ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 17

ದೇವರು ಕೊಟ್ಟಿರುವ ಪ್ರಾರ್ಥನೆ ಎಂಬ ವರ

ದೇವರು ಕೊಟ್ಟಿರುವ ಪ್ರಾರ್ಥನೆ ಎಂಬ ವರ

‘ಭೂಪರಲೋಕಗಳನ್ನು ಉಂಟುಮಾಡಿದ’ ದೇವರು ನಮ್ಮ ಪ್ರಾರ್ಥನೆಗಳನ್ನು ಕೇಳಲು ಇಷ್ಟಪಡುತ್ತಾನೆ.—ಕೀರ್ತನೆ 115:15

1, 2. (ಎ) ಪ್ರಾರ್ಥನೆ ದೇವರು ಕೊಟ್ಟಿರುವ ವಿಶೇಷ ವರವೆಂದು ನೀವು ಯಾಕೆ ಹೇಳುತ್ತೀರಿ? (ಬಿ) ಪ್ರಾರ್ಥನೆ ಬಗ್ಗೆ ಬೈಬಲ್‌ ಏನು ಹೇಳುತ್ತದೆಂದು ನಾವು ಯಾಕೆ ತಿಳಿದುಕೊಳ್ಳಬೇಕು?

ಇಡೀ ವಿಶ್ವದ ಮುಂದೆ ಈ ಭೂಮಿ ತುಂಬ ಚಿಕ್ಕದು. ಯೆಹೋವ ದೇವರು ಸ್ವರ್ಗದಿಂದ ಈ ಭೂಮಿಯಲ್ಲಿರುವ ಮನುಷ್ಯರನ್ನು ನೋಡುವಾಗ ಆತನಿಗೆ ಅವರು ‘ಕಪಿಲೆಯಿಂದ ಉದುರುವ ತುಂತುರಿನಂತೆ’ ಅಂದರೆ ಚಿಕ್ಕ ಹನಿಗಳಂತೆ ಕಾಣುತ್ತಾರೆ. (ಕೀರ್ತನೆ 115:15; ಯೆಶಾಯ 40:15) ಹಾಗಿದ್ದರೂ ಕೀರ್ತನೆ 145:18, 19⁠ರಲ್ಲಿ ಹೀಗೆ ಹೇಳಲಾಗಿದೆ: “ಯೆಹೋವನಿಗೆ . . . [ನಾವು] ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ. ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.” ಎಷ್ಟು ಒಳ್ಳೇ ವರವನ್ನು ಯೆಹೋವನು ನಮಗೆ ಕೊಟ್ಟಿದ್ದಾನಲ್ವಾ? ವಿಶ್ವದ ನಿರ್ಮಾಣಿಕನಾಗಿರುವ ಸರ್ವಶಕ್ತ ಯೆಹೋವನು ನಮಗೆ ಹತ್ತಿರವಾಗಿರಲು, ನಮ್ಮ ಪ್ರಾರ್ಥನೆಗಳನ್ನು ಕೇಳಲು ಇಷ್ಟಪಡುತ್ತಾನೆ. ಹಾಗಾಗಿ ದೇವರು ನಮಗೆ ಕೊಟ್ಟಿರುವ ವಿಶೇಷ ವರವು ಪ್ರಾರ್ಥನೆಯಾಗಿದೆ. ಈ ವರವನ್ನು ಆತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೊಟ್ಟಿದ್ದಾನೆ.

2 ಯೆಹೋವ ದೇವರು ಇಷ್ಟಪಡುವಂಥ ರೀತಿಯಲ್ಲಿ ಪ್ರಾರ್ಥನೆ ಮಾಡಿದರೆ ಮಾತ್ರ ಆತನು ನಮಗೆ ಕಿವಿಗೊಡುತ್ತಾನೆ. ಆದರೆ ಆತನ ಇಷ್ಟದ ಪ್ರಕಾರ ಪ್ರಾರ್ಥಿಸುವುದು ಹೇಗೆ? ಪ್ರಾರ್ಥನೆ ಬಗ್ಗೆ ಬೈಬಲ್‌ ಏನು ಹೇಳುತ್ತದೆಂದು ನೋಡೋಣ ಬನ್ನಿ.

ಯೆಹೋವ ದೇವರಿಗೆ ಯಾಕೆ ಪ್ರಾರ್ಥಿಸಬೇಕು?

3. ನಾವೇಕೆ ಯೆಹೋವನಿಗೆ ಪ್ರಾರ್ಥಿಸಬೇಕು?

3 ನೀವು ತನ್ನೊಟ್ಟಿಗೆ ಮಾತಾಡಬೇಕು ಅಂದರೆ ಪ್ರಾರ್ಥಿಸಬೇಕು ಎಂದು ಯೆಹೋವನು ಬಯಸುತ್ತಾನೆ. ಈ ವಿಷಯ ನಮಗೆ ಹೇಗೆ ಗೊತ್ತು? ಫಿಲಿಪ್ಪಿ 4:6, 7⁠ರಲ್ಲಿ (ಓದಿ) ಇದಕ್ಕೆ ಉತ್ತರವಿದೆ. ಆತನು ಪ್ರೀತಿಯಿಂದ ಕೊಟ್ಟಿರುವ ಆ ಆಮಂತ್ರಣದ ಬಗ್ಗೆ ಸ್ವಲ್ಪ ಯೋಚಿಸಿ. ಇಡೀ ವಿಶ್ವದ ಸೃಷ್ಟಿಕರ್ತನಿಗೆ ನಿಮ್ಮ ಬಗ್ಗೆ ತುಂಬ ಕಾಳಜಿಯಿದೆ. ನಿಮ್ಮೆಲ್ಲ ಭಾವನೆಗಳನ್ನು, ಸಮಸ್ಯೆಗಳನ್ನು ಮನಬಿಚ್ಚಿ ಆತನಲ್ಲಿ ಹೇಳಿಕೊಳ್ಳಬೇಕೆಂದು ಆತನು ಬಯಸುತ್ತಾನೆ.

