ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಇಸ್ರಾಯೇಲಿಗೆ ಮುದ್ರೆ ಒತ್ತುವುದು

ದೇವರ ಇಸ್ರಾಯೇಲಿಗೆ ಮುದ್ರೆ ಒತ್ತುವುದು

ಅಧ್ಯಾಯ 19

ದೇವರ ಇಸ್ರಾಯೇಲಿಗೆ ಮುದ್ರೆ ಒತ್ತುವುದು

ದರ್ಶನ 4—ಪ್ರಕಟನೆ 7:1-17

ವಿಷಯ: 1,44,000 ಮಂದಿಗೆ ಮುದ್ರೆ ಒತ್ತಲಾಯಿತು, ಮತ್ತು ಯೆಹೋವನ ಸಿಂಹಾಸನದ ಮತ್ತು ಕುರಿಮರಿಯ ಮುಂದೆ ನಿಂತಿರುವ ಒಂದು ಮಹಾ ಸಮೂಹವು ಅವಲೋಕಿಸಲ್ಪಡುತ್ತದೆ

ನೆರವೇರಿಕೆಯ ಸಮಯ: ಕ್ರಿಸ್ತ ಯೇಸು 1914 ರಲ್ಲಿ ಸಿಂಹಾಸನಾಸೀನನಾದಂದಿನಿಂದ ಅವನ ಸಹಸ್ರ ವರ್ಷಗಳ ಆಳಿಕೆಯೊಳಗೆ

1. ದೈವಿಕ ರೋಷದ ಮಹಾ ದಿನದ ಸಮಯಾವಧಿಯಲ್ಲಿ “ಯಾರು ನಿಲ್ಲಶಕ್ತರು”?

“ಯಾರು ನಿಲ್ಲಲು ಶಕ್ತರು?” (ಪ್ರಕಟನೆ 6:17) ಹೌದು, ನಿಜವಾಗಿಯೂ ಯಾರು? ದೈವಿಕ ರೋಷದ ಮಹಾ ದಿನವು ಸೈತಾನನ ವ್ಯವಸ್ಥೆಯನ್ನು ಧ್ವಂಸಗೊಳಿಸುವಾಗ, ಲೋಕದ ಅಧಿಕಾರಿಗಳು ಮತ್ತು ಜನರು ಸಹಜವಾಗಿ ಆ ಪ್ರಶ್ನೆಯನ್ನು ಕೇಳಬಹುದು. ಬರಲಿರುವ ವಿಪ್ಲವವು ಎಲ್ಲಾ ಮಾನವ ಜೀವವನ್ನು ನಂದಿಸಿಬಿಡುವುದು ಎಂದವರಿಗೆ ಭಾಸವಾಗುವುದು. ಆದರೆ ಅದು ಹಾಗೆ ಮಾಡುವುದೋ? ಸಂತಸಕರವಾಗಿಯೇ, ದೇವರ ಪ್ರವಾದಿಯು ನಮಗೆ ಆಶ್ವಾಸನೆಯನ್ನೀಯುವುದು: “ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರೂ ಸುರಕ್ಷಿತವಾಗಿ ಪಾರಾಗುವರು.” (ಯೋವೇಲ 2:32, NW) ಅಪೊಸ್ತಲ ಪೇತ್ರನು ಮತ್ತು ಪೌಲನು ಈ ವಾಸ್ತವಾಂಶವನ್ನು ದೃಢೀಕರಿಸುತ್ತಾರೆ. (ಅ. ಕೃತ್ಯಗಳು 2:19-21; ರೋಮಾಪುರ 10:13) ಹೌದು, ಯೆಹೋವನ ಹೆಸರನ್ನು ಹೇಳಿಕೊಳ್ಳುವವರೆಲ್ಲರೂ ಪಾರಾಗುವವರಾಗಿರುವರು. ಇವರು ಯಾರಾಗಿರುತ್ತಾರೆ? ಮುಂದಿನ ದರ್ಶನವು ಅನಾವರಣಗೊಳ್ಳುವಾಗ, ನಾವದನ್ನು ನೋಡುವೆವು.

2. ಯೆಹೋವನ ನ್ಯಾಯತೀರ್ಪಿನ ದಿನದಲ್ಲಿ ಪಾರಾಗುವವರು ಇರುವರೆಂಬದು ಒಂದು ಗಮನಾರ್ಹ ಸಂಗತಿಯಾಗಿದೆ ಯಾಕೆ?

2 ಯೆಹೋವನ ನ್ಯಾಯತೀರ್ಪಿನ ದಿನದಲ್ಲಿ ಸಜೀವವಾಗಿ ಯಾರಾದರೊಬ್ಬರು ಹೊರಬರುವುದು ಸತ್ಯವಾಗಿಯೂ ಗಮನಾರ್ಹವಾದದ್ದಾಗಿರುತ್ತದೆ, ಯಾಕಂದರೆ ದೇವರ ಪ್ರವಾದಿಗಳಲ್ಲಿ ಇನ್ನೊಬ್ಬನು ಅದನ್ನು ಈ ಮಾತುಗಳಲ್ಲಿ ವರ್ಣಿಸುತ್ತಾನೆ: “ಆಹಾ, ಯೆಹೋವನ ರೋಷವೆಂಬ ಬಿರುಗಾಳಿಯು, ಬಡಿದುಕೊಂಡು ಹೋಗುವ ಗಾಳಿಯು ಹೊರಟಿದೆ; ಅದು ದುಷ್ಟರ ತಲೆಯ ಮೇಲೆ ಹೊಡೆಯುವುದು. ಯೆಹೋವನು ತನ್ನ ಹೃದಯಾಲೋಚನೆಯನ್ನು ನಡಿಸಿ ನೆರವೇರಿಸುವ ತನಕ ಆತನ ರೋಷವು ಹಿಂದಿರುಗದು.” (ಯೆರೆಮೀಯ 30:23, 24) ಆ ಚಂಡಮಾರುತವನ್ನು ಸುರಕ್ಷಿತವಾಗಿ ನಿಭಾಯಿಸಲು ನಾವು ಈಗಲೇ ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಜರೂರಿಯದ್ದಾಗಿದೆ!—ಜ್ಞಾನೋಕ್ತಿ 2:22; ಯೆಶಾಯ 55:6, 7; ಚೆಫನ್ಯ 2:2, 3.

ನಾಲ್ಕು ಗಾಳಿಗಳು

3. (ಎ) ಯಾವ ವಿಶೇಷ ಸೇವೆಯನ್ನು ದೇವದೂತರು ಮಾಡುವುದನ್ನು ಯೋಹಾನನು ಕಂಡನು? (ಬಿ) “ನಾಲ್ಕು ಗಾಳಿಗಳಿಂದ” ಏನು ಸಂಕೇತಿಸಲ್ಪಡುತ್ತದೆ?

3 ಯೆಹೋವನು ತನ್ನ ಕೋಪೋದ್ರೇಕವನ್ನು ಬಿಡುಗಡೆಗೊಳಿಸುವ ಮೊದಲು, ಸ್ವರ್ಗೀಯ ದೇವದೂತರು ಒಂದು ವಿಶೇಷ ಸೇವೆಯನ್ನು ನಡಿಸುತ್ತಾರೆ. ಯೋಹಾನನು ಈಗ ದರ್ಶನದಲ್ಲಿ ಇದನ್ನು ನೋಡುತ್ತಾನೆ: “ಇದಾದನಂತರ ಭೂಮಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ದೇವದೂತರು, ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಯಾವುದೇ ಮರದ ಮೇಲಾಗಲಿ ಯಾವ ಗಾಳಿಯೂ ಬೀಸದಂತೆ, ಭೂಮಿಯ ನಾಲ್ಕು ಗಾಳಿಗಳನ್ನು ಗಟ್ಟಿಯಾಗಿ ತಡೆದು ಹಿಡಿದಿರುವುದನ್ನು ನಾನು ಕಂಡೆನು.” (ಪ್ರಕಟನೆ 7:1, NW) ಇದು ಇಂದು ನಮಗಾಗಿ ಯಾವ ಅರ್ಥದಲ್ಲಿರುತ್ತದೆ? ಈ “ನಾಲ್ಕು ಗಾಳಿಗಳು” ದುಷ್ಟ ಐಹಿಕ ಸಮಾಜದ ಮೇಲೆ, ನಿಯಮರಹಿತವಾದ ಮಾನವಕುಲದ ಹೊಯ್ದಾಡುವ “ಸಮುದ್ರದ” ಮೇಲೆ, ಮತ್ತು ಭೂಮಿಯ ಜನರಿಂದ ಬೆಂಬಲ ಮತ್ತು ಪೋಷಣೆಯನ್ನು ಪಡೆಯುವ ಎತ್ತರವಾದ ಮರಗಳಂತಿರುವ ಅಧಿಕಾರಿಗಳ ಮೇಲೆ ಬಿಡಲ್ಪಡುವ ವಿನಾಶದ ನ್ಯಾಯತೀರ್ಪಿನ ಒಂದು ವೈವಿಧ್ಯಮಯ ಸಂಕೇತವಾಗಿದೆ.—ಯೆಶಾಯ 57:20; ಕೀರ್ತನೆ 37:35, 36.

