ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ರಾಜ್ಯವು ಆಳುತ್ತದೆ

ದೇವರ ರಾಜ್ಯವು ಆಳುತ್ತದೆ

ಅಧ್ಯಾಯ 10

ದೇವರ ರಾಜ್ಯವು ಆಳುತ್ತದೆ

1, 2. ಮಾನವ ಸರಕಾರಗಳು ಹೇಗೆ ಕೊರತೆಯುಳ್ಳವುಗಳಾಗಿ ಪರಿಣಮಿಸಿವೆ?

 ಪ್ರಾಯಶಃ, ಒಂದು ಉಪಕರಣವನ್ನು ಖರೀದಿಸಿದ ಮೇಲೆ, ಅದು ಕೆಲಸ ಮಾಡಲಿಲ್ಲವೆಂದು ನೀವು ಕಂಡುಹಿಡಿದ ಅನುಭವ ನಿಮಗಿದ್ದಿರಬಹುದು. ನೀವು ರಿಪೇರಿ ಮಾಡುವವನೊಬ್ಬನನ್ನು ಕರೆದಿರಿ ಎಂದುಕೊಳ್ಳೋಣ. ಅವನು ಆ ಸಾಧನವನ್ನು “ಸರಿಪಡಿಸಿದ” ಮೇಲೆ ಸ್ವಲ್ಪದರಲ್ಲಿ ಅದು ಕೆಟ್ಟುಹೋಯಿತು. ಅದೆಷ್ಟು ನಿರಾಶಾದಾಯಕವಾಗಿತ್ತು!

2 ಮಾನವ ಸರಕಾರಗಳ ಸಂಬಂಧದಲ್ಲಿಯೂ ಹೀಗೆಯೇ. ಮಾನವ ಕುಲವು ಯಾವಾಗಲೂ ಶಾಂತಿ ಮತ್ತು ಸಂತೋಷದ ಭರವಸೆ ಕೊಡುವ ಸರಕಾರವೊಂದನ್ನು ಬಯಸಿದೆ. ಆದರೂ, ಸಮಾಜದಲ್ಲಿ ಕುಸಿತಗಳನ್ನು ದುರಸ್ತುಮಾಡುವ ಶ್ರಮದ ಪ್ರಯತ್ನಗಳು ನಿಜವಾಗಿಯೂ ಸಫಲಗೊಂಡಿರುವುದಿಲ್ಲ. ಎಷ್ಟೋ ಶಾಂತಿ ಸಂಧಾನಗಳು ಮಾಡಲ್ಪಟ್ಟಿವೆ—ಬಳಿಕ ಮುರಿಯಲ್ಪಟ್ಟಿವೆ. ಇದಲ್ಲದೆ, ದಾರಿದ್ರ್ಯ, ಅವಿಚಾರಾಭಿಪ್ರಾಯ, ಪಾತಕ, ರೋಗ ಮತ್ತು ಜೀವಿಪರಿಸ್ಥಿತಿ ಶಾಸ್ತ್ರೀಯ ಧ್ವಂಸ—ಇವುಗಳನ್ನು ಯಾವ ಸರಕಾರವು ತಾನೇ ನಿರ್ಮೂಲಮಾಡಶಕ್ತವಾಗಿದೆ? ಮಾನವನ ಆಳಿಕೆಯು ದುರಸ್ತಿಗೆ ಅತೀತವಾದದ್ದು. ಇಸ್ರಾಯೇಲಿನ ವಿವೇಕಿ ಅರಸ ಸೊಲೊಮೋನನೂ ಕೇಳಿದ್ದು: “ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳಿದುಕೊಂಡಾನು?”—ಜ್ಞಾನೋಕ್ತಿ 20:24.

3. (ಎ) ಯೇಸುವಿನ ಸಾರುವಿಕೆಯ ಮುಖ್ಯ ವಿಷಯವೇನಾಗಿತ್ತು? (ಬಿ) ಕೆಲವು ಜನರು ದೇವರ ರಾಜ್ಯವನ್ನು ಹೇಗೆ ವರ್ಣಿಸುತ್ತಾರೆ?

3 ನಿರಾಶೆಗೊಳ್ಳಬೇಡಿ! ಸ್ಥಿರತೆಯ ಲೋಕ ಸರಕಾರವೊಂದು ಕೇವಲ ಒಂದು ಸ್ವಪ್ನವಲ್ಲ. ಅದು ಯೇಸುವಿನ ಸಾರುವಿಕೆಯ ಮುಖ್ಯ ವಿಷಯವಾಗಿತ್ತು. ಅವನು ಅದನ್ನು “ದೇವರ ರಾಜ್ಯ” ವೆಂದು ಕರೆದು, ತನ್ನ ಹಿಂಬಾಲಕರು ಅದಕ್ಕಾಗಿ ಪ್ರಾರ್ಥಿಸುವಂತೆ ಕಲಿಸಿದನು. (ಲೂಕ 11:2; 21:31) ದೇವರ ರಾಜ್ಯವು ಕೆಲವು ಬಾರಿ ಧಾರ್ಮಿಕ ವೃತ್ತಗಳಲ್ಲಿ ಪ್ರಸ್ತಾಪಿಸಲ್ಪಡುತ್ತದೆಂಬುದು ನಿಶ್ಚಯ. ವಾಸ್ತವವಾಗಿ, ಕರ್ತನ ಪ್ರಾರ್ಥನೆ (ನಮ್ಮ ತಂದೆಯೇ ಅಥವಾ ಮಾದರಿ ಪ್ರಾರ್ಥನೆಯೆಂದೂ ಕರೆಯಲ್ಪಡುತ್ತದೆ) ಯನ್ನು ಕೋಟ್ಯಂತರ ಜನರು ಪುನರುಚ್ಚರಿಸುವಾಗ ಅದಕ್ಕಾಗಿ ದಿನಾಲೂ ಪ್ರಾರ್ಥಿಸುತ್ತಾರೆ. ಆದರೆ, “ದೇವರ ರಾಜ್ಯವೆಂದರೇನು?” ಎಂದು ಕೇಳುವಾಗ ಜನರು ವಿಧವಿಧವಾಗಿ ಉತ್ತರಿಸುತ್ತಾರೆ. ಕೆಲವರು, “ಅದು ನಿಮ್ಮ ಹೃದಯದಲ್ಲಿದೆ” ಎನ್ನುತ್ತಾರೆ. ಇತರರು ಅದನ್ನು ಸ್ವರ್ಗವೆಂದು ಕರೆಯುತ್ತಾರೆ. ನಾವು ನೋಡಲಿರುವಂತೆ, ಬೈಬಲು ಸ್ಪಷ್ಟವಾದ ಉತ್ತರವನ್ನು ಕೊಡುತ್ತದೆ.

