ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 11

ಯೇಸುವಿನ ಬಗ್ಗೆ ಬರೆದವರು

ಯೇಸುವಿನ ಬಗ್ಗೆ ಬರೆದವರು

ಮೇಲಿನ ಚಿತ್ರದಲ್ಲಿ ಇರುವವರನ್ನು ನೋಡಿದೆಯಾ?— ಇವರ ಹೆಸರು ಮತ್ತಾಯ, ಮಾರ್ಕ, ಲೂಕ, ಯೋಹಾನ, ಪೇತ್ರ, ಯಾಕೋಬ, ಯೂದ, ಪೌಲ. ಯೇಸು ಜೀವಿಸಿದ್ದ ಸಮಯದಲ್ಲೇ ಇವರೂ ಜೀವಿಸಿದ್ದರು. ಯೇಸುವಿನ ಬಗ್ಗೆ ಬರೆದರು. ಇವರ ಬಗ್ಗೆ ಹೆಚ್ಚನ್ನು ಕಲಿಯೋಣ.

ಇವರ ಬಗ್ಗೆ ನಿನಗೆ ಏನೆಲ್ಲಾ ಗೊತ್ತು?

ಇವರಲ್ಲಿ ಮೂವರು ಯೇಸುವಿನ ಜೊತೆ ಸುವಾರ್ತೆ ಸಾರಿದ ಅಪೊಸ್ತಲರು. ಯಾರು ಆ ಮೂವರು?— ಮತ್ತಾಯ, ಯೋಹಾನ ಮತ್ತು ಪೇತ್ರ. ಅಪೊಸ್ತಲರಾದ ಮತ್ತಾಯ ಮತ್ತು ಯೋಹಾನರಿಗೆ ಯೇಸುವಿನ ಒಳ್ಳೇ ಪರಿಚಯವಿತ್ತು. ಹಾಗಾಗಿ ಯೇಸುವಿನ ಜೀವನದ ಬಗ್ಗೆ ಒಂದೊಂದು ಪುಸ್ತಕ ಬರೆದರು. ಅಪೊಸ್ತಲ ಯೋಹಾನ ಪ್ರಕಟನೆ ಹೆಸರಿನ ಪುಸ್ತಕ ಮತ್ತು ಮೊದಲನೇ ಯೋಹಾನ, ಎರಡನೇ ಯೋಹಾನ, ಮೂರನೇ ಯೋಹಾನ ಎಂಬ ಪತ್ರಗಳನ್ನು ಸಹ ಬರೆದ. ಅಪೊಸ್ತಲ ಪೇತ್ರ ಬರೆದಿದ್ದು ಎರಡು ಪತ್ರಗಳು. ಇವುಗಳ ಹೆಸರು ಮೊದಲನೇ ಪೇತ್ರ ಮತ್ತು ಎರಡನೇ ಪೇತ್ರ. ಈ ಪುಸ್ತಕಗಳು, ಪತ್ರಗಳು ಬೈಬಲಲ್ಲಿವೆ. ಪೇತ್ರ ಬರೆದ ಎರಡನೇ ಪತ್ರದಲ್ಲಿ ಯೆಹೋವನು ಸ್ವರ್ಗದಿಂದ ಮಾತಾಡಿದ ಸಂದರ್ಭದ ಬಗ್ಗೆ ಇದೆ. ಯೆಹೋವನು ಯೇಸು ಬಗ್ಗೆ ಹೇಳಿದ್ದು: ‘ಇವನು ನನ್ನ ಮಗ. ಇವನನ್ನು ತುಂಬ ಪ್ರೀತಿಸುತ್ತೇನೆ. ಇವನ ಬಗ್ಗೆ ನನಗೆ ತುಂಬ ಹೆಮ್ಮೆ.’

ಈ ಚಿತ್ರದಲ್ಲಿರುವ ಬೇರೆಯವರೂ ಯೇಸುವಿನ ಬಗ್ಗೆ ಪುಸ್ತಕಗಳನ್ನು ಬರೆದರು. ಅವರಲ್ಲಿ ಒಬ್ಬ ಮಾರ್ಕ. ಯೇಸುವನ್ನು ಸೈನಿಕರು ಹಿಡಿದುಕೊಂಡು ಹೋಗುವ ಸಮಯದಲ್ಲಿ ಅವನು ಅಲ್ಲಿ ಇದ್ದಿರಬಹುದು. ನಡೆದ ಘಟನೆಗಳನ್ನೆಲ್ಲ ಕಣ್ಣಾರೆ ಕಂಡನು. ಚಿತ್ರದಲ್ಲಿರುವ ಇನ್ನೊಬ್ಬ ವ್ಯಕ್ತಿ ಲೂಕ. ಇವನು ವೈದ್ಯ. ಯೇಸು ಸತ್ತ ಮೇಲೆ ಇವನು ಕ್ರೈಸ್ತನಾದ ಅಂದರೆ ಯೇಸುವಿನ ಹಿಂಬಾಲಕನಾದ.

ಇನ್ನಿಬ್ಬರ ಚಿತ್ರ ಇಲ್ಲಿದೆಯಲ್ಲಾ, ಇವರು ಯೇಸುವಿನ ತಮ್ಮಂದಿರು. ಇವರೂ ಯೇಸುವಿನ ಬಗ್ಗೆ ಬರೆದರು. ನಿನಗೆ ಇವರ ಹೆಸರು ಗೊತ್ತಾ?— ಯಾಕೋಬ ಮತ್ತು ಯೂದ. ಇವರು ಮೊದಮೊದಲು ಯೇಸುವಿನ ಮೇಲೆ ನಂಬಿಕೆ ಇಡಲಿಲ್ಲ. ಯೇಸುವಿಗೆ ಸ್ವಲ್ಪ ತಲೆ ಕೆಟ್ಟಿದೆ ಅಂತ ನೆನಸುತ್ತಿದ್ದರು. ಆದರೆ ಸ್ವಲ್ಪ ಸಮಯದ ನಂತರ ಯೇಸುವಿನ ಮೇಲೆ ನಂಬಿಕೆ ಇಟ್ಟು ಕ್ರೈಸ್ತರಾದರು.

ಕೊನೆಯ ಚಿತ್ರ ಪೌಲನದ್ದು. ಕ್ರೈಸ್ತನಾಗುವ ಮುಂಚೆ ಇವನ ಹೆಸರು ಸೌಲ. ಇವನಿಗೆ ಕ್ರೈಸ್ತರು ಸ್ವಲ್ಪವೂ ಇಷ್ಟ ಆಗುತ್ತಿರಲಿಲ್ಲ. ತುಂಬ ಕಾಟಕೊಡುತ್ತಿದ್ದ. ಆಮೇಲೆ ಅವನು ಹೇಗೆ ಕ್ರೈಸ್ತನಾದ ಗೊತ್ತಾ?— ಒಂದು ದಿನ ಪೌಲ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಇದ್ದಕ್ಕಿದ್ದ ಹಾಗೆ ಸ್ವರ್ಗದಿಂದ ಯಾರೊ ಇವನನ್ನು ಕರೆದ ಹಾಗಾಯಿತು. ಕರೆದದ್ದು ಯೇಸು! ಅವನು ಪೌಲನಿಗೆ ‘ನನ್ನನ್ನು ನಂಬುವವರಿಗೆ ಯಾಕಷ್ಟು ಕಾಟಕೊಡುತ್ತೀಯ?’ ಎಂದು ಕೇಳಿದ. ಇದಾದ ನಂತರ ಪೌಲ ತುಂಬ ಬದಲಾದ ಮತ್ತು ಕ್ರೈಸ್ತನಾದ. ಬೈಬಲಲ್ಲಿ ರೋಮನ್ನರಿಂದ ಇಬ್ರಿಯದ ವರೆಗೆ 14 ಪುಸ್ತಕಗಳನ್ನು ಬರೆದ.

ನಾವು ದಿನಾಲೂ ಬೈಬಲ್‌ ಓದುತ್ತೇವೆ ಅಲ್ಲವಾ?— ಬೈಬಲ್‌ ಓದುವುದರಿಂದ ನಾವು ಯೇಸು ಬಗ್ಗೆ ತುಂಬ ವಿಷಯಗಳನ್ನು ಕಲಿಯುತ್ತೇವೆ. ಯೇಸು ಬಗ್ಗೆ ಇನ್ನೂ ಕಲಿಯಲು ನಿನಗೆ ಇಷ್ಟ ಇದೆಯಾ?—