ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸೈತಾನನ ಅಗಾಧ ವಿಷಯಗಳನ್ನು” ಕಡುವಾಗಿ ಹೇಸುವುದು

“ಸೈತಾನನ ಅಗಾಧ ವಿಷಯಗಳನ್ನು” ಕಡುವಾಗಿ ಹೇಸುವುದು

ಅಧ್ಯಾಯ 10

“ಸೈತಾನನ ಅಗಾಧ ವಿಷಯಗಳನ್ನು” ಕಡುವಾಗಿ ಹೇಸುವುದು

ಥುವತೈರ

1. ಇತರ ಸಭೆಗಳೊಂದಿಗಿನ ಸಂಬಂಧದಲ್ಲಿ ಥುವತೈರವು ಹೇಗೆ ನೆಲೆಸಿತ್ತು, ಮತ್ತು ಯಾವ ರೀತಿಯ ಧಾರ್ಮಿಕ ಪರಿಸರದಲ್ಲಿ?

ಬೆರ್ಗಾಮದಿಂದ (ಪೆರ್ಗಮಮ್‌) ಸುಮಾರು 40 ಮೈಲುಗಳಷ್ಟು ಆಗ್ನೇಯದಲ್ಲಿ ಅಕಿಸಾರ್‌ ಎಂಬ ಅಭಿವೃದ್ಧಿಗೊಳ್ಳುತ್ತಿರುವ ಒಂದು ಟರ್ಕಿಶ್‌ ಪಟ್ಟಣವಿದೆ. ಸುಮಾರು 1,900 ವರ್ಷಗಳ ಹಿಂದೆ, ಈ ನಗರವು ಥುವತೈರದ ನಿವೇಶನವಾಗಿತ್ತು. ಸಂಚರಣ ಮೇಲ್ವಿಚಾರಕನೊಬ್ಬನು ಪೆರ್ಗಮಮ್‌ನಿಂದ ಒಳಪ್ರದೇಶದ ದಾರಿಯಿಂದ ಥುವತೈರಕ್ಕೆ ಸುಲಭವಾಗಿ ತಲಪಬಹುದಿತ್ತು ಮತ್ತು ಅಲ್ಲಿಂದ ಪ್ರಕಟನೆಯ 3 ನೆಯ ಅಧ್ಯಾಯದ ಉಳಿದಿರುವ ಸಭೆಗಳಿಗೆ—ಸಾರ್ದಿಸ್‌, ಫಿಲದೆಲ್ಫಿಯ ಮತ್ತು ಲವೊದಿಕೀಯಗಳಿಗೆ ಸರ್ಕಿಟಿನೋಪಾದಿ ಮುಂದುವರಿಯಸಾಧ್ಯವಿತ್ತು. ಪೆರ್ಗಮಮ್‌ಗೆ ಅಸದೃಶವಾಗಿ, ಥುವತೈರವು ಸಮ್ರಾಟನ ಆರಾಧನೆಯ ಒಂದು ಪ್ರಾಮುಖ್ಯ ಕೇಂದ್ರವಾಗಿ ಇದ್ದಂತೆ ತೋರುವುದಿಲ್ಲ, ಆದರೆ ವಿಧರ್ಮಿ ದೇವರುಗಳಿಗೆ ಪ್ರತಿಷ್ಠಿತವಾಗಿರುವ ಗುಡಿಗಳು ಮತ್ತು ದೇವಾಲಯಗಳು ಅಲ್ಲಿ ಇದ್ದವು. ಒಂದು ವ್ಯಾಪಾರದ ಕೇಂದ್ರವಾಗಿ ಥುವತೈರವು ಗಮನಾರ್ಹವಾಗಿತ್ತು.

2, 3. (ಎ) ಒಬ್ಬ ಕ್ರೈಸ್ತಳಾದ ಥುವತೈರದವಳ ಕುರಿತಾಗಿ ಮುಂಚಿತವಾಗಿ ಏನು ದಾಖಲೆಯಾಗಿತ್ತು? (ಬಿ) ಯೇಸುವು “ದೇವ ಕುಮಾರನು” ಮತ್ತು ಅವನ “ಕಣ್ಣುಗಳು ಉರಿಯುವ ಜ್ವಾಲೆಯಂತಿವೆ” ಎನ್ನುವುದರಿಂದ ಥುವತೈರದಲ್ಲಿರುವ ಕ್ರೈಸ್ತರಿಗೆ ಯಾವ ಸೂಚಿತಾರ್ಥವಿದೆ?

2 ಮಕೆದೋನ್ಯದಲ್ಲಿ ಪೌಲನು ಸಾರುತ್ತಿದ್ದಾಗ, ಧೂಮ್ರವರ್ಣದ ವಸ್ತ್ರಗಳನ್ನು ಮಾರುತ್ತಿದ್ದ ಲುದ್ಯಳೆಂಬ ಹೆಸರಿನ ಥುವತೈರದ ಸ್ತ್ರೀಯೊಬ್ಬಳನ್ನು ಅವನು ಭೇಟಿಯಾದನು. ಲುದ್ಯಳು ಮತ್ತು ಅವಳ ಮನೆಯವರೆಲ್ಲರೂ ಪೌಲನು ಸಾರುತ್ತಿದ್ದ ಸಂದೇಶವನ್ನು ಸಂತೋಷದಿಂದ ಸ್ವೀಕರಿಸಿದರು ಮತ್ತು ವಿಶೇಷ ರೀತಿಯ ಅತಿಥಿಸತ್ಕಾರವನ್ನು ಮಾಡಿದರು. (ಅ. ಕೃತ್ಯಗಳು 16:14, 15) ಕ್ರೈಸ್ತತ್ವವನ್ನು ಸ್ವೀಕರಿಸಿದ ದಾಖಲೆಯಲ್ಲಿರುವ ಮೊದಲ ಥುವತೈರದ ಸ್ತ್ರೀ ಅವಳಾದಳು. ಸಮಯಾನಂತರ, ಆ ನಗರದಲ್ಲಿ ಕ್ರೈಸ್ತರ ಒಂದು ಸಭೆಯು ಅಸ್ತಿತ್ವಕ್ಕೆ ಬರುವಂತಾಯಿತು. ತನ್ನ ಅತ್ಯಂತ ಉದ್ದವಾದ ಸಂದೇಶವನ್ನು ಯೇಸುವು ಅಲ್ಲಿಗೆ ನಿರ್ದೇಶಿಸುತ್ತಾನೆ: “ಮತ್ತು ಥುವತೈರದಲ್ಲಿರುವ ಸಭೆಯ ದೂತನಿಗೆ ಬರೆ: ಯಾರ ಕಣ್ಣುಗಳು ಉರಿಯುವ ಜ್ವಾಲೆಯಂತಿವೆಯೋ ಮತ್ತು ಪಾದಗಳು ಉತ್ತಮವಾದ ತಾಮ್ರದಂತಿವೆಯೋ ಅಂತಹ ದೇವ ಕುಮಾರನು ಹೇಳುವ ಸಂಗತಿಗಳಿವು.”—ಪ್ರಕಟನೆ 2:18, NW.

3 ಯೇಸುವು ಯೆಹೋವನನ್ನು ಬೇರೆ ಕಡೆಗಳಲ್ಲಿ “ನನ್ನ ತಂದೆ” ಎಂದು ಸೂಚಿಸಿರುವುದಾದರೂ, “ದೇವ ಕುಮಾರನು” ಎಂಬ ವಾಕ್ಸರಣಿಯು ಪ್ರಕಟನೆಯಲ್ಲಿ ತೋರಿಬರುವುದು ಇದೊಂದೇ ಬಾರಿ. (ಪ್ರಕಟನೆ 2:27; 3:5, 21) ಇಲ್ಲಿ ಈ ಬಿರುದಿನ ಉಪಯೋಗವು ಯೆಹೋವನೊಂದಿಗೆ ಯೇಸುವಿನ ಆಪ್ತ ಸಂಬಂಧದ ಕುರಿತು ಥುವತೈರದ ಕ್ರೈಸ್ತರಿಗೆ ಪ್ರಾಯಶಃ ನೆನಪಿಗೆ ತರುತ್ತದೆ. ಈ ಮಗನ ಕಣ್ಣುಗಳು “ಉರಿಯುವ ಜ್ವಾಲೆಯಂತಿವೆ”—ಅವನು ಕಾಣುವ ಸಭೆಯನ್ನು ಕೆಡಿಸುತ್ತಿರುವ ಯಾವುದೇ ಸಂಗತಿಯ ವಿರುದ್ಧ ಅವನ ನ್ಯಾಯದಂಡನೆಯು ಉರಿಯಲಿರುವುದು ಎಂದು ಥುವತೈರದ ಕ್ರೈಸ್ತರಿಗೆ ಒಂದು ಎಚ್ಚರಿಕೆ. ಅವನ ಬೆಳಗುವ, ತಾಮ್ರದಂತಹ ಪಾದಗಳನ್ನು ಎರಡನೆಯ ಬಾರಿ ಸೂಚಿಸುವುದರ ಮೂಲಕ, ಈ ಭೂಮಿಯ ಮೇಲೆ ನಡೆದಾಡಿದಾಗ ನಂಬಿಗಸ್ತಿಕೆಯ ಅವನ ಸ್ವಂತ ಬೆಳಗುವ ಆದರ್ಶವನ್ನು ಅವನು ಪುನಃ ಒತ್ತಿ ಹೇಳುತ್ತಾನೆ. ಥುವತೈರದಲ್ಲಿರುವ ಕ್ರೈಸ್ತರು ನಿಸ್ಸಂದೇಹವಾಗಿ ಅವನ ಬುದ್ಧಿವಾದವನ್ನು ಕೇಳಿದರು, ಮತ್ತು ನಾವು ಇಂದೂ ಹಾಗೆಯೇ ಮಾಡತಕ್ಕದ್ದು!—1 ಪೇತ್ರ 2:21.

4, 5. (ಎ) ಥುವತೈರದ ಕ್ರೈಸ್ತರನ್ನು ಯೇಸುವು ಯಾಕೆ ಶಿಫಾರಸ್ಸು ಮಾಡಶಕ್ತನಾಗಿದ್ದನು? (ಬಿ) ಯೆಹೋವನ ಸಾಕ್ಷಿಗಳ ಇಂದಿನ 73,000 ಕ್ಕಿಂತಲೂ ಹೆಚ್ಚಿನ ಸಭೆಗಳಿಗೆ ಥುವತೈರದಲ್ಲಿದ್ದ ಸಭೆಯು ಹೇಗೆ ಪ್ರತಿನಿಧಿರೂಪದ್ದಾಗಿರುತ್ತದೆ?

