ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 14

ಸುಖ ಸಂಸಾರ ಸಾಧ್ಯ!

ಸುಖ ಸಂಸಾರ ಸಾಧ್ಯ!

1, 2. ಸಂಸಾರ ಹೇಗಿರಬೇಕೆಂದು ಯೆಹೋವನು ಬಯಸುತ್ತಾನೆ?

ಮೊದಲ ಮದುವೆಯನ್ನು ಮಾಡಿದವನು ಯೆಹೋವ ದೇವರು. ಆತನು ಮೊದಲ ಸ್ತ್ರೀಯಾದ ಹವ್ವಳನ್ನು ಸೃಷ್ಟಿಮಾಡಿ ‘ಆಕೆಯನ್ನು ಆದಾಮನ ಬಳಿಗೆ ಕರೆತಂದನು’ ಎಂದು ಬೈಬಲ್‌ ಹೇಳುತ್ತದೆ. ಆಗ ಆದಾಮನು ತುಂಬಾ ಖುಷಿಯಿಂದ “ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ” ಎಂದು ಹೇಳಿದನು. (ಆದಿಕಾಂಡ 2:22, 23) ಮದುವೆಯಾದ ಗಂಡು ಹೆಣ್ಣು ಸಂತೋಷವಾಗಿ ತಮ್ಮ ಬಾಳುವೆಯನ್ನು ಸಾಗಿಸಬೇಕೆನ್ನುವುದೇ ಯೆಹೋವನ ಬಯಕೆ ಎಂದು ಇದರಿಂದ ಗೊತ್ತಾಗುತ್ತದೆ.

2 ದುಃಖದ ವಿಷಯವೇನೆಂದರೆ ಇಂದು ಅನೇಕರ ಸಂಸಾರದಲ್ಲಿ ಸುಖವಾಗಲಿ, ಸಂತೋಷವಾಗಲಿ ಇಲ್ಲ. ಆದರೆ ಸುಖವಾದ ಸಂಸಾರವನ್ನು ನಡೆಸಲು ಸಾಧ್ಯ ಎಂದು ಬೈಬಲ್‌ ಹೇಳುತ್ತದೆ. ಅದಕ್ಕಾಗಿ ಕುಟುಂಬದಲ್ಲಿರುವ ಪ್ರತಿಯೊಬ್ಬರು ಏನು ಮಾಡಬೇಕೆಂದು ಬೈಬಲ್‌ನಿಂದ ನಾವು ಕಲಿಯಬಹುದು. ಅದನ್ನು ಕಲಿತಾಗ ಕುಟುಂಬದಲ್ಲಿರುವ ಎಲ್ಲರೂ ಒಂದಾಗಿ ಸಂಸಾರವನ್ನು ಆನಂದ ಸಾಗರವನ್ನಾಗಿ ಮಾಡಬಹುದು.—ಲೂಕ 11:28.

ಗಂಡನು ಏನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ?

3, 4. (ಎ) ಗಂಡನು ತನ್ನ ಹೆಂಡತಿಯನ್ನು ಹೇಗೆ ಕಾಣಬೇಕು? (ಬಿ) ಗಂಡ ಹೆಂಡತಿ ಒಬ್ಬರನ್ನೊಬ್ಬರು ಕ್ಷಮಿಸುವುದು ಯಾಕೆ ಪ್ರಾಮುಖ್ಯ?

3 ಗಂಡನು ತನ್ನ ಹೆಂಡತಿಯನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು ಎಂದು ಬೈಬಲ್‌ ಹೇಳುತ್ತದೆ. ದಯವಿಟ್ಟು ಎಫೆಸ 5:25-29ನ್ನು ಓದಿ. ಒಬ್ಬ ಗಂಡನು ಪ್ರತಿಯೊಂದು ಸಂದರ್ಭದಲ್ಲೂ ತನ್ನ ಹೆಂಡತಿಯನ್ನು ಪ್ರೀತಿಯಿಂದ ಕಾಣಬೇಕು. ಆಕೆಯನ್ನು ಸಂರಕ್ಷಿಸಬೇಕು, ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಹೆಂಡತಿಗೆ ನೋವಾಗುವಂಥ ಯಾವ ವಿಷಯವನ್ನೂ ಮಾಡಬಾರದು.

