ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೆಂಕಿಯಿಂದ ಶೋಧಿಸಿದ ಚಿನ್ನವನ್ನು ಕೊಂಡುಕೊ

ಬೆಂಕಿಯಿಂದ ಶೋಧಿಸಿದ ಚಿನ್ನವನ್ನು ಕೊಂಡುಕೊ

ಅಧ್ಯಾಯ 13

ಬೆಂಕಿಯಿಂದ ಶೋಧಿಸಿದ ಚಿನ್ನವನ್ನು ಕೊಂಡುಕೊ

ಲವೊದಿಕೀಯ

1, 2. ಮಹಿಮೆಗೇರಿಸಲ್ಪಟ್ಟ ಯೇಸುವಿನಿಂದ ಸಂದೇಶವೊಂದನ್ನು ಪಡೆಯುವ ಏಳು ಸಭೆಗಳಲ್ಲಿ ಕೊನೆಯದ್ದರ ನಿವೇಶನವು ಯಾವುದಾಗಿತ್ತು, ಮತ್ತು ಆ ನಗರದ ಕೆಲವು ಲಕ್ಷಣಗಳು ಯಾವುವು?

ಪುನರುತಿತ್ಥ ಯೇಸುವಿನಿಂದ ಸಂದೇಶವೊಂದನ್ನು ಪಡೆಯುವ ಏಳು ಸಭೆಗಳಲ್ಲಿ ಲವೊದಿಕೀಯವು ಕೊನೆಯದ್ದಾಗಿದೆ. ಮತ್ತು ಎಂತಹ ಕಣ್ಣು ತೆರೆಯುವ, ಪ್ರಚೋದಕ ಸಮಾಚಾರವನ್ನು ಅದು ರವಾನಿಸುತ್ತದೆ!

2 ಇಂದು, ಆಲಶಹರ್‌ನಿಂದ ಸುಮಾರು 88 ಕಿಲೋಮೀಟರು ಆಗ್ನೇಯದಲ್ಲಿ, ಡೆನಜ್ಲಿ ಹತ್ತಿರ ಲವೊದಿಕೀಯದ ಅವಶೇಷಗಳನ್ನು ನೀವು ಕಾಣುವಿರಿ. ಮೊದಲನೆಯ ಶತಕದಲ್ಲಿ, ಲವೊದಿಕೀಯವು ಒಂದು ಉಚ್ಛಾಯ್ರಸ್ಥಿತಿಯ ನಗರವಾಗಿತ್ತು. ಒಂದು ಪ್ರಧಾನ ರಸ್ತೆಯ ಸಂಧಿಸ್ಥಾನದಲ್ಲಿದ್ದು, ಇದು ಬ್ಯಾಂಕಿಂಗ್‌ ಮತ್ತು ವಾಣಿಜ್ಯದ ಒಂದು ಪ್ರಮುಖ ಕೇಂದ್ರವಾಗಿತ್ತು. ಕಣ್ಣಿನ ಒಂದು ಪ್ರಖ್ಯಾತ ಅಂಜನದ ಮಾರಾಟವು ಅದರ ಐಶ್ವರ್ಯಕ್ಕೆ ಕೂಡಿಸಿತು, ಮತ್ತು ಉತ್ತಮವಾದ ಕಪ್ಪು ಉಣ್ಣೆಯಿಂದ ಸ್ಥಳೀಯವಾಗಿ ತಯಾರಿಸಿದ ಶ್ರೇಷ್ಠ ಮಟ್ಟದ ವಸ್ತ್ರಗಳಿಗಾಗಿಯೂ ಅದು ಹೆಸರುವಾಸಿಯಾಗಿತ್ತು. ನಗರದ ಒಂದು ಪ್ರಧಾನ ಸಮಸ್ಯೆಯಾದ ನೀರಿನ ಕೊರತೆಯನ್ನು, ಸ್ವಲ್ಪ ದೂರದ ಬಿಸಿನೀರಿನ ಬುಗ್ಗೆಗಳಿಂದ ನೀರನ್ನು ಕೆಳಕ್ಕೆ ಹರಿಸುವುದರ ಮೂಲಕ ಬಗೆಹರಿಸಲಾಗಿತ್ತು. ಇದರಿಂದಾಗಿ ನೀರು ನಗರದೊಳಗೆ ಬರುವ ಸಮಯದೊಳಗೆ ಕೇವಲ ಉಗುರುಬೆಚ್ಚಗಾಗಿ ಇರುತ್ತಿತ್ತು.

3. ಲವೊದಿಕೀಯದಲ್ಲಿನ ಸಭೆಗೆ ತನ್ನ ಸಂದೇಶವನ್ನು ಯೇಸುವು ಹೇಗೆ ಆರಂಭಿಸುತ್ತಾನೆ?

3 ಲವೊದಿಕೀಯವು ಕೊಲೊಸ್ಸೆಗೆ ಹತ್ತಿರವಾಗಿತ್ತು. ಕೊಲೊಸ್ಸೆಯವರಿಗೆ ಬರೆಯುವಾಗ, ಅಪೊಸ್ತಲ ಪೌಲನು ತಾನು ಲವೊದಿಕೀಯದವರಿಗೆ ಕಳುಹಿಸಿದ ಪತ್ರವೊಂದರ ಕುರಿತು ಪ್ರಸ್ತಾಪಿಸುತ್ತಾನೆ. (ಕೊಲೊಸ್ಸೆ 4:15, 16) ಆ ಪತ್ರದಲ್ಲಿ, ಪೌಲನು ಏನು ಬರೆದನು ಎಂದು ನಮಗೆ ತಿಳಿದಿಲ್ಲ, ಆದರೆ ಲವೊದೀಕೀಯದವರು ವಿಪತ್ಕಾರಕ ಆತ್ಮಿಕ ಸ್ಥಿತಿಯೊಳಗೆ ಬಿದ್ದಿದ್ದರು ಎಂದು ಅವರಿಗೆ ಯೇಸುವು ಈಗ ಕಳುಹಿಸುವ ಸಂದೇಶವು ತೋರಿಸುತ್ತದೆ. ಆದರೂ, ಯಥಾಪ್ರಕಾರವಾಗಿ ಯೇಸುವು ಮೊದಲಾಗಿ ತನ್ನ ಸ್ವಂತ ಅರ್ಹತೆಗಳನ್ನು ಉಲ್ಲೇಖಿಸುತ್ತಾ ಹೇಳುವುದು: “ಮತ್ತು ಲವೊದಿಕೀಯ ಸಭೆಯ ದೂತನಿಗೆ ಬರೆ: ನಂಬಿಗಸ್ತನೂ ತ್ತು ಸತ್ಯಸಾಕ್ಷಿಯೂ, ದೇವರ ಸೃಷ್ಟಿಗೆ ಮೂಲನೂ ಆದ ಆಮೆನ್‌ ಎಂಬಾತನು ಹೇಳುವ ವಿಷಯಗಳು ಇವೇ.”—ಪ್ರಕಟನೆ 3:14, NW. 

4. ಯೇಸುವು “ಆಮೆನ್‌” ಆಗಿರುವುದು ಹೇಗೆ?

4 ಯೇಸುವು ತನ್ನನ್ನು “ಆಮೆನ್‌” ಎಂದು ಕರೆದುಕೊಳ್ಳುವುದು ಯಾಕೆ? ಈ ಬಿರುದು ಅವನ ಸಂದೇಶಕ್ಕೆ ನ್ಯಾಯವಿಧಾಯಕ ತೂಕವನ್ನು ಕೂಡಿಸುತ್ತದೆ. ಒಂದು ಹೀಬ್ರು ಪದದ ಲಿಪ್ಯಂತರವಾಗಿದ್ದು, ಅದರ ಅರ್ಥವು “ಖಂಡಿತವಾಗಿಯೂ,” “ಹಾಗೆಯೇ ಆಗಲಿ” ಎಂದಾಗಿದೆ ಮತ್ತು ಪ್ರಾರ್ಥನೆಗಳ ಕೊನೆಯಲ್ಲಿ ಅದರಲ್ಲಿ ವ್ಯಕ್ತಪಡಿಸಿದ ಭಾವನಾ ಸಮುಚ್ಚಯಗಳನ್ನು ಸ್ಥಿರೀಕರಿಸಲು ಬಳಸಲಾಗುತ್ತದೆ. (1 ಕೊರಿಂಥ 14:16) ಯೇಸುವು “ಆಮೆನ್‌” ಆಗಿದ್ದಾನೆ ಯಾಕಂದರೆ ಅವನ ನಿಷ್ಕಳಂಕ ಸಮಗ್ರತೆ ಮತ್ತು ಯಜ್ಞಾರ್ಪಿತ ಮರಣವು ಯೆಹೋವನ ಅತ್ಯಮೂಲ್ಯ ವಾಗ್ದಾನಗಳೆಲ್ಲದರ ನೆರವೇರಿಕೆಯನ್ನು ದೃಢೀಕರಿಸುತ್ತದೆ ಮತ್ತು ಖಾತರಿಗೊಳಿಸುತ್ತದೆ. (2 ಕೊರಿಂಥ 1:20) ಆ ಸಮಯದಿಂದ, ಎಲ್ಲಾ ಪ್ರಾರ್ಥನೆಗಳು ಯೋಗ್ಯವಾಗಿಯೇ ಯೇಸುವಿನ ಮೂಲಕ ಯೆಹೋವನಿಗೆ ಸಂಬೋಧಿಸಲ್ಪಡುತ್ತವೆ.—ಯೋಹಾನ 15:16; 16:23, 24.

5. ಯೇಸುವು “ನಂಬಿಗಸ್ತನೂ, ಸತ್ಯ ಸಾಕ್ಷಿಯೂ” ಆಗಿರುವುದು ಯಾವ ವಿಧದಲ್ಲಿ?

5 ಯೇಸುವು “ನಂಬಿಗಸ್ತನೂ, ಸತ್ಯ ಸಾಕ್ಷಿಯೂ” ಆಗಿರುತ್ತಾನೆ. ಪ್ರವಾದನೆಯಲ್ಲಿ ಆಗಿಂದಾಗ್ಗೆ ನಂಬಿಗಸ್ತಿಕೆ, ಸತ್ಯ ಮತ್ತು ನೀತಿಯುಕ್ತತೆಯೊಂದಿಗೆ ಅವನನ್ನು ಜೋಡಿಸಲಾಗಿದೆ, ಯಾಕಂದರೆ ಯೆಹೋವ ದೇವರ ಸೇವಕನೋಪಾದಿ ಅವನು ಭರವಸೆಗೆ ಸಂಪೂರ್ಣವಾಗಿ ಅರ್ಹನಾಗಿರುತ್ತಾನೆ. (ಕೀರ್ತನೆ 45:4; ಯೆಶಾಯ 11:4, 5; ಪ್ರಕಟನೆ 1:5; 19:11) ಯೆಹೋವನ ಪರವಾಗಿ ಅವನು ಪರಮ ಶ್ರೇಷ್ಠ ಸಾಕ್ಷಿಯಾಗಿದ್ದಾನೆ. ವಾಸ್ತವದಲ್ಲಿ, “ದೇವರ ಸೃಷ್ಟಿಗೆ ಮೂಲ” ನೋಪಾದಿ, ಯೇಸುವು ದೇವರ ಮಹಿಮೆಯನ್ನು ಅತ್ಯಾರಂಭದಿಂದಲೇ ಘೋಷಿಸಿದ್ದಾನೆ. (ಜ್ಞಾನೋಕ್ತಿ 8:22-30) ಭೂಮಿಯ ಮೇಲೆ ಮಾನವನೋಪಾದಿ, ಅವನು ಸತ್ಯದ ಪರವಾಗಿ ಸಾಕ್ಷಿ ನೀಡಿದನು. (ಯೋಹಾನ 18:36, 37; 1 ತಿಮೊಥೆಯ 6:13) ಅವನ ಪುನರುತ್ಥಾನದ ನಂತರ, ಅವನ ಶಿಷ್ಯರಿಗೆ ಪವಿತ್ರಾತ್ಮವನ್ನು ವಾಗ್ದಾನಿಸಿ, ಅವರಿಗೆ ಅಂದದ್ದು: “ಯೆರೂಸಲೇಮಿನಲ್ಲಿಯೂ, ಎಲ್ಲಾ ಯೂದಾಯ ಮತ್ತು ಸಮಾರ್ಯಗಳಲ್ಲಿಯೂ ಮತ್ತು ಭೂಲೋಕದ ಕಟ್ಟಕಡೆಯ ವರೆಗೂ ನೀವು ನನಗೆ ಸಾಕ್ಷಿಗಳಾಗಿರುವಿರಿ.” ಸಾ. ಶ. 33ರ ಪಂಚಾಶತ್ತಮದಿಂದ ಹಿಡಿದು, “ಆಕಾಶದ ಕೆಳಗೆ ಸರ್ವ ಸೃಷ್ಟಿಯಲ್ಲಿ” ಸುವಾರ್ತೆಯನ್ನು ಸಾರುವುದರಲ್ಲಿ, ಅವನ ಈ ಅಭಿಷಿಕ್ತ ಕ್ರೈಸ್ತರನ್ನು ಯೇಸುವು ಮಾರ್ಗದರ್ಶಿಸಿದನು. (ಅ. ಕೃತ್ಯಗಳು 1:6-8; ಕೊಲೊಸ್ಸೆ 1:23) ನಿಜವಾಗಿಯೂ, ಯೇಸುವು ನಂಬಿಗಸ್ತನು ಮತ್ತು ಸತ್ಯ ಸಾಕ್ಷಿಯೆಂದು ಕರೆಯಲ್ಪಡಲು ಅರ್ಹನಾಗಿರುತ್ತಾನೆ. ಲವೊದಿಕೀಯದಲ್ಲಿನ ಅಭಿಷಿಕ್ತ ಕ್ರೈಸ್ತರು ಅವನ ಮಾತುಗಳನ್ನು ಆಲಿಸುವುದರಿಂದ ಪ್ರಯೋಜನ ಪಡೆಯಲಿದ್ದರು.