4. ನಾವು ಯಾವಾಗಲೂ ಪ್ರಾರ್ಥನೆ ಮಾಡಿದರೆ ಯೆಹೋವನೊಟ್ಟಿಗಿನ ನಮ್ಮ ಸ್ನೇಹ ಹೇಗೆ ಆಪ್ತವಾಗುತ್ತದೆ?

4 ಯೆಹೋವನೊಂದಿಗೆ ಆಪ್ತ ಸ್ನೇಹ ಬೆಳೆಸಲು ಪ್ರಾರ್ಥನೆ ನಮಗೆ ಸಹಾಯಮಾಡುತ್ತದೆ. ಸ್ನೇಹಿತರು ಯಾವಾಗಲೂ ತಮ್ಮ ಆಲೋಚನೆಗಳನ್ನು, ಭಾವನೆಗಳನ್ನು ಮತ್ತು ಚಿಂತೆಗಳನ್ನು ಒಬ್ಬರೊಂದಿಗೊಬ್ಬರು ಹಂಚಿಕೊಂಡಾಗ ಅವರ ಸ್ನೇಹ ಆಪ್ತವಾಗುತ್ತಾ ಹೋಗುತ್ತದೆ. ಯೆಹೋವನಿಗೆ ಪ್ರಾರ್ಥಿಸುವಾಗಲೂ ಅದೇ ರೀತಿ ಆಗುತ್ತದೆ. ಯೆಹೋವ ದೇವರು ಬೈಬಲಿನ ಮೂಲಕ ಆತನ ಆಲೋಚನೆಗಳನ್ನು, ಭಾವನೆಗಳನ್ನು ಮತ್ತು ಮುಂದೆ ಏನು ಮಾಡಲಿದ್ದಾನೆ ಎನ್ನುವುದನ್ನು ನಿಮಗೆ ತಿಳಿಸಿದ್ದಾನೆ. ನೀವು ಸಹ ಯಾರ ಹತ್ತಿರವೂ ಹೇಳಿಕೊಳ್ಳದ ಮನದಾಳದ ಭಾವನೆಗಳನ್ನು ಆತನಲ್ಲಿ ಯಾವಾಗಲೂ ಹೇಳಿಕೊಳ್ಳಬಹುದು. ಹೀಗೆ ಮಾಡುವಾಗ ನಿಮ್ಮ ಮತ್ತು ಯೆಹೋವನ ಸ್ನೇಹ ಆಪ್ತವಾಗುತ್ತಾ ಹೋಗುತ್ತದೆ.—ಯಾಕೋಬ 4:8.

ದೇವರು ನಮ್ಮ ಪ್ರಾರ್ಥನೆ ಕೇಳಬೇಕಾದರೆ ನಾವೇನು ಮಾಡಬೇಕು?

5. ನಾವು ಯೆಹೋವನು ಇಷ್ಟಪಡದ ಕೆಲಸ ಮಾಡಿದರೂ ಆತನು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನಾ?

5 ನಾವು ಯೆಹೋವನು ಇಷ್ಟಪಡದ ಕೆಲಸ ಮಾಡಿದರೂ ಆತನು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನಾ? ಇಲ್ಲ. ಯೆಶಾಯ ಪ್ರವಾದಿ ಜೀವಿಸಿದ್ದ ಸಮಯದಲ್ಲಿ, ಯೆಹೋವನು ಇಸ್ರಾಯೇಲ್ಯರಿಗೆ ಹೀಗೆ ಹೇಳಿದನು: “ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು, ನಿಮ್ಮ ಕೈಗಳಲ್ಲಿ ರಕ್ತವು ತುಂಬಿದೆ.” (ಯೆಶಾಯ 1:15) ಇದರಿಂದ ನಮಗೆ ಗೊತ್ತಾಗುತ್ತದೆ, ನಾವು ಜಾಗ್ರತೆ ವಹಿಸದೆ ಯೆಹೋವನು ಇಷ್ಟಪಡದ ಕೆಲಸಗಳನ್ನು ಮಾಡಿದರೆ ಆತನು ನಮ್ಮ ಪ್ರಾರ್ಥನೆಗಳನ್ನು ಕೇಳುವುದಿಲ್ಲ ಮತ್ತು ನಾವು ಯೆಹೋವ ದೇವರಿಂದ ದೂರವಾಗುತ್ತೇವೆ.

6. (ಎ) ನಂಬಿಕೆಯಿರುವುದು ಯಾಕೆ ಅಷ್ಟು ಪ್ರಾಮುಖ್ಯ? (ಬಿ) ನಂಬಿಕೆಯಿದೆ ಅಂತ ತೋರಿಸುವುದು ಹೇಗೆ?

6 ಯೆಹೋವನು ನಮ್ಮ ಪ್ರಾರ್ಥನೆಗಳನ್ನು ಕೇಳಬೇಕಾದರೆ ನಮಗೆ ಆತನಲ್ಲಿ ನಂಬಿಕೆ ಇರಬೇಕು. (ಮಾರ್ಕ 11:24) ಈ ವಿಷಯವನ್ನು ಅಪೊಸ್ತಲ ಪೌಲನು ಹೀಗೆ ವಿವರಿಸಿದನು: “ನಂಬಿಕೆಯಿಲ್ಲದೆ ಆತನನ್ನು ಮೆಚ್ಚಿಸುವುದು ಅಸಾಧ್ಯ; ಏಕೆಂದರೆ ದೇವರನ್ನು ಸಮೀಪಿಸುವವನು ಆತನು ಇದ್ದಾನೆ ಎಂದೂ ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲವನ್ನು ಕೊಡುವವನಾಗುತ್ತಾನೆ ಎಂದೂ ನಂಬಬೇಕು.” (ಇಬ್ರಿಯ 11:6) ನಮಗೆ ನಂಬಿಕೆಯಿದೆ ಅಂತ ಹೇಳಿದರೆ ಮಾತ್ರ ಸಾಕಾಗದು. ಪ್ರತಿದಿನ ಯೆಹೋವನ ಮಾತಿನ ಪ್ರಕಾರ ನಡೆಯುತ್ತಾ ನಮ್ಮ ನಂಬಿಕೆಯನ್ನು ತೋರಿಸಬೇಕು.ಯಾಕೋಬ 2:26 ಓದಿ.

