ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸರ್ಪನ ತಲೆಯನ್ನು ಜಜ್ಜುವುದು

ಸರ್ಪನ ತಲೆಯನ್ನು ಜಜ್ಜುವುದು

ಅಧ್ಯಾಯ 40

ಸರ್ಪನ ತಲೆಯನ್ನು ಜಜ್ಜುವುದು

ದರ್ಶನ 14—ಪ್ರಕಟನೆ 20:1-10

ವಿಷಯ: ಅಧೋಲೋಕಕ್ಕೆ ಸೈತಾನನ ದೊಬ್ಬುವಿಕೆ, ಸಹಸ್ರ ವರುಷಗಳ ಆಳಿಕೆ, ಮಾನವಕುಲದ ಅಂತಿಮ ಪರೀಕ್ಷೆ, ಮತ್ತು ಸೈತಾನನ ನಾಶನ

ನೆರವೇರಿಕೆಯ ಸಮಯ: ಮಹಾ ಸಂಕಟದ ಅಂತ್ಯದಿಂದ ಸೈತಾನನ ನಾಶನದ ವರೆಗೆ

1. ಬೈಬಲಿನ ಮೊದಲನೆಯ ಪ್ರವಾದನೆಯ ನೆರವೇರಿಕೆಯು ಹೇಗೆ ಮುಂದುವರಿದಿದೆ?

ಬೈಬಲಿನ ಮೊದಲನೆಯ ಪ್ರವಾದನೆಯನ್ನು ನೀವು ನೆನಪಿಸಬಲ್ಲಿರೋ? ಯೆಹೋವ ದೇವರು ಸರ್ಪನಿಗೆ ಹೀಗೆ ಹೇಳಿದಾಗ, ಅದು ಉಚ್ಚರಿಸಲ್ಪಟ್ಟಿತ್ತು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:15) ಈಗ ಆ ಪ್ರವಾದನೆಯು ಅದರ ನೆರವೇರಿಕೆಯ ಪರಾಕಾಷ್ಠೆಗೆ ಬರುತ್ತಿದೆ! ಯೆಹೋವನ ಸ್ವರ್ಗೀಯ ಸ್ತ್ರೀಯಂತಹ ಸಂಸ್ಥೆಯ ವಿರುದ್ಧ ಸೈತಾನನ ಯುದ್ಧಹೂಡುವಿಕೆಯ ಇತಿಹಾಸವನ್ನು ನಾವು ಪತ್ತೆಹಚ್ಚಿದ್ದೇವೆ. (ಪ್ರಕಟನೆ 12:1, 9) ಅದರ ಧರ್ಮ, ರಾಜಕೀಯ, ಮತ್ತು ದೊಡ್ಡ ವ್ಯಾಪಾರಗಳ ಸಹಿತ, ಸರ್ಪನ ಐಹಿಕ ಸಂತಾನವು ಇಲ್ಲಿ ಭೂಮಿಯ ಮೇಲೆ ಸ್ತ್ರೀಯ ಸಂತಾನವಾದ, ಯೇಸು ಕ್ರಿಸ್ತನ ಮತ್ತು ಅವನ 1,44,000 ಅಭಿಷಿಕ್ತ ಅನುಯಾಯಿಗಳ ಮೇಲೆ ಕ್ರೂರ ಹಿಂಸೆಯನ್ನು ತಂದಿದೆ. (ಯೋಹಾನ 8:37, 44; ಗಲಾತ್ಯ 3:16, 29) ಸೈತಾನನು ಯೇಸುವಿನ ಮೇಲೆ ಒಂದು ಯಾತನಾಮಯ ಮರಣವನ್ನು ಬರಮಾಡಿದನು. ಆದರೆ ಇದೊಂದು ಹಿಮ್ಮಡಿಯ ಗಾಯವಾಗಿ ಪರಿಣಮಿಸಿತು, ಯಾಕಂದರೆ ದೇವರು ತನ್ನ ನಂಬಿಗಸ್ತ ಮಗನನ್ನು ಮೂರನೆಯ ದಿನದಲ್ಲಿ ಪುನರುತ್ಥಾನಗೊಳಿಸಿದನು.—ಅ. ಕೃತ್ಯಗಳು 10:38-40.

2. ಸರ್ಪನು ಹೇಗೆ ಜಜ್ಜಲ್ಪಡುತ್ತಾನೆ, ಮತ್ತು ಸರ್ಪನ ಐಹಿಕ ಸಂತಾನಕ್ಕೆ ಏನಾಗುತ್ತದೆ?

2 ಸರ್ಪ ಮತ್ತು ಅವನ ಸಂತಾನದ ಕುರಿತೇನು? ಸುಮಾರು ಸಾ. ಶ. 56 ರಲ್ಲಿ ರೋಮಿನಲ್ಲಿರುವ ಕ್ರೈಸ್ತರಿಗೆ ಅಪೊಸ್ತಲ ಪೌಲನು ಒಂದು ದೀರ್ಘ ಪತ್ರವನ್ನು ಬರೆದನು. ಅದನ್ನು ಸಮಾಪ್ತಿಗೊಳಿಸುವಾಗ, ಇದನ್ನು ಹೇಳುತ್ತಾ ಅವನು ಅವರನ್ನು ಉತ್ತೇಜಿಸಿದನು: “ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುವನು.” (ರೋಮಾಪುರ 16:20) ಇದು ಮೇಲುಮೇಲಿನ ಗಾಯಗೊಳಿಸುವುದಕ್ಕಿಂತಲೂ ಹೆಚ್ಚಿನದ್ದಾಗಿತ್ತು. ಸೈತಾನನನ್ನು ಜಜ್ಜಲಿಕ್ಕಿದೆ! ಇಲ್ಲಿ ಪೌಲನು ಸಿನ್‌-ಟ್ರಿ’ಬೊ ಎಂಬ ಗ್ರೀಕ್‌ ಶಬ್ದವೊಂದನ್ನು ಬಳಸಿದ್ದಾನೆ, ಅದರ ಅರ್ಥ ಪಾಕಪದಾರ್ಥದ ಸ್ಥಿತಿಗೆ ಜಜ್ಜುವುದು, ತುಳಿದು ಹಾಕುವುದು, ಯಾ ಜಜ್ಜುವ ಮೂಲಕ ಪೂರ್ತಿ ನಾಶಮಾಡುವುದು. ಸರ್ಪನ ಮಾನವ ಸಂತಾನದ ಕುರಿತಾದರೋ, ಕರ್ತನ ದಿನದಲ್ಲಿ ಒಂದು ನಿಜವಾದ ಬಾಧಿಸುವಿಕೆಗೆ ಇದರ ಸಮಯವಾಗಿದೆ, ಇದು ಅನಂತರ ಮಹಾ ಸಂಕಟದಲ್ಲಿ ಮಹಾ ಬಾಬೆಲಿನ ಮತ್ತು ಲೋಕದ ರಾಜಕೀಯ ವ್ಯವಸ್ಥೆಗಳೊಂದಿಗೆ ಅವರ ಆರ್ಥಿಕ ಮತ್ತು ಮಿಲಿಟರಿ ಬೆಂಬಲಿಗರು ಪೂರ್ಣವಾಗಿ ಜಜ್ಜಲ್ಪಡುವುದರೊಂದಿಗೆ ಪರಾಕಾಷ್ಠೆಗೇರಲಿರುವುದು. (ಪ್ರಕಟನೆ, ಅಧ್ಯಾಯಗಳು 18 ಮತ್ತು 19) ಹೀಗೆ ಯೆಹೋವನು ಎರಡು ಸಂತಾನಗಳ ವೈರತ್ವವನ್ನು ಪರಮಾವಧಿಗೆ ತರುವನು. ದೇವರ ಸ್ತ್ರೀಯ ಸಂತಾನವು ಸರ್ಪನ ಐಹಿಕ ಸಂತಾನದ ಮೇಲೆ ವಿಜಯ ಗಳಿಸುವುದು, ಮತ್ತು ಆ ಸಂತಾನವು ಇನ್ನು ಮುಂದೆ ಇರುವುದಿಲ್ಲ!

ಸೈತಾನನು ಅಧೋಲೋಕದಲ್ಲಿ ಹಾಕಲ್ಪಡುವುದು

3. ಸೈತಾನನಿಗೆ ಸಂಭವಿಸುವುದರ ಕುರಿತು ಯೋಹಾನನು ನಮಗೆ ಏನು ಹೇಳುತ್ತಾನೆ?

3 ಅನಂತರ ಸ್ವತಃ ಸೈತಾನನಿಗೂ, ಅವನ ದೆವ್ವಗಳಿಗೂ ಏನು ಕಾದಿರಿಸಲ್ಪಟ್ಟಿದೆ? ಯೋಹಾನನು ನಮಗನ್ನುವುದು: “ಮತ್ತು ಒಬ್ಬ ದೇವದೂತನು ತನ್ನ ಕೈಯಲ್ಲಿ ಅಧೋಲೋಕದ ಬೀಗದ ಕೈ ಮತ್ತು ದೊಡ್ಡ ಸರಪಣಿಯೊಂದಿಗೆ ಪರಲೋಕದಿಂದ ಇಳಿದು ಬರುವುದನ್ನು ನಾನು ಕಂಡೆನು. ಮತ್ತು ಅವನು, ಯಾರು ಪಿಶಾಚನೂ ಸೈತಾನನೂ ಆಗಿದ್ದಾನೋ, ಆ ಪುರಾತನವಾದ ಘಟಸರ್ಪವನ್ನು ವಶಕ್ಕೆ ತೆಗೆದುಕೊಂಡು ಅವನನ್ನು ಸಾವಿರ ವರುಷ ಬಂಧಿಸಿದನು. ಮತ್ತು ಆ ಸಾವಿರ ವರುಷ ತೀರುವ ತನಕ ಸೈತಾನನು ಇನ್ನೂ ಜನಾಂಗಗಳನ್ನು ಮರುಳುಗೊಳಿಸಲು ಆಗದಂತೆ ದೇವದೂತನು ಅವನನ್ನು ಅಧೋಲೋಕಕ್ಕೆ ದೊಬ್ಬಿ ಅದನ್ನು ಮುಚ್ಚಿ ಅವನ ಮೇಲೆ ಅದಕ್ಕೆ ಮುದ್ರೆಹಾಕಿದನು. ಈ ಸಂಗತಿಗಳಾದ ಮೇಲೆ ಅವನನ್ನು ಸ್ವಲ್ಪಕಾಲ ಬಿಟ್ಟುಬಿಡಬೇಕು.”—ಪ್ರಕಟನೆ 20:1-3, NW.

4. ಅಧೋಲೋಕದ ಬೀಗದ ಕೈಯಿರುವ ದೇವದೂತನು ಯಾರು, ಮತ್ತು ನಾವು ಹೇಗೆ ಬಲ್ಲೆವು?

4 ಈ ದೇವದೂತನು ಯಾರು? ಯೆಹೋವನ ಪ್ರಧಾನ ವೈರಿಯನ್ನು ಉಚ್ಚಾಟನೆ ಮಾಡುವ ಪ್ರಚಂಡ ಶಕ್ತಿಯು ಆತನಲ್ಲಿ ಇರತಕ್ಕದ್ದು. ಅವನ ಹತ್ತಿರ “ಅಧೋಲೋಕದ ಬೀಗದ ಕೈ ಮತ್ತು ದೊಡ್ಡ ಸರಪಣಿ”ಯೂ ಇದೆ. ಇದು ನಮಗೆ ಇದರ ಮೊದಲಿನ ಒಂದು ದರ್ಶನವನ್ನು ನೆನಪಿಗೆ ತರುವುದಿಲ್ಲವೇ? ಹೌದು, ಮಿಡಿತೆಗಳ ಮೇಲಿನ ಅರಸನು ಕೂಡ “ಅಧೋಲೋಕದ ಅಧಿಕಾರಿಯಾದ ದೂತನು” ಎಂದು ಕರೆಯಲ್ಪಡುತ್ತಾನೆ! (ಪ್ರಕಟನೆ 9:11) ಹೀಗೆ, ಇಲ್ಲಿ ಪುನಃ ಯೆಹೋವನ ಪ್ರಧಾನ ಸಮರ್ಥಕನಾದ ಮಹಿಮೆಗೇರಿಸಲ್ಪಟ್ಟ ಯೇಸು ಕ್ರಿಸ್ತನು, ಕಾರ್ಯಾಚರಣೆಯಲ್ಲಿರುವುದನ್ನು ನಾವು ಅವಲೋಕಿಸುತ್ತೇವೆ. ಸೈತಾನನನ್ನು ಪರಲೋಕದಿಂದ ಹೊರಗೆ ದೊಬ್ಬಿದ, ಮಹಾ ಬಾಬೆಲಿಗೆ ತೀರ್ಪುಗೈದ, ಮತ್ತು ‘ಭೂರಾಜರನ್ನೂ ಅವರ ಸೈನ್ಯಗಳನ್ನೂ’ ಅರ್ಮಗೆದೋನಿನಲ್ಲಿ ಇಲ್ಲದಂತೆ ಮಾಡಿದ ಈ ಪ್ರಧಾನ ದೂತನು, ಸೈತಾನನನ್ನು ಅಧೋಲೋಕಕ್ಕೆ ಹಾಕುವ ಅತ್ಯಂತ ಚಾತುರ್ಯದ ಹೊಡೆತವನ್ನು ಕೆಳಸ್ಥಾನದ ದೇವದೂತನು ಕೊಡುವಂತೆ ಖಂಡಿತವಾಗಿಯೂ ಪಕ್ಕಕ್ಕೆ ಸರಿಯನು!—ಪ್ರಕಟನೆ 12:7-9; 18:1, 2; 19:11-21.

