ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಬ್ಬರು ಸಾಕ್ಷಿಗಳನ್ನು ಪುನರುಜ್ಜೀವಗೊಳಿಸುವುದು

ಇಬ್ಬರು ಸಾಕ್ಷಿಗಳನ್ನು ಪುನರುಜ್ಜೀವಗೊಳಿಸುವುದು

ಅಧ್ಯಾಯ 25

ಇಬ್ಬರು ಸಾಕ್ಷಿಗಳನ್ನು ಪುನರುಜ್ಜೀವಗೊಳಿಸುವುದು

1. ಬಲಿಷ್ಠ ದೇವದೂತನು ಯೋಹಾನನಿಗೆ ಏನನ್ನು ಮಾಡಲು ಕರೆ ನೀಡಿದನು?

ಎರಡನೆಯ ವಿಪತ್ತು ಕಟ್ಟಕಡೆಗೆ ಗತಿಸುವ ಮೊದಲು, ಬಲಿಷ್ಠ ದೇವದೂತನು ಯೋಹಾನನಿಗೆ ದೇವಾಲಯದೊಂದಿಗೆ ಸಂಬಂಧಿಸಿದ ಇನ್ನೊಂದು ಪ್ರವಾದನಾ ನಿರೂಪಣೆಯಲ್ಲಿ ಭಾಗವಹಿಸಲು ಕರೆನೀಡುತ್ತಾನೆ. (ಪ್ರಕಟನೆ 9:12; 10:1) ಯೋಹಾನನು ವರದಿಸಿದ್ದು ಇಲ್ಲಿದೆ: “‘ನೀನೆದ್ದು ದೇವರ ಆಲಯದ ಪವಿತ್ರಸ್ಥಾನವನ್ನೂ ಯಜ್ಞವೇದಿಯನ್ನೂ ಅದರಲ್ಲಿ ಆರಾಧಿಸುತ್ತಿರುವವರನ್ನೂ ಅಳತೆ ಮಾಡು’ ಎಂದು ಅವನು ಹೇಳಿದಾಗ ದಂಡದಂತಿದ್ದ ಒಂದು ದಂಟು ನನಗೆ ಕೊಡಲಾಯಿತು.”—ಪ್ರಕಟನೆ 11:1, NW.

ಆಲಯದ ಪವಿತ್ರಸ್ಥಾನ

2. (ಎ) ನಮ್ಮ ದಿನಗಳ ತನಕ ಯಾವ ದೇವಾಲಯದ ಪವಿತ್ರಸ್ಥಾನವು ಬಾಳುವುದು? (ಬಿ) ದೇವಾಲಯದ ಪವಿತ್ರಸ್ಥಾನದ ಮಹಾ ಯಾಜಕನು ಯಾರು, ಮತ್ತು ಅದರ ಅತಿ ಪವಿತ್ರ ಸ್ಥಾನ ಯಾವುದು?

2 ಇಲ್ಲಿ ಸೂಚಿಸಲಾದ ದೇವಾಲಯವು ಯೆರೂಸಲೇಮಿನ ಯಾವುದೇ ಅಕ್ಷರಶಃ ದೇವಾಲಯವಾಗಿರಸಾಧ್ಯವಿಲ್ಲ, ಯಾಕಂದರೆ ಇವುಗಳಲ್ಲಿ ಕೊನೆಯದ್ದು ಸಾ.ಶ. 70 ರಲ್ಲಿ ರೋಮನರಿಂದ ನಾಶಗೊಳಿಸಲ್ಪಟ್ಟಿತ್ತು. ಆದಾಗ್ಯೂ, ಆ ನಾಶನದ ಮುಂಚೆಯೂ, ನಮ್ಮ ದಿನಗಳ ವರೆಗೆ ಬಾಳುವ ಇನ್ನೊಂದು ದೇವಾಲಯದ ಪವಿತ್ರಸ್ಥಾನವು ಗೋಚರಿಸಿತೆಂದು ಅಪೊಸ್ತಲ ಪೌಲನು ತೋರಿಸಿದನು. ದೇವಗುಡಾರದಿಂದ ಮತ್ತು ಯೆರೂಸಲೇಮಿನಲ್ಲಿ ಅನಂತರ ಕಟ್ಟಿಸಿದ ದೇವಾಲಯಗಳಿಂದ ಒದಗಿಸಲಾದ ಪ್ರವಾದನಾ ನಮೂನೆಗಳನ್ನು ನೆರವೇರಿಸಿದ ಮಹಾ ಆತ್ಮಿಕ ದೇವಾಲಯವು ಇದಾಗಿತ್ತು. ಇದು “ಮನುಷ್ಯರು ಹಾಕದೇ ಯೆಹೋವನೇ ಹಾಕಿದ ನಿಜವಾದ ದೇವದರ್ಶನ ಗುಡಾರ” ಆಗಿದೆ ಮತ್ತು “ಪರಲೋಕದೊಳಗೆ ಮಹತ್ವವುಳ್ಳ ದೇವರ ಸಿಂಹಾಸನದ ಬಲಗಡೆಯಲ್ಲಿ” ಈಗಾಗಲೇ “ಆಸನಾರೂಢನಾಗಿದ್ದಾನೆ” ಎಂದು ಪೌಲನು ವರ್ಣಿಸಿರುವ ಯೇಸು ಕ್ರಿಸ್ತನು ಇದರ ಮಹಾ ಯಾಜಕನಾಗಿದ್ದಾನೆ. ಅದರ ಅತಿ ಪವಿತ್ರ ಸ್ಥಾನವು ಪರಲೋಕದಲ್ಲಿ ಯೆಹೋವನ ಸಾನ್ನಿಧ್ಯದ ನೆಲೆಯಾಗಿರುತ್ತದೆ.—ಇಬ್ರಿಯ 8:1, 2; 9:11, 24.

3. ದೇವದರ್ಶನದ ಗುಡಾರದಲ್ಲಿ, (ಎ) ಅತಿ ಪವಿತ್ರಸ್ಥಾನವನ್ನು ಪವಿತ್ರಸ್ಥಾನದಿಂದ ಪ್ರತ್ಯೇಕಿಸುವ ತೆರೆಯಿಂದ, (ಬಿ) ಪ್ರಾಣಿಗಳ ಯಜ್ಞಗಳಿಂದ, (ಸಿ) ಯಜ್ಞವೇದಿಯಿಂದ ಏನು ಚಿತ್ರಿಸಲ್ಪಟ್ಟಿತ್ತು?

3 ಅತಿ ಪವಿತ್ರ ಸ್ಥಾನವನ್ನು ಪವಿತ್ರ ಸ್ಥಾನದಿಂದ ವಿಂಗಡಿಸುವ ಮಂಜೂಷದ ತೆರೆಯು ಯೇಸುವಿನ ದೇಹವನ್ನು ಸೂಚಿಸುತ್ತದೆಂದು ಅಪೊಸ್ತಲ ಪೌಲನು ವಿವರಿಸುತ್ತಾನೆ. ಯೇಸು ತನ್ನ ಜೀವವನ್ನು ಅರ್ಪಿಸಿದಾಗ, ಈ ತೆರೆಯು ಇಬ್ಭಾಗಗೊಂಡು, ಹೀಗೆ ಪರಲೋಕದಲ್ಲಿ ಯೆಹೋವನ ಸಾನ್ನಿಧ್ಯದಲ್ಲಿ ಆತನ ಪ್ರವೇಶಕ್ಕೆ ಯೇಸುವಿನ ದೇಹವು ಇನ್ನು ಮುಂದೆ ಒಂದು ಅಡ್ಡಿಯಾಗಿಲ್ಲವೆಂದು ತೋರಿಸಿತು. ಯೇಸುವಿನ ಯಜ್ಞದ ಆಧಾರದ ಮೇಲೆ, ನಂಬಿಗಸ್ತರಾಗಿ ಸತ್ತಿರುವ ಆತನ ಅಭಿಷಿಕ್ತ ಉಪಯಾಜಕರು ಸಕಾಲದಲ್ಲಿ ಪರಲೋಕದೊಳಗೆ ಪ್ರವೇಶಿಸುವರು. (ಮತ್ತಾಯ 27:50, 51; ಇಬ್ರಿಯ 9:3; 10:19, 20) ದೇವಗುಡಾರದಲ್ಲಿ ಪ್ರಾಣಿಗಳ ಸತತ ಯಜ್ಞಗಳು ಸಹ ಯೇಸುವಿನ ಪರಿಪೂರ್ಣ ಮಾನವ ಜೀವದ ಒಂದೇ ಯಜ್ಞವನ್ನು ಮುನ್‌ಚಿತ್ರಿಸಿದವೆಂದು ಪೌಲನು ತೋರಿಸಿದನು. ಅಂಗಣದಲ್ಲಿದ್ದ ಯಜ್ಞವೇದಿಯು “ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನುಂಟುಮಾಡುವ” ಯೇಸುವಿನ ಯಜ್ಞವನ್ನು “ಬಹುಜನರ”—ಅಭಿಷಿಕ್ತರ, ಮತ್ತು ತದನಂತರ ಬೇರೆ ಕುರಿಗಳ—ಪರವಾಗಿ ಸ್ವೀಕರಿಸುವ ಯೆಹೋವನ ಚಿತ್ತಕ್ಕನುಸಾರವಾದ ಅವನ ಒದಗಿಸುವಿಕೆಯನ್ನು ಪ್ರತಿನಿಧಿಸುತ್ತದೆ.—ಇಬ್ರಿಯ 9:28; 10:9, 10; ಯೋಹಾನ 10:16.

4. (ಎ) ಪವಿತ್ರ ಸ್ಥಾನದಿಂದ, (ಬಿ) ಒಳಗಣ ಅಂಗಣದಿಂದ ಏನು ಸೂಚಿಸಲ್ಪಟ್ಟಿತ್ತು?

4 ಈ ದೇವ ಪ್ರೇರಿತ ಸಮಾಚಾರದಿಂದ, “ಈ ತೆರೆಯ” ಮೂಲಕ ಪ್ರವೇಶಿಸುವ ಮೊದಲು ಅವರು ಇನ್ನೂ ಭೂಮಿಯಲ್ಲಿರುವಾಗ, ಮೊದಲು ಕ್ರಿಸ್ತನಿಂದ ಮತ್ತು ತದನಂತರ 1,44,000 ಮಂದಿ ರಾಜಯಾಜಕರ ಅಭಿಷಿಕ್ತ ಸದಸ್ಯರಿಂದ ಅನುಭವಿಸಲ್ಪಡುವ ಪವಿತ್ರ ಸ್ಥಿತಿಯನ್ನು ಗುಡಾರದಲ್ಲಿನ ಪವಿತ್ರ ಸ್ಥಾನವು ಸೂಚಿಸುತ್ತದೆಂದು ನಾವು ತೀರ್ಮಾನಿಸಬಲ್ಲೆವು. (ಇಬ್ರಿಯ 6:19, 20; 1 ಪೇತ್ರ 2:9) ಸಾ. ಶ. 29 ರಲ್ಲಿ ಯೊರ್ದನ್‌ನಲ್ಲಿ ಯೇಸುವಿನ ದೀಕ್ಷಾಸ್ನಾನವನ್ನು ಹಿಂಬಾಲಿಸಿ ದೇವರು ಯೇಸುವನ್ನು ತನ್ನ ಮಗನೆಂದು ಸ್ವೀಕರಿಸಿದಂತೆ, ಅವರು ದೇವರ ಆತ್ಮಿಕ ಪುತ್ರರಾಗಿ ಸ್ವೀಕರಿಸಲ್ಪಟ್ಟಿದ್ದಾರೆಂಬುದನ್ನು ಇದು ಚೆನ್ನಾಗಿ ಪ್ರತಿನಿಧಿಸುತ್ತದೆ. (ಲೂಕ 3:22; ರೋಮಾಪುರ 8:15) ಮತ್ತು ಯಾಜಕರಲ್ಲದ ಇಸ್ರಾಯೇಲ್ಯರಿಗೆ ಗೋಚರವಾಗಿರುವ ಗುಡಾರದ ಒಂದೇ ಭಾಗವಾಗಿದ್ದ ಮತ್ತು ಯಜ್ಞಗಳು ಅರ್ಪಿಸಲ್ಪಡುತ್ತಿದ್ದ ಸ್ಥಳವಾದ ಒಳಗಣ ಅಂಗಣದ ಕುರಿತೇನು? ಮಾನವಕುಲಕ್ಕೋಸ್ಕರ ತನ್ನ ಜೀವವನ್ನು ನೀಡಲು ಯೋಗ್ಯವನ್ನಾಗಿ ಮಾಡಿದ ಮನುಷ್ಯ ಯೇಸುವಿನ ಪರಿಪೂರ್ಣ ನಿಲುವನ್ನು ಇದು ಚಿತ್ರಿಸುತ್ತದೆ. ಭೂಮಿಯ ಮೇಲೆ ಇರುವಾಗ ಆತನ ಅಭಿಷಿಕ್ತ ಹಿಂಬಾಲಕರು ಅನುಭವಿಸುವ, ಯೇಸುವಿನ ಯಜ್ಞದ ಆಧಾರದ ಮೇಲೆ ನೀಡಲ್ಪಟ್ಟ ಪವಿತ್ರರೆಂಬ ನೀತಿಯ ನಿಲುವನ್ನು ಸಹ ಇದು ಪ್ರತಿನಿಧಿಸುತ್ತದೆ. *ರೋಮಾಪುರ 1:7; 5:1.

ದೇವಾಲಯದ ಪವಿತ್ರಸ್ಥಾನವನ್ನು ಅಳೆಯುವುದು

5. ಹೀಬ್ರು ಶಾಸ್ತ್ರವಚನಗಳ ಪ್ರವಾದನೆಗಳಲ್ಲಿ (ಎ) ಯೆರೂಸಲೇಮನ್ನು ಅಳತೆಮಾಡುವುದರ, (ಬಿ) ಯೆಹೆಜ್ಕೇಲನ ದಾರ್ಶನಿಕ ದೇವಾಲಯದ ಅಳತೆಮಾಡುವಿಕೆಯ ಸೂಚಿತಾರ್ಥವೇನಾಗಿತ್ತು?

