ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೊದಲನೆಯ ವಿಪತ್ತು—ಮಿಡಿತೆಗಳು

ಮೊದಲನೆಯ ವಿಪತ್ತು—ಮಿಡಿತೆಗಳು

ಅಧ್ಯಾಯ 22

ಮೊದಲನೆಯ ವಿಪತ್ತು—ಮಿಡಿತೆಗಳು

1. ದೇವದೂತರು ತುತೂರಿಗಳನ್ನು ಊದಿದಾಗ ಯಾರು ಹಿಂಬಾಲಿಸುತ್ತಾರೆ, ಮತ್ತು ಐದನೆಯ ತುತೂರಿಯ ಧ್ವನಿಯು ಯಾವುದನ್ನು ಪ್ರಕಟಿಸುತ್ತದೆ?

ಐದನೆಯ ದೇವದೂತನು ತನ್ನ ತುತೂರಿಯನ್ನು ಊದಲು ಸಿದ್ಧನಾಗುತ್ತಾನೆ. ನಾಲ್ಕು ಸ್ವರ್ಗೀಯ ತುತೂರಿಗಳು ಈಗಾಗಲೆ ಊದಲ್ಪಟ್ಟಿವೆ, ಮತ್ತು ಯೆಹೋವನಿಂದ ಅತಿ ದೋಷಾರ್ಹವೆಂದು ಪರಿಗಣಿಸಲ್ಪಡುತ್ತಿರುವ ಭೂಮಿಯ ಮೂರನೆಯ ಒಂದು ಭಾಗದ—ಕ್ರೈಸ್ತಪ್ರಪಂಚದ—ಕಡೆಗೆ ನಾಲ್ಕು ವಿಪತ್ತುಗಳು ನೇರವಾಗಿ ನಿರ್ದೇಶಿಸಲ್ಪಟ್ಟಿವೆ. ಅವಳ ಮಾರಕವಾದ ರೋಗಗ್ರಸ್ಥ ಸ್ಥಿತಿಯು ಅನಾವರಣಗೊಳಿಸಲ್ಪಟ್ಟಿದೆ. ತುತೂರಿ ಊದುವಿಕೆಯನ್ನು ದೇವದೂತನು ಧ್ವನಿಸುತ್ತಿರುವಾಗ, ಮಾನವ ಘೋಷಣೆಗಳು ಭೂಮಿಯ ಮೇಲೆ ಅದನ್ನು ಅನುಸರಿಸಿ ಬರುತ್ತವೆ. ಈಗ ಐದನೆಯ ದೇವದೂತನ ತುತೂರಿಯು ಈ ಮುಂಚೆ ಆಗಿ ಹೋದವುಗಳಿಗಿಂತಲೂ ಅತಿ ಭಯಾನಕವಾದ ಮೊದಲನೆಯ ವಿಪತ್ತನ್ನು ಘೋಷಿಸಲಿದೆ. ಇದು ದಿಗಿಲುಗೊಳಿಸುವ ಮಿಡಿತೆಗಳ ಬಾಧೆಗೆ ಸಂಬಂಧಿಸಿದೆ. ಆದರೂ, ಮೊದಲು ಈ ವಿಪತ್ತನ್ನು ಹೆಚ್ಚು ಉತ್ತಮವಾಗಿ ಅರ್ಥೈಸಿಕೊಳ್ಳಲು ನಮಗೆ ಸಹಾಯ ನೀಡಲಿರುವ ಇತರ ಶಾಸ್ತ್ರವಚನಗಳನ್ನು ನಾವೀಗ ಪರೀಕ್ಷಿಸೋಣ.

2. ಯೋಹಾನನು ನೋಡಿದವುಗಳಿಗೆ ಅನುರೂಪದಲ್ಲಿ, ಮಿಡಿತೆಗಳ ಬಾಧೆಯನ್ನು ಯಾವ ಬೈಬಲ್‌ ಪುಸ್ತಕವು ವರ್ಣಿಸುತ್ತದೆ, ಮತ್ತು ಪ್ರಾಚೀನ ಇಸ್ರಾಯೇಲಿನ ಮೇಲೆ ಅದರ ಪ್ರಭಾವ ಏನಾಗಿತ್ತು?

2 ಸಾ. ಶ. ಪೂ. ಒಂಭತ್ತನೆಯ ಶತಮಾನದ ಕಾಲದಲ್ಲಿ ಬರೆಯಲ್ಪಟ್ಟ ಬೈಬಲ್‌ ಪುಸ್ತಕವಾದ ಯೋವೇಲ ಮಿಡಿತೆಗಳ ಸಹಿತ ಕೀಟಗಳ ಬಾಧೆಯನ್ನು ವರ್ಣಿಸುತ್ತದೆ, ಅದು ಯೋಹಾನನು ನೋಡಿದವುಗಳಿಗೆ ಸಮಾನವಾಗಿವೆ. (ಯೋವೇಲ 2:1-11, 25) * ಅದು ಧರ್ಮಭ್ರಷ್ಟ ಇಸ್ರಾಯೇಲಿಗೆ ಹೆಚ್ಚು ಕ್ಲೇಶವನ್ನು ಉಂಟುಮಾಡಲಿತ್ತು. ಆದರೆ ಇದು ಯೆಹೂದ್ಯರ ವ್ಯಕ್ತಿಗತ ಪಶ್ಚಾತ್ತಾಪಪಡುವಿಕೆಯಲ್ಲಿ ಮತ್ತು ಯೆಹೋವನ ಮೆಚ್ಟಿಕೆಗೆ ಹಿಂದಿರುಗುವುದರಲ್ಲಿ ಸಹ ಫಲಿಸಲಿಕ್ಕಿತ್ತು. (ಯೋವೇಲ 2:6, 12-14) ಆ ಸಮಯವು ಬಂದಾಗ, ಯೆಹೋವನು “ಎಲ್ಲಾ ಮನುಷ್ಯರ ಮೇಲೆ” ತನ್ನ ಆತ್ಮವನ್ನು ಸುರಿಸುವನು, ಆಗ ‘ಯೆಹೋವನ ಮಹತ್ತರವಾದ ಮತ್ತು ಅತಿ ಭಯಂಕರವಾದ ಮಹಾ ದಿನದ ಬರುವಿಕೆಗೆ” ಮುಂಚಿತವಾಗಿ ಭಯೋತ್ಪಾದಕ ಸೂಚನೆಗಳು ಮತ್ತು ಭಯಾನಕ ಉತ್ಪಾತಗಳು ಸಂಭವಿಸುವುವು.—ಯೋವೇಲ 2:11, 28-32.

ಪ್ರಥಮ ಶತಮಾನದ ಒಂದು ವಿಪತ್ತು

3, 4. (ಎ) ಯೋವೇಲನ ಎರಡನೆಯ ಅಧ್ಯಾಯದ ನೆರವೇರಿಕೆಯು ಯಾವಾಗ ಆಯಿತು, ಮತ್ತು ಹೇಗೆ? (ಬಿ) ಸಾ. ಶ. ಒಂದನೆಯ ಶತಮಾನದಲ್ಲಿ, ಮಿಡಿತೆಗಳ ಗುಂಪಿನಂತೆ ಒಂದು ಬಾಧೆಯು ಹೇಗೆ ಇತ್ತು, ಮತ್ತು ಈ ಬಾಧಿಸುವಿಕೆಯು ಎಷ್ಟು ದೀರ್ಘಕಾಲದ ವರೆಗೆ ಮುಂದುವರಿಯಿತು?

3 ಯೋವೇಲನ ಎರಡನೆಯ ಅಧ್ಯಾಯದ ಒಂದು ನೆರವೇರಿಕೆಯು ಮೊದಲನೆಯ ಶತಮಾನದಲ್ಲಾಯಿತು. ಆಗ, ಸಾ. ಶ. 33ರ ಪಂಚಾಶತ್ತಮದಲ್ಲಿ, ಪವಿತ್ರಾತ್ಮವು ಸುರಿಸಲ್ಪಟ್ಟು ಆದಿ ಕ್ರೈಸ್ತರನ್ನು ಅಭಿಷೇಕಿಸಿ, ಅನೇಕ ಭಾಷೆಗಳಲ್ಲಿ “ದೇವರ ಮಹತ್ತುಗಳ ವಿಷಯದಲ್ಲಿ” ಮಾತಾಡಲು ಅವರಿಗೆ ಶಕ್ತಿಕೊಟ್ಟಿತು. ಪರಿಣಾಮವಾಗಿ, ಒಂದು ದೊಡ್ಡ ಸಮೂಹವು ಒಟ್ಟಾಯಿತು. ಆ ಆಶ್ಚರ್ಯಚಕಿತ ಪ್ರೇಕ್ಷಕರಿಗೆ ಅಪೊಸ್ತಲ ಪೇತ್ರನು ಯೋವೇಲ 2:28, 29ನ್ನು ಉಲ್ಲೇಖಿಸುತ್ತಾ ಮತ್ತು ಅವರು ಅದರ ನೆರವೇರಿಕೆಯನ್ನು ನೋಡುತ್ತಿದ್ದಾರೆಂದು ವಿವರಿಸುತ್ತಾ ಸಂಬೋಧಿಸಿದನು. (ಅ. ಕೃತ್ಯಗಳು 2:1-21) ಆದರೆ ಆ ಸಮಯದಲ್ಲಿ ಅಕ್ಷರಶಃ ಮಿಡಿತೆಯ ಬಾಧೆಯು ಕೆಲವರಿಗೆ ಕ್ಲೇಶವನ್ನುಂಟುಮಾಡಿ, ಇನ್ನೂ ಇತರರನ್ನು ಪಶ್ಚಾತ್ತಾಪಕ್ಕೆ ನಡಿಸಿತೆಂಬುದಕ್ಕೆ ದಾಖಲೆಯಿಲ್ಲ.