6. (ಎ) ಲವೊದಿಕೀಯದಲ್ಲಿನ ಸಭೆಯ ಆತ್ಮಿಕ ಸ್ಥಿತಿಯನ್ನು ಯೇಸುವು ಹೇಗೆ ವರ್ಣಿಸುತ್ತಾನೆ? (ಬಿ) ಯೇಸುವಿನ ಯಾವ ಉತ್ತಮ ಮಾದರಿಯನ್ನು ಲವೊದಿಕೀಯದಲ್ಲಿನ ಕ್ರೈಸ್ತರು ಅನುಕರಿಸಲು ತಪ್ಪಿಹೋಗಿದ್ದಾರೆ?

6 ಲವೊದಿಕೀಯದವರಿಗಾಗಿ ಯೇಸುವಿನೊಡನೆ ಯಾವ ಸಂದೇಶವಿತ್ತು? ಮೆಚ್ಚಿಗೆಯ ಯಾವುದೇ ಶಬ್ದ ಅವನ ಹತ್ತಿರವಿರಲಿಲ್ಲ. ಮರೆಮಾಚದೆ ಅವನು ಅವರಿಗನ್ನುವುದು: “ನಿನ್ನ ಕೃತ್ಯಗಳನ್ನು ನಾನು ಬಲ್ಲೆನು, ನೀನು ತಣ್ಣಗೂ ಅಲ್ಲ, ಬೆಚ್ಚಗೂ ಅಲ್ಲ. ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇದ್ದರೆ ಆಗುತ್ತಿತ್ತು ಎಂದು ನಾನು ಹಾರೈಸುತ್ತೇನೆ. ಆದುದರಿಂದ, ನೀನು ಬೆಚ್ಚಗೂ ಅಲ್ಲ, ತಣ್ಣಗೂ ಅಲ್ಲ, ಬದಲು ಉಗುರುಬೆಚ್ಚಗಿರುವುದರಿಂದ, ನಾನು ನಿನ್ನನ್ನು ನನ್ನ ಬಾಯೊಳಗಿಂದ ಕಾರುವೆನು.” (ಪ್ರಕಟನೆ 3:15, 16, NW)  ಕರ್ತನಾದ ಯೇಸು ಕ್ರಿಸ್ತನ ಅಂತಹ ಒಂದು ಸಂದೇಶಕ್ಕೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ನೀವು ಎಚ್ಚರಗೊಂಡು, ಸ್ವತಃ ಪರೀಕ್ಷಿಸಿಕೊಳ್ಳಲಿಕ್ಕಿಲ್ಲವೆ? ಖಂಡಿತವಾಗಿಯೂ ಲವೊದಿಕೀಯದವರು ತಮ್ಮನ್ನು ಚುರುಕುಗೊಳಿಸುವ ಜರೂರಿಯಿದೆ, ಯಾಕಂದರೆ ಅವರು ಆತ್ಮಿಕವಾಗಿ ಮೈಗಳ್ಳರಾಗಿದ್ದಾರೆ, ಪ್ರಾಯಶಃ ವಿಷಯಗಳನ್ನು ಬಹಳ ಸುಲಭವಾಗಿ ತೆಗೆದುಕೊಳ್ಳುವವರಾಗಿದ್ದಾರೆ. (2 ಕೊರಿಂಥ 6:1 ಹೋಲಿಸಿರಿ.) ಕ್ರೈಸ್ತರೋಪಾದಿ ಅವರೆಲ್ಲರು ಯಾರನ್ನು ಅನುಕರಿಸಬೇಕಿತ್ತೋ ಆ ಯೇಸುವು, ಯೆಹೋವನಿಗಾಗಿ ಮತ್ತು ಅವನ ಸೇವೆಗಾಗಿ ಯಾವಾಗಲೂ ಬೆಂಕಿಯಂಥ ಹುರುಪನ್ನು ಪ್ರದರ್ಶಿಸುತ್ತಾನೆ. (ಯೋಹಾನ 2:17) ಇದಲ್ಲದೆ, ಬಳಲಿಸುವ ಸೆಕೆಯ ದಿನವೊಂದರಲ್ಲಿ ಒಂದು ಲೋಟ ತಣ್ಣಗಿರುವ ನೀರು ಹೇಗೆ ಚೇತೋಹಾರಿಯಾಗಿರುತ್ತದೋ, ಹಾಗೆಯೇ ಅವನು ಯಾವಾಗಲೂ ಸಾತ್ವಿಕನೂ, ನಮ್ರನೂ ಆಗಿರುವುದನ್ನು ದೀನರು ಕಂಡುಕೊಂಡಿದ್ದಾರೆ. (ಮತ್ತಾಯ 11:28, 29) ಆದರೆ ಲವೊದಿಕೀಯದ ಕ್ರೈಸ್ತರು ಬೆಚ್ಚಗೂ ಇರಲಿಲ್ಲ, ತಣ್ಣಗೂ ಇಲ್ಲ. ಅವರ ನಗರಕ್ಕೆ ಹರಿದು ಬರುತ್ತಿದ್ದ ನೀರಿನಂತೆ, ಅವರು ಅರೆಮನಸ್ಸಿನವರೂ, ಉಗುರುಬೆಚ್ಚಗಿನವರೂ ಆಗಿದ್ದಾರೆ. ಯೇಸುವಿನಿಂದ ಅವರು ಸಂಪೂರ್ಣವಾಗಿ ನಿರಾಕರಿಸಲ್ಪಡುವುದಕ್ಕೆ, ‘ಅವನ ಬಾಯೊಳಗಿಂದ ಕಾರಲ್ಪಡುವುದಕ್ಕೆ’ ಅರ್ಹರಾಗಿದ್ದಾರೆ! ನಾವಂತೂ, ಯೇಸುವು ಮಾಡಿದಂತೆ ಇತರರಿಗೆ ಆತ್ಮಿಕ ಚೈತನ್ಯವನ್ನು ಒದಗಿಸುವರೆ, ಸದಾ ಹುರುಪಿನಿಂದ ಪ್ರಯತ್ನಿಸೋಣ.—ಮತ್ತಾಯ 9:35-38.

“ನೀನು ಹೇಳುತ್ತೀ: ‘ನಾನು ಐಶ್ವರ್ಯವಂತನು’”

7. (ಎ) ಲವೊದಿಕೀಯದಲ್ಲಿನ ಕ್ರೈಸ್ತರ ಸಮಸ್ಯೆಯ ಮೂಲವನ್ನು ಯೇಸುವು ಹೇಗೆ ಗುರುತಿಸುತ್ತಾನೆ? (ಬಿ) ಲವೊದಿಕೀಯದ ಕ್ರೈಸ್ತರು “ಕುರುಡರು ಮತ್ತು ನಗ್ನರು” ಎಂದು ಯೇಸು ಯಾಕೆ ಹೇಳುತ್ತಾನೆ?

7 ಲವೊದಿಕೀಯದವರ ಸಮಸ್ಯೆಯ ನಿಜವಾದ ಮೂಲ ಏನು? ಯೇಸುವಿನ ಮುಂದಿನ ಮಾತುಗಳಿಂದ ನಮಗೆ ಒಳ್ಳೆಯ ಕಲ್ಪನೆಯು ದೊರಕುತ್ತದೆ: “ಏಕೆಂದರೆ ನೀನು ಹೇಳುತ್ತೀ: ‘ನಾನು ಐಶ್ವರ್ಯವಂತನು ಮತ್ತು ನಾನು ಸಂಪತ್ತನ್ನು ಗಳಿಸಿದ್ದೇನೆ ಮತ್ತು ನನಗೆ ಯಾವುದರ ಆವಶ್ಯಕತೆಯೂ ಇಲ್ಲವೆ ಇಲ್ಲ.’ ಆದರೆ ನೀನು ದುರವಸ್ಥೆಯವನು ಮತ್ತು ಶೋಚನೀಯನು ಮತ್ತು ದರಿದ್ರನು ಮತ್ತು ಕುರುಡನು ಮತ್ತು ನಗ್ನನು ಎಂದು ನೀನು ತಿಳಿಯದೆ ಇದ್ದೀ.” (ಪ್ರಕಟನೆ 3:17, NW;  ಲೂಕ 12:16-21ನ್ನು ಹೋಲಿಸಿರಿ.) ಒಂದು ಸಿರಿತನದ ನಗರದಲ್ಲಿ ವಾಸವಾಗಿದ್ದುದರಿಂದ, ಅವರು ತಮ್ಮ ಐಶ್ವರ್ಯದ ಕಾರಣ ಧಾರ್ಷ್ಟ್ಯದ ಮನೋಭಾವವುಳ್ಳವರಾಗಿದ್ದಾರೆ. ಅವರ ಕ್ರೀಡಾರಂಗ, ನಾಟಕಶಾಲೆಗಳು ಮತ್ತು ವ್ಯಾಯಾಮಶಾಲೆಗಳ ಕಾರಣ ಅವರ ಜೀವನಶೈಲಿಯು ಪ್ರಾಯಶಃ ಬಾಧಿತವಾಗಿರಬಹುದು, ಅದರಿಂದಾಗಿ ಅವರು “ದೇವರನ್ನು ಪ್ರೀತಿಸುವ ಬದಲಾಗಿ ಸುಖಭೋಗಗಳನ್ನು ಪ್ರೀತಿಸುವವರು” ಆಗಿದ್ದಾರೆ. * (2 ತಿಮೊಥೆಯ 3:4) ಆದರೆ ಪ್ರಾಪಂಚಿಕವಾಗಿ ಐಶ್ವರ್ಯವಂತರಾಗಿದ್ದ ಲವೊದಿಕೀಯದವರು ಆತ್ಮಿಕವಾಗಿ ದುರ್ಬಲರಾಗಿದ್ದರು. ಒಂದು ವೇಳೆ ಇದ್ದರೆ, ಅವರು ‘ಸ್ವರ್ಗದಲ್ಲಿ ಶೇಖರಿಸಿರುವ ನಿಧಿ’ ಕೊಂಚವಾಗಿದೆ. (ಮತ್ತಾಯ 6:19-21) ಅವರು ತಮ್ಮ ಕಣ್ಣುಗಳನ್ನು ಸರಳವಾಗಿ ಇಟ್ಟುಕೊಂಡು, ದೇವರ ರಾಜ್ಯಕ್ಕೆ ಅವರ ಜೀವಿತದಲ್ಲಿ ಪ್ರಥಮ ಸ್ಥಾನವನ್ನು ಕೊಟ್ಟಿರಲಿಲ್ಲ. ಅವರು ನಿಜವಾಗಿಯೂ ಅಂಧಕಾರದಲ್ಲಿದ್ದು, ಯಾವುದೇ ಆತ್ಮಿಕ ದೃಷ್ಟಿ ಇಲ್ಲದೆ, ಕುರುಡರಾಗಿರುತ್ತಾರೆ. (ಮತ್ತಾಯ 6:22, 23, 33) ಇನ್ನೂ ಹೆಚ್ಚಾಗಿ, ಅವರ ಪ್ರಾಪಂಚಿಕ ಐಶ್ವರ್ಯವು ಅವರಿಗೆ ಉತ್ತಮ ಮಟ್ಟದ ಉಡುಪುಗಳನ್ನು ಖರೀದಿಸುವಂತೆ ಮಾಡಿದ್ದರೂ ಕೂಡ, ಯೇಸುವಿನ ದೃಷ್ಟಿಯಲ್ಲಿ ಅವರು ಬತ್ತಲೆಯಾಗಿದ್ದಾರೆ. ಕ್ರೈಸ್ತರೋಪಾದಿ ಅವರನ್ನು ಗುರುತಿಸುವ ಆತ್ಮಿಕ ಉಡುಪು ಅವರಲ್ಲಿ ಇಲ್ಲ.—ಪ್ರಕಟನೆ 16:15 ಹೋಲಿಸಿರಿ.

