ್ಧ ಧರ್ಮವನ್ನು ಆಚರಿಸಿದರೂ ಅದು ಮನುಷ್ಯರ ಬೋಧನೆಗಳು ಮತ್ತು ತತ್ವಜ್ಞಾನಗಳಿಂದ ಮಲಿನವಾಗಿ ಪರಿಣಮಿಸಿತು. (ಯೆರೆಮೀಯ 8:8, 9; ಮಲಾಕಿಯ 2:8, 9; ಲೂಕ 11:52) ಫರಿಸಾಯರೆಂದು ಪರಿಚಿತರಾಗಿದ್ದ ಯೆಹೂದಿ ಧಾರ್ಮಿಕ ಮುಖಂಡರು ತಮ್ಮ ಆರಾಧನೆಯು ದೇವರಿಗೆ ಅಂಗೀಕಾರಾರ್ಹವೆಂದು ನೆನಸಿದರೂ ಯೇಸು ಅವರಿಗೆ ಹೇಳಿದ್ದು: “ಕಪಟಿಗಳಾದ ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ; ಅವನು ಬರೆದದ್ದೇನಂದರೆ—ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಮನಸ್ಸು ನನಗೆ ದೂರವಾಗಿದೆ. ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿತೋರಿಸುವದು ವ್ಯರ್ಥ ಎಂಬದೇ.”—ಮಾರ್ಕ 7:6, 7.
13. ಫರಿಸಾಯರು ಮಾಡಿದಂತೆ ನಾವೂ ಹೇಗೆ ಮಾಡಿಯೇವು?
13 ಆ ಫರಿಸಾಯರು ಮಾಡಿದಂತೆಯೇ ನಾವೂ ಮಾಡಬಹುದಾಗಿರುವುದು ಸಾಧ್ಯವೊ? ಆರಾಧನೆಯ ವಿಷಯದಲ್ಲಿ ದೇವರು ಹೇಳಿರುವುದನ್ನು ಪರೀಕ್ಷಿಸುವ ಬದಲಾಗಿ ನಮಗೆ ಕೊಡಲ್ಪಟ್ಟಿರುವ ಧಾರ್ಮಿಕ ಸಂಪ್ರದಾಯಗಳನ್ನು ನಾವು ಅನುಸರಿಸುವಲ್ಲಿ ಇದು ಸಂಭವಿಸಸಾಧ್ಯವಿದೆ. ಈ ತೀರ ನೈಜ ಅಪಾಯದ ಕುರಿತು ಎಚ್ಚರಿಸುತ್ತಾ ಪೌಲನು ಬರೆದುದು: “ಆದರೂ ಮುಂದಣ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಾನೆ.” (1 ತಿಮೊಥೆಯ 4:1) ಹೀಗೆ, ನಮ್ಮ ಆರಾಧನೆಯು ದೇವರನ್ನು ಮೆಚ್ಚಿಸುತ್ತದೆಂದು ಕೇವಲ ಊಹಿಸುವುದು ಸಾಲದು. ಯೇಸುವನ್ನು ಭೇಟಿಯಾದ ಆ ಸಮಾರ್ಯದ ಸ್ತ್ರೀಯಂತೆ, ನಮ್ಮ ಆರಾಧನಾ ರೀತಿಯನ್ನು ನಾವು ನಮ್ಮ ಹೆತ್ತವರಿಂದ ಬಾಧ್ಯತೆಯಾಗಿ ಪಡೆದಿರಬಹುದು. ಆದರೆ ದೇವರ ಒಪ್ಪಿಗೆಯನ್ನು ಪಡೆಯುವ ವಿಷಯಗಳನ್ನು ಮಾಡುತ್ತಿದ್ದೇವೆಂದು ನಾವು ನಿಶ್ಚಿತರಾಗಿರುವುದು ಅವಶ್ಯ.
ದೇವರನ್ನು ನೋಯಿಸುವ ವಿರುದ್ಧ ಎಚ್ಚರವಾಗಿರಿ
14, 15. ನಮಗೆ ದೇವರ ಚಿತ್ತದ ಸ್ವಲ್ಪ ಜ್ಞಾನವಿದ್ದರೂ, ನಾವೇಕೆ ಜಾಗರೂಕರಾಗಿರುವುದು ಅಗತ್ಯ?