5. ಪಿಶಾಚನಾದ ಸೈತಾನನೊಂದಿಗೆ ಅಧೋಲೋಕದ ದೇವದೂತನು ಹೇಗೆ ವ್ಯವಹರಿಸುತ್ತಾನೆ, ಮತ್ತು ಯಾಕೆ?

5 ಅಗ್ನಿವರ್ಣದ ಮಹಾ ಘಟಸರ್ಪನು ಪರಲೋಕದಿಂದ ಉಚ್ಚಾಟಿಸಲ್ಪಟ್ಟಾಗ, ಅವನು “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ . . . ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪ” ಎಂದು ಉಲ್ಲೇಖಿಸಲ್ಪಟ್ಟಿರುತ್ತಾನೆ. (ಪ್ರಕಟನೆ 12:3, 9) ಈಗ, ಸೆರೆಹಿಡಿಯಲ್ಪಟ್ಟು ಮತ್ತು ಅಧೋಲೋಕಕ್ಕೆ ಹಾಕಲ್ಪಡುವ ಈ ಬಿಂದುವಿನಲ್ಲಿ ಅವನನ್ನು ಪುನಃ ಪೂರ್ಣವಾಗಿ “ಯಾರು ಪಿಶಾಚನೂ ಸೈತಾನನೂ ಆಗಿದ್ದಾನೋ ಆ ಪುರಾತನ ಸರ್ಪವಾದ ಘಟಸರ್ಪ” ಎಂದು ವರ್ಣಿಸಲಾಗಿದೆ. ಈ ಕುಖ್ಯಾತ ನುಂಗುವವನು, ವಂಚಕನು, ಅಪನಿಂದಕನು, ಮತ್ತು ವಿರೋಧಿಯು ಸರಪಳಿಯಲ್ಲಿ ಕಟ್ಟಲ್ಪಟ್ಟು, “ಅಧೋಲೋಕಕ್ಕೆ” ದೊಬ್ಬಲ್ಪಟ್ಟಿದ್ದಾನೆ, ಅವನು “ಇನ್ನೂ ಜನಗಳನ್ನು ಮರುಳುಗೊಳಿಸಲು ಆಗದಂತೆ” ಅದನ್ನು ಮುಚ್ಚಿ, ಅದಕ್ಕೆ ಭದ್ರವಾಗಿ ಮುದ್ರೆ ಹಾಕಲ್ಪಡುತ್ತದೆ. ಸಾವಿರ ವರುಷಗಳ ತನಕ ಸೈತಾನನನ್ನು ಅಧೋಲೋಕಕ್ಕೆ ಹಾಕುವುದರ ಮೂಲಕ, ಆ ಸಮಯದಲ್ಲಿ ಮಾನವ ಕುಲದ ಮೇಲಿನ ಅವನ ಪ್ರಭಾವವು, ಒಂದು ನೆಲಮಾಳಿಗೆಯ ಕಾರಾಗೃಹದಲ್ಲಿರುವ ಒಬ್ಬ ಕೈದಿಗಿಂತಲೂ ಏನೂ ಅಧಿಕವಾಗಿರುವುದಿಲ್ಲ. ಅಧೋಲೋಕದ ದೇವದೂತನು ಸೈತಾನನಿಗೆ ನೀತಿಯ ರಾಜ್ಯದೊಂದಿಗೆ ಯಾವುದೇ ಸಂಪರ್ಕವಿರುವುದರಿಂದ ಅವನನ್ನು ಪೂರ್ಣವಾಗಿ ತೊಲಗಿಸುತ್ತಾನೆ. ಮಾನವ ಕುಲಕ್ಕೆ ಎಂತಹ ಉಪಶಮನ!

6. (ಎ) ಅಧೋಲೋಕದೊಳಗೆ ದೆವ್ವಗಳು ಕೂಡ ಹೋಗುವುವು ಎನ್ನುವುದಕ್ಕೆ ಯಾವ ರುಜುವಾತು ಇದೆ? (ಬಿ) ಈಗ ಏನು ಆರಂಭವಾಗಬಲ್ಲದು, ಮತ್ತು ಯಾಕೆ?

6 ದೆವ್ವಗಳಿಗೆ ಏನು ಸಂಭವಿಸುತ್ತದೆ? ಅವು ಕೂಡ “ತೀರ್ಪನ್ನು ಹೊಂದುವದಕ್ಕೆ” ಇಡಲ್ಪಟ್ಟಿವೆ. (2 ಪೇತ್ರ 2:4) ಸೈತಾನನನ್ನು “ದೆವ್ವಗಳ ಒಡೆಯನಾದ ಬೆಲ್ಚೆಬೂಲ” ಎಂದು ಕರೆಯಲಾಗಿದೆ. (ಲೂಕ 11:15, 18; ಮತ್ತಾಯ 10:25) ಸೈತಾನನೊಂದಿಗಿನ ಅವರ ದೀರ್ಘಕಾಲದ ಸಹಭಾಗಿತ್ವದ ನೋಟದಲ್ಲಿ, ಅವರಿಗೂ ಅದೇ ತೀರ್ಪು ವಿಧಿಸಲ್ಪಡಬೇಕಲ್ಲವೆ? ಆ ದೆವ್ವಗಳಿಗೆ ಅಧೋಲೋಕವು ಬಹಳ ಕಾಲದಿಂದಲೂ ಒಂದು ಹೆದರಿಕೆಯ ವಿಷಯವಾಗಿತ್ತು; ಅವರನ್ನು ಒಮ್ಮೆ ಯೇಸುವು ಸಂಧಿಸಿದಾಗ, “ಪಾತಾಳಕ್ಕೆ ಹೋಗಿಬಿಡುವಂತೆ ನಮಗೆ ಆಜ್ಞೆಮಾಡಬೇಡವೆಂದು” ಅವು “ಆತನನ್ನು ಬೇಡಿಕೊಂಡವು.” (ಲೂಕ 8:31) ಆದರೆ ಸೈತಾನನನ್ನು ಅಧೋಲೋಕಕ್ಕೆ ಹಾಕುವಾಗ, ಅವನೊಂದಿಗೆ ಆತನ ದೂತರುಗಳನ್ನೂ ಅಧೋಲೋಕಕ್ಕೆ ಖಂಡಿತವಾಗಿ ಹಾಕಲಾಗುವುದು. (ಹೋಲಿಸಿ ಯೆಶಾಯ 24:21, 22.) ಸೈತಾನ ಮತ್ತು ಅವನ ದೆವ್ವಗಳನ್ನು ಅಧೋಲೋಕಕ್ಕೆ ಹಾಕಿದ ಅನಂತರ, ಯೇಸು ಕ್ರಿಸ್ತನ ಸಹಸ್ರ ವರುಷದ ಆಳಿಕೆಯು ಆರಂಭಗೊಳ್ಳಸಾಧ್ಯವಿದೆ.

7. (ಎ) ಸೈತಾನನು ಮತ್ತು ಅವನ ದೆವ್ವಗಳು ಅಧೋಲೋಕದಲ್ಲಿರುವಾಗ, ಯಾವ ಸ್ಥಿತಿಯಲ್ಲಿರುವರು, ಮತ್ತು ನಾವು ಹೇಗೆ ಬಲ್ಲೆವು? (ಬಿ) ಹೇಡಿಸ್‌ ಮತ್ತು ಅಧೋಲೋಕ ಅಂದರೆ ಒಂದೆಯೋ? (ಪಾದಟಿಪಣ್ಟಿ ನೋಡಿರಿ.)

7 ಅಧೋಲೋಕದಲ್ಲಿರುವಾಗ, ಸೈತಾನ ಮತ್ತು ಅವನ ದೆವ್ವಗಳು ಕ್ರಿಯಾತ್ಮಕವಾಗಿರುವವೂ? ಒಳ್ಳೇದು, “ಮೊದಲು ಇತ್ತು, ಈಗ ಇಲ್ಲ, ಮತ್ತು ಅಧೋಲೋಕದಿಂದ ಏರಿ” ಬರುವ ಕಡುಗೆಂಪು ಬಣ್ಣದ, ಏಳು ತಲೆಗಳ ಕಾಡು ಮೃಗವನ್ನು ನೆನಪಿಸಿಕೊಳ್ಳಿರಿ. (ಪ್ರಕಟನೆ 17:8) ಅಧೋಲೋಕದಲ್ಲಿದ್ದಾಗ, ಅದು ‘ಇಲ್ಲ’ ವಾಗಿತ್ತು. ಅದು ಕಾರ್ಯವಿಹೀನವಾಗಿತ್ತು, ನಿಷ್ಕ್ರಿಯವಾಗಿತ್ತು, ಬಹುತರವಾಗಿ ಮೃತವಾಗಿತ್ತು. ಹಾಗೆಯೇ, ಯೇಸುವಿನ ಕುರಿತು ಮಾತಾಡುವಾಗ, ಅಪೊಸ್ತಲ ಪೌಲನು ಹೇಳಿದ್ದು: “ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರುವದಕ್ಕೆ ಯಾರು ಪ್ರೇತಲೋಕಕ್ಕೆ [ಅಧೋಲೋಕಕ್ಕೆ, NW] ಇಳಿದುಹೋದಾರು?” (ರೋಮಾಪುರ 10:7) ಆ ಅಧೋಲೋಕದಲ್ಲಿರುವಾಗ, ಯೇಸುವು ಮೃತನಾಗಿದ್ದನು. * ಹಾಗಾದರೆ, ಸೈತಾನ ಮತ್ತು ದೆವ್ವಗಳು, ಅವರ ಸಾವಿರ ವರುಷದ ಅಧೋಲೋಕದ ಹಾಕಲ್ಪಡುವಿಕೆಯಲ್ಲಿ ಮರಣದಂತಹ ನಿಷ್ಕ್ರಿಯ ಸ್ಥಿತಿಯಲ್ಲಿ ಇರುವರು ಎಂದು ತೀರ್ಮಾನಿಸುವುದು ಸಮಂಜಸವಾಗಿದೆ. ನೀತಿಯನ್ನು ಪ್ರೀತಿಸುವವರಿಗೆ ಎಂತಹ ಶುಭ ವಾರ್ತೆ!

ಸಾವಿರ ವರುಷಗಳಿಗಾಗಿ ನ್ಯಾಯಾಧಿಪತಿಗಳು

8, 9. ಸಿಂಹಾಸನಗಳ ಮೇಲೆ ಕೂತುಕೊಂಡಿರುವವರ ಕುರಿತು ಈಗ ಯೋಹಾನನು ನಮಗೇನು ಹೇಳುತ್ತಾನೆ, ಮತ್ತು ಅಂತಹವರು ಯಾರು?

8 ಸಾವಿರ ವರುಷಗಳಾದ ಅನಂತರ, ಕೊಂಚ ಸಮಯಕ್ಕಾಗಿ ಸೈತಾನನನ್ನು ಅಧೋಲೋಕದಿಂದ ಬಿಡುಗಡೆಗೊಳಿಸಲಾಗುತ್ತದೆ. ಯಾಕೆ? ಉತ್ತರವನ್ನು ಕೊಡುವ ಮೊದಲು, ಯೋಹಾನನು ಆ ಸಮಯಾವಧಿಯ ಆರಂಭವನ್ನು ನಮ್ಮ ಗಮನಕ್ಕೆ ತರುತ್ತಾನೆ. ನಾವು ಓದುವುದು: “ಮತ್ತು ಸಿಂಹಾಸನಗಳನ್ನು ನಾನು ಕಂಡೆನು, ಮತ್ತು ಅವುಗಳ ಮೇಲೆ ಕೂತಿದ್ದವರು ಇದ್ದರು, ಮತ್ತು ನ್ಯಾಯ ತೀರಿಸುವ ಅಧಿಕಾರವು ಅವರಿಗೆ ಕೊಡಲ್ಪಟ್ಟಿತು.” (ಪ್ರಕಟನೆ 20:4ಎ, NW)  ಸಿಂಹಾಸನಗಳ ಮೇಲೆ ಕೂತಿರುವ ಮತ್ತು ಮಹಿಮಾಭರಿತ ಯೇಸುವಿನೊಂದಿಗೆ ಪರಲೋಕದಲ್ಲಿ ಆಳುವ ಇವರು ಯಾರು?

9 “ಮನುಷ್ಯಕುಮಾರನಂತಿರುವವ” ನೊಬ್ಬನೊಂದಿಗೆ ರಾಜ್ಯದಲ್ಲಿ ಆಳುವವರೋಪಾದಿ ದಾನಿಯೇಲನಿಂದ ವರ್ಣಿಸಲ್ಪಟ್ಟ “ದೇವಜನರು” ಇವರಾಗಿದ್ದಾರೆ. (ದಾನಿಯೇಲ 7:13, 14, 18) ಯೆಹೋವನ ಸಾನ್ನಿಧ್ಯದಲ್ಲಿಯೇ ಸ್ವರ್ಗೀಯ ಸಿಂಹಾಸಗಳಲ್ಲಿ ಕೂತಿರುವ 24 ಹಿರಿಯರು ಮತ್ತು ಇವರು ಒಂದೇ ಆಗಿದ್ದಾರೆ. (ಪ್ರಕಟನೆ 4:4) ಯಾರಿಗೆ ಯೇಸುವು ಈ ವಾಗ್ದಾನವನ್ನು ಕೊಟ್ಟನೋ ಆ 12 ಅಪೊಸ್ತಲರೂ ಅವರಲ್ಲಿ ಸೇರಿದ್ದಾರೆ: “ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವಾಗ ನನ್ನನ್ನು ಹಿಂಬಾಲಿಸಿರುವ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.” (ಮತ್ತಾಯ 19:28) ಅವರಲ್ಲಿ ಪೌಲನೂ, ಹಾಗೂ ನಂಬಿಗಸ್ತರಾಗಿ ಉಳಿದಿದ್ದ ಕೊರಿಂಥದ ಕ್ರೈಸ್ತರು ಸೇರಿರುತ್ತಾರೆ. (1 ಕೊರಿಂಥ 4:8; 6:2, 3) ಲವೊದಿಕೀಯ ಸಭೆಯ ಜಯಹೊಂದಿದ ಸದಸ್ಯರು ಕೂಡ ಅವರಲ್ಲಿ ಒಳಗೂಡಿದ್ದಾರೆ.—ಪ್ರಕಟನೆ 3:21.