8. (ಎ) ಲವೊದಿಕೀಯದಲ್ಲಿದ್ದಂತಹ ಸನ್ನಿವೇಶವು ಇಂದು ಕೂಡ ಯಾವ ರೀತಿಯಲ್ಲಿ ಅಸ್ತಿತ್ವದಲ್ಲಿದೆ? (ಬಿ) ಈ ಲೋಭದ ಲೋಕದಲ್ಲಿ ಕೆಲವು ಕ್ರೈಸ್ತರು ತಮ್ಮನ್ನು ವಂಚಿಸಿಕೊಂಡಿರುವುದು ಹೇಗೆ?

8 ಎಂತಹ ತಲ್ಲಣಗೊಳಿಸುವ ಒಂದು ಸ್ಥಿತಿ! ಆದರೆ ನಮ್ಮೀ ದಿನಗಳಲ್ಲೂ ಆಗಿಂದಾಗ್ಗೆ ತದ್ರೀತಿಯ ಸನ್ನಿವೇಶವನ್ನು ನಾವು ಕಾಣುತ್ತಿಲ್ಲವೇ? ಇದಕ್ಕೆ ಮೂಲಕಾರಣ ಯಾವುದು? ಪ್ರಾಪಂಚಿಕ ಸ್ವತ್ತುಗಳ ಮತ್ತು ಮಾನವ ಸಂಪನ್ಮೂಲಗಳ ಮೇಲೆ ಅವಲಂಬನೆಯಿಂದ ಉದ್ಭವಿಸುವ ದಿಟ್ಟತನದ ಮನೋಭಾವವು ಅದಾಗಿರುತ್ತದೆ. ಕ್ರೈಸ್ತಪ್ರಪಂಚದ ಚರ್ಚುಹೋಕರಂತೆ, ಸಂದರ್ಭಾನುಸಾರವಾಗಿ ಕೇವಲ ಕೂಟಗಳಿಗೆ ಹಾಜರಾಗುವುದರಿಂದ ಅವರು ದೇವರನ್ನು ಮೆಚ್ಚಿಸ ಶಕ್ತರು ಎಂದು ಯೋಚಿಸುತ್ತಾ, ಯೆಹೋವನ ಜನರಲ್ಲಿ ಕೆಲವರು ಸ್ವತಃ ತಮ್ಮನ್ನು ವಂಚಿಸಿಕೊಂಡಿರುತ್ತಾರೆ. ಕೇವಲ ನೆಪಮಾತ್ರಕ್ಕೆ “ವಾಕ್ಯದ ಪ್ರಕಾರ ನಡೆಯುವವರಾಗಿ” ಮುಂದೆ ಸರಿಯಲು ಅವರು ಪ್ರಯತ್ನಿಸುತ್ತಾರೆ. (ಯಾಕೋಬ 1:22) ಯೋಹಾನ ವರ್ಗದವರಿಂದ ಪುನಃ ಪುನಃ ಎಚ್ಚರಿಕೆಗಳು ನೀಡಲ್ಪಟ್ಟಾಗ್ಯೂ, ನವ್ಯಶೈಲಿಯ ಉಡುಪುಗಳು, ಕಾರುಗಳು, ಮನೆಗಳು, ಮತ್ತು ಮನೋರಂಜನೆಯ ಹಾಗೂ ಸುಖಭೋಗದ ಸುತ್ತಲೂ ಕೇಂದ್ರಿತವಾದ ಜೀವನದ ಮೇಲೆ ಅವರು ತಮ್ಮ ಹೃದಯಗಳನ್ನು ನೆಟ್ಟಿರುತ್ತಾರೆ. (1 ತಿಮೊಥೆಯ 6:9, 10; 1 ಯೋಹಾನ 2:15-17) ಇವೆಲ್ಲವು ಆತ್ಮಿಕ ಗ್ರಹಣ ಶಕ್ತಿಯ ಮಂದಗೊಳಿಸುವಿಕೆಯನ್ನು ಫಲಿಸುತ್ತದೆ. (ಇಬ್ರಿಯ 5:11, 12) ನಿರಾಸಕ್ತಿಯ ಉಗುರುಬೆಚ್ಚಗಿರುವ ಬದಲು, ಅವರು ತಮ್ಮ “ಆತ್ಮದ ಬೆಂಕಿಯನ್ನು” ಪುನಃ ಹೊತ್ತಿಸಬೇಕಾದ ಜರೂರಿಯಿದೆ ಮತ್ತು “ವಾಕ್ಯವನ್ನು ಸಾರುವುದರಲ್ಲಿ” ನವಚೈತನ್ಯದ ಉತ್ಸಾಹವನ್ನು ತೋರಿಸಬೇಕಾಗಿದೆ.—1 ಥೆಸಲೊನೀಕ 5:19; 2 ತಿಮೊಥೆಯ 4:2, 5.

9. (ಎ) ಉಗುರುಬೆಚ್ಚಗಿನ ಕ್ರೈಸ್ತರನ್ನು ಯೇಸುವಿನ ಯಾವ ಮಾತುಗಳು ಕುಲುಕಾಡಿಸಬೇಕು, ಮತ್ತು ಯಾಕೆ? (ಬಿ) ಅಲೆದಾಡುವ “ಕುರಿಗಳಿಗೆ” ಸಭೆಯಿಂದ ಹೇಗೆ ಸಹಾಯ ಕೊಡಲ್ಪಡಬಹುದು?

9 ಉಗುರುಬೆಚ್ಚಗಿನ ಕ್ರೈಸ್ತರನ್ನು ಯೇಸುವು ಹೇಗೆ ಪರಿಗಣಿಸುತ್ತಾನೆ? ಅವನ ಬಿಚ್ಚುಮನದ ಮಾತುಗಳು ಅವರನ್ನು ಕುಲುಕಾಡಿಸಬೇಕು: “ನೀನು ದುರವಸ್ಥೆಯವನು ಮತ್ತು ಶೋಚನೀಯನು ಮತ್ತು ದರಿದ್ರನು ಮತ್ತು ಕುರುಡನು ಮತ್ತು ನಗ್ನನು ಎಂದು ನೀನು ತಿಳಿಯದೆ ಇದ್ದೀ.” ಅವರ ಮನಸ್ಸಾಕ್ಷಿಗಳು ಅವರ ದಿಗಿಲುಗೊಳಿಸುವ ಸ್ಥಿತಿಯನ್ನು ತಿಳಿದುಕೊಳ್ಳದಷ್ಟು ಜಡವಾಗಿವೆ. (ಜ್ಞಾನೋಕ್ತಿ 16:2 ಹೋಲಿಸಿರಿ; 21:2) ಸಭೆಯಲ್ಲಿನ ಈ ಗಂಭೀರವಾದ ಸ್ಥಿತಿಯನ್ನು ಹಗುರವಾಗಿ ಬದಿಗೊತ್ತಲು ಸಾಧ್ಯವಿಲ್ಲ. ಹುರುಪಿನ ಒಂದು ಉತ್ತಮ ಮಾದರಿಯನ್ನಿಡುತ್ತಾ ಮತ್ತು ಪ್ರೀತಿಯಿಂದ ಕುರಿಪಾಲನೆಯನ್ನು ಮಾಡುತ್ತಾ, ಪೂರ್ಣ ಹೃದಯದ ಸೇವೆಯ ಅವರ ಹಿಂದಿನ ಸಂತೋಷಕ್ಕೆ ಈ ಅಲೆದಾಡುವ “ಕುರಿಗಳನ್ನು” ಪುನಃ ಎಚ್ಚರಿಸಲು ಹಿರಿಯರಿಗೆ ಮತ್ತು ಅವರಿಂದ ನೇಮಿತರಾದ ಇತರರಿಗೆ ಸಾಧ್ಯವಾಗಬಹುದು.—ಲೂಕ 15:3-7.

‘ಐಶ್ವರ್ಯವಂತನಾಗುವುದರ’ ಮೇಲೆ ಬುದ್ಧಿವಾದ

10. ಲವೊದಿಕೀಯದ ಕ್ರೈಸ್ತರು ತನ್ನಿಂದ ಕೊಂಡುಕೊಳ್ಳುವಂತೆ ಯೇಸುವು ಹೇಳುವ “ಚಿನ್ನವು” ಯಾವುದು?

10 ಲವೊದಿಕೀಯದ ದುಃಖಕರ ಸನ್ನಿವೇಶಕ್ಕೆ ಒಂದು ಚಿಕಿತ್ಸೆ ಇದೆಯೋ? ಹೌದು, ಒಂದು ವೇಳೆ ಆ ಕ್ರೈಸ್ತರು ಯೇಸುವಿನ ಬುದ್ಧಿವಾದವನ್ನು ಅನುಸರಿಸುವುದಾದರೆ: “ನೀನು ಐಶ್ವರ್ಯವಂತನಾಗುವಂತೆ ಬೆಂಕಿಯಿಂದ ಶೋಧಿಸಿದ ಚಿನ್ನವನ್ನು ನನ್ನಿಂದ ಕೊಂಡುಕೊಳ್ಳುವಂತೆ ನಾನು ನಿನಗೆ ಬುದ್ಧಿಹೇಳುತ್ತೇನೆ.” (ಪ್ರಕಟನೆ 3:18ಎ, NW)  ಬೆಂಕಿಯಿಂದ ಶೋಧಿಸಿದ ಮತ್ತು ಎಲ್ಲಾ ಕಶ್ಮಲವನ್ನು ತೆಗೆದು ಹಾಕಿದ ನಿಜ ಕ್ರೈಸ್ತ “ಚಿನ್ನವು” ಅವರನ್ನು “ದೇವರ ಕಡೆಗೆ ಐಶ್ವರ್ಯವಂತ” ರನ್ನಾಗಿ ಮಾಡುತ್ತದೆ. (ಲೂಕ 12:21, NW) ಅಂತಹ ಬಂಗಾರವನ್ನು ಅವರು ಎಲ್ಲಿಂದ ಕೊಂಡುಕೊಳ್ಳಬಹುದು? ಸ್ಥಳೀಯ ಬ್ಯಾಂಕುಗಳಿಂದ ಅಲ್ಲ, ಬದಲು ಯೇಸುವಿನಿಂದ! ಐಶ್ವರ್ಯವಂತ ಕ್ರೈಸ್ತರು “ಒಳ್ಳೇದನ್ನು ಮಾಡುವವರೂ, ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ, ದಾನಧರ್ಮ ಮಾಡುವವರೂ, ಪರೋಪಕಾರಮಾಡುವವರೂ ಆಗಿದ್ದು, ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂದು” ಆಜ್ಞಾಪಿಸಲು ತಿಮೊಥೆಯನಿಗೆ ಹೇಳಿದಾಗ, ಆ ಚಿನ್ನವು ಯಾವುದು ಎಂದು ಅಪೊಸ್ತಲ ಪೌಲನು ಅದನ್ನು ವಿವರಿಸಿದನು. ಈ ರೀತಿಯಲ್ಲಿ ತಮ್ಮನ್ನು ವ್ಯಯಿಸಿಕೊಳ್ಳುವುದರ ಮೂಲಕ ಮಾತ್ರವೇ ಅವರಿಗೆ ‘ವಾಸ್ತವವಾದ ಜೀವದ ಮೇಲೆ ದೃಢವಾದ ಹಿಡಿತವಿರಲು’ ಸಾಧ್ಯವಾಗುತ್ತದೆ. (1 ತಿಮೊಥೆಯ 6:17-19) ಪ್ರಾಪಂಚಿಕವಾಗಿ ಐಶ್ವರ್ಯವಂತ ಲವೊದಿಕೀಯದವರು ಪೌಲನ ಸಲಹೆಯನ್ನು ಹಿಂಬಾಲಿಸಬೇಕಿತ್ತು ಮತ್ತು ಹೀಗೆ ಆತ್ಮಿಕವಾಗಿ ಐಶ್ವರ್ಯವಂತರಾಗಬೇಕಿತ್ತು.—ಜ್ಞಾನೋಕ್ತಿ 3:13-18ನ್ನು ಕೂಡ ನೋಡಿರಿ.

11. “ಬೆಂಕಿಯಿಂದ ಶೋಧಿಸಿದ ಚಿನ್ನವನ್ನು” ಕೊಂಡುಕೊಳ್ಳುವವರ ಆಧುನಿಕ ದಿನದ ಯಾವ ಮಾದರಿಗಳು ನಮಗೆ ಇವೆ?