14 ನಾವು ಜಾಗರೂಕರಾಗಿಲ್ಲದಿರುವಲ್ಲಿ, ದೇವರಿಗೆ ಅಂಗೀಕಾರಾರ್ಹವಲ್ಲದ ಯಾವುದನ್ನಾದರೂ ಮಾಡುವ ಸಾಧ್ಯತೆಯಿದೆ. ಉದಾಹರಣೆಗೆ, ಅಪೊಸ್ತಲ ಯೋಹಾನನು ಒಬ್ಬ ದೇವದೂತನನ್ನು “ಆರಾಧಿಸಲಿಕ್ಕೆ” ಅವನ ಪಾದಗಳ ಮುಂದೆ ಬಿದ್ದನು. ಆದರೆ ಆ ದೇವದೂತನು ಎಚ್ಚರಿಸಿದ್ದು: “ಮಾಡಬೇಡ ನೋಡು, ನಾನು ನಿನಗೂ ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವ ನಿನ್ನ ಸಹೋದರರಿಗೂ ಜೊತೆಯ ದಾಸನಾಗಿದ್ದೇನೆ; ದೇವರಿಗೇ ನಮಸ್ಕಾರಮಾಡು [“ಆರಾಧನೆ ಮಾಡು,” NW].” (ಪ್ರಕಟನೆ 19:10) ಆದುದರಿಂದ, ನಿಮ್ಮ ಆರಾಧನೆಯು ಯಾವುದೇ ವಿಧದ ವಿಗ್ರಹಾರಾಧನೆಯಿಂದ ಮಲಿನಗೊಂಡಿಲ್ಲವೆಂಬುದನ್ನು ಖಚಿತಮಾಡಿಕೊಳ್ಳುವ ಅಗತ್ಯವನ್ನು ನೀವು ನೋಡುತ್ತೀರೊ?—1 ಕೊರಿಂಥ 10:14.
15 ದೇವರನ್ನು ಮೆಚ್ಚಿಸದೆ ಇದ್ದ ಧಾರ್ಮಿಕ ಪದ್ಧತಿಗಳನ್ನು ಆಚರಿಸಲು ಕೆಲವು ಕ್ರೈಸ್ತರು ಆರಂಭಿಸಿದಾಗ, ಪೌಲನು ಕೇಳಿದ್ದು: “ಹೀಗಿರಲಾಗಿ ನೀವು ಕೆಲಸಕ್ಕೆ ಬಾರದ ದರಿದ್ರ ಬಾಲಬೋಧೆಗೆ ಮತ್ತೂ ಅಧೀನರಾಗಬೇಕೆಂದು ಅಪೇಕ್ಷಿಸಿ ಪುನಃ ಅದಕ್ಕೆ ತಿರುಗಿಕೊಳ್ಳುವದು ಹೇಗೆ? ನೀವು ಆಯಾ ದಿನಗಳನ್ನೂ ಮಾಸಗಳನ್ನೂ ಉತ್ಸವಕಾಲಗಳನ್ನೂ ಸಂವತ್ಸರಗಳನ್ನೂ ನಿಷ್ಠೆಯಿಂದ ಆಚರಿಸುತ್ತೀರಿ. ನಾನು ನಿಮಗೋಸ್ಕರ ಪ್ರಯಾಸಪಟ್ಟದ್ದು ನಿಷ್ಫಲವಾಯಿತೋ ಏನೋ ಎಂದು ನಿಮ್ಮ ವಿಷಯದಲ್ಲಿ ಭಯಪಡುತ್ತೇನೆ.” (ಗಲಾತ್ಯ 4:8-11) ಆ ವ್ಯಕ್ತಿಗಳು ದೇವರ ಜ್ಞಾನವನ್ನು ಪಡೆದಿದ್ದರೂ, ಆ ಬಳಿಕ ಯೆಹೋವನಿಗೆ ಅಂಗೀಕಾರಾರ್ಹವಲ್ಲದ ಧಾರ್ಮಿಕ ಸಂಪ್ರದಾಯಗಳನ್ನೂ ಪವಿತ್ರ ದಿನಗಳನ್ನೂ ಆಚರಿಸುತ್ತಾ ತಪ್ಪುಮಾಡಿದರು. ಪೌಲನು ಹೇಳಿದಂತೆ, “ಕರ್ತನಿಗೆ ಮೆಚ್ಚಿಕೆಯಾದದ್ದು ಏನೆಂಬದನ್ನು ಪರಿಶೋಧಿಸಿ” ತಿಳಿದುಕೊಳ್ಳುವ ಅವಶ್ಯ ನಮಗಿದೆ.—ಎಫೆಸ 5:10.