10. (ಎ) ಈಗ ಯೋಹಾನನು 1,44,000 ಅರಸರನ್ನು ಹೇಗೆ ವರ್ಣಿಸುತ್ತಾನೆ? (ಬಿ) ಯೋಹಾನನು ಮೊದಲು ಏನು ಹೇಳಿದ್ದನೋ, ಅದರಿಂದ 1,44,000 ಅರಸರಲ್ಲಿ ಯಾರು ಸೇರಿದ್ದಾರೆ?

10 ಸಿಂಹಾಸನಗಳು—ಒಟ್ಟಿಗೆ 1,44,000—“ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟ ದೇವರಿಗೂ ಯಜ್ಞದ ಕುರಿಯಾದಾತನಿಗೂ ಪ್ರಥಮಫಲದಂತಾದ” ಈ ಅಭಿಷಿಕ್ತ ವಿಜೇತರಿಗಾಗಿ ಸಿದ್ಧಗೊಳಿಸಲ್ಪಟ್ಟಿವೆ. (ಪ್ರಕಟನೆ 14:1, 4) ಹೌದು,” ಯೋಹಾನನು ಮುಂದರಿಸುವುದು, “ಯೇಸುವಿನ ವಿಷಯವಾದ ಸಾಕ್ಷಿಯ ನಿಮಿತ್ತ ಮತ್ತು ದೇವರ ಕುರಿತು ಮಾತಾಡುತ್ತಿದ್ದ ನಿಮಿತ್ತ ಕೊಡಲಿಯಿಂದ ಹತಿಸಲ್ಪಟ್ಟವರ ಮತ್ತು ಕಾಡು ಮೃಗಕ್ಕಾಗಲಿ ಮತ್ತು ಅದರ ವಿಗ್ರಹಕ್ಕಾಗಲಿ ಆರಾಧಿಸದೆ ಇದ್ದವರ ಯಾ ತಮ್ಮ ಹಣೆಯ ಮೇಲೆ ಮತ್ತು ಕೈಯ ಮೇಲೆ ಗುರುತುಪಡೆದುಕೊಳ್ಳದೆ ಇದ್ದವರ ಆತ್ಮಗಳನ್ನು ನಾನು ಕಂಡೆನು.” (ಪ್ರಕಟನೆ 20:4ಬಿ, NW)  ಹಾಗಾದರೆ ಅವರಲ್ಲಿ, ಈ ಮೊದಲು ಐದನೆಯ ಮುದ್ರೆಯು ಒಡೆದಾಗ, ಯೆಹೋವನು ಎಷ್ಟು ಕಾಲದ ವರೆಗೆ ತಮ್ಮನ್ನು ಕೊಂದದ್ದಕ್ಕಾಗಿ ಪ್ರತಿದಂಡನೆ ಮಾಡದೆ ಇರುವನು ಎಂದು ಅವನನ್ನು ವಿಚಾರಿಸಿದ ಅಭಿಷಿಕ್ತ ಕ್ರೈಸ್ತ ಹುತಾತ್ಮರು ಇರುತ್ತಾರೆ. ಆ ಸಮಯದಲ್ಲಿ ಅವರಿಗೆ ಒಂದೊಂದು ಬಿಳಿ ನಿಲುವಂಗಿಯು ಕೊಡಲ್ಪಟ್ಟಿತು ಮತ್ತು ಇನ್ನೂ ಸ್ವಲ್ಪ ಕಾಲ ಕಾದಿರುವಂತೆ ಹೇಳಲ್ಪಟ್ಟಿತು. ಆದರೆ ಈಗ ಮಹಾ ಬಾಬೆಲಿನ ಧ್ವಂಸಗೊಳಿಸುವಿಕೆ, ರಾಜಾಧಿರಾಜನೂ, ಕರ್ತರ ಕರ್ತನೂ ಆಗಿರುವವನಿಂದ ಜನಾಂಗಗಳ ನಾಶಗೊಳಿಸುವಿಕೆ ಮತ್ತು ಸೈತಾನನ ಅಧೋಲೋಕಕ್ಕೆ ದೊಬ್ಬುವಿಕೆಯ ಮೂಲಕ ಅವರಿಗೆ ಪರಿಹಾರ ದೊರೆತಿದೆ.—ಪ್ರಕಟನೆ 6:9-11; 17:16; 19:15, 16.

11. (ಎ) “ಕೊಡಲಿಯಿಂದ ಹತಿಸಲ್ಪಟ್ಟವರು” ಎಂಬ ವಾಕ್ಸರಣಿಯನ್ನು ನಾವು ಹೇಗೆ ಅರ್ಥೈಸಿಕೊಳ್ಳತಕ್ಕದ್ದು? (ಬಿ) ಎಲ್ಲಾ 1,44,000 ಮಂದಿ ಯಜ್ಞಾರ್ಪಿತ ಮರಣವನ್ನು ಹೊಂದಿದ್ದಾರೆಂದು ಯಾಕೆ ಹೇಳಸಾಧ್ಯವಿದೆ?

11 ಈ 1,44,000 ರಾಜವೈಭವದ ನ್ಯಾಯಾಧೀಶರೆಲ್ಲರೂ ದೈಹಿಕವಾಗಿ “ಕೊಡಲಿಯಿಂದ ಹತಿಸಲ್ಪಟ್ಟವ” ರಾಗಿದ್ದರೋ? ಪ್ರಾಯಶಃ, ಸಂಬಂಧಸೂಚಕವಾಗಿ ಅವರಲ್ಲಿ ಕೊಂಚವೇ ಮಂದಿಗೆ ಅಕ್ಷರಾರ್ಥಕವಾಗಿ ಹಾಗಾಗಿದ್ದಿರಬಹುದು. ಆದರೂ, ಈ ವಾಕ್ಸರಣಿಯು ಒಂದಲ್ಲ ಇನ್ನೊಂದು ವಿಧದಲ್ಲಿ ಹುತಾತ್ಮ ಸ್ಥಿತಿಯನ್ನು ತಾಳುವ ಎಲ್ಲಾ ಅಭಿಷಿಕ್ತ ಕ್ರೈಸ್ತರನ್ನು ಆವರಿಸಲು ನಿಸ್ಸಂದೇಹವಾಗಿ ಉದ್ದೇಶಿಸಲ್ಪಟ್ಟಿದೆ. * (ಮತ್ತಾಯ 10:22, 28) ಸೈತಾನನು ಅವರಲ್ಲಿ ಎಲ್ಲರನ್ನು ಕೊಡಲಿಯಿಂದ ಹತಿಸಲು ಇಷ್ಟಪಡುತ್ತಾನೆಂಬುದು ಖಂಡಿತ, ಆದರೆ, ವಾಸ್ತವದಲ್ಲಿ ಯೇಸುವಿನ ಎಲ್ಲಾ ಅಭಿಷಿಕ್ತ ಸಹೋದರರು ಹುತಾತ್ಮರಾಗಿ ಸಾಯುವುದಿಲ್ಲ. ಅವರಲ್ಲಿ ಅನೇಕರು ಅಸ್ವಸ್ಥತೆಯಿಂದ ಯಾ ವಾರ್ಧಕ್ಯದಿಂದ ಸಾಯುತ್ತಾರೆ. ಆದಾಗ್ಯೂ, ಅಂತಹವರು ಕೂಡ ಯೋಹಾನನು ಈಗ ಕಾಣುವ ಗುಂಪಿಗೆ ಸೇರಿದ್ದಾರೆ. ಒಂದರ್ಥದಲ್ಲಿ ಅವರೆಲ್ಲರ ಮರಣವು ಯಜ್ಞಾರ್ಪಿತವಾಗಿದೆ. (ರೋಮಾಪುರ 6:3-5) ಇದಕ್ಕೆ ಕೂಡಿಸಿ, ಅವರಲ್ಲಿ ಯಾರೊಬ್ಬನೂ ಲೋಕದ ಭಾಗವಾಗಿರಲಿಲ್ಲ. ಆದುದರಿಂದ, ಅವರೆಲ್ಲರೂ ಲೋಕದವರಿಂದ ದ್ವೇಷಿಸಲ್ಪಟ್ಟರು, ಮತ್ತು ಕಾರ್ಯತಃ ಅದರ ದೃಷ್ಟಿಯಲ್ಲಿ ಸತ್ತವರಾದರು. (ಯೋಹಾನ 15:19; 1 ಕೊರಿಂಥ 4:13) ಅವರಲ್ಲಿ ಯಾರೂ ಕಾಡು ಮೃಗವನ್ನಾಗಲಿ, ಯಾ ಅದರ ವಿಗ್ರಹವನ್ನಾಗಲಿ ಪೂಜಿಸಲಿಲ್ಲ, ಮತ್ತು ಅವರು ಸತ್ತಾಗ, ಅವರಲ್ಲಿ ಯಾರಿಗೂ ಕಾಡು ಮೃಗದ ಗುರುತು ಇರಲಿಲ್ಲ. ಅವರೆಲ್ಲರೂ ಜಯಶಾಲಿಗಳಾಗಿ ಸತ್ತರು.—1 ಯೋಹಾನ 5:4; ಪ್ರಕಟನೆ 2:7; 3:12; 12:11.

12. ಯೋಹಾನನು 1,44,000 ಅರಸರ ಕುರಿತು ಏನನ್ನು ವರದಿಸುತ್ತಾನೆ, ಮತ್ತು ಅವರು ಜೀವಿತರಾಗಿ ಎದ್ದು ಬರುವುದು ಯಾವಾಗ ಸಂಭವಿಸುತ್ತದೆ?

12 ಈಗ ಈ ಜಯಶಾಲಿಗಳು ಪುನಃ ಜೀವಿಸುತ್ತಾರೆ! ಯೋಹಾನನು ವರದಿಸುವುದು: “ಮತ್ತು ಅವರು ಜೀವಿತರಾದರು ಮತ್ತು ಕ್ರಿಸ್ತನೊಂದಿಗೆ ರಾಜರಾಗಿ ಒಂದು ಸಾವಿರ ವರುಷ ಆಳಿದರು.” (ಪ್ರಕಟನೆ 20:4ಸಿ, NW)  ಜನಾಂಗಗಳ ನಾಶನದ ಮತ್ತು ಸೈತಾನ ಹಾಗೂ ಅವನ ದೆವ್ವಗಳ ಅಧೋಲೋಕಕ್ಕೆ ದಬ್ಬುವಿಕೆಯ ಅನಂತರದ ತನಕ ಈ ನ್ಯಾಯಾಧೀಶರು ಪುನರುತ್ಥಾನಗೊಳಿಸಲ್ಪಡಲಿಲ್ಲವೆಂದಿದರ ಅರ್ಥವೂ? ಅಲ್ಲ. ಅವರಲ್ಲಿ ಅಧಿಕಾಂಶ ಮಂದಿ ಈಗಾಗಲೆ ಜೀವಂತರಾಗಿದ್ದಾರೆ, ಯಾಕಂದರೆ ಅರ್ಮಗೆದೋನಿನಲ್ಲಿ ಜನಾಂಗಗಳ ವಿರುದ್ಧ ಅವರು ಯೇಸುವಿನೊಂದಿಗೆ ಸವಾರಿಮಾಡಿದ್ದಾರೆ. (ಪ್ರಕಟನೆ 2:26, 27; 19:14) ನಿಜವಾಗಿಯೂ, ಪೌಲನು ಸೂಚಿಸಿದ್ದೇನಂದರೆ, 1914 ರಲ್ಲಿ ಯೇಸುವಿನ ಸಾನ್ನಿಧ್ಯವು ಆರಂಭಗೊಂಡ ಮೇಲೆ ಬೇಗನೆ, ಅವರ ಪುನರುತ್ಥಾನವು ಆರಂಭಗೊಳ್ಳುತ್ತದೆ ಮತ್ತು ಕೆಲವರು ಇನ್ನಿತರರಿಗಿಂತ ಮೊದಲೇ ಪುನರುತ್ಥಾನಗೊಳಿಸಲ್ಪಡುತ್ತಾರೆ. (1 ಕೊರಿಂಥ 15:51-54; 1 ಥೆಸಲೊನೀಕ 4:15-17) ಆದಕಾರಣ, ಅವರು ಪರಲೋಕದಲ್ಲಿ ಅಮರ ಜೀವಿತದ ಕೊಡುಗೆಯನ್ನು ವೈಯಕ್ತಿಕವಾಗಿ ಪಡೆಯುತ್ತಿರುವಾಗ, ಜೀವಿತಕ್ಕೆ ಅವರ ಬರೋಣವು ಒಂದು ಸಮಯಾವಧಿಯ ತನಕ ಸಂಭವಿಸುತ್ತದೆ.—2 ಥೆಸಲೊನೀಕ 1:7; 2 ಪೇತ್ರ 3:11-14.