4 ಆದರೆ ಹೆಂಡತಿ ತಪ್ಪು ಮಾಡಿದಾಗ ಗಂಡನು ಏನು ಮಾಡಬೇಕು? ‘ನಿಮ್ಮ ಹೆಂಡತಿಯನ್ನು ಪ್ರೀತಿಸುತ್ತಾ ಇರಿ; ಅವಳ ಮೇಲೆ ಕಟುವಾಗಿ ಕೋಪಿಸಿಕೊಳ್ಳಬೇಡಿ’ ಎಂದು ಬೈಬಲ್‌ ತಿಳಿಸುತ್ತದೆ. (ಕೊಲೊಸ್ಸೆ 3:19) ನೀವೂ ತಪ್ಪು ಮಾಡುತ್ತೀರಿ ಎನ್ನುವುದನ್ನು ಮರೆಯಬೇಡಿ. ನೀವು ಮಾಡುವ ತಪ್ಪನ್ನು ದೇವರು ಕ್ಷಮಿಸಬೇಕೆಂದರೆ, ನೀವು ನಿಮ್ಮ ಹೆಂಡತಿಯ ತಪ್ಪನ್ನು ಕ್ಷಮಿಸಬೇಕು. (ಮತ್ತಾಯ 6:12, 14, 15) ಯಾವಾಗ ಗಂಡ, ಹೆಂಡತಿ ಒಬ್ಬರನ್ನೊಬ್ಬರು ಕ್ಷಮಿಸುತ್ತಾರೋ ಆಗಲೇ ಅವರ ಸಂಸಾರ ಹಾಲು ಜೇನಿನಂತಿರಲು ಸಾಧ್ಯ.

5. ಗಂಡನು ಹೆಂಡತಿಯನ್ನು ಯಾಕೆ ಗೌರವಿಸಬೇಕು?

5 ಗಂಡನು ತನ್ನ ಹೆಂಡತಿಯನ್ನು ಗೌರವಿಸಬೇಕೆಂದು ಯೆಹೋವನು ಬಯಸುತ್ತಾನೆ. ಹೆಂಡತಿಯ ಭಾವನಾತ್ಮಕ ಮತ್ತು ಶಾರೀರಿಕ ಅಗತ್ಯಗಳ ಬಗ್ಗೆ ಅವನು ಗಂಭೀರವಾಗಿ ಯೋಚಿಸಿ ಅದನ್ನು ಪೂರೈಸಬೇಕು. ಇದು ಬಹಳ ಪ್ರಾಮುಖ್ಯ. ಏಕೆಂದರೆ, ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳದ ಗಂಡನ ಪ್ರಾರ್ಥನೆಗೆ ಯೆಹೋವನು ಕಿವಿಗೊಡುವುದಿಲ್ಲ. (1 ಪೇತ್ರ 3:7) ಗಂಡು ಮೇಲು, ಹೆಣ್ಣು ಕೀಳು ಎಂದು ಯೆಹೋವನು ತಾರತಮ್ಯ ಮಾಡುವುದಿಲ್ಲ. ಯಾರು ಆತನನ್ನು ಪ್ರೀತಿಸುತ್ತಾರೋ ಅವರೆಲ್ಲರನ್ನೂ ಆತನು ಪ್ರೀತಿಸುತ್ತಾನೆ.

6. ಗಂಡ ಮತ್ತು ಹೆಂಡತಿ ‘ಒಂದೇ ಶರೀರವಾಗಿರುವುದರಿಂದ’ ಅವರು ಹೇಗಿರಬೇಕು?

6 ಗಂಡು ಮತ್ತು ಹೆಣ್ಣು ಮದುವೆಯ ನಂತರ “ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ” ಎಂದು ಯೇಸು ತಿಳಿಸಿದನು. (ಮತ್ತಾಯ 19:6) ಹಾಗಾಗಿ ದಂಪತಿಗಳು ಒಬ್ಬರಿಗೊಬ್ಬರು ನಿಷ್ಠೆಯಿಂದಿರಬೇಕು ಮತ್ತು ಯಾವುದೇ ಕಾರಣಕ್ಕೂ ತಮ್ಮ ಸಂಗಾತಿಗೆ ದ್ರೋಹ ಬಗೆಯಬಾರದು. (ಜ್ಞಾನೋಕ್ತಿ 5:15-21; ಇಬ್ರಿಯ 13:4) ಗಂಡ ಮತ್ತು ಹೆಂಡತಿ ಪರಸ್ಪರರ ಲೈಂಗಿಕ ಅಗತ್ಯಗಳನ್ನು ಪೂರೈಸಬೇಕು. ಸ್ವಾರ್ಥಿಗಳಾಗಿರಬಾರದು. (1 ಕೊರಿಂಥ 7:3-5) ‘ಯಾರೂ ಎಂದೂ ತನ್ನ ಸ್ವಂತ ಶರೀರವನ್ನು ದ್ವೇಷಿಸುವುದಿಲ್ಲ, ಅವನು ಅದನ್ನು ಪೋಷಿಸಿ ಸಂರಕ್ಷಿಸುತ್ತಾನೆ’ ಎನ್ನುವುದನ್ನು ಗಂಡನು ಮರೆಯಬಾರದು. ಗಂಡ ಹೆಂಡತಿ ಒಂದೇ ಶರೀರವಾಗಿರುವುದರಿಂದ, ಗಂಡನು ತನ್ನ ಹೆಂಡತಿಯನ್ನು ಪ್ರೀತಿಸಬೇಕು ಮತ್ತು ಸಂರಕ್ಷಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಹೆಂಡತಿ ತನ್ನ ಗಂಡನಿಂದ ಬಯಸುವುದು ಅವನ ಪ್ರೀತಿ ಮತ್ತು ಕಾಳಜಿಯನ್ನೇ.—ಎಫೆಸ 5:29.

ಹೆಂಡತಿ ಏನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ?

7. ಪ್ರತಿಯೊಂದು ಕುಟುಂಬಕ್ಕೂ ಯಜಮಾನನೊಬ್ಬ ಯಾಕೆ ಇರಬೇಕು?

7 ಪ್ರತಿಯೊಂದು ಕುಟುಂಬಕ್ಕೂ ಯಜಮಾನನೊಬ್ಬ ಇರಬೇಕು. ಆಗ ಅವನ ಮಾರ್ಗದರ್ಶನದಿಂದ ಕುಟುಂಬದಲ್ಲಿರುವ ಎಲ್ಲರೂ ಒಗ್ಗಟ್ಟಾಗಿ ಒಂದೇ ಮಾರ್ಗದಲ್ಲಿ ಸಾಗಲು ಸಾಧ್ಯ. 1 ಕೊರಿಂಥ 11:3⁠ರಲ್ಲಿ “ಪ್ರತಿ ಪುರುಷನಿಗೆ ಕ್ರಿಸ್ತನು ತಲೆ; ಸ್ತ್ರೀಗೆ ಪುರುಷನು ತಲೆ; ಕ್ರಿಸ್ತನಿಗೆ ದೇವರು ತಲೆ” ಎಂದು ತಿಳಿಸಲಾಗಿದೆ.

8. ಹೆಂಡತಿ ತನ್ನ ಗಂಡನಿಗೆ ಆಳವಾದ ಗೌರವವನ್ನು ಹೇಗೆ ತೋರಿಸಬೇಕು?

8 ಗಂಡನಿಂದಲೂ ತಪ್ಪಾಗುತ್ತದೆ ನಿಜ. ಆದರೂ ಹೆಂಡತಿಯಾದವಳು ತನ್ನ ಗಂಡನು ತೆಗೆದುಕೊಳ್ಳುವ ನಿರ್ಧಾರವನ್ನು ಬೆಂಬಲಿಸಬೇಕು, ಅವನೊಂದಿಗೆ ಸಹಕರಿಸಬೇಕು. ಆಗ ಇಡೀ ಕುಟುಂಬ ಅದರಿಂದ ಪ್ರಯೋಜನ ಪಡೆಯಲು ಸಾಧ್ಯ. (1 ಪೇತ್ರ 3:1-6) “ಹೆಂಡತಿಗೆ ತನ್ನ ಗಂಡನ ಕಡೆಗೆ ಆಳವಾದ ಗೌರವವಿರಬೇಕು” ಎಂದು ಬೈಬಲ್‌ ತಿಳಿಸುತ್ತದೆ. (ಎಫೆಸ 5:33) ಒಂದುವೇಳೆ ಗಂಡನು ಬೈಬಲ್‌ ಅಧ್ಯಯನ ಮಾಡದಿದ್ದರೆ ಅಥವಾ ಯೆಹೋವನ ಆರಾಧಕನಾಗಿರದಿದ್ದರೆ ಹೆಂಡತಿ ಏನು ಮಾಡಬೇಕು? ಆಗಲೂ ಹೆಂಡತಿ ಗಂಡನಿಗೆ ಕೊಡಬೇಕಾದ ಆಳವಾದ ಗೌರವವನ್ನು ಕೊಡಲೇಬೇಕು. ಹೆಂಡತಿಯರಿಗೆ ಬೈಬಲ್‌ ಹೀಗೆ ಹೇಳುತ್ತದೆ: “ಹೆಂಡತಿಯರೇ, ನೀವು ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಹೀಗೆ ಮಾಡುವಲ್ಲಿ, ಅವರಲ್ಲಿ ಯಾರಾದರೂ ವಾಕ್ಯಕ್ಕೆ ವಿಧೇಯರಾಗದಿರುವಲ್ಲಿ ಅವರು ತಮ್ಮ ಹೆಂಡತಿಯರ ನಡತೆ ಮತ್ತು ಆಳವಾದ ಗೌರವದ ಮೂಲಕ ವಾಕ್ಯೋಪದೇಶವಿಲ್ಲದೆ ಜಯಿಸಲ್ಪಟ್ಟಾರು.” (1 ಪೇತ್ರ 3:1, 2) ಗಂಡನು ಬೈಬಲಿನಲ್ಲಿರುವ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಗೌರವಿಸಲು ಹೆಂಡತಿಯ ಒಳ್ಳೇ ನಡತೆಯೇ ಅವನಿಗೆ ಸಹಾಯ ಮಾಡುತ್ತದೆ.

