ದೈವಭಕ್ತಿಯ ಜೀವನವನ್ನು ನಡೆಸುವುದು ಸಂತೋಷವನ್ನು ತರುವ ಕಾರಣ
ಅಧ್ಯಾಯ 13
ದೈವಭಕ್ತಿಯ ಜೀವನವನ್ನು ನಡೆಸುವುದು ಸಂತೋಷವನ್ನು ತರುವ ಕಾರಣ
1. ಯೆಹೋವನ ಮಾರ್ಗವು ಸಂತೋಷವನ್ನು ತರುತ್ತದೆಂದು ನಾವು ಏಕೆ ಹೇಳಬಲ್ಲೆವು?
ಯೆಹೋವನು “ಸಂತೋಷದ ದೇವರು,” ಮತ್ತು ನೀವು ಜೀವನವನ್ನು ಆನಂದಿಸಬೇಕೆಂದು ಆತನು ಬಯಸುತ್ತಾನೆ. (1 ತಿಮೊಥೆಯ 1:11, NW) ಆತನ ಮಾರ್ಗದಲ್ಲಿ ನಡೆಯುವ ಮೂಲಕ ನೀವು ನಿಮಗೆ ಪ್ರಯೋಜನ ತಂದುಕೊಂಡು, ಒಂದು ಸದಾ ಹರಿಯುವ ನದಿಯಂತೆ ಆಳವಾದುದೂ ಬಾಳಿಕೆ ಬರುವಂತಹದ್ದೂ ಆದ ಪ್ರಶಾಂತತೆಯನ್ನು ಅನುಭವಿಸಬಲ್ಲಿರಿ. ದೇವರ ಮಾರ್ಗದಲ್ಲಿ ನಡೆಯುವುದು, ಒಬ್ಬನು ‘ಸಮುದ್ರದ ಅಲೆಗಳ ಹಾಗೆ’ ಸತತವಾದ ನೀತಿಕ್ರಿಯೆಗಳನ್ನು ನಡೆಸುವಂತೆಯೂ ಅವನನ್ನು ಪ್ರಚೋದಿಸುವುದು. ಇದು ನಿಜ ಸಂತೋಷವನ್ನು ತರುತ್ತದೆ.—ಯೆಶಾಯ 48:17, 18.
2. ಕೆಲವು ಬಾರಿ ಕೆಟ್ಟದ್ದಾಗಿ ಉಪಚರಿಸಲ್ಪಟ್ಟರೂ ಕ್ರೈಸ್ತರು ಹೇಗೆ ಸಂತೋಷವುಳ್ಳವರಾಗಿರಬಲ್ಲರು?
2 ‘ಸರಿಯಾದುದನ್ನು ಮಾಡಿದ್ದಕ್ಕಾಗಿ ಜನರು ಕೆಲವು ಬಾರಿ ಕಷ್ಟಾನುಭವಿಸುತ್ತಾರೆ,’ ಎಂದು ಕೆಲವರು ಆಕ್ಷೇಪಿಸಬಹುದು. ನಿಜ, ಮತ್ತು ಯೇಸುವಿನ ಅಪೊಸ್ತಲರಿಗೆ ಹಾಗೆಯೇ ಸಂಭವಿಸಿತು. ಹಿಂಸಿಸಲ್ಪಟ್ಟರೂ, ಅವರು ಸಂತೋಷಿಸುತ್ತಾ, “ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.” (ಅ. ಕೃತ್ಯಗಳು 5:40-42) ಇದರಿಂದ ನಾವು ಪ್ರಾಮುಖ್ಯ ಪಾಠಗಳನ್ನು ಕಲಿಯಬಲ್ಲೆವು. ನಾವು ದೈವಭಕ್ತಿಯ ಜೀವನವನ್ನು ನಡೆಸುವುದು, ನಾವು ಸದಾ ಸದುಪಚರಿಸಲ್ಪಡುವೆವೆಂಬ ಖಾತರಿಯನ್ನು ಕೊಡುವುದಿಲ್ಲ ಎಂಬುದು ಒಂದು ಪಾಠ. ಅಪೊಸ್ತಲ ಪೌಲನು ಬರೆದುದು: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೊಥೆಯ 3:12) ಇದಕ್ಕೆ ಕಾರಣವು, ದೈವಭಕ್ತಿಯ ಮಾರ್ಗದಲ್ಲಿ ಜೀವಿಸುವವರನ್ನು ಸೈತಾನನೂ ಅವನ ಲೋಕವೂ ವಿರೋಧಿಸುವುದೇ. (ಯೋಹಾನ 15:18, 19; 1 ಪೇತ್ರ 5:8) ಆದರೆ ಸಾಚ ಸಂತೋಷವು ಬಾಹ್ಯ ವಿಷಯಗಳ ಮೇಲೆ ಹೊಂದಿಕೊಂಡಿರುವುದಿಲ್ಲ. ಬದಲಿಗೆ, ನಾವು ಸರಿಯಾದುದನ್ನು ಮಾಡುತ್ತಿದ್ದೇವೆ ಮತ್ತು ಆ ಕಾರಣ ದೇವರ ಒಪ್ಪಿಗೆಯ ಮಂದಹಾಸವು ನಮಗಿದೆಯೆಂಬ ಮನವರಿಕೆಯಿಂದ ಬರುತ್ತದೆ.—ಮತ್ತಾಯ 5:10-12; ಯಾಕೋಬ 1:2, 3; 1 ಪೇತ್ರ 4:13, 14.
3. ಯೆಹೋವನ ಆರಾಧನೆಯು ಒಬ್ಬ ವ್ಯಕ್ತಿಯ ಜೀವಿತವನ್ನು ಹೇಗೆ ಪ್ರಭಾವಿಸಬೇಕು?
3 ಒಮ್ಮೊಮ್ಮೆ ಮಾಡುವ ಭಕ್ತಿಕ್ರಿಯೆಗಳ ಮೂಲಕ ತಾವು ದೇವರ ಅನುಗ್ರಹವನ್ನು ಸಂಪಾದಿಸಬಲ್ಲೆವೆಂದೂ, ಇತರ ಸಮಯಗಳಲ್ಲಿ ಆತನನ್ನು ಮರೆತುಬಿಡಸಾಧ್ಯವಿದೆಯೆಂದೂ ಅಭಿಪ್ರಯಿಸುವ ಜನರಿದ್ದಾರೆ. ಯೆಹೋವ ದೇವರ ಸತ್ಯಾರಾಧನೆಯು ಹಾಗಿರುವುದಿಲ್ಲ. ಅದು ಒಬ್ಬ ವ್ಯಕ್ತಿಯ ನಡತೆಯನ್ನು ಅವನು ಎಚ್ಚರವಾಗಿರುವ ತಾಸುಗಳಲ್ಲೆಲ್ಲ, ದಿನ ದಿನವೂ, ವರ್ಷ ವರ್ಷವೂ ಪ್ರಭಾವಿಸುತ್ತದೆ. ಆ ಕಾರಣದಿಂದಲೇ ಅದು “ಈ ಮಾರ್ಗ” ಎಂದೂ ಕರೆಯಲ್ಪಡುತ್ತದೆ. (ಅ. ಕೃತ್ಯಗಳು 19:9; ಯೆಶಾಯ 30:21) ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿ ನಾವು ಮಾತನಾಡಿ, ವರ್ತಿಸುವಂತೆ ನಮ್ಮನ್ನು ಕೇಳಿಕೊಳ್ಳುವ ದೈವಭಕ್ತಿಯ ಜೀವನ ರೀತಿ ಅದಾಗಿದೆ.
4. ದೇವರ ಮಾರ್ಗಗಳಿಗನುಸಾರ ಜೀವಿಸುವಂತೆ ಬದಲಾವಣೆಗಳನ್ನು ಮಾಡುವುದು ಏಕೆ ಪ್ರಯೋಜನಕರ?
4 ಯೆಹೋವನನ್ನು ಮೆಚ್ಚಿಸಲಿಕ್ಕಾಗಿ, ತಮಗೆ ಕೆಲವು ಬದಲಾವಣೆಗಳನ್ನು ಮಾಡುವ ಅಗತ್ಯವಿದೆ ಎಂದು ಬೈಬಲಿನ ಹೊಸ ವಿದ್ಯಾರ್ಥಿಗಳು ನೋಡುವಾಗ ಅವರು, ‘ದೈವಭಕ್ತಿಯ ಜೀವನವನ್ನು ನಡೆಸುವುದು ನಿಜವಾಗಿಯೂ ಸಾರ್ಥಕವೊ?’ ಎಂದು ಕುತೂಹಲಪಡಬಹುದು. ಅದು ಸಾರ್ಥಕವೆಂದು ನೀವು ಖಾತರಿಯಿಂದಿರಬಲ್ಲಿರಿ. ಏಕೆ? ಏಕೆಂದರೆ “ದೇವರು ಪ್ರೀತಿಸ್ವರೂಪಿಯು,” ಮತ್ತು ಆ ಕಾರಣದಿಂದ ಆತನ ಮಾರ್ಗಗಳು ನಮ್ಮ ಪ್ರಯೋಜನಕ್ಕಾಗಿ ಇವೆ. (1 ಯೋಹಾನ 4:8) ದೇವರು ವಿವೇಕಿಯೂ ಆಗಿದ್ದು ನಮಗೆ ಯಾವುದು ಅತ್ಯುತ್ತಮವೆಂದು ಬಲ್ಲವನಾಗಿದ್ದಾನೆ. ಯೆಹೋವ ದೇವರು ಸರ್ವಶಕ್ತನಾಗಿರುವುದರಿಂದ, ಒಂದು ಕೆಟ್ಟ ಹವ್ಯಾಸವನ್ನು ಮುರಿಯುವ ಮೂಲಕ ಆತನನ್ನು ಮೆಚ್ಚಿಸುವ ನಮ್ಮ ಬಯಕೆಯನ್ನು ಪೂರೈಸುವಂತೆ ಬಲಪಡಿಸಲು ಆತನು ಶಕ್ತನಾಗಿದ್ದಾನೆ. (ಫಿಲಿಪ್ಪಿ 4:13) ನಾವು ದೈವಭಕ್ತಿಯ ಜೀವಿತದಲ್ಲಿ ಸೇರಿರುವ ಕೆಲವು ಮೂಲಸೂತ್ರಗಳನ್ನು ಪರಿಗಣಿಸಿ, ಅವುಗಳನ್ನು ಅನ್ವಯಿಸುವುದು ಹೇಗೆ ಸಂತೋಷವನ್ನು ತರುತ್ತದೆಂಬುದನ್ನು ನೋಡೋಣ.
ಪ್ರಾಮಾಣಿಕತೆ ಸಂತೋಷದಲ್ಲಿ ಪರಿಣಮಿಸುತ್ತದೆ
5. ಸುಳ್ಳು ಹೇಳುವುದು ಮತ್ತು ಕದಿಯುವುದರ ಕುರಿತು ಬೈಬಲು ಏನೆನ್ನುತ್ತದೆ?
5 ಯೆಹೋವನು “ಸತ್ಯದ ದೇವರು.” (ಕೀರ್ತನೆ 31:5, NW) ನೀವು ಆತನ ಮಾದರಿಯನ್ನು ಅನುಸರಿಸಿ, ಸತ್ಯವಾಡುವ ವ್ಯಕ್ತಿಯಾಗಿ ಜ್ಞಾತರಾಗಲು ಬಯಸುವುದು ನಿಸ್ಸಂಶಯ. ಪ್ರಾಮಾಣಿಕತೆಯು ಆತ್ಮಗೌರವಕ್ಕೆ ಮತ್ತು ಸುಕ್ಷೇಮದ ಭಾವನೆಗೆ ನಡೆಸುತ್ತದೆ. ಆದರೂ ಈ ಪಾಪಪೂರ್ಣ ಜಗತ್ತಿನಲ್ಲಿ ಅಪ್ರಾಮಾಣಿಕತೆಯು ತೀರ ಸಾಮಾನ್ಯವಾಗಿರುವುದರಿಂದ, ಕ್ರೈಸ್ತರಿಗೆ ಈ ಮರುಜ್ಞಾಪನ ಅವಶ್ಯ: “ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ; . . . ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದೆ . . . ದುಡಿಯಲಿ; ಆಗ ಕಷ್ಟದಲ್ಲಿರುವವರಿಗೆ ಕೊಡುವದಕ್ಕೆ ಅವನಿಂದಾಗುವದು.” (ಎಫೆಸ 4:25, 28) ಕ್ರೈಸ್ತ ಕಾರ್ಮಿಕರು ಒಂದು ಪ್ರಾಮಾಣಿಕ ದಿನದ ಕೆಲಸವನ್ನು ಮಾಡುತ್ತಾರೆ. ತಮ್ಮ ಧಣಿಯ ಅಪ್ಪಣೆಯ ವಿನಹ ಅವನ ಸ್ವತ್ತಾದ ವಸ್ತುಗಳನ್ನು ಅವರು ತೆಗೆಯುವುದಿಲ್ಲ. ಕೆಲಸದ ಸ್ಥಳದಲ್ಲಾಗಲಿ, ಶಾಲೆಯಲ್ಲಾಗಲಿ, ಮನೆಯಲ್ಲಾಗಲಿ, ಯೆಹೋವನ ಆರಾಧಕನೊಬ್ಬನು, ‘ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕನು’ ಆಗಿರಬೇಕು. (ಇಬ್ರಿಯ 13:18, NW) ಸುಳ್ಳಾಡುವ ಅಥವಾ ಕದಿಯುವ ಅಭ್ಯಾಸವನ್ನು ಮಾಡುವ ಯಾವನಿಗೂ ದೇವರ ಅನುಗ್ರಹ ದೊರೆಯದು.—ಧರ್ಮೋಪದೇಶಕಾಂಡ 5:19; ಪ್ರಕಟನೆ 21:8.
6. ದೈವಭಕ್ತಿಯ ಒಬ್ಬ ವ್ಯಕ್ತಿಯ ಪ್ರಾಮಾಣಿಕತೆಯು ಯೆಹೋವನಿಗೆ ಹೇಗೆ ಮಹಿಮೆಯನ್ನು ತಂದೀತು?
6 ಪ್ರಾಮಾಣಿಕರಾಗಿರುವುದು ಅನೇಕಾಶೀರ್ವಾದಗಳಲ್ಲಿ ಫಲಿಸುತ್ತದೆ. ಸೆಲೀನ ಎಂಬವಳು ಯೆಹೋವ ದೇವರನ್ನೂ ಆತನ ನೀತಿಯ ಮೂಲಸೂತ್ರಗಳನ್ನೂ ಪ್ರೀತಿಸುವ ಒಬ್ಬ ನಿರ್ಗತಿಕಳಾದ ಆಫ್ರಿಕನ್ ವಿಧವೆ. ಒಂದು ದಿನ ಆಕೆಗೆ ಒಂದು ಬ್ಯಾಂಕ್ ಪುಸ್ತಕ ಮತ್ತು ದೊಡ್ಡ ಮೊತ್ತದ ಹಣವಿದ್ದ ಒಂದು ಚೀಲ ಸಿಕ್ಕಿತು. ಟೆಲಿಫೋನ್ ಡೈರೆಕ್ಟರಿಯನ್ನು ಉಪಯೋಗಿಸಿ ಆಕೆ ಅದರ ಒಡೆಯ—ದರೋಡೆಗೊಳಗಾಗಿದ್ದ ಒಬ್ಬ ಅಂಗಡಿಗಾರ—ನನ್ನು ಕಂಡುಹಿಡಿಯಶಕ್ತಳಾದಳು. ತುಂಬ ಅಸ್ವಸ್ಥಳಿದ್ದರೂ, ಸೆಲೀನಳು ಅವನನ್ನು ಭೇಟಿಯಾಗಿ ಆ ಚೀಲದಲ್ಲಿದ್ದ ಎಲ್ಲವನ್ನು ಹಿಂದಕ್ಕೆ ಕೊಟ್ಟಾಗ ಆ ಮನುಷ್ಯನಿಗೆ ಅದನ್ನು ನೋಡಿ ನಂಬಲಾಗಲಿಲ್ಲ. “ಇಂತಹ ಪ್ರಾಮಾಣಿಕತೆಗೆ ಪ್ರತಿಫಲ ಕೊಡಲ್ಪಡಲೇಬೇಕು” ಎಂದು ಹೇಳಿ ಅವನು ಅವಳಿಗೆ ಹಣದಲ್ಲಿ ಒಂದು ಮೊಬಲಗನ್ನು ಕೊಟ್ಟನು. ಹೆಚ್ಚು ಪ್ರಾಮುಖ್ಯವಾಗಿ, ಈ ಮನುಷ್ಯನು ಸೆಲೀನಳ ಧರ್ಮವನ್ನು ಹೊಗಳಿದನು. ಹೌದು, ಪ್ರಾಮಾಣಿಕ ಕೃತ್ಯಗಳು ಬೈಬಲ್ ಬೋಧನೆಯನ್ನು ಶೋಭಾಯಮಾನಗೊಳಿಸಿ, ಯೆಹೋವ ದೇವರನ್ನು ಮಹಿಮೆಪಡಿಸಿ, ಆತನ ಪ್ರಾಮಾಣಿಕ ಆರಾಧಕರಿಗೆ ಸಂತೋಷವನ್ನು ತರುತ್ತವೆ.—ತೀತ 2:10; 1 ಪೇತ್ರ 2:12.
ಔದಾರ್ಯವು ಸಂತೋಷವನ್ನು ತರುತ್ತದೆ
7. ಜೂಜಾಟದಲ್ಲಿ ತಪ್ಪೇನು?
7 ಉದಾರಭಾವದಲ್ಲಿ ಸಂತೋಷವಿರುತ್ತದಾದರೂ, ಲೋಭಿಗಳು “ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” (1 ಕೊರಿಂಥ 6:10) ಲೋಭದ ಸಾಮಾನ್ಯವಾದ ಒಂದು ರೂಪವು, ಇತರರ ನಷ್ಟಗಳ ಮೂಲಕ ಹಣಮಾಡಲು ಪ್ರಯತ್ನಿಸುವ ಜೂಜಾಟವಾಗಿದೆ. “ನೀಚಲಾಭವನ್ನು ಅಪೇಕ್ಷಿಸುವ” ಜನರನ್ನು ಯೆಹೋವನು ಮೆಚ್ಚುವುದಿಲ್ಲ. (1 ತಿಮೊಥೆಯ 3:8) ಜೂಜಾಟವು ಕಾನೂನುಬದ್ಧವಾಗಿರುವಲ್ಲಿಯೂ ಮತ್ತು ಒಬ್ಬ ವ್ಯಕ್ತಿ ವಿನೋದಕ್ಕಾಗಿ ಜೂಜಾಡುವುದಾದರೂ, ಅವನು ಅದರ ವ್ಯಸನಿಯಾಗಿ ಪರಿಣಮಿಸಿ ಅನೇಕ ಜೀವಗಳನ್ನು ಹಾಳುಮಾಡಿರುವ ಒಂದು ಅಭ್ಯಾಸವನ್ನು ಪ್ರವರ್ಧಿಸುವವನಾಗಬಲ್ಲನು. ಜೂಜಾಟವು ಅನೇಕವೇಳೆ ಜೂಜುಕೋರನ ಕುಟುಂಬಕ್ಕೆ, ಆಹಾರ ಮತ್ತು ಬಟ್ಟೆಗಳಂತಹ ಆವಶ್ಯಕ ವಸ್ತುಗಳನ್ನು ಖರೀದಿಸಲು ಸ್ವಲ್ಪವೇ ಹಣವನ್ನು ಉಳಿಸಿ, ಕಷ್ಟಗಳನ್ನು ತರುತ್ತದೆ.—1 ತಿಮೊಥೆಯ 6:10.
8. ಯೇಸುವು ಔದಾರ್ಯದ ಉತ್ತಮ ಮಾದರಿಯೊಂದನ್ನು ಹೇಗೆ ಇಟ್ಟನು, ಮತ್ತು ನಾವು ಹೇಗೆ ಉದಾರಭಾವದವರಾಗಿರಬಲ್ಲೆವು?
8 ತಮ್ಮ ಪ್ರೀತಿಯ ಔದಾರ್ಯದ ಕಾರಣ, ಕ್ರೈಸ್ತರು ಇತರರಿಗೆ, ವಿಶೇಷವಾಗಿ ಸಹಾಯದ ಅವಶ್ಯವಿರುವ ಜೊತೆವಿಶ್ವಾಸಿಗಳಿಗೆ ನೆರವಾಗುವುದರಲ್ಲಿ ಆನಂದವನ್ನು ಕಂಡುಕೊಳ್ಳುತ್ತಾರೆ. (ಯಾಕೋಬ 2:15, 16) ಯೇಸುವು ಭೂಮಿಗೆ ಬರುವುದಕ್ಕೆ ಮೊದಲು, ಮಾನವಕುಲದ ಕಡೆಗೆ ದೇವರ ಔದಾರ್ಯವನ್ನು ಅವನು ಅವಲೋಕಿಸಿದನು. (ಅ. ಕೃತ್ಯಗಳು 14:16, 17) ಯೇಸುವು ತಾನೇ ತನ್ನ ಸಮಯ, ಸಾಮರ್ಥ್ಯಗಳು, ಮತ್ತು ತನ್ನ ಜೀವವನ್ನೇ ಮಾನವಕುಲದ ಪರವಾಗಿ ಕೊಟ್ಟನು. ಆದಕಾರಣ, “ಪಡೆಯುವುದರಲ್ಲಿರುವುದಕ್ಕಿಂತ ಹೆಚ್ಚಿನ ಸಂತೋಷ ಕೊಡುವುದರಲ್ಲಿದೆ,” ಎಂದು ಹೇಳಲು ಅವನು ಸುಯೋಗ್ಯನಾಗಿದ್ದನು. (ಅ. ಕೃತ್ಯಗಳು 20:35, NW) ದೇವಾಲಯದ ಹಣದ ಪೆಟ್ಟಿಗೆಗೆ ಎರಡು ಚಿಕ್ಕ ನಾಣ್ಯಗಳನ್ನು ಔದಾರ್ಯದಿಂದ ಹಾಕಿದ ಆ ಬಡ ವಿಧವೆಯ ಕುರಿತೂ ಯೇಸುವು ಒಳ್ಳೆಯ ಅಭಿಪ್ರಾಯಕೊಟ್ಟು ಮಾತಾಡಿದನು, ಏಕೆಂದರೆ ಅವಳು “ತನ್ನ ಜೀವನವನ್ನೇ” ಕೊಟ್ಟಳು. (ಮಾರ್ಕ 12:41-44) ಪುರಾತನಕಾಲದ ಇಸ್ರಾಯೇಲ್ಯರು ಮತ್ತು ಒಂದನೆಯ ಶತಮಾನದ ಕ್ರೈಸ್ತರು, ಸಭೆಗೆ ಮತ್ತು ರಾಜ್ಯ ಕೆಲಸಕ್ಕೆ ಪ್ರಾಪಂಚಿಕ ಬೆಂಬಲವನ್ನು ಕೊಡುವುದರಲ್ಲಿ ಆನಂದಭರಿತ ಔದಾರ್ಯದ ಮಾದರಿಗಳನ್ನು ಒದಗಿಸುತ್ತಾರೆ. (1 ಪೂರ್ವಕಾಲವೃತ್ತಾಂತ 29:9; 2 ಕೊರಿಂಥ 9:11-14) ಈ ಉದ್ದೇಶಗಳಿಗಾಗಿ ಐಹಿಕ ವಂತಿಗೆಗಳನ್ನು ಕೊಡುವುದಲ್ಲದೆ, ಆಧುನಿಕ ದಿನದ ಕ್ರೈಸ್ತರು ದೇವರಿಗೆ ಸಂತೋಷದಿಂದ ಸ್ತುತಿಯನ್ನು ಅರ್ಪಿಸಿ ತಮ್ಮ ಜೀವಿತಗಳನ್ನು ಆತನ ಸೇವೆಯಲ್ಲಿ ಬಳಸುತ್ತಾರೆ. (ರೋಮಾಪುರ 12:1; ಇಬ್ರಿಯ 13:15) ಸತ್ಯಾರಾಧನೆಯನ್ನು ಬೆಂಬಲಿಸಲು ಮತ್ತು ರಾಜ್ಯದ ಸುವಾರ್ತೆಯನ್ನು ಸಾರುವ ಲೋಕವ್ಯಾಪಕ ಕೆಲಸವನ್ನು ಪ್ರವರ್ಧಿಸಲು ತಮ್ಮ ಸಮಯ, ಶಕ್ತಿ, ಮತ್ತು ಹಣವನ್ನು ಸೇರಿಸಿ ಇತರ ಸಂಪನ್ಮೂಲಗಳನ್ನು ಬಳಸುವುದಕ್ಕಾಗಿ ಯೆಹೋವನು ಅವರನ್ನು ಆಶೀರ್ವದಿಸುತ್ತಾನೆ.—ಜ್ಞಾನೋಕ್ತಿ 3:9, 10.
ಸಂತೋಷವನ್ನು ಪ್ರವರ್ಧಿಸುವ ಇತರ ಸಂಗತಿಗಳು
9. ಮದ್ಯಪಾನೀಯಗಳ ವಿಪರೀತ ಕುಡಿಯುವಿಕೆಯಲ್ಲಿ ತಪ್ಪೇನು?
9 ಸಂತೋಷವುಳ್ಳವರಾಗಿರಲು, ಕ್ರೈಸ್ತರು ‘ತಮ್ಮ ಯೋಚನಾ ಸಾಮರ್ಥ್ಯಗಳನ್ನೂ ಕಾಯಬೇಕು.’ (ಜ್ಞಾನೋಕ್ತಿ 5:1, 2, NW) ಇದು ಅವರು ದೇವರ ವಾಕ್ಯವನ್ನು ಮತ್ತು ಹಿತಕರವಾದ ಬೈಬಲ್ ಸಾಹಿತ್ಯವನ್ನು ಓದಿ, ಮನನ ಮಾಡುವುದನ್ನು ಕೇಳಿಕೊಳ್ಳುತ್ತದೆ. ಆದರೆ ವರ್ಜಿಸಬೇಕಾದ ಸಂಗತಿಗಳಿವೆ. ಉದಾಹರಣೆಗೆ, ಮದ್ಯಪಾನೀಯಗಳ ಮಿತಿಮೀರಿದ ಕುಡಿಯುವಿಕೆಯು ಒಬ್ಬ ವ್ಯಕ್ತಿಯು ತನ್ನ ಆಲೋಚನೆಯಲ್ಲಿ ನಿಯಂತ್ರಣ ತಪ್ಪುವಂತೆ ಮಾಡಬಲ್ಲದು. ಇಂತಹ ಸ್ಥಿತಿಯಲ್ಲಿ ಅನೇಕರು ಅನೈತಿಕ ವರ್ತನೆಗಳಲ್ಲಿ ಸಿಕ್ಕಿಕೊಂಡು, ಹಿಂಸಾತ್ಮಕವಾಗಿ ವರ್ತಿಸಿ, ಮಾರಕ ಅಪಘಾತಗಳನ್ನು ಆಗಿಸುತ್ತಾರೆ. ಕುಡುಕರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ ಎಂದು ಬೈಬಲು ಹೇಳುವುದರಲ್ಲಿ ಆಶ್ಚರ್ಯವಿಲ್ಲ! (1 ಕೊರಿಂಥ 6:10) “ಮನಸ್ಸಿನಲ್ಲಿ ಸ್ವಸ್ಥರು” ಆಗಿ ಉಳಿಯಲು ನಿರ್ಧರಿಸಿರುತ್ತಾ, ನಿಜ ಕ್ರೈಸ್ತರು ಕುಡುಕತನದಿಂದ ದೂರವಿರುತ್ತಾರೆ, ಮತ್ತು ಇದು ಅವರ ಮಧ್ಯೆ ಸಂತೋಷವನ್ನು ಪ್ರವರ್ಧಿಸಲು ಸಹಾಯಮಾಡುತ್ತದೆ.—ತೀತ 2:2-6, NW.
10. (ಎ) ಕ್ರೈಸ್ತರು ಹೊಗೆಸೊಪ್ಪನ್ನು ಏಕೆ ಉಪಯೋಗಿಸುವುದಿಲ್ಲ? (ಬಿ) ದುರ್ವ್ಯಸನದ ಚಟಗಳನ್ನು ಮುರಿಯುವುದರಿಂದ ಯಾವ ಪ್ರಯೋಜನಗಳು ಬರುತ್ತವೆ?
10 ಒಂದು ಶುದ್ಧ ಶರೀರವು ಸಂತೋಷಕ್ಕೆ ಸಹಾಯ ನೀಡುತ್ತದೆ. ಆದರೂ, ಅನೇಕರು ಹಾನಿಕರವಾದ ಪದಾರ್ಥಗಳಿಗೆ ವ್ಯಸನಿಗಳಾಗಿ ಪರಿಣಮಿಸುತ್ತಾರೆ. ದೃಷ್ಟಾಂತಕ್ಕೆ, ಹೊಗೆಸೊಪ್ಪಿನ ಉಪಯೋಗವನ್ನು ಪರಿಗಣಿಸಿರಿ. ಧೂಮಪಾನವು “ಪ್ರತಿ ವರ್ಷ ಮೂವತ್ತು ಲಕ್ಷ ಜನರನ್ನು ಕೊಲ್ಲುತ್ತದೆ,” ಎಂದು ಲೋಕಾರೋಗ್ಯ ಸಂಸ್ಥೆಯು ವರದಿಮಾಡುತ್ತದೆ. ಹೊಗೆಸೊಪ್ಪಿನ ಚಟವನ್ನು ಮುರಿಯುವುದು ತಾತ್ಕಾಲಿಕವಾದ ತ್ಯಜನ ರೋಗಸೂಚನೆಗಳ ಕಾರಣ ಕಷ್ಟಕರವಾಗಿರಬಲ್ಲದು. ಇನ್ನೊಂದು ಕಡೆಯಲ್ಲಿ, ಅನೇಕ ಮಾಜಿ ಧೂಮಪಾನಿಗಳು, ತಮಗೆ ಹೆಚ್ಚು ಉತ್ತಮ ಆರೋಗ್ಯವಿದೆ ಮತ್ತು ಮನೆಯ ಆವಶ್ಯಕತೆಗಳಿಗಾಗಿ ಹೆಚ್ಚು ಹಣವಿದೆಯೆಂದು ಕಂಡುಕೊಳ್ಳುತ್ತಾರೆ. ಹೌದು, ಹೊಗೆಸೊಪ್ಪಿನ ಚಟವನ್ನು ಅಥವಾ ಹಾನಿಕರವಾಗಿರುವ ಪದಾರ್ಥಗಳ ವ್ಯಸನಗಳನ್ನು ಜಯಿಸುವುದು ಒಂದು ಶುದ್ಧವಾದ ಶರೀರ, ಶುದ್ಧವಾದ ಮನಸ್ಸಾಕ್ಷಿ ಮತ್ತು ನಿಜ ಸಂತೋಷಕ್ಕೆ ಸಹಾಯ ನೀಡುವುದು.—2 ಕೊರಿಂಥ 7:1.