4. (ಎ) ನಾಲ್ಕು ದೇವದೂತರು ಏನನ್ನು ಪ್ರತಿನಿಧಿಸುತ್ತಾರೆ? (ಬಿ) ನಾಲ್ಕು ಗಾಳಿಗಳು ಬಿಡುಗಡೆಗೊಳಿಸಲ್ಪಟ್ಟಾಗ, ಸೈತಾನನ ಐಹಿಕ ಸಂಸ್ಥೆಯ ಮೇಲೆ ಪರಿಣಾಮ ಏನಾಗಿರುವುದು?

4 ನಿಸ್ಸಂದೇಹವಾಗಿ, ಈ ನಾಲ್ಕು ದೇವದೂತರು ನೇಮಿತ ಸಮಯದ ತನಕ ನ್ಯಾಯತೀರ್ಪನ್ನು ಜಾರಿಗೊಳಿಸುವದನ್ನು ತಡೆಹಿಡಿಯಲು ಯೆಹೋವನು ಬಳಸುವ ನಾಲ್ಕು ದೇವದೂತಗಣಗಳನ್ನು ಪ್ರತಿನಿಧಿಸುತ್ತವೆ. ದೈವಿಕ ರೋಷದ ಈ ಗಾಳಿಗಳನ್ನು ದೇವದೂತರುಗಳು ಒಂದೊಂದಾಗಿ ಉತ್ತರದಿಂದ, ದಕ್ಷಿಣದಿಂದ, ಪೂರ್ವದಿಂದ ಮತ್ತು ಪಶ್ಚಿಮದಿಂದ ಬಿಡುಗಡೆಗೊಳಿಸಿದಾಗ, ಆಗಲಿರುವ ವಿನಾಶವು ಬೃಹತ್‌ ಪ್ರಮಾಣದ್ದು. ಅದು ಪ್ರಾಚೀನ ಏಲಾಮ್ಯರನ್ನು ಚದರಿಸಲು, ಧ್ವಂಸಗೊಳಿಸಲು ಮತ್ತು ನಿರ್ಮೂಲಗೊಳಿಸಲು ಯೆಹೋವನು ನಾಲ್ಕು ಗಾಳಿಗಳನ್ನು ಉಪಯೋಗಿಸಿರುವುದಕ್ಕೆ, ಭಾರಿ ಪ್ರಮಾಣದ ಹೋಲಿಕೆಯಾಗಲಿರುವುದು. (ಯೆರೆಮೀಯ 49:36-38) ಇದೊಂದು ಬೃಹತ್‌ ಗಾತ್ರದ ಚಂಡಮಾರುತವಾಗಿದ್ದು, ಅಮ್ಮೋನ್‌ ಜನಾಂಗವನ್ನು ನಿರ್ಮೂಲಗೊಳಿಸಲು ಯೆಹೋವನು ಉಪಯೋಗಿಸಿದ “ತುಫಾನು” ಗಿಂತಲೂ ಎಷ್ಟೋ ಹೆಚ್ಚು ವಿಧ್ವಂಸಕಾರಿಯಾಗಲಿರುವುದು. (ಆಮೋಸ 1:13-15) ತನ್ನ ಸಾರ್ವಭೌಮತೆಯನ್ನು ಬರಲಿರುವ ಎಲ್ಲಾ ನಿತ್ಯತೆಗೆ ಅವನು ಸಮರ್ಥಿಸುವಾಗ, ಯೆಹೋವನ ರೋಷದ ದಿನದಲ್ಲಿ ನಿಲ್ಲಲು ಸೈತಾನನ ಸಂಸ್ಥೆಯ ಯಾವುದೇ ಭಾಗಕ್ಕೆ ಸಾಧ್ಯವಾಗದು.—ಕೀರ್ತನೆ 83:15, 18; ಯೆಶಾಯ 29:5, 6.

5. ದೇವರ ನ್ಯಾಯತೀರ್ಪುಗಳು ಇಡೀ ಭೂಮಿಯನ್ನು ಆವರಿಸಲಿವೆ ಎಂದು ಅರ್ಥಮಾಡಿಕೊಳ್ಳಲು ಯೆರೆಮೀಯನ ಪ್ರವಾದನೆಯು ನಮಗೆ ಹೇಗೆ ಸಹಾಯ ಮಾಡುತ್ತದೆ?

5 ಇಡೀ ಭೂಮಿಯನ್ನು ದೇವರ ನ್ಯಾಯತೀರ್ಪುಗಳು ಹಾವಳಿಗೊಳಿಸಲಿವೆ ಎಂದು ನಾವು ಖಾತ್ರಿಯಿಂದಿರಬಹುದೇ? ಅವನ ಪ್ರವಾದಿಯಾದ ಯೆರೆಮೀಯನಿಗೆ ಪುನಃ ಆಲಿಸಿರಿ: “ಆಹಾ, ಕೇಡು ಜನಾಂಗದಿಂದ ಜನಾಂಗಕ್ಕೆ ಹರಡುವುದು; ಮತ್ತು ಒಂದು ದೊಡ್ಡ ಬಿರುಗಾಳಿಯು ಭೂಮಿಯ ಕಟ್ಟಕಡೆಯಿಂದ ಎದ್ದುಬರುವುದು. ಮತ್ತು ಆ ದಿನದಲ್ಲಿ ಯೆಹೋವನಿಂದ ಹತರಾದವರು ಭೂಮಿಯ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೂ ಬಿದ್ದಿರುವರು.” (ಯೆರೆಮೀಯ 25:32, 33, NW) ಈ ಭೀಕರ ಚಂಡಮಾರುತದ ಸಮಯಾವಧಿಯಲ್ಲಿ ಈ ಲೋಕದ ಮೇಲೆ ಕತ್ತಲು ಆವರಿಸುವುದು. ಅದರ ಆಳುವ ನಿಯೋಗಗಳು ಕುಲುಕಿಸಲ್ಪಡುವವು. (ಪ್ರಕಟನೆ 6:12-14) ಆದರೆ ಭವಿಷ್ಯವು ಪ್ರತಿಯೊಬ್ಬರಿಗೆ ಅಂಧಕಾರಮಯವಾಗಿರುವದಿಲ್ಲ. ಹಾಗಾದರೆ, ಯಾರಿಗಾಗಿ ನಾಲ್ಕು ಗಾಳಿಗಳು ತಡೆದು ಹಿಡಿಯಲ್ಪಡುತ್ತವೆ?

ದೇವರ ದಾಸರಿಗೆ ಮುದ್ರೆ ಒತ್ತುವಿಕೆ

6. ನಾಲ್ಕು ಗಾಳಿಗಳನ್ನು ತಡೆಹಿಡಿಯಲು ದೇವದೂತರಿಗೆ ಯಾರು ಹೇಳುತ್ತಾರೆ, ಮತ್ತು ಇದು ಯಾವುದಕ್ಕೆ ಸಮಯವನ್ನು ಅನುಮತಿಸುತ್ತದೆ?