9. (ಎ) ಗಂಡನು ಮಾಡುವ ಒಂದು ನಿರ್ಧಾರ ಸರಿ ಅನಿಸದಿದ್ದರೆ ಹೆಂಡತಿ ಏನು ಮಾಡಬೇಕು? (ಬಿ) ತೀತ 2:4, 5⁠ರಲ್ಲಿ ಹೆಂಡತಿಯರಿಗೆ ಯಾವ ಬುದ್ಧಿವಾದವನ್ನು ಕೊಡಲಾಗಿದೆ?

9 ಒಂದುವೇಳೆ ಗಂಡನು ಮಾಡುವ ಯಾವುದೋ ಒಂದು ನಿರ್ಧಾರ ಸರಿ ಅನಿಸದಿದ್ದರೆ ಹೆಂಡತಿ ಏನು ಮಾಡಬೇಕು? ಸಾರಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ಸಾರಳು ಒಮ್ಮೆ ಕುಟುಂಬದ ಒಂದು ವಿಷಯದಲ್ಲಿ ತನ್ನ ಅಭಿಪ್ರಾಯವನ್ನು ಹೇಳಲು ಬಯಸಿದಳು. ಅದನ್ನು ಅವಳು ತುಂಬ ಗೌರವದಿಂದ ಅಬ್ರಹಾಮನಿಗೆ ಹೇಳಿದಳು. ಅವಳ ಈ ಅಭಿಪ್ರಾಯವನ್ನು ಅಬ್ರಹಾಮನು ಒಪ್ಪಿಕೊಳ್ಳಲಿಲ್ಲ. ಆದರೆ ಯೆಹೋವನು ಅಬ್ರಹಾಮನಿಗೆ “ಸಾರಳು ಹೇಳಿದಂತೆಯೇ ಮಾಡು” ಎಂದು ಹೇಳಿದನು. ಸಾರಳಂತೆ ಹೆಂಡತಿಯರು ಸಹ ಗಂಡಂದಿರ ನಿರ್ಧಾರದ ಬಗ್ಗೆ ತಮಗಿರುವ ಅಭಿಪ್ರಾಯವನ್ನು ಗೌರವದಿಂದ ತಿಳಿಸಬೇಕು. (ಆದಿಕಾಂಡ 21:9-12) ಗಂಡನು ಮಾಡಿರುವ ನಿರ್ಧಾರ ಬೈಬಲಿಗೆ ವಿರುದ್ಧವಾಗಿ ಇಲ್ಲವಾದರೆ ಹೆಂಡತಿ ಅದನ್ನು ಬೆಂಬಲಿಸಬೇಕು. (ಅಪೊಸ್ತಲರ ಕಾರ್ಯಗಳು 5:29; ಎಫೆಸ 5:24) ಒಳ್ಳೇ ಹೆಂಡತಿ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ, ಕುಟುಂಬದ ಕಾಳಜಿ ವಹಿಸುತ್ತಾಳೆ. (ತೀತ 2:4, 5 ಓದಿ.) ಆಗ ಗಂಡ ಮತ್ತು ಮಕ್ಕಳು ಅವಳ ಪರಿಶ್ರಮವನ್ನು ನೋಡಿ ಅವಳನ್ನು ಇನ್ನೂ ಹೆಚ್ಚಾಗಿ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ.—ಜ್ಞಾನೋಕ್ತಿ 31:10, 28.

ಹೆಂಡತಿಯರಿಗೆ ಸಾರ ಹೇಗೆ ಉತ್ತಮ ಮಾದರಿಯಾಗಿದ್ದಾಳೆ?

