ನೀವು ಯಾರ ಅಧಿಕಾರವನ್ನು ಒಪ್ಪಿಕೊಳ್ಳಬೇಕು?
ಅಧ್ಯಾಯ 14
ನೀವು ಯಾರ ಅಧಿಕಾರವನ್ನು ಒಪ್ಪಿಕೊಳ್ಳಬೇಕು?
1, 2. ಸಕಲ ವಿಧಗಳ ಅಧಿಕಾರಗಳು ಹಾನಿಕರವೊ? ವಿವರಿಸಿರಿ.
“ಅಧಿಕಾರ” ಎಂಬುದು ಅನೇಕ ಜನರಿಗೆ ಅರುಚಿಕರವಾದ ಒಂದು ಪದ. ಇದು ಗ್ರಾಹ್ಯ, ಏಕೆಂದರೆ ಅಧಿಕಾರವು ಉದ್ಯೋಗದಲ್ಲಿ, ಕುಟುಂಬದಲ್ಲಿ ಮತ್ತು ಸರಕಾರಗಳಿಂದ ಅನೇಕವೇಳೆ ಅಪಪ್ರಯೋಗಿಸಲ್ಪಡುತ್ತದೆ. ಬೈಬಲು ವಾಸ್ತವಿಕವಾಗಿ ಹೇಳುವುದು: “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು” ಮಾಡಿದ್ದಾನೆ. (ಪ್ರಸಂಗಿ 8:9) ಹೌದು, ಅನೇಕರು ಕ್ರೂರವಾಗಿ ಅಥವಾ ಸ್ವಾರ್ಥಸಾಧನೆಯ ರೀತಿಯಲ್ಲಿ ವರ್ತಿಸಿ ಇತರರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ.
2 ಆದರೆ ಎಲ್ಲ ಅಧಿಕಾರವೂ ಹಾನಿಕರವಲ್ಲ. ಉದಾಹರಣೆಗೆ, ನಮ್ಮ ದೇಹ ನಮ್ಮ ಮೇಲೆ ಅಧಿಕಾರ ನಡೆಸುತ್ತದೆ ಎಂದು ಹೇಳಬಹುದು. ಅದು ಉಸಿರಾಡಲು, ತಿನ್ನಲು, ಕುಡಿಯಲು ಮತ್ತು ನಿದ್ರಿಸಲು ನಮ್ಮನ್ನು “ಆಜ್ಞಾಪಿ” ಸುತ್ತದೆ. ಇದು ಶೋಷಣೆಯೊ? ಅಲ್ಲ. ಈ ಕೇಳಿಕೆಗಳಿಗೆ ಅನುವರ್ತನೆ ತೋರಿಸುವುದು ನಮ್ಮ ಒಳಿತಿಗಾಗಿದೆ. ನಮ್ಮ ದೈಹಿಕ ಆವಶ್ಯಕತೆಗಳಿಗೆ ಅಧೀನತೆಯು ಅನೈಚ್ಛಿಕವಾಗಿರಬಹುದಾದರೂ, ನಮ್ಮ ಇಚ್ಛಾಪೂರ್ವಕ ಅಧೀನತೆಯನ್ನು ಕೇಳಿಕೊಳ್ಳುವ ಅಧಿಕಾರದ ಇತರ ವಿಧಗಳಿವೆ. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
ಪರಮ ಅಧಿಕಾರ
3. ಯೆಹೋವನನ್ನು ಯೋಗ್ಯವಾಗಿಯೇ “ಸಾರ್ವಭೌಮ ಪ್ರಭು” ಎಂದು ಏಕೆ ಕರೆಯಲಾಗುತ್ತದೆ?
3 ಬೈಬಲಿನಲ್ಲಿ 300ಕ್ಕೂ ಹೆಚ್ಚು ಬಾರಿ ಯೆಹೋವನನ್ನು “ಒಡೆಯ,” [“ಸಾರ್ವಭೌಮ ಪ್ರಭು,” NW] ಎಂದು ಕರೆಯಲಾಗುತ್ತದೆ. ಪರಮಾಧಿಕಾರವನ್ನು ಹೊಂದಿರುವವನೇ ಪರಮಾಧಿಕಾರಿ. ಯೆಹೋವನಿಗೆ ಯಾವುದು ಈ ಸ್ಥಾನಮಾನವನ್ನು ಕೊಡುತ್ತದೆ? ಪ್ರಕಟನೆ 4:11, (NW) ಉತ್ತರಿಸುವುದು: “ಯೆಹೋವನೇ, ನಮ್ಮ ದೇವರು ಕೂಡ, ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ನೀನು ಅರ್ಹನು, ಏಕೆಂದರೆ ಸಕಲ ಸಂಗತಿಗಳನ್ನು ನೀನು ಸೃಷ್ಟಿಸಿದ್ದೀ, ಮತ್ತು ನಿನ್ನ ಚಿತ್ತದ ಕಾರಣ ಅವು ಅಸ್ತಿತ್ವಕ್ಕೆ ಬಂದವು ಮತ್ತು ಸೃಷ್ಟಿಸಲ್ಪಟ್ಟವು.”
4. ಯೆಹೋವನು ತನ್ನ ಅಧಿಕಾರವನ್ನು ನಿರ್ವಹಿಸಲು ಹೇಗೆ ಆರಿಸಿಕೊಳ್ಳುತ್ತಾನೆ?
4 ನಮ್ಮ ಸೃಷ್ಟಿಕರ್ತನೋಪಾದಿ ಯೆಹೋವನಿಗೆ, ತಾನು ಆರಿಸಿಕೊಳ್ಳುವಂತೆ ತನ್ನ ಅಧಿಕಾರವನ್ನು ನಿರ್ವಹಿಸುವ ಹಕ್ಕಿದೆ. ಇದು, ವಿಶೇಷವಾಗಿ ದೇವರು “ಅತಿ ಬಲಾಢ್ಯನೂ” ಎಂದು ನಾವು ಪರಿಗಣಿಸುವಾಗ, ಭಯ ಹುಟ್ಟಿಸುವುದಾಗಿ ತೋರಬಹುದು. ಅವನನ್ನು “ಸರ್ವಶಕ್ತನಾದ ದೇವರು”—ಹೀಬ್ರುವಿನಲ್ಲಿ ಪೂರ್ತಿ ಸ್ವಾಧೀನಕ್ಕೆ ತರುವ ಬಲದ ಅಭಿಪ್ರಾಯವನ್ನು ಕೊಡುವ ಪದ—ಎಂದು ಕರೆಯಲಾಗುತ್ತದೆ. (ಯೆಶಾಯ 40:26; ಆದಿಕಾಂಡ 17:1) ಆದರೂ, ಯೆಹೋವನು ತನ್ನ ಬಲವನ್ನು ಧರ್ಮಶೀಲವಾದ ರೀತಿಯಲ್ಲಿ ತೋರಿಸುತ್ತಾನೆ, ಏಕೆಂದರೆ ಆತನ ಪ್ರಧಾನ ಗುಣವು ಪ್ರೀತಿಯಾಗಿದೆ.—1 ಯೋಹಾನ 4:16.
5. ಯೆಹೋವನ ಅಧಿಕಾರಕ್ಕೆ ಅಧೀನರಾಗುವುದು ಏಕೆ ಕಷ್ಟಕರವಲ್ಲ?
5 ಪಶ್ಚಾತ್ತಾಪಪಡದ ತಪ್ಪುಗಾರರಿಗೆ ಶಿಕ್ಷೆಯನ್ನು ತರುವೆನೆಂದು ಯೆಹೋವನು ಎಚ್ಚರಿಸಿದರೂ, ಮೋಶೆಯು ಆತನನ್ನು ಪ್ರಧಾನವಾಗಿ, “ನಂಬಿಗಸ್ತನಾದ ದೇವರು; ತನ್ನನ್ನು ಪ್ರೀತಿಸಿ ತನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾಡಿದ ವಾಗ್ದಾನವನ್ನೂ ಕೃಪೆಯನ್ನೂ . . . ನೆರವೇರಿಸುವವ”ನು ಎಂಬುದಾಗಿ ತಿಳಿದಿದ್ದನು. (ಧರ್ಮೋಪದೇಶಕಾಂಡ 7:9) ಸ್ವಲ್ಪ ಕಲ್ಪಿಸಿಕೊಳ್ಳಿರಿ! ವಿಶ್ವದ ಪರಮಾಧಿಕಾರಿಯು ತನ್ನನ್ನು ಆರಾಧಿಸುವಂತೆ ನಮ್ಮನ್ನು ಬಲಾತ್ಕರಿಸುವುದಿಲ್ಲ. ಬದಲಾಗಿ, ಆತನ ಪ್ರೀತಿಯ ಕಾರಣ ನಾವು ಆತನ ಕಡೆಗೆ ಎಳೆಯಲ್ಪಡುತ್ತೇವೆ. (ರೋಮಾಪುರ 2:4; 5:8) ಯೆಹೋವನ ಅಧಿಕಾರಕ್ಕೆ ಅಧೀನತೆ ತೋರಿಸುವುದು ಒಂದು ಸುಖಾನುಭವವೂ ಆಗಿದೆ, ಏಕೆಂದರೆ ಆತನ ನಿಯಮಗಳು ಸದಾ ನಮ್ಮ ಅಂತಿಮ ಪ್ರಯೋಜನಕ್ಕಾಗಿ ಕೆಲಸ ನಡೆಸುತ್ತವೆ.—ಕೀರ್ತನೆ 19:7, 8.
6. ಏದೆನ್ ತೋಟದಲ್ಲಿ ಅಧಿಕಾರದ ವಿವಾದಾಂಶ ಹೇಗೆ ಎದ್ದಿತು, ಮತ್ತು ಪರಿಣಾಮವೇನಾಯಿತು?
6 ನಮ್ಮ ಆದಿ ಹೆತ್ತವರು ದೇವರ ಪರಮಾಧಿಕಾರವನ್ನು ನಿರಾಕರಿಸಿದರು. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ಅವರು ತಾವಾಗಿಯೇ ನಿರ್ಣಯಿಸಬಯಸಿದರು. (ಆದಿಕಾಂಡ 3:4-6) ಇದರ ಪರಿಣಾಮವಾಗಿ, ಅವರನ್ನು ಅವರ ಪ್ರಮೋದವನ್ಯ ಬೀಡಿನಿಂದ ಹೊರಗಟ್ಟಿಬಿಡಲಾಯಿತು. ಆ ಬಳಿಕ ಅವರು ಅಪರಿಪೂರ್ಣವಾದರೂ ಒಂದು ಕ್ರಮಬದ್ಧವಾದ ಸಮಾಜದಲ್ಲಿ ಜೀವಿಸಸಾಧ್ಯವಾಗುವಂತೆ ಮಾನವರು ಅಧಿಕಾರ ರಚನೆಗಳನ್ನು ಸೃಷ್ಟಿಸುವಂತೆ ಯೆಹೋವನು ಅನುಮತಿಸಿದನು. ಈ ಅಧಿಕಾರಗಳಲ್ಲಿ ಕೆಲವು ಯಾವುವು, ಮತ್ತು ಅವುಗಳಿಗೆ ಯಾವ ಮಟ್ಟದ ವರೆಗೆ ಅಧೀನತೆಯನ್ನು ದೇವರು ನಮ್ಮಿಂದ ಅಪೇಕ್ಷಿಸುತ್ತಾನೆ?
“ಮೇಲಧಿಕಾರಿಗಳು”
7. “ಮೇಲಧಿಕಾರಿಗಳು” ಯಾರು, ಮತ್ತು ಅವರ ಸ್ಥಾನವು ದೇವರ ಅಧಿಕಾರಕ್ಕೆ ಹೇಗೆ ಸಂಬಂಧಿಸುತ್ತದೆ?
7 ಅಪೊಸ್ತಲ ಪೌಲನು ಬರೆದುದು: “ಪ್ರತಿಯೊಂದು ಪ್ರಾಣವು ಮೇಲಧಿಕಾರಿಗಳಿಗೆ ಅಧೀನವಾಗಿರಲಿ, ಏಕೆಂದರೆ ದೇವರಿಂದ ಹೊರತು ಯಾವ ಅಧಿಕಾರವೂ ಇಲ್ಲ.” ಆ “ಮೇಲಧಿಕಾರಿಗಳು” ಯಾರು? ಹಿಂಬಾಲಿಸುವ ವಚನಗಳಲ್ಲಿರುವ ಪೌಲನ ಮಾತುಗಳು, ಅವರು ಮಾನವ ಸರಕಾರೀ ಅಧಿಕಾರಿಗಳೆಂದು ತೋರಿಸುತ್ತವೆ. (ರೋಮಾಪುರ 13:1-7, NW; ತೀತ 3:1) ಮಾನವರ ಸರಕಾರೀ ಅಧಿಕಾರಿಗಳನ್ನು ಯೆಹೋವನು ಆರಂಭಿಸಲಿಲ್ಲವಾದರೂ ಆತನ ಅನುಮತಿಯಿಂದ ಅವರು ಅಸ್ತಿತ್ವದಲ್ಲಿದ್ದಾರೆ. ಆದಕಾರಣ ಪೌಲನಿಗೆ ಹೀಗೆ ಬರೆಯಲು ಸಾಧ್ಯವಾಯಿತು: “ಅಸ್ತಿತ್ವದಲ್ಲಿರುವ ಅಧಿಕಾರಿಗಳು ತಮ್ಮ ಸಂಬಂಧಿತ ಸ್ಥಾನಗಳಲ್ಲಿ ದೇವರಿಂದ ಇಡಲ್ಪಡುತ್ತಾರೆ.” ಇದು ಅಂತಹ ಐಹಿಕ ಅಧಿಕಾರದ ಕುರಿತು ಏನನ್ನು ಸೂಚಿಸುತ್ತದೆ? ಅದು ದೇವರ ಅಧಿಕಾರಕ್ಕಿಂತ ಕೆಳದರ್ಜೆಯದ್ದು, ಅಥವಾ ಕೀಳಾದದ್ದು ಎಂದೇ. (ಯೋಹಾನ 19:10, 11) ಆದಕಾರಣ, ಮಾನವನ ನಿಯಮ ಮತ್ತು ದೇವರ ನಿಯಮಗಳ ನಡುವೆ ಘರ್ಷಣೆಯು ಬರುವಾಗ, ಕ್ರೈಸ್ತರು ಅವರ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯಿಂದ ಮಾರ್ಗದರ್ಶಿಸಲ್ಪಡಬೇಕು. ಅವರು “ಮನುಷ್ಯರಿಗಿಂತ ಹೆಚ್ಚಾಗಿ ಆಳುವವನೋಪಾದಿ ದೇವರಿಗೆ ಭಯಪಡಬೇಕು.”—ಅ. ಕೃತ್ಯಗಳು 5:29, NW.
8. ನಿಮಗೆ ಮೇಲಧಿಕಾರಿಗಳಿಂದ ಹೇಗೆ ಪ್ರಯೋಜನವಾಗುತ್ತದೆ, ಮತ್ತು ಅವರಿಗೆ ನಿಮ್ಮ ಅಧೀನತೆಯನ್ನು ನೀವು ಹೇಗೆ ತೋರಿಸಬಲ್ಲಿರಿ?
8 ಆದರೂ, ಸರಕಾರೀ ಮೇಲಧಿಕಾರಿಗಳು ಹೆಚ್ಚಿನ ಸಮಯ, ‘ನಮಗೆ ನಮ್ಮ ಒಳಿತಿಗಾಗಿ ದೇವರ ಶುಶ್ರೂಷಕರಾಗಿ’ ವರ್ತಿಸುತ್ತಾರೆ. (ರೋಮಾಪುರ 13:4, NW) ಯಾವ ವಿಧಗಳಲ್ಲಿ? ಒಳ್ಳೆಯದು, ಅಂಚೆ ಬಟವಾಡೆ, ಪೊಲೀಸ್ ಮತ್ತು ಅಗ್ನಿಶಾಮಕ ಸಂರಕ್ಷಣೆ, ನಿರ್ಮಲೀಕರಣ ಮತ್ತು ವಿದ್ಯಾಭ್ಯಾಸದಂತಹ, ಮೇಲಧಿಕಾರಿಗಳು ಒದಗಿಸುವ ಅನೇಕಾನೇಕ ಸೇವೆಗಳ ಕುರಿತು ಯೋಚಿಸಿರಿ. “ಅದಕ್ಕಾಗಿಯೇ ನೀವು ತೆರಿಗೆಗಳನ್ನು ತೆರುತ್ತಿದ್ದೀರಿ, ಏಕೆಂದರೆ ಅವರು ಇದೇ ಉದ್ದೇಶವನ್ನು ನಿರ್ವಹಿಸುತ್ತಿರುವ ದೇವರ ಸಾರ್ವಜನಿಕ ಸೇವಕರಾಗಿದ್ದಾರೆ,” ಎಂದು ಪೌಲನು ಬರೆದನು. (ರೋಮಾಪುರ 13:6, NW) ತೆರಿಗೆಗಳ ಅಥವಾ ಯಾವುದೇ ನಿಯಮಬದ್ಧ ಹಂಗಿನ ಸಂಬಂಧದಲ್ಲಿ ನಾವು “ಸಜ್ಜನರಾಗಿ ನಡೆದುಕೊಳ್ಳ” ಬೇಕು.—ಇಬ್ರಿಯ 13:18.
9, 10. (ಎ) ಮೇಲಧಿಕಾರಿಗಳು ದೇವರ ಏರ್ಪಾಡಿನೊಳಗೆ ಹೇಗೆ ಹೊಂದಿಕೊಳ್ಳುತ್ತಾರೆ? (ಬಿ) ಮೇಲಧಿಕಾರಿಗಳನ್ನು ವಿರೋಧಿಸುವುದು ಏಕೆ ತಪ್ಪಾಗಿರುವುದು?
9 ಕೆಲವು ಬಾರಿ, ಆ ಮೇಲಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಿಸುತ್ತಾರೆ. ಇದು ಅವರಿಗೆ ಅಧೀನರಾಗಿರುವ ನಮ್ಮ ಜವಾಬ್ದಾರಿಯಿಂದ ನಮ್ಮನ್ನು ಬಿಡಿಸುತ್ತದೊ? ಇಲ್ಲ, ಬಿಡಿಸುವುದಿಲ್ಲ. ಯೆಹೋವನು ಈ ಅಧಿಕಾರಿಗಳ ದುಷ್ಕಾರ್ಯಗಳನ್ನು ನೋಡುತ್ತಾನೆ. (ಜ್ಞಾನೋಕ್ತಿ 15:3) ಮಾನವನ ಆಳಿಕೆಯನ್ನು ಆತನು ಸಹಿಸಿಕೊಳ್ಳುವುದೆಂದರೆ ಅದರ ಭ್ರಷ್ಟತೆಯನ್ನು ಆತನು ಕಂಡೂ ಕಾಣದಂತಿದ್ದಾನೆ ಎಂದರ್ಥವಲ್ಲ; ನಾವು ಹಾಗೆ ಮಾಡಬೇಕೆಂದೂ ಆತನು ಅಪೇಕ್ಷಿಸುವುದಿಲ್ಲ. ವಾಸ್ತವವಾಗಿ, ದೇವರು ಬೇಗನೆ “ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ,” ಅವುಗಳನ್ನು ನೀತಿಯ ತನ್ನ ಸ್ವಂತ ಸರಕಾರದ ಆಳಿಕೆಯಿಂದ ಭರ್ತಿಮಾಡುವನು. (ದಾನಿಯೇಲ 2:44) ಆದರೆ ಇದು ಸಂಭವಿಸುವ ತನಕ, ಮೇಲಧಿಕಾರಿಗಳು ಒಂದು ಉಪಯುಕ್ತ ಉದ್ದೇಶವನ್ನು ನಿರ್ವಹಿಸುತ್ತಾರೆ.
10 ಪೌಲನು ವಿವರಿಸಿದ್ದು: “ಯಾವನು ಆ ಅಧಿಕಾರವನ್ನು ವಿರೋಧಿಸುತ್ತಾನೋ ಅವನು ದೇವರ ಏರ್ಪಾಡಿನ ವಿರುದ್ಧ ನಿಂತಿದ್ದಾನೆ.” (ರೋಮಾಪುರ 13:2, NW) ಮೇಲಧಿಕಾರಿಗಳು, ಯಾವುದು ಇಲ್ಲದಿದ್ದರೆ ಅಸ್ತವ್ಯಸ್ತತೆ ಮತ್ತು ಅರಾಜಕತೆ ಆಳೀತೋ, ಅಂತಹ ಕ್ರಮವನ್ನು ಸ್ವಲ್ಪ ಮಟ್ಟಿಗೆ ಉಳಿಸುವುದರಲ್ಲಿ ದೇವರ ‘ಏರ್ಪಾಡು’ ಆಗಿದ್ದಾರೆ. ಅವರನ್ನು ವಿರೋಧಿಸುವುದು ಅಶಾಸ್ತ್ರೀಯವೂ ಅವಿವೇಕವೂ ಆಗಿರುವುದು. ದೃಷ್ಟಾಂತಕ್ಕಾಗಿ: ನೀವು ಶಸ್ತ್ರಚಿಕಿತ್ಸೆಗೊಳಗಾಗಿದ್ದೀರಿ ಮತ್ತು ಹೊಲಿಗೆಗಳು ನಿಮ್ಮ ಗಾಯವನ್ನು ಭದ್ರವಾಗಿರಿಸುತ್ತಿವೆ ಎಂದು ಭಾವಿಸಿರಿ. ಆ ಹೊಲಿಗೆಗಳು ದೇಹಕ್ಕೆ ಬಾಹ್ಯ ಪದಾರ್ಥವಾದರೂ, ಒಂದು ಪರಿಮಿತ ಸಮಯಕ್ಕೆ ಒಂದು ಉದ್ದೇಶವನ್ನು ನಿರ್ವಹಿಸುತ್ತವೆ. ಅವನ್ನು ತಕ್ಕ ಕಾಲಕ್ಕೆ ಮೊದಲೇ ತೆಗೆದು ಬಿಡುವುದರಿಂದ ಹಾನಿಯಾಗಬಲ್ಲದು. ತದ್ರೀತಿ, ಮಾನವ ಸರಕಾರೀ ಅಧಿಕಾರಿಗಳು ದೇವರ ಮೂಲ ಉದ್ದೇಶದ ಭಾಗವಾಗಿರಲಿಲ್ಲ. ಆದರೂ, ಆತನ ರಾಜ್ಯವು ಭೂಮಿಯನ್ನು ಪೂರ್ತಿಯಾಗಿ ಆಳುತ್ತಿರುವ ತನಕ ಮಾನವ ಸರಕಾರಗಳು ಸಮಾಜವನ್ನು ಒಂದುಗೂಡಿಸಿ, ದೇವರ ಸದ್ಯಕ್ಕಾಗಿರುವ ಇಷ್ಟದೊಂದಿಗೆ ಹೊಂದಿಕೊಳ್ಳುವ ಕಾರ್ಯವನ್ನು ನಡೆಸುತ್ತಿವೆ. ನಾವು ಹೀಗೆ, ದೇವರ ನಿಯಮ ಮತ್ತು ಅಧಿಕಾರಕ್ಕೆ ಆದ್ಯತೆಯನ್ನು ಕೊಡುವಾಗ ಮೇಲಧಿಕಾರಿಗಳಿಗೆ ಅಧೀನರಾಗಿ ಉಳಿಯಬೇಕು.
ಕುಟುಂಬದಲ್ಲಿ ಅಧಿಕಾರ
11. ಶಿರಸ್ಸುತನದ ಮೂಲಸೂತ್ರವನ್ನು ನೀವು ಹೇಗೆ ವಿವರಿಸುವಿರಿ?
