ಸತ್ಯ ದೇವರು ಯಾರು?
ಅಧ್ಯಾಯ 3
ಸತ್ಯ ದೇವರು ಯಾರು?
1. ಬೈಬಲಿನ ಆರಂಭದ ಮಾತುಗಳನ್ನು ಅನೇಕರು ಒಪ್ಪುವುದೇಕೆ?
ನೀವು ಸ್ವಚ್ಛವಾದ ಒಂದು ರಾತ್ರಿಯಲ್ಲಿ ಆಕಾಶವನ್ನು ನೋಡುವಾಗ, ಅಷ್ಟೊಂದು ನಕ್ಷತ್ರಗಳನ್ನು ಕಂಡು ನೀವು ಬೆರಗಾಗುವುದಿಲ್ಲವೆ? ಅವುಗಳ ಅಸ್ತಿತ್ವವನ್ನು ನೀವು ಹೇಗೆ ವಿವರಿಸುತ್ತೀರಿ? ಮತ್ತು ಭೂಮಿಯ ಮೇಲಿರುವ ಜೀವಂತ ವಸ್ತುಗಳ—ವರ್ಣರಂಜಿತ ಪುಷ್ಪಗಳು, ಆಹ್ಲಾದಕರ ಗೀತಗಳನ್ನು ಹಾಡುವ ಪಕ್ಷಿಗಳು, ಸಾಗರದಲ್ಲಿ ನೆಗೆಯುವ ಬಲಾಢ್ಯವಾದ ತಿಮಿಂಗಿಲಗಳು—ವಿಷಯವೇನು? ಆ ಪಟ್ಟಿಗೆ ಅಂತ್ಯವೇ ಇಲ್ಲ. ಇದೆಲ್ಲ ಆಕಸ್ಮಿಕವಾಗಿ ಬಂದಿರಸಾಧ್ಯವಿಲ್ಲ. ಅನೇಕರು ಬೈಬಲಿನ ಆರಂಭದ ಈ ವಚನಗಳೊಂದಿಗೆ ಸಮ್ಮತಿಸುವುದು ಆಶ್ಚರ್ಯವಲ್ಲ: “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು”!—ಆದಿಕಾಂಡ 1:1.
2. ಬೈಬಲು ದೇವರ ಕುರಿತು ಏನು ಹೇಳುತ್ತದೆ, ಮತ್ತು ನಾವು ಏನು ಮಾಡುವಂತೆ ಅದು ಪ್ರೋತ್ಸಾಹಿಸುತ್ತದೆ?
2 ದೇವರ ವಿಷಯದಲ್ಲಿ ಮಾನವ ಕುಲವು ಮಹತ್ತಾಗಿ ವಿಂಗಡಿತವಾಗಿದೆ. ದೇವರು ವ್ಯಕ್ತಿಸ್ವರೂಪವಿಲ್ಲದ ಒಂದು ಶಕ್ತಿಯೆಂದು ಕೆಲವರು ಅಭಿಪ್ರಯಿಸುತ್ತಾರೆ. ಕೋಟ್ಯಂತರ ಜನರು, ಸಮೀಪಿಸಲು ದೇವರು ತೀರ ದೂರದಲ್ಲಿದ್ದಾನೆಂದು ನಂಬುತ್ತಾ, ಮೃತರಾದ ಪೂರ್ವಿಕರನ್ನು ಆರಾಧಿಸುತ್ತಾರೆ. ಆದರೆ ದೇವರು, ನಮ್ಮಲ್ಲಿ ಒಬ್ಬೊಬ್ಬರ ಕಡೆಗೆ ಹೃದಯೋಲ್ಲಾಸದ ಆಸಕ್ತಿ ತೋರಿಸುವ ನಿಜ ವ್ಯಕ್ತಿಯೆಂದು ಬೈಬಲು ತಿಳಿಯಪಡಿಸುತ್ತದೆ. ಆದಕಾರಣವೇ ಬೈಬಲು, ‘ದೇವರನ್ನು ಹುಡುಕಲು’ ನಮ್ಮನ್ನು ಪ್ರೋತ್ಸಾಹಿಸುತ್ತಾ ಹೇಳುವುದು: “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.”—ಅ. ಕೃತ್ಯಗಳು 17:27.
3. ದೇವರ ಪ್ರತಿಮೆಯನ್ನು ಮಾಡುವುದು ಏಕೆ ಅಸಾಧ್ಯ?
3 ದೇವರ ರೂಪ ಹೇಗಿದೆ? ಆತನ ಮಹಿಮಾಭರಿತ ಸಾನ್ನಿಧ್ಯದ ದರ್ಶನಗಳನ್ನು ಆತನ ಸೇವಕರಲ್ಲಿ ಕೆಲವರು ನೋಡಿದ್ದಾರೆ. ಇವುಗಳಲ್ಲಿ ಆತನು ಸಿಂಹಾಸನದಲ್ಲಿ ಕುಳಿತವನಾಗಿ, ಭಯಭಕ್ತಿ ಹುಟ್ಟಿಸುವ ಉಜ್ವಲತೆ ತನ್ನಿಂದ ಹೊರಬರುತ್ತಿರುವಂತೆ ತನ್ನನ್ನು ಸಂಕೇತಿಸಿಕೊಂಡಿದ್ದಾನೆ. ಆದರೂ, ಅಂತಹ ದರ್ಶನಗಳನ್ನು ಕಂಡವರು, ಒಂದು ಪ್ರತ್ಯೇಕ ಮುಖವನ್ನು ಎಂದೂ ವರ್ಣಿಸಲಿಲ್ಲ. (ದಾನಿಯೇಲ 7:9, 10; ಪ್ರಕಟನೆ 4:2, 3) “ದೇವರು ಆತ್ಮಸ್ವರೂಪನು,” ಆಗಿರುವುದೇ ಇದಕ್ಕೆ ಕಾರಣ; ಆತನಿಗೆ ಭೌತಿಕ ಶರೀರವೊಂದು ಇರುವುದಿಲ್ಲ. (ಯೋಹಾನ 4:24) ವಾಸ್ತವವಾಗಿ, ನಮ್ಮ ಸೃಷ್ಟಿಕರ್ತನ ಒಂದು ನಿಷ್ಕೃಷ್ಟವಾದ ಭೌತಿಕ ಸ್ವರೂಪವನ್ನು ಮಾಡುವುದು ಅಸಾಧ್ಯ, ಏಕೆಂದರೆ “ದೇವರನ್ನು ಯಾರೂ ಎಂದೂ ಕಂಡಿಲ್ಲ.” (ಯೋಹಾನ 1:18; ವಿಮೋಚನಕಾಂಡ 33:20) ಆದರೂ, ಬೈಬಲು ದೇವರ ಕುರಿತು ನಮಗೆ ಹೇರಳವಾಗಿ ಕಲಿಸುತ್ತದೆ.
ಸತ್ಯ ದೇವರಿಗೆ ಹೆಸರೊಂದಿದೆ
4. ಬೈಬಲಿನಲ್ಲಿ ದೇವರಿಗೆ ಅನ್ವಯಿಸಲ್ಪಟ್ಟಿರುವ ಕೆಲವು ಅರ್ಥಗರ್ಭಿತ ಬಿರುದುಗಳಾವುವು?
4 ಬೈಬಲಿನಲ್ಲಿ ಸತ್ಯ ದೇವರನ್ನು, “ಸರ್ವಶಕ್ತನಾದ ದೇವರು,” “ಪರಾತ್ಪರ,” “ಸೃಷ್ಟಿಕರ್ತ,” “ಬೋಧಕ,” “ಒಡೆಯ,” ಮತ್ತು “ಸರ್ವಯುಗಗಳ ಅರಸ,” ಮುಂತಾದ ಅಭಿವ್ಯಕ್ತಿಗಳಿಂದ ವರ್ಣಿಸಲಾಗಿದೆ. (ಆದಿಕಾಂಡ 17:1; ಕೀರ್ತನೆ 50:14; ಪ್ರಸಂಗಿ 12:1; ಯೆಶಾಯ 30:20; ಅ. ಕೃತ್ಯಗಳು 4:24; 1 ತಿಮೊಥೆಯ 1:17) ಇಂತಹ ಬಿರುದುಗಳ ಮೇಲೆ ಧ್ಯಾನ ಮಾಡುವುದು, ದೇವರ ಜ್ಞಾನದಲ್ಲಿ ಬೆಳೆಯುವಂತೆ ನಮಗೆ ಸಹಾಯಮಾಡಬಲ್ಲದು.
5. ದೇವರ ಹೆಸರೇನು, ಮತ್ತು ಹೀಬ್ರು ಶಾಸ್ತ್ರಗಳಲ್ಲಿ ಅದು ಎಷ್ಟು ಬಾರಿ ಕಂಡುಬರುತ್ತದೆ?
5 ಆದರೂ ದೇವರಿಗೆ, ಹೀಬ್ರು ಶಾಸ್ತ್ರಗಳೊಂದರಲ್ಲಿಯೇ ಬಹು ತರ 7,000 ಬಾರಿ—ಆತನ ಯಾವ ಬಿರುದುಗಳಿಗಿಂತಲೂ ಹೆಚ್ಚು ಬಾರಿ—ಕಂಡುಬರುವ ಅನನ್ಯವಾದ ಹೆಸರೊಂದಿದೆ. ಸುಮಾರು 1,900 ವರುಷಗಳಿಗೆ ಹಿಂದೆ, ಯೆಹೂದ್ಯರು ಮೂಢನಂಬಿಕೆಯಿಂದ ಆ ದಿವ್ಯ ನಾಮವನ್ನು ಉಚ್ಚರಿಸುವುದನ್ನು ನಿಲ್ಲಿಸಿದರು. ಬೈಬಲಿನಲ್ಲಿರುವ ಹೀಬ್ರುವನ್ನು ಸ್ವರಾಕ್ಷರಗಳಿಲ್ಲದೆ ಬರೆಯಲಾಯಿತು. ಆದಕಾರಣ, ಆ ದಿವ್ಯ ನಾಮವನ್ನು ರೂಪಿಸುವ ನಾಲ್ಕು ವ್ಯಂಜನಗಳನ್ನು (יחוה) ಪುರಾತನ ಕಾಲಗಳ ಮೋಶೆ, ದಾವೀದ ಅಥವಾ ಇತರರು ಹೇಗೆ ಉಚ್ಚರಿಸಿದರೆಂದು ನಿಷ್ಕೃಷ್ಟವಾಗಿ ತಿಳಿಯುವ ಮಾರ್ಗವಿಲ್ಲ. ಕೆಲವು ವಿದ್ವಾಂಸರು, ದೇವರ ನಾಮವು “ಯಾಹ್ವೆ” ಎಂದು ಉಚ್ಚರಿಸಲ್ಪಟ್ಟಿದ್ದಿರಬಹುದೆಂದು ಸೂಚಿಸಿದರೂ, ಅವರು ಖಾತರಿಯಿಂದಿರಸಾಧ್ಯವಿಲ್ಲ. “ಜೆಹೋವ” ಎಂಬ ಇಂಗ್ಲಿಷ್ ಉಚ್ಚಾರಣೆ (“ಯೆಹೋವ,” ಕನ್ನಡ) ಶತಮಾನಗಳಲ್ಲಿ ಬಳಕೆಯಲ್ಲಿದ್ದು ಅನೇಕ ಭಾಷೆಗಳಲ್ಲಿ ಅದರ ಸಮನಾದ ಪದವು ಇಂದು ವ್ಯಾಪಕವಾಗಿ ಅಂಗೀಕರಿಸಲ್ಪಡುತ್ತದೆ.—ನೋಡಿ ವಿಮೋಚನಕಾಂಡ 6:3 ಮತ್ತು ಯೆಶಾಯ 26:4.
ನೀವು ದೇವರ ಹೆಸರನ್ನು ಉಪಯೋಗಿಸಬೇಕಾದ ಕಾರಣ
6. ಕೀರ್ತನೆ 83:18, ಯೆಹೋವನ ಕುರಿತು ಏನು ಹೇಳುತ್ತದೆ, ಮತ್ತು ಆತನ ಹೆಸರನ್ನು ನಾವೇಕೆ ಉಪಯೋಗಿಸಬೇಕು?
6 ಯೆಹೋವ ಎಂಬ ದೇವರ ಅನನ್ಯ ಹೆಸರು, ಬೇರೆಲ್ಲ ದೇವರುಗಳಿಂದ ಆತನನ್ನು ಪ್ರತ್ಯೇಕಿಸುವ ಕೆಲಸವನ್ನು ಮಾಡುತ್ತದೆ. ಆ ಕಾರಣದಿಂದಲೆ ಆ ಹೆಸರು, ಬೈಬಲಿನಲ್ಲಿ, ವಿಶೇಷವಾಗಿ ಅದರ ಹೀಬ್ರು ಮೂಲಗ್ರಂಥದಲ್ಲಿ ಅಷ್ಟು ಹೆಚ್ಚು ಬಾರಿ ತೋರಿಬರುತ್ತದೆ. ಅನೇಕ ಭಾಷಾಂತರಕಾರರು ಆ ದಿವ್ಯ ನಾಮವನ್ನು ಉಪಯೋಗಿಸಲು ತಪ್ಪುತ್ತಾರಾದರೂ, ಕೀರ್ತನೆ 83:18 ಸ್ಪಷ್ಟವಾಗಿ ಹೇಳುವುದು: “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.” ಹೀಗೆ ನಾವು ದೇವರ ಕುರಿತು ಮಾತಾಡುವಾಗ ಆತನ ವೈಯಕ್ತಿಕ ಹೆಸರನ್ನು ಉಪಯೋಗಿಸುವುದು ಯೋಗ್ಯವಾಗಿದೆ.
7. ಯೆಹೋವ ಎಂಬ ಹೆಸರಿನ ಅರ್ಥವು ದೇವರ ಕುರಿತು ನಮಗೇನನ್ನು ಕಲಿಸುತ್ತದೆ?