11 “ಬೆಂಕಿಯಿಂದ ಶೋಧಿಸಿದ ಚಿನ್ನವನ್ನು” ಕೊಂಡುಕೊಳ್ಳುವ ಆಧುನಿಕ ದಿನದ ಉದಾಹರಣೆಗಳು ಇವೆಯೋ? ಹೌದು, ಇವೆ! ಕರ್ತನ ದಿನವು ಇನ್ನೂ ಆಗಮಿಸಲು ಇದ್ದಾಗಲೇ, ತ್ರಯೈಕ್ಯ, ಆತ್ಮದ ಅಮರತ್ವ, ನರಕಾಗ್ನಿಯ ಯಾತನೆ, ಹಸುಗೂಸುಗಳ ದೀಕ್ಷಾಸ್ನಾನ, ಮತ್ತು ವಿಗ್ರಹಗಳ ಆರಾಧನೆ (ಕ್ರೂಜೆ ಮತ್ತು ಮರಿಯಳಂಥವರ ಸಹಿತ) ಕ್ರೈಸ್ತಪ್ರಪಂಚದ ಇಂಥ ಬಾಬೆಲಿನ ಅನೇಕ ಬೋಧನೆಗಳ ಸುಳ್ಳುಗಳಿಗೆ, ವೇದ ವಿದ್ಯಾರ್ಥಿಗಳ ಒಂದು ಚಿಕ್ಕ ಗುಂಪು ಎಚ್ಚರಗೊಳ್ಳುತ್ತಾ ಇತ್ತು. ಬೈಬಲಿನ ಸತ್ಯವನ್ನು ಸಮರ್ಥಿಸುವುದರಲ್ಲಿ, ಈ ಕ್ರೈಸ್ತರು ಮಾನವಕುಲದ ಏಕಮಾತ್ರ ನಿರೀಕ್ಷೆಯಾಗಿ ಯೆಹೋವನ ರಾಜ್ಯವನ್ನು ಮತ್ತು ರಕ್ಷಣೆಗಾಗಿ ಯೇಸುವಿನ ವಿಮೋಚನಾ ಯಜ್ಞವು ಆಧಾರ ಎಂದು ಘೋಷಿಸಿದರು. ಸುಮಾರು 40 ವರ್ಷಗಳಿಗೆ ಮೊದಲೇ ಅವರು 1914ಕ್ಕೆ, ಅದು ಭೂಮಿಯ ಮೇಲೆ ಗಾಬರಿ ಹುಟ್ಟಿಸುವ ಬೆಳವಣಿಗೆಗಳ ಸಂಗಡ ಬರುವ, ಅನ್ಯ ಜನಾಂಗಗಳ ಕಾಲವು ಕೊನೆಗೊಳ್ಳುವ ಬೈಬಲ್‌ ಪ್ರವಾದನೆಯಲ್ಲಿ ಗುರುತಿಸಲ್ಪಟ್ಟ ವರ್ಷವೆಂದು ನಿರ್ದೇಶಿಸಿದರು.—ಪ್ರಕಟನೆ 1:10; ಲೂಕ 21:24-26, ಕಿಂಗ್‌ ಜೇಮ್ಸ್‌ ವರ್ಷನ್‌.

12. ಕ್ರೈಸ್ತರನ್ನು ಎಚ್ಚರಗೊಳಿಸುವುದರಲ್ಲಿ ಮುಂದಾಳುತನ ವಹಿಸಿದವರಲ್ಲಿ ಒಬ್ಬರು ಯಾರು, ಮತ್ತು ಪರಲೋಕದಲ್ಲಿ ನಿಧಿಯನ್ನು ಶೇಖರಿಸಿಡುವುದರಲ್ಲಿ ಯಾವ ಗಮನಾರ್ಹ ಮಾದರಿಯನ್ನು ಅವರು ನಮಗೆ ಇಟ್ಟಿರುತ್ತಾರೆ?

12 ಈ ಜಾಗ್ರತಗೊಳ್ಳುತ್ತಿದ್ದ ಕ್ರೈಸ್ತರ ನಡುವೆ ಚಾರ್ಲ್ಸ್‌ ಟೇಜ್‌ ರಸಲ್‌ ಮುಂದಾಳುತನವನ್ನು ವಹಿಸಿ, 1870ರ ದಶಕದ ಆರಂಭದಲ್ಲಿ, ಅಮೆರಿಕದ ಪೆನ್ಸಿಲೇನ್ವಿಯಾದ ಆ್ಯಲಗೆನಿಯಲ್ಲಿ (ಈಗ ಪಿಟ್ಸ್‌ಬರ್ಗ್‌ನ ಭಾಗ) ಒಂದು ಬೈಬಲ್‌ ಅಧ್ಯಯನ ತರಗತಿಯನ್ನು ಸಂಘಟಿಸಿದರು. ಸತ್ಯಕ್ಕಾಗಿ ಅವರು ತಮ್ಮ ಅನ್ವೇಷಣೆಯನ್ನು ಆರಂಭಿಸಿದಾಗ, ರಸಲ್‌ ಅವರ ತಂದೆಯೊಂದಿಗೆ ಪಾಲುಗಾರಿಕೆಯಲ್ಲಿದ್ದರು ಮತ್ತು ಒಬ್ಬ ಲಕ್ಷಾಧಿಪತಿಯಾಗುವ ಪಥದಲ್ಲಿ ಇವರಿದ್ದರು. ಆದರೆ ಅವರು ತಮ್ಮ ಸರಪಣಿ ಮಳಿಗೆ (ಚೇನ್‌-ಸ್ಟೋರ್‌) ವ್ಯಾಪಾರ ಆಸಕ್ತಿಗಳನ್ನು ಮಾರಿದರು ಮತ್ತು ಅವರ ಐಶ್ವರ್ಯವನ್ನು ಭೂಮಿಯ ಮೇಲೆಲ್ಲಾ ದೇವರ ರಾಜ್ಯದ ಸಾರುವಿಕೆಗೆ ಹಣ ಸಹಾಯ ಮಾಡಲು ವ್ಯಯಿಸಿದರು. ಇಸವಿ 1884 ರಲ್ಲಿ ರಸಲ್‌ರು ಈಗ ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲೇನ್ವಿಯವೆಂದು ಪ್ರಖ್ಯಾತವಾಗಿರುವ ಕಾರ್ಪೊರೇಷನಿನ ಪ್ರಥಮ ಅಧ್ಯಕ್ಷರಾದರು. ಪಶ್ಚಿಮ ಅಮೆರಿಕದ ಅವರ ಕೊನೆಯ ಸಾರುವ ಸಂಚಾರದಿಂದ ಬಳಲಿ, 1916 ರಲ್ಲಿ ನ್ಯೂ ಯಾರ್ಕ್‌ಗೆ ಹಿಂದೆರಳುವ ಪ್ರಯಾಣದಲ್ಲಿ ಟೆಕ್ಸಸ್‌ನ ಪ್ಯಾಂಪದ ಹತ್ತಿರ ಟ್ರೈನಿನಲ್ಲಿ ಅವರು ಮೃತಿಹೊಂದಿದರು. ಪರಲೋಕದಲ್ಲಿ ನಿಧಿಯನ್ನು ಶೇಖರಿಸಿಡುವ ವಿಷಯದಲ್ಲಿ ಅವರು ಒಂದು ಗಮನಾರ್ಹ ಮಾದರಿಯನ್ನಿಟ್ಟರು, ಈ ಮಾದರಿಯನ್ನು ಈ 1900ರ ಶತಕದ ಕೊನೆಯಲ್ಲಿಯೂ ನೂರಾರು ಸಾವಿರ ಸ್ವ-ತ್ಯಾಗದ ಪಯನೀಯರ್‌ ಶುಶ್ರೂಷಕರು ಅನುಕರಿಸುತ್ತಿದ್ದಾರೆ.—ಇಬ್ರಿಯ 13:7; ಲೂಕ 12:33, 34; 1 ಕೊರಿಂಥ 9:16 ಹೋಲಿಸಿರಿ; 11:1.

ಆತ್ಮಿಕ ಕಣ್ಣಂಜನವನ್ನು ಹಚ್ಚುವುದು

13. (ಎ) ಲವೊದಿಕೀಯದವರ ಸ್ಥಿತಿಯನ್ನು ಆತ್ಮಿಕ ಕಣ್ಣಂಜನವು ಹೇಗೆ ಸರಿಗೊಳಿಸುವುದು? (ಬಿ) ಯಾವ ರೀತಿಯ ವಸ್ತ್ರಗಳನ್ನು ಯೇಸುವು ಶಿಫಾರಸು ಮಾಡುತ್ತಾನೆ, ಮತ್ತು ಯಾಕೆ?

13 ಲವೊದಿಕೀಯದವರನ್ನು ಯೇಸುವು ಕಠಿನವಾಗಿ ಗದರಿಸುತ್ತಾನೆ ಕೂಡ: “ನೀನು ಉಡುಪುಟ್ಟವನಾಗಲಿಕ್ಕೂ ಮತ್ತು ನಿನ್ನ ನಗ್ನತೆಯ ನಾಚಿಕೆಯ ಪ್ರಸಿದ್ಧವಾಗದಿರಲಿಕ್ಕಾಗಿಯೂ ಬಿಳಿ ಹೊರ ಹೊದಿಕೆಗಳನ್ನು ಮತ್ತು ನೀನು ನೋಡಲಿಕ್ಕಾಗುವಂತೆ ನಿನ್ನ ಕಣ್ಣುಗಳಿಗೆ ಉಜ್ಜಲಿಕ್ಕಾಗಿ ಕಣ್ಣಂಜನವನ್ನು . . . ಕೊಳ್ಳು.” (ಪ್ರಕಟನೆ 3:18ಬಿ, NW) ಅವರು ತಮ್ಮ ಆತ್ಮಿಕ ಕುರುಡುತನಕ್ಕೆ ಗುಣಮಾಡುವ ಕಣ್ಣಂಜನವನ್ನು ಸ್ಥಳಿಕ ವೈದ್ಯರಿಂದಲ್ಲ, ಯೇಸು ಮಾತ್ರ ಒದಗಿಸಬಲ್ಲ ರೀತಿಯದ್ದನ್ನು ಖರೀದಿಸಿ ರೋಗಪರಿಹಾರವನ್ನು ಅನ್ವೇಷಿಸಬೇಕು. ಇದು ಅವರನ್ನು ಆತ್ಮಿಕ ವಿವೇಚನೆಯನ್ನು ಪಡೆಯಲು ಸಹಾಯ ಮಾಡುತ್ತದೆ, ದೇವರ ಚಿತ್ತವನ್ನು ಮಾಡುವುದರ ಮೇಲೆ ಅವರ ಬೆಳಗುವ ಕಣ್ಣುಗಳನ್ನು ಕೇಂದ್ರೀಕರಿಸುವುದರೊಂದಿಗೆ “ನೀತಿವಂತರ ಮಾರ್ಗದಲ್ಲಿ” ನಡೆಯಲು ಅವರಿಗೆ ನೆರವಾಗುತ್ತದೆ. (ಜ್ಞಾನೋಕ್ತಿ 4:18, 25-27) ಈ ರೀತಿಯಲ್ಲಿ, ಅವರು ಲವೊದಿಕೀಯದಲ್ಲಿ ಸ್ಥಳಿಕವಾಗಿ ಮಾಡಿದ ಕಪ್ಪು ಉಣ್ಣೆಯ ಬೆಲೆಬಾಳುವ ಉಡುಪುಗಳ ಬದಲು, ಯೇಸು ಕ್ರಿಸ್ತನ ಹಿಂಬಾಲಕರೋಪಾದಿ ಅವರ ಸುಯೋಗಿತ ಗುರುತನ್ನು ಘೋಷಿಸುವ ಉತ್ತಮ “ಬಿಳಿ ಹೊರ ಹೊದಿಕೆಗಳನ್ನು” ಅವರು ಧರಿಸಿಕೊಳ್ಳಬಹುದು.—1 ತಿಮೊಥೆಯ 2:9, 10 ಹೋಲಿಸಿರಿ; 1 ಪೇತ್ರ 3:3-5.

14. (ಎ) ಯಾವ ಆತ್ಮಿಕ ಕಣ್ಣಂಜನವು 1879 ರಿಂದ ದೊರಕುತ್ತಿದೆ? (ಬಿ) ಯೆಹೋವನ ಸಾಕ್ಷಿಗಳ ಆರ್ಥಿಕ ಬೆಂಬಲದ ಕಟ್ಟಕಡೆಯ ಮೂಲವು ಯಾವುದಾಗಿರುತ್ತದೆ? (ಸಿ) ಕಾಣಿಕೆಗಳ ಉಪಯೋಗದಲ್ಲಿ, ಯೆಹೋವನ ಸಾಕ್ಷಿಗಳು ಇತರರಿಗಿಂತ ಹೇಗೆ ಭಿನ್ನರಾಗಿದ್ದಾರೆ?

14 ಆಧುನಿಕ ದಿನಗಳಲ್ಲಿ ಆತ್ಮಿಕ ಕಣ್ಣಂಜನ ದೊರಕುತ್ತದೋ? ನಿಸ್ಸಂದಿಗ್ಧವಾಗಿಯೂ ಅದು ದೊರಕುತ್ತದೆ! 1879 ರಲ್ಲಿ ಪಾಸ್ಟರ್‌ ರಸಲ್‌—ವಾತ್ಸಲ್ಯದಿಂದ ಅವರು ಹಾಗೆ ಕರೆಯಲ್ಪಡುತ್ತಿದ್ದರು—ಸತ್ಯದ ಸಮರ್ಥನೆಯಲ್ಲಿ ಒಂದು ಪತ್ರಿಕೆಯನ್ನು ಪ್ರಕಾಶಿಸಲು ಆರಂಭಿಸಿದರು, ಇಂದು ಅದು ಲೋಕವ್ಯಾಪಕವಾಗಿ ದ ವಾಚ್‌ಟವರ್‌ ಅನೌನ್ಸಿಂಗ್‌ ಜೆಹೋವಾಸ್‌ ಕಿಂಗ್‌ಡಮ್‌ (ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವದು) ಎಂದು ಪ್ರಖ್ಯಾತವಾಗಿದೆ. ಅದರ ಎರಡನೆಯ ಸಂಚಿಕೆಯಲ್ಲಿ, ಅವರು ಘೋಷಿಸಿದ್ದು: “[ಈ ಪತ್ರಿಕೆಗೆ] ಯೆಹೋವನು ಬೆಂಬಲಿಗನಾಗಿದ್ದಾನೆ ಎಂದು ನಾವು ನಂಬುತ್ತೇವೆ ಮತ್ತು ವಿಷಯವು ಹೀಗಿರುವಾಗ, ಅದರ ಬೆಂಬಲಕ್ಕಾಗಿ ನಾವು ಎಂದಿಗೂ ಜನರೊಡನೆ ಬೇಡುವುದಿಲ್ಲ ಯಾ ವಿನಂತಿಸುವುದಿಲ್ಲ. ‘ಬಂಗಾರದ ಮತ್ತು ಬೆಳ್ಳಿಯ ಪರ್ವತಗಳೆಲ್ಲಾ ನನ್ನವು’ ಎಂದು ಯಾರು ಹೇಳುತ್ತಾನೋ ಆತನು ಆವಶ್ಯಕವಾದ ನಿಧಿಯನ್ನು ಒದಗಿಸಲು ತಪ್ಪುವುದಾದರೆ, ನಮ್ಮ ಪ್ರಕಾಶನವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಅದು ಸಮಯವೆಂದು ನಾವು ತಿಳಿದುಕೊಳ್ಳುವೆವು.” 20 ನೆಯ ಶತಕದ ಕೆಲವು ಟೆಲಿವಿಷನ್‌ ಸುವಾರ್ತಿಕರು ಹೇರಳವಾದ ದ್ರವ್ಯರಾಶಿಯನ್ನು ಒಟ್ಟು ಸೇರಿಸಿದ್ದಾರೆ ಮತ್ತು ಲಜ್ಜಾಹೀನ (ಮತ್ತು ಕೆಲವೊಮ್ಮೆ ಅನೈತಿಕ) ಸುಖವಿಲಾಸಗಳಲ್ಲಿ ಜೀವಿಸಿದ್ದಾರೆ. (ಪ್ರಕಟನೆ 18:3 ಹೋಲಿಸಿರಿ.) ಇದಕ್ಕೆ ವ್ಯತಿರಿಕ್ತವಾಗಿ, ಈಗ ಯೆಹೋವನ ಸಾಕ್ಷಿಗಳು ಎಂದು ಪ್ರಖ್ಯಾತರಾಗಿರುವ ಬೈಬಲ್‌ ವಿದ್ಯಾರ್ಥಿಗಳು ಯೆಹೋವನ ಬರಲಿರುವ ರಾಜ್ಯದ ಲೋಕವ್ಯಾಪಕ ಸಾರುವಿಕೆಯನ್ನು ಸಂಸ್ಥಾಪಿಸಲು ಮತ್ತು ಪ್ರವರ್ಧಿಸಲು, ವಿನಂತಿಸದೇ ಇರುವ ಎಲ್ಲಾ ಕಾಣಿಕೆಗಳನ್ನು ಉಪಯೋಗಿಸಿರುತ್ತಾರೆ. ಈ ದಿನದ ತನಕ ಯೋಹಾನ ವರ್ಗವು ಕಾವಲಿನಬುರುಜು ಮತ್ತು ಎಚ್ಚರ! ಪ್ರಕಾಶಿಸುವಿಕೆಯನ್ನು ನಿರ್ದೇಶಿಸುತ್ತದೆ, 1993 ರಲ್ಲಿ ಈ ಪತ್ರಿಕೆಗಳ ಸಂಯುಕ್ತ ವಿತರಣೆಯು 2 ಕೋಟಿ 90 ಲಕ್ಷಗಳಿಗಿಂತಲೂ ಅಧಿಕವಾಗಿತ್ತು. ಕಾವಲಿನಬುರುಜು ಇಂದು 115 ಕ್ಕಿಂತಲೂ ಅಧಿಕ ಭಾಷೆಗಳಲ್ಲಿ ದೊರಕುತ್ತದೆ. ನಲವತ್ತು ಲಕ್ಷಕ್ಕಿಂತಲೂ ಹೆಚ್ಚು ಕ್ರೈಸ್ತರಿರುವ ಸಭೆಯ ಒಂದು ಅಧಿಕೃತ ಪತ್ರಿಕೆ ಅದಾಗಿದೆ. ಇವರು ಇಂತಹ ಆತ್ಮಿಕ ಕಣ್ಣಂಜನವನ್ನು ಸುಳ್ಳು ಧರ್ಮದ ಕಡೆಗೆ ಮತ್ತು ಎಲ್ಲಾ ಜನಾಂಗಗಳಿಗೆ ಸುವಾರ್ತೆಯನ್ನು ಸಾರುವ ಜರೂರಿಯ ಕಡೆಗೆ ತಮ್ಮ ಕಣ್ಣುಗಳನ್ನು ತೆರೆಯುವುದರಲ್ಲಿ ಉಪಯೋಗಿಸಿರುತ್ತಾರೆ.—ಮಾರ್ಕ 13:10.

ಗದರಿಕೆ ಮತ್ತು ತಿದ್ದುಪಾಟಿನಿಂದ ಪ್ರಯೋಜನ ಪಡೆಯುವುದು

15. ಲವೊದಿಕೀಯದಲ್ಲಿನ ಕ್ರೈಸ್ತರಿಗೆ ಯೇಸುವು ಕಠಿನವಾದ ಬುದ್ಧಿವಾದವನ್ನು ಕೊಟ್ಟದ್ದು ಯಾಕೆ, ಮತ್ತು ಸಭೆಯು ಅದಕ್ಕೆ ಹೇಗೆ ಪ್ರತಿಕ್ರಿಯೆ ತೋರಿಸಬೇಕಿತ್ತು?

15 ಲವೊದಿಕೀಯದವರ ಕಡೆಗೆ ನಾವು ಹಿಂದೆರಳೋಣ. ಯೇಸುವಿನಿಂದ ಕೊಡಲ್ಪಟ್ಟ ಕಠಿನವಾದ ಬುದ್ಧಿವಾದಕ್ಕೆ ಅವರು ಹೇಗೆ ಪ್ರತಿವರ್ತಿಸುವರು? ಅವರು ಎದೆಗುಂದಿದವರಾಗಿ, ಯೇಸುವು ತಮ್ಮನ್ನು ತನ್ನ ಹಿಂಬಾಲಕರಾಗಿ ಬಯಸುವುದಿಲ್ಲವೆಂದು ಭಾವಿಸತಕ್ಕದ್ದೋ? ಇಲ್ಲ, ವಿಷಯವು ಎಂದಿಗೂ ಹಾಗಿರುವುದಿಲ್ಲ. ಸಂದೇಶವು ಹೇಳುತ್ತಾ ಮುಂದರಿಯುವುದು: “ನನಗೆ ವಾತ್ಸಲ್ಯವಿರುವವರನ್ನೆಲ್ಲ ನಾನು ಗದರಿಸುತ್ತೇನೆ ಮತ್ತು ಶಿಸ್ತಿಗೊಳಪಡಿಸುತ್ತೇನೆ. ಆದಕಾರಣ ಹುರುಪುಳ್ಳವನಾಗಿರು ಮತ್ತು ಪಶ್ಚಾತ್ತಾಪ ಪಡು.” (ಪ್ರಕಟನೆ 3:19, NW) ಯೆಹೋವನಿಂದ ಬರುವ ಶಿಸ್ತು, ಯೇಸುವಿನ ಶಿಸ್ತು ಪ್ರೀತಿಯ ಒಂದು ಸಂಕೇತವಾಗಿದೆ. (ಇಬ್ರಿಯ 12:4-7) ಲವೊದಿಕೀಯ ಸಭೆಯು ಅವನ ವಾತ್ಸಲ್ಯಭರಿತ ಗಮನದ ಸದುಪಯೋಗವನ್ನು ಮಾಡತಕ್ಕದ್ದು ಮತ್ತು ಅವನ ಬುದ್ಧಿವಾದವನ್ನು ಅನ್ವಯಿಸತಕ್ಕದ್ದು. ಅವರ ಉಗುರುಬೆಚ್ಚಗೆತನವು ಪಾಪಮಾಡುವಿಕೆಗೆ ಸಮಾನವಾಗಿದೆ ಎಂದು ತಿಳಿದುಕೊಂಡು, ಅವರು ಪಶ್ಚಾತ್ತಾಪ ಪಡಬೇಕು. (ಇಬ್ರಿಯ 3:12, 13; ಯಾಕೋಬ 4:17) ಅವರ ಹಿರಿಯರು ಪ್ರಾಪಂಚಿಕ ಮಾರ್ಗಗಳನ್ನು ಅವರ ಹಿಂದೆ ಬಿಡಲಿ ಮತ್ತು ದೇವರಿಂದ ಅವರಿಗಿರುವ ವರದಾನವನ್ನು “ಬೆಂಕಿಯಂತೆ ಪ್ರಜ್ವಲಿಸಲಿ.” ಆತ್ಮಿಕ ಕಣ್ಣಂಜನವು ಪರಿಣಾಮಗೈಯುತ್ತಿರುವಾಗ, ತಂಪಾದ ಬುಗ್ಗೆಯ ಶೀತಲ ಗುಟುಕಿನಂತೆ ಸಭೆಯಲ್ಲಿರುವ ಎಲ್ಲರೂ ನವಚೈತನ್ಯವನ್ನು ಕಂಡುಕೊಳ್ಳಲಿ.—2 ತಿಮೊಥೆಯ 1:6; ಜ್ಞಾನೋಕ್ತಿ 3:5-8; ಲೂಕ 21:34.

16. (ಎ) ಇಂದು ಯೇಸುವಿನ ಪ್ರೀತಿ ಮತ್ತು ವಾತ್ಸಲ್ಯ ಹೇಗೆ ಪ್ರದರ್ಶಿಸಲ್ಪಟ್ಟಿವೆ? (ಬಿ) ನಾವು ಬಲವಾದ ಬುದ್ಧಿವಾದವನ್ನು ಪಡೆಯುವುದಾದರೆ, ನಾವು ಹೇಗೆ ಪ್ರತಿಕ್ರಿಯಿಸತಕ್ಕದ್ದು?

16 ಇಂದಿನ ನಮ್ಮ ಕುರಿತಾಗಿ ಏನು? ಯೇಸುವು ‘ಲೋಕದಲ್ಲಿರುವ ತನ್ನವರನ್ನು ಪ್ರೀತಿಸುವುದನ್ನು’ ಮುಂದರಿಸುತ್ತಾನೆ. ಇದನ್ನು ಅವನು “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲಾ ದಿವಸ” ಮಾಡಲಿರುವನು. (ಯೋಹಾನ 13:1; ಮತ್ತಾಯ 28:20, NW) ಅವನ ಪ್ರೀತಿ ಮತ್ತು ವಾತ್ಸಲ್ಯವು ಆಧುನಿಕ ದಿನದ ಯೋಹಾನ ವರ್ಗದವರ ಮೂಲಕ ಮತ್ತು ನಕ್ಷತ್ರಗಳು ಯಾ ಸಭೆಯಲ್ಲಿರುವ ಹಿರಿಯರುಗಳ ಮೂಲಕ ಪ್ರದರ್ಶಿಸಲ್ಪಡುತ್ತಿದೆ. (ಪ್ರಕಟನೆ 1:20) ಇಂದಿನ ಈ ಕಷ್ಟಕರ ಸಮಯಗಳಲ್ಲಿ ನಮ್ಮೆಲ್ಲರನ್ನು, ವೃದ್ಧರನ್ನು ಮತ್ತು ಎಳೆಯರನ್ನು, ದೇವಪ್ರಭುತ್ವ ಹಿಂಡಿನ ಮೇರೆಯೊಳಗೆ ಇಡಲು, ಸ್ವಾತಂತ್ರ್ಯವನ್ನು, ಪ್ರಾಪಂಚಿಕ ಲೋಭವನ್ನು ಮತ್ತು ಲೋಕದ ಅನೈತಿಕ ಕೊಳಕನ್ನು ಪ್ರತಿರೋಧಿಸಲು, ಸಹಾಯ ಮಾಡುವರೆ ಹಿರಿಯರುಗಳು ಗಾಢವಾಗಿ ಅಭಿರುಚಿವುಳ್ಳವರಾಗಿದ್ದಾರೆ. ಕೆಲವೊಮ್ಮೆ ಕಠಿನವಾದ ಬುದ್ಧಿವಾದ ಯಾ ಶಿಸ್ತನ್ನು ನಾವು ಪಡೆಯುವುದಾದರೆ, ನೆನಪಿನಲ್ಲಿಡಿರಿ, “ಶಿಸ್ತಿನ ಗದರಿಕೆಗಳು ಜೀವದ ಮಾರ್ಗವಾಗಿರುತ್ತವೆ.” (ಜ್ಞಾನೋಕ್ತಿ 6:23, NW) ನಾವೆಲ್ಲರೂ ಅಪರಿಪೂರ್ಣರಾಗಿರುತ್ತೇವೆ ಮತ್ತು ಅಗತ್ಯಬೀಳುವಂತೆ ಪಶ್ಚಾತ್ತಾಪ ಪಡಲು ಉತ್ಸುಕರಾಗಿರಬೇಕು, ಆ ಮೂಲಕ ನಾವು ಪುನರಳವಡಿಸಲ್ಪಟ್ಟು ದೇವರ ಪ್ರೀತಿಯಲ್ಲಿ ಉಳಿಯುವಂತಾಗಬಹುದು.—2 ಕೊರಿಂಥ 13:11.

17. ಐಶ್ವರ್ಯವು ನಮಗೆ ಆತ್ಮಿಕವಾಗಿ ಅಪಾಯಕಾರಿಯಾಗಬಲ್ಲದು ಹೇಗೆ?

17 ಪ್ರಾಪಂಚಿಕತೆ, ಐಶ್ವರ್ಯ, ಯಾ ಐಶ್ವರ್ಯವಿಲ್ಲದಿರುವಿಕೆಯು ನಮ್ಮನ್ನು ಉಗುರುಬೆಚ್ಚಗೆ ಮಾಡಲು ನಾವು ಬಿಡಕೂಡದು. ಐಶ್ವರ್ಯವು ಸೇವೆಯ ಹೊಸ ಸಾಧ್ಯತೆಗಳನ್ನು ತೆರೆಯುವುದಕ್ಕೆ ಒಂದು ಸಹಾಯಕವಾಗಿರಬಲ್ಲದು, ಆದರೆ ಅದೇ ಸಮಯದಲ್ಲಿ ಅದು ಅಪಾಯಕಾರಿಯು ಆಗಿರ ಸಾಧ್ಯವಿದೆ. (ಮತ್ತಾಯ 19:24) ಸಂಪತ್ತಿರುವ ವ್ಯಕ್ತಿಯೊಬ್ಬನು ತಾನು ಸಮಯ-ಸಮಯಕ್ಕೆ ಒಂದು ಒಳ್ಳೆಯ ಮೊತ್ತದ ಕಾಣಿಕೆ ಕೊಡುವುದಾದರೆ, ಇತರರಂತೆ ತಾನು ಸಾರುವ ಕೆಲಸದಲ್ಲಿ ಉತ್ಸುಕನಾಗಿರುವ ಜರೂರಿಯಿಲ್ಲವೆಂದು ಭಾವಿಸಬಹುದು. ಇಲ್ಲವೆ, ಶ್ರೀಮಂತನಾಗಿರುವುದರಿಂದ ತಾನು ಕೆಲವು ವಿಶೇಷ ಅನುಗ್ರಹಕ್ಕೆ ಪಾತ್ರನಾಗಿರಬೇಕೆಂದು ಭಾವಿಸಬಹುದು. ಇದಕ್ಕೆ ಕೂಡಿಸಿ, ಇತರರು ಅನುಭೋಗಿಸಲು ಸಾಧ್ಯವಿರದ ಅನೇಕ ಸುಖಾನುಭವಗಳು ಮತ್ತು ಮನೋರಂಜನೆಯ ಕಾಲಕ್ಷೇಪಗಳು ಶ್ರೀಮಂತನೊಬ್ಬನಿಗೆ ತೆರೆದಿರುತ್ತವೆ. ಆದರೆ ಈ ದಿಕ್ಚ್ಯುತಿಗಳು ಸಮಯವನ್ನು ತೆಗೆದುಕೊಳ್ಳುತ್ತವೆ ಮತ್ತು ಅಜಾಗರೂಕನನ್ನು ಕ್ರೈಸ್ತ ಶುಶ್ರೂಷೆಯಿಂದ ದೂರಕ್ಕೆ ಸೆಳೆದೊಯ್ಯಬಲ್ಲವು, ಈ ರೀತಿ ವಿವೇಚನಾರಹಿತನನ್ನು ಉಗುರುಬೆಚ್ಚಗೆ ಮಾಡಬಹುದು. ಅಂಥ ಎಲ್ಲಾ ಪಾಶಗಳನ್ನು ನಾವು ಹೋಗಲಾಡಿಸೋಣ ಮತ್ತು ನಿತ್ಯ ಜೀವವನ್ನು ದೃಷ್ಟಿಯಲ್ಲಿಟ್ಟುಕೊಂಡು, ಪೂರ್ಣ ಹೃದಯದಿಂದ ‘ಕಷ್ಟಪಟ್ಟು ಹೋರಾಡುತ್ತಾ’ ಇರೋಣ.—1 ತಿಮೊಥೆಯ 4:8-10; 6:9-12.

‘ಸಂಧ್ಯಾಭೋಜನ ಮಾಡುವುದು’

18. ಲವೊದಿಕೀಯದಲ್ಲಿನ ಕ್ರೈಸ್ತರ ಮುಂದೆ ಯೇಸುವು ಯಾವ ಅವಕಾಶವನ್ನು ಇಡುತ್ತಾನೆ?

18 ಯೇಸುವು ಹೇಳುತ್ತಾ ಹೋಗುವುದು: “ಇಗೋ! ನಾನು ಬಾಗಿಲಲ್ಲಿ ನಿಂತುಕೊಂಡು, ತಟ್ಟುತ್ತಾ ಇದ್ದೇನೆ. ಯಾವನಾದರೂ ನನ್ನ ಶಬ್ದವನ್ನು ಕೇಳಿ ಬಾಗಿಲನ್ನು ತೆರೆದರೆ, ನಾನು ಅವನ ಮನೆಯೊಳಗೆ ಬರುವೆನು ಮತ್ತು ನಾನು ಅವನ ಸಂಗಡ ಸಂಧ್ಯಾಭೋಜನವನ್ನು ಮಾಡುವೆನು ಮತ್ತು ಅವನು ನನ್ನ ಸಂಗಡ ಮಾಡುವನು.” (ಪ್ರಕಟನೆ 3:20, NW) ತಮ್ಮ ಸಭೆಯೊಳಗೆ ಯೇಸುವನ್ನು ಲವೊದಿಕೀಯದ ಕ್ರೈಸ್ತರು ಸುಸ್ವಾಗತಿಸುವುದಾದರೆ ಮಾತ್ರ, ಅವರ ಉಗುರುಬೆಚ್ಚಗೆತನವನ್ನು ಜಯಿಸಲು ಅವನು ಸಹಾಯ ಮಾಡುವನು!—ಮತ್ತಾಯ 18:20.

19. ಲವೊದಿಕೀಯದಲ್ಲಿನ ಸಭೆಯಲ್ಲಿ ಸಂಧ್ಯಾಭೋಜನವನ್ನು ಮಾಡುವೆನು ಎಂದು ವಾಗ್ದಾನಿಸಿದ್ದರಲ್ಲಿ, ಯೇಸುವು ಏನನ್ನು ಸೂಚಿಸುತ್ತಾನೆ?

19 ಸಂಧ್ಯಾಭೋಜನದ ಯೇಸುವಿನ ಪ್ರಸ್ತಾಪವು, ತನ್ನ ಶಿಷ್ಯರೊಂದಿಗೆ ಅವನು ಊಟಗಳನ್ನು ಮಾಡಿದ ಸಮಯಗಳನ್ನು ಲವೊದಿಕೀಯದವರಿಗೆ ನಿಸ್ಸಂದೇಹವಾಗಿ ನೆನಪಿಗೆ ತಂದಿರಬೇಕು. (ಯೋಹಾನ 12:1-8) ಅಂತಹ ಸಂದರ್ಭಗಳು, ಹಾಜರಿದ್ದವರಿಗೆ ಯಾವಾಗಲೂ ಆತ್ಮಿಕ ಆಶೀರ್ವಾದಗಳನ್ನು ತಂದವು. ತದ್ರೀತಿಯಲ್ಲಿ, ಯೇಸುವಿನ ಪುನರುತ್ಥಾನದ ನಂತರ, ತನ್ನ ಶಿಷ್ಯರೊಂದಿಗೆ ಅವನು ಊಟಕ್ಕೆ ಹಾಜರಿದ್ದ ಗಮನಾರ್ಹ ಸಂದರ್ಭಗಳು ಇದ್ದವು, ಆ ಸಂದರ್ಭಗಳು ಅವರನ್ನು ಬಹಳವಾಗಿ ಬಲಗೊಳಿಸಿದವು. (ಲೂಕ 24:28-32; ಯೋಹಾನ 21:9-19) ಆದಕಾರಣ, ಲವೊದಿಕೀಯದ ಸಭೆಯೊಳಗೆ ಬರುವ ಮತ್ತು ಅವರೊಂದಿಗೆ ಸಂಧ್ಯಾಭೋಜನವನ್ನು ಮಾಡುವ ಅವನ ವಾಗ್ದಾನವು, ಅವರು ಅವನನ್ನು ಸ್ವೀಕರಿಸುವುದಾದರೆ ಮಾತ್ರ, ಅವರಿಗೆ ವಿಪುಲವಾದ ಆತ್ಮಿಕ ಆಶೀರ್ವಾದಗಳನ್ನು ತರುವ ಒಂದು ವಾಗ್ದಾನವಾಗಿತ್ತು.

20. (ಎ) ಕರ್ತನ ದಿನದ ಆರಂಭದಲ್ಲಿ ಕ್ರೈಸ್ತಪ್ರಪಂಚದ ಉಗುರುಬೆಚ್ಚಗಿನ ಆತ್ಮದಿಂದ ಏನು ಫಲಿಸಿತು? (ಬಿ) ಯೇಸುವಿನ ನ್ಯಾಯತೀರ್ಪು ಕ್ರೈಸ್ತಪ್ರಪಂಚವನ್ನು ಹೇಗೆ ಬಾಧಿಸಿದೆ?

20 ಲವೊದಿಕೀಯದವರಿಗೆ ಯೇಸುವಿನ ಪ್ರೀತಿಯ ಪ್ರಬೋಧನೆಯು ಉಳಿದಿರುವ ಅಭಿಷಿಕ್ತ ಕ್ರೈಸ್ತರಿಗೆ ಇಂದು ಮಹಾ ಅರ್ಥವುಳ್ಳದ್ದಾಗಿದೆ. ಕರ್ತನ ದಿನವು ಆರಂಭವಾದಂತೆ, ಕ್ರೈಸ್ತಪ್ರಪಂಚದ ಧಾರ್ಮಿಕರು ಗಾಬರಿಗೊಳಿಸುವ ರೀತಿಯಲ್ಲಿ ಉಗುರುಬೆಚ್ಚಗಿದ್ದರು ಎಂದು ಅವರಲ್ಲಿ ಕೆಲವರು ನೆನಪಿಸುತ್ತಾರೆ. ಕರ್ತನ ಪುನರಾಗಮನವನ್ನು 1914 ರಲ್ಲಿ ಸುಸ್ವಾಗತಿಸುವ ಬದಲು, ಅವಳ ವೈದಿಕರು ಮೊದಲನೆಯ ಲೋಕ ಯುದ್ಧದ ಹತಿಸುವಿಕೆಯಲ್ಲಿ ತೊಡಗಿಸಿಕೊಂಡರು, ಹೋರಾಡುತ್ತಿರುವ 28 ರಾಷ್ಟ್ರಗಳಲ್ಲಿ 24 ಕ್ರೈಸ್ತರೆಂದು ಹೇಳಿಕೊಳ್ಳುವವರಾಗಿದ್ದರು. ಅವರ ರಕ್ತಾಪರಾಧ ಎಷ್ಟು ಘೋರ! ಅಧಿಕವಾಗಿ ಕ್ರೈಸ್ತಪ್ರಪಂಚದಲ್ಲಿ ಹೋರಾಡಲ್ಪಟ್ಟ ಎರಡನೆಯ ಲೋಕ ಯುದ್ಧದಲ್ಲಿಯೂ ಕೂಡ, ಸುಳ್ಳು ಧರ್ಮದ ಪಾಪಗಳು “ಒಂದರ ಮೇಲೊಂದು ಸೇರಿ ಆಕಾಶದ ಪರ್ಯಂತರಕ್ಕೂ” ಬೆಳೆದಿದ್ದವು. (ಪ್ರಕಟನೆ 18:5) ಇನ್ನು ಹೆಚ್ಚಾಗಿ, ಮಾನವ ಕುಲದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲದಂತಹ ಜನಾಂಗ ಸಂಘವನ್ನು, ಸಂಯುಕ್ತ ರಾಷ್ಟ್ರ ಸಂಘವನ್ನು ಮತ್ತು ರಾಷ್ಟ್ರೀಯ, ಕ್ರಾಂತಿಕಾರಿ ಚಳುವಳಿಗಳನ್ನು ಬೆಂಬಲಿಸುವ ಮೂಲಕ ಆಗಮಿಸಲಿರುವ ಯೆಹೋವನ ರಾಜ್ಯಕ್ಕೆ ವೈದಿಕರು ಬೆನ್ನು ತೋರಿಸಿದ್ದಾರೆ. ತನ್ನ ಬಲೆಯಲ್ಲಿ ಸಿಕ್ಕಿಕೊಂಡ ಅಯೋಗ್ಯವಾದ ಮೀನುಗಳನ್ನು ಒಬ್ಬ ಬೆಸ್ತನು ಬಿಸಾಡುವ ರೀತಿಯಲ್ಲಿಯೇ, ಯೇಸುವು ಅಂದಿನಿಂದಲೇ ವೈದಿಕರನ್ನು ನಿರಾಕರಿಸಿ, ಪ್ರತಿಕೂಲವಾಗಿ ನ್ಯಾಯವಿಧಿಸುತ್ತಾ, ಅವರನ್ನು ಎಸೆದುಬಿಟ್ಟಿದ್ದಾನೆ. ಕ್ರೈಸ್ತಪ್ರಪಂಚದ ಇಂದಿನ ದುರವಸ್ಥೆಯು ತಾನೇ ಅವಳಿಗೆ ಆ ನ್ಯಾಯತೀರ್ಪು ವಿಧಿಸಲ್ಪಟ್ಟಿದೆ ಎಂದು ರುಜುವಾತನ್ನೀಯುತ್ತದೆ. ಅವಳ ಕೊನೆಯ ಗತಿಯು ನಮಗೊಂದು ಎಚ್ಚರಿಕೆಯಾಗಿ ಇರಲಿ!—ಮತ್ತಾಯ 13:47-50.