7. (ಎ) ನಾವು ಯೆಹೋವನಿಗೆ ದೀನತೆಯಿಂದ, ಗೌರವದಿಂದ ಯಾಕೆ ಪ್ರಾರ್ಥಿಸಬೇಕು? (ಬಿ) ನಾವು ಹೃದಯದಿಂದ ಪ್ರಾರ್ಥಿಸುತ್ತಿದ್ದೇವೆಂದು ಹೇಗೆ ತೋರಿಸುತ್ತೇವೆ?

7 ನಾವು ಯೆಹೋವನಿಗೆ ದೀನತೆಯಿಂದ, ಗೌರವದಿಂದ ಪ್ರಾರ್ಥಿಸಬೇಕು. ಯಾಕೆ? ಯೋಚಿಸಿ, ನಿಮಗೆ ರಾಷ್ಟ್ರಪತಿಯ ಹತ್ತಿರ ಮಾತಾಡುವ ಅವಕಾಶ ಸಿಕ್ಕಿದರೆ ಹೇಗೆ ಮಾತಾಡುತ್ತೀರಿ? ಖಂಡಿತ ತುಂಬ ಗೌರವಕೊಟ್ಟು ಮಾತಾಡುತ್ತೀರಿ. ಹಾಗೆಂದ ಮೇಲೆ, ಸರ್ವಶಕ್ತನಾದ ಯೆಹೋವ ದೇವರ ಹತ್ತಿರ ಇನ್ನೂ ಹೆಚ್ಚು ದೀನತೆಯಿಂದ, ಗೌರವದಿಂದ ಮಾತಾಡಬೇಕಲ್ವಾ? (ಆದಿಕಾಂಡ 17:1; ಕೀರ್ತನೆ 138:6) ಅಷ್ಟೇ ಅಲ್ಲ, ನಾವು ಪ್ರಾರ್ಥಿಸುವಾಗ ಹೇಳಿದ ಪದಗಳನ್ನೇ ಮತ್ತೆ ಮತ್ತೆ ಹೇಳಬಾರದು. ನಮ್ಮ ಪ್ರಾರ್ಥನೆ ಯಥಾರ್ಥವಾಗಿರಬೇಕು ಮತ್ತು ಹೃದಯದಿಂದ ಬರಬೇಕು.—ಮತ್ತಾಯ 6:7, 8.

8. ನಾವು ಪ್ರಾರ್ಥಿಸುವುದರ ಜೊತೆಗೆ ಏನು ಮಾಡಬೇಕು?

8 ನಾವು ಯಾವುದಾದರೂ ಒಂದು ವಿಷಯಕ್ಕಾಗಿ ಪ್ರಾರ್ಥಿಸುವುದರ ಜೊತೆಗೆ ಅದಕ್ಕಾಗಿ ನಮ್ಮ ಕೈಲಾದ ಪ್ರಯತ್ನವನ್ನು ಸಹ ಮಾಡಬೇಕು. ಉದಾಹರಣೆಗೆ, ನಮ್ಮ ಹೊಟ್ಟೆಬಟ್ಟೆಗೆ ಮತ್ತು ಜೀವನಕ್ಕೆ ಬೇಕಾದದ್ದನ್ನು ಕೊಡುವಂತೆ ನಾವು ಯೆಹೋವನ ಹತ್ತಿರ ಬೇಡುತ್ತೇವೆ. ಹಾಗಂತ ನಾವು ಸೋಮಾರಿಗಳಾಗಿದ್ದು ಕೆಲಸ ಮಾಡದೆ ದೇವರೇ ಕೊಡಲಿ ಅಂತ ಕುಳಿತುಬಿಟ್ಟರೆ ದೇವರು ನಮಗೆ ಬೇಕಾದದ್ದನ್ನೆಲ್ಲ ಕೊಡುತ್ತಾನಾ? ಖಂಡಿತ ಇಲ್ಲ. ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ನಾವು ಶ್ರಮಪಟ್ಟು ದುಡಿಯಲೇಬೇಕು. ನಮ್ಮಿಂದ ಮಾಡಲು ಸಾಧ್ಯವಿರುವ ಯಾವುದೇ ಕೆಲಸವನ್ನು ನಾವು ಮಾಡಬೇಕು. (ಮತ್ತಾಯ 6:11; 2 ಥೆಸಲೊನೀಕ 3:10) ಇನ್ನೊಂದು ಉದಾಹರಣೆ ನೋಡಿ. ಯಾವುದಾದರೂ ಒಂದು ಕೆಟ್ಟ ವಿಷಯವನ್ನು ಮಾಡದಂತೆ ನಾವು ಸಹಾಯಕ್ಕಾಗಿ ಯೆಹೋವ ದೇವರಲ್ಲಿ ಬೇಡಿದ್ದೇವೆ ಅಂದುಕೊಳ್ಳಿ. ಅಷ್ಟು ಮಾತ್ರ ಸಾಕಾ? ಇಲ್ಲ. ಆ ವಿಷಯಕ್ಕೆ ನಡೆಸುವ ಎಲ್ಲ ಸನ್ನಿವೇಶಗಳಿಂದ ನಾವು ದೂರವಿರಬೇಕು. (ಕೊಲೊಸ್ಸೆ 3:5) ಈಗ ನಾವು ಪ್ರಾರ್ಥನೆಯ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಬರುವ ಪ್ರಶ್ನೆಗಳ ಬಗ್ಗೆ ನೋಡೋಣ.

ಪ್ರಾರ್ಥನೆಯ ಬಗ್ಗೆ ಬರುವ ಸಾಮಾನ್ಯ ಪ್ರಶ್ನೆಗಳು

9. (ಎ) ನಾವು ಯಾರಿಗೆ ಪ್ರಾರ್ಥಿಸಬೇಕು? (ಬಿ) ಯೋಹಾನ 14:6⁠ರಿಂದ ನಾವು ಪ್ರಾರ್ಥನೆಯ ಬಗ್ಗೆ ಏನು ಕಲಿಯುತ್ತೇವೆ?