4 ಆ ದಿನಗಳಲ್ಲಿ ಒಂದು ಲಾಕ್ಷಣಿಕ ಬಾಧೆಯು ಇತ್ತೋ? ಹೌದು, ಖಂಡಿತವಾಗಿ! ಹೊಸತಾಗಿ ಅಭಿಷಿಕ್ತರಾದ ಕ್ರೈಸ್ತರ ಅವಿರತ ಸಾರುವಿಕೆಯ ಪರಿಣಾಮವಾಗಿ ಅದು ಬಂತು. * ಅವರ ಮೂಲಕವಾಗಿ, ಯೆಹೋವನಿಂದ ಆಶೀರ್ವಾದಗಳನ್ನು ಅನುಭವಿಸುವರೆ ಪಶ್ಚಾತ್ತಾಪ ಪಡಲು ಆಲಿಸುವ ಆ ಯೆಹೂದ್ಯರನ್ನು ಆತನು ಆಮಂತ್ರಿಸಿದನು. (ಅ. ಕೃತ್ಯಗಳು 2:38-40; 3:19) ಪ್ರತಿವರ್ತನೆ ತೋರಿಸಿದ ವ್ಯಕ್ತಿಗಳು ಆತನ ಮೆಚ್ಟಿಕೆಯನ್ನು ಒಂದು ಗಮನಾರ್ಹ ಮಟ್ಟದಲ್ಲಿ ಪಡೆದರು. ಆದರೆ ಆಮಂತ್ರಣವನ್ನು ನಿರಾಕರಿಸಿದವರಿಗೆ ಪ್ರಥಮ ಶತಮಾನದ ಕ್ರೈಸ್ತರು ಹಾಳುಗೆಡಹುವ ಮಿಡಿತೆಗಳ ಹಿಂಡಿನಂತೆ ಆದರು. ಯೆರೂಸಲೇಮಿನಿಂದಾರಂಭಿಸಿ, ಅವರು ಎಲ್ಲಾ ಯೂದಾಯ ಮತ್ತು ಸಮಾರ್ಯದಲ್ಲಿ ಹಬ್ಬಿದರು. ಬೇಗನೇ ಅವರು ಎಲ್ಲೆಲ್ಲಿಯೂ ಇದ್ದು, ಯೇಸುವಿನ ಪುನರುತ್ಥಾನವನ್ನು ಅದರಲ್ಲಿ ಒಳಗೂಡಿರುವ ಎಲ್ಲದರೊಂದಿಗೆ ಅವಿಶ್ವಾಸೀ ಯೆಹೂದ್ಯರಿಗೆ ಬಹಿರಂಗವಾಗಿ ಸಾರುವುದರ ಮೂಲಕ ಅವರನ್ನು ಪೀಡಿಸಿದರು. (ಅ. ಕೃತ್ಯಗಳು 1:8; 4:18-20; 5:17-21, 28, 29, 40-42; 17:5, 6; 21:27-30) ಆ ಬಾಧೆಯು ಸಾ. ಶ. 70 ರಲ್ಲಿ ಯೆರೂಸಲೇಮಿನ ವಿರುದ್ಧ ರೋಮನ್‌ ಸೈನಿಕರನ್ನು ಯೆಹೋವನು ತಂದು ಅದನ್ನು ನಾಶಮಾಡಿದ “ಅತಿ ಭಯಂಕರ ದಿನದ” ವರೆಗೆ ಮುಂದುವರಿಯಿತು. ನಂಬಿಕೆಯಿಂದ ಯೆಹೋವನ ಹೆಸರನ್ನು ಹೇಳಿಕೊಂಡ ಕ್ರೈಸ್ತರು ಮಾತ್ರ ರಕ್ಷಿಸಲ್ಪಟ್ಟರು.—ಯೋವೇಲ 2:32; ಅ. ಕೃತ್ಯಗಳು 2:20, 21; ಜ್ಞಾನೋಕ್ತಿ 18:10.

20 ನೆಯ ಶತಮಾನದ ಬಾಧೆ

5. ಯೋವೇಲನ ಪ್ರವಾದನೆಗೆ 1919 ರಿಂದ ಹೇಗೆ ಒಂದು ನೆರವೇರಿಕೆ ಇತ್ತು?

5 ನ್ಯಾಯಸಮ್ಮತವಾಗಿ, ಯುಗಾಂತ್ಯದ ಸಮಯದಲ್ಲಿ ಯೋವೇಲನ ಪ್ರವಾದನೆಗೆ ಕೊನೆಯ ನೆರವೇರಿಕೆಯಿರುವುದನ್ನು ನಾವು ನಿರೀಕ್ಷಿಸಬಲ್ಲೆವು. ಇದು ಎಷ್ಟು ಸತ್ಯವಾಗಿ ಪರಿಣಮಿಸಿದೆ! ಅಮೆರಿಕದ ಒಹೈಯೋದ ಸೀಡರ್‌ ಪಾಯಿಂಟ್‌ನಲ್ಲಿ ಸಪ್ಟಂಬರ 1-8, 1919 ರಲ್ಲಿ ನಡೆದ ಬೈಬಲ್‌ ವಿದ್ಯಾರ್ಥಿಗಳ ಅಧಿವೇಶನದಲ್ಲಿ ಸಾರುವಿಕೆಯ ಲೋಕವ್ಯಾಪಕ ಚಳುವಳಿಯನ್ನು ವ್ಯವಸ್ಥಾಪಿಸುವಂತೆ ಯೆಹೋವನ ಆತ್ಮವು ತನ್ನ ಜನರ ಮೇಲೆ ಗಮನಾರ್ಹವಾಗಿ ಸುರಿಸಲ್ಪಟ್ಟಿತು. ಕ್ರೈಸ್ತರೆಂದು ಹೇಳಿಕೊಳ್ಳುವವರೆಲ್ಲರಲ್ಲಿ ಅವರು ಮಾತ್ರವೇ ಯೇಸುವು ಸ್ವರ್ಗೀಯ ರಾಜನಾಗಿ ಅಭಿಷೇಕಿಸಲ್ಪಟ್ಟಿದ್ದಾನೆಂಬದನ್ನು ಅರಿತುಕೊಂಡು, ಆ ಸುವಾರ್ತೆಯನ್ನು ಸಾರುವುದರಲ್ಲಿ ಸರ್ವ ಪ್ರಯತ್ನಗಳನ್ನು ಮಾಡಿದರು. ಅವರ ಅವಿರತ ಸಾರುವಿಕೆಯು, ಪ್ರವಾದನೆಯ ನೆರವೇರಿಕೆಯಲ್ಲಿ ಧರ್ಮಭ್ರಷ್ಟ ಕ್ರೈಸ್ತಪ್ರಪಂಚಕ್ಕೆ ಪೀಡಿಸುವ ಬಾಧೆಯಂತೆ ಪರಿಣಮಿಸಿತು.—ಮತ್ತಾಯ 24:3-8, 14; ಅ. ಕೃತ್ಯಗಳು 1:8.

6. (ಎ) ಐದನೆಯ ದೇವದೂತನು ತುತೂರಿಯನ್ನೂದಿದಾಗ, ಯೋಹಾನನು ಏನನ್ನು ನೋಡಿದನು? (ಬಿ) ಈ “ನಕ್ಷತ್ರ” ಯಾರನ್ನು ಸಂಕೇತಿಸುತ್ತದೆ, ಮತ್ತು ಯಾಕೆ?

6 ಯೆರೂಸಲೇಮಿನ ನಾಶನದ ಕೆಲವು 26 ವರ್ಷಗಳ ಅನಂತರ ಬರೆದ ಪ್ರಕಟನೆಯು ಸಹ ಆ ಬಾಧೆಯನ್ನು ವರ್ಣಿಸುತ್ತದೆ. ಯೋವೇಲನ ವರ್ಣನೆಗೆ ಅದು ಏನನ್ನು ಕೂಡಿಸುತ್ತದೆ? ಯೋಹಾನನಿಂದ ವರದಿಸಲ್ಪಟ್ಟ ದಾಖಲೆಯನ್ನು ನಾವೀಗ ತೆಗೆದುಕೊಳ್ಳೋಣ: “ಮತ್ತು ಐದನೆಯ ದೇವದೂತನು ತನ್ನ ತುತೂರಿಯನ್ನೂದಿದನು. ಮತ್ತು ಆಕಾಶದಿಂದ ಭೂಮಿಗೆ ಬಿದ್ದ ಒಂದು ನಕ್ಷತ್ರವನ್ನು ನಾನು ಕಂಡೆನು, ಮತ್ತು ಅವನಿಗೆ ಅಧೋಲೋಕದ ಕೂಪದ ಬೀಗದಕೈ ಕೊಡಲ್ಪಟ್ಟಿತು.” (ಪ್ರಕಟನೆ 9:1, NW)  ಈ “ನಕ್ಷತ್ರ”ವು ಪ್ರಕಟನೆ 8:10 ರಲ್ಲಿ ಯೋಹಾನನು ನೋಡಿದ ಬೀಳುವ ಸ್ಥಿತಿಯಲ್ಲಿದ್ದ ನಕ್ಷತ್ರಕ್ಕಿಂತ ಭಿನ್ನವಾಗಿದೆ. ಅವನು “ಆಕಾಶದಿಂದ ಬಿದ್ದ ಒಂದು ನಕ್ಷತ್ರ” ವನ್ನು ನೋಡುತ್ತಾನೆ ಮತ್ತು ಅದಕ್ಕೆ ಈ ಭೂಮಿಯ ಸಂಬಂಧದಲ್ಲಿ ಈಗ ಒಂದು ನೇಮಕಾತಿ ಇದೆ. ಇದು ಒಂದು ಆತ್ಮ ಜೀವಿಯೋ ಯಾ ಒಂದು ಮಾಂಸಿಕ ವ್ಯಕ್ತಿಯೋ? “ಅಧೋಲೋಕದ ಕೂಪದ ಬೀಗದಕೈಯನ್ನು” ಹಿಡಿದಿರುವವನು ತದನಂತರ ಸೈತಾನನನ್ನು “ಅಧೋಲೋಕಕ್ಕೆ” ದೊಬ್ಬಿಬಿಡುವನೆಂದು ವರ್ಣಿಸಲಾಗಿದೆ. (ಪ್ರಕಟನೆ 20:1-3) ಆದುದರಿಂದ ಆತನು ಒಬ್ಬ ಬಲಿಷ್ಠ ಆತ್ಮ ಜೀವಿಯಾಗಿರಬೇಕು. ಪ್ರಕಟನೆ 9:11 ರಲ್ಲಿ, ಮಿಡಿತೆಗಳಿಗೆ ಒಬ್ಬ “ಅರಸನು, ಅಧೋಲೋಕದ ದೂತನು” ಇದ್ದಾನೆಂದು ಯೋಹಾನನು ನಮಗನ್ನುತ್ತಾನೆ. ಎರಡೂ ವಚನಗಳು ಅದೇ ವ್ಯಕ್ತಿಯನ್ನು ಸೂಚಿಸಬೇಕು ಯಾಕಂದರೆ ಅಧೋಲೋಕದ ಬೀಗದಕೈಯನ್ನು ಹಿಡಿದಿರುವ ದೂತನು ಅಧೋಲೋಕದ ದೂತನಾಗಿರಬೇಕು ಎಂಬದು ತರ್ಕಬದ್ಧವಾಗಿದೆ. ಮತ್ತು ನಕ್ಷತ್ರವು ಯೆಹೋವನ ಅಭಿಷಿಕ್ತ ರಾಜನನ್ನು ಸಂಕೇತಿಸುತ್ತಿರಬೇಕು ಯಾಕಂದರೆ ಅಭಿಷಿಕ್ತ ಕ್ರೈಸ್ತರು ಒಬ್ಬನೇ ದೇವದೂತ ರಾಜ, ಯೇಸು ಕ್ರಿಸ್ತನನ್ನು ಅಂಗೀಕರಿಸುತ್ತಾರೆ.—ಕೊಲೊಸ್ಸೆ 1:13; 1 ಕೊರಿಂಥ 15:25.