21. ಲವೊದಿಕೀಯದಲ್ಲಿನ ಕ್ರೈಸ್ತರಿಗೆ ಯೇಸುವು ಕೊಟ್ಟ ಮಾತುಗಳಿಗೆ, ನಿಜ ಸಭೆಯಲ್ಲಿರುವ ಕ್ರೈಸ್ತರು 1919 ರಿಂದ ಹೇಗೆ ಪ್ರತಿಕ್ರಿಯೆ ತೋರಿಸಿರುತ್ತಾರೆ?

21 ನಿಜ ಸಭೆಯೊಳಗೂ ಉಗುರುಬೆಚ್ಚಗಿನ ವ್ಯಕ್ತಿಗಳು, ಹುರಿದುಂಬಿಸುವಂತೆ ಬೆಚ್ಚಗೂ ಅಲ್ಲ, ಚೈತನ್ಯದಾಯಕವಾಗಿ ತಣ್ಣಗೂ ಅಲ್ಲವಾಗಿರುವ ಒಂದು ಪಾನೀಯದಂತಿರುವ ವ್ಯಕ್ತಿಗಳು ಇದ್ದಾರೆ. ಆದರೂ, ಯೇಸುವು ಇನ್ನೂ ಸಭೆಯನ್ನು ಸಹಾನುಭೂತಿಯಿಂದ ಪ್ರೀತಿಸುತ್ತಾನೆ. ಆತಿಥ್ಯಾದರದಿಂದ ಪ್ರತಿವರ್ತಿಸುವ ಕ್ರೈಸ್ತರಿಗೆ ಅವನು ತನ್ನನ್ನು ದೊರಕಿಸಿಕೊಳ್ಳುತ್ತಾನೆ, ಮತ್ತು ಸಾಯಂಕಾಲದ ಒಂದು ಊಟಕ್ಕೋ ಎಂಬಂತೆ ಅನೇಕರು ಅವನನ್ನು ಸುಸ್ವಾಗತಿಸಿದ್ದಾರೆ. ಇದರ ಫಲಿತಾಂಶವಾಗಿ, 1919 ರಿಂದ ಬೈಬಲ್‌ ಪ್ರವಾದನೆಗಳ ಅರ್ಥದ ಕಡೆಗೆ ಅವರ ಕಣ್ಣುಗಳು ತೆರೆಯಲ್ಪಟ್ಟಿವೆ. ಅವರು ಒಂದು ಮಹಾ ಜ್ಞಾನೋದಯದ ಸಮಯಾವಧಿಯನ್ನು ಅನುಭವಿಸುತ್ತಾರೆ.—ಕೀರ್ತನೆ 97:11; 2 ಪೇತ್ರ 1:19.

22. ಯಾವ ಭಾವೀ ಸಂಧ್ಯಾಭೋಜನವು ಯೇಸುವಿನ ಮನಸ್ಸಿನಲ್ಲಿದ್ದಿರಬಹುದು, ಮತ್ತು ಅದರಲ್ಲಿ ಯಾರು ಪಾಲಿಗರಾಗುವರು?

22 ಲವೊದಿಕೀಯದವರನ್ನು ಸಂಬೋಧಿಸುತ್ತಿರುವಾಗ, ಇನ್ನೊಂದು ಸಂಧ್ಯಾಭೋಜನವು ಯೇಸುವಿನ ಮನಸ್ಸಿನಲ್ಲಿದ್ದಿರಬಹುದು. ಅನಂತರ ಪ್ರಕಟನೆಯಲ್ಲಿ ನಾವು ಓದುವುದು: “ಕುರಿಮರಿಯ ವಿವಾಹದ ಸಂಧ್ಯಾಭೋಜನಕ್ಕೆ ಆಮಂತ್ರಿತರಾದವರು ಧನ್ಯರು.” ಸುಳ್ಳು ಧರ್ಮದ ವಿರುದ್ಧ ನ್ಯಾಯತೀರ್ಪನ್ನು ಅವನು ಜಾರಿಗೊಳಿಸಿದ ನಂತರ ಯೆಹೋವನ ಸ್ತುತಿಗಾಗಿ ಒಂದು ಘನಗಾಂಭೀರ್ಯದ ಔತಣ ಇದಾಗಿರುತ್ತದೆ—ಪರಲೋಕದಲ್ಲಿ ಕ್ರಿಸ್ತನು ಮತ್ತು ಸಂಪೂರ್ಣಗೊಂಡ 1,44,000 ಮಂದಿಯಿರುವ ಅವನ ಮದಲಗಿತ್ತಿ ಈ ಔತಣದಲ್ಲಿ ಪಾಲಿಗರಾಗುವರು. (ಪ್ರಕಟನೆ 19:1-9, NW) ಆ ಪುರಾತನ ಲವೊದಿಕೀಯ ಸಭೆಯ ಪ್ರತಿಕ್ರಿಯಿಸುತ್ತಿದ್ದ ಸದಸ್ಯರು—ಹೌದು, ಮತ್ತು ಸಾಚ ಅಭಿಷಿಕ್ತ ಕ್ರೈಸ್ತರೋಪಾದಿ ಗುರುತು ಇರುವ ಶುಭ್ರ ವಸ್ತ್ರಗಳನ್ನು ಧರಿಸಿರುವ, ಯೇಸು ಕ್ರಿಸ್ತನ ಇಂದಿನ ನಂಬಿಗಸ್ತ ಸಹೋದರರು—ಎಲ್ಲರೂ ಆ ಸಂಧ್ಯಾಭೋಜನದಲ್ಲಿ ತಮ್ಮ ಮದಲಿಂಗನೊಡನೆ ಭೋಜನ ಮಾಡುವರು. (ಮತ್ತಾಯ 22:2-13) ಹುರುಪುಳ್ಳವರಾಗಿರಲು ಮತ್ತು ಪಶ್ಚಾತ್ತಾಪ ಪಡಲು ಎಂತಹ ಒಂದು ಬಲವಾದ ಪ್ರಚೋದನೆಯಾಗಿದೆ!

ಜಯಶಾಲಿಗಳಾಗುವವರಿಗೆ ಒಂದು ಸಿಂಹಾಸನ

23, 24. (ಎ) ಯಾವ ಹೆಚ್ಚಿನ ಬಹುಮಾನದ ಕುರಿತು ಯೇಸುವು ಮಾತಾಡುತ್ತಾನೆ? (ಬಿ) ತನ್ನ ಮೆಸ್ಸೀಯ ಸಂಬಂಧಿತ ಸಿಂಹಾಸನದ ಮೇಲೆ ಯೇಸುವು ಯಾವಾಗ ಕೂತುಕೊಂಡನು, ಮತ್ತು ಕ್ರೈಸ್ತರೆಂದು ಹೇಳಿಕೊಳ್ಳುವವರ ನ್ಯಾಯತೀರ್ಪು ಮಾಡಲು ಅವನು ಯಾವಾಗ ಆರಂಭಿಸಿದನು? (ಸಿ) ತನ್ನ ಮರಣದ ಜ್ಞಾಪಕಾಚರಣೆಯನ್ನು ಸ್ಥಾಪಿಸಿದಾಗ, ತನ್ನ ಶಿಷ್ಯರಿಗೆ ಯೇಸುವು ಯಾವ ಅದ್ಭುತಕರ ವಾಗ್ದಾನವನ್ನು ಮಾಡಿದನು?

23 ಯೇಸು ಇನ್ನೊಂದು ಬಹುಮಾನದ ಕುರಿತು ಮಾತಾಡುತ್ತಾ, ಹೇಳುವುದು: “ನಾನು ಜಯಹೊಂದಿ ನನ್ನ ತಂದೆಯೊಡನೆ ಅವನ ಸಿಂಹಾಸನದಲ್ಲಿ ಕೂತುಕೊಂಡಂತೆ, ಜಯಶಾಲಿಯಾಗುವವನಿಗೆ ನನ್ನ ಸಿಂಹಾಸನದಲ್ಲಿ ನನ್ನೊಂದಿಗೆ ಕೂತುಕೊಳ್ಳುವಂತೆ ನಾನು ಅನುಮತಿಸುವೆನು.” (ಪ್ರಕಟನೆ 3:21, NW) ಕೀರ್ತನೆ 110:1, 2ರ ದಾವೀದನ ಮಾತುಗಳ ನೆರವೇರಿಕೆಯಲ್ಲಿ, ಲೋಕವನ್ನು ಜಯಿಸಿದ್ದರ ಮೂಲಕ, ಸಮಗ್ರತೆಯನ್ನು ಕಾಪಾಡಿದ ಯೇಸು ಸಾ. ಶ. 33 ರಲ್ಲಿ ಪುನರುತ್ಥಾನಗೊಳಿಸಲ್ಪಟ್ಟನು ಮತ್ತು ಅವನ ತಂದೆಯೊಡನೆ ಆತನ ಸ್ವರ್ಗೀಯ ಸಿಂಹಾಸನದಲ್ಲಿ ಕೂತುಕೊಳ್ಳುವಂತೆ ಮಹಿಮೆಗೇರಿಸಲ್ಪಟ್ಟನು. (ಅ. ಕೃತ್ಯಗಳು 2:32, 33) ಇನ್ನೊಂದು ನಿರ್ಣಾಯಕ ವರ್ಷ, 1914 ರಲ್ಲಿ, ರಾಜನೂ, ನ್ಯಾಯಾಧಿಪತಿಯೂ ಆಗಿ ಅವನ ಸ್ವಂತ ಮೆಸ್ಸೀಯ ಸಂಬಂಧಿತ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಯೇಸುವು ಆಗಮಿಸಿದನು. ನ್ಯಾಯತೀರ್ಪು 1918 ರಲ್ಲಿ ಕ್ರೈಸ್ತರೆನಿಸಿಕೊಳ್ಳುವವರೊಂದಿಗೆ ಆರಂಭಗೊಂಡಿತು. ಆ ಸಮಯಕ್ಕಿಂತ ಮೊದಲು ಮೃತಿಹೊಂದಿದ ಅಭಿಷಿಕ್ತ ಜಯಶಾಲಿಗಳು ಆಗ ಪುನರುತ್ಥಾನಗೊಳಿಸಲ್ಪಡಲಿದ್ದರು ಮತ್ತು ಅವನ ರಾಜ್ಯದಲ್ಲಿ ಯೇಸುವಿನೊಂದಿಗೆ ಜತೆಗೂಡಲಿದ್ದರು. (ಮತ್ತಾಯ 25:31; 1 ಪೇತ್ರ 4:17) ಅವನ ಮರಣದ ಜ್ಞಾಪಕಾಚರಣೆಯನ್ನು ಸ್ಥಾಪಿಸುವಾಗ ಅವನು ಇದನ್ನು ಅವರಿಗೆ ವಾಗ್ದಾನಿಸುತ್ತಾ, ಅವನ ಶಿಷ್ಯರಿಗೆ ಹೇಳಿದ್ದು: “ನನ್ನ ತಂದೆಯು ನನ್ನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡಂತೆಯೇ, ನಾನು ನಿಮ್ಮೊಂದಿಗೆ ಒಂದು ರಾಜ್ಯಕ್ಕಾಗಿ ಒಂದು ಒಡಂಬಡಿಕೆಯನ್ನು ಮಾಡುತ್ತೇನೆ, ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ ಮತ್ತು ಕುಡಿಯುವಿರಿ ಮತ್ತು ಇಸ್ರಾಯೇಲಿನ ಹನ್ನೆರಡು ಕುಲಗಳ ನ್ಯಾಯ ತೀರಿಸಲು ಸಿಂಹಾಸನಗಳ ಮೇಲೆ ಕೂತುಕೊಳ್ಳುವಿರಿ.”—ಲೂಕ 22:28-30, NW.