9 ನಾವು ಯಾರಿಗೆ ಪ್ರಾರ್ಥಿಸಬೇಕು? ‘ಸ್ವರ್ಗದಲ್ಲಿರುವ ನಮ್ಮ ತಂದೆಗೆ ಪ್ರಾರ್ಥಿಸಿ’ ಎಂದು ಯೇಸು ತನ್ನ ಶಿಷ್ಯರಿಗೆ ಕಲಿಸಿದನು. (ಮತ್ತಾಯ 6:9) “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ” ಎಂದು ಸಹ ಆತನು ಹೇಳಿದನು. (ಯೋಹಾನ 14:6) ಇದರಿಂದ ಏನು ಗೊತ್ತಾಗುತ್ತದೆ? ನಾವು ಯೇಸುವಿನ ಹೆಸರಿನಲ್ಲಿ ಯೆಹೋವ ದೇವರಿಗೆ ಮಾತ್ರ ಪ್ರಾರ್ಥಿಸಬೇಕು. ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುವುದರ ಅರ್ಥವೇನು? ಯೆಹೋವನು ಆತನಿಗೆ ಕೊಟ್ಟಿರುವ ವಿಶೇಷ ನೇಮಕವನ್ನು ನಾವು ಗೌರವಿಸುವುದೇ ಆಗಿದೆ. ನಾವು ಈಗಾಗಲೇ ಕಲಿತಂತೆ ಯೆಹೋವನು ನಮ್ಮನ್ನು ಪಾಪ ಮತ್ತು ಮರಣದಿಂದ ಬಿಡಿಸಲು ಯೇಸುವನ್ನು ಭೂಮಿಗೆ ಕಳುಹಿಸಿದನು. (ಯೋಹಾನ 3:16; ರೋಮನ್ನರಿಗೆ 5:12) ಅಷ್ಟೇ ಅಲ್ಲದೆ, ಯೇಸುವನ್ನು ಯೆಹೋವ ದೇವರು ಮಹಾ ಯಾಜಕನಾಗಿ ಮತ್ತು ನ್ಯಾಯಾಧಿಪತಿಯಾಗಿ ನೇಮಿಸಿದ್ದಾನೆ.—ಯೋಹಾನ 5:22; ಇಬ್ರಿಯ 6:20.

ನೀವು ಯಾವಾಗ ಬೇಕಾದರೂ ಪ್ರಾರ್ಥನೆ ಮಾಡಬಹುದು

10. ಮೊಣಕಾಲೂರಿ ಅಥವಾ ಕೈಮುಗಿದು ಪ್ರಾರ್ಥಿಸಿದರೆ ಮಾತ್ರ ಯೆಹೋವನು ಕೇಳುತ್ತಾನಾ? ವಿವರಿಸಿ.

10 ನಾವು ಮೊಣಕಾಲೂರಿ ಅಥವಾ ಕೈಮುಗಿದು ಪ್ರಾರ್ಥಿಸಿದರೆ ಮಾತ್ರ ಯೆಹೋವನು ಕೇಳುತ್ತಾನಾ? ಇಲ್ಲ. ನಾವು ಮೊಣಕಾಲೂರಿನೇ, ಕುಳಿತೇ, ನಿಂತೇ ಅಥವಾ ಕೈಮುಗಿದೇ ಪ್ರಾರ್ಥಿಸಬೇಕು ಅಂತ ಯೆಹೋವನು ಹೇಳಿಲ್ಲ. ಆದರೆ ಗೌರವ ತೋರಿಸುವಂಥ ರೀತಿಯಲ್ಲಿ ನಾವಿರಬೇಕೆಂದು ಬೈಬಲ್‌ ಹೇಳುತ್ತದೆ. (1 ಪೂರ್ವಕಾಲವೃತ್ತಾಂತ 17:16; ನೆಹೆಮೀಯ 8:6; ದಾನಿಯೇಲ 6:10; ಮಾರ್ಕ 11:25) ನಾವು ಯಾವ ಮನೋಭಾವದಿಂದ ಪ್ರಾರ್ಥಿಸುತ್ತೇವೆ ಅನ್ನುವುದೇ ಯೆಹೋವನಿಗೆ ಹೆಚ್ಚು ಮುಖ್ಯ. ಆದ್ದರಿಂದ ನಾವು ಎಲ್ಲಿಯೇ ಇರಲಿ, ಯಾವ ಸಮಯದಲ್ಲೇ ಆಗಲಿ, ಹಗಲಾಗಲಿ, ರಾತ್ರಿಯಾಗಲಿ, ಮನಸ್ಸಿನಲ್ಲೇ ಆಗಲಿ, ಜೋರಾಗಿಯೇ ಆಗಲಿ ಪ್ರಾರ್ಥನೆ ಮಾಡಬಹುದು. ನಾವು ಮೌನವಾಗಿ ಮಾಡುವ ಪ್ರಾರ್ಥನೆ ಯಾರಿಗೂ ಕೇಳಿಸದೆ ಇರಬಹುದು, ಆದರೆ ಯೆಹೋವನಿಗೆ ಖಂಡಿತ ಕೇಳಿಸುತ್ತದೆ.—ನೆಹೆಮೀಯ 2:1-6.

11. ಯೆಹೋವನ ಬಳಿ ನಾವು ಯಾವೆಲ್ಲ ವಿಷಯಗಳನ್ನು ಮಾತಾಡಬಹುದು?