10. ಗಂಡ ಹೆಂಡತಿ ದೂರವಾಗುವುದರ ಬಗ್ಗೆ ಮತ್ತು ವಿವಾಹ ವಿಚ್ಛೇದನದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

10 ಕೆಲವೊಮ್ಮೆ ದಂಪತಿಗಳು ಹಿಂದೆ ಮುಂದೆ ಯೋಚಿಸದೇ ಒಬ್ಬರಿಂದ ಒಬ್ಬರು ದೂರವಾಗಿ ಬಿಡುತ್ತಾರೆ ಅಥವಾ ವಿವಾಹ ವಿಚ್ಛೇದನಕ್ಕೆ ಮುಂದಾಗುತ್ತಾರೆ. ಆದರೆ “ಹೆಂಡತಿಯು ತನ್ನ ಗಂಡನನ್ನು ಬಿಟ್ಟು ಅಗಲಬಾರದು” ಮತ್ತು “ಗಂಡನು ತನ್ನ ಹೆಂಡತಿಯನ್ನು ಬಿಡಬಾರದು” ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂಥ 7:10, 11) ಇದರರ್ಥ ಗಂಡ ಮತ್ತು ಹೆಂಡತಿ ದೂರವಾಗಬಾರದು ಎಂದಾಗಿದೆ. ಕೆಲವೊಂದು ಅತಿರೇಕದ ಪರಿಸ್ಥಿತಿಗಳಲ್ಲಿ ಗಂಡ, ಹೆಂಡತಿ ದೂರವಾಗುತ್ತಾರೆ. ಆದರೆ ಇದು ತುಂಬ ಗಂಭೀರವಾದ ನಿರ್ಧಾರ. ಹಾಗಾಗಿ ಇದನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಗಂಡ ಮತ್ತು ಹೆಂಡತಿ ದೂರವಾಗಬಾರದು ಅಂದಮೇಲೆ ವಿವಾಹ ವಿಚ್ಛೇದನದ ಬಗ್ಗೆ ಏನು? ಗಂಡ ಅಥವಾ ಹೆಂಡತಿ ತಮ್ಮ ಸಂಗಾತಿಯನ್ನು ಬಿಟ್ಟು ಬೇರೆಯವರೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಂಡರೆ ಮಾತ್ರ ವಿವಾಹ ವಿಚ್ಛೇದನ ಪಡೆಯಬಹುದೆಂದು ಬೈಬಲ್‌ ತಿಳಿಸುತ್ತದೆ. ಈ ಕಾರಣವನ್ನು ಬಿಟ್ಟು ಬೇರೆ ಯಾವ ಕಾರಣಕ್ಕೂ ವಿಚ್ಛೇದನವನ್ನು ಪಡೆಯಬಾರದು.—ಮತ್ತಾಯ 19:9.

ಹೆತ್ತವರು ಏನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ?

ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೂ ಯೇಸು ಒಳ್ಳೇ ಮಾದರಿ

11. ಮಕ್ಕಳಿಗೆ ಎಲ್ಲದಕ್ಕಿಂತ ಹೆಚ್ಚಾಗಿ ಯಾವುದರ ಅಗತ್ಯವಿದೆ?

11 ಹೆತ್ತವರೇ, ನಿಮ್ಮ ಮಕ್ಕಳೊಂದಿಗೆ ಸಾಧ್ಯವಾದಷ್ಟು ಹೆಚ್ಚು ಸಮಯವನ್ನು ಕಳೆಯಿರಿ. ನಿಮ್ಮ ಮಕ್ಕಳಿಗೆ ನಿಮ್ಮ ಅಗತ್ಯವಿದೆ. ಬೇರೆ ಎಲ್ಲದಕ್ಕಿಂತ ಅವರಿಗೆ ಅಗತ್ಯವಾಗಿ ಬೇಕಾಗಿರುವುದು ನೀವು ಯೆಹೋವನ ಬಗ್ಗೆ ಅವರಿಗೆ ಕಲಿಸಿಕೊಡುವುದೇ.—ಧರ್ಮೋಪದೇಶಕಾಂಡ 6:4-9.

12. ಹೆತ್ತವರು ತಮ್ಮ ಮಕ್ಕಳನ್ನು ಸಂರಕ್ಷಿಸಲು ಏನು ಮಾಡಬೇಕು?

