ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋಹಾನನು ಮಹಿಮಾಭರಿತ ಯೇಸುವನ್ನು ನೋಡುತ್ತಾನೆ

ಯೋಹಾನನು ಮಹಿಮಾಭರಿತ ಯೇಸುವನ್ನು ನೋಡುತ್ತಾನೆ

ಅಧ್ಯಾಯ 5

ಯೋಹಾನನು ಮಹಿಮಾಭರಿತ ಯೇಸುವನ್ನು ನೋಡುತ್ತಾನೆ

ದರ್ಶನ 1—ಪ್ರಕಟನೆ 1:10—3:22

ವಿಷಯ: ಯೇಸುವು ಭೂಮಿಯ ಮೇಲಿನ ಆತ್ಮಿಕ ಇಸ್ರಾಯೇಲನ್ನು ಪರೀಕ್ಷಿಸುತ್ತಾನೆ ಮತ್ತು ಹುಮ್ಮಸದ ಪ್ರೋತ್ಸಾಹವನ್ನು ಕೊಡುತ್ತಾನೆ

ನೆರವೇರಿಕೆಯ ಸಮಯ: ಕರ್ತನ ದಿನದ ಈ ವೈಶಿಷ್ಟ್ಯವು 1914 ರಿಂದ ಆರಂಭಿಸಿ ನಂಬಿಗಸ್ತ ಅಭಿಷಿಕ್ತರಲ್ಲಿ ಕೊನೆಯವನು ಮೃತಿಹೊಂದಿ, ಪುನರುತ್ಥಾನಗೊಳ್ಳುವ ತನಕ ಮುಂದರಿಯುತ್ತದೆ

1. ಮೊದಲನೆಯ ದರ್ಶನವು ಹೇಗೆ ಸಾದರಪಡಿಸಲ್ಪಡುತ್ತದೆ, ಮತ್ತು ಅದರ ನಿಜ ಅನ್ವಯದ ಸಮಯವನ್ನು ಯೋಹಾನನು ಹೇಗೆ ಸೂಚಿಸಿದನು?

ಪ್ರಕಟನೆ ಪುಸ್ತಕದ ಮೊದಲನೆಯ ದರ್ಶನವು ಅಧ್ಯಾಯ 1, ವಚನ 10 ರಿಂದ ಆರಂಭಗೊಳ್ಳುತ್ತದೆ. ಪ್ರಕಟನೆಯ ಇತರ ದರ್ಶನಗಳಂತೆ, ಈ ದರ್ಶನವು ಒಂದು ಅಸಾಮಾನ್ಯ ರೀತಿಯ ಘೋಷಣೆಯನ್ನು ಯೋಹಾನನು ಕೇಳುವ ಇಲ್ಲವೆ ನೋಡುವ ಮೂಲಕ ಪ್ರಸ್ತಾಪಿಸಲ್ಪಡುತ್ತದೆ. (ಪ್ರಕಟನೆ 1:10, 12; 4:1; 6:1) ಈ ಒಂದನೆಯ ದರ್ಶನವನ್ನು, ಯಾವುದನ್ನು ಯೋಹಾನನಿಗೆ ಸಮಕಾಲೀನವಾಗಿದ್ದ ಏಳು ಸಭೆಗಳಿಗೆ ಸಂಬೋಧಿಸಲ್ಪಟ್ಟಿವೆಯೋ ಅಂತಹ ಒಂದನೆಯ ಶತಮಾನದ ಚೌಕಟ್ಟಿನಲ್ಲಿ ಸಾದರ ಪಡಿಸಲಾಗಿದೆ. ಆದರೆ ಅದರ ನಿಜಾನ್ವಯದ ಸಮಯದ ಕುರಿತಾಗಿ, ಯೋಹಾನನು ಇದನ್ನು ಹೇಳುವುದರಿಂದ ಸೂಚಿಸುತ್ತಾನೆ: “ದೇವರಾತ್ಮವಶನಾಗಿ ನಾನು ಕರ್ತನ ದಿನದಲ್ಲಿ ಬಂದವನಾದೆನು.” (ಪ್ರಕಟನೆ 1:10ಎ, NW) ಈ “ದಿನವು” ಯಾವಾಗ? ಈ ಪ್ರಚಂಡ ಕ್ಷೋಭೆಯ 20 ನೆಯ ಶತಮಾನದ ನಾಟಕೀಯ ಘಟನೆಗಳೊಂದಿಗೆ ಅದಕ್ಕೇನಾದರೂ ಸಂಬಂಧವಿದೆಯೇ? ಹಾಗಿರುವದಾದರೆ, ನಾವು ಆ ಪ್ರವಾದನೆಗೆ ಅತಿ ನಿಕಟವಾಗಿ ಗಮನ ಕೊಡತಕ್ಕದ್ದು, ಯಾಕಂದರೆ ಅದು ನಮ್ಮ ಜೀವಗಳನ್ನೇ—ನಮ್ಮ ಪಾರಾಗುವಿಕೆಯನ್ನು ಸಹ—ಬಾಧಿಸುತ್ತದೆ.—1 ಥೆಸಲೊನೀಕ 5:20, 21.

ಕರ್ತನ ದಿನದಲ್ಲಿ

2. ಕರ್ತನ ದಿನವು ಆರಂಭಗೊಂಡದ್ದು ಯಾವಾಗ, ಮತ್ತು ಅದು ಯಾವಾಗ ಅಂತ್ಯಗೊಳ್ಳುವುದು?

2 ಪ್ರಕಟನೆಯ ನೆರವೇರಿಕೆಯನ್ನು ಇದು ಸಮಯದ ಯಾವ ಚೌಕಟ್ಟಿನಲ್ಲಿ ಇಡುತ್ತದೆ? ಒಳ್ಳೇದು, ಕರ್ತನ ದಿನ ಅಂದರೇನು? ಅಪೊಸ್ತಲ ಪೌಲನು ಇದನ್ನು ನ್ಯಾಯತೀರ್ಪಿನ ಮತ್ತು ದೈವಿಕ ವಾಗ್ದಾನಗಳ ನೆರವೇರಿಕೆಯ ಸಮಯವೆಂದು ಸೂಚಿಸಿರುತ್ತಾನೆ. (1 ಕೊರಿಂಥ 1:8; 2 ಕೊರಿಂಥ 1:14; ಫಿಲಿಪ್ಪಿ 1:6, 10; 2:16) ಆ “ದಿನವು” ಆಗಮಿಸುವುದರೊಂದಿಗೆ, ಯೆಹೋವನ ಮಹಾ ಉದ್ದೇಶಗಳು ಪ್ರಗತಿಪರವಾಗಿಯೂ ಮತ್ತು ಜಯಪ್ರದವಾಗಿಯೂ ಅವುಗಳ ಪರಮಾವಧಿಗೆ ನಡಿಸಲ್ಪಡುವವು. ಆ “ದಿನವು” ಯೇಸುವನ್ನು ಸ್ವರ್ಗೀಯ ಅರಸನಾಗಿ ಪಟ್ಟಕ್ಕೇರಿಸುವುದರೊಂದಿಗೆ ಆರಂಭಗೊಳ್ಳುವುದು. ಸೈತಾನನ ಲೋಕದ ಮೇಲೆ ಯೇಸುವು ನ್ಯಾಯತೀರ್ಪನ್ನು ಜಾರಿಗೊಳಿಸಿದ ನಂತರ ಕೂಡ, ಪ್ರಮೋದವನದ ಸ್ಥಾಪನೆ ಮತ್ತು ಮಾನವಕುಲದ ಪರಿಪೂರ್ಣತೆಗೇರಿಸಲ್ಪಡುವಿಕೆಯೊಂದಿಗೆ, ಕೊನೆಯಲ್ಲಿ ಯೇಸುವು “ಅವನ ದೇವರು ಮತ್ತು ತಂದೆಯು ಆಗಿರುವವನಿಗೆ ರಾಜ್ಯವನ್ನು ಒಪ್ಪಿಸಿಕೊಡುವ” ತನಕ ಕರ್ತನ ದಿನವು ಮುಂದರಿಯುವುದು.—1 ಕೊರಿಂಥ 15:24-26, NW; ಪ್ರಕಟನೆ 6:1, 2.