11 ಯಾವೆಲ್ಲ ವಿಷಯಗಳಿಗಾಗಿ ನಾವು ಪ್ರಾರ್ಥಿಸಬಹುದು? ಯೆಹೋವ ದೇವರು ಒಪ್ಪುವ ಯಾವುದೇ ವಿಷಯಕ್ಕಾಗಿ ನಾವು ಪ್ರಾರ್ಥಿಸಬಹುದು. “ನಾವು ಆತನ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆ” ಎಂದು ಬೈಬಲ್‌ ಹೇಳುತ್ತದೆ. (1 ಯೋಹಾನ 5:14) ನಮ್ಮ ಸ್ವಂತ ವಿಷಯಗಳಿಗಾಗಿ ನಾವು ಪ್ರಾರ್ಥಿಸಬಹುದಾ? ಖಂಡಿತ ಪ್ರಾರ್ಥಿಸಬಹುದು. ಯೆಹೋವನಿಗೆ ನಾವು ಮಾಡುವ ಪ್ರಾರ್ಥನೆ ಆಪ್ತ ಸ್ನೇಹಿತನೊಟ್ಟಿಗೆ ಮಾತಾಡಿದಂತೆ ಇರಬೇಕು. ನಮ್ಮ ಯೋಚನೆಗಳು, ಹೃದಯದಲ್ಲಿರುವ ಭಾವನೆಗಳು ಎಲ್ಲವನ್ನೂ ನಾವು ಆತನಿಗೆ ಹೇಳಬಹುದು. (ಕೀರ್ತನೆ 62:8) ಸರಿಯಾದದ್ದನ್ನು ಮಾಡಲು ನಮಗೆ ಪವಿತ್ರಾತ್ಮ ಶಕ್ತಿಯ ಸಹಾಯ ಕೊಡುವಂತೆ ನಾವು ಆತನಲ್ಲಿ ಬೇಡಿಕೊಳ್ಳಬಹುದು. (ಲೂಕ 11:13) ಸರಿಯಾದ ನಿರ್ಣಯಗಳನ್ನು ಮಾಡಲು ವಿವೇಕ ಕೊಡುವಂತೆ ಮತ್ತು ಕಷ್ಟಗಳನ್ನು ಎದುರಿಸಲು ಬೇಕಾದ ಬಲ ಕೊಡುವಂತೆ ನಾವು ಯೆಹೋವನಲ್ಲಿ ಬೇಡಿಕೊಳ್ಳಬಹುದು. (ಯಾಕೋಬ 1:5) ನಮ್ಮ ಪಾಪಗಳನ್ನು ಕ್ಷಮಿಸುವಂತೆ ಆತನಲ್ಲಿ ಕೇಳಿಕೊಳ್ಳಬೇಕು. (ಎಫೆಸ 1:3, 7) ನಮ್ಮ ಕುಟುಂಬದವರಿಗಾಗಿ, ಸಭೆಯಲ್ಲಿರುವ ಸಹೋದರ-ಸಹೋದರಿಯರಿಗಾಗಿ ಮತ್ತು ಇತರರಿಗಾಗಿ ಸಹ ನಾವು ಪ್ರಾರ್ಥಿಸಬೇಕು.—ಅಪೊಸ್ತಲರ ಕಾರ್ಯಗಳು 12:5; ಕೊಲೊಸ್ಸೆ 4:12.

12. ನಮ್ಮ ಪ್ರಾರ್ಥನೆಯಲ್ಲಿ ನಾವು ಯಾವುದಕ್ಕೆ ಹೆಚ್ಚು ಪ್ರಮುಖತೆ ಕೊಡಬೇಕು?

12 ನಮ್ಮ ಪ್ರಾರ್ಥನೆಯಲ್ಲಿ ನಾವು ಯಾವುದಕ್ಕೆ ಹೆಚ್ಚು ಪ್ರಮುಖತೆ ಕೊಡಬೇಕು? ಯೆಹೋವ ದೇವರಿಗೆ ಮತ್ತು ಆತನ ಇಷ್ಟಕ್ಕೆ ಹೆಚ್ಚು ಪ್ರಮುಖತೆ ಕೊಡಬೇಕು. ದೇವರು ನಮಗೋಸ್ಕರ ಮಾಡಿರುವ ಎಲ್ಲ ವಿಷಯಗಳಿಗಾಗಿ ನಾವು ಆತನಿಗೆ ನಮ್ಮ ಹೃದಯದಾಳದಿಂದ ಧನ್ಯವಾದಗಳನ್ನು ಹೇಳಬೇಕು. (1 ಪೂರ್ವಕಾಲವೃತ್ತಾಂತ 29:10-13) ಯೇಸು ತನ್ನ ಶಿಷ್ಯರಿಗೆ ಕಲಿಸಿಕೊಟ್ಟ ಪ್ರಾರ್ಥನೆಯಿಂದ ನಾವು ಈ ವಿಷಯವನ್ನು ಕಲಿಯಬಹುದು. (ಮತ್ತಾಯ 6:9-13 ಓದಿ.) ಆತನು ಮೊದಲು, ದೇವರ ನಾಮ ಪವಿತ್ರವಾಗಬೇಕೆಂದು ಪ್ರಾರ್ಥಿಸಲು ಹೇಳಿದನು. ನಂತರ ದೇವರ ರಾಜ್ಯ ಬರಬೇಕೆಂದು ಮತ್ತು ಇಡೀ ಭೂಮಿಯಲ್ಲಿ ಆತನ ಚಿತ್ತ ನೆರವೇರಬೇಕೆಂದು ಬೇಡಿಕೊಳ್ಳಲು ಹೇಳಿದನು. ತುಂಬ ಪ್ರಾಮುಖ್ಯವಾಗಿರುವ ಈ ವಿಷಯಗಳಿಗಾಗಿ ಪ್ರಾರ್ಥಿಸಿದ ನಂತರವೇ ನಮ್ಮ ಅಗತ್ಯಗಳ ಕುರಿತು, ಸ್ವಂತ ವಿಷಯಗಳ ಕುರಿತು ಪ್ರಾರ್ಥಿಸುವಂತೆ ಯೇಸು ಕಲಿಸಿದನು. ನಾವು ಪ್ರಾರ್ಥಿಸುವಾಗ ಯೆಹೋವನಿಗೆ ಮತ್ತು ಆತನ ಇಷ್ಟಕ್ಕೆ ಮೊದಲ ಸ್ಥಾನ ಕೊಡುವ ಮೂಲಕ ಬೇರೆ ಎಲ್ಲದ್ದಕ್ಕಿಂತ ಅವು ನಮಗೆ ತುಂಬ ಪ್ರಾಮುಖ್ಯ ಎಂದು ತೋರಿಸಿಕೊಡುತ್ತೇವೆ.

13. ನಮ್ಮ ಪ್ರಾರ್ಥನೆಗಳು ಎಷ್ಟು ಉದ್ದ ಇರಬೇಕು?