7. (ಎ) “ಅಧೋಲೋಕದ ಕೂಪವು” ತೆರೆಯಲ್ಪಟ್ಟಾಗ ಏನು ಸಂಭವಿಸುತ್ತದೆ? (ಬಿ) “ಅಧೋಲೋಕ” ವೆಂದರೇನು, ಮತ್ತು ಅದರಲ್ಲಿ ಯಾರು ಸ್ವಲ್ಪ ಸಮಯ ಕಳೆದರು?

7 ದಾಖಲೆಯು ಮುಂದುವರಿಯುವುದು: “ಮತ್ತು ಅವನು ಅಧೋಲೋಕದ ಕೂಪವನ್ನು ತೆರೆದನು ಮತ್ತು ಕೂಪದಿಂದ ಬಂದ ಹೊಗೆ ದೊಡ್ಡ ಕುಲುಮೆಯ ಹೊಗೆಯಂತೆ ಏರಿತು, ಕೂಪದ ಹೊಗೆಯಿಂದ ಸೂರ್ಯನು ಕತ್ತಲಾದನು, ವಾಯುಮಂಡಲವು ಸಹ. ಮತ್ತು ಹೊಗೆಯೊಳಗಿಂದ ಮಿಡಿತೆಗಳು ಭೂಮಿಯ ಮೇಲೆ ಹೊರಟುಬಂದವು. ಮತ್ತು ಭೂಮಿಯಲ್ಲಿರುವ ಚೇಳುಗಳಿಗೆ ಇರುವಂತಹ ಅಧಿಕಾರವೇ ಅವುಗಳಿಗೂ ಕೊಡಲ್ಪಟ್ಟಿತು.” (ಪ್ರಕಟನೆ 9:2, 3, NW)  ಶಾಸ್ತ್ರೀಯವಾಗಿ, “ಅಧೋಲೋಕವು” ನಿಷ್ಕ್ರಿಯೆಯ, ಮರಣದ್ದೂ ಹೌದು, ಸ್ಥಳವಾಗಿದೆ. (ಹೋಲಿಸಿರಿ ರೋಮಾಪುರ 10:7; ಪ್ರಕಟನೆ 17:8; 20:1, 3.) ಮೊದಲ ಲೋಕ ಯುದ್ಧದ ಅಂತ್ಯದಲ್ಲಿ (1918-19) ಯೇಸುವಿನ ಸಹೋದರರ ಚಿಕ್ಕ ಗುಂಪು ಸಾಪೇಕ್ಷಾತ್ಮಕ ನಿಷ್ಕ್ರಿಯೆಯ ಇಂಥ ಒಂದು “ಅಧೋಲೋಕ” ದಲ್ಲಿ ಸ್ವಲ್ಪ ಸಮಯವನ್ನು ಕಳೆಯಿತು. ಆದರೆ ಯೆಹೋವನು ತನ್ನಾತ್ಮವನ್ನು 1919 ರಲ್ಲಿ ಪಶ್ಚಾತ್ತಾಪಪಟ್ಟ ತನ್ನ ಸೇವಕರ ಮೇಲೆ ಸುರಿಸಿದಾಗ, ಅವರ ಮುಂದೆ ಇಟ್ಟಿರುವ ಕೆಲಸದ ಪಂಥಾಹ್ವಾನವನ್ನು ಎದುರಿಸಲು ಗುಂಪು ಗುಂಪಾಗಿ ಅವರು ಮುಂದೆ ಬಂದರು.

8. ಮಿಡಿತೆಗಳ ಬಿಡುಗಡೆಯು ಅಧಿಕ “ಹೊಗೆ” ಯೊಂದಿಗೆ ಜತೆಗೂಡಿರುವುದು ಹೇಗೆ?

8 ಯೋಹಾನನು ಅವಲೋಕಿಸುವಂತೆ, ಮಿಡಿತೆಗಳ ಬಿಡುಗಡೆಯು ಅಧಿಕ ಹೊಗೆಯೊಂದಿಗೆ ಜತೆಗೂಡಿರುತ್ತದೆ, “ದೊಡ್ಡ ಕುಲುಮೆಯ ಹೊಗೆಯಂತೆ.” * ಇಸವಿ 1919 ರಲ್ಲಿ ಆಗಿ ಪರಿಣಮಿಸಿದ್ದು ಹಾಗೆಯೇ. ಪರಿಸ್ಥಿತಿಯು ಕ್ರೈಸ್ತಪ್ರಪಂಚಕ್ಕೆ ಮತ್ತು ಸಾಮಾನ್ಯ ಪ್ರಪಂಚಕ್ಕೆ ಕತ್ತಲಾಗಿ ಪರಿಣಮಿಸಿತು. (ಹೋಲಿಸಿರಿ ಯೋವೇಲ 2:30, 31.) ಯೋಹಾನ ವರ್ಗದ ಆ ಮಿಡಿತೆಗಳ ಬಿಡುಗಡೆಯು ರಾಜ್ಯದ ಕೆಲಸವನ್ನು ಶಾಶ್ವತವಾಗಿ ಸಾಯಿಸಲು ಯೋಜಿಸಿದ ಮತ್ತು ಒಳಸಂಚು ಹೂಡಿದ ಮತ್ತು ಈಗ ದೇವರ ರಾಜ್ಯವನ್ನು ನಿರಾಕರಿಸಿದ ಕ್ರೈಸ್ತಪ್ರಪಂಚದ ವೈದಿಕರಿಗೆ ನಿಜವಾಗಿಯೂ ಒಂದು ಸೋಲಾಗಿತ್ತು. ಆ ಮಿಡಿತೆಗಳ ಗುಂಪಿಗೆ ದೈವಿಕ ಆಧಿಕಾರವನ್ನು ಕೊಟ್ಟು, ಬಲವತ್ತಾದ ನ್ಯಾಯತೀರ್ಪಿನ ಸಂದೇಶಗಳನ್ನು ಸಾರುವುದರಲ್ಲಿ ಅವರಿದನ್ನು ಉಪಯೋಗಿಸಲಾರಂಭಿಸಿದಾಗ, ಹೊಗೆಯಂತಿರುವ ಮೇಲ್ಹೊದಿಕೆಯ ಮುಸುಕಿನ ಪುರಾವೆಯು ಧರ್ಮಭ್ರಷ್ಟ ಕ್ರೈಸ್ತಪ್ರಪಂಚದ ಮೇಲೆ ಹರಡಲು ಆರಂಭಗೊಂಡಿತು. ಕ್ರೈಸ್ತಪ್ರಪಂಚದ “ಸೂರ್ಯ”ನಿಗೆ—ಜ್ಞಾನೋದಯದ ಅವಳ ತೋರಿಕೆಗೆ—ಗ್ರಹಣ ಬಡಿಯಿತು, ಮತ್ತು ಕ್ರೈಸ್ತಪ್ರಪಂಚದ ದೇವರು “ವಾಯುಮಂಡಲದಲ್ಲಿ ಅಧಿಕಾರನಡಿಸುವ ಅಧಿಪತಿ” ಎಂದು ತೋರಿಸಲ್ಪಟ್ಟಂತೆ, “ವಾಯುಮಂಡಲವು” ದೈವಿಕ ನ್ಯಾಯತೀರ್ಪಿನ ಘೋಷಣೆಗಳಿಂದ ದಟ್ಟವಾಯಿತು.—ಎಫೆಸ 2:2; ಯೋಹಾನ 12:31; 1 ಯೋಹಾನ 5:19.

ಆ ಪೀಡಿಸುವ ಮಿಡಿತೆಗಳು!

9. ಮಿಡಿತೆಗಳು ಹೋರಾಟದ ಯಾವ ಅಪ್ಪಣೆಗಳನ್ನು ಪಡೆಯುತ್ತವೆ?