24 ಎಂತಹ ಒಂದು ಅದ್ಭುತವಾದ ನೇಮಕ—“ಪುನರ್‌ಸೃಷ್ಟಿಯ” ಸಮಯದಲ್ಲಿ ಆಳುವ ಅರಸನೊಂದಿಗೆ ಕೂತುಕೊಳ್ಳುವುದು ಮತ್ತು ವಿಧೇಯ ಮಾನವ ಕುಲವನ್ನು ಅವನ ಪರಿಪೂರ್ಣ ಯಜ್ಞದ ಆಧಾರದ ಮೇಲೆ ಏದೆನಿನ ಪರಿಪೂರ್ಣತೆಗೇರಿಸುವುದರಲ್ಲಿ ಅವನೊಂದಿಗೆ ಪಾಲಿಗರಾಗುವುದು! (ಮತ್ತಾಯ 19:28, NW; 20:28) ಯೋಹಾನನು ನಮಗೆ ತಿಳಿಸುವಂತೆ, ಯೇಸುವು ಜಯಶಾಲಿಗಳಾಗುವವರನ್ನು “ಒಂದು ರಾಜ್ಯವನ್ನಾಗಿಯೂ, ಅವನ ದೇವರಿಗೆ ಮತ್ತು ತಂದೆಗೆ ಯಾಜಕರನ್ನಾಗಿಯೂ,” ಯೆಹೋವನ ಮಹಾ ವೈಭವದ ಸ್ವಂತ ಸಿಂಹಾಸನದ ಸುತ್ತಲೂ ಸಿಂಹಾಸನಗಳ ಮೇಲೆ ಕೂತುಕೊಳ್ಳುವಂತೆ ಮಾಡುವನು. (ಪ್ರಕಟನೆ 1:6; 4:4) ನಾವೆಲ್ಲರೂ—ಅಭಿಷಿಕ್ತರಾಗಿರಲಿ ಯಾ ಪ್ರಮೋದವನವನ್ನು ಪುನಃ ಸ್ಥಾಪಿಸುವುದರಲ್ಲಿ ಪಾಲಿಗರಾಗುವ ನಿರೀಕ್ಷೆಯಿರುವ ನೂತನ ಭೂಮಿಯ ಸಮಾಜದವರಾಗಿರಲಿ—ಲವೊದಿಕೀಯದವರಿಗೆ ಹೇಳಿದ ಯೇಸುವಿನ ಮಾತುಗಳನ್ನು ಹೃದಯಕ್ಕೆ ತೆಗೆದುಕೊಳ್ಳೋಣ!—2 ಪೇತ್ರ 3:13; ಅ. ಕೃತ್ಯಗಳು 3:19-21.

25. (ಎ) ಈ ಮುಂಚಿನ ಸಂದೇಶಗಳಂತೆ, ಲವೊದಿಕೀಯದವರಿಗೆ ತನ್ನ ಸಂದೇಶವನ್ನು ಯೇಸುವು ಹೇಗೆ ಕೊನೆಗೊಳಿಸುತ್ತಾನೆ? (ಬಿ) ಲವೊದಿಕೀಯದಲ್ಲಿನ ಸಭೆಗೆ ಯೇಸು ಕೊಟ್ಟ ಮಾತುಗಳಿಗೆ ಇಂದು ಪ್ರತಿಯೊಬ್ಬ ಕ್ರೈಸ್ತನು ಹೇಗೆ ಪ್ರತಿವರ್ತಿಸತಕ್ಕದ್ದು?

25 ಈ ಮುಂಚಿನ ಸಂದೇಶಗಳಂತೆ, ಎಚ್ಚರಿಕೆಯ ಮಾತುಗಳೊಂದಿಗೆ ಇದನ್ನು ಯೇಸುವು ಕೊನೆಗೊಳಿಸುತ್ತಾನೆ: “ಆತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.” (ಪ್ರಕಟನೆ 3:22, NW) ನಾವು ಅಂತ್ಯದ ಸಮಯದ ಕೊನೇಭಾಗದಲ್ಲಿ ಜೀವಿಸುತ್ತಾ ಇದ್ದೇವೆ. ಪ್ರೀತಿಯ ಕುರಿತು ಹೇಳುವುದಾದರೆ, ಕ್ರೈಸ್ತಪ್ರಪಂಚವು ತಣ್ಣಗಾಗಿದೆ ಎಂದು ನಮ್ಮ ಸುತ್ತಲಿನ ರುಜುವಾತುಗಳು ತೋರಿಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ನಿಜ ಕ್ರೈಸ್ತರೋಪಾದಿ ಲವೊದಿಕೀಯದ ಸಭೆಗೆ ಕೊಟ್ಟ ಯೇಸುವಿನ ಸಂದೇಶಕ್ಕೆ, ಹೌದು, ಸಭೆಗಳಿಗೆ ಕೊಟ್ಟ ನಮ್ಮ ಕರ್ತನ ಎಲ್ಲಾ ಏಳು ಸಂದೇಶಗಳಿಗೆ ನಾವು ಉತ್ಸಾಹದಿಂದ ಪ್ರತಿಕ್ರಿಯೆ ತೋರಿಸೋಣ. ನಮ್ಮ ದಿನಗಳಿಗಾಗಿರುವ ಯೇಸುವಿನ ಮಹತ್ತಾದ ಪ್ರವಾದನೆಯ ನೆರವೇರಿಕೆಯಲ್ಲಿ ನಮಗೆ ಹುರುಪಿನ ಪಾಲು ಇರುವಂತೆ ಕಾರ್ಯನಡಿಸುವುದರ ಮೂಲಕ ನಾವು ಇದನ್ನು ಮಾಡಬಹುದು: “ರಾಜ್ಯದ ಈ ಸುವಾರ್ತೆಯು ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ನಿವಾಸಿತ ಭೂಮಿಯಲ್ಲಿಲ್ಲಾ ಸಾರಲಾಗುವುದು, ಮತ್ತು ತದನಂತರ ಅಂತ್ಯವು ಬರುವುದು.”—ಮತ್ತಾಯ 24:12-14NW.

26. ಯೇಸುವು ಯೋಹಾನನೊಡನೆ ನೇರವಾಗಿ ಪುನಃ ಮಾತಾಡುವುದು ಯಾವಾಗ, ಆದರೆ ಅವನು ಯಾವುದರಲ್ಲಿ ಭಾಗವಹಿಸುತ್ತಾನೆ?

26 ಏಳು ಸಭೆಗಳಿಗೆ ಯೇಸುವಿನ ಬುದ್ಧಿವಾದವು ಕೊನೆಗೊಂಡಿತು. ಕೊನೆಯ ಅಧ್ಯಾಯದ ತನಕ ಪ್ರಕಟನೆಯಲ್ಲಿ ಪುನಃ ಅವನು ಯೋಹಾನನೊಂದಿಗೆ ಮಾತಾಡುವುದಿಲ್ಲ; ಆದರೆ ಅನೇಕ ದರ್ಶನಗಳಲ್ಲಿ ಅವನು, ಉದಾಹರಣೆಗೆ ಯೆಹೋವನ ನ್ಯಾಯತೀರ್ಪುಗಳನ್ನು ಜಾರಿಗೊಳಿಸುವುದರಲ್ಲಿ ಭಾಗವಹಿಸುತ್ತಾನೆ. ಕರ್ತನಾದ ಯೇಸು ಕ್ರಿಸ್ತನಿಂದ ಪ್ರಕಟಿಸಲ್ಪಟ್ಟ ಎರಡನೆಯ ಗಮನಾರ್ಹವಾದ ದರ್ಶನವನ್ನು ಪರಿಶೀಲಿಸುವುದರಲ್ಲಿ ನಾವು ಈಗ ಯೋಹಾನ ವರ್ಗದವರೊಡನೆ ಜತೆಗೂಡೋಣ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 7 ಲವೊದಿಕೀಯದ ನಿವೇಶನದಲ್ಲಿ ಪ್ರಾಕ್ತನಶಾಸ್ತ್ರದ ಅಗೆತದಲ್ಲಿ ಈ ಸ್ಥಳಗಳು ಕಂಡುಹಿಡಿಯಲ್ಪಟ್ಟಿವೆ.

[ಅಧ್ಯಯನ ಪ್ರಶ್ನೆಗಳು]

[ಪುಟ 84 ರಲ್ಲಿರುವ ಚೌಕ]

ಪ್ರಾಪಂಚಿಕತೆಗೆ ಪ್ರತಿಯಾಗಿ ವಿವೇಕ

ಒಬ್ಬ ವಾರ್ತಾ ಅಂಕಣಗಾರನು 1956 ರಷ್ಟು ಹಿಂದಕ್ಕೆ ಬರೆದದ್ದು: “ಒಂದು ಶತಕದ ಹಿಂದೆ ಒಬ್ಬ ಸಾಮಾನ್ಯ ಮನುಷ್ಯನಿಗೆ 72 ಕೋರಿಕೆಗಳಿದ್ದವು ಎಂದು ಅಂದಾಜಿಸಲಾಗಿದ್ದು, ಅವುಗಳಲ್ಲಿ 16 ಅಗತ್ಯತೆಗಳಾಗಿದ್ದವು ಎಂದು ಎಣಿಸಲಾಗಿತ್ತು. ಇಂದು ಒಬ್ಬ ಸಾಮಾನ್ಯ ಮನುಷ್ಯನಿಗೆ 474 ಕೋರಿಕೆಗಳಿವೆ ಎಂದು ಅಂದಾಜಿಸಲಾಗಿದ್ದು, ಅವುಗಳಲ್ಲಿ 94 ಅಗತ್ಯತೆಗಳಾಗಿವೆ ಎಂದು ಎಣಿಸಲಾಗುತ್ತದೆ. ಒಂದು ಶತಕದ ಹಿಂದೆ, ವಿಕ್ರಯ ಚಾತುರ್ಯದಿಂದ 200 ವಸ್ತುಗಳು ತೆಗೆದುಕೊಳ್ಳಲ್ಪಡುವಂತೆ ಒಬ್ಬ ಸಾಮಾನ್ಯ ಮನುಷ್ಯನನ್ನು ಒತ್ತಾಯಿಸಲಾಗುತ್ತಿತ್ತು—ಆದರೆ ವಿಕ್ರಯವನ್ನು ಪ್ರತಿರೋಧಿಸಬೇಕಾದ 32,000 ವಸ್ತುಗಳು ಇಂದು ಇವೆ. ಮಾನವನ ಅಗತ್ಯತೆಗಳು ಕೊಂಚವೇ—ಅವನ ಕೋರಿಕೆಗಳಾದರೋ ಅಪಾರವಾಗಿವೆ.” ಇಂದು, ಜನರ ಮೇಲೆ ಪ್ರಾಪಂಚಿಕ ಐಶ್ವರ್ಯ ಮತ್ತು ಸ್ವತ್ತುಗಳು ಜೀವನದಲ್ಲಿ ಪ್ರಮುಖ ವಿಷಯವೆಂಬ ಕಲ್ಪನೆಯ ಬಾಂಬುದಾಳಿ ನಡೆಯುತ್ತದೆ. ಆದುದರಿಂದ ಪ್ರಸಂಗಿ 7:12ರ (NW) ವಿವೇಕವನ್ನು ಅಲಕ್ಷಿಸುವಂತೆ ಅನೇಕರು ನಡಿಸಲ್ಪಡುತ್ತಾರೆ: “ಧನವು ಹೇಗೆ ಸಂರಕ್ಷಣೆಗಾಗಿ ಇದೆಯೊ ಹಾಗೆಯೇ ವಿವೇಕವೂ ಸಂರಕ್ಷಣೆಗಾಗಿ ಇದೆ. ಆದರೆ ಜ್ಞಾನದ ಪ್ರಯೋಜನವೇನಂದರೆ ವಿವೇಕವು ತಾನೇ ಅದರ ಒಡೆಯನನ್ನು ಸುರಕ್ಷಿತವಾಗಿಡುವುದು.”

[ಪುಟ 78 ರಲ್ಲಿರುವ ಚಿತ್ರ]

ಲವೊದಿಕೀಯಕ್ಕೆ ಬಂದ ನೀರು ಅನಹ್ಲಾದಕರವಾಗಿ ಉಗುರುಬೆಚ್ಚಗೆಯಾಗಿರುತ್ತಿತ್ತು. ಲವೊದಿಕೀಯದಲ್ಲಿನ ಕ್ರೈಸ್ತರಲ್ಲಿ ಅತೃಪ್ತಿಕರವಾದ ಉಗುರುಬೆಚ್ಚಗಿನ ಆತ್ಮವು ಇತ್ತು