6 ಪಾರಾಗುವಿಕೆಗಾಗಿ ಕೆಲವರು ಹೇಗೆ ಗುರುತಿಸಲ್ಪಡುವರು ಎಂದು ವರ್ಣಿಸುವುದನ್ನು ಯೋಹಾನನು ಮುಂದರಿಸುತ್ತಾ, ಹೇಳುವುದು: “ಮತ್ತು ಜೀವಸ್ವರೂಪನಾದ ದೇವರ ಮುದ್ರೆ ಇರುವ ಮತ್ತೊಬ್ಬ ದೇವದೂತನು ಸೂರ್ಯೋದಯದ ದಿಕ್ಕಿನಿಂದ ಏರಿಬರುವುದನ್ನು ನಾನು ಕಂಡೆನು; ಮತ್ತು ಅವನು ಮಹಾ ಶಬ್ದದಿಂದ, ಭೂಮಿಯನ್ನು ಮತ್ತು ಸಮುದ್ರವನ್ನು ಕೆಡಿಸುವುದಕ್ಕೆ ಅಧಿಕಾರಹೊಂದಿದ ಆ ನಾಲ್ಕು ದೇವದೂತರಿಗೆ ಕೂಗಿ ಹೇಳಿದ್ದು: ‘ನಮ್ಮ ದೇವರ ದಾಸರ ಹಣೆಗಳ ಮೇಲೆ ಮುದ್ರೆ ಒತ್ತುವ ತನಕ, ಭೂಮಿಯನ್ನಾಗಲಿ, ಸಮುದ್ರವನ್ನಾಗಲಿ ಮರಗಳನ್ನಾಗಲಿ ಕೆಡಿಸಿಬೇಡಿರಿ.’”—ಪ್ರಕಟನೆ 7:2, 3, NW.

7. ಐದನೆಯ ದೇವದೂತನು ನಿಜವಾಗಿಯೂ ಯಾರು, ಮತ್ತು ಅವನ ಗುರುತನ್ನು ಸ್ಥಾಪಿಸಲು ಯಾವ ಪುರಾವೆಯು ನಮಗೆ ಸಹಾಯ ಮಾಡುತ್ತದೆ?

7 ಈ ಐದನೆಯ ದೇವದೂತನು ಹೆಸರಿಸಲ್ಪಡದಿದ್ದರೂ, ಎಲ್ಲಾ ಪುರಾವೆಗಳು ತೋರಿಸುವುದೇನಂದರೆ ಆತನು ಮಹಿಮಾಭರಿತನಾದ ಯೇಸುವೇ ಆಗಿರತಕ್ಕದ್ದು. ಯೇಸುವು ಪ್ರಧಾನ ದೇವದೂತನಾಗಿರುವದರೊಂದಿಗೆ ಹೊಂದಿಕೆಯಲ್ಲಿ, ಇಲ್ಲಿ ಅವನು ಇತರ ದೇವದೂತರ ಮೇಲೆ ಅಧಿಕಾರವುಳ್ಳವನಾಗಿ ತೋರಿಸಲ್ಪಟ್ಟಿರುತ್ತಾನೆ. (1 ಥೆಸಲೊನೀಕ 4:16; ಯೂದ 9) ಪ್ರಾಚೀನ ಬಾಬೆಲನ್ನು ದಾರ್ಯಾವೆಷ ಮತ್ತು ಕೋರೆಷ ರಾಜರು ತಗ್ಗಿಸಿದಂತೆ, ಅವನು ಪೂರ್ವದಿಂದ “ಸೂರ್ಯೋದಯದಿಂದ ಬರುವ ರಾಜರು”—ಯೆಹೋವ ಮತ್ತು ಆತನ ಕ್ರಿಸ್ತ—ಗಳಂತೆ ಏರಿಬರುತ್ತಾನೆ. (ಪ್ರಕಟನೆ 16:12; ಯೆಶಾಯ 45:1; ಯೆರೆಮೀಯ 51:11; ದಾನಿಯೇಲ 5:31) ಈ ದೇವದೂತನು ಯೇಸು ಕ್ರಿಸ್ತನಿಗೆ ಈ ರೀತಿಯಲ್ಲೂ ಹೋಲುತ್ತಾನೆ ಹೇಗಂದರೆ ಅಭಿಷಿಕ್ತ ಕ್ರೈಸ್ತರಿಗೆ ಮುದ್ರೆ ಒತ್ತುವ ಕೆಲಸವನ್ನು ಅವನಿಗೆ ವಹಿಸಿಕೊಡಲಾಗುತ್ತದೆ. (ಎಫೆಸ 1:13, 14) ಇದಲ್ಲದೆ, ಗಾಳಿಗಳು ಬಿಡುಗಡೆಗೊಳಿಸಲ್ಪಟ್ಟಾಗ, ಜನಾಂಗಗಳ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸಲು ಪರಲೋಕ ಸೈನ್ಯಗಳನ್ನು ನಡಿಸುವವನು ಯೇಸುವೇ ಆಗಿರುತ್ತಾನೆ. (ಪ್ರಕಟನೆ 19:11-16) ನ್ಯಾಯಸಮ್ಮತವಾಗಿ, ಹಾಗಾದರೆ, ದೇವರ ದಾಸರ ಮುದ್ರೆ ಒತ್ತುವಿಕೆಯು ಮುಗಿಯುವ ತನಕ ಸೈತಾನನ ಐಹಿಕ ಸಂಸ್ಥಾಪನೆಯ ನಾಶನವನ್ನು ತಡೆಹಿಡಿಯಲು ಆಜ್ಞೆಯನ್ನು ಕೊಡುವವನು ಯೇಸುವೇ ಆಗಿರಬೇಕು.

8. ಮುದ್ರೆ ಒತ್ತಿಸಿಕೊಳ್ಳುವದು ಅಂದರೇನು, ಮತ್ತು ಅದು ಯಾವಾಗ ಆರಂಭವಾಯಿತು?

8 ಈ ಮುದ್ರೆ ಒತ್ತುವಿಕೆಯು ಏನಾಗಿರುತ್ತದೆ, ಮತ್ತು ಈ ದೇವರ ದಾಸರು ಯಾರು? ಮುದ್ರೆ ಒತ್ತುವಿಕೆಯು ಸಾ. ಶ. 33ರ ಪಂಚಾಶತ್ತಮದಲ್ಲಿ, ಮೊದಲಾಗಿ ಯೆಹೂದಿ ಕ್ರೈಸ್ತರು ಪವಿತ್ರಾತ್ಮನಿಂದ ಅಭಿಷಿಕ್ತರಾದಾಗ ಆರಂಭಗೊಂಡಿತು. ತದನಂತರ, ದೇವರು “ಅನ್ಯಜನಾಂಗಗಳ ಜನರನ್ನು” ಕರೆಯಲು ಮತ್ತು ಅಭಿಷೇಕಿಸಲು ತೊಡಗಿದನು. (ರೋಮಾಪುರ 3:29; ಅ. ಕೃತ್ಯಗಳು 2:1-4, 14, 32, 33; 15:14) ಅಪೊಸ್ತಲ ಪೌಲನು ಅಭಿಷಿಕ್ತ ಕ್ರೈಸ್ತರಿಗೆ, ಅವರು “ಕ್ರಿಸ್ತನಿಗೆ ಸೇರಿದವರು” ಎಂಬ ಒಂದು ಖಾತರಿ ಇರುವುದರ ಕುರಿತು ಬರೆದನು ಮತ್ತು ದೇವರು “ನಮ್ಮ ಮೇಲೆ ತನ್ನ ಮುದ್ರೆಯನ್ನು ಕೂಡ ಒತ್ತಿದ್ದಾನೆ ಮತ್ತು ಬರಲಿರುವುದರ ಒಂದು ಸೂಚಕವಾಗಿ, ಅಂದರೆ ನಮ್ಮ ಹೃದಯಗಳಲ್ಲಿ ಆತ್ಮವನ್ನು ಕೊಟ್ಟಿದ್ದಾನೆ” ಎಂದು ಕೂಡಿಸಿದನು. (2 ಕೊರಿಂಥ 1:21, 22; ಹೋಲಿಸಿರಿ ಪ್ರಕಟನೆ 14:1.) ಈ ರೀತಿಯಲ್ಲಿ ಈ ದಾಸರು ದೇವರ ಆತ್ಮಿಕ ಪುತ್ರರಾಗಿ ದತ್ತಕ್ಕೆ ತೆಗೆದುಕೊಳ್ಳಲ್ಪಟ್ಟಾಗ, ತಮ್ಮ ಪರಲೋಕದ ಬಾಧ್ಯತೆಯ ಮುಂಗಡ ಒಂದು ಸೂಚಕ—ಒಂದು ಮುದ್ರೆ, ಯಾ ಪ್ರತಿಜ್ಞೆ—ಯನ್ನು ಅವರು ಪಡೆಯುತ್ತಾರೆ. (2 ಕೊರಿಂಥ 5:1, 5; ಎಫೆಸ 1:10, 11) ಆಗ ಅವರು ಹೀಗೆ ಹೇಳಶಕ್ತರು: “ಆತ್ಮವು ತಾನೇ ನಮ್ಮ ಮನೋಭಾವದೊಂದಿಗೆ, ನಾವು ದೇವರ ಮಕ್ಕಳೆಂದು ಸಾಕ್ಷಿ ಕೊಡುತ್ತದೆ. ಹಾಗಾದರೆ, ಮಕ್ಕಳಾಗಿರುವಲ್ಲಿ, ನಾವು ಬಾಧ್ಯಸ್ಥರು ಕೂಡ. ದೇವರ ಬಾಧ್ಯಸ್ಥರು ದಿಟ, ಆದರೆ ಕ್ರಿಸ್ತನೊಂದಿಗೆ ಸಹಬಾಧ್ಯಸ್ಥರು. ನಾವು ಕೂಡಿ ಬಾಧೆಪಡುವ ಪಕ್ಷದಲ್ಲಿ ಕೂಡಿ ಮಹಿಮೆಗೂ ಏರಿಸಲ್ಪಟ್ಟೇವು.”—ರೋಮಾಪುರ 8:15-17, NW.

9. (ಎ) ದೇವರ ಆತ್ಮಾಭಿಷಿಕ್ತ ಪುತ್ರರಲ್ಲಿ ಉಳಿದವರಿಂದ ಯಾವ ರೀತಿಯ ತಾಳ್ಮೆಯು ಕೇಳಲ್ಪಟ್ಟಿರುತ್ತದೆ? (ಬಿ) ಅಭಿಷಿಕ್ತರ ಈ ಪರಿಶೋಧನೆಯು ಎಷ್ಟು ದೀರ್ಘಕಾಲ ಮುಂದರಿಯಲಿರುವುದು?

9 “ನಾವು ಕೂಡಿ ಬಾಧೆಪಡುವ ಪಕ್ಷದಲ್ಲಿ,”—ಇದರ ಅರ್ಥವೇನು? ಜೀವದ ಕಿರೀಟವನ್ನು ಪಡೆಯಲಿಕ್ಕಾಗಿ, ಅಭಿಷಿಕ್ತ ಕ್ರೈಸ್ತರು ಮರಣದ ತನಕವೂ ಕೂಡ ತಾಳಿಕೊಳ್ಳತಕ್ಕದ್ದು. (ಪ್ರಕಟನೆ 2:10) ಅದು ‘ಒಮ್ಮೆ ರಕ್ಷಣೆ ಹೊಂದಿದವರು, ಯಾವಾಗಲೂ ರಕ್ಷಣೆ ಹೊಂದಿದವರು’ ಎಂಬ ವಿಷಯವಾಗಿರುವುದಿಲ್ಲ. (ಮತ್ತಾಯ 10:22; ಲೂಕ 13:24) ಬದಲಿಗೆ, ಅವರಿಗೆ ಎಚ್ಚರಿಕೆ ಕೊಡಲ್ಪಡುವುದು: “ನಿಮ್ಮ ಕರೆಯನ್ನು ಮತ್ತು ಆರಿಸುವಿಕೆಯನ್ನು ಸ್ವತಃ ದೃಢಪಡಿಸಿಕೊಳ್ಳಲು ನಿಮ್ಮ ಕೈಲಾದದ್ದೆಲ್ಲವನ್ನೂ ಮಾಡಿರಿ.” ಅಪೊಸ್ತಲ ಪೌಲನಂತೆ, ಕಟ್ಟಕಡೆಗೆ ಅವರು ಇದನ್ನು ಹೇಳಲು ಶಕ್ತರಾಗತಕ್ಕದ್ದು: “ನಾನು ಶ್ರೇಷ್ಠ ಹೋರಾಟವನ್ನು ಹೋರಾಡಿದ್ದೇನೆ, ನಾನು ಓಟವನ್ನು ಕೊನೆಗಾಣಿಸಿದ್ದೇನೆ, ನಾನು ನಂಬಿಕೆಯನ್ನು ಪಾಲಿಸಿದ್ದೇನೆ.” (2 ಪೇತ್ರ 1:10, 11; 2 ತಿಮೊಥೆಯ 4:7, 8, NW) ಆದುದರಿಂದ ಇಲ್ಲಿ ಭೂಮಿಯ ಮೇಲೆ ದೇವರ ಆತ್ಮಾಭಿಷಿಕ್ತ ಪುತ್ರರ ಉಳಿದವರ ಪರಿಶೋಧನೆ ಮತ್ತು ಬೇರ್ಪಡಿಸುವಿಕೆಯು, ಪರೀಕ್ಷಿತರಾದ ಮತ್ತು ನಂಬಿಗಸ್ತ “ನಮ್ಮ ದೇವರ ದಾಸ” ರೋಪಾದಿ, ನಿರ್ಣಾಯಕವಾಗಿ, ಮಾರ್ಪಡಿಸಲಾಗದ ರೀತಿಯಲ್ಲಿ ಗುರುತಿಸುತ್ತಾ, ಅವರೆಲ್ಲರ ‘ಹಣೆಯಲ್ಲಿ’ ಮುದ್ರೆಯನ್ನು ಯೇಸುವು ಮತ್ತು ಅವನೊಂದಿಗಿನ ದೇವದೂತರು ಸ್ಥಿರವಾಗಿ ಒತ್ತುವ ತನಕ ಮುಂದರಿಯತಕ್ಕದ್ದು. ಆ ಮುದ್ರೆಯು ಅನಂತರ ಒಂದು ಶಾಶ್ವತ ಗುರುತು ಆಗಲಿರುವುದು. ಸಂಕಟದ ನಾಲ್ಕು ಗಾಳಿಗಳನ್ನು ಬಿಡುಗಡೆಗೊಳಿಸಿದಾಗ, ಕೆಲವರು ಮಾಂಸಿಕವಾಗಿ ಇನ್ನೂ ಜೀವಂತರಾಗಿ ಇರುವುದಾದರೂ ಕೂಡ, ಎಲ್ಲಾ ಆತ್ಮಿಕ ಇಸ್ರಾಯೇಲ್ಯರು ಕೊನೆಯ ಹಂತದ ಮುದ್ರೆ ಒತ್ತಿಸಿಕೊಂಡವರಾಗಿರುವರು ಎಂದು ರುಜುವಾಗುತ್ತದೆ. (ಮತ್ತಾಯ 24:13; ಪ್ರಕಟನೆ 19:7) ಇಡೀ ಸದಸ್ಯತನವು ಪೂರ್ಣಗೊಳ್ಳಲಿರುವುದು!—ರೋಮಾಪುರ 11:25, 26.

ಎಷ್ಟು ಮಂದಿ ಮುದ್ರಿಸಲ್ಪಡುತ್ತಾರೆ?

10. (ಎ) ಮುದ್ರೆ ಒತ್ತಲ್ಪಟ್ಟವರ ಸಂಖ್ಯೆಯು ಸೀಮಿತವಾಗಿರುತ್ತದೆ ಎಂದು ಯಾವ ಶಾಸ್ತ್ರವಚನಗಳು ಸೂಚಿಸುತ್ತವೆ? (ಬಿ) ಮುದ್ರೆ ಒತ್ತಲ್ಪಟ್ಟವರ ಒಟ್ಟು ಸಂಖ್ಯೆಯು ಎಷ್ಟು, ಮತ್ತು ಅವರು ಹೇಗೆ ಪಟ್ಟಿ ಮಾಡಲ್ಪಟ್ಟಿದ್ದಾರೆ?