16. ಯೋಹಾನ 17:16 ಮತ್ತು 1 ಪೇತ್ರ 4:3, ರಜಾದಿನಗಳು ಮತ್ತು ಪದ್ಧತಿಗಳು ದೇವರನ್ನು ಮೆಚ್ಚಿಸುತ್ತವೆಯೋ ಎಂದು ನಾವು ನಿರ್ಣಯಿಸುವಂತೆ ನಮಗೆ ಹೇಗೆ ಸಹಾಯಮಾಡುತ್ತವೆ?
16 ದೇವರ ಮೂಲಸೂತ್ರಗಳನ್ನು ಉಲ್ಲಂಘಿಸುವ ಧಾರ್ಮಿಕ ರಜಾದಿನಗಳಿಂದ ಮತ್ತು ಇತರ ಪದ್ಧತಿಗಳಿಂದ ದೂರವಿರುವುದನ್ನು ನಾವು ಖಚಿತ ಮಾಡಿಕೊಳ್ಳತಕ್ಕದ್ದು. (1 ಥೆಸಲೊನೀಕ 5:21) ಉದಾಹರಣೆಗೆ, ಯೇಸು ತನ್ನ ಶಿಷ್ಯರ ಕುರಿತು ಹೇಳಿದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” (ಯೋಹಾನ 17:16) ನಿಮ್ಮ ಧರ್ಮವು ಈ ಜಗತ್ತಿನ ವಿಚಾರಗಳ ಕಡೆಗೆ ತಾಟಸ್ಥ್ಯದ ಮೂಲಸೂತ್ರವನ್ನು ಉಲ್ಲಂಘಿಸುವ ಆಚರಣೆಗಳಲ್ಲಿ ಮತ್ತು ರಜಾದಿನಗಳಲ್ಲಿ ಸೇರಿಕೊಂಡಿದೆಯೆ? ಅಥವಾ ನಿಮ್ಮ ಧರ್ಮಾನುಯಾಯಿಗಳು ಕೆಲವು ಬಾರಿ, ಅಪೊಸ್ತಲ ಪೇತ್ರನು ವರ್ಣಿಸಿರುವುದಕ್ಕೆ ಸಮಾನವಾದ ವರ್ತನೆಗಳು ಸೇರಿರುವ ಪದ್ಧತಿ ಮತ್ತು ಉತ್ಸವಗಳಲ್ಲಿ ಭಾಗಿಗಳಾಗುತ್ತಾರೊ? ಅವನು ಬರೆದುದು: “ನೀವು ಬಂಡುತನ ದುರಾಶೆ ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ ಅಸಹ್ಯವಾದ ವಿಗ್ರಹಾರಾಧನೆ ಈ ಮೊದಲಾದವುಗಳನ್ನು ನಡಿಸುವದರಲ್ಲಿಯೂ ಅನ್ಯ ಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವದರಲ್ಲಿಯೂ ಕಳೆದುಹೋದ ಕಾಲವೇ ಸಾಕು.”—1 ಪೇತ್ರ 4:3.
17. ಜಗತ್ತಿನ ಆತ್ಮವನ್ನು ಪ್ರತಿಬಿಂಬಿಸುವ ಯಾವುದನ್ನೂ ನಾವೇಕೆ ವಿಸರ್ಜಿಸಬೇಕು?