13. (ಎ) ನಾವು 1,44,000 ಮಂದಿಯ ಸಾವಿರ ವರುಷಗಳ ಆಳಿಕೆಯನ್ನು ಹೇಗೆ ವೀಕ್ಷಿಸತಕ್ಕದ್ದು, ಮತ್ತು ಯಾಕೆ? (ಬಿ) ಹೈರಾಪೊಲಿಸಿನ ಪ್ಯಾಪಿಯಸನು ಸಾವಿರ ವರುಷಗಳನ್ನು ಹೇಗೆ ವೀಕ್ಷಿಸಿದನು? (ಪಾದಟಿಪ್ಪಣಿ ನೋಡಿ.)

13 ಅವರ ಆಳುವಿಕೆ ಮತ್ತು ನ್ಯಾಯತೀರಿಸುವಿಕೆ ಒಂದು ಸಾವಿರ ವರುಷಗಳಿಗಾಗಿ ಇರುವುದು. ಇದು ಅಕ್ಷರಾರ್ಥಕ ಒಂದು ಸಾವಿರ ವರುಷಗಳೋ, ಯಾ ನಾವಿದನ್ನು ಸಾಂಕೇತಿಕವಾಗಿ ಒಂದು ಅನಿರ್ಧರಿತ, ಸಮಯದ ಒಂದು ದೀರ್ಘ ಅವಧಿಯಾಗಿ ವೀಕ್ಷಿಸತಕ್ಕದ್ದೋ? ಒಂದು ಸಮುವೇಲ 21:11 ರಲ್ಲಿ ಇರುವಂತೆ “ಸಾವಿರಗಟ್ಟಲೆ”ಗೆ ಒಂದು ದೊಡ್ಡದಾದ, ಅನಿಗದಿತ ಸಂಖ್ಯೆಯೆಂಬರ್ಥವಿರಬಹುದು. ಆದರೆ ಇಲ್ಲಿ “ಸಾವಿರ” ಎಂಬುದು ಅಕ್ಷರಶಃವಾಗಿದೆ, ಯಾಕಂದರೆ ಅದು ಪ್ರಕಟನೆ 20:5-7 ರಲ್ಲಿ ಸಾವಿರ ವರುಷ” ಎಂದು ಮೂರು ಬಾರಿ ಕಂಡುಬರುತ್ತದೆ. ಪೌಲನು ತೀರ್ಪಿನ ಈ ಸಮಯವನ್ನು “ಒಂದು ದಿವಸ” ಎಂದು ಇದನ್ನು ಹೇಳುವಾಗ ಅಂದಿದ್ದಾನೆ: “ಆತನು [ದೇವರು] ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ.” (ಅ. ಕೃತ್ಯಗಳು 17:31) ಯೆಹೋವನಿಗೆ ಒಂದು ದಿನ ಒಂದು ಸಾವಿರ ವರುಷಗಳೋಪಾದಿ ಇದೆಯೆಂದು ಪೇತ್ರನು ನಮಗೆ ಹೇಳಿರುವುದರಿಂದ, ಈ ತೀರ್ಪಿನ ದಿನವು ಅಕ್ಷರಾರ್ಥಕವಾದ ಒಂದು ಸಾವಿರ ವರುಷಗಳಾಗಿರುವುದು ತಕ್ಕದಾಗಿದೆ. *2 ಪೇತ್ರ 3:8.

ಮಿಕ್ಕ ಸತ್ತವರು

14. (ಎ) “ಮಿಕ್ಕ ಸತ್ತವರ” ಕುರಿತು ಯೋಹಾನನು ಯಾವ ಹೇಳಿಕೆಯನ್ನು ನಡುವೆ ಸೇರಿಸುತ್ತಾನೆ? (ಬಿ) “ಜೀವಿತರಾಗಿ ಏಳುವುದು” ಎಂಬ ಪದಗಳ ಮೇಲೆ ಅಪೊಸ್ತಲ ಪೌಲನಿಂದ ಮಾಡಲ್ಪಟ್ಟ ಹೇಳಿಕೆಗಳು ಹೇಗೆ ಬೆಳಕನ್ನು ಬೀರುತ್ತವೆ?

14 ಇಲ್ಲಿ ಮಧ್ಯೆ ಅಪೊಸ್ತಲ ಯೋಹಾನನು ಸೇರಿಸುವಂತೆ, (ಮಿಕ್ಕ ಸತ್ತವರು ಆ ಸಾವಿರ ವರುಷ ತೀರುವ ತನಕ ಜೀವಿತರಾಗಿ ಏಳಲಿಲ್ಲ) ವಾದರೆ ಈ ರಾಜರು ಯಾರ ನ್ಯಾಯತೀರಿಸುವರು? (ಪ್ರಕಟನೆ 20:5ಎ, NW)  ಪುನಃ, “ಜೀವಿತರಾಗಿ ಏಳಲಿಲ್ಲ” ಎಂಬ ವಾಕ್ಸರಣಿಯನ್ನು ಪೂರ್ವಾಪರಕ್ಕನುಸಾರ ಅರ್ಥೈಸಿಕೊಳ್ಳತಕ್ಕದ್ದು. ಈ ವಾಕ್ಸರಣಿಗೆ ವಿವಿಧ ಪರಿಸ್ಥಿತಿಗಳಲ್ಲಿ ವಿವಿಧ ಅರ್ಥಗಳಿರಬಲ್ಲದು. ಉದಾಹರಣೆಗೆ, ಪೌಲನು ತನ್ನ ಅಭಿಷಿಕ್ತ ಸಹ ಕ್ರೈಸ್ತರ ಕುರಿತಾಗಿ ಅಂದದ್ದು: “ಆತನು [ದೇವರು] ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಿಮ್ಮನ್ನು ಸಹ ಬದುಕಿಸಿದನು.” (ಎಫೆಸ 2:1) ಹೌದು, ಮೊದಲನೆಯ ಶತಕದಲ್ಲಿಯೂ ಕೂಡ ಆತ್ಮಾಭಿಷಿಕ್ತ ಕ್ರೈಸ್ತರು ಕ್ರಿಸ್ತನ ಯಜ್ಞದಲ್ಲಿ ಅವರ ನಂಬಿಕೆಯ ಆಧಾರದ ಮೇಲೆ ನೀತಿವಂತರೆಂದು ಘೋಷಿಸಲ್ಪಟ್ಟು, ‘ಬದುಕಿಸಲ್ಪಟ್ಟರು.’—ರೋಮಾಪುರ 3:23, 24.

15. (ಎ) ಕ್ರೈಸ್ತ ಪೂರ್ವದ ಯೆಹೋವನ ಸಾಕ್ಷಿಗಳು ದೇವರೊಂದಿಗೆ ಯಾವ ನಿಲುವಿನಲ್ಲಿ ಆನಂದಿಸಿದರು? (ಬಿ) ಬೇರೆ ಕುರಿಗಳು “ಜೀವಿತಕ್ಕೆ ಬರುವುದು” ಹೇಗೆ, ಮತ್ತು ಪೂರ್ಣಾರ್ಥದಲ್ಲಿ ಅವರು ಭೂಮಿಯನ್ನು ಪಡೆಯುವುದು ಯಾವಾಗ?

15 ತದ್ರೀತಿಯಲ್ಲಿ, ದೇವರೊಂದಿಗಿನ ಮಿತ್ರತ್ವದ ಸಂಬಂಧದಲ್ಲಿ ಕೂಡ ಕ್ರೈಸ್ತತ್ವಕ್ಕೆ ಮುಂಚಿನ ಯೆಹೋವನ ಸಾಕ್ಷಿಗಳು ನೀತಿವಂತರೆಂದು ಘೋಷಿಸಲ್ಪಟ್ಟಿದ್ದರು; ಮತ್ತು ಅಬ್ರಹಾಮ, ಇಸಾಕ, ಮತ್ತು ಯಾಕೋಬರು, ಶಾರೀರಿಕವಾಗಿ ಮೃತರಾಗಿದ್ದರೂ, ಅವರ ಕುರಿತಾಗಿ “ಜೀವಿತ” ರೋಪಾದಿ ಮಾತಾಡಲಾಗಿದೆ. (ಮತ್ತಾಯ 22:31, 32; ಯಾಕೋಬ 2:21, 23) ಆದಾಗ್ಯೂ, ಅವರು ಹಾಗೂ ಪುನರುತ್ಥಾನಗೊಳಿಸಲ್ಪಟ್ಟ ಇತರರೆಲ್ಲರು, ಹಾಗೂ ಅರ್ಮಗೆದೋನನ್ನು ಪಾರಾಗುವ ನಂಬಿಗಸ್ತ ಬೇರೆ ಕುರಿಗಳ ಮಹಾ ಸಮೂಹದವರು ಮತ್ತು ಇವರಿಗೆ ನೂತನ ಲೋಕದಲ್ಲಿ ಹುಟ್ಟಬಹುದಾದ ಮಕ್ಕಳು, ಇನ್ನೂ ಮಾನವ ಪರಿಪೂರ್ಣತೆಗೆ ಏರಿಸಲ್ಪಡಬೇಕು. ಇದು ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಆಧಾರದಲ್ಲಿ ಕ್ರಿಸ್ತನ ಮತ್ತು ಅವನ ಜೊತೆ ಅರಸರಿಂದ ಮತ್ತು ಯಾಜಕರಿಂದ ಸಾವಿರ-ವರುಷದ ತೀರ್ಪಿನ ದಿನದಲ್ಲಿ ಪೂರೈಸಲ್ಪಡುವುದು. ಆ ದಿನದ ಅಂತ್ಯದೊಳಗೆ, “ಮಿಕ್ಕ ಸತ್ತವರು” ಪರಿಪೂರ್ಣ ಮಾನವರಾಗುವ ಅರ್ಥದಲ್ಲಿ “ಜೀವಿತರಾಗಿ ಏಳು” ವರು. ನಾವು ನೋಡಲಿರುವಂತೆ, ಅನಂತರ ಅವರು ಅಂತಿಮ ಪರೀಕ್ಷೆಯೊಂದನ್ನು ಪಾರಾಗಬೇಕಾಗಿದೆ, ಆದರೆ ಪರಿಪೂರ್ಣಗೊಂಡ ಮಾನವರೋಪಾದಿ ಆ ಪರೀಕ್ಷೆಯನ್ನು ಅವರು ಎದುರಿಸುವರು. ಅವರು ಪರೀಕ್ಷೆಯಲ್ಲಿ ತೇರ್ಗಡೆಗೊಂಡನಂತರ, ದೇವರು ಅವರನ್ನು ಪೂರ್ಣಾರ್ಥದಲ್ಲಿ ನೀತಿವಂತರೆಂದು, ಹೀಗೆ ಸದಾಕಾಲಕ್ಕೂ ಜೀವಿಸಲು ಯೋಗ್ಯರೆಂದು ಘೋಷಿಸುವನು. ಈ ವಾಗ್ದಾನದ ಪೂರ್ಣ ನೆರವೇರಿಕೆಯನ್ನು ಅವರು ಅನುಭವಿಸುವರು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ವಿಧೇಯ ಮಾನವ ಕುಲಕ್ಕೆ ಎಂತಹ ಆಹ್ಲಾದಕರ ಭವಿಷ್ಯತ್ತೊಂದು ಇದೆ!

ಪ್ರಥಮ ಪುನರುತ್ಥಾನ

16. ಕ್ರಿಸ್ತನೊಂದಿಗೆ ಅರಸರಾಗಿ ಆಳುವವರಿಂದ ಅನುಭವಿಸಲ್ಪಡುವ ಪುನರುತ್ಥಾನವನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ, ಮತ್ತು ಯಾಕೆ?

16 ‘ಜೀವಿತರಾಗಿ, ಕ್ರಿಸ್ತನೊಂದಿಗೆ ರಾಜರಾಗಿ ಒಂದು ಸಾವಿರ ವರುಷ ಆಳಿದ’ ಇವರೆಡೆಗೆ ಈಗ ಹಿಂದೆರಳುತ್ತಾ, ಯೋಹಾನನು ಬರೆಯುವುದು: “ಇದು ಪ್ರಥಮ ಪುನರುತ್ಥಾನ.” (ಪ್ರಕಟನೆ 20:5ಬಿ, NW)  ಅದು ಪ್ರಥಮ ಹೇಗೆ? ಸಮಯದಲ್ಲಿ ಅದು “ಪ್ರಥಮ ಪುನರುತ್ಥಾನ” ವಾಗಿದೆ, ಯಾಕಂದರೆ ಅದನ್ನು ಅನುಭವಿಸುವವರು “ದೇವರಿಗೆ ಮತ್ತು ಕುರಿಮರಿಗೆ ಪ್ರಥಮಫಲ” ಗಳಾಗಿದ್ದಾರೆ. (ಪ್ರಕಟನೆ 14:4) ಪ್ರಮುಖತೆಯಲ್ಲಿ ಕೂಡ ಅದು ಪ್ರಥಮ, ಏಕೆಂದರೆ ಅದರಲ್ಲಿ ಪಾಲು ತೆಗೆದುಕೊಳ್ಳುವವರು, ಯೇಸುವಿನೊಂದಿಗೆ ಅವನ ಸ್ವರ್ಗೀಯ ರಾಜ್ಯದಲ್ಲಿ ಜೊತೆ ಅರಸರಾಗುವರು ಮತ್ತು ಉಳಿದ ಮಾನವ ಕುಲದವರ ನ್ಯಾಯವಿಚಾರಿಸುವರು. ಕೊನೆಯಲ್ಲಿ, ಅದು ಗುಣಮಟ್ಟದಲ್ಲಿ ಪ್ರಥಮದ್ದಾಗಿದೆ. ಸ್ವತಃ ಯೇಸು ಕ್ರಿಸ್ತನ ಹೊರತಾಗಿ, ಪ್ರಥಮ ಪುನರುತ್ಥಾನದಲ್ಲಿ ಎಬ್ಬಿಸಲ್ಪಡುವ ಜೀವಗಳು ಮಾತ್ರ ಅಮರತ್ವವನ್ನು ಪಡೆಯುತ್ತವೆಂದು ಬೈಬಲಿನಲ್ಲಿ ಹೇಳಲಾಗಿದೆ.—1 ಕೊರಿಂಥ 15:53; 1 ತಿಮೊಥೆಯ 6:16.