10 ಈ ಮುದ್ರೆ ಒತ್ತಿಸಿಕೊಳ್ಳುವವರ ಸಾಲಿನಲ್ಲಿರುವವರಿಗೆ ಯೇಸು ಅಂದದ್ದು: “ಚಿಕ್ಕ ಹಿಂಡೇ, ಹೆದರಬೇಡ, ಯಾಕಂದರೆ ನಿಮ್ಮ ತಂದೆಯು ರಾಜ್ಯವನ್ನು ನಿಮಗೆ ಕೊಡುವುದಕ್ಕೆ ಸಮ್ಮತಿಸಿರುತ್ತಾನೆ.” (ಲೂಕ 12:32, NW) ಪ್ರಕಟನೆ 6:11 ಮತ್ತು ರೋಮಾಪುರ 11:25 ರಂತಹ ಇತರ ಶಾಸ್ತ್ರವಚನಗಳು, ಈ ಚಿಕ್ಕ ಹಿಂಡಿನ ಸಂಖ್ಯೆಯು ಖಂಡಿತವಾಗಿಯೂ ಸೀಮಿತವಾಗಿದೆ ಮತ್ತು, ವಾಸ್ತವದಲ್ಲಿ ಪೂರ್ವ-ನಿರ್ಧರಿತವಾಗಿದೆ ಎಂದು ಸೂಚಿಸುತ್ತವೆ. ಯೋಹಾನನ ಮುಂದಿನ ಮಾತುಗಳು ಇದನ್ನು ದೃಢೀಕರಿಸುತ್ತವೆ: “ಮತ್ತು ನಾನು ಮುದ್ರೆ ಒತ್ತಲ್ಪಟ್ಟವರ ಸಂಖ್ಯೆಯನ್ನು ಕೇಳಿದೆನು, ಇಸ್ರಾಯೇಲ್‌ ಪುತ್ರರ ಪ್ರತಿಯೊಂದು ಕುಲದಿಂದ ಮುದ್ರೆ ಒತ್ತಲ್ಪಟ್ಟವರ ಸಂಖ್ಯೆಯು ಒಂದು ಲಕ್ಷ ನಲವತ್ತು ನಾಲ್ಕು ಸಾವಿರ ಮಂದಿ: ಯೆಹೂದನ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ; ರೂಬೇನನ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ; ಗಾದನ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ; ಆಶೇರನ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ; ನಫ್ತಾಲಿಯ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ; ಮನಸ್ಸೆಯ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ; ಸಿಮೆಯೋನನ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ; ಲೇವಿಯ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ; ಇಸ್ಸಾಕಾರನ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ; ಜೆಬುಲೂನನ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ; ಯೋಸೇಫನ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ; ಬೆನ್ಯಾಮೀನನ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ.”—ಪ್ರಕಟನೆ 7:4-8, NW.

11. (ಎ) ಹನ್ನೆರಡು ಕುಲಗಳನ್ನು ಸೂಚಿಸಿರುವುದು ಅಕ್ಷರಶಃ, ಮಾಂಸಿಕ ಇಸ್ರಾಯೇಲ್ಯರಿಗೆ ಅನ್ವಯಿಸುವುದಿಲ್ಲ ಯಾಕೆ? (ಬಿ) ಪ್ರಕಟನೆಯು 12 ಕುಲಗಳನ್ನು ಯಾಕೆ ಪಟ್ಟಿ ಮಾಡುತ್ತದೆ? (ಸಿ) ದೇವರ ಇಸ್ರಾಯೇಲಿನಲ್ಲಿ ಪ್ರತ್ಯೇಕವಾಗಿ ಒಂದು ರಾಜವೈಭವ ಯಾ ಯಾಜಕತ್ವದ ಕುಲ ಯಾಕೆ ಇರುವುದಿಲ್ಲ?

11 ಈ ವಿಷಯವಾಕ್ಯವು ಅಕ್ಷರಶಃವಾದ, ಮಾಂಸಿಕ ಇಸ್ರಾಯೇಲ್ಯರನ್ನು ಸೂಚಿಸಸಾಧ್ಯವಿಲ್ಲವೇ? ಇಲ್ಲ, ಯಾಕಂದರೆ ಪ್ರಕಟನೆ 7:4-8 ಸಾಮಾನ್ಯವಾದ ಕುಲಗಳ ಪಟ್ಟಿಮಾಡುವಿಕೆಯಿಂದ ಅಗಲುತ್ತದೆ. (ಅರಣ್ಯಕಾಂಡ 1:17, 47) ತಮ್ಮ ಕುಲಗಳ ಪ್ರಕಾರ ಮಾಂಸಿಕ ಇಸ್ರಾಯೇಲ್ಯರನ್ನು ಗುರುತಿಸುವ ಉದ್ದೇಶದಿಂದ ಇಲ್ಲಿ ಈ ಪಟ್ಟಿಯನ್ನು ಕೊಟ್ಟಿಲ್ಲ, ಬದಲು ಆತ್ಮಿಕ ಇಸ್ರಾಯೇಲ್ಯರಿಗೂ ತದ್ರೀತಿಯ ಒಂದು ಸಂಸ್ಥೆಯ ಚೌಕಟ್ಟು ಇರುವುದನ್ನು ತೋರಿಸಲು ಕೊಟ್ಟಿದೆ ಎಂಬುದು ವ್ಯಕ್ತ. ಇದು ಸಮತೂಕದಲ್ಲಿದೆ. ಈ ಹೊಸ ಜನಾಂಗದಲ್ಲಿ ಸರಿಯಾಗಿ 1,44,000 ಸದಸ್ಯರು ಇರಬೇಕಾಗಿದೆ—12 ಕುಲಗಳಲ್ಲಿ ಪ್ರತಿಯೊಂದರಿಂದ 12,000 ಮಂದಿ. ಈ ದೇವರ ಇಸ್ರಾಯೇಲಿನ ಯಾವುದೇ ಕುಲವು ಪ್ರತ್ಯೇಕವಾಗಿ ರಾಜವಂಶದ್ದಾಗಿ ಯಾ ಯಾಜಕತ್ವದ್ದಾಗಿ ಇರುವುದಿಲ್ಲ. ಇಡೀ ಜನಾಂಗವು ರಾಜರಾಗಿ ಆಳಲಿದೆ, ಮತ್ತು ಇಡೀ ಜನಾಂಗವು ಯಾಜಕರಾಗಿ ಸೇವೆ ಸಲ್ಲಿಸಲಿದೆ.—ಗಲಾತ್ಯ 6:16; ಪ್ರಕಟನೆ 20:4, 6.

12. ಪ್ರಕಟನೆ 5:9, 10ರ ಮಾತುಗಳನ್ನು ಕುರಿಮರಿಯ ಮುಂದೆ 24 ಮಂದಿ ಹಿರಿಯರು ಹಾಡುವುದು ಯಾಕೆ ತಕ್ಕದ್ದಾಗಿದೆ?

12 ಆತ್ಮಿಕ ಇಸ್ರಾಯೇಲ್ಯರಾಗಿ ಆರಿಸಲ್ಪಡುವ ಪ್ರಥಮ ಸಂದರ್ಭವು ಮಾಂಸಿಕ ಯೆಹೂದ್ಯರಿಗೆ ಮತ್ತು ಯೆಹೂದ್ಯ ಮತಾವಲಂಬಿಗಳಿಗೆ ಕೊಡಲ್ಪಟ್ಟರೂ ಕೂಡ, ಆ ಜನಾಂಗದ ಕೇವಲ ಅಲ್ಪ ಸಂಖ್ಯಾತರು ಮಾತ್ರವೇ ಪ್ರತಿಕ್ರಿಯೆ ತೋರಿಸಿದರು. ಆದಕಾರಣ, ಯೆಹೋವನು ಅನ್ಯ ಜನಾಂಗಗಳಿಗೆ ಆಮಂತ್ರಣವನ್ನು ಕೊಟ್ಟನು. (ಯೋಹಾನ 1:10-13; ಅ. ಕೃತ್ಯಗಳು 2:4, 7-11; ರೋಮಾಪುರ 11:7) ಎಫೆಸದವರ ವಿಚಾರದಲ್ಲಿ, ಅವರು ಮೊದಲು “ಇಸ್ರಾಯೇಲಿನ ಹಕ್ಕಿನಲ್ಲಿ ಪಾಲಿಲ್ಲದವರಾಗಿದ್ದಂತೆ,” ಈಗ ಯೆಹೂದ್ಯೇತರರು ದೇವರ ಆತ್ಮದಿಂದ ಮುದ್ರೆ ಒತ್ತಿಸಿಕೊಳ್ಳಸಾಧ್ಯವಿತ್ತು ಮತ್ತು ಅಭಿಷಿಕ್ತ ಕ್ರೈಸ್ತ ಸಭೆಯ ಭಾಗವಾಗಲು ಸಾಧ್ಯವಿತ್ತು. (ಎಫೆಸ 2:11-13; 3:5, 6; ಅ. ಕೃತ್ಯಗಳು 15:14) ಹಾಗಾದರೆ, ಕುರಿಮರಿಯ ಮುಂದೆ 24 ಹಿರಿಯರು ಹಾಡುವುದು ತಕ್ಕದ್ದಾಗಿತ್ತು: “ನೀನು ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ ವ್ಯಕ್ತಿಗಳನ್ನು ದೇವರಿಗಾಗಿ ಕೊಂಡುಕೊಂಡಿ. ಮತ್ತು ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದ್ದಿ, ಮತ್ತು ಅವರು ಭೂಮಿಯ ಮೇಲೆ ರಾಜರಾಗಿ ಆಳಲಿದ್ದಾರೆ.”—ಪ್ರಕಟನೆ 5:9, 10, NW.