12 ಸೈತಾನನ ವಶದಲ್ಲಿರುವ ಈ ಪ್ರಪಂಚ ದಿನದಿಂದ ದಿನಕ್ಕೆ ಹಾಳಾಗಿ ಹೋಗುತ್ತಿದೆ. ಅದರಿಂದಾಗಿ ಕೆಲವು ಜನರು ಮಕ್ಕಳಿಗೂ ಸಹ ಹಾನಿ ಮಾಡುತ್ತಾರೆ. ಎಷ್ಟರ ಮಟ್ಟಿಗೆಂದರೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಸಹ ಮಾಡುತ್ತಾರೆ. ಇಂಥ ವಿಷಯಗಳ ಬಗ್ಗೆ ಮಕ್ಕಳೊಂದಿಗೆ ಮಾತಾಡಲು ಕೆಲವು ಹೆತ್ತವರು ಮುಜುಗರಪಡುತ್ತಾರೆ. ಆದರೆ ಹೆತ್ತವರು ಯಾವುದೇ ಹಿಂಜರಿಕೆಯಿಲ್ಲದೆ ಮಕ್ಕಳೊಂದಿಗೆ ಮಾತಾಡಬೇಕು. ಅಂಥ ವ್ಯಕ್ತಿಗಳ ಬಗ್ಗೆ ಎಚ್ಚರಿಸಬೇಕು. ಅಂಥವರಿಂದ ದೂರ ಇರುವುದು ಹೇಗೆಂದು ಕಲಿಸಿಕೊಡಬೇಕು. ಹೆತ್ತವರೇ, ನಿಮ್ಮ ಮಕ್ಕಳನ್ನು ನೀವು ಸಂರಕ್ಷಿಸಲೇಬೇಕು. ಅದು ನಿಮ್ಮ ಕರ್ತವ್ಯ. *1 ಪೇತ್ರ 5:8.

13. ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ತರಬೇತಿ ಕೊಡಬೇಕು?

13 ಎಲ್ಲಿ, ಹೇಗೆ ನಡೆದುಕೊಳ್ಳಬೇಕು ಎಂದು ಮಕ್ಕಳಿಗೆ ಕಲಿಸುವುದು ಹೆತ್ತವರ ಜವಾಬ್ದಾರಿಯಾಗಿದೆ. ನೀವು ಇದನ್ನು ನಿಮ್ಮ ಮಕ್ಕಳಿಗೆ ಹೇಗೆ ಕಲಿಸುತ್ತೀರಿ? ಇದಕ್ಕಾಗಿ ನೀವು ನಿಮ್ಮ ಮಕ್ಕಳಿಗೆ ತರಬೇತಿ ಕೊಡಬೇಕು, ಆದರೆ ಯಾವುದೇ ಕಾರಣಕ್ಕೂ ಕ್ರೂರವಾಗಿ ಅಥವಾ ಕಟುವಾಗಿ ಅವರನ್ನು ಶಿಕ್ಷಿಸಬೇಡಿ. (ಯೆರೆಮೀಯ 30:11) ಹಾಗಾಗಿ ನಿಮಗೆ ಕೋಪ ಬಂದಾಗ ಅವರನ್ನು ಶಿಸ್ತುಗೊಳಿಸಲು ಅಂದರೆ ತಿದ್ದಲು ಹೋಗಲೇಬೇಡಿ. “ಕತ್ತಿತಿವಿದ ಹಾಗೆ” ಮಾತಾಡಿ ಮಕ್ಕಳ ಮನಸ್ಸನ್ನು ನೋವು ಮಾಡಬೇಡಿ. (ಜ್ಞಾನೋಕ್ತಿ 12:18) ಮಕ್ಕಳು ಯಾಕೆ ತಮ್ಮ ಹೆತ್ತವರ ಮಾತನ್ನು ಕೇಳಬೇಕೆಂದು ಅವರಿಗೆ ಅರ್ಥಮಾಡಿಸಿ.—ಎಫೆಸ 6:4; ಇಬ್ರಿಯ 12:9-11; ಟಿಪ್ಪಣಿ 29⁠ನ್ನು ನೋಡಿ.

ಮಕ್ಕಳು ಏನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ?

14, 15. ಮಕ್ಕಳು ಹೆತ್ತವರ ಮಾತನ್ನು ಯಾಕೆ ಕೇಳಬೇಕು?

14 ಯೇಸು ಯಾವುದೇ ಕಾರಣಕ್ಕೂ ತನ್ನ ತಂದೆಯ ಮಾತನ್ನು ಮೀರಲಿಲ್ಲ. ಅದೆಷ್ಟೇ ಕಷ್ಟವಾಗಿದ್ದರೂ ತಂದೆ ಹೇಳಿದಂತೆಯೇ ಮಾಡಿದನು. (ಲೂಕ 22:42; ಯೋಹಾನ 8:28, 29) ಯೇಸುವಿನಂತೆಯೇ ಮಕ್ಕಳು ಸಹ ತಮ್ಮ ತಂದೆತಾಯಿಯ ಮಾತನ್ನು ಕೇಳಬೇಕೆಂದು ಯೆಹೋವನು ಬಯಸುತ್ತಾನೆ.—ಎಫೆಸ 6:1-3.