17 ಅಪೊಸ್ತಲ ಯೋಹಾನನು, ನಮ್ಮ ಸುತ್ತಲಿರುವ ಭಕ್ತಿಹೀನ ಜಗತ್ತಿನ ಆತ್ಮವನ್ನು ಪ್ರತಿಬಿಂಬಿಸುವ ಯಾವುದೇ ಆಚಾರಗಳಿಂದ ದೂರವಿರುವ ಅಗತ್ಯವನ್ನು ಒತ್ತಿಹೇಳಿದನು. ಯೋಹಾನನು ಬರೆದುದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ. ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:15-17) “ದೇವರ ಚಿತ್ತವನ್ನು ನೆರವೇರಿಸು” ವವರು ಸದಾ ಇರುವರು ಎಂಬುದನ್ನು ನೀವು ಗಮನಿಸಿದಿರೊ? ಹೌದು, ನಾವು ದೇವರ ಚಿತ್ತವನ್ನು ಮಾಡಿ, ಈ ಜಗತ್ತಿನ ಆತ್ಮವನ್ನು ಪ್ರತಿಬಿಂಬಿಸುವ ಚಟುವಟಿಕೆಗಳಿಂದ ದೂರವಿರುವಲ್ಲಿ, ನಮಗೆ ನಿತ್ಯಜೀವದ ನಿರೀಕ್ಷೆ ಇರಬಲ್ಲದು!
ದೇವರ ಉನ್ನತ ಮಟ್ಟಗಳನ್ನು ಇಟ್ಟುಕೊಳ್ಳಿರಿ
18. ಕೆಲವು ಕೊರಿಂಥದವರು ನಡತೆಯ ವಿಷಯದಲ್ಲಿ ಹೇಗೆ ತಪ್ಪಭಿಪ್ರಯಿಸಿದ್ದರು, ಮತ್ತು ನಾವು ಇದರಿಂದ ಏನು ಕಲಿಯಬೇಕು?
18 ದೇವರು ತನ್ನ ಉನ್ನತ ಮಟ್ಟಗಳನ್ನು ಇಟ್ಟುಕೊಳ್ಳುವವರನ್ನು ತನ್ನ ಆರಾಧಕರಾಗಿ ಬಯಸುತ್ತಾನೆ. ಪೂರ್ವಕಾಲದ ಕೊರಿಂಥದಲ್ಲಿ ಕೆಲವರು, ದೇವರು ಅನೈತಿಕ ವರ್ತನೆಗಳನ್ನು ಸಹಿಸಿಕೊಳ್ಳುವನೆಂದು ತಪ್ಪಾಗಿ ನೆನಸಿದರು. 1 ಕೊರಿಂಥ 6:9, 10ನ್ನು ಓದುವ ಮೂಲಕ ಅವರ ಅಭಿಪ್ರಾಯ ಎಷ್ಟು ತಪ್ಪಾಗಿತ್ತೆಂದು ನಾವು ನೋಡಬಲ್ಲೆವು. ನಾವು ದೇವರನ್ನು ಅಂಗೀಕಾರಾರ್ಹವಾಗಿ ಆರಾಧಿಸಬೇಕಾದರೆ, ನಾವು ನಡೆ ನುಡಿಗಳಲ್ಲಿ ಆತನನ್ನು ಮೆಚ್ಚಿಸಬೇಕು. ನಿಮ್ಮ ಆರಾಧನಾ ರೀತಿ ಹಾಗೆ ಮಾಡುವರೆ ನಿಮ್ಮನ್ನು ಸಮರ್ಥರನ್ನಾಗಿಸುತ್ತದೊ?—ಮತ್ತಾಯ 15:8; 23:1-3.
19. ನಾವು ಇತರರೊಂದಿಗೆ ವರ್ತಿಸುವ ವಿಧವನ್ನು ಸತ್ಯಾರಾಧನೆಯು ಹೇಗೆ ಪ್ರಭಾವಿಸುತ್ತದೆ?