5 “ದೇವರ ಆಲಯದ ಪವಿತ್ರಸ್ಥಾನವನ್ನೂ ಯಜ್ಞವೇದಿಯನ್ನೂ ಅದರಲ್ಲಿ ಆರಾಧಿಸುತ್ತಿರುವವರನ್ನೂ ಅಳತೆ ಮಾಡಲು” ಯೋಹಾನನಿಗೆ ಹೇಳಲಾಗುತ್ತದೆ. ಇದರಲ್ಲಿ ಏನು ಅರ್ಥವಿದೆ? ಹೀಬ್ರು ಶಾಸ್ತ್ರವಚನಗಳ ಪ್ರವಾದನೆಗಳಲ್ಲಿ, ಯೆಹೋವನ ಪರಿಪೂರ್ಣ ಮಟ್ಟಗಳ ಆಧಾರದ ಮೇಲೆ ಕರುಣೆಯೊಂದಿಗೆ ಹದಮಾಡಲ್ಪಟ್ಟ ನ್ಯಾಯವನ್ನು ಸಲ್ಲಿಸಲಾಗುವುದೆಂದು ಇಂಥ ಅಳೆಯುವಿಕೆಯು ಖಾತರಿ ಕೊಡುತ್ತದೆ. ದುಷ್ಟ ರಾಜನಾದ ಮನಸ್ಸೆಯ ದಿವಸಗಳಲ್ಲಿ, ಯೆರೂಸಲೇಮಿನ ಪ್ರವಾದನಾ ಅಳೆಯುವಿಕೆಯು, ಆ ನಗರದ ಮೇಲೆ ಬದಲಿಸಲಾಗದ ನಾಶನದ ನ್ಯಾಯತೀರ್ಪಿಗೆ ಸಾಕ್ಷ್ಯವನ್ನು ಕೊಟ್ಟಿತು. (2 ಅರಸುಗಳು 21:13; ಪ್ರಲಾಪ 2:8) ಆದಾಗ್ಯೂ, ಅನಂತರ ಯೆರೂಸಲೇಮ್‌ ಅಳೆಯಲ್ಪಟ್ಟದ್ದನ್ನು ಯೆರೆಮೀಯನು ನೋಡಿದಾಗ, ನಗರವು ಪುನಃ ಕಟ್ಟಲ್ಪಡುವುದೆಂದು ಇದು ದೃಢೀಕರಿಸಿತು. (ಯೆರೆಮೀಯ 31:39; ಜೆಕರ್ಯ 2:2-8 ಸಹ ನೋಡಿರಿ.) ತದ್ರೀತಿ, ಯೆಹೆಜ್ಕೇಲನಿಂದ ನೋಡಲ್ಪಟ್ಟ ದಾರ್ಶನಿಕ ಆಲಯದ ವಿಸ್ತಾರ್ಯ ಮತ್ತು ವಿವರವಾದ ಅಳೆಯುವಿಕೆಯು, ಸತ್ಯಾರಾಧನೆಯು ತಮ್ಮ ಸ್ವದೇಶದಲ್ಲಿ ಪುನಃ ಸ್ಥಾಪಿಸಲ್ಪಡುವುದೆಂದು ಬಾಬೆಲಿನಲ್ಲಿದ್ದ ಯೆಹೂದಿ ಬಂದಿವಾಸಿಗಳಿಗೆ ಒಂದು ಖಾತರಿಯನ್ನು ಕೊಟ್ಟಿತು. ತಮ್ಮ ಪಾಪಗಳ ದೆಸೆಯಿಂದ ಇನ್ನು ಮುಂದೆ ಇಸ್ರಾಯೇಲ್ಯರು ದೇವರ ಪವಿತ್ರ ಮಟ್ಟಗಳಿಗೆ ತಮ್ಮನ್ನು ಹೊಂದಿಸಬೇಕೆಂದು ಕೂಡ ಇದು ಅವರಿಗೆ ನೆನಪನ್ನು ಕೊಟ್ಟಿತು.—ಯೆಹೆಜ್ಕೇಲ 40:3, 4; 43:10.

6. ದೇವಾಲಯದ ಪವಿತ್ರಸ್ಥಾನವನ್ನೂ ಅದರಲ್ಲಿ ಆರಾಧಿಸುವ ಯಾಜಕರನ್ನೂ ಅಳತೆಮಾಡಬೇಕೆಂದು ಯೋಹಾನನಿಗೆ ಹೇಳಲ್ಪಟ್ಟದ್ದು ಯಾವುದರ ಒಂದು ಸೂಚಕವಾಗಿದೆ? ವಿವರಿಸಿರಿ.

6 ಆದಕಾರಣ, ದೇವಾಲಯದ ಪವಿತ್ರಸ್ಥಾನವನ್ನು ಮತ್ತು ಅದರಲ್ಲಿ ಆರಾಧನೆ ಮಾಡುತ್ತಿರುವ ಯಾಜಕರನ್ನು ಅಳೆಯಲು ಯೋಹಾನನಿಗೆ ಆಜ್ಞಾಪಿಸಲ್ಪಟ್ಟಾಗ, ಆಲಯದ ವ್ಯವಸ್ಥಾಪನೆಯ ಮತ್ತು ಅದರೊಂದಿಗೆ ಜತೆಗೂಡಿರುವವರ ಕುರಿತಾಗಿರುವ ಯೆಹೋವನ ಉದ್ದೇಶಗಳ ನೆರವೇರಿಕೆಯನ್ನು ಯಾವುದೂ ತಡೆಗಟ್ಟಸಾಧ್ಯವಿಲ್ಲ ಮತ್ತು ಆ ಉದ್ದೇಶಗಳು ತಮ್ಮ ಪರಮಾವಧಿಗೆ ಸಮೀಪಿಸುತ್ತಿವೆ ಎಂಬುದಕ್ಕೆ ಅದು ಒಂದು ಗುರುತಾಗಿದೆ. ಈಗ ಎಲ್ಲಾ ಸಂಗತಿಗಳು ಯೆಹೋವನ ಬಲಿಷ್ಠ ದೇವದೂತನ ಪಾದಗಳ ಕೆಳಗೆ ಹಾಕಲ್ಪಟ್ಟಿರುವುದರಿಂದ, “ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವ” ಸಮಯ ಇದಾಗಿದೆ. (ಯೆಶಾಯ 2:2-4) ಕ್ರೈಸ್ತಪ್ರಪಂಚದ ಶತಮಾನಗಳ ಧರ್ಮಭ್ರಷ್ಟತೆಯ ಅನಂತರ, ಯೆಹೋವನ ಶುದ್ಧಾರಾಧನೆಯು ಮಹಿಮೆಗೇರಿಸಲ್ಪಡಬೇಕು. ಮೃತಪಟ್ಟ ಯೇಸುವಿನ ನಂಬಿಗಸ್ತ ಸಹೋದರರು “ಅತಿ ಪರಿಶುದ್ಧ” ಸ್ಥಳದೊಳಗೆ ಪುನರುತ್ಥಾನಗೊಳ್ಳುವ ಸಮಯವೂ ಇದಾಗಿರುತ್ತದೆ. (ದಾನಿಯೇಲ 9:24; 1 ಥೆಸಲೊನೀಕ 4:14-16; ಪ್ರಕಟನೆ 6:11; 14:4) ಮತ್ತು ದೇವರ ಆತ್ಮಾಭಿಷಿಕ್ತ ಪುತ್ರರೋಪಾದಿ ದೇವರ ಆಲಯದ ಏರ್ಪಾಡಿನಲ್ಲಿ ತಮ್ಮ ಶಾಶ್ವತ ಸ್ಥಳಕ್ಕೆ ಭೂಮಿಯ ಮೇಲೆ “ನಮ್ಮ ದೇವರ ದಾಸ” ರಲ್ಲಿ ಕೊನೆಯದಾಗಿ ಮುದ್ರೆ ಒತ್ತಿಸಿಕೊಂಡವರು ದೈವಿಕ ಮಟ್ಟಗಳಿಗನುಸಾರ ಅಳೆಯಲ್ಪಡಬೇಕು. ಯೋಹಾನ ವರ್ಗಕ್ಕೆ ಇಂದು ಆ ಪವಿತ್ರ ಮಟ್ಟಗಳ ಪೂರ್ಣ ತಿಳಿವಳಿಕೆ ಇದೆ ಮತ್ತು ಅವುಗಳನ್ನು ಮುಟ್ಟಲು ಅದು ಧೃಡಸಂಕಲ್ಪಮಾಡಿದೆ.—ಪ್ರಕಟನೆ 7:1-3; ಮತ್ತಾಯ 13:41, 42; ಎಫೆಸ 1:13, 14; ಹೋಲಿಸಿರಿ ರೋಮಾಪುರ 11:20.

ಅಂಗಳದ ತುಳಿದಾಡುವಿಕೆ

7. (ಎ) ಅಂಗಳವನ್ನು ಅಳತೆಮಾಡಬಾರದೆಂದು ಯೋಹಾನನಿಗೆ ಯಾಕೆ ಹೇಳಲಾಗುತ್ತದೆ? (ಬಿ) ಪರಿಶುದ್ಧ ನಗರವು 42 ತಿಂಗಳುಗಳ ತನಕ ತುಳಿದಾಡಲ್ಪಟ್ಟದ್ದು ಯಾವಾಗ? (ಸಿ) ಕ್ರೈಸ್ತಪ್ರಪಂಚದ ವೈದಿಕರು 42 ತಿಂಗಳುಗಳ ತನಕ ಯೆಹೋವನ ನೀತಿಯ ಮಟ್ಟಗಳನ್ನು ಎತ್ತಿಹಿಡಿಯಲು ತಪ್ಪಿಹೋದದ್ದು ಹೇಗೆ?

7 ಅಂಗಳವನ್ನು ಅಳೆಯುವುದಕ್ಕೆ ಯೋಹಾನನನ್ನು ಯಾಕೆ ನಿಷೇಧಿಸಲಾಯಿತು? ಅವನು ಈ ಮಾತುಗಳಲ್ಲಿ ನಮಗನ್ನುವುದು: “ಆದರೆ ದೇವಾಲಯದ ಹೊರಗಿರುವ ಅಂಗಳದ ವಿಚಾರವಾದರೋ, ಅದನ್ನು ಪೂರ್ತಿ ತಳ್ಳಿಬಿಡು ಮತ್ತು ಅಳೆಯಬೇಡ, ಏಕೆಂದರೆ ಅದನ್ನು ಜನಾಂಗಗಳಿಗೆ ಕೊಡಲಾಗಿದೆ, ಮತ್ತು ಅವರು ಪವಿತ್ರ ನಗರವನ್ನು ನಲ್ವತ್ತೆರಡು ತಿಂಗಳು ತುಳಿದಾಡುವರು.” (ಪ್ರಕಟನೆ 11:2, NW) ಒಳಗಣ ಅಂಗಳವು ಆತ್ಮಾಭಿಷಿಕ್ತ ಕ್ರೈಸ್ತರ ಭೂಮಿಯ ಮೇಲಿನ ನೀತಿಯ ನಿಲುವನ್ನು ಚಿತ್ರಿಸುತ್ತದೆ ಎಂದು ನಾವು ಗಮನಿಸಿದ್ದೇವೆ. ನಾವು ನೋಡಲಿರುವಂತೆ, ಇಲ್ಲಿನ ಉಲ್ಲೇಖವು ಅಕ್ಷರಶಃ ನಲ್ವತ್ತೆರಡು ತಿಂಗಳುಗಳಾಗಿದ್ದು, ದಶಂಬರ 1914 ರಿಂದ 1918ರ ವರೆಗೆ ವಿಸ್ತರಿಸಲ್ಪಡುತ್ತದೆ, ಆಗ ಕ್ರೈಸ್ತರೆಂದು ಹೇಳಿಕೊಳ್ಳುವವರೆಲ್ಲರೂ ಕಠಿನ ಪರೀಕ್ಷೆಗೊಳಗಾದರು. ಈ ಯುದ್ಧದ ವರುಷಗಳಲ್ಲಿ ಅವರು ಯೆಹೋವನ ನೀತಿಯ ಮಟ್ಟಗಳನ್ನು ಎತ್ತಿಹಿಡಿಯುವರೋ? ಹೆಚ್ಚಿನವರು ಎತ್ತಿಹಿಡಿಯಲಿಲ್ಲ. ಒಟ್ಟಾಗಿ, ಕ್ರೈಸ್ತಪ್ರಪಂಚದ ವೈದಿಕರು ರಾಷ್ಟ್ರೀಯತೆಯನ್ನು ದೈವಿಕ ನಿಯಮದ ವಿಧೇಯತೆಗಿಂತಲೂ ಮುಂದಕ್ಕೆ ಇಟ್ಟರು. ಪ್ರಧಾನವಾಗಿ ಕ್ರೈಸ್ತಪ್ರಪಂಚದಲ್ಲಿ ಹೋರಾಡಲ್ಪಟ್ಟ ಯುದ್ಧದ ಇಬ್ಬಣಗಳಲ್ಲಿಯೂ, ಯುವ ಪುರುಷರು ಯುದ್ಧಕಂದಕಗಳಿಗೆ ಹೋಗುವಂತೆ ವೈದಿಕರು ಸಾರಿದರು. ಲಕ್ಷಾಂತರ ಮಂದಿ ಹತಿಸಲ್ಪಟ್ಟರು. ದೇವರ ಮನೆಯಲ್ಲಿ 1918 ರಲ್ಲಿ ನ್ಯಾಯತೀರ್ಪು ಆರಂಭಗೊಳ್ಳುವುದರೊಳಗೆ, ರಕ್ತಪಾತದಲ್ಲಿ ಅಮೆರಿಕವು ಸಹ ಸೇರಿತು, ಮತ್ತು ದೈವಿಕ ಪ್ರತೀಕಾರಕ್ಕಾಗಿ ಇನ್ನೂ ಕೂಗುತ್ತಿರುವ ರಕ್ತಾಪರಾಧವನ್ನು ಕ್ರೈಸ್ತಪ್ರಪಂಚದ ಎಲ್ಲಾ ವೈದಿಕರು ತಂದುಕೊಂಡರು. (1 ಪೇತ್ರ 4:17) ಅವರು ಹೊರಗೆ ದೊಬ್ಬಲ್ಪಟ್ಟದ್ದು ಶಾಶ್ವತವೂ, ಬದಲಾಯಿಸಲಾಗದ್ದೂ ಆಗಿದೆ.—ಯೆಶಾಯ 59:1-3, 7, 8; ಯೆರೆಮೀಯ 19:3, 4.

8. ಒಂದನೆಯ ಲೋಕ ಯುದ್ಧದ ಸಮಯದಲ್ಲಿ, ಅನೇಕ ಬೈಬಲ್‌ ವಿದ್ಯಾರ್ಥಿಗಳು ಏನನ್ನು ಅರಿತುಕೊಂಡರು, ಆದರೆ ಅವರು ಏನನ್ನು ಪೂರ್ಣವಾಗಿ ಗಣ್ಯಮಾಡಲಿಲ್ಲ?

8 ಆದರೂ, ಬೈಬಲ್‌ ವಿದ್ಯಾರ್ಥಿಗಳ ಆ ಚಿಕ್ಕ ಗುಂಪಿನ ಕುರಿತಾಗಿ ಏನು? ದೈವಿಕ ಮಟ್ಟಗಳಿಗೆ ಅವರ ಅಂಟಿಕೊಳ್ಳುವಿಕೆಯಿಂದ ಅವರು 1914 ರಲ್ಲಿ ತಕ್ಷಣವೇ ಅಳೆಯಲ್ಪಡಲಿದ್ದರೋ? ಇಲ್ಲ. ಕ್ರೈಸ್ತಪ್ರಪಂಚದ ನಾಮ ಮಾತ್ರದ ಕ್ರೈಸ್ತರಂತೆ ಅವರು ಕೂಡ ಪರೀಕ್ಷಿಸಲ್ಪಡತಕ್ಕದ್ದು. ಅವರು ಕಠಿನವಾಗಿ ಪರೀಕ್ಷಿಸಲ್ಪಡುವಂತೆ ಮತ್ತು ಹಿಂಸಿಸಲ್ಪಡುವಂತೆ ‘ಪೂರ್ತಿ ತಳ್ಳಲ್ಪಟ್ಟರು, ಜನಾಂಗಗಳಿಗೆ ಕೊಡಲ್ಪಟ್ಟರು.’ ತಾವು ಹೊರಗೆ ಹೋಗಿ, ತಮ್ಮ ಜತೆಮಾನವರನ್ನು ಕೊಲ್ಲಕೂಡದು ಎಂದು ಅವರಲ್ಲಿ ಅನೇಕರು ಅರಿತರು, ಆದರೂ ಕ್ರೈಸ್ತ ತಾಟಸ್ಥ್ಯವನ್ನು ಅವರು ಇನ್ನೂ ಪೂರ್ಣವಾಗಿ ಗಣ್ಯಮಾಡಿರಲಿಲ್ಲ. (ಮೀಕ 4:3; ಯೋಹಾನ 17:14, 16; 1 ಯೋಹಾನ 3:15) ಜನಾಂಗಗಳ ಒತ್ತಡದ ಕೆಳಗೆ, ಕೆಲವರು ಒಪ್ಪಂದಮಾಡಿಕೊಂಡರು.