3. (ಎ) “ಏಳು ಕಾಲಗಳ” ದಾನಿಯೇಲನ ಪ್ರವಾದನೆಯು ಕರ್ತನ ದಿನವು ಆರಂಭಗೊಂಡದ್ದು ಯಾವಾಗ ಎಂದು ಕಾಣಲು ನಮಗೆ ಹೇಗೆ ಸಹಾಯ ಮಾಡುತ್ತದೆ? (ಬಿ) ಕರ್ತನ ದಿನದ ಆರಂಭವು 1914 ರಲ್ಲಾಯಿತು ಎಂದು ಭೂಮಿಯ ಮೇಲಿನ ಯಾವ ಘಟನೆಗಳು ಸ್ಥಿರೀಕರಿಸುತ್ತವೆ?

3 ಕರ್ತನ ದಿನವು ಯಾವಾಗ ಆರಂಭಗೊಳ್ಳುತ್ತದೆ ಎಂದು ತಿಳಿಯಲು ಬೈಬಲಿನ ಇತರ ಪ್ರವಾದನೆಗಳ ನೆರವೇರಿಕೆಗಳು ನಮಗೆ ಸಹಾಯ ಮಾಡುತ್ತವೆ. ಉದಾಹರಣೆಗೆ, ಅರಸನಾದ ದಾವೀದನ ಮನೆತನದ ಅಧಿಕಾರವು ಕಡಿಯಲ್ಪಡುವುದರ ಕುರಿತು ದಾನಿಯೇಲನು ವರ್ಣಿಸಿರುತ್ತಾನೆ; “ಏಳು ಕಾಲಗಳ” ಅನಂತರ, “ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿದ್ದಾನೆಂದು ಮತ್ತು ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ” ಎಂದು ತಿಳಿದು ಬರುವುದು. (ದಾನಿಯೇಲ 4:23, 24, 31, 32, NW) ಆ ಪ್ರವಾದನೆಯ ಪ್ರಧಾನ ನೆರವೇರಿಕೆಯು ಯೆಹೂದ ರಾಜ್ಯದ ಧ್ವಂಸದೊಂದಿಗೆ ಆರಂಭಗೊಂಡಿತು, ಇದು ಸಾ.ಶ.ಪೂ. 607ರ ಅಕ್ಟೋಬರದೊಳಗೆ ಸಂಪೂರ್ಣಗೊಂಡಿತು ಎಂದು ಬೈಬಲ್‌ ರುಜುವಾತಿನಿಂದ ಸೂಚಿಸಲ್ಪಡುತ್ತದೆ. ಮೂರುವರೆ ಕಾಲಗಳು ಅಂದರೆ 1,260 ದಿನಗಳಾಗುತ್ತವೆಂದು ಪ್ರಕಟನೆ 12:6, 14 ತೋರಿಸುತ್ತದೆ; ಆದುದರಿಂದ, ಏಳು ಕಾಲಗಳು (ಆ ಸಂಖ್ಯೆಯ ಎರಡು ಪಟ್ಟು) 2,520 ದಿನಗಳಾಗತಕ್ಕದ್ದು. “ವರುಷ ಒಂದಕ್ಕೆ ಒಂದು ದಿನ” ದಂತೆ ಲೆಕ್ಕಿಸುತ್ತಾ, ಆ “ಏಳು ಕಾಲಗಳ” ಅವಧಿಯು 2,520 ವರ್ಷಗಳಾಗುವುದಕ್ಕೆ ನಾವು ಬಂದು ಮುಟ್ಟುತ್ತೇವೆ. (ಯೆಹೆಜ್ಕೇಲ 4:6) ಆದುದರಿಂದ, ಕ್ರಿಸ್ತ ಯೇಸು ತನ್ನ ಸ್ವರ್ಗೀಯ ಆಳಿಕ್ವೆಯನ್ನು 1914ರ ಕೊನೆಯ ಭಾಗದಲ್ಲಿ ಆರಂಭಿಸಿದನು. ಆ ವರ್ಷದಲ್ಲಿ ಸ್ಫೋಟಿಸಿದ ಮೊದಲನೆಯ ಲೋಕ ಯುದ್ಧವು, “ಸಂಕಟಗಳ ವೇದನೆಗಳ ಆರಂಭವನ್ನು” ಗುರುತಿಸಿತು, ಇದು ಇಂದಿನ ತನಕ ಮಾನವ ಕುಲವನ್ನು ಪೀಡಿಸುತ್ತಾ ಇದೆ. ಈ ರಕ್ತ-ಕಲುಷಿತ ಭೂಮಿಯ ಮೇಲಿನ 1914 ರಿಂದಾದ ಘಟನೆಗಳು, ಯೇಸುವಿನ ಸಾನ್ನಿಧ್ಯದ “ದಿನ”ದ ಆರಂಭವು ಆ ವರ್ಷದಲ್ಲಿ ಆಗಿದೆ ಎಂದು ಎಷ್ಟೊಂದು ಗಮನಾರ್ಹವಾಗಿ ಸ್ಥಿರೀಕರಿಸಿವೆ!—ಮತ್ತಾಯ 24:3-14, NW. *

4. (ಎ) ಮೊದಲನೆಯ ದರ್ಶನವು ಯಾವಾಗ ನೆರವೇರಿತು ಎಂದು ಪ್ರಕಟನೆಯ ಮಾತುಗಳು ತಾವೇ ಏನನ್ನು ಸೂಚಿಸುತ್ತವೆ? (ಬಿ) ಮೊದಲನೆಯ ದರ್ಶನದ ನೆರವೇರಿಕೆಯು ಯಾವಾಗ ಅಂತ್ಯಗೊಳ್ಳುತ್ತದೆ?