19 ಇತರ ಜನರೊಂದಿಗಿನ ನಮ್ಮ ವ್ಯವಹಾರಗಳು ಸಹ ದೇವರ ಮಟ್ಟಗಳನ್ನು ಪ್ರತಿಬಿಂಬಿಸಬೇಕು. ಇತರರು ನಮ್ಮೊಂದಿಗೆ ಹೇಗೆ ವರ್ತಿಸಬೇಕೆಂದು ನಾವು ಇಷ್ಟಪಡುವೆವೋ ಹಾಗೆಯೇ ನಾವು ಇತರರೊಂದಿಗೆ ವರ್ತಿಸುವಂತೆ ಯೇಸು ಕ್ರಿಸ್ತನು ಪ್ರೋತ್ಸಾಹಿಸಿದನು; ಏಕೆಂದರೆ ಇದು ಸತ್ಯಾರಾಧನೆಯ ಭಾಗ. (ಮತ್ತಾಯ 7:12) ಸಹೋದರ ಪ್ರೀತಿಯನ್ನು ಪ್ರದರ್ಶಿಸುವ ಕುರಿತು ಅವನು ಏನೆಂದನು ಎಂಬುದನ್ನು ಕೂಡ ಗಮನಿಸಿರಿ: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಯೇಸುವಿನ ಶಿಷ್ಯರು ಒಬ್ಬರನ್ನೊಬ್ಬರು ಪ್ರೀತಿಸಿ, ಜೊತೆ ಆರಾಧಕರ ಮತ್ತು ಇತರರ ಕಡೆಗೆ ಯಾವುದು ಒಳ್ಳೆಯದೋ ಅದನ್ನು ಮಾಡಬೇಕು.—ಗಲಾತ್ಯ 6:10.
ಪೂರ್ಣ ಪ್ರಾಣದ ಆರಾಧನೆ
20, 21. (ಎ) ದೇವರು ಯಾವ ರೀತಿಯ ಆರಾಧನೆಯನ್ನು ಅಪೇಕ್ಷಿಸುತ್ತಾನೆ? (ಬಿ) ಮಲಾಕಿಯನ ದಿನಗಳಲ್ಲಿ ಯೆಹೋವನು ಇಸ್ರಾಯೇಲಿನ ಆರಾಧನೆಯನ್ನು ತಿರಸ್ಕರಿಸಿದ್ದೇಕೆ?
20 ನಿಮ್ಮ ಹೃದಯದಲ್ಲಿ ದೇವರನ್ನು ಅಂಗೀಕಾರಯೋಗ್ಯವಾಗಿ ಆರಾಧಿಸುವ ಬಯಕೆ ನಿಮಗಿರಬಹುದು. ಹಾಗಿದ್ದರೆ, ಆರಾಧನೆಯ ಬಗೆಗೆ ನೀವು ಯೆಹೋವನ ವೀಕ್ಷಣವನ್ನು ತೆಗೆದುಕೊಳ್ಳಬೇಕು. ಪ್ರಾಮುಖ್ಯವಾಗಿರುವುದು ನಮ್ಮ ದೃಷ್ಟಿಕೋನವಲ್ಲ, ದೇವರದ್ದು ಎಂದು ಶಿಷ್ಯ ಯಾಕೋಬನು ಒತ್ತಿಹೇಳಿದನು. ಯಾಕೋಬನು ಹೇಳಿದ್ದು: “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ.” (ಯಾಕೋಬ 1:27) ದೇವರನ್ನು ಮೆಚ್ಚಿಸುವ ಬಯಕೆಯೊಂದಿಗೆ, ನಮ್ಮಲ್ಲಿ ಪ್ರತಿಯೊಬ್ಬರು ನಮ್ಮ ಆರಾಧನೆಯನ್ನು, ಅದು ಭಕ್ತಿಹೀನ ಆಚಾರಗಳಿಂದ ಮಲಿನಗೊಂಡಿಲ್ಲವೆಂದು ಅಥವಾ ಆತನು ಪ್ರಧಾನವೆಂದು ಪರಿಗಣಿಸುವ ಯಾವುದನ್ನಾದರೂ ಮಾಡಲು ನಾವು ತಪ್ಪಿರುವುದಿಲ್ಲವೆಂದು ಖಂಡಿತ ಮಾಡಿಕೊಳ್ಳಲಿಕ್ಕಾಗಿ ಅದನ್ನು ಪರೀಕ್ಷಿಸುವುದು ಅವಶ್ಯ.—ಯಾಕೋಬ 1:26.