13 ನಮ್ಮ ಪ್ರಾರ್ಥನೆಗಳು ಎಷ್ಟು ಉದ್ದ ಇರಬೇಕು? ಅದರ ಬಗ್ಗೆ ಬೈಬಲಿನಲ್ಲಿ ಹೇಳಲಾಗಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ನಮ್ಮ ಪ್ರಾರ್ಥನೆಗಳಿರಬೇಕು. ಅವು ಚಿಕ್ಕದಾಗಿಯೂ ಇರಬಹುದು, ಉದ್ದವಾಗಿಯೂ ಇರಬಹುದು. ಉದಾಹರಣೆಗೆ, ಊಟಕ್ಕಿಂತ ಮುಂಚೆ ನಾವು ಚಿಕ್ಕ ಪ್ರಾರ್ಥನೆ ಮಾಡಬಹುದು. ಯೆಹೋವ ದೇವರಿಗೆ ಕೃತಜ್ಞತೆ ಹೇಳುವಾಗ, ನಮ್ಮ ಚಿಂತೆಗಳನ್ನು ಆತನಲ್ಲಿ ತೋಡಿಕೊಳ್ಳುವಾಗ ನಾವು ಉದ್ದವಾದ ಪ್ರಾರ್ಥನೆ ಮಾಡಬಹುದು. (1 ಸಮುವೇಲ 1:12, 15) ಯೇಸುವಿನ ಕಾಲದಲ್ಲಿದ್ದ ಕೆಲವು ಜನರಂತೆ ನಾವು ಬೇರೆಯವರನ್ನು ಮೆಚ್ಚಿಸಲು ಉದ್ದುದ್ದ ಪ್ರಾರ್ಥನೆಗಳನ್ನು ಮಾಡಬಾರದು. (ಲೂಕ 20:46, 47) ಅಂಥ ತೋರಿಕೆಯ ಉದ್ದುದ್ದ ಪ್ರಾರ್ಥನೆಗಳಿಂದ ಯೆಹೋವನನ್ನು ಮೆಚ್ಚಿಸಲು ಸಾಧ್ಯವಿಲ್ಲ. ಹೃದಯದಿಂದ ಮಾಡುವ ಪ್ರಾರ್ಥನೆಗಳೇ ಆತನಿಗೆ ಇಷ್ಟ.

14. (ಎ) ನಾವು ಎಷ್ಟು ಬಾರಿ ಪ್ರಾರ್ಥಿಸಬೇಕು? (ಬಿ) ಇದರಿಂದ ನಮಗೆ ಯೆಹೋವನ ಬಗ್ಗೆ ಏನು ತಿಳಿದುಬರುತ್ತದೆ?

14 ನಾವು ಎಷ್ಟು ಬಾರಿ ಪ್ರಾರ್ಥಿಸಬೇಕು? ನಾವು ಯಾವಾಗಲೂ ತನ್ನೊಂದಿಗೆ ಮಾತನಾಡುವಂತೆ ಯೆಹೋವ ದೇವರು ನಮಗೆ ಹೇಳುತ್ತಾನೆ. ಬೈಬಲಿನಲ್ಲಿ “ಪ್ರಾರ್ಥಿಸುತ್ತಾ ಇರಿ” “ಪಟ್ಟುಹಿಡಿದು ಪ್ರಾರ್ಥಿಸಿರಿ” “ಎಡೆಬಿಡದೆ ಪ್ರಾರ್ಥನೆಮಾಡಿರಿ” ಎಂದು ಹೇಳಲಾಗಿದೆ. (ಮತ್ತಾಯ 26:41; ರೋಮನ್ನರಿಗೆ 12:12; 1 ಥೆಸಲೊನೀಕ 5:17) ನಮ್ಮ ಪ್ರಾರ್ಥನೆಗಳನ್ನು ಕೇಳಲು ಯೆಹೋವನು ಯಾವಾಗಲೂ ಸಿದ್ಧನಿರುತ್ತಾನೆ. ಆತನು ತೋರಿಸುವ ಪ್ರೀತಿಗಾಗಿ ಮತ್ತು ಉದಾರತೆಗಾಗಿ ನಾವು ಪ್ರತಿದಿನವೂ ಆತನಿಗೆ ಧನ್ಯವಾದ ಹೇಳಬಹುದು. ಆತನು ನಮಗೆ ಮಾರ್ಗದರ್ಶನ, ಬಲ ಮತ್ತು ಸಾಂತ್ವನ ಕೊಡುವಂತೆ ಪ್ರಾರ್ಥಿಸಬಹುದು. ಪ್ರಾರ್ಥನೆ ಮಾಡಲು ಆತನು ಕೊಟ್ಟಿರುವ ಅವಕಾಶವನ್ನು ನಾವು ನಿಜಕ್ಕೂ ಒಂದು ವರವಾಗಿ ನೋಡುತ್ತಿರುವಲ್ಲಿ ಪ್ರಾರ್ಥಿಸಲು ನಮಗೆ ಸಿಗುವ ಪ್ರತಿಯೊಂದು ಸಂದರ್ಭವನ್ನು ಬಳಸಿಕೊಳ್ಳುತ್ತೇವೆ.

15. ಪ್ರಾರ್ಥನೆಯ ಕೊನೆಯಲ್ಲಿ ನಾವು ಯಾಕೆ “ಆಮೆನ್‌” ಎಂದು ಹೇಳಬೇಕು?