4 ಆದಕಾರಣ, ಈ ಮೊದಲನೆಯ ದರ್ಶನವು ಮತ್ತು ಅದರಲ್ಲಿ ಒಳಗೂಡಿರುವ ಬುದ್ಧಿವಾದವು 1914 ರಿಂದ ಮುಂದಕ್ಕೆ, ಕರ್ತನ ದಿನಕ್ಕಾಗಿ ಇರುತ್ತದೆ. ಅನಂತರ ಪ್ರಕಟನೆಯಲ್ಲಿ, ದೇವರ ಸತ್ಯ ಮತ್ತು ನೀತಿಯ ನ್ಯಾಯ ತೀರ್ಪುಗಳ ಜಾರಿಗೊಳಿಸುವಿಕೆಗಳನ್ನು—ಈ ಘಟನೆಗಳಲ್ಲಿ ಕರ್ತನಾದ ಯೇಸುವು ವಿಶಿಷ್ಟವಾದ ಪಾತ್ರವನ್ನು ಆಡುತ್ತಾನೆ—ದಾಖಲೆಯು ವರ್ಣಿಸುವಾಗ, ಈ ಸಮಯವು ವಾಸ್ತವಾಂಶಗಳಿಂದ ಬೆಂಬಲಿಸಲ್ಪಟ್ಟಿದೆ. (ಪ್ರಕಟನೆ 11:18; 16:15; 17:1; 19:2, 11) ಮೊದಲನೆಯ ದರ್ಶನವು 1914 ರಲ್ಲಿ ನೆರವೇರಲು ಆರಂಭಿಸಲ್ಪಟ್ಟಿದ್ದರೆ, ಅದು ಯಾವಾಗ ಅಂತ್ಯಗೊಳ್ಳುವುದು? ಸಂದೇಶಗಳು ತಾವೇ ತೋರಿಸುವ ಪ್ರಕಾರ, ಸಂಬೋಧಿಸಲ್ಪಟ್ಟ ಸಂಸ್ಥೆಯು ಭೂಮಿಯ ಮೇಲಿರುವ ಅಭಿಷಿಕ್ತರ ದೇವರ ಸಭೆಯಾಗಿದೆ. ಹಾಗಾದರೆ, ಆ ಅಭಿಷಿಕ್ತ ಸಭೆಯ ಕೊನೆಯ ನಂಬಿಗಸ್ತ ಸದಸ್ಯನು ಮರಣ ಹೊಂದಿ, ಸ್ವರ್ಗೀಯ ಜೀವಿತಕ್ಕೆ ಎಬ್ಬಿಸಲ್ಪಟ್ಟಾಗ ಈ ದರ್ಶನದ ಮೊದಲನೆಯ ನೆರವೇರಿಕೆಯು ಸಮಾಪ್ತಿಗೊಳ್ಳುವುದು. ಆದಾಗ್ಯೂ, ಐಹಿಕ ಬೇರೆ ಕುರಿಗಳಿಗೆ ಆಶೀರ್ವಾದಗಳೊಟ್ಟಿಗೆ, ಕರ್ತನ ದಿನವು ಯೇಸು ಕ್ರಿಸ್ತನ ಸಾವಿರ ವರ್ಷದ ಆಳಿಕ್ವೆಯ ಕೊನೆಯ ತನಕ ಮುಂದರಿಯಲಿರುವುದು.—ಯೋಹಾನ 10:16; ಪ್ರಕಟನೆ 20:4, 5.

5. (ಎ) ಯೋಹಾನನು ಏನು ಮಾಡುವಂತೆ ಒಂದು ಶಬ್ದವು ಕರೆಕೊಟ್ಟಿತು? (ಬಿ) ಅವುಗಳಿಗೆ ಸುರುಳಿಯನ್ನು ಕಳುಹಿಸಲು, “ಏಳು ಸಭೆಗಳು” ಇರುವ ನೆಲೆಯು ಅನುಕೂಲದ್ದಾಗಿತ್ತು ಯಾಕೆ?

5 ಈ ಮೊದಲನೆಯ ದರ್ಶನದಲ್ಲಿ, ಯೋಹಾನನು ಬೇರೆ ಯಾವುದನ್ನೂ ನೋಡುವ ಮೊದಲು, ಏನನ್ನೋ ಆಲಿಸುತ್ತಾನೆ: “ಮತ್ತು ನನ್ನ ಹಿಂದುಗಡೆ ತುತೂರಿಯ ಶಬ್ದದಂತಿರುವ ಮಹಾ ಶಬ್ದವನ್ನು ನಾನು ಕೇಳಿದೆನು. ಅದು ಅಂದದ್ದು: ‘ನೀನು ನೋಡುವುದನ್ನು ಸುರುಳಿಯೊಂದರಲ್ಲಿ ಬರೆದು, ಅದನ್ನು ಎಫೆಸದಲ್ಲಿರುವ ಮತ್ತು ಸ್ಮುರ್ನದಲ್ಲಿರುವ ಮತ್ತು ಪೆರ್ಗಮಮ್‌ನಲ್ಲಿರುವ ಮತ್ತು ಥುವತೈರದಲ್ಲಿರುವ ಮತ್ತು ಸಾರ್ದಿಸ್‌ನಲ್ಲಿರುವ ಮತ್ತು ಫಿಲದೆಲ್ಫಿಯದಲ್ಲಿರುವ ಮತ್ತು ಲವೊದಿಕೀಯದಲ್ಲಿರುವ ಏಳು ಸಭೆಗಳಿಗೆ ಕಳುಹಿಸು.’” (ಪ್ರಕಟನೆ 1:10ಬಿ, 11, NW) ಅಧಿಕಾರಯುಕ್ತ ಮತ್ತು ಆಜ್ಞಾಧಾರಕವಾದ ಒಂದು ತುತೂರಿಯ ಕರೆಯ ಪ್ರಕಾರ, “ಏಳು ಸಭೆಗಳಿಗೆ” ಬರೆಯುವಂತೆ ಶಬ್ದವೊಂದು ಯೋಹಾನನಿಗೆ ಕರೆ ನೀಡುತ್ತದೆ. ಅವನು ಸಂದೇಶಗಳ ಒಂದು ಶ್ರೇಣಿಯನ್ನು ಪಡೆಯಲಿಕ್ಕಿದ್ದನು ಮತ್ತು ಅವನು ನೋಡುವ ಮತ್ತು ಆಲಿಸುವ ಸಂಗತಿಗಳನ್ನು ಪ್ರಕಟಿಸಬೇಕಿತ್ತು. ಇಲ್ಲಿ ಉಲ್ಲೇಖಿಸಲ್ಪಟ್ಟ ಸಭೆಗಳು ಯೋಹಾನನ ದಿನಗಳಲ್ಲಿ ನಿಜವಾಗಿ ಅಸ್ತಿತ್ವದಲ್ಲಿದ್ದವು ಎಂಬುದನ್ನು ಗಮನಿಸಿರಿ. ಅವೆಲ್ಲವೂ ಏಶ್ಯಾ ಮೈನರ್‌ನಲ್ಲಿ ಇದ್ದು, ಪ್ಯಾಟ್ಮಸ್‌ ದ್ವೀಪದಿಂದ ಸಮುದ್ರದ ಆ ಪಕ್ಕದಲ್ಲಿದ್ದವು. ಆ ಪ್ರದೇಶದಲ್ಲಿದ್ದ ಅತ್ಯುತ್ತಮವಾಗಿರುವ ರೋಮನ್‌ ರಸ್ತೆಗಳಿಂದಾಗಿ ಒಂದರಿಂದ ಇನ್ನೊಂದಕ್ಕೆ ಸುಲಭವಾಗಿ ಸಂಪರ್ಕಿಸಬಹುದಾಗಿತ್ತು. ಒಂದು ಸಭೆಯಿಂದ ಇನ್ನೊಂದಕ್ಕೆ ಸುರುಳಿಯನ್ನು ಕೊಂಡೊಯ್ಯಲು ಸಂದೇಶವಾಹಕನೊಬ್ಬನಿಗೆ ಯಾವುದೇ ಕಷ್ಟವಿರುತ್ತಿರಲಿಲ್ಲ. ಈ ಏಳು ಸಭೆಗಳು ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಸರ್ಕಿಟಿನ ಒಂದು ವಿಭಾಗವನ್ನು ಹೋಲುತ್ತವೆ.