ಒಂದು ಉದ್ದೇಶವುಳ್ಳ ರಾಜ್ಯ

4, 5. ಯೆಹೋವನು ತನ್ನ ಪರಮಾಧಿಕಾರದ ಒಂದು ಹೊಸ ಸಾಧನತೆಯನ್ನು ಮುಂತರಲು ಆರಿಸಿಕೊಂಡದ್ದೇಕೆ ಮತ್ತು ಅದೇನನ್ನು ಪೂರೈಸುವುದು?

4 ಯೆಹೋವ ದೇವರು ಯಾವಾಗಲೂ ವಿಶ್ವದ ಅರಸನು, ಅಥವಾ ಪರಮ ಪ್ರಭುವಾಗಿದ್ದನು. ಆತನು ಸಕಲ ವಿಷಯಗಳನ್ನು ಸೃಷ್ಟಿಸಿರುವ ನಿಜತ್ವವು ಆತನನ್ನು ಆ ಘನವಾದ ಸ್ಥಾನಕ್ಕೇರಿಸುತ್ತದೆ. (1 ಪೂರ್ವಕಾಲವೃತ್ತಾಂತ 29:11; ಕೀರ್ತನೆ 103:19; ಅ. ಕೃತ್ಯಗಳು 4:24) ಆದರೆ ಯೇಸುವು ಸಾರಿದ ರಾಜ್ಯವು ದೇವರ ವಿಶ್ವ ಪರಮಾಧಿಕಾರಕ್ಕೆ ಸಹಾಯಕ, ಅಥವಾ ದ್ವಿತೀಯವಾಗಿದೆ. ಆ ಮೆಸ್ಸೀಯ ಸಂಬಂಧಿತ ರಾಜ್ಯಕ್ಕೆ ಒಂದು ನಿರ್ದಿಷ್ಟ ಉದ್ದೇಶವಿದೆ, ಆದರೆ ಅದೇನು?

5 ಅಧ್ಯಾಯ 6 ರಲ್ಲಿ ವಿವರಿಸಿರುವಂತೆ, ಪ್ರಥಮ ಮಾನವ ಜೊತೆಯು ದೇವರ ಅಧಿಕಾರದ ವಿರುದ್ಧ ದಂಗೆಯೆದ್ದಿತು. ಎಬ್ಬಿಸಲ್ಪಟ್ಟ ವಿವಾದಾಂಶಗಳ ಕಾರಣ, ಯೆಹೋವನು ತನ್ನ ಪರಮಾಧಿಕಾರದ ಒಂದು ಹೊಸ ಸಾಧನತೆಯನ್ನು ಮುಂತರಲು ಆರಿಸಿಕೊಂಡನು. ಸರ್ಪನಾದ ಸೈತಾನನನ್ನು ಜಜ್ಜುವ ಒಂದು “ಸಂತಾನ” ವನ್ನು ಉತ್ಪಾದಿಸುವ ಮತ್ತು ಮಾನವ ಕುಲಕ್ಕೆ ಬಾಧ್ಯತೆಯಾಗಿ ಬಂದ ಪಾಪದ ಪರಿಣಾಮಗಳನ್ನು ತೊಲಗಿಸುವ ತನ್ನ ಉದ್ದೇಶವನ್ನು ದೇವರು ಪ್ರಕಟಿಸಿದನು. ಆ ಪ್ರಧಾನ “ಸಂತಾನವು” ಯೇಸು ಕ್ರಿಸ್ತನು, ಮತ್ತು ಸೈತಾನನನ್ನು ಸಂಪೂರ್ಣವಾಗಿ ಸೋಲಿಸಿಬಿಡಲಿರುವ ಆ ಮಾಧ್ಯಮವು “ದೇವರ ರಾಜ್ಯವು.” ಈ ರಾಜ್ಯದ ಮೂಲಕ ಯೇಸು ಕ್ರಿಸ್ತನು ಯೆಹೋವನ ಹೆಸರಿನಲ್ಲಿ ಭೂಮಿಯ ಮೇಲೆ ಆಳಿಕೆಯನ್ನು ಪುನಸ್ಸ್ಥಾಪಿಸಿ, ದೇವರ ಹಕ್ಕಿನ ಪರಮಾಧಿಕಾರವನ್ನು ಸದಾಕಾಲಕ್ಕೂ ನಿರ್ದೋಷೀಕರಿಸುವನು.—ಆದಿಕಾಂಡ 3:15; ಕೀರ್ತನೆ 2:2-9.

6, 7. (ಎ) ರಾಜ್ಯವೆಲ್ಲಿದೆ, ಮತ್ತು ಅರಸನೂ ಅವನ ಜೊತೆಪ್ರಭುಗಳೂ ಯಾರು? (ಬಿ) ಆ ರಾಜ್ಯದ ಪ್ರಜೆಗಳಾರು?

6 ದುಷ್ಟ ಫರಿಸಾಯರಿಗೆ ಯೇಸು ಹೇಳಿದ ಮಾತುಗಳ ಒಂದು ಭಾಷಾಂತರಕ್ಕನುಸಾರವಾಗಿ ಅವನು, “ದೇವರ ರಾಜ್ಯವು ನಿಮ್ಮೊಳಗಿದೆ,” ಎಂದು ಹೇಳಿದನು. (ಲೂಕ 17:21, ಕಿಂಗ್‌ ಜೇಮ್ಸ್‌ ವರ್ಷನ್‌) ಆ ಭ್ರಷ್ಟ ಮನುಷ್ಯರ ದುಷ್ಟ ಹೃದಯಗಳಲ್ಲಿ ಆ ರಾಜ್ಯವಿತ್ತೆಂದು ಯೇಸುವು ಅರ್ಥೈಸಿದನೊ? ಇಲ್ಲ. ಮೂಲ ಗ್ರೀಕ್‌ ಭಾಷೆಯ ಹೆಚ್ಚು ನಿಷ್ಕೃಷ್ಟವಾದ ಒಂದು ಭಾಷಾಂತರವು ಓದುವುದು: “ದೇವರ ರಾಜ್ಯವು ನಿಮ್ಮ ಮಧ್ಯದಲ್ಲಿ ಇದೆ.” (ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌) ಅವರ ಮಧ್ಯದಲ್ಲಿದ್ದ ಯೇಸುವು ಹೀಗೆ, ಭಾವೀ ಅರಸನಾಗಿ ತನ್ನನ್ನು ಸೂಚಿಸಿಕೊಂಡನು. ಒಬ್ಬ ವ್ಯಕ್ತಿಯ ಹೃದಯದಲ್ಲಿರುವ ಯಾವುದೇ ವಸ್ತುವಿಗೆ ತೀರ ವ್ಯತಿರಿಕ್ತವಾಗಿ, ದೇವರ ರಾಜ್ಯವು ವಾಸ್ತವವಾದ, ಒಬ್ಬ ಪ್ರಭು ಮತ್ತು ಪ್ರಜೆಗಳಿರುವ, ಒಂದು ಕಾರ್ಯನಡೆಸುವ ಸರಕಾರವಾಗಿದೆ. ಅದೊಂದು ಸ್ವರ್ಗೀಯ ಸರಕಾರವಾಗಿದೆ, ಏಕೆಂದರೆ ಅದನ್ನು “ಪರಲೋಕರಾಜ್ಯ” ವೆಂದೂ “ದೇವರ ರಾಜ್ಯ” ವೆಂದೂ ಕರೆಯಲಾಗುತ್ತದೆ. (ಮತ್ತಾಯ 13:11; ಲೂಕ 8:10) ದರ್ಶನದಲ್ಲಿ, ಪ್ರವಾದಿ ದಾನಿಯೇಲನು ಅದರ ಪ್ರಭುವನ್ನು, ಸರ್ವಶಕ್ತನಾದ ದೇವರ ಬಳಿಗೆ ತರಲ್ಪಟ್ಟು, “ಸಕಲಜನಾಂಗಕುಲಭಾಷೆಗಳವರು ಅವನನ್ನು ಸೇವಿಸಲೆಂದು,” ಅಂತ್ಯವಿಲ್ಲದ “ದೊರೆತನವೂ ಘನತೆಯೂ ರಾಜ್ಯವೂ” ಕೊಡಲ್ಪಟ್ಟಿರುವ “ಮನುಷ್ಯಕುಮಾರನಂತಿರುವವನು” ಆಗಿ ನೋಡಿದನು. (ದಾನಿಯೇಲ 7:13, 14) ಈ ಅರಸನು ಯಾರು? ಒಳ್ಳೇದು, ಬೈಬಲು ಯೇಸು ಕ್ರಿಸ್ತನನ್ನು “ಮನುಷ್ಯ ಕುಮಾರನು” ಎಂದು ಕರೆಯುತ್ತದೆ. (ಮತ್ತಾಯ 12:40; ಲೂಕ 17:26) ಹೌದು, ಯೆಹೋವನು ತನ್ನ ಪುತ್ರನಾದ ಯೇಸು ಕ್ರಿಸ್ತನನ್ನು ಅರಸನಾಗಿರಲು ನಿಯಮಿಸಿದ್ದಾನೆ.