17. (ಎ) ಅಭಿಷಿಕ್ತ ಕ್ರೈಸ್ತರಿಗಾಗಿ ಧನ್ಯತೆಯ ಪ್ರತೀಕ್ಷೆಯನ್ನು ಯೋಹಾನನು ವರ್ಣಿಸುವುದು ಹೇಗೆ? (ಬಿ) “ಎರಡನೆಯ ಮರಣ” ಏನಾಗಿದೆ, ಮತ್ತು 1,44,000 ಜಯಶಾಲಿಗಳ ಮೇಲೆ ಅದಕ್ಕೆ “ಅಧಿಕಾರವಿಲ್ಲ,” ಯಾಕೆ?

17 ಈ ಅಭಿಷಿಕ್ತರಿಗೆ ಎಂತಹ ಒಂದು ಧನ್ಯತೆಯ ಪ್ರತೀಕ್ಷೆ! ಯೋಹಾನನು ಘೋಷಿಸುವುದು: “ಪ್ರಥಮ ಪುನರುತ್ಥಾನದಲ್ಲಿ ಪಾಲು ಇರುವ ಯಾವನಾದರೂ ಸಂತೋಷಿಯು ಮತ್ತು ಪವಿತ್ರನು ಆಗಿದ್ದಾನೆ; ಇವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ.” (ಪ್ರಕಟನೆ 20:6ಎ, NW)  ಸ್ಮುರ್ನದ ಕ್ರೈಸ್ತರಿಗೆ ಯೇಸು ವಾಗ್ದಾನಿಸಿದಂತೆ, “ಪ್ರಥಮ ಪುನರುತ್ಥಾನ” ದಲ್ಲಿ ಭಾಗಿಗಳಾಗುವ ಈ ಜಯಶಾಲಿಗಳು, ನಿರ್ಮೂಲನದ, ಪುನರುತ್ಥಾನದ ನಿರೀಕ್ಷೆಯೊಂದಿರದ ನಾಶನದ ಅರ್ಥದಲ್ಲಿರುವ “ಎರಡನೆಯ ಮರಣ” ದಿಂದಾಗುವ ಹಾನಿಯ ಅಪಾಯದಲ್ಲಿರುವುದಿಲ್ಲ. (ಪ್ರಕಟನೆ 2:11; 20:14) ಎರಡನೆಯ ಮರಣಕ್ಕೆ ಅಂತಹ ಜಯಶಾಲಿಗಳ ಮೇಲೆ “ಅಧಿಕಾರವಿಲ್ಲ”, ಯಾಕಂದರೆ ಅವರು ನಿರ್ಲಯತ್ವವನ್ನೂ, ಅಮರತ್ವವನ್ನೂ ಧರಿಸಿಕೊಂಡಿರುವರು.—1 ಕೊರಿಂಥ 15:53.

18. ಭೂಮಿಯ ಹೊಸ ಅಧಿಪತಿಗಳ ಕುರಿತು ಯೋಹಾನನು ಈಗ ಏನನ್ನು ಹೇಳುತ್ತಾನೆ, ಮತ್ತು ಅವರೇನನ್ನು ಪೂರೈಸುವರು?

18 ಸೈತಾನನ ಅಧಿಕಾರದ ಅವಧಿಯಲ್ಲಿದ್ದ ಭೂರಾಜರಿಗಿಂತ ಇದು ಎಷ್ಟೊಂದು ಭಿನ್ನ! ಇವರು ಹೆಚ್ಚೆಂದರೆ 50 ಯಾ 60 ವರುಷ ಆಳಿದ್ದಾರೆ, ಮತ್ತು ಅಧಿಕ ಸಂಖ್ಯಾತರು ಕೇವಲ ಕೆಲವೇ ವರುಷ ಆಳಿದ್ದಾರೆ. ಅವರಲ್ಲಿ ಹೆಚ್ಚಿನವರು ಮಾನವಕುಲವನ್ನು ದಬ್ಬಾಳಿಕೆಗೊಳಪಡಿಸಿದ್ದಾರೆ. ಏನೇ ಇರಲಿ, ಎಂದೆಂದಿಗೂ ಬದಲಾಗುತ್ತಿರುವ ಧೋರಣೆಗಳೊಂದಿಗೆ ಸತತ ಬದಲಾಯಿಸಲ್ಪಡುವ ಅಧಿಪತಿಗಳ ಕೆಳಗೆ ಜನಾಂಗಗಳಾದರೂ ಶಾಶ್ವತ ಪ್ರಯೋಜನವನ್ನು ಹೇಗೆ ಪಡೆಯಶಕ್ತರು? ವಿಪರ್ಯಸ್ತವಾಗಿ, ಭೂಮಿಯ ಹೊಸ ಅಧಿಪತಿಗಳ ಕುರಿತಾದರೋ ಯೋಹಾನನು ಹೇಳುವುದು: “ಆದರೆ ಅವರು ದೇವರ ಮತ್ತು ಕ್ರಿಸ್ತನ ಯಾಜಕರಾಗಿರುವರು ಮತ್ತು ಆತನೊಂದಿಗೆ ಆ ಸಾವಿರ ವರುಷ ರಾಜರಾಗಿ ಆಳುವರು.” (ಪ್ರಕಟನೆ 20:6ಬಿ, NW)  ಯೇಸುವಿನೊಂದಿಗೆ ಅವರು ಸಾವಿರ ವರುಷಗಳ ಏಕೈಕ ಸರಕಾರವನ್ನು ರಚಿಸುವರು. ಯೇಸುವಿನ ಪರಿಪೂರ್ಣ ಮಾನವ ಯಜ್ಞದ ಪ್ರಯೋಜನಗಳನ್ನು ಅನ್ವಯಿಸುವುದರಲ್ಲಿ ಅವರ ಯಾಜಕತ್ವದ ಸೇವೆಯು ವಿಧೇಯ ಮಾನವರನ್ನು ಆತ್ಮಿಕ, ನೈತಿಕ, ಮತ್ತು ದೈಹಿಕ ಪರಿಪೂರ್ಣತೆಗೇರಿಸುವುದು. ಅವರ ರಾಜತ್ವದ ಸೇವೆಯು ಯೆಹೋವನ ನೀತಿಯನ್ನೂ, ಪವಿತ್ರತೆಯನ್ನೂ ಪ್ರತಿಬಿಂಬಿಸುವ ಭೌಗೋಳಿಕ ಮಾನವ ಸಮಾಜವನ್ನು ಕಟ್ಟುವುದರಲ್ಲಿ ಫಲಿಸುವುದು. ಸಾವಿರ ವರುಷಗಳಿಗೆ ನ್ಯಾಯಾಧೀಶರುಗಳಾಗಿ, ಯೇಸುವಿನೊಂದಿಗೆ ಅವರು ಪ್ರತಿವರ್ತಿಸುವ ಮಾನವರನ್ನು ನಿತ್ಯ ಜೀವದ ಧ್ಯೇಯದೆಡೆಗೆ ಮಾರ್ಗದರ್ಶಿಸುವರು.—ಯೋಹಾನ 3:16.

ಅಂತಿಮ ಪರೀಕ್ಷೆ

19. ಸಾವಿರ ವರುಷದ ಆಳಿಕೆಯ ಅಂತ್ಯದೊಳಗೆ ಭೂಮಿಯ ಸ್ಥಿತಿ ಮತ್ತು ಮಾನವಕುಲದ ಸ್ಥಿತಿ ಏನಾಗುವುದು, ಮತ್ತು ಈಗ ಯೇಸುವು ಏನು ಮಾಡುತ್ತಾನೆ?

19 ಸಾವಿರ ವರುಷದ ಆಳಿಕೆಯ ಅಂತ್ಯದೊಳಗೆ, ಇಡೀ ಭೂಮಿಯು ಮೂಲ ಏದೆನಿಗೆ ಅನುರೂಪವಾಗುವುದು. ಅದೊಂದು ನೈಜ ಪ್ರಮೋದವನವಾಗುವುದು. ದೇವರ ಮುಂದೆ ಅವರ ಪರವಾಗಿ ಮಧ್ಯಸ್ಥಿಕೆ ವಹಿಸಲು ಇನ್ನು ಮುಂದೆ ಒಬ್ಬ ಮಹಾ ಯಾಜಕನ ಆವಶ್ಯಕತೆಯೇನೂ ಪರಿಪೂರ್ಣ ಮಾನವ ಕುಲಕ್ಕೆ ಇರುವುದಿಲ್ಲ, ಯಾಕಂದರೆ ಆದಾಮನಿಂದ ಬಂದ ಪಾಪದ ಎಲ್ಲಾ ಕುರುಹುಗಳು ತೆಗೆಯಲಾಗುವುವು ಮತ್ತು ಕೊನೆಯ ಶತ್ರುವಾದ ಮರಣವು ನಿವೃತ್ತಿಗೊಳ್ಳುವುದು. ಒಂದು ಸರಕಾರದ ಕೆಳಗೆ ಲೋಕವನ್ನು ಸೃಷ್ಟಿಸುವ ದೇವರ ಉದ್ದೇಶವನ್ನು ಕ್ರಿಸ್ತನ ಸರಕಾರವು ಸಾಧಿಸಿರುವುದು. ಈ ಬಿಂದುವಿನಲ್ಲಿ, ಯೇಸುವು “ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡು” ವನು.—1 ಕೊರಿಂಥ 15:22-26; ರೋಮಾಪುರ 15:12.

20. ಅಂತಿಮ ಪರೀಕ್ಷೆಗಾಗಿ ಸಮಯವು ಆಗಮಿಸಿದಾಗ, ಏನು ಸಂಭವಿಸುವುದೆಂದು ಯೋಹಾನನು ನಮಗೆ ಹೇಳುತ್ತಾನೆ?

20 ಈಗ ಅಂತಿಮ ಪರೀಕ್ಷೆಗೆ ಸಮಯವಾಗಿರುತ್ತದೆ. ಪರಿಪೂರ್ಣಗೊಳಿಸಲ್ಪಟ್ಟ ಮಾನವ ಕುಲದ ಲೋಕವು, ಏದೆನಿನ ಪ್ರಥಮ ಮಾನವರಿಗೆ ವಿಪರ್ಯಸ್ತವಾಗಿ, ಅದರ ಸಮಗ್ರತೆಯಲ್ಲಿ ದೃಢವಾಗಿ ನಿಲ್ಲುವುದೋ? ಏನು ಸಂಭವಿಸುವುದು ಎಂದು ಯೋಹಾನನು ನಮಗೆ ತಿಳಿಸುತ್ತಾನೆ: “ಈಗ ಆ ಸಾವಿರ ವರುಷಗಳು ತೀರಿದ ಕೂಡಲೇ ಸೈತಾನನನ್ನು ಆತನ ಸೆರೆಯಿಂದ ಬಿಡಲಾಗುವುದು, ಮತ್ತು ಅವನು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ಗೋಗ್‌ ಮತ್ತು ಮಾಗೋಗ್‌ ಎಂಬ ಆ ಜನಾಂಗಗಳನ್ನು ಮರುಳುಗೊಳಿಸಲು, ಅವರನ್ನು ಯುದ್ಧಕ್ಕೆ ಕೂಡಿಸಲು ಅವನು ಹೊರಗೆ ಹೋಗುವನು. ಇವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವುದು. ಮತ್ತು ಅವರು ಭೂಮಿಯ ವೈಶಾಲ್ಯದಲ್ಲಿ ಮುಂದೆ ಸಾಗಿ ಪವಿತ್ರ ಜನರ ಶಿಬಿರವನ್ನು ಮತ್ತು ಪ್ರಿಯ ನಗರವನ್ನು ಸುತ್ತುಟ್ಟಿದರು.”—ಪ್ರಕಟನೆ 20:7-9ಎ, NW.

21. ಅವನ ಕೊನೆಯ ಪ್ರಯತ್ನಕ್ಕೆ, ಸೈತಾನನು ಹೇಗೆ ಮುಂದರಿಯುತ್ತಾನೆ, ಮತ್ತು ಸಾವಿರ ವರುಷದ ಆಳಿಕೆಯ ನಂತರವೂ ಕೆಲವರು ಸೈತಾನನನ್ನು ಅನುಸರಿಸುವರು ಎಂಬುದಕ್ಕೆ ನಾವು ಯಾಕೆ ಆಶ್ಚರ್ಯಪಡಬಾರದು?

21 ಸೈತಾನನ ಕೊನೆಯ ಪ್ರಯತ್ನವು ಎಷ್ಟು ಫಲಪ್ರದವಾಗುವುದು? ಅವನು “ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ಗೋಗ್‌ ಮತ್ತು ಮಾಗೋಗ್‌ ಎಂಬ ಆ ಜನಾಂಗಗಳನ್ನು” ವಂಚಿಸುತ್ತಾನೆ ಮತ್ತು ಅವರನ್ನು “ಯುದ್ಧಕ್ಕೆ” ನಡಿಸುತ್ತಾನೆ. ಸಂತಸದ, ಬಲವರ್ಧಕವಾದ ದೇವಪ್ರಭುತ್ವ ಆಳಿಕೆಯ ಸಾವಿರ ವರುಷಗಳ ಅನಂತರ ಯಾರು ತಾನೇ ಸೈತಾನನ ಪಕ್ಷ ವಹಿಸಬಲ್ಲರು? ಒಳ್ಳೇದು, ಏದೆನಿನ ಪ್ರಮೋದವನದಲ್ಲಿ ಪರಿಪೂರ್ಣರಾದ ಆದಾಮ ಮತ್ತು ಹವ್ವರು ಜೀವಿತದಲ್ಲಿ ಆನಂದಿಸುತ್ತಿದ್ದಾಗಲೇ, ಅವರನ್ನು ಮೋಸಗೊಳಿಸಲು ಸೈತಾನನು ಶಕ್ತನಾದನೆಂಬುದನ್ನು ಮರೆಯಬೇಡಿರಿ. ಮತ್ತು ಮೂಲ ದಂಗೆಯ ಕೆಟ್ಟ ಫಲಿತಾಂಶಗಳನ್ನು ನೋಡಿದ ಸ್ವರ್ಗೀಯ ದೇವದೂತರ ದಾರಿತಪ್ಪಿಸಲು ಅವನು ಸಮರ್ಥನಾಗಿದ್ದನು. (2 ಪೇತ್ರ 2:4; ಯೂದ 6) ಆದುದರಿಂದ, ದೇವರ ರಾಜ್ಯದ ಆಹ್ಲಾದಕರ ಸಾವಿರ ವರುಷಗಳ ಆಳಿಕೆಯ ಅನಂತರ ಕೂಡ ಸೈತಾನನನ್ನು ಹಿಂಬಾಲಿಸಲು ಕೆಲವು ಪರಿಪೂರ್ಣ ಮಾನವರು ಸೆಳೆಯಲ್ಪಡುವರು ಎಂಬುದರ ಕುರಿತು ನಾವು ಆಶ್ಚರ್ಯಪಡಬೇಕಾಗಿಲ್ಲ.

22. (ಎ) “ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ . . . ಆ ಜನಾಂಗಗಳು” ಎಂಬ ವಾಕ್ಸರಣಿಯಿಂದ ಏನು ಸೂಚಿಸಲ್ಪಟ್ಟಿದೆ? (ಬಿ) ದಂಗೆಕೋರರು “ಗೋಗ್‌ ಮತ್ತು ಮಾಗೋಗ್‌” ಎಂದು ಯಾಕೆ ಕರೆಯಲ್ಪಡುತ್ತಾರೆ?

22 ಈ ದಂಗೆಕೋರರನ್ನು ಬೈಬಲು “ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ . . . ಆ ಜನಾಂಗಗಳು” ಎಂದು ಕರೆಯುತ್ತದೆ. ಮಾನವ ಕುಲವು ಪುನಃ ಪರಸ್ಪರ ಪ್ರತ್ಯೇಕವಾದ ರಾಷ್ಟ್ರೀಯ ಅಸ್ತಿತ್ವಗಳಾಗಿ ವಿಭಜಿತಗೊಳ್ಳುವದು ಎಂದು ಇದರ ಅರ್ಥವಲ್ಲ. ಯೆಹೋವನ ನೀತಿಯ, ನಿಷ್ಠಾವಂತ ಜನರಿಂದ ಇವರು ಸ್ವತಃ ತಮ್ಮನ್ನು ಪ್ರತ್ಯೇಕಿಸಿಕೊಳ್ಳುವರು ಮತ್ತು ಇಂದು ಜನಾಂಗಗಳು ತೋರಿಸುವಂತಹ ಅದೇ ಕೆಟ್ಟ ಆತ್ಮವನ್ನು ಪ್ರದರ್ಶಿಸುವರು ಎಂದಷ್ಟೇ ಅದು ತೋರಿಸುತ್ತದೆ. ಭೂಮಿಯ ಮೇಲಿನ ದೇವಪ್ರಭುತ್ವ ಸರಕಾರವನ್ನು ನಾಶಗೊಳಿಸುವ ಧ್ಯೇಯದೊಂದಿಗೆ, ಯೆಹೆಜ್ಕೇಲನ ಪ್ರವಾದನೆಯಲ್ಲಿ ಮಾಗೋಗಿನ ಗೋಗನು ಮಾಡಿದಂತೆ, ಅವರ “ಮನಸ್ಸಿನಲ್ಲಿ ಆಲೋಚನೆಗಳು ಹುಟ್ಟುವವು.” (ಯೆಹೆಜ್ಕೇಲ 38:3, 10-12) ಆದುದರಿಂದ ಅವರನ್ನು “ಗೋಗ್‌ ಮತ್ತು ಮಾಗೋಗ್‌” ಎಂದು ಕರೆಯಲಾಗಿದೆ.

23. ದಂಗೆಕೋರರ ಸಂಖ್ಯೆಯು “ಸಮುದ್ರದ ಮರಳಿನಷ್ಟಿರುವುದು” ಎಂಬ ನಿಜಾಂಶದಿಂದ ಏನು ಸೂಚಿಸಲ್ಪಟ್ಟಿದೆ?

23 ಅವನ ದಂಗೆಯಲ್ಲಿ ಸೈತಾನನೊಂದಿಗೆ ಸೇರುವವರ ಸಂಖ್ಯೆ ‘ಸಮುದ್ರದ ಮರಳಿನಷ್ಟಿರುವುದು.’ ಅದು ಎಷ್ಟು? ಪೂರ್ವನಿರ್ಧಾರಿತ ಸಂಖ್ಯೆ ಅಲ್ಲಿಲ್ಲ. (ಹೋಲಿಸಿ ಯೆಹೋಶುವ 11:4; ನ್ಯಾಯಸ್ಥಾಪಕರು 7:12.) ಸೈತಾನನ ಮೋಸದ ತಂತ್ರಗಳಿಗೆ ಪ್ರತಿಯೊಬ್ಬ ವ್ಯಕ್ತಿಯು ಹೇಗೆ ಪ್ರತಿಕ್ರಿಯೆ ತೋರಿಸುತ್ತಾನೆ ಎಂಬುದರ ಮೇಲೆ ದಂಗೆಕೋರರ ಜುಮ್ಲಾ ಸಂಖ್ಯೆಯು ಆಧಾರಿತವಾಗಿದೆ. ಆದರೂ, ನಿಸ್ಸಂದೇಹವಾಗಿ ಒಂದು ಗಮನಾರ್ಹ ಸಂಖ್ಯೆ ಅಲ್ಲಿರುವುದು, ಯಾಕಂದರೆ “ಪವಿತ್ರ ಜನರ ಶಿಬಿರಕ್ಕೆ ಮತ್ತು ಪ್ರಿಯ ನಗರ”ಕ್ಕೆ ವಿರೋಧವಾಗಿ ಬರುವಷ್ಟು ಶಕ್ತರಾಗಿದ್ದೇವೆ ಎಂದವರು ಭಾವಿಸುವರು.

24. (ಎ) “ಪ್ರಿಯ ನಗರ” ಏನು, ಮತ್ತು ಅದನ್ನು ಸುತ್ತುಗಟ್ಟುವುದು ಹೇಗೆ ಸಾಧ್ಯ? (ಬಿ) “ಪವಿತ್ರ ಜನರ ಶಿಬಿರದಿಂದ” ಏನು ಪ್ರತಿನಿಧಿಸಲ್ಪಡುತ್ತದೆ?

24 “ಪ್ರಿಯ ನಗರ”ವು, ಪ್ರಕಟನೆ 3:12 ರಲ್ಲಿ ಮಹಿಮೆಗೇರಿಸಲ್ಪಟ್ಟ ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಹೇಳಿದ ನಗರವಾಗಿರತಕ್ಕದ್ದು ಮತ್ತು ಅವನದನ್ನು “ನನ್ನ ದೇವರ ಬಳಿಯಿಂದ ಪರಲೋಕದೊಳಗಿಂದ ಇಳಿದು ಬರುವ ಹೊಸ ಯೆರೂಸಲೇಮ್‌ ಎಂಬ ನನ್ನ ದೇವರ ನಗರ” ಎಂದು ಕರೆದಿರುತ್ತಾನೆ. ಇದೊಂದು ಸ್ವರ್ಗೀಯ ಸಂಸ್ಥೆಯಾಗಿರುವುದರಿಂದ, ಈ ಐಹಿಕ ಶಕ್ತಿಗಳು ಅದಕ್ಕೆ ‘ಮುತ್ತಿಗೆ ಹಾಕು’ ವುದು ಹೇಗೆ ಸಾಧ್ಯ? ಅವರು “ಪವಿತ್ರ ಜನರ ಶಿಬಿರ”ಕ್ಕೆ ಮುತ್ತಿಗೆ ಹಾಕುತ್ತಾರೆ. ಒಂದು ದಂಡು ನಗರದ ಹೊರಗೆ ಇರುತ್ತದೆ; ಆದಕಾರಣ “ಪವಿತ್ರ ಜನರ ಶಿಬಿರ” ಹೊಸ ಯೆರೂಸಲೇಮಿನ ಸ್ವರ್ಗೀಯ ನೆಲೆಯಿಂದ ಹೊರಗೆ ಭೂಮಿಯ ಮೇಲೆ ಇದ್ದು ಯೆಹೋವನ ಸರಕಾರೀ ಏರ್ಪಾಡನ್ನು ನಿಷ್ಠೆಯಿಂದ ಬೆಂಬಲಿಸುವವರನ್ನು ಪ್ರತಿನಿಧಿಸುತ್ತದೆ. (ಮತ್ತಾಯ 25:40, 45) ಸ್ವರ್ಗೀಯ ಹೊಸ ಯೆರೂಸಲೇಮ್‌ ಭೂಮಿಯನ್ನು ಪ್ರಮೋದವನವನ್ನಾಗಿ ಮಾಡುವುದರಲ್ಲಿ ಪೂರೈಸಿರುವದೆಲ್ಲವನ್ನೂ ಅಳಿಸಿ ಬಿಡಲು “ಆ ಜನಾಂಗಗಳು” ಪ್ರಯತ್ನಿಸುವುವು. ಹೀಗೆ “ಪವಿತ್ರ ಜನರ ಶಿಬಿರ” ವನ್ನು ಆಕ್ರಮಿಸುವುದರಲ್ಲಿ, ಅವರು “ಪ್ರಿಯ ನಗರ” ವನ್ಸು ಸಹ ಆಕ್ರಮಿಸುತ್ತಾರೆ.

ಬೆಂಕಿಗಂಧಕಗಳ ಕೆರೆ

25. “ಪವಿತ್ರ ಜನರ ಶಿಬಿರದ” ಮೇಲೆ ದಂಗೆಕೋರರ ದಾಳಿಯ ಫಲಿತಾಂಶವನ್ನು ಯೋಹಾನನು ಹೇಗೆ ವರ್ಣಿಸುತ್ತಾನೆ, ಮತ್ತು ಇದು ಸೈತಾನನಿಗೆ ಯಾವ ಅರ್ಥದಲ್ಲಿರುವುದು?

25 ಸೈತಾನನಿಂದ ಈ ಕೊನೆಯ ಪ್ರಯತ್ನವು ಯಶಸ್ವಿಗೊಳ್ಳುವುದೋ? ನಿಶ್ಚಯವಾಗಿಯೂ ಇಲ್ಲ—ನಮ್ಮ ದಿನಗಳಲ್ಲಿ ಆತ್ಮಿಕ ಇಸ್ರಾಯೇಲಿನ ಮೇಲೆ ಮಾಗೋಗಿನ ಗೋಗನು ಮಾಡಲಿರುವ ಆಕ್ರಮಣವು ಹೇಗೆ ಯಶಸ್ವಿಗೊಳ್ಳುವದಿಲ್ಲವೋ ಅಂತೆಯೇ! (ಯೆಹೆಜ್ಕೇಲ 38:18-23) ಯೋಹಾನನು ಫಲಿತಾಂಶವನ್ನು ವಿಶದವಾಗಿ ವರ್ಣಿಸುತ್ತಾನೆ: “ಆದರೆ ಪರಲೋಕದಿಂದ ಬೆಂಕಿ ಇಳಿದುಬಂತು ಮತ್ತು ಅವರನ್ನು ದಹಿಸಿಬಿಟ್ಟಿತು. ಮತ್ತು ಅವರನ್ನು ಮರುಳುಗೊಳಿಸುತ್ತಿದ್ದ ಪಿಶಾಚನು, ಎಲ್ಲಿ ಕಾಡು ಮೃಗ ಮತ್ತು ಸುಳ್ಳು ಪ್ರವಾದಿ ಇವರಿಬ್ಬರೂ ಇದ್ದಾರೋ, ಆ ಬೆಂಕಿಗಂಧಕಗಳ ಕೆರೆಗೆ ದೊಬ್ಬಲ್ಪಟ್ಟನು.” (ಪ್ರಕಟನೆ 20:9ಬಿ-10ಎ, NW)  ಕೇವಲ ಅಧೋಲೋಕಕ್ಕೆ ದೊಬ್ಬಲ್ಪಡುವ ಬದಲಾಗಿ, ಈ ಸಾರಿ ಸೈತಾನನಾದ ಪುರಾತನ ಸರ್ಪನು ಅಸ್ತಿತ್ವದಲ್ಲಿಲ್ಲದೆ ಹೋಗುವಂತೆ ಪುಡಿಪುಡಿಮಾಡಲ್ಪಡುವನು, ಬೆಂಕಿಯಿಂದಲೋ ಎಂಬಂತೆ ಪೂರ್ಣವಾಗಿ ನಿರ್ಮೂಲಗೊಳಿಸಲ್ಪಡುವನು.

26. “ಬೆಂಕಿಗಂಧಕಗಳ ಕೆರೆಯು” ಯಾಕೆ ಪೀಡನೆಯ ಒಂದು ಅಕ್ಷರಾರ್ಥಕ ಸ್ಥಳವಾಗಿರದು?

26 “ಬೆಂಕಿಗಂಧಕಗಳ ಕೆರೆ”ಯು ಯಾತನೆಯ ಒಂದು ಅಕ್ಷರಾರ್ಥಕ ಸ್ಥಳವಾಗಿರಸಾಧ್ಯವಿಲ್ಲವೆಂದು ನಾವೀಗಾಗಲೇ ಗಮನಿಸಿದ್ದೇವೆ. (ಪ್ರಕಟನೆ 19:20) ಎಲ್ಲಾ ನಿತ್ಯತೆಗಾಗಿ ಸೈತಾನನು ಅಲ್ಲಿ ವೇದನಾಭರಿತ ಯಾತನೆಯನ್ನು ಅನುಭವಿಸುವುದಾದರೆ, ಯೆಹೋವನು ಅವನನ್ನು ಸದಾ ಕಾಲಕ್ಕೂ ಜೀವಂತನಾಗಿ ಇಡತಕ್ಕದ್ದು. ಆದರೂ ಜೀವವು ಒಂದು ವರದಾನವಾಗಿದೆ, ಒಂದು ಶಿಕ್ಷೆಯಲ್ಲ. ಪಾಪದ ಶಿಕ್ಷೆ ಮರಣವಾಗಿದೆ, ಮತ್ತು ಬೈಬಲಿಗನುಸಾರ, ಸತ್ತ ಜೀವಿಗಳಿಗೆ ಯಾವುದೇ ವೇದನೆಯ ಅನಿಸಿಕೆಯಿರುವುದಿಲ್ಲ. (ರೋಮಾಪುರ 6:23; ಪ್ರಸಂಗಿ 9:5, 10) ಇನ್ನೂ ಹೆಚ್ಚಾಗಿ, ಮರಣವು ತಾನೇ ಹೇಡಿಸ್‌ನೊಂದಿಗೆ, ಅದೇ ಬೆಂಕಿಗಂಧಕಗಳ ಕೆರೆಯೊಳಗೆ ದೊಬ್ಬಲ್ಪಡುವುದನ್ನು ನಾವು ಅನಂತರ ಓದುತ್ತೇವೆ. ಮೃತ್ಯು ಮತ್ತು ಹೇಡಿಸ್‌ ವೇದನೆಯನ್ನು ಅನುಭವಿಸವೆಂಬುದು ಖಂಡಿತ!—ಪ್ರಕಟನೆ 20:14.

27. ಸೊದೋಮ್‌ ಗೊಮೋರಕ್ಕೆ ಏನು ಸಂಭವಿಸಿತೋ ಅದು ಬೆಂಕಿಗಂಧಕಗಳ ಕೆರೆಯನ್ನು ಅರ್ಥೈಸಲು ನಮಗೆ ಹೇಗೆ ಸಹಾಯ ಮಾಡುತ್ತದೆ?

27 ಬೆಂಕಿಗಂಧಕಗಳ ಕೆರೆಯು ಸಾಂಕೇತಿಕವಾಗಿದೆಯೆಂಬ ನೋಟವನ್ನು ಇದೆಲ್ಲವು ಬಲಪಡಿಸುತ್ತದೆ. ಇನ್ನೂ ಹೆಚ್ಚಾಗಿ, ಬೆಂಕಿ ಗಂಧಕಗಳ ಉಲ್ಲೇಖವು, ಅವುಗಳ ಘೋರ ದುಷ್ಟತನದ ಕಾರಣ ದೇವರಿಂದ ನಾಶಗೊಳಿಸಲ್ಪಟ್ಟ ಪ್ರಾಚೀನ ಸೊದೋಮ್‌ ಗೊಮೋರದ ಅಂತ್ಯಸ್ಥಿತಿಯನ್ನು ಮನಸ್ಸಿಗೆ ತರುತ್ತದೆ. ಅವುಗಳ ಸಮಯವು ಆಗಮಿಸಿದಾಗ, “ಯೆಹೋವನು ಸೊದೋಮ್‌ ಗೊಮೋರಗಳ ಮೇಲೆ ಆಕಾಶದಿಂದ ಅಗ್ನಿಗಂಧಕಗಳನ್ನು ಸುರಿಸಿ” ದನು. (ಆದಿಕಾಂಡ 19:24) ಈ ಎರಡು ನಗರಗಳಿಗೆ ಏನು ಸಂಭವಿಸಿತೋ ಅದನ್ನು “ನಿತ್ಯವಾದ ಬೆಂಕಿಯಲ್ಲಿ ದಂಡನೆಯನ್ನು ಅನುಭವಿಸು” ವುದು ಎಂಬುದಾಗಿ ಕರೆಯಲಾಗಿದೆ. (ಯೂದ 7) ಆದರೂ, ಈ ಎರಡು ನಗರಗಳು ನಿತ್ಯ ಯಾತನೆಯನ್ನು ಅನುಭವಿಸಲಿಲ್ಲ. ಬದಲಾಗಿ, ಅವುಗಳ ನೀತಿಭ್ರಷ್ಟ ನಿವಾಸಿಗಳೊಂದಿಗೆ ಅವುಗಳು ಎಲ್ಲಾ ಸಮಯಗಳಿಗಾಗಿ ಅಳಿಸಲ್ಪಟ್ಟವು, ಇಲ್ಲದಂತೆ ಮಾಡಲ್ಪಟ್ಟವು. ಆ ನಗರಗಳು ಇಂದು ಅಸ್ತಿತ್ವದಲ್ಲಿ ಇಲ್ಲ, ಮತ್ತು ಅವುಗಳು ಎಲ್ಲಿದ್ದವು ಎಂದು ನಿಖರವಾಗಿ ಯಾರೊಬ್ಬನೂ ಹೇಳಶಕ್ತನಾಗಿಲ್ಲ.

28. ಬೆಂಕಿಗಂಧಕಗಳ ಕೆರೆ ಏನಾಗಿದೆ, ಮತ್ತು ಅದು ಮೃತ್ಯು, ಹೇಡಿಸ್‌, ಮತ್ತು ಅಧೋಲೋಕದಂತೆ ಇಲ್ಲ ಹೇಗೆ?

28 ಇದಕ್ಕೆ ಹೊಂದಿಕೆಯಲ್ಲಿ, ಬೈಬಲ್‌ ತಾನೇ ಬೆಂಕಿಗಂಧಕಗಳ ಕೆರೆಯ ಅರ್ಥವನ್ನು ವಿವರಿಸುತ್ತದೆ: “ಆ ಬೆಂಕಿಯ ಕೆರೆಯೇ ಎರಡನೆಯ ಮರಣವು.” (ಪ್ರಕಟನೆ 20:14) ಇದು ಸ್ಪಷ್ಟವಾಗಿ, ಯೇಸುವು ಮಾತಾಡಿದ್ದಂತಹ ಗೆಹೆನ್ನಾದಂತೆಯೇ, ಎಲ್ಲಿ ದುಷ್ಟರು ನಾಶಗೊಂಡು—ಸದಾ ಕಾಲಕ್ಕೂ ಯಾತನೆಗೊಳ್ಳುವುದಲ್ಲ—ಇರುತ್ತಾರೋ ಆ ಸ್ಥಳವಾಗಿದೆ. (ಮತ್ತಾಯ 10:28) ಪುನರುತ್ಥಾನದ ಯಾವುದೇ ಒಂದು ನಿರೀಕ್ಷೆ ಇಲ್ಲದ, ಪೂರ್ಣವಾದ ಹಾಗೂ ತೀರ ನಾಶನವು ಅದಾಗಿದೆ. ಹೀಗೆ, ಮರಣದ, ಹೇಡಿಸ್‌ನ, ಮತ್ತು ಅಧೋಲೋಕದ ಬೀಗದ ಕೈಗಳು ಇರುವುದಾದರೂ, ಬೆಂಕಿಗಂಧಕಗಳ ಕೆರೆಯನ್ನು ತೆರೆಯಲು ಒಂದು ಬೀಗದ ಕೈಯ ಕುರಿತು ಯಾವ ಪ್ರಸ್ತಾವನೆಯೂ ಇಲ್ಲ. (ಪ್ರಕಟನೆ 1:18; 20:1) ಅದು ತನ್ನ ಬಂದಿಗಳನ್ನು ಎಂದಿಗೂ ಬಿಡುಗಡೆಗೊಳಿಸುವುದೇ ಇಲ್ಲ.—ಹೋಲಿಸಿ ಮಾರ್ಕ 9:43-47.

ಹಗಲಿರುಳು ಪೀಡಿಸಲ್ಪಡುವುದು

29, 30. ಪಿಶಾಚನ ಹಾಗೂ ಕಾಡು ಮೃಗದ ಮತ್ತು ಸುಳ್ಳು ಪ್ರವಾದಿಯ ಕುರಿತು ಯೋಹಾನನು ಏನನ್ನುತ್ತಾನೆ, ಮತ್ತು ಇದನ್ನು ಹೇಗೆ ಅರ್ಥೈಸಿಕೊಳ್ಳತಕ್ಕದ್ದು?

29 ಪಿಶಾಚನನ್ನೂ, ಕಾಡು ಮೃಗವನ್ನೂ ಹಾಗೂ ಸುಳ್ಳು ಪ್ರವಾದಿಯನ್ನೂ ನಿರ್ದೇಶಿಸುತ್ತಾ, ಯೋಹಾನನು ಈಗ ನಮಗೆ ಹೇಳುವುದು: “ಮತ್ತು ಅವರು ಹಗಲಿರುಳೂ ಸದಾ ಸರ್ವದಾ ಪೀಡಿಸಲ್ಪಡುವರು.” (ಪ್ರಕಟನೆ 20:10ಬಿ, NW)  ಇದರ ಅರ್ಥವೇನಾಗಿರಬಲ್ಲದು? ಈಗಾಗಲೇ ಹೇಳಲ್ಪಟ್ಟಂತೆ, ಕಾಡು ಮೃಗ ಮತ್ತು ಸುಳ್ಳು ಪ್ರವಾದಿ ಹಾಗೂ ಮೃತ್ಯು ಮತ್ತು ಹೇಡಿಸಿನಂತಹ ಸಂಕೇತಗಳು ಅಕ್ಷರಾರ್ಥಕವಾಗಿ ಪೀಡನೆಯನ್ನು ಅನುಭವಿಸಬಹುದು ಎಂದು ಹೇಳುವುದು ತರ್ಕಬದ್ಧವಲ್ಲ. ಆದಕಾರಣ, ನಿತ್ಯಕ್ಕೂ ಸೈತಾನನು ಬಾಧೆಪಡಲಿರುವನು ಎಂದು ನಂಬಲು ನಮಗೆ ಯಾವುದೇ ಕಾರಣವಿಲ್ಲ. ಅವನು ನಿರ್ಮೂಲಗೊಳಿಸಲ್ಪಡಬೇಕು.

30 ಇಲ್ಲಿ “ಪೀಡನೆ”ಗೆ ಬಳಸಲ್ಪಟ್ಟ ಗ್ರೀಕ್‌ ಶಬ್ದವು ಬ-ಸ-ನಿ-ಸೊ ಅಂದರೆ ಮೂಲತಃ “ಓರೆಗಲ್ಲಿನಿಂದ (ಲೋಹಗಳನ್ನು) ಪರೀಕ್ಷಿಸಲು” ಎಂದಾಗಿದೆ. “ಪೀಡಿಸಿ ಪ್ರಶ್ನಿಸುವುದು” ಎರಡನೆಯ ಅರ್ಥವಾಗಿದೆ. (ದ ಥೇಯರ್ಸ್‌ ಗ್ರೀಕ್‌-ಇಂಗ್ಲಿಷ್‌ ಲೆಕ್ಸಿಕನ್‌ ಆಫ್‌ ದ ನ್ಯೂ ಟೆಸ್ಟಮೆಂಟ್‌) ಪೂರ್ವಾಪರದಲ್ಲಿ, ಈ ಗ್ರೀಕ್‌ ಶಬ್ದದ ಬಳಕೆಯು, ಸೈತಾನನಿಗೆ ಏನು ಸಂಭವಿಸುತ್ತದೋ ಅದು ಎಲ್ಲಾ ನಿತ್ಯತೆಗೂ, ಯೆಹೋವನ ಆಳಿಕೆಯ ನ್ಯಾಯಯುಕ್ತತೆ ಮತ್ತು ನೀತಿಯುಕ್ತತೆಯ ವಿವಾದಾಂಶದ ಮೇಲೆ ಒಂದು ಓರೆಗಲ್ಲಿನೋಪಾದಿ ಕಾರ್ಯವೆಸಗುವುದು ಎಂದು ಸೂಚಿಸುತ್ತದೆ. ಸಾರ್ವತ್ರಿಕ ಆಳಿಕೆಯ ಆ ವಿವಾದಾಂಶವು ಒಮ್ಮೆಗೆ ಮತ್ತು ಸಾರ್ವಕಾಲಿಕವಾಗಿ ತೀರ್ಮಾನಿಸಲ್ಪಡಲಿದೆ. ಯೆಹೋವನ ಸಾರ್ವಭೌಮತೆಗೆ ಒಡ್ಡಲ್ಪಡುವ ಒಂದು ಪಂಥಾಹ್ವಾನವನ್ನು, ಅದು ತಪ್ಪೆಂದು ರುಜುಪಡಿಸಲು, ಇನ್ನು ಒಂದು ವ್ಯಾಪಕ ಸಮಯಾವಧಿಯ ತನಕ ಬಿಡಲ್ಪಡುವ ಅಗತ್ಯ ಪುನಃ ಎಂದಿಗೂ ಇರದು.—ಹೋಲಿಸಿ ಕೀರ್ತನೆ 92:1, 15.

31. ಪಿಶಾಚನಾದ ಸೈತಾನನು ಅನುಭವಿಸುವ ಶಿಕ್ಷೆಯನ್ನು ಅರ್ಥಮಾಡಿಕೊಳ್ಳಲು, “ಪೀಡನೆ” ಎಂಬರ್ಥವಿರುವ ಒಂದು ಶಬ್ದಕ್ಕೆ ಸಂಬಂಧಿಸಿರುವ ಎರಡು ಗ್ರೀಕ್‌ ಶಬ್ದಗಳು ಹೇಗೆ ನಮಗೆ ಸಹಾಯವನ್ನೀಯುತ್ತವೆ?

31 ಇದಕ್ಕೆ ಕೂಡಿಸಿ, ಸಂಬಂಧಿತ ಶಬ್ದ ಬ-ಸ-ನಿ-ಸಸ್ಟ್‌’ “ಪೀಡಿಸುವವನು” ಎಂಬದು ಬೈಬಲಿನಲ್ಲಿ “ಜೆಯ್ಲರ್‌” ಅರ್ಥದಲ್ಲಿ ಬಳಸಲಾಗಿದೆ. (ಮತ್ತಾಯ 18:34, ಕಿಂಗ್‌ಡಂ ಇಂಟರ್‌ಲಿನಿಯರ್‌) ಇದಕ್ಕೆ ಹೊಂದಿಕೆಯಲ್ಲಿ, ಸೈತಾನನು ಬೆಂಕಿಯ ಕೆರೆಯಲ್ಲಿ ಸದಾಕಾಲಕ್ಕೂ ಬಂಧನದಲಿಡ್ಲಲ್ಪಡುವನು; ಅವನೆಂದಿಗೂ ಬಿಡಲ್ಪಡನು. ಕಟ್ಟಕಡೆಗೆ, ಯೋಹಾನನಿಗೆ ಸುಪರಿಚಿತವಾಗಿದ್ದ ಗ್ರೀಕ್‌ ಸೆಪ್ತ್ಯುಅಜಿಂಟ್‌ನಲ್ಲಿ ಸಂಬಂಧಿತ ಶಬ್ದವಾದ ಬ-ಸ-ನೊ-ಸ್‌ ಮರಣಕ್ಕೆ ನಡಿಸುವ ಅಪಮಾನಕ್ಕೆ ಸೂಚಿಸುತ್ತದೆ. (ಯೆಹೆಜ್ಕೇಲ 32:24, 30) ಸೈತಾನನು ಅನುಭವಿಸಲಿರುವ ದಂಡನೆಯು ಬೆಂಕಿಗಂಧಕಗಳ ಕೆರೆಯಲ್ಲಿ ಒಂದು ಅಪಮಾನದ, ನಿತ್ಯ ಮರಣವಾಗಿದೆ ಎಂದು ಕಾಣಲು ಇದು ನಮಗೆ ಸಹಾಯ ಮಾಡುತ್ತದೆ. ಅವನ ಕೃತ್ಯಗಳು ಅವನೊಂದಿಗೆ ಸಾಯುತ್ತವೆ.—1 ಯೋಹಾನ 3:8.

32. ದೆವ್ವಗಳು ಯಾವ ದಂಡನೆಯನ್ನು ಅನುಭವಿಸುವುವು, ಮತ್ತು ನಾವು ಹೇಗೆ ಬಲ್ಲೆವು?

32 ಪುನಃ, ಈ ವಚನದಲ್ಲಿ ದೆವ್ವಗಳ ಕುರಿತು ಉಲ್ಲೇಖಿಸಲ್ಪಟ್ಟಿಲ್ಲ. ಸಾವಿರ ವರುಷಗಳ ಅಂತ್ಯದಲ್ಲಿ ಸೈತಾನನೊಂದಿಗೆ ಅವರು ಬಿಡುಗಡೆಗೊಂಡು, ಅನಂತರ ಅವನೊಂದಿಗೆ ನಿತ್ಯ ಮರಣದ ಶಿಕ್ಷೆಯನ್ನು ಹೊಂದಲಿರುವರೋ? ಪುರಾವೆಯು ಹೌದು ಎಂದು ಉತ್ತರಿಸುತ್ತದೆ. ಆಡು ಮತ್ತು ಕುರಿಗಳ ದೃಷ್ಟಾಂತದಲ್ಲಿ, ಆಡುಗಳು “ಪಿಶಾಚನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ” ಹೋಗುವರು ಎಂದು ಯೇಸು ಹೇಳಿದನು. (ಮತ್ತಾಯ 25:41) “ನಿತ್ಯ ಬೆಂಕಿ” ಎಂಬ ವಾಕ್ಸರಣಿಯು, ಸೈತಾನನು ದೊಬ್ಬಲ್ಪಡುವ ಬೆಂಕಿಗಂಧಕಗಳ ಕೆರೆಗೆ ಸೂಚಿಸತಕ್ಕದ್ದು. ಪಿಶಾಚನ ದೂತರು ಅವನೊಂದಿಗೆ ಪರಲೋಕದಿಂದ ದೊಬ್ಬಲ್ಪಟ್ಟರು. ಸಾವಿರ ವರುಷದ ಆಳಿಕೆಯ ಆರಂಭದಲ್ಲಿ ಅವರು ಅವನೊಂದಿಗೆ ಅಧೋಲೋಕಕ್ಕೆ ಹೋದರು ಎಂಬುದು ಸುಸ್ಪಷ್ಟ. ಹಾಗಾದರೆ, ಅವರು ಅವನೊಂದಿಗೆ ಬೆಂಕಿಗಂಧಕಗಳ ಕೆರೆಯಲ್ಲಿ ನಾಶಗೊಳ್ಳುವರೆಂಬುದು ಕೂಡ ಸುಸಂಗತವಾಗಿದೆ.—ಮತ್ತಾಯ 8:29.

33. ಆದಿಕಾಂಡ 3:15ರ ಯಾವ ಕೊನೆಯ ವಿವರವು ಆಗ ನೆರವೇರುವುದು, ಮತ್ತು ಈಗ ಯೋಹಾನನ ಗಮನವನ್ನು ಯೆಹೋವನ ಆತ್ಮವು ಯಾವ ವಿಷಯಕ್ಕೆ ಸೆಳೆಯುತ್ತದೆ?

33 ಈ ರೀತಿಯಲ್ಲಿ, ಆದಿಕಾಂಡ 3:15 ರಲ್ಲಿ ದಾಖಲಿಸಲ್ಪಟ್ಟ ಪ್ರವಾದನೆಯ ಕೊನೆಯ ವಿವರಣೆಯು ನೆರವೇರುತ್ತದೆ. ಸೈತಾನನು ಬೆಂಕಿಗಂಧಕಗಳ ಕೆರೆಯಲ್ಲಿ ದೊಬ್ಬಲ್ಪಟ್ಟಾಗ, ಕಬ್ಬಿಣದ ಹಿಮ್ಮಡಿಯ ಕೆಳಗೆ ಹಾವಿನ ತಲೆಯೊಂದು ಜಜ್ಜಲ್ಪಟ್ಟು ಸಾಯುವಂತೆ, ಅವನು ಮರಣಹೊಂದುವನು. ಅವನು ಮತ್ತು ಅವನ ದೆವ್ವಗಳು ಸದಾ ಕಾಲಕ್ಕೂ ಹೋಗಿಬಿಡುವವು. ಪ್ರಕಟನೆ ಪುಸ್ತಕದಲ್ಲಿ ಅನಂತರ ಅವರ ಕುರಿತು ಯಾವುದೇ ಉಲ್ಲೇಖವು ಇಲ್ಲ. ಈಗ ಪ್ರವಾದನಾರೂಪವಾಗಿ ಅವುಗಳನ್ನು ಇಲ್ಲದಂತೆ ಮಾಡಿದ ಅನಂತರ, ಐಹಿಕ ನಿರೀಕ್ಷೆಯನ್ನು ನೆಚ್ಚಿಕೊಂಡಿರುವವರ ಜರೂರಿಯ ಒಂದು ವಿಷಯದ ಕಡೆಗೆ ಯೆಹೋವನ ಆತ್ಮವು ಗಮನವನ್ನು ಸೆಳೆಯುತ್ತದೆ: “ರಾಜಾಧಿರಾಜನ” ಮತ್ತು “ಆತನೊಂದಿಗೆ ಕರೆಯಲ್ಪಟ್ಟವರು ಮತ್ತು ಆದುಕೊಂಡವರು ಮತ್ತು ನಂಬಿಗಸ್ತರು ಆಗಿರುವವರ” ಸ್ವರ್ಗೀಯ ಆಳಿಕೆಯಿಂದ ಮಾನವಕುಲಕ್ಕೆ ಯಾವ ಫಲಿತಾಂಶವುಂಟಾಗುವುದು? (ಪ್ರಕಟನೆ 17:14) ಉತ್ತರಿಸಲು, ಸಾವಿರ ವರುಷದ ಆಳಿಕೆಯ ಆರಂಭಕ್ಕೆ ಪುನಃ ಒಮ್ಮೆ ನಮ್ಮನ್ನು ಯೋಹಾನನು ತರುತ್ತಾನೆ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 7 ಮರಣದಲ್ಲಿ ಯೇಸುವು ಪಾತಾಳದಲ್ಲಿ [ಹೇಡಿಸ್‌, NW] ಇದ್ದನು ಎಂದು ಇತರ ಶಾಸ್ತ್ರವಚನಗಳು ಹೇಳುತ್ತವೆ. (ಅ. ಕೃತ್ಯಗಳು 2:31) ಆದಾಗ್ಯೂ, ಪಾತಾಳ ಮತ್ತು ಅಧೋಲೋಕ ಯಾವಾಗಲೂ ಒಂದೇ ಆಗಿವೆ ಎಂಬ ಸಮಾಪ್ತಿಗೆ ನಾವು ಬರಕೂಡದು. ಕಾಡು ಮೃಗ ಮತ್ತು ಸೈತಾನನು ಅಧೋಲೋಕದೊಳಗೆ ಹೋಗುವಾಗ, ಪುನರುತ್ಥಾನದ ತನಕ ಮರಣದಲ್ಲಿ ನಿದ್ರಿಸುತ್ತಿರುವ ಆ ಪಾತಾಳದೊಳಗೆ ಕೇವಲ ಮಾನವರು ಹೋಗುತ್ತಾರೆಂದು ಹೇಳಲ್ಪಡುತ್ತದೆ.—ಯೋಬ 14:13; ಪ್ರಕಟನೆ 20:13.

^ ಪ್ಯಾರ. 11 ರೋಮಿನಲ್ಲಿ ಕೊಡಲಿಯು (ಗ್ರೀಕ್‌, ಪೀ’ಲೆ-ಕುಸ್‌) ಹತಿಸುವ ಸಾಂಪ್ರದಾಯಿಕ ಸಾಧನವಾಗಿತ್ತೆಂದು ತೋರುತ್ತದೆಯಾದರೂ, ಯೋಹಾನನ ದಿನಗಳೊಳಗೆ ಖಡ್ಗವು ಹೆಚ್ಚು ಸಾಮಾನ್ಯವಾಗಿ ಬಳಸಲ್ಪಡುತ್ತಿತ್ತು. (ಅ. ಕೃತ್ಯಗಳು 12:2) ಆದಕಾರಣ ಇಲ್ಲಿ ಬಳಸಲ್ಪಟ್ಟ ಗ್ರೀಕ್‌ ಶಬ್ದ, ಪೀ-ಪೀ-ಲೆ-ಕಿಸ್‌-ಮೆ’ನೊನ್‌ (“ಕೊಡಲಿಯಿಂದ ಹತರಾದವರು”, NW) ಸರಳವಾಗಿ “ಹತಿಸಲ್ಪಟ್ಟವರು” ಎಂದರ್ಥವಾಗಿದೆ.

^ ಪ್ಯಾರ. 13 ಆಸಕ್ತಿಕರವಾಗಿ, ಪ್ರಕಟನೆಯ ಲೇಖಕನಾದ ಯೋಹಾನನ ವಿದ್ಯಾರ್ಥಿಗಳಿಂದ ಬೈಬಲಿನ ಸ್ವಲ್ಪ ಜ್ಞಾನ ಪಡೆದಾತನೆಂದು ತಿಳಿಯಲ್ಪಟ್ಟಿರುವ ಹೈರಾಪೊಲಿಸಿನ ಪ್ಯಾಪಿಯಸನು ಕ್ರಿಸ್ತನ ಅಕ್ಷರಶಃ ಸಾವಿರ ವರುಷಗಳ ಆಳಿಕೆಯೊಂದನ್ನು ನಂಬಿದ್ದನು ಎಂದು ನಾಲ್ಕನೆಯ ಶತಕದ ಇತಿಹಾಸಕಾರ ಯುಸಿಬೀಯಸನಿಂದ ವರದಿಸಲ್ಪಟ್ಟಿದೆ (ಆದರೂ ಯುಸಿಬೀಯಸನು ಅವನೊಂದಿಗೆ ದೃಢವಾಗಿ ಅಸಮ್ಮತಿಸಿದನು).—ದ ಹಿಸ್ಟರಿ ಆಫ್‌ ದ ಚರ್ಚ್‌, ಯುಸಿಬೀಯಸ್‌ III, 39.

[ಅಧ್ಯಯನ ಪ್ರಶ್ನೆಗಳು]

[Picture on page 293]

ಮೃತ ಸಮುದ್ರ. ಸೊದೋಮ್‌ ಮತ್ತು ಗೊಮೋರದ ಸಂಭಾವ್ಯ ನೆಲೆ

[ಪುಟ 305 ರಲ್ಲಿರುವ ಚಿತ್ರಗಳು]

“ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ”