ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 3

ಮೊದಲನೆಯ ಪುರುಷ ಮತ್ತು ಸ್ತ್ರೀ

ಮೊದಲನೆಯ ಪುರುಷ ಮತ್ತು ಸ್ತ್ರೀ

ಈ ಚಿತ್ರದಲ್ಲಿ ಏನು ಭಿನ್ನವಾಗಿದೆ? ಹೌದು, ಇದರಲ್ಲಿ ಜನರಿದ್ದಾರೆ. ಅವರೇ ಮೊದಲನೆಯ ಪುರುಷ ಮತ್ತು ಸ್ತ್ರೀ. ಅವರನ್ನು ಉಂಟುಮಾಡಿದ್ದು ಯಾರು? ದೇವರೇ. ಆತನ ಹೆಸರು ನಿಮಗೆ ಗೊತ್ತಿದೆಯೇ? ಅದು ಯೆಹೋವ. ಆ ಪುರುಷ ಮತ್ತು ಸ್ತ್ರೀಯನ್ನು ಆದಾಮ ಮತ್ತು ಹವ್ವ ಎಂದು ಕರೆಯಲಾಯಿತು.

ಯೆಹೋವ ದೇವರು ಆದಾಮನನ್ನು ಹೇಗೆ ಉಂಟುಮಾಡಿದನು? ಆತನು ನೆಲದಿಂದ ಸ್ವಲ್ಪ ಮಣ್ಣನ್ನು ತೆಗೆದು ಅದರಿಂದ ಒಬ್ಬ ಪುರುಷನ ಪರಿಪೂರ್ಣವಾದ ದೇಹವನ್ನು ರೂಪಿಸಿದನು. ಅನಂತರ ಆತನು ಮನುಷ್ಯನ ಮೂಗಿನೊಳಗೆ ಗಾಳಿಯನ್ನು ಊದಿದನು. ಆಗ ಆದಾಮನು ಜೀವಿಸುವವನಾದನು.

ಬಳಿಕ ಯೆಹೋವ ದೇವರು ಆದಾಮನಿಗೆ ಒಂದು ಕೆಲಸವನ್ನು ಕೊಟ್ಟನು. ಅದೇನೆಂದರೆ ಅವನು ವಿವಿಧ ಜಾತಿಯ ಪ್ರಾಣಿಗಳಿಗೆ ಹೆಸರಿಡಬೇಕಿತ್ತು. ಅವೆಲ್ಲವುಗಳಿಗೆ ತಕ್ಕ ಹೆಸರನ್ನು ಆರಿಸಲಿಕ್ಕಾಗಿ ಆದಾಮನು ಪ್ರಾಣಿಗಳನ್ನು ಬಹಳ ಕಾಲ ಗಮನಿಸಿದ್ದಿರಬಹುದು. ಆದಾಮನು ಪ್ರಾಣಿಗಳಿಗೆ ಹೆಸರನ್ನಿಡುತ್ತಾ ಹೋದಂತೆ ಏನನ್ನೋ ಗಮನಿಸಲು ಪ್ರಾರಂಭಿಸಿದನು. ಅದೇನಾಗಿತ್ತೆಂದು ನಿಮಗೆ ಗೊತ್ತೋ?

ಪ್ರಾಣಿಗಳಿಗೆಲ್ಲ ಜೊತೆಗಳಿದ್ದವು. ಅಲ್ಲಿ ಅಪ್ಪ ಆನೆಗಳು ಮತ್ತು ಅಮ್ಮ ಆನೆಗಳಿದ್ದವು, ಹಾಗೂ ಅಲ್ಲಿ ಅಪ್ಪ ಸಿಂಹಗಳು ಮತ್ತು ಅಮ್ಮ ಸಿಂಹಗಳಿದ್ದವು. ಆದರೆ ಆದಾಮನಿಗೆ ಜೊತೆಯಾಗಿರಲಿಕ್ಕೆ ಯಾರೂ ಇರಲಿಲ್ಲ. ಆದುದರಿಂದ ಯೆಹೋವನು ಆದಾಮನಿಗೆ ಗಾಢ ನಿದ್ದೆಯನ್ನು ಬರಮಾಡಿದನು. ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದು ಆ ಪಕ್ಕೆಲುಬಿನಿಂದ ಆದಾಮನಿಗಾಗಿ ಒಂದು ಸ್ತ್ರೀಯನ್ನು ಮಾಡಿದನು. ಅವಳು ಆದಾಮನ ಪತ್ನಿಯಾದಳು.

ಆದಾಮನಿಗೆ ಈಗ ತುಂಬಾ ಸಂತೋಷವಾಯಿತು. ಮಾತ್ರವಲ್ಲ, ಹವ್ವಳಿಗೆ ಕೂಡ ಅಂತಹ ಸುಂದರವಾದ ತೋಟದಲ್ಲಿ ಜೀವಿಸಲು ಎಷ್ಟು ಸಂತೋಷವಾಗಿದ್ದಿರಬೇಕೆಂದು ಯೋಚಿಸಿರಿ! ಅವರೀಗ ಮಕ್ಕಳನ್ನು ಪಡೆದು ಆನಂದದಿಂದ ಒಟ್ಟುಗೂಡಿ ಜೀವಿಸಶಕ್ತರಾಗಿದ್ದರು.

ಆದಾಮಹವ್ವರು ಸದಾಕಾಲ ಜೀವಿಸಬೇಕೆಂದು ಯೆಹೋವನು ಇಷ್ಟಪಟ್ಟನು. ಅವರು ಇಡೀ ಭೂಮಿಯನ್ನು ಏದೆನ್‌ ತೋಟದಷ್ಟು ಸುಂದರವಾಗಿ ಮಾಡುವಂತೆ ಆತನು ಬಯಸಿದನು. ಈ ಕೆಲಸದ ಕುರಿತು ಯೋಚಿಸಿದಾಗ ಆದಾಮಹವ್ವರು ಎಷ್ಟು ಸಂತಸಗೊಂಡಿದ್ದಿರಬೇಕು! ಈ ಭೂಮಿಯನ್ನು ಒಂದು ಸುಂದರವಾದ ತೋಟವಾಗಿ ಮಾಡುವ ಕೆಲಸದಲ್ಲಿ ಜೊತೆಗೂಡಲು ನೀವು ಇಷ್ಟಪಡುತ್ತಿರೋ? ಆದಾಮಹವ್ವರ ಸಂತೋಷವು ಹೆಚ್ಚು ಸಮಯ ಇರಲಿಲ್ಲ. ಏಕೆಂದು ನಾವು ತಿಳಿಯೋಣ.