6. (ಎ) “ಈಗ ನಡೆಯುತ್ತಿರುವ ಸಂಗತಿಗಳು” ಎನ್ನುವುದರ ಅರ್ಥವೇನು? (ಬಿ) ಇಂದು ಅಭಿಷಿಕ್ತ ಕ್ರೈಸ್ತರ ಸಭೆಗಳಲ್ಲಿ ಇರುವ ಪರಿಸ್ಥಿತಿಗಳು ಯೋಹಾನನ ದಿನಗಳಲ್ಲಿ ಇರುವವುಗಳಿಗೆ ಸಮಾನವಾಗಿರತಕ್ಕದ್ದು ಎಂಬ ವಿಷಯದಲ್ಲಿ ನಾವು ಯಾಕೆ ಖಾತ್ರಿಯಿಂದಿರಬಹುದು?

6 ಪ್ರಕಟನೆಯಲ್ಲಿನ ಹೆಚ್ಚಿನ ಪ್ರವಾದನೆಗಳು ಯೋಹಾನನ ಸಮಯದ ಅನಂತರ ನೆರವೇರಲಿಕ್ಕಿದ್ದವು. ಅವುಗಳು “ಮುಂದೆ ಆಗಬೇಕಾದವುಗಳನ್ನೂ” ನಿರ್ದೇಶಿಸಿದವು. ಆದರೆ ಏಳು ಸಭೆಗಳಿಗೆ ಕೊಡಲ್ಪಟ್ಟ ಬುದ್ಧಿವಾದವು “ಈಗ ನಡೆಯುತ್ತಿರುವ ಸಂಗತಿಗಳ,” ಆ ಸಮಯದಲ್ಲಿ ಏಳು ಸಭೆಗಳಲ್ಲಿ ನಿಜವಾಗಿಯೂ ಪ್ರಚಲಿತದಲ್ಲಿದ್ದ ಸನ್ನಿವೇಶಗಳ ಕುರಿತು ವ್ಯವಹರಿಸುತ್ತದೆ. ಆ ಏಳು ಸಭೆಗಳಲ್ಲಿರುವ ಮತ್ತು ಆ ಸಮಯದಲ್ಲಿರುವ ಇತರ ಅಭಿಷಿಕ್ತ ಕ್ರೈಸ್ತರ ಎಲ್ಲಾ ಸಭೆಗಳಲ್ಲಿರುವ ನಂಬಿಗಸ್ತ ನೇಮಿತ ಹಿರಿಯರಿಗೆ ಸಂದೇಶಗಳು ಅಮೂಲ್ಯ ಸಹಾಯಕಗಳಾಗಿದ್ದವು. * ಕರ್ತನ ದಿನದಲ್ಲಿ ದರ್ಶನದ ಪ್ರಮುಖ ಅನ್ವಯಿಸುವಿಕೆಯಿರುವುದರಿಂದ, ಯೇಸುವು ಏನನ್ನು ಹೇಳುತ್ತಾನೋ ಅದು ನಮ್ಮ ಸ್ವಂತ ದಿನಗಳ ಅಭಿಷಿಕ್ತ ಕ್ರೈಸ್ತರ ಸಭೆಯಲ್ಲಿ ತದ್ರೀತಿಯ ಪರಿಸ್ಥಿತಿಗಳನ್ನು ನಿರೀಕ್ಷಿಸಬಹುದಾಗಿದೆ ಎಂಬುದಕ್ಕೆ ಎಚ್ಚರಿಕೆಯನ್ನು ಕೊಡುತ್ತದೆ.—ಪ್ರಕಟನೆ 1:10, 19.

7. ಈ ಮೊದಲನೆಯ ದರ್ಶನದಲ್ಲಿ ಯೋಹಾನನು ಯಾರನ್ನು ನೋಡುತ್ತಾನೆ, ಮತ್ತು ಇಂದು ಅದು ನಮಗೆ ಅಷ್ಟು ಪ್ರಾಮುಖ್ಯ ಮತ್ತು ರೋಮಾಂಚಗೊಳಿಸುವದಾಗಿದೆ ಯಾಕೆ?

7 ಈ ಪ್ರಥಮ ದರ್ಶನದಲ್ಲಿ, ಯೋಹಾನನು ಪ್ರಜ್ವಲಿಸುವ ಕರ್ತನಾದ ಯೇಸು ಕ್ರಿಸ್ತನನ್ನು ಅವನ ಸ್ವರ್ಗೀಯ ಮಹಿಮೆಯಲ್ಲಿ ನೋಡುತ್ತಾನೆ. ಪರಲೋಕದಿಂದ ನಿಯುಕ್ತನಾದ ಕರ್ತನ ಮಹಾ ದಿನಕ್ಕೆ ಸಂಬಂಧಪಟ್ಟ ಪ್ರವಾದನೆಗಳ ಪುಸ್ತಕವೊಂದರಲ್ಲಿ ಅದಕ್ಕಿಂತಲೂ ಹೆಚ್ಚು ಸಮಂಜಸತೆಯದ್ದು ಬೇರೇನು ಇರಸಾಧ್ಯವಿದೆ? ಮತ್ತು ಆ ಸಮಯಾವಧಿಯಲ್ಲಿ ಈಗ ಜೀವಿಸುವ ಮತ್ತು ಅವನ ಪ್ರತಿಯೊಂದು ಆಜ್ಞೆಗಳಿಗೆ ಜಾಗ್ರತೆಯ ಲಕ್ಷ್ಯವನ್ನು ಕೊಡುವ ನಮಗೆ, ಇದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದದ್ದು ಏನು ಇರಬಲ್ಲದು? ಇನ್ನೂ ಹೆಚ್ಚಾಗಿ, 1,900 ವರ್ಷಗಳ ಹಿಂದೆ, ಸೈತಾನನಿಂದ ತರಲ್ಪಟ್ಟ ಎಲ್ಲಾ ತರಹದ ಶೋಧನೆಗಳನ್ನು ಮತ್ತು ಹಿಂಸೆಗಳನ್ನು ತಾಳಿಕೊಂಡ, ಮತ್ತು ಅವನ “ಹಿಮ್ಮಡಿಯು” ಕಚ್ಚಲ್ಪಟ್ಟಾಗ, ಯಾತನಾಮಯ ಮರಣದ ಬಾಧೆಯನ್ನು ಅನುಭವಿಸಿದ ಈ ಮೆಸ್ಸೀಯ ಸಂಬಂಧಿತ ಸಂತಾನವು, ಈಗ ಸ್ವರ್ಗದಲ್ಲಿ ಜೀವಂತನಾಗಿದ್ದು, ದೇವರ ಮಹಾ ಉದ್ದೇಶವನ್ನು ಅದರ ವಿಜಯದ ಸಮಾಪ್ತಿಗೆ ತರಲು ಶಕ್ತಿ ಪಡೆದಿದ್ದಾನೆ ಎಂಬ ಆಶ್ವಾಸನೆಯು ಯೆಹೋವನ ಸಾರ್ವಭೌಮತೆಯ ಬೆಂಬಲಿಗರನ್ನು ಎಷ್ಟು ಪುಳಕಿತಗೊಳಿಸುವಂತಹದ್ದಾಗಿರುತ್ತದೆ!—ಆದಿಕಾಂಡ 3:15.