9 ಆ ಮಿಡಿತೆಗಳು ಹೋರಾಟದ ಯಾವ ಅಪ್ಪಣೆಗಳನ್ನು ಪಡೆದವು? ಯೋಹಾನನು ವರದಿಸುವುದು: “ಮತ್ತು ಭೂಮಿಯ ಮೇಲಿರುವ ಯಾವ ಸಸ್ಯಕ್ಕಾಗಲಿ ಯಾವ ಪಲ್ಯಕ್ಕಾಗಲಿ ಯಾವ ಮರಕ್ಕಾಗಲಿ ಕೇಡುಮಾಡದೆ ತಮ್ಮ ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು ಮಾತ್ರ ಕೇಡುಮಾಡಬೇಕೆಂದು ಅವುಗಳಿಗೆ ಹೇಳಲಾಯಿತು. ಇವರನ್ನು ಕೊಲ್ಲಬಾರದು, ಆದರೂ ಇವರು ಐದು ತಿಂಗಳುಗಳಲ್ಲಿ ಪೀಡಿಸಲ್ಪಡಬೇಕು ಎಂದು ಮಿಡಿತೆಗಳಿಗೆ ಅನುಮತಿಸಲಾಯಿತು ಮತ್ತು ಅವರಿಗುಂಟಾದ ಪೀಡೆಯು ಚೇಳು ಮನುಷ್ಯನನ್ನು ಹೊಡೆಯುವುದರಿಂದುಂಟಾಗುವ ಪೀಡೆಗೆ ಸಮಾನವಾಗಿತ್ತು. ಮತ್ತು ಆ ಕಾಲದಲ್ಲಿ ಮನುಷ್ಯರು ಮರಣವನ್ನು ಬಯಸುವರು, ಆದರೆ ಅದನ್ನು ಕಂಡುಕೊಳ್ಳುವುದೇ ಇಲ್ಲ, ಮತ್ತು ಅವರು ಸಾಯಬೇಕೆಂದು ಕೋರುವರು, ಆದರೆ ಮೃತ್ಯುವು ಅವರ ಬಳಿಯಿಂದ ಓಡಿಹೋಗುತ್ತಿರುವುದು.”—ಪ್ರಕಟನೆ 9:4-6, NW.

10. (ಎ) ಪ್ರಾಮುಖ್ಯವಾಗಿ ಯಾರ ವಿರುದ್ಧ ಬಾಧೆಯು ನಿರ್ದೇಶಿಸಲ್ಪಡುತ್ತದೆ ಮತ್ತು ಅವರ ಮೇಲೆ ಯಾವ ಪರಿಣಾಮದೊಂದಿಗೆ? (ಬಿ) ಯಾವ ರೀತಿಯ ಪೀಡೆಯು ಒಳಗೂಡಿದೆ? (ಪಾದಟಿಪ್ಪಣಿಯನ್ನು ಕೂಡ ನೋಡಿರಿ.)

10 ಈ ಬಾಧೆಯು ಮೊದಲು ಅವರಲ್ಲಿನ ಜನರ ಮತ್ತು ಪ್ರಮುಖರ—‘ಸಸ್ಯ ಮತ್ತು ಭೂಮಿಯ ಮರಗಳ’—ವಿರುದ್ಧ ನಿರ್ದೇಶಿಸಲ್ಪಟ್ಟಿಲ್ಲವೆಂಬುದನ್ನು ಗಮನಿಸಿರಿ. (ಹೋಲಿಸಿರಿ ಪ್ರಕಟನೆ 8:7.) ತಮ್ಮ ಹಣೆಗಳ ಮೇಲೆ ಮುದ್ರೆಯಿಲ್ಲದವರಾದ ವ್ಯಕ್ತಿಗಳನ್ನು ಹಾಗೂ ಮುದ್ರೆ ಒತ್ತಿಸಿಕೊಂಡವರೆಂದು ಹೇಳಿಕೊಂಡರೂ ಯಾರ ದಾಖಲೆಯು ಆ ವಾದವನ್ನು ಸುಳ್ಳಾಗಿಸುತ್ತದೋ ಆ ಕ್ರೈಸ್ತಪ್ರಪಂಚದಲ್ಲಿರುವವರನ್ನು ಮಾತ್ರ ಮಿಡಿತೆಗಳು ಪೀಡಿಸಬೇಕಿತ್ತು. (ಎಫೆಸ 1:13, 14) ಹೀಗೆ, ಈ ಆಧುನಿಕ ದಿನದ ಮಿಡಿತೆಗಳ ಪೀಡಿಸುವ ಹೇಳಿಕೆಗಳು ಮೊದಲು ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರ ವಿರುದ್ಧ ನಿರ್ದೇಶಿಸಲಾಗಿವೆ. ತಮ್ಮ ಹಿಂಡನ್ನು ಪರಲೋಕಕ್ಕೆ ನಡಿಸುವುದರಲ್ಲಿ ವಿಫಲರಾಗಿದ್ದಾರೆ ಮಾತ್ರವಲ್ಲ, ಅವರು ತಾವೇ ಅಲ್ಲಿಗೆ ಹೋಗುವುದಿಲ್ಲವೆಂದು ಬಹಿರಂಗವಾಗಿ ಘೋಷಿಸಲ್ಪಡುವುದನ್ನು ಆಲಿಸುವುದರಲ್ಲಿ, ಈ ಸ್ವ-ಪ್ರತಿಷ್ಠೆಯ ಜನರಿಗೆ ಎಷ್ಟು ಪೀಡೆಯಾಗಿರಬೇಕು! * ನಿಜ, ‘ಕುರುಡನು ಕುರುಡನಿಗೆ ದಾರಿ ತೋರಿಸಿದ’ ಒಂದು ವಿದ್ಯಮಾನ ಇದಾಗಿದೆ!—ಮತ್ತಾಯ 15:14.

11. (ಎ) ಮಿಡಿತೆಗಳಿಗೆ ದೇವರ ವಿರೋಧಿಗಳನ್ನು ಪೀಡಿಸಲು ಅಧಿಕಾರ ಎಷ್ಟರ ತನಕ ಕೊಡಲ್ಪಟ್ಟಿತ್ತು, ಮತ್ತು ಇದು ನಿಜವಾಗಿಯೂ ಸ್ವಲ್ಪ ಸಮಯವಾಗಿರುವುದಿಲ್ಲ ಯಾಕೆ? (ಬಿ) ಪೀಡನೆಯು ಎಷ್ಟು ತೀವ್ರವಾಗಿರುತ್ತದೆ?

11 ಪೀಡೆಯು ಐದು ತಿಂಗಳುಗಳ ವರೆಗೆ ಇರುತ್ತದೆ. ಅದು ಸಂಬಂಧಸೂಚಕವಾಗಿ ಸ್ವಲ್ಪ ಕಾಲವೂ? ಒಂದು ಅಕ್ಷರಾರ್ಥದ ಮಿಡಿತೆಯ ದೃಷ್ಟಿಯಿಂದ ಅಲ್ಲ. ಈ ಐದು ತಿಂಗಳು ಕೀಟಗಳಲ್ಲಿ ಒಂದರ ಸಾಧಾರಣ ಜೀವಮಾನ ಕಾಲವನ್ನು ವರ್ಣಿಸುತ್ತದೆ. ಆದುದರಿಂದ, ಎಷ್ಟರ ವರೆಗೆ ಅವುಗಳು ಜೀವದಿಂದಿರುತ್ತವೋ, ಅಷ್ಟರತನಕ ಅಧುನಿಕ ದಿನದ ಮಿಡಿತೆಗಳು ದೇವರ ವಿರೋಧಿಗಳನ್ನು ಪೀಡಿಸುತ್ತವೆ. ಇನ್ನೂ ಹೆಚ್ಚಾಗಿ, ಪೀಡೆಯು ಎಷ್ಟು ತೀವ್ರವಾಗಿರುತ್ತದೆಂದರೆ ಮನುಷ್ಯರು ಸಾಯಲು ಬಯಸುವರು. ನಿಜ, ಮಿಡಿತೆಗಳಿಂದ ಕಡಿಯಲ್ಪಡುವ ಯಾರೊಬ್ಬನು ಸ್ವತಃ ತನ್ನನ್ನು ಸಾಯಿಸಿಕೊಳ್ಳಲು ಪ್ರಯತ್ನಿಸಿದ ಯಾವುದೇ ದಾಖಲೆಯಿಲ್ಲ. ಆದರೆ ಈ ಅಭಿವ್ಯಕ್ತಿಯು ಪೀಡೆಯ ತೀವ್ರತೆಯನ್ನು ಚಿತ್ರಿಸಲು ನಮಗೆ ಸಹಾಯ ಮಾಡುತ್ತದೆ—ಚೇಳುಗಳ ಅವಿರತವಾದ ದಾಳಿಯೋಪಾದಿ. ಇದು, ಬಾಬೆಲಿನ ವಿಜಯಿಗಳಿಂದ ಚದರಿಸಲ್ಪಡುವ ಮತ್ತು ಜೀವಿಸುವುದಕ್ಕಿಂತ ಸಾಯುವುದೇ ಒಳ್ಳೇದು ಎಂದು ಇಷ್ಟಪಟ್ಟ ಆ ಅಪನಂಬಿಗಸ್ತ ಇಸ್ರಾಯೇಲ್ಯರ ದುಃಸ್ಥಿತಿಯನ್ನು ಯೆರೆಮೀಯನು ಮುನ್ನೋಡಿರುವುದಕ್ಕೆ ಸಮಾನವಾಗಿ ಇದೆ.—ಯೆರೆಮೀಯ 8:3; ಪ್ರಸಂಗಿ 4:2, 3 ಸಹ ನೋಡಿರಿ.

12. ಆತ್ಮಿಕ ರೀತಿಯಲ್ಲಿ ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರನ್ನು ಕೊಲ್ಲದೆ ಪೀಡಿಸುವ ಅನುಮತಿಯು ಮಿಡಿತೆಗಳಿಗೆ ಯಾಕೆ ಕೊಡಲ್ಪಟ್ಟಿದೆ?