9. ಅನ್ಯಜನಾಂಗಗಳಿಂದ ತುಳಿದಾಡಲ್ಪಟ್ಟಿದ್ದ ಪರಿಶುದ್ಧ ನಗರ ಯಾವುದು, ಮತ್ತು ಭೂಮಿಯ ಮೇಲೆ, ಈ ನಗರವನ್ನು ಯಾರು ಪ್ರತಿನಿಧಿಸುತ್ತಾರೆ?

9 ಹಾಗಾದರೆ, ಆ ಅನ್ಯಜನಾಂಗಗಳಿಂದ ಪರಿಶುದ್ಧ ಪಟ್ಟಣವು ತುಳಿದಾಡಲ್ಪಟ್ಟದ್ದಾದರೂ ಹೇಗೆ? ಸ್ಪಷ್ಟವಾಗಿ, ಇದು ಪ್ರಕಟನೆಯು ಬರೆಯಲ್ಪಡುವ 25 ವರ್ಷಗಳಿಗಿಂತಲೂ ಮೊದಲು ನಾಶಮಾಡಲ್ಪಟ್ಟ ಯೆರೂಸಲೇಮನ್ನು ಸೂಚಿಸುವುದಿಲ್ಲ. ಬದಲಾಗಿ, ಅನಂತರ ಪ್ರಕಟನೆಯಲ್ಲಿ ವಿವರಿಸಲ್ಪಟ್ಟ ಹೊಸ ಯೆರೂಸಲೇಮ್‌ ಎಂದು ವರ್ಣಿಸಲ್ಪಟ್ಟ ಪರಿಶುದ್ಧ ಪಟ್ಟಣವಾಗಿದೆ. ಅದು ದೇವಾಲಯದ ಒಳಗಣ ಅಂಗಳದಲ್ಲಿ ಉಳಿದಿರುವ ಅಭಿಷಿಕ್ತ ಕ್ರೈಸ್ತರಿಂದ ಇಂದು ಭೂಮಿಯಲ್ಲಿ ಪ್ರತಿನಿಧಿಸಲ್ಪಡುತ್ತದೆ. ಸಕಾಲದಲ್ಲಿ, ಇವರು ಕೂಡ ಪರಿಶುದ್ಧ ಪಟ್ಟಣದ ಭಾಗವಾಗುವರು. ಆದುದರಿಂದ ಅವರನ್ನು ತುಳಿಯುವುದು, ಪಟ್ಟಣವನ್ನು ತುಳಿದಾಡುವುದಕ್ಕೆ ಸಮಾನವಾಗಿದೆ.—ಪ್ರಕಟನೆ 21:2, 9-21.

ಇಬ್ಬರು ಸಾಕ್ಷಿಗಳು

10. ತುಳಿದಾಡಲ್ಪಡುತ್ತಿರುವಾಗ ಯೆಹೋವನ ನಂಬಿಗಸ್ತ ಸಾಕ್ಷಿಗಳು ಏನನ್ನು ಮಾಡುತ್ತಿರಬೇಕು?

10 ತುಳಿದಾಡುವಿಕೆಯು ಮುಂದರಿಯುತ್ತಿರುವಾಗಲೂ, ಈ ನಿಷ್ಠಾವಂತರು ಯೆಹೋವನ ನಂಬಿಗಸ್ತ ಸಾಕ್ಷಿಗಳಾಗಿರುವುದನ್ನು ನಿಲ್ಲಿಸುವುದಿಲ್ಲ. ಆದುದರಿಂದ, ಪ್ರವಾದನೆಯು ಮುಂದರಿಸುವುದು: “‘ಮತ್ತು ನನ್ನ ಇಬ್ಬರು ಸಾಕ್ಷಿಗಳು ಗೋಣೀತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಆರುವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಮಾಡುವೆನು.’ ಇವರು ಎರಡು ಆಲಿವ್‌ ಮರಗಳಿಂದ ಮತ್ತು ಎರಡು ದೀಪಸ್ತಂಭಗಳಿಂದ ಸಂಕೇತಿಸಲ್ಪಡುತ್ತಾರೆ ಮತ್ತು ಭೂಮಿಯ ಒಡೆಯನ ಮುಂದೆ ನಿಂತಿದ್ದಾರೆ.”—ಪ್ರಕಟನೆ 11:3, 4, NW.

11. “ಗೋಣೀತಟ್ಟು ಹೊದ್ದುಕೊಂಡು” ಪ್ರವಾದಿಸುವುದು ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಿಗೆ ಯಾವ ಅರ್ಥದಲ್ಲಿತ್ತು?

11 ಈ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಿಗೆ ತಾಳ್ಮೆಯ ಗುಣದ ಜರೂರಿಯಿತ್ತು, ಯಾಕಂದರೆ ಅವರು “ಗೋಣೀತಟ್ಟುಗಳನ್ನು ಹೊದ್ದುಕೊಂಡು” ಪ್ರವಾದಿಸಬೇಕಿತ್ತು. ಇದರ ಅರ್ಥವೇನು? ಬೈಬಲ್‌ ಸಮಯಗಳಲ್ಲಿ ಗೋಣೀತಟ್ಟು ಅನೇಕಾವರ್ತಿ ಗೋಳಾಡುವಿಕೆಯನ್ನು ಸೂಚಿಸುತ್ತಿತ್ತು. ಅದನ್ನು ಧರಿಸುವುದು ವ್ಯಕ್ತಿಯೊಬ್ಬನು ದುಃಖ ಯಾ ಸಂಕಟಕ್ಕೀಡಾಗಿದ್ದಾನೆಂಬುದರ ಒಂದು ಸೂಚನೆಯಾಗಿತ್ತು. (ಆದಿಕಾಂಡ 37:34; ಯೋಬ 16:15, 16; ಯೆಹೆಜ್ಕೇಲ 27:31) ದೇವರ ಪ್ರವಾದಿಗಳು ಪ್ರಚುರಪಡಿಸಲಿದ್ದ ನಾಶನದ ಯಾ ವಿಪತ್ತಿನ ದುಃಖಕರ ಸಂದೇಶಗಳೊಂದಿಗೆ ಗೋಣೀತಟ್ಟನ್ನು ಜತೆಗೂಡಿಸಲಾಗುತ್ತಿತ್ತು. (ಯೆಶಾಯ 3:8, 24-26; ಯೆರೆಮೀಯ 48:37; 49:3) ಗೋಣೀತಟ್ಟುಗಳನ್ನು ಧರಿಸಿಕೊಳ್ಳುವುದು ದೀನತೆ ಯಾ ದೈವಿಕ ಎಚ್ಚರಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಶ್ಚಾತ್ತಾಪವನ್ನು ಸೂಚಿಸಬಲ್ಲದು. (ಯೋನ 3:5) ಇಬ್ಬರು ಸಾಕ್ಷಿಗಳಿಂದ ಧರಿಸಲ್ಪಟ್ಟ ಗೋಣೀತಟ್ಟು ಯೆಹೋವನ ನ್ಯಾಯತೀರ್ಪನ್ನು ಪ್ರಕಟಪಡಿಸುವುದರಲ್ಲಿ ಅವರ ನಮ್ರ ತಾಳ್ಮೆಯನ್ನು ಸೂಚಿಸುತ್ತದೆಂದು ತೋರುತ್ತದೆ. ಅವರು ಜನಾಂಗಗಳಿಗೆ ಸಹ ಗೋಳಾಟವನ್ನು ತರುವ ಅವನ ಮುಯ್ಯಿತೀರಿಸುವ ದಿನವನ್ನು ಘೋಷಿಸುವ ಸಾಕ್ಷಿಗಳಾಗಿದ್ದರು.—ಧರ್ಮೋಪದೇಶಕಾಂಡ 32:41-43.

12. ಪರಿಶುದ್ಧ ನಗರವು ತುಳಿದಾಡಲ್ಪಡುವ ಸಮಯಾವಧಿಯು ಅಕ್ಷರಶಃವಾಗಿದೆಯೆಂದು ಯಾಕೆ ಭಾಸವಾಗುತ್ತದೆ?

12 ಯೋಹಾನ ವರ್ಗದವರು ಈ ಸಂದೇಶವನ್ನು ಒಂದು ನಿಶ್ಚಿತ ಸಮಯದ ತನಕ ಸಾರಬೇಕಿತ್ತು: 1,260 ದಿನಗಳು, ಯಾ 42 ತಿಂಗಳುಗಳು, ಪರಿಶುದ್ಧ ಪಟ್ಟಣವು ತುಳಿದಾಡಲ್ಪಡುವಷ್ಟೇ ದೀರ್ಘ ಸಮಯಾವಧಿ. ಈ ಸಮಯಾವಧಿಯು ಮೊದಲು ತಿಂಗಳುಗಳಲ್ಲಿ ಮತ್ತು ಅನಂತರ ದಿವಸಗಳಲ್ಲಿ ವ್ಯಕ್ತಮಾಡಲ್ಪಟ್ಟಿರುವುದರಿಂದ ಅಕ್ಷರಶಃವೆಂದು ತೋರುತ್ತದೆ. ಇದಕ್ಕೆ ಕೂಡಿಸಿ, ಕರ್ತನ ದಿನದ ಆರಂಭದಲ್ಲಿ, ದೇವ ಜನರ ಕಠಿನ ಅನುಭವಗಳು ಇಲ್ಲಿ ಪ್ರವಾದಿಸಲ್ಪಟ್ಟ ಘಟನೆಗಳಿಗೆ ಹೊಂದಿಕೊಂಡಿದ್ದು, ಅದು ಮೂರುವರೆ ವರ್ಷಗಳ ಅವಧಿಯಿಂದ ಗುರುತಿಸಲ್ಪಟ್ಟಿತು—1914ರ ದಶಂಬರದಿಂದ ಹಿಡಿದು 1918ರ ಜೂನ್‌ ತನಕ ಮುಂದರಿಯಿತು. (ಪ್ರಕಟನೆ 1:10) ಅವರು ಕ್ರೈಸ್ತಪ್ರಪಂಚಕ್ಕೆ ಮತ್ತು ಲೋಕಕ್ಕೆ ಯೆಹೋವನ ನ್ಯಾಯತೀರ್ಪಿನ ಕುರಿತಾದ ‘ಗೋಣೀತಟ್ಟಿನ’ ಸಂದೇಶವೊಂದನ್ನು ಸಾರಿದರು.

13. (ಎ) ಅಭಿಷಿಕ್ತ ಕ್ರೈಸ್ತರು ಇಬ್ಬರು ಸಾಕ್ಷಿಗಳಿಂದ ಸೂಚಿಸಲ್ಪಟ್ಟಿದ್ದರು ಎಂಬ ವಾಸ್ತವಾಂಶದಿಂದ ಏನು ತೋರಿಸಲ್ಪಟ್ಟಿದೆ? (ಬಿ) ಇಬ್ಬರು ಸಾಕ್ಷಿಗಳನ್ನು “ಎರಡು ಆಲಿವ್‌ ಮರಗಳೂ ಎರಡು ದೀಪಸ್ತಂಭಗಳೂ” ಎಂದು ಯೋಹಾನನು ಕರೆಯುವುದರಿಂದ ಜೆಕರ್ಯನ ಯಾವ ಪ್ರವಾದನೆಯು ಮನಸ್ಸಿಗೆ ತರಲ್ಪಡುತ್ತದೆ?

13 ಇಬ್ಬರು ಸಾಕ್ಷಿಗಳಿಂದ ಅವರು ಸೂಚಿಸಲ್ಪಟ್ಟಿರುವ ವಾಸ್ತವಾಂಶವು ನಮಗೆ ಸ್ಥಿರೀಕರಿಸುತ್ತದೇನಂದರೆ ಅವರ ಸಂದೇಶವು ನಿಷ್ಕೃಷ್ಟವಾದದ್ದು ಮತ್ತು ಒಳ್ಳೆಯ ಆಧಾರವುಳ್ಳದ್ದು. (ಹೋಲಿಸಿರಿ ಧರ್ಮೋಪದೇಶಕಾಂಡ 17:6; ಯೋಹಾನ 8:17, 18.) ಯೋಹಾನನು ಅವರನ್ನು “ಭೂಮಿಯ ಒಡೆಯನ ಮುಂದೆ ನಿಂತಿದ್ದಾರೆಂದು” ಹೇಳುತ್ತಾ, ಅವರನ್ನು “ಎರಡು ಆಲಿವ್‌ ಮರಗಳು ಮತ್ತು ಎರಡು ದೀಪಸ್ತಂಭಗಳು” ಎಂದು ಕರೆಯುತ್ತಾನೆ. ಇದು ಜೆಕರ್ಯನ ಪ್ರವಾದನೆಗೆ ಸುವ್ಯಕ್ತ ಉಲ್ಲೇಖವಾಗಿದ್ದು, ಅವನು ಏಳು ಕವಲುಗಳುಳ್ಳ ಒಂದು ದೀಪಸ್ತಂಭ ಮತ್ತು ಎರಡು ಆಲಿವ್‌ ಮರಗಳನ್ನು ನೋಡಿದ್ದನು. ಎಣ್ಣೆಯ ಮರಗಳು “ಇಬ್ಬರು ಅಭಿಷಿಕ್ತರನ್ನು” ಅಂದರೆ “ಸರ್ವ ಭೂಲೋಕದೊಡೆಯನ ಪಕ್ಕದಲ್ಲಿ ನಿಂತಿರುವ” ದೇಶಾಧಿಪತಿ ಜೆರುಬ್ಬಾಬೆಲ್‌ ಮತ್ತು ಮಹಾ ಯಾಜಕ ಯೆಹೋಶುವನನ್ನು ಚಿತ್ರಿಸುತ್ತದೆಂದು ಹೇಳಲಾಗಿತ್ತು.—ಜೆಕರ್ಯ 4:1-3, 14, NW.

14. (ಎ) ಎರಡು ಆಲಿವ್‌ ಮರಗಳ ಜೆಕರ್ಯನ ದರ್ಶನದಿಂದ ಏನು ಸೂಚಿಸಲ್ಪಟ್ಟಿದೆ? ಮತ್ತು ದೀಪಸ್ತಂಭದಿಂದ? (ಬಿ) ಮೊದಲನೆಯ ಲೋಕ ಯುದ್ಧದ ಸಮಯದಲ್ಲಿ ಅಭಿಷಿಕ್ತ ಕ್ರೈಸ್ತರು ಏನನ್ನು ಅನುಭವಿಸಲಿದ್ದರು?

14 ಜೆಕರ್ಯನು ಪುನಃ ಕಟ್ಟುವ ಸಮಯವೊಂದರಲ್ಲಿ ಜೀವಿಸಿದನು ಮತ್ತು ಎರಡು ಆಲಿವ್‌ ಮರಗಳ ಅವನ ದರ್ಶನವು ಜನರನ್ನು ಕೆಲಸಕ್ಕಾಗಿ ಬಲಪಡಿಸುವುದರಲ್ಲಿ ಜೆರುಬ್ಬಾಬೆಲ್‌ ಮತ್ತು ಯೆಹೋಶುವನು ಯೆಹೋವನ ಆತ್ಮದೊಂದಿಗೆ ಆಶೀರ್ವದಿಸಲ್ಪಡುವರೆಂಬ ಅರ್ಥವನ್ನು ಕೊಟ್ಟಿತು. ದೀಪಸ್ತಂಭಗಳ ದರ್ಶನವು ‘ಅಲ್ಪಕಾರ್ಯಗಳ ದಿನವನ್ನು ತಿರಸ್ಕರಿಸಬಾರದೆಂದು’ ಜೆಕರ್ಯನಿಗೆ ನೆನಪಿಸಿತು, ಯಾಕಂದರೆ ಯೆಹೋವನ ಉದ್ದೇಶಗಳು ಕಾರ್ಯರೂಪಕ್ಕೆ ತರಲ್ಪಡುವವು—“ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮದಿಂದಲೇ ಎಂಬುದು ಸೇನಾಧೀಶ್ವರ ಯೆಹೋವನ ನುಡಿ.” (ಜೆಕರ್ಯ 4:6, 10; 8:9) ಮೊದಲನೆಯ ಲೋಕಯುದ್ಧದ ಸಮಯದಲ್ಲಿ ಮಾನವಕುಲಕ್ಕೆ ಸತ್ಯದ ಬೆಳಕನ್ನು ಪಟ್ಟು ಹಿಡಿದು ಒಯ್ಯುವ ಕ್ರೈಸ್ತರ ಒಂದು ಚಿಕ್ಕ ಗುಂಪು ತದ್ರೀತಿಯ ಪುನಃ ಕಟ್ಟುವ ಕೆಲಸದಲ್ಲಿ ಉಪಯೋಗಿಸಲಿಕ್ಕಿತ್ತು. ಅವರೂ ಉತ್ತೇಜನದ ಮೂಲವಾಗಲಿದ್ದರು ಮತ್ತು ಅವರು ಕೆಲವರೇ ಇದ್ದರೂ, ಯೆಹೋವನ ಬಲದ ಮೇಲೆ ಹೊಂದಿಕೊಂಡಿರಲು ಕಲಿಯುತ್ತಾ ಅಲ್ಪಕಾರ್ಯಗಳ ದಿನವನ್ನು ತಿರಸ್ಕರಿಸದೆ ಇರುವರು.