15 ಮಕ್ಕಳೇ, ಕೆಲವೊಮ್ಮೆ ನಿಮ್ಮ ತಂದೆತಾಯಿಯ ಮಾತನ್ನು ಕೇಳುವುದು ಕಷ್ಟ ಎಂದು ನಿಮಗನಿಸಬಹುದು. ಆದರೆ ನೆನಪಿಡಿ ನೀವು ಅವರ ಮಾತನ್ನು ಕೇಳಿದರೆ ಯೆಹೋವ ದೇವರು ನಿಮ್ಮನ್ನು ಇಷ್ಟಪಡುತ್ತಾನೆ, ಅಪ್ಪ ಅಮ್ಮ ಸಹ ನಿಮ್ಮನ್ನು ಪ್ರೀತಿಸುತ್ತಾರೆ. *ಜ್ಞಾನೋಕ್ತಿ 1:8; 6:20; 23:22-25.

ತಪ್ಪು ಮಾಡುವಂತೆ ಒತ್ತಡ ಬಂದಾಗ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಲು ಯಾವುದು ಸಹಾಯ ಮಾಡುತ್ತದೆ?

16. (ಎ) ತಪ್ಪು ಮಾಡುವಂತೆ ಮಕ್ಕಳಲ್ಲಿ ಆಸೆ ಹುಟ್ಟಿಸಲು ಸೈತಾನನು ಯಾರನ್ನು ಉಪಯೋಗಿಸುತ್ತಾನೆ? (ಬಿ) ಯೆಹೋವನನ್ನು ಪ್ರೀತಿಸುವವರನ್ನೇ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಒಳ್ಳೆಯದೇಕೆ?

16 ಪಿಶಾಚನು ನಿಮ್ಮ ಸ್ನೇಹಿತರನ್ನು ಮತ್ತು ನಿಮ್ಮ ವಯಸ್ಸಿನವರನ್ನು ಉಪಯೋಗಿಸಿ ಕೆಟ್ಟ ವಿಷಯಗಳನ್ನು ಮಾಡುವಂತೆ ನಿಮ್ಮಲ್ಲಿ ಆಸೆ ಹುಟ್ಟಿಸಬಹುದು. ಆ ಆಸೆಯನ್ನು ಬಿಟ್ಟು ಬಿಡುವುದು ಅಷ್ಟು ಸುಲಭವಲ್ಲ ಎಂದು ಅವನಿಗೆ ಚೆನ್ನಾಗಿ ಗೊತ್ತು. ಇದಕ್ಕೊಂದು ಉದಾಹರಣೆ ಯಾಕೋಬನ ಮಗಳಾಗಿದ್ದ ದೀನಳು. ಯೆಹೋವನ ಮೇಲೆ ಪ್ರೀತಿಯಿಲ್ಲದವರನ್ನು ದೀನಳು ತನ್ನ ಸ್ನೇಹಿತರನ್ನಾಗಿ ಮಾಡಿಕೊಂಡಳು. ಇದರಿಂದ ಅವಳಿಗೂ, ಅವಳ ಕುಟುಂಬಕ್ಕೂ ಬಹಳಷ್ಟು ತೊಂದರೆಯಾಯಿತು. (ಆದಿಕಾಂಡ 34:1, 2) ಯೆಹೋವನನ್ನು ಪ್ರೀತಿಸದವರು ನಿಮ್ಮ ಸ್ನೇಹಿತರಾದರೆ ಯೆಹೋವನಿಗೆ ಇಷ್ಟವಾಗದಂಥ ವಿಷಯಗಳನ್ನು ಮಾಡುವಂತೆ ಅವರು ನಿಮ್ಮಲ್ಲಿ ಆಸೆ ಹುಟ್ಟಿಸಬಹುದು. ಹಾಗಂತ ಅದನ್ನು ಮಾಡಿದರೆ ನೀವೂ ನೋವನ್ನು ಅನುಭವಿಸುತ್ತೀರಿ, ನಿಮ್ಮ ಕುಟುಂಬದವರಿಗೂ ನೋವು ಮಾಡುತ್ತೀರಿ. ಅಲ್ಲದೇ, ಅದರಿಂದ ಯೆಹೋವನಿಗೂ ನೋವಾಗುತ್ತದೆ. (ಜ್ಞಾನೋಕ್ತಿ 17:21, 25) ಹಾಗಾಗಿ ಯಾರು ಯೆಹೋವನನ್ನು ಪ್ರೀತಿಸುತ್ತಾರೋ ಅಂಥವರನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಿ.—1 ಕೊರಿಂಥ 15:33.

ಸುಖ ಸಂಸಾರ ಸಾಧ್ಯ!

17. ಕುಟುಂಬದ ಪ್ರತಿಯೊಬ್ಬ ಸದಸ್ಯನು ಏನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ?

17 ದೇವರು ಹೇಳಿದಂತೆ ಕುಟುಂಬದಲ್ಲಿರುವ ಎಲ್ಲರೂ ನಡೆದುಕೊಂಡರೆ ಕುಟುಂಬದಲ್ಲಿ ಬರುವ ಎಷ್ಟೋ ಸಮಸ್ಯೆಗಳನ್ನು, ತೊಂದರೆಗಳನ್ನು ತಪ್ಪಿಸಬಹುದು. ಹಾಗಾಗಿ ನೀವೊಬ್ಬ ಗಂಡನಾಗಿದ್ದರೆ ನಿಮ್ಮ ಹೆಂಡತಿಯನ್ನು ಪ್ರೀತಿಸಿರಿ ಮತ್ತು ಅವಳನ್ನು ಪ್ರೀತಿಯಿಂದ ನೋಡಿಕೊಳ್ಳಿ. ನೀವೊಬ್ಬ ಹೆಂಡತಿಯಾಗಿದ್ದರೆ ನಿಮ್ಮ ಗಂಡನನ್ನು ಗೌರವಿಸಿ, ಆತನಿಗೆ ಅಧೀನತೆ ತೋರಿಸಿ. ಜ್ಞಾನೋಕ್ತಿ 31:10-31⁠ರಲ್ಲಿ ಹೇಳಿರುವಂಥ ಹೆಂಡತಿಯ ಮಾದರಿಯನ್ನು ಅನುಕರಿಸಿರಿ. ನಿಮಗೆ ಮಕ್ಕಳಿದ್ದರೆ, ದೇವರನ್ನು ಪ್ರೀತಿಸುವಂತೆ ಅವರಿಗೆ ಕಲಿಸಿರಿ. (ಜ್ಞಾನೋಕ್ತಿ 22:6) ನೀವೊಬ್ಬ ತಂದೆಯಾಗಿದ್ದರೆ ನಿಮ್ಮ ಕುಟುಂಬವನ್ನು “ಉತ್ತಮವಾದ ರೀತಿಯಲ್ಲಿ” ಮಾರ್ಗದರ್ಶಿಸಿ. (1 ತಿಮೊಥೆಯ 3:4, 5; 5:8) ನೀವು ಮಕ್ಕಳಾಗಿದ್ದರೆ ನಿಮ್ಮ ತಂದೆತಾಯಿಯ ಮಾತನ್ನು ಕೇಳಿ. (ಕೊಲೊಸ್ಸೆ 3:20) ಕುಟುಂಬದಲ್ಲಿರುವ ಪ್ರತಿಯೊಬ್ಬರು ತಪ್ಪು ಮಾಡುತ್ತಾರೆ ಎನ್ನುವುದನ್ನು ಮರೆಯಬೇಡಿ. ಹಾಗಾಗಿ ದೀನತೆಯಿಂದ ಒಬ್ಬರು ಇನ್ನೊಬ್ಬರ ಹತ್ತಿರ ಕ್ಷಮೆ ಕೇಳಿ. ಹೀಗೆ ಸುಖ ಸಂಸಾರಕ್ಕಾಗಿ ಯೆಹೋವನು ಬೈಬಲಿನಲ್ಲಿ ಬರೆಸಿರುವ ಎಲ್ಲ ವಿಷಯಗಳನ್ನು ಕುಟುಂಬದಲ್ಲಿರುವ ಎಲ್ಲರೂ ಮಾಡುತ್ತಾ ಮುಂದುವರಿಯಲಿ.

^ ಪ್ಯಾರ. 12 ಹೆತ್ತವರು ಮಕ್ಕಳನ್ನು ಹೇಗೆ ಸಂರಕ್ಷಿಸಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಮಹಾ ಬೋಧಕನಿಂದ ಕಲಿಯೋಣ ಪುಸ್ತಕದ ಅಧ್ಯಾಯ 32⁠ನ್ನು ನೋಡಿ.

^ ಪ್ಯಾರ. 15 ಯೆಹೋವ ದೇವರಿಗೆ ಇಷ್ಟವಾಗದ ವಿಷಯವನ್ನು ಹೆತ್ತವರು ಮಾಡಲು ಹೇಳಿದರೆ ಮಕ್ಕಳು ಅವರ ಮಾತನ್ನು ಕೇಳಬೇಕಾಗಿಲ್ಲ.—ಅಪೊಸ್ತಲರ ಕಾರ್ಯಗಳು 5:29.