11 ಕುಟುಂಬವು ಮಾನವ ಸಮಾಜದ ಮೂಲ ಏಕಾಂಶವಾಗಿದೆ. ಅದರೊಳಗೆ ಗಂಡ ಮತ್ತು ಹೆಂಡತಿ ಪ್ರತಿಫಲದಾಯಕ ಒಡನಾಟವನ್ನು ಕಂಡುಕೊಳ್ಳಬಲ್ಲರು, ಮತ್ತು ಮಕ್ಕಳನ್ನು ಪ್ರಾಪ್ತ ವಯಸ್ಕತೆಗಾಗಿ ಕಾಪಾಡಿ ತರಬೇತುಗೊಳಿಸಸಾಧ್ಯವಿದೆ. (ಜ್ಞಾನೋಕ್ತಿ 5:15-21; ಎಫೆಸ 6:1-4) ಇಂತಹ ಶ್ಲಾಘ್ಯವಾದ ಏರ್ಪಾಡನ್ನು ಕುಟುಂಬ ಸದಸ್ಯರು ಶಾಂತಿ ಮತ್ತು ಐಕ್ಯದಲ್ಲಿ ಜೀವಿಸಲು ಸಾಧ್ಯವಾಗುವಂತೆ ವ್ಯವಸ್ಥಾಪಿಸುವುದು ಅಗತ್ಯ. ಇದನ್ನು ಸಾಧಿಸುವ ಯೆಹೋವನ ಮಾರ್ಗವು, 1 ಕೊರಿಂಥ 11:3 ರಲ್ಲಿ ಕಂಡುಬರುವ, ಈ ಮಾತುಗಳಲ್ಲಿ ಸಾರಾಂಶಿಸಿರುವ ತಲೆತನದ ಮೂಲಸೂತ್ರದ ಮೂಲಕವೇ: “ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.”
12, 13. ಕುಟುಂಬದ ತಲೆಯು ಯಾರು, ಮತ್ತು ಯೇಸುವು ತಲೆತನವನ್ನು ನಿರ್ವಹಿಸಿದ ರೀತಿಯಿಂದ ಏನು ಕಲಿಯಸಾಧ್ಯವಿದೆ?
12 ಗಂಡನು ಕುಟುಂಬದ ತಲೆ. ಆದರೂ ಅವನ ಮೇಲೆ ಇನ್ನೊಬ್ಬ ತಲೆ—ಯೇಸು ಕ್ರಿಸ್ತನು—ಇದ್ದಾನೆ. ಪೌಲನು ಬರೆದುದು: “ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿ, ತನ್ನನ್ನು ಒಪ್ಪಿಸಿಕೊಟ್ಟ ಪ್ರಕಾರವೇ ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.” (ಎಫೆಸ 5:25, NW) ಒಬ್ಬ ಗಂಡನು ತನ್ನ ಹೆಂಡತಿಯನ್ನು, ಯೇಸು ತನ್ನ ಸಭೆಯನ್ನು ಸದಾ ಉಪಚರಿಸಿರುವಂತೆ ಉಪಚರಿಸುವಾಗ ಅವನು ಕ್ರಿಸ್ತನಿಗೆ ತನ್ನ ಅಧೀನತೆಯನ್ನು ಪ್ರತಿಬಿಂಬಿಸುತ್ತಾನೆ. (1 ಯೋಹಾನ 2:6) ಯೇಸುವಿಗೆ ಮಹಾ ಅಧಿಕಾರವು ಅನುಗ್ರಹಿಸಲ್ಪಟ್ಟಿರುವುದಾದರೂ ಅವನು ಅದನ್ನು ಅತ್ಯಂತ ಸೌಮ್ಯತೆ, ಪ್ರೀತಿ ಮತ್ತು ವಿವೇಚನೆಯಿಂದ ನಿರ್ವಹಿಸುತ್ತಾನೆ. (ಮತ್ತಾಯ 20:25-28) ಮನುಷ್ಯನೋಪಾದಿ ಯೇಸು ತನ್ನ ಅಧಿಕಾರದ ಸ್ಥಾನವನ್ನು ಎಂದಿಗೂ ಅಪಪ್ರಯೋಗಿಸಲಿಲ್ಲ. ಅವನು “ಸಾತ್ವಿಕನೂ ದೀನಮನಸ್ಸುಳ್ಳವನೂ” ಆಗಿದ್ದನು, ಮತ್ತು ಅವನು ತನ್ನ ಶಿಷ್ಯರನ್ನು “ಆಳುಗಳು” ಎನ್ನುವ ಬದಲಾಗಿ “ಸ್ನೇಹಿತರು” ಎಂದು ಕರೆದನು. “ನಾನು ನಿಮಗೆ ವಿಶ್ರಾಂತಿ ಕೊಡುವೆನು” ಎಂದು ಅವನು ಅವರಿಗೆ ವಚನಕೊಟ್ಟನು ಮತ್ತು ಹಾಗೆಯೇ ಮಾಡಿದನು.—ಮತ್ತಾಯ 11:28, 29; ಯೋಹಾನ 15:15.
13 ಕ್ರೈಸ್ತ ಶಿರಸ್ಸುತನವು ನಿರ್ದಯತೆಯಿಂದ ಪ್ರಭುತ್ವ ನಡೆಸುವ ಸ್ಥಾನವಲ್ಲವೆಂದು ಯೇಸುವಿನ ಮಾದರಿ ಗಂಡಂದಿರಿಗೆ ಕಲಿಸುತ್ತದೆ. ಬದಲಿಗೆ, ಅದೊಂದು ಗೌರವಿಸುವ ಮತ್ತು ಸ್ವತ್ಯಾಗಮಾಡುವ ಪ್ರೀತಿಯ ಸ್ಥಾನವಾಗಿದೆ. ಒಬ್ಬ ಜೊತೆಯನ್ನು ಶಾರೀರಿಕವಾಗಿ ಅಥವಾ ಶಾಬ್ದಿಕವಾಗಿ ದುರುಪಚರಿಸುವುದನ್ನು ಇದು ಸ್ಪಷ್ಟವಾಗಿ ತಳ್ಳಿಹಾಕುತ್ತದೆ. (ಎಫೆಸ 4:29, 31, 32; 5:28, 29; ಕೊಲೊಸ್ಸೆ 3:19) ಒಬ್ಬ ಕ್ರೈಸ್ತ ಪುರುಷನು ಹೀಗೆ ತನ್ನ ಹೆಂಡತಿಯನ್ನು ಕೆಟ್ಟದ್ದಾಗಿ ಉಪಚರಿಸುವಲ್ಲಿ, ಅವನ ಇತರ ಸತ್ಕಾರ್ಯಗಳು ಬೆಲೆಯಿಲ್ಲದ್ದಾಗುವುವು ಮತ್ತು ಅವನ ಪ್ರಾರ್ಥನೆಗಳು ತಡೆಯಲ್ಪಡುವುವು.—1 ಕೊರಿಂಥ 13:1-3; 1 ಪೇತ್ರ 3:7.
14, 15. ದೇವರ ಜ್ಞಾನವು ಒಬ್ಬ ಹೆಂಡತಿಯನ್ನು ಆಕೆಯ ಗಂಡನಿಗೆ ಅಧೀನಳಾಗಿರುವಂತೆ ಹೇಗೆ ಸಹಾಯ ಮಾಡುತ್ತದೆ?
14 ಒಬ್ಬ ಗಂಡನು ಕ್ರಿಸ್ತನ ಮಾದರಿಯನ್ನು ಅನುಕರಿಸುವಾಗ, ಎಫೆಸ 5:22, 23ರ ಮಾತುಗಳಿಗೆ ಹೊಂದಿಸಿಕೊಳ್ಳುವುದು ಅವನ ಹೆಂಡತಿಗೆ ಹೆಚ್ಚು ಸುಲಭವಾಗುತ್ತದೆ: “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ.” ಗಂಡನು ಕ್ರಿಸ್ತನಿಗೆ ಅಧೀನನಾಗಿರಬೇಕಾಗಿರುವಂತೆಯೇ, ಹೆಂಡತಿಯು ತನ್ನ ಗಂಡನಿಗೆ ಅಧೀನಳಾಗಿರಬೇಕು. ಸಮರ್ಥೆಯರಾದ ಹೆಂಡತಿಯರು ಅವರ ದೈವಭಕ್ತಿಯ ವಿವೇಕ ಮತ್ತು ಉದ್ಯೋಗಶೀಲತೆಗಳಿಗಾಗಿ ಗೌರವ ಮತ್ತು ಶ್ಲಾಘನೆಗೆ ಅರ್ಹರೆಂದೂ ಬೈಬಲು ಸ್ಪಷ್ಟಪಡಿಸುತ್ತದೆ.—ಜ್ಞಾನೋಕ್ತಿ 31:10-31.
15 ತನ್ನ ಗಂಡನಿಗೆ ಒಬ್ಬ ಕ್ರೈಸ್ತ ಹೆಂಡತಿಯ ಅಧೀನತೆಯು ಸಂಬಂಧಕವಾಗಿದೆ. ಇದರ ಅರ್ಥವು, ಒಂದು ವಿಷಯದಲ್ಲಿ ಅಧೀನತೆಯು ದೈವಿಕ ನಿಯಮವನ್ನು ಉಲ್ಲಂಘಿಸುವುದನ್ನು ಫಲಿಸುವಲ್ಲಿ, ಮನುಷ್ಯನಿಗಿಂತ ಹೆಚ್ಚಾಗಿ ದೇವರಿಗೆ ವಿಧೇಯರಾಗಿರಬೇಕೆಂದೇ. ಆಗಲೂ ಹೆಂಡತಿಯ ಅಚಲ ನೆಲೆಯು, “ಸಾತ್ವಿಕವಾದ ಶಾಂತ” ಮನಸ್ಸಿನಿಂದ ಹದಗೊಳಿಸಲ್ಪಡಬೇಕು. ದೇವರ ಕುರಿತ ಜ್ಞಾನವು ಆಕೆಯನ್ನು ಹೆಚ್ಚು ಉತ್ತಮವಾದ ಹೆಂಡತಿಯಾಗಿ ಮಾಡಿದೆಯೆಂದು ಸ್ಪಷ್ಟವಾಗಬೇಕು. (1 ಪೇತ್ರ 3:1-4) ಯಾರ ಹೆಂಡತಿಯು ಅವಿಶ್ವಾಸಿಯೊ ಆ ಕ್ರೈಸ್ತ ಪುರುಷನ ವಿಷಯದಲ್ಲಿಯೂ ಇದು ಸತ್ಯ. ಬೈಬಲಿನ ಮೂಲಸೂತ್ರಗಳ ಅವನ ಅನುವರ್ತನೆಯು ಅವನನ್ನು ಹೆಚ್ಚು ಉತ್ತಮನಾದ ಗಂಡನನ್ನಾಗಿ ಮಾಡಬೇಕು.
16. ಯೇಸು ಹರೆಯದವನಾಗಿದ್ದಾಗ ಇಟ್ಟ ಮಾದರಿಯನ್ನು ಮಕ್ಕಳು ಹೇಗೆ ಅನುಕರಿಸಬಲ್ಲರು?
16 ಎಫೆಸ 6:1 ಮಕ್ಕಳ ಪಾತ್ರದ ಸ್ಥೂಲ ವಿವರಣೆಯನ್ನು ಹೀಗೆ ಹೇಳುತ್ತಾ ಕೊಡುತ್ತದೆ: “ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; ಇದು ಧರ್ಮ.” ಬೆಳೆಯುತ್ತಿದ್ದಾಗ ಯಾರು ತನ್ನ ಹೆತ್ತವರಿಗೆ ಅಧೀನನಾಗಿ ಉಳಿದನೋ, ಆ ಯೇಸುವಿನ ಮಾದರಿಯನ್ನು ಕ್ರೈಸ್ತ ಮಕ್ಕಳು ಅನುಸರಿಸುತ್ತಾರೆ. ಒಬ್ಬ ವಿಧೇಯ ಹುಡುಗನಾಗಿ ಅವನು, “ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು; ಇದಲ್ಲದೆ ದೇವರ ಮತ್ತು ಮನುಷ್ಯರ ದಯೆಯು ಆತನ ಮೇಲೆ ಹೆಚ್ಚಾಗುತ್ತಾ ಬಂತು.”—ಲೂಕ 2:51, 52.
17. ಹೆತ್ತವರು ಅಧಿಕಾರವನ್ನು ನಿರ್ವಹಿಸುವ ರೀತಿಯು ಮಕ್ಕಳ ಮೇಲೆ ಯಾವ ಪರಿಣಾಮವನ್ನು ಬೀರಬಹುದು?
17 ಹೆತ್ತವರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ರೀತಿಯು, ಅವರ ಮಕ್ಕಳು ಅಧಿಕಾರವನ್ನು ಗೌರವಿಸುವರೊ, ಅಥವಾ ಅದರ ವಿರುದ್ಧ ದಂಗೆಯೇಳುವರೊ ಎಂಬುದರ ಮೇಲೆ ಪ್ರಭಾವ ಬೀರಬಹುದು. (ಜ್ಞಾನೋಕ್ತಿ 22:6) ಆದಕಾರಣ ಹೆತ್ತವರು ತಮ್ಮನ್ನು ಹೀಗೆ ಕೇಳಿಕೊಳ್ಳುವುದು ಹಿತಕರ, ‘ನಾನು ನನ್ನ ಅಧಿಕಾರವನ್ನು ಪ್ರೀತಿಯಿಂದ ನಿರ್ವಹಿಸುತ್ತೇನೊ, ನಿರ್ದಯತೆಯಿಂದಲೊ? ನಾನು ಸ್ವಚ್ಛಂದತೆಗೆ ಅವಕಾಶಕೊಡುತ್ತೇನೊ?’ ದೈವಭಕ್ತಿಯ ಹೆತ್ತವರೊಬ್ಬರು ಪ್ರೀತಿಸುವವರೂ ವಿಚಾರಪರರೂ ಆಗಿರುವರೆಂದು, ಆದರೂ ದೈವಭಕ್ತಿಯ ಮೂಲಸೂತ್ರಗಳಿಗೆ ಅಂಟಿಕೊಳ್ಳುವುದರಲ್ಲಿ ದೃಢಚಿತ್ತರಾಗಿರುವರೆಂದು ನಿರೀಕ್ಷಿಸಲಾಗುತ್ತದೆ. ಸಮಂಜಸವಾಗಿಯೇ, ಪೌಲನು ಬರೆದುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ [ಅಕ್ಷರಶಃ, ‘ಅವರನ್ನು ಸಿಟ್ಟಿಗೆಬ್ಬಿಸದೆ’] ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನೂ ಸಾಕಿಸಲಹಿರಿ.”—ಎಫೆಸ 6:4; ಕೊಲೊಸ್ಸೆ 3:21.
18. ಹೆತ್ತವರ ಶಿಸ್ತು ಹೇಗೆ ನೀಡಲ್ಪಡಬೇಕು?
18 ತಮ್ಮ ಮಕ್ಕಳು ವಿಧೇಯರಾಗಿದ್ದು ತಮಗೆ ಆನಂದವನ್ನು ತರಬೇಕೆಂದು ಹೆತ್ತವರು ವಿಶೇಷವಾಗಿ ಬಯಸುವಲ್ಲಿ, ತಮ್ಮ ತರಬೇತಿನ ವಿಧಾನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. (ಜ್ಞಾನೋಕ್ತಿ 23:24, 25) ಬೈಬಲಿನಲ್ಲಿ, ಶಿಸ್ತು ಪ್ರಧಾನವಾಗಿ ಒಂದು ಶಿಕ್ಷಣದ ರೀತಿಯಾಗಿದೆ. (ಜ್ಞಾನೋಕ್ತಿ 4:1; 8:33) ಅದು ಪ್ರೀತಿ ಮತ್ತು ಸೌಮ್ಯತೆ—ಸಿಟ್ಟು ಮತ್ತು ಕ್ರೌರ್ಯವಲ್ಲ—ಯೊಂದಿಗೆ ಜೋಡಿಸಲ್ಪಟ್ಟಿದೆ. ಆದಕಾರಣ, ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಶಿಸ್ತನ್ನು ಕೊಡುವಾಗ ವಿವೇಕದಿಂದ ವರ್ತಿಸಿ ತಮ್ಮನ್ನು ನಿಗ್ರಹಿಸಿಕೊಳ್ಳುವುದು ಅಗತ್ಯ.—ಜ್ಞಾನೋಕ್ತಿ 1:7.
ಸಭೆಯಲ್ಲಿ ಅಧಿಕಾರ
19. ಕ್ರೈಸ್ತ ಸಭೆಯಲ್ಲಿ ಉತ್ತಮ ವ್ಯವಸ್ಥೆಗಾಗಿ ದೇವರು ಹೇಗೆ ಒದಗಿಸುವಿಕೆಯನ್ನು ಮಾಡಿದ್ದಾನೆ?
19 ಯೆಹೋವನು ಒಬ್ಬ ವ್ಯವಸ್ಥಿತನಾದ ದೇವರಾಗಿರುವುದರಿಂದ, ಆತನು ತನ್ನ ಜನರಿಗೆ ಅಧಿಕಾರಯುಕ್ತವೂ ಸುವ್ಯವಸ್ಥಿತವೂ ಆದ ನಾಯಕತ್ವವನ್ನು ಒದಗಿಸುವುದು ನ್ಯಾಯಸಮ್ಮತವಾಗಿದೆ. ಅದರಂತೆಯೇ, ಆತನು ಯೇಸುವನ್ನು ಕ್ರೈಸ್ತ ಸಭೆಯ ತಲೆಯಾಗಿ ನೇಮಿಸಿದ್ದಾನೆ. (1 ಕೊರಿಂಥ 14:33, 40; ಎಫೆಸ 1:20-23) ಕ್ರಿಸ್ತನ ಅದೃಶ್ಯ ನಾಯಕತ್ವದ ಕೆಳಗೆ ದೇವರು, ಯಾವುದರ ಮೂಲಕ ಹಿರಿಯರು ಪ್ರತಿ ಸಭೆಯಲ್ಲಿ ಹಿಂಡನ್ನು ಅತ್ಯಾಸಕ್ತಿಯಿಂದ, ಇಷ್ಟಪೂರ್ವಕವಾಗಿ ಮತ್ತು ಪ್ರೀತಿಯಿಂದ ಪಾಲಿಸುತ್ತಾರೊ ಅಂತಹ ಒಂದು ಏರ್ಪಾಡನ್ನು ನಿಯುಕ್ತ ಮಾಡಿದ್ದಾನೆ. (1 ಪೇತ್ರ 5:2, 3) ಶುಶ್ರೂಷಾ ಸೇವಕರು ಅವರಿಗೆ ವಿವಿಧ ರೀತಿಗಳಲ್ಲಿ ಸಹಾಯಮಾಡಿ ಸಭೆಯೊಳಗೆ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಾರೆ.—ಫಿಲಿಪ್ಪಿ 1:1.
20. ನೇಮಿಸಲ್ಪಟ್ಟಿರುವ ಕ್ರೈಸ್ತ ಹಿರಿಯರಿಗೆ ನಾವೇಕೆ ಅಧೀನರಾಗಿರಬೇಕು, ಮತ್ತು ಇದೇಕೆ ಪ್ರಯೋಜನಕರ?
20 ಕ್ರೈಸ್ತ ಹಿರಿಯರ ಕುರಿತಾಗಿ ಪೌಲನು ಬರೆದುದು: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು [“ಪ್ರಾಣಗಳನ್ನು,” NW] ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.” (ಇಬ್ರಿಯ 13:17) ವಿವೇಕದಿಂದ, ದೇವರು ಕ್ರೈಸ್ತ ಮೇಲ್ವಿಚಾರಕರಿಗೆ ಸಭೆಯಲ್ಲಿರುವವರ ಆತ್ಮಿಕಾವಶ್ಯಕತೆಗಳ ಜಾಗ್ರತೆ ವಹಿಸುವ ಜವಾಬ್ದಾರಿಯನ್ನು ಒಪ್ಪಿಸಿದ್ದಾನೆ. ಈ ಹಿರಿಯರು ಒಂದು ಪುರೋಹಿತ ವರ್ಗವನ್ನು ಸಂಯೋಜಿಸುವುದಿಲ್ಲ. ಅವರು ನಮ್ಮ ಗುರುವಾದ ಯೇಸು ಕ್ರಿಸ್ತನು ಮಾಡಿದ ಹಾಗೆಯೇ ತಮ್ಮ ಜೊತೆ ಆರಾಧಕರ ಆವಶ್ಯಕತೆಗಳ ಶುಶ್ರೂಷೆ ಮಾಡುತ್ತಿರುವ ದೇವರ ಸೇವಕರು ಮತ್ತು ದಾಸರಾಗಿದ್ದಾರೆ. (ಯೋಹಾನ 10:14, 15) ಶಾಸ್ತ್ರೀಯವಾಗಿ ಯೋಗ್ಯತೆ ಪಡೆದಿರುವ ಪುರುಷರು ನಮ್ಮ ಪ್ರಗತಿ ಮತ್ತು ಆತ್ಮಿಕ ಬೆಳವಣಿಗೆಯಲ್ಲಿ ಆಸಕ್ತಿಯನ್ನು ತೆಗೆದುಕೊಳ್ಳುತ್ತಾರೆಂದು ತಿಳಿಯುವುದು ನಾವು ಸಹಕಾರ ಮತ್ತು ಅಧೀನತೆಯನ್ನು ತೋರಿಸುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತದೆ.—1 ಕೊರಿಂಥ 16:16.
21. ನೇಮಿತ ಹಿರಿಯರು ಜೊತೆ ಕ್ರೈಸ್ತರಿಗೆ ಹೇಗೆ ಆತ್ಮಿಕವಾಗಿ ಸಹಾಯಿಸಲು ಪ್ರಯತ್ನಿಸುತ್ತಾರೆ?
21 ಆಗಾಗ, ಕುರಿಗಳು ದಾರಿತಪ್ಪಬಹುದು ಅಥವಾ ಹಾನಿಕರವಾದ ಲೌಕಿಕ ಸಂಗತಿಗಳಿಂದ ಅಪಾಯಕ್ಕೊಳಗಾಗಬಹುದು. ಮುಖ್ಯ ಕುರುಬನ ನಾಯಕತ್ವದಲ್ಲಿ, ಹಿರಿಯರು ಉಪಕುರುಬರಂತೆ ತಮ್ಮ ವಶದಲ್ಲಿರುವವರ ಆವಶ್ಯಕತೆಗಳ ಕಡೆಗೆ ಎಚ್ಚರದಿಂದಿದ್ದು ಅವರಿಗೆ ಶ್ರದ್ಧಾಪೂರ್ವಕವಾಗಿ ವ್ಯಕ್ತಿಪರವಾದ ಗಮನವನ್ನು ಕೊಡುತ್ತಾರೆ. (1 ಪೇತ್ರ 5:4) ಅವರು ಸಭೆಯ ಸದಸ್ಯರನ್ನು ಭೇಟಿಮಾಡಿ ಪ್ರೋತ್ಸಾಹದ ಮಾತುಗಳನ್ನು ನೀಡುತ್ತಾರೆ. ಪಿಶಾಚನು ದೇವಜನರ ಶಾಂತಿಭಂಗಮಾಡಲು ಪ್ರಯತ್ನಿಸುತ್ತಾನೆಂದು ತಿಳಿದವರಾಗಿ, ಹಿರಿಯರು ಯಾವುದೇ ಸಮಸ್ಯೆಗಳನ್ನು ನಿಭಾಯಿಸುವುದರಲ್ಲಿ ಮೇಲಣಿಂದ ಬರುವ ವಿವೇಕವನ್ನು ಪ್ರಯೋಗಿಸುತ್ತಾರೆ. (ಯಾಕೋಬ 3:17, 18) ಯಾವುದಕ್ಕಾಗಿ ಯೇಸು ತಾನೇ ಪ್ರಾರ್ಥಿಸಿದನೊ ಆ ಐಕ್ಯ ಮತ್ತು ನಂಬಿಕೆಯ ಏಕತೆಯನ್ನು ಕಾಪಾಡಲು ಅವರು ಕಠಿನವಾಗಿ ಕೆಲಸಮಾಡುತ್ತಾರೆ.—ಯೋಹಾನ 17:20-22; 1 ಕೊರಿಂಥ 1:10.
22. ತಪ್ಪುಮಾಡುವಿಕೆಯ ಸಂದರ್ಭಗಳಲ್ಲಿ ಹಿರಿಯರು ಯಾವ ಸಹಾಯವನ್ನು ಒದಗಿಸುತ್ತಾರೆ?
22 ಒಬ್ಬ ಕ್ರೈಸ್ತನು ಅಲ್ಪ ಕೆಡುಕನ್ನು ಅನುಭವಿಸುವಲ್ಲಿ ಅಥವಾ ಒಂದು ಪಾಪಮಾಡಿರುವ ಕಾರಣ ನಿರುತ್ತೇಜಿತನಾಗಿರುವಲ್ಲಿ ಏನು? ಬೈಬಲಿನ ಸಂತೈಸುವ ಸಲಹೆ ಮತ್ತು ಅವನ ಪರವಾಗಿ ಹಿರಿಯರುಗಳ ಹೃತ್ಪೂರ್ವಕವಾದ ಪ್ರಾರ್ಥನೆಗಳು ಅವನನ್ನು ಆತ್ಮಿಕಾರೋಗ್ಯಕ್ಕೆ ಪುನಸ್ಸ್ಥಾಪಿಸಲು ನೆರವಾಗಬಲ್ಲವು. (ಯಾಕೋಬ 5:13-15) ಪವಿತ್ರಾತ್ಮದಿಂದ ನೇಮಕಗೊಂಡಿರುವ ಈ ಪುರುಷರಿಗೆ, ಶಿಸ್ತನ್ನು ಜಾರಿಗೆ ತರುವ ಮತ್ತು ತಪ್ಪಿನ ಮಾರ್ಗವನ್ನು ಬೆನ್ನಟ್ಟುವ ಅಥವಾ ಸಭೆಯ ಆತ್ಮಿಕ ಮತ್ತು ನೈತಿಕ ಶುದ್ಧತೆಗೆ ಅಪಾಯವನ್ನುಂಟುಮಾಡುವವರಿಗೆ ಗದರಿಸುವ ಅಧಿಕಾರವೂ ಇದೆ. (ಅ. ಕೃತ್ಯಗಳು 20:28; ತೀತ 1:9; 2:15) ಸಭೆಯನ್ನು ಶುದ್ಧವಾಗಿರಿಸಲಿಕ್ಕಾಗಿ, ಪ್ರತಿಯೊಬ್ಬರೂ ಘೋರ ತಪ್ಪುಗಳನ್ನು ವರದಿಮಾಡಬೇಕಾಗಿ ಬಂದೀತು. (ಯಾಜಕಕಾಂಡ 5:1) ಘೋರ ತಪ್ಪನ್ನು ಮಾಡಿರುವ ಒಬ್ಬ ಕ್ರೈಸ್ತನು ಶಾಸ್ತ್ರೀಯ ಶಿಸ್ತು ಮತ್ತು ಗದರಿಸುವಿಕೆಯನ್ನು ಅಂಗೀಕರಿಸಿ ನೈಜ ಪಶ್ಚಾತ್ತಾಪದ ರುಜುವಾತನ್ನು ಕೊಡುವಲ್ಲಿ, ಅವನು ಸಹಾಯಿಸಲ್ಪಡುವನು. ದೇವರ ನಿಯಮವನ್ನು ಪಟ್ಟು ಹಿಡಿದು ಮತ್ತು ಪಶ್ಚಾತ್ತಾಪವಿಲ್ಲದೆ ಉಲ್ಲಂಘಿಸುವವರು ಬಹಿಷ್ಕಾರ ಮಾಡಲ್ಪಡುವುದು ಸಹಜ.—1 ಕೊರಿಂಥ 5:9-13.
23. ಸಭೆಯ ಒಳಿತಿಗಾಗಿ ಕ್ರೈಸ್ತ ಮೇಲ್ವಿಚಾರಕರು ಏನನ್ನು ಒದಗಿಸುತ್ತಾರೆ?
23 ಅರಸನಾಗಿರುವ ಯೇಸು ಕ್ರಿಸ್ತನ ಕೈಕೆಳಗೆ ಆತ್ಮಿಕವಾಗಿ ಪಕ್ವತೆಯುಳ್ಳ ಪುರುಷರು ದೇವಜನರಿಗೆ ದುಃಖಶಮನ, ಸಂರಕ್ಷಣೆಯನ್ನು ಮತ್ತು ಚೈತನ್ಯವನ್ನು ಒದಗಿಸಲು ನೇಮಿಸಲ್ಪಡುವರೆಂದು ಬೈಬಲು ಮುಂತಿಳಿಸಿದೆ. (ಯೆಶಾಯ 32:1, 2) ಆತ್ಮಿಕ ಬೆಳವಣಿಗೆಯನ್ನು ಪ್ರವರ್ಧಿಸಲಿಕ್ಕಾಗಿ, ಅವರು ಸೌವಾರ್ತಿಕರು, ಕುರುಬರು ಮತ್ತು ಬೋಧಕರಾಗಿ ನಾಯಕತ್ವ ವಹಿಸುವರು. (ಎಫೆಸ 4:11, 12, 16) ಕ್ರೈಸ್ತ ಮೇಲ್ವಿಚಾರಕರು ಆಗಾಗ ಜೊತೆ ವಿಶ್ವಾಸಿಗಳಿಗೆ ತಪ್ಪು ಮನಗಾಣಿಸಿ, ಖಂಡಿಸಿ, ಬುದ್ಧಿ ಹೇಳಿದರೂ, ಹಿರಿಯರುಗಳ ದೇವರ ವಾಕ್ಯದ ಮೇಲೆ ಆಧರಿತವಾದ ಆರೋಗ್ಯಕರವಾದ ಬೋಧನೆಯ ಅನ್ವಯವು, ಎಲ್ಲರನ್ನು ಜೀವದ ದಾರಿಯಲ್ಲಿಡಲು ಸಹಾಯ ಮಾಡುತ್ತದೆ.—ಜ್ಞಾನೋಕ್ತಿ 3:11, 12; 6:23; ತೀತ 2:1.
ಅಧಿಕಾರದ ಕುರಿತ ಯೆಹೋವನ ನೋಟವನ್ನು ಅಂಗೀಕರಿಸಿರಿ
24. ಯಾವ ವಿವಾದಾಂಶದ ಮೇಲೆ ನಾವು ದಿನಾಲೂ ಪರೀಕ್ಷಿಸಲ್ಪಡುತ್ತೇವೆ?
24 ಪ್ರಥಮ ಪುರುಷ ಮತ್ತು ಸ್ತ್ರೀ, ಅಧಿಕಾರಕ್ಕೆ ಅಧೀನತೆಯ ವಿವಾದಾಂಶದ ಮೇಲೆ ಪರೀಕ್ಷೆಗೊಳಗಾದರು. ಸಮಾನವಾದ ಪರೀಕ್ಷೆಯು ಪ್ರತಿದಿನ ನಮ್ಮನ್ನು ಎದುರಿಸುವುದರಲ್ಲಿ ಆಶ್ಚರ್ಯವಿಲ್ಲ. ಪಿಶಾಚನಾದ ಸೈತಾನನು ಮಾನವ ಕುಲದಲ್ಲಿ ಒಂದು ದಂಗೆಯ ಆತ್ಮವನ್ನು ಪ್ರವರ್ಧಿಸಿದ್ದಾನೆ. (ಎಫೆಸ 2:2) ಸ್ವಾತಂತ್ರ್ಯದ ದಾರಿಯು ಅಧೀನತೆಯದ್ದಕ್ಕಿಂತ ಆಕರ್ಷಣೀಯವಾಗಿ ಶ್ರೇಷ್ಠವಾಗಿ ಕಾಣುವಂತೆ ಮಾಡಲ್ಪಡುತ್ತದೆ.
25. ಲೋಕದ ದಂಗೆಯ ಆತ್ಮವನ್ನು ತಳ್ಳಿಹಾಕುವುದರ ಮತ್ತು ದೇವರು ನಿರ್ವಹಿಸುವ ಅಥವಾ ಅನುಮತಿಸುವ ಅಧಿಕಾರಕ್ಕೆ ಅಧೀನರಾಗಿರುವುದರ ಪ್ರಯೋಜನಗಳೇನು?
25 ಆದರೂ ನಾವು ಲೋಕದ ದಂಗೆಯ ಆತ್ಮವನ್ನು ತಳ್ಳಿಹಾಕಬೇಕು. ಹಾಗೆ ಮಾಡುವುದರಲ್ಲಿ, ದೈವಭಕ್ತಿಯ ಅಧೀನತೆಯು ಸಮೃದ್ಧವಾದ ಪ್ರತಿಫಲಗಳನ್ನು ತರುತ್ತದೆಂದು ನಾವು ಕಂಡುಕೊಳ್ಳುವೆವು. ಉದಾಹರಣೆಗೆ, ಐಹಿಕ ಅಧಿಕಾರಿಗಳೊಂದಿಗೆ ಕಿರುಕುಳವನ್ನು ಹುಡುಕುತ್ತಿರುವವರಿಗೆ ಸಾಮಾನ್ಯವಾಗಿರುವ ವ್ಯಾಕುಲ ಮತ್ತು ಹತಾಶೆಗಳನ್ನು ನಾವು ವರ್ಜಿಸುವೆವು. ಅನೇಕ ಕುಟುಂಬಗಳಲ್ಲಿ ಅಸ್ತಿತ್ವದಲ್ಲಿರುವ ಘರ್ಷಣೆಗಳನ್ನು ನಾವು ಕಡಮೆ ಮಾಡುವೆವು. ಮತ್ತು ನಮ್ಮ ಕ್ರೈಸ್ತ ಜೊತೆ ವಿಶ್ವಾಸಿಗಳ ಹೃದಯೋಲ್ಲಾಸದ, ಪ್ರೀತಿಕರವಾದ ಒಡನಾಟದ ಪ್ರಯೋಜನಗಳನ್ನು ನಾವು ಅನುಭವಿಸುವೆವು. ಎಲ್ಲದಕ್ಕಿಂತ ಅಧಿಕವಾಗಿ, ನಮ್ಮ ದೈವಭಕ್ತಿಯ ಅಧೀನತೆಯು ಪರಮಾಧಿಕಾರಿಯಾಗಿರುವ ಯೆಹೋವನೊಂದಿಗೆ ಒಂದು ಉತ್ತಮ ಸಂಬಂಧವನ್ನು ಫಲಿಸುವುದು.
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
ಯೆಹೋವನು ತನ್ನ ಅಧಿಕಾರವನ್ನು ಹೇಗೆ ನಿರ್ವಹಿಸುತ್ತಾನೆ?
“ಮೇಲಧಿಕಾರಿಗಳು” ಯಾರು, ಮತ್ತು ನಾವು ಅವರಿಗೆ ಅಧೀನತೆಯಿಂದಿರುವುದು ಹೇಗೆ?
ಶಿರಸ್ಸುತನದ ಮೂಲಸೂತ್ರವು ಕುಟುಂಬದ ಪ್ರತಿ ಸದಸ್ಯನ ಮೇಲೆ ಯಾವ ಜವಾಬ್ದಾರಿಯನ್ನು ಹಾಕುತ್ತದೆ?
ನಾವು ಕ್ರೈಸ್ತ ಸಭೆಯಲ್ಲಿ ಅಧೀನತೆಯನ್ನು ಹೇಗೆ ತೋರಿಸಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
[ಪುಟ 134ರಲ್ಲಿರುವ ಚೌಕ]
ಅಧೀನರು, ಉರುಳಿಸುವವರಲ್ಲ
ತಮ್ಮ ಸಾರ್ವಜನಿಕ ಸಾರುವ ಚಟುವಟಿಕೆಯ ಮೂಲಕ ಯೆಹೋವನ ಸಾಕ್ಷಿಗಳು, ನಿಜ ಶಾಂತಿ ಮತ್ತು ಭದ್ರತೆಗೆ ದೇವರ ರಾಜ್ಯವು ಮಾನವ ಕುಲಕ್ಕಿರುವ ಏಕಮಾತ್ರ ನಿರೀಕ್ಷೆಯೆಂದು ಕೈತೋರಿಸುತ್ತಾರೆ. ಆದರೆ ದೇವರ ರಾಜ್ಯದ ಈ ಹುರುಪಿನ ಘೋಷಕರು ತಾವು ಯಾವ ಸರಕಾರಗಳಡಿ ಜೀವಿಸುತ್ತಾರೊ ಅವುಗಳನ್ನು ಎಂದಿಗೂ ಉರುಳಿಸುವವರಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಸಾಕ್ಷಿಗಳು ಅತಿ ಗೌರವಪೂರ್ಣ ಮತ್ತು ನಿಯಮಪಾಲಕ ಪೌರರಲ್ಲಿ ಸೇರಿದವರಾಗಿದ್ದಾರೆ. ಆಫ್ರಿಕದ ಒಂದು ದೇಶದ ಅಧಿಕಾರಿಯೊಬ್ಬನು ಹೇಳಿದ್ದು: “ಎಲ್ಲ ಧಾರ್ಮಿಕ ಪಂಗಡಗಳು ಯೆಹೋವನ ಸಾಕ್ಷಿಗಳಂತಿದ್ದರೆ, ನಮ್ಮಲ್ಲಿ ಯಾವುದೇ ಕೊಲೆಗಳು, ಕನ್ನಗಳ್ಳತನಗಳು, ದುಷ್ಕಾರ್ಯಗಳು, ಕೈದಿಗಳು ಮತ್ತು ಪರಮಾಣು ಬಾಂಬುಗಳು ಇರುತ್ತಿದ್ದಿಲ್ಲ. ಬಾಗಿಲುಗಳಿಗೆ ದಿನೇದಿನೇ ಬೀಗಹಾಕಲಿಕ್ಕಿರುತ್ತಿರಲಿಲ್ಲ.”
ಇದನ್ನು ಒಪ್ಪಿಕೊಳ್ಳುತ್ತಾ, ಅನೇಕ ದೇಶಗಳಲ್ಲಿ ಅಧಿಕಾರಿಗಳು ಸಾಕ್ಷಿಗಳ ಸಾರುವ ಕಾರ್ಯವು ತಡೆಯಿಲ್ಲದೆ ಮುಂದುವರಿಯುವಂತೆ ಅನುಮತಿಸಿದ್ದಾರೆ. ಇತರ ದೇಶಗಳಲ್ಲಿ, ಯೆಹೋವನ ಸಾಕ್ಷಿಗಳು ಹಿತಕರವಾಗಿ ಪ್ರಭಾವಿಸುವವರು ಎಂದು ಅಧಿಕಾರಿಗಳು ಗ್ರಹಿಸಿದಾಗ, ನಿಷೇಧಗಳು ಅಥವಾ ನಿರ್ಬಂಧಗಳು ಎತ್ತಲ್ಪಟ್ಟಿವೆ. ಮೇಲಧಿಕಾರಿಗಳಿಗೆ ವಿಧೇಯರಾಗುವ ಕುರಿತು ಅಪೊಸ್ತಲ ಪೌಲನು ಬರೆದಂತೆಯೇ ಇದು ಇದೆ: “ಒಳಿತನ್ನು ಮಾಡುತ್ತಾ ಹೋಗಿರಿ, ಮತ್ತು ನೀವು ಅದರಿಂದ ಶ್ಲಾಘನೆಯನ್ನು ಹೊಂದುವಿರಿ.”—ರೋಮಾಪುರ 13:1, 3, NW.