4 ಸಂತಸಕರವಾಗಿ, ಥುವತೈರದಲ್ಲಿರುವವರನ್ನು ಯೇಸುವು ಶ್ಲಾಘಿಸಬಲ್ಲನು. ಅವನು ಹೇಳುವುದು: “ನಿನ್ನ ಕೃತ್ಯಗಳನ್ನೂ, ಮತ್ತು ನಿನ್ನ ಪ್ರೀತಿ ಮತ್ತು ನಂಬಿಕೆಯನ್ನೂ ಮತ್ತು ಶುಶ್ರೂಷೆಯನ್ನೂ ಮತ್ತು ತಾಳ್ಮೆಯನ್ನೂ, ಮತ್ತು ನಿನ್ನ ಇತ್ತೇಚೆಗಿನ ಕೃತ್ಯಗಳು ಹಿಂದಿನವುಗಳಿಗಿಂತ ಹೆಚ್ಚೆಂದು ನಾನು ಬಲ್ಲೆನು.” (ಪ್ರಕಟನೆ 2:19, NW)  ಎಫೆಸದವರಿಗೆ ಅಸದೃಶವಾಗಿ, ಅಲ್ಲಿದ್ದ ಅಭಿಷಿಕ್ತ ಕ್ರೈಸ್ತರು ಯೆಹೋವನ ಕಡೆಗಿದ್ದ ಅವರ ಮೊದಲ ಪ್ರೀತಿಯನ್ನು ಕಳೆದುಕೊಂಡಿರಲಿಲ್ಲ. ಅವರ ನಂಬಿಕೆಯು ದೃಢವಾಗಿತ್ತು. ಇನ್ನೂ ಹೆಚ್ಚಾಗಿ, ಅವರ ಕೃತ್ಯಗಳು ಮೊದಲಿದುದ್ದಕ್ಕಿಂತ ಹೆಚ್ಚಾಗಿದ್ದವು ಮತ್ತು ಈ ಮೊದಲಿನ ಮೂರು ಸಭೆಗಳಂತೆ, ಥುವತೈರ ಸಭೆಯು ತಾಳ್ಮೆಯನ್ನು ತೋರಿಸುತ್ತಿದೆ. ಇಂದು ಲೋಕದಲ್ಲಿಲ್ಲಾ ಇರುವ ಯೆಹೋವನ ಸಾಕ್ಷಿಗಳ 73,000 ಮತ್ತು ಅದಕ್ಕಿಂತಲೂ ಹೆಚ್ಚಿನ ಸಭೆಗಳಿಗೆ ಇದು ಎಷ್ಟು ಪ್ರತಿನಿಧಿರೂಪದ್ದಾಗಿರುತ್ತದೆ! ಸಂಸ್ಥೆಯಲ್ಲಿ ಶುಶ್ರೂಷೆಯ ಹುರುಪಿನ ಆತ್ಮವು ಹಬ್ಬುತ್ತಾ ಎಳೆಯರನ್ನು ಮತ್ತು ವಯಸ್ಸಾದವರನ್ನು ಪ್ರಚೋದಿಸುತ್ತಿರುವಂತೆಯೇ, ಯೆಹೋವನ ಕಡೆಗಿನ ಪ್ರೀತಿಯು ಪ್ರಜ್ವಲಿಸುತ್ತಾ ಇದೆ. ಹೆಚ್ಚುತ್ತಿರುವ ಸಂಖ್ಯೆಯ ಆ ಜನರು ಪಯನೀಯರರಾಗಿ ತಮ್ಮನ್ನು ವ್ಯಯಿಸಿಕೊಳ್ಳುತ್ತಿದ್ದಾರೆ, ಹೀಗೆ ಅವರು ದೇವರ ಒಳಬರುತ್ತಿರುವ ರಾಜ್ಯದ ಮಹಿಮಾಭರಿತ ನಿರೀಕ್ಷೆಯನ್ನು ಘೋಷಿಸುವುದರಲ್ಲಿ ಉಳಿದಿರುವ ಸಮಯವನ್ನು ವಿವೇಕದಿಂದ ಉಪಯೋಗಿಸುತ್ತಿದ್ದಾರೆ!—ಮತ್ತಾಯ 24:14; ಮಾರ್ಕ 13:10.

5 ಹಲವಾರು ದಶಕಗಳಿಂದ, ಅಭಿಷಿಕ್ತ ಉಳಿಕೆಯವರ ಮತ್ತು ಮಹಾ ಸಮೂಹದ ಎರಡೂ ಗುಂಪಿನ ಅನೇಕ ನಂಬಿಗಸ್ತರು, ದೇವರ ಸೇವೆಯಲ್ಲಿ ಆದರ್ಶಪ್ರಾಯ ತಾಳ್ಮೆಯನ್ನು ತೋರಿಸುತ್ತಾ ಇದ್ದಾರೆ, ಆದರೆ ಅವರ ಸುತ್ತಲಿರುವ ಲೋಕವು ಆಶಾರಹಿತ ಖಿನ್ನತೆಗೆ ಆಳದಿಂದ ಇನ್ನೂ ಆಳಕ್ಕೆ ಧುಮುಕುತ್ತಾ ಇದೆ. ಆದರೆ ನಾವಾದರೋ ಸುಧೈರ್ಯದಿಂದಿರೋಣ! ದೇವರ ಮುಂಚಿನ ಪ್ರವಾದಿಗಳ ಸಾಕ್ಷ್ಯಗಳನ್ನು ಪ್ರಕಟನೆಯು ಸ್ಥಿರೀಕರಿಸುತ್ತದೆ. “ಯೆಹೋವನ ಮಹಾ ದಿನವು ಹತ್ತಿರವಾಯಿತು. ಅದು ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ.”—ಚೆಫನ್ಯ 1:14; ಯೋವೇಲ 2:1; ಹಬಕ್ಕೂಕ 2:3; ಪ್ರಕಟನೆ 7:9; 22:12, 13.

“ಇಸೆಬೆಲಳೆಂಬ ಆ ಹೆಂಗಸು”

6. (ಎ) ಶ್ಲಾಘಿಸಲು ಅರ್ಹವಾದ ಗುಣಗಳು ಇದ್ದಾಗ್ಯೂ, ಥುವತೈರ ಸಭೆಯಲ್ಲಿ ಕೂಡಲೇ ಗಮನಹರಿಸಬೇಕಾದ ಯಾವ ಸಮಸ್ಯೆಯನ್ನು ಯೇಸುವು ಗಮನಿಸುತ್ತಾನೆ? (ಬಿ) ಇಸೆಬೆಲಳು ಯಾರಾಗಿದ್ದಳು, ಮತ್ತು ಒಬ್ಬ ಪ್ರವಾದಿನಿಯಾಗಿದ್ದೇನೆ ಎಂದು ಹೇಳಲು ಅವಳು ನಿಜವಾಗಿ ಅರ್ಹಳಾಗಿದ್ದಳೋ?

6 ಯೇಸುವಿನ ಉರಿಯುತ್ತಿರುವ ಕಣ್ಣುಗಳು ಇನ್ನಷ್ಟು ಆಳವಾಗಿ ಭೇದಿಸಿಕೊಂಡು ಹೋಗಿವೆ. ಕೂಡಲೇ ಗಮನಹರಿಸಬೇಕಾದ ಒಂದು ಸಂಗತಿಯನ್ನು ಅವನು ಲಕ್ಷಿಸುತ್ತಾನೆ. “ಆದರೂ,” ಅವನು ಥುವತೈರದ ಕ್ರೈಸ್ತರಿಗನ್ನುವುದು, “ನಾನು ಇದನ್ನು ಖಂಡಿತವಾಗಿ ನಿನ್ನ ವಿರುದ್ಧ ಹೊರಿಸುತ್ತೇನೆ, ಏನೆಂದರೆ ತನ್ನನ್ನು ಪ್ರವಾದಿನಿಯೆಂದು ಕರೆಯುವ ಆ ಸ್ತ್ರೀ ಇಸೆಬೆಲಳನ್ನು ನೀನು ಸಹಿಸಿಕೊಳ್ಳುತ್ತೀ, ಮತ್ತು ಅವಳು ನನ್ನ ದಾಸರು ಜಾರತ್ವ ಮಾಡುವಂತೆ ಮತ್ತು ವಿಗ್ರಹಗಳಿಗೆ ಯಜ್ಞಾರ್ಪಿಸಿದ ವಸ್ತುಗಳನ್ನು ತಿನ್ನುವಂತೆ ಕಲಿಸುತ್ತಾಳೆ ಮತ್ತು ದಾರಿತಪ್ಪಿಸುತ್ತಾಳೆ.” (ಪ್ರಕಟನೆ 2:20, NW) ಸಾ. ಶ. ಪೂ. ಹತ್ತನೇ ಶತಮಾನದಲ್ಲಿ, ಇಸ್ರಾಯೇಲಿನ ಅರಸ ಆಹಾಬನ ಬಾಳ್‌-ಆರಾಧಕ ಹೆಂಡತಿಯಾಗಿದ್ದ ರಾಣಿ ಇಸೆಬೆಲಳು ಕೊಲ್ಲುವ, ವ್ಯಭಿಚಾರದ, ದಬ್ಬಾಳಿಕೆಯ ಮಾರ್ಗಗಳಿಗಾಗಿ ಕುಖ್ಯಾತಳಾಗಿದ್ದಳು. ಯೆಹೋವನಿಂದ ಅಭಿಷಿಕ್ತನೋಪಾದಿ, ಯೇಹುವು ಅವಳನ್ನು ಕೊಲ್ಲಿಸಿದನು. (1 ಅರಸುಗಳು 16:31; 18:4; 21:1-16; 2 ಅರಸುಗಳು 9:1-7, 22, 30, 33) ಒಬ್ಬ ಪ್ರವಾದಿನಿಯಾಗಿದ್ದೇನೆಂದು ಹೇಳಲು ವಿಗ್ರಹಾರಾಧಕಳಾಗಿದ್ದ ಇಸೆಬೆಲಳಿಗೆ ಯಾವುದೇ ಆಧಾರವಿರಲಿಲ್ಲ. ಇಸ್ರಾಯೇಲ್ಯರಲ್ಲಿ ನಂಬಿಗಸ್ತ ಪ್ರವಾದಿನಿಗಳಾಗಿ ಸೇವೆ ಸಲ್ಲಿಸಿದ್ದ ಮಿರ್ಯಾಮಳು ಮತ್ತು ದೆಬೋರಳಂತೆ ಅವಳು ಇರಲಿಲ್ಲ. (ವಿಮೋಚನಕಾಂಡ 15:20, 21; ನ್ಯಾಯಸ್ಥಾಪಕರು 4:4; 5:1-31) ಮತ್ತು ಪ್ರಾಯಸಂದ ಅನ್ನಳನ್ನು ಮತ್ತು ಸುವಾರ್ತಿಕನಾದ ಫಿಲಿಪ್ಪನ ನಾಲ್ಕು ಮಂದಿ ಪುತ್ರಿಯರನ್ನು ಪ್ರೇರಿಸಿದಂತೆ, ಯೆಹೋವನ ಆತ್ಮವು ಅವಳನ್ನು ಪ್ರವಾದಿಸುವಂತೆ ಪ್ರೇರಿಸಲಿಲ್ಲ.—ಲೂಕ 2:36-38; ಅ. ಕೃತ್ಯಗಳು 21:9.

7. (ಎ) “ಆ ಸ್ತ್ರೀ ಇಸೆಬೆಲಳು” ಎಂದು ಹೇಳುವುದರ ಮೂಲಕ, ಯಾವ ಪ್ರಭಾವದ ಕುರಿತು ಯೇಸುವು ಸೂಚಿಸುತ್ತಿದ್ದನು ಎಂದು ಸಾಬೀತಾಗುತ್ತದೆ? (ಬಿ) ಒಡನಾಟ ಮಾಡುತ್ತಿದ್ದ ಕೆಲವು ಹೆಂಗಸರು ತಮ್ಮ ಸ್ವ-ಇಚ್ಛೆಯ ಮಾರ್ಗಕ್ರಮವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿದ್ದಿರಬಹುದು?

7 ಹಾಗಾದರೆ ಸರಳವಾಗಿಯೇ, ಥುವತೈರದಲ್ಲಿ ತಾನೊಬ್ಬಳು ಪ್ರವಾದಿನಿ ಎಂದು ಹೇಳಿಕೊಳ್ಳುವ “ಆ ಸ್ತ್ರೀ ಇಸೆಬೆಲಳು” ಒಂದು ಠಕ್ಕುಗಾರ್ತಿಯಾಗಿದ್ದಳು. ಅವಳಿಗೆ ದೇವರ ಆತ್ಮದ ಬೆಂಬಲವು ಇಲ್ಲ. ಅವಳು ಯಾರು? ಪ್ರಾಯಶಃ, ಅವಳು ಸಭೆಯಲ್ಲಿ ಲಜ್ಜಾಹೀನತೆಯ ಭ್ರಷ್ಟಗೊಳಿಸುವ ಪ್ರಭಾವದೋಪಾದಿ ವರ್ತಿಸುವ ಒಬ್ಬ ಹೆಂಗಸು ಯಾ ಹೆಂಗಸರ ಒಂದು ತಂಡವಾಗಿದ್ದಾಳೆ. ಒಡನಾಟ ಮಾಡುತ್ತಿದ್ದ ಕೆಲವು ಹೆಂಗಸರು ಸಭೆಯ ಸದಸ್ಯರನ್ನು ಅನೈತಿಕತೆಯಲ್ಲಿ ಒಳಗೂಡಿಸಿದ್ದಿರಬಹುದು, ಅವರು ಶಾಸ್ತ್ರ ವಚನಗಳಿಗೆ ತಪ್ಪಾದ ಅರ್ಥಕೊಡುತ್ತಾ ಅವಳ ಸ್ವ-ಇಚ್ಛೆಯ ಮಾರ್ಗವನ್ನು ಭಂಡತನದಿಂದ ಸಮರ್ಥಿಸುತ್ತಿದ್ದಿರಬಹುದು. ಖಂಡಿತವಾಗಿಯೂ ಸುಳ್ಳು ಪ್ರವಾದಿಸುವಿಕೆಯೇ! ಅವರು “ಜಾರತ್ವ, ಬಂಡುತನ, ಕಾಮಾಭಿಲಾಷೆ, ಹಾನಿಕಾರಕ ಆಶೆ, ಮತ್ತು ವಿಗ್ರಹಾರಾಧನೆಯಾಗಿರುವ ಲೋಭ”ದ ತಮ್ಮ ಸ್ವಂತ ಮಾರ್ಗಗಳಲ್ಲಿ ಬೀಳುವಂತೆ ಇತರರನ್ನು ಪ್ರಭಾವಿಸುತ್ತಾರೆ. (ಕೊಲೊಸ್ಸೆ 3:5, NW) ಕ್ರೈಸ್ತಪ್ರಪಂಚದ ಹೆಚ್ಚಿನ ಧರ್ಮಗಳಲ್ಲಿ ಈಗ ಅನುಮೋದನೆಯಿರುವ, ಯಾ ಕಂಡೂ ಕಾಣದಂತಿರುವ ರೀತಿಯ ಅನೈತಿಕತೆಯಲ್ಲಿ, ಸ್ವ-ಸುಖಾಪೇಕ್ಷೆಯ ಜೀವನ ಶೈಲಿಯಲ್ಲಿ ಸಭೆಯಲ್ಲಿ ಇರುವವರು ತೊಡಗುವಂತೆ ಅವರು ಮಾಡುತ್ತಿದ್ದರು.

8. (ಎ) ಥುವತೈರದಲ್ಲಿ “ಇಸೆಬೆಲಳ” ಕುರಿತಾಗಿ ಯೇಸುವಿನ ಘೋಷಣೆಯೇನು? (ಬಿ) ಆಧುನಿಕ ದಿನಗಳಲ್ಲಿ ಅನುಚಿತ ಸ್ತ್ರೀ ಪ್ರಭಾವವು ಹೇಗೆ ವ್ಯಕ್ತವಾಗಿದೆ?

8 ಥುವತೈರದ ಹಿರಿಯರಿಗೆ ಯೇಸುವು ಮುಂದುವರಿಸುತ್ತಾ, ಹೇಳುವುದು: “ಮತ್ತು ನಾನು ಅವಳಿಗೆ ಪಶ್ಚಾತ್ತಾಪ ಪಡಲು ಸಮಯವನ್ನು ಕೊಟ್ಟೆನು, ಆದರೆ, ಅವಳು ತನ್ನ ಜಾರತ್ವಕಾಗಿ ಪಶ್ಚಾತ್ತಾಪ ಪಡಲು ಇಷ್ಟಪಡುವುದಿಲ್ಲ. ಇಗೋ! ನಾನು ಅವಳನ್ನು ರೋಗಶಯ್ಯೆಗೆ, ಮತ್ತು ಅವಳೊಂದಿಗೆ ವ್ಯಭಿಚಾರ ಮಾಡುತ್ತಿರುವವರನ್ನು, ಅವಳ ಕೃತ್ಯಗಳಿಗಾಗಿ ಅವರು ಪಶ್ಚಾತ್ತಾಪಪಡದಿದ್ದರೆ, ಮಹಾ ಸಂಕಟಕ್ಕೆ ಎಸೆಯುವುದರಲ್ಲಿದ್ದೇನೆ.” (ಪ್ರಕಟನೆ 2:21, 22, NW)  ಮೂಲದ ಇಸೆಬೆಲಳು ಆಹಾಬನ ಮೇಲೆ ಹೇಗೆ ಅಧಿಕಾರ ನಡಿಸಿದಳೋ ಮತ್ತು ಅನಂತರ ದೇವರ ಹಂತಕನಾದ ಯೇಹುವನ್ನು ಧಿಕ್ಕರಿಸಿದಳೋ, ಹಾಗೆಯೇ ಈ ಸ್ತ್ರೀ ಪ್ರಭಾವವು ಗಂಡಂದಿರನ್ನು ಮತ್ತು ಹಿರಿಯರನ್ನು ಔಚಿತ್ಯ ಮೀರಿ ಅಧೀನ ಪಡಿಸಲು ಪ್ರಯತ್ನಿಸುತ್ತಿರಬಹುದು. ಥುವತೈರದ ಹಿರಿಯರು ಈ ಅಸಭ್ಯ ಇಸೆಬೆಲಳ ಪ್ರಭಾವವನ್ನು ಸಹಿಸಿಕೊಳ್ಳುತ್ತಾರೆ ಎಂದು ತೋರುತ್ತದೆ. ಇಲ್ಲಿ ಯೇಸುವು ಅವರಿಗೆ, ಹಾಗೂ ಇಂದಿನ ಯೆಹೋವನ ಜನರ ಲೋಕವ್ಯಾಪಕ ಸಭೆಗಳಿಗೆ ಒಂದು ಬಲವಾದ ಎಚ್ಚರಿಕೆಯನ್ನು ಕೊಡುತ್ತಾನೆ. ಆಧುನಿಕ ಸಮಯಗಳಲ್ಲಿ, ಅಂತಹ ತೀವ್ರ ದುರಾಗ್ರಹದ ಕೆಲವು ಹೆಂಗಸರು ತಮ್ಮ ಗಂಡಂದಿರು ಧರ್ಮಭ್ರಷ್ಟರಾಗುವಂತೆಯೂ ಮತ್ತು ಯೆಹೋವನ ನಂಬಿಗಸ್ತ ಸೇವಕರ ವಿರುದ್ಧ ಕೋರ್ಟ್‌ವ್ಯಾಜ್ಯದ ಮೂಲಕ ಕ್ರಮ ಕೈಕೊಳ್ಳುವಂತೆಯೂ ಪ್ರೇರಿಸಿದ್ದಾರೆ.—ಯೂದ 5-8 ಹೋಲಿಸಿರಿ.

9. (ಎ) ಇಸೆಬೆಲಳ ಕುರಿತಾದ ಯೇಸುವಿನ ಮಾತುಗಳು ಕ್ರೈಸ್ತ ಸಭೆಯಲ್ಲಿರುವ ಎಲ್ಲಾ ಸ್ತ್ರೀಯರ ಮೇಲೆ ಯಾವುದೇ ರೀತಿಯಲ್ಲಿ ಅಹಿತಕಾರಿಯಾಗಿ ಪ್ರತಿಬಿಂಬಿಸುವುದಿಲ್ಲ ಯಾಕೆ? (ಬಿ) ಇಸೆಬೆಲಳ ಪ್ರಭಾವವು ಯಾವಾಗ ಮಾತ್ರವೇ ಎದ್ದೇಳುತ್ತದೆ?

9 ಇದು ಕ್ರೈಸ್ತ ಸಭೆಯಲ್ಲಿರುವ ನಂಬಿಗಸ್ತ ಸ್ತ್ರೀಯರ ಮೇಲೆ ಯಾವುದೇ ರೀತಿಯಲ್ಲಿ ಅಹಿತಕಾರಿಯಾಗಿ ಪ್ರತಿಬಿಂಬಿಸುವುದಿಲ್ಲ. ಈಗಿನ ದಿನಗಳಲ್ಲಿ, ಸಾಕ್ಷಿ ಕಾರ್ಯದ ಹೆಚ್ಚಿನ ಭಾಗವು ನಂಬಿಗಸ್ತ ಸಹೋದರಿಯರಿಂದ ಪೂರೈಸಲ್ಪಡುತ್ತಾ ಇದೆ; ಅವರು ನಡಿಸುವ ಮನೆ ಬೈಬಲ್‌ ಅಧ್ಯಯನಗಳ ಮೂಲಕ ಸಭೆಯೊಳಗೆ ಹೊಸಬರ ಜನ ಸಮೂಹಗಳನ್ನೇ ಅವರು ತರುತ್ತಾ ಇದ್ದಾರೆ. ಈ ಏರ್ಪಾಡನ್ನು ದೇವರು ತಾನೇ ಆಶೀರ್ವದಿಸುತ್ತಾನೆ, ಇದು ಕೀರ್ತನೆ 68:11 (NW) ರಲ್ಲಿ ಸೂಚಿಸಲ್ಪಟ್ಟಿದೆ: “ಯೆಹೋವನು ತಾನೇ ನುಡಿಯುತ್ತಾನೆ; ಶುಭವಾರ್ತೆಯನ್ನು ಹೇಳುವ ಸ್ತ್ರೀಯರು ಒಂದು ದೊಡ್ಡ ಸೇನೆ ಆಗಿರುತ್ತಾರೆ.” “ದೇವರ ದೃಷ್ಟಿಯಲ್ಲಿ ಬಹುಬೆಲೆಯದ್ದಾಗಿರುವ” ತಮ್ಮ ಹೆಂಡತಿಯರ ವಿನೀತ, ಗೌರವಭರಿತ ನಡತೆಯ ಮೂಲಕ ಒಳಿತನ್ನು ಮಾಡುವರೆ ಗಂಡಂದಿರು ಪ್ರಭಾವಿಸಲ್ಪಡಬಹುದು. (1 ಪೇತ್ರ 3:1-4) ಸಮರ್ಥಳೂ, ಶ್ರಮಶೀಲಳೂ ಆದ ಹೆಂಡತಿಯು ಅರಸ ಲೆಮೂವೇಲನಿಂದ ಹೊಗಳಲ್ಪಟ್ಟಿದ್ದಾಳೆ. (ಜ್ಞಾನೋಕ್ತಿ 31:10-31) ಪುರುಷರನ್ನು ಅನೈತಿಕತೆಗೆ ಸೆಳೆಯುವುದರ ಯಾ ಶಿರಸ್ಸುತನವನ್ನು ಪಂಥಾಹ್ವಾನಕ್ಕೊಡ್ಡುವ ಯಾ ನಿರ್ಲಕ್ಷಿಸುವ ಮೂಲಕ, ಹೆಂಗಸರು ಹೆಜ್ಜೆತಪ್ಪಿದಾಗ ಮಾತ್ರವೇ, ಇಸೆಬೆಲಳ ಪ್ರಭಾವವೊಂದು ಎದ್ದೇಳುತ್ತದೆ.—ಎಫೆಸ 5:22, 23; 1 ಕೊರಿಂಥ 11:3.

10. (ಎ) ಇಸೆಬೆಲಳು ಮತ್ತು ಅವಳ ಮಕ್ಕಳು ನ್ಯಾಯದಂಡನೆಯನ್ನು ಪಡೆಯುವುದು ಯಾಕೆ? (ಬಿ) ಇಸೆಬೆಲಳ ಮಕ್ಕಳಾಗುವವರು ಯಾವ ಅಪಾಯದ ಸ್ಥಿತಿಯಲ್ಲಿರುತ್ತಾರೆ, ಮತ್ತು ಅಂಥವರು ಏನು ಮಾಡತಕ್ಕದ್ದು?

10 “ಆ ಸ್ತ್ರೀ ಇಸೆಬೆಲ” ಳನ್ನು ಸೂಚಿಸುತ್ತಾ ಯೇಸುವು ಮುಂದರಿಸುವುದು: “ಮತ್ತು ಅವಳ ಮಕ್ಕಳನ್ನು ನಾನು ಪ್ರಾಣಾಂತಕ ವ್ಯಾಧಿಯಿಂದ ಕೊಲ್ಲುವೆನು, ಆಗ ಅಂತರಿಂದ್ರಿಯಗಳನ್ನು ಮತ್ತು ಹೃದಯಗಳನ್ನು ಪರೀಕ್ಷಿಸುವವನೇ ನಾನು ಎಂದು ಎಲ್ಲಾ ಸಭೆಗಳಿಗೆ ಗೊತ್ತಾಗುವುದು, ಮತ್ತು ನಾನು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ನಿಮ್ಮ ಕೃತ್ಯಗಳಿಗನುಸಾರ ಕೊಡುವೆನು.” (ಪ್ರಕಟನೆ 2:23, NW)  ಇಸೆಬೆಲಳು ಮತ್ತು ಅವಳ ಮಕ್ಕಳು ಪಶ್ಚಾತ್ತಾಪ ಪಡುವಂತೆ ಯೇಸುವು ಸಮಯವನ್ನು ಕೊಟ್ಟಿದ್ದಾನೆ, ಆದರೆ ಅವರು ತಮ್ಮ ಅನೈತಿಕ ಮಾರ್ಗಗಳಲ್ಲಿ ಮುಂದರಿಯುವುದರಲ್ಲಿ ಪಟ್ಟುಹಿಡಿಯುತ್ತಾರೆ, ಆದಕಾರಣ ನ್ಯಾಯದಂಡನೆಯನ್ನು ಹೊಂದಲೇ ಬೇಕು. ಇಲ್ಲಿ ಇಂದಿನ ಕ್ರೈಸ್ತರಿಗೆ ಒಂದು ಬಲವಾದ ಸಂದೇಶವಿರುತ್ತದೆ. ಪುರುಷರಾಗಿರಲಿ ಸ್ತ್ರೀಯರಾಗಿರಲಿ, ಶಿರಸ್ಸುತನ ಮತ್ತು ನೈತಿಕತೆಯ ವಿಷಯದಲ್ಲಿ ಬೈಬಲ್‌ ಮೂಲಸೂತ್ರಗಳನ್ನು ಉಲ್ಲಂಘಿಸಿ ಅಥವಾ ದೇವಪ್ರಭುತ್ವದ ಕ್ರಮವನ್ನು ಅಲಕ್ಷ್ಯಮಾಡಲು ಹಠಮಾರಿಯಾಗಿರುತ್ತಾ ಇಸೆಬೆಲಳನ್ನು ಅನುಕರಿಸುತ್ತಾ, ಹೀಗೆ ಅವಳ ಮಕ್ಕಳಾಗುವವರು ಆತ್ಮಿಕವಾಗಿ ಅಪಾಯಕರವಾದ ರೋಗಾವಸ್ಥೆಯಲ್ಲಿರುತ್ತಾರೆ. ಇದು ನಿಜ, ಅಂಥವನು ತನಗಾಗಿ ಪ್ರಾರ್ಥಿಸುವಂತೆ ಸಭೆಯಲ್ಲಿರುವ ಹಿರಿಯರನ್ನು ಕರೆಯುವುದಾದರೆ, “ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುವುದು, ಮತ್ತು ಯೆಹೋವನು ಅವನನ್ನು ಎಬ್ಬಿಸುವನು”—ಒಂದು ವೇಳೆ ಅವನು ಮಾಡಿದ ಪ್ರಾರ್ಥನೆಗನುಸಾರವಾಗಿ ದೀನತೆಯಿಂದ ವರ್ತಿಸುವುದಾದರೆ ಮಾತ್ರ. ಆದರೆ ಅನೈತಿಕ ನಡತೆಗಳನ್ನು ಮುಚ್ಚಿಡಲು ಪ್ರಯತ್ನಿಸುವ ಯಾ ಹುರುಪಿನ ಸೇವೆಯ ಹೊರಗಣ ತೋರಿಕೆಯನ್ನು ಧರಿಸುವುದರ ಮೂಲಕ ಅವನು (ಅವಳು) ದೇವರನ್ನಾಗಲಿ, ಕ್ರಿಸ್ತನನ್ನಾಗಲಿ ಮೋಸಗೊಳಿಸಬಲ್ಲನು ಎಂದು ಯಾವನೂ (ಳೂ) ಭಾವಿಸದಿರಲಿ.—ಯಾಕೋಬ 5:14, 15, NW.

11. ನ್ಯಾಯಸಮ್ಮತವಲ್ಲದ ಸ್ತ್ರೀ ಪ್ರಭಾವದ ಒಳಸೇರುವಿಕೆಗೆ ಜಾಗ್ರತರಾಗಿರಲು ಸಭೆಗಳಿಗೆ ಇಂದು ಹೇಗೆ ಸಹಾಯ ನೀಡಲಾಗುತ್ತದೆ?

11 ಸಂತಸಕರವಾಗಿಯೇ, ಈ ಅಪಾಯದ ಕುರಿತಾಗಿ ಯೆಹೋವನ ಸಾಕ್ಷಿಗಳ ಹೆಚ್ಚಿನ ಸಭೆಗಳು ಜಾಗ್ರತವಾಗಿವೆ. ದೇವಪ್ರಭುತ್ವವಲ್ಲದ ಮನೋಭಾವಗಳ ಮತ್ತು ತಪ್ಪುಗೈಯುವಿಕೆಯ ಪ್ರವೃತ್ತಿಗಳ ಕಡೆಗೆ ಹಿರಿಯರು ನಿಗಾ ವಹಿಸುತ್ತಾರೆ. ಅಪಾಯದ ಮಾರ್ಗದಲ್ಲಿರುವ ಪುರುಷರಿಗೂ, ಸ್ತ್ರೀಯರಿಗೂ, ಹೀಗೆ ಸಮಾನವಾಗಿ ಅವರು ಸಹಾಯ ಕೊಡುವುದರಿಂದ ಅವರು ಆತ್ಮಿಕವಾಗಿ ಕಟ್ಟಲ್ಪಡುವಂತೆ ಮತ್ತು ಹೆಚ್ಚು ತಡವಾಗುವುದರ ಮೊದಲೇ ಸರಿಪಡಿಸಿಕೊಳ್ಳುವಂತೆ ಪ್ರಯತ್ನಿಸುತ್ತಾರೆ. (ಗಲಾತ್ಯ 5:16; 6:1) ಪ್ರೀತಿಪೂರ್ವಕವಾಗಿ ಮತ್ತು ದೃಢತೆಯಿಂದ, ಸ್ತ್ರೀಯರ ವಿಮೋಚನಾ ಚಳುವಳಿಯಂತಹ ಗುಂಪುಗಾರಿಕೆಯನ್ನು ರಚಿಸಲು ಪ್ರವರ್ತಿಸುವ ಯಾವುದೇ ಸ್ತ್ರೀ ಪ್ರಯತ್ನವನ್ನು ಈ ಕ್ರೈಸ್ತ ಮೇಲ್ವಿಚಾರಕರು ತಡೆಗಟ್ಟುತ್ತಾರೆ. ಅದಲ್ಲದೆ, ವಾಚ್‌ ಟವರ್‌ ಸೊಸೈಟಿಯ ಪ್ರಕಾಶನಗಳಲ್ಲಿ ಸಮಯೋಚಿತವಾದ ಬುದ್ಧಿವಾದವನ್ನು ಕಾಲಾನುಕಾಲಕ್ಕೆ ಕೊಡಲಾಗುತ್ತದೆ. *

12. ಯೇಹುವಿನಂತೆ ಯೋಹಾನ ವರ್ಗದವರು ಇಂದು ತದ್ರೀತಿಯ ಹುರುಪನ್ನು ಯಾವ ರೀತಿಯಲ್ಲಿ ಪ್ರದರ್ಶಿಸುತ್ತಾರೆ?

12 ಆದಾಗ್ಯೂ, ಎಲ್ಲಿ ವಿಪರೀತವಾದ ಅನೈತಿಕತೆಯು ನಡೆದಿದೆಯೋ, ಮತ್ತು ವಿಶೇಷವಾಗಿ ಎಲ್ಲಿ ಇದು ಚಾಳಿಯಾಗಿದೆಯೋ, ಅಂತಹ ಪಶ್ಚಾತ್ತಾಪವಿಲ್ಲದ ಅಪರಾಧಿಗಳನ್ನು ಬಹಿಷ್ಕರಿಸಲೇಬೇಕು. ಇಸ್ರಾಯೇಲ್‌ನಲ್ಲಿ ಇಸೆಬೆಲಳ ಪ್ರಭಾವದ ಎಲ್ಲ ಕುರುಹುಗಳನ್ನು ನಿರ್ಮೂಲಗೊಳಿಸಲು ಯೇಹುವಿಗೆ ಇದ್ದ ಹುರುಪನ್ನು ನಾವು ನೆನಪಿಗೆ ತರುತ್ತೇವೆ. ತದ್ರೀತಿಯಲ್ಲಿ, ಇಂದು ಯೋಹಾನ ವರ್ಗವು ದೃಢತೆಯ ಕ್ರಿಯೆಯನ್ನು ತೆಗೆದು ಕೊಂಡು, ಆ ಮೂಲಕ ತಮ್ಮ “ಯೆಹೋನಾದಾಬ” ಸಂಗಾತಿಗಳಿಗೆ ಒಂದು ಆದರ್ಶವನ್ನು ಇಡುತ್ತಾರೆ ಮತ್ತು ಕ್ರೈಸ್ತಪ್ರಪಂಚದ ಸ್ವೇಚ್ಛೆಯ ವೈದಿಕರಿಂದ ತಾವು ಎಷ್ಟೋ ಭಿನ್ನರಾಗಿದ್ದೇವೆ ಎಂದು ತೋರಿಸುತ್ತಾರೆ.—2 ಅರಸುಗಳು 9:22, 30-37; 10:12-17.

13. ತಪ್ಪಾದ ಸ್ತ್ರೀ ಪ್ರಭಾವಕ್ಕೆ ಬಲಿಯಾಗುವವರಿಗೆ ಏನು ಸಂಭವಿಸುವುದು?

13 ಯೆಹೋವನ ಸಂದೇಶವಾಹಕ ಮತ್ತು ನ್ಯಾಯಾಧಿಪತಿಯೋಪಾದಿ, ದೇವರ ಮಗನು ಆಧುನಿಕ ಇಸೆಬೆಲಳನ್ನು ಗುರುತಿಸುವುದರಲ್ಲಿ ಮತ್ತು ರೋಗಶಯ್ಯೆಯಲ್ಲಿ ಅವಳನ್ನು ಬಿಸಾಡುವುದರಲ್ಲಿ ಯೋಗ್ಯವಾಗಿಯೇ ಕ್ರಿಯೆಗೈಯುತ್ತಾನೆ, ಯಾಕಂದರೆ ಅವಳ ಆತ್ಮಿಕ ರೋಗವು ಖಂಡಿತವಾಗಿಯೂ ದೀರ್ಘವ್ಯಾಧಿಯಾಗಿರುತ್ತದೆ. (ಮಲಾಕಿಯ 3:1, 5) ಈ ತಪ್ಪಾದ ಸ್ತ್ರೀ ಪ್ರಭಾವಕ್ಕೆ ಬಲಿಯಾದವರು ಮಹಾ ಸಂಕಟದ—ಬಹಿಷ್ಕೃತರಾಗಿರುವ ದುಃಖದ, ಸತ್ತಿದ್ದಾರೋ ಎಂಬಂತೆ ಕ್ರೈಸ್ತ ಸಭೆಯಿಂದ ಬೇರ್ಪಡಿಸಲ್ಪಡುವ—ಬಾಧೆಯನ್ನು ಕೂಡ ಅನುಭವಿಸುವರು. ಇವರು ಪಶ್ಚಾತ್ತಾಪ ಪಟ್ಟು, ತಿರುಗಿಕೊಂಡು, ಸಭೆಯೊಳಗೆ ಪುನಃ ಸ್ವೀಕರಿಸಲ್ಪಡದೆ ಇರುವುದಾದರೆ, ಅವರು “ಪ್ರಾಣಾಂತಕ ವ್ಯಾಧಿ” ಯನ್ನು—ಕೊನೆಯ ಪಕ್ಷ ಮಹಾ ಸಂಕಟದಲ್ಲಿ, ಶಾರೀರಿಕ ಮೃತ್ಯುವನ್ನು ಎದುರು ನೋಡುತ್ತಿರುವರು. ತನ್ಮಧ್ಯೆ, ತಮ್ಮ ತಪ್ಪಾದ ಕೃತ್ಯಗಳಿಗೆ ಅವರು ಪೂರ್ಣವಾಗಿ ಪಶ್ಚಾತ್ತಾಪ ಪಟ್ಟರೆ, ಪುನಃ ಸ್ಥಾಪನೆಯ ಸಾಧ್ಯತೆ ಇದೆ.—ಮತ್ತಾಯ 24:21, 22; 2 ಕೊರಿಂಥ 7:10.

14. (ಎ) ಯಾವುದೇ ಇಸೆಬೆಲಳ ಪ್ರಭಾವದಂಥ ನಿರ್ದಿಷ್ಟ ಸಮಸ್ಯೆಗಳನ್ನು ನಿರ್ವಹಿಸಲು ಯೇಸುವು ಹಿರಿಯರನ್ನು ಹೇಗೆ ಉಪಯೋಗಿಸುತ್ತಾನೆ? (ಬಿ) ಅಂತಹ ಸಮಸ್ಯೆಗಳನ್ನು ನಿರ್ವಹಿಸುವ ಹಿರಿಯರಿಗೆ ಸಭೆಯು ಹೇಗೆ ಬೆಂಬಲವನ್ನು ಕೊಡತಕ್ಕದ್ದು?

14 ಯೇಸುವು “ಅಂತರಿಂದ್ರಿಯಗಳನ್ನು” (Kidneys), ಅತಿ ಆಳವಾದ ಭಾವನೆಗಳನ್ನು, ಮತ್ತು ‘ಹೃದಯವನ್ನು’, ಅತಿ ಒಳಗಿನ ವ್ಯಕ್ತಿಯನ್ನು, ಅದರಲ್ಲಿ ನೆಲಸಿರುವ ಹೇತುಗಳ ಸಹಿತ ಪರಿಶೋಧಿಸುತ್ತಾನೆ ಎಂದು “ಎಲ್ಲಾ ಸಭೆಗಳು” ತಿಳಿದು ಕೊಳ್ಳತಕ್ಕದ್ದು. ಇದನ್ನು ಮಾಡುವರೆ, ಕಂಡುಬರುವಂತಹ ಇಸೆಬೆಲಳ ಪ್ರಭಾವದಂತಹ ಯಾವುದೇ ನಿರ್ದಿಷ್ಟ ಸಮಸ್ಯೆಗಳನ್ನು ನಿರ್ವಹಿಸಲು, ಅವನು ಭರವಸಾರ್ಹ ನಕ್ಷತ್ರಗಳನ್ನು, ಯಾ ಹಿರಿಯರುಗಳನ್ನು ಉಪಯೋಗಿಸುತ್ತಾನೆ. (ಪ್ರಕಟನೆ 1:20) ಇಂತಹ ರೀತಿಯ ಒಂದು ವಿಷಯವನ್ನು ಹಿರಿಯರುಗಳು ಪೂರ್ಣವಾಗಿ ಪರೀಕ್ಷಿಸಿ ಮತ್ತು ನ್ಯಾಯತೀರ್ಪನ್ನು ಕೊಟ್ಟಾದ ನಂತರ, ತೆಗೆದುಕೊಂಡ ಕಾರ್ಯಾಚರಣೆಯ ಏಕೆ ಎತ್ತಗಳನ್ನು ಶೋಧಿಸಲು ಹೋಗುವುದು ಇತರ ವ್ಯಕ್ತಿಗಳಿಗೆ ಸಂಬಂಧಿಸಿದ್ದಲ್ಲ. ಎಲ್ಲರೂ ಹಿರಿಯರ ವಿಷಯಗಳ ನಿರ್ವಹಣೆಯನ್ನು ದೀನತೆಯಿಂದ ಒಪ್ಪತಕ್ಕದ್ದು ಮತ್ತು ಸಭೆಯ ಈ ನಕ್ಷತ್ರಗಳಿಗೆ ಬೆಂಬಲವನ್ನು ಕೊಡುವುದನ್ನು ಮುಂದರಿಸತಕ್ಕದ್ದು. ಯೆಹೋವನಿಗೆ ಮತ್ತು ಅವನ ಸಂಸ್ಥಾಪಿತ ಏರ್ಪಾಡುಗಳಿಗೆ ನಿಷ್ಠೆಯು ಬಹುಮಾನಿಸಲ್ಪಡುವುದು. (ಕೀರ್ತನೆ 37:27-29; ಇಬ್ರಿಯ 13:7, 17) ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ಪ್ರತಿಫಲವನ್ನು ಯೇಸುವು ಕೊಡುವಾಗ, ನಿಮಗಾದರೋ, ನಿಮ್ಮ ಪಾಲು ಒಂದು ಆಶೀರ್ವಾದವಾಗಿರಲಿ.—ಗಲಾತ್ಯ 5:19-24; 6:7-9ನ್ನು ಕೂಡ ನೋಡಿರಿ.

“ನಿಮಗಿರುವುದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ”

15. (ಎ) ಇಸೆಬೆಲಳಿಂದ ಭ್ರಷ್ಟರಾಗದಂತಹವರಿಗೆ ಹೇಳಲು ಯೇಸುವಿನೊಡನೆ ಏನಿತ್ತು? (ಬಿ) ಧರ್ಮಭ್ರಷ್ಟ ಕ್ರೈಸ್ತಪ್ರಪಂಚದಿಂದ ಹಿಂದೆ 1918 ರಲ್ಲಿ ಕ್ರೈಸ್ತರೆಂದು ಹೇಳಿಕೊಳ್ಳುವವರೆಲ್ಲರೂ ಭ್ರಷ್ಟರಾಗಿರಲಿಲ್ಲ ಎಂದು ಯಾವುದು ತೋರಿಸುತ್ತದೆ?

15 ಯೇಸುವಿನ ಮುಂದಿನ ಮಾತುಗಳು ಸಾಂತ್ವನವನ್ನು ತರುತ್ತವೆ: “ಆದರೂ, ಥುವತೈರದಲ್ಲಿರುವ ಉಳಿದಿರುವವರಾದ ನಿಮಗೆ, ಈ ಬೋಧನೆಯು ಇಲ್ಲದಿರುವ ಎಲ್ಲರಿಗೆ, ‘ಸೈತಾನನ ಅಗಾಧ ವಿಷಯಗಳು,’ ಎಂದು ಅವರು ಹೇಳುವುದನ್ನು ತಿಳಿಯದವರಿಗೂ ನಾನು ಹೇಳುವುದು: ನಾನು ನಿಮ್ಮ ಮೇಲೆ ಬೇರೆ ಯಾವುದೇ ಭಾರವನ್ನೂ ಹಾಕುವುದಿಲ್ಲ. ಹಾಗಿದ್ದರೂ ನಾನು ಬರುವ ತನಕ ನಿಮಗಿರುವುದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ.” (ಪ್ರಕಟನೆ 2:24, 25, NW)  ಇಸೆಬೆಲಳಿಂದ ಪ್ರಭಾವಿತರಾಗದ ನಂಬಿಗಸ್ತರು ಥುವತೈರದಲ್ಲಿ ಇದ್ದಾರೆ. ತದ್ರೀತಿಯಲ್ಲಿ, 1918 ಕ್ಕಿಂತ ಸುಮಾರು 40 ವರ್ಷಗಳ ಮೊದಲು ಮತ್ತು ಅಂದಿನಿಂದ, ಕ್ರೈಸ್ತಪ್ರಪಂಚದಲ್ಲಿ ವ್ಯಾಪಕವಾಗಿ ಹಬ್ಬಿರುವ ಅನೈತಿಕ, ಭ್ರಷ್ಟ ಮಾರ್ಗಗಳನ್ನು ಕ್ರೈಸ್ತರೆಂದು ಹೇಳಿಕೊಳ್ಳುವವರೆಲ್ಲರೂ ಸಹಿಸಿಕೊಂಡಿರುವುದಿಲ್ಲ. ಕ್ರೈಸ್ತಪ್ರಪಂಚದ ಬೋಧನೆಗಳ ಅನೇಕ ಕ್ರೈಸ್ತೇತರ ಮೂಲವನ್ನು ಚರ್ಚ್‌ ಸದಸ್ಯರು ನೋಡುವಂತೆ ಸಹಾಯ ಮಾಡಿದ, ಈಗ ಯೆಹೋವನ ಸಾಕ್ಷಿಗಳೆಂದು ಪ್ರಸಿದ್ಧರಾಗಿರುವ ಬೈಬಲ್‌ ವಿದ್ಯಾರ್ಥಿಗಳ ಚಿಕ್ಕ ಗುಂಪು, ಧರ್ಮಭ್ರಷ್ಟ ಕ್ರೈಸ್ತಪ್ರಪಂಚದ ಮೂಲಕ ಪಡೆದಿರುವ ಬ್ಯಾಬಿಲನಿನ ಸಕಲ ನಂಬಿಕೆ ಮತ್ತು ಆಚಾರಗಳನ್ನು ತನ್ನಿಂದ ತೊಲಗಿಸಿ ಬಿಡಲು ಕಾರ್ಯ ನಡೆಸಿದೆ. ಇದರಲ್ಲಿ “ಆ ಸ್ತ್ರೀ ಇಸೆಬೆಲಳ” ಸ್ವೇಚ್ಛಾಚಾರದ ಬೋಧನೆಯು ಸೇರಿದೆ.

16. ಯೇಸು ಮತ್ತು ಮೊದಲನೆಯ ಶತಕದ ಆಡಳಿತ ಮಂಡಲಿಯು ಇನ್ನು ಹೆಚ್ಚಿನ ಭಾರವನ್ನು ಹೊರಿಸಲಿಲ್ಲವಾದರೂ, ಯಾವ ಸಂಗತಿಗಳನ್ನು ಹೋಗಲಾಡಿಸಬೇಕು?

16 ಯೋಹಾನ ವರ್ಗದವರು ಇಂದು ಅವರ ಸಂಗಾತಿಗಳಾದ ಮಹಾ ಸಮೂಹದವರನ್ನು ಸಹ, ಅಧೋಗತಿಗಿಳಿದ ಮನೋರಂಜನೆಯ ಲೋಕದಲ್ಲಿರುವವರ ಅನೈತಿಕ ಪ್ರಭಾವಗಳ ವಿರುದ್ಧ ಜಾಗ್ರತೆಯಿಂದಿರುವಂತೆ ಪ್ರೋತ್ಸಾಹಿಸಿದ್ದಾರೆ. ಕುತೂಹಲದ ಕಾರಣದಿಂದಾಗಲಿ ಯಾ ಯಾವುದನ್ನು ಹೋಗಲಾಡಿಸಬೇಕು ಎಂದು ಕಲಿಯಲಿಕ್ಕಾಗಲಿ, ಭ್ರಷ್ಟತೆಯನ್ನು ವೀಕ್ಷಿಸುವ ಯಾ ಅನುಭವಿಸುವ ಜರೂರಿಯೇನೂ ಇಲ್ಲ. “ಸೈತಾನನ ಅಗಾಧ ವಿಷಯ” ಗಳಿಂದ ಅತಿ ದೂರದಲ್ಲಿ ಇರುವುದು ವಿವೇಕದ ಮಾರ್ಗವಾಗಿರುತ್ತದೆ. ಯೇಸು ಅನ್ನುವಂತೆ: “ನಾನು ನಿಮ್ಮ ಮೇಲೆ ಬೇರೆ ಯಾವುದೇ ಭಾರವನ್ನು ಹಾಕುವುದಿಲ್ಲ.” ಇದು ನಮಗೆ ಮೊದಲನೆಯ ಶತಕದ ಕ್ರೈಸ್ತ ಆಡಳಿತ ಮಂಡಲಿಯ ಅಧಿಕೃತ ಶಾಸನದ ನೆನಪನ್ನು ತರುತ್ತದೆ: “ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನು ಮತ್ತು ರಕ್ತವನ್ನು ಮತ್ತು ಕುತ್ತಿಗೆ ಹಿಸುಕಿ ಕೊಂದದ್ದನ್ನು ಮತ್ತು ಹಾದರವನ್ನು ವಿಸರ್ಜಿಸುವುದು ಆವಶ್ಯಕವಾಗಿದೆಯೇ ಹೊರತಾಗಿ ನಿಮ್ಮ ಮೇಲೆ ಹೆಚ್ಚಿನ ಭಾರವನ್ನು ಹಾಕಬಾರದೆಂದು ಪವಿತ್ರಾತ್ಮಕ್ಕೂ ಮತ್ತು ಸ್ವತಃ ನಮಗೂ ವಿಹಿತವೆಂದು ತೋರಿತು. ಈ ವಿಷಯಗಳಿಂದ ಜಾಗ್ರತೆಯಿಂದ ನಿಮ್ಮನ್ನು ದೂರವಿರಿಸಿಕೊಂಡರೆ, ನೀವು ಏಳಿಗೆ ಹೊಂದುವಿರಿ.” (ಅ. ಕೃತ್ಯಗಳು 15:28, 29, NW) ಆತ್ಮಿಕ ಏಳಿಗೆಗಾಗಿ, ಸುಳ್ಳು ಧರ್ಮವನ್ನು, ರಕ್ತದ (ರಕ್ತ ಪೂರಣಗಳಲ್ಲಿ) ದುರುಪಯೋಗ, ಮತ್ತು ಅನೈತಿಕತೆಯನ್ನು ಹೋಗಲಾಡಿಸಿರಿ! ಮತ್ತು ನಿಮ್ಮ ಶಾರೀರಿಕ ಆರೋಗ್ಯವು ಕೂಡ ಪ್ರಾಯಶಃ ಸುರಕ್ಷಿತವಾಗಿರುವುದು.

17. (ಎ) ‘ಅಗಾಧ ವಿಷಯಗಳಿಂದ’ ಇಂದು ಜನರನ್ನು ಸೈತಾನನು ಹೇಗೆ ಶೋಧನೆಗೆ ಒಳಪಡಿಸಿದ್ದಾನೆ? (ಬಿ) ಸೈತಾನನ ಭ್ರಾಂತಿಕಾರಕ ಲೋಕದ “ಅಗಾಧ ವಿಷಯಗಳ” ಕಡೆಗೆ ನಮ್ಮ ಮನೋಭಾವ ಏನಾಗಿರತಕ್ಕದ್ದು?

17 ಬುದ್ಧಿಶಕ್ತಿಯನ್ನು ಹೊಗಳುವ ಸಂಕ್ಲಿಷ್ಟಕರವಾದ ಊಹಾಪೋಹಗಳು ಮತ್ತು ತತ್ವಜ್ಞಾನಗಳಂಥಹ ಇತರ “ಅಗಾಧ ವಿಷಯಗಳು” ಇಂದು ಸೈತಾನನ ಹತ್ತಿರ ಇವೆ. ಸ್ವೇಚ್ಛಾಚಾರದ, ಅನೈತಿಕ ತರ್ಕಸರಣಿಗಳ ಜತೆಯಲ್ಲಿ, ಪ್ರೇತವ್ಯವಹಾರವಾದ ಮತ್ತು ವಿಕಾಸವಾದದ ಕಲ್ಪನೆಗಳು ಸೇರಿರುತ್ತವೆ. ಇವೆಲ್ಲಾ “ಅಗಾಧ ವಿಷಯಗಳನ್ನು” ಸರ್ವ-ವಿವೇಕಿ ನಿರ್ಮಾಣಿಕನು ಹೇಗೆ ಲಕ್ಷಿಸುತ್ತಾನೆ? ಅವನು ಹೇಳುವುದನ್ನು ಅಪೊಸ್ತಲ ಪೌಲನು ಉಲ್ಲೇಖಿಸುತ್ತಾನೆ: “ನಾನು ವಿವೇಕಿಗಳ ವಿವೇಕವನ್ನು ನಾಶಮಾಡುವೆನು.” ಇದಕ್ಕೆ ವ್ಯತಿರಿಕ್ತವಾಗಿ, “ದೇವರ ಅಗಾಧ ವಿಷಯಗಳು” ಸರಳವೂ, ಸುಲಭವಾಗಿ ಅರ್ಥೈಸಿಕೊಳ್ಳುವಂತಹವುಗಳೂ ಮತ್ತು ಹೃದಯವನ್ನು ಹುರಿದುಂಬಿಸುವವುಗಳೂ ಆಗಿವೆ. ವಿವೇಕಿಯಾದ ಕ್ರೈಸ್ತರು ಸೈತಾನನ ಭ್ರಾಂತಿಗೊಳಿಸುವ ಲೋಕದ “ಅಗಾಧ ವಿಷಯಗಳನ್ನು” ತ್ಯಜಿಸುತ್ತಾರೆ. ನೆನಪಿನಲ್ಲಿಡಿರಿ, “ಲೋಕವೂ ಮತ್ತು ಅದರೊಂದಿಗೆ ಅದರ ಆಶೆಯೂ ಗತಿಸಿಹೋಗುವುದು, ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು.”—1 ಕೊರಿಂಥ 1:19, ಕಿಂಗಡಮ್‌ ಇಂಟರ್‌ಲಿನಿಯರ್‌; 2:10; 1 ಯೋಹಾನ 2:17, NW.

18. ಕಡೇ ವರೆಗೂ ನಂಬಿಗಸ್ತರಾಗಿ ಉಳಿಯುವ ಅಭಿಷಿಕ್ತ ಕ್ರೈಸ್ತರಿಗೆ ಯೇಸುವು ಯಾವ ಆಶೀರ್ವಾದಗಳನ್ನು ವಾಗ್ದಾನಿಸಿದ್ದಾನೆ, ಮತ್ತು ಅರ್ಮಗೆದೋನಿನಲ್ಲಿ ಪುನರುತ್ಥಾನಗೊಂಡ ಇವರಿಗೆ ಯಾವ ಸುಯೋಗವು ಇರುವುದು?

18 ಥುವತೈರದಲ್ಲಿರುವ ಆ ಕ್ರೈಸ್ತರಿಗೆ, ಈಗ ಯೇಸುವು ಹೃದಯವನ್ನು ಹುರಿದುಂಬಿಸುವ ಮಾತುಗಳನ್ನು ಆಡುತ್ತಾನೆ. ಅವುಗಳು ಇಂದು ಅಭಿಷಿಕ್ತ ಕ್ರೈಸ್ತರನ್ನು ಕೂಡ ಪ್ರೋತ್ಸಾಹಿಸುತ್ತವೆ: “ಮತ್ತು ಜಯಶಾಲಿಯಾಗುವವನಿಗೆ ಮತ್ತು ಕಡೇ ವರೆಗೂ ನನ್ನ ಕೃತ್ಯಗಳನ್ನು ಪಾಲಿಸುವವನಿಗೆ, ನನ್ನ ತಂದೆಯಿಂದ ನಾನು ಪಡೆದಿರುವಂತೆಯೇ, ಜನಾಂಗಗಳ ಮೇಲೆ ನಾನು ಅಧಿಕಾರವನ್ನು ಕೊಡುವೆನು ಮತ್ತು ಅವರು ಮಣ್ಣಿನ ಮಡಿಕೆಗಳೋಪಾದಿ ಚೂರುಚೂರಾಗಿ ಒಡೆಯಲ್ಪಡುವಂತೆ ಅವನು ಕಬ್ಬಿಣದ ಕೋಲಿನಿಂದ ಅವರನ್ನು ಪಾಲಿಸುವನು.” (ಪ್ರಕಟನೆ 2:26, 27, NW)  ಖಂಡಿತವಾಗಿಯೂ ಒಂದು ಅದ್ಭುತಕರವಾದ ಸುಯೋಗ! ತಮ್ಮ ಪುನರುತ್ಥಾನದಲ್ಲಿ ಅಭಿಷಿಕ್ತ ಜಯಶಾಲಿಗಳು ಪಡೆಯುವ ಈ ಅಧಿಕಾರವು, ದಂಗೆಕೋರ ಜನಾಂಗಗಳನ್ನು ಅರ್ಮಗೆದೋನ್‌ನಲ್ಲಿ ನಾಶನದ “ಕಬ್ಬಿಣದ ಕೋಲನ್ನು” ಪ್ರಯೋಗಿಸುವುದರಲ್ಲಿ ಯೇಸುವಿನೊಂದಿಗೆ ಅವರು ಪಾಲಿಗರಾಗುವದೇ ಆಗಿರುತ್ತದೆ. ಮಣ್ಣಿನ ಮಡಿಕೆಗಳಂತೆ, ಕ್ರಿಸ್ತನು ಅವನ ಶತ್ರುಗಳನ್ನು ಅರ್ಮಗೆದೋನಿನಲ್ಲಿ ಚೂರುಚೂರು ಮಾಡುವಾಗ, ಆ ಜನಾಂಗಗಳ ಅಣ್ವಸ್ತ್ರಗಳ ಸಿಡಿಮದ್ದುಗಳ ಶಕ್ತಿಯು ಅತಿ ಹೆಚ್ಚೆಂದರೆ, ಒಂದು ಒದ್ದೆಯಾದ ಅಗ್ನಿಯ ಪಟಾಕಿಯಂತೆ ಸಿಡಿಯುವುದು.—ಕೀರ್ತನೆ 2:8, 9; ಪ್ರಕಟನೆ 16:14, 16; 19:11-13, 15, NW.

19. (ಎ) “ಉದಯಸೂಚಕ ನಕ್ಷತ್ರ” ಯಾರು, ಮತ್ತು ಜಯಶಾಲಿಯಾಗುವವರಿಗೆ ಅವನು ಹೇಗೆ ಕೊಡಲ್ಪಡುವನು? (ಬಿ) ಮಹಾ ಸಮೂಹಕ್ಕೆ ಯಾವ ಪ್ರೋತ್ಸಾಹನೆಯು ಕೊಡಲ್ಪಡುತ್ತದೆ?

19 ಯೇಸುವು ಕೂಡಿಸುವುದು: “ಮತ್ತು ನಾನು ಅವನಿಗೆ ಉದಯಸೂಚಕ ನಕ್ಷತ್ರವನ್ನು ಕೊಡುವೆನು.” (ಪ್ರಕಟನೆ 2:28, NW)  ಈ ನಕ್ಷತ್ರ ಏನೆಂದು ಯೇಸುವು ಆ ಬಳಿಕ ತಾನಾಗಿಯೇ, ಹೀಗನ್ನುತ್ತಾ ವಿವರಿಸುತ್ತಾನೆ: “ನಾನು ದಾವೀದನ ಬುಡವೂ ಮತ್ತು ವಂಶವೂ ಮತ್ತು ಪ್ರಕಾಶವುಳ್ಳ ಉದಯಸೂಚಕ ನಕ್ಷತ್ರವೂ ಆಗಿದ್ದೇನೆ.” (ಪ್ರಕಟನೆ 22:16) ಹೌದು, ಬಿಳಾಮನ ಇಚ್ಛೆಯಿಲ್ಲದ ತುಟಿಗಳಿಂದ ಯೆಹೋವನು ಬಲಾತ್ಕರಿಸಿ ನುಡಿಸಿದ ಪ್ರವಾದನೆಯ ನೆರವೇರಿಕೆಯನ್ನು ಯೇಸುವು ತಾನೇ ಮಾಡುತ್ತಾನೆ: “ಯಾಕೋಬ ವಂಶದವರಲ್ಲಿ ನಕ್ಷತ್ರ ಪ್ರಾಯನೊಬ್ಬನು ಉದಯಿಸಿದ್ದಾನೆ; ಇಸ್ರಾಯೇಲ್ಯರಲ್ಲಿ ರಾಜದಂಡ ಹಿಡಿದವನು ಕಂಡುಬಂದಿದ್ದಾನೆ.” (ಅರಣ್ಯಕಾಂಡ 24:17) ಜಯಶಾಲಿಗಳಾಗುವವರಿಗೆ ಯೇಸುವು “ಉದಯಸೂಚಕ ನಕ್ಷತ್ರವನ್ನು” ಹೇಗೆ ಕೊಡುವನು? ಅವರಿಗಾಗಿ ತನ್ನನ್ನು ನೀಡಿಕೊಳ್ಳುವುದರ ಮೂಲಕ, ಅವರನ್ನು ಆತನ ಅತಿ ನಿಕಟದ, ಅತಿ ಆಪ್ತ ಸಂಬಂಧದೊಳಗೆ ತೆಗೆದುಕೊಳ್ಳುವುದರ ಮೂಲಕವೇ ಎಂದು ಸಾಬೀತಾಗುತ್ತದೆ. (ಯೋಹಾನ 14:2, 3) ಖಂಡಿತವಾಗಿಯೂ ತಾಳಿಕೊಳ್ಳಲು ಒಂದು ಬಲಾಢ್ಯ ಉತ್ತೇಜಕ! ಇಲ್ಲಿ ಭೂಮಿಯ ಮೇಲೆ ಪ್ರಮೋದವನವನ್ನು ಸ್ಥಾಪಿಸುವುದರಲ್ಲಿ “ಪ್ರಕಾಶವುಳ್ಳ ಉದಯಸೂಚಕ ನಕ್ಷತ್ರ” ಬಲುಬೇಗನೇ ತನ್ನ ರಾಜ್ಯ ಅಧಿಕಾರವನ್ನು ಚಲಾಯಿಸಲಿದ್ದಾನೆ ಎಂಬುದನ್ನು ತಿಳಿಯುವುದು ಮಹಾ ಸಮೂಹದವರಿಗೂ ಕೂಡ ಒಂದು ಪ್ರೇರಕವಾಗಿರುತ್ತದೆ!

ಸಮಗ್ರತೆಯನ್ನು ಕಾಪಾಡಿರಿ

20. ಕ್ರೈಸ್ತಪ್ರಪಂಚದಲ್ಲಿನ ಯಾವ ಬೆಳವಣಿಗೆಗಳು ಥುವತೈರದ ಸಭೆಯಲ್ಲಿರುವ ಕೆಲವು ನಿರ್ಬಲತೆಗಳನ್ನು ನಮ್ಮ ನೆನಪಿಗೆ ತರುತ್ತವೆ?

20 ಈ ಸಂದೇಶವು ಥುವತೈರದಲ್ಲಿರುವ ಕ್ರೈಸ್ತರನ್ನು ಬಹಳವಾಗಿ ಪ್ರೋತ್ಸಾಹಿಸಿರಬೇಕು. ಕೇವಲ ಭಾವಿಸಿಕೊಳ್ಳಿರಿ—ಪರಲೋಕದಲ್ಲಿರುವ ಮಹಿಮಾಭರಿತ ದೇವರ ಕುಮಾರನು ಅವರ ಕೆಲವು ಸಮಸ್ಯೆಗಳ ಕುರಿತಾಗಿ ಥುವತೈರದಲ್ಲಿರುವ ಕ್ರೈಸ್ತರಿಗೆ ವೈಯಕ್ತಿಕವಾಗಿ ಮಾತಾಡಿದನು! ಖಂಡಿತವಾಗಿಯೂ, ಸಭೆಯಲ್ಲಿರುವ ಕೆಲವರಾದರೂ ಅಂತಹ ಪ್ರೀತಿಯ ಕುರಿಪಾಲನೆಗೆ ಪ್ರತಿವರ್ತನೆ ತೋರಿಸಿದ್ದಿರಬೇಕು. ಏಳು ಸಂದೇಶಗಳಲ್ಲಿ ಅತಿ ಉದ್ದವಾದ ಇದು ಇಂದು ನಿಜ ಕ್ರೈಸ್ತ ಸಭೆಯನ್ನು ಗುರುತಿಸಲು ಕೂಡ ನಮಗೆ ಸಹಾಯ ನೀಡುತ್ತದೆ. ನ್ಯಾಯತೀರ್ಪಿಗಾಗಿ ಯೆಹೋವನ ದೇವಾಲಯಕ್ಕೆ ಯೇಸುವು 1918 ರಲ್ಲಿ ಬಂದಾಗ, ಕ್ರೈಸ್ತರೆಂದು ಹೇಳಿಕೊಳ್ಳುವ ಅಧಿಕ ಸಂಖ್ಯಾತ ಸಂಸ್ಥೆಗಳು ವಿಗ್ರಹಾರಾಧನೆಯಿಂದ ಮತ್ತು ಆತ್ಮಿಕ ಅನೈತಿಕತೆಯಿಂದ ಮಲಿನಗೊಂಡಿದ್ದವು. (ಯಾಕೋಬ 4:4) ಕೆಲವರು ಸೆವೆಂತ್‌ ಡೇ ಆ್ಯಡ್ವೆಂಟಿಸ್ಚ್‌ರ ಎಲನ್‌ ವೈಟ್‌ ಮತ್ತು ಕ್ರಿಶ್ಚಿಯನ್‌ ಸಯಂಟಿಸ್ಟರ ಮೇರಿ ಬೇಕರ್‌ ಎಡಿಯವರಂತಹ 19 ನೆಯ ಶತಕದ ಗಡಸುಮನಸ್ಸಿನ ಸ್ತ್ರೀಯರ ಬೋಧನೆಗಳ ಮೇಲೆ ತಮ್ಮ ನಂಬಿಕೆಯನ್ನು ಆಧರಿಸಿದರು ಮತ್ತು ಇತ್ತೇಚೆಗೆ ಉಪದೇಶ ವೇದಿಕೆಯಿಂದ ಅನೇಕ ಸ್ತ್ರೀಯರು ಸಾರುತ್ತಾ ಇದ್ದಾರೆ. (1 ತಿಮೊಥೆಯ 2:11, 12ರ ವ್ಯತ್ಯಾಸವನ್ನು ನೋಡಿರಿ.) ಕ್ಯಾತೊಲಿಕ್‌ ಧರ್ಮದ ಭಿನ್ನ ರೂಪಗಳಲ್ಲಿ, ದೇವರನ್ನು ಮತ್ತು ಕ್ರಿಸ್ತನನ್ನು ಮೀರಿ ಆಗಾಗ್ಗೆ ಮರಿಯಳನ್ನು ಗೌರವಿಸಲಾಗುತ್ತದೆ. ಯೇಸುವು ಅವಳನ್ನು ಆ ರೀತಿಯಲ್ಲಿ ಗೌರವಿಸಲಿಲ್ಲ. (ಯೋಹಾನ 2:4; 19:26) ಅಂತಹ ಕಾನೂನುವಿಹಿತವಲ್ಲದ ಸ್ತ್ರೀ ಪ್ರಭಾವವನ್ನು ಒಪ್ಪುವಂತಹ ಸಂಸ್ಥೆಗಳು ನಿಜವಾಗಿಯೂ ಕ್ರಿಸ್ತೀಯವೆಂದು ಸ್ವೀಕರಿಸಲ್ಪಡಸಾಧ್ಯವೂ?

21. ಥುವತೈರಕ್ಕೆ ಯೇಸುವಿನ ಸಂದೇಶದಲ್ಲಿ ಪ್ರತಿಯೊಬ್ಬನಿಗೆ ಯಾವ ಪಾಠಗಳು ಇವೆ?

21 ಯೋಹಾನ ವರ್ಗದವರಾಗಿರಲಿ ಬೇರೆ ಕುರಿಗಳವರಾಗಿರಲಿ, ಕ್ರೈಸ್ತರು ಪ್ರತಿಯೊಬ್ಬರಾಗಿ ಈ ಸಂದೇಶವನ್ನು ಗಮನಿಸುವುದರಿಂದ ಒಳ್ಳೆಯದನ್ನು ಮಾಡುವರು. (ಯೋಹಾನ 10:16) ಥುವತೈರದ ಇಸೆಬೆಲಳ ಶಿಷ್ಯರು ಮಾಡಿದಂತೆಯೇ, ಕೆಲವರು ಸುಲಭವಾದ ಮಾರ್ಗಕ್ರಮವನ್ನು ಹಿಂಬಾಲಿಸುವುದು ಒಳ್ಳೆಯದು ಎಂಬ ಶೋಧನೆಗೆ ಬೀಳಬಹುದು. ಒಪ್ಪಂದ ಮಾಡಿಕೊಳ್ಳುವ ಶೋಧನೆಯೂ ಕೂಡ ಇದೆ. ಇಂದು ರಕ್ತದ ಉತ್ಪಾದನೆಗಳನ್ನು ತಿನ್ನುವ ಯಾ ರಕ್ತ ಪೂರಣಗಳನ್ನು ಸ್ವೀಕರಿಸುವ ವಿವಾದಾಂಶಗಳನ್ನು ಎದುರಿಸಲೇಬೇಕು. ಕ್ಷೇತ್ರ ಸೇವೆಯಲ್ಲಿ ಹುರುಪುಳ್ಳವರಾಗುವುದು ಯಾ ಭಾಷಣಗಳನ್ನು ನೀಡುವುದು, ಹಿಂಸಾತ್ಮಕ ಮತ್ತು ಅನೈತಿಕ ಚಲನ ಚಿತ್ರಗಳನ್ನು ಮತ್ತು ವಿಡಿಯೋ ಟೇಪ್‌ಗಳನ್ನು ನೋಡುವಂತಹ ಮತ್ತು ಮದ್ಯಪಾನ ಮಾಡುವುದರಲ್ಲಿ ಸ್ವೇಚ್ಛಾಚಾರಿಗಳಾಗಿರುವಂತಹ ಇತರ ಕ್ಷೇತ್ರಗಳಲ್ಲಿ ಸ್ವಲ್ಪ ಕಡಿಮೆ ಕಟ್ಟುನಿಟ್ಟಾಗಿರಲು ಹಕ್ಕನ್ನು ಕೊಡುತ್ತದೆಂದು ಕೆಲವರು ಭಾವಿಸಬಹುದು. ಅಂತಹ ವಿಷಯಗಳಲ್ಲಿ ನಾವು ಮನಸ್ಸಿಗೆ ಬಂದಂತೆ ವರ್ತಿಸಕೂಡದು ಎಂದು ಥುವತೈರದಲ್ಲಿರುವ ಕ್ರೈಸ್ತರಿಗೆ ಕೊಡಲ್ಪಟ್ಟ ಯೇಸುವಿನ ಎಚ್ಚರಿಕೆಯು ನಮಗೆ ಹೇಳುತ್ತದೆ. ನಾವು ಶುದ್ಧರಾಗಿಯೂ, ಥುವತೈರದಲ್ಲಿ ಹೆಚ್ಚಿನ ಕ್ರೈಸ್ತರು ಇದ್ದಂತೆ ವಿಭಾಗಿತರಾಗಿರದೆ ಪೂರ್ಣಾತ್ಮದವರಾಗಿಯೂ ಇರುವಂತೆ ಯೆಹೋವನು ಬಯಸುತ್ತಾನೆ.

22. ಆಲಿಸುವ ಕಿವಿಯಿರುವ ಪ್ರಾಮುಖ್ಯಯನ್ನು ಯೇಸು ಹೇಗೆ ಒತ್ತಿ ಹೇಳುತ್ತಾನೆ?

22 ಕೊನೆಗೆ, ಯೇಸುವು ಘೋಷಿಸುವುದು: “ಆತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.” (ಪ್ರಕಟನೆ 2:29, NW)  ನಾಲ್ಕನೆಯ ಬಾರಿಗೆ ಈ ಹುರಿದುಂಬಿಸುವ ಕೊನೆಯ ಪಲ್ಲವಿಯನ್ನು ಯೇಸುವು ಪುನರಾವರ್ತಿಸುತ್ತಾನೆ, ಮತ್ತು ಇದು ಬರಲಿರುವ ಉಳಿದ ಮೂರು ಸಂದೇಶಗಳನ್ನು ಮುಕ್ತಾಯಗೊಳಿಸುವುದು. ನಿಮ್ಮ ಹತ್ತಿರ ಆ ಪ್ರತಿವರ್ತನೆ ತೋರಿಸುವ ಕಿವಿ ಇದೆಯೋ? ಹಾಗಿದ್ದರೆ, ದೇವರು ತನ್ನಾತ್ಮದಿಂದ ತನ್ನ ಮಾಧ್ಯಮದ ಮೂಲಕ ಬುದ್ಧಿವಾದವನ್ನು ಒದಗಿಸುತ್ತಿರುವಾಗ ಶೃದ್ಧಾಪೂರ್ವಕವಾಗಿ ಕೇಳುತ್ತಾ ಇರ್ರಿ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 11 ಉದಾಹರಣೆಗೆ, ಮೇ 22, 1978ರ ಅವೇಕ್‌!ನಲ್ಲಿನ “ಮೊದಲನೆಯ ಶತಕದ ಸಭೆಯಲ್ಲಿ ಸ್ತ್ರೀಯರ ಪಾತ್ರ” [ಇಂಗ್ಲಿಷ್‌] ಲೇಖನವನ್ನು ನೋಡಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 62 ರಲ್ಲಿರುವ ಚಿತ್ರಗಳು]

ಇಂದು ದೇವಪ್ರಭುತ್ವ ಅಧಿಕಾರವನ್ನು ವಿನೀತರಾಗಿ ಬೆಂಬಲಿಸುತ್ತಿರುವಾಗ, ಸಾಕ್ಷಿ ಕಾರ್ಯದ ಅಧಿಕ ಭಾಗವು ನಂಬಿಗಸ್ತ ಸಹೋದರಿಯರಿಂದ ಪೂರೈಸಲ್ಪಡುತ್ತದೆ