ಮಾನವ ಕುಲವನ್ನು ರಕ್ಷಿಸಲು ದೇವರು ಮಾಡಿರುವ ಸಂಗತಿ
ಅಧ್ಯಾಯ 7
ಮಾನವ ಕುಲವನ್ನು ರಕ್ಷಿಸಲು ದೇವರು ಮಾಡಿರುವ ಸಂಗತಿ
1, 2. (ಎ) ದೇವಕುಮಾರನು ಯಾರೆಂಬುದನ್ನು ಒಬ್ಬ ರೋಮನ್ ಶತಾಧಿಪತಿಯು ಹೇಗೆ ಗಣ್ಯಮಾಡುವಂತಾಯಿತು? (ಬಿ) ಯೇಸುವು ಸಾಯುವಂತೆ ಯೆಹೋವನು ಏಕೆ ಬಿಟ್ಟನು?
ವಸಂತ ಕಾಲದ ಒಂದು ಮಧ್ಯಾಹ್ನ, ಸುಮಾರು 2,000 ವರ್ಷಗಳ ಹಿಂದೆ, ಒಬ್ಬ ರೋಮನ್ ಶತಾಧಿಪತಿಯು ಮೂವರು ಪುರುಷರು ನಿಧಾನವಾದ, ಯಾತನಾಮಯ ಮರಣವನ್ನು ಪಡೆಯುತ್ತಿದ್ದಾಗ ನೋಡಿದನು. ಆ ಸೈನಿಕನು ಪ್ರತ್ಯೇಕವಾಗಿ ಅವರಲ್ಲಿ ಒಬ್ಬನನ್ನು—ಯೇಸು ಕ್ರಿಸ್ತನನ್ನು—ಗಮನಿಸಿದನು. ಯೇಸುವನ್ನು ಒಂದು ಮರದ ಕಂಬಕ್ಕೆ ಜಡಿಯಲಾಗಿತ್ತು. ಅವನ ಸಾವಿನ ಕ್ಷಣ ಸಮೀಪಿಸಿದಂತೆ, ಮಧ್ಯಾಹ್ನದ ಆಕಾಶದಲ್ಲಿ ಕತ್ತಲು ಕವಿಯಿತು. ಅವನು ಸತ್ತಾಗ, ಭೂಮಿ ಬಿರುಸಾಗಿ ಕಂಪಿಸಿತು, ಮತ್ತು, “ನಿಜವಾಗಿ ಈ ಮನುಷ್ಯನು ದೇವಕುಮಾರನಾಗಿದ್ದನು,” ಎಂದು ಆ ಸೈನಿಕನು ಉದ್ಗರಿಸಿದನು.—ಮಾರ್ಕ 15:39.
2 ದೇವರ ಕುಮಾರನು! ಆ ಸೈನಿಕನು ಸತ್ಯ ಹೇಳಿದನು. ಭೂಮಿಯ ಮೇಲೆ ಎಂದಿಗೂ ಸಂಭವಿಸಿರುವ ಅತಿ ಪ್ರಾಮುಖ್ಯ ಘಟನೆಗೆ ಆಗ ತಾನೆ ಅವನು ಸಾಕ್ಷಿಯಾಗಿದ್ದನು. ಹಿಂದಿನ ಸಂದರ್ಭಗಳಲ್ಲಿ, ದೇವರು ತಾನೆ ಯೇಸುವನ್ನು ತನ್ನ ಪ್ರಿಯ ಮಗನೆಂದು ಕರೆದಿದ್ದನು. (ಮತ್ತಾಯ 3:17; 17:5) ತನ್ನ ಕುಮಾರನು ಸಾಯುವಂತೆ ಯೆಹೋವನು ಏಕೆ ಬಿಟ್ಟಿದ್ದನು? ಏಕೆಂದರೆ ಮಾನವ ಕುಲವನ್ನು ಪಾಪ ಮತ್ತು ಮರಣದಿಂದ ರಕ್ಷಿಸುವ ದೇವರ ಸಾಧನ ಇದಾಗಿತ್ತು.
ಒಂದು ವಿಶೇಷ ಉದ್ದೇಶಕ್ಕಾಗಿ ಆರಿಸಲ್ಪಟ್ಟವನು
3. ಮಾನವ ಕುಲದ ಸಂಬಂಧದಲ್ಲಿದ್ದ ವಿಶೇಷ ಉದ್ದೇಶಕ್ಕಾಗಿ ದೇವರ ಏಕಜಾತ ಪುತ್ರನು ಆರಿಸಲ್ಪಟ್ಟದ್ದು ಏಕೆ ಸೂಕ್ತವಾಗಿತ್ತು?
3 ನಾವು ಈ ಪುಸ್ತಕದಲ್ಲಿ ಹಿಂದೆ ಕಲಿತಿರುವಂತೆ, ಯೇಸುವಿಗೆ ಮಾನವ ಪೂರ್ವದ ಅಸ್ತಿತ್ವವೊಂದಿತ್ತು. ಯೆಹೋವನು ಅವನನ್ನು ನೇರವಾಗಿ ಸೃಷ್ಟಿಸಿದ್ದರಿಂದ, ಅವನನ್ನು ದೇವರ “ಒಬ್ಬನೇ [“ಏಕಜಾತ,” NW] ಮಗ” ನೆಂದು ಕರೆಯಲಾಗುತ್ತದೆ. ಆ ಬಳಿಕ ಇತರ ಎಲ್ಲ ವಸ್ತುಗಳನ್ನು ಅಸ್ತಿತ್ವಕ್ಕೆ ತರಲು ದೇವರು ಯೇಸುವನ್ನು ಉಪಯೋಗಿಸಿದನು. (ಯೋಹಾನ 3:18; ಕೊಲೊಸ್ಸೆ 1:16) ಯೇಸುವು ವಿಶೇಷವಾಗಿ ಮಾನವ ಕುಲದಲ್ಲಿ ಮಮತೆಯುಳ್ಳವನಾಗಿದ್ದನು. (ಜ್ಞಾನೋಕ್ತಿ 8:30, 31) ಮಾನವ ಕುಲವು ಮರಣಶಿಕ್ಷೆಯೊಳಗೆ ಬಂದಾಗ, ತನ್ನ ಏಕಜಾತ ಪುತ್ರನು ಒಂದು ವಿಶೇಷ ಉದ್ದೇಶವನ್ನು ಪೂರೈಸುವಂತೆ ಯೆಹೋವನು ಆರಿಸಿದ್ದು ಆಶ್ಚರ್ಯವಲ್ಲ!
4, 5. ಯೇಸುವು ಭೂಮಿಗೆ ಬರುವ ಮೊದಲು, ಮೆಸ್ಸೀಯ ಸಂಬಂಧಿತ ಸಂತಾನದ ಕುರಿತು ಬೈಬಲು ಏನು ಪ್ರಕಟಿಸಿತು?
4 ಏದೆನ್ ತೋಟದಲ್ಲಿ ಆದಾಮ, ಹವ್ವ ಮತ್ತು ಸೈತಾನನಿಗೆ ಶಿಕ್ಷೆ ವಿಧಿಸಿದಾಗ, ದೇವರು ಈ ಭಾವೀ ರಕ್ಷಕನ ವಿಷಯದಲ್ಲಿ ಅವನು ಒಂದು “ಸಂತಾನ” ವೆಂದು ಮಾತಾಡಿದನು. ಈ ಸಂತಾನ ಅಥವಾ ಸಂತತಿಯು, “ಪುರಾತನ ಸರ್ಪ” ವಾದ ಪಿಶಾಚನಾದ ಸೈತಾನನು ತಂದಿದ್ದ ಭಯಂಕರ ಅನಿಷ್ಟಗಳನ್ನು ರದ್ದುಗೊಳಿಸಲು ಬರಲಿದ್ದನು. ವಾಸ್ತವವೇನಂದರೆ, ಆ ವಾಗ್ದಾನಿತ ಸಂತಾನವು ಸೈತಾನನನ್ನೂ ಅವನನ್ನು ಹಿಂಬಾಲಿಸಿದವರೆಲ್ಲರನ್ನೂ ಜಜ್ಜುವನು.—ಆದಿಕಾಂಡ 3:15; 1 ಯೋಹಾನ 3:8; ಪ್ರಕಟನೆ 12:9.
5 ಶತಮಾನಗಳು ಕಳೆದಂತೆ, ದೇವರು ಕ್ರಮೇಣ, ಮೆಸ್ಸೀಯ ಎಂದೂ ಕರೆಯಲ್ಪಟ್ಟ ಆ ಸಂತಾನದ ಕುರಿತು ಹೆಚ್ಚನ್ನು ಪ್ರಕಟಿಸಿದನು. 37 ನೆಯ ಪುಟದ ತಖ್ತೆಯಲ್ಲಿ ತೋರಿಸಿರುವ ಪ್ರಕಾರ, ಹತ್ತಾರು ಪ್ರವಾದನೆಗಳು ಭೂಮಿಯಲ್ಲಿ ಅವನ ಜೀವಿತದ ಅನೇಕಾಂಶಗಳ ಕುರಿತು ವಿವರಗಳನ್ನು ಕೊಟ್ಟವು. ಉದಾಹರಣೆಗೆ, ದೇವರ ಉದ್ದೇಶದಲ್ಲಿ ತನ್ನ ಪಾತ್ರವನ್ನು ನೆರವೇರಿಸಲಿಕ್ಕಾಗಿ, ಅವನು ಭಯಂಕರ ಪೀಡನೆಯನ್ನು ತಾಳಿಕೊಳ್ಳಲಿಕ್ಕಿತ್ತು.—ಯೆಶಾಯ 53:3-5.
ಮೆಸ್ಸೀಯನು ಸಾಯಲಿದ್ದ ಕಾರಣ
6. ದಾನಿಯೇಲ 9:24-26 ಕ್ಕನುಸಾರ, ಮೆಸ್ಸೀಯನು ಏನನ್ನು ನೆರವೇರಿಸಲಿದ್ದನು, ಮತ್ತು ಹೇಗೆ?
6 ದಾನಿಯೇಲ 9:24-26 ರಲ್ಲಿ ದಾಖಲೆಯಾಗಿರುವ ಪ್ರವಾದನೆಯು, ಮೆಸ್ಸೀಯನು—ದೇವರ ಅಭಿಷಿಕ್ತನು—ಒಂದು ಮಹಾ ಉದ್ದೇಶವನ್ನು ನೆರವೇರಿಸುವನೆಂದು ಮುಂತಿಳಿಸಿತು. ಅವನು ಭೂಮಿಗೆ, ಸದಾಕಾಲಕ್ಕಾಗಿ ‘ಅಧರ್ಮವನ್ನು ಕೊನೆಗಾಣಿಸಿ, ಪಾಪಗಳನ್ನು ತೀರಿಸಿ, ಅಪರಾಧವನ್ನು ನಿವಾರಿಸಿ, ಸನಾತನಧರ್ಮವನ್ನು ಸ್ಥಾಪಿಸಲು’ ಬರಲಿದ್ದನು. ಮೆಸ್ಸೀಯನು ನಂಬಿಗಸ್ತ ಮಾನವ ಕುಲದಿಂದ ಮರಣದ ಶಾಪವನ್ನು ತೆಗೆದುಬಿಡುವನು. ಆದರೆ ಇದನ್ನು ಅವನು ಹೇಗೆ ಮಾಡುವನು? ಅವನು “ಛೇದಿಸಲ್ಪಡುವನು,” ಅಥವಾ ಕೊಲ್ಲಲ್ಪಡುವನು ಎಂದು ಪ್ರವಾದನೆಯು ವಿವರಿಸುತ್ತದೆ.
7. ಯೆಹೂದ್ಯರು ಪ್ರಾಣಿ ಯಜ್ಞಗಳನ್ನು ಅರ್ಪಿಸಿದ್ದೇಕೆ, ಮತ್ತು ಇವು ಏನನ್ನು ಮುನ್ಸೂಚಿಸಿದವು?
7 ಪೂರ್ವಕಾಲದ ಇಸ್ರಾಯೇಲ್ಯರಿಗೆ, ತಪ್ಪಿಗಾಗಿ ಮಾಡುವ ಪ್ರಾಯಶ್ಚಿತ್ತದ ವಿಚಾರದ ಪರಿಚಯವಿತ್ತು. ದೇವರು ಮೋಶೆಯ ಮೂಲಕ ಕೊಟ್ಟ ಧರ್ಮಶಾಸ್ತ್ರದ ಕೆಳಗಿನ ಅವರ ಆರಾಧನೆಯಲ್ಲಿ, ಅವರು ಪ್ರಾಣಿ ಯಜ್ಞಗಳನ್ನು ಕ್ರಮವಾಗಿ ಅರ್ಪಿಸಿದರು. ಇದು ಇಸ್ರಾಯೇಲ್ಯ ಜನರಿಗೆ, ಅವರ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಲು, ಅಥವಾ ಮುಚ್ಚಲು ಮಾನವರಿಗೆ ಏನೋ ಬೇಕಾಗಿತ್ತು ಎಂಬುದನ್ನು ನೆನಪು ಹುಟ್ಟಿಸಿತು. ಅಪೊಸ್ತಲ ಪೌಲನು ಆ ಮೂಲತತ್ವವನ್ನು ಈ ರೀತಿ ಸಾರಾಂಶಿಸಿದನು: “ರಕ್ತಧಾರೆಯಿಲ್ಲದೆ ಪಾಪಪರಿಹಾರ ಉಂಟಾಗುವದಿಲ್ಲ.” (ಇಬ್ರಿಯ 9:22) ಕ್ರೈಸ್ತರು ಯಜ್ಞಗಳಂತಹ ಆವಶ್ಯಕತೆಗಳಿದ್ದ ಮೋಶೆಯ ಧರ್ಮಶಾಸ್ತ್ರದ ಕೆಳಗಿಲ್ಲ. (ರೋಮಾಪುರ 10:4; ಕೊಲೊಸ್ಸೆ 2:16, 17) ಪ್ರಾಣಿಯಜ್ಞಗಳು ಪಾಪಗಳ ಕಾಯಂ ಮತ್ತು ಪೂರ್ಣ ಕ್ಷಮಾಪಣೆಯನ್ನು ಒದಗಿಸಸಾಧ್ಯವಿಲ್ಲವೆಂದೂ ಅವರಿಗೆ ಗೊತ್ತು. ಬದಲಾಗಿ, ಈ ಯಜ್ಞಾತ್ಮಕ ಅರ್ಪಣೆಗಳು ಎಷ್ಟೋ ಹೆಚ್ಚು ಬೆಲೆಬಾಳುವ ಯಜ್ಞವನ್ನು—ಮೆಸ್ಸೀಯನ, ಅಥವಾ ಕ್ರಿಸ್ತನ ಯಜ್ಞವನ್ನು—ಮುನ್ಸೂಚಿಸಿದವು. (ಇಬ್ರಿಯ 10:4, 10; ಹೋಲಿಸಿ ಗಲಾತ್ಯ 3:24.) ಆದರೂ, ‘ಮೆಸ್ಸೀಯನಿಗೆ ಸಾಯುವುದು ನಿಜವಾಗಿ ಅವಶ್ಯವಾಗಿತ್ತೊ?’ ಎಂದು ನೀವು ಕೇಳೀರಿ.
8, 9. ಆದಾಮ, ಹವ್ವರು ಯಾವ ಅಮೂಲ್ಯ ವಿಷಯಗಳನ್ನು ಕಳೆದುಕೊಂಡರು, ಮತ್ತು ಅವರ ಕ್ರಿಯೆಗಳು ಅವರ ಸಂತತಿಯವರ ಮೇಲೆ ಹೇಗೆ ಪ್ರಭಾವ ಬೀರಿದವು?
8 ಹೌದು, ಮಾನವ ಕುಲವು ರಕ್ಷಿಸಲ್ಪಡಬೇಕಾಗಿದ್ದರೆ ಮೆಸ್ಸೀಯನು ಸಾಯಲೇ ಬೇಕಾಗಿತ್ತು. ಏಕೆಂದು ಅರ್ಥಮಾಡಿಕೊಳ್ಳಲು, ನಾವು ಏದೆನ್ ತೋಟವನ್ನು ಜ್ಞಾಪಿಸಿ, ಆದಾಮ, ಹವ್ವರು ದೇವರ ವಿರುದ್ಧ ದಂಗೆಯೆದ್ದಾಗ ಅವರು ಏನು ಕಳೆದುಕೊಂಡರೋ ಅದರ ವೈಪರೀತ್ಯವನ್ನು ಗ್ರಹಿಸಲು ಪ್ರಯತ್ನಿಸತಕ್ಕದ್ದು. ಅವರ ಮುಂದೆ ನಿತ್ಯಜೀವವನ್ನು ಇಡಲಾಗಿತ್ತು! ದೇವರ ಮಕ್ಕಳೋಪಾದಿ, ಅವರು ದೇವರೊಂದಿಗೆ ನೇರವಾದ ಸಂಬಂಧವನ್ನು ಸಹ ಅನುಭವಿಸಿದರು. ಆದರೆ ಅವರು ದೇವರ ಆಳಿಕೆಯನ್ನು ತಿರಸ್ಕರಿಸಿದಾಗ, ಅವರು ಅದೆಲ್ಲವನ್ನು ಕಳೆದುಕೊಂಡು ಮಾನವ ಕುಲದ ಮೇಲೆ ಪಾಪ ಮತ್ತು ಮರಣವನ್ನು ತಂದರು.—ರೋಮಾಪುರ 5:12.
9 ಇದು, ನಮ್ಮ ಪ್ರಥಮ ಪಿತೃಗಳು ಒಂದು ಭಾರೀ ಐಶ್ವರ್ಯವನ್ನು ದುಂದುವೆಚ್ಚಮಾಡಿ, ತಾವು ಒಂದು ಸಾಲದ ಗುಂಡಿಯೊಳಗೆ ಧುಮುಕಿದ್ದರೋ ಎಂಬಂತಿತ್ತು. ಆದಾಮ, ಹವ್ವರು ಆ ಸಾಲವನ್ನು ತಮ್ಮ ಸಂತತಿಗೆ ದಾಟಿಸಿದರು. ನಾವು ಪರಿಪೂರ್ಣರಾಗಿ ಮತ್ತು ಪಾಪರಹಿತರಾಗಿ ಹುಟ್ಟದಿದ್ದುದರಿಂದ, ನಮ್ಮಲ್ಲಿ ಪ್ರತಿಯೊಬ್ಬರು ಪಾಪಪೂರ್ಣರೂ ಸಾಯುವವರೂ ಆಗಿದ್ದೇವೆ. ನಾವು ಕಾಯಿಲೆ ಬೀಳುವಾಗ ಅಥವಾ ನೋಯಿಸುವ ಏನನ್ನಾದರೂ ಮಾತಾಡಿ, ಅದನ್ನು ಹಿಂದೆಗೆದುಕೊಳ್ಳಸಾಧ್ಯವಿರುತ್ತಿದ್ದರೆ ಎಂದೆಣಿಸುವಾಗ, ನಾವು ನಮ್ಮ ಬಾಧ್ಯತೆಯಾಗಿ ಬಂದ ಸಾಲದ ಪರಿಣಾಮಗಳನ್ನು—ಮಾನವ ಅಪೂರ್ಣತೆಯನ್ನು—ಅನುಭವಿಸುತ್ತಿದ್ದೇವೆ. (ರೋಮಾಪುರ 7:21-25) ಆದಾಮನು ಕಳೆದುಕೊಂಡದ್ದನ್ನು ಪುನಃ ಪಡೆಯುವುದರಲ್ಲಿ ನಮ್ಮ ಏಕಮಾತ್ರ ನಿರೀಕ್ಷೆಯು ಅಡಗಿರುತ್ತದೆ. ಆದರೂ ನಾವು ಪರಿಪೂರ್ಣ ಮಾನವ ಜೀವವನ್ನು ಗಳಿಸಲಾರೆವು. ಅಪೂರ್ಣ ಮಾನವರೆಲ್ಲರೂ ಪಾಪಮಾಡುವುದರಿಂದ, ನಾವೆಲ್ಲರೂ ಮರಣವನ್ನು—ಜೀವವನ್ನಲ್ಲ—ಸಂಪಾದಿಸುತ್ತೇವೆ.—ರೋಮಾಪುರ 6:23.
10. ಆದಾಮನು ಕಳೆದುಕೊಂಡದ್ದನ್ನು ಹಿಂದೆ ಖರೀದಿಸಲು ಏನು ಬೇಕಾಗಿತ್ತು?
10 ಆದರೂ, ಆದಾಮನು ಕಳೆದುಕೊಂಡ ಜೀವಕ್ಕೆ ಪ್ರತಿಯಾಗಿ ಇನ್ನೇನನ್ನಾದರೂ ಅರ್ಪಿಸುವುದು ಸಾಧ್ಯವೊ? ದೇವರ ನ್ಯಾಯದ ಮಟ್ಟವು ಸಮತೋಲವನ್ನು, “ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು” ಕೇಳಿಕೊಳ್ಳುತ್ತದೆ. (ವಿಮೋಚನಕಾಂಡ 21:23) ಹೀಗೆ, ನಷ್ಟವಾದ ಜೀವಕ್ಕಾಗಿ ತೆರಲು ಒಂದು ಜೀವವನ್ನು ಅರ್ಪಿಸಲೇ ಬೇಕಾಗಿತ್ತು. ಯಾವನೇ ಮಾನವನ ಜೀವವು ಮಾತ್ರವೇ ಸಾಲದು. ಅಪೂರ್ಣ ಮಾನವರ ಕುರಿತು ಕೀರ್ತನೆ 49:7-9 ಹೇಳುವುದು: “ಆದರೆ ಯಾವನಾದರೂ ತನ್ನ ಸಹೋದರನು . . . ಬದುಕಿರುವುದಕ್ಕಾಗಿ ದೇವರಿಗೆ ಈಡನ್ನು ಕೊಟ್ಟು ತನ್ನ ಪ್ರಾಣವನ್ನು ಬಿಡಿಸಲಾರನು. ಮರಣವನ್ನು ತಪ್ಪಿಸಿಕೊಳ್ಳುವದಕ್ಕೆ ಎಷ್ಟು ಹಣಕೊಟ್ಟರೂ ಸಾಲುವದೇ ಇಲ್ಲ; ಅಂಥ ಪ್ರಯತ್ನವನ್ನು ನಿಷ್ಫಲವೆಂದು ಬಿಟ್ಟೇ ಬಿಡಬೇಕು.” ಹಾಗಾದರೆ ಪರಿಸ್ಥಿತಿಯು ಆಶಾರಹಿತವೊ? ಇಲ್ಲ, ನಿಶ್ಚಯ.
11. (ಎ) “ಪ್ರಾಯಶ್ಚಿತ್ತ” ಎಂಬ ಪದವು ಹೀಬ್ರುವಿನಲ್ಲಿ ಏನನ್ನು ಸೂಚಿಸುತ್ತದೆ? (ಬಿ) ಮಾನವ ಕುಲವನ್ನು ಯಾರು ಮಾತ್ರ ವಿಮೋಚಿಸಸಾಧ್ಯವಿತ್ತು, ಮತ್ತು ಏಕೆ?
11 ಹೀಬ್ರು ಭಾಷೆಯಲ್ಲಿ, “ಪ್ರಾಯಶ್ಚಿತ್ತ” ಎಂಬ ಪದವು ಒಬ್ಬ ಬಂದಿಯನ್ನು ವಿಮೋಚಿಸಲು ತೆರುವ ಬೆಲೆಯನ್ನು ಸೂಚಿಸುತ್ತದೆ ಹಾಗೂ ಸಮಾನ ಮೊತ್ತ ವನ್ನು ನಿರ್ದೇಶಿಸುತ್ತದೆ. ಆದಾಮನು ನಷ್ಟಪಟ್ಟದ್ದಕ್ಕೆ ಸಮಾನ ಮೊತ್ತವನ್ನು, ಪರಿಪೂರ್ಣ ಮಾನವ ಜೀವವಿರುವ ಒಬ್ಬ ಪುರುಷನು ಮಾತ್ರ ನೀಡಸಾಧ್ಯವಿತ್ತು. ಆದಾಮನ ಬಳಿಕ ಭೂಮಿಯ ಮೇಲೆ ಹುಟ್ಟಿದ ಏಕಮಾತ್ರ ಪರಿಪೂರ್ಣ ಪುರುಷನು ಯೇಸು ಕ್ರಿಸ್ತನಾಗಿದ್ದನು. ಆದಕಾರಣ, ಬೈಬಲು ಯೇಸುವನ್ನು, “ಕಡೇ ಆದಾಮನು” ಎಂದು ಕರೆದು, ಕ್ರಿಸ್ತನು “ಎಲ್ಲರ ವಿಮೋಚನಾರ್ಥವಾಗಿ [“ಅನುರೂಪವಾದ ಪ್ರಾಯಶ್ಚಿತ್ತ,” NW] ತನ್ನನ್ನು ಒಪ್ಪಿಸಿಕೊಟ್ಟನು” ಎಂದು ನಮಗೆ ಆಶ್ವಾಸನೆಯನ್ನೀಯುತ್ತದೆ. (1 ಕೊರಿಂಥ 15:45; 1 ತಿಮೊಥೆಯ 2:5, 6) ಆದಾಮನು ತನ್ನ ಮಕ್ಕಳಿಗೆ ಮರಣವನ್ನು ದಾಟಿಸಿದರೂ, ಯೇಸುವಿನ ಪೂರ್ವಾರ್ಜಿತ ಆಸ್ತಿ ನಿತ್ಯಜೀವವಾಗಿದೆ. ಒಂದನೆಯ ಕೊರಿಂಥ 15:22 ವಿವರಿಸುವುದು: “ಯಾವ ಪ್ರಕಾರ ಆದಾಮನ ಸಂಬಂಧದಿಂದ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನ ಸಂಬಂಧದಿಂದ ಎಲ್ಲರೂ ಜೀವಿತರಾಗುವರು.” ಹೀಗೆ, ಯೋಗ್ಯವಾಗಿಯೇ, ಯೇಸುವನ್ನು “ನಿತ್ಯನಾದ ತಂದೆ” ಎಂದು ಕರೆಯಲಾಗುತ್ತದೆ.—ಯೆಶಾಯ 9:6, 7.
ಪ್ರಾಯಶ್ಚಿತ್ತವು ತೆರಲ್ಪಟ್ಟ ವಿಧ
12. ಯೇಸುವು ಮೆಸ್ಸೀಯನಾಗಿ ಪರಿಣಮಿಸಿದ್ದು ಯಾವಾಗ, ಮತ್ತು ಅಂದಿನಿಂದ ಅವನು ಯಾವ ಜೀವನ ರೀತಿಯನ್ನು ಬೆನ್ನಟ್ಟಿದನು?
12 ಸಾ.ಶ. 29ರ ಶರತ್ಕಾಲದಲ್ಲಿ, ಯೇಸುವು ತನ್ನ ಸಂಬಂಧಿಯಾಗಿದ್ದ ಯೋಹಾನನ ಬಳಿಗೆ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಮತ್ತು ಆ ರೀತಿ ದೇವರ ಚಿತ್ತವನ್ನು ನಿರ್ವಹಿಸಲಿಕ್ಕಾಗಿ ತನ್ನನ್ನು ಒಪ್ಪಿಸಿಕೊಡಲು ಹೋದನು. ಆ ಸಂದರ್ಭದಲ್ಲಿ ಯೆಹೋವನು ಯೇಸುವನ್ನು ಪವಿತ್ರಾತ್ಮದಿಂದ ಅಭಿಷೇಕಿಸಿದನು. ಯೇಸುವು ಹೀಗೆ ಮೆಸ್ಸೀಯ, ಅಥವಾ ಕ್ರಿಸ್ತ, ದೇವರಿಂದ ಅಭಿಷಿಕ್ತನಾದವನಾದನು. (ಮತ್ತಾಯ 3:16, 17) ಬಳಿಕ ಯೇಸುವು ತನ್ನ ಮೂರುವರೆ ವರುಷಗಳ ಶುಶ್ರೂಷೆಯಲ್ಲಿ ತೊಡಗಿದನು. ಅವನು ತನ್ನ ಸ್ವದೇಶದಾದ್ಯಂತ ದೇವರ ರಾಜ್ಯದ ಕುರಿತು ಸಾರುತ್ತಾ, ನಂಬಿಗಸ್ತ ಹಿಂಬಾಲಕರನ್ನು ಒಟ್ಟುಗೂಡಿಸುತ್ತಾ ಸಂಚರಿಸಿದನು. ಆದರೂ, ಮುಂತಿಳಿಸಲ್ಪಟ್ಟಂತೆ ಬೇಗನೆ ಅವನೆದುರಾಗಿ ವಿರೋಧವು ಹೆಚ್ಚಿತು.—ಕೀರ್ತನೆ 118:22; ಅ. ಕೃತ್ಯಗಳು 4:8-11.
13. ಯಾವ ಘಟನೆಗಳು ಸಮಗ್ರತೆ ಪಾಲಕನೋಪಾದಿ ಯೇಸುವಿನ ಮರಣಕ್ಕೆ ನಡೆಸಿದವು?
13 ಯೇಸುವು ಧಾರ್ಮಿಕ ನಾಯಕರ ಕಾಪಟ್ಯವನ್ನು ಧೈರ್ಯದಿಂದ ಹೊರಗೆಡಹಿದನು, ಮತ್ತು ಅವರು ಅವನನ್ನು ಕೊಲ್ಲಲು ಪ್ರಯತ್ನಿಸಿದರು. ಕೊನೆಗೆ ಅವರು ದ್ರೋಹ, ಅಯೋಗ್ಯ ರೀತಿಯ ದಸ್ತಗಿರಿ, ಶಾಸನಸಮ್ಮತವಲ್ಲದ ವಿಚಾರಣೆ ಮತ್ತು ರಾಜದ್ರೋಹದ ಮಿಥ್ಯಾರೋಪವು ಒಳಗೂಡಿದ್ದ ಒಂದು ಹೊಲಸಾದ ಒಳಸಂಚನ್ನು ಹೂಡಿದರು. ಯೇಸುವಿಗೆ ಹೊಡೆಯಲಾಯಿತು, ಅವನ ಮೇಲೆ ಉಗುಳಲಾಯಿತು, ಅಪಹಾಸ್ಯ ಮಾಡಲಾಯಿತು ಮತ್ತು ಅವನ ಮಾಂಸವನ್ನು ಹರಿಯುವಂತೆ ರೂಪಿಸಲಾಗಿದ್ದ ಚಾವಟಿಯಿಂದ ಹೊಡೆಯಲಾಯಿತು. ಅನಂತರ ರೋಮನ್ ರಾಜ್ಯಪಾಲ ಪೊಂತ್ಯ ಪಿಲಾತನು ಅವನಿಗೆ ಯಾತನೆಯ ಕಂಬವೊಂದರ ಮೇಲೆ ಮರಣವನ್ನು ವಿಧಿಸಿದನು. ಅವನನ್ನು ಒಂದು ಮರದ ಕಂಬಕ್ಕೆ ಮೊಳೆ ಜಡಿದು ನೆಟ್ಟನೆ ತೂಗಹಾಕಲಾಯಿತು. ಪ್ರತಿಯೊಂದು ಉಸಿರು ಅತಿ ಯಾತನಾಮಯವಾಗಿತ್ತು, ಮತ್ತು ಅವನಿಗೆ ಸಾಯುವುದಕ್ಕೆ ತಾಸುಗಳು ಹಿಡಿದವು. ಆ ಉಗ್ರ ಪರೀಕ್ಷೆಯಲ್ಲೆಲ್ಲ ಯೇಸುವು ದೇವರಿಗೆ ಪರಿಪೂರ್ಣ ಸಮಗ್ರತೆಯನ್ನು ಕಾಪಾಡಿಕೊಂಡನು.
14. ತನ್ನ ಮಗನು ಬಾಧೆಪಟ್ಟು ಸಾಯುವಂತೆ ದೇವರು ಬಿಟ್ಟದ್ದೇಕೆ?
14 ಹೀಗೆ ಯೇಸು, “ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು” ಕೊಟ್ಟದ್ದು ಸಾ.ಶ. 33ರ ನೈಸಾನ್ 14 ರಂದು. (ಮಾರ್ಕ 10:45; 1 ತಿಮೊಥೆಯ 2:5, 6) ತನ್ನ ಪ್ರಿಯ ಮಗನು ಬಾಧೆಪಟ್ಟು ಸಾಯುವುದನ್ನು ಯೆಹೋವನು ಸ್ವರ್ಗದಿಂದ ನೋಡಸಾಧ್ಯವಿತ್ತು. ಇಂತಹ ಭಯಂಕರ ಸಂಗತಿಯು ನಡೆಯುವಂತೆ ದೇವರು ಏಕೆ ಬಿಟ್ಟನು? ಆತನು ಮಾನವ ಕುಲವನ್ನು ಪ್ರೀತಿಸಿದ್ದರಿಂದಲೇ ಹಾಗೆ ಬಿಟ್ಟನು. ಯೇಸುವು ಹೇಳಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಯೇಸುವಿನ ಮರಣವು, ಯೆಹೋವನು ಪರಿಪೂರ್ಣ ನ್ಯಾಯದ ದೇವರೆಂದೂ ನಮಗೆ ಕಲಿಸುತ್ತದೆ. (ಧರ್ಮೋಪದೇಶಕಾಂಡ 32:4) ದೇವರು ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೇಳುವ ತನ್ನ ನ್ಯಾಯದ ಮೂಲತತ್ವಗಳನ್ನು ತ್ಯಜಿಸಿ, ಆದಾಮನ ಪಾಪಪೂರ್ಣ ಮಾರ್ಗವು ಅವಶ್ಯಪಡಿಸಿದ ಪರಿಹಾರವನ್ನು ಏಕೆ ಅಲಕ್ಷ್ಯ ಮಾಡಲಿಲ್ಲವೆಂದು ಕೆಲವರು ಕುತೂಹಲಪಡಬಹುದು. ಕಾರಣವೇನಂದರೆ, ಯೆಹೋವನು ಯಾವಾಗಲೂ, ತನಗೆ ಮಹಾ ನಷ್ಟವಾಗುವಾಗ ಕೂಡ, ತನ್ನ ನಿಯಮಗಳನ್ನು ಅನುಸರಿಸಿ, ಅವುಗಳನ್ನು ಸಮರ್ಥಿಸುತ್ತಾನೆ.
15. ಯೇಸುವಿನ ಅಸ್ತಿತ್ವವು ಕಾಯಂ ಅಂತ್ಯಗೊಳ್ಳುವಂತೆ ಬಿಡುವುದು ಅನ್ಯಾಯವಾಗುತ್ತಿತ್ತಾದ ಕಾರಣ ಯೆಹೋವನು ಏನು ಮಾಡಿದನು?
15 ಯೇಸುವಿನ ಮರಣಕ್ಕೆ ಹರ್ಷಕರವಾದ ಪರಿಣಾಮವಿರುವಂತೆ ಸಹ ಯೆಹೋವನ ನ್ಯಾಯವು ಅವಶ್ಯಪಡಿಸಿತು. ಎಷ್ಟೆಂದರೂ, ನಂಬಿಗಸ್ತನಾದ ಯೇಸುವನ್ನು ಮರಣದಲ್ಲಿ ಎಂದೆಂದಿಗೂ ನಿದ್ರಿಸುವಂತೆ ಬಿಡುವುದರಲ್ಲಿ ನ್ಯಾಯವಿದ್ದೀತೆ? ನಿಶ್ಚಯವಾಗಿಯೂ ಇಲ್ಲ! ದೇವರ ಕರ್ತವ್ಯನಿಷ್ಠನು ಸಮಾಧಿಯಲ್ಲಿ ಉಳಿಯುವುದಿಲ್ಲವೆಂದು ಹೀಬ್ರು ಶಾಸ್ತ್ರಗಳು ಪ್ರವಾದಿಸಿದ್ದವು. (ಕೀರ್ತನೆ 16:10; ಅ. ಕೃತ್ಯಗಳು 13:35) ಅವನು ಮರಣದಲ್ಲಿ ಮೂರು ದಿನಾಂಶಗಳ ವರೆಗೆ ನಿದ್ರಿಸಿದ ಬಳಿಕ ಯೆಹೋವ ದೇವರು ಅವನನ್ನು ಒಬ್ಬ ಬಲಾಢ್ಯನಾದ ಆತ್ಮಜೀವಿಯಾಗಿ ಜೀವಕ್ಕೆ ಪುನರುತ್ಥಾನಗೊಳಿಸಿದನು.—1 ಪೇತ್ರ 3:18.
16. ಸ್ವರ್ಗಕ್ಕೆ ಹಿಂದಿರುಗಿದಾಗ ಯೇಸುವು ಏನು ಮಾಡಿದನು?
16 ತನ್ನ ಮರಣದಲ್ಲಿ ಯೇಸುವು ತನ್ನ ಮಾನವ ಜೀವವನ್ನು ಸದಾಕಾಲಕ್ಕಾಗಿ ಒಪ್ಪಿಸಿಬಿಟ್ಟನು. ಸ್ವರ್ಗದ ಜೀವಿತಕ್ಕೆ ಎಬ್ಬಿಸಲ್ಪಟ್ಟ ನಂತರ ಅವನು, ಜೀವದಾಯಕ ಆತ್ಮನಾಗಿ ಪರಿಣಮಿಸಿದನು. ಇದಲ್ಲದೆ, ಯೇಸುವು ವಿಶ್ವದ ಅತಿ ಪರಿಶುದ್ಧವಾದ ಸ್ಥಳಕ್ಕೆ ಏರಿಹೋದಾಗ, ಅವನು ತನ್ನ ಪ್ರಿಯ ಪಿತನೊಂದಿಗೆ ಪುನಃ ಕೂಡಿಕೊಂಡು, ನಿಯಮಾನುಸಾರವಾಗಿ ಆತನಿಗೆ ತನ್ನ ಪರಿಪೂರ್ಣ ಮಾನವಜೀವದ ಬೆಲೆಯನ್ನು ಅರ್ಪಿಸಿದನು. (ಇಬ್ರಿಯ 9:23-28) ಆಗ ಆ ಅಮೂಲ್ಯ ಜೀವದ ಮೌಲ್ಯವನ್ನು ವಿಧೇಯ ಮಾನವ ಕುಲದ ಪರವಾಗಿ ಅನ್ವಯಿಸಸಾಧ್ಯವಿತ್ತು. ಅದು ನಿಮಗೆ ಏನು ಅರ್ಥೈಸುತ್ತದೆ?
ಕ್ರಿಸ್ತನ ಪ್ರಾಯಶ್ಚಿತ್ತ ಮತ್ತು ನೀವು
17. ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇರೆಗೆ ನಾವು ಕ್ಷಮಾಪಣೆಯನ್ನು ಹೇಗೆ ಲಭಿಸಿಕೊಳ್ಳಬಲ್ಲೆವು?
17 ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವು ನಿಮಗೆ ಈಗಲೂ ಪ್ರಯೋಜನಗಳನ್ನು ತರುವ ಮೂರು ವಿಧಗಳನ್ನು ಪರಿಗಣಿಸಿರಿ. ಒಂದನೆಯದಾಗಿ, ಇದು ಪಾಪಗಳ ಕ್ಷಮಾಪಣೆ ಯನ್ನು ತರುತ್ತದೆ. ಯೇಸುವಿನ ಸುರಿಸಲ್ಪಟ್ಟ ರಕ್ತದಲ್ಲಿ ನಂಬಿಕೆಯ ಮೂಲಕ ನಮಗೆ “ಬಿಡುಗಡೆ” ಯಾಗುತ್ತದೆ, ಹೌದು, “ಅಪರಾಧಗಳು ಪರಿಹಾರ” ವಾಗುತ್ತವೆ. (ಎಫೆಸ 1:7) ಹಾಗಾದರೆ, ನಾವು ಗುರುತರವಾದ ಪಾಪವೊಂದನ್ನು ಮಾಡಿರುವುದಾದರೂ, ನಾವು ಯೇಸುವಿನ ಹೆಸರಿನಲ್ಲಿ ದೇವರಿಂದ ಕ್ಷಮಾಪಣೆಯನ್ನು ಯಾಚಿಸಬಹುದು. ನಾವು ನಿಜವಾಗಿ ಪಶ್ಚಾತ್ತಾಪ ಪಡುವುದಾದರೆ, ತನ್ನ ಪುತ್ರನ ಪ್ರಾಯಶ್ಚಿತ್ತ ಯಜ್ಞದ ಬೆಲೆಯನ್ನು ಯೆಹೋವನು ನಮಗೆ ಅನ್ವಯಿಸುತ್ತಾನೆ. ದೇವರು ನಮ್ಮನ್ನು ಕ್ಷಮಿಸಿ, ಪಾಪಮಾಡುವ ಮೂಲಕ ನಾವು ಈಡಾಗುವ ಮರಣ ದಂಡನೆಯನ್ನು ಕೇಳಿಕೊಳ್ಳುವ ಬದಲಾಗಿ, ನಮಗೆ ಒಂದು ಒಳ್ಳೆಯ ಮನಸ್ಸಾಕ್ಷಿಯ ಆಶೀರ್ವಾದವನ್ನು ನೀಡುತ್ತಾನೆ.—ಅ. ಕೃತ್ಯಗಳು 3:19; 1 ಪೇತ್ರ 3:21.
18. ಯೇಸುವಿನ ಯಜ್ಞವು ಯಾವ ವಿಧದಲ್ಲಿ ನಮಗೆ ನಿರೀಕ್ಷೆಯನ್ನು ಒದಗಿಸುತ್ತದೆ?
18 ಎರಡನೆಯದಾಗಿ, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವು ನಮ್ಮ ಭವಿಷ್ಯತ್ತಿಗಾಗಿರುವ ನಿರೀಕ್ಷೆಗೆ ಆಧಾರವನ್ನು ಒದಗಿಸುತ್ತದೆ. ದರ್ಶನದಲ್ಲಿ, ಅಪೊಸ್ತಲ ಯೋಹಾನನು, “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು” ಬರಲಿರುವ ಈ ವಿಷಯಗಳ ವ್ಯವಸ್ಥೆಯ ಉತ್ಕಂಪಕಾರಕ ಅಂತ್ಯವನ್ನು ಪಾರಾಗುವುದನ್ನು ನೋಡಿದನು. ದೇವರು ಇತರ ಅನೇಕರನ್ನು ನಾಶಗೊಳಿಸುವಾಗ ಇವರೇಕೆ ಪಾರಾಗಿ ಉಳಿಯುವರು? ಮಹಾ ಸಮೂಹವು, “ಯಜ್ಞದ ಕುರಿ,” ಯೇಸು ಕ್ರಿಸ್ತನ “ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರ [“ಬಿಳಿ,” NW] ಮಾಡಿದ್ದಾರೆ,” ಎಂದು ಒಬ್ಬ ದೇವದೂತನು ಯೋಹಾನನಿಗೆ ಹೇಳಿದನು. (ಪ್ರಕಟನೆ 7:9, 14) ನಾವು ಯೇಸು ಕ್ರಿಸ್ತನ ಸುರಿಸಲ್ಪಟ್ಟ ರಕ್ತದಲ್ಲಿ ನಂಬಿಕೆಯನ್ನು ಇಟ್ಟು, ದೈವಿಕ ಆವಶ್ಯಕತೆಗಳಿಗನುಸಾರ ಜೀವಿಸುವಷ್ಟು ಕಾಲ, ನಾವು ದೇವರ ದೃಷ್ಟಿಯಲ್ಲಿ ಶುದ್ಧರಾಗಿರುವೆವು ಮತ್ತು ನಿತ್ಯಜೀವದ ನಿರೀಕ್ಷೆ ನಮಗಿರುವುದು.
19. ಕ್ರಿಸ್ತನ ಯಜ್ಞವು, ಅವನೂ ಅವನ ತಂದೆಯೂ ನಿಮ್ಮನ್ನು ಪ್ರೀತಿಸುತ್ತಾರೆಂದು ಹೇಗೆ ರುಜುಪಡಿಸುತ್ತದೆ?
19 ಮೂರನೆಯದಾಗಿ, ಪ್ರಾಯಶ್ಚಿತ್ತ ಯಜ್ಞವು, ಯೆಹೋವನ ಪ್ರೀತಿಯ ಅಂತಿಮ ರುಜುವಾತು. ಕ್ರಿಸ್ತನ ಮರಣವು ವಿಶ್ವದ ಇತಿಹಾಸದಲ್ಲಿ ಪ್ರೀತಿಯ ಎರಡು ಅತ್ಯಂತ ಮಹಾನ್ ಕೃತ್ಯಗಳನ್ನು ಮೂರ್ತೀಕರಿಸಿತು: (1) ತನ್ನ ಪುತ್ರನನ್ನು ನಮ್ಮ ಪರವಾಗಿ ಸಾಯಲು ಕಳುಹಿಸಿದ್ದರಲ್ಲಿ ದೇವರ ಪ್ರೀತಿ; (2) ಪ್ರಾಯಶ್ಚಿತ್ತವಾಗಿ ತನ್ನನ್ನು ಇಚ್ಛಾಪೂರ್ವಕವಾಗಿ ಅರ್ಪಿಸಿದ್ದರಲ್ಲಿ ಯೇಸುವಿನ ಪ್ರೀತಿ. (ಯೋಹಾನ 15:13; ರೋಮಾಪುರ 5:8) ನಾವು ನಿಜವಾಗಿಯೂ ನಂಬಿಕೆಯನ್ನು ಅಭ್ಯಾಸಿಸುವಲ್ಲಿ ಈ ಪ್ರೀತಿಯು ನಮ್ಮಲ್ಲಿ ಒಬ್ಬೊಬ್ಬನಿಗೂ ಅನ್ವಯಿಸುತ್ತದೆ. ಅಪೊಸ್ತಲ ಪೌಲನು ಹೇಳಿದ್ದು: “ಆತನು [ದೇವಕುಮಾರನು] ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಬಿಟ್ಟನು.”—ಗಲಾತ್ಯ 2:20; ಇಬ್ರಿಯ 2:9; 1 ಯೋಹಾನ 4:9, 10.
20. ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಾವೇಕೆ ನಂಬಿಕೆಯನ್ನು ಅಭ್ಯಾಸಿಸಬೇಕು?
20 ಆದಕಾರಣ, ದೇವರು ಮತ್ತು ಕ್ರಿಸ್ತನು ಪ್ರದರ್ಶಿಸಿರುವ ಪ್ರೀತಿಗಾಗಿ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನಿಡುವ ಮೂಲಕ ನಾವು ನಮ್ಮ ಕೃತಜ್ಞತೆಯನ್ನು ತೋರಿಸೋಣ. ಹಾಗೆ ಮಾಡುವುದು ನಿತ್ಯಜೀವಕ್ಕೆ ನಡೆಸುತ್ತದೆ. (ಯೋಹಾನ 3:36) ಆದರೂ, ಭೂಮಿಯ ಮೇಲೆ ಯೇಸುವಿನ ಜೀವನ ಮತ್ತು ಮರಣಗಳ ಅತಿ ಪ್ರಮುಖ ಕಾರಣವು ನಮ್ಮ ರಕ್ಷಣೆಯಲ್ಲ. ಅಲ್ಲ, ಅವನ ಪ್ರಧಾನ ಕಾರಣವು ಅದಕ್ಕೂ ದೊಡ್ಡದಾದ, ಒಂದು ವಿಶ್ವ ವಿವಾದಾಂಶವಾಗಿತ್ತು. ನಾವು ಮುಂದಿನ ಅಧ್ಯಾಯದಲ್ಲಿ ನೋಡಲಿರುವಂತೆ, ಆ ವಿವಾದಾಂಶವು, ದೇವರು ಈ ಭೂಮಿಯಲ್ಲಿ ಇಷ್ಟು ದೀರ್ಘಕಾಲ ದುಷ್ಟತ್ವ ಮತ್ತು ಕಷ್ಟಾನುಭವಗಳು ಮುಂದುವರಿಯುವಂತೆ ಏಕೆ ಅನುಮತಿಸಿದ್ದಾನೆಂದು ತೋರಿಸುವುದರಿಂದ ನಮ್ಮೆಲ್ಲರನ್ನು ಸ್ಪರ್ಶಿಸುತ್ತದೆ.
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
ಮಾನವ ಕುಲವನ್ನು ರಕ್ಷಿಸಲಿಕ್ಕಾಗಿ ಯೇಸುವು ಏಕೆ ಸಾಯಬೇಕಿತ್ತು?
ಪ್ರಾಯಶ್ಚಿತ್ತವನ್ನು ಹೇಗೆ ತೆರಲಾಯಿತು?
ಪ್ರಾಯಶ್ಚಿತ್ತದಿಂದ ನೀವು ಯಾವ ವಿಧಗಳಲ್ಲಿ ಪ್ರಯೋಜನ ಪಡೆಯುತ್ತೀರಿ?
[ಅಧ್ಯಯನ ಪ್ರಶ್ನೆಗಳು]
[ಪುಟ 67ರಲ್ಲಿ ಇಡೀ ಪುಟದ ಚಿತ್ರ]