ವಿವಾಹದಲ್ಲಿ ಸಂತೋಷ
11. ಕಾನೂನುಬದ್ಧವಾದ ಮತ್ತು ಬಾಳಿಕೆ ಬರುವ ಗೌರವಪೂರ್ಣವಾದ ವಿವಾಹವಿರಲು ಏನು ಬೇಕಾಗುತ್ತದೆ?
11 ಪತಿಪತ್ನಿಯರಾಗಿ ಜೀವಿಸುತ್ತಿರುವವರು ತಮ್ಮ ವಿವಾಹವು ಪೌರಾಧಿಕಾರಿಗಳೊಂದಿಗೆ ಸರಿಯಾಗಿ ರಿಜಿಸ್ಟರ್ ಆಗಿದೆಯೆಂದು ಖಾತರಿ ಮಾಡಿಕೊಳ್ಳಬೇಕು. (ಮಾರ್ಕ 12:17) ದಾಂಪತ್ಯವನ್ನು ಅವರು ಒಂದು ಗಂಭೀರ ಜವಾಬ್ದಾರಿಯಾಗಿ ವೀಕ್ಷಿಸುವ ಅಗತ್ಯವೂ ಇದೆ. ನಿಜ, ಇಚ್ಛಾಪೂರ್ವಕವಾದ ಅಸಂರಕ್ಷಣೆ, ವಿಪರೀತ ಅಪಪ್ರಯೋಗ, ಅಥವಾ ಆತ್ಮಿಕತೆಗೆ ಪೂರ್ತಿ ಅಪಾಯದ ಸಂದರ್ಭಗಳಲ್ಲಿ ಪ್ರತ್ಯೇಕವಾಸವು ಅಗತ್ಯವಾಗಿ ಪರಿಣಮಿಸಬಹುದು. (1 ತಿಮೊಥೆಯ 5:8; ಗಲಾತ್ಯ 5:19-21) ಆದರೆ 1 ಕೊರಿಂಥ 7:10-17 ರಲ್ಲಿ ಅಪೊಸ್ತಲ ಪೌಲನ ಮಾತುಗಳು ವಿವಾಹ ಜೊತೆಗಳು ಜೊತೆಯಾಗಿ ಜೀವಿಸುವಂತೆ ಪ್ರೋತ್ಸಾಹಿಸುತ್ತವೆ. ಆದರೆ ನಿಜ ಸಂತೋಷಕ್ಕಾಗಿ, ಅವರು ಒಬ್ಬರಿಗೊಬ್ಬರು ನಂಬಿಗಸ್ತರಾಗಿರಬೇಕು. ಪೌಲನು ಬರೆದುದು: “ದಾಂಪತ್ಯವು ಮಾನ್ಯವಾದದ್ದೆಂದು ಎಲ್ಲರೂ ಎಣಿಸಬೇಕು; ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.” (ಇಬ್ರಿಯ 13:4) “ಗಂಡಹೆಂಡರ ಸಂಬಂಧ” ಎಂಬ ಪದಗಳು, ಕಾನೂನುಬದ್ಧವಾಗಿ ವಿವಾಹಿತರಾದ ಪುರುಷ ಮತ್ತು ಸ್ತ್ರೀಯ ಮಧ್ಯೆ ನಡೆಯುವ ಲೈಂಗಿಕ ಸಂಭೋಗವನ್ನು ಸೂಚಿಸುತ್ತವೆ. ಒಬ್ಬಳಿಗಿಂತ ಹೆಚ್ಚು ಮಂದಿ ಹೆಂಡತಿಯರೊಂದಿಗೆ ನಡೆಯುವ, ವಿವಾಹದಂತಹ ಇನ್ನಾವ ಲೈಂಗಿಕ ಸಂಬಂಧವನ್ನೂ ‘ಎಲ್ಲರಲ್ಲಿ ಮಾನ್ಯ’ ವೆಂದು ವರ್ಣಿಸಲು ಸಾಧ್ಯವಿಲ್ಲ. ಇದಲ್ಲದೆ, ವಿವಾಹಪೂರ್ವದ ಸಂಭೋಗ ಮತ್ತು ಸಲಿಂಗೀಕಾಮವನ್ನು ಬೈಬಲು ಖಂಡಿಸುತ್ತದೆ.—ರೋಮಾಪುರ 1:26, 27; 1 ಕೊರಿಂಥ 6:18.
12. ಜಾರತ್ವದ ಕೆಲವು ಕೆಟ್ಟ ಫಲಗಳಾವುವು?
12 ಜಾರತ್ವವು ಕೆಲವು ಕ್ಷಣಗಳ ಶಾರೀರಿಕ ಸುಖವನ್ನು ಕೊಡಬಹುದು, ಆದರೆ ಅದು ನಿಜ ಸಂತೋಷದಲ್ಲಿ ಪರಿಣಮಿಸುವುದಿಲ್ಲ. ಅದು ದೇವರನ್ನು ಅಸಂತೋಷಗೊಳಿಸಿ ಒಬ್ಬ ವ್ಯಕ್ತಿಯ ಮನಸ್ಸಾಕ್ಷಿಯನ್ನು ಕಳಂಕಿಸಬಲ್ಲದು. (1 ಥೆಸಲೊನೀಕ 4:3-5) ನ್ಯಾಯವಿರುದ್ಧವಾದ ಕಾಮದ ದುಃಖಕರವಾದ ಪರಿಣಾಮಗಳು ಏಡ್ಸ್ ಮತ್ತು ಇತರ ರತಿ ರವಾನಿತ ರೋಗಗಳಾಗಬಹುದು. “ಲೋಕವ್ಯಾಪಕವಾಗಿ 25 ಕೋಟಿ ಜನರಿಗೆ ವಾರ್ಷಿಕವಾಗಿ ಗಾನೊರೀಯ ಮೇಹರೋಗ, ಮತ್ತು ಸುಮಾರು 5 ಕೋಟಿ ಜನರಿಗೆ ಸಿಫಿಲಿಸ್ ರೋಗ ತಗಲುತ್ತದೆಂದು ಅಂದಾಜು ಮಾಡಲಾಗಿದೆ,” ಎನ್ನುತ್ತದೆ ಒಂದು ವೈದ್ಯಕೀಯ ವರದಿ. ಅನಪೇಕ್ಷಿತ ಗರ್ಭಧಾರಣೆಯ ಸಮಸ್ಯೆಯೂ ಇದೆ. ಇಂಟರ್‌ನ್ಯಾಷನಲ್ ಪ್ಲ್ಯಾನ್ಡ್ ಪೇರೆಂಟ್‌ಹುಡ್ ಫೆಡರೇಶನ್ ವರದಿಸುವುದೇನಂದರೆ, ಲೋಕವ್ಯಾಪಕವಾಗಿ 15 ಮತ್ತು 19ರ ಮಧ್ಯದ ವಯಸ್ಸಿನ 1.5 ಕೋಟಿ ಹುಡುಗಿಯರು ಪ್ರತಿ ವರ್ಷ ಗರ್ಭಿಣಿಯರಾಗುತ್ತಾರೆ, ಮತ್ತು ಅವರಲ್ಲಿ ಮೂರರಲ್ಲಿ ಒಬ್ಬರು ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಆಫ್ರಿಕದ ಒಂದು ದೇಶದಲ್ಲಿ ಒಂದು ಅಧ್ಯಯನವು ತೋರಿಸಿದ್ದೇನೆಂದರೆ, ಹದಿಹರೆಯದ ಹುಡುಗಿಯರ ಎಲ್ಲ ಮರಣಗಳಲ್ಲಿ 72 ಪ್ರತಿಶತ ಗರ್ಭಪಾತದ ಜಟಿಲತೆಗಳಿಂದಾಗುತ್ತವೆ. ಕೆಲವು ಜಾರರು ರೋಗ ಮತ್ತು ಗರ್ಭಧಾರಣೆಯನ್ನು ತಪ್ಪಿಸಿಕೊಳ್ಳಬಹುದಾದರೂ ಭಾವನಾತ್ಮಕ ಹಾನಿಯನ್ನು ತಪ್ಪಿಸಸಾಧ್ಯವಿಲ್ಲ. ಅನೇಕರು ತಮ್ಮ ಆತ್ಮಗೌರವವನ್ನು ಕಳೆದುಕೊಂಡು ತಮ್ಮನ್ನು ತಾವೇ ದ್ವೇಷಿಸುತ್ತಾರೆ.
13. ವ್ಯಭಿಚಾರವು ಯಾವ ಹೆಚ್ಚಿಗೆಯ ಸಮಸ್ಯೆಗಳನ್ನು ಆಗಿಸುತ್ತದೆ, ಮತ್ತು ಜಾರರೂ ವ್ಯಭಿಚಾರಿಗಳೂ ಆಗಿ ಮುಂದುವರಿಯುವವರಿಗೆ ಮುಂದೆ ಏನು ಕಾದಿದೆ?
13 ವ್ಯಭಿಚಾರವು ಕ್ಷಮಿಸಲ್ಪಡಬಹುದಾದರೂ, ನಿರ್ದೋಷಿಯಾದ ಜೊತೆಯ ಕಡೆಯಿಂದ ಅದು ವಿವಾಹ ವಿಚ್ಛೇದನಕ್ಕೆ ನ್ಯಾಯಸಮ್ಮತವಾದ ಶಾಸ್ತ್ರೀಯ ಆಧಾರವಾಗಿದೆ. (ಮತ್ತಾಯ 5:32; ಹೋಲಿಸಿ ಹೋಶೇಯ 3:1-5.) ಇಂತಹ ಅನೈತಿಕಾಚಾರವು ವಿವಾಹದ ಬೇರ್ಪಡೆಯನ್ನು ಫಲಿಸುವಲ್ಲಿ, ಅದು ನಿರ್ದೋಷಿಯಾದ ಜೊತೆ ಮತ್ತು ಮಕ್ಕಳಲ್ಲಿ ಆಳವಾದ ಭಾವನಾತ್ಮಕ ಕಲೆಗಳನ್ನು ಬಿಟ್ಟುಹೋಗಬಹುದು. ಮಾನವ ಕುಟುಂಬದ ಹಿತಕ್ಕಾಗಿ, ದೇವರ ತೀರ್ಪು ಪಶ್ಚಾತ್ತಾಪರಹಿತ ಜಾರರ ಮತ್ತು ವ್ಯಭಿಚಾರಿಗಳ ಮೇಲೆ ಬರುವುದೆಂದು ದೇವರ ವಾಕ್ಯವು ತೋರಿಸುತ್ತದೆ. ಇದಲ್ಲದೆ, ಲೈಂಗಿಕ ಅನೈತಿಕತೆಯ ರೂಢಿ ಮಾಡುವವರು “ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ” ವೆಂದು ಅದು ಸ್ಪಷ್ಟವಾಗಿ ತೋರಿಸುತ್ತದೆ.—ಗಲಾತ್ಯ 5:19, 21.
“ಲೋಕದ ಭಾಗವಲ್ಲ”
14. (ಎ) ದೈವಭಕ್ತಿಯ ವ್ಯಕ್ತಿಯು ವರ್ಜಿಸುವ ವಿಗ್ರಹಾರಾಧನೆಯ ಕೆಲವು ರೂಪಗಳಾವುವು? (ಬಿ) ಯೋಹಾನ 17:14 ಮತ್ತು ಯೆಶಾಯ 2:4 ರಲ್ಲಿ ಯಾವ ಮಾರ್ಗದರ್ಶನವು ಕೊಡಲ್ಪಟ್ಟಿದೆ?
14 ಯೆಹೋವನನ್ನು ಮೆಚ್ಚಿಸಿ ರಾಜ್ಯಾಶೀರ್ವಾದಗಳನ್ನು ಅನುಭವಿಸಬಯಸುವವರು, ಯಾವುದೇ ವಿಧದ ವಿಗ್ರಹಾರಾಧನೆಯನ್ನು ವರ್ಜಿಸುತ್ತಾರೆ. ವಿಗ್ರಹಗಳನ್ನು—ಕ್ರಿಸ್ತನದ್ದು ಅಥವಾ ಯೇಸುವಿನ ತಾಯಿಯಾದ ಮರಿಯಳದ್ದು ಸೇರಿ—ಮಾಡುವುದೂ ಆರಾಧಿಸುವುದೂ ತಪ್ಪೆಂದು ಬೈಬಲು ತೋರಿಸುತ್ತದೆ. (ವಿಮೋಚನಕಾಂಡ 20:4, 5; 1 ಯೋಹಾನ 5:21) ಆದಕಾರಣ ಸತ್ಯ ಕ್ರೈಸ್ತರು ಮೂರ್ತಿಗಳು, ಶಿಲುಬೆಗಳು ಮತ್ತು ವಿಗ್ರಹಗಳನ್ನು ಪೂಜ್ಯಭಾವದಿಂದ ಕಾಣುವುದಿಲ್ಲ. ಧ್ವಜಗಳಿಗೆ ಭಕ್ತಿ ತೋರಿಸುವ ಕೃತ್ಯಗಳು, ರಾಷ್ಟ್ರಗಳನ್ನು ಘನಪಡಿಸುವ ಗೀತೆಗಳನ್ನು ಹಾಡುವುದೇ ಮೊದಲಾದ ಹೆಚ್ಚು ಯುಕ್ತಿಯ ವಿಗ್ರಹಾರಾಧನಾ ರೂಪಗಳನ್ನು ಸಹ ಅವರು ವರ್ಜಿಸುತ್ತಾರೆ. ಇಂತಹ ಕೃತ್ಯಗಳನ್ನು ನಡೆಸಲು ಒತ್ತಾಯಕ್ಕೊಳಗಾಗುವಾಗ ಅವರು ಯೇಸುವು ಸೈತಾನನಿಗೆ ಹೇಳಿದ ಮಾತುಗಳನ್ನು ಜ್ಞಾಪಿಸಿಕೊಳ್ಳುತ್ತಾರೆ: “ನಿನ್ನ ದೇವರಾಗಿರುವ ಕರ್ತನಿಗೆ [“ಯೆಹೋವನಿಗೆ,” NW] ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು.” (ಮತ್ತಾಯ 4:8-10) ತನ್ನ ಶಿಷ್ಯರು “ಲೋಕದ ಭಾಗವಲ್ಲ” ಎಂದು ಯೇಸು ಹೇಳಿದನು. (ಯೋಹಾನ 17:14, NW) ಇದು ರಾಜಕೀಯ ವಿಚಾರಗಳಲ್ಲಿ ತಟಸ್ಥರಾಗಿರುವುದು ಮತ್ತು ಯೆಶಾಯ 2:4ಕ್ಕೆ ಹೊಂದಿಕೆಯಲ್ಲಿ ಶಾಂತತೆಯಿಂದ ಬದುಕುವುದನ್ನು ಅರ್ಥೈಸುತ್ತದೆ. ಅದು ಹೇಳುವುದು: “ಆತನು [ಯೆಹೋವ ದೇವರು] ದೇಶದೇಶಗಳ ವ್ಯಾಜ್ಯಗಳನ್ನು ವಿಚಾರಿಸುವನು, ಬಹು ರಾಷ್ಟ್ರದವರಿಗೆ ನ್ಯಾಯತೀರಿಸುವನು; ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.”
15. ಮಹಾ ಬಾಬೆಲ್ ಎಂದರೇನು, ಮತ್ತು ಅನೇಕ ಹೊಸ ಬೈಬಲ್ ವಿದ್ಯಾರ್ಥಿಗಳು ಆಕೆಯಿಂದ ಹೊರಬರಲು ಏನು ಮಾಡುತ್ತಾರೆ?
15 ‘ಲೋಕದ ಭಾಗವಾಗದೆ ಇರುವುದು’ ಎಂದರೆ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ “ಮಹಾ ಬಾಬೆಲ್” ನೊಂದಿಗಿರುವ ಸಕಲ ಒಡನಾಟವನ್ನೂ ಕಡಿಯುವುದೆಂದರ್ಥ. ಅಶುದ್ಧ ಆರಾಧನೆಯು ಪುರಾತನಕಾಲದ ಬಾಬೆಲಿನಿಂದ, ಅದು ಭೂವ್ಯಾಪಕವಾಗಿ ಜನರ ಮೇಲೆ ಹಾನಿಕರವಾದ ಆತ್ಮಿಕ ಪ್ರಭುತ್ವವನ್ನು ನಡೆಸುವ ವರೆಗೆ ಹಬ್ಬಿತು. “ಮಹಾ ಬಾಬೆಲ್,” ಯಾವುದರ ತತ್ವಗಳು ಮತ್ತು ಆಚಾರಗಳು ದೇವರ ಜ್ಞಾನಕ್ಕೆ ಹೊಂದಿಕೆಯಾಗಿಲ್ಲದೆ ಇವೆಯೋ, ಆ ಎಲ್ಲ ಧರ್ಮಗಳನ್ನು ಆವರಿಸುತ್ತದೆ. (ಪ್ರಕಟನೆ 17:1, 5, 15, NW) ಯೆಹೋವನ ಯಾವನೇ ನಂಬಿಗಸ್ತ ಆರಾಧಕನು ವಿವಿಧ ಧರ್ಮಗಳ ಆರಾಧನೆಯಲ್ಲಿ ಭಾಗವಹಿಸುವ ಅಥವಾ ಮಹಾ ಬಾಬೆಲಿನ ಯಾವುದೇ ಭಾಗದೊಂದಿಗೆ ಆತ್ಮಿಕ ಸಹವಾಸವನ್ನು ಮಾಡುವ ಮೂಲಕ ಮಿಶ್ರ ನಂಬಿಕೆಯ ಚಟುವಟಿಕೆಗಳಲ್ಲಿ ಭಾಗವಹಿಸನು. (ಅರಣ್ಯಕಾಂಡ 25:1-9; 2 ಕೊರಿಂಥ 6:14) ಈ ಕಾರಣದಿಂದ, ಅನೇಕ ಹೊಸ ಬೈಬಲ್ ವಿದ್ಯಾರ್ಥಿಗಳು ತಾವು ಭಾಗವಾಗಿರುವ ಧಾರ್ಮಿಕ ಸಂಸ್ಥೆಗೆ ರಾಜೀನಾಮೆಯ ಪತ್ರವನ್ನು ಕಳುಹಿಸುತ್ತಾರೆ. ಇದು, ವಾಗ್ದಾನಿಸಲ್ಪಟ್ಟಂತೆ, ಅವರನ್ನು ಸತ್ಯ ದೇವರ ಹೆಚ್ಚು ಸಮೀಪಕ್ಕೆ ತಂದಿದೆ: “ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು [“ಯೆಹೋವನು,” NW] ಹೇಳುತ್ತಾನೆ. ಇದಲ್ಲದೆ—ನಾನು ನಿಮ್ಮನ್ನು ಸೇರಿಸಿಕೊ” ಳ್ಳುವೆನು. (2 ಕೊರಿಂಥ 6:17, 18ಎ; ಪ್ರಕಟನೆ 18:4, 5) ನಮ್ಮ ಸ್ವರ್ಗೀಯ ಪಿತನಿಂದ ಇಂತಹ ಅಂಗೀಕಾರವು ನೀವು ತೀಕ್ಷ್ಣವಾಗಿ ಬಯಸುವ ವಿಷಯವಲ್ಲವೊ?
ವಾರ್ಷಿಕ ಆಚರಣೆಗಳನ್ನು ತೂಗಿ ನೋಡುವುದು
16. ಸತ್ಯ ಕ್ರೈಸ್ತರು ಕ್ರಿಸ್ಮಸನ್ನು ಏಕೆ ಆಚರಿಸುವುದಿಲ್ಲ?
16 ದೈವಭಕ್ತಿಯ ಜೀವನವು, ಅನೇಕವೇಳೆ ಹೊರೆಯಂತಿರುವ ಲೌಕಿಕ ರಜಾ ದಿನಗಳ ಆಚರಣೆಯಿಂದ ನಮ್ಮನ್ನು ಬಿಡುಗಡೆ ಮಾಡುತ್ತದೆ. ಉದಾಹರಣೆಗೆ, ಯೇಸುವಿನ ಜನ್ಮದ ನಿರ್ದಿಷ್ಟವಾದ ದಿನವನ್ನು ಬೈಬಲು ತಿಳಿಯಪಡಿಸುವುದಿಲ್ಲ. ‘ಯೇಸುವು ಡಿಸೆಂಬರ್ 25 ರಂದು ಹುಟ್ಟಿದ್ದನೆಂದು ನಾನು ಯೋಚಿಸುತ್ತಿದ್ದೆ!’ ಎಂದು ಕೆಲವರು ಉದ್ಗರಿಸಬಹುದು. ಇದು ಅಸಾಧ್ಯ ಏಕೆಂದರೆ ಅವನು ಸಾ.ಶ. 33ರ ವಸಂತ ಕಾಲದಲ್ಲಿ, 33 1/2 ವರ್ಷ ಪ್ರಾಯದಲ್ಲಿ ಸತ್ತನು. ಇದಲ್ಲದೆ, ಅವನ ಜನನದ ಸಮಯದಲ್ಲಿ, “ಕುರುಬರು ಹೊಲದಲ್ಲಿದ್ದುಕೊಂಡು ರಾತ್ರಿಯಲ್ಲಿ ತಮ್ಮ ಕುರೀಹಿಂಡನ್ನು” ಕಾಯುತ್ತಿದ್ದರು. (ಲೂಕ 2:8) ಇಸ್ರಾಯೇಲ್ ದೇಶದಲ್ಲಿ ಡಿಸೆಂಬರ್‌ನ ಅಂತ್ಯಭಾಗವು ಚಳಿ ಮತ್ತು ಮಳೆಯ ಕಾಲ. ಆ ಸಮಯದಲ್ಲಿ ಶೀತ ಹವಾಮಾನದಿಂದ ಕುರಿಗಳನ್ನು ಸಂರಕ್ಷಿಸಲಿಕ್ಕಾಗಿ ಅವುಗಳನ್ನು ರಾತ್ರಿಯಲ್ಲಿ ಆಶ್ರಯಗಳಲ್ಲಿ ಇಡಲಾಗುತ್ತಿತ್ತು. ವಾಸ್ತವವಾಗಿ, ಡಿಸೆಂಬರ್ 25, ರೋಮನರಿಂದ ತಮ್ಮ ಸೂರ್ಯ ದೇವನ ಜನ್ಮದಿನವಾಗಿ ಬದಿಗಿಡಲ್ಪಟ್ಟಿತು. ಯೇಸುವು ಭೂಮಿಗೆ ಬಂದು ಶತಮಾನಗಳು ಕಳೆದ ಬಳಿಕ, ಧರ್ಮಭ್ರಷ್ಟ ಕ್ರೈಸ್ತರು ಈ ದಿನಾಂಕವನ್ನು ಕ್ರಿಸ್ತನ ಜನನದ ಆಚರಣೆಯ ದಿನವಾಗಿ ಆಯ್ದುಕೊಂಡರು. ಆದಕಾರಣ, ನಿಜ ಕ್ರೈಸ್ತರು ಕ್ರಿಸ್ಮಸನ್ನಾಗಲಿ, ಸುಳ್ಳು ಧಾರ್ಮಿಕ ನಂಬಿಕೆಗಳ ಮೇಲೆ ಆಧರಿತವಾಗಿರುವ ಇತರ ಯಾವುದೇ ರಜಾ ದಿನಗಳನ್ನಾಗಲಿ ಆಚರಿಸುವುದಿಲ್ಲ. ಅವರು ಯೆಹೋವನಿಗೆ ಏಕಮಾತ್ರ ಭಕ್ತಿಯನ್ನು ಕೊಡುವುದರಿಂದ, ಪಾಪಿಗಳಾದ ಮಾನವರನ್ನು ಅಥವಾ ರಾಷ್ಟ್ರಗಳನ್ನು ಮೂರ್ತೀಕರಿಸುವ ರಜಾ ದಿನಗಳನ್ನೂ ಅವರು ಆಚರಿಸುವುದಿಲ್ಲ.
17. ದೈವಭಕ್ತಿಯ ಜನರು ಏಕೆ ಜನ್ಮದಿನ ಗೋಷ್ಠಿಗಳನ್ನು ನಡೆಸುವುದಿಲ್ಲ, ಹಾಗಿದ್ದರೂ ಕ್ರೈಸ್ತ ಮಕ್ಕಳು ಸಂತೋಷದಿಂದಿದ್ದಾರೆ ಏಕೆ?
17 ಬೈಬಲು ನಿರ್ದಿಷ್ಟವಾಗಿ ಕೇವಲ ಎರಡು ಜನ್ಮದಿನಾಚರಣೆಗಳ—ಎರಡೂ ದೇವರನ್ನು ಸೇವಿಸದ ಜನರು ಸೇರಿದ್ದವುಗಳಾಗಿದ್ದವು—ಕುರಿತು ತಿಳಿಸುತ್ತದೆ. (ಆದಿಕಾಂಡ 40:20-22; ಮತ್ತಾಯ 14:6-11) ಪರಿಪೂರ್ಣ ಮನುಷ್ಯನಾದ ಯೇಸು ಕ್ರಿಸ್ತನ ಜನ್ಮದಿನಾಂಕವನ್ನು ಶಾಸ್ತ್ರಗಳು ತಿಳಿಯಪಡಿಸದೆ ಇರುವುದರಿಂದ, ಅಪರಿಪೂರ್ಣ ಮಾನವರ ಜನ್ಮದಿನಗಳಿಗೆ ನಾವೇಕೆ ವಿಶೇಷ ಗಮನ ಕೊಡಬೇಕು? (ಪ್ರಸಂಗಿ 7:1) ನಿಶ್ಚಯವಾಗಿಯೂ ದೈವಭಕ್ತಿಯ ಹೆತ್ತವರು ತಮ್ಮ ಮಕ್ಕಳಿಗೆ ಪ್ರೀತಿ ತೋರಿಸಲಿಕ್ಕಾಗಿ ವಿಶೇಷ ದಿನವೊಂದಕ್ಕಾಗಿ ಕಾಯುವುದಿಲ್ಲ. 13 ವರ್ಷ ಪ್ರಾಯದ ಒಬ್ಬ ಕ್ರೈಸ್ತ ಹುಡುಗಿಯು ಹೇಳಿದ್ದು: “ನಾನೂ ನನ್ನ ಕುಟುಂಬವೂ ತುಂಬ ವಿನೋದ ಮಾಡುತ್ತೇವೆ. . . . ನಾನು ನನ್ನ ಹೆತ್ತವರಿಗೆ ತೀರ ಆಪ್ತಳು, ಮತ್ತು ನಾನು ರಜಾದಿನಗಳನ್ನು ಏಕೆ ಆಚರಿಸುವುದಿಲ್ಲವೆಂದು ಇತರ ಮಕ್ಕಳು ಪ್ರಶ್ನಿಸುವಾಗ, ನಾನು ಪ್ರತಿ ದಿನ ಆಚರಿಸುತ್ತೇನೆಂದು ಅವರಿಗೆ ಹೇಳುತ್ತೇನೆ.” 17 ವರ್ಷ ಪ್ರಾಯದ ಕ್ರೈಸ್ತ ಯುವಕನೊಬ್ಬನು ಹೇಳಿದ್ದು: “ನಮ್ಮ ಮನೆಯಲ್ಲಿ ಇನಾಮು ಕೊಡೋಣವು ಇಡೀ ವರ್ಷ ದೀರ್ಘವುಳ್ಳದ್ದು.” ಇನಾಮುಗಳು ಸ್ವಯಂಪ್ರೇರಿತವಾಗಿ ಕೊಡಲ್ಪಟ್ಟಾಗ ಹೆಚ್ಚು ಮಹತ್ತಾದ ಸಂತೋಷವು ಫಲಿಸುತ್ತದೆ.
18. ಯಾವ ಒಂದು ವಾರ್ಷಿಕ ಆಚರಣೆಯನ್ನು ಮಾಡಲು ಯೇಸು ತನ್ನ ಹಿಂಬಾಲಕರನ್ನು ಆಜ್ಞಾಪಿಸಿದನು, ಮತ್ತು ಅದು ನಮಗೆ ಯಾವುದರ ಮರುಜ್ಞಾಪನವನ್ನು ಕೊಡುತ್ತದೆ?
18 ದೈವಭಕ್ತಿಯ ಜೀವಿತವನ್ನು ಬೆನ್ನಟ್ಟುವವರಿಗೆ ಪ್ರತಿ ವರ್ಷ ವಿಶೇಷವಾಗಿ ಆಚರಿಸಬೇಕಾದ ಒಂದು ದಿನವಿದೆ. ಅದು, ಅನೇಕವೇಳೆ ಕ್ರಿಸ್ತನ ಮರಣದ ಸ್ಮಾರಕವೆಂದು ಕರೆಯಲ್ಪಡುವ ಕರ್ತನ ಸಂಧ್ಯಾ ಭೋಜನವಾಗಿದೆ. ಅದರ ಕುರಿತು ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (ಲೂಕ 22:19, 20; 1 ಕೊರಿಂಥ 11:23-25) ಸಾ.ಶ. 33ರ ನೈಸಾನ್ 14ರ ರಾತ್ರಿಯಲ್ಲಿ ಯೇಸುವು ಈ ಭೋಜನವನ್ನು ಸ್ಥಾಪಿಸಿದಾಗ ಅವನು, ತನ್ನ ಪಾಪರಹಿತ ದೇಹವನ್ನು ಮತ್ತು ತನ್ನ ಪರಿಪೂರ್ಣ ರಕ್ತವನ್ನು ಪ್ರತಿನಿಧೀಕರಿಸುವ ಹುಳಿಯಿಲ್ಲದ ರೊಟ್ಟಿ ಮತ್ತು ಕೆಂಪು ದ್ರಾಕ್ಷಾಮದ್ಯವನ್ನು ಬಳಸಿದನು. (ಮತ್ತಾಯ 26:26-29) ಈ ದ್ಯೋತಕಗಳಲ್ಲಿ ದೇವರ ಪವಿತ್ರಾತ್ಮದಿಂದ ಅಭಿಷಿಕ್ತರಾದ ಕ್ರೈಸ್ತರು ಪಾಲು ತೆಗೆದುಕೊಳ್ಳುತ್ತಾರೆ. ಅವರನ್ನು ಹೊಸ ಒಡಂಬಡಿಕೆ ಮತ್ತು ರಾಜ್ಯಕ್ಕಾಗಿರುವ ಒಡಂಬಡಿಕೆಯೊಳಗೆ ತೆಗೆದುಕೊಳ್ಳಲಾಗಿದೆ, ಮತ್ತು ಅವರಿಗೆ ಒಂದು ಸ್ವರ್ಗೀಯ ನಿರೀಕ್ಷೆಯಿದೆ. (ಲೂಕ 12:32; 22:20, 28-30; ರೋಮಾಪುರ 8:16, 17; ಪ್ರಕಟನೆ 14:1-5) ಆದರೂ, ಪ್ರಾಚೀನ ಯೆಹೂದಿ ಕ್ಯಾಲೆಂಡರಿನ ನೈಸಾನ್ 14ಕ್ಕೆ ತಾಳೆಬೀಳುವ ಸಾಯಂಕಾಲದಂದು ಉಪಸ್ಥಿತರಾಗುವ ಸಕಲರಿಂದ ಪ್ರಯೋಜನಗಳು ಅನುಭವಿಸಲ್ಪಡುತ್ತವೆ. ದೈವಿಕ ಅನುಗ್ರಹವಿರುವ ಎಲ್ಲರಿಗೆ ನಿತ್ಯಜೀವವನ್ನು ಸಾಧ್ಯಮಾಡುವ ಪಾಪಪರಿಹಾರಕ ಪ್ರಾಯಶ್ಚಿತ್ತ ಯಜ್ಞದಲ್ಲಿ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ತೋರಿಸಿದ ಪ್ರೀತಿಯ ಮರುಜ್ಞಾಪನ ಅವರಿಗಾಗುತ್ತದೆ.—ಮತ್ತಾಯ 20:28; ಯೋಹಾನ 3:16.
ಉದ್ಯೋಗ ಮತ್ತು ಮನೋರಂಜನೆ
19. ಕ್ರೈಸ್ತರು ಜೀವನೋಪಾಯವನ್ನು ಸಂಪಾದಿಸುವಾಗ ಯಾವ ಪಂಥಾಹ್ವಾನವನ್ನು ಎದುರಿಸುತ್ತಾರೆ?
19 ಸತ್ಯ ಕ್ರೈಸ್ತರು ಕಷ್ಟಪಟ್ಟು ಕೆಲಸಮಾಡಿ ತಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹಂಗಿಗರು. ಇದನ್ನು ಸಾಧಿಸುವುದು ಕುಟುಂಬದ ಶಿರಸ್ಸುಗಳಿಗೆ ಸಂತೃಪ್ತಿಯ ಅನಿಸಿಕೆಯನ್ನು ತರುತ್ತದೆ. (1 ಥೆಸಲೊನೀಕ 4:11, 12) ಕ್ರೈಸ್ತನೊಬ್ಬನ ಉದ್ಯೋಗವು ಬೈಬಲಿನೊಂದಿಗೆ ಸಂಘರ್ಷಿಸುವುದಾದರೆ, ಅದು ಅವನ ಸಂತೋಷವನ್ನು ಅಪಹರಿಸುವುದು ನಿಶ್ಚಯ. ಆದರೂ, ಕೆಲವು ಬಾರಿ ಬೈಬಲ್ ಮಟ್ಟಗಳಿಗೆ ಹೊಂದಿಕೆಯಾಗಿರುವ ಉದ್ಯೋಗವನ್ನು ಕಂಡುಹಿಡಿಯುವುದು ಒಬ್ಬ ಕ್ರೈಸ್ತನಿಗೆ ಕಷ್ಟವಾಗುತ್ತದೆ. ಉದಾಹರಣೆಗೆ, ಕೆಲವು ಕೆಲಸಗಾರರು ಗಿರಾಕಿಗಳನ್ನು ವಂಚಿಸುವಂತೆ ಕೇಳಿಕೊಳ್ಳಲ್ಪಡುತ್ತಾರೆ. ಇನ್ನೊಂದು ಕಡೆಯಲ್ಲಿ, ಒಬ್ಬ ಭರವಸಾರ್ಹ ಕೆಲಸಗಾರನನ್ನು ಕಳೆದುಕೊಳ್ಳಲು ಮನಸ್ಸಿಲ್ಲದವರಾಗಿ, ಅನೇಕ ಧಣಿಗಳು ಒಬ್ಬ ಪ್ರಾಮಾಣಿಕ ಕೆಲಸಗಾರನ ಮನಸ್ಸಾಕ್ಷಿಗೆ ಎಡೆಗೊಡಲು ರಿಯಾಯಿತಿ ತೋರಿಸುತ್ತಾರೆ. ಆದರೆ ಏನೇ ಆಗಲಿ, ಒಂದು ಶುದ್ಧ ಮನಸ್ಸಾಕ್ಷಿಯನ್ನು ಕೊಡುವ ಉದ್ಯೋಗವನ್ನು ಕಂಡುಹಿಡಿಯುವ ನಿಮ್ಮ ಪ್ರಯತ್ನವನ್ನು ದೇವರು ಆಶೀರ್ವದಿಸುವನೆಂದು ನೀವು ಖಾತರಿಯಿಂದಿರಬಲ್ಲಿರಿ.—2 ಕೊರಿಂಥ 4:2.
20. ಮನೋರಂಜನೆಯನ್ನು ಆಯ್ದುಕೊಳ್ಳುವಾಗ ನಾವೇಕೆ ಆರಿಸಿ ತೆಗೆಯುವವರಾಗಿರಬೇಕು?
20 ತನ್ನ ಸೇವಕರು ಸಂತೋಷದಿಂದಿರಲು ದೇವರು ಬಯಸುವುದರಿಂದ ನಾವು ಕಷ್ಟಪಟ್ಟು ಕೆಲಸಮಾಡುವುದನ್ನು ಮನೋರಂಜನೆ ಮತ್ತು ವಿಶ್ರಾಂತಿಯ ಅವಧಿಗಳೊಂದಿಗೆ ಸಮತೂಗಿಸುವುದು ಅವಶ್ಯ. (ಮಾರ್ಕ 6:31; ಪ್ರಸಂಗಿ 3:12, 13) ಸೈತಾನನ ಲೋಕವು ದೈವಭಕ್ತಿರಹಿತವಾದ ಮನೋರಂಜನೆಯನ್ನು ಪ್ರವರ್ಧಿಸುತ್ತದೆ. ಆದರೆ ದೇವರನ್ನು ಮೆಚ್ಚಿಸಲಿಕ್ಕಾಗಿ, ನಾವು ಓದುವ ಪುಸ್ತಕಗಳು, ಆಲಿಸುವ ರೇಡಿಯೊ ಕಾರ್ಯಕ್ರಮಗಳು ಮತ್ತು ಸಂಗೀತ, ಪ್ರೇಕ್ಷಿಸುವ ಗಾನಗೋಷ್ಠಿಗಳು, ಚಲನಚಿತ್ರಗಳು, ನಾಟಕಗಳು, ಟೆಲಿವಿಷನ್ ಕಾರ್ಯಕ್ರಮಗಳು ಮತ್ತು ವಿಡಿಯೊಗಳು—ಇವುಗಳನ್ನು ಆರಿಸಿ ತೆಗೆಯುವವರಾಗಿರಬೇಕು. ನಾವು ಈ ಹಿಂದೆ ಆರಿಸಿದ್ದ ಮನೋರಂಜನೆಯು ಧರ್ಮೋಪದೇಶಕಾಂಡ 18:10-12, ಕೀರ್ತನೆ 11:5 ಮತ್ತು ಎಫೆಸ 5:3-5 ರಂತಹ ಶಾಸ್ತ್ರವಚನಗಳ ಎಚ್ಚರಿಕೆಗಳೊಂದಿಗೆ ಘರ್ಷಿಸುವಲ್ಲಿ, ನಾವು ಸರಿಹೊಂದಿಸುವಿಕೆಗಳನ್ನು ಮಾಡುವುದಾದರೆ ನಾವು ಯೆಹೋವನನ್ನು ಮೆಚ್ಚಿಸುವೆವು ಮತ್ತು ಹೆಚ್ಚು ಸಂತೋಷವುಳ್ಳವರಾಗುವೆವು.
ಜೀವ ಮತ್ತು ರಕ್ತಕ್ಕೆ ಗೌರವ
21. ಜೀವಕ್ಕೆ ಗೌರವವು, ಗರ್ಭಪಾತದ ಕುರಿತಾದ ನಮ್ಮ ನೋಟವನ್ನು ಹಾಗೂ ನಮ್ಮ ಅಭ್ಯಾಸಗಳು ಮತ್ತು ವರ್ತನೆಗಳನ್ನು ಹೇಗೆ ಪ್ರಭಾವಿಸಬೇಕು?
21 ನಿಜ ಸಂತೋಷಕ್ಕಾಗಿ, ನಾವು ಯೆಹೋವನು ವೀಕ್ಷಿಸುವಂತೆಯೇ ಮಾನವ ಜೀವವನ್ನು ಪವಿತ್ರವೆಂದು ವೀಕ್ಷಿಸಬೇಕು. ನಾವು ಕೊಲೆ ಮಾಡುವುದನ್ನು ಆತನ ವಾಕ್ಯವು ನಿಷೇಧಿಸುತ್ತದೆ. (ಮತ್ತಾಯ 19:16-18) ವಾಸ್ತವವಾಗಿ, ಇಸ್ರಾಯೇಲಿಗೆ ದೇವರು ಕೊಟ್ಟ ಧರ್ಮಶಾಸ್ತ್ರವು, ಆತನು ಭ್ರೂಣವನ್ನು ಅದೊಂದು ಅಮೂಲ್ಯವಾದ ಜೀವ—ನಾಶಮಾಡುವಂತಹ ವಸ್ತುವಲ್ಲ—ವಾಗಿ ವೀಕ್ಷಿಸುತ್ತಾನೆಂದು ತೋರಿಸುತ್ತದೆ. (ವಿಮೋಚನಕಾಂಡ 21:22, 23) ಹಾಗೇಕೆ, ನಾವು ಹೊಗೆಸೊಪ್ಪನ್ನು ಉಪಯೋಗಿಸಿ, ಅಮಲೌಷಧಗಳು ಅಥವಾ ಮದ್ಯಸಾರದಿಂದ ನಮ್ಮ ಶರೀರವನ್ನು ಅಪಪ್ರಯೋಗಿಸಿ, ಅಥವಾ ಅವಶ್ಯವಿಲ್ಲದ ಅಪಾಯಗಳಿಗೆ ತಲೆಗೊಟ್ಟು ಜೀವವನ್ನು ಅಗ್ಗವಾದ ವಸ್ತುವಾಗಿ ಕಾಣಬಾರದು. ಜೀವಕ್ಕೆ ಅಪಾಯ ತರುವ ಯಾವುದೇ ಬೆನ್ನಟ್ಟುವಿಕೆಗಳಲ್ಲಿ ನಾವು ಭಾಗವಹಿಸಲೂ ಬಾರದು, ರಕ್ತಾಪರಾಧದಲ್ಲಿ ಫಲಿಸಬಹುದಾದ ಸುರಕ್ಷೆಯ ಮುಂಜಾಗ್ರತೆಗಳನ್ನು ಅಸಡ್ಡೆ ಮಾಡಲೂಬಾರದು.—ಧರ್ಮೋಪದೇಶಕಾಂಡ 22:8.
22. (ಎ) ರಕ್ತ ಮತ್ತು ಅದರ ಬಳಕೆಯ ಕುರಿತ ದೈವಭಕ್ತಿಯ ವೀಕ್ಷಣವೇನು? (ಬಿ) ಯಾರ ರಕ್ತವು ಮಾತ್ರ ಜೀವರಕ್ಷಕ?
22 ಯೆಹೋವನು ನೋಹನಿಗೂ ಅವನ ಕುಟುಂಬಕ್ಕೂ, ರಕ್ತವು ಪ್ರಾಣ ಅಥವಾ ಜೀವವನ್ನು ಪ್ರತಿನಿಧೀಕರಿಸುತ್ತದೆಂದು ಹೇಳಿದನು. ಆದಕಾರಣ, ಅವರು ಯಾವುದೇ ರಕ್ತವನ್ನು ತಿನ್ನುವುದನ್ನು ದೇವರು ನಿಷೇಧಿಸಿದನು. (ಆದಿಕಾಂಡ 9:3, 4) ನಾವು ಅವರ ವಂಶಜರಾಗಿರುವುದರಿಂದ, ಆ ನಿಯಮವು ನಮಗೆ ಬಂಧಕವಾಗಿದೆ. ರಕ್ತವು ನೆಲದ ಮೇಲೆ ಹೊಯ್ಯಲ್ಪಡಬೇಕೆಂದೂ, ಮನುಷ್ಯನ ಸ್ವಂತ ಉದ್ದೇಶಗಳಿಗಾಗಿ ಬಳಸಲ್ಪಡಬಾರದೆಂದೂ ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದನು. (ಧರ್ಮೋಪದೇಶಕಾಂಡ 12:15, 16) ಮತ್ತು ಒಂದನೆಯ ಶತಮಾನದ ಕ್ರೈಸ್ತರು, “ರಕ್ತವನ್ನೂ . . . ವಿಸರ್ಜಿಸುವದು ಅವಶ್ಯ” ಎಂದು ಉಪದೇಶಿಸಲ್ಪಟ್ಟಾಗ, ರಕ್ತದ ಕುರಿತ ದೇವರ ನಿಯಮವು ಮರಳಿ ಹೇಳಲ್ಪಟ್ಟಿತು. (ಅ. ಕೃತ್ಯಗಳು 15:28, 29) ಜೀವದ ಪವಿತ್ರತೆಗೆ ಗೌರವವನ್ನು ತೋರಿಸುತ್ತಾ, ದೈವಭಕ್ತಿಯ ಜನರು, ಅಂತಹ ವಿಧಾನವು ಜೀವರಕ್ಷಕವೆಂದು ಇತರರು ಒತ್ತಾಯಮಾಡಿದರೂ ರಕ್ತಪೂರಣಗಳನ್ನು ಸ್ವೀಕರಿಸುವುದಿಲ್ಲ. ಯೆಹೋವನ ಸಾಕ್ಷಿಗಳಿಗೆ ಸ್ವೀಕಾರಯೋಗ್ಯವಾಗಿರುವ ಅನೇಕ ವೈದ್ಯಕೀಯ ಅನ್ಯಮಾರ್ಗಗಳು ಅತಿ ಕಾರ್ಯಸಾಧಕವಾಗಿ ಪರಿಣಮಿಸಿವೆ ಮತ್ತು ಇವು ರಕ್ತಪೂರಣಗಳ ಅಪಾಯಕ್ಕೆ ಒಬ್ಬನನ್ನು ಈಡು ಮಾಡುವುದಿಲ್ಲ. ಯೇಸುವಿನ ಸುರಿಸಲ್ಪಟ್ಟ ರಕ್ತವು ಮಾತ್ರ ನಿಜವಾಗಿಯೂ ಜೀವರಕ್ಷಕವೆಂದು ಕ್ರೈಸ್ತರಿಗೆ ಗೊತ್ತಿದೆ. ಅದರಲ್ಲಿ ನಂಬಿಕೆಯು ಕ್ಷಮಾಪಣೆಯನ್ನೂ ನಿತ್ಯಜೀವದ ಪ್ರತೀಕ್ಷೆಯನ್ನೂ ತರುತ್ತದೆ.—ಎಫೆಸ 1:7.
23. ದೈವಭಕ್ತಿಯ ಜೀವನರೀತಿಯ ಕೆಲವು ಪ್ರತಿಫಲಗಳಾವುವು?
23 ದೈವಭಕ್ತಿಯ ಜೀವಿತವನ್ನು ನಡೆಸುವುದಕ್ಕೆ ಪ್ರಯತ್ನವು ಅಗತ್ಯವೆಂಬುದು ಸ್ಪಷ್ಟ. ಇದು ಕುಟುಂಬದ ಸದಸ್ಯರಿಂದ ಅಥವಾ ಪರಿಚಯಸ್ಥರಿಂದ ಅಪಹಾಸ್ಯದಲ್ಲಿ ಪರಿಣಮಿಸಬಹುದು. (ಮತ್ತಾಯ 10:32-39; 1 ಪೇತ್ರ 4:4) ಆದರೆ ಇಂತಹ ಜೀವಿತವನ್ನು ನಡೆಸುವುದಕ್ಕಿರುವ ಬಹುಮಾನವು ಯಾವುದೇ ತೊಂದರೆಗಳಿಗಿಂತ ಎಷ್ಟೋ ಹೆಚ್ಚು ಪ್ರಧಾನವಾದದ್ದಾಗಿದೆ. ಅದು ಶುದ್ಧ ಮನಸ್ಸಾಕ್ಷಿಯನ್ನು ಫಲಿಸಿ, ಯೆಹೋವನ ಜೊತೆ ಆರಾಧಕರೊಂದಿಗೆ ಹಿತಕರವಾದ ಒಡನಾಟವನ್ನು ಒದಗಿಸುತ್ತದೆ. (ಮತ್ತಾಯ 19:27, 29) ಅಲ್ಲದೆ, ದೇವರ ನೀತಿಯ ನೂತನ ಲೋಕದಲ್ಲಿ ನಿತ್ಯವಾಗಿ ಬದುಕುವುದನ್ನೂ ಊಹಿಸಿರಿ. (ಯೆಶಾಯ 65:17, 18) ಮತ್ತು ಬೈಬಲ್ ಸಲಹೆಯನ್ನು ಅನುಸರಿಸುವುದರಲ್ಲಿ ಮತ್ತು ಹೀಗೆ ಯೆಹೋವನ ಹೃದಯವನ್ನು ಸಂತೋಷಪಡಿಸುವುದರಲ್ಲಿ ಎಂತಹ ಆನಂದವಿದೆ! (ಜ್ಞಾನೋಕ್ತಿ 27:11) ದೈವಭಕ್ತಿಯ ಜೀವನವನ್ನು ನಡೆಸುವುದು ಸಂತೋಷವನ್ನು ತರುತ್ತದೆ ಎಂಬುದರಲ್ಲಿ ಆಶ್ಚರ್ಯವಿಲ್ಲ!—ಕೀರ್ತನೆ 128:1, 2.
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
ದೈವಭಕ್ತಿಯ ಜೀವನವನ್ನು ನಡೆಸುವುದು ಸಂತೋಷವನ್ನು ತರುವುದಕ್ಕೆ ಕೆಲವು ಕಾರಣಗಳಾವುವು?
ದೈವಭಕ್ತಿಯ ಜೀವನವು ಯಾವ ಬದಲಾವಣೆಗಳನ್ನು ಕೇಳಿಕೊಳ್ಳಬಹುದು?
ನೀವೇಕೆ ದೈವಭಕ್ತಿಯ ಜೀವನವನ್ನು ನಡೆಸಬಯಸುತ್ತೀರಿ?
[ಅಧ್ಯಯನ ಪ್ರಶ್ನೆಗಳು]
[ಪುಟ 124, 125ರಲ್ಲಿರುವ ಚಿತ್ರ]
ವಿಶ್ರಾಂತಿಯ ಅವಧಿಗಳೊಂದಿಗೆ ಸಮತೂಗಿಸಿರುವ ಆತ್ಮಿಕ ಚಟುವಟಿಕೆಗಳು ದೈವಭಕ್ತಿಯ ಜೀವನವನ್ನು ನಡೆಸುವವರ ಸಂತೋಷಕ್ಕೆ ಸಹಾಯ ನೀಡುತ್ತವೆ