7 ಯೆಹೋವ ಎಂಬ ಹೆಸರು “ಆಗು” ಎಂಬ ಅರ್ಥವಿರುವ ಹೀಬ್ರು ಕ್ರಿಯಾಪದರೂಪವಾಗಿದೆ. ಆದಕಾರಣ, “ಆತನು ಆಗಿಸುತ್ತಾನೆ,” ಎಂಬುದು ದೇವರ ಹೆಸರಿನ ಅರ್ಥ. ಅದರಿಂದ ಯೆಹೋವ ದೇವರು ತನ್ನನ್ನು ಮಹಾ ಉದ್ದೇಶಕನಂತೆ ಗುರುತಿಸಿಕೊಳ್ಳುತ್ತಾನೆ. ಆತನು ಸದಾ ತನ್ನ ಉದ್ದೇಶಗಳು ವಾಸ್ತವವಾಗುವಂತೆ ಮಾಡುತ್ತಾನೆ. ತಮ್ಮ ಯೋಜನೆಗಳು ಸಫಲಗೊಳ್ಳುವವೆಂಬ ಖಾತ್ರಿ ಮಾನವರಿಗೆ ಎಂದೂ ಇರಸಾಧ್ಯವಿಲ್ಲದ್ದರಿಂದ, ಸತ್ಯದೇವರೊಬ್ಬನೇ ಈ ಹೆಸರನ್ನು ನ್ಯಾಯವಾಗಿ ಧರಿಸಬಲ್ಲನು. (ಯಾಕೋಬ 4:13, 14) ಯೆಹೋವನೊಬ್ಬನೇ, “ನನ್ನ ಬಾಯಿಂದ ಹೊರಟ ಮಾತು . . . ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ,” ಎಂದು ಹೇಳಬಲ್ಲನು.—ಯೆಶಾಯ 55:11.
8. ಯೆಹೋವನು ಮೋಶೆಯ ಮೂಲಕ ಯಾವ ಉದ್ದೇಶವನ್ನು ಪ್ರಕಟಿಸಿದನು?
8 ಹೀಬ್ರು ಮೂಲಪಿತೃಗಳಾದ ಅಬ್ರಹಾಮ, ಇಸಾಕ ಮತ್ತು ಯಾಕೋಬ—ಇವರಲ್ಲಿ ಒಬ್ಬೊಬ್ಬರೂ, “ಯೆಹೋವನ ಹೆಸರನ್ನು ಹೇಳಿ” ಆರಾಧಿಸಿದರೂ, ಅವರಿಗೆ ಆ ದಿವ್ಯ ಹೆಸರಿನ ಪೂರ್ತಿ ಅರ್ಥಗರ್ಭಿತತೆ ತಿಳಿದಿರಲಿಲ್ಲ. (ಆದಿಕಾಂಡ 21:33; 26:25; 32:9; ವಿಮೋಚನಕಾಂಡ 6:3) ತರುವಾಯ, ಅವರ ವಂಶಜರಾದ ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಬಿಡಿಸುವ ಮತ್ತು ಅವರಿಗೆ, “ಹಾಲೂ ಜೇನೂ ಹರಿಯುವ ದೇಶ” ವನ್ನು ಕೊಡುವ ತನ್ನ ಉದ್ದೇಶವನ್ನು ಯೆಹೋವನು ತಿಳಿಯಪಡಿಸಿದಾಗ, ಇದು ಅಸಾಧ್ಯವೆಂದು ತೋರಿದ್ದಿರಬಹುದು. (ವಿಮೋಚನಕಾಂಡ 3:17) ಆದರೂ, ದೇವರು ತನ್ನ ಹೆಸರಿನ ಶಾಶ್ವತ ಅರ್ಥಗರ್ಭಿತತೆಯನ್ನು, ತನ್ನ ಪ್ರವಾದಿ ಮೋಶೆಗೆ ಹೀಗೆ ಹೇಳುವ ಮೂಲಕ ಒತ್ತಿಹೇಳಿದನು: “ನೀನು ಇಸ್ರಾಯೇಲ್ಯರಿಗೆ ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರ ದೇವರಾಗಿರುವ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಬೇಕು. ಇದು ಸದಾಕಾಲಕ್ಕೂ ನನ್ನ ಹೆಸರು; ಇದು ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ.”—ವಿಮೋಚನಕಾಂಡ 3:15.
9. ಫರೋಹನು ಯೆಹೋವನನ್ನು ಹೇಗೆ ವೀಕ್ಷಿಸಿದನು?
9 ಮೋಶೆಯು ಐಗುಪ್ತದ ಅರಸನಾದ ಫರೋಹನನ್ನು, ಅರಣ್ಯದಲ್ಲಿ ಯೆಹೋವನನ್ನು ಆರಾಧಿಸುವಂತೆ ಇಸ್ರಾಯೇಲ್ಯರನ್ನು ಹೋಗಗೊಡಿಸುವಂತೆ ಕೇಳಿಕೊಂಡನು. ಆದರೆ ಯಾರನ್ನು ಸ್ವತಃ ದೇವನೆಂದು ವೀಕ್ಷಿಸಲಾಗುತ್ತಿತ್ತೊ, ಮತ್ತು ಯಾರು ಇತರ ಐಗುಪ್ತ್ಯ ದೇವತೆಗಳನ್ನು ಆರಾಧಿಸುತ್ತಿದ್ದನೊ ಆ ಫರೋಹನು ಉತ್ತರಕೊಟ್ಟದ್ದು: “ಯೆಹೋವನೆಂಬವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲ್ಯರನ್ನು ಹೋಗಗೊಡಿಸುವದೇಕೆ? ಯೆಹೋವನು ಯಾರೋ ನನಗೆ ಗೊತ್ತಿಲ್ಲ. ಇದು ಮಾತ್ರವಲ್ಲದೆ ಇಸ್ರಾಯೇಲ್ಯರು ಹೊರಟುಹೋಗುವದಕ್ಕೆ ನಾನು ಒಪ್ಪುವದೇ ಇಲ್ಲ.”—ವಿಮೋಚನಕಾಂಡ 5:1, 2.
10. ಪುರಾತನ ಕಾಲದ ಐಗುಪ್ತದಲ್ಲಿ, ಇಸ್ರಾಯೇಲ್ಯರು ಒಳಗೂಡಿದ್ದ ತನ್ನ ಉದ್ದೇಶವನ್ನು ನೆರವೇರಿಸಲು ಯೆಹೋವನು ಯಾವ ಕ್ರಮವನ್ನು ಕೈಕೊಂಡನು?
10 ಆಗ ಯೆಹೋವನು, ತನ್ನ ಹೆಸರಿನ ಅರ್ಥಕ್ಕೆ ಹೊಂದಿಕೊಂಡು ವರ್ತಿಸುತ್ತಾ, ತನ್ನ ಉದ್ದೇಶವನ್ನು ನೆರವೇರಿಸಲು ಪ್ರಗತಿಪರವಾದ ಕ್ರಮವನ್ನು ಕೈಕೊಂಡನು. ಆತನು ಪುರಾತನ ಕಾಲದ ಐಗುಪ್ತ್ಯರ ಮೇಲೆ ಹತ್ತು ಬಾಧೆಗಳನ್ನು ತಂದನು. ಕೊನೆಯ ಬಾಧೆಯು ಐಗುಪ್ತದ ಎಲ್ಲ ಚೊಚ್ಚಲು ಜೀವಿಗಳನ್ನು—ದುರಹಂಕಾರಿ ಫರೋಹನ ಪುತ್ರನ ಸಹಿತ—ಸಂಹರಿಸಿತು. ಆಗ ಐಗುಪ್ತ್ಯರು ಇಸ್ರಾಯೇಲ್ಯರು ಹೋಗುವಂತೆ ತವಕಪಟ್ಟರು. ಆದರೆ ಕೆಲವು ಜನ ಐಗುಪ್ತ್ಯರು ಯೆಹೋವನ ಶಕ್ತಿಯಿಂದ ಎಷ್ಟು ಪ್ರಭಾವಿಸಲ್ಪಟ್ಟರೆಂದರೆ, ಐಗುಪ್ತವನ್ನು ಬಿಟ್ಟುಹೋಗುವುದರಲ್ಲಿ ಅವರು ಇಸ್ರಾಯೇಲ್ಯರನ್ನು ಕೂಡಿಕೊಂಡರು.—ವಿಮೋಚನಕಾಂಡ 12:35-38.
11. ಯೆಹೋವನು ಕೆಂಪು ಸಮುದ್ರದಲ್ಲಿ ಯಾವ ಅದ್ಭುತವನ್ನು ಮಾಡಿದನು, ಮತ್ತು ಆತನ ವೈರಿಗಳು ಏನು ಒಪ್ಪಿಕೊಳ್ಳುವಂತೆ ನಿರ್ಬಂಧಿಸಲ್ಪಟ್ಟರು?
11 ಹಠಮಾರಿಯಾದ ಫರೋಹನೂ ಅವನ ಸೈನ್ಯವೂ ಅದರ 600 ಯುದ್ಧರಥಗಳೊಂದಿಗೆ ಅವನ ಗುಲಾಮರನ್ನು ಪುನಃ ಸ್ವಾಧೀನಮಾಡಿಕೊಳ್ಳಲು ಹೊರಟಿತು. ಐಗುಪ್ತ್ಯರು ಸಮೀಪಿಸಿದಾಗ, ಇಸ್ರಾಯೇಲ್ಯರು ಒಣನೆಲದ ಮೇಲೆ ಹಾದುಹೋಗುವಂತೆ ದೇವರು ಅದ್ಭುತಕರವಾಗಿ ಕೆಂಪು ಸಮುದ್ರವನ್ನು ವಿಭಾಗಿಸಿದನು. ಬೆನ್ನಟ್ಟುತ್ತಿದ್ದವರು ಸಮುದ್ರತಳವನ್ನು ಪ್ರವೇಶಿಸಿದಾಗ ಯೆಹೋವನು, “ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದ್ದರಿಂದ ಐಗುಪ್ತ್ಯರು ಬಹುಕಷ್ಟದಿಂದ ಹೊಡಕೊಂಡುಹೋದರು.” ಐಗುಪ್ತ್ಯ ಸೈನಿಕರು ಕೂಗಿದ್ದು: “ನಾವು ಇಸ್ರಾಯೇಲ್ಯರ ಮುಂದೆ ನಿಲ್ಲಲಾರೆವು, ಓಡಿ ಹೋಗೋಣ; ಯೆಹೋವನು ಅವರಿಗೋಸ್ಕರ ನಮಗೆ ವಿರೋಧವಾಗಿ ಯುದ್ಧಮಾಡುತ್ತಾನೆ.” ಆದರೆ ಸಮಯವು ದಾಟಿಹೋಗಿತ್ತು. ಮಹಾ ಜಲಗೋಡೆಗಳು ಬಂದು “ಆ ರಥಗಳನ್ನೂ ರಾಹುತರನ್ನೂ ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನೂ ಮುಣುಗಿಸಿತು.” (ವಿಮೋಚನಕಾಂಡ 14:22-25, 28) ಯೆಹೋವನು ಹೀಗೆ ತನಗಾಗಿ ಒಂದು ಮಹಾ ಹೆಸರನ್ನು ಮಾಡಿಕೊಂಡನು ಮತ್ತು ಆ ಘಟನೆಯನ್ನು ಈ ದಿನದ ವರೆಗೂ ಮರೆಯಲಾಗಿರುವುದಿಲ್ಲ.—ಯೆಹೋಶುವ 2:9-11.
12, 13. (ಎ) ದೇವರ ಹೆಸರು ಇಂದು ನಮಗೆ ಏನನ್ನು ಅರ್ಥೈಸುತ್ತದೆ? (ಬಿ) ಜನರು ಜರೂರಾಗಿ ಏನನ್ನು ಕಲಿಯುವುದು ಅವಶ್ಯ, ಮತ್ತು ಏಕೆ?
12 ದೇವರು ತನಗಾಗಿ ಮಾಡಿಕೊಂಡ ಆ ಹೆಸರು ಇಂದು ನಮಗೂ ಮಹಾ ಅರ್ಥದಲ್ಲಿದೆ. ಯೆಹೋವ ಎಂಬ ಆತನ ಹೆಸರು, ತಾನು ಉದ್ದೇಶಿಸಿದ್ದೆಲ್ಲವನ್ನೂ ಆತನು ಸತ್ಯವಾಗಿಸುವನು ಎಂಬುದಕ್ಕೆ ಖಾತರಿಯಾಗಿ ನಿಲ್ಲುತ್ತದೆ. ಇದರಲ್ಲಿ ನಮ್ಮ ಭೂಮಿಯು ಪ್ರಮೋದವನವಾಗುವ ಆತನ ಮೂಲ ಉದ್ದೇಶವನ್ನು ಈಡೇರಿಸುವುದೂ ಸೇರಿದೆ. (ಆದಿಕಾಂಡ 1:28; 2:8) ಅದನ್ನು ಮಾಡುವುದಕ್ಕಾಗಿ ದೇವರು ತನ್ನ ಪರಮಾಧಿಕಾರದ ಇಂದಿನ ಸಕಲ ವಿರೋಧಿಗಳನ್ನು ಕಿತ್ತುಬಿಡುವನು. ಏಕೆಂದರೆ ಆತನು ಹೇಳಿದ್ದು: “ಜನಾಂಗಗಳು ನಾನೇ ಯೆಹೋವನು ಎಂದು ತಿಳಿದು” ಕೊಳ್ಳಲೇ ಬೇಕು. (ಯೆಹೆಜ್ಕೇಲ 38:23) ತದನಂತರ ದೇವರು ತನ್ನ ಆರಾಧಕರನ್ನು ನೀತಿಯ ಒಂದು ಹೊಸ ಲೋಕದೊಳಗೆ ಬಿಡುಗಡೆಗೊಳಿಸುವ ತನ್ನ ವಾಗ್ದಾನವನ್ನು ನೆರವೇರಿಸುವನು.—2 ಪೇತ್ರ 3:13.
13 ದೇವರ ಅನುಗ್ರಹವನ್ನು ಬಯಸುವ ಸಕಲರೂ ನಂಬಿಕೆಯಿಂದ ಆತನ ನಾಮವನ್ನು ಕರೆಯಲು ಕಲಿಯತಕ್ಕದ್ದು. “ಯೆಹೋವನ ನಾಮವನ್ನು ಕರೆಯುವ ಪ್ರತಿಯೊಬ್ಬನೂ ರಕ್ಷಿಸಲ್ಪಡುವನು,” ಎಂದು ಬೈಬಲ್ ವಚನಕೊಡುತ್ತದೆ. (ರೋಮಾಪುರ 10:13, NW) ಹೌದು, ಯೆಹೋವ ಎಂಬ ನಾಮಕ್ಕೆ ಗರ್ಭಿತವಾದ ಅರ್ಥವಿದೆ. ಯೆಹೋವನನ್ನು ನಿಮ್ಮ ದೇವರಾಗಿ ಮತ್ತು ವಿಮೋಚಕನಾಗಿ ಕರೆಯುವುದು ಅನಂತ ಸಂತಸಕ್ಕೆ ನಿಮ್ಮನ್ನು ನಡೆಸಬಲ್ಲದು.
ಸತ್ಯ ದೇವರ ಗುಣಗಳು
14. ಬೈಬಲು ದೇವರ ಯಾವ ಮೂಲ ಗುಣಗಳನ್ನು ಎತ್ತಿಹೇಳುತ್ತದೆ?
14 ಐಗುಪ್ತದಿಂದ ಇಸ್ರಾಯೇಲಿಗಾದ ಬಿಡುಗಡೆಯ ಮೇಲಿನ ಅಧ್ಯಯನವು ದೇವರಲ್ಲಿ ಪರಿಪೂರ್ಣ ಸಮತೆಯಲ್ಲಿರುವ ನಾಲ್ಕು ಮೂಲ ಗುಣಗಳನ್ನು ಎತ್ತಿ ತೋರಿಸುತ್ತದೆ. ಫರೋಹನೊಂದಿಗಿನ ಆತನ ವ್ಯವಹಾರಗಳು ಆತನ ಭಯೋತ್ಪಾದಕ ಶಕ್ತಿ ಯನ್ನು ಪ್ರಕಟಿಸಿದವು. (ವಿಮೋಚನಕಾಂಡ 9:16) ಆ ಜಟಿಲ ಸನ್ನಿವೇಶವನ್ನು ದೇವರು ನೈಪುಣ್ಯದಿಂದ ನಿರ್ವಹಿಸಿದ ವಿಧವು ಆತನ ಅಸಮಾನವಾದ ವಿವೇಕ ವನ್ನು ತೋರಿಸಿತು. (ರೋಮಾಪುರ 11:33) ಆತನು ತನ್ನ ನ್ಯಾಯ ವನ್ನು ತನ್ನ ಜನರ ಹಠಮಾರಿ ವಿರೋಧಿಗಳಿಗೆ ಮತ್ತು ಪೀಡಕರಿಗೆ ಶಿಕ್ಷೆಯನ್ನು ವಿಧಿಸಿದ್ದರಲ್ಲಿ ತಿಳಿಯಪಡಿಸಿದನು. (ಧರ್ಮೋಪದೇಶಕಾಂಡ 32:4) ದೇವರ ಒಂದು ಸರ್ವೋತ್ಕೃಷ್ಟ ಗುಣವು ಪ್ರೀತಿ. ಅಬ್ರಹಾಮನ ಸಂತತಿಯವರ ಕುರಿತ ತನ್ನ ವಾಗ್ದಾನವನ್ನು ನೆರವೇರಿಸುವ ಮೂಲಕ ಯೆಹೋವನು ಗಮನಾರ್ಹವಾದ ಪ್ರೀತಿಯನ್ನು ತೋರಿಸಿದನು. (ಧರ್ಮೋಪದೇಶಕಾಂಡ 7:8) ಕೆಲವು ಐಗುಪ್ತ್ಯರು ತಮ್ಮ ಸುಳ್ಳು ದೇವತೆಗಳನ್ನು ತ್ಯಜಿಸುವಂತೆ ಮತ್ತು ಒಬ್ಬನೇ ಸತ್ಯ ದೇವರ ಪರವಾಗಿ ತಮ್ಮ ನಿಲುವನ್ನು ತೆಗೆದುಕೊಂಡು ಮಹತ್ತಾಗಿ ಪ್ರಯೋಜನ ಪಡೆಯುವಂತೆ ಅನುಮತಿಸುವ ಮೂಲಕ ಸಹ ಆತನು ಪ್ರೀತಿಯನ್ನು ತೋರಿಸಿದನು.
15, 16. ದೇವರು ಯಾವ ವಿಧಗಳಲ್ಲಿ ಪ್ರೀತಿಯನ್ನು ತೋರಿಸಿದ್ದಾನೆ?
15 ನೀವು ಬೈಬಲನ್ನು ಓದುವಾಗ, ಪ್ರೀತಿಯು ದೇವರ ಪ್ರಧಾನ ಗುಣವೆಂದು ಗಮನಿಸುವಿರಿ, ಮತ್ತು ಆತನು ಅದನ್ನು ಅನೇಕ ವಿಧಗಳಲ್ಲಿ ಪ್ರದರ್ಶಿಸುತ್ತಾನೆ. ದೃಷ್ಟಾಂತಕ್ಕೆ, ಆತನು ಸೃಷ್ಟಿಕರ್ತನಾದದ್ದು ಮತ್ತು ಪ್ರಥಮವಾಗಿ ಆತನು ಜೀವದ ಸಂತೋಷದಲ್ಲಿ ಆತ್ಮಜೀವಿಗಳೊಂದಿಗೆ ಪಾಲಿಗನಾದದ್ದು ಪ್ರೀತಿಯ ಕಾರಣವೇ. ಆ ಕೋಟಿಗಟ್ಟಲೆ ದೇವದೂತರು ದೇವರನ್ನು ಪ್ರೀತಿಸಿ ಸ್ತುತಿಸುತ್ತಾರೆ. (ಯೋಬ 38:4, 7; ದಾನಿಯೇಲ 7:10) ಭೂಮಿಯನ್ನು ಸೃಷ್ಟಿಸಿ, ಅದನ್ನು ಸಂತಸದ ಮಾನವ ಅಸ್ತಿತ್ವಕ್ಕಾಗಿ ತಯಾರಿಸಿದರಲ್ಲಿಯೂ ದೇವರು ಪ್ರೀತಿಯನ್ನು ತೋರಿಸಿದನು.—ಆದಿಕಾಂಡ 1:1, 26-28; ಕೀರ್ತನೆ 115:16.
16 ದೇವರ ಪ್ರೀತಿಯಿಂದ ನಾವು ಹೇಳಲು ಅಸಂಖ್ಯಾತವಾದ ವಿಧಗಳಲ್ಲಿ ಪ್ರಯೋಜನ ಪಡೆಯುತ್ತೇವೆ. ಒಂದು ಸಂಗತಿಯೇನಂದರೆ, ದೇವರು ಪ್ರೀತಿಯಿಂದ ನಮ್ಮ ದೇಹಗಳನ್ನು, ನಾವು ಜೀವನದಲ್ಲಿ ಆನಂದಿಸಸಾಧ್ಯವಾಗುವಷ್ಟು ಅದ್ಭುತಕರವಾದಂತಹ ರೀತಿಯಲ್ಲಿ ನಿರ್ಮಿಸಿದ್ದಾನೆ. (ಕೀರ್ತನೆ 139:14) “ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ” ತುಂಬಿಸುವುದರಲ್ಲಿ ಆತನ ಪ್ರೀತಿಯು ತೋರಿಸಲಾಗುತ್ತದೆ. (ಅ. ಕೃತ್ಯಗಳು 14:17) ದೇವರು, “ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ . . . ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ” ಸುರಿಯುವಂತೆಯೂ ಮಾಡುತ್ತಾನೆ. (ಮತ್ತಾಯ 5:45) ನಾವು ದೇವರ ಜ್ಞಾನವನ್ನು ಸಂಪಾದಿಸುವಂತೆ ಮತ್ತು ಆತನ ಆರಾಧಕರಾಗಿ ಆತನನ್ನು ಸಂತೋಷದಿಂದ ಸೇವಿಸುವಂತೆ ಸಹ ಪ್ರೀತಿಯು ನಮ್ಮ ಸೃಷ್ಟಿಕರ್ತನನ್ನು ಪ್ರಚೋದಿಸುತ್ತದೆ. ನಿಶ್ಚಯವಾಗಿಯೂ, “ದೇವರು ಪ್ರೀತಿಸ್ವರೂಪಿಯು.” (1 ಯೋಹಾನ 4:8) ಆದರೆ ಆತನ ವ್ಯಕ್ತಿತ್ವಕ್ಕೆ ಇನ್ನೂ ಎಷ್ಟೋ ಹೆಚ್ಚಿನದು ಇದೆ.
“ಕನಿಕರವೂ ದಯೆಯೂ ಉಳ್ಳ ದೇವರು”
17. ವಿಮೋಚನಕಾಂಡ 34:6, 7 ರಲ್ಲಿ ನಾವು ದೇವರ ಕುರಿತು ಏನು ಕಲಿಯುತ್ತೇವೆ?
17 ಕೆಂಪು ಸಮುದ್ರವನ್ನು ದಾಟಿದ ಬಳಿಕ ಇಸ್ರಾಯೇಲ್ಯರಿಗೆ ದೇವರನ್ನು ಇನ್ನೂ ಹೆಚ್ಚು ಉತ್ತಮವಾಗಿ ತಿಳಿಯುವ ಅಗತ್ಯವಿತ್ತು. ಮೋಶೆಗೆ ಈ ಆವಶ್ಯಕತೆಯ ಅರಿವಿದ್ದು ಅವನು ಪ್ರಾರ್ಥಿಸಿದ್ದು: “ನನಗೆ ನಿನ್ನ ದಯೆ ದೊರಕಿದ್ದಾದರೆ ನಾನು ನಿನ್ನನ್ನು ಬಲ್ಲವನಾಗಿರುವಂತೆ ನಿನ್ನ ಮಾರ್ಗವನ್ನು ನನಗೆ ತೋರಿಸು.” (ವಿಮೋಚನಕಾಂಡ 33:13) ದೇವರ ಸ್ವಂತ ಪ್ರಕಟನೆಯನ್ನು ಕೇಳಿದ ಮೇಲೆ ಮೋಶೆ ದೇವರೊಂದಿಗೆ ಹೆಚ್ಚು ಪರಿಚಿತನಾದನು: “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು; ಆದರೂ [ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು.” (ವಿಮೋಚನಕಾಂಡ 34:6, 7) ದೇವರು ತನ್ನ ಪ್ರೀತಿಯನ್ನು ನ್ಯಾಯದೊಂದಿಗೆ ಸರಿದೂಗಿಸಿ, ಇಚ್ಛಾಪೂರ್ವಕರಾದ ಪಾಪಿಗಳನ್ನು ಅವರ ತಪ್ಪುಗಳ ಪರಿಣಾಮಗಳಿಂದ ಕಾಪಾಡುವುದಿಲ್ಲ.
18. ಯೆಹೋವನು ಕರುಣಾಭರಿತನಾಗಿ ಪರಿಣಮಿಸಿದ್ದು ಹೇಗೆ?
18 ಮೋಶೆಯು ಕಲಿತಂತೆ, ಯೆಹೋವನು ಕರುಣೆ ತೋರಿಸುತ್ತಾನೆ. ಒಬ್ಬ ಕರುಣೆಯ ವ್ಯಕ್ತಿಗೆ ಬಾಧೆ ಪಡುವವರ ಮೇಲೆ ಕನಿಕರವಿರುತ್ತದೆ ಮತ್ತು ಅವನು ಅವರಿಗೆ ಉಪಶಮನವನ್ನು ತರಲು ಪ್ರಯತ್ನಿಸುತ್ತಾನೆ. ಹೀಗೆ ದೇವರು ಕಷ್ಟಾನುಭವ, ರೋಗ ಮತ್ತು ಮರಣದಿಂದ ಶಾಶ್ವತ ಉಪಶಮನವನ್ನು ತರುವ ಒದಗಿಸುವಿಕೆಯನ್ನು ಮಾಡುವ ಮೂಲಕ ಮಾನವಕುಲಕ್ಕೆ ಕರುಣೆ ತೋರಿಸಿದ್ದಾನೆ. (ಪ್ರಕಟನೆ 21:3-5) ದೇವರ ಆರಾಧಕರು ಈ ದುಷ್ಟ ಲೋಕದ ಪರಿಸ್ಥಿತಿಗಳ ಕಾರಣ ವಿಪತ್ತುಗಳನ್ನು ಅನುಭವಿಸಬಹುದು ಅಥವಾ ಅವರು ಅವಿವೇಕದಿಂದ ವರ್ತಿಸಿ ತೊಂದರೆಗೊಳಗಾಗಬಹುದು. ಆದರೆ ಅವರು ಸಹಾಯಕ್ಕಾಗಿ ಯೆಹೋವನ ಕಡೆಗೆ ದೈನ್ಯದಿಂದ ತಿರುಗುವಲ್ಲಿ, ಆತನು ಅವರಿಗೆ ಸಾಂತ್ವನ ಮತ್ತು ಸಹಾಯವನ್ನು ನೀಡುವನು. ಏಕೆ? ಏಕೆಂದರೆ ಆತನು ತನ್ನ ಆರಾಧಕರಿಗೆ ಕರುಣೆಯಿಂದ ಕೋಮಲವಾದ ಲಕ್ಷ್ಯವನ್ನು ಕೊಡುತ್ತಾನೆ.—ಕೀರ್ತನೆ 86:15; 1 ಪೇತ್ರ 5:6, 7.
19. ದೇವರು ವಿನಯಶೀಲನೆಂದು ನಾವು ಏಕೆ ಹೇಳಬಲ್ಲೆವು?
19 ಅಧಿಕಾರದಲ್ಲಿರುವ ಅನೇಕ ಜನರು ಇತರರೊಂದಿಗೆ ನಿರ್ದಯತೆಯಿಂದ ವರ್ತಿಸುತ್ತಾರೆ. ವಿಪರ್ಯಸ್ತವಾಗಿ, ಯೆಹೋವನು ತನ್ನ ದೀನ ಸೇವಕರೆಡೆಗೆ ಎಷ್ಟು ವಿನಯಶೀಲನು! ಆತನು ವಿಶ್ವದ ಪರಮಾಧಿಕಾರಿಯಾಗಿದ್ದರೂ, ಆತನು ಸರ್ವ ಮಾನವ ಕುಲಕ್ಕೆ ಒಂದು ಸಾಮಾನ್ಯವಾದ ರೀತಿಯಲ್ಲಿ ಎದ್ದುಕಾಣುವ ದಯೆಯನ್ನು ತೋರಿಸುತ್ತಾನೆ. (ಕೀರ್ತನೆ 8:3, 4; ಲೂಕ 6:35) ಯೆಹೋವನು ಒಬ್ಬೊಬ್ಬರಿಗೂ, ಅನುಗ್ರಹಕ್ಕಾಗಿ ಅವರ ನಿರ್ದಿಷ್ಟ ಬಿನ್ನಹಗಳನ್ನು ಉತ್ತರಿಸುತ್ತಿರುವ ವಿನಯಶೀಲನಾಗಿದ್ದಾನೆ. (ವಿಮೋಚನಕಾಂಡ 22:26, 27; ಲೂಕ 18:13, 14) ನಿಶ್ಚಯವಾಗಿ, ದೇವರು ಯಾರಿಗೂ ಅನುಗ್ರಹ ಅಥವಾ ಕರುಣೆ ತೋರಿಸಲು ಹಂಗಿಗನಲ್ಲ. (ವಿಮೋಚನಕಾಂಡ 33:19) ಆದುದರಿಂದ, ನಾವು ದೇವರ ಕರುಣೆ ಮತ್ತು ಕೃಪೆಗೆ ಆಳವಾದ ಗಣ್ಯತೆಯನ್ನು ತೋರಿಸುವ ಅಗತ್ಯವಿದೆ.—ಕೀರ್ತನೆ 145:1, 8.
ಕೋಪಕ್ಕೆ ನಿಧಾನಿ, ನಿಷ್ಪಕ್ಷಪಾತಿ ಮತ್ತು ನೀತಿವಂತ
20. ಯೆಹೋವನು ಕೋಪಕ್ಕೆ ನಿಧಾನಿ ಹಾಗೂ ನಿಷ್ಪಕ್ಷಪಾತಿ ಎಂದು ಯಾವುದು ತೋರಿಸುತ್ತದೆ?
20 ಯೆಹೋವನು ಕೋಪಕ್ಕೆ ನಿಧಾನಿ. ಆದರೂ, ಆತನು ಕ್ರಮ ಕೈಕೊಳ್ಳುವುದಿಲ್ಲ ಎಂದು ಇದರ ಅರ್ಥವಲ್ಲ, ಏಕೆಂದರೆ ಹಠಮಾರಿ ಫರೋಹನನ್ನೂ ಅವನ ಸೈನ್ಯವನ್ನೂ ನಾಶಮಾಡಿದ್ದರಲ್ಲಿ ಆತನು ಇದನ್ನು ಮಾಡಿದನು. ಯೆಹೋವನು ನಿಷ್ಪಕ್ಷಪಾತಿಯೂ ಹೌದು. ಆದಕಾರಣ, ಆತನ ಅನುಗ್ರಹಿತ ಜನರಾದ ಇಸ್ರಾಯೇಲ್ಯರು, ಪಟ್ಟುಹಿಡಿದು ಮಾಡಿದ ತಪ್ಪಿಗಾಗಿ ಕ್ರಮೇಣ ಆತನ ಅನುಗ್ರಹವನ್ನು ಕಳೆದುಕೊಂಡರು. ದೇವರು ಎಲ್ಲ ರಾಷ್ಟ್ರಗಳಿಂದ ಜನರನ್ನು ತನ್ನ ಆರಾಧಕರಾಗಿ ಅಂಗೀಕರಿಸುತ್ತಾನೆ, ಆದರೆ ತನ್ನ ನೀತಿಯ ಮಾರ್ಗಗಳಿಗೆ ಹೊಂದಿಕೊಳ್ಳುವವರನ್ನು ಮಾತ್ರ.—ಅ. ಕೃತ್ಯಗಳು 10:34, 35.
21. (ಎ) ಪ್ರಕಟನೆ 15:2-4, ದೇವರ ಕುರಿತು ನಮಗೆ ಏನನ್ನು ಕಲಿಸುತ್ತದೆ? (ಬಿ) ದೇವರು ಯಾವುದನ್ನು ಸರಿಯೆಂದು ಹೇಳುತ್ತಾನೊ ಅದನ್ನು ಮಾಡಲು ಯಾವುದು ನಮಗೆ ಹೆಚ್ಚು ಸುಲಭ ಮಾಡುವುದು?
21 ದೇವರ “ನೀತಿಯ ಕೃತ್ಯ” ಗಳ ಬಗೆಗೆ ಕಲಿಯುವ ಪ್ರಮುಖತೆಯನ್ನು ಬೈಬಲ್ ಪುಸ್ತಕವಾದ ಪ್ರಕಟನೆಯು ಎತ್ತಿ ತೋರಿಸುತ್ತದೆ. ಸ್ವರ್ಗೀಯ ಜೀವಿಗಳು ಹೀಗೆ ಹಾಡುವುದನ್ನು ಅದು ನಮಗೆ ತಿಳಿಸುತ್ತದೆ: “ದೇವರಾದ ಕರ್ತನೇ, ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಸರ್ವಜನಾಂಗಗಳ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ; ಕರ್ತನೇ, ನಿನ್ನ ನಾಮಕ್ಕೆ ಭಯಪಡದವರೂ ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಾದರೂ ಇದ್ದಾರೇ? ನೀನೊಬ್ಬನೇ ಪರಿಶುದ್ಧನು; ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಾಶಕ್ಕೆ ಬಂದದರಿಂದ ಎಲ್ಲಾ ಜನಾಂಗಗಳು ಬಂದು ನಿನ್ನ ಸನ್ನಿಧಾನದಲ್ಲಿ ನಮಸ್ಕಾರ ಮಾಡುವರು.” (ಪ್ರಕಟನೆ 15:2-4) ಯೆಹೋವನು ಯಾವುದು ಸರಿಯೆಂದು ಹೇಳುತ್ತಾನೊ ಅದಕ್ಕೆ ಹೊಂದಿಕೊಳ್ಳುವ ಮೂಲಕ ನಾವು ಆತನಿಗೆ ಹಿತಕರವಾದ ಭಯವನ್ನು ಅಥವಾ ಪೂಜ್ಯ ಭಾವನೆಯನ್ನು ತೋರಿಸುತ್ತೇವೆ. ದೇವರ ವಿವೇಕ ಮತ್ತು ಪ್ರೀತಿಯ ಕುರಿತು ನಾವು ಜ್ಞಾಪಿಸಿಕೊಳ್ಳುವುದರಿಂದ ಹೀಗೆ ತೋರಿಸುವುದು ಸುಲಭವಾಗಿ ಮಾಡಲ್ಪಡುತ್ತದೆ. ಆತನ ಸಕಲ ಆಜ್ಞೆಗಳು ನಮ್ಮ ಒಳಿತಿಗಾಗಿವೆ.—ಯೆಶಾಯ 48:17, 18.
“ನಮ್ಮ ದೇವರಾದ ಯೆಹೋವನು ಒಬ್ಬನೇ”
22. ಬೈಬಲನ್ನು ಅಂಗೀಕರಿಸುವವರು ಒಂದು ತ್ರಯೈಕ್ಯವನ್ನು ಏಕೆ ಆರಾಧಿಸುವುದಿಲ್ಲ?
22 ಪೂರ್ವಕಾಲದ ಐಗುಪ್ತ್ಯರು ಅನೇಕ ದೇವತೆಗಳನ್ನು ಆರಾಧಿಸಿದರು, ಆದರೆ ಯೆಹೋವನು, “ಸಂಪೂರ್ಣ ಭಕ್ತಿಯನ್ನು ನಿರ್ಬಂಧಿಸುವ ದೇವರು.” (ವಿಮೋಚನಕಾಂಡ 20:5, NW) ಮೋಶೆಯು ಇಸ್ರಾಯೇಲ್ಯರಿಗೆ, “ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು,” ಎಂದು ನೆನಪು ಹುಟ್ಟಿಸಿದನು. (ಧರ್ಮೋಪದೇಶಕಾಂಡ 6:4, ಓರೆಅಕ್ಷರಗಳು ನಮ್ಮವು.) ಯೇಸು ಕ್ರಿಸ್ತನು ಅವೇ ಮಾತುಗಳನ್ನು ಪುನರಾವೃತ್ತಿಸಿದನು. (ಮಾರ್ಕ 12:28, 29) ಆದಕಾರಣ, ಬೈಬಲನ್ನು ದೇವರ ವಾಕ್ಯವೆಂದು ಅಂಗೀಕರಿಸುವವರು, ಒಂದರಲ್ಲಿ ಮೂವರು ವ್ಯಕ್ತಿಗಳು ಅಥವಾ ದೇವರುಗಳಿರುವ ಒಂದು ತ್ರಯೈಕ್ಯವನ್ನು ಆರಾಧಿಸುವುದಿಲ್ಲ. ವಾಸ್ತವವೇನಂದರೆ, “ತ್ರಯೈಕ್ಯ” ಎಂಬ ಪದವು ಬೈಬಲಿನಲ್ಲಿ ಕಂಡುಬರುವುದೂ ಇಲ್ಲ. ಸತ್ಯ ದೇವರು ಯೇಸು ಕ್ರಿಸ್ತನಿಗಿಂತ ಪ್ರತ್ಯೇಕವಾಗಿರುವ ಒಬ್ಬ ವ್ಯಕ್ತಿ. (ಯೋಹಾನ 14:28; 1 ಕೊರಿಂಥ 15:28) ದೇವರ ಪವಿತ್ರಾತ್ಮವು ಒಬ್ಬ ವ್ಯಕ್ತಿಯಲ್ಲ. ಅದು ಯೆಹೋವನ ಕಾರ್ಯಕಾರಿ ಶಕ್ತಿ, ಆ ಸರ್ವಶಕ್ತನು ತನ್ನ ಉದ್ದೇಶಗಳನ್ನು ನೆರವೇರಿಸಲು ಬಳಸುವ ಶಕ್ತಿಯಾಗಿದೆ.—ಆದಿಕಾಂಡ 1:2; ಅ. ಕೃತ್ಯಗಳು 2:1-4, 32, 33; 2 ಪೇತ್ರ 1:20, 21.
23. (ಎ) ದೇವರಿಗಾಗಿರುವ ನಿಮ್ಮ ಪ್ರೀತಿಯು ಹೇಗೆ ಬೆಳೆಯುವುದು? (ಬಿ) ದೇವರನ್ನು ಪ್ರೀತಿಸುವ ಕುರಿತು ಯೇಸುವು ಏನು ಹೇಳಿದನು, ಮತ್ತು ಕ್ರಿಸ್ತನ ಕುರಿತು ನಾವು ಏನು ಕಲಿಯುವುದು ಅಗತ್ಯ?
23 ಯೆಹೋವನು ಎಂತಹ ಅದ್ಭುತ ಸ್ವರೂಪನು ಎಂಬುದನ್ನು ನೀವು ಪರಿಗಣಿಸುವಾಗ, ಆತನು ನಿಮ್ಮ ಆರಾಧನೆಗೆ ಅರ್ಹನೆಂದು ನೀವು ಒಪ್ಪುವುದಿಲ್ಲವೆ? ಆತನ ವಾಕ್ಯವಾದ ಬೈಬಲನ್ನು ನೀವು ಅಭ್ಯಾಸ ಮಾಡಿದಂತೆ, ನೀವು ಆತನನ್ನು ಹೆಚ್ಚು ಉತ್ತಮವಾಗಿ ತಿಳಿದು, ನಿಮ್ಮ ನಿತ್ಯ ಹಿತ ಮತ್ತು ಸಂತೋಷಕ್ಕಾಗಿ ಆತನು ನಿಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆಂದು ಕಲಿಯುವಿರಿ. (ಮತ್ತಾಯ 5:3, 6) ಇದಕ್ಕೆ ಕೂಡಿಸಿ, ದೇವರಿಗಾಗಿರುವ ನಿಮ್ಮ ಪ್ರೀತಿಯು ಬೆಳೆಯುವುದು. ಅದು ಸಮಂಜಸ, ಏಕೆಂದರೆ ಯೇಸುವು ಹೇಳಿದ್ದು: “ನಿನ್ನ ದೇವರಾದ ಕರ್ತ [“ಯೆಹೋವ,” NW] ನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.” (ಮಾರ್ಕ 12:30) ಯೇಸುವಿನಲ್ಲಿ ದೇವರ ಕಡೆಗೆ ಅಂತಹ ಪ್ರೀತಿಯಿತ್ತೆಂದು ವ್ಯಕ್ತವಾಗುತ್ತದೆ. ಆದರೆ ಬೈಬಲು ಯೇಸು ಕ್ರಿಸ್ತನ ಕುರಿತು ಏನು ಪ್ರಕಟಪಡಿಸುತ್ತದೆ? ಯೆಹೋವನ ಉದ್ದೇಶದಲ್ಲಿ ಅವನ ಪಾತ್ರವೇನು?
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
ದೇವರ ಹೆಸರೇನು, ಮತ್ತು ಅದನ್ನು ಹೀಬ್ರು ಶಾಸ್ತ್ರವಚನದಲ್ಲಿ ಎಷ್ಟು ಬಾರಿ ಉಪಯೋಗಿಸಲಾಗಿದೆ?
ನೀವು ದೇವರ ಹೆಸರನ್ನು ಏಕೆ ಉಪಯೋಗಿಸಬೇಕು?
ಯೆಹೋವ ದೇವರ ಯಾವ ಗುಣಗಳು ನಿಮಗೆ ವಿಶೇಷವಾಗಿ ಹಿಡಿಸುತ್ತವೆ?
[ಅಧ್ಯಯನ ಪ್ರಶ್ನೆಗಳು]
[ಪುಟ 29ರಲ್ಲಿರುವ ಚಿತ್ರ]
ಸಕಲ ವಿಷಯಗಳ ಸೃಷ್ಟಿಕರ್ತನನ್ನು ನೀವು ಎಷ್ಟು ಚೆನ್ನಾಗಿ ತಿಳಿದಿದ್ದೀರಿ?