8. ಯಾವ ಕಾರ್ಯಾಚರಣೆಗಾಗಿ ಯೇಸುವು ಈಗ ಸಿದ್ಧನಾಗಿ ನಿಂತಿದ್ದಾನೆ?

8 ಸಿಂಹಾಸನಕ್ಕೇರಿದ ರಾಜನೋಪಾದಿ ಕಾರ್ಯಾಚರಣೆಯನ್ನು ಗೈಯಲು ಯೇಸುವು ಈಗ ಸಿದ್ಧನಾಗಿ ನಿಂತಿದ್ದಾನೆ ಎಂಬುದು ವ್ಯಕ್ತ. ಈ ಹಳೆಯ, ದುಷ್ಟ ವಿಷಯಗಳ ವ್ಯವಸ್ಥೆ ಮತ್ತು ಅದರ ಪೈಶಾಚಿಕ ದೇವರಾದ ಸೈತಾನನ ವಿರುದ್ಧವಾಗಿ ಯೆಹೋವನ ಕೊನೆಯ ನ್ಯಾಯತೀರ್ಪುಗಳನ್ನು ಜಾರಿಗೊಳಿಸುವ ಯೆಹೋವನ ಮುಖ್ಯ ಕಾರ್ಯ ನಿರ್ವಾಹಕನೋಪಾದಿ ಅವನನ್ನು ನೇಮಕ ಮಾಡಲಾಗಿದೆ. ತನ್ನ ಅಭಿಷಿಕ್ತರ ಸಭೆಯವರನ್ನು ಮತ್ತು ಅವರ ಸಹವಾಸಿಗಳ ಮಹಾ ಸಮೂಹವನ್ನು ನ್ಯಾಯತೀರ್ಪು ಮಾಡುತ್ತಾ ಇರುವಾಗ, ಅದೇ ಸಮಯದಲ್ಲಿ ಲೋಕದ ತೀರ್ಪನ್ನೂ ಮಾಡಲು ಅವನು ಸಿದ್ಧನಾಗಿರುವನು.—ಪ್ರಕಟನೆ 7:4, 9; ಅ. ಕೃತ್ಯಗಳು 17:31.

9. (ಎ) ಚಿನ್ನದ ದೀಪಸ್ತಂಭಗಳ ನಡುವೆ ಮಹಿಮಾಭರಿತ ಯೇಸು ಕ್ರಿಸ್ತನು ನಿಂತಿರುವುದನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ? (ಬಿ) ದೇವಾಲಯದಂತಹ ಸನ್ನಿವೇಶದಿಂದ ಮತ್ತು ಯೇಸುವು ಧರಿಸಿದ ವಸ್ತ್ರದಿಂದ ಏನು ಸೂಚಿಸಲ್ಪಟ್ಟಿದೆ? (ಸಿ) ಅವನ ಚಿನ್ನದ ನಡುಪಟ್ಟಿಯ ವೈಶಿಷ್ಟ್ಯ ಏನು?

9 ಯೋಹಾನನು ಮಹಾ ಶಬ್ದದ ಧ್ವನಿಯೆಡೆಗೆ ತಿರುಗುತ್ತಾನೆ, ಮತ್ತು ಅವನು ಅಲ್ಲಿ ನೋಡಿದ್ದು: “ನನ್ನ ಸಂಗಡ ಮಾತಾಡುತ್ತಿದ್ದ ಶಬ್ದವನ್ನು ನೋಡಲು ನಾನು ತಿರುಗಿದೆನು, ಮತ್ತು ತಿರುಗಿದಾಗ, ನಾನು ಏಳು ಚಿನ್ನದ ದೀಪಸ್ತಂಭಗಳನ್ನು ನೋಡಿದೆನು.” (ಪ್ರಕಟನೆ 1:12, NW) ಅನಂತರ, ಈ ಏಳು ದೀಪಸ್ತಂಭಗಳು ಏನನ್ನು ಸೂಚಿಸುತ್ತವೆ ಎಂದು ಯೋಹಾನನು ತಿಳಿಯುತ್ತಾನೆ. ಆದರೆ ಅವನ ಗಮನವನ್ನು ಸೆಳೆದದ್ದು ದೀಪಸ್ತಂಭಗಳ ಮಧ್ಯೆ ಇದ್ದ ವ್ಯಕ್ತಿಯೇ. ಅಲ್ಲಿ “ಆ ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯ ಕುಮಾರನಂತೆ ಇರುವ ಒಬ್ಬನು, ತನ್ನ ಪಾದಗಳ ತನಕ ತಾಗುವ ನಿಲುವಂಗಿಯನ್ನು ತೊಟ್ಟುಕೊಂಡಿದ್ದು, ಚಿನ್ನದ ಪಟ್ಟಿಯಿಂದ ಎದೆಯನ್ನು ಕಟ್ಟಿಕೊಂಡಿದ್ದವನಾಗಿ ಇದ್ದನು.” (ಪ್ರಕಟನೆ 1:13, NW) “ಮನುಷ್ಯ ಕುಮಾರನಾದ” ಯೇಸುವು, ಇಲ್ಲಿ ಭಯಭೀತ ಸಾಕ್ಷಿಯಾಗಿದ್ದ ಯೋಹಾನನ ಮುಂದೆ ತನ್ನನ್ನು ಒಬ್ಬ ಭವ್ಯವಾದ, ಪ್ರಜ್ವಲಿಸುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ. ಉರಿಯುತ್ತಿರುವ ಚಿನ್ನದ ದೀಪಸ್ತಂಭಗಳ ನಡುವೆ ಬೆಳಗುವ ಮಹಿಮೆಯಿಂದ ಅವನು ಕಾಣಿಸಿಕೊಳ್ಳುತ್ತಾನೆ. ಈ ದೇವಾಲಯದಂತಹ ಸನ್ನಿವೇಶವು, ಯೇಸುವು ಯೆಹೋವನ ಶ್ರೇಷ್ಠ ಮಹಾ ಯಾಜಕನ ಪಾತ್ರದಲ್ಲಿ, ನ್ಯಾಯ ತೀರ್ಪು ಮಾಡುವ ಶಕ್ತಿಯಿಂದ ಹಾಜರಾಗಿದ್ದಾನೆ ಎಂಬ ವಾಸ್ತವಾಂಶವನ್ನು, ಯೋಹಾನನ ಮೇಲೆ ಅಚ್ಚೊತ್ತುತ್ತದೆ. (ಇಬ್ರಿಯ 4:14; 7:21-25) ಅವನ ಉದ್ದವಾದ, ಮನತಟ್ಟುವ ನಿಲುವಂಗಿಯು ಅವನ ಯಾಜಕತ್ವದ ಹುದ್ದೆಯನ್ನು ದೃಢೀಕರಿಸುತ್ತದೆ. ಪ್ರಾಚೀನ ಕಾಲದ ಯೆಹೂದಿ ಮಹಾ ಯಾಜಕನೋಪಾದಿ, ಅವನು ಒಂದು ನಡುಪಟ್ಟಿಯನ್ನು—ಅವನ ಹೃದಯವನ್ನು ಆವರಿಸುವಂತಹ ಒಂದು ಚಿನ್ನದ ಪಟ್ಟಿಯನ್ನು ಎದೆಯ ಮೇಲೆ—ಧರಿಸಿರುತ್ತಾನೆ. ಯೆಹೋವ ದೇವರಿಂದ ದೊರಕಿದ ಅವನ ದೈವಿಕ ನಿಯೋಗವನ್ನು ಅವನು ಪೂರ್ಣ ಹೃದಯದಿಂದ ಪೂರೈಸುವನು ಎಂದು ಇದು ಸೂಚಿಸುತ್ತದೆ.—ವಿಮೋಚನಕಾಂಡ 28:8, 30; ಇಬ್ರಿಯ 8:1, 2.