13. ಯೇಸುವಿನ ಮಲತಮ್ಮನಾದ ಯಾಕೋಬನು ತನ್ನ ಪತ್ರವನ್ನು “ಚದರಿರುವ ಹನ್ನೆರಡು ಕುಲಗಳಿಗೆ” ಯುಕ್ತವಾಗಿ ಸಂಬೋಧಿಸಶಕ್ತನಾದದ್ದು ಏಕೆ?

13 ಕ್ರೈಸ್ತ ಸಭೆಯು “ಒಂದು ಆದುಕೊಂಡ ಕುಲವೂ, ಒಂದು ರಾಜವೈಭವದ ಯಾಜಕತ್ವವೂ, ಒಂದು ಪವಿತ್ರ ಜನಾಂಗವೂ” ಆಗಿರುತ್ತದೆ. (1 ಪೇತ್ರ 2:9, NW) ದೇವರ ಜನಾಂಗವಾಗಿ ಮಾಂಸಿಕ ಇಸ್ರಾಯೇಲನ್ನು ಸ್ಥಾನಾಂತರ ಮಾಡುವುದರಿಂದ, ಅದು “ನಿಜವಾದ ‘ಇಸ್ರಾಯೇಲ್‌’” ಆಗಿರುವ ಹೊಸ ಇಸ್ರಾಯೇಲ್‌ ಆಗುತ್ತದೆ. (ರೋಮಾಪುರ 9:6-8; ಮತ್ತಾಯ 21:43) * ಈ ಕಾರಣಕ್ಕಾಗಿ, ಯೇಸುವಿನ ಮಲತಮ್ಮನಾದ ಯಾಕೋಬನು ತನ್ನ ಕುರಿಪಾಲನಾ ಪತ್ರದಲ್ಲಿ, ಸಮಯಾನಂತರ 1,44,000 ಸಂಖ್ಯೆಯಾಗಲಿರುವ ಅಭಿಷಿಕ್ತ ಕ್ರೈಸ್ತರ ಲೋಕವ್ಯಾಪಕ ಸಭೆಗೆ “ಚದರಿರುವ ಹನ್ನೆರಡು ಕುಲಗಳು” ಎಂದು ಸಂಬೋಧಿಸುವುದು ಯುಕ್ತವಾಗಿತ್ತು.—ಯಾಕೋಬ 1:1.

ಇಂದು ದೇವರ ಇಸ್ರಾಯೇಲ್‌

14. ಆತ್ಮಿಕ ಇಸ್ರಾಯೇಲನ್ನು ಉಂಟುಮಾಡುವ 1,44,000 ಒಂದು ಅಕ್ಷರಶಃ ಸಂಖ್ಯೆಯೆಂದು ಯೆಹೋವನ ಸಾಕ್ಷಿಗಳು ನಿಷ್ಠೆಯಿಂದ ಎತ್ತಿ ಹಿಡಿದಿರುತ್ತಾರೆಂದು ಯಾವುದು ತೋರಿಸುತ್ತದೆ?

14 ಆಸಕ್ತಿಕರವಾಗಿಯೇ, ವಾಚ್‌ ಟವರ್‌ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಚಾರ್ಲ್ಸ್‌ ಟೇಸ್‌ ರಸಲ್‌ ಆತ್ಮಿಕ ಇಸ್ರಾಯೇಲನ್ನು ಉಂಟುಮಾಡುವ ವೈಯಕ್ತಿಕ ಸದಸ್ಯರ ಸಂಖ್ಯೆಯಾದ 1,44,000 ಒಂದು ಅಕ್ಷರಾರ್ಥಕ ಅಂಕೆ ಎಂದು ತಿಳಿದುಕೊಂಡರು. ಇಸವಿ 1904 ರಲ್ಲಿ ಪ್ರಕಾಶಿತವಾದ ಅವರ ಸಡ್ಟೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ನ ಸಂಪುಟ VI, ದ ನ್ಯೂ ಕ್ರಿಯೇಶನ್‌ ಪುಸ್ತಕದಲ್ಲಿ ಅವರು ಬರೆದದ್ದು: “ಪ್ರಕಟನೆ (7:4; 14:1) ಯಲ್ಲಿ ಹಲವಾರು ಕಡೆಗಳಲ್ಲಿ ನಮೂದಿಸಲ್ಪಟ್ಟ ಆರಿಸಿದವರ [ಅಭಿಷಿಕ್ತ ಆಯ್ದವರ] ಸಂಖ್ಯೆಯು ಒಂದು ನಿರ್ದಿಷ್ಟ, ನಿಶ್ಚಿತ ಸಂಖ್ಯೆ ಎಂದು ನಂಬಲು ನಮಗೆ ಪ್ರತಿಯೊಂದು ಕಾರಣವೂ ಇದೆ; ಅಂದರೆ 1,44,000 ಮಂದಿ ‘ಮನುಷ್ಯರ ಮಧ್ಯದಿಂದ ವಿಮೋಚಿಸಲ್ಪಟ್ಟವರು.’” ವಾಚ್‌ ಟವರ್‌ ಸೊಸೈಟಿಯ ಎರಡನೆಯ ಅಧ್ಯಕ್ಷರಾದ ಜೆ. ಎಫ್‌. ರಥರ್‌ಫರ್ಡ್‌ರಿಂದ 1930 ರಲ್ಲಿ ಪ್ರಕಾಶಿತವಾದ ಲೈಟ್‌ ಪುಸ್ತಕ ಒಂದರಲ್ಲಿ ತದ್ರೀತಿಯಲ್ಲಿಯೇ ಹೇಳಲಾಗಿರುವುದು: “ಕ್ರಿಸ್ತನ ದೇಹದ 1,44,000 ಸದಸ್ಯರುಗಳು ಹೀಗೆ ಆರಿಸಲ್ಪಟ್ಟ ಮತ್ತು ಅಭಿಷೇಕಿಸಲ್ಪಟ್ಟ, ಯಾ ಮುದ್ರೆಹೊಂದಿದವರೆಂದು ತೋರಿಸಲ್ಪಟ್ಟ ಸಮೂಹವಾಗಿರುತ್ತದೆ.” ಅಕ್ಷರಶಃ 1,44,000 ಮಂದಿ ಅಭಿಷಿಕ್ತ ಕ್ರೈಸ್ತರು ಆತ್ಮಿಕ ಇಸ್ರಾಯೇಲನ್ನು ಉಂಟುಮಾಡುತ್ತಾರೆ ಎಂಬ ನೋಟವನ್ನು ಯೆಹೋವನ ಸಾಕ್ಷಿಗಳು ನಿಷ್ಠೆಯಿಂದ ಹಿಡಿದುಕೊಂಡಿರುತ್ತಾರೆ.

15. ಕರ್ತನ ದಿನಕ್ಕಿಂತ ಸ್ವಲ್ಪ ಮೊದಲು, ಅನ್ಯ ಜನಾಂಗಗಳ ಸಮಯ ಕೊನೆಗೊಂಡ ನಂತರ ಮಾಂಸಿಕ ಯೆಹೂದ್ಯರು ಯಾವುದರಲ್ಲಿ ಆನಂದಿಸಲಿರುವರೆಂದು ಯಥಾರ್ಥವಂತ ವೇದ ವಿದ್ಯಾರ್ಥಿಗಳು ಯೋಚಿಸಿದರು?

15 ಆದಾಗ್ಯೂ, ಮಾಂಸಿಕ ಇಸ್ರಾಯೇಲ್ಯರು ಸ್ವಲ್ಪವಾದರೂ ವಿಶೇಷ ಮೆಚ್ಚಿಕೆಯನ್ನು ಪಡೆಯಲು ಅರ್ಹರಾಗಿರುವುದಿಲ್ಲವೇ? ಕರ್ತನ ದಿನದ ಮುಂಚಿನ ಸಮಯಾವಧಿಯಲ್ಲಿ, ದೇವರ ವಾಕ್ಯದ ಅನೇಕ ಮೂಲ ಸತ್ಯತೆಗಳನ್ನು ಯಥಾರ್ಥವಂತರಾದ ವೇದ ವಿದ್ಯಾರ್ಥಿಗಳು ಪುನಃ ಅನ್ವೇಷಣೆ ಮಾಡುತ್ತಿದ್ದಾಗ, ಅನ್ಯ ಜನಾಂಗಗಳ ಸಮಯವು ಅಂತ್ಯಗೊಳ್ಳುವುದರೊಂದಿಗೆ ಯೆಹೂದ್ಯರು ದೇವರ ಮುಂದೆ ಒಂದು ಸುಯೋಗವುಳ್ಳ ನಿಲುವಿನಲ್ಲಿ ಪುನಃ ಆನಂದಿಸಲಿರುವರು ಎಂದು ಯೋಚಿಸಿದ್ದರು. ಆದಕಾರಣ, ಸಿ. ಟಿ. ರಸಲ್‌ರ 1889 ರಲ್ಲಿ ಪ್ರಕಾಶಿತವಾದ ದ ಟೈಮ್‌ ಈಸ್‌ ಎಟ್‌ ಹ್ಯಾಂಡ್‌ (ಸಡ್ಟೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ನ ಸಂಪುಟ II), ಯೆರೆಮೀಯ 31:29-34ನ್ನು ಮಾಂಸಿಕ ಯೆಹೂದ್ಯರಿಗೆ ಅನ್ವಯಿಸುತ್ತಾ, ಹೇಳಿಕೆ ನೀಡಿದ್ದು: “ಕ್ರಿ. ಪೂ. [607] ರಿಂದ ಅನ್ಯ ಜನಾಂಗಗಳ ಪ್ರಭುತ್ವದ ಕೆಳಗೆ ಇಸ್ರಾಯೇಲಿನ ಮುಂದರಿದ ದಂಡನೆಯ ವಾಸ್ತವಾಂಶಕ್ಕೆ ಲೋಕವು ಸಾಕ್ಷಿಯಾಗಿರುತ್ತದೆ ಮತ್ತು ಅದು ಈಗಲೂ ಮುಂದರಿದದೆ ಮತ್ತು ಕ್ರಿ. ಶ. 1914 ಕ್ಕಿಂತ ಮೊದಲು, ಅವರ ‘ಏಳು ಕಾಲಗಳ ಮಿತಿ’—2520 ವರ್ಷಗಳು—ಮುಗಿಯುವ ಮೊದಲು ಅವರ ರಾಷ್ಟ್ರೀಯ ಪುನಃ ಸಂಘಟನೆಯನ್ನು ನಿರೀಕ್ಷಿಸಲು ಯಾವ ಕಾರಣವೂ ಇರುವುದಿಲ್ಲ.” ಆಗ ಯೆಹೂದ್ಯರು ಒಂದು ರಾಷ್ಟ್ರೀಯ ಪುನಃ ಸ್ಥಾಪನೆಯನ್ನು ಅನುಭವಿಸುವರು ಎಂಬಂತೆ ತೋರಿತು, ವಿಶೇಷವಾಗಿ 1917 ರಲ್ಲಿ ಯೆಹೂದ್ಯರಿಗಾಗಿ ಪ್ಯಾಲಸ್ಟೀನನ್ನು ಒಂದು ರಾಷ್ಟ್ರೀಯ ಮನೆಯಾಗಿ ಮಾಡಲು ಬ್ಯಾಲ್ಫರ್‌ ಘೋಷಣೆಯು ಬ್ರಿಟಿಷರ ಬೆಂಬಲದ ಪ್ರತಿಜ್ಞೆಮಾಡಿದಾಗ, ಈ ಪ್ರತೀಕ್ಷೆಯು ಇನ್ನಷ್ಟು ಉಜ್ವಲಗೊಂಡಿತು.

16. ಕ್ರೈಸ್ತ ಸಂದೇಶದೊಂದಿಗೆ ಮಾಂಸಿಕ ಯೆಹೂದ್ಯರನ್ನು ತಲಪಲು ಯೆಹೋವನ ಸಾಕ್ಷಿಗಳಿಂದ ಯಾವ ಪ್ರಯತ್ನಗಳು ಮಾಡಲ್ಪಟ್ಟವು ಮತ್ತು ಯಾವ ಫಲಿತಾಂಶದೊಂದಿಗೆ?

16 ಮೊದಲನೆಯ ಲೋಕ ಯುದ್ಧವನ್ನು ಹಿಂಬಾಲಿಸಿ, ಪ್ಯಾಲಿಸ್ಟೀನ್‌ ಗ್ರೇಟ್‌ ಬ್ರಿಟನ್‌ನ ಕೆಳಗೆ ಒಂದು ಆಜ್ಞಾಪಕ ಕ್ಷೇತ್ರವಾಯಿತು, ಮತ್ತು ಆ ದೇಶಕ್ಕೆ ಅನೇಕ ಯೆಹೂದ್ಯರು ಹಿಂದೆರಳಿ ಬರುವಂತೆ ದಾರಿಯನ್ನು ತೆರೆಯಿತು. ಇಸವಿ 1948 ರಲ್ಲಿ ಒಂದು ರಾಜಕೀಯ ಇಸ್ರಾಯೇಲ್‌ ದೇಶವು ಸ್ಥಾಪಿಸಲ್ಪಟ್ಟಿತು. ಇದೆಲ್ಲವೂ, ಯೆಹೂದ್ಯರು ದೈವಿಕ ಆಶೀರ್ವಾದಗಳನ್ನು ಪಡೆಯುವ ಸಾಲಿನಲ್ಲಿದ್ದರೆಂದು ಸೂಚಿಸಲಿಲ್ಲವೇ? ಅನೇಕ ವರ್ಷಗಳ ತನಕ ಯೆಹೋವನ ಸಾಕ್ಷಿಗಳು ಹಾಗೆಂದು ನಂಬಿದರು. ಆದಕಾರಣ, ಅವರು ಕಂಫರ್ಟ್‌ ಫಾರ್‌ ದ ಜ್ಯೂಸ್‌ (ಯೆಹೂದ್ಯರಿಗೆ ಸಾಂತ್ವನ) ಎಂಬ 128 ಪುಟಗಳ ಪುಸ್ತಕವನ್ನು 1925 ರಲ್ಲಿ ಪ್ರಕಟಿಸಿದರು. ಇಸವಿ 1929 ರಲ್ಲಿ ಲೈಫ್‌ ಎಂಬ ಆಕರ್ಷಕವಾದ 360 ಪುಟಗಳ ಸಂಪುಟವನ್ನು ಬಿಡುಗಡೆಗೊಳಿಸಿದರು, ಇದು ಯೆಹೂದ್ಯರನ್ನು ಆಕರ್ಷಿಸಲು ರಚಿಸಲ್ಪಟ್ಟಿತು ಮತ್ತು ಯೋಬ ಎಂಬ ಬೈಬಲ್‌ ಪುಸ್ತಕದ ಮೇಲೆ ಕೂಡ ವ್ಯವಹರಿಸಿತು. ವಿಶೇಷವಾಗಿ ನ್ಯೂ ಯಾರ್ಕ್‌ ನಗರದಲ್ಲಿ, ಈ ಮೆಸ್ಸೀಯ ಸಂಬಂಧಿತ ಸಂದೇಶದೊಂದಿಗೆ ಯೆಹೂದ್ಯರನ್ನು ತಲಪಲು ಮಹಾ ಪ್ರಯತ್ನಗಳನ್ನು ಮಾಡಲಾಯಿತು. ಸಂತಸಕರವಾಗಿಯೇ, ಕೆಲವು ವ್ಯಕ್ತಿಗಳು ಪ್ರತಿವರ್ತನೆ ತೋರಿಸಿದರು, ಆದರೆ ಒಟ್ಟಿನಲ್ಲಿ ಮೊದಲನೆಯ ಶತಕದ ತಮ್ಮ ಪೂರ್ವಜರಂತೆ, ಮೆಸ್ಸೀಯನ ಸಾನ್ನಿಧ್ಯದ ಪುರಾವೆಗಳನ್ನು ಯೆಹೂದ್ಯರು ನಿರಾಕರಿಸಿದರು.

17, 18. ಹೊಸ ಒಡಂಬಡಿಕೆಯ ಮತ್ತು ಬೈಬಲಿನ ಪುನಃಸ್ಥಾಪನೆಯ ಪ್ರವಾದನೆಗಳ ಕುರಿತಾಗಿ ಭೂಮಿಯ ಮೇಲಿನ ದೇವರ ದಾಸರು ಯಾವ ತಿಳಿವಳಿಕೆಯನ್ನು ಪಡೆದರು?

17ಪ್ರಕಟನೆ 7:4-8 ಯಾ ಕರ್ತನ ದಿನಗಳಿಗೆ ಸಂಬಂಧಿಸಿದ ಬೈಬಲಿನ ಇತರ ಪ್ರವಾದನೆಗಳಲ್ಲಿ ವಿವರಿಸಲಾದ ಇಸ್ರಾಯೇಲ್‌, ಒಂದು ಜನವಾಗಿ ಯಾ ಒಂದು ಜನಾಂಗದೋಪಾದಿ, ಮಾಂಸಿಕ ಯೆಹೂದ್ಯರು ಆಗಿರಲಿಲ್ಲ ಎಂಬುದು ಸುಸ್ಪಷ್ಟವಾಗಿತ್ತು. ಸಂಪ್ರದಾಯವನ್ನು ಅನುಸರಿಸುತ್ತಾ, ಯೆಹೂದ್ಯರು ದೈವಿಕ ನಾಮವನ್ನು ಬಳಸುವುದನ್ನು ತಪ್ಪಿಸುತ್ತಾ ಮುಂದುವರಿದರು. (ಮತ್ತಾಯ 15:1-3, 7-9) ಯೆರೆಮೀಯ 31:31-34ನ್ನು ಚರ್ಚಿಸುತ್ತಾ, 1934 ರಲ್ಲಿ ವಾಚ್‌ ಟವರ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಜೆಹೋವ ಪುಸ್ತಕವು ನಿರ್ಣಯಾತ್ಮಕವಾಗಿ ಹೇಳಿದ್ದು: “ಇಸ್ರಾಯೇಲ್ಯರ ಮಾಂಸಿಕ ಸಂತತಿಯವರೊಂದಿಗೆ ಮತ್ತು ಸರ್ವಸಾಮಾನ್ಯವಾಗಿರುವ ಮಾನವಕುಲದೊಂದಿಗೆ, ಹೊಸ ಒಡಂಬಡಿಕೆಗೆ ಏನೂ ಸಂಬಂಧವಿರುವುದಿಲ್ಲ, ಆದರೆ . . . ಅದು ಆತ್ಮಿಕ ಇಸ್ರಾಯೇಲಿಗೆ ಸೀಮಿತಗೊಂಡಿದೆ.” ಬೈಬಲಿನ ಪುನಃಸ್ಥಾಪನೆಯ ಪ್ರವಾದನೆಗಳು ಮಾಂಸಿಕ ಯೆಹೂದ್ಯರಿಗಾಗಲಿ, ಯೋಹಾನ 14:19, 30 ಮತ್ತು 18:36 ರಲ್ಲಿ ಯೇಸು ಮಾತಾಡಿರುವ ಈ ಲೋಕದ ಒಂದು ಭಾಗವಾಗಿರುವ ಮತ್ತು ಸಂಯುಕ್ತ ರಾಷ್ಟ್ರ ಸಂಘದ ಒಂದು ಸದಸ್ಯನಾಗಿರುವ ರಾಜಕೀಯ ಇಸ್ರಾಯೇಲ್‌ಗಾಗಲಿ ಸಂಬಂಧಿಸಿರುವುದಿಲ್ಲ.

18 ಭೂಮಿಯ ಮೇಲೆ ದೇವರ ದಾಸರು 1931 ರಲ್ಲಿ ಬಹಳ ಆನಂದದಿಂದ ಯೆಹೋವನ ಸಾಕ್ಷಿಗಳು ಎಂಬ ನಾಮವನ್ನು ಪಡೆದರು. ಕೀರ್ತನೆ 97:11ರ ಮಾತುಗಳನ್ನು ಅವರು ಪೂರ್ಣಹೃದಯದಿಂದ ಅನುಮೋದಿಸಶಕ್ತರಾದರು: “ನೀತಿವಂತರಿಗೋಸ್ಕರ ಪ್ರಕಾಶವೂ, ಯಥಾರ್ಥ ಹೃದಯವುಳ್ಳವರಿಗೆ ಸಂತೋಷವೂ ಬಿತ್ತಲ್ಪಟ್ಟಿವೆ.” ಆತ್ಮಿಕ ಇಸ್ರಾಯೇಲ್‌ ಮಾತ್ರವೇ ಹೊಸ ಒಡಂಬಡಿಕೆಯೊಳಗೆ ತರಲ್ಪಟ್ಟಿತು ಎಂಬುದನ್ನು ಅವರು ಸ್ಪಷ್ಟವಾಗಿ ಗ್ರಹಿಸಶಕ್ತರಾದರು. (ಇಬ್ರಿಯ 9:15; 12:22, 24) ಪ್ರತಿವರ್ತನೆ ತೋರಿಸದ ಮಾಂಸಿಕ ಇಸ್ರಾಯೇಲ್ಯರಿಗಾಗಲಿ ಸರ್ವಸಾಮಾನ್ಯ ಮಾನವ ಕುಲಕ್ಕಾಗಲಿ ಅದರಲ್ಲಿ ಯಾವುದೇ ಭಾಗವಿರಲಿಲ್ಲ. ಈ ತಿಳಿವಳಿಕೆಯು ದೈವಿಕ ಪ್ರಕಾಶದ ಒಂದು ಉಜ್ವಲ ಹೊಳಪಿನ ದಾರಿಯನ್ನು ಶುಭ್ರಗೊಳಿಸಿತು, ಇದು ದೇವಪ್ರಭುತ್ವ ಇತಿಹಾಸದ ಪುಟಗಳಲ್ಲಿ ಗಮನಾರ್ಹವಾಗಿದೆ. ತನ್ನ ಸಮೀಪಕ್ಕೆ ಬರುವ ಎಲ್ಲಾ ಮಾನವರಿಗೆ ಯೆಹೋವನು ತನ್ನ ಕರುಣೆ, ಪ್ರೀತಿ-ದಯೆ, ಮತ್ತು ಸತ್ಯವನ್ನು ವಿಪುಲವಾಗಿ ಹೇಗೆ ತೋರಿಸುತ್ತಾನೆ ಎಂದು ಇದು ಪ್ರಕಟಿಸುತ್ತದೆ. (ವಿಮೋಚನಕಾಂಡ 34:6; ಯಾಕೋಬ 4:8) ಹೌದು, ನಾಶನದ ಗಾಳಿಗಳನ್ನು ದೇವದೂತರು ತಡೆಹಿಡಿದಿರುವುದರಿಂದ ದೇವರ ಇಸ್ರಾಯೇಲ್ಯರ ಹೊರತಾಗಿ ಇನ್ನಿತರರು ಪ್ರಯೋಜನ ಪಡೆಯಲಿರುವರು. ಇವರು ಯಾರಾಗಿರಬಹುದು? ಅವರಲ್ಲಿ ನೀವು ಒಬ್ಬರಾಗಿರಬಹುದೇ? ನಾವೀಗ ಅದನ್ನು ನೋಡೋಣ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 13 ಯುಕ್ತವಾಗಿಯೇ, ಇಸ್ರಾಯೇಲ್‌ ಎಂಬ ಹೆಸರಿನ ಅರ್ಥವು “ದೇವರು ಹೋರಾಡುತ್ತಾನೆ; ದೇವರೊಂದಿಗೆ ಹೋರಾಡುವವನು (ಪಟ್ಟುಹಿಡಿದು ಪ್ರಯತ್ನಮಾಡುವವನು).”—ಆದಿಕಾಂಡ 32:28, ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ರೆಫರೆನ್ಸ್‌ ಬೈಬಲ್‌, ಪಾದಟಿಪ್ಪಣಿ.

[ಅಧ್ಯಯನ ಪ್ರಶ್ನೆಗಳು]

[Full-page picture on page 114]

[Pictures on page 116, 117]

ದೇವರ ನಿಜ ಇಸ್ರಾಯೇಲ್ಯರ ಸಾಮಾನ್ಯ ಆರಿಸುವಿಕೆಯು ಸಾ. ಶ. 33ರ ಪಂಚಾಶತ್ತಮ ದಿನದಿಂದ ಹಿಡಿದು 1935ರ ತನಕ ಮುಂದರಿಯಿತು, ಆಗ ವಾಷಿಂಗ್ಟನ್‌ ಡಿ. ಸಿ., ಯಲ್ಲಿ ಜರುಗಿದ ಯೆಹೋವನ ಸಾಕ್ಷಿಗಳ ಐತಿಹಾಸಿಕ ಅಧಿವೇಶನವೊಂದರಲ್ಲಿ ಭೂಮಿಯ ಮೇಲಿನ ಜೀವಿತದ ಪ್ರತೀಕ್ಷೆಯಿರುವ ಮಹಾ ಸಮೂಹದವರ ಒಟ್ಟುಗೂಡಿಸುವಿಕೆಯ ಮೇಲೆ ಒತ್ತರವನ್ನು ಬದಲಾಯಿಸಲಾಯಿತು (ಪ್ರಕಟನೆ 7:9)