7 ಯೇಸುವು ಒಬ್ಬನೇ ಆಳುವುದಿಲ್ಲ. ಅವನ ಜೊತೆ ಅರಸರು ಮತ್ತು ಯಾಜಕರಾಗಿರಲು, “ಭೂಲೋಕದೊಳಗಿಂದ ಕೊಂಡುಕೊಳ್ಳಲ್ಪಟ್ಟ” 1,44,000 ಮಂದಿ ಅವನೊಂದಿಗಿದ್ದಾರೆ. (ಪ್ರಕಟನೆ 5:9, 10; 14:1, 3; ಲೂಕ 22:28-30) ದೇವರ ರಾಜ್ಯದ ಪ್ರಜೆಗಳು ಕ್ರಿಸ್ತನ ನಾಯಕತ್ವಕ್ಕೆ ಅಧೀನರಾಗಿರುವ ಮಾನವರ ಒಂದು ಭೌಗೋಳಿಕ ಕುಟುಂಬವಾಗಿರುವರು. (ಕೀರ್ತನೆ 72:7, 8) ಆದರೆ ಆ ರಾಜ್ಯವು, ದೇವರ ಪರಮಾಧಿಕಾರವನ್ನು ನಿಜವಾಗಿಯೂ ನಿರ್ದೋಷೀಕರಿಸಿ, ಪ್ರಮೋದವನ್ಯ ಪರಿಸ್ಥಿತಿಗಳನ್ನು ನಮ್ಮ ಭೂಮಿಯಲ್ಲಿ ಪುನಸ್ಸ್ಥಾಪಿಸುವುದೆಂದು ನಾವು ಹೇಗೆ ಖಾತರಿಯಿಂದಿರಬಲ್ಲೆವು?

ದೇವರ ರಾಜ್ಯದ ವಾಸ್ತವಿಕತೆ

8, 9. (ಎ) ದೇವರ ರಾಜ್ಯದ ವಾಗ್ದಾನಗಳ ಭರವಸಾರ್ಹತೆಯನ್ನು ನಾವು ಹೇಗೆ ಚಿತ್ರಿಸಬಲ್ಲೆವು? (ಬಿ) ರಾಜ್ಯದ ವಾಸ್ತವಿಕತೆಯ ಕುರಿತು ನಾವೇಕೆ ಖಾತರಿಯಿಂದಿರಬಲ್ಲೆವು?

8 ಒಂದು ಬೆಂಕಿ ನಿಮ್ಮ ಮನೆಯನ್ನು ನಾಶಮಾಡಿದೆಯೆಂದು ಭಾವಿಸಿರಿ. ಈಗ ಸಾಧ್ಯತೆಯಿರುವ ಒಬ್ಬ ಮಿತ್ರನು ನಿಮ್ಮ ಮನೆಯನ್ನು ಪುನಃ ಕಟ್ಟಲು ಮತ್ತು ಕುಟುಂಬಕ್ಕೆ ಆಹಾರವನ್ನು ಒದಗಿಸಲು ತಾನು ಸಹಾಯಮಾಡುವೆನೆಂದು ವಚನ ಕೊಡುತ್ತಾನೆ. ಆ ಮಿತ್ರನು ಯಾವಾಗಲೂ ನಿಮಗೆ ಸತ್ಯವನ್ನು ನುಡಿದಿರುವುದಾದರೆ, ನೀವು ಅವನನ್ನು ನಂಬುವುದಿಲ್ಲವೊ? ಮರುದಿನ ನೀವು ಕೆಲಸದಿಂದ ಮನೆಗೆ ಬಂದಾಗ, ಕೆಲಸಗಾರರು ಆಗಲೇ ಬೆಂಕಿಯ ಭಗ್ನಾವಶೇಷಗಳನ್ನು ಶುಚಿಮಾಡತೊಡಗಿದ್ದಾರೆಂದು ಮತ್ತು ಕುಟುಂಬಕ್ಕಾಗಿ ಆಹಾರವು ತರಲ್ಪಟ್ಟಿದೆಯೆಂದು ಕಾಣುತ್ತೀರಿ ಎಂದು ನೆನಸಿರಿ. ಸಮಯ ದಾಟಿದಂತೆ, ವಿಷಯಗಳು ಪುನಸ್ಸ್ಥಾಪಿಸಲ್ಪಡುವುದು ಮಾತ್ರವಲ್ಲ, ಹಿಂದಿನದ್ದಕ್ಕಿಂತ ಹೆಚ್ಚು ಉತ್ತಮವೂ ಆಗಿರುವುದೆಂಬ ಪೂರ್ತಿ ಭರವಸೆ ನಿಮಗಾಗುವುದು ನಿಸ್ಸಂದೇಹ.