10. (ಎ) ಯೇಸುವಿನ ಹಿಮದಂತಹ ಬಿಳಿ ಕೂದಲು ಮತ್ತು ಉರಿಯುವ ಕಣ್ಣುಗಳಿಂದ ಏನು ಸೂಚಿತವಾಗಿದೆ? (ಬಿ) ಹೊಳೆಯುವ ತಾಮ್ರದಂತಹ ಯೇಸುವಿನ ಪಾದಗಳ ತಾತ್ಪರ್ಯವೇನು?

10 ಯೋಹಾನನ ವರ್ಣನೆಯು ಮುಂದರಿಯುವುದು: “ಆತನ ತಲೆ ಮತ್ತು ಆತನ ಕೂದಲು ಬಿಳೀ ಉಣ್ಣೆಯಂತೆಯೂ, ಹಿಮದಂತೆಯೂ ಬೆಳ್ಳಗಿತ್ತು, ಮತ್ತು ಅವನ ಕಣ್ಣುಗಳು ಬೆಂಕಿಯ ಜ್ವಾಲೆಯಂತೆ ಇದ್ದವು.” (ಪ್ರಕಟನೆ 1:14, NW) ಅವನ ಹಿಮದಂತಹ ಬೆಳ್ಳಗಿನ ಕೂದಲು ದೀರ್ಘಾಯುಸ್ಸಿನ ಕಾರಣದಿಂದ ಬಂದ ವಿವೇಕವನ್ನು ಸೂಚಿಸುತ್ತದೆ. (ಹೋಲಿಸಿರಿ ಜ್ಞಾನೋಕ್ತಿ 16:31.) ಮತ್ತು ಅವನ ಬೆಂಕಿಯಂತಹ ಕಣ್ಣುಗಳು, ಅವನು ಶೋಧಿಸುವಾಗ, ಪರೀಕ್ಷಿಸುವಾಗ, ಇಲ್ಲವೇ ಧರ್ಮಕ್ರೋಧವನ್ನು ವ್ಯಕ್ತ ಪಡಿಸುವಾಗ, ಅವನು ಕುಶಾಗ್ರನೂ, ಎಚ್ಚರವುಳ್ಳವನೂ ಆಗಿರುತ್ತಾನೆ ಎಂದು ತೋರಿಸುತ್ತದೆ. ಯೇಸುವಿನ ಪಾದಗಳು ಕೂಡ ಯೋಹಾನನ ಗಮನವನ್ನು ಸೆಳೆಯುತ್ತವೆ: “ಮತ್ತು ಅವನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆ ಇದ್ದವು; ಅವನ ಧ್ವನಿಯು ಜಲಪ್ರವಾಹದ ಘೋಷದಂತೆ ಇತ್ತು.” (ಪ್ರಕಟನೆ 1:15, NW) ದರ್ಶನದಲ್ಲಿ, ಯೇಸುವಿನ ಪಾದಗಳು ತಾಮ್ರದಂತೆ ಹೊಳೆಯುತ್ತಿದ್ದವು, ಶುಭ್ರವಾಗಿದ್ದವು—ಯೆಹೋವ ದೇವರ ಸಮ್ಮುಖದಲ್ಲಿ ಹುರುಪಿನಿಂದ ನಡೆಯುವವನಿಗೂ ಉತ್ತಮ ನಿಲುವಿರುವವನಿಗೂ ಯೋಗ್ಯವಾಗಿ ಅವು ಇದ್ದವು. ಇನ್ನೂ ಹೆಚ್ಚಾಗಿ, ಬೈಬಲಿನಲ್ಲಿ, ದೈವಿಕ ಸಂಗತಿಗಳನ್ನು ಚಿನ್ನದ ಮೂಲಕ ಆಗಾಗ್ಗೆ ಚಿತ್ರಿಸಲ್ಪಟ್ಟರೆ, ಮಾನವರನ್ನು ಕೆಲವೊಮ್ಮೆ ತಾಮ್ರದಿಂದ ಪ್ರತಿನಿಧಿಸಲಾಗಿದೆ. * ಆದುದರಿಂದ ಉತ್ತಮ ತಾಮ್ರದಂತೆ ಯೇಸುವಿನ ಹೊಳೆಯುವ ಪಾದಗಳು, ಅವನು ಸುವಾರ್ತೆಯನ್ನು ಸಾರುತ್ತಾ ಈ ಭೂಮಿಯ ಮೇಲೆ ನಡೆದಾಡಿದಾಗ, ಅವನ ಪಾದಗಳು ಎಷ್ಟು “ಅಂದವಾಗಿದ್ದವು” ಎಂಬದನ್ನು ನೆನಪಿಗೆ ತರುತ್ತದೆ.—ಯೆಶಾಯ 52:7; ರೋಮಾಪುರ 10:15.

11. (ಎ) ಯೇಸುವಿನ ಮಹಿಮಾಯುಕ್ತ ಪಾದಗಳು ನಮಗೆ ಏನನ್ನು ನೆನಪಿಸುತ್ತವೆ? (ಬಿ) ಯೇಸುವಿನ ಧ್ವನಿಯು “ಜಲಪ್ರವಾಹಗಳ ಘೋಷದಂತೆ ಇತ್ತು” ಎಂಬ ವಾಸ್ತವತೆಯಿಂದ ಏನು ಸೂಚಿಸಲ್ಪಟ್ಟಿದೆ?

11 ಒಬ್ಬ ಪರಿಪೂರ್ಣ ಮಾನವನೋಪಾದಿ, ಖಂಡಿತವಾಗಿಯೂ ದೇವದೂತರಿಗೆ ಮತ್ತು ಮನುಷ್ಯರಿಗೆ ತೋರಬಹುದಾದ ಒಂದು ಪ್ರಕಾಶವು ಯೇಸುವಿಗೆ ಇತ್ತು. (ಯೋಹಾನ 1:14) ಅವನ ಮಹಿಮಾಭರಿತ ಪಾದಗಳು ಕೂಡ, ಅವನು ಮಹಾ ಯಾಜಕನಾಗಿರುವ ಯೆಹೋವನ ಸಂಸ್ಥೆಯಲ್ಲಿ ಪವಿತ್ರ ನೆಲದಲ್ಲಿ ನಡೆಯುತ್ತಾ ಇದ್ದಾನೆ ಎಂಬುದನ್ನು ನಮ್ಮ ನೆನಪಿಗೆ ತರುತ್ತವೆ. (ಹೋಲಿಸಿರಿ ವಿಮೋಚನಕಾಂಡ 3:5.) ಇನ್ನು ಹೆಚ್ಚಾಗಿ, ಅವನ ಧ್ವನಿಯು ಧುಮುಕುವ ದೊಡ್ಡ ಜಲಪಾತದಂತೆ ಗುಡುಗಿ ಪ್ರತಿಧ್ವನಿಸುತ್ತದೆ. ಇದು ಪ್ರಭಾವಕಾರಿಯಾಗಿದೆ, ಭಯವನ್ನು ಹುಟ್ಟಿಸುವಂತಹದ್ದಾಗಿದೆ, “ನಿವಾಸಿತ ಭೂಮಿಯ ನ್ಯಾಯವಿಚಾರಣೆ ಮಾಡುವುದಕ್ಕೆ” ಬಂದಿರುವ, ದೇವರ ವಾಕ್ಯ ಎಂದು ಅಧಿಕೃತವಾಗಿ ಕರೆಯಲ್ಪಡುವಾತನಿಗೆ ತಕ್ಕದ್ದಾಗಿರುತ್ತದೆ.—ಅ. ಕೃತ್ಯಗಳು 17:31; ಯೋಹಾನ 1:1.

12. “ಹದವಾದ, ಉದ್ದ ಇಬ್ಬಾಯಿ ಕತ್ತಿ”ಯ ಸೂಚಿತಾರ್ಥವೇನು?

12“ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, ಮತ್ತು ಅವನ ಬಾಯಿಯಿಂದ ಹದವಾದ, ಉದ್ದ ಇಬ್ಬಾಯಿ ಕತ್ತಿಯು ಮುಂದಕ್ಕೆ ಚಾಚಿತ್ತು, ಮತ್ತು ಅವನ ಮುಖವು ಶಕ್ತಿಯಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು. ಮತ್ತು ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು.” (ಪ್ರಕಟನೆ 1:16, 17ಎ, NW) ಯೇಸುವು ಸ್ವತಃ ಏಳು ನಕ್ಷತ್ರಗಳ ಅರ್ಥವನ್ನು ಸ್ವಲ್ಪ ಸಮಯದ ನಂತರ ವಿವರಿಸುತ್ತಾನೆ. ಆದರೆ ಅವನ ಬಾಯಿಯಿಂದ ಏನು ಹೊರಡುತ್ತದೋ ಅದನ್ನು ಗಮನಿಸಿರಿ: “ಒಂದು ಹದವಾದ, ಉದ್ದ ಇಬ್ಬಾಯಿ ಕತ್ತಿ.” ಎಂತಹ ಒಂದು ಹೊಂದಿಕೆಯಿರುವ ಲಕ್ಷಣ! ಯಾಕಂದರೆ ಅವನ ವಿರೋಧಿಗಳ ವಿರುದ್ಧವಾಗಿ ಯೆಹೋವನ ಕಟ್ಟಕಡೆಯ ನ್ಯಾಯತೀರ್ಪನ್ನು ಉಚ್ಚರಿಸಲು ನೇಮಿಸಲ್ಪಟ್ಟವನು ಯೇಸುವಾಗಿದ್ದಾನೆ. ಅವನ ಬಾಯಿಯಿಂದ ಬರುವ ನಿರ್ಧಾರಾತ್ಮಕ ಉಚ್ಚಾರಣೆಗಳು ಎಲ್ಲಾ ದುಷ್ಟರ ಹತಿಸುವಿಕೆಯಲ್ಲಿ ಅಂತ್ಯಗೊಳ್ಳುವುವು.—ಪ್ರಕಟನೆ 19:13, 15.

13. (ಎ) ಯೇಸುವಿನ ಹೊಳೆಯುವ, ಪ್ರಕಾಶಮಯ ಮುಖವು ನಮಗೆ ಯಾವುದನ್ನು ನೆನಪಿಸುತ್ತದೆ? (ಬಿ) ಯೇಸುವಿನ ಕುರಿತಾದ ಯೋಹಾನನ ವಿವರಣೆಯಿಂದ ನಾವು ಪಡೆಯುವ ಸಮಗ್ರ ಅಭಿಪ್ರಾಯವೇನು?

13 ಯೇಸುವಿನ ಹೊಳಪಿನ, ಪ್ರಕಾಶಮಯ ಮುಖವು, ಸೀನಾಯಿ ಬೆಟ್ಟದ ಮೇಲೆ ಯೆಹೋವನೊಂದಿಗೆ ಮೋಶೆಯು ಸಂಭಾಷಣೆ ನಡಿಸಿದ ಅನಂತರ ಅವನ ಮುಖದಿಂದ ಪ್ರಕಾಶಿಸುವ ಕಿರಣಗಳು ಹೊರಟದ್ದನ್ನು ನಮ್ಮ ನೆನಪಿಗೆ ತರುತ್ತದೆ. (ವಿಮೋಚನಕಾಂಡ 34:29, 30) 1,900 ವರ್ಷಗಳ ಹಿಂದೆ ತನ್ನ ಮೂವರು ಅಪೊಸ್ತಲರ ಮುಂದೆ ಯೇಸುವು ರೂಪಾಂತರಗೊಂಡಾಗ ನಡೆದದ್ದನ್ನೂ ನೆನಪಿಸಿರಿ, “ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು, ಮತ್ತು ಆತನ ಹೊರ ಉಡುಪುಗಳು ಬೆಳಕಿನಂತೆ ಬೆಳ್ಳಗಾದವು.” (ಮತ್ತಾಯ 17:2) ಈಗ, ಕರ್ತನ ದಿನದಲ್ಲಿ ಯೇಸುವಿನ ಪ್ರತಿನಿಧಿತ್ವದ ದರ್ಶನವೊಂದರಲ್ಲಿ, ಅವನ ಮುಖವು ತದ್ರೀತಿಯಲ್ಲಿ ಯೆಹೋವನ ಸಮ್ಮುಖದಲ್ಲಿರುವವನೊಬ್ಬನ ಪ್ರಜ್ವಲಿಸುವ ಕಾಂತಿಯನ್ನು ಪ್ರತಿಬಿಂಬಿಸುತ್ತದೆ. (2 ಕೊರಿಂಥ 3:18) ವಾಸ್ತವದಲ್ಲಿ, ಯೋಹಾನನ ದರ್ಶನದ ಮೂಲಕ ನೀಡಲ್ಪಟ್ಟ ಒಂದು ಸಮಗ್ರ ಭಾವವು ಮಹಿಮೆಯ ಪ್ರಜ್ವಲತೆಯಾಗಿರುತ್ತದೆ. ಹಿಮದಂತಹ ಬಿಳಿ ಕೂದಲುಗಳಿಂದ, ಉರಿಯುವ ಕಣ್ಣುಗಳು, ಮತ್ತು ಹೊಳೆಯುವ ಮುಖಭಾವ, ಮಿರುಗುವ ಪಾದಗಳ ತನಕ, ಈಗ “ಅಗಮ್ಯವಾದ ಬೆಳಕಿನಲ್ಲಿ” ವಾಸಿಸುವಾತನ ಒಂದು ಪರಮ ಶ್ರೇಷ್ಠ ದರ್ಶನವಾಗಿರುತ್ತದೆ. (1 ತಿಮೊಥೆಯ 6:16) ಈ ಪ್ರೇಕ್ಷಣದ ನೈಜತೆಯು ಅಷ್ಟೊಂದು ಸ್ಫುಟವಾಗಿದೆ! ಭಯಭ್ರಾಂತನಾದ ಯೋಹಾನನು ಹೇಗೆ ಪ್ರತಿವರ್ತಿಸಿದನು? ಅಪೊಸ್ತಲನು ನಮಗನ್ನುವುದು: “ಮತ್ತು ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು.”—ಪ್ರಕಟನೆ 1:17, NW.

14. ಮಹಿಮಾಭರಿತ ಯೇಸುವಿನ ಕುರಿತಾದ ಯೋಹಾನನ ದರ್ಶನದ ವಾಚನವು ನಮ್ಮನ್ನು ಹೇಗೆ ತಟ್ಟತಕ್ಕದ್ದು?

14 ಇಂದು, ಯೋಹಾನನ ವರ್ಣಮಯವಾದ, ವಿವರಣಾತ್ಮಕವಾದ ವರ್ಣನೆಯು ದೇವಜನರನ್ನು ಹೃದಯಪೂರಿತ ಗಣ್ಯತೆಯಿಂದ ತುಂಬಿಸುತ್ತದೆ. ಈಗಾಗಲೇ, ಕರ್ತನ ದಿನದಲ್ಲಿ 70 ಕ್ಕಿಂತಲೂ ಹೆಚ್ಚು ವರ್ಷಗಳನ್ನು ನಾವು ಕಳೆದಿದ್ದೇವೆ, ಈ ಸಮಯಾವಧಿಯಲ್ಲಿ ದರ್ಶನದ ರೋಮಾಂಚಕಾರಿಯಾದ ನೆರವೇರಿಕೆಯು ಮುಂದುವರಿದದೆ. ಯೇಸುವಿನ ರಾಜ್ಯಾಡಳಿತೆಯು ನಮಗೆ ಒಂದು ಸಜೀವವಾದ, ಸದ್ಯದ ನೈಜತೆಯಾಗಿದೆಯೇ ಹೊರತು, ಭವಿಷ್ಯದ ಒಂದು ನಿರೀಕ್ಷೆಯಲ್ಲ. ಆದಕಾರಣ, ರಾಜ್ಯದ ನಿಷ್ಠ ಪ್ರಜೆಗಳೋಪಾದಿ ನಾವು ಈ ಪ್ರಥಮ ದರ್ಶನದಲ್ಲಿ ಯೋಹಾನನು ವಿವರಿಸುವುದನ್ನು ಅಚ್ಚರಿಯಿಂದ ಮುನ್ನೋಡುವುದು ಮತ್ತು ಮಹಿಮಾಭರಿತ ಯೇಸು ಕ್ರಿಸ್ತನ ಮಾತುಗಳಿಗೆ ವಿಧೇಯತೆಯಿಂದ ಆಲಿಸುವುದು ಯೋಗ್ಯವಾಗಿರುತ್ತದೆ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 3 ಪೂರ್ಣವಾದ ವಿವರಣೆಗಾಗಿ, ಈ ಪುಸ್ತಕದ ಪ್ರಕಾಶಕರಿಂದ ಹಂಚಲ್ಪಟ್ಟ “ನಿನ್ನ ರಾಜ್ಯವು ಬರಲಿ” ಪುಸ್ತಕದ 128-39, 186-9 ಪುಟಗಳನ್ನು ನೋಡಿರಿ.

^ ಪ್ಯಾರ. 6 ಮೊದಲನೆಯ ಶತಮಾನದಲ್ಲಿ, ಒಬ್ಬ ಅಪೊಸ್ತಲನಿಂದ ಸಭೆಯೊಂದು ಒಂದು ಪತ್ರವನ್ನು ಪಡೆದರೆ, ಎಲ್ಲರೂ ಅದರಲ್ಲಿರುವ ಬುದ್ಧಿವಾದದಿಂದ ಪ್ರಯೋಜನ ಪಡೆಯಲು ಶಕ್ಯರಾಗುವಂತೆ, ಎಲ್ಲಾ ಸಭೆಗಳೊಳಗೆ ಪತ್ರವನ್ನು ಚಲಾವಣೆಮಾಡುವುದು ಒಂದು ಪದ್ಧತಿಯಾಗಿತ್ತು.—ಹೋಲಿಸಿರಿ ಕೊಲೊಸ್ಸೆ 4:16.

^ ಪ್ಯಾರ. 10 ಸೊಲೊಮೋನನ ದೇವಾಲಯದ ಒಳಭಾಗದ ಅಲಂಕಾರಗಳನ್ನು ಮತ್ತು ಇತರ ಉಪಕರಣಗಳನ್ನು ಚಿನ್ನದಿಂದ ಮಾಡಲಾಗಿತ್ತು ಇಲ್ಲವೆ ಅದಕ್ಕೆ ಚಿನ್ನದ ಮೇಲ್ಹೊದಿಕೆಯನ್ನು ಹಾಕಲಾಗಿತ್ತು. ಆದರೆ ಅಂಗಣವನ್ನು ಸಜ್ಚುಗೊಳಿಸುವಾಗ ತಾಮ್ರವನ್ನು ಬಳಸಲಾಗುತ್ತಿತ್ತು.—1 ಅರಸುಗಳು 6:19-23, 28-35; 7:15, 16, 27, 30, 38-50; 8:64.

[ಅಧ್ಯಯನ ಪ್ರಶ್ನೆಗಳು]

[ಪುಟ 34 ರಲ್ಲಿರುವ ಚಿತ್ರಗಳು]

ಏಳು ಸಭೆಗಳು ಎಲಿದ್ದವ್ದೋ ಅಲ್ಲಿನ ನಗರಗಳ ಭೂಸಂಶೋಧನಾ ಅವಶೇಷಗಳು ಬೈಬಲಿನ ದಾಖಲೆಯನ್ನು ದೃಢೀಕರಿಸುತ್ತವೆ. ಇಲ್ಲಿ ಮೊದಲನೆಯ ಶತಕದ ಕ್ರೈಸ್ತರು ಯೇಸುವಿನಿಂದ ಪ್ರೋತ್ಸಾಹಕ ಸಂದೇಶಗಳನ್ನು ಪಡೆದರು, ಇವುಗಳು ಇಂದು ಕೂಡ ಲೋಕವ್ಯಾಪಕವಾಗಿ 20 ನೆಯ ಶತಕದ ಸಭೆಗೆ ಪ್ರಚೋದನೆಯನ್ನು ಕೊಡುತ್ತವೆ

ಪೆರ್ಗಮಮ್‌

ಸ್ಮುರ್ನ

ಥುವತೈರ

ಸಾರ್ದಿಸ್‌

ಎಫೆಸ

ಫಿಲದೆಲ್ಫಿಯ

ಲವೊದಿಕೀಯ