21 ಶುದ್ಧವಾದ, ಪೂರ್ಣಪ್ರಾಣದ ಆರಾಧನೆಯು ಮಾತ್ರ ಯೆಹೋವನನ್ನು ಮೆಚ್ಚಿಸುತ್ತದೆ. (ಮತ್ತಾಯ 22:37; ಕೊಲೊಸ್ಸೆ 3:23) ಇಸ್ರಾಯೇಲ್ ಜನಾಂಗವು ದೇವರಿಗೆ ಅದಕ್ಕಿಂತ ಕಡಮೆಯಾದುದನ್ನು ಕೊಟ್ಟಾಗ, ಆತನು ಅಂದದ್ದು: “ಮಗನು ತಂದೆಗೆ ಮಾನಸಲ್ಲಿಸುತ್ತಾನಲ್ಲಾ, ಆಳು ದಣಿಗೆ ಭಯಭಕ್ತಿತೋರಿಸುತ್ತಾನಷ್ಟೆ; ನಾನು ತಂದೆಯಾಗಿರಲು ನನಗೆ ಸಲ್ಲುವ ಮಾನವೆಲ್ಲಿ; ದಣಿಯಾಗಿರಲು ನನಗೆ ತೋರಿಸುವ ಭಯಭಕ್ತಿಯೆಲ್ಲಿ.” ಅವರು ಕುರುಡಾದ, ಕುಂಟಾದ, ಮತ್ತು ಕಾಯಿಲೆ ಬಿದ್ದಿರುವ ಪ್ರಾಣಿಗಳನ್ನು ಯಜ್ಞವಾಗಿ ಅರ್ಪಿಸುತ್ತಾ ದೇವರನ್ನು ನೋಯಿಸುತ್ತಿದ್ದರು ಮತ್ತು ಆತನು ಅಂತಹ ಆರಾಧನಾ ಕ್ರಿಯೆಗಳನ್ನು ತಿರಸ್ಕರಿಸಿದನು. (ಮಲಾಕಿಯ 1:6-8) ಯೆಹೋವನು ಆರಾಧನೆಯಲ್ಲಿ ಅತ್ಯಂತ ಶುದ್ಧವಾದ ರೂಪಕ್ಕೆ ಅರ್ಹನಾಗಿದ್ದು, ಸಂಪೂರ್ಣ ಭಕ್ತಿಗಿಂತ ಕಡಮೆಯಾಗಿರುವುದನ್ನು ಅಂಗೀಕರಿಸನು.—ವಿಮೋಚನಕಾಂಡ 20:5; ಜ್ಞಾನೋಕ್ತಿ 3:9; ಪ್ರಕಟನೆ 4:11.
22. ನಮ್ಮ ಆರಾಧನೆಯನ್ನು ದೇವರು ಅಂಗೀಕರಿಸಬೇಕೆಂದು ನಾವು ಬಯಸುವಲ್ಲಿ, ಏನನ್ನು ವಿಸರ್ಜಿಸುವೆವು, ಮತ್ತು ಏನನ್ನು ಮಾಡುವೆವು?
22 ಯೇಸುವಿನೊಂದಿಗೆ ಮಾತಾಡಿದ ಆ ಸಮಾರ್ಯದ ಸ್ತ್ರೀ, ದೈವಿಕವಾಗಿ ಒಪ್ಪಲ್ಪಟ್ಟ ರೀತಿಯಲ್ಲಿ ದೇವರನ್ನು ಆರಾಧಿಸುವುದರಲ್ಲಿ ಆಸಕ್ತಳಾಗಿದ್ದಳೆಂದು ತೋರಿತು. ಅದು ನಮ್ಮ ಬಯಕೆಯೂ ಆಗಿರುವಲ್ಲಿ, ನಾವು ಮಲಿನಗೊಳಿಸುವ ಸಕಲ ಬೋಧನೆಗಳನ್ನೂ ಆಚಾರಗಳನ್ನೂ ವಿಸರ್ಜಿಸುವೆವು. (2 ಕೊರಿಂಥ 6:14-18) ಬದಲಾಗಿ, ದೇವರ ನಿಷ್ಕೃಷ್ಟ ಜ್ಞಾನವನ್ನು ಪಡೆಯುವುದರಲ್ಲಿ ಮತ್ತು ಆತನ ಚಿತ್ತವನ್ನು ಮಾಡುವುದರಲ್ಲಿ ನಮ್ಮನ್ನು ಶ್ರಮಿಸಿಕೊಳ್ಳುವೆವು. ಆತನ ಅಂಗೀಕಾರಾರ್ಹ ಆರಾಧನೆಯ ಆವಶ್ಯಕತೆಗಳಿಗೆ ನಾವು ಒತ್ತಾಗಿ ಅಂಟಿಕೊಳ್ಳುವೆವು. (1 ತಿಮೊಥೆಯ 2:3, 4) ಯೆಹೋವನ ಸಾಕ್ಷಿಗಳು ಅದನ್ನೇ ಮಾಡಲು ಪ್ರಯಾಸಪಡುತ್ತಿದ್ದಾರೆ, ಮತ್ತು ಅವರೊಂದಿಗೆ ದೇವರನ್ನು “ಆತ್ಮ ಮತ್ತು ಸತ್ಯದಿಂದ” ಆರಾಧಿಸುವುದರಲ್ಲಿ ಪಾಲಿಗರಾಗುವಂತೆ ಅವರು ಹೃದಯೋಲ್ಲಾಸದಿಂದ ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. (ಯೋಹಾನ 4:24, NW) “ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ,” ಎಂದು ಯೇಸು ಹೇಳಿದನು. (ಯೋಹಾನ 4:23) ನೀವು ಅಂತಹ ವ್ಯಕ್ತಿಯಾಗಿದ್ದೀರೆಂದು ನಿರೀಕ್ಷಿಸಲಾಗುತ್ತದೆ. ಆ ಸಮಾರ್ಯದ ಸ್ತ್ರೀಯಂತೆ, ನಿಮಗೂ ನಿತ್ಯಜೀವದ ಬಯಕೆಯಿದೆಯೆಂಬುದು ನಿಸ್ಸಂದೇಹ. (ಯೋಹಾನ 4:13-15) ಆದರೆ ಜನರು ವೃದ್ಧರಾಗಿ ಸಾಯುವುದನ್ನು ನೀವು ನೋಡುತ್ತೀರಿ. ಮುಂದಿನ ಅಧ್ಯಾಯವು ಏಕೆಂದು ವಿವರಿಸುತ್ತದೆ.
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
ಯೋಹಾನ 4:23, 24 ರಲ್ಲಿ ತೋರಿಸಿರುವಂತೆ, ದೇವರು ಯಾವ ಆರಾಧನೆಯನ್ನು ಅಂಗೀಕರಿಸುತ್ತಾನೆ?
ದೇವರು ಕೆಲವು ನಿರ್ದಿಷ್ಟ ಪದ್ಧತಿಗಳನ್ನು ಅಥವಾ ಉತ್ಸವಗಳನ್ನು ಮೆಚ್ಚುತ್ತಾನೋ ಇಲ್ಲವೋ ಎಂದು ನಾವು ಹೇಗೆ ನಿರ್ಧರಿಸಬಲ್ಲೆವು?
ಅಂಗೀಕಾರಾರ್ಹ ಆರಾಧನೆಗಾಗಿರುವ ಕೆಲವು ಆವಶ್ಯಕತೆಗಳಾವುವು?
[ಅಧ್ಯಯನ ಪ್ರಶ್ನೆಗಳು]
[ಪುಟ 44ರಲ್ಲಿ ಇಡೀ ಪುಟದ ಚಿತ್ರ]