15 ಪ್ರಾರ್ಥನೆಯ ಕೊನೆಯಲ್ಲಿ ನಾವು ಯಾಕೆ “ಆಮೆನ್‌” ಎಂದು ಹೇಳಬೇಕು? “ಆಮೆನ್‌” ಅನ್ನುವುದರ ಅರ್ಥ “ನಿಶ್ಚಯವಾಗಿಯೂ” ಅಥವಾ “ಹಾಗೆಯೇ ಆಗಲಿ” ಎಂದಾಗಿದೆ. “ಆಮೆನ್‌” ಎಂದು ಹೇಳುವ ಮೂಲಕ ನಾವು ನಮ್ಮ ಪ್ರಾರ್ಥನೆಯಲ್ಲಿ ಏನೆಲ್ಲ ಹೇಳಿದ್ದೇವೋ ಅದೆಲ್ಲ ನಿಜವೆಂದು ಒಪ್ಪಿಕೊಳ್ಳುತ್ತೇವೆ ಅಂದರೆ ಯಥಾರ್ಥವಾಗಿ ಪ್ರಾರ್ಥಿಸಿದ್ದೇವೆ ಎಂದು ತೋರಿಸಿಕೊಡುತ್ತೇವೆ. (ಕೀರ್ತನೆ 41:13) ಸಾರ್ವಜನಿಕ ಪ್ರಾರ್ಥನೆಯ ಕೊನೆಯಲ್ಲಿ ಸಹ “ಆಮೆನ್‌” ಎಂದು ಮೆಲ್ಲನೆ ಅಥವಾ ಜೋರಾಗಿ ಹೇಳುವುದು ಒಳ್ಳೆಯದೆಂದು ಬೈಬಲಿನಲ್ಲಿ ಹೇಳಲಾಗಿದೆ. ಅದನ್ನು ಹೇಳುವ ಮೂಲಕ ಪ್ರಾರ್ಥನೆಯಲ್ಲಿ ಹೇಳಿದ ವಿಷಯಗಳನ್ನೆಲ್ಲ ನಾವು ಒಪ್ಪುತ್ತೇವೆಂದು ತೋರಿಸುತ್ತೇವೆ.—1 ಪೂರ್ವಕಾಲವೃತ್ತಾಂತ 16:36; 1 ಕೊರಿಂಥ 14:16.

ನಮ್ಮ ಪ್ರಾರ್ಥನೆಗಳಿಗೆ ದೇವರು ಹೇಗೆ ಉತ್ತರ ಕೊಡುತ್ತಾನೆ?

16. ಯೆಹೋವ ದೇವರು ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಾನಾ? ವಿವರಿಸಿ.

16 ಯೆಹೋವ ದೇವರು ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಾನಾ? ಖಂಡಿತ ಕೊಡುತ್ತಾನೆ. ಬೈಬಲಿನಲ್ಲಿ ಆತನನ್ನು “ಪ್ರಾರ್ಥನೆಯನ್ನು ಕೇಳುವವನೇ” ಎಂದು ಕರೆಯಲಾಗಿದೆ. (ಕೀರ್ತನೆ 65:2) ಯೆಹೋವನು ಲಕ್ಷಾಂತರ ಜನರ ಯಥಾರ್ಥ ಪ್ರಾರ್ಥನೆಗಳನ್ನು ಕೇಳುತ್ತಾನೆ ಮತ್ತು ಉತ್ತರಿಸುತ್ತಾನೆ. ಆತನು ಯಾವೆಲ್ಲ ವಿಧಗಳಲ್ಲಿ ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೆ ಎಂದು ನೋಡೋಣ.

17. ನಮ್ಮ ಪ್ರಾರ್ಥನೆಗಳಿಗೆ ಉತ್ತರಿಸಲು ಯೆಹೋವನು ದೇವದೂತರನ್ನು ಮತ್ತು ಭೂಮಿಯಲ್ಲಿರುವ ತನ್ನ ಸೇವಕರನ್ನು ಹೇಗೆ ಬಳಸುತ್ತಾನೆ?

17 ನಮ್ಮ ಪ್ರಾರ್ಥನೆಗಳನ್ನು ಉತ್ತರಿಸಲು ಯೆಹೋವನು ದೇವದೂತರನ್ನು ಮತ್ತು ಭೂಮಿಯಲ್ಲಿರುವ ತನ್ನ ಸೇವಕರನ್ನು ಬಳಸುತ್ತಾನೆ. (ಇಬ್ರಿಯ 1:13, 14) ತಮಗೆ ಬೈಬಲನ್ನು ಅರ್ಥಮಾಡಿಕೊಳ್ಳಲು ಅಥವಾ ದೇವರ ಬಗ್ಗೆ ತಿಳಿದುಕೊಳ್ಳಲು ಸಹಾಯಮಾಡುವಂತೆ ಪ್ರಾರ್ಥಿಸಿದ ಜನರನ್ನು ಯೆಹೋವನ ಸಾಕ್ಷಿಗಳು ಸ್ವಲ್ಪವೇ ಹೊತ್ತಿನಲ್ಲಿ ಭೇಟಿ ಮಾಡಿದ್ದಾರೆ. ಇಂಥ ಅನೇಕ ಉದಾಹರಣೆಗಳಿವೆ. ಕಾರಣ, ಇಡೀ ಭೂಮಿಯಲ್ಲಿ “ಸುವಾರ್ತೆ” ಸಾರಲು ದೇವದೂತರು ಯೆಹೋವನ ಜನರಿಗೆ ಸಹಾಯಮಾಡುತ್ತಿದ್ದಾರೆ ಅಂತ ಬೈಬಲ್‌ ಹೇಳುತ್ತದೆ. (ಪ್ರಕಟನೆ 14:6 ಓದಿ.) ಅಷ್ಟೇ ಅಲ್ಲದೆ, ನಮ್ಮಲ್ಲಿ ತುಂಬ ಜನರು ಒಂದು ಸಮಸ್ಯೆಯ ಕುರಿತು ಅಥವಾ ಅಗತ್ಯದ ಕುರಿತು ಯೆಹೋವನಿಗೆ ಪ್ರಾರ್ಥಿಸಿದಾಗ ಕ್ರೈಸ್ತ ಸಹೋದರ-ಸಹೋದರಿಯರಿಂದ ಸಹಾಯ ಸಿಕ್ಕಿದೆ.—ಜ್ಞಾನೋಕ್ತಿ 12:25; ಯಾಕೋಬ 2:16.

ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಇತರ ಸಹೋದರ-ಸಹೋದರಿಯರ ಮೂಲಕ ಸಹ ಉತ್ತರ ಕೊಡುತ್ತಾನೆ

18. ಪವಿತ್ರಾತ್ಮದ ಮತ್ತು ಬೈಬಲಿನ ಮೂಲಕ ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಹೇಗೆ ಉತ್ತರಿಸುತ್ತಾನೆ?

18 ಯೆಹೋವನು ತನ್ನ ಪವಿತ್ರಾತ್ಮದ ಮೂಲಕವೂ ನಮ್ಮ ಪ್ರಾರ್ಥನೆಗಳಿಗೆ ಉತ್ತರಿಸುತ್ತಾನೆ. ಒಂದು ಸಮಸ್ಯೆಯನ್ನು ನಿಭಾಯಿಸಲು ಸಹಾಯಕ್ಕಾಗಿ ನಾವು ಪ್ರಾರ್ಥಿಸುವಾಗ ಆತನು ತನ್ನ ಪವಿತ್ರಾತ್ಮದ ಮೂಲಕ ನಮ್ಮನ್ನು ಮಾರ್ಗದರ್ಶಿಸುತ್ತಾನೆ ಮತ್ತು ಬಲ ಕೊಡುತ್ತಾನೆ. (2 ಕೊರಿಂಥ 4:7) ಯೆಹೋವನು ಬೈಬಲಿನ ಮೂಲಕ ಸಹ ನಮ್ಮ ಪ್ರಾರ್ಥನೆಗಳಿಗೆ ಉತ್ತರಿಸುತ್ತಾನೆ. ನಾವು ಬೈಬಲನ್ನು ಓದುವಾಗ ಸರಿಯಾದ ನಿರ್ಣಯಗಳನ್ನು ಮಾಡಲು ಸಹಾಯಮಾಡುವಂಥ ವಚನಗಳು ನಮಗೆ ಸಿಗಬಹುದು. ಸಭೆಯಲ್ಲಿ ಯಾರಾದರೂ ಉತ್ತರವನ್ನು ಕೊಡುವಾಗಲೂ ಅಥವಾ ಒಬ್ಬ ಹಿರಿಯನು ಬೈಬಲಿನಿಂದ ಯಾವುದಾದರೂ ವಿಷಯವನ್ನು ಹಂಚಿಕೊಳ್ಳುವಾಗಲೂ ನಮ್ಮ ಪ್ರಾರ್ಥನೆಗೆ ಉತ್ತರ ಸಿಗಬಹುದು.—ಗಲಾತ್ಯ 6:1.

19. ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಿಲ್ಲವೆಂದು ಕೆಲವೊಂದು ಸಾರಿ ನಮಗೆ ಯಾಕೆ ಅನಿಸಬಹುದು?

19 ‘ಯೆಹೋವ ದೇವರು ಯಾಕೆ ನನ್ನ ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಿಲ್ಲ’ ಅಂತ ಕೆಲವೊಂದು ಸಾರಿ ನಿಮಗೆ ಅನಿಸಬಹುದು. ನೆನಪಿಡಿ, ನಮ್ಮ ಪ್ರಾರ್ಥನೆಗಳಿಗೆ ಯಾವಾಗ, ಹೇಗೆ ಉತ್ತರ ಕೊಡಬೇಕೆಂದು ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು. ನಮಗೆ ಏನು ಬೇಕೆಂದು ಸಹ ಆತನಿಗೆ ತಿಳಿದಿದೆ. ಕೆಲವೊಮ್ಮೆ ನಾವು ಒಂದು ವಿಷಯದ ಬಗ್ಗೆ ಪ್ರಾರ್ಥಿಸುತ್ತಲೇ ಇರಬೇಕಾಗುತ್ತದೆ. ಯಾಕೆಂದರೆ ಆಗಲೇ ಆ ವಿಷಯಕ್ಕಾಗಿ ನಾವೆಷ್ಟು ಹಾತೊರೆಯುತ್ತಿದ್ದೇವೆ ಮತ್ತು ಯೆಹೋವನು ನಮಗೆ ಉತ್ತರ ಕೊಡುತ್ತಾನೆಂಬ ನಂಬಿಕೆ ನಮಗೆ ಎಷ್ಟಿದೆ ಎಂದು ತೋರಿಸಿಕೊಡುತ್ತೇವೆ. (ಲೂಕ 11:5-10) ಒಂದೊಂದು ಸಲ ನಾವು ಬಯಸುವ ರೀತಿಯಲ್ಲಿ ಯೆಹೋವನು ಉತ್ತರಕೊಡದೆ ಇರಬಹುದು. ಉದಾಹರಣೆಗೆ, ಒಂದು ಕಷ್ಟದ ಸನ್ನಿವೇಶದಿಂದ ಹೊರಬರಲು ಸಹಾಯಕ್ಕಾಗಿ ನಾವು ಪ್ರಾರ್ಥಿಸುತ್ತಿರಬಹುದು. ಆದರೆ ಯೆಹೋವನು ಆ ಕಷ್ಟವನ್ನು ತೆಗೆದುಹಾಕಲಿಕ್ಕಿಲ್ಲ. ಬದಲಿಗೆ, ಅದನ್ನು ತಾಳಿಕೊಳ್ಳಲು ನಮಗೆ ಬಲ ಕೊಡಬಹುದು.ಫಿಲಿಪ್ಪಿ 4:13 ಓದಿ.

20. ನಾವು ಯೆಹೋವ ದೇವರಿಗೆ ಹೆಚ್ಚೆಚ್ಚು ಪ್ರಾರ್ಥಿಸಬೇಕು ಯಾಕೆ?

20 ತನ್ನೊಂದಿಗೆ ಮಾತಾಡಲು ಯೆಹೋವನು ನಮಗೆ ಕೊಟ್ಟಿರುವ ಈ ಸದವಕಾಶ ನಿಜಕ್ಕೂ ಒಂದು ವರವೇ! ನಾವು ಆತನಿಗೆ ಪ್ರಾರ್ಥಿಸುವಾಗ ಆತನು ಖಂಡಿತವಾಗಿಯೂ ಕೇಳುತ್ತಾನೆ. (ಕೀರ್ತನೆ 145:18) ನಾವು ಮನಬಿಚ್ಚಿ ಎಷ್ಟು ಹೆಚ್ಚು ಪ್ರಾರ್ಥಿಸುತ್ತೇವೋ ಆತನಿಗೆ ಅಷ್ಟೇ ಹೆಚ್ಚು ಆಪ್ತ ಸ್ನೇಹಿತರಾಗುತ್ತೇವೆ.