9 ತದ್ರೀತಿ, ಯೆಹೋವನು ಆ ರಾಜ್ಯದ ವಾಸ್ತವಿಕತೆಯ ಆಶ್ವಾಸನೆಯನ್ನು ನಮಗೆ ಕೊಡುತ್ತಾನೆ. ಬೈಬಲಿನ ಇಬ್ರಿಯ ಪುಸ್ತಕದಲ್ಲಿ ತೋರಿಸಿರುವಂತೆ, ಧರ್ಮಶಾಸ್ತ್ರದ ಅನೇಕ ರೂಪರೇಖೆಗಳು ರಾಜ್ಯ ಏರ್ಪಾಡನ್ನು ಮುನ್ಸೂಚಿಸಿದವು. (ಇಬ್ರಿಯ 10:1) ದೇವರ ರಾಜ್ಯದ ಮುನ್‌ಪ್ರಭೆಗಳು ಇಸ್ರಾಯೇಲ್‌ನ ಭೂರಾಜ್ಯದಲ್ಲಿಯೂ ಪ್ರತ್ಯಕ್ಷವಾಗಿದ್ದವು. ಅದು ಸಾಧಾರಣವಾದ ಸರಕಾರವಾಗಿರಲಿಲ್ಲ, ಏಕೆಂದರೆ ಅದರ ಪ್ರಭುಗಳು “ಯೆಹೋವನ ಸಿಂಹಾಸನ”ದ ಮೇಲೆ ಕುಳಿತರು. (1 ಪೂರ್ವಕಾಲವೃತ್ತಾಂತ 29:23) ಇದಲ್ಲದೆ, ಹೀಗೆ ಮುಂತಿಳಿಸಲ್ಪಟ್ಟಿತ್ತು: “ರಾಜದಂಡವನ್ನು ಹಿಡಿಯತಕ್ಕವನು [“ಶೀಲೋ,” NW] ಬರುವ ತನಕ ಆ ದಂಡವು ಯೆಹೂದನ ಕೈಯಿಂದ ತಪ್ಪುವದಿಲ್ಲ, ಮುದ್ರೆಕೋಲು ಅವನ ಪಾದಗಳ ಬಳಿಯಿಂದ ಕದಲುವದಿಲ್ಲ; ಅವನಿಗೆ ಅನ್ಯಜನಗಳೂ ವಿಧೇಯರಾಗಿರುವರು.” (ಆದಿಕಾಂಡ 49:10) * ಹೌದು, ಅರಸರ ಈ ಯೆಹೂದ ವಂಶದಲ್ಲಿ, ದೇವರ ಸರಕಾರದ ಕಾಯಂ ಅರಸನಾದ ಯೇಸು ಹುಟ್ಟಿಬರಲಿದ್ದನು.—ಲೂಕ 1:32, 33.

10. (ಎ) ದೇವರ ಮೆಸ್ಸೀಯ ಸಂಬಂಧಿತ ರಾಜ್ಯದ ಅಸ್ತಿವಾರವನ್ನು ಯಾವಾಗ ಹಾಕಲಾಯಿತು? (ಬಿ) ಯೇಸುವಿನ ಭಾವೀ ಜೊತೆಪ್ರಭುಗಳು ಭೂಮಿಯ ಮೇಲೆ ಯಾವ ಪ್ರಾಮುಖ್ಯ ಕೆಲಸದ ನುಗ್ಗುಮೊನೆಯಾಗಿರುತ್ತಾರೆ?

10 ದೇವರ ಮೆಸ್ಸೀಯ ಸಂಬಂಧಿತ ರಾಜ್ಯದ ಅಸ್ತಿವಾರವು, ಯೇಸುವಿನ ಅಪೊಸ್ತಲರ ಆರಿಸುವಿಕೆಯ ಮೂಲಕ ಹಾಕಲ್ಪಟ್ಟಿತು. (ಎಫೆಸ 2:19, 20; ಪ್ರಕಟನೆ 21:14) ಸ್ವರ್ಗದಲ್ಲಿ ಯೇಸು ಕ್ರಿಸ್ತನೊಂದಿಗೆ ಜೊತೆ ಅರಸುಗಳಾಗಿ ಆಳುವ 1,44,000 ಮಂದಿಯಲ್ಲಿ ಇವರು ಪ್ರಥಮರು. ಈ ಭಾವೀ ಜೊತೆಪ್ರಭುಗಳು ಭೂಮಿಯಲ್ಲಿರುವಾಗ, “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ” ಎಂಬ ಯೇಸುವಿನ ಆಜ್ಞೆಗೆ ಹೊಂದಿಕೆಯಾಗಿ, ಒಂದು ಸಾಕ್ಷಿ ಚಳವಳಿಯಲ್ಲಿ ನುಗ್ಗುಮೊನೆಯಾಗಲಿದ್ದರು.—ಮತ್ತಾಯ 28:19.

11. ರಾಜ್ಯ ಸಾರುವ ಕೆಲಸವು ಇಂದು ಹೇಗೆ ನಿರ್ವಹಿಸಲ್ಪಡುತ್ತಾ ಇದೆ, ಮತ್ತು ಅದು ಏನನ್ನು ಪೂರೈಸುತ್ತಿದೆ?

11 ಶಿಷ್ಯರನ್ನಾಗಿ ಮಾಡುವ ಆಜ್ಞೆಗೆ ಈಗ ಆಭೂತಪೂರ್ಣ ಪ್ರಮಾಣದಲ್ಲಿ ವಿಧೇಯತೆ ತೋರಿಸಲ್ಪಡುತ್ತಿದೆ. ಯೆಹೋವನ ಸಾಕ್ಷಿಗಳು ಭೂಗೋಳದಾದ್ಯಂತ ಯೇಸುವಿನ ಈ ಪ್ರವಾದನಾನುಡಿಗಳಿಗೆ ಹೊಂದಿಕೆಯಾಗಿ ರಾಜ್ಯದ ಸುವಾರ್ತೆಯನ್ನು ಘೋಷಿಸುತ್ತಿದ್ದಾರೆ: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ರಾಜ್ಯ ಸಾರುವ ಕೆಲಸದ ಒಂದು ರೂಪವಾಗಿ, ಒಂದು ಮಹಾ ಶೈಕ್ಷಣಿಕ ಕಾರ್ಯಕ್ರಮವು ನಿರ್ವಹಿಸಲ್ಪಡುತ್ತಾ ಇದೆ. ದೇವರ ರಾಜ್ಯದ ನಿಯಮಗಳಿಗೆ ಮತ್ತು ಮೂಲಸೂತ್ರಗಳಿಗೆ ಅಧೀನರಾಗುವವರು ಈಗಾಗಲೇ, ಮಾನವ ಸರಕಾರಗಳಿಗೆ ಸಾಧಿಸಸಾಧ್ಯವಿಲ್ಲದ ಶಾಂತಿ ಮತ್ತು ಐಕ್ಯವನ್ನು ಅನುಭವಿಸುತ್ತಿದ್ದಾರೆ. ಇದೆಲ್ಲ, ದೇವರ ರಾಜ್ಯವು ವಾಸ್ತವಿಕವಾಗಿದೆಯೆಂಬುದಕ್ಕೆ ಸ್ಪಷ್ಟವಾದ ರುಜುವಾತನ್ನು ಕೊಡುತ್ತದೆ!

12. (ಎ) ರಾಜ್ಯ ಘೋಷಕರನ್ನು ಯೆಹೋವನ ಸಾಕ್ಷಿಗಳೆಂದು ಕರೆಯುವುದು ಏಕೆ ಸೂಕ್ತವಾಗಿದೆ? (ಬಿ) ಮಾನವ ಸರಕಾರಗಳಿಂದ ದೇವರ ರಾಜ್ಯವು ಹೇಗೆ ಭಿನ್ನವಾಗಿರುತ್ತದೆ?

12 ಯೆಹೋವನು ಇಸ್ರಾಯೇಲ್ಯರಿಗೆ, “ನೀವೇ ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು,” ಎಂದು ಹೇಳಿದನು. (ಯೆಶಾಯ 43:10-12) “ನಂಬತಕ್ಕ ಸಾಕ್ಷಿ” ಯಾದ ಯೇಸು, ರಾಜ್ಯದ ಸುವಾರ್ತೆಯನ್ನು ಹುರುಪಿನಿಂದ ಸಾರಿದನು. (ಪ್ರಕಟನೆ 1:5; ಮತ್ತಾಯ 4:17) ಆದಕಾರಣ, ಇಂದಿನ ದಿನದ ರಾಜ್ಯ ಘೋಷಕರು ದೈವಿಕವಾಗಿ ನಿಯಮಿತವಾದ ಯೆಹೋವನ ಸಾಕ್ಷಿಗಳೆಂಬ ಹೆಸರನ್ನು ಧರಿಸುವುದು ಸಮಂಜಸ. ಆದರೆ ಸಾಕ್ಷಿಗಳು ದೇವರ ರಾಜ್ಯದ ಕುರಿತು ಇತರರೊಂದಿಗೆ ಮಾತಾಡುತ್ತಾ ಅಷ್ಟೊಂದು ಸಮಯವನ್ನು ಮತ್ತು ಪ್ರಯತ್ನವನ್ನು ವ್ಯಯಿಸುವುದೇಕೆ? ರಾಜ್ಯವು ಮಾನವ ಕುಲದ ಏಕಮಾತ್ರ ನಿರೀಕ್ಷೆಯಾಗಿರುವುದರಿಂದಲೇ ಅವರಿದನ್ನು ಮಾಡುತ್ತಾರೆ. ಮಾನವ ಸರಕಾರಗಳು ಇಂದೊ ನಾಳೆಯೊ ಬಿದ್ದುಹೋಗುತ್ತವೆ, ಆದರೆ ದೇವರ ರಾಜ್ಯವು ಎಂದಿಗೂ ಬಿದ್ದುಹೋಗದು. ಯೆಶಾಯ 9:6, 7, ಅದರ ಪ್ರಭುವಾದ ಯೇಸುವನ್ನು, “ಸಮಾಧಾನದ ಪ್ರಭು” ಎಂದು ಕರೆದು, “ಅವನ . . . ಆಡಳಿತವು ಅಭಿವೃದ್ಧಿಯಾಗುವದು, . . . ನಿತ್ಯ ಸಮಾಧಾನವಿರುವದು,” ಎಂದು ಕೂಡಿಸುತ್ತದೆ. ದೇವರ ರಾಜ್ಯವು, ಇಂದು ಇದ್ದು ನಾಳೆ ಕೆಡವಲ್ಪಡುವ ಮನುಷ್ಯನ ಸರಕಾರಗಳಂತಿರುವುದಿಲ್ಲ. ವಾಸ್ತವವಾಗಿ, ದಾನಿಯೇಲ 2:44 ಹೇಳುವುದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, . . . ಶಾಶ್ವತವಾಗಿ ನಿಲ್ಲುವದು.”

13. (ಎ) ದೇವರ ರಾಜ್ಯವು ಯಶಸ್ವಿಯಾಗಿ ಮನಸ್ಸುಕೊಡುವ ಕೆಲವು ಸಮಸ್ಯೆಗಳಾವುವು? (ಬಿ) ದೇವರ ವಾಗ್ದಾನಗಳು ನೆರವೇರಿಸಲ್ಪಡುವುವು ಎಂದು ನಾವೇಕೆ ಖಾತರಿಯಿಂದಿರಬಲ್ಲೆವು?

13 ಯಾವ ಮಾನವ ಅರಸನು ತಾನೇ ಯುದ್ಧ, ಪಾತಕ, ರೋಗ, ಅರೆಹೊಟ್ಟೆ, ಮತ್ತು ವಸತಿರಾಹಿತ್ಯವನ್ನು ಹೋಗಲಾಡಿಸಿಯಾನು? ಅಲ್ಲದೆ, ಯಾವ ಭೂಪ್ರಭು ತಾನೇ ಮೃತಿಹೊಂದಿರುವವರನ್ನು ಪುನರುತ್ಥಾನಗೊಳಿಸಾನು? ದೇವರ ರಾಜ್ಯವೂ ಅದರ ಅರಸನೂ ಈ ಸಂಗತಿಗಳಿಗೆ ಮನಸ್ಸುಕೊಡುವರು. ಆ ರಾಜ್ಯವು, ಸದಾ ರಿಪೇರಿ ಅವಶ್ಯವಿರುವ ಒಂದು ಕೆಟ್ಟಿರುವ ಸಾಧನದಂತೆ ನ್ಯೂನತೆಯದ್ದಾಗಿ ಪರಿಣಮಿಸದು. ಬದಲಿಗೆ, ದೇವರ ರಾಜ್ಯವು ಯಶಸ್ವಿಗೊಳ್ಳುವುದು, ಏಕೆಂದರೆ ಯೆಹೋವನು ವಚನಕೊಡುವುದು: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.” (ಯೆಶಾಯ 55:11) ದೇವರ ಉದ್ದೇಶ ವಿಫಲಗೊಳ್ಳದು, ಆದರೆ ರಾಜ್ಯವು ಯಾವಾಗ ಆಳತೊಡಗಲಿತ್ತು?

ರಾಜ್ಯದ ಆಳಿಕೆ—ಯಾವಾಗ?

14. ರಾಜ್ಯದ ಕುರಿತು ಯೇಸುವಿನ ಶಿಷ್ಯರಿಗೆ ಯಾವ ತಪ್ಪಭಿಪ್ರಾಯವಿತ್ತು, ಆದರೆ ತನ್ನ ಆಳಿಕೆಯ ಕುರಿತು ಯೇಸು ಏನು ತಿಳಿದಿದ್ದನು?

14 “ಸ್ವಾಮೀ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್‌ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸಿ ಕೊಡುವಿಯೋ?” ಯೇಸುವಿನ ಶಿಷ್ಯರು ಹಾಕಿದ ಈ ಪ್ರಶ್ನೆಯು, ದೇವರ ರಾಜ್ಯದ ಉದ್ದೇಶ ಮತ್ತು ಅದು ಆಳಲಾರಂಭಿಸುವ ನಿಯಮಿತ ಸಮಯವು ಅವರಿಗೆ ಇನ್ನೂ, ಆ ವರೆಗೂ ಗೊತ್ತಿರಲಿಲ್ಲವೆಂದು ತೋರಿಸಿತು. ಆ ವಿಷಯದ ಕುರಿತು ಊಹೆ ಕಟ್ಟಬಾರದೆಂದು ಅವರನ್ನು ಎಚ್ಚರಿಸುತ್ತಾ, ಯೇಸು ಹೇಳಿದ್ದು: “ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ.” ಭೂಮಿಯ ಮೇಲಣ ತನ್ನ ಆಳಿಕೆಯು ಭವಿಷ್ಯತ್ತಿಗಾಗಿ, ತನ್ನ ಪುನರುತ್ಥಾನ ಮತ್ತು ಸ್ವರ್ಗಾರೋಹಣವಾಗಿ ದೀರ್ಘಕಾಲದ ಅನಂತರಕ್ಕಾಗಿ ಕಾದಿರಿಸಲ್ಪಟ್ಟಿದೆಯೆಂಬುದು ಯೇಸುವಿಗೆ ತಿಳಿದಿತ್ತು. (ಅ. ಕೃತ್ಯಗಳು 1:6-11; ಲೂಕ 19:11, 12, 15) ಶಾಸ್ತ್ರಗಳು ಇದನ್ನು ಮುಂತಿಳಿಸಿದ್ದವು. ಅದು ಹೇಗೆ?

15. ಕೀರ್ತನೆ 110:1 ಯೇಸುವಿನ ಆಳಿಕೆಯ ಕಾಲ ನಿಯಮನದ ಮೇಲೆ ಹೇಗೆ ಬೆಳಕು ಬೀರುತ್ತದೆ?

15 ಪ್ರವಾದನಾತ್ಮಕವಾಗಿ ಯೇಸುವನ್ನು ತನ್ನ “ಒಡೆಯ” ನೆಂದು ಸೂಚಿಸುತ್ತಾ, ರಾಜ ದಾವೀದನು ಹೇಳಿದ್ದು: “ಯೆಹೋವನು ನನ್ನ ಒಡೆಯನಿಗೆ—ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ನುಡಿದನು.” (ಕೀರ್ತನೆ 110:1; ಹೋಲಿಸಿ ಅ. ಕೃತ್ಯಗಳು 2:34-36.) ಯೇಸುವಿನ ಆಳಿಕೆಯು ಆತನ ಸ್ವರ್ಗಾರೋಹಣದ ಬಳಿಕ ಕೂಡಲೆ ಆರಂಭವಾಗುವುದಿಲ್ಲವೆಂದು ಈ ಪ್ರವಾದನೆಯು ಸೂಚಿಸುತ್ತದೆ. ಬದಲಿಗೆ, ಅವನು ದೇವರ ಬಲಗಡೆಯಲ್ಲಿ ಕಾಯಲಿದ್ದನು. (ಇಬ್ರಿಯ 10:12, 13) ಈ ಕಾಯುವಿಕೆಯು ಎಷ್ಟು ದೀರ್ಘಕಾಲ ಮುಂದುವರಿಯಲಿತ್ತು? ಅವನ ಆಳಿಕೆಯು ಯಾವಾಗ ಆರಂಭಗೊಳ್ಳುವುದು? ಬೈಬಲು ಆ ಉತ್ತರಗಳನ್ನು ಕಂಡುಹಿಡಿಯಲು ನಮಗೆ ಸಹಾಯ ಮಾಡುತ್ತದೆ.

16. ಸಾ.ಶ.ಪೂ. 607 ರಲ್ಲಿ ಏನು ಸಂಭವಿಸಿತು, ಮತ್ತು ಇದು ದೇವರ ರಾಜ್ಯಕ್ಕೆ ಹೇಗೆ ಸಂಬಂಧಪಟ್ಟದ್ದಾಗಿತ್ತು?

16 ಇಡೀ ಭೂಮಿಯಲ್ಲಿ ಯೆಹೋವನು ತನ್ನ ಹೆಸರನ್ನು ಇಟ್ಟಿದ್ದ ಒಂದೇ ಒಂದು ನಗರವು ಯೆರೂಸಲೇಮ್‌ ಆಗಿತ್ತು. (1 ಅರಸುಗಳು 11:36) ಅದು ಯಾವುದು ದೇವರ ಸ್ವರ್ಗೀಯ ರಾಜ್ಯದ ಪ್ರತಿನಿಧಿರೂಪವಾಗಿತ್ತೋ ಆ ದೇವಸಮ್ಮತವಾದ ಭೂರಾಜ್ಯದ ರಾಜಧಾನಿಯೂ ಆಗಿತ್ತು. ಆದುದರಿಂದ, ಸಾ.ಶ.ಪೂ. 607 ರಲ್ಲಿ ಬಬಿಲೋನ್ಯರಿಂದ ಯೆರೂಸಲೇಮಿನ ನಾಶನವು ಅತ್ಯಂತ ಗಮನಾರ್ಹವಾಗಿತ್ತು. ಭೂಮಿಯಲ್ಲಿ ತನ್ನ ಜನರ ಮೇಲೆ ದೇವರ ನೇರವಾದ ಆಳಿಕೆಯ ದೀರ್ಘ ಅಡ್ಡಬರುವಿಕೆಯ ಆರಂಭವನ್ನು ಈ ಘಟನೆ ಗುರುತಿಸಿತು. ಸುಮಾರು ಆರು ಶತಮಾನಗಳ ಬಳಿಕ, ಆಳಿಕೆಗೆ ಅಡ್ಡಬರುವಿಕೆಯ ಈ ಅವಧಿಯು ಇನ್ನೂ ಜಾರಿಯಲ್ಲಿತ್ತೆಂದು ಯೇಸು ಸೂಚಿಸಿದನು, ಏಕೆಂದರೆ ಅವನು ಹೇಳಿದ್ದು: “ಅನ್ಯದೇಶದವರ ಸಮಯಗಳು ಪೂರೈಸುವ ತನಕ ಯೆರೂಸಲೇಮ್‌ ಪಟ್ಟಣವು ಅನ್ಯದೇಶದವರಿಂದ ತುಳಿದಾಡಲ್ಪಡುತ್ತಿರುವದು.”—ಲೂಕ 21:24.

17. (ಎ) “ಅನ್ಯದೇಶದವರ ಸಮಯಗಳು” ಎಂದರೇನು, ಮತ್ತು ಅವು ಎಷ್ಟು ದೀರ್ಘಕಾಲ ಬಾಳಲಿಕ್ಕಿದ್ದವು? (ಬಿ) “ಅನ್ಯದೇಶದವರ ಸಮಯಗಳು” ಯಾವಾಗ ಆರಂಭವಾದವು ಮತ್ತು ಅಂತ್ಯಗೊಂಡವು?

17 “ಅನ್ಯದೇಶದವರ ಸಮಯಗಳ” ಅವಧಿಯಲ್ಲಿ, ದೇವರಿಂದ ಒಪ್ಪಲ್ಪಟ್ಟ ಆಳಿಕೆಗೆ ಅಡ್ಡಬರುವಂತೆ ಲೌಕಿಕ ಸರಕಾರಗಳು ಅನುಮತಿಸಲ್ಪಡುವರು. ಆ ಅವಧಿಯು ಸಾ.ಶ.ಪೂ. 607ರಲ್ಲಿ ಯೆರೂಸಲೇಮು ನಾಶಗೊಂಡಾಗ ಆರಂಭವಾಯಿತು, ಮತ್ತು ಅದು “ಏಳು ವರುಷ” [“ಏಳು ಕಾಲಗಳು,” NW] ಮುಂದುವರಿಯುವುದೆಂದು ದಾನಿಯೇಲನು ಸೂಚಿಸಿದನು. (ದಾನಿಯೇಲ 4:23-25) ಅದೆಷ್ಟು ದೀರ್ಘವಾಗಿದೆ? ಮೂರುವರೆ “ಕಾಲಗಳು” 1,260 ದಿನಗಳಿಗೆ ಸಮಾನವೆಂದು ಬೈಬಲು ತೋರಿಸುತ್ತದೆ. (ಪ್ರಕಟನೆ 12:6, 14) ಆ ಅವಧಿಯ ಇಮ್ಮಡಿ, ಅಥವಾ ಏಳು ಕಾಲಗಳು, 2,520 ದಿನಗಳಾಗುವುವು. ಆದರೆ ಆ ತುಸು ಸಮಯಾವಧಿಯ ಅಂತ್ಯದಲ್ಲಿ ಗಮನಾರ್ಹವಾದ ಯಾವುದೂ ನಡೆಯಲಿಲ್ಲ. ಆದರೂ, ದಾನಿಯೇಲನ ಪ್ರವಾದನೆಗೆ, “ದಿನ ಒಂದಕ್ಕೆ ಒಂದು ಸಂವತ್ಸರ” ವನ್ನು ಅನ್ವಯಿಸುತ್ತಾ, ಸಾ.ಶ.ಪೂ. 607 ರಿಂದ 2,520 ವರುಷಗಳನ್ನು ಲೆಕ್ಕಿಸುವ ಮೂಲಕ, ನಾವು ಸಾ.ಶ. 1914 ನೆಯ ವರುಷಕ್ಕೆ ಬರುತ್ತೇವೆ.—ಅರಣ್ಯಕಾಂಡ 14:34; ಯೆಹೆಜ್ಕೇಲ 4:6.

18. ರಾಜ್ಯಾಧಿಕಾರವನ್ನು ಪಡೆದ ಸ್ವಲ್ಪದರಲ್ಲಿ ಯೇಸು ಏನು ಮಾಡಿದನು, ಮತ್ತು ಇದು ಲೋಕವನ್ನು ಹೇಗೆ ಬಾಧಿಸಿತು?

18 ಯೇಸುವು ಆ ಸಮಯದಲ್ಲಿ ಸ್ವರ್ಗದಲ್ಲಿ ಆಳಲಾರಂಭಿಸಿದನೊ? ಆತನು ಆಳಲಾರಂಭಿಸಿದನೆಂದು ಹೇಳುವುದಕ್ಕಿರುವ ಶಾಸ್ತ್ರೀಯ ಕಾರಣಗಳು ಮುಂದಿನ ಅಧ್ಯಾಯದಲ್ಲಿ ಚರ್ಚಿಸಲ್ಪಡುವುವು. ಯೇಸುವಿನ ಆಳಿಕೆಯ ಆರಂಭವು ಭೂಮಿಯ ಮೇಲೆ ಒಡನೆ ಶಾಂತಿಯಿಂದ ಗುರುತಿಸಲ್ಪಡುವುದಿಲ್ಲವೆಂಬುದು ನಿಜ. ರಾಜ್ಯವನ್ನು ಪಡೆದೊಡನೆ ಯೇಸುವು ಸೈತಾನನನ್ನೂ ದೆವ್ವದೂತರನ್ನೂ ಸ್ವರ್ಗದಿಂದ ಹೊರಡಿಸಿಬಿಡುವನೆಂದು ಪ್ರಕಟನೆ 12:7-12 ತೋರಿಸುತ್ತದೆ. ಇದು ಜಗತ್ತಿಗೆ ಸಂಕಟದ ಅರ್ಥದಲ್ಲಿದ್ದರೂ, ಪಿಶಾಚನಿಗೆ ಉಳಿದಿರುವ “ಕಾಲವು ಸ್ವಲ್ಪವೆಂದು” ಓದುವುದು ಧೈರ್ಯ ಕೊಡುವಂತಹದ್ದಾಗಿದೆ. ಬೇಗನೆ ನಾವು, ದೇವರ ರಾಜ್ಯವು ಆಳುತ್ತದೆ ಎಂಬುದಕ್ಕಾಗಿ ಮಾತ್ರವಲ್ಲ, ಅದು ಭೂಮಿಗೂ ವಿಧೇಯ ಮಾನವ ಕುಲಕ್ಕೂ ಆಶೀರ್ವಾದಗಳನ್ನು ತರುವುದೆಂಬ ಕಾರಣಕ್ಕಾಗಿಯೂ ಹರ್ಷಿಸಶಕ್ತರಾಗಿರುವೆವು. (ಕೀರ್ತನೆ 72:7, 8) ಇದು ಬೇಗನೆ ಸಂಭವಿಸುವುದೆಂದು ನಮಗೆ ಹೇಗೆ ಗೊತ್ತು?

[ಪಾದಟಿಪ್ಪಣಿಗಳು]

^ ಶೀಲೋ ಎಂಬ ಹೆಸರಿನ ಅರ್ಥವು, “ಅದು ಯಾರದ್ದೋ ಅವನು; ಅದು ಯಾರಿಗೆ ಸೇರಿದೆಯೋ ಅವನು.” ಸಕಾಲದಲ್ಲಿ, ಆ “ಶೀಲೋ” “ಯೂದಾ ಕುಲದಲ್ಲಿ ಜನಿಸಿದ ಸಿಂಹ,” ವಾದ ಯೇಸು ಕ್ರಿಸ್ತನೆಂದು ವ್ಯಕ್ತವಾಯಿತು. (ಪ್ರಕಟನೆ 5:5) ಯೆಹೂದಿ ಟಾರ್ಗಮ್‌ಗಳಲ್ಲಿ ಕೆಲವು, “ಶೀಲೋ” ಎಂಬ ಪದವನ್ನು ಕೇವಲ “ಮೆಸ್ಸೀಯ” ಅಥವಾ “ಅರಸ ಮೆಸ್ಸೀಯ” ಎಂಬುದರಿಂದ ಭರ್ತಿ ಮಾಡಿದವು.

ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ

ದೇವರ ರಾಜ್ಯವೆಂದರೇನು, ಮತ್ತು ಅದು ಎಲ್ಲಿಂದ ಆಳುತ್ತದೆ?

ಆ ರಾಜ್ಯದಲ್ಲಿ ಯಾರು ಆಳುತ್ತಾರೆ, ಮತ್ತು ಅದರ ಪ್ರಜೆಗಳಾರು?

ತನ್ನ ರಾಜ್ಯವು ಒಂದು ವಾಸ್ತವಿಕತೆಯೆಂದು ಯೆಹೋವನು ನಮಗೆ ಹೇಗೆ ಆಶ್ವಾಸನೆ ಕೊಟ್ಟಿದ್ದಾನೆ?

“ಅನ್ಯದೇಶದವರ ಸಮಯಗಳು” ಯಾವಾಗ ಆರಂಭವಾದವು ಮತ್ತು ಅಂತ್ಯಗೊಂಡವು?

[ಅಧ್ಯಯನ ಪ್ರಶ್ನೆಗಳು]

[ಪುಟ 94ರಲ್ಲಿರುವ ಚೌಕ]

ದೇವರ ರಾಜ್ಯಕ್ಕೆ ಸಂಬಂಧಿಸಿರುವ ಕೆಲವು ಪ್ರಾಮುಖ್ಯ ಘಟನೆಗಳು

ಪಿಶಾಚನಾದ ಸೈತಾನನೆಂಬ ಸರ್ಪದ ತಲೆಯನ್ನು ಜಜ್ಜುವ “ಸಂತಾನ” ವನ್ನು ಹುಟ್ಟಿಸುವ ತನ್ನ ಉದ್ದೇಶವನ್ನು ದೇವರು ಪ್ರಕಟಿಸುತ್ತಾನೆ.—ಆದಿಕಾಂಡ 3:15.

• ಸಾ.ಶ.ಪೂ. 1943 ರಲ್ಲಿ ಈ “ಸಂತಾನ”ವು ಅಬ್ರಹಾಮನ ಮಾನವ ವಂಶಜನಾಗಿರುವನೆಂದು ಯೆಹೋವನು ಸೂಚಿಸುತ್ತಾನೆ.—ಆದಿಕಾಂಡ 12:1-3, 7; 22:18.

• ಸಾ.ಶ.ಪೂ. 1513 ರಲ್ಲಿ ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ನಿಯಮದೊಡಂಬಡಿಕೆಯು, “ಬರಬೇಕಾಗಿದ್ದ ಮೇಲುಗಳ ಛಾಯೆ” ಯನ್ನು ಒದಗಿಸುತ್ತದೆ.—ವಿಮೋಚನಕಾಂಡ 24:6-8; ಇಬ್ರಿಯ 10:1.

• ಇಸ್ರಾಯೇಲಿನ ಭೂರಾಜ್ಯವು ಸಾ.ಶ.ಪೂ. 1117 ರಲ್ಲಿ ಆರಂಭಗೊಳ್ಳುತ್ತದೆ, ಮತ್ತು ತರುವಾಯ ಅದು ದಾವೀದನ ವಂಶದಲ್ಲಿ ಮುಂದುವರಿಯುತ್ತದೆ.—1 ಸಮುವೇಲ 11:15; 2 ಸಮುವೇಲ 7:8, 16.

• ಸಾ.ಶ.ಪೂ. 607 ರಲ್ಲಿ ಯೆರೂಸಲೇಮು ನಾಶಗೊಳ್ಳುತ್ತದೆ, ಮತ್ತು “ಅನ್ಯದೇಶದವರ ಸಮಯಗಳು” ಆರಂಭಗೊಳ್ಳುತ್ತವೆ.—2 ಅರಸುಗಳು 25:8-10, 25, 26; ಲೂಕ 21:24.

• ಸಾ.ಶ. 29 ರಲ್ಲಿ, ಯೇಸುವು ನಿಯಮಿತ ರಾಜನಾಗಿ ಅಭಿಷೇಕಿಸಲ್ಪಟ್ಟು, ತನ್ನ ಭೂಶುಶ್ರೂಷೆಯಲ್ಲಿ ಮುಂದುವರಿಯುತ್ತಾನೆ.—ಮತ್ತಾಯ 3:16, 17; 4:17; 21:9-11.

• ಸಾ.ಶ. 33 ರಲ್ಲಿ, ತನ್ನ ಆಳಿಕೆಯು ಆರಂಭಿಸುವ ತನಕ ದೇವರ ಬಲಪಕ್ಕದಲ್ಲಿ ಕಾಯಲಿಕ್ಕಾಗಿ ಯೇಸು ಸ್ವರ್ಗಕ್ಕೇರಿ ಹೋಗುತ್ತಾನೆ.—ಅ. ಕೃತ್ಯಗಳು 5:30, 31; ಇಬ್ರಿಯ 10:12, 13.

• ಸಾ.ಶ. 1914ರಲ್ಲಿ, “ಅನ್ಯದೇಶದವರ ಸಮಯಗಳು” ಅಂತ್ಯಗೊಂಡಾಗ ಯೇಸುವನ್ನು ಸ್ವರ್ಗೀಯ ರಾಜ್ಯದಲ್ಲಿ ಸಿಂಹಾಸನಕ್ಕೇರಿಸಲಾಗುತ್ತದೆ.—ಪ್ರಕಟನೆ 11:15.

• ಸೈತಾನನೂ ದೆವ್ವಗಳೂ ಭೂಮಿಯ ಪರಿಸರಕ್ಕೆ ದೊಬ್ಬಲ್ಪಟ್ಟು ಮಾನವ ಕುಲಕ್ಕೆ ವರ್ಧಿಸಿದ ಸಂಕಟವನ್ನು ತರುತ್ತಾರೆ.—ಪ್ರಕಟನೆ 12:9-12.

• ಯೇಸುವು ದೇವರ ರಾಜ್ಯದ ಸುವಾರ್ತೆಯ ಲೋಕವ್ಯಾಪಕ ಸಾರುವಿಕೆಯ ಮೇಲ್ವಿಚಾರಣೆ ಮಾಡುತ್ತಾನೆ.—ಮತ್ತಾಯ 24:14; 28:19, 20.