12 ಆತ್ಮಿಕ ರೀತಿಯಲ್ಲಿ, ಅವರನ್ನು ಪೀಡಿಸಲು ಮತ್ತು ಕೊಲ್ಲದೆ ಇರುವಂತೆ ಯಾಕೆ ಅನುಮತಿಸಲ್ಪಟ್ಟಿದೆ? ಕ್ರೈಸ್ತಪ್ರಪಂಚದ ಸುಳ್ಳುಗಳನ್ನು ಮತ್ತು ಅವಳ ವಿಫಲತೆಗಳನ್ನು ಬಯಲುಗೊಳಿಸುವುದರಲ್ಲಿ ಇದು ಆರಂಭದ ವಿಪತ್ತು ಆಗಿದೆ, ಆದರೆ ಅನಂತರ ಕರ್ತನ ದಿನವು ಮುಂದುವರಿಯುವಷ್ಟಕ್ಕೆ ಅವರ ಮೃತಪ್ರಾಯ ಆತ್ಮಿಕ ಸ್ಥಿತಿಯು ಪೂರ್ಣವಾಗಿ ಪ್ರಕಾಶಿಸಲ್ಪಡಲಿರುವುದು. ಮನುಷ್ಯರಲ್ಲಿ ಮೂರರಲ್ಲಿ ಒಂದು ಭಾಗ ಕೊಲ್ಲಲ್ಪಡುವುದು ಎರಡನೆಯ ವಿಪತ್ತಿನ ಸಮಯದಲ್ಲಿಯೇ.—ಪ್ರಕಟನೆ 1:10; 9:12, 18; 11:14.

ಯುದ್ಧಕ್ಕೆ ಅಣಿಯಾಗಿರುವ ಮಿಡಿತೆಗಳು

13. ಮಿಡಿತೆಗಳಿಗೆ ಯಾವ ತೋರಿಕೆಯು ಇದೆ?

13 ಆ ಮಿಡಿತೆಗಳಿಗೆ ಎಂಥ ಗಮನಾರ್ಹ ತೋರಿಕೆಯಿದೆ! ಯೋಹಾನನು ಅದನ್ನು ವರ್ಣಿಸುತ್ತಾನೆ: “ಆ ಮಿಡಿತೆಗಳ ರೂಪವು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ರೂಪದಂತೆ ಇತ್ತು; ಆವುಗಳ ತಲೆಯ ಮೇಲೆ ಚಿನ್ನದಂತಹ ಕಿರೀಟಗಳಂತೆ ತೋರಿ ಬಂದ ಏನೋ ಇದ್ದವು; ಅವುಗಳ ಮುಖಗಳು ಪುರುಷರ ಮುಖಗಳ ಹಾಗೆ ಇದ್ದವು; ಆದರೆ ಸ್ತ್ರೀಯರ ಕೂದಲಿನಂತಿರುವ ಕೂದಲು ಇತ್ತು; ಅವುಗಳ ಹಲ್ಲುಗಳು ಸಿಂಹದ ಹಲ್ಲುಗಳ ಹಾಗಿದ್ದವು. ಅವುಗಳಿಗೆ ಕಬ್ಬಿಣದ ಕವಚಗಳಂತಿದ್ದ ಕವಚಗಳು ಇದ್ದವು; ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ಅನೇಕ ಕುದುರೆಗಳ ರಥಗಳ ಶಬ್ದದ ಹಾಗೆ ಇತ್ತು.”—ಪ್ರಕಟನೆ 9:7-9, NW. 

14. ಮಿಡಿತೆಗಳ ಕುರಿತಾದ ಯೋಹಾನನ ವಿವರಣೆಯು 1919 ರಲ್ಲಿ ಪುನಶ್ಚೈತನ್ಯಗೊಂಡ ಕ್ರೈಸ್ತರ ಗುಂಪಿಗೆ ಯಾಕೆ ಹೊಂದಿಕೆಯಾಗುತ್ತದೆ?

14 ಇದು 1919 ರಲ್ಲಿ ಪುನಶ್ಚೈತನ್ಯಗೊಂಡ ಕ್ರೈಸ್ತರ ನಿಷ್ಠಾವಂತ ಗುಂಪನ್ನು ಚೆನ್ನಾಗಿ ಚಿತ್ರಿಸುತ್ತದೆ. ಕುದುರೆಗಳಂತೆ, ಅವರು ಯುದ್ಧಕ್ಕೆ ತಯಾರಾಗಿದ್ದರು. ಅಪೊಸ್ತಲ ಪೌಲನಿಂದ ವರ್ಣಿಸಲ್ಪಟ್ಟಂತೆ ಸತ್ಯಕ್ಕೋಸ್ಕರ ಹೋರಾಡಲು ಉತ್ಸುಕರಾಗಿದ್ದರು. (ಎಫೆಸ 6:11-13; 2 ಕೊರಿಂಥ 10:4) ಅವುಗಳ ತಲೆಗಳ ಮೇಲೆ ಯೋಹಾನನು ಚಿನ್ನದ ಕಿರೀಟಗಳಂತೆ ತೋರುವ ಏನನ್ನೋ ನೋಡುತ್ತಾನೆ. ನಿಜವಾದ ಕಿರೀಟಗಳನ್ನು ಧರಿಸುವುದು ಅವರಿಗೆ ಯೋಗ್ಯವಾಗಿರುವುದಿಲ್ಲ ಯಾಕಂದರೆ ಅವರಿನ್ನೂ ಭೂಮಿಯಲ್ಲಿರುವಾಗ, ಆಳಲು ಆರಂಭಿಸುವುದಿಲ್ಲ. (1 ಕೊರಿಂಥ 4:8; ಪ್ರಕಟನೆ 20:4) ಆದರೆ 1919 ರಲ್ಲಿ ಅವರಿಗೆ ಆಗಲೇ ಒಂದು ರಾಜವೈಭವದ ತೋರಿಕೆಯಿತ್ತು. ಅವರು ರಾಜನ ಸಹೋದರರಾಗಿದ್ದರು ಮತ್ತು ಅವರು ಕೊನೆಯ ತನಕ ನಂಬಿಗಸ್ತರಾಗಿ ಮುಂದುವರಿದರೆ ಅವರ ಸ್ವರ್ಗೀಯ ಕಿರೀಟಗಳು ಅವರಿಗಾಗಿ ಕಾದಿರಿಸಲ್ಪಡುತ್ತವೆ.—2 ತಿಮೊಥೆಯ 4:8; 1 ಪೇತ್ರ 5:4.

15. ಮಿಡಿತೆಗಳ (ಎ) ಕಬ್ಬಿಣದ ಕವಚಗಳು, (ಬಿ) ಪುರುಷರಂತಹ ಮುಖಗಳು (ಸಿ) ಸ್ತ್ರೀಯರದ್ದಂತಹ ಕೂದಲುಗಳು (ಡಿ) ಸಿಂಹಕ್ಕಿರುವಂತಹ ಹಲ್ಲುಗಳು (ಇ) ಬಹಳ ಶಬ್ದವನ್ನು ಮಾಡುವುದು—ಇವುಗಳಿಂದ ಏನು ಸೂಚಿತವಾಗಿದೆ?

15 ದರ್ಶನದಲ್ಲಿ, ಮಿಡಿತೆಗಳಿಗೆ ಕಬ್ಬಿಣದ ಕವಚಗಳಿದ್ದವು, ಇದು ಮುರಿಯಲಸಾಧ್ಯವಾದ ನೀತಿಯನ್ನು ಸಂಕೇತಿಸುತ್ತವೆ. (ಎಫೆಸ 6:14-18) ಅವುಗಳಿಗೆ ಪುರುಷರ ಮುಖಗಳು ಸಹ ಇವೆ, ಪ್ರೀತಿಯ ದೇವರಾಗಿರುವವನ ಸ್ವರೂಪದಲ್ಲಿ ಮನುಷ್ಯನು ಉಂಟುಮಾಡಲ್ಪಟ್ಟದ್ದರಿಂದ ಈ ವೈಶಿಷ್ಟ್ಯವು ಪ್ರೀತಿಯ ಗುಣವನ್ನು ತೋರಿಸುತ್ತದೆ. (ಆದಿಕಾಂಡ 1:26; 1 ಯೋಹಾನ 4:16) ಅವುಗಳ ಕೂದಲು ಸ್ತ್ರೀಯರದ್ದರಂತೆ ಉದ್ದವಾಗಿವೆ, ಅದು ತಮ್ಮ ರಾಜನಿಗೆ, ಅಧೋಲೋಕದ ದೂತನಿಗೆ ಅಧೀನತೆಯನ್ನು ಯುಕ್ತವಾಗಿಯೇ ಚಿತ್ರಿಸುತ್ತದೆ. ಮತ್ತು ಅವರ ಹಲ್ಲುಗಳು ಸಿಂಹದ ಹಲ್ಲುಗಳನ್ನು ಹೋಲುತ್ತವೆ. ಸಿಂಹವು ಮಾಂಸವನ್ನು ಹರಿಯಲು ತನ್ನ ಹಲ್ಲುಗಳನ್ನು ಉಪಯೋಗಿಸುತ್ತದೆ. ಯೋಹಾನ ವರ್ಗವು 1919 ರಿಂದ ಇಂದಿನ ವರೆಗೂ ಗಟ್ಟಿಯಾದ ಆತ್ಮಿಕ ಆಹಾರವನ್ನು—ವಿಶೇಷವಾಗಿ “ಯೂದಾ ಕುಲದಲ್ಲಿ ಜನಿಸಿದ ಸಿಂಹ” ವಾದ ಯೇಸು ಕ್ರಿಸ್ತನಿಂದ ಆಳಲ್ಪಡುತ್ತಿರುವ ದೇವರ ರಾಜ್ಯದ ಕುರಿತಾದ ಸತ್ಯಗಳನ್ನು—ಪುನಃ ತೆಗೆದುಕೊಳ್ಳಲು ಶಕ್ತವಾಗಿದೆ. ಸಿಂಹವು ಹೇಗೆ ಧೈರ್ಯವನ್ನು ಸಂಕೇತಿಸುತ್ತದೋ, ಹಾಗೆಯೇ ಈ ಕಠಿನವಾಗಿ ಬಡಿಯುವ ಸಂದೇಶವನ್ನು ಜೀರ್ಣಿಸುವುದಕ್ಕೆ, ಅದನ್ನು ಪ್ರಕಾಶನಗಳಲ್ಲಿ ಮುಂತರಲಿಕ್ಕೆ ಮತ್ತು ಭೂಸುತ್ತಲೂ ಅದನ್ನು ಹಂಚುವುದಕ್ಕೆ ಮಹಾ ಧೈರ್ಯವು ಬೇಕಿತ್ತು. “ಅನೇಕ ಕುದುರೆಗಳ ರಥಗಳ ಶಬ್ದದ ಹಾಗೆ” ಈ ಲಾಕ್ಷಣಿಕ ಮಿಡಿತೆಗಳು ಬಹಳ ದೊಡ್ಡ ಶಬ್ದವನ್ನು ಮಾಡುತ್ತವೆ. ಪ್ರಥಮ ಶತಮಾನದ ಕ್ರೈಸ್ತರ ಮಾದರಿಯ ಬಳಿಕ, ಅವರು ಸುಮ್ಮನಿರಲು ಉದ್ದೇಶಿಸಿರುವುದಿಲ್ಲ.—1 ಕೊರಿಂಥ 11:7-15; ಪ್ರಕಟನೆ 5:5.

16. “ಮಿಡಿತೆಗಳಿಗೆ ಚೇಳುಗಳಂತೆ ಬಾಲಗಳೂ ಕೊಂಡಿಗಳೂ ಇವೆ” ಎಂಬುದರ ಮಹತ್ವವೇನು?

16 ಈ ಸಾರುವಿಕೆಯಲ್ಲಿ ನುಡಿಯಲ್ಪಡುವ ಶಬ್ದಗಳಿಗಿಂತ ಹೆಚ್ಚು ಒಳಗೂಡಿದೆ! “ಅಲ್ಲದೆ, ಅವುಗಳಿಗೆ ಚೇಳುಗಳಂತೆ ಬಾಲಗಳೂ ಕೊಂಡಿಗಳೂ ಇವೆ; ಮತ್ತು ಮನುಷ್ಯರಿಗೆ ಐದು ತಿಂಗಳುಗಳು ಕೇಡುಮಾಡುವ ಅವರ ಅಧಿಕಾರವಿದ್ದಿರುವುದು ಅವುಗಳ ಬಾಲಗಳಲ್ಲಿಯೇ.” (ಪ್ರಕಟನೆ 9:10, NW)  ಇದು ಯಾವ ಅರ್ಥವನ್ನು ಕೊಡಸಾಧ್ಯವಿದೆ? ಅವರು ತಮ್ಮ ರಾಜ್ಯದ ಕೆಲಸವನ್ನು ಮಾಡುತ್ತಿರುವಾಗ, ಯೆಹೋವನ ಸಾಕ್ಷಿಗಳು ಪ್ರಕಾಶನಗಳನ್ನು—ಪುಸ್ತಕಗಳನ್ನು, ಪತ್ರಿಕೆಗಳನ್ನು, ಬ್ರೋಷರ್‌ಗಳನ್ನು, ಸಮಯೋಚಿತ ಟ್ರ್ಯಾಕ್ಟ್‌ಗಳನ್ನು—ಅವರ ಹಿಂದೆ ಬಿಟ್ಟುಹೋಗುತ್ತಾರೆ. ಜನರು ತಮ್ಮ ಮನೆಗಳಲ್ಲಿ ಓದುವಂತೆ, ಇವು ದೇವರ ವಾಕ್ಯದ ಮೇಲೆ ಆಧಾರಿತವಾದ, ಅಧಿಕಾರಯುಕ್ತ ಹೇಳಿಕೆಗಳನ್ನು ಹೊಂದಿರುತ್ತವೆ, ಮತ್ತು ಅವು ಸಮೀಪಿಸುತ್ತಿರುವ ಯೆಹೋವನ ಮುಯ್ಯಿತೀರಿಸುವ ದಿನದ ಕುರಿತು ಎಚ್ಚರಿಸುವ ಕಾರಣ ಅವುಗಳಿಗೆ ಚೇಳಿಗಿರುವಂತೆ ಕೊಂಡಿಗಳು ಇವೆ. (ಯೆಶಾಯ 61:2) ಆತ್ಮಿಕ ಮಿಡಿತೆಗಳ ಆಧುನಿಕ ಸಂತತಿಯು ಅದರ ಜೀವಮಾನಕಾಲವನ್ನು ಮುಗಿಸಿ ಇಲ್ಲವಾಗುವ ಮುಂಚೆ, ಯೆಹೋವನ ನ್ಯಾಯತೀರ್ಪನ್ನು ಘೋಷಿಸುವ ಅದರ ದೈವಿಕ ನಿಯೋಗದ ಕೆಲಸವು—ಎಲ್ಲಾ ಹಟಮಾರಿ ದೇವನಿಂದಕರ ಕೇಡಿಗೆ—ಪೂರೈಸಲ್ಪಡುವುದು.

17. (ಎ) ಬೈಬಲ್‌ ವಿದ್ಯಾರ್ಥಿಗಳ 1919ರ ಅಧಿವೇಶನದಲ್ಲಿ ತಮ್ಮ ಸಾಕ್ಷಿನೀಡುವಿಕೆಯ ಕೊಂಡಿಯನ್ನು ತೀವ್ರಗೊಳಿಸುವ ಯಾವುದು ಪ್ರಕಟಿಸಲ್ಪಟ್ಟಿತು? (ಬಿ) ವೈದಿಕರು ಹೇಗೆ ಪೀಡಿಸಲ್ಪಟ್ಟಿದ್ದಾರೆ, ಮತ್ತು ಪ್ರತಿಕ್ರಿಯೆಯಲ್ಲಿ ಅವರು ಹೇಗೆ ಕ್ರಿಯೆಗೈದರು?

17 ತಮ್ಮ 1919ರ ಅಧಿವೇಶನದಲ್ಲಿ ದ ಗೋಲ್ಡನ್‌ ಏಜ್‌ ಎಂಬ ಹೊಸ ಪತ್ರಿಕೆಯು ಪ್ರಕಟಿಸಲ್ಪಟ್ಟಾಗ ಆ ಮಿಡಿತೆಯ ಗುಂಪು ಹರ್ಷದಿಂದ ತುಂಬಿತುಳುಕಿತು. ಅದು ಪಾಕ್ಷಿಕ ಪತ್ರಿಕೆಯಾಗಿದ್ದು, ಅವರ ಸೇವೆಯ ಕೊಂಡಿಯನ್ನು ತೀವ್ರಗೊಳಿಸಲಿಕ್ಕೋಸ್ಕರ ರೂಪಿಸಲ್ಪಟ್ಟಿತು. * ಸಪ್ಟಂಬರ 29, 1920ರ ಸಂಚಿಕೆ ನಂಬ್ರ 27, 1918-19ರ ಅವಧಿಯಲ್ಲಿ ಅಮೆರಿಕದಲ್ಲಿ ಬೈಬಲ್‌ ವಿದ್ಯಾರ್ಥಿಗಳನ್ನು ಹಿಂಸಿಸುವುದರಲ್ಲಿ ವೈದಿಕರ ಇಬ್ಬಗೆಯ ವ್ಯವಹಾರವನ್ನು ಬಯಲುಗೊಳಿಸಿತು. ರಾಜಕೀಯದಲ್ಲಿ ಅವರ ವಂಚನೆಯ ಪಾತ್ರವನ್ನು ಮತ್ತು ವಿಶೇಷವಾಗಿ ಕ್ಯಾತೊಲಿಕರ ಪುರೋಹಿತಶಾಹಿಗಳು ಫ್ಯಾಸಿಸಂ ಮತ್ತು ನಾಜಿ ನಿರಂಕುಶಪ್ರಭುಗಳೊಂದಿಗೆ ಒಪ್ಪಂದಮಾಡಿದವುಗಳನ್ನು ಬಯಲುಪಡಿಸುತ್ತಾ, ದ ಗೋಲ್ಡನ್‌ ಏಜ್‌ ಚುಚ್ಚುವ ಹೆಚ್ಚಿನ ಲೇಖನಗಳ ಮತ್ತು ವ್ಯಂಗ್ಯಚಿತ್ರಗಳ ಮೂಲಕ 1920 ಗಳ ಮತ್ತು 1930 ಗಳಲ್ಲಿಲ್ಲಾ ವೈದಿಕರನ್ನು ಪೀಡಿಸಿತು. ಪ್ರತಿಕ್ರಿಯೆಯಾಗಿ, ವೈದಿಕರು ‘ಕಾನೂನಿನ ಮೂಲಕ ಕೇಡನ್ನು ಕಲ್ಪಿಸಿದರು’ ಮತ್ತು ಯೆಹೋವನ ಜನರ ವಿರುದ್ಧ ದೊಂಬಿಗಲಭೆಗಳನ್ನು ಸಂಘಟಿಸಿದರು.—ಕೀರ್ತನೆ 94:20, ಕಿಂಗ್‌ ಜೇಮ್ಸ್‌ ವರ್ಷನ್‌.

ಲೋಕದ ಧುರೀಣರು ಎಚ್ಚರಿಸಲ್ಪಟ್ಟದ್ದು

18. ಮಿಡಿತೆಗಳಿಗೆ ಮಾಡಲು ಯಾವ ಕೆಲಸವಿತ್ತು, ಮತ್ತು ಐದನೆಯ ತುತೂರಿಯ ಊದುವಿಕೆಗೆ ಪ್ರತಿಕ್ರಿಯೆಯಲ್ಲಿ ಏನು ಸಂಭವಿಸಿತು?

18 ಆಧುನಿಕ ದಿನದ ಮಿಡಿತೆಗಳಿಗೆ ಕೆಲಸವೊಂದನ್ನು ಮಾಡಲಿಕ್ಕಿತ್ತು. ರಾಜ್ಯದ ಸುವಾರ್ತೆಯನ್ನು ಸಾರಬೇಕಿತ್ತು. ದೋಷಗಳನ್ನು ಬಹಿರಂಗಗೊಳಿಸಬೇಕಿತ್ತು. ನಷ್ಟಗೊಂಡ ಕುರಿಗಳನ್ನು ಕಂಡುಹಿಡಿಯಬೇಕಿತ್ತು. ಮಿಡಿತೆಗಳು ಈ ಕೆಲಸಗಳನ್ನು ಮಾಡುತ್ತಾ ಮುಂದುವರಿದಷ್ಟಕ್ಕೆ ಲೋಕವು, ಎದ್ದುಕುಳಿತು ಇದನ್ನು ಗಮನಿಸುವಂತೆ ಬಲಾತ್ಕರಿಸಲ್ಪಟ್ಟಿತು. ದೇವದೂತರ ತುತೂರಿಯ ಘೋಷಗಳಿಗೆ ವಿಧೇಯತೆಯಲ್ಲಿ, ಯೆಹೋವನ ಪ್ರತಿಕೂಲ ನ್ಯಾಯತೀರ್ಪಿಗೆ ಕ್ರೈಸ್ತಪ್ರಪಂಚವು ಅರ್ಹವೆಂಬುದನ್ನು ಯೋಹಾನ ವರ್ಗವು ಬಯಲುಪಡಿಸುವುದನ್ನು ಮುಂದುವರಿಸಿದೆ. ಐದನೆಯ ತುತೂರಿಗೆ ಪ್ರತಿಕ್ರಿಯೆಯಲ್ಲಿ, ಈ ನ್ಯಾಯತೀರ್ಪುಗಳ ಒಂದು ನಿರ್ದಿಷ್ಟ ರೂಪವು ಮೇ 25-31, 1926 ರಲ್ಲಿ ಇಂಗ್ಲೆಂಡಿನ ಲಂಡನ್‌ನಲ್ಲಿ ಜರುಗಿದ ಬೈಬಲ್‌ ವಿದ್ಯಾರ್ಥಿಗಳ ಅಧಿವೇಶನವೊಂದರಲ್ಲಿ ಒತ್ತಿಹೇಳಲಾಯಿತು. ಇದರಲ್ಲಿ ಒಂದು ವೈಶಿಷ್ಟ್ಯದ ಠರಾವು, “ಲೋಕದ ಅಧಿಕಾರಿಗಳಿಗೆ ಒಂದು ಸಾಕ್ಷ್ಯ” ಮತ್ತು ರಾಯಲ್‌ ಆಲ್ಬರ್ಟ್‌ ಹಾಲ್‌ನಲ್ಲಿ “ಲೋಕ ಶಕ್ತಿಗಳು ತತ್ತರಿಸುತ್ತಾ ಇರುವ ಕಾರಣ—ಪರಿಹಾರ” ಎಂಬ ಬಹಿರಂಗ ಭಾಷಣವು ಪ್ರಧಾನವಾಗಿತ್ತು, ಇವುಗಳ ಪೂರ್ಣ ಮೂಲಪಾಠವು ಮರುದಿನ ಲಂಡನಿನ ಒಂದು ಪ್ರಮುಖ ಪತ್ರಿಕೆಯಲ್ಲಿ ಛಾಪಿಸಲ್ಪಟ್ಟಿತು. ಅನಂತರ, ಮಿಡಿತೆಯ ಗುಂಪು ಕರಪತ್ರವಾಗಿ ಆ ಠರಾವಿನ 5 ಕೋಟಿ ಪ್ರತಿಗಳನ್ನು ಲೋಕವ್ಯಾಪಕವಾಗಿ ಹಂಚಿತು—ವೈದಿಕರಿಗೆ ಖಂಡಿತವಾಗಿಯೂ ಒಂದು ಪೀಡೆ! ವರ್ಷಗಳ ಅನಂತರ, ಇಂಗ್ಲೆಂಡಿನಲ್ಲಿ ಜನರು ಈ ಚುಚ್ಚುವ ಬಯಲುಗೊಳಿಸುವಿಕೆಯ ಕುರಿತು ಇನ್ನೂ ಮಾತಾಡುತ್ತಿದ್ದರು.

19. ಸಾಂಕೇತಿಕ ಮಿಡಿತೆಗಳು ಯಾವ ಹೆಚ್ಚಿನ ಹೋರಾಟದ ಸಾಧನವನ್ನು ಪಡೆದರು, ಮತ್ತು ಲಂಡನ್‌ ಸಾರ್ವಜನಿಕ ಪ್ರಕಟನೆಯ ಬಗ್ಗೆ ಅದಕ್ಕೆ ಹೇಳಲು ಏನು ಇತ್ತು?

19 ಈ ಅಧಿವೇಶನದಲ್ಲಿ, ಸಾಂಕೇತಿಕ ಮಿಡಿತೆಗಳು ಹೆಚ್ಚಿನ ಹೋರಾಡುವ ಸಾಧನವನ್ನು, ವಿಶೇಷವಾಗಿ ಡಿಲಿವರನ್ಸ್‌ ಎಂಬ ಶೀರ್ಷಿಕೆಯ ಒಂದು ಹೊಸ ಪುಸ್ತಕವನ್ನು ಪಡೆದವು. ‘ಗಂಡುಮಗು’ ಸರಕಾರವು—ಕ್ರಿಸ್ತನ ಸ್ವರ್ಗೀಯ ರಾಜ್ಯವು—1914 ರಲ್ಲಿ ಜನಿಸಿತೆಂದು ರುಜುಪಡಿಸುವ ಚಿಹ್ನೆಯ ಶಾಸ್ತ್ರೀಯ ಚರ್ಚೆಯು ಅದರಲ್ಲಿ ಒಳಗೂಡಿತ್ತು. (ಮತ್ತಾಯ 24:3-14; ಪ್ರಕಟನೆ 12:1-10) ಆಮೇಲೆ, 1917 ರಲ್ಲಿ ಲಂಡನಿನಲ್ಲಿ ಪ್ರಕಾಶಿಸಲ್ಪಟ್ಟ ಮತ್ತು “ಲೋಕದ ಮಹಾ ಸೌವಾರ್ತಿಕರು” ಎಂದು ವರ್ಣಿಸಲ್ಪಟ್ಟ ಎಂಟು ವೈದಿಕರು ಸಹಿಮಾಡಿದ ಸಾರ್ವಜನಿಕ ಪ್ರಕಟನೆಯನ್ನು ಅದು ಉಲ್ಲೇಖಿಸಿತು. ಅವರು ಪ್ರಮುಖ ಪ್ರಾಟೆಸ್ಟಂಟ್‌ ವರ್ಗದವರನ್ನು—ಬ್ಯಾಪ್ಟಿಸ್ಟ್‌, ಕಾಂಗ್ರಿಗೇಷನಲ್‌, ಪ್ರೆಸ್‌ಬಿಟೆರಿಯನ್‌, ಇಪಿಸ್ಕೊಪೇಲಿಯನ್‌, ಮತ್ತು ಮೆತೊಡಿಸ್ಟ್‌—ಪ್ರತಿನಿಧಿಸಿದ್ದರು. ಈ ಸಾರ್ವಜನಿಕ ಪ್ರಕಟನೆಯು “ಆಧುನಿಕ ವಿಷಮಸ್ಥಿತಿಯು ಅನ್ಯಜನಾಂಗಗಳ ಕಾಲದ ಅಂತ್ಯದ ಸಮಯದ ಕಡೆಗೆ ನಿರ್ದೇಶಿಸುತ್ತದೆ” ಮತ್ತು “ಕರ್ತನ ಪ್ರತ್ಯಕ್ಷತೆಯನ್ನು ಯಾವುದೇ ಕ್ಷಣದಲ್ಲಿ ನಿರೀಕ್ಷಿಸಬಹುದು” ಎಂದು ಘೋಷಿಸಿತು. ಹೌದು, ಯೇಸುವಿನ ಸಾನ್ನಿಧ್ಯದ ಸೂಚನೆಯನ್ನು ಆ ವೈದಿಕರು ಗ್ರಹಿಸಿದರು! ಆದರೆ ಅದರ ಕುರಿತು ಏನನ್ನಾದರೂ ಮಾಡಲು ಅವರು ಬಯಸಿದರೋ? ಡಿಲಿವರನ್ಸ್‌ ಪುಸ್ತಕವು ನಮಗನ್ನುವುದು: “ಸಾರ್ವಜನಿಕ ಪ್ರಕಟನೆಗೆ ಸಹಿಮಾಡಿದವರು ತಾವೇ ಕಾಲಕ್ರಮೇಣ ಅದರ ನಿರಾಕರಣೆ ಮಾಡಿದರು ಮತ್ತು ನಾವು ಲೋಕಾಂತ್ಯದ ಸಮಯದಲ್ಲಿ ಮತ್ತು ಕರ್ತನ ಎರಡನೆಯ ಪ್ರತ್ಯಕ್ಷತೆಯ ದಿನದಲ್ಲಿ ಜೀವಿಸುತ್ತಿದ್ದೇವೆಂಬ ಪುರಾವೆಯನ್ನು ನಿರಾಕರಿಸಿದರೆಂಬುದು ವಿಷಯಗಳ ಅತಿ ಗಮನಾರ್ಹ ಭಾಗವಾಗಿದೆ.”

20. (ಎ) ಮಿಡಿತೆಗಳ ಗುಂಪು ಮತ್ತು ಅವುಗಳ ರಾಜನ ಸಂಬಂಧದಲ್ಲಿ ವೈದಿಕರು ಯಾವ ಆಯ್ಕೆಯನ್ನು ಮಾಡಿದ್ದಾರೆ? (ಬಿ) ಮಿಡಿತೆಯ ಗುಂಪಿನ ಮೇಲೆ ಆಳುವವನು ಯಾರೆಂದು ಯೋಹಾನನು ಹೇಳುತ್ತಾನೆ, ಮತ್ತು ಅವನ ಹೆಸರೇನು?

20 ಒಳಬರುತ್ತಿರುವ ದೇವರ ರಾಜ್ಯವನ್ನು ಪ್ರಕಟಿಸುವ ಬದಲು ಸೈತಾನನ ಲೋಕದೊಂದಿಗೆ ಉಳಿಯಲು ಕ್ರೈಸ್ತಪ್ರಪಂಚದ ವೈದಿಕರು ಆರಿಸಿದ್ದಾರೆ. ಮಿಡಿತೆಯ ಗುಂಪಿನೊಂದಿಗೆ ಮತ್ತು ಅವರ ರಾಜನೊಂದಿಗೆ ಯಾವುದೇ ಭಾಗವಾಗಲು ಅವರಿಗೆ ಇಷ್ಟವಿಲ್ಲ, ಅವನ ಕುರಿತಾಗಿ ಯೋಹಾನನು ಈಗ ಅವಲೋಕಿಸುವುದು: “ಅವರ ಮೇಲೆ ಒಬ್ಬ ರಾಜನು, ಅಧೋಲೋಕದ ದೇವದೂತನು ಅವರಿಗಿದ್ದಾನೆ. ಹೀಬ್ರುವಿನಲ್ಲಿ ಅವನ ಹೆಸರು ಅಬ್ಯಾಡನ್‌ [ಅರ್ಥ “ಸಂಹಾರ”] ಆದರೆ ಗ್ರೀಕಿನಲ್ಲಿ ಅಪಾಲ್ಯನ್‌ [ಅರ್ಥ “ಸಂಹಾರಕ”] ಎಂಬ ಹೆಸರು ಅವನಿಗಿದೆ.” (ಪ್ರಕಟನೆ 9:11, NW)  “ಅಧೋಲೋಕದ ದೂತನು” ಮತ್ತು “ಸಂಹಾರಕ” ನಾಗಿ ಯೇಸುವು ನಿಜವಾಗಿಯೂ ಕ್ರೈಸ್ತಪ್ರಪಂಚದ ಮೇಲೆ ಬಾಧಿಸುವ ವಿಪತ್ತನ್ನು ಬಿಡುಗಡೆಗೊಳಿಸುತ್ತಾನೆ. ಆದರೆ ಇನ್ನೂ ಹೆಚ್ಚು ಹಿಂಬಾಲಿಸಲಿದೆ!

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 2 ಯೋವೇಲ 2:4, 5, 7ನ್ನು (ಇಲ್ಲಿ ಕೀಟಗಳನ್ನು ಕುದುರೆಗಳಂತೆ, ಜನರಂತೆ, ಮತ್ತು ಪುರುಷರಂತೆ ಮತ್ತು ರಥವು ಮಾಡುವ ಶಬ್ದದಂತೆ ವರ್ಣಿಸಲಾಗಿದೆ) ಪ್ರಕಟನೆ 9:7-9 ರೊಂದಿಗೆ ಹೋಲಿಸಿರಿ; ಯೋವೇಲ 2:6, 10ನ್ನು ಸಹ (ಕೀಟದ ಬಾಧೆಯ ವೇದನಾಮಯ ಪರಿಣಾಮವನ್ನು ವರ್ಣಿಸುವ) ಪ್ರಕಟನೆ 9:2, 5ಕ್ಕೆ ಹೋಲಿಸಿರಿ.

^ ಪ್ಯಾರ. 4 ದ ವಾಚ್‌ಟವರ್‌ನ ದಶಂಬರ 1, 1961ರ ಸಂಚಿಕೆಯಲ್ಲಿ ಬಂದ “ನ್ಯಾಯತೀರ್ಪಿನ ತಗ್ಗಿನಲ್ಲಿ ಜನಾಂಗಗಳ ವಿರುದ್ಧ ಐಕ್ಯರು” ಎಂಬ ಲೇಖನವನ್ನು ನೋಡಿರಿ.

^ ಪ್ಯಾರ. 8 ಅಧೋಲೋಕವು ಯಾವುದೋ ಒಂದು ರೀತಿಯ ನರಕಾಗ್ನಿಯೋ ಎಂಬಂತೆ, ಅಧೋಲೋಕದಲ್ಲಿ ಬೆಂಕಿ ಇತ್ತು ಎಂಬುದನ್ನು ರುಜುಪಡಿಸಲು ಈ ವಚನವನ್ನು ಉಪಯೋಗಿಸಲು ಸಾಧ್ಯವಿಲ್ಲ ಎಂಬದನ್ನು ಗಮನಿಸಿರಿ. ದಟ್ಟವಾದ ಹೊಗೆ “ಯಂತಿರುವ” ದನ್ನು ಯಾ ಒಂದು ದೊಡ್ಡ ಕುಲುಮೆಯಿಂದ ಬರುವ ಹೊಗೆಗೆ ಸಮಾನವಾಗಿರುವುದನ್ನು ತಾನು ಕಂಡೆನು ಎಂದು ಯೋಹಾನನು ಹೇಳುತ್ತಾನೆ. (ಪ್ರಕಟನೆ 9:2) ಅಧೋಲೋಕದಲ್ಲಿ ನೈಜ ಅಗ್ನಿಜ್ವಾಲೆಗಳನ್ನು ನೋಡಿದ್ದನ್ನು ಅವನು ವರದಿಸುವುದಿಲ್ಲ.

^ ಪ್ಯಾರ. 10 ಇಲ್ಲಿ ಉಪಯೋಗಿಸಲಾದ ಗ್ರೀಕ್‌ ಪದದ ಮೂಲವು ಬಾ-ಸ-ನಿ’ಸೊ. ಇದನ್ನು ಅಕ್ಷರಾರ್ಥ ಪೀಡೆಯಾಗಿ ಕೆಲವೊಮ್ಮೆ ಉಪಯೋಗಿಸಲಾಗಿದೆ, ಆದಾಗ್ಯೂ ಅದನ್ನು ಮಾನಸಿಕ ಪೀಡೆಗೂ ಸಹ ಉಪಯೋಗಿಸಸಾಧ್ಯವಿದೆ. ಉದಾಹರಣೆಗೆ, 2 ಪೇತ್ರ 2:8 ರಲ್ಲಿ ಲೋಟನು, ಸೊದೋಮಿನಲ್ಲಿ ನೋಡಿದ ದುಷ್ಕೃತ್ಯದಿಂದಾಗಿ “ತನ್ನ ನೀತಿಯುಳ್ಳ ಆತ್ಮದಲ್ಲಿ ಬಹಳವಾಗಿ ಕರಕರೆಗೊಂಡನು” ಎಂದು ನಾವು ಓದುತ್ತೇವೆ. ಅಪೊಸ್ತಲಿಕ ಶಕದ ಧಾರ್ಮಿಕ ಮುಖಂಡರು ಮಾನಸಿಕ ಪೀಡೆಯನ್ನು ಅನುಭವಿಸಿದರೆಂಬದು ನಿಜ, ಆದರೆ ಒಂದು ತೀರ ಭಿನ್ನ ಕಾರಣಕ್ಕಾಗಿ.

^ ಪ್ಯಾರ. 17 ಈ ಪತ್ರಿಕೆಗೆ, 1937 ರಲ್ಲಿ ಕಾನ್ಸಲೇಷನ್‌ ಎಂದೂ, 1946 ರಲ್ಲಿ ಅವೇಕ್‌! ಎಂದೂ ಹೊಸ ಹೆಸರು ಕೊಡಲ್ಪಟ್ಟು, ಈಗ ಅದು ತಿಂಗಳಿಗೆರಡು ಬಾರಿ ಪ್ರಕಾಶಿಸಲ್ಪಡುತ್ತದೆ.

[ಅಧ್ಯಯನ ಪ್ರಶ್ನೆಗಳು]

[Picture on page 143]

ಐದನೆಯ ತುತೂರಿಯ ಊದುವಿಕೆಯು ಮೂರು ವಿಪತ್ತುಗಳಲ್ಲಿ ಮೊದಲನೆಯದ್ದನ್ನು ಆರಂಭಿಸುತ್ತದೆ

[Picture on page 146]

ನಿನ್ನ ಬಾಣಗಳು ರಾಜವಿರೋಧಿಗಳ ಎದೆಯಲ್ಲಿ ತೀವ್ರವಾಗಿ ತೂರುತ್ತವೆ. (ಕೀರ್ತನೆ 45:5) ಈ ಶೀರ್ಷಿಕೆಯೊಂದಿಗೆ ತೋರಿಬಂದ ಮೇಲಿನ ವ್ಯಂಗ್ಯಚಿತ್ರವು 1930 ಗಳಲ್ಲಿ ಪ್ರಕಾಶಿಸಲ್ಪಟ್ಟ, “ದೇವರ ಮುದ್ರೆಯಿಲ್ಲದವರನ್ನು” ಚುಚ್ಚಿದ ಅನೇಕ ಚಿತ್ರಗಳಲ್ಲಿ ಪ್ರತಿನಿಧಿರೂಪದ್ದಾಗಿದೆ

[Picture on page 147]

ರಾಯಲ್‌ ಆಲ್ಬರ್ಟ್‌ ಹಾಲ್‌, ಇಲ್ಲಿ ಡಿಲಿವರನ್ಸ್‌ ಪುಸ್ತಕವು ಬಿಡುಗಡೆಗೊಂಡಿತು ಮತ್ತು “ಲೋಕದ ಧುರೀಣರಿಗೆ ಒಂದು ಸಾಕ್ಷ್ಯ” ಎಂಬ ಠರಾವನ್ನು ಅಂಗೀಕರಿಸಲಾಯಿತು