15. (ಎ) ಇಬ್ಬರು ಸಾಕ್ಷಿಗಳೋಪಾದಿ ಅಭಿಷಿಕ್ತ ಕ್ರೈಸ್ತರು ವರ್ಣಿಸಲ್ಪಟ್ಟಿರುವ ವಾಸ್ತವಾಂಶ ಯಾವುದನ್ನು ಸಹ ನಮ್ಮ ನೆನಪಿಗೆ ತರುತ್ತದೆ? ವಿವರಿಸಿರಿ. (ಬಿ) ಯಾವ ರೀತಿಯ ಚಿಹ್ನೆಗಳನ್ನು ತೋರಿಸಲು ಇಬ್ಬರು ಸಾಕ್ಷಿಗಳಿಗೆ ಅಧಿಕಾರವನ್ನೀಯಲಾಗುತ್ತದೆ?

15 ಅವರನ್ನು ಇಬ್ಬರು ಸಾಕ್ಷಿಗಳೋಪಾದಿ ವರ್ಣಿಸಲ್ಪಟ್ಟಿರುವ ನಿಜತ್ವವು ನಮಗೆ ರೂಪಾಂತರದ ನೆನಪನ್ನು ಸಹ ತರುತ್ತದೆ. ಆ ದರ್ಶನದಲ್ಲಿ, ಯೇಸುವಿನ ಅಪೊಸ್ತಲರಲ್ಲಿ ಮೂವರು ಆತನನ್ನು ರಾಜವೈಭವದಲ್ಲಿ ಮೋಶೆ ಮತ್ತು ಎಲೀಯರೊಂದಿಗೆ ಕಂಡರು. ಇದು, ಆ ಇಬ್ಬರು ಪ್ರವಾದಿಗಳಿಂದ ಮುನ್‌ಚಿತ್ರಿಸಲ್ಪಟ್ಟ ಕೆಲಸವನ್ನು ಪೂರೈಸಲಿಕ್ಕೋಸ್ಕರ, 1914 ರಲ್ಲಿ ತನ್ನ ಮಹಿಮಾಭರಿತ ಸಿಂಹಾಸನದ ಮೇಲೆ ಯೇಸುವಿನ ಆಸೀನನಾಗುವಿಕೆಯನ್ನು ಮುನ್‌ಚಿತ್ರಿಸಿತು. (ಮತ್ತಾಯ 17:1-3, 25:31) ತಕ್ಕದ್ದಾಗಿಯೇ, ಮೋಶೆ ಮತ್ತು ಎಲೀಯರಿಂದ ಮಾಡಲ್ಪಟ್ಟ ಅದ್ಭುತಗಳನ್ನು ಈ ಇಬ್ಬರು ಸಾಕ್ಷಿಗಳು ಈಗ ಮಾಡುವುದನ್ನು ನೋಡಲಾಗುತ್ತದೆ. ಉದಾಹರಣೆಗೆ, ಯೋಹಾನನು ಅವರ ಕುರಿತು ಹೇಳುವುದು: “ಮತ್ತು ಇವರಿಗೆ ಯಾವನಾದರೂ ಕೇಡನ್ನುಂಟುಮಾಡಲು ಬಯಸುವಲ್ಲಿ, ಇವರ ಬಾಯೊಳಗಿಂದ ಬೆಂಕಿ ಹೊರಡುತ್ತದೆ ತ್ತು ಇವರ ಶತ್ರುಗಳನ್ನು ದಹಿಸಿಬಿಡುತ್ತದೆ; ಮತ್ತು ಇವರಿಗೆ ಯಾವನಾದರೂ ಕೇಡನ್ನುಂಟುಮಾಡಲು ಬಯಸಿದರೆ, ಅವನನ್ನು ಈ ರೀತಿಯಲ್ಲಿ ಹತಿಸತಕ್ಕದ್ದು. ತಾವು ಪ್ರವಾದಿಸುವ ದಿವಸಗಳಲ್ಲಿ ಯಾವ ಮಳೆಯೂ ಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಉಂಟು.”—ಪ್ರಕಟನೆ 11:5, 6 ಎ, NW.

16. (ಎ) ಬೆಂಕಿಯನ್ನು ಒಳಗೂಡಿರುವ ಚಿಹ್ನೆಯು ನಮಗೆ ಇಸ್ರಾಯೇಲಿನಲ್ಲಿ ಮೋಶೆಯ ಅಧಿಕಾರವು ಪಂಥಾಹ್ವಾನಕ್ಕೊಡ್ಡಲ್ಪಟ್ಟ ಸಮಯವನ್ನು ಹೇಗೆ ನೆನಪಿಗೆ ತರುತ್ತದೆ? (ಬಿ) ಒಂದನೆಯ ಲೋಕ ಯುದ್ಧದ ಸಮಯದಲ್ಲಿ ಕ್ರೈಸ್ತಪ್ರಪಂಚದ ವೈದಿಕರು ಬೈಬಲ್‌ ವಿದ್ಯಾರ್ಥಿಗಳನ್ನು ತಿರಸ್ಕರಿಸಿದ್ದು ಮತ್ತು ಅವರಿಗೆ ಉಪದ್ರವವನ್ನು ಪ್ರಚೋದಿಸಿದ್ದು ಹೇಗೆ, ಮತ್ತು ಇವರು ಹೇಗೆ ಹಿಂದೆ ಹೋರಾಡಿದರು?

16 ಇದು ಮೋಶೆಯ ಅಧಿಕಾರವು ಇಸ್ರಾಯೇಲಿನಲ್ಲಿ ಪಂಥಾಹ್ವಾನಕ್ಕೊಡ್ಡಲ್ಪಟ್ಟ ಸಮಯವನ್ನು ನಮ್ಮ ನೆನಪಿಗೆ ತರುತ್ತದೆ. ಆ ಪ್ರವಾದಿಯು ನ್ಯಾಯತೀರ್ಪಿನ ಬೆಂಕಿಯಂತಿರುವ ಮಾತುಗಳನ್ನು ನುಡಿದಿದ್ದನು ಮತ್ತು ಪರಲೋಕದಿಂದ ಅಕ್ಷರಶಃ ಬೆಂಕಿಯು ಅವರಲ್ಲಿ 250 ಮಂದಿಯನ್ನು ದಹಿಸುವ ಮೂಲಕ, ಯೆಹೋವನು ಆ ದಂಗೆಕೋರರನ್ನು ನಾಶಗೊಳಿಸಿದನು. (ಅರಣ್ಯಕಾಂಡ 16:1-7, 28-35) ತದ್ರೀತಿಯಲ್ಲಿ ಕ್ರೈಸ್ತಪ್ರಪಂಚದ ಮುಂದಾಳುಗಳು, ದೇವತಾಶಾಸ್ತ್ರದ ಕಾಲೇಜುಗಳಿಂದ ಇವರು ಎಂದಿಗೂ ಪದವೀಧರರಾಗಿಲ್ಲವೆಂದು ಹೇಳುತ್ತಾ, ಬೈಬಲ್‌ ವಿದ್ಯಾರ್ಥಿಗಳನ್ನು ತಿರಸ್ಕರಿಸಿದರು. ಆದರೆ ದೇವರ ಸಾಕ್ಷಿಗಳಿಗೆ ಶುಶ್ರೂಷಕರೋಪಾದಿ ಅದಕ್ಕಿಂತ ಉಚ್ಚತಮ ಅರ್ಹತಾಪತ್ರಗಳಿದ್ದವು: ಅವರ ಶಾಸ್ತ್ರೀಯ ಸಂದೇಶಕ್ಕೆ ಕಿವಿಗೊಟ್ಟ ಆ ನಮ್ರ ಜನರೇ. (2 ಕೊರಿಂಥ 3:2, 3) ಬೈಬಲ್‌ ವಿದ್ಯಾರ್ಥಿಗಳು ದ ಫಿನಿಶ್ಡ್‌ ಮಿಸ್ಟರಿ ಎಂಬ ಪ್ರಕಟನೆ ಮತ್ತು ಯೆಹೆಜ್ಕೇಲ ಪುಸ್ತಕಗಳ ಮೇಲೆ ಒಂದು ಶಕ್ತಿಯುತ ವ್ಯಾಖ್ಯಾನವನ್ನು ಪ್ರಕಟಿಸಿದರು. ಇದನ್ನು ಹಿಂಬಾಲಿಸಿ ಇಂಗ್ಲಿಷಿನಲ್ಲಿ “ಬಾಬೆಲಿನ ಪತನ—ಕ್ರೈಸ್ತಪ್ರಪಂಚ ಈಗ ಬಾಧಿಸಲ್ಪಡಬೇಕಾದ ಕಾರಣ—ಕಟ್ಟಕಡೆಯ ಫಲಿತಾಂಶ” [ದ ಫಾಲ್‌ ಆಫ್‌ ಬ್ಯಾಬಿಲನ್‌—ವೈ ಕ್ರಿಸ್‌ನ್‌ಡಮ್‌ ಮಸ್ಟ್‌ ನೌ ಸಫರ್‌—ದ ಫೈನಲ್‌ ಅವುಟ್‌ಕಮ್‌] ಎಂಬ ನಾಮಾಂಕಿತ ಮುಖ್ಯನೋಟದ ಲೇಖನದೊಂದಿಗೆ ನಾಲ್ಕು ಪುಟಗಳ ದ ಬೈಬಲ್‌ ಸ್ಟ್ಯೂಡೆಂಟ್ಸ್‌ ಮಂತ್ಲೀ ಎಂಬ ಕಿರುಹೊತ್ತಗೆಯ 1,00,00,000 ಪ್ರತಿಗಳನ್ನು ಹಂಚಲಾಯಿತು. ಅಮೆರಿಕದಲ್ಲಿ ಕೋಪೋದ್ರಿಕ್ತ ವೈದಿಕರು, ಈ ಪುಸ್ತಕವನ್ನು ನಿಷೇಧಿಸಲು ಯುದ್ಧದ ಚಿತ್ತೋದ್ರೇಕವನ್ನು ಒಂದು ನೆವನವಾಗಿ ಬಳಸಿದರು. ಬೇರೆ ದೇಶಗಳಲ್ಲಿ ಪುಸ್ತಕವು ಕತ್ತರಿಪ್ರಯೋಗಕ್ಕೊಳಗಾಯಿತು. ಆದಾಗ್ಯೂ, ದೇವರ ಸೇವಕರು ಕಿಂಗ್‌ಡಂ ನ್ಯೂಸ್‌ ನಾಮಾಂಕಿತ ಬೆಂಕಿಯಂಥ ನಾಲ್ಕು ಪುಟಗಳ ಕಿರುಹೊತ್ತಗೆಗಳ ಮೂಲಕ ಎದುರು ಹೋರಾಡುವುದನ್ನು ಜಾರಿಯಲ್ಲಿಟ್ಟರು. ಕರ್ತನ ದಿನವು ಮುಂದುವರಿದಂತೆ, ಇತರ ಪ್ರಕಾಶನಗಳು ಕ್ರೈಸ್ತಪ್ರಪಂಚದ ಆತ್ಮಿಕವಾಗಿ ಜೀವವಳಿದ ಸ್ಥಿತಿಯನ್ನು ಸ್ಪಷ್ಟಗೊಳಿಸಲಿದ್ದವು.—ಹೋಲಿಸಿರಿ ಯೆರೆಮೀಯ 5:14.

17. (ಎ) ಎಲೀಯನ ದಿನಗಳಲ್ಲಿ ಯಾವ ಘಟನೆಗಳು ಅನಾವೃಷ್ಟಿ ಮತ್ತು ಬೆಂಕಿಯನ್ನು ಒಳಗೂಡಿದವು? (ಬಿ) ಇಬ್ಬರು ಸಾಕ್ಷಿಗಳ ಬಾಯಿಗಳಿಂದ ಬೆಂಕಿಯು ಹೊರಟದ್ದು ಹೇಗೆ, ಮತ್ತು ಯಾವ ಅನಾವೃಷ್ಟಿಯು ಒಳಗೂಡಿತ್ತು?

17 ಎಲೀಯನ ಕುರಿತೇನು? ಇಸ್ರಾಯೇಲಿನ ರಾಜರ ದಿನಗಳಲ್ಲಿ, ಬಾಳನನ್ನು ಆರಾಧಿಸುವ ಇಸ್ರಾಯೇಲ್ಯರ ಮೇಲೆ ಯೆಹೋವನ ರೋಷದ ಅಭಿವ್ಯಕ್ತಿಯಾಗಿ ಅನಾವೃಷ್ಟಿಯನ್ನು ಈ ಪ್ರವಾದಿಯು ಪ್ರಚುರಪಡಿಸಿದನು. ಅದು ಮೂರುವರೆ ವರ್ಷಗಳ ವರೆಗೆ ಇತ್ತು. (1 ಅರಸುಗಳು 17:1; 18:41-45; ಲೂಕ 4:25; ಯಾಕೋಬ 5:17) ತದನಂತರ, ಅಪನಂಬಿಗಸ್ತ ರಾಜ ಅಹಜ್ಯನು ಎಲೀಯನನ್ನು ತನ್ನ ರಾಜ್ಯವೈಭವದ ಸನ್ನಿಧಿಯ ಮುಂದೆ ಬರಲು ಬಲಾತ್ಕರಿಸುವಂತೆ ಸಿಪಾಯಿಗಳನ್ನು ಕಳುಹಿಸಿದಾಗ, ಆ ಸಿಪಾಯಿಗಳನ್ನು ದಹಿಸಿಬಿಡಲು ಪ್ರವಾದಿಯು ಪರಲೋಕದಿಂದ ಬೆಂಕಿಯನ್ನು ತರಿಸಿದನು. ಪಂಚಶತಾಧಿಪತಿಯೊಬ್ಬನು ಪ್ರವಾದಿಯೋಪಾದಿ ತನ್ನ ಸ್ಥಾನಕ್ಕೆ ಯೋಗ್ಯ ಗೌರವವನ್ನು ತೋರಿಸಿದಾಗ ಮಾತ್ರವೇ, ಎಲೀಯನು ಅವನೊಂದಿಗೆ ರಾಜನ ಬಳಿಗೆ ಹೋಗಲು ಒಪ್ಪಿದನು. (2 ಅರಸುಗಳು 1:5-16) ಅಂತೆಯೇ, 1914 ಮತ್ತು 1918ರ ನಡುವೆ, ಅಭಿಷಿಕ್ತ ಉಳಿಕೆಯವರು ಧೈರ್ಯದಿಂದ ಕ್ರೈಸ್ತಪ್ರಪಂಚದಲ್ಲಿರುವ ಆತ್ಮಿಕ ಅನಾವೃಷ್ಟಿಯ ಕಡೆಗೆ ಗಮನ ಸೆಳೆದರು ಮತ್ತು “ಯೆಹೋವನ ಆಗಮನದ ಭಯಂಕರವಾದ ಮಹಾದಿನದ” ಬೆಂಕಿಯಂಥ ನ್ಯಾಯತೀರ್ಪಿನ ಕುರಿತು ಎಚ್ಚರಿಸಿದರು.—ಮಲಾಕಿಯ 4:1, 5; ಆಮೋಸ 8:11.

18. (ಎ) ಇಬ್ಬರು ಸಾಕ್ಷಿಗಳಿಗೆ ಯಾವ ಅಧಿಕಾರವನ್ನು ಕೊಡಲಾಗಿದೆ, ಮತ್ತು ಇದು ಮೋಶೆಗೆ ಕೊಡಲ್ಪಟ್ಟದ್ದಕ್ಕೆ ಸಮಾನರೂಪದಲ್ಲಿರುವುದು ಹೇಗೆ? (ಬಿ) ಇಬ್ಬರು ಸಾಕ್ಷಿಗಳು ಕ್ರೈಸ್ತಪ್ರಪಂಚವನ್ನು ಹೇಗೆ ಬಯಲುಗೊಳಿಸಿದರು?

18 ಯೋಹಾನನು ಎರಡು ಸಾಕ್ಷಿಗಳ ಕುರಿತು ಹೇಳುವುದನ್ನು ಮುಂದರಿಸುತ್ತಾನೆ: “ಮತ್ತು ಇವರಿಗೆ ನೀರುಗಳ ಮೇಲೆ, ಬಯಸುವಷ್ಟು ಬಾರಿ ಅವನ್ನು ರಕ್ತವನ್ನಾಗಿ ಮಾರ್ಪಡಿಸಲು ಮತ್ತು ಪ್ರತಿಯೊಂದು ವಿಧದ ಉಪದ್ರವಗಳಿಂದ ಭೂಮಿಯನ್ನು ಹೊಡೆಯಲು ಅಧಿಕಾರವಿದೆ.” (ಪ್ರಕಟನೆ 11:6 ಬಿ, NW) ಇಸ್ರಾಯೇಲ್‌ ಸ್ವತಂತ್ರವಾಗಿ ಹೋಗುವಂತೆ ಫರೋಹನನ್ನು ಒಡಂಬಡಿಸಲು, ದಬ್ಬಾಳಿಕೆಯ ಐಗುಪ್ತವನ್ನು, ನೀರುಗಳನ್ನು ರಕ್ತವಾಗಿ ಮಾರ್ಪಡಿಸುವುದರ ಸಹಿತ, ಬಾಧೆಗಳಿಂದ ಪೀಡಿಸಲು ಯೆಹೋವನು ಮೋಶೆಯನ್ನು ಬಳಸಿದನು. ಶತಮಾನಗಳ ಅನಂತರ, ಇಸ್ರಾಯೇಲಿನ ಫಿಲಿಷ್ಟಿಯ ಶತ್ರುಗಳು ಐಗುಪ್ತದ ವಿರುದ್ಧ ಯೆಹೋವನ ಕಾರ್ಯಗಳನ್ನು ಚೆನ್ನಾಗಿ ನೆನಪಿಸಿಕೊಂಡು, ಹೀಗೆ ಕೂಗುವಂತೆ ನಡಿಸಲ್ಪಟ್ಟರು: “ಪ್ರತಾಪವುಳ್ಳ ಈ ದೇವರ ಕೈಯಿಂದ ನಮ್ಮನ್ನು ಬಿಡಿಸುವವರಾರು? ಐಗುಪ್ತ್ಯರನ್ನು ಅರಣ್ಯದಲ್ಲಿ ಸಂಪೂರ್ಣವಾಗಿ ನಾಶಮಾಡಿ ಬಿಟ್ಟ [“ಬಾಧೆ” ರಿವೈಸ್ಡ್‌ ಸ್ಟ್ಯಾಂಡರ್ಡ್‌ ವರ್ಷನ್‌] ದೇವರು ಇವನೇ ಅಲ್ಲವೋ?” (1 ಸಮುವೇಲ 4:8; ಕೀರ್ತನೆ 105:29) ಯಾರಿಗೆ ತನ್ನ ದಿನದ ಧಾರ್ಮಿಕ ಮುಖಂಡರ ಮೇಲೆ ದೇವರ ನ್ಯಾಯತೀರ್ಪನ್ನು ಘೋಷಿಸುವ ಅಧಿಕಾರವಿತ್ತೋ ಆ ಯೇಸುವನ್ನು ಮೋಶೆಯು ಚಿತ್ರಿಸಿದನು. (ಮತ್ತಾಯ 23:13; 28:18; ಅ. ಕೃತ್ಯಗಳು 3:22) ಮತ್ತು ಮೊದಲನೆಯ ಲೋಕ ಯುದ್ಧದ ಸಮಯದಲ್ಲಿ ಕ್ರಿಸ್ತನ ಸಹೋದರರು, ಇಬ್ಬರು ಸಾಕ್ಷಿಗಳು, ತನ್ನ ಮಂದೆಗಳಿಗೆ ಕ್ರೈಸ್ತಪ್ರಪಂಚವು ನೀಡುತ್ತಿದ್ದ ಮರಣಕಾರಕ ಗುಣಮಟ್ಟದ “ನೀರುಗಳನ್ನು” ಬಯಲುಗೊಳಿಸಿದರು.

ಇಬ್ಬರು ಸಾಕ್ಷಿಗಳು ಕೊಲ್ಲಲ್ಪಡುತ್ತಾರೆ

19. ಪ್ರಕಟನೆಯ ದಾಖಲೆಗನುಸಾರ, ಇಬ್ಬರು ಸಾಕ್ಷಿಗಳು ಅವರ ಸಾಕ್ಷಿ ಕಾರ್ಯವನ್ನು ಮುಗಿಸಿದಾಗ ಏನು ಸಂಭವಿಸುತ್ತದೆ?

19 ಕ್ರೈಸ್ತಪ್ರಪಂಚದ ಮೇಲೆ ಈ ಬಾಧೆಯು ಎಷ್ಟು ತೀವ್ರವಾಗಿತ್ತೆಂದರೆ ಇಬ್ಬರು ಸಾಕ್ಷಿಗಳು 42 ತಿಂಗಳುಗಳ ತನಕ ಗೋಣೀತಟ್ಟಿನಲ್ಲಿ ಪ್ರವಾದಿಸಿದ ಅನಂತರ, ಕ್ರೈಸ್ತಪ್ರಪಂಚವು ಅವರನ್ನು ‘ಕೊಲ್ಲಲು’ ಅವಳ ಲೌಕಿಕ ಪ್ರಭಾವವನ್ನು ಉಪಯೋಗಿಸಿದಳು. ಯೋಹಾನನು ಬರೆಯುವುದು: “ಮತ್ತು ಇವರು ತಮ್ಮ ಸಾಕ್ಷಿಯನ್ನು ಹೇಳಿ ಮುಗಿಸಿದಾಗ ಅಧೋಲೋಕದಿಂದ ಬರುವ ಕಾಡು ಮೃಗವು ಇವರೊಂದಿಗೆ ಯುದ್ಧಮಾಡುವುದು ಮತ್ತು ಇವರನ್ನು ಜಯಿಸುವುದು ಮತ್ತು ಇವರನ್ನು ಕೊಲ್ಲುವುದು. ಮತ್ತು ಆತ್ಮಿಕ ಅರ್ಥದಲ್ಲಿ ಸೊದೋಮ್‌ ಮತ್ತು ಐಗುಪ್ತ ಎಂದು ಕರೆಯಲ್ಪಡುವ ಅವರ ಒಡೆಯನು ಶೂಲಕ್ಕೇರಿಸಲ್ಪಟ್ಟ ಮಹಾ ನಗರದ ವಿಶಾಲ ಬೀದಿಯಲ್ಲಿ ಅವರ ಶವಗಳು ಬಿದ್ದಿರುವವು. ಸಕಲ ಪ್ರಜೆ ಕುಲ ಭಾಷೆ ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳ ವರೆಗೆ ನೋಡುವರು, ಮತ್ತು ಅವರ ಶವಗಳನ್ನು ಸಮಾಧಿಯಲ್ಲಿ ಇಡಲು ಅವರು ಬಿಡುವುದಿಲ್ಲ. ಮತ್ತು ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಪೀಡಿಸಿದ ಕಾರಣ ಭೂನಿವಾಸಿಗಳು ಅವರ ಸ್ಥಿತಿಗಾಗಿ ಉಲ್ಲಾಸಿಸುವರು ಮತ್ತು ಆನಂದಿಸುವರು, ಮತ್ತು ಅವರು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು.”—ಪ್ರಕಟನೆ 11:7-10, NW.

20. “ಅಧೋಲೋಕದಿಂದ ಬರುವ ಕಾಡುಮೃಗವು” ಯಾವುದು?

20 ಪ್ರಕಟನೆಯಲ್ಲಿ ಕಾಡು ಮೃಗಕ್ಕೆ ಮಾಡಿರುವ 37 ಉಲ್ಲೇಖಗಳಲ್ಲಿ ಇದು ಮೊದಲನೆಯದು. ಸಕಾಲದಲ್ಲಿ, ನಾವು ಇದನ್ನು ಮತ್ತು ಇತರ ಮೃಗಗಳನ್ನು ಸವಿವರವಾಗಿ ಪರೀಕ್ಷಿಸುವೆವು. “ಅಧೋಲೋಕದಿಂದ ಬರುವ ಕಾಡು ಮೃಗವು” ಸೈತಾನನ ರಚನೆಯಾಗಿದ್ದು, ಜೀವಂತ ರಾಜಕೀಯ ವಿಷಯ ವ್ಯವಸ್ಥೆಯಾಗಿದೆಯೆಂಬುದನ್ನು ಈಗ ತಿಳಿದರೆ ಸಾಕು. *—ಹೋಲಿಸಿರಿ ಪ್ರಕಟನೆ 13:1; ದಾನಿಯೇಲ 7:2, 3, 17.

21. (ಎ) ಇಬ್ಬರು ಸಾಕ್ಷಿಗಳ ಧಾರ್ಮಿಕ ವಿರೋಧಿಗಳು ಯುದ್ಧದ ಪರಿಸ್ಥಿತಿಯ ಉಪಯೋಗವನ್ನು ಹೇಗೆ ಮಾಡಿದರು? (ಬಿ) ಇಬ್ಬರು ಸಾಕ್ಷಿಗಳ ಶವಗಳು ಹೂಣಿಡಲ್ಪಡದೆ ಇರುವುದರ ವಾಸ್ತವತೆಯು ಏನನ್ನು ಸೂಚಿಸಿತು? (ಸಿ) ಮೂರುವರೆ ದಿನಗಳ ಸಮಯಾವಧಿಯನ್ನು ಹೇಗೆ ದೃಷ್ಟಿಸತಕ್ಕದ್ದು? (ಪಾದಟಿಪ್ಪಣಿಯನ್ನು ನೋಡಿರಿ.)

21 ಇಸವಿ 1914 ರಿಂದ 1918ರ ತನಕ ಜನಾಂಗಗಳು ಮೊದಲನೆಯ ಲೋಕಯುದ್ಧದಲ್ಲಿ ತನ್ಮಯವಾಗಿದ್ದವು. ರಾಷ್ಟ್ರೀಯ ಭಾವನೆಗಳು ಉಚ್ಚಮಟ್ಟಕ್ಕೆ ಏರಿದ್ದವು, ಮತ್ತು 1918ರ ವಸಂತಕಾಲದಲ್ಲಿ ಇಬ್ಬರು ಸಾಕ್ಷಿಗಳ ಧಾರ್ಮಿಕ ವಿರೋಧಿಗಳು ಈ ಪರಿಸ್ಥಿತಿಯ ಪ್ರಯೋಜನವನ್ನು ತೆಗೆದುಕೊಂಡರು. ಅವರು ರಾಷ್ಟ್ರದ ಕಾನೂನಿನ ವ್ಯವಸ್ಥೆಯನ್ನು ತಿರುಗಿಸಿದರು, ಆ ಮೂಲಕ ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ಜವಾಬ್ದಾರಿಯಿರುವ ಶುಶ್ರೂಷಕರು ರಾಜ್ಯದ್ರೋಹದ ಸುಳ್ಳಾರೋಪಣೆಯ ಮೇಲೆ ಸೆರೆಮನೆಗೆ ಹಾಕಲ್ಪಡುವಂತೆ ಮಾಡಿದರು. ನಂಬಿಗಸ್ತ ಜೊತೆಕೆಲಸಗಾರರು ಸ್ತಬ್ಧರಾದರು. ರಾಜ್ಯ ಚಟುವಟಿಕೆಯು ಹೆಚ್ಚಿನಂಶ ನಿಲ್ಲಿಸಲ್ಪಟ್ಟಿತು. ಸಾರುವಿಕೆಯ ಕೆಲಸವು ಸತ್ತಂತೆ ತೋರಿಬಂತು. ಬೈಬಲ್‌ ಸಮಯಗಳಲ್ಲಿ ಜ್ಞಾಪಕ ಸಮಾಧಿಗಳಲ್ಲಿ ಹೂಣಿಡಲ್ಪಡದೆ ಇರುವುದು ಒಂದು ಭಯಂಕರ ಅಪಮಾನವಾಗಿತ್ತು. (ಕೀರ್ತನೆ 79:1-3; 1 ಅರಸುಗಳು 13:21, 22) ಆದುದರಿಂದ, ಇಬ್ಬರು ಸಾಕ್ಷಿಗಳನ್ನು ಹೂಣಿಡದೆ ಬಿಟ್ಟಿರುವುದು ಮಹಾ ಅಪಮಾನದೊಂದಿಗೆ ಜೋಡಿಸಲ್ಪಡಲಿಕ್ಕಿತ್ತು. ಪಲೆಸ್ತೀನದ ಬಿಸಿ ಹವಾಮಾನದಲ್ಲಿ, ತೆರೆದ ಬೀದಿಯಲ್ಲಿ ಒಂದು ಶವವು ಅಕ್ಷರಶಃ ಮೂರುವರೆ ದಿನಗಳ ಅನಂತರ ವಾಸ್ತವವಾಗಿ ನಾತ ಬಡಿಯಲು ಆರಂಭಿಸುವುದು. * (ಯೋಹಾನ 11:39 ಹೋಲಿಸಿರಿ.) ಹೀಗೆ ಇಬ್ಬರು ಸಾಕ್ಷಿಗಳು ಸಹಿಸಿಕೊಳ್ಳಬೇಕಾದ ಅಪಮಾನವನ್ನು ಪ್ರವಾದನೆಯಲ್ಲಿನ ಈ ವಿವರವು ಸೂಚಿಸುತ್ತದೆ. ಸೆರೆಮನೆಗೆ ಹಾಕಲ್ಪಟ್ಟ ಮೇಲೆ, ಮೇಲೆ ಹೇಳಲ್ಪಟ್ಟಿರುವವರ ಮೊಕದ್ದಮೆಗಳು ಅಪ್ಪೀಲ್‌ನಲ್ಲಿರುವಾಗ ಅವರಿಗೆ ಜಾಮೀನನ್ನೂ ನಿರಾಕರಿಸಲಾಯಿತು. “ಮಹಾ ನಗರದ” ನಿವಾಸಿಗಳಿಗೆ ಒಂದು ದುರ್ಗಂಧವಾಗುವಷ್ಟರ ತನಕ ಸಾರ್ವಜನಿಕವಾಗಿ ಅವರನ್ನು ಹಾಗೆಯೇ ಬಯಲುಪಡಿಸಲಾಯಿತು. ಆದರೆ ಈ “ಮಹಾ ನಗರ” ಏನಾಗಿತ್ತು?

22. (ಎ) ಮಹಾ ನಗರವು ಯಾವುದು? (ಬಿ) ಇಬ್ಬರು ಸಾಕ್ಷಿಗಳ ಮೌನಗೊಳಿಸುವಿಕೆಯಲ್ಲಿ ವೈದಿಕರೊಂದಿಗೆ ಸಂತೋಷಿಸುವುದರಲ್ಲಿ ಸಾರ್ವಜನಿಕ ಪತ್ರಿಕೆಗಳು ಹೇಗೆ ಜತೆಗೂಡಿದವು? (ಬಾಕ್ಸನ್ನು ನೋಡಿರಿ.)

22 ಯೋಹಾನನು ನಮಗೆ ಕೆಲವೊಂದು ಸುಳಿವುಗಳನ್ನು ಕೊಡುತ್ತಾನೆ. ಯೇಸು ಅಲ್ಲಿ ಶೂಲಕ್ಕೇರಿಸಲ್ಪಟ್ಟನು ಎಂದು ಅವನನ್ನುತ್ತಾನೆ. ಆದುದರಿಂದ ನಾವು ಕೂಡಲೆ ಯೆರೂಸಲೇಮಿನ ಕುರಿತು ಯೋಚಿಸುತ್ತೇವೆ. ಆದರೆ ಆ ಮಹಾ ಪಟ್ಟಣವು ಸೊದೋಮ್‌ ಎಂತಲೂ ಐಗುಪ್ತವೆಂತಲೂ ಕರೆಯಲ್ಪಡುತ್ತದೆಂದು ಸಹ ಅವನು ಹೇಳುತ್ತಾನೆ. ಒಳ್ಳೇದು, ಅವಳ ಅಶುದ್ಧವಾದ ಆಚಾರಗಳಿಗಾಗಿ, ಅಕ್ಷರಾರ್ಥದ ಯೆರೂಸಲೇಮ್‌ ಒಮ್ಮೆ ಸೊದೋಮ್‌ ಎಂದು ಕರೆಯಲ್ಪಟ್ಟಿತ್ತು. (ಯೆಶಾಯ 1:8-10; ಹೋಲಿಸಿರಿ ಯೆಹೆಜ್ಕೇಲ 16:49, 53-58.) ಮತ್ತು ಮೊದಲನೆಯ ಲೋಕಶಕ್ತಿಯಾಗಿದ್ದ ಐಗುಪ್ತವು ಕೆಲವೊಮ್ಮೆ ಈ ವಿಷಯಗಳ ಲೋಕ ವ್ಯವಸ್ಥೆಯ ಒಂದು ಚಿತ್ರಣವಾಗಿ ತೋರಿಬರುತ್ತದೆ. (ಯೆಶಾಯ 19:1, 19; ಯೋವೇಲ 3:19) ಆದಕಾರಣ, ಈ ಮಹಾ ನಗರವು ದೇವರನ್ನು ಆರಾಧಿಸುತ್ತೇವೆಂದು ಹೇಳುವ, ಆದರೆ ಸೊದೋಮಿನಂತೆ ಅಶುದ್ಧವೂ, ಪಾಪಮಯವೂ ಮತ್ತು ಐಗುಪ್ತದಂತೆ ಈ ಪೈಶಾಚಿಕ ವಿಷಯಗಳ ಲೋಕ ವ್ಯವಸ್ಥೆಯ ಒಂದು ಭಾಗವಾಗಿಯೂ ಇರುವ ಮಲಿನಗೊಂಡ “ಯೆರೂಸಲೇಮ್‌”ನ್ನು ಚಿತ್ರಿಸುತ್ತದೆ. ಅದು ಆಧುನಿಕ ಅಪನಂಬಿಗಸ್ತ ಯೆರೂಸಲೇಮಿಗೆ ಸರಿದೂಗುವ ಮತ್ತು ಇಬ್ಬರು ಸಾಕ್ಷಿಗಳ ಪೀಡಿಸುವ ಸಾರುವ ಕೆಲಸವನ್ನು ಮೌನಗೊಳಿಸಿ ಸಂತೋಷಿಸಲು ಬಹಳಷ್ಟು ಕಾರಣವನ್ನು ಯಾವ ಸಂಸ್ಥೆಯ ಸದಸ್ಯರು ಕಂಡರೋ ಆ ಕ್ರೈಸ್ತಪ್ರಪಂಚವನ್ನು ಚಿತ್ರಿಸುತ್ತದೆ.

ಪುನಃ ಎಬ್ಬಿಸಲ್ಪಡುವುದು!

23. (ಎ) ಇಬ್ಬರು ಸಾಕ್ಷಿಗಳಿಗೆ ಮೂರುವರೆ ದಿನಗಳ ಅನಂತರ ಏನು ಸಂಭವಿಸುತ್ತದೆ, ಮತ್ತು ಅವರ ವಿರೋಧಿಗಳ ಮೇಲೆ ಯಾವ ಪರಿಣಾಮವುಂಟಾಗುತ್ತದೆ? (ಬಿ) ಪ್ರಕಟನೆ 11:11, 12 ಮತ್ತು ಒಣಗಿದ ಎಲುಬುಗಳ ಕಣಿವೆಯಲ್ಲಿ ಯೆಹೋವನು ಜೀವಶ್ವಾಸ ಊದಿದ ಯೆಹೆಜ್ಕೇಲನ ಪ್ರವಾದನೆಯು ಯಾವಾಗ ಒಂದು ಆಧುನಿಕ ದಿನದ ನೆರವೇರಿಕೆಯನ್ನು ಪಡೆಯಿತು?

23 ಸಾರ್ವಜನಿಕ ಪತ್ರಿಕೆಗಳು ದೇವಜನರನ್ನು ಹೀನೈಸುವುದರಲ್ಲಿ ವೈದಿಕರೊಂದಿಗೆ ಜತೆಗೂಡಿದವು, ಒಂದು ವಾರ್ತಾಪತ್ರವು ಅಂದದ್ದು: “ದ ಫಿನಿಶ್ಡ್‌ ಮಿಸ್ಟರಿಯ ಮುಕ್ತಾಯವು (ಫಿನಿಶ್‌) ಮಾಡಲ್ಪಟ್ಟಿದೆ.” ಆದರೂ, ಇದಕ್ಕಿಂತ ಹೆಚ್ಚು ಅಸತ್ಯವಾದ ಬೇರೆ ಸಂಗತಿಯೇ ಇರಲಿಲ್ಲ! ಇಬ್ಬರು ಸಾಕ್ಷಿಗಳು ಸತ್ತವರಾಗಿಯೇ ಉಳಿಯಲಿಲ್ಲ. ನಾವು ಓದುವುದು: “ಮತ್ತು ಮೂರುವರೆ ದಿವಸಗಳಾದ ಮೇಲೆ ದೇವರಿಂದ ಜೀವಾತ್ಮವು ಬಂದು ಅವರಲ್ಲಿ ಪ್ರವೇಶಿಸಿತು, ಮತ್ತು ಅವರು ತಮ್ಮ ಕಾಲಮೇಲೆ ನಿಂತರು, ಮತ್ತು ಅವರನ್ನು ನೋಡುತ್ತಿದ್ದವರಿಗೆ ಮಹಾ ಭಯ ಹಿಡಿಯಿತು. ಮತ್ತು ಆಕಾಶದಿಂದ ಒಂದು ಮಹಾ ವಾಣಿಯು ಅವರಿಗೆ ಹೇಳಿದ್ದನ್ನು ಅವರು ಕೇಳಿದರು: ‘ಇಲ್ಲಿ ಮೇಲಕ್ಕೆ ಬನ್ನಿರಿ.’ ಮತ್ತು ಅವರು ಮೇಘದಲ್ಲಿ ಆಕಾಶಕ್ಕೆ ಏರಿಹೋದರು, ಮತ್ತು ಅವರ ಶತ್ರುಗಳು ಅವರನ್ನು ನೋಡಿದರು.” (ಪ್ರಕಟನೆ 11:11, 12, NW) ಹೀಗೆ, ಯೆಹೆಜ್ಕೇಲನು ತನ್ನ ದರ್ಶನದಲ್ಲಿ ಭೇಟಿಕೊಟ್ಟ ಒಂದು ಕಣಿವೆಯಲ್ಲಿ ಒಣಗಿದ ಎಲುಬುಗಳಿಗಾದ ರೀತಿಯ ಅನುಭವವನ್ನು ಅವರು ಪಡೆದರು. ಯೆಹೋವನು ಆ ಒಣಗಿದ ಎಲುಬುಗಳ ಮೇಲೆ ಶ್ವಾಸವನ್ನು ಊದಲು ಅವು ಜೀವಂತವಾದವು, ಹೀಗೆ ಬಾಬೆಲಿನಲ್ಲಿ 70 ವರ್ಷಗಳ ಗುಲಾಮಗಿರಿಯ ಅನಂತರ ಇಸ್ರಾಯೇಲ್‌ ಜನಾಂಗದ ಪುನಃ ಹುಟ್ಟುವಿಕೆಯ ಒಂದು ಚಿತ್ರಣವನ್ನು ಅದು ಒದಗಿಸಿತು. (ಯೆಹೆಜ್ಕೇಲ 37:1-14) ಯೆಹೆಜ್ಕೇಲ್‌ ಮತ್ತು ಪ್ರಕಟನೆಗಳಲ್ಲಿನ ಈ ಎರಡು ಪ್ರವಾದನೆಗಳು 1919 ರಲ್ಲಿ ಆಧುನಿಕ ದಿನದ ಒಂದು ಗಮನಾರ್ಹವಾದ ನೆರವೇರಿಕೆಯನ್ನು ಹೊಂದಿದವು. ಆಗ ಯೆಹೋವನು ತನ್ನ “ಮೃತ” ಸಾಕ್ಷಿಗಳನ್ನು ತುಡಿಯುತ್ತಿರುವ ಜೀವಿತಕ್ಕೆ ಪುನಃ ಸ್ಥಾಪಿಸಿದನು.

24. ಇಬ್ಬರು ಸಾಕ್ಷಿಗಳು ಜೀವಪಡೆದಾಗ, ಅವರ ಧಾರ್ಮಿಕ ಹಿಂಸಕರ ಮೇಲೆ ಪರಿಣಾಮವೇನಾಗಿತ್ತು?

24 ಆ ಹಿಂಸಕರಿಗೆ ಎಂಥ ಒಂದು ಆಘಾತ! ಇಬ್ಬರು ಸಾಕ್ಷಿಗಳ ಶವಗಳು ಒಮ್ಮೆಲೇ ಜೀವಂತವಾದವು ಮತ್ತು ಪುನಃ ಒಮ್ಮೆ ಸಕ್ರಿಯವಾದವು. ಇದು ಆ ವೈದಿಕರಿಗೆ ನುಂಗಲು ಒಂದು ಕಹಿಮಾತ್ರೆಯಾಯಿತು. ಇನ್ನೂ ಹೆಚ್ಚಾಗಿ ಹೇಗೆಂದರೆ ಯಾರನ್ನು ಅವರು ಸೆರೆಮನೆಯಲ್ಲಿ ಹಾಕಲು ಸಂಚುಹೂಡಿದ್ದರೋ ಆ ಕ್ರೈಸ್ತ ಶುಶ್ರೂಷಕರು ಪುನಃ ಸ್ವತಂತ್ರರಾದರು, ತದನಂತರ ಪೂರ್ಣವಾಗಿ ದೋಷಮುಕ್ತರಾದರು. ಅಮೆರಿಕದ ಒಹೈಯೋವಿನ ಸೀಡರ್‌ ಪಾಯಿಂಟ್‌ನಲ್ಲಿ, 1919 ರಲ್ಲಿ ಬೈಬಲ್‌ ವಿದ್ಯಾರ್ಥಿಗಳ ಒಂದು ಅಧಿವೇಶನವು ಜರುಗಿದಾಗ ಆ ಆಘಾತವು ಇನ್ನಷ್ಟು ಹೆಚ್ಚಾಗಿದ್ದಿರಬೇಕು. ಇಲ್ಲಿ, ಇತ್ತೀಚೆಗೆ ಬಿಡುಗಡೆಗೊಂಡ ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರಾದ ಜೆ. ಎಫ್‌. ರಥರ್‌ಫರ್ಡ್‌ ಪ್ರಕಟನೆ 15:2 ಮತ್ತು ಯೆಶಾಯ 52:7ರ ಮೇಲೆ ಆಧಾರಿತ “ರಾಜ್ಯವನ್ನು ಪ್ರಕಟಿಸುವುದು” ಎಂಬ ಅವರ ಭಾಷಣದಿಂದ ಅಧಿವೇಶನಕ್ಕೆ ಹಾಜರಾದವರನ್ನು ಪ್ರಚೋದಿಸಿದರು. ಯೋಹಾನ ವರ್ಗದವರು ಪುನಃ ಒಮ್ಮೆ “ಪ್ರವಾದಿಸಲು” ಯಾ ಬಹಿರಂಗವಾಗಿ ಸಾರಲು ಆರಂಭಿಸಿದರು. ಅವರು ಶಕ್ತಿಯಿಂದ ಇನ್ನಷ್ಟು ಶಕ್ತಿಗೆ ಮುನ್ನಡೆಯುತ್ತಾ, ಕ್ರೈಸ್ತಪ್ರಪಂಚದ ಕಪಟತನವನ್ನು ನಿರ್ಭೀತಿಯಿಂದ ಬಯಲುಗೊಳಿಸಿದರು.

25. (ಎ) “ಇಲ್ಲಿ ಮೇಲಕ್ಕೆ ಬನ್ನಿರಿ” ಎಂದು ಇಬ್ಬರು ಸಾಕ್ಷಿಗಳಿಗೆ ಹೇಳಿದ್ದು ಯಾವಾಗ, ಮತ್ತು ಅದು ಹೇಗೆ ಸಂಭವಿಸಿತು? (ಬಿ) ಇಬ್ಬರು ಸಾಕ್ಷಿಗಳ ಪುನಃ ಸ್ಥಾಪನೆಯು ಮಹಾ ನಗರದ ಮೇಲೆ ಯಾವ ಆಘಾತಕರ ಪರಿಣಾಮವನ್ನು ತಂದಿತು?

25 ಕ್ರೈಸ್ತಪ್ರಪಂಚವೆಂಬಾಕೆ ತನ್ನ 1918ರ ವಿಜಯವನ್ನು ಪುನರಾವರ್ತಿಸಲು ಪುನಃ ಪುನಃ ಪ್ರಯತ್ನಿಸಿದಳು. ಅವಳು ದೊಂಬಿಗಲಭೆಯನ್ನು, ಕಾನೂನಿನ ತಿರುಚುವಿಕೆಯನ್ನು, ಸೆರೆಮನೆಗೊಡ್ಡುವಿಕೆಯನ್ನು, ಹತ್ಯೆಯನ್ನು ಕೂಡ ಕೈಗೊಂಡಳು—ಎಲ್ಲವೂ ನಿಷ್ಪ್ರಯೋಜಕವಾಗಿತ್ತು! ಇಸವಿ 1919ರ ಅನಂತರ ಇಬ್ಬರು ಸಾಕ್ಷಿಗಳ ಆತ್ಮಿಕ ಕ್ಷೇತ್ರವು ಅವಳ ಕೈಗೆ ಎಟಕದಿರುವಷ್ಟು ಮೀರಿತು. ಆ ವರ್ಷದಲ್ಲಿ ಯೆಹೋವನು ಅವರಿಗೆ ಹೀಗೆ ಹೇಳಿದ್ದನು: “ಇಲ್ಲಿ ಮೇಲಕ್ಕೆ ಬನ್ನಿರಿ,” ಮತ್ತು ಅವರ ಶತ್ರುಗಳು ವೀಕ್ಷಿಸಬಹುದಾದ ಆದರೆ ಅವರನ್ನು ಸ್ಪರ್ಶಿಸಲಾಗದಂಥ ಒಂದು ಉನ್ನತಕ್ಕೇರಿಸಲ್ಪಟ್ಟ ಆತ್ಮಿಕ ಸ್ಥಿತಿಗೆ ಅವರು ಏರಿದ್ದರು. ಅವರ ಪುನಃ ಸ್ಥಾಪನೆಯು ಮಹಾ ನಗರದ ಮೇಲೆ ತಂದಂತಹ ಆಘಾತಕರ ಪರಿಣಾಮವನ್ನು ಯೋಹಾನನು ವರ್ಣಿಸುತ್ತಾನೆ: “ಮತ್ತು ಅದೇ ಗಳಿಗೆಯಲ್ಲಿ ಒಂದು ಮಹಾ ಭೂಕಂಪವುಂಟಾಯಿತು, ಮತ್ತು ಆ ನಗರದ ಹತ್ತರಲ್ಲೊದಂಶವು ಬಿದ್ದುಹೋಯಿತು; ಮತ್ತು ಆ ಭೂಕಂಪದಿಂದ ಏಳು ಸಾವಿರ ಮಂದಿ ಕೊಲ್ಲಲ್ಪಟ್ಟರು, ಮತ್ತು ಉಳಿದವರು ಭಯಗ್ರಸ್ತರಾದರು ಮತ್ತು ಪರಲೋಕ ದೇವರಿಗೆ ಘನವನ್ನು ಸಲ್ಲಿಸಿದರು.” (ಪ್ರಕಟನೆ 11:13, NW) ಧಾರ್ಮಿಕ ಕ್ಷೇತ್ರದಲ್ಲಿ ನಿಜವಾಗಿಯೂ ಮಹಾ ರಭಸದ ಅಳ್ಳಾಡಿಸುವಿಕೆಗಳುಂಟಾದವು. ಈ ಪುನರುಜ್ಜೀವಿತಗೊಳಿಸಲ್ಪಟ್ಟ ಕ್ರೈಸ್ತರ ಸಮೂಹವು ಕಾರ್ಯಕ್ಕಿಳಿದಾಗ, ಸ್ಥಾಪಿತ ಚರ್ಚುಗಳ ಮುಂದಾಳುಗಳ ನೆಲಗಟ್ಟು ಅಲ್ಲಾಡಿದಂತೆ ಭಾಸವಾಯಿತು. ಅವರ ಪಟ್ಟಣದ ಹತ್ತರಲ್ಲೊಂದಂಶವು, ಸಾಂಕೇತಿಕವಾದ 7,000 ವ್ಯಕ್ತಿಗಳು ಎಷ್ಟೊಂದು ಅಗಾಧವಾಗಿ ಬಾಧಿತರಾದರೆಂದರೆ, ಅವರು ಕೊಲ್ಲಲ್ಪಟ್ಟರು ಎಂದು ಹೇಳಲಾಗಿದೆ.

26. ಪ್ರಕಟನೆ 11:13 ರ “ನಗರದ ಹತ್ತರಲ್ಲೊಂದಂಶ” ಮತ್ತು “ಏಳು ಸಾವಿರ ಮಂದಿ” ಯಿಂದ ಯಾರು ಪ್ರತಿನಿಧಿಸಲ್ಪಡುತ್ತಾರೆ? ವಿವರಿಸಿರಿ.

26 “ಪಟ್ಟಣದ ಹತ್ತರಲ್ಲೊಂದಂಶ” ಎಂಬ ಪದವಿನ್ಯಾಸವು, ಪುರಾತನ ಯೆರೂಸಲೇಮಿನ ನಾಶನದಲ್ಲಿ ಪಟ್ಟಣದ ಹತ್ತನೆಯ ಒಂದು ಭಾಗವು ಪವಿತ್ರ ಸಂತಾನದೋಪಾದಿ ಪಾರಾಗಿ ಉಳಿಯುವುದು ಎಂದು ಯೆಶಾಯನು ಪ್ರವಾದಿಸಿದ್ದನ್ನು ನಮ್ಮ ನೆನಪಿಗೆ ತರುತ್ತದೆ. (ಯೆಶಾಯ 6:13) ತದ್ರೀತಿಯಲ್ಲಿ, 7,000 ಅಂಕೆಯು ಇಸ್ರಾಯೇಲಿನಲ್ಲಿ ತಾನೊಬ್ಬನೇ ನಂಬಿಗಸ್ತನಾಗಿ ಉಳಿದಿದ್ದೇನೆ ಎಂದು ಎಲೀಯನು ಭಾವಿಸಿದಾಗ, ವಾಸ್ತವದಲ್ಲಿ ಬಾಳನಿಗೆ ಅಡ್ಡಬೀಳದ ಇನ್ನೂ 7,000 ಮಂದಿ ಅಲ್ಲಿದ್ದಾರೆ ಎಂದು ಯೆಹೋವನು ಅವನಿಗೆ ಹೇಳಿದ್ದನ್ನು ನಮ್ಮ ನೆನಪಿಗೆ ತರುತ್ತದೆ. (1 ಅರಸುಗಳು 19:14, 18) ಮೊದಲನೆಯ ಶತಕದಲ್ಲಿ, ಈ 7,000 ಮಂದಿ ಕ್ರಿಸ್ತನ ಕುರಿತಾದ ಸುವಾರ್ತೆಗೆ ಪ್ರತಿವರ್ತಿಸಿದ ಯೆಹೂದ್ಯರ ಉಳಿಕೆಯವರನ್ನು ಚಿತ್ರಿಸುತ್ತದೆ ಎಂದು ಅಪೊಸ್ತಲ ಪೌಲನು ಹೇಳಿದನು. (ರೋಮಾಪುರ 11:1-5) ಪ್ರಕಟನೆ 11:13 ರಲ್ಲಿರುವ “ಏಳು ಸಾವಿರ ಮಂದಿ” ಮತ್ತು “ಪಟ್ಟಣದ ಹತ್ತರಲ್ಲೊಂದಂಶ” ವೆಂದರೆ ಇಬ್ಬರು ಸಾಕ್ಷಿಗಳಿಗೆ ಪ್ರತಿವರ್ತಿಸುವ ಮತ್ತು ಮಹಾ ಪಾಪಮಯ ಪಟ್ಟಣವನ್ನು ತೊರೆಯುವ ಜನರೆಂದು ತಿಳಿದುಕೊಳ್ಳಲು ಈ ಶಾಸ್ತ್ರವಚನಗಳು ನಮಗೆ ಸಹಾಯ ಮಾಡುತ್ತವೆ. ಅವರು ಕ್ರೈಸ್ತಪ್ರಪಂಚಕ್ಕೆ ಸತ್ತಿದ್ದಾರೋ ಎಂಬಂತಿದ್ದಾರೆ. ಅವರ ಹೆಸರುಗಳು ಅವಳ ಸದಸ್ಯತನದ ಪಟ್ಟಿಯಿಂದ ತೆಗೆಯಲ್ಪಟ್ಟಿವೆ. ಅವಳ ಎಣಿಕೆಯಲ್ಲಿ ಅವರು ಇನ್ನು ಮುಂದೆ ಅಸ್ತಿತ್ವದಲ್ಲಿ ಇಲ್ಲ. *

27, 28. (ಎ) “ಉಳಿದವರು ಪರಲೋಕದ ದೇವರನ್ನು ಘನಪಡಿಸಿದ್ದು” ಹೇಗೆ? (ಬಿ) ಕ್ರೈಸ್ತಪ್ರಪಂಚದ ವೈದಿಕರು ಏನನ್ನು ಅಂಗೀಕರಿಸುವಂತೆ ಒತ್ತಾಯಿಸಲ್ಪಟ್ಟರು?

27 ಆದರೆ ‘[ಕ್ರೈಸ್ತಪ್ರಪಂಚದ] ಉಳಿದವರು ಪರಲೋಕದ ದೇವರಿಗೆ ಘನವನ್ನು ಸಲ್ಲಿಸುವುದು’ ಹೇಗೆ? ಅವರ ಧರ್ಮಭ್ರಷ್ಟ ಧರ್ಮವನ್ನು ತ್ಯಜಿಸುವುದರ ಮತ್ತು ದೇವರ ಸೇವಕರಾಗುವುದರ ಮೂಲಕವಾಗಿ ಖಂಡಿತ ಅಲ್ಲ. ಬದಲಾಗಿ, ವಿನ್ಸೆಂಟ್‌’ರ ವರ್ಡ್‌ ಸಡ್ಟೀಸ್‌ ಇನ್‌ ದ ನ್ಯೂ ಟೆಸ್ಟಮೆಂಟ್‌ ನಲ್ಲಿ ವಿವರಿಸಿದಂತೆ, “ಪರಲೋಕದ ದೇವರಿಗೆ ಘನವನ್ನು ಸಲ್ಲಿಸಿದರು” ಎಂಬ ವಾಕ್ಸರಣಿಯನ್ನು ಚರ್ಚಿಸುವಾಗ ಇದ್ದಂತೆ ಇದೆ. ಅದು ಅಲ್ಲಿ ಹೇಳುವುದು: “ಈ ಪದವಿನ್ಯಾಸವು ಪರಿವರ್ತನೆಯ, ಪಶ್ಚಾತ್ತಾಪದ, ಯಾ ಉಪಕಾರಸ್ಮರಣೆಯ ಕುರಿತು ಅಲ್ಲ, ಆದರೆ ಶಾಸ್ತ್ರವಚನದಲ್ಲಿ ಅದರ ಸಾಮಾನ್ಯ ಅರ್ಥದಲ್ಲಿ ಅಂಗೀಕಾರ ವನ್ನು ಸೂಚಿಸುತ್ತದೆ. ಹೋಲಿಸಿರಿ ಯೆಹೋ. vii. 19 (ಸಪ್ಟ.). ಯೋಹಾನ ix. 24; ಅ. ಕೃತ್ಯಗಳು xii. 23; ರೋಮಾ. iv. 20.” ಅವಳ ಸಂತಾಪಕ್ಕೆ, ಕ್ರೈಸ್ತ ಚಟುವಟಿಕೆಯನ್ನು ಪುನಃ ಸ್ಥಾಪಿಸುವುದರಲ್ಲಿ ಒಂದು ಮಹಾ ಕಾರ್ಯವನ್ನು ಬೈಬಲ್‌ ವಿದ್ಯಾರ್ಥಿಗಳ ದೇವರು ನಡಿಸಿರುತ್ತಾನೆ ಎಂದು ಕ್ರೈಸ್ತಪ್ರಪಂಚವು ಅಂಗೀಕರಿಸಲೇಬೇಕಾಯಿತು.

28 ವೈದಿಕರು ಈ ಅಂಗೀಕಾರವನ್ನು ಮಾನಸಿಕವಾಗಿ ಮಾತ್ರ, ಯಾ ತಮಗೆ ಸ್ವತಃ ಹೇಳಿಕೊಳ್ಳುವುದರ ಮೂಲಕ ಕೊಟ್ಟಿರಬಹುದು. ಇಬ್ಬರು ಸಾಕ್ಷಿಗಳ ದೇವರನ್ನು ಬಹಿರಂಗವಾಗಿ ಅಂಗೀಕರಿಸುವುದನ್ನು ದಾಖಲೆ ಮಾಡಲು ಅವರಲ್ಲಿ ಯಾರೊಬ್ಬನೂ ಹೋಗಲಿಲ್ಲವೆಂಬುದು ಖಂಡಿತ. ಆದರೆ ಯೋಹಾನನ ಮೂಲಕ ಯೆಹೋವನ ಪ್ರವಾದನೆಯು ಅವರ ಹೃದಯಗಳಲ್ಲಿ ಏನಿದೆ ಎಂದು ವಿವೇಚಿಸಲು ಮತ್ತು 1919 ರಲ್ಲಿ ಅವರು ಅನುಭವಿಸಿದ ಅವಮಾನಕಾರೀ ಆಘಾತವನ್ನು ತಿಳಿದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಆ ವರ್ಷದಿಂದ ಹಿಡಿದು, ತನ್ನ ಕುರಿಗಳ ಮೇಲೆ ಹಿಡಿತವನ್ನು ಇಟ್ಟುಕೊಳ್ಳಲು ಅವಳ ನಿರ್ಧಾರಾತ್ಮಕ ಪ್ರಯತ್ನಗಳ ನಡುವೆಯೂ ಕ್ರೈಸ್ತಪ್ರಪಂಚವನ್ನು “ಏಳು ಸಾವಿರ ಮಂದಿ” ಬಿಟ್ಟು ಬಂದಂತೆ, ಯೋಹಾನ ವರ್ಗದವರ ದೇವರು ತಮ್ಮ ದೇವರಿಗಿಂತ ಬಲಾಢ್ಯನು ಎಂದು ವೈದಿಕರು ಅಂಗೀಕರಿಸುವಂತೆ ಒತ್ತಾಯಿಸಲ್ಪಟ್ಟರು. ತದನಂತರದ ವರ್ಷಗಳಲ್ಲಿ, ಕರ್ಮೆಲ್‌ ಬೆಟ್ಟದಲ್ಲಿ ಬಾಳನ ಮತಸ್ಥರ ಮೇಲೆ ಎಲೀಯನು ವಿಜಯ ಗಳಿಸಿದಾಗ, ಜನರು ನುಡಿದ “ಯೆಹೋವನೇ [ಸತ್ಯ, NW] ದೇವರು! ಯೆಹೋವನೇ [ಸತ್ಯ, NW] ದೇವರು!” ಮಾತುಗಳನ್ನು ಪ್ರತಿಧ್ವನಿಸುತ್ತಾ, ಅವರ ಮಂದೆಯೊಳಗಿಂದ ಇನ್ನು ಎಷ್ಟೋ ಹೆಚ್ಚು ಜನರು ಬರುವಾಗ, ಇದನ್ನು ಅವರು ಇನ್ನೂ ಸ್ಪಷ್ಟವಾಗಿ ತಿಳಿಯಲಿರುವರು.—1 ಅರಸುಗಳು 18:39.

29. ಯಾವುದು ಬೇಗನೆ ಬರಲಿದೆ ಎಂದು ಯೋಹಾನನು ಹೇಳುತ್ತಾನೆ, ಮತ್ತು ಇನ್ನೂ ಹೆಚ್ಚಿನ ಯಾವ ಅಳ್ಳಾಡಿಸುವಿಕೆಯು ಕ್ರೈಸ್ತಪ್ರಪಂಚವನ್ನು ಕಾದಿರುತ್ತದೆ?

29 ಆದರೆ ಆಲಿಸಿರಿ! ಯೋಹಾನನು ನಮಗೆ ಹೇಳುವುದು: “ಎರಡನೆಯ ವಿಪತ್ತು ಕಳೆದುಹೋಯಿತು. ಇಗೋ, ಮೂರನೆಯ ವಿಪತ್ತು ಶೀಘ್ರದಲ್ಲಿ ಬರುತ್ತದೆ.” (ಪ್ರಕಟನೆ 11:14, NW) ಇಷ್ಟರ ತನಕ ಏನು ಸಂಭವಿಸಿದೆಯೋ ಅದರಿಂದ ಕ್ರೈಸ್ತಪ್ರಪಂಚವು ಅಳ್ಳಾಡಿಸಲ್ಪಟ್ಟಿದ್ದರೆ, ಮೂರನೆಯ ವಿಪತ್ತು ಪ್ರಕಟಿಸಲ್ಪಟ್ಟಾಗ, ಏಳನೆಯ ದೇವದೂತನು ತನ್ನ ತುತೂರಿಯನ್ನು ಊದುವಾಗ, ಮತ್ತು ದೇವರ ಪವಿತ್ರ ರಹಸ್ಯವು ಕಟ್ಟಕಡೆಗೆ ಮುಕ್ತಾಯಗೊಳಿಸಲ್ಪಡುವಾಗ, ಅವಳು ಏನನ್ನು ಮಾಡಲಿರುವಳು?—ಪ್ರಕಟನೆ 10:7.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 4 ಈ ಮಹಾ ಆತ್ಮಿಕ ದೇವಾಲಯದ ಪೂರ್ಣ ಚರ್ಚೆಗೆ “ದ ವನ್‌ ಟ್ರೂ ಟೆಂಪ್‌ಲ್‌ ಆ್ಯಟ್‌ ವಿಚ್‌ ಟು ವರ್ಷಿಪ್‌” (ಆರಾಧಿಸಲು ಒಂದು ನಿಜ ದೇವಾಲಯ) ಎಂಬ ಲೇಖನವನ್ನು ದಶಂಬರ 1, 1972ರ ದ ವಾಚ್‌ಟವರ್‌ ಸಂಚಿಕೆಯಲ್ಲಿ ನೋಡಿರಿ.

^ ಪ್ಯಾರ. 20 “ಅಧೋಲೋಕ”ವು [ಆಬಿಸ್‌] (ಗ್ರೀಕ್‌, ಆ’ಬಿಸ್‌-ಸೊಸ್‌; ಹೀಬ್ರು, ಟಿಹೊಹ್ಮ್‌’) ಸಾಂಕೇತಿಕವಾಗಿ ಚಟುವಟಿಕೆರಹಿತವಾದ ಒಂದು ಸ್ಥಳವನ್ನು ಸೂಚಿಸುತ್ತದೆ. (ಪ್ರಕಟನೆ 9:2 ನೋಡಿರಿ.) ಆದಾಗ್ಯೂ, ವಾಚ್ಯಾರ್ಥದಲ್ಲಿ ಅದು ಒಂದು ವಿಶಾಲ ಸಮುದ್ರವನ್ನೂ ಸೂಚಿಸಬಲ್ಲದು. ಹೀಬ್ರು ಶಬ್ದವು ಆಗಾಗ್ಗೆ “ಸಾಗರ” ವಾಗಿ ಕೂಡ ಭಾಷಾಂತರಿಸಲ್ಪಟ್ಟಿದೆ. (ಕೀರ್ತನೆ 71:20; 106:9; ಯೋನ 2:5) ಹೀಗೆ, “ಅಧೋಲೋಕದಿಂದ ಏರಿಬರುವ ಮೃಗವನ್ನು” “ಸಮುದ್ರದಿಂದ ಏರಿಬರುವ ಕಾಡು ಮೃಗ” ವೆಂದು ಗುರುತಿಸಸಾಧ್ಯವಿದೆ.—ಪ್ರಕಟನೆ 11:7; 13:1.

^ ಪ್ಯಾರ. 21 ಆ ಸಮಯದಲ್ಲಿ ದೇವರ ಜನರ ಅನುಭವಗಳನ್ನು ಪರೀಕ್ಷಿಸುವಾಗ, 42 ತಿಂಗಳುಗಳು ಅಕ್ಷರಶಃ ಮೂರುವರೆ ವರ್ಷಗಳನ್ನು ಪ್ರತಿನಿಧಿಸುವುದಾದರೂ, ಮೂರುವರೆ ದಿನಗಳು 84 ತಾಸುಗಳ ಒಂದು ಅಕ್ಷರಶಃ ಅವಧಿಯನ್ನು ಪ್ರತಿನಿಧಿಸುವುದಿಲ್ಲವೆಂದು ತೋರುತ್ತದೆ. ಮೂರುವರೆ ದಿನಗಳು ನಿರ್ದಿಷ್ಟವಾಗಿ ಎರಡು ಬಾರಿ (ವಚನಗಳು 9 ಮತ್ತು 11) ತಿಳಿಸಲ್ಪಟ್ಟಿರುವುದು ಪ್ರಾಯಶಃ ವಾಸ್ತವದ ಅದರ ಮೊದಲಿನ ಮೂರುವರೆ ವರ್ಷಗಳ ಚಟುವಟಿಕೆಯೊಂದಿಗೆ ಹೋಲಿಸುವಾಗ ಇದು ಕೇವಲ ಸಂಕ್ಷಿಪ್ತವಾದ ಸಮಯಾವಧಿ ಎಂದು ಎತ್ತಿತೋರಿಸಲಿಕ್ಕಾಗಿರಬಹುದು.

^ ಪ್ಯಾರ. 26 ರೋಮಾಪುರ 6:2, 10, 11; 7:4, 6, 9; ಗಲಾತ್ಯ 2:19; ಕೊಲೊಸ್ಸೆ 2:20; 3:3 ರಂಥ ಶಾಸ್ತ್ರವಚನಗಳಲ್ಲಿ “ಮೃತ” “ಸತ್ತಿರುವ” ಮತ್ತು “ಜೀವಿಸುವ” (“dead” “died” “living”) ಪದಗಳ ಉಪಯೋಗವನ್ನು ಹೋಲಿಸಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 279 ರಲ್ಲಿರುವ ಚೌಕ]

ಪ್ರಕಟನೆ 11:10ರ ಸಂತೋಷಿಸುವಿಕೆ

ಪ್ರೀಚರ್ಸ್‌ ಪ್ರಸೆಂಟ್‌ ಆರ್ಮ್ಸ್‌ ಎಂಬ 1933 ರಲ್ಲಿ ಪ್ರಕಾಶಿಸಲ್ಪಟ್ಟ ಅವರ ಪುಸ್ತಕದಲ್ಲಿ, ರೇ ಏಚ್‌. ಏಬ್ರಮ್ಸ್‌, ವಾಚ್‌ ಟವರ್‌ ಸೊಸೈಟಿಯ ಪುಸ್ತಕವಾದ ದ ಫಿನಿಶ್ಡ್‌ ಮಿಸ್ಟರಿ ಪುಸ್ತಕಕ್ಕೆ ವೈದಿಕರ ಕಡು ವಿರೋಧಕ್ಕೆ ಸೂಚಿಸುತ್ತಾರೆ. ಬೈಬಲ್‌ ವಿದ್ಯಾರ್ಥಿಗಳನ್ನು ಮತ್ತು ಅವರ “ಪೀಡೆಯಂಥ ಒಡಂಬಡಿಸುವಿಕೆ” ಯನ್ನು ತಮ್ಮಿಂದ ಹೋಗಲಾಡಿಸಲು ವೈದಿಕರ ಪ್ರಯತ್ನಗಳನ್ನು ಅವರು ಪುನರಾವಲೋಕಿಸುತ್ತಾರೆ. ಇದು ಕೋರ್ಟ್‌ ಮೊಕದ್ದಮೆಗೆ ನಡಿಸಿತು ಮತ್ತು ಇದರಿಂದ ಜೆ. ಎಫ್‌. ರಥರ್‌ಫರ್ಡ್‌ ಮತ್ತು ಅವರ ಏಳು ಸಂಗಾತಿಗಳಿಗೆ ದೀರ್ಘಕಾಲದ ಸೆರೆಮನೆವಾಸದ ಶಿಕ್ಷೆಯು ಪರಿಣಮಿಸಿತು. ಡಾ. ಏಬ್ರಮ್ಸ್‌ ಕೂಡಿಸುವುದು: “ಸಮಗ್ರ ಮೊಕದ್ದಮೆಯ ವಿಮರ್ಶೆಯು, ರಸಲೈಟ್‌ರನ್ನು (ರಸಲ್‌ ಅನುಯಾಯಿಗಳನ್ನು) ಅಳಿಸಿಹಾಕಲು ಚರ್ಚುಗಳು ಮತ್ತು ವೈದಿಕರು ಈ ಚಳುವಳಿಯ ಹಿಂಬದಿಯಲ್ಲಿ ಮೂಲತಃ ಇದ್ದರು ಎಂಬ ಸಮಾಪ್ತಿಗೆ ನಡಿಸುತ್ತದೆ. ಕೆನಡದಲ್ಲಿ, ಫೆಬ್ರವರಿ, 1918 ರಲ್ಲಿ, ವೈದಿಕರು ಅವರ ವಿರುದ್ಧ ಮತ್ತು ಅವರ ಪ್ರಕಾಶನಗಳ, ವಿಶೇಷವಾಗಿ ದ ಫಿನಿಶ್ಡ್‌ ಮಿಸ್ಟರಿಯ ವಿರುದ್ಧ, ಒಂದು ಸುಸಂಘಟಿತ ಆಂದೋಳನವನ್ನು ಆರಂಭಿಸಿದರು. ವಿನಿಪೆಗ್‌ನ ಟ್ರಿಬ್ಯೂನ್‌ ಗನುಸಾರ, . . . ಅವರ ಪುಸ್ತಕದ ದಮನಿಸುವಿಕೆಯು ನೇರವಾಗಿ ‘ವೈದಿಕರ ಪ್ರಾತಿನಿಧ್ಯದ’ ಮೂಲಕ ತರಲ್ಪಟ್ಟದೆ ಎಂದು ನಂಬಲಾಗಿದೆ.”

ಡಾ. ಏಬ್ರಮ್ಸ್‌ ಮುಂದರಿಸುವುದು: “ಇಪ್ಪತ್ತು ವರ್ಷಗಳ ಸೆರೆಮನೆಯ ಸಜೆಯ ಸುದ್ದಿಯು ಧಾರ್ಮಿಕ ಪತ್ರಿಕೆಗಳ ಸಂಪಾದಕರಿಗೆ ತಲಪಿದಾಗ, ವಾಸ್ತವದಲ್ಲಿ ಈ ಪ್ರಕಾಶನಗಳಲ್ಲಿ ಪ್ರತಿಯೊಂದು, ಚಿಕ್ಕದು ಮತ್ತು ದೊಡ್ಡದು, ಈ ಘಟನೆಯ ಮೇಲೆ ಸಂತೋಷಿಸಿದವು. ಯಾವುದೇ ಸಂಪ್ರದಾಯಸ್ಥ ಧಾರ್ಮಿಕ ವೃತ್ತಪತ್ರಿಕೆಗಳಲ್ಲಿ ಸಹಾನುಕಂಪದ ಯಾವುದೇ ಒಂದು ಶಬ್ದವನ್ನು ಕಂಡುಕೊಳ್ಳಲು ನನಗೆ ಅಸಾಧ್ಯವಾಯಿತು. ಅಪ್ಟನ್‌ ಸಿಂಕ್ಲೇರ್‌ ಎಂಬವರು ಸಮಾಪ್ತಿಗೊಳಿಸಿದ್ದೇನಂದರೆ, ‘ಹಿಂಸೆಯು . . . ಅವರು ಸಂಪ್ರದಾಯಸ್ಥ ಧಾರ್ಮಿಕ ಗುಂಪುಗಳ ದ್ವೇಷವನ್ನು ಗಳಿಸಿಕೊಂಡ ವಾಸ್ತವತೆಯ ಒಂದು ಭಾಗವಾಗಿದ್ದುದರಿಂದ ಎದ್ದುಬಂತು ಎಂಬುದರಲ್ಲಿ ಯಾವ ಸಂಶಯವೂ ಇರಸಾಧ್ಯವಿಲ್ಲ.’ ಚರ್ಚುಗಳ ಸಂಯುಕ್ತ ಪ್ರಯತ್ನಗಳು ಏನನ್ನು ಸಾಧಿಸಲು ತಪ್ಪಿಹೋಗಿದ್ದವೋ, ಅದನ್ನು ಅವರಿಗಾಗಿ ಪೂರೈಸುವುದರಲ್ಲಿ ಸರಕಾರಗಳು ಯಶಸ್ವಿಯಾದವೆಂದು ತೋರಿಬಂತು.” ಅನೇಕ ಧಾರ್ಮಿಕ ಪ್ರಕಾಶನಗಳ ಅವಹೇಳನಕಾರಿ ಹೇಳಿಕೆಗಳನ್ನು ಉಲ್ಲೇಖಿಸಿದ ಅನಂತರ, ಲೇಖಕನು ಕೋರ್ಟ್‌ ಆಫ್‌ ಅಪ್ಪೀಲ್ಸ್‌ನ ತೀರ್ಪಿನ ವಿಪರ್ಯಸತ್ತೆಗೆ ಸೂಚಿಸುತ್ತಾ ಹೀಗಂದನು: “ಈ ನ್ಯಾಯತೀರ್ಮಾನವು ಚರ್ಚುಗಳಲ್ಲಿ ಮೌನತೆಯಿಂದ ಸ್ವೀಕರಿಸಲ್ಪಟ್ಟಿತು.

[Picture on page 163]

ಯೋಹಾನನು ಆತ್ಮಿಕ ಆಲಯವನ್ನು ಅಳೆಯುತ್ತಾನೆ—ಅಭಿಷಿಕ್ತ ಯಾಜಕತ್ವದಿಂದ ಮಟ್ಟಗಳು ಮುಟ್ಟಲ್ಪಡಬೇಕು

[ಪುಟ 276 ರಲ್ಲಿರುವ ಚಿತ್ರಗಳು]

ಜೆರುಬ್ಬಾಬೆಲನ ಮತ್ತು ಯೆಹೋಶುವನ ಜೀರ್ಣೋದ್ಧಾರದ ಕೆಲಸವು, ಕರ್ತನ ದಿನದಲ್ಲಿ ಚಿಕ್ಕ ಆರಂಭಗಳು ಯೆಹೋವನ ಸಾಕ್ಷಿಗಳಲ್ಲಿ ಮಹತ್ತಾದ ಅಭಿವೃದ್ಧಿಯೊಂದಿಗೆ ಹಿಂಬಾಲಿಸಲ್ಪಡುವವು ಎಂದು ಸೂಚಿಸಿತು. ಇಲ್ಲಿ ಮೇಲೆ ತೋರಿಸಿದಂಥ ಬ್ರೂಕ್ಲಿನ್‌, ನ್ಯೂ ಯಾರ್ಕ್‌ನ ಮುದ್ರಣಾಲಯ ಸವಲತ್ತುಗಳು, ಅವರ ಆವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುವಂತೆ ಮಹತ್ತಾದ ರೀತಿಯಲ್ಲಿ ವಿಸ್ತರಿಸಲ್ಪಡಬೇಕಾಯಿತು

[ಪುಟ 277 ರಲ್ಲಿರುವ ಚಿತ್ರಗಳು]

ಇಬ್ಬರು ಸಾಕ್ಷಿಗಳಿಂದ ಘೋಷಿಸಲ್ಪಟ್ಟ ಬೆಂಕಿಯಂಥ ನ್ಯಾಯತೀರ್ಪಿನ ಸಂದೇಶಗಳು ಮೋಶೆ ಮತ್ತು ಎಲೀಯರ ಪ್ರವಾದನಾ ಕಾರ್ಯದಿಂದ ಮುನ್‌ಚಿತ್ರಿಸಲ್ಪಟ್ಟಿದ್ದವು

[ಪುಟ 270 ರಲ್ಲಿರುವ ಚಿತ್ರಗಳು]

ಯೆಹೆಜ್ಕೇಲ 37 ನೆಯ ಅಧ್ಯಾಯದ ಒಣಗಿದ ಎಲುಬುಗಳಂತೆ, ಇಬ್ಬರು ಸಾಕ್ಷಿಗಳು ಆಧುನಿಕ ದಿನದ ಸಾರುವ ಕಾರ್ಯಕ್ಕಾಗಿ ಪುನಶ್ಚೈತನ್ಯಗೊಳಿಸಲ